ನಿನ್ನ ನೀನು ಮರೆತರೇನು ಸುಖವಿದೇ...?!


ವ್ಯಕ್ತಿತ್ವಗಳನ್ನು ಗುರುತಿಸುವುದು, ನೆನಪಿಟ್ಟುಕೊಳ್ಳುವುದು, ಮೆಚ್ಚಿಕೊಳ್ಳುವುದು, ಗೌರವಿಸುವುದು ಯಾವುದರ ಆಧಾರದ ಮೇಲೆ... ರೂಪ, ಉಡುಪು, ಮಾತು, ದುಡ್ಡು... ಹೀಗೆ ಬೇರೆ ಬೇರೆ ಕಾರಣಗಳಿಂದ ವ್ಯಕ್ತಿತ್ವಗಳನ್ನು ಗುರುತಿಸಬಹುದು. ಆದರೆ, ನಿತ್ಯ ಬದುಕಿನಲ್ಲಿ ನಮ್ಮ ಒಡನಾಟಕ್ಕೆ ಸಿಗುವವರು ಮನಸ್ಸಿಗೆ ಹತ್ತಿರದವರಾಗುವುದು, ಆಪ್ತರೆನಿಸುವುದು ಸಂಬಂಧಗಳೇರ್ಪಡುವುದು ಅವರ ಚಿಂತನೆಗಳ ಮೇಲೆ ಅಲ್ವೇ... ಮಾತು, ನಡಿಗೆ, ಕೃತ್ಯ, ಪ್ರತಿಕ್ರಿಯೆ ಎಲ್ಲದಕ್ಕೂ ಮೂಲ ಮನಸ್ಸಿನಲ್ಲಿ ಹುಟ್ಟವ ಯೋಚನೆ..
ಭಿನ್ನ ಭಿನ್ನ ಚಿಂತನೆಗಳಿಂದಲೇ ಭಿನ್ನ ಭಿನ್ನ ವ್ಯಕ್ತಿಗಳು ರೂಪುಗೊಂಡಿರುವುದು ಮತ್ತು ಅವರನ್ನು ನಾವು ಹಾಗೆ ಗುರುತಿಸಲು ಸಾಧ್ಯವಾಗುವುದು. ವ್ಯಕ್ತಿಯೊಬ್ಬರ ಇಡೀ ಚಿತ್ರಣವನ್ನೇ ಕಟ್ಟಿಕೊಡಬಲ್ಲ ಚಿಂತನೆ ಅಥವಾ ಧೋರಣೆಯೇ ಬದಲಾದರೆ ಮತ್ತೆ ಆ ವ್ಯಕ್ತಿಯ ಐಡೆಂಟಿಟಿ ಕೂಡಾ ಹೊರಟು ಹೋದ ಹಾಗೆ ಅಲ್ಲವೆ....

-------------

ಯಾರೋ ಗಾಯಕ, ಯಾರೋ ಕಲಾವಿದ, ರಾಜಕಾರಣಿ, ಧರ್ಮಗುರು, ನಟ-ನಟಿಯರು ತಮ್ಮ ಕ್ಷೇತ್ರದಲ್ಲಿ ಹೆಸರುವಾಸಿಗಳೆಂದಾದರೆ ಆ ಹಂತಕ್ಕೆ ತಲುಪುವಲ್ಲಿ ಅವರದ್ದೇ ಆದ ಪ್ರತ್ಯೇಕ ಸಾಧನೆ, ಪ್ರತ್ಯೇಕ ಚಿಂತನೆಯೂ ಇತ್ತೆಂದೇ ಅರ್ಥ. ಅವರು ಒಂದು ಯಶಸ್ಸಿನ ಶಿಖರ ತಲುಪಬೇಕಾದ ವರೆಗಿನ ದಾರಿಯಲ್ಲಿ ಎಷ್ಟು ಎಡರು ತೊಡರುಗಳನ್ನು ದಾಟಿ ಬಂದಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು. ಅವೆಲ್ಲಾ ಲೋಕಮುಖಕ್ಕೆ ಗೊತ್ತಾಗುವುದಿಲ್ಲ. ಅಂತಿಮವಾಗಿ ಕಾಣುವುದು ಯಶಸ್ವಿ ವ್ಯಕ್ತಿ ಅಂತ ಮಾತ್ರ. 
ಏನೇ ಇರಲಿ..ಓರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಚಿನ್ ತೆಂಡೂಲ್ಕರ್, ಅಬ್ದುಲ್‌ ಕಲಾಂ, ಅಮಿತಾಭ್ ಬಚ್ಚನ್‌... ಆಯಾ ಕ್ಶೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು, ಯಾಕೆ ಹೇಳಿ.. ಅಲ್ಲಿ ಸ್ವಂತಿಕೆ ಇತ್ತು. ಅವರದ್ದೇ ಸಾಧನೆ ಇದೆ. ಮಾತ್ರವಲ್ಲ, ಭಿನ್ನವಾಗಿ ನಿಲ್ಲುವ ಅವರನ್ನು ಯಾರೊಂದಿಗೂ ಹೋಲಿಸುವ ಅಗತ್ಯವಿಲ. ಎಸ್ಪಿ ಎಂದರೆ ಎಸ್ಪಿ, ಸಚಿನ್ ಎಂದರೆ ಸಚಿನ್, ಕಲಾಂ ಎಂದರೆ ಕಲಾಂ.... ಯಾರೂ ಕೂಡಾ ಇಂತಿಂತವರ ಥರ ಇರುವ ಕಲಾಂ ಎಂದೋ, ಅಂತಹವರ ಹಾಗಿರುವ ಎಸ್ಪಿ ಬಾಲು ಎಂದೋ ಹೇಳುವುದಿಲ್ಲ. ಅವರಗೆ ಅವರೇ ಸಾಟಿ ಎಂಬ ಹಂತಕ್ಕೆ ತಲುಪಿದ ಕಾರಣ ಅವರದ್ದು ಆ ಮಟ್ಟಿನ ಶ್ರೇಷ್ಠತೆ.
------------------
ನಾನು ಹೇಳಲು ಹೊರಟಿರುವುದು, ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಗುರುತಿಸುವಿಕೆಯಿದೆ. ನಮ್ಮದೇ ಆದ ವೈಶಿಷ್ಟ್ಯ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದೆ. ಆದರೆ, ಯಾರನ್ನೋ ಅನುಕರಣೆ ಮಾಡುತ್ತಾ, ಯಾರನ್ನೋ ಮೆಚ್ಚಿಸಲು ಇನ್ಯಾವುದೋ ಹುಚ್ಚಾಟ ಆಡುತ್ತಾ, ನನ್ನ ಬದುಕಿನ ದಾರಿ ಇದಲ್ಲ ಎಂಬ ಹಾಗೆ ಜೀವನ ಸಾಗಿಸುವ ಉದ್ದೇಶದಿಂದ ನಮಗಿಷ್ಟ ಇಲ್ಲದಿದ್ದರೂ ದುಡಿಯುವ ಇನ್ಯಾವುದೋ ರಂಗದಲ್ಲಿ ದುಡಿಯುತ್ತಾ ನಮ್ಮದೇ ಆದ ವ್ಯಕ್ತಿತ್ವವನ್ನು ಎಕ್ಸ್‌ಪೋಸ್‌ ಮಾಡುವಲ್ಲಿ ಎಡವುತ್ತಿದ್ದೇವೆ. 
ಹಾಕಬೇಕಾದ ರಂಗದಲ್ಲಿ ಪ್ರಯತ್ನ ಹಾಕದೆ, ಇನ್ನೇಲ್ಲೋ ನಮಗೆ ಸಲ್ಲದ ‍ರಂಗದಲ್ಲಿ ಗೊಬ್ಬರ ಹೊತ್ತು ಹುಲುಸಾಗಿ ಫಸಲನ್ನೂ ತೆಗೆಯಲಾಗದೆ ಬಳಲುತ್ತಿದ್ದೇವೆ. ಚೆನ್ನಾಗಿ ಕವನ ಬರೆಯಬೇಕಾದವ ಎಲ್ಲೋ ಎಂಜಿನಿಯರ್ ಆಗಿ ಪ್ರೋಗ್ರಾಮಿಂಗ್ ಮಾಡುತ್ತಿರಬಹುದು. ಒಳ್ಳೆ ಪಾಠ ಮಾಡಿ ಮೇಷ್ಟ್ರು ಆಗಬೇಕಾದವ ಇನ್ನೇಲ್ಲೋ ಸಿ.ಎ. ಆಗಿಯೋ, ಬ್ಯಾಂಕ್ ಮ್ಯಾನೇಜರ್ ಆಗಿಯೋ ಇಷ್ಟ ಇಲ್ಲದಿದ್ದರೂ ಲೆಕ್ಕ ಪರಿಶೋಧನೆ ಮಾಡುತ್ತಿರಬಹುದು. ಚೆನ್ನಾಗಿ ಧ್ವನಿ ಇದ್ದು ಹಾಡಬಲ್ಲ ವ್ಯಕ್ತಿ ಮತ್ತೆಲ್ಲೋ ಪೊಲೀಸನೋ, ಮೇಷ್ಟ್ರೋ ಆಗಿ ಕಂಠ ಶೋಷಣೆ ಮಾಡುತ್ತಿರಬಹುದು. 
ಹೌದು ಅವಕಾಶ, ಅದೃಷ್ಟ, ಸೂಕ್ತ ನಿರ್ಧಾರಗಳು ಕೂಡಾ ವ್ಯಕ್ತಿಗಳನ್ನು ದೊಡ್ಡ ವ್ಯಕ್ತಿಗಳಾಗಿಸುವುದು ಸತ್ಯ. ಇದೇ ಕಾರಣಕ್ಕೆ ಪ್ರತಿಯೊಬ್ಬ ಗಾಯಕನೂ ಎಸ್ಪಿ ಆಗುವುದಿಲ್ಲ, ನಟರಾಗಬೇಕೆಂದುಕೊಂಡವರೆಲ್ಲ ಅಮಿತಾಭ್‌ ಮಟ್ಟಕ್ಕೆ ಏರುವುದಿಲ್ಲ. ಬ್ಯಾಟ್ ಹಿಡಿದವರೆಲ್ಲಾ ಮತ್ತೊಬ್ಬ ಸಚಿನ್ ತೆಂಡೂಲ್ಕರ್ ಆಗುವುದಿಲ್ಲ. 
ಅಪರೂಪಕ್ಕೊಮ್ಮೆ ಚೆನ್ನಾಗಿ ಹಾಡುವ ಆಟೋ ಚಾಲಕನೋ, ಉತ್ತಮ ಯಕ್ಷಗಾನ ವೇಷ ಹಾಕಬಲ್ಲ ಟೆಕ್ಕಿಯೋ, ಅದ್ಭುತ ಚಿತ್ರ ಬಿಡಿಸುವ ಇಂಗ್ಲಿಷ್ ಮೇಷ್ಟ್ರೋ ಕಾಣಸಿಗುತ್ತಾರೆ. ಅಂದರೆ ಆಸಕ್ತಿಯೇ ಬೇರೆ.... ಇರುವ ಕ್ಷೇತ್ರವೇ ಬೇರೆ ಎಂಬ ಹಾಗೆ...

----------------

ಸುಮ್ನೇ ಚಿಂತಿಸಿ ನೋಡಿ. ಜೀವನದಲ್ಲಿ ಸಾವಿರಾರು ಮಂದಿ ಭೇಟಿಯಾಗಿ, ಒಡನಾಡಿ, ಸಹೋದ್ಯೋಗಿಗಳಾಗಿ ಬರುತ್ತಾರೆ, ಇರುತ್ತಾರೆ, ಹೋಗುತ್ತಾರೆ.... ಅಲ್ವ... ಅವರೆಲ್ಲ ನಿಮ್ಮ ಮನಸ್ಸಿನಲ್ಲಿ ಉಳಿದಿರ್ತಾರ.... ಎಲ್ಲರನ್ನೂ ಸದಾ ನೆನಪಿನಲ್ಲಿರಿಸಿರ್ತೀರಾ... 
ಇಲ್ವಲ್ಲ... ಕೆಲವೇ ಕೆಲವರು ಮಾತ್ರ ಮನಸ್ಸಿಗೆ ಆಪ್ತರಾಗ್ತಾರೆ, ಯಾವತ್ತೂ ನೆನಪಾಗಿ ಕಾಡ್ತಾರೆ. ಅವರ ಸಾಮಿಪ್ಯ ಆಪ್ಯಾಯತೆ ಒದಗಿಸುತ್ತದೆ ಎಂದಾದರೆ ಅವರೆಷ್ಟು ಮೌಲ್ಯದ ಶರ್ಟು ಹಾಕಿದ್ದಾರೆ, ಯಾವ ಕಾರಿನಲ್ಲಿ ಬಂದಿದ್ದಾರೆ ಎಂಬುದೇ ಕಾರಣವಾಗುವುದಲ್ಲ. ಅವರ ಚಿಂತನೆಯೇ ವ್ಯಕ್ತಿತ್ವವಾಗಿ, ಅವರ ಗುಣಗಳು ನಮಗೆ ಹಿತವಾಗಿ, ಹಿಡಿಸಿ, ಆತ್ಮೀಯರಾಗಿ ಮತ್ತೆ ಅದು ಬೆಳೆದು ಇಷ್ಟುವಾಗುವುದು ತಾನೆ....
ಹಾಗೆ ಒಬ್ಬರನ್ನು ನಾವು ಆತ್ಮೀಯರೆಂದು ಸ್ವೀಕರಿಸಿದಾಗ ಅವರಲ್ಲಿ ನಮಗೆ ಇಷ್ಟವಾಗುವ ಗುಣ ಇರಬಹುದು, ಕೆಲವೊಂದು ನಡವಳಿಕೆ ಇಷ್ಟವಾಗದೆಯೂ ಇರಬಹುದು. ಸ್ನೇಹಿತರನ್ನು ಯಾವಾಗಲೂ ಅವರು ಇದ್ದ ಹಾಗೆಯೇ ಸ್ವೀಕರಿಸಬೇಕಂತೆ. ಹಾಗಾಗಿ ಆತ್ಮೀಯರೆಂದ ಮಾತ್ರಕ್ಕೆ ಒಳ್ಳೆಯದು ಮಾತ್ರ ನಮ್ಮ ಗಮನಕ್ಕೆ ಬರುವುದಲ್ಲ. ನಾವು ಇಷ್ಟಪಡದ ಕೆಲ ಸ್ವಭಾವ ಅವರಲ್ಲಿ ಇರಬಹುದು. ಆದರೆ, ನಾವೂ ಮೆಚ್ಚುವ ಗುಣ ಯಾರಲ್ಲಿ ಇರುತ್ತದೋ, ನಮ್ಮದೇ ಯೋಚನಾ ಧಾಟಿ ಯಾರಲ್ಲಿ ಇರುತ್ತದೋ ಅವರು ನಮಗೇ ಬೇಗ ಹತ್ತಿರದವರಾಗ್ತಾರೆ.
----------------
ಇನ್ನೂ ಸರಳವಾಗಿ ಹೇಳಬೇಕಾದರೆ ನಿಮ್ಮ ತುಂಬ ಆತ್ಮೀಯ ಸ್ನೇಹಿತರಲ್ಲಿ ಕೆಲವರು ಮುಂಗೋಪಿಗಳಾಗಿರಬಹುದು, ಕೆಲವರು ಬೇಜವಾಬ್ದಾರಿಗಳಿರಬಹುದು, ಹೇಳಿದ ಹೊತ್ತಿಗೆ ಬಾರದವರು, ಕರೆದಾಗ ಫೋನ್ ರಿಸೀವ್ ಮಾಡದವರು, ಎಲ್ಲವನ್ನೂ ಆಗಾಗ ಮರೆಯುವವರು, ಸಣ್ಣ ಪುಟ್ಟ ಮಾತುಗಳಿಗೆ ರೇಗುವವರು.... ಹೀಗೆ ಭಿನ್ನ ಭಿನ್ನ ವ್ಯಕ್ತಿತ್ವದವರು ನಿಮ್ಮ ಒಡನಾಡಿಗಳಿರಬಹುದು.ಹಾಗಂತ ಅವರಲ್ಲಿರುವ ಒಂದೊಂದು ಗುಣ ಇಷ್ಟವಾಗಿಲ್ಲ ಎಂಬ ಮಾತ್ರಕ್ಕೆ ಅವರು ಹಿತರಲ್ಲ ಅನ್ತೀರ... ಇಲ್ಲ ತಾನೆ... 
ನೀವು ಅವರಿಗೆ ಅಡ್ಜಸ್ಟ್ ಆಗಿರ್ತೀರಿ.... ನಿಮ್ಮ ಸ್ನೇಹದ ಮುಂದೆ ಒಬ್ಬನ ಸಿಟ್ಟು, ಇನ್ನೊಬ್ಬನ ಬೇಜವಾಬ್ದಾರಿ, ಮತ್ತೊಬ್ಬನ ದುಡುಕು ಎಲ್ಲ ಅಭ್ಯಾಸ ಆಗಿರ್ತದೆ. ಅವರು ಹಾಗಿದ್ದಾರೆ ಎಂಬ ಕಾರಣಕ್ಕೇ ಕೆಲವೊಮ್ಮೆ ಅವರು ನಿಮಗೆ ಇಷ್ಟವಾಗಿರಲೂ ಬಹುದು.
ಯಾಕೆ ಗೊತ್ತಾ.... ತುಂಬಾ ಸಿಟ್ಟಿನ ಮನುಷ್ಯ ಏಕಾಏಕಿ ತುಂಬಾ ಕೂಲ್ ಆಗಿಬಿಟ್ಟರೆ ಅಸಹಜ ಅನ್ಸಲ್ವ... ಎಲ್ಲದಕ್ಕೂ ಎಗರಾಡಿ, ನ್ಯಾಯಕ್ಕಾಗಿ ಓ...ರಾಟ ಮಾಡುವ ಮನುಷ್ಯ ಏಕಾಏಕಿ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ತಣ್ಣಗೆ ಕುಳಿತರೆ ಹೇಗಾಗಬಹುದು ನಿಮಗೆ...
ರಾಕ್ಷಸ ವೇಷ ಹಾಕಿದವ ಸ್ತ್ರೀ ವೇಷ ಹಾಕಿದ ಹಾಗೆ, ದೊಡ್ಡ ಬ್ಯಾಟ್ಸ್ ಮೇನ್ ಒಬ್ಬ ವಿಕೆಟ್ ಕೀಪಿಂಗ್ ಮಾಡಿದ ಹಾಗೆ.... ಹಾಡಬೇಕಾದವ ಕುಣಿದ ಹಾಗೆ.....
ಯಾವತ್ತೂ ಇರುವ ಸ್ವಭಾವ ಬಿಟ್ಟು ಇನ್ನೊಂದು ಸ್ವಭಾವಕ್ಕೆ ಶಿಫ್ಟ್ ಆಗಿಬಿಟ್ಟರೆ ಅದು ನಮ್ಮ ಪಾಲಿಗೆ ಅಸಹಜವಾಗಿ ಕಾಣುತ್ತದೆ. ಅವರು ಪರಿಪೂರ್ಣರಲ್ಲ ಎಂಬಂತೆ ಭಾಸವಾಗಬಹುದು. ಯಾಕೆ ಗೊತ್ತಾ... ನಾವು ಅವರನ್ನು ವ್ಯಕ್ತಿಯಾಗಿ ಕಂಡಿರುವುದೇ ಅವರಲ್ಲಿರುವ ವಿಶಿಷ್ಟ (ಅದು ವಿಕ್ಷಿಪ್ತವೂ ಆಗಿರಬಹುದು) ಗುಣಗಳಿಗೋಸ್ಕರ. ಅದುವೇ ಇಲ್ಲ ಎಂದಾದ ಮೇಲೆ ನಮಗೆ ಅವರು ಅವರಾಗಿ ಕಾಣುವುದಿಲ್ಲ. 
ದೊಡ್ಡ ನಟನೊಬ್ಬ ಸಿಕ್ಕಾಪಟ್ಟೆ ಕುಡಿಯುತ್ತಾನೆ, ಕುಡುಕ ಅಂತ ನಮಗೆ ಆಫ್ ದಿ ರೆಕಾರ್ಡ್ ಗೊತ್ತಿರುತ್ತದೆ. ಆದರೆ, ನಮಗೆ ಆತ ಇಷ್ಟವಾಗಿರುವುದು ಆತನ ನಟನೆಯಿಂದ, ಆತ ಕುಡುಕನೆಂಬ ಕಾರಣಕ್ಕೆ ಅಲ್ಲ. ನಾಳೆ ಆತ ಕುಡಿತ ಬಿಟ್ಟರೆ ನಮಗೇನು ಅನ್ನಿಸದು. ಆದರೆ ನಟನೆಯನ್ನೇ ಬಿಟ್ಟರೆ ನಾವು ಆತನನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವರು ಗುರುತಿಸಿಕೊಂಡಿರುವುದು ನಟನಾಗಿ. ಕುಡಿತ ಅವರ ಬದುಕಿನ ಇನ್ನೊಂದು ಮಗ್ಗುಲು ಅಷ್ಟೆ. ವಿಶಿಷ್ಟ ನಟನೆ ಅವರ ಬದುಕಿಗೆ ಐಡೆಂಟಟಿ ಕೊಟ್ಟಿರುವುದು. ಅದಕ್ಕೇ ಅವರು ಜನಪ್ರಿಯರಾಗುವುದು. ಅವರ ಕುಡಿಯುವ ಹವ್ಯಾಸವನ್ನು ಜನ ಸಹಜವಾಗಿ ಸ್ವೀಕರಿಸಿರುತ್ತಾರೆ. ಅಷ್ಟೇ....ಅಥವಾ ಅದು ನನಗೆ ಸಂಬಂಧಿಸಿದ್ದಲ್ಲ ಅಂತ ನಿರ್ಲಿಪ್ತರಾಗಿರ್ತಾರೆ ಅಷ್ಟೆ.

------------

ನಮ್ಮ ನಿಮ್ಮ ಪ್ರತಿಯೊಬ್ಬರಲ್ಲೂ ಇಂತಹ ಪಾಸಿಟಿವ್, ನೆಗೆಟಿವ್ ಎನರ್ಜಿ, ಚಿಂತನೆಗಳು ಖಂಡಿತಾ ಇರುತ್ತದೆ. ಸರಿ ದಾರಿಯಲ್ಲಿ ಹೋದಾಗಲೂ, ತಪ್ಪು ದಾರಿಯಲ್ಲಿ ಹೋಗುತ್ತೇವೆಂದು ಭಾಸವಾದಾಗಲೂ ಎಚ್ಚರಿಸುವ ಒಂದು ಅಂತರಾತ್ಮ ಇರುತ್ತದೆ. ಏಕಾಂತದಲ್ಲಿ ಪ್ರತಿಯೊಬ್ಬರೂ ಸ್ವವಿಮರ್ಶಕರಾಗಿರುತ್ತಾರೆ ಅಲ್ವ....
ನನ್ನ ಇಂದಿನ ನಡೆ ನುಡಿಯಲ್ಲಿ ನಾನು ಮಾಡಿದ್ದು ಎಷ್ಟು ಸರಿ.. ಇನ್ನು ಹೇಗೆ ಸರಿಯಾಗಿ ನಡೆಯಬಹುದಿತ್ತು, ಇಂಪ್ರೂವ್ ಮಾಡ್ಕೋಬಹುದಿತ್ತು ಅಂತ ಚಿಂತಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಆದರೆ ಪರಿಸ್ಥಿತಿಗೋಸ್ಕರವೋ, ಜನಪ್ರಿಯತಿಗೋಸ್ಕರವೋ ಅಥವಾ ಇನ್ಯಾವುದೋ ಸ್ವಾರ್ಥಕ್ಕೋಸ್ಕರವೋ ನಾವು ನಮ್ಮಿಂದಾದ ತಪ್ಪುಗಳನ್ನು ತಪ್ಪೆಂದು ಒಪ್ಪದೆ ವ್ಯರ್ಥ ವಾದವೋ, ಮೊಂಡು ವಾದವೋ, ಜಗಳವೋ ಮಾಡುತ್ತಲೇ ಇರುತ್ತೇವೆ. 
ಅಂತಿಮವಾದ ಸತ್ಯ, ಅಂತಿಮವಾದ ನಿಜ ಜಗತ್ತಿನಲ್ಲಿ ಇಲ್ಲದಿರಬಹುದು. ಆದರೆ ನಾಲ್ಕು ಜನ ಹೌದೆಂದು ಹೇಳುವ ಒಂದು ವರ್ತನೆ, ಸ್ವಭಾವ, ನಡವಳಿಕೆ ಅಂತ ಖಂಡಿತಾ ಇದೆ. ಅದನ್ನು ನಾವು ದಾಟಿ ಹೋದರೆ ಅದು ನಮ್ಮದೇ ಅಂತರಾತ್ಮಕ್ಕೆ ತಿಳಿಯುತ್ತದೆ. ಆತ್ಮವಿಮರ್ಶೆಯ ಬಳಿಕವೂ ನಾವು ನಮ್ಮ ಸ್ವಭಾವ ಜನ್ಯ ನಡವಳಿಕೆಯಿಂದ ಹೊರಗೆ ಹೋದರೆ ಅದು ಖಂಡಿತಾ ವ್ಯಕ್ತಿತ್ವವನ್ನು ಬಾಧಿಸುತ್ತದೆ.

-----------------------------

ನೀನು ಹೇಗೆಯೇ ಇರು... ಈ ವಿಶಾಲ ಪ್ರಪಂಚದ ಮೂಲೆಯಲ್ಲಿ ನಿನ್ನನ್ನು ಮೆಚ್ಚುವ ಒಂದು ಜೀವ ಇದ್ದೇ ಇದೆ... ನಿನ್ನಿಂದಾಗಿ ಖುಷಿ ಪಡುವ ಯಾರೋ ಎಲ್ಲೋ ಖಂಡಿತಾ ಇದ್ದಾರೆ, ಅವರಿಗೋಸ್ಕರ ಬದುಕು....
ಎಂಬ ಮಾತಿದೆ. ಹೌದಲ್ವೇ... ನಿಮ್ಮ ಉಡುಪು, ನಿಮ್ಮ ಹೇರ್ ಸ್ಟೈಲ್, ನಿಮ್ಮ ನಡಿಗೆ, ನಿಮ್ಮ ಭಾಷೆ, ಮಾತು, ಕಾರ್ಯವೈಖರಿ, ಸಿಟ್ಟು, ಸೆಡವು, ಹಠ, ಗರ್ವ....ಎಲ್ಲದರಲ್ಲೂ ಒಂದು ಪ್ರತ್ಯೇಕತೆ ಇರಬಹುದು. ಹಾಗೆಂದು ಅವುಗಳನ್ನೂ ಇಷ್ಟಪಡುವವರು, ಅವುಗಳಿಂದಾಗಿಯೇ ನಿಮ್ಮ ಆತ್ಮೀಯರಾಗಿರುವವರು ಇದ್ದೇ ಇರುತ್ತಾರೆ. ನಿಮ್ಮ ಹಾಗೊಂದು ವಿಶಿಷ್ಟ (ಯೂನಿಕ್) ಗುಣದಿಂದಲೇ ನೀವು ಎಲ್ಲರ ಮನಸ್ಸಿನಲ್ಲಿ ಛಾಪಾಗಿರ್ತೀರಿ. 
ಕಲಾಂ ಎಂದಾಕ್ಷಣ ದೊಡ್ಡ ವಿಜ್ಞಾನಿ ಎಂದು ನೆನಪಾಗುವ ಜೊತೆಗೆ ಅವರ ಬೆಳ್ಳಿ ವರ್ಣದ ಉದ್ದ ಕೂದಲು ನೆನಪಾಗಲ್ವ.... ಮೋದಿ ಎಂದಾಕ್ಷಣ ಅವರ ಕುರುಚಲು ಗಡ್ಡದ ಜೊತೆಗೆ ವಿಶಿಷ್ಟ ಉಡುಪು ಕೂಡಾ ಕಣ್ಣೆದುರು ಬರಲ್ವ.... ಅಮಿತಾಭ್ ಬಚ್ಚನ್ ಎನ್ನುವಾಗ ಅವರ ಗಡಸು ಧ್ವನಿ ಜೊತೆಗೆ, ಉಡುಪಿನ ಮೇಲೆ ಹೊದೆಯುವ ದಪ್ಪ ಶಾಲು ಕಣ್ಣ ಮುಂದೆ ಬರಲ್ವ....
ನಾವು ಅಮಿತಾಭ್, ಕಲಾಂ, ಸಚಿನ್ ಅಲ್ಲದಿರಬಹುದು. ಆದರೆ ನಮಗೂ ಒಂದು ಐಡೆಂಟಿಟಿ ಇದೆ. ಅದನ್ನು ಕಟ್ಟಿ ಬೆಳೆಸಿದವರು ನಾವೇ... ಅದರಿಂದ ನಾವು ದೂರವಾದರೆ ನಮ್ಮ ಗುರುತಿಸುವಿಕೆಗೆ ಅರ್ಥ ಬರುವುದಿಲ್ಲ. ಅದೇ ಕಾರಣಕ್ಕೆ ಬ್ಯಾಟಿಂಗ್ ವೈಫಲ್ಯ ಕಂಡರೆ ಧೋಣಿಯನ್ನು ಜನ ಬೈತಾರೆ.... ಯಾಕೆಂದರೆ ಅವನ ಗುರುತಿಸುವಿಕೆ ಇರುವುದೇ ಬ್ಯಾಟಿಂಗ್, ವಿಕೆಟ್ ಕೀಪಿಂಗ್ನಲ್ಲಿ ಅಲ್ವ....
ಅದಕ್ಕೆ ನಾವು ಬದುಕಿನಲ್ಲಿ ನಿಟ್ಟುಸಿರುವ ಬಿಡುವಂತಾಗಲೆಲ್ಲಾ ಇಷ್ಟರ ವರೆಗೆ ಕಟ್ಟಿಕೊಂಡ ಯಶಸ್ಸಿನ ಕ್ಷಣಗಳನ್ನು ನೆನಪಿಸಿಕೊಳ್ಳಬೇಕು, ಸೋಲಿನ ದಡವೆ ದಾಟಿ ಬಂದ ಕಾಲವನ್ನು ಮೆಲುಕು ಹಾಕಬೇಕು ಎನ್ನುವುದು. ಅಂತಹ ಸಂದರ್ಭಗಳಲ್ಲಿ ನನ್ನ ಐಡೆಂಟಿಟಿ ಬಿಟ್ಟು ಕೊಟ್ಟಿಲ್ಲ ಎಂಬ ಧೈರ್ಯ ಬಂದಾಗಲಷ್ಟೇ ಮತ್ತೆ ಮುಂದುವರಿಯಲು ಸಾಧ್ಯವಾಗುವುದು.

----------------------

ನಮಗೇ ಇಷ್ಟವಾಗದಿದ್ದ ಮೇಲೆ, ಯಾರನ್ನೋ ಇಷ್ಟ ಪಡಿಸಲು ಏನೇನೋ ಡೊಂಬರಾಟ ಹಾಕಿದರೆ ಅದು ಅಸಹಜವಾಗುತ್ತದೆ. ಯಾರೋ ಇಷ್ಟುಪಡುತ್ತಾರೆಂದು ಬಾರದ ತಪ್ಪು ಇಂಗ್ಲಿಷ್ ನಲ್ಲಿ ಮಾತನಾಡುವುದು (ಇಬ್ಬರಿಗೂ ಚೆನ್ನಾಗಿ ಕನ್ನಡ ಬರುತ್ತಿದ್ದರೂ ಕೂಡ), ತನಗೇ ಕಂಫರ್ಟ್ ಅನಿಸದಿದ್ದರೂ ಓರಗೆಯವರು ಹಾಕ್ತಾರೆ ಅಂತ ಇಷ್ಟವಾಗದ ಸೈಝಿನ ಪ್ಯಾಂಟೋ, ಶರ್ಟೋ ಹಾಕುವುದು, ನಾಲ್ಕೈಂದು ಮಂದಿ ಸೇರಿದಲ್ಲಿ ತುಂಬಾ ಬಿಝಿ ಇದ್ದ ಹಾಗೆ, ಮಾತನಾಡಲು ಪುರುಸೊತ್ತಿಲ್ಲದ ಹಾಗೆ ನಟಿಸುವುದು.... ಹೀಗೆ ನಮ್ಮ ವ್ಯಕ್ತಿತ್ವಕ್ಕೆ ಒಗ್ಗದ ಡೊಂಬರಾಟಗಳೆಲ್ಲಾ ನಮ್ಮೊಳಗಿಂದ ನಮ್ಮನ್ನೇ ಕಳೆದುಕೊಳ್ಳುವ ಹಾಗೆ ಮಾಡುವುದು ಸುಳ್ಳಲ್ಲ.
ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿ. ನೀವು ಮಾಡುತ್ತಿರುವುದು ಸರಿ ಅಂತ ನಿಮಗೇ ಖಚಿತವಾದರೆ, ಅದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂಬ ಖಚಿತತೆ ನಿಮಗೆ ಇದ್ದರೆ. ನೀವು ಹಾಗೆಯೇ ಇರಿ. ನೀವು ಇದ್ದ ಹಾಗೆಯೇ ಜನ ನಿಮ್ಮನ್ನು ಸ್ವೀಕರಿಸ್ತಾರೆ. ತಪ್ಪು ದಾರಿಲಿ ಹೋದರೆ ತಿದ್ದುವವರುು ಬೇಕಾದಷ್ಟು ಮಂದಿ ಇರ್ತಾರೆ. ಆದರೆ, ನೀನು ಹೀಗಿಯೇ ಇರಬೇಕು. ಹೀಗೆ ಇರುವುದೇ ಅಂತಿಮ ಅನ್ನುವುದು ಇಲ್ವಲ್ಲ. ಸಾಧಕರೆಲ್ಲರೂ ವಿಶಿಷ್ಟರೇ ಆಗಿದ್ದಾರೆ. ದೊಡ್ಡ ಸೂಟು ತೊಟ್ಟವ, ಚಿನ್ನದ ಚಮಚ ಬಾಯಲ್ಲಿಟ್ಟು ಹುಟ್ಟಿದವರು ಮಾತ್ರ ಸಾಧಕರಾಗಿದ್ದಲ್ಲ. ಅವರೆಲ್ಲಾ ನಮ್ಮ ನಿಮ್ಮಂತೆ ಸಾಮಾನ್ಯರಾಗಿದ್ದವರು. ಆದರೆ, ತಮ್ಮ ವಿಶಿಷ್ಟ ಗುಣಗಳನ್ನು ಬಿಟ್ಟು ಕೊಡದೆ, ತಮ್ಮ ಸಾಮರ್ಥ್ಯ ಎಷ್ಟು, ತಮ್ಮ ದಾರಿ ಯಾವುದು ಎಂದು ಕಂಡುಕೊಂಡು ಅದರಲ್ಲೇ ಛಲ ಬಿಡದೆ ನಡೆದು ಸಾಧಿಸಿ ತೋರಿಸಿದವರು. ಅದು ನಮಗೆ ಸ್ಫೂರ್ತಿಯಾಗಬೇಕು.
ಬಹುಮಾನ ವಿಜೇತನೊಬ್ಬ ವೇದಿಕೆ ಏರಿ ಬಹುಮಾನ ಪಡೆಯುತ್ತಿರುವಾಗ ನೀನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಅಚ್ಚರಿಯಿಂದ ಅವನನ್ನೇ ನೋಡುವಲ್ಲಿಗೆ ಸೀಮಿತನಾಗಿರಬೇಡ. ನೀನೂ ಒಂದು ಬಹುಮಾನ ಗೆಲ್ಲುವ ಗುರಿ ಇರಿಸು.... ಕೇವಲ ಅಮಿತಾಭ್ ಧ್ವನಿ ಮಿಮಿಕ್ ಮಾಡಿದಲ್ಲಿಗೆ ತೃಪ್ತಿ ಪಟ್ಟುಕೊಳ್ಳಬೇಡ. ಇನ್ನೆಲ್ಲಿ ಗಮನ ಸೆಳೆಯಬಹುದು ಎಂಬ ಭಿನ್ನ ದೃಷ್ಟಿಕೋನ ಇರಿಸು ಅಷ್ಟೆ.
----------

ಪ್ರಪಂಚದಲ್ಲಿ ಎಲ್ಲರನ್ನೂ ಮೆಚ್ಚಿಸಿ, ಎಲ್ಲರ ಪಾಲಿಗೂ ಒಳ್ಳೆಯವನಾಗಿ ಬದುಕುವುದು ಅಸಾಧ್ಯ. ಯಾಕೆಂದರೆ ನಮ್ಮಲ್ಲಿರುವ ಎಷ್ಟೋ ಗುಣಗಳು ಎಲ್ಲರಿಗೂ ಇಷ್ಟವಾಗಬೇಕಿಲ್ಲ. ಹಾಗೆಂದು ನನ್ನ ಗುಣದಿಂದ ಬೇರೆಯವರಿಗೆ ತೊಂದರೆ ಆಗದಿರಲಿ ಎಂಬ ಕನಿಷ್ಠ ಪ್ರಜ್ಞೆಯಾದರೂ ಬೇಕು. ನಾವು ಇದ್ದಂತೆಯೇ ಪ್ರೀತಿಸುವವರು, ಪ್ರೋತ್ಸಾಹಿಸುವವರು, ಖಂಡಿತಾ ಇರುತ್ತಾರೆ. 
ಯಾರನ್ನೋ ಮೆಚ್ಚಿಸಲು ತಿಪ್ಪರಲಾಗ ಹಾಕಿ ಪಡೆಯುವ ಇಮೇಜ್ ಗಿಂತ ನಮ್ಮ ಅಂತರಾತ್ಮಕ್ಕೆ ಇಷ್ಟವಾಗುವ, ನಮ್ಮನ್ನು ಅರ್ಥ ಮಾಡಿಕೊಂಡವರು ಹೌದೌದು ಎಂದು ಹೇಳಬಲ್ಲ ಗುಣ ನಡತೆ, ಜೊತೆಗಿದ್ದರೆ ಸಾಕು... ನೀವೂ ನೀವಾಗಿರುತ್ತೀರಿ...
ನೂರು ಮಂದಿಯಿಂದ ಇಂದ್ರ ಚಂದ್ರ ಅಂತ ಬರಿದೇ ಮುಖಸ್ತುತಿ ಮಾಡಿಸಿಕೊಳ್ಳುವ ಬದಲಿಗೆ... ನೀವು ಗೌರವಿಸುವ ನಾಲ್ಕು ಮಂದಿ... ನೀನು ಮಾಡಿದ್ದು ಸರಿ, ಇದೇ ದಾರಿಯಲ್ಲಿ ಸಾಗು ಎಂಬ ಹಾಗಿದ್ದರೆ ಸಾಕು... ಆ ದಾರಿ ಸ್ವತಃ ನಿಮಗೆ ಇಷ್ಟವಾಗಿರಬೇಕು ಮತ್ತು ಮತ್ತೊಬ್ಬರಿಗೆ ನಿಮ್ಮ ದಾರಿ ಕಂಟಕವಾಗಬಾರದು ಅಷ್ಟೆ.

-ಕೃಷ್ಣ ಮೋಹನ ತಲೆಂಗಳ (28/03/2015)

No comments: