ಗಾಲಿ ಮೇಲಿನ ಪುಟ್ಟ ಕ್ಯಾಬಿನ್....ವಿಶಾಲ ವಿಶ್ವಕ್ಕೊಂದು ಕಿಟಕಿ....!




ಭಾರಿ ಗಾತ್ರದ ಲಾರಿ... ಹತ್ತಾರು ಚಕ್ರಗಳು, ಯಮಗಾತ್ರದ ದೇಹದ ಹಿಂದುಗಡೆ ಭಾರಿ ಭಾರಿ ಸರಂಜಾಮುಗಳನ್ನು ತುಂಬಿ ಸಶಕ್ತವಾಗಿ ಓಡಾಡಬಲ್ಲ ನ್ಯಾಶನಲ್ ಪರ್ಮಿಟ್ ಹೊತ್ತು ದೇಶದುದ್ದಕ್ಕೂ ಓಡಾಡಬಲ್ಲ ವಾಹನ... ಲಾರಿಯೆದುರು ಚಾಲಕ ಕೂರುವಲ್ಲಿ ಒಂದು ಪುಟ್ಟ ಕ್ಯಾಬಿನ್... ಅದೊಂದು ಕೋಣೆಯಲ್ಲ ಜಗತ್ತು....


ಸಿನಿಮಾಗಳಲ್ಲಿ ನೋಡಲಿಲ್ಲವೇ... ತಡರಾತ್ರಿ ಅವಸರವಸರವಾಗಿ ಓಡಿ ಬಂದು ಹೈವೇಯಲ್ಲಿ ಕಾಯುವ ಹೀರೋ, ವಿಲನ್ನು... ದೂರದಿಂದ ಬರುವ ಲಾರಿ. ಲಾರಿಯ ಕ್ಯಾಬಿನ್ ಏರುತ್ತಾರೆ.... ನಂತರ ಮೌನವಾಗಿರುವ ಡ್ರೈವರು, ಹಿರೋನನ್ನು ಕುತೂಲದಿಂದ ನೋಡುವ ಕ್ಲೀನರು... ಕತ್ತಲೆ ಕಳೆದು ಬೆಳಕಾಗುವಾಗ ನಗರದ ಹೊರವಲಯದಲ್ಲಿ ಹೀರೋನನ್ನು ಇಳಿಸಿಹೋಗುವ ಲಾರಿ... ಈ ನಡುವೆ ಲಾರಿಯ ಕ್ಯಾಬಿನ್ನು ಒಂದು ಹೊಸ ಜಗತ್ತನ್ನೇ ನಮ್ಮ ಕಣ್ಣೆದುರು ತೆರೆದಿಡುತ್ತದೆ ಅಲ್ವ...?


ಹತ್ತಾರು ದಿನ ಲಾರಿಯಲ್ಲೇ ಡ್ರೈವರು, ಕ್ಲೀನರುಗಳಿಗೆ ಸಹಾಯವಾಗವಂಥ ಕ್ಯಾಬಿನ್ನು, ಮಲಗಲು ಬೆಡ್ಡು, ಬಟ್ಟೆ ಒಣಗಿಸಲು ಹ್ಯಾಂಗರ್ ಇಡಲು ಸ್ಥಳ, ಕೂರಲು ಸೀಟು, ಎಫ್ ಎಂ ರೇಡಿಯೋ, ಪೆನ್ ಡ್ರೈವ್ ಮೂಲಕ ಹಾಡು ಕೇಳಬಲ್ಲ ಸ್ಟೀರಿಯೋ, ಮೊಬೈಲ್ ಚಾರ್ಜರ್, ಮೇಲೆ ಡ್ರಾಯರ್ ಗಳು.... ಸ್ವಲ್ಪ ದಿನ ಬದುಕು ಸಾಗಿಸುವಷ್ಟು ವ್ಯವಸ್ಥೆ ಅಲ್ಲಿರುತ್ತದೆ. ಯಾವ್ಯಾವುದೋ ರಾಜ್ಯದಿಂದ ಹೊರಟು ಇನ್ಯಾವುದೋ ರಾಜ್ಯ ತಲಪುವ ಈ ಡ್ರೈವರ್, ಕ್ಲೀನರುಗಳು ಅದೆಲ್ಲೆಲ್ಲೋ ಸ್ನಾನ, ದೇಹಬಾಧೆ ತೀರಿಸಿ, ಬಟ್ಟೆ ಒಗೆದು ಒಣಗಿಸಿ, ಅದೇ ಕ್ಯಾಬೀನಿನಲ್ಲಿ ಮಲಗಿ ನಿದ್ರಿಸಿ ಗಮ್ಯ ತಲಪುತ್ತಾರೆ. ಮತ್ತೆ ಖಾಲಿ ಲಾರಿಯೊಂದಿಗೆ ಹೊರಟಲ್ಲಿಗೆ ಮರಳುತ್ತಾರೆ...


ಅವೆಷ್ಟೋ ಊರು, ಗಡಿ, ಪೇಟೆ, ಹಳ್ಳಿ, ಸೇತುವೆ, ನದಿ, ಸಾಗರದ ದಡ, ಬೆಟ್ಟ, ಗುಡ್ಡಗಳ ಹಂಗಿಲ್ಲದೆ.... ಟಿಕೆಟ್ ಬುಕ್ಕಿಂಗು, ಪ್ಯಾಕಿಂಗು, ಅನ್ನಾಹಾರದ ಯೋಜನೆಗಳಿಲ್ಲದೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನರನಾಡಿಗಳಂತೆ ಚಲಿಸುತ್ತಲೇ ಇರುತ್ತಾರೆ. 



ಈ ಪ್ರಯಾಣವನ್ನು ಅವರೆಷ್ಟು ಅನುಭವಿಸುತ್ತಾರೋ, ಅಥವಾ ಕರ್ತವ್ಯವೆಂಬಂತೆ ನಿರ್ಲಿಪ್ತರಾಗಿರುತ್ತಾರೋ, ಅಥವಾ ಪುಟ್ಟ ಪುಟ್ಟ ಖುಷಿಗಳನ್ನೂ ಅನುಭವಿಸುತ್ತಾರೋ ಗೊತ್ತಿಲ್ಲ....


ಆದರೆ, ಲಾರಿಯ ಆ ಕ್ಯಾಬಿನ್ ಎಂಬ ಎತ್ತರದ ಕೋಣೆಯಿಂದ ಕಾಣುವ ಹೊರ ಜಗತ್ತು ಮಾತ್ರ ಪ್ರತ್ಯೇಕ...
ಅಷ್ಟೆತ್ತರದ ಲಾರಿ ಏರಲು ಅದರ ಎದುರಿನ ಚಕ್ರವನ್ನು ತುಳಿದು ಅಥವಾ ಅದರ ಮೇಲಿನ ಪುಟ್ಟ ಮೆಟ್ಟಿಲಿನ ಮೇಲೆ ಕಾಲಿಟ್ಟು ಮೇಲೇರಬೇಕು. ಏರಿದ ಬಳಿಕ, ಹೊರಗಿನಿಂದ ಪುಟ್ಟದಾಗಿ ಕಾಣುವ ಆ ಕ್ಯಾಬಿನ್ ನೊಳಗಿನ ಸಾಧ್ಯತೆಗಳು ಸ್ಪಷ್ಟವಾಗುತ್ತವೆ. ಹೊರಗೆಲ್ಲ ಧೂಳು, ಕೆಸರು ಮೆತ್ತಿಕೊಂಡು ಉಡಾಫೆಯಾಗಿ ಕಾಣುವ ಲಾರಿಯೂ ಒಳಗೆ ಬಣ್ಣ, ಬಣ್ಣದ ವಿನ್ಯಾಸಗಳ ಗೋಡೆ, ವೆಲ್ವೆಟ್ಟಿನ ಮಾಡು, ಚಿತ್ರವಿಚಿತ್ರ ಮಾಲೆಗಳು, ಹೊಳೆಯುವ ಬೇಗಡೆಯ ಸಾಧನಗಳು,  ಫೋಟೋಗಳು, ಪೋಸ್ಟರುಗಳು, ವೇದಾಂತದ ಸಾಲುಗಳು, ಪೇಪರ್ ಕಟ್ಟಿಂಗುಗಳು, ಮೆತ್ತೆಯ ಒರಗುವ ಸಾಧನಗಳೊಂದಿಗೆ ಸಣ್ಣದೊಂದು ವಿಶ್ವದಂತೆ ಕಾಣುತ್ತದೆ...

ಅಷ್ಟೆತ್ತರ ಲಾರಿ ಮಿಕ್ಕೆಲ್ಲ ವಾಹನಗಳಿಗಿಂತ ಎತ್ತರ. ದೊಡ್ಡದೊಂದು ಅಟ್ಟಳಿಕೆಯಲ್ಲಿ ಕುಳಿತ ಹಾಗೆ. ಸುರಕ್ಷಿತವಾಗಿ, ಹಾಯಾಗಿ ನಿಂತ ಹಾಗೆ... ರಸ್ತೆಯೆಂಬುದು ತುಂಬಾ ಕೆಳಗಿರುವ ಪಾತಾಳದಂತೆ ಭಾಸ. ಮಿಕ್ಕ ವಾಹನಗಳೆಲ್ಲ ಕ್ಷುಲ್ಲಕವೆಂಬಂತೆ ಅವುಗಳ ಟಾಪು ಲಾರಿಯ ಸೊಂಟದ ಎತ್ತರಕ್ಕೂ ಎಟಕುವುದಿಲ್ಲ.... ಕ್ಯಾಬಿನ್ನಿನೊಳಗೆ ಕುಳಿತವನಿಗೆ ಜಗವೆಲ್ಲ ತನ್ನ ಕೆಳಗಿದ್ದಂತೆ ಭಾಸವಾದೀತು...

ಅದರಲ್ಲೂ ಕತ್ತಲಲ್ಲಿ ಲಾರಿಯ ಕ್ಯಾಬಿನ್ನಿನೊಳಗಿನಿಂದ ಕಾಣುವ ಲೋಕವೇ ಬೇರೆಯದಲ್ವ...?
ಜಗತ್ತಿಗೆ ನಾವು ಕಾಣಿಸುವುದಿಲ್ಲ. ನಮಗೆ ಜಗತ್ತು ಕಾಣುತ್ತದೆ... ಒಳಗೊಂದು ಮಂದ ಬೆಳಕು ಇದ್ದೀತು ಅಥವಾ ದೇವರ ಫೋಟೋದ ಸುತ್ತ ಹರಿದಾಡಿದಂತೆ ಭಾಸವಾಗುವ ಮಿನಿಯೇಚರ್ ಬಲ್ಪುಗಳ ಅಸ್ಪಷ್ಟ ನೆರಳು ಮಿಂಚು ಹುಳದಷ್ಟೇ... ಎಫ್ ಎಂ ರೇಡಿಯೋದಿಂದ ಹೊರ ಹೊಮ್ಮುವ ನಿಶಾಗೀತ್ ಹಿನ್ನೆಲೆಯಲ್ಲಿ ರಾತ್ರಿಯ ಜಗತ್ತನ್ನು ನೋಡುವುದೇ ಸೊಗಸು...

ಪ್ರಖರ ಬೆಳಕಿನ ಹೆಡ್ ಲೈಟು ತೋರಿಸುವ ರಸ್ತೆಯ ವಿಸ್ತಾರ, ಕಡೆಗಣಿಸುವಂತೆ ಕಾಣುವ ರಸ್ತೆ ಗುಂಡಿಗಳಿಗೆ ಚಕ್ರ ಇಳಿದಾಗಲೇ ಅದರ ತಾಕತ್ತು ಗೊತ್ತಾಗುವುದು. ದೊಡ್ಡ ದೊಡ್ಡ ತಿರುವುಗಳಾಚಿನ ಚಾಚಿದ ಕೊಂಬೆಗಳ ಮರಗಳು, ಬೋಳು ಬೊಡ್ಡೆಗಳು ದೆವ್ವಗಳಂತೆ, ಕಡು ಕಪ್ಪಿನ ನಡುವಿನ ಹಸಿರು ಮರೆತ ಪಚ್ಚೆ ಬಣ್ಣದ ಛಾಯೆಯಲ್ಲಿ ಏನೇನೋ ಆಕಾರಗಳಾಗಿ ಕಾಣುವುದು. ಹೇರ್ ಪಿನ್ ತಿರುವುಗಳಾಚೆಯ ಪ್ರಪಾತದಂಚಿನಿಂದ ಎಲ್ಲೋ ಅಬ್ಬಿಯ ನೀರು ಧುಮ್ಮುಕುವ ಸದ್ದು ಕೇಳಿಸುವುದು, ಸರಕ್ಕನೆ ರಸ್ತೆ ದಾಟುವ ಹಂದಿ, ಮುಂಗುಸಿಯ ಸಾಲು, ಹುಚ್ಚು ಹಿಡಿದಂತೆ ರಾಚುವ ಗಾಳಿ ಮಳೆಯ ರಭಸಕ್ಕೆ ವೈಪರ್ ಸೊರಗಿ ಕೇವಲ ಎರಡೇ ಮೀಟರ್ ದೂರದಿಂದ ಮಾತ್ರ ರಸ್ತೆ ಕಾಣಿಸುವಾಗಲೂ ರಸ್ತೆ ಮೇಲೆ ಹರಿಯುವ ನೀರನ್ನು ಬದಿಗೆ ಎರಚಿ ಸಾಗುವಾಗ ಜಗತ್ತಿನ ಸಂಪರ್ಕವೇ ಕಡಿದ ಭಾವ...ಹೊರಗಿನ ಮಿಂಚು, ಗುಡುಗುಳ ಆರ್ಭಟ ಬೆಳಕಿನ ದರ್ಶನಕ್ಕಷ್ಟೇ ಸೀಮಿತ. ಮಳೆ ವೇಗಕ್ಕೆ ಲಾರಿಯ ವೇಗ ತಾಳಮೇಳ ಸಿಕ್ಕದೆ, ಸ್ಪೀಡಿನ ಅಂದಾಜು ತಪ್ಪಿ ಗಾಳಿ ಅಬ್ಬರಕ್ಕೆ ಬಾಗುವ ಮರಗಳ ಗೆಲ್ಲುಗಳು ಲಾರಿಯ ಟಾಪ್ ಸವರುತ್ತಿರುವಾಗ ನಿರ್ಲಿಪ್ತವಾಗಿ ಚಲಾಯಿಸುವ ಚಾಲಕನಿಗೆ ಇದೆಲ್ಲ ಎಷ್ಟೋ ನೋಡಿದ್ದೇನೆಂಬ ನಿರ್ಲಿಪ್ತ ಭಾವ...

ಅಂಕುಡೊಂಕು ಹೆದ್ದಾರಿ ಪಕ್ಕದ ಉಕ್ಕಿನ ತಡೆಗೋಡೆಗಳು, ಕೆಂಪು, ಹಳದಿ ಬಣ್ಣದಲ್ಲಿ ಸಾಲು ಸಾಲಾಗಿ ಪ್ರತಿಫಲಿಸುವ ರಿಫ್ಲಕ್ಟರುಗಳು, ರಸ್ತೆ ಮಧ್ಯದ ಬಿಳಿಯ ಪಟ್ಟಿ ನಿದ್ರೆಯ ಮಂಪರಿನಲ್ಲೂ ರಸ್ತೆಯಂಚನ್ನು ಸಾರಿ ಸಾರಿ ಹೇಳುತ್ತಿರುತ್ತದೆ....

ಎಲ್ಲಿಯೋ ರಸ್ತೆ ಪಕ್ಕದಲ್ಲಿ ನಿಟ್ಟುಸಿರುವ ಬಿಟ್ಟು ಅಲ್ಪವಿರಾಮ ಪಡೆಯುವ ಲಾರಿಗಳ ಚಾಲಕರಿಗೆ, ಕ್ಲೀನರುಗಳಿಗೆ ಪರೋಟಾ, ಚಹಾ ಕುಡಿಸುವ ಡಾಬಾಗಳು, ರಾತ್ರಿಯಿಡೀ ಸಜೀವವಾಗಿ ಹಾಡು ಹಾಡುತ್ತಾ, ಬಣ್ಣದ ಬಣ್ಣದ ಲೈಟುಗಳಿಂದ ಅಲಂಕೃತವಾಗಿರುವ ಫಾಸ್ಟು ಫುಡ್ ಸೆಂಟರುಗಳು, ಮಫ್ಲರು ಬಿಗಿದು, ನಿದ್ರೆಯ ಅಮಲಿನಲ್ಲಿರುವ ಚೆಕ್ ಪೋಸ್ಟುಗಳ ಕಾವಲುಗಾರರು, ಮರುಭೂಮಿಯಂತೆ ಕಾಣಿಸುವ ನೇರ ರಸ್ತೆಯಂಚಿನಲ್ಲಿ ಗ್ರೀಸಿಂಗ್ ಮಾಡಲು ಕಾದಿರುವವರು ಎಲ್ಲ ದೂರದೊಂದು ಪಯಣದ ಲಾರಿಯ ಸಂಚಾರದಲ್ಲಿ ಕಾಣಿಸುವ ನಿತ್ಯದ ಸ್ಟಾಪುಗಳು...ಅಪರಿಚಿತ ಬಂಧು ಬಾಂಧವರು.

ಎಲ್ಲಿಯೋ ಕಾಡಿನಂಚಿನ ಝರಿಯ ಪಕ್ಕ ನಿಲ್ಲಿಸಿ ಚೆಂದಕೆ ಲಾರಿಯನ್ನು ತೊಳೆಯುವ ಉತ್ಸಾಹ.... ಲಾರಿಯನ್ನು ತೊಳೆದು, ಕಾಲೊರೆಸನ್ನು ತಿಕ್ಕಿ ತೀಡಿ ಒಣಗಿಸಿ, ಝರಿಯಲ್ಲಿ ಮಿಂದು ಬಟ್ಟೆಯೊಗೆದು, ಮಾವಿನ ಮರದ ಕಟ್ಟೆಯಲ್ಲಿ ಸಣ್ಣದೊಂದು ನಿದ್ರೆ ತೆಗೆದು, ಪಕ್ಕದ ಗುಡಿಯೆದುರು ಕರ್ಪೂರು ಉರಿಸಿ, ಕಾಣಿಕೆ ಹಾಕಿ, ಅಡ್ಡ ಬಿದ್ದು ಫ್ರೆಶ್ಸಾಗಿ ಹೋಗುವ ಬದುಕಿದೆಯಲ್ಲ... ಅದೊಂದು ಧ್ಯಾನದಂತೆ.


ಸ್ಟೇಟಸ್ಸು, ಭಯಂಕರ ನಿರೀಕ್ಷೆ, ತೀವ್ರತರ ನಿರಾಸೆಯನ್ನು ತೋರಗೊಡದ ಮನಸ್ಸುಗಳು. ಎಂಥದ್ದೇ ಪರಿಸ್ಥಿತಿಯಲ್ಲಿ ಎದೆಯುಬ್ಬಿಸಿ ನಿಂತಂತೆ ಕಾಣುವ ದೊಡ್ಡ ಲಾರಿಗಳ ಹಾಗೆ ಚಾಲಕರದ್ದೂ ನಿರ್ಲಿಪ್ತ ಮನಸ್ಸು... ಮಾತನಾಡಿಸುವವರು, ಕೇಳಿಸಿಕೊಳ್ಳುವವರೂ ಕಡಿಮೆ...

......

ಜೊತೆಗೊಬ್ಬ ಕ್ಲೀನರ್ರು ಇದ್ದರೆ ದಾರಿಯುದ್ದಕ್ಕೂ ಮಾತನಾಡಬಹುದು, ಆತನೂ ಕೈಕೊಟ್ಟರೆ ಒಂಟಿ ಪ್ರಯಾಣ... ಮೊಬೈಲ್ ಇದ್ದರೆ ಮನೆಯವರ ಜೊತೆ ಮಾತನಾಡಬಹುದೋ ಏನೋ... ಆದರೆ ವಾಟ್ಸಪ್ಪು, ಫೇಸ್ಬುಕ್ಕು ನೋಡ್ತಾ ಇರುವುದಕ್ಕೆ ಕಷ್ಟ.. ಯಾವುದೋ ಘಾಟಿ, ಯಾವುದೋ ಕಾಡು, ಯಾವುದೋ ಮಾಲು, ದೇವಸ್ಥಾನ, ಗೋಪುರ, ತಿರುವು, ಇಳಿಜಾರು, ಪ್ರಪಾತ, ಸಮುದ್ರ, ನದಿ, ಹಳ್ಳ, ಕೊಳ್ಳ, ರೈಲ್ವೇ ಕ್ರಾಸಿಂಗು, ಟ್ರಾಫಿಕ್ಕು, ಯಾವುದೋ ಹಳ್ಳಿಯ ಮುರುಕಲು ಸೇತುವೆ ನಡುವೆ, ಗದ್ದೆಯ ಬದುವಿನ ಮಾರ್ಗದಲ್ಲಿ ನೆಟ್ವರ್ಕ್ ಸಿಕ್ಕುವುದೂ ತೀರಾ ಸುಲಭವೇನಲ್ಲ...

.....

ಮುಸ್ಸಂಜೆ ಹೊರಟು ಸೂರ್ಯಾಸ್ತದ ವೇಳೆ ಅಗರಬತ್ತಿ ಹಚ್ಚಿದ ಘಮಘಮದೊಂದಿಗೆ ಕ್ಯಾಬಿನ್ನಿನಲ್ಲಿ ಕುಳಿತು ಚಾಲಕ ಗಾಡಿ ಓಡಿಸುತ್ತಿದ್ದರೆ, ಹಿಂದಿನ ಪಲ್ಲಂಗದಲ್ಲಿ ಪವಡಿಸಿದ ಕ್ಲೀನರ್ರು ಕಣ್ಣು ತೆರೆಯುವ ವೇಳೆಗೆ ಸೂರ್ಯ ಉದಯಿಸುತ್ತಿರಬಹುದು. ರಾಜ್ಯಕ್ಕೆ ರಾಜ್ಯಗಳನ್ನೇ ದಾಟಿ ಬಂದಿರಬಹುದು. ದಿನಾಂಕ, ಕ್ಯಾಲೆಂಡರ್ ಬದಲಾಗಿರಬಹುದು. ಸೆಕೆಯೂರಿನಿಂದ ಚಳಿಯೂರಿಗೆ ಧಾವಿಸಿರಬಹುದು. ಭಾಷೆ ಬದಲಾಗಿರಬಹುದು. ಅನ್ನದ ಬದಲು ಗೋಧಿ ರೋಟಿಯನ್ನೇ ತಿನ್ನಬೇಕಾದ ಜಾಗ ತಲುಪಿರಬಹುದು....
ಸುತ್ತಲಿನ ಪರಿಸರ ನೋಡುತ್ತಾರೋ, ಅದನ್ನೆಲ್ಲ ದಾಖಲಿಸುತ್ತಾರೋ, ಮೂಡ್ ಬಂದು ಸೆಲ್ಫೀ ತೆಗೆಯುತ್ತಾರೋ, ಮತ್ತೆ ಕೋರೋನಾ, ರಾಜಕೀಯಗಳ ಬಗ್ಗೆ ತಲೆ ಕೆಡಿಸುತ್ತಾರೋ ಗೊತ್ತಿಲ್ಲ....

-----

ಡೇ ಶಿಫ್ಟು, ನೈಟ್ ಶಿಫ್ಟು, ವೀಕ್ಲಿ ಆಫುಗಳ ಗೊಡವೆಯಿಲ್ಲ.... ಲಾಕ್ ಡೌನ್, ಕರ್ಫ್ಯೂ, ಪ್ರವಾಹ, ಬರಗಳ ಪ್ರಭಾವ ಇಲ್ಲ. ಸರಕು ಸಾಗಿಸಲು, ಪೆಟ್ರೋಲ್ ಪೂರೈಸಲು, ಎಲ್ಪಿಜಿ, ತರಕಾರಿ, ಮೀನು, ಹಾಲು, ದಿನಸಿ ಇತ್ಯಾದಿ ಇತ್ಯಾದಿಗಳನ್ನು ದೂರುದೂರಿಗೆ ಕೊಂಡು ಹೋಗಲು ಲಾರಿಗಳು ಓಡಾಡಲೇ ಬೇಕು. ದೊಡ್ಡ ಕ್ಯಾರಿಯರ್ರು, ಪುಟ್ಟ ಕ್ಯಾಬಿನ್, ಸುದೀರ್ಘ ರಸ್ತೆಯ ಮುಗಿಯದ ಹಾದಿಯ ಸುತ್ತಿ ಬರುವಾಗ ಮತ್ತಷ್ಟು ಆಯುಷ್ಯ ಕಳೆದುಹೋಗಿರುತ್ತದೆ. ಬರೆಯದ, ಹೇಳದ, ದಾಖಲಿಸದ ಅನುಭವಗಳ ರಾಶಿ ರಾಶಿ ಅನುಭೂತಿಗಳು ಎಲ್ಲೆ ತಲೆಯ ಮೂಲೆಯಲ್ಲಿ ಶೇಖರವಾಗಿಡುತ್ತವೆ... ಹಾಗಿದ್ದರೆ ಡ್ರೈವರುಗಳು, ಕ್ಲೀನರುಗಳ ಬತ್ತಳಿಕೆಯಲ್ಲಿ ಹಗಲು, ರಾತ್ರಿಗಳ ಕಥೆಗಳೆಷ್ಟು ಸಾವಿರಗಟ್ಟಲೆ ಇದ್ದೀತು ಅಲ್ವ....

-ಕೃಷ್ಣಮೋಹನ ತಲೆಂಗಳ.

1 comment:

Giri said...

ಎಷ್ಟು ಸಾಗಿದರೂ ಮುಗಿಯದ ಮಾರ್ಗ. ಅಷ್ಟೇನೂ ಹೆಚ್ಚಿಲ್ಲದ ವೇಗ. ಇಕ್ಕೆಲದ ವಿಶಾಲ ಹೊಲಗದ್ದೆ, ಹಳ್ಳಿ. ನಡು ನಡುವೆ ಸಿಕ್ಕುವ ಪಟ್ಟಣ. ಈಗಲೂ.... ಆ ಕ್ಯಾಬಿನ್ ಒಳಗಿನ ಡ್ರೈವರ್ ಆಗುವ ಆಸೆ ಹಸಿರಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರ, ಅರುಣಾಚಲದಿಂದ ಸೌರಾಷ್ಟ್ರದ ಉದ್ದ ಅಗಲ,ಸಂಚರಿಸುವ ಆಸೆ..