ಸಾವೆಂಬ ನಿರಾಕರಿಸಲಾಗದ ಸತ್ಯ....! ರಂಗದಲ್ಲಿ ರಕ್ಕಸನಾಗಿ ನೂರಾರು ಸಾವುಗಳನ್ನು ಅಭಿನಯಿಸಿದ ಹಿರಿಯ ಕಲಾವಿದನ ಪಾಲಿಗೆ ಈ ಸಲ ಸಾವು "ಸಂಭವಿಸಿ ಬಿಟ್ಟಿತ್ತು"!
ವಧೆಯ ದೃಶ್ಯಕ್ಕೂ ಮುನ್ನವೇ ಅವರೇ ಇನ್ನಿಲ್ಲವಾದರು. ಕೆಲವು ವರ್ಷಗಳ ಹಿಂದೆ ಗೇರುಕಟ್ಟೆ ಗಂಗಯ್ಯ ಶೆಟ್ರೂ ಹೀಗೆಯೇ ಆದದ್ದು. ವಜ್ರದುಂಬಿ ಬಂದು ಅವರ ಪಾತ್ರ ಅರುಣಾಸುರನನ್ನು ವಧಿಸುವುದಕ್ಕೂ ಮುನ್ನವೇ ಅವರು ರಂಗದಲ್ಲೇ ಕುಸಿದು ಗತಪ್ರಾಣರಾದರು. ಈ ಸನ್ನಿವೇಶಗಳನ್ನು ನೀವು ಭಾವನಾತ್ಮಕವಾಗಿ ನೋಡಿ, ಆಧ್ಯಾತ್ಮಿಕವಾಗಿ ನೋಡಿ, ಭಾವುಕರಾಗಿ ನೋಡಿ, ವೈಜ್ಞಾನಿಕವಾಗಿ ನೋಡಿ, ವೈಚಾರಿಕವಾಗಿ ನೋಡಿ... ಹೇಗೆ ನೋಡಿದರೂ ನಷ್ವವಾಗಿರುವುದು ಅವರ ಮನೆಯವರಿಗೆ, ಮೇಳಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ, ಕಲೆಯನ್ನು ಪ್ರೀತಿಸುವವರಿಗೆ.
ವೇಷದಲ್ಲೇ ಪ್ರಾಣ ಬಿಟ್ಟರು, ತೀರಾ ಅನಾರೋಗ್ಯದಿಂದ ದಿನದೂಡದೇ ನಿಧನರಾದರು, ಸ್ವಲ್ಪ ಜಾಗ್ರತೆಯಿಂದ ಇದ್ದಿದ್ದರೆ ಇನ್ನೂ ಬದುಕಿರುತ್ತಿದ್ದರೋ ಏನೋ ಎಂದೆಲ್ಲ ವಿಮರ್ಶೆಗಳನ್ನು ಮಾಡಬಹುದು. ಎಷ್ಟೇ ವೈಜ್ಞಾನಿಕವಾಗಿ ಚಿಂತಿಸಿದರೂ ಸಾವು ನಿರಾಕರಿಸಲಾಗದ ಸತ್ಯ. ಹಣ, ಅಧಿಕಾರ, ಧೈರ್ಯ ಇದ್ದವರಿಗೂ ಸಾವು ರಿಯಾಯಿತಿ ನೀಡುವುದಿಲ್ಲ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಯೂ, ತುಂಬ ಸಾತ್ವಿಕ ಹವ್ಯಾಸಗಳೊಂದಿಗೆ ಬದುಕಿಯೂ ಬೇಗ ಆಯುಷ್ಯ ಕಳೆದುಕೊಂಡ ಅನೇಕರ ಉದಾಹರಣೆ ನೀಡಬಹುದು. ಕಾಳಿಂಗ ನಾವಡರೋ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ರೋ, ಕೃಷ್ಣಯ್ಯ ಬಲ್ಲಾಳರೋ, ಕುಬಣೂರರೋ... ಹೀಗೆ ಸಕ್ರಿಯರಾಗಿದ್ದ ಅನೇಕ ಕಲಾವಿದರು ಅಚ್ಚರಿ ಎಂಬಂತೆ ಇತಿಹಾಸವನ್ನು ಸೇರಿದ್ದಾರೆ.....
ತುಂಬ ಸಲ ಗುರುವಪ್ಪರು ಮಧು ಕೈಟಭರಾಗಿ, ವಿದ್ಯುನ್ಮಾಲಿಯಾಗಿ ಸತ್ತು ರಂಗದಿಂದ ನಿರ್ಗಮಿಸಿದ್ದು ನೋಡಿದ್ದೇನೆ. ಆ ಸಾವನ್ನು ನೋಡಿ ಖುಷಿಪಟ್ಟಿದ್ದೇವೆ! ನಟನೆಯನ್ನು. ನಿನ್ನೆ ಹಾಗಲ್ಲ.... ತಡರಾತ್ರಿ ರಂಗದಲ್ಲೇ ಚೇತನ ಇನ್ನಿಲ್ಲವಾದ ವೀಡಿಯೋ ತುಣುಕು ಬೆಳ್ಳಂಬೆಳಗ್ಗೇ ಕಾಣಸಿಕ್ಕಾಗ ಕಾಡುವ ವಿಚಿತ್ರ ಸಂಕಟ ಬದುಕು ಕ್ಷಣಿಕ ಸತ್ಯ ಎಂಬುದನ್ನು ಸಾರಿ ಹೇಳುತ್ತಿದೆ....
ಕೊರೋನಾ ಬಳಿಕ ಶರೀರದ ರೋಗನಿರೋಧಕ ಶಕ್ತಿ ಕುಂದುತ್ತಿದೆ. ವಯಸ್ಸಾದ ಕಲಾವಿದರಿಗೆ ಅಪಾಯ ಜಾಸ್ತಿ ಎಂಬ ಕೂಗೆದ್ದಾಗ ಹಲವು ಮೇಳಗಳು ಹಿರಿಯ ಕಲಾವಿದರಿಗೆ ಕಡ್ಡಾಯ ನಿವೃತ್ತಿ ನೀಡಿದವು. ಅದೂ ಟೀಕೆಗೆ ಒಳಗಾಯಿತು. ಆದರೆ ನಿದ್ರಾಹೀನತೆ, ವಯೋ ಸಹಜ ಕಾಯಿಲೆಗಳು, ಭಾರದ ದಿರಿಸು, ಮೇಕಪ್, ಸೆಖೆ, ಪ್ರಖರ ಬೆಳಕು, ವಿಶ್ರಾಂತಿ ರಹಿತ ಪ್ರಯಾಣ ಇವೆಲ್ಲ ಖಂಡಿತ ಹಿರಿಯ ಕಲಾವಿದರ ಆರೋಗ್ಯಕ್ಕೆ ಪೂರಕವಲ್ಲ. ಹಾಗಂತ ಹಿರಿಯರನ್ನೆಲ್ಲ ಮನೆಯಲ್ಲೇ ಕೂರಿಸಿದರೆ ಅಂತಹ ಯಕ್ಷಗಾನಕ್ಕೆ ದೊಡ್ಡ ತೂಕವೂ ಇರಲಿಕಿಲ್ಲ. ಮೇಳವೆಂದರೆ ಹಿರಿ-ಕಿರಿಯರ ಸಂಗಮ ಬೇಕು ಹಳೆ ಬೇರಿನೊಂದಿಗೆ ಹೊಸ ಚಿಗುರು ಇದ್ದರೇ ಚಂದ.
ವಯಸ್ಸು, ಆರೋಗ್ಯ, ಅವಕಾಶ, ಮನಸ್ಥಿತಿ ಮತ್ತು ಪರಿಸ್ಥಿತಿ ಎಲ್ಲ ಹೊಂದಾಣಿಕೆ ಬೇಕು ಕಲಾವಿದರ ಪಾಲಿಗೆ... ನಾವು ಬರಿದೇ ಪ್ರೇಕ್ಷಕರಾಗಿ ಜರೆಯಲು, ಟೀಕಿಸಲು, ಹಂಗಿಸಲು ತುಂಬ ಸುಲಭ.
ಮೇಳದ ಯಜಮಾನರು, ಕಲಾವಿದರು, ಸಿಬ್ಬಂದಿ, ಅವರವರ ಮನೆಯವರ ಕಷ್ಟಗಳು ಅವರವರಿಗೆ ಮಾತ್ರ ಸರಿಯಾಗಿ ಗೊತ್ತಿರಲು ಸಾಧ್ಯ. ನಾವು ಒಂದಷ್ಟು ಹೊತ್ತು ರಂಗದೆದುರು ಕೂತು ಬರುವ ಪ್ರೇಕ್ಷಕರಷ್ಟೇ... ಅವರ ಅಂತರಂಗದ ಪ್ರೇಕ್ಷಕರಲ್ಲ!!!!
ಸಾವನ್ನು ಮುಂದೂಡುವುದಕ್ಕೂ, ಬಚ್ಚಿಟ್ಟುವುದಕ್ಕೂ, ಕಟ್ಟಿಡುವುದಕ್ಕೂ ಆಗುವುದಿಲ್ಲ. ತರ್ಕಕ್ಕೂ, ಊಹೆಗೂ ನಿಲುಕದ್ದು. ಹೌದು ಔಷಧ, ಮುಂಜಾಗ್ರತೆ, ಚಿಕಿತ್ಸೆಯಿಂದ ಸ್ವಲ್ಪ ಸುಧಾರಿಸಬಹುದು. ಆಯುಷ್ಯವನ್ನು ವಿಸ್ತರಿಸಿದ್ದೇವೆ ಅಂದುಕೊಳ್ಳಬಹುದು.
ಹೌದು. ಎಚ್ಚರಿಕೆ, ಸಾವಧಾನ, ಸಹನೆಯಿಂದ, ಜಾಗ್ರತೆಯಿಂದ ವರ್ತಿಸಿದರೆ ಒಂದಷ್ಟು ದಿನ ಹೆಚ್ಚು ಬದುಕಬಹುದೋ ಏನೋ. ಹಾಗಂತ ಎಂತೆಂಥವರಿಗೂ ಸಾವು ವಿಚಿತ್ರವಾಗಿ, ಅನೂಹ್ಯವಾಗಿ ಸಂಭವಿಸಿದ್ದು ನಾವು ಕಂಡಿದ್ದೇವೆ. ಮೇರು ಕಲಾವಿದರು, ಗಾಯಕರು, ಮುಖಂಡರು, ಯತಿಗಳನ್ನೂ ಬಿಟ್ಟಿಲ್ಲ...
ಆದರೆ ಇಂತಹ ದೃಶ್ಯಗಳನ್ನು ನೋಡಲು ಕಷ್ಟವಾಗುತ್ತದೆ. ಮತ್ತೊಮ್ಮೆ ಇಂತಹ ದೃಶ್ಯಗಳು ನೋಡುವ ಹಾಗಾಗುವುದು ಬೇಡ... ಅನಾರೋಗ್ಯ ಕಾಡುವ ಹಿರಿಯ ಕಲಾವಿದರಿಗೆ ದಯವಿಟ್ಟು ವಿಶ್ರಾಂತಿಗೆ ಅವಕಾಶ ಕಲ್ಪಿಸಿ. ಕಲಾಮಾತೆಯ ಕೃಪೆ ಎಲ್ಲರ ಮೇಲೆ ಇರಲಿ... ಅಷ್ಟೇ ನಮ್ಮ ಪ್ರಾರ್ಥನೆ.
-ಕೃಷ್ಣಮೋಹನ ತಲೆಂಗಳ (23.12.2022)
No comments:
Post a Comment