ಸಾಲ ಕೊಟ್ಟು ಕೆಟ್ಟು ಹೋದವರು!
ಸಾಲ ಕೊಟ್ಟು ಕೈಸುಟ್ಟುಕೊಂಡವರಿಗೆ ಸಮರ್ಪಣೆ!
(ಮೂರು ವರ್ಷಗಳ ಅವಧಿಯಲ್ಲಿ ಮೂರನೇ ಸಲ ಶೇರ್ ಮಾಡುತ್ತಿರುವ ಬರಹ ಇದು. 30 ಅಥವಾ 300 ವರ್ಷ ಕಳೆದರೂ ಭಾವ ಮತ್ತು ಪರಿಸ್ಥಿತಿ ಅದೇ ಇರುತ್ತದೆ!!!)
.....
ನಮಸ್ಕಾರ,
ಸ್ನೇಹಿತರೆಂದು ನಂಬಿ ಕೇಳಿದ ತಕ್ಷಣ ಕೈಸಾಲ ನೀಡಿ, ಒಂದೂ ಪೈಸೆಯೂ ಈ ತನಕ (ಸುಮಾರು ನಾಲ್ಕು ವರ್ಷ ಅವಧಿಯಲ್ಲಿ) ವಾಪಸ್ ಬಾರದ ಬಗ್ಗೆ 2019 ನ.20ರಂದು ಇದೇ ಫೇಸ್ ಬುಕ್ ಗೋಡೆಯಲ್ಲಿ ಬರೆದಿದ್ದೆ. ಸಾಲ ಪಡೆದು ಕೊಡದವರ ಪೈಕಿ ಇಬ್ಬರು ನನ್ನ ಸಹಪಾಠಿಗಳಾಗಿದ್ದವರು. ಇನ್ನೊಬ್ಬರು ಪ್ರಶಸ್ತಿ ವಿಜೇತ ಪತ್ರಕರ್ತರು....
ಆ ಬರಹ ಬರೆದ ಬಳಿಕವೂ ಒಂದೇ ಒಂದು ಪೈಸೆ ವಾಪಸ್ ಬಂದಿಲ್ಲ... ಆದರೆ ವಂಚಿಸಿದ ಮೂವರ ಪೈಕಿ ಒಬ್ಬರು ಮೆಸೇಜ್ ಮಾಡಿ "ಆ ಮೂವರ ಪೈಕಿ ಒಬ್ಬ ನಾನೇ ಅಂತ ಗೊತ್ತು, ಹೇಗಾದರೂ ಮಾಡಿ ದುಡ್ಡು ವಾಪಸ್ ಕೊಡ್ತೇನೆ" ಅಂತ ಹೇಳುವ ಸೌಜನ್ಯ ತೋರಿಸಿದ್ರು.... ಆದರೆ ಒಂದೇ ಒಂದು ರುಪಾಯಿ ಕೂಡ ಇಂದಿನ ವರೆಗೆ ವಾಪಸ್ ನೀಡಿಲ್ಲ.... (ಮರಳಿಸುವ ಮನಸ್ಸಿದ್ರೆ ಕನಿಷ್ಠ 10 ರು. ಆದರೂ ವಾಪಸ್ ಕೊಡಬಹುದಿತ್ತು). ವಂಚಿಸಿದ ಇನ್ನಿಬ್ಬರು ಸಹಪಾಠಿಗಳೆನಿಸಿಕೊಂಡವರು... ಆ ವಿಷಯವನ್ನೇ ಮರೆತಂತಿದೆ!!!!
ತಪ್ಪು ನನ್ನದೇ.... ಸ್ನೇಹಿತರೆಂಬ ಒಂದೇ ನೆಪದಲ್ಲಿ ಕೇಳಿದ ತಕ್ಷಣ ಸಹಾಯದ ಉಮೇದಿನಲ್ಲಿ ಸಾಲ ಕೊಟ್ಟದ್ದು, ಅದಕ್ಕೆ ದಾಖಲೆ ಇಲ್ಲ... ಇಲ್ಲಿ ಬೇಸರದ ವಿಷಯ ಹಣ ಹೋಯಿತೆಂಬುದು ಮಾತ್ರ ಅಲ್ಲ, ಸ್ನೇಹದ ದುರುಪಯೋಗ ಆಯ್ತಲ್ಲ ಅಂತ ಅಷ್ಟೇ...
ಮೂವರೂ ಸೇರಿ ನನಗೆ ಹಿಡಿಸಿದ ಮೊತ್ತ ಅಂದಾಜು 40 ಸಾವಿರ ರು.! ಬಹುಶಃ ನನ್ನ ಹಾಗೆ ಹಲವರಿಗೆ ಇದೇ ಥರ ಸಾಲ "ಹಿಡಿಸಿರಬಹುದು". ಅದು ನಾನು ಅವರಿಗೆ ಪ್ರಾಮಾಣಿಕವಾಗಿ ದುಡಿದ ದುಡ್ಡನ್ನು ಕೊಟ್ಟದ್ದು, ಭ್ರಷ್ಟಾಚಾರದಿಂದಲೋ, ಯಾರದ್ದೋ ತಲೆ ಒಡೆದು ಸಂಪಾದಿಸಿದ್ದಲ್ಲ... ಆದರೆ, "ವಾಪಸ್ ಕೊಡುವುದಿಲ್ಲವೆಂದೇ ನಿರ್ಧರಿಸಿ" ಸಾಲ ಪಡೆಯುವ ಇಂತಹ ಮಿತ್ರದ್ರೋಹಿಗಳಿಗೆ ಯಾವ ಭಾವನೆಯೂ ಇರುವುದಿಲ್ಲ...
.....
ಕಳೆದ ಮೂರು ವರ್ಷ ಹಿಂದೆ ಬರೆದ ಅದೇ ಬರಹ ಪುನಃ ಇಲ್ಲಿ ಕಾಪಿ ಪೇಸ್ಟ್ ಮಾಡಿದ್ದೇನೆ...
ಈ ವರಹ ಕಳಕೊಂಡ ದುಡ್ಡು ವಾಪಸ್ ಬರ್ತದೆ ಅನ್ನುವ ಭ್ರಮೆಯಿಂದ ಬರೆದದ್ದಲ್ಲ... ನನ್ನ ಹಾಗೆ ಸಾಲ ಕೊಟ್ಟು ನೊಂದವರ ಸಮಾಧಾನಕ್ಕಾಗಿ ಅಷ್ಟೆ!
...
ಅಪಾತ್ರರಿಗೆ ಕೊಟ್ಟು ಕೆಟ್ಟವರು....
.......
ಬದುಕಿನಲ್ಲಿ ಕಷ್ಟಗಳು ಸಹಜ. ಇತರರ ನೆರವು, ಋಣವೇ ಇಲ್ಲದೆ ಬದುಕಲು ಕಷ್ಟ. ಅನಿವಾರ್ಯವಾಗಿ ಸಾಲ ಪಡೆದುಕೊಂಡು ಬದುಕು ಸಾಗಿಸುವ ಸಂದರ್ಭ ಸಾಲ ಪಡೆದಾತ ತಾನು ಪ್ರಾಮಾಣಿಕನೇ ಆಗಿದ್ದರೆ, ಈ ಥರ ಮಾಡಬಹುದು:
1) ಸಾಲ ಪಡೆಯುವಾಗ ಸರಿಯಾದ ಕಾರಣ ನೀಡಿ, ಇಂತಿಷ್ಟು ಸಮಯದೊಳಗೆ ಇಂತಹ ಮೂಲದಿಂದ ಬರುವ ದುಡ್ಡಿನಲ್ಲಿ ಮರುಪಾವತಿಸುತ್ತೇನೆ ಎಂದು ಭರವಸೆ ನೀಡಬಹುದು.
2) ಅಂದುಕೊಂಡ ಸಮಯದೊಳಗೆ ಸಾಲ ಮರುಪಾವತಿಸಲು ಆಗದಿದ್ದರೆ ಕಾಲಕಾಲಕ್ಕೆ ತನ್ನ ಅನಿವಾರ್ಯತೆಗಳನ್ನು ಸಾಲ ನೀಡಿದಾತನಿಗೆ ಮನವರಿಕೆ ಮಾಡಿ ತನಗೆ ಪಡೆದ ಸಾಲದ ಅರಿವಿರುವುದನ್ನು ಖಚಿತಪಡಿಸಬಹುದು.
3) ದೊಡ್ಡ ಮೊತ್ತದ ಸಾಲವಿದ್ದಾಗ್ಯೂ ಸಹ ಪೂರ್ತಿ ಮೊತ್ತ ಮರುಪಾವತಿಸಲು ಕಾರಣಾಂತರಗಳಿಂದ ಅಸಾಧ್ಯವಾದರೂ ಕನಿಷ್ಠ ಒಂದೋ, ಹತ್ತೋ, ಐನೂರೋ....ಹೀಗೆ ಸಣ್ಣ ಮೊತ್ತವನ್ನಾದರೂ ವಾಪಸ್ ಕೊಟ್ಟು ಬಾಕಿ ಮೊತ್ತವನ್ನು ಮತ್ತೆ ಪಾವತಿಸುವ ಬಗ್ಗೆ ಮನವರಿಕೆ ಮಾಡಬಹುದು...
ಆದರೆ, ತೀರಾ ನೊಂದು ಹೇಳುತ್ತಿದ್ದೇನೆ....
ಇದ್ಯಾವುದನ್ನೂ ಮಾಡದೆ, ಸಾವಿರಗಳ ಲೆಕ್ಕದಲ್ಲಿ ಸಾಲ ಪಡೆದು ನಾಕೈದು ದಿನಗಳಲ್ಲಿ ವಾಪಸ್ ಕೊಡುವುದಾಗಿ ನಂಬಿಸಿ, ಆಮೇಲೆ ಸಾಲದ ವಿಷಯವೇ ಮಾತಾಡದೆ, ಎಷ್ಟೋ ತಿಂಗಳುಗಳು ಕಳೆದರೂ ಒಂದೇ ಒಂದು ಪೈಸೆ ತಿರುಗಿ ಕೊಡದೆ, ಕೊಟ್ಟಾತ ಮುಜುಗರ ಬಿಟ್ಟು ಕೇಳಿದಾಗ ಮತ್ತಷ್ಟು ಸುಳ್ಳು ಹೇಳುತ್ತಾ, ಯಾವುದೇ ಬದ್ಧತೆ ಇಲ್ಲದೆ, ಆರಾಮವಾಗಿ ಸಾಲ ಕೊಟ್ಟಾತನ ಕಣ್ಣೆದುರೇ "ಸಹಜ" ವಾಗಿ ಓಡಾಡುವ ಕೃತಘ್ನರಿದ್ದಾರಲ್ಲ....
ಅವರು ಮನುಷ್ಯನಿಗೆ ಮನುಷ್ಯತ್ವದ ಮೇಲಿನ ನಂಬಿಕೆಯನ್ನೇ ಅಳಿಸಿ ಹಾಕುತ್ತಾರೆ. ಒಂದು ಹಂತದಲ್ಲಿ ಸಾಲ ಕೊಟ್ಟವನನ್ನೇ ಸತಾಯಿಸಿ ಮಿತ್ರತ್ವದ ಅರ್ಥವನ್ನೇ ಬದಲಿಸುವ "ವಾಪಸ್ ಕೊಡುವುದಿಲ್ಲವೆಂದು ನಿರ್ಧರಿಸಿಯೇ ದುಡ್ಡು ಕೇಳುವ ವೃತ್ತಿಪರ ಸಾಲಗಾರರಿಗೆ" ಯಾವುದೇ ದಾಕ್ಷಿಣ್ಯ, ಮುಜುಗರ ಇರುವುದಿಲ್ಲ ಎಂಬುದು ನೆನಪಿರಲಿ....
ಕಷ್ಟಗಳಿಲ್ಲದ ಮನುಷ್ಯರೇ ಇಲ. ಯಾಚನೆಯೂ ಕೆಲವೊಮ್ಮೆ ಅನಿವಾರ್ಯ. ಆದರೆ ಪಡೆದ ಉಪಕಾರ ನೆನಪು ಬೇಕು. ವಿಶ್ವಾಸಘಾತುಕತನವನ್ನೇ ಪ್ರವೃತ್ತಿಯಾಗಿಸಿದರೆ ಮುಂದೊಂದು ದಿನ ಅದುವೇ ದೊಡ್ಡ ಕಪ್ಪುಚುಕ್ಕೆಯಾಗುವುದು ನೆನಪಿರಬೇಕು.
ಸಾತ್ವಿಕತೆಯನ್ನೇ ದೌರ್ಬಲ್ಯವೆಂದುಕೊಂಡು ಸ್ಚಾರ್ಥಕ್ಕೆ ಬಳಸುವವರಿಗೆ ಗೊತ್ತಿರುವುದಿಲ್ಲ. ವಂಚನೆ ಕೂಡಾ ದೌರ್ಬಲ್ಯವಾಗಿ ಜಗತ್ತಿಗೇ ಕಾಣಿಸುತ್ತದೆ ಎಂಬುದು...
(ಇದು ಬಹುತೇಕ ಸಾಲ ಕೊಟ್ಟು ಕೈಸುಟ್ಟವರ ಅನಿಸಿಕೆಯ ಸಾರಾಂಶ. ಸಾಲವನ್ನು ಬೇಕೆಂದೇ ವಾಪಸ್ ಕೊಡದೆ ಅಥವಾ ಆ ವಿಷಯವನ್ನೇ ಮರೆತಂತೆ ನಟಿಸಿ ಆರಾಮವಾಗಿ ಓಡಾಡುವ ಕೃತಘ್ನರನ್ನು ಮಾತ್ರ ಉದ್ದೇಶಿಸಿ ಬರೆದದ್ದು)
-ಕೃಷ್ಣ ಮೋಹನ ತಲೆಂಗಳ (20/11/2019)
No comments:
Post a Comment