ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!

 


ಸಾರ್ ಇಲ್ಲಿ ಚಿವುಟುದು, ಚೀಚರ್ ಇವ ಹೊಡೆಯುದು... ಎಲ್ಲೋ ಅಸ್ಪಷ್ಟವಾಗಿ ಗುಂಯ್ಗುಡುವ ಹಳೆಯದೊಂದು ಕಂಪ್ಲೇಟಿನ ಸಾಲುಗಳಲ್ವ ಇದು...? ಶಾಲೆಯಲ್ಲಿ ಇದ್ದಷ್ಟು ಹೊತ್ತು, ಕ್ಲಾಸಿನಲ್ಲಿ ಟೀಚರ್ ಇದ್ದಷ್ಟೂ ಹೊತ್ತು ನಾವು ಸುರಕ್ಷಿತರು, ಅವರು ನೋಡ್ಕೊಳ್ತಾರೆ ಎಂಬ ಸುಭದ್ರ ನಂಬಿಕೆ. ನಾವೆಂತ ತಪ್ಪು ಮಾಷ್ಟ್ರ ದಿವ್ಯದೃಷ್ಟಿಗೆ ಗೋಚರಿಸುತ್ತದೆ ಎಂಬ ಭಯಭಕ್ತಿ ಬೇರೆ. ನಮ್ಮ ಫೇ...ವರೀಟ್ ಮಾಷ್ಟ್ರತ್ರ ತುಂಬ ಸಲುಗೆ, ಕುಶಾಲು, ತಮಾಷೆ. ಜೋರಿನ ಟೀಚರನ್ನು ಕಂಡ್ರೆ ಎದೆಯೊಳಗೆ ಢವಢವ.... ಬಾಯಿಯ ಪಸೆ ಆರಿದ ಹಾಗೆ.

ಅಂದ ಹಾಗೆ ನಮ್ಮೂರಿನಲ್ಲಿ ಪುರುಷ ಶಿಕ್ಷಕರನ್ನು ಮಾಷ್ಟ್ರು ಅಂತಲೂ, ಮಹಿಳಾ ಶಿಕ್ಷಕರನ್ನು ಟೀಚರು ಅಂತ ಕರೀತೇವೆ. ಈ ಪರಂಪರೆ ಇಂದಿಗೂ ಮುಂದುವರಿದಿದೆ.

ಎನ್ನಂಥ ಭಕ್ತರು ಅನಂತ ನಿನಗಿಹರು, ನಿನ್ನಂಥ ಸ್ವಾಮಿ ಎನಗಿಲ್ಲ... ಅಂತ ಪುತ್ತೂರು ನರಸಿಂಹ ನಾಯಕ್ ಹಾಡಿದ ಹಾಡು ಕೇಳಿದಾಗ ಇದು ಗುರು-ಶಿಷ್ಯರಿಗೂ ಅನ್ವಯಿಸುತ್ತದೆ ಅಂತ ತುಂಬ ಸಲ ಅನ್ನಿಸಿದ್ದಿದೆ. ಶಿಕ್ಷಕರ ವೃತ್ತಿ ಬದುಕಿನಲ್ಲಿ ಸಾವಿರಾರು ಮಕ್ಕಳು ಬಂದು ಹೋಗುತ್ತಾರೆ, ಆದರೆ ಸುಮಾರು 15ರಿಂದ 20 ವರ್ಷಗಳ ಸರಾಸರಿ ಕಲಿಕಾ ಜೀವನದಲ್ಲಿ ನಮ್ಮ ಬದುಕಿನಲ್ಲಿ ಹಾದು ಹೋಗುವ ಮಾಷ್ಟ್ರು, ಟೀಚರುಗಳು ಕೆಲವೇ ಕೆಲವೇ ಕೆಲವರು ಮಾತ್ರ. ಹಾಗಾಗಿ ನಮಗೆ ಮನಸ್ಸಿದ್ರೆ, ನಮಗೆ ಪ್ರೀತಿ ಇದ್ರೆ, ನಮಗೆ ಅಕ್ಕರೆ ಇದ್ರೆ ಖಂಡಿತಾ ಅವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದೇ ಉಳಿಯುತ್ತಾರೆ.

ನಮ್ಮನ್ನು ಸ್ಟೇಜಿಗೆ ದೂಡಿದವರು, ಕಬಡ್ಡಿ ಕೋರ್ಟಿಗೆ ಅಟ್ಟಿದವರು, ಧ್ವಜಸ್ತಂಭದ ಕಟ್ಟೆಗೆ ಹತ್ತಿಸಿ ಅಸೆಂಬ್ಲಿ ಮಾಡಿಸಿದವರು, ನಾಟಕದಲ್ಲಿ ವೇಷ ಹಾಕಿಸಿದವರು, ಸ್ವತಃ ಮೇಕಪ್ ಮಾಡಿಸಿ ಡ್ಯಾನ್ಸ್ ಮಾಡಿಸಿದವರು, ಚಂದದ ಪ್ರಬಂಧ ಬರೆಸಿ ಪ್ರೈಸ್ ಸಿಕ್ಕಾಗ ತಮಗೇ ಪ್ರೈಸ್ ಸಿಕ್ಕಷ್ಟು ಖುಷಿ ಪಟ್ಟವರು. ಸಿಕ್ಕಾಗಲೆಲ್ಲ... ಈಗ ಹೇಗಿದ್ದಿಯಪ್ಪಾ ಅಂತ ಅಕ್ಕರೆಯಿಂದ ಮಾತನಾಡಿಸುವವರು.......

ಸಂಬಳಕ್ಕೆ ದುಡಿಯುವ ಶಿಕ್ಷಕರು ಹಾಗೂ ಫೀಸು ಕೊಟ್ಟು ಕಲಿಯುವ ವಿದ್ಯಾರ್ಥಿ ಎಂಬಲ್ಲಿಗೆ ಕ್ಲಾಸ್ ರೂಂ ಸಂಬಂಧ ವ್ಯಾವಹಾರಿಕವಾಗಿ ಉಳಿದಿಲ್ಲ. ಉಳಿಯಲು ಸಾಧ್ಯವೂ ಇಲ್ಲ. ಹಾಗಂತ ಶೇ.100 ಶಿಕ್ಷಕರೂ ವೃತ್ತಿಗೆ ನಿಷ್ಠರಾಗಿರುತ್ತಾರೆ, ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ, ನಿಷ್ಪಕ್ಷಪಾತವಾಗಿ ಇರುತ್ತಾರೆ, ಕೊಟ್ಟ ಸಂಬಳಕ್ಕಾದರೂ ನ್ಯಾಯ ಸಲ್ಲಿಸುತ್ತಾರೆ ಎಂಬ ವಿಪರೀತಯ ಭಯ ಭಕ್ತಿಯಿಂದಲೂ ನಾನು ಹೇಳುತ್ತಿರುವುದಲ್ಲ. ಇತರ ಎಲ್ಲ ವೃತ್ತಿಗಳ ಹಾಗೆ ಶಿಕ್ಷಕರಲ್ಲೂ ನಿರ್ಲಿಪ್ತರು, ನಿಷ್ಠುರರು, ನಿರ್ವಿಹಿಕಾರಿಗಳು, ದೌರ್ಬಲ್ಯಗಳನ್ನು ಹೊಂದಿದವರು ಇದ್ದಾರೆ ಎಂಬುದು ನಾವು ದೊಡ್ಡವರಾದ ಮೇಲಾದರೂ ಗೊತ್ತಾಗಿದೆ. ಅದನ್ನು ಪಕ್ಕಕ್ಕಿರಿಸಿ ನೋಡುವುದಾದರೂ ಸಹ ಶಿಕ್ಷಕರ ಪಾತ್ರವನ್ನು ತೂಗುವುದಕ್ಕೂ, ಅಳೆಯುವುದಕ್ಕೂ ಬಣ್ಣಿಸುವುದಕ್ಕೂ ಪದಗಳ ಅಗತ್ಯವಿಲ್ಲ. ಅದು ನಮ್ಮ ಸಂಸ್ಕಾರದಲ್ಲಿ ಜೊತೆಯಾಗಿದ್ದರೆ ಅಷ್ಟು ಸಾಕು.

ಶಿಕ್ಷಕರು ಕಲಿಸಿದ್ದನ್ನು ಮಾತ್ರ ಶಾಲೆಯಲ್ಲಿ ಕಲಿಯುವುದಲ್ವಲ್ಲ? ಕಲಿಸಿದ್ದಕ್ಕಿಂತ ಹೆಚ್ಚು ಹೇಳಿದ್ದನ್ನು, ನೋಡಿದ್ದನ್ನು, ಗಮನಿಸಿದ್ದನ್ನು ನಾವು ತುಂಬ ಕಲಿತಿದ್ದೇವೆ. ನಾನಂತೂ ಕಲಿತಿದ್ದೇನೆ. ಪ್ರೌಢವಾಗಿರದ ಮನಸ್ಸಿನ ಮೇಲೆ ಹೆತ್ತವರಿಗಿಂತ ಹೆಚ್ಚು ಗಾಢವಾಗಿ ಟೀಚರುಗಳು, ಮಾಷ್ಟ್ರುಗಳು ಕಲಿಸಿದ್ದು ಅಚ್ಚೊತ್ತಿರುತ್ತದೆ.

ಈ ಟೀಚರುಗಳು, ಮಾಷ್ಟ್ರುಗಳು ಮಾಡುವ ಪಾಠ ಹೇಗೆ ಗೊತ್ತಾ... ನಾವು ನಮಗರಿವಿಲ್ಲದೇ ತಿನ್ನುವ ಆಹಾರದ ಹಾಗೆ. ಆಹಾರ ಸೇವಿಸಿದ ತಕ್ಷಣ ನಾವು ಬೆಳೆದು ದೊಡ್ಡವರಾಗುವುದಿಲ್ಲ. ಆದರೆ, ನಮ್ಮ ಬೆಳವಣಿಗೆಗೆ ಆಹಾರವೂ ಕಾರಣ ಹೌದು. ದೇಹ ದೊಡ್ಡದಾದಾಗ ಪರಿಪೂರ್ಣ ಬೆಳವಣಿಗೆಗೆ ದೇಹದೊಳಗೆ ಅಡಕವಾದ ಆಹಾರ ಖಂಡಿತಾ ಪ್ರಭಾವ ಬೀರಿರುತ್ತದೆ. ಶಾಲೆಯಲ್ಲಿ ಕಲಿತ ಪಾಠ ಸಹ ಹಾಗೆಯೇ... ಕಲಿಯುವ ವೇಳೆ ಗೊತ್ತಾಗುವುದಿಲ್ಲ. ಕಲಿತು ಹೊರಗೆ ಬಂದ ಮೇಲೆ ಎಷ್ಟೋ ವರ್ಷಗಳ ನಂತರ ಅದು ರಿಪ್ಲೇ ಆದ ಕ್ಯಾಸೆಟ್ ಥರ ಬದುಕಿನ ಪಾಠಶಾಲೆಯಲ್ಲಿ ಹಳೆಯ ಸಿಲಬಸ್ಸುಗಳನ್ನು ಬಿಚ್ಚಿಡುತ್ತದೆ. ಆಗಿನ ಟೀಚರುಗಳು ಹೇಳಿದ್ದೆಲ್ಲ ಕೆಲವೊಮ್ಮೆ ಸತ್ಯ ಅಂತ ಅನ್ನಿಸುತ್ತದೆ.

 

ಮಕ್ಕಳು ಶಿಕ್ಷಕರ ಪಾಠ ಮಾತ್ರ ಕೇಳುವುದು ಅಲ್ಲವಲ್ಲ. ಅವರ ಡ್ರೆಸ್ಸು, ಅವರ ಇಸ್ತ್ರಿಯ ಗೆರೆ, ಶೂಸ್, ಅವರು ಧರಿಸಿದ ಬಳೆ, ಅವರು ತಲೆಗೆ ಹಾಕಿದ ಬಣ್ಣ, ಅವರ ಹಾಕಿದ ರಜೆ, ಅವರ ಮುಖದಲ್ಲಿನ ನಗು, ಅವರ ಹೊಸ ಬೈಕ್ಕು, ಅವರ ಜೊತೆಗೆ ಬಂದ ಪುಟ್ಟ ಮಗು.... ಹೀಗೆ ಪ್ರತಿಯೊಂದನ್ನೂ ಗಮನಿಸುತ್ತಾರೆ. ಅವರು ಶಾಲೆ ಬಿಟ್ಟು ಹೋಗುವಾಗ ಕಣ್ಣೀರಾಗ್ತಾರೆ, ಟೀಚರ್ಸ್ ಡೇಗೆ ಗಿಫ್ಟ್ ಕೊಡ್ತೇವೆ, ಮನೆಯಲ್ಲಿ ಚಂದದ ಹೂ ಅರಳಿದರೆ ಟೀಚರಿಗೆ ಕೊಟ್ಟು ಕೃತಾರ್ಥರಾಗ್ತೇವೆ, ಕಾಪಿ ಪುಸ್ತಕದಲ್ಲಿ ವೆರಿ ಗುಡ್ ಬರೆದರೆ ನೂರು ಸಲ ಅದನ್ನು ಸವರಿ ನೋಡಿ ರೋಮಾಂಚನಗೊಳ್ತಾ ಇದ್ದೆವು... ಮೇಷ್ಟ್ರಾದವರು, ಟೀಚರುಗಳಾದವರು ನಿವೃತ್ತರಾದರೂ, ಸಾರ್ವಜನಿಕ ಪ್ರದೇಶದಲ್ಲಿ ಓಡಾಡಿದರೂ ಅವರು ಮಾಷ್ಟ್ರೇ, ಟೀಚರೇ ಆಗಿರುತ್ತಾರೆ..... ಅವರು ತಮ್ಮ ನಡೆನುಡಿಗಳಲ್ಲೂ ಅಚ್ಚುಕಟ್ಟಾಗಿರಬೇಕು, ಮಾದರಿಯಾಗಿರಬೇಕು ಎಂಬುದು ಅಲಿಖಿತ ನಂಬಿಕೆ. ಯಾಕೆಂದರೆ ಎಲ್ಲರೂ ಅವರನ್ನು ಕಲಿಸುವವರು ಅಂತ ಭಯಂಕರವಾದ ಪ್ರತ್ಯೇತ ದೃಷ್ಟಿಯಿಂದ ಗಮನಿಸುತ್ತಲೇ ಇರುತ್ತಾರೆ...

 

ಸಂಬಳ ಕಡಿಮೆ ಇರುವವರು, ಅತ್ಯಂತ ಕಡಿಮೆ ವೃತ್ತಿ ಭದ್ರತೆಯಲ್ಲಿರುವವರು, ಕೌಟುಂಬಿಕ ಸಮಸ್ಯೆಗಳಿರುವವರು, ಬದುಕು ಪೂರ್ತಿ ಟೆಂಪರರಿಯಾಗಿಯೇ ದುಡಿದವರು, ಮ್ಯಾನೇಜ್ ಮೆಂಟಿನ ಶೋಷಣೆಯನ್ನು ಸಹಿಸಿಕೊಂಡು, ಎಲ್ಲಿಯೂ ಅವರನ್ನು ದೂರದೆ ತನ್ನ ವೃತ್ತಿಗೆ, ತನ್ನ ನಂಬಿಕೆಗಳಿಗೆ ದ್ರೋಹ ಬಗೆಯದೆ ದುಡಿಯುವ ನೂರಾರು ಶಿಕ್ಷಕರನ್ನು ಬದುಕಿನಲ್ಲಿ ನೋಡಿದ್ದೇನೆ. ಅವರ ವೈಯಕ್ತಿಕ ಬದುಕಿನ ನೋವುಗಳನ್ನು, ಅವರ ಕಡಿಮೆ ಸಂಬಳವನ್ನು ಎಲ್ಲಿಯೂ ತೋರಿಸಿಕೊಳ್ಳದೆ ಮಕ್ಕಳೆದುರು ನಗು ನಗುತ್ತಾ, ಮಕ್ಕಳ ಪ್ರತಿಭೆ ಗುರುತಿಸುತ್ತಾ, ಮಕ್ಕಳನ್ನು ಮುದ್ದು ಮಾಡುತ್ತಾ, ಮಕ್ಕಳಿಗೊಂದು ಚಂದದ ದಾರಿ ತೋರಿಸಿಕೊಡುತ್ತಾ ಟೀಚರ್ ಅಂದ್ರೆ ಅಮ್ಮನ ಹಾಗೆ ಅಂತ ಅನ್ನಿಸುವಷ್ಟು ಪ್ರೀತಿ ಮಾಡಿ ಕಲಿಸುವವರಿದ್ದಾರೆ, ಈಗಲೂ ಇದ್ದಾರೆ.

ಸರ್ಕಾರ ಲಕ್ಷಾಂತರ ಸಂಬಳ ಕೊಟ್ರೂ, ಸವಲತ್ತುಗಳನ್ನು ಕೊಟ್ರೂ, ವೃತ್ತಿ ಭದ್ರತೆ ಕೊಟ್ರೂ ಏನೇನೂ ಕೆಲಸ ಮಾಡದೆ, ಮಕ್ಕಳ ತಲೆಯಲ್ಲಿ ತಮಗಿಷ್ಟವಾದ್ದನ್ನು ತುಂಬುವವರು, ಸಿಗರೇಟ್ ಸೇದುತ್ತಾ, ಶಿಷ್ಯ ಬಂದಾಗ ಕೈ ಹಿಂದೆ ಕೊಂಡು ಹೋದಂತಹ ಶಿಕ್ಷಕರನ್ನೂ ನೋಡಿದ್ದೇನೆ. ಎಲ್ಲ ವೃತ್ತಿಗಳಲ್ಲೂ ಇಂತಹ ವೈರುಧ್ಯಗಳು ಇರುತ್ತವೆ.

ನಮಗೆ ಅತ್ಯಂತ ಪ್ರೀತಿಸಿದ, ದ್ವೇಷಿಸಿದ, ಶಿಕ್ಷಿಸಿದ ಎಲ್ಲ ರೀತಿಯ ಟೀಚರ್ಸ್ ನೆನಪಿನಲ್ಲಿ ಇರ್ತಾರೆ ಅಲ್ವ... 30-40 ವರ್ಷ ಕೆಲಸ ಮಾಡಿ ನಿವೃತ್ತರಾದರೂ, ಒಂದು ತಲೆಮಾರಿನಷ್ಟು ಅವಧಿ ದುಡಿದರೂ ಅವರು ಶಿಕ್ಷಕರಾಗಿಯೇ ನಿವೃತ್ತರಾಗುತ್ತಾರೆ. ನಾವು, ಅವರಿಂದ ಕಲಿತವರು ಬೇರೆ ಬೇರೆ ಕೆಲಸಗಳಲ್ಲಿ, ಹುದ್ದೆಗಳಲ್ಲಿ ಇರುತ್ತೇವೆ...

ಆದರೂ ಎಲ್ಲಿಯೋ ಒಮ್ಮ ದಿಢೀರ್ ಸಿಕ್ಕಾಗ, ಅಥವಾ ಶಾಲೆಗೇ ಹೋದಾಗ ಅವರ ಜೊತೆ ಸೆಲ್ಫೀ ತೆಗೆಯ ಹೊರಟಾಗ ದೈಹಿಕವಾಗಿ ಅವರಿಗಿಂತ ಉದ್ದ ಇದ್ದೇವೆ ಅಂತ ಅನ್ನಿಸಿದರೂ ಸಹ... ಒಂದು ಗೌರವ, ಒಂದು ಪ್ರೀತಿ ಮತ್ತೊಂದು ಪುಟ್ಟದಾದ ಕೃತಜ್ಞತೆಯ ಭಾವ, ನಮ್ಮ ಹೆಸರನ್ನೇ ಹೇಳಿ ಅವರು ಕರೆದಾಗ ಉಂಟಾಗಬಹುದಾದ ಸಾರ್ಥಕತೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ... ಅಲ್ವ?

ಶಾಲೆಯಲ್ಲೂ, ಶಾಲೆಯ ಹೊರಗೆಯೂ ಕಲಿಸಿದ, ಕಲಿಯುವಂತೆ ಮಾಡಿದ, ಅರಿವಿಲ್ಲದೇ ಗುರುಗಳಾಗಿ ಬದುಕಿನ ತಿರುವುಗಳಲ್ಲಿ ಮಾರ್ಗದರ್ಶನ ಮಾಡಿದ ಎಲ್ಲ ಪ್ರತ್ಯಕ್ಷ ಹಾಗೂ ಪರೋಕ್ಷ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು...

-ಕೃಷ್ಣಮೋಹನ ತಲೆಂಗಳ (05.09.2022)

4 comments:

Sulakshana said...

ಬರಹ ಚೆನ್ನಾಗಿದೆ..
ನನಗೆ ಕೂಡ ನನ್ನ primary ಶಾಲೆಯ SHIVANNA MASTRU..ಹಾಗೆ ಗಿರಿಜಾ teacher ರ ನೆನಪು ಬಂತು..
ಅವರು ನನ್ನ ಮೇಲೆ ತೋರುತ್ತ ಇದ್ದ ಪ್ರೀತಿ..,ಎಲ್ಲವೂ ಕಣ್ಣಿಗೆ ತೋರಿದ ಭಾಸವಾಯಿತು...

Unknown said...

ಉತ್ತಮವಾಗಿದೆ

adharsha kalyana said...

ಚೆನ್ನಾಗಿ ಚಿವುಟಿದ್ದೀರಿ ಸರ್.

Unknown said...

ಸರ್ ತುಂಬಾ ಚೆನ್ನಾಗಿದೆ