ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!

 

ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ


 

ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ಎಂಬ ಮಾತು ಅಲ್ಲಿಲ್ಲಿ ಕೇಳುತ್ತಲೇ ಇರುತ್ತದೆ. ಆದರೆ, ಒಳಮನಸು ಈ ಮಾತನ್ನು ಸಂಪೂರ್ಣ ಒಪ್ಪಿರುವುದಿಲ್ಲ. ನಾವು ಬಹುತೇಕರು ಕೊನೆಯ ಕ್ಷಣದ ವರೆಗೂ ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು, ಉಳಿಸಲು ಪ್ರಯತ್ನ ಮಾಡಿಯೇ ಮಾಡುತ್ತೇವೆ. ಸಾಯುವ ಸಂದರ್ಭ ಬಂದಾಗ ಹೇಗೂ ಸಾಯುವ ದೇಹ ಈಗಲೇ ಸಾಯಲಿ ಅಂತ ಯಾರೂ ಸುಮ್ಮನೆ ಕೂರುವುದಿಲ್ಲ. ಆದರೆ ಇಲ್ಲವಾಗಿಸುವ ಶಕ್ತಿ ಬೇರೆಯೇ ಇದೆ. ಅದು ನಾವು ಪ್ರೀಪ್ರೋಗ್ರಾಮಿಂಗ್ ಮಾಡಿ ಹೋಗುವಂಥದ್ದಲ್ಲ.

 

ಹಾಗೆ ಸಾವಿನ ಕದ ತಟ್ಟಿ, ಅಕ್ಷರಶಃ ಸಾವನ್ನು ಸ್ವೀಕರಿಸಿ, ನಿರ್ಲಿಪ್ತವಾಗಿ ಅವರು ಇಲ್ಲವಾಗಿ ನಾಡಿದ್ದು ಜನವರಿ 26ಕ್ಕೆ ಭರ್ತಿ ಒಂದು ವರ್ಷವಾಯಿತು. ಗಣರಾಜ್ಯೋತ್ಸವದ ದಿನ ಮಧ್ಯಾಹ್ನ 2 ಗಂಟೆ ಆಸುಪಾಸಿಗೆ ಅವರ ದೇಹ ಉಸಿರಾಡುವುದನ್ನು ನಿಲ್ಲಿಸಿತು. ಅವರು ಇಲ್ಲವಾಗಿದ್ದಾರೆ, ಆದರೆ ಇಲ್ಲವಾಗುವ ಕೊನೆಯ ತಿಂಗಳುಗಳಲ್ಲಿ ಕಂಡ, ಅರ್ಥ ಮಾಡಿಕೊಂಡ ವಿಚಾರಗಳು ಸುಲಭದಲ್ಲಿ ಇಲ್ಲವಾಗುವಂಥದ್ದಲ್ಲ!!

 

ಅವರಿಗೆ 60 ವರ್ಷ ತುಂಬಿ ನಿವೃತ್ತರಾದಾಗಲೂ ಅವರು ಆರೋಗ್ಯದಿಂದಲೇ ಇದ್ದರು. ತನ್ನ ಕೆಲಸ ಮತ್ತು ಮಾತುಗಳಲ್ಲಿ ತುಂಬ ಖಚಿತತೆ ಇತ್ತು. ಅವರಿಗಿನ್ನೂ ದುಡಿಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೇ ಅವರ ಸಂಸ್ಥೆ ಅವರನ್ನು ಬೀಳ್ಕೊಡದೆ ಕೆಲಸದಲ್ಲಿ ಮುಂದುವರಿಸಿತು. ಜೂನ್ ಬಳಿಕ ಅವರ ಸೇವಾವಧಿ ಮುಂದುವರಿಯಿತು. ಅವರ ದುರಾದೃಷ್ಟಕ್ಕೆ ಅದೇ ನವೆಂಬರ್ ನಲ್ಲಿ ಅವರೊಳಗೊಂದು ಅನಾರೋಗ್ಯ ಕಾಡುತ್ತಿರುವುದು ಅವರಿಗೆ ಗೊತ್ತಾಯಿತು. ಆರೋಗ್ಯದ ಬದಲಾವಣೆ ಗಮನಿಸಿದ ತಕ್ಷಣ ಸ್ವತಃ ಪರೀಕ್ಷೆಗೊಳಗಾದ ಅವರಿಗೇ ತನಗೇನಾಗಿದೆ ಎಂಬುದು ಗೊತ್ತಾಯಿತು. ನಂತರ ಅವರ ಸ್ನೇಹಿತರು, ಮನೆಯವರಿಗೆ ಗೊತ್ತಾದದ್ದು. ಆದರೂ ಅವರು ತೀರಾ ಆಪ್ತರ ಹೊರತು ಯಾರಿಗೂ ಇದನ್ನೆಲ್ಲ ಹೇಳಲಿಲ್ಲ. ಮನೆಯವರಿಗೆ ಅವರೇ ಧೈರ್ಯ ಹೇಳಿದರು!

 

ಯಾವ ಸ್ನೇಹಿತನ ಬಳಿ ಅವರು ಅನಾರೋಗ್ಯದ ಬಗ್ಗೆ ಮೊದಲ ಬಾರಿಗೆ ನೋವಿನಿಂದ ಹೇಳಿಕೊಂಡರೋ, ಅದೇ ಸ್ನೇಹಿತ ಅವರ ಕೊನೆಯ ತನಕ ವಿವಿಧ ಹಂತಗಳಲ್ಲಿ ಅವರ ಜೊತೆ ಗಟ್ಟಿಯಾಗಿ ನಿಂತು ಅವರಿಗೆ ನೈತಿಕ ಬೆಂಬಲವಾಗಿದ್ದರು. ಅವರ ಮನೆಯವರು ಮತ್ತು ಕುಟುಂಬದವರು ಸಹ.  ಅವರನ್ನು ಹತ್ತಿರದಿಂದ ಬಲ್ಲ ಬೆರಳೆಣಿಕೆಯ ಮಂದಿ ಕೊನೆಯ ವರೆಗೂ ಅವರ ಜೊತೆಗಿದ್ದರು. ಹಣಕಾಸು ಬೆಂಬಲದ ವ್ಯವಸ್ಥೆ ಮಾಡಿದರು. ಅವರು ನೆಚ್ಚಿಕೊಂಡ ಸಂಸ್ಥೆ ಅವರಿಗೆ ಸಂಬಳ ನೀಡಿ ಚಿಕಿತ್ಸೆ ವೆಚ್ಚ ಸಹಿ ಭರಿಸಿ ತನ್ನ ಕರ್ತವ್ಯವನ್ನು ಸರಿಯಾಗಿಯೇ ನಿಭಾಯಿಸಿತು. ಅವರೇನು ಅಂತ ಗೊತ್ತಿರುವವರೆಲ್ಲ ಅವರಿಗೆ ಸಾಂತ್ವನ ಹೇಳಿದರು.

ಅಲೋಪತಿ ಆಯ್ತು. ಆಯುರ್ವೇದ ಚಿಕಿತ್ಸೆ ಆಯ್ತು. ಯಾವ ನವೆಂಬರಿನಲ್ಲಿ ಅವರಿಗೆ ಅನಾರೋಗ್ಯ ಪತ್ತೆಯಾಗಿ ಅವರಿಗೆ ಶಸ್ತ್ರಚಿಕಿತ್ಸೆ ಆಯಿತೋ, ಅದರ ನಂತರದ ಅಕ್ಟೋಬರ್ ವೇಳೆಗೆ ಅವರು ಚಿಕಿತ್ಸೆಗಳ ಬಳಿಕ ಒಂದಷ್ಟು ಚೇತರಿಸಿದ್ದರು, ಮತ್ತೆ ಕೆಲಸಕ್ಕೆ ತೆರಳಿ ಸುಮಾರು ಒಂದೂವರೆ, 2 ತಿಂಗಳು ದುಡಿದಿದ್ದರು, ಮಾಮೂಲಿ ವ್ಯಕ್ತಿಯಂತೆ ದುಡಿದಿದ್ದರು, ಶರೀರ ಕೃಶವಾಗಿತ್ತು. ಅದಾಗಿ ಬಹುಶಃ ಡಿಸೆಂಬರ್ ವೇಳೆಗೆ ದೈಹಿಕವಾಗಿ ಮತ್ತೆ ದುರ್ಬಲವಾದವರು ಚೇತರಿಸಲಿಲ್ಲ. ಸುಮಾರು 2 ತಿಂಗಳು ಬದುಕು ಡೋಲಯಮಾನವಾಗಿದ್ದು, ಅದೇ ಜನವರಿ 26ರಂದು ಇಲ್ಲವಾದರು. ಸುಮಾರು ಒಂದು ವರ್ಷ 2 ತಿಂಗಳ ಕಾಲ ಅನಾರೋಗ್ಯ ಪತ್ತೆಯಾದ ಬಳಿಕ ಅವರು ಆಯುಷ್ಯ ಮುಂದೂಡಲ್ಪಟ್ಟಿತ್ತು, ಅಷ್ಟೇ... ಅದೇ ಸಾವಿಗೆ ತಯಾರಾಗಲು ಬಹುಶಃ ಅವರಿಗೆ ಸಿಕ್ಕಿದ್ದ ಡೆಡ್ಲೈನ್ ಅನ್ನುವುದು ವಿಧಿ ವಿಪರ್ಯಾಸ.

 

ಅನಾರೋಗ್ಯ ಕಾಣಿಸಿ ಸುಮಾರು 3 ತಿಂಗಳು ಆತಂಕದ ಸ್ಥಿತಿಯಿತ್ತು. ಚಿಕಿತ್ಸೆಗಳೆಲ್ಲ ಸಿಕ್ಕಿ ಆರೇಳು ತಿಂಗಳು ಸಹಜವಾಗಿಯೇ ಇದ್ದರು. ತಾನು ಚೇತರಿಸಿ ಬದುಕಿನಲ್ಲಿ ಮುಂದುವರಿಯುವ  ಆತ್ಮವಿಶ್ವಾಸ ಅವರಲ್ಲಿ ಮೂಡಿತ್ತು, ಎಲ್ಲಿಯ ವರೆಗೆ ಅಂದರೆ, ತಾನು ಅನಾರೋಗ್ಯ ಗೆದ್ದ ಬಗ್ಗೆ ಅನುಭವ ಕಥನ ದಾಖಲಿಸುವ ಉತ್ಸಾಹದಲ್ಲಿದ್ದರು. ಆದರೆ, ವಿಧಿ ಮತ್ತು ಅನಾರೋಗ್ಯದ ಲಕ್ಷಣಗಳು ಬೇರೆಯೇ ಬರೆಹವನ್ನು ಹಣೆಯಲ್ಲಿ ಬರೆದಿದ್ದವು, ಕೊನೆಯ ಮೂರು ತಿಂಗಳು ಸಾವು ಕರೆಯುತ್ತಿದೆ ಎಂಬುದು ಅವರಿಗೂ, ಅವರ ಮನೆಯವರಿಗೂ, ಅವರನ್ನು ಇಷ್ಟ ಪಡುವ ಬೆರಳೆಣಿಕೆಯ ಮಂದಿಗೂ ಗೊತ್ತಾಗಿ ಬಿಟ್ಟಿತ್ತು. ಅವರ ದೊಡ್ಡ ಕನಸು, ಅವರ ಬರೆಹಗಳ ಸಂಕಲನ ಹೊರ ತರುವುದಾಗಿತ್ತು. ಆ ಆಸೆ ಕೈಗೂಡಿರಲಿಲ್ಲ. ಅವರ ಕೆಲ ಕಿರಿಯ ಸ್ನೇಹಿತರು ಸೇರಿ ಸ್ವಂತ ಆಸಕ್ತಿಯಿಂದ ಅವರ ಬರೆಹಗಳ ಸಂಕಲನವನ್ನು ಪುಸ್ತಕ ಮಾಡಿ ಮುದ್ರಿಸಿ ಮೊದಲ ಪ್ರತಿ ತಂದು ಅವರಿಗೆ ನೀಡುವ ಹೊತ್ತಿಗೆ ಅವರು ನಿರ್ಲಿಪ್ತವಾಗಿ ಆಸ್ಪತ್ರೆಯ ವಾರ್ಡಿನಲ್ಲಿ ಮಲಗಿದ್ದರು. ಅವರಿಗೆ ಕಣ್ತೆರೆದು ನೋಡಲು ಸಾಧ್ಯವಗುತ್ತಿತ್ತು, ನಿಧಾನಕ್ಕೆ ನಡೆಯುತ್ತಲೂ ಇದ್ದರು. ಸಣ್ಣ ಸ್ವರದಲ್ಲಿ ಮಾತನಾಡಲೂ ಆ ಹೊತ್ತಿಗೆ ಅವರಿಗೆ ಸಾಧ್ಯವಿತ್ತು. ಆದರೂ ಅವರು ಮಾತನಾಡುವುದನ್ನು ಬೇಕೆಂದೇ ಕಡಿಮೆ ಮಾಡಿದ್ದರು. ನೋವಿನ ಸಂಗತಿ ಅಂದರೆ ನಿಮ್ಮ ಪುಸ್ತಕ ಪ್ರಿಂಟಾಗಿ ರೆಡಿಯಾಗಿದೆ, ಬಿಡುಗಡೆ ಮಾಡ್ತೇವೆ ಅಂತ ಅವರ ಸ್ನೇಹಿತರು ಅವರ ಗಮನಕ್ಕೆ ತಂದಾಗ ತಲೆಯಾಡಿಸಿ ಗೊತ್ತಾಯಿತು ಅಂತ ಹೇಳಿದರೇ ವಿನಃ ಕಣ್ತೆರೆದು ನೋಡಲಿಲ್ಲ...

 

ಆ ಪುಸ್ತಕದ ಮುನ್ನುಡಿಯಲ್ಲಿ ಅವರು ಬರೆದ ಒಂದು ಸಾಲು ತುಂಬ ಕಾಡುತ್ತದೆ. ಇದು ನನ್ನ ಚೊಚ್ಚಲ ಕೃತಿ...ಅಂತ. ಸುಮಾರು ಮೂರು ವರ್ಷ ಹಿಂದೆಯೇ ಮುದ್ರಣವಾಗಬೇಕಿದ್ದ ಆ ಪುಸ್ತಕದ ಪ್ರಾಸ್ತಾವಿಕ ಅಧ್ಯಾಯದಲ್ಲಿ ಅವರು ಈ ಸಾಲು ಬರೆಯುವಾಗ ಅವರಿಗೆ ಖಂಡಿತಾ ಗೊತ್ತರಲಿಕ್ಕಿಲ್ಲ  ಚೊಚ್ಚಲ ಮಾತ್ರವಲ್ಲ, ಕೊನೆಯ ಪುಸ್ತಕ ಸಹ ಅದುವೇ ಅಂತ... ವಿಧಿ ಅನ್ನುವುದು ಅದಕ್ಕೇ... ತರ್ಕಕ್ಕೆ ನಿಲುಕದ್ದು. ಏನಾಗಬೇಕೋ ಅದು ಆಗಿಯೇ ಆಗುತ್ತದೆ. ವಿಧಿಗೆ ಕನಸುಗಳ ಹಂಗು ಖಂಡಿತಾ ಇರುವುದಿಲ್ಲ. ವಿಧಿ ನಿರ್ದಯಿ... FATE DOESN’T CARE ABOUT YOUR PLANS…

 

ಅವರು ವೈಯಕ್ತಿಕವಾಗಿ ನಿಷ್ಠುರವಾದಿ. ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಕೇಳಿಸಿಕೊಂಡವರು ಏನಂದುಕೊಳ್ಳುತ್ತಾರೆ ಎಂಬ ಭಾವ ಇರಲಿಲ್ಲ. ಅದೇ ಕಾರಣಕ್ಕೆ ಅವರನ್ನು ಇಷ್ಟ ಪಡದವರ ಸಂಖ್ಯೆಯೇ ದೊಡ್ಡದಿತ್ತು. ನಾವು ಸುಳ್ಳು ಸುಳ್ಳೇ ಆದರೂ ಹೊಗಳುವವರನ್ನು ಮೆಚ್ಚಿಕೊಳ್ತೇವೆ. ಇದ್ದದ್ದು ಇದ್ದ ಹಾಗೇ ಹೇಳಿದವರನ್ನು ದೂರವಿಡ್ತೇವೆ. ಅವರು ಅನಾರೋಗ್ಯದಿಂದ ಮರಣ ಶಯ್ಯೆಯಲ್ಲಿದ್ದಾಗಲೂ ಅದನ್ನೆಲ್ಲ ಹಿಂದಿನಿಂದ ಹಂಗಿಸಿದ್ದು ಕಿವಿಯಾರೆ ಕೇಳಿದ್ದೇನೆ. ಅವರ ಬದುಕು ಸ್ವಚ್ಛವಾಗಿತ್ತು, ಕೈಯೂ ಸ್ವಚ್ಛವಾಗಿತ್ತು, ತಾನು ಪ್ರಾಮಾಣಿಕ ಎಂಬುದನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಅವರಿಗಿರಲಿಲ್ಲ. ಅದೇ ಕಾರಣಕ್ಕೆ ಅವರಿಗೆ ನೇರವಾಗಿ ಮಾತನಾಡಲು ಅಳುಕು ಇರಲಿಲ್ಲ. ತನ್ನ ಸಿದ್ಧಾಂತ, ತನ್ನ ನಂಬಿಕೆ, ತನ್ನ ಮಾತನ್ನು ಅವರೆಂದೂ ಫಿಲ್ಟರ್ ಮಾಡಿದ್ದು, ಹೊಂದಾಣಿಕೆ ಮಾಡಿಕೊಂಡದ್ದು ನನಗಂತೂ ಗೊತ್ತಿಲ್ಲ... ಹಾಗಾಗಿ ಅವರ ಸ್ಥಾನಕ್ಕೋಸ್ಕರ ಎದುರಿನಿಂದ ಕೈ ಮುಗಿದವರೂ ಹಿಂದಿನಿಂದ ಬೈಯ್ಯುತ್ತಿದ್ದದ್ದು ಕಂಡಿದ್ದೇನೆ.

ಒಂದು ಅಸಹಾಯಕ ಸ್ಥಿತಿಯಲ್ಲಿ ನಾನು ಯಾರನ್ನೂ ಮೆಚ್ಚಿಸಲು ಕೆಲಸ ಮಾಡಿದ್ದಿಲ್ಲ, ಯಾರಿಗೂ ಹೊಗಳಿ, ಅನುಕಂಪ ಗಳಿಸಿ ದುಡಿದಿದ್ದಲ್ಲ, ಸರಿ ಇದ್ದಷ್ಟೂ ದಿನ ನಿಷ್ಠುರನಾಗಿಯೇ ಬರೆಯುತ್ತಿದ್ದೆ, ಈಗ ಯಾರತ್ರ ಕೈಚಾಚಿಕೊಂಡು ಹೋಗಲಿ ಅಂತ ಹೇಳಿದ್ದು ಬದುಕಿನ ದೊಡ್ಡ ಸತ್ಯದರ್ಶನ ಮಾಡಿಸಿತು.

 

ಧನವಿಲ್ಲದಿದ್ದರೆ ಯಾವ ವಿಟಮಿನ್ ಕೂಡಾ ಕೆಲಸ ಮಾಡುವುದಿಲ್ಲ ಎಂಬ ಕಹಿ ಸತ್ಯ ಗೊತ್ತಿದ್ದರೂ, ಅದು ಬದುಕನ್ನು ಎಷ್ಟು ನಿಷ್ಠುರವಾಗಿ ಕಾಡುತ್ತದೆ ಎಂಬುದನ್ನು ಅವರ ಜೊತೆ ಕುಳಿತು ಮಾತನಾಡುವಾಗ ಸ್ಪಷ್ಟವಾಗಿ ವೇದ್ಯವಾಯಿತು. ಹಾಗಂತ ದೇವರು ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ನೋಡಿಕೊಂಡಿದ್ದ. ಬಹುತೇಕ ಅವರ ಕೊನೆಯ ದಿನದ ವರೆಗೂ ಕಷ್ಟ ಪಟ್ಟಾದರೂ ಅವರು ನಂಬಿದವರು ಅವರ ಕೈಬಿಡಲಿಲ್ಲ. ಅವರು ಸ್ವಾಭಿಮಾನಿಯಾಗಿಯೇ ತೆರಳುವಷ್ಟರ ಮಟ್ಟಿಗೆ ಅವರಿಗೆ ನೆರವಾಗಿದ್ದು, ಪ್ರಾಮಾಣಿಕತೆಗೆ ಸಿಕ್ಕಿದ ಪ್ರತಿಫಲ ಅಂತ ಅಂದುಕೊಳ್ತೇನೆ.

 

ಅವರು ಸಂಪತ್ತು ಕೂಡಿಡಲಿಲ್ಲ, ತನ್ನ ಅರ್ಹತೆ ಮತ್ತು ಯೋಗ್ಯತೆ ಮತ್ತು ಸಾಧ್ಯತೆಗಳನ್ನು ಮೀರಿ ಎಂತದ್ದೂ ಮಾಡಿಕೊಂಡಿಲ್ಲ, ತುಂಬ ಮಂದಿಗೆ ಕೊಟ್ಟಿದ್ದಾರೆ ತನ್ನ ಮಿತಿಯೊಳಗೆ ಎಂಬುದು ಅವರ ಮನೆ ತನಕ ಹೋಗಿ ಬಂದವರಿಗೆ ಗೊತ್ತಾಗುತ್ತದೆ. ಅವರು ಪತ್ನಿ ಮತ್ತು ಮಗನ ಜೊತೆಗಿಟ್ಟಿದ್ದ ನಂಬಿಕೆ ಮತ್ತು ಅವರಿಗೆ ನೀಡುತ್ತಿದ್ದ ಮಾರ್ಗದರ್ಶನ, ಅನಾರೋಗ್ಯ ಸಂದರ್ಭದಲ್ಲೂ ಮನೆಗೆ ಬಂದವರಿಗೆ ನೀಡುತ್ತಿದ್ದ ಗರಿಷ್ಠ ಉಪಚಾರ ಎಲ್ಲವೂ ಅವರನ್ನು ಪ್ರತ್ಯೇಕವಾಗಿ ನೋಡುವಂತೆ ಮಾಡುತ್ತದೆ.

 

ನಮಗೆ ಕಿವಿಗೆ, ಮನಸಿಗೆ ಹಿತವಾಗುವಂತೆ ಮಾತನಾಡುವವರು ಇಷ್ಟವಾಗುತ್ತಾರೆ. ಪ್ರಶ್ನೆ ಮಾಡುವವರು, ತಿದ್ದಲು ಹೊರಡುವವರನ್ನು ಕಂಡಾಗ ಇಡೀ ವ್ವಸ್ಥೆ ಜಾಗೃತವಾಗುತ್ತದೆ. ಅವರಿಗೆ ಎಚ್ಚರಿಕೆಗಳು ಹೋಗುತ್ತವೆ. ನಿಮಗೆ ಸಿಟ್ಟು ಜಾಸ್ತಿ, ನೀವು ದುಡುಕುತ್ತೀರಿ, ನಿಮಗೆ ವಾಸ್ತವ ಅರ್ಥವಾಗುವುದಿಲ್ಲ, ನೀವು ಈ ಕಾಲಕ್ಕೆ ತಕ್ಕವರಲ್ಲ... ಮತ್ತಿತ್ಯಾದಿ ಸಂದೇಶಗಳು ಪರೋಕ್ಷವಾಗಿಯೂ, ನೇರವಾಗಿಯೂ ರವಾನೆಯಾಗುತ್ತವೆ. ಎಲ್ಲಿ ತಪ್ಪಾಗಿದೆಯೋ, ಯಾರು ತಪ್ಪು ಮಾಡುತ್ತಿದ್ದಾರೆ ಅವರನ್ನು ತಿದ್ದುವ ಬದಲು, ತಪ್ಪು ಹೇಳಿದವರನ್ನು, ನಿಷ್ಠುರ ಮಾತನಾಡಿದವವನ್ನು ದೂರ ಇಡುವ ಪ್ರಯತ್ನ ನಡೆಯುತ್ತದೆ. ಅಧಿಕಾರ ಮತ್ತು ಧನ ಇರುವವ ಮಾಡುವುದು ತಪ್ಪು ಅಂತ ಗೊತ್ತಿದ್ದರೂ ನಾವದನ್ನು ತಿದ್ದಲು ಹೋಗುವುದಿಲ್ಲ, ಸರಪಡಿಸುವುದಿಲ್ಲ, ವಿರೋಧಿಸಲು ಧೈರ್ಯ ಇರುವುದಿಲ್ಲ, ಕೆಟ್ಟದಾಗಿ ಸಮರ್ಥಿಸುತ್ತೇವೆ. ಅವರ ತಪ್ಪುಗಳಿಗೆ ನಾವು ಸರಿಯ ಲೇಬಲ್ ಹಚ್ಚಿ ಮಾರಾಟ ಮಾಡುತ್ತೇವೆ. ಇದೇ ಜಗತ್ತು.

ತಾನು ಎಲ್ಲರ ಮೆಚ್ಚುಗೆಗೆ ಪಾತ್ರನಲ್ಲ ಎಂಬುದು ಅವರಿಗೂ ಗೊತ್ತಿತ್ತು... ತಾನು ಒಳ್ಳೆಯವ ಅನ್ನಿಸಿಕೊಳ್ಳಲು ಕಸರತ್ತು ಮಾಡಿದ್ದರೆ ಅವರ ವೃತ್ತಿಯಲ್ಲಿ ಅದಕ್ಕೆ ಸಾಕಷ್ಟು ಅವಕಾಶ ಇತ್ತು. ಅವರದನ್ನು ಮಾಡಲಿಲ್ಲ. ಕೊನೆ ತನಕ ಹಾಗೆಯೇ ಬದುಕಿದ್ದರು, ಅಂಗಲಾಚಲಿಲ್ಲ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ.

 

ಬದುಕಿನ ಕೊನೆಯ ಆರು ತಿಂಗಳಲ್ಲಿ (ಜೂನ್ ನಿಂದ ಜನವರಿ ವರೆಗೆ) ಅವರಿಗೆ ಗೊತ್ತಿತ್ತು ಅಂತ ಕಾಣ್ತದೆ, ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲ ಅಂತ. ಆದರೂ ತನ್ನ ಸ್ನೇಹಿತರಿಗೆ, ಮನೆಯವರಿಗೆ ಅವರೇ ಧೈರ್ಯ ತುಂಬುತ್ತಿದ್ದರು, ಬಂದ ಕಾಯಿಲೆಯ ಸ್ವರೂಪ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರೂ ತುಂಬ ಭರವಸೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಕೊನೆಯ ಮೂರು ತಿಂಗಳಲ್ಲಿ ಅವರಿನ್ನು ಉಳಿಯುವುದಿಲ್ಲ ಅಂತ ಸ್ಪಷ್ಟವಾಗಿ ಗೊತ್ತಿದ್ದರೂ ಯಾರೂ ಆ ಬಗ್ಗೆ ಮಾತನಾಡುತ್ತಿರಲಿಲ್ಲ.

 

ಮತ್ತೊಂದು ತುಂಬ ಕಾಡಿದ ಸಂಗತಿ ಎಂದರೆ, ತಾನು ಇಲ್ಲವಾದ ಬಳಿಕ ತನ್ನ ಮನೆಯವರು ಹೇಗೆ ಕಟ್ಟಿದ ಬದುಕನ್ನು ಮುಂದುವರಿಸಬೇಕು ಅಂತ ಅವರೊಂದು ಡೈರಿಯಲ್ಲಿ ಬರೆದಿಟ್ಟಿದ್ದು!!! ಅವರನ್ನು ಭೇಟಿಯಾಗಲು ಹೋದಾಗಲೊಮ್ಮೆ (ಆಗ ಮೂಗಿಗೆ ಪೈಪ್ ಹಾಕಲಾಗಿತ್ತು) ಕರೆದು ಆ ಪುಸ್ತಕ ತರಿಸಿ ನನಗೆ ಓದಲು ಕೊಟ್ಟರು. ಮತ್ತೆ ಪೇಪರಿನಲ್ಲಿ ಸ್ಪಷ್ಟ ಅಕ್ಷರಗಳಲ್ಲಿ ಬರೆದು ತೋರಿಸಿದರು, ನನ್ನ ನಂತರ ತನ್ನ ಆಪ್ತ ಸ್ನೇಹಿತ ಹಾಗೂ ಕುಟುಂಬದ ಹಿರಿಯ ಬಂಧುವೊಬ್ಬರಿಗೆ ಆ ಡೈರಿ ಓದಲು ಕೊಡಬೇಕು, ಮತ್ತು ಅದರಲ್ಲಿರುವಂತೆ ಪಾಲಿಸಬೇಕು ಅಂತ. ಇವತ್ತಿಗೂ ಆ ಕ್ಷಣವನ್ನು ನಾನು ಹೇಗೆ ಜೀರ್ಣಿಸಿದೆ ಅಂತ ಅರ್ಥವೇ ಆಗುವುದಿಲ್ಲ.

 

ಸಾವಿನ ಬಗ್ಗೆ ಎಷ್ಟೇ ವೇದಾಂತಿಗಳಂತೆ ಮಾತನಾಡಿದರೂ ನಮ್ಮೊಳಗೆ ನಾವು ಚಿರಂಜೀವಿಗಳು ಎಂಬ ವಿಚಿತ್ರ ಭ್ರಮೆ ಇರುತ್ತದೆ. ಹಾಗಿರುವಾಗ ಕೆಲವೇ ದಿನ ಈ ದೇಹದ ಋಣ ಅಂತ ಅರ್ಥ ಮಾಡಿಕೊಂಡು ನಂತರದ ದಿನಗಳ ಬಗ್ಗೆ ಬರೆಯುವುದಕ್ಕೆ ಅಂತಹ ನಿರ್ಲಿಪ್ತತೆ ಆವರಿಸಿರಬೇಕು. ಬಹುಶಃ ಪರಿಸ್ಥಿತಿ ಮತ್ತು ಬದುಕು ಅವರಿಗದನ್ನು ಕಲಿಸಿಕೊಟ್ಟಿತ್ತು. ಅವರು ಹಲವು ವಿಚಾರಗಳನ್ನು ಈ ಡೈರಿಯಲ್ಲಿ ಬರೆದಿದ್ದರು, ಮತ್ತೊಂದು ತುಂಬ ಕಾಡಿದ ಸಂಗತಿ ಎಂದರೆ, ತಾನು ಒಬ್ಬರಿಗೆ ಮರಳಿಸಬೇಕಾಗಿದ್ದ ಸಣ್ಣ ಮೊತ್ತ (ದೊಡ್ಡ ಮೊತ್ತವೇನಲ್ಲ)ದ ಸಾಲವನ್ನು ಮರೆಯದೇ ಮರು ಪಾವತಿಸಬೇಕು ಅಂತ ತನ್ನ ಮಗನಿಗೆ ಸೂಚನೆ ನೀಡಿದ್ದರು. ಇದೆಲ್ಲ ನಿಮಗೆ ಓದುವಾಗ ಸಿಲ್ಲಿ ಅಂತ ಅನ್ನಿಸಬಹುದು. ಆದರೆ, ಸಾಲ ಪಡೆದ ನಂತರ ಸಾವಿರ ಸುಳ್ಳು ಹೇಳುವವರು, ತಲೆ ಮರೆಸಿ ಓಡಾಡುವವರು, ನಂಬರ್ ಬ್ಲಾಕ್ ಮಾಡಿ ಗಮ್ಮತು ಮಾಡುವವರ ನಡುವೆ, ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾದ ಕಾಯಿಲೆ ಕಾಡಿ ಕೈ ಬರಿದಾಗಿದ್ದು, ಹೋಗುವಾಗ ಸಂಪಾದಿಸಿದ ಎಲ್ಲವನ್ನೂ ಕಳೆದುಕೊಂಡಿದ್ದರೂ, ತನ್ನ ನಂತರ ತಾನು ಮಾಡಿದ ಸಾಲ ಉಳಿಯಬಾರದು ಅಂತ ಬರೆಯುವ ಅಥವಾ ಬರೆಯಬೇಕಾದ ಸಂದರ್ಭ ಉಂಟಲ್ಲ, ಅದರ ಬಗ್ಗೆ ಏನು ಹೇಳಬೇಕೋ, ಪದಗಳು ಸಿಗ್ತಾ ಇಲ್ಲ....

ಇತ್ತೀಚೆಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡ ನೋವನ್ನು ಅಮ್ಮ ಫೇಸ್ಬುಕ್ಕಿನಲ್ಲಿ ಹಂಚಿಕೊಂಡದ್ದು ಗಮನಿಸಿದ್ದೇನೆ, ಖ್ಯಾತ ಲೇಖಕಿ ದಿಢೀರ್ ಆತ್ಮಹತ್ಯೆ ಮಾಡಿದ್ದು ಗಮನಿಸಿದ್ದೇನೆ. ತಮ್ಮ ಪಾತ್ರ ಮುಗಿಸಿ ರಂಗಸ್ಥಳದಲ್ಲೇ, ಚೌಕಿಯಲ್ಲಿ ಮೃತರಾದ ಹಿರಿಯ ಯಕ್ಷಗಾನ ಕಲಾವಿದರ ಬದುಕು ಗಮನಿಸಿದ್ದೇನೆ. ಅನಾರೋಗ್ಯ ಕಾಡಿದರೂ ಬದುಕಿನ ಕೊನೆಯ ವರೆಗೂ ವೇಷ ಮಾಡುವುದು ಬಿಡದೆ ಮೇಳಕ್ಕೂ ಭಾರವಾಗದೆ ಬದುಕಿದ ಸ್ವಾಭಿಮಾನಿ ಕಲಾವಿದರ ಬದುಕು ಕಣ್ಣೆದುರಿಗೇ ಇದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ, ಅಪಘಾತ, ಹತ್ಯೆ, ನಾಪತ್ತೆ.... ಎಷ್ಟೊಂದು ಸಾವುಗಳು.. ಕೆಲವು ನಿರೀಕ್ಷಿತ, ಬಹುತೇಕ ಅನಿರೀಕ್ಷಿತ... ತರ್ಕಕ್ಕೇ ನಿಲುಕದೆ ಇಲ್ಲವಾಗುವ ಆಘಾತಗಳು ಸುತ್ತಮುತ್ತ ಕಾಡು(ಣು)ತ್ತಲೇ ಇರುತ್ತವೆ... ಅಲ್ವ? ಪ್ರತಿ ಸಾವಿನ ಹಿಂದೆಯೂ ದೊಡ್ಡ ದೊಡ್ಡ ಬದುಕಿನ ಕತೆ ಇರುತ್ತವೆ. ಅವುಗಳೆಲ್ಲ ದಾಖಲಾಗಿರುವುದಿಲ್ಲ ಅಷ್ಟೇ... ಬದುಕಿನ ಧಾವಂತದ ನಡುವೆ ಸಾವುಗಳ ಕತೆ ಬರೆಯಲು ನಮಗೆ ಪುರುಸೊತ್ತಾದರೂ ಎಲ್ಲಿದೆ?

 

ಅವರು ಸ್ತಬ್ಧರಾದದ್ದು ಜನವರಿ 26ಕ್ಕೆ ಆದಿತ್ಯವಾರ. ಅದಕ್ಕೂ ಎರಡು ದಿನ ಮೊದಲು ಜನ.24 ಶುಕ್ರವಾರ ಅಪರಾಹ್ನ ಅವರಿನ್ನಿಲ್ಲ ಅಂತ ಸಂವಹನ ಕೊರತೆಯಿಂದ ತಪ್ಪಾಗಿ ಸುದ್ದಿಯಾಯಿತು. ಯಾರೂ ಬೇಕೂಂತ ಮಾಡಿದ್ದಲ್ಲ, ತಪ್ಪಾಗಿ ಅರ್ಥವಾಗಿ ಆದ ಪ್ರಮಾದ. ಆ ದಿನ ಮಧ್ಯಾಹ್ನವೂ ನಾನಲ್ಲಿಗೆ ಹೋಗಿದ್ದೆ. ತುಂಬ ಮಂದಿ ಅಲ್ಲಿಗೆ ಬಂದಿದ್ದರು. ತುಂಬ ಮಂದಿಗೆ ಮನೆಗೆ ತಲುಪಿದಾಗಲೇ ಗೊತ್ತಾಗಿದ್ದು, ಅವರು ಉಸಿರಾಡುತ್ತಿದ್ದಾರೆ ಅಂತ. ಆಗ ನನಗನ್ನಿಸಿದ್ದು, ಅಷ್ಟೆಲ್ಲ ಮಂದಿಗೆ ಅವರನ್ನು ಜೀವಂತ ನೋಡುವ ಯೋಗ ಇತ್ತು ಅಂತ!

ಮತ್ತೊಂದು ಹೇಳಲೇ ಬೇಕಾದ ಸಂಗತಿ. ಸುಮಾರು ಒಂದೂ ಕಾಲು ವರ್ಷ  ತಾನು ಅನಾರೋಗ್ಯ ಪೀಡಿತನಾಗಿದ್ದೇನೆ ಅಂತ ಗೊತ್ತಾಗಿ ಅವರು ಬದುಕಿದ್ದರು. ಕೊನೆಯ ಎರಡು ತಿಂಗಳು ಸ್ವಲ್ಪ ಮಲಗಿದಲ್ಲೇ ಇರುವ ಪರಿಸ್ಥಿತಿ ಉಂಟಾಗಿತ್ತು. ಆದರೂ ಬದುಕಿನ ಕೊನೆಯ ಕ್ಷಣದ ವರೆಗೂ ಬಹುತೇಕ ಅವರ ಮನಸು ಜಾಗೃತವಾಗಿಯೇ ಇತ್ತು. ಅವರಿಗೆ ನಾವು ಮಾತನಾಡುವುದು ಕೇಳಿಸುತ್ತಿತ್ತು, ಕಣ್ಸನ್ನೆ ಮಾಡುತ್ತಿದ್ದರು, ಅರ್ಥವಾಯಿತು ಅಂತ ಹೇಳುತ್ತಿದ್ದರು. ಕೊನೆಯ ದಿನಗಳಲ್ಲೇ ಮಾತನಾಡಲಾಗದೇ ಅಲ್ಲ, ಅವರೇ ವೈರಾಗ್ಯ ಹೊಂದಿ ಮಾತು ನಿಲ್ಲಿಸಿದ್ದರು ಅಂತ ನನಗೆ ಅನ್ನಿಸಿತ್ತು. ಆ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ಇಲ್ಲವಾದರೂ. ಆ ದಿನ ಬೆಳಗ್ಗೆ 11 ಗಂಟೆ ಹೊತ್ತಿಗೆ, ನಾನು ಮನೆಗೆ ಹೋಗಿದ್ದೆ, ಅವರ ಬಂಧು ಮಿತ್ರರೂ ಇದ್ದರು. ಕರೆದಾಗ ಸ್ಪಂದನೆ ಬಂದಿತ್ತು. ಹೊರಗಿನವರು ಮಾತನಾಡುವುದೆಲ್ಲ ಅವರಿಗೆ ಕೇಳಿಸುತ್ತಿತ್ತು. ಅದರ ಅರ್ಥ ಅವರು ಕೊನೆಯ ದಿನದ ವರೆಗೂ ಜಾಗೃತರಾಗಿದ್ದರು. ಸಾವಿನ ಕರೆಯನ್ನು ಸ್ವೀಕರಿಸಿದ್ದರು, ಆದರೆ ದೇಹ ಸಹಕರಿಸದೆ, ಸಹರಿಸಲು ಸಾಧ್ಯವಾಗದೇ ಇದೆಲ್ಲ ಆಗಿ ಹೋಯ್ತು.

 

ನಾನು ಅವರಿಗೆ ತೀರಾ ಆತ್ಮೀಯನೇನಲ್ಲ. ವೃತ್ತಿ ನಿಮಿತ್ತ ಒಡನಾಟ ಪ್ರಯುಕ್ತ ನನ್ನ ಕುರಿತು ಅವರಿಗೆ ವಿನಾ ಕಾರಣ ಪ್ರೀತಿ ಇತ್ತು. ಒಂದೇ ಊರಿನವರು. ನಾನೇನು ಅವರಿಗೆ ತುಂಬ ಉಪಕಾರ ಮಾಡಿದವನಲ್ಲ, ಅವರ ಚಿಕಿತ್ಸೆಗೆ ಸಾವಿರಾರು ರುಪಾಯಿ ಕೊಟ್ಟು ನೆರವಾದವನೂ ಅಲ್ಲ. ಆದರೆ, ಕೊನೆಯ ಒಂದು ವರ್ಷ ಅವರು ಕಳೆದ ರೀತಿಯನ್ನು ಹತ್ತಿರದಿಂದ ಕೆಲವಾರು ಸಲ ಕಂಡಿದ್ದೇನೆ. ಅವರ ಅನಾರೋಗ್ಯ, ಅವರ ಕೊನೆಯ ದಿನಗಳ ಪರಿಸ್ಥಿತಿ ತುಂಬ ಕಾಡುತ್ತಿತ್ತು... ಅವರ ತೀರಾ ಆಪ್ತರು ತೋರಿಸುತ್ತಿದ್ದ ಕಾಳಜಿ, ಅವರಿಗೆ ಮರುಗುತ್ತಿದ್ದ ಮನಸುಗಳು, ಅವರ ವ್ಯಕ್ತಿತ್ವ ಮತ್ತು ನಿಲುವುಗಳನ್ನು ಗೌರವಿಸಿ ನಡೆದುಕೊಳ್ಳುತ್ತಿದ್ದ ರೀತಿಗಳೆಲ್ಲ ತುಂಬ ತುಂಬ ಯೋಚಿಸುವಂತೆ ಮಾಡುತ್ತಿತ್ತು. ಹಾಗಾಗಿ ಕೊನೆಯ ದಿನವೂ ಅವರನ್ನು ಸ್ಪಂದಿಸುತ್ತಿದ್ದಾಗಲೇ (ನಿಧನಕ್ಕಿಂತ 3 ಗಂಟೆ ಮೊದಲು) ನೋಡಲು ನನಗೂ ಸಾಧ್ಯವಾಯಿತು...

 

ಈಗ ಅವರಿಲ್ಲ... ಎಷ್ಟು ಮಂದಿ ನೆನಪಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅವರು ಸಮಾಧಿ ಕಟ್ಟಿಸಿಕೊಳ್ಳುವಷ್ಟು ದೊಡ್ಡವರಲ್ಲ. ಫ್ಲಕ್ಸ್ ಹಾಕಿ ಕಣ್ಣೀರು ಸುರಿಸಿಕೊಳ್ಳುವ ಅಭಿಮಾನಿಗಳನ್ನು ಅವರು ಸಂಪಾದಿಸಿಲ್ಲ, ದೊಡ್ಡ ಮಟ್ಟಿನ ಡೊನೇಶನ್ ಕೊಟ್ಟು ಅವರೆಲ್ಲಿಯೂ ಪದಾಧಿಕಾರಿ ಆಗಿರಲಿಕ್ಕಿಲ್ಲ, ಅವರ ಕುರಿತು ಸರಣಿ ಶ್ರದ್ಧಾಂಜಲಿ ಸಭೆಗಳೂ ನಡೆದಿರಲಿಕ್ಕಿಲ್ಲ, ಮತ್ತೆ ಅವರಿಗೊಂದು ಸ್ಮಾರಕ, ಅವರ ದೊಡ್ಡ ಮೂರ್ತಿ ನಿರ್ಮಾಣ, ವೃತ್ತ ನಿರ್ಮಾಣ, ಬೀದಿಗೆ ಹೆಸರಿಡುವಂಥ ಸೋ ಕಾಲ್ಡ್ ನೇತಾರನೂ ಅವರಲ್ಲ. ಅವರೇನು ಅಂತ ಬಲ್ಲವರಿಗೆ ಮಾತ್ರ ಅವರು ಗೊತ್ತು. ಈ ರೀತಿ ಇಲ್ಲವಾದವರ ಪೈಕಿ ಅವರು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ. ತಾನು ಬದುಕಿದ್ದಾಗ ಒಂದಷ್ಟು ಮಂದಿಯ ಬದುಕನ್ನು ಸಮಾಜಕ್ಕೆ ತೋರಿಸಿಕೊಟ್ಟ ಶ್ರೇಷ್ಠ ಕಾರ್ಯ ಅವರಿಂದ ನಡೆದಿರುವುದಂತೂ ನಿರಾಕರಿಸಲಾಗದ ಸತ್ಯ. ಆದರೆ ಈ ಕಾಲದಲ್ಲಿ ಅವನ್ನು ಯಾರೂ ಸಾಧನೆ ಅಂತ ಪರಿಗಣಿಸುವುದಿಲ್ಲ ಎಂಬುದೂ ಕಟು ವಾಸ್ತವ.

 

ಮನುಷ್ಯ ಬದುಕಿನಲ್ಲಿ ಸಾವು ಕಾಡುವ ರೀತಿಗೆ ಇವರೊಂದು ರೂಪಕ ಅಷ್ಟೇ.. ಸಾವನ್ನು ಅವರು ಸ್ವೀಕರಿಸಿದ್ದು, ಮತ್ತು ಅದನ್ನು ಗ್ರಹಿಸಿ, ಮುಂದೆ ಹೋದದ್ದು, ಅದರ ಬಗ್ಗೆ ತಾನೇ ಬರೆದುಕೊಂಡದ್ದು ಮತ್ತು ತುಂಬ ವಿಚಾರಗಳನ್ನು (ಅಧಿಕಪ್ರಸಂಗಗಳನ್ನು) ಮಾಡದೇ ಇದ್ದ ಕಾರಣಕ್ಕೆ ಅವರು ಪ್ರತ್ಯೇಕರಾಗಿ ಉಳಿದದ್ದು ಇವೆಲ್ಲ ಅವರ ಬಗ್ಗೆ ತುಂಬ ಕುತೂಹಲ ಮೂಡಿಸಿತ್ತು... ಯಾರ ಸಾವು ಹೇಗೆ ಅಂತ ಯಾರಿಗೂ ಗೊತ್ತಿರುವುದಿಲ್ಲ. ಎಂಥದ್ದೇ ಕೃತಕ ಬುದ್ಧಿಮತ್ತೆಗೆ ಅದನ್ನು ಪತ್ತೆ ಹಚ್ಚಲು ಅಸಾಧ್ಯ. ಅಷ್ಟು ದೊಡ್ಡ ನಟ ಪುನೀತ್ ರಾಜ್ ಕುಮಾರ್ ಯಾವಾಗ ಹಾಗೆ ಇಲ್ಲವಾದರೋ ಆಗಲೇ ಅಂದಾಜಾಯ್ತು. ಸಾವು ತರ್ಕಕ್ಕೆ ನಿಲುಕದ್ದು ಅಂತ. ಯಾರ ಶ್ರದ್ಧಾಂಜಲಿ ಬರೆಹ, ನಿಧನ ವಾರ್ತೆ ಯಾರು ಬರೆಯುತ್ತಾರೆ ಅಂತಲೂ ಯಾರೂ ಹೇಳಲಾಗದು...

 

ಅವರು ನಿರ್ಗಮಿಸಿದರು, ಹೊರಟುಹೋದರು, ಸ್ವರ್ಗಸ್ಥರಾದರು ಅಂತೆಲ್ಲ ಹೇಳುತ್ತೇವೆ. ವೈಯಕ್ತಿಕವಾಗಿ ನನಗೆ ಈ ಯಾವ ಪದವೂ ಏನೂ ಕಾಡುವುದಿಲ್ಲ. ವಾಸ್ತವವಾಗಿ ಅವರು ಇಲ್ಲವಾಗುತ್ತಾರೆ. ಆ ದಿನ ಬೆಳಗ್ಗೆ ನೋಡುವಾಗಲೂ ಅವರ ಚೇತನ ಆ ದೇಹದಲ್ಲಿ ಇತ್ತು. ಮಧ್ಯಾಹ್ನ ವಿಚಾರ ತಿಳಿದು ಹೋದಾಗ ಅವರನ್ನು ಯಾರೂ ಹೆಸರಿಡಿದು ಕರೆಯುತ್ತಿರಲಿಲ್ಲ. ಅವರದ್ದು ಪಾರ್ಥೀವ ಶರೀರ ಆಗಿತ್ತು. ಇಷ್ಟೇ ಬದುಕಿನ ಸತ್ಯ. ಅವರೆಲ್ಲಿ ಹೋಗಿದ್ದಾರೋ, ಅವರ ಆತ್ಮ ಏನಾಗುತ್ತದೋ ಅದೆಲ್ಲ ನನಗೆ ಗೊತ್ತಿಲ್ಲ, ನಾನು ಅಂತಹ ಪಂಡಿತನೂ ಅಲ್ಲ. ಅವರು ಇನ್ನಿಲ್ಲ, ಅಲ್ಲಿಲ್ಲ, ಆ ದೇಹದಲ್ಲಿ ಅವರು ಮತ್ತೊಮ್ಮೆ ಕಾಣಿಸುವುದಿಲ್ಲ ಎಂಬುದೇ ಸತ್ಯ....

 

ಸಾವಿನ ಬಗ್ಗೆ ಇತ್ತೀಚೆಗೆ ನಟ ರಾಜ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ ಸಾಲುಗಳು ತುಂಬ ಕಾಡುತ್ತಿರುತ್ತದೆ... ಆಗ ಕರೆಂಟ್ ಇತ್ತು, ಈಗ ಇಲ್ಲ, ಟಿವಿ ಬಂದ್ ಆಗಿದೆ, ಹಾಗಾದರೆ ಕರೆಂಟ್ ಎಲ್ಲಿಗೆ ಹೋಯ್ತು?, ಟಿವಿ ಕಾರ್ಯಕ್ರಮ ಎಲ್ಲಿಗೆ ಹೋಯ್ತು?” “ಎಲ್ಲಿಗೆ ಹೋಯ್ತು?” ಅಂದರೆ ಅದಕ್ಕೆ ಉತ್ತರ ಉಂಟ... ಇಲ್ಲ ತಾನೆ?

 

ಆದಾಗ್ಯೂ... ಹೋದ ಕರೆಂಟು ಮತ್ತೆ ಬರಬಹುದು. ಇಲ್ಲವಾದ ಜೀವ ಮತ್ತೆ ದೇಹದಲ್ಲಿ ಕಾಣಿಸುವುದಿಲ್ಲ ಎಂಬುದ ಸೂರ್ಯ ಚಂದ್ರರಷ್ಟೇ ಸತ್ಯ. ಹೋಗಿ ಬನ್ನಿ... ಮತ್ತೊಮ್ಮೆ ಹುಟ್ಟಿ ಬನ್ನಿ, ನಿಮಗೆ ಮೋಕ್ಷ ಪ್ರಾಪ್ತಿಯಾಗಲಿ... ಎಂಬಿತ್ಯಾದಿ ಎಂಥದ್ದೇ ಹೇಳಿದರೂ ಅವರಿಲ್ಲಿಲ್ಲ ಎಂಬುದು ಮಾತ್ರ ಸತ್ಯ... ಬದುಕಿದ್ದಾಗ ಹೇಳಿದ್ದಷ್ಟೇ ಅವರಿಗೆ ಕೇಳಲು ಸಾಧ್ಯ. ಮತ್ತೆಲ್ಲ ಅವರವರ ಭಾವಕ್ಕೆ, ಭಕುತಿಗೆ, ಅವರವ ನೆನಪು ಶಕ್ತಿ, ನಂಬಿಕೆಗೆ ಬಿಟ್ಟದ್ದು... ಇದ್ದಷ್ಟು ದಿನ ಮಾತ್ರ ಅದು ಬದುಕು, ನಂತರ ಉಳಿದರೆ ನೆನಪು, ಇಲ್ಲವಾದರೆ ಶೂನ್ಯವಾಗುವ ದುಡಿಮೆ ಮತ್ತು ಮೋಡವಿಲ್ಲದೆ ಖಾಲಿ ಉಳಿದ ದಿಗಂತದ ಹಾಗೆ ಅಷ್ಟೆ! ಪದಗಳಿಗೆ ನಿಲುಕದ್ದು...

-ಕೃಷ್ಣಮೋಹನ ತಲೆಂಗಳ (23.01.2026)

         

1 comment:

VENU VINOD said...

ಸಾವನ್ನು ಎದುರಿಸುತ್ತಲೇ ನಿರ್ಲಿಪ್ತರಾಗುತ್ತಾ ಹೋದರು...
ಗೌರವಯುತವಾಗಿ ನಿರ್ಗಮಿಸಿದರು...
ಅವರ ಬಗೆಗಿನ ನಿಮ್ಮ ನುಡಿ ಅವರ ಮೇಲಿನ ಗೌರವಕ್ಕೆ ಅಚ್ಚುಕಟ್ಟಾದ ಚೌಕಟ್ಟು

Popular Posts