ಕೊನೆಗೆ ಉಳಿಯುವುದು ಫೋಟೋ ಮಾತ್ರ...!


ಒಂದು ಸಂಭವದ ನಿರೀಕ್ಷೆಯಿದ್ದಷ್ಟು ಹೊತ್ತು ಸಂಭವದ ಆಯುಷ್ಯ ಇರುವುದಿಲ್ಲ ಅಲ್ವ... ಸಂಭವಿಸಿದ ಬಳಿಕ ಉಳಿಯುವುದು ನೆನಪು. ನೆನಪೂ ಮಸುಕಾದರೆ ಬಹುಕಾಲ ಉಳಿಯುವಂಥದ್ದು ಫೋಟೋ ಮಾತ್ರ
!

ಒಂದು ಪ್ರವಾಸ ಇದೆ, ಒಂದು ಪ್ರಯಾಣ ಇದೆ, ಒಂದು ಶುಭ ಕಾರ್ಯ ಇದೆ, ಒಂದು ಹೊಸ ಮೊಬೈಲ್ ತೆಗಿಲಿಕೆ ಇದೆ, ಒಂದು ಬೈಕು ಪರ್ಚೇಸು ಮಾಡ್ಲಿಕಿದೆ, ಹೊಸದೊಂದು ಕೆಲಸಕ್ಕೆ ಸೇರುವುದಕ್ಕಿದೆ, ಮದುವೆ, ಮುಂಜಿ, ಹೊಸ ಮನೆ, ಹೊಸ ಜಾಗ, ಹೊಸ ಡ್ರೆಸ್ಸು, ಹೊಸ ದಾರಿ, ಹೊಸ ಅನುಭವ ಎಲ್ಲದಕ್ಕೂ ಮುನ್ನ ಒಂದು ಎಕ್ಸೈಟ್ ಮೆಂಟು, ಒಂದು ಕಾತುರ, ಒಂದು ಆಸೆ, ಒಂದು ನಿರೀಕ್ಷೆ ಇದ್ದೇ ಇರುತ್ತದೆ. ಹೊಸದನ್ನು ಪಡೆಯುವುದಕ್ಕಿಂತಲೂ, ಅನುಭವಿಸುವುದಕ್ಕಿಂತಲೂ ಅದರ ಕಾಯುವಿಕೆಯೇ ನಿರೀಕ್ಷೆಯ ತೀವ್ರತೆಯನ್ನು ಹೆಚ್ಚಿಸುತ್ತದೆ... ಸಂಭವ ಖುಷಿ ಕೊಡುತ್ತದೋ, ನಿರಾಸೆ ನೀಡುತ್ತದೋ, ಯಶಸ್ವಿಯಾಯಿತೋ, ಸೋಲಾಯಿತೋ ಎಂಬುದನ್ನು ಕಾಲದ ಓಘ ತಿಳಿಸುತ್ತದೆ. ಆದರೆ ಸಾಕ್ಷಿ ನೀಡುವುದು ಮಾತ್ರ ಫೋಟೋ....

 

ಸ್ಕೂಲ್ಡೇಯಲ್ಲಿ ಪ್ರೈಜ್ ತಗೊಂಡದ್ದು, ಬೇಲೂರು, ಹಳೆಬೀಡಿಗೆ ಯಾಯತ್ತೋ ಪ್ರವಾಸ ಹೋಗಿದ್ದು, ತಾಳಿ ಕಟ್ಟಿದ್ದು, ಮಗುವಿಗೆ ನಾಮಕರಣ ಮಾಡಿದ್ದು, ಹೊಸ ಬೈಕ್ಕಿಗೆ ಪೂಜೆ ಮಾಡಿಸಿದ್ದು... ಹೀಗೆ ಎಲ್ಲವನ್ನು ಖಚಿತವಾಗಿ ತೋರಿಸುವುದು ಯಾವುದು... ಫೋಟೋಗಳಲ್ವ...? ನಿಮಗೆ ಎಲ್ಲವನ್ನೂ ನೆನಪಿಟ್ಟುಕೊಳ್ಲಿಕೆ ಸಾಧ್ಯ ಆಗ್ತದ...?

ಒಂದು ಪ್ರವಾಸವನ್ನೇ ಇಟ್ಕೊಳ್ಳಿ... ಎರಡು ದಿನದ ಪ್ರವಾಸಕ್ಕೋ, ಪ್ರಯಾಣಕ್ಕೋ ಎಷ್ಟೊಂದು ತಯಾರಿ. ಟಿಕೆಟ್ ಬುಕ್ಕು ಮಾಡುವುದು, ಡ್ರೆಸ್ಸು ಹೊಂದಿಸಿಕೊಳ್ಳುವುದು, ಲಗೇಜು, ಪ್ಯಾಕಿಂಗು, ಬೇಕು, ಬೇಡದ್ದನ್ನೆಲ್ಲ ಪಟ್ಟಿ ಮಾಡಿ ತುಂಬಿಸುವುದು ಹೀಗೆ... ಎಷ್ಟೊಂದು ಸಿದ್ಧತೆಗಳು. ಅದರ ನಡುವೆ ಕೆಲವು ಮರೆತುಹೋಗುವುದು, ಕೆಲವೊಂದು ಬೇಡದೇ ಇದ್ದದ್ದೂ ಬ್ಯಾಗಿಗೆ ಸೇರುವುದು, ಕೊನೆ ಕ್ಷಣದಲ್ಲಿ ರಜೆ ರದ್ದಾಗುವುದು, ಮಳೆ ಬರುವುದು, ಕೊರೋನಾ ವಕ್ಕರಿಸುವುದು, ರೈಲಿನಲ್ಲಿ ಟಿಕೆಟ್ ಸಿಕ್ಕದೇ ಹೋಗುವುದು... ಹೀಗೆ ಎಲ್ಲ ಆದರೆ, ಹೋದರೆಗಳ ಸವಾಲು ದಾಟಿ ಒಂದು ದಿನ ಪ್ರಯಾಣ ಹೊರಡ್ತೀರಿ... ಕಣ್ಣು ಮುಚ್ಚಿ ತೆಗೆಯುವುದರೊಳಗೆ ಪ್ರವಾಸವೊಂದು ಮುಗಿದು ಹೋಗಿರುತ್ತದೆ ಅಲ್ವ....?!

ಇನ್ನು 15 ದಿನ ಇದೆ ಪ್ರವಾಸಕ್ಕೆ ಅಂತ ಲೆಕ್ಕ ಹಾಕುತ್ತಿದ್ದವರಿಗೆ ಅರೆ, ಎರಡೇ ದಿನದಲ್ಲಿ ಹೋಗಿ ಬಂದಾಯ್ತಲ್ಲ ಅಂತ ಅನ್ನಿಸುವಷ್ಟರ ಮಟ್ಟಿಗೆ. ಅದರಲ್ಲೂ ನಿಮಗೆಲ್ಲ ಗೊತ್ತಿರುತ್ತದೆ. ಒಂದು ಜಾಗಕ್ಕೆ ಹೋಗುವಾಗ ಎಷ್ಟುಹೊತ್ತಾದರೂ ತಲಪುವುದಿಲ್ಲ ಅಂತ ಉಂಟಾಗುವ ಭಾವ ಮರಳುವಾಗ ಇರುವುದಿಲ್ಲ. ಹೋದ್ದಕ್ಕಿಂತ ವೇಗವಾಗಿ ಮರಳಿದ್ದೇವೆ ಅಂತ ಅನ್ನಿಸುತ್ತದೆ... ಬಸ್ಸೇ ಇರಲಿ, ಸ್ವಂತ ವಾಹನವೇ ಇರಲಿ... ವೇಗವಾಗಿ ಮರಳಿದ ಹಾಗೆ ಭಾಸವಾಗುತ್ತದೆ...!

ಸಮಯಕ್ಕೆ ಸರಿಯಾಗಿ ತಲುಪಿದ್ದೀರೋ? ಊಟ ತಿಂಡಿ ಸರಿ ವ್ಯವಸ್ಥೆ ಆಯಿತೋ?, ಗಾಡಿಯ ಟಯರ್ ಪಂಕ್ಚರ್ ಆಯ್ತೋ? ಎಂಬಿತ್ಯಾದಿ ವಿಚಾರಗಳಿಗಳನ್ನೆಲ್ಲ ದಾಟಿ ಪ್ರವಾಸ ಮುಗಿಸಿ ಬಂದ ಮೇಲೆ ಉಳಿಯುವುದು ನೆನಪು ಮಾತ್ರ. ಅದಕ್ಕೂ ಮಿಗಿಲಾಗಿ ಉಳಿಯುವುದು ಬೆಟ್ಟದ ಎದುರು, ಉದ್ಯಾನದ ಎದುರು, ಮೂರ್ತಿಗಳ ಎದುರು, ಗುಡಿ ಗೋಪುರಗಳ ಎದುರು ನಿಂತು ತೆಗೆದ, ತೆಗೆಸಿದ ಫೋಟೋಗಳು ಮಾತ್ರ. ತುಂಬ ಸಲ ನಾವು ಚಂದ ಚಂದ ಜಾಗಗಳನ್ನು ನೋಡಿ ಖುಷಿ ಅನುಭವಿಸುವ ಬದಲು ಆ ಹೊತ್ತಿನಲ್ಲಿ ಸೆಲ್ಫೀ ತೆಗೆಯುವಲ್ಲಿ, ಗ್ರೂಪು ಫೋಟೋ ತೆಗೆಯುತ್ತಾ ಕೂರುವಲ್ಲಿ ಕಳೆದುಬಿಡುತ್ತೇವೆ. ಫೋಟೋದ ಗುಂಗಿನಲ್ಲಿ ಜಾಗವನ್ನೇ ಸರಿಯಾಗಿ ನೋಡಿರುವುದಿಲ್ಲ!!!!

 

ಹಾಗಂತ ಫೋಟೋ ತೆಗೆಯದೇ ಕೂತಲ್ಲಿ ನೆನಪಿಗೊಂದು ದಾಖಲೆ ಬೇಕಲ್ಲ! ಎರಡೂ ಬ್ಯಾಲೆನ್ಸ್ ಆಗಬೇಕು. ಹತ್ತಾರು ವರ್ಷಗಳ ಬಳಿಕ ಅದೇ ಫೋಟೋಗಳು ನಮಗೆ ಪ್ರವಾಸದ ಕಥೆಯನ್ನು, ನಮ್ಮ ಮೂತಿಯ ಇತಿಹಾಸವನ್ನು ಸಚಿತ್ರವಾಗಿ ಸಾರಿ ಹೇಳುತ್ತವೆ....

ಮದುವೆಗೂ ಅಷ್ಟೇ, ಮನೆ ಒಕ್ಕಲಿಗೂ ಅಷ್ಟೇ, ಬಹು ನಿರೀಕ್ಷಿತ ಸ್ಕೂಲ್ ಡೇಗೂ ಅಷ್ಟೇ... ತುಂಬ ದಿನದ ಸಿದ್ಧತೆ, ತುಂಬ ಓಡಾಟ, ತುಂಬ ಪ್ಲಾನಿಂಗು, ತುಂಬ ಟೆನ್ಶನ್ನು ಕಾಡುತ್ತದೆ. ಆದರೆ ಆ ನಿರ್ಣಾಯಕ ದಿನದಂದು ಬಂಧು ಮಿತ್ರರು ಬಂದು ಚಕಚಕನೆ ಕಾರ್ಯಕ್ರಮ ಮುಗಿದೇ ಹೋಗುತ್ತದೆ. ಮತ್ತೆ ನಮ್ಮ ಕೈಯ್ಯಲ್ಲಿ ಉಳಿಯುವುದು ದಪ್ಪದ ಫೋಟೋ ಆಲ್ಬಮ್ಮು ಮತ್ತು ವಿಡಿಯೋ ಸಿಡಿ ಮಾತ್ರ... ನೆನಪುಗಳೂ ಕ್ರಮೇಣ ತೀವ್ರತೆ ಕಳೆದುಕೊಳ್ಳುತ್ತವೆ...

ಭಯಂಕರ ಆಸೆ ಇರಿಸಿ, ಅಧ್ಯಯನ ಮಾಡಿ ತೆಗೆಯುವ ಮೊಬೈಲು, ಬೈಕ್ಕು, ಕಾರು, ಬ್ಯಾಗು, ಕಂಪ್ಯೂಟರು, ಹೊಸದೊಂದು ಮನೆ.... ಎಲ್ಲವೂ ಅಷ್ಟೇ ಕೈಸೇರುವ ವರೆಗೆ ತುಂಬ ಕುತೂಹಲ, ಎಕ್ಸೈಟ್ ಮೆಂಟು, ಬಣ್ಣದ ಬಣ್ಣದ ಕನಸುಗಳು... ಸಹಜ. ಅದು ಕೈಸೇರಿದ ಮೇಲೆ ಅದು ಬದುಕಿನ ಭಾಗವಾದ ಬಳಿಕ ಖರೀದಿಸುವುದಕ್ಕಿಂತ ಮೊದಲಿನ ಎಕ್ಸೈಟ್ ಮೆಂಟ್ ಖಂಡಿತಾ ಇರುವುದಿಲ್ಲ... ವಾಸ್ತವಕ್ಕಿಂತ ಬಹಳಷ್ಟು ಸಲ ನಿರೀಕ್ಷೆ, ನಿರ್ಧಾರಗಳ ಗಡಿಬಿಡಿಯೇ ಹೆಚ್ಚು ಭಯಂಕರ ಆಗಿರುತ್ತವೆ ಅಲ್ವ...

 

ದೊಡ್ಡದೊಂದು ಖುಷಿ ನೀಡುವ, ಭಯಂಕರ ಅಚ್ಚರಿ ಕೊಡುವ, ತೀವ್ರ ಆಘಾತ ನೀಡುವ ಸಣ್ಣದೋ, ದೊಡ್ಡದೇ ಸಂದರ್ಭಗಳೂ ಅಷ್ಟೇ ಕೆಲವು ಸೆಕೆಂಡುಗಳ, ನಿಮಿಷಗಳ ಅವಧಿಯ ಸಂಭವ ಆಗಿರುತ್ತವೆ. ಆದರೆ ಅದರ ಪರಿಣಾಮ ಸುದೀರ್ಘ ಆಗಿರಬಹುದು. ಹಾಗಾಗಿ ಸಂಭವದ ಅವಧಿಗಿಂತಲೂ ಅದರ ಪರಿಣಾಮ ನಮ್ಮ ಮೇಲೆ ಆಗಿರುವುದರ ತೀವ್ರತೆ ನಮ್ಮೊಳಗೆ ಆದು ಗಾಢವಾಗಿ ಕಾಡುವಂತೆ ಮಾಡುತ್ತದೆ... ಫೋಟೋ ಅದಕ್ಕೊಂದು ರೂಪಕ ಅಷ್ಟೇ...

 

ಹೆಚ್ಚು ಯಾಕೆ...ನಾವು ಸತ್ತ ಮೇಲೂ ಉಳಿಯುವುದು ಫೋಟೋ ಮಾತ್ರ.... ಶರೀರವನ್ನು ಅದೇ ದಿನ ದಹನ ಮಾಡಿ ಬಿಡುತ್ತಾರೆ. ಎಷ್ಟೇ ಪ್ರೀತಿ ಪಾತ್ರರಾದರೂ ಭೌತಿಕ ಕಾಯವನ್ನು ಸಹ ಕಾಪಿಡುವುದಕ್ಕಾಗುವುದಿಲ್ಲ. ಮತ್ತೆ ಉಳಿಯುವುದು ನೆನಪು ಮತ್ತು ಫೋಟೋ (ಅವರ ಧ್ವನಿ, ವಿಡಿಯೋಗಳೂ ಇರಬಹುದು) ಮಾತ್ರ. ಆ ಕ್ಷಣಕ್ಕೆ ನಿರ್ಜೀವ ಎನ್ನಿಸಿದರೂ, ಗೋಡೆಯಲ್ಲಿ ತೂಗಿರುತ್ತಾ ನಿರ್ಲಿಪ್ತ ಅನ್ನಿಸಿದರೂ ಫೋಟೋ ನೆನಪುಗಳನ್ನು ಜೀವಂತ ಇರಿಸುತ್ತದೆ (ಫೋಟೋ ಇಲ್ಲದಿದ್ರೆ ಮರೆತೇ ಬಿಡ್ತಾರೆ ಅಂತ ಅಲ್ಲ). ಸಂಭವಗಳನ್ನು, ಸಂದರ್ಭಗಳನ್ನು ದೃಶ್ಯಕಾವ್ಯವಾಗಿ ರೀಲಿನಂತೆ ಸುತ್ತಿ ಕೊಡುತ್ತದೆ... ವರುಷಗಳ ಬಳಿಕವೂ ಅಂದೊಂದು ಕಾಲದಲ್ಲಿ ನಾವಿದ್ದದ್ದನ್ನು ಇದ್ದ ಹಾಗೇ ಕಾಲವನ್ನು ಫ್ರೀಝ್ ಮಾಡಿದ ಹಾಗೆ ಪ್ರೇಮಿನೊಳಗೆ ಕಟ್ಟಿಟ್ಟು ಇದೋ ನೋಡಿಕೋ ಎಂಬ ಹಾಗೆ ಮುಂದಿಡುತ್ತದೆ....

ತ್ರೀಡಿ, ಹಿನ್ನೆಲೆ ಧ್ವನಿ, ಮ್ಯೂಸಿಕ್ಕು ಎಂಥದ್ದೂ ಬೇಡ... ಹಳತೊಂದು ಫೋಟೋ ಆ ಸನ್ನಿವೇಶವನ್ನು ಕಟ್ಟಿಕೊಡಲು ಆ ಒಂದು ಪ್ರೇಮು ಸಾಕು. ಒಂದು ಸಮಾರಂಭ ಮುಗಿಯಲು ಒಂದು ದಿನ ಸಾಕು, ಒಂದು ಪ್ರವಾಸ 2-3 ದಿನಗಳಲ್ಲಿ ಸರಿದು ಹೋಗುತ್ತವೆ, ಒಂದು ಖರೀದಿ, ಒಂದು ನಿರ್ಧಾರ ಕೆಲವು ನಿಮಿಷಗಳು, ಕೆಲವು ಗಂಟೆಗಳಲ್ಲಿ ಮುಗಿದು ಹೋಗುತ್ತವೆ, ಒಂದು ಖುಷಿ, ಒಂದು ಗಾಢವಾದ ವಿಷಾದ, ದುಃಖದ ಸನ್ನಿವೇಶ ಕೆಲವು ಘಳಿಗೆಗಳಲ್ಲಿ ಸರಿದು ಹೋಗಿರುತ್ತದೆ... ಆದರೆ ಅಲ್ಲಿ ಸೆರೆಯಾದ ಚಿತ್ರಗಳು ಮಾತ್ರ ಅಯಾಚಿತವಾಗಿ ಆ ಸಂದರ್ಭವನ್ನು ಮರೆಸದೆ ಮೂಕ ಸಾಕ್ಷಿಯಾಗಿ ಹಿಂಬಾಲಿಸುತ್ತಲೇ ಇರುತ್ತದೆ!

-ಕೃಷ್ಣಮೋಹನ ತಲೆಂಗಳ. 13.05.2022.

No comments: