ಯಾವ್ಯಾವುದೋ ಲಿಂಕ್ ತೆರೆಯಲು ಬಿಡುವಿರುವ ನಮಗೆ ಪರಿಚಿತರ ಮೆಸೇಜಿಗೆ ಉತ್ತರಿಸಲು ಪುರುಸೊತ್ತಿಲ್ಲ!

 (ಲೈಕು, ಕಮೆಂಟು ಬಾರದೇ ಇರುವ ಕೆಟಗರಿಗೆ ಸೇರಿದ ಬರಹ!)




……….

ನಮ್ಮ ಮೊಬೈಲಿಗೆ ಒಂದು ಮೆಸೇಜು ಬರ್ತದೆ. ನೀವು 10 ಲಕ್ಷ ರುಪಾಯಿ ಗೆದ್ದಿದ್ದೀರಿ, ನೀವು ಅದೃಷ್ಟಶಾಲಿಗಳಾಗಿ ಆಯ್ಕೆಯಾಗಿದ್ದೀರಿ. ಈ ಲಿಂಕ್ ಒತ್ತಿ ಅಂತ. ಹಿಂದೆ ಮುಂದೆ ನೋಡದೆ ಲಿಂಕ್ ಒತ್ತುತ್ತೇವೆ... ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ನಿಮ್ಮ ಪಿನ್ ತಿಳಿಸಿ…” ಅಂತ ಕೇಳಿದರೆ ಸ್ವಲ್ಪವೂ ಯೋಚಿಸದೆ ಅವರಿಗೆ ನಮ್ಮ ಪಿನ್ ನೀಡಿ ದುಡ್ಡು ಕಳೆದುಕೊಳ್ಳುತ್ತೇವೆ. ಮತ್ತೆ ಪರಿತಪಿಸುತ್ತೇವೆ... ಆನ್ ಲೈನ್ ವಂಚನೆಗೆ ಬಲಿಯಾದೆ ಅಂತ...

ಅದೇ ನಿಮ್ಮ ಗುರ್ತದವನೊಬ್ಬ ನಾನು ಇಂಥಿಂಥ ವ್ಯಕ್ತಿ, ನಾಡಿದ್ದು ಊರಿನಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ನಿಮ್ಮ ಸಹಭಾಗಿತ್ವ ಇಲ್ಲದಿದ್ದರೂ ಪ್ರೋತ್ಸಾಹ ಅಗತ್ಯ, ಹಾಗಾಗಿ ಒಂದು ಗ್ರೂಪಿಗೇ ಸೇರಿಸುತ್ತೇವೆ ಅಂತ ಮೆಸೇಜು ಹಾಕ್ತಾನೆ. ನಿಮ್ಮನ್ನು ಕೇಳದೇ ಒಂದು ವಾಟ್ಸಪ್ ಗ್ರೂಪಿಗೆ ಸೇರಿಸುತ್ತಾನೆ. ನಿಮಗೆ ಆತನ ನಂಬರ್ ಇಲ್ಲದಿದ್ದರೂ, ಆತ ಯಾರೆಂದು ಗೊತ್ತಿರುತ್ತದೆ. ಆದರೂ ಆ ಮೆಸೇಜಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಕನಿಷ್ಠ ಬೇಡ, ನನಗೆ ಇಂಥದ್ದೆಲ್ಲ ಇಷ್ಟ ಇಲ್ಲ, ನನ್ನನ್ನು ವಾಟ್ಸಪ್ ಗ್ರೂಪಿಗೆ ಸೇರಿಸಬೇಡಿ, ನಾನು ಬಿಝಿ ಇರ್ತೇನೆ ಅಂತ ಕೂಡಾ ಹೇಳುವುದಿಲ್ಲ. ಸುಮ್ನೆ ಇರ್ತೀರಿ. ನಾನು ಬಿಝಿ, ನಾನು ಕಂಡಾಪಟ್ಟೆ ವಾಟ್ಸಪ್ ಗ್ರೂಪುಗಳ ಕಡೆ ಗಮನ ಹರಿಸಲು ಆಗುವುದಿಲ್ಲ ಅಂತ.

 

ಮೆಸೇಜು ಮಾಡಿದಾಗ ನಿಮ್ಮನ್ನು ಗ್ರೂಪಿಗೆ ಸೇರಿಸುತ್ತಾನೆ. ನೀವು ಗ್ರೂಪಿನ ಯಾವ ಮೆಸೇಜನ್ನೂ ಓದುವುದಿಲ್ಲ. ಕ್ಲಿಯರ್ ಚಾಟ್ ಕೊಡ್ತಾ ಇರ್ತೀರಿ. ಒಂದು ದಿನ ಕ್ಲಿಯರ್ ಚಾಟ್ ಕೊಡುವಾಗ ತಪ್ಪಿ ಆ ಗ್ರೂಪಿನಿಂದ ಎಕ್ಸಿಟ್ ಆಗ್ತೀರಿ... ಅಲ್ಲಿಗೆ ನಿಮ್ಮ ಹಾಗೂ ಆ ಗ್ರೂಪಿನ ಸಂಬಂಧ ಮುಗಿಯುತ್ತದೆ...! ನಿಮಗೇನು ಅನ್ನಿಸುವುದಿಲ್ಲ. ನೀವಿಲ್ಲದೇ ಆ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.

ನಾವು ಕಲಿತ ಶಾಲೆ, ನಮ್ಮೂರಿನ ಒಂದು ಕಾರ್ಯಕ್ರಮ, ನಮ್ಮ ಪಕ್ಕದ ಬೀದಿಯ ಒಂದು ಸಂಘಟನೆ, ಗುಂಪು, ಬೀದಿಯ ಸಮಾನಮನಸ್ಕರು, ಪರಿಚಿತರು ಯಾರಾದರೂ ಯಾವುದೇ ದುರುದ್ದೇಶ ಇಲ್ಲದೆ ವಾಟ್ಸಪ್ಪಿನಲ್ಲಿ ಆದರೆ ಬೇಗ ಸಂಪರ್ಕ ಸಾಧಿಸಬಹುದು ಎಂಬ ಒಂದೇ ಕಾರಣಕ್ಕೆ ಏನಾದರೂ ಕೇಳಿದರೆ, ಹೇಳಿದರೆ, ಮೆಸೇಜು ಮಾಡಿದರೆ ನಮಗೆ ಪ್ರತಿಕ್ರಿಯೆ ಕೊಡಲು ಟೈಮಿರುವುದಿಲ್ಲ.

ನಾನು ಒಪ್ತೇನೆ. ಯಾವುದೇ ಗ್ರೂಪಿಗೆ ಸೇರುವುದು, ಸೇರದೇ ಇರುವುದು, ಎಲ್ಲರಿಂದ ದೂರ ಇರುವುದು ಅವರವರ ಇಷ್ಟ ಹಾಗೂ ವೈಯಕ್ತಿಕ ಸ್ವಾತಂತ್ರ್ಯ. ಆದರೆ, ಪರಿಚತರೇ ಯಾರಾದರೂ ಯಾವುದೋ ಸದುದ್ದೇಶದಿಂದ ಮೆಸೇಜ್ ಮಾಡಿದಾಗ ಯಸ್ ಹೇಳುವುದು ಬಿಡಿ, ಕನಿಷ್ಠ ನೋ ಅಂತ ಹೇಳುವ ಸೌಜನ್ಯವೂ ನಮಗಿರಬಾರದೇ. ಅದನ್ನು ನಿರೀಕ್ಷಿಸುವುದು ತಪ್ಪೇ?

ವಾಸ್ತವವಾಗಿ ತಂತ್ರಜ್ಞಾನ ಸಂವಹನವನ್ನು ಸುಲಭ, ಕ್ಷಿಪ್ರ ಹಾಗೂ ಬಳಕೆದಾರಸ್ನೇಹಿ ಆಗಿರಬೇಕಿತ್ತು. ಆದರೆ ನನ್ನ ಗ್ರಹಿಕೆ ಪ್ರಕಾರ ನಾವು ಜಾಲತಾಣಗಳನ್ನು ಕ್ಲಿಷ್ಟ ಮಾಡಿದ್ದೇವೆ ಹಾಗೂ ಪ್ರತಿದಿನ ಮತ್ತಷ್ಟು ಕ್ಲಿಷ್ಟ ಹಾಗೂ ಕ್ಲೀಷೆ ಆಗಿಸುತ್ತಿದ್ದೇವೆ.

ಫೇಸ್ಬುಕ್ಕಿನಲ್ಲಿ ನೂರಾರು ಸುದ್ದಿ ವೆಬ್ ಸೈಟುಗಳಲ್ಲಿ ಏನೇನೋ ಕ್ಷುಲ್ಲಕ ವಿಚಾರಗಳು ಸುದ್ದಿಯ ರೂಪದಲ್ಲಿ ಬರುತ್ತವೆ. ಯಾರ್ಯಾರದ್ದೋ ವೈಯಕ್ತಿಕ ವಿಚಾರ, ಗಾಸಿಪ್ಪು, ಎಕ್ಸ್ ಎಕ್ಸ್ ಎಕ್ಸ್ ಇತ್ಯಾದಿ ವಿಚಾರಗಳನ್ನು ನಿಮಗೆ ಗೊತ್ತಾ, ಅದು ಯಾವುದು, ನಿಮ್ಮ ನಕ್ಷತ್ರ ಯಾವುದು?” ಮತ್ತಿತರ ಪ್ರಚೋದಕ ಹೆಡ್ಡಿಂಗ್ ಕೊಟ್ಟಾಗ ಬಹಳಷ್ಟು ಮಂದಿ ಆ ಲಿಂಕ್ ಕ್ಲಿಕ್ ಮಾಡ್ತಾರೆ. ಅದರೊಳಗೆ ಇರುವುದನ್ನೂ ಭಾಗಶಃ ಓದುತ್ತಾರೆ. ನಂತರ ಆ ವೈಬ್ ಸೈಟಿಗೆ, ಅದರ ಅಡ್ಮಿನ್ನಿಗೆ, ಇಡೀ ಮಾಧ್ಯಮ ವ್ಯವಸ್ಥೆಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ಬಯ್ಯುತ್ತಾರೆ. ತಮ್ಮ ಬಾಯನ್ನೂ ಗಲೀಜು ಮಾಡಿಕೊಳ್ಳುತ್ತಾರೆ.

ನನ್ನ ಪ್ರಶ್ನೆ... ಒಬ್ಬ ಸ್ನೇಹಿತ ಮೆಸೇಜು ಮಾಡಿದಾಗ ಕನಿಷ್ಠ ಯಸ್ ಅಥವಾ ನೋ ಹೇಳಲು ವ್ಯವಧಾನ ಇಲ್ಲದ ಮಂದಿಗೆ ಇಂತಹ ವೆಬ್ ಸೈಟ್ ತೆರೆಯಲು, ಅದನ್ನು ಓದಲು ಮತ್ತೆ ಬೈದು ಬೈದು ಅಷ್ಟುದ್ದ ಟೈಪು ಮಾಡಿ ಹಾಕಲು ಸಮಯ ಎಲ್ಲಿ ಸಿಗುತ್ತದೆ? ವೆಬ್ ಸೈಟ್ ಗಳಲ್ಲಿ ಅದೇ ಮಾದರಿಯ ವಿಚಾರ ಬರುವುದು ಅಂತ ನಿಮಗೆ ಅನಿಸಿದೆರ ಯಾಕೆ ಮತ್ತೆ ಮತ್ತೆ ಅವುಗಳ ಲಿಂಕ್ ತೆರೆಯುತ್ತೀರಿ, ಓದುತ್ತೀರಿ? ಬ್ಲಾಕ್ ಮಾಡಬಹುದಲ್ವ?

ನಾನೊಬ್ಬ ಎಲ್ಲರಿಗಿಂತ ಅತೀತನಾದ ವ್ಯಕ್ತಿ, ನಾನು ಭಯಂಕರ ಬಿಝಿ, ನನಗೆ ಯಾವುದಕ್ಕೂ ಸಮಯ ಇಲ್ಲ. ಕ್ಷುಲ್ಲಕ ವಿಚಾರಗಳಿಗೆ ತಲೆ ಕೆಡಿಸುವುದಕ್ಕೆ ನನಗೆ ಪುರುಸೊತ್ತಿಲ್ಲ ಎಂದು ನಾವು ಯೋಚಿಸುತ್ತೇವಲ್ಲ... ಈ ಪುರುಸೊತ್ತು ಅನ್ನುವುದು ಆದ್ಯತೆ (ಪ್ರಯಾರಿಟಿ)ಗಳ ಮೇಲೆ ಹೋಗುತ್ತದೆ. ಬಹಳಷ್ಟು ಸಲ ದೇಶದ ಪ್ರಧಾನಿ, ರಾಷ್ಟ್ರಪತಿ, ವಿರೋಧ ಪಕ್ಷದ ಮುಖಂಡರು, ಮುಖ್ಯಮಂತ್ರಿ, ಆನಂದ್ ಮಹೀಂದ್ರರಂತಹ ಉದ್ಯಮಿಗಳಿಗೆ ಸಹ ಪುಟ್ಟ ಪುಟ್ಟ ವಿಚಾರಗಳ ಬಗ್ಗೆ ಗಮನಿಸ್ಲಿಕೆ, ಪ್ರಸ್ತಾಪ ಮಾಡ್ಲಿಕೆ, ಉತ್ತರ ಕೊಡ್ಲಿಕೆ, ವಿಮರ್ಶೆ ಮಾಡ್ಲಿಕೆ ಟೈಂ ಸಿಗುತ್ತದೆ. ಆದರೆ ಸಾಮಾನ್ಯ ನಾಗರಿಕರಿಗೆ ಪಾಪ ಪುರುಸೊತ್ತೇ ಇರುವುದಿಲ್ಲ!

ಬದುಕಿನಲ್ಲಿ ಎಲ್ಲರಿಗೂ ಒತ್ತಡ, ಸಮಸ್ಯೆ, ಸವಾಲುಗಳು ಖಂಡಿತಾ ಇರುತ್ತವೆ. ದಿನಪೂರ್ತಿ ಜಾಲತಾಣಗಳಲ್ಲಿ ಮುಳುಗಿರಲು, ಬಂದದ್ದನ್ನೆಲ್ಲ ಓದಲು, ಉತ್ತರಿಸಲು ಖಂಡಿತಾ ಚಟುವಟಿಕೆಯಿಂದ ಕೂಡಿದ ಯಾರಿಗೂ ಸಾಧ್ಯ ಇರುವುದಿಲ್ಲ. ಆದರೆ, ನಮ್ಮ ಆದ್ಯತೆಗಳಿಗೆ ನೀಡಲು ಸಿಕ್ಕುವ ಸಮಯದಲ್ಲೇ ಸ್ವಲ್ಪ ಸಮಯವನ್ನು ಕನಿಷ್ಠ ಪಕ್ಷ ಪ್ರತಿಕ್ರಿಯೆ ನೀಡಲಾದರೂ ಬಳಸಿದರೆ, ಒಂದು ಸಮುದಾಯದಲ್ಲಿ ನಾವೊಂದು ಭಾಗವಾಗಿ, ಒಂದು ವಿಚಾರ, ಬೆಳವಣಿಗೆಯ ಅಂಶವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ...

ಬದುಕಿನ ಒಂದು ಹಂತದ ಬಳಿಕ ಜವಾಬ್ದಾರಿಯಲ್ಲಿ, ಆರ್ಥಿಕ ಸ್ಥಿತಿಗತಿಯಲ್ಲಿ, ಅನುಭವದಲ್ಲಿ ನಾವು ದೊಡ್ಡ ಜನ ಅಂತ ಅನ್ನಿಸಿಕೊಳ್ಳಬಹುದು. ಅಥವಾ ನಾವು ಸ್ವಾವಲಂಬಿಗಳಾಗಿರಲು, ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ದೇವರು ನಮಗೆ ಸಾಮರ್ಥ್ಯ ಒದಗಿಸಿರಬಹುದು. ಆದರೆ, ಒಂದು ಕಾಲದಲ್ಲಿ ನಾವೂ ಚಿಕ್ಕ ಜನಗಳಾಗಿದ್ದಾಗ ನಮ್ಮ ಜೊತೆ ಓಡಾಡಿದವರು, ಮಾತನಾಡಿದವರು, ಕೈಹಿಡಿದವರೆಲ್ಲರೂ ನಮ್ಮ ಹಾಗೆ ದೊಡ್ಡ ಜನರೇ ಆಗಿರಬೇಕಾಗಿಲ್ಲ. ಅವರು ಇಂದಿಗೂ ಸಣ್ಣ ಜನಗಳೇ ಆಗಿ ಬದುಕುತ್ತಿರಬಹುದು. ಅಷ್ಟು ಮಾತ್ರವಲ್ಲ, ಸಾಮಾಜಿಕ ಚಟುವಟಿಕೆಗಳಲ್ಲಿ ಕೈಜೋಡಿಸುವವರು, ಸಮುದಾಯದ ಚಟುವಟಿಕೆಗಳಿಗೆ ಸಮಯ ಮೀಸಲಿಟ್ಟು ಕೆಲಸ ಮಾಡುವವರು, ಸಮಯ ಮೀಸಲಿಡುವವರೆಲ್ಲರೂ ಕೆಲಸ ಇಲ್ಲದ ಸೋಂಬೇರಿಗಳೋ, ಬದುಕಿನ ಬಗ್ಗೆ ಕಲ್ಪನೆಯೇ ಇಲ್ಲದ ಅಮಾಯಕರೋ ಅಲ್ಲ. ಜಗತ್ತಿನಲ್ಲಿ ನಾವು ತುಂಬ ವಿಚಾರಗಳಿಗೆ ನಾವು ಕೇವಲ ಪ್ರೇಕ್ಷಕರಾಗಿ ಹೋಗಿ ಊಟ ಮಾಡಿ, ಚಪ್ಪಾಳೆ ತಟ್ಟಿ ಬರುತ್ತೇವೆ. ಅಲ್ಲಿ ಕಂಬ ಊರಿದವರು, ಪರದೆ ಕಟ್ಟಿದವರು, ಊಟಕ್ಕೆ ಅಕ್ಕಿ ಸಂಗ್ರಹಿಸಿ ತಂದವರು, ಊರೂರು ತಿರುಗಿ ಬೆವರು ಸುರಿಸಿ ಪ್ರಚಾರ ಮಾಡಿದವರ ಬಗ್ಗೆ ಯೋಚಿಸುವುದೇ ಇಲ್ಲ.

ಸ್ವಲ್ಪ ಯೋಚಿಸಿ, ಊರಿನಲ್ಲಿ ಎಲ್ಲರೂ ಪುರುಸೊತ್ತಿಲ್ಲದ ದೊಡ್ಡ ಜನರೇ ಆದರೆ, ಎಲ್ಲರೂ ಚಪ್ಪಾಳೆ ತಟ್ಟುವವರು ಮಾತ್ರ ಆದರೆ, ಚಪ್ಪಾಳೆ ತಟ್ಟುವಂತಹ ಸಂದರ್ಭಗಳನ್ನು ಸೃಷ್ಟಿಸುವವರು ಯಾರು ಹಾಗಾದರೆ?!”

ಬಿಝಿ, ಉಚ್ಛ ಮಟ್ಟದ ಸ್ಟೇಟಸ್ಸು, ಬಿಗುಮಾನ,  ದೊಡ್ಡಸ್ತಿಕೆಯ ಆಚೆಗೂ ಒಂದು ಲೋಕವಿದೆ. ಅಲ್ಲಿ ಹೇಳ ಹೆಸರಿಲ್ಲದೆ ದುಡಿಯುವವರು, ಒಂದೂ ಫೋಟೋಗೆ ಸಿಕ್ಕದೆ ಕೆಲಸ ಮಾಡುವವರು, ಪ್ರಚಾರದ ಸಮೀಪಕ್ಕೂ ಸುಳಿಯದೆ ದುಡಿದು ಮಾಯವಾಗುವಂಥಹ ನೂರಾರು ಮಹಾನುಭಾವರು ಇದ್ದಾರೆ. ನೀವೊಂದು ಮೆಸೇಜು ಮಾಡಿದ ತಕ್ಷಣ ಎಲ್ಲಿಂದಲೋ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿ ಕನಿಷ್ಠ ಥ್ಯಾಂಕ್ಸ್ ನ್ನೂ ಅಪೇಕ್ಷಿಸದೆ ತಮ್ಮ ಕೆಲಸದಲ್ಲಿ ಮುಂದುವರಿಯುವವರ ಹಾಗೆ! ನಮಗದು ತುಂಬ ಸಲ ಬಿಝಿ ಇರುವಾಗ ತಿಳಿಯುವುದೇ ಇಲ್ಲ!

ಆದರೆ, ಯಾರೋ ಕಟ್ಟಿದ ಗ್ರೂಪಿನಲ್ಲಿ ನಮ್ಮ ಕವನಗಳ ಪ್ರಚಾರ ಮಾಡುವಾಗ, ನಮ್ಮದೇ ಸೆಲ್ಫೀಗಳನ್ನು ಹಾಕಿ ಮೆರೆಯುವಾಗ, ಉದ್ಧಟತನ ಮಾತನಾಡುವಾಗಲೆಲ್ಲ ನಾವು ಆ ಗ್ರೂಪಿಗೆ ಏನು ಕೊಟ್ಟಿದ್ದೇವೆ ಅಂತ ಯೋಚಿಸುವುದೇ ಇಲ್ಲ. ಯಾವತ್ತೋ ಕಲಿತ ಶಾಲೆಯ ಮಟ್ಟಿಲಿನ ವರೆಗೂ ಹೋದರೂ ಒಳಗೆ ಸುಳಿಯುವುದು ಟೈಂ ವೇಸ್ಟ್ ಅಂತ ಅನ್ನಿಸುವುದು ನಮ್ಮ ಮನಸ್ಸನ್ನು ಎಲ್ಲೋ ಕಟ್ಟಿಟ್ಟು ಚೌಕಟ್ಟಿನೊಳಗೆ ಇಟ್ಟು ಬಂದಾಗ. ಇದೇ ರೀತಿ ಯೋಚಿಸುವವರಿಗೆ ಚಂದದ ಗಿರಿಧಾಮ ಸಹ ಬೋಳು ಗುಡ್ಡೆ ಅಂತ, ಕೋಗಿಲೆಯ ನಿನಾದ ವ್ಯರ್ಥ ಹರಟೆ ಅಂತ ಅನ್ನಿಸೀತು!

 

ವಸ್ತು, ವಿಷಯ, ವ್ಯಕ್ತಿಗಳನ್ನು ನಿರ್ಲಿಪ್ತವಾಗಿ, ವ್ಯಾವಹಾರಿಕವಾಗಿಯೇ ನೋಡುತ್ತಾ ಹೋದರೆ, ಯಾರೂ, ಯಾವುದೂ ಶ್ರೇಷ್ಠ, ಅಪರೂಪ, ಭಾವನಾತ್ಮಕ ಎಂದು ಅನ್ನಿಸಲು ಸಾಧ್ಯವೇ ಇಲ್ಲ. ಸರಿ-ತಪ್ಪು, ಶ್ರೇಷ್ಠತೆ, ಮೌಲ್ಯ ಇವೆಲ್ಲದರ ಅರಿವಾಗುವುದು ನಮ್ಮ ದೃಷ್ಟಿಕೋನದಿಂದ. ನಮ್ಮ ದೃಷ್ಟಿಕೋನವೇ ವ್ಯಾವಹಾರಿಕವಾಗಿದ್ದರೆ ಇಡೀ ಜಗತ್ತೇ ಯಾಂತ್ರಿಕ, ನಿರ್ಲಿಪ್ತ, ಸಾಮಾನ್ಯ ಅನ್ನಿಸಿಬಿಡುತ್ತದೆ. ಅಂತಹ ಬದುಕಿನಲ್ಲಿ ಯಾವುದೇ ವೈವಿಧ್ಯತೆಯೂ ಇರುವುದಿಲ್ಲ.

-ಕೃಷ್ಣಮೋಹನ ತಲೆಂಗಳ (23.10.2022)

No comments: