ಮುತುವರ್ಜಿಯಿಂದ ಬೂತಿಗೆ ಕಾರಿನಲ್ಲೇ ಕರ್ಕೊಂಡು ಹೋಗಿ ಮತ ಹಾಕಿಸುವವರೆಲ್ಲ ಈಗ ಎಲ್ಲಿಗೆ ಹೋದರು?!
ಕೊರೋನಾ ಪರ್ವದಲ್ಲಿ ನಿರಾಕರಿಸಲಾಗದ ಸತ್ಯಗಳು...
ಕೊರೋನಾದ ಎರಡನೇ ಅಲೆ ಎಷ್ಟು ತೀವ್ರವಾಗಿದೆ? ಸರ್ಕಾರದ ಕ್ರಮಗಳೇನು, ಜನರ ಸಹಕಾರ ಏನು, ಎಷ್ಟು
ಸಾವುಗಳಾಗಿವೆ? ಸಕ್ರಿಯರೆಷ್ಟು ಇತ್ಯಾದಿ ಮಾಹಿತಿಗಳನ್ನು ಹೊಸದಾಗಿ ಹೇಳುವುದಕ್ಕೇನೂ
ಇಲ್ಲ. ಕಳೆದ ವರ್ಷದ ಹಾಗಿಲ್ಲ ಈ ವರ್ಷ ಕೊರೋನಾದ ವ್ಯಾಪ್ತಿ, ಆಳ, ಪರಿಣಾಮ, ರಾಜಕೀಯ ಎಲ್ಲ ನಮಗೆ
ಅರ್ಥವಾಗಿದೆ, ಅಥವಾ ಅರ್ಥವಾಗುತ್ತಲೇ ಇದೆ. ಹಾಗಾಗಿ ನಾವು ಕೊರೋನಾದ ಬಗ್ಗೆ ಈಗ ಮುಗ್ಧ
ಶಿಶುಗಳಲ್ಲ. ಕೊರೋನಾದ ನಿರ್ವಹಣೆ ಕುರಿತು ಕೇಳಿ ಬರುತ್ತಿರುವ ಆರೋಪಗಳು, ಆಕ್ರೋಶ, ಚಿಗುಪ್ಸೆ,
ಸಂವೇದನೆ ಕಳೆದುಕೊಂಡಂತೆ ವರ್ತಿಸುವ ರಾಜಕಾರಣಿಗಳ (ಎಲ್ಲರೂ ಅಲ್ಲ, ಆ ಥರ ವರ್ತಿಸುವವರನ್ನು
ಮಾತ್ರ ಉದ್ದೇಶಿಸಿ ಹೇಳಿದ್ದು) ನಡವಳಿಕೆ ಕಂಡಾಗ ಹುಟ್ಟಿಕೊಂಡ ಜಿಜ್ಞಾಸೆಗಳಿವು. ಇವು
ಜಿಜ್ಞಾಸೆಗಳು ಮಾತ್ರ, ಇವುಗಳಿಗೆ ಉತ್ತರ ಕಂಡುಕೊಳ್ಳಲೋ, ಬದಲಾವಣೆ ತರಲೋ, ಕ್ರಾಂತಿ ಮಾಡಲು
ಹಂಚಿಕೊಂಡದ್ದಲ್ಲ...
1)
“ನೀವು ನಮ್ಮೂರಿಗೆ ಏನೂ ಕೆಲಸ ಮಾಡಿಲ್ಲ, ನಾನು ಈ ಸಲ ಓಟು ಹಾಕಲು
ಬರುವುದಿಲ್ಲ...” ಎಂದು ಅಂಗಲಾಚಿದರೂ ಕೇಳದೆ ಆಟೋ ಮಾಡಿ, ಕಾರು ಕಳ್ಸಿ ನಯವಾದ
ಒತ್ತಡದಿಂದ ಬೂತಿಗೆ ಕರೆದುಕೊಂಡು ಹೋಗುವ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈಗ
ಎಲ್ಲಿದ್ದಾರೆ? ಓಟು ಗೆಲ್ಲಲು ಮನೆ ಮನೆಗೆ ತೆರಳುವ, ಬೂತ್ ಮಟ್ಟದಲ್ಲಿ ಕೆಲಸ ಮಾಡುವ,
ಅನ್ಯ ರಾಜ್ಯಗಳಿಗೂ ತೆರಳಿ ಅಲ್ಲಿನ ಮತದಾರರ ಮನವೊಲಿಸಲು ದುಡಿಯುವ ರಾಜಕೀಯ ಮುಖಂಡರ ಲೆಕ್ಕಾಚಾರ
ಕೋವಿಡ್ ನಿರ್ವಹಣೆಯಲ್ಲಿ ಯಾಕೆ ಬಳಕೆಯಾಗುತ್ತಿಲ್ಲ? ರಾಷ್ಟ್ರೀಯ ನಾಯಕರ ಹೆಸರು ಹೇಳಿ ಮತದಾರರನ್ನು ನಂಬಿಸಿ
ಓಟು ಗಿಟ್ಟಿಸಿಕೊಳ್ಳುವ ಬಹುತೇಕ ಎಲ್ಲ ಪಕ್ಷಗಳ ಮುಖಂಡರು, ರಣತಂತ್ರ ಹೆಣೆಯುವವರ ಪಾಲಿಗೆ ಪ್ರಜೆ
ಅಂದರೆ ಓಟು, ಓಟು, ಓಟು ಮಾತ್ರವಾ? ಕೋವಿಡ್ ನಲ್ಲಿ ಸಂಭವಿಸಿದ
ಸಾವುಗಳು ಕೇವಲ ಸಂಖ್ಯೆಗಳು ಮಾತ್ರವಾ? ಬೂತ್ ಮಟ್ಟದಲ್ಲಿ
ಕಾರ್ಯತಂತ್ರ ಹೆಣೆದು ಮತದಾರರನ್ನು ಬೂತಿಗೆ “ಮಂಗ ಮಾಡಿ”ಯಾದರೂ ಕರೆ ತರುತ್ತೀರಲ್ಲ. ಅದೇ
ತಂತ್ರಗಳನ್ನು ತಕ್ಷಣಕ್ಕೆ ಅಳವಡಿಸಿ ಕೋವಿಡ್ ನಿಯಂತ್ರಣ ಮಾಡಬಹುದಲ್ಲ? ಈಗ ನೀವು ಹಾಗೆ ಮಾಡದಿದ್ದರೆ
ಮತದಾರರೆಲ್ಲ ಸತ್ತು ಮಲಗಿದರೆ ನಾಳೆ ಯಾರನ್ನು ಪುಸಲಾಯಿಸಿ ಬೂತಿಗೆ ಮತ ಹಾಕಲು ಕರೆ ತರುತ್ತೀರಿ? ಲಸಿಕೆ, ಕೋವಿಡ್ ಜಾಗೃತಿ ಕರಪತ್ರ,
ಪಡಿತರ ಆಹಾರ ಇವೆನ್ನೆಲ್ಲ ಬೂತ್ ಮಟ್ಟದಲ್ಲಿ ಮತದಾರರ ಮನೆಗೆ ತಲುಪಿಸಿ ಕಟ್ಟುನಿಟ್ಟಿನ ಲಾಕ್ಡೌನ್
ಯಾಕೆ ಹೇರುವುದಿಲ್ಲ? ಮನೆ ಮನೆಗೆ
ಕಾರ್ಯಕರ್ತರನ್ನು ಕಳುಹಿಸಿ ಹೊರಗಡೆ ಓಡಾಡಬಾರದು ಅಂತ ಯಾಕೆ ನೀವು ಬುದ್ಧಿವಾದ ಹೇಳುವುದಿಲ್ಲ? ಎಂಥದ್ದೇ ಸಂಕಷ್ಟದ ಸಂದರ್ಭದಲ್ಲೂ
ಚುನಾವಣೆ ನಡೆಸಿ ಗೆಲ್ಲುತ್ತೀರಿ. ಹೆಸರು, ಆಸ್ತಿ ಮಾಡುತ್ತೀರಿ. ಮತ ಹಾಕಿದ ಬಡಪಾಯಿ ಮತದಾರ ಈಗ
ಬದುಕು ಉಳಿಸುವ ಆತಂಕದಲ್ಲಿ ಇದ್ದಾನೆ. ಯಾಕೆ ಎಲ್ಲ ರಾಜಕೀಯ ಪಕ್ಷದವರು ಸೇರಿ ಚುನಾವಣಾ
ರಣತಂತ್ರವನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಬಾರದು?
2)
ಸಮಾರಂಭ ಮಾಡಬಾರದು, ಮದುವೆ
ಆಗಬಾರದು, ಆರಾಧನಾ ಕ್ಷೇತ್ರಗಳಿಗೆ ಹೋಗಬಾರದು, ಥಿಯೇಟರುಗಳಿಗೆ ಹೋಗಬಾರದು ಸರಿ. ಆದರೆ ಆರು
ತಿಂಗಳ ಅವಧಿಗೆ ಮುಂದೂಡಲು ಅವಕಾಶ ಇದ್ದರೂ ಚುನಾವಣೆ ಮಾತ್ರ ಗಡದ್ದಾಗಿಯೇ ಅದೇ ಕಾಲಕ್ಕೇ ನಡೆಯಬೇಕು,
ಚುನಾವಣಾ ಸಭೆಗಳೂ ನಡೆಯಬೇಕು. ಸಣ್ಣ ಪುಟ್ಟ ಕಾರಣಗಳಿಗೂ ರಾಜಕೀಯ ಮುಖಂಡರು ಫ್ಲಕ್ಸ್
ಹಿಡಿದುಕೊಂಡು ಪ್ರತಿಭಟನೆ ಮಾಡಬಹುದು. ಅನುಯಾಯಿಗಳ ಜೊತೆ ನಗರದಲ್ಲಿ ಓಡಾಡಬಹುದು. ಅಡ್ಡಿಯಿಲ್ಲ.
ಮಾಸ್ಕ್ ಧರಿಸದೆ ಒಂಟಿಯಾಗಿ ಕಾರಿನಲ್ಲಿ ಹೋಗುವವನಿಗೆ ಫೈನ್ ಬೀಳುತ್ತದೆ, ವೇದಿಕೆಗಳಲ್ಲಿ,
ಸಭೆಗಳಲ್ಲಿ ಮುಖಂಡರು, ಮಂತ್ರಿಗಳು ಮಾಸ್ಕ್ ಧರಿಸದೇ ಇದ್ದರೂ ಅದು ಅಪರಾಧ ಅನ್ನಿಸುವುದಿಲ್ಲ.
ವೈರಸ್ಸಿಗೆ ಜನಸಾಮಾನ್ಯ, ಮಂತ್ರಿ ಎಂಬ ಭೇದವಿಲ್ಲ. ಆದರೂ ನಿಯಮದ ಜಾರಿ ಮಾತ್ರ ಇಬ್ಬರಿಗೂ ಬೇರೆ
ಬೇರೆ. ಇದೇ ಕಾರಣಕ್ಕೆ ಇವತ್ತು ಜನ ಆಕ್ರೋಶಗೊಂಡಿರುವುದು, ರಾಜಕಾರಣಿಗಳ ಬಗ್ಗೆ ರೋಸಿ ಹೋಗಿ
ಬಯ್ಯುತ್ತಿರುವುದು. ಇವರಿಗೆಲ್ಲ ಎಷ್ಟು ಜನಪರ ಕಾಳಜಿ ಇದೆಯಂದರೆ ಚುನಾವಣೆ ಮುಗಿದು
ಮುಖ್ಯಮಂತ್ರಿಗಳಾಗಿ ಪದಗ್ರಹಣ ಆದ ಮರುದಿನ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸುತ್ತಾರೆ.
ಅಷ್ಟು ದಿನ ಜನ ಬೇಕಾಬಿಟ್ಟಿ ಓಡಾಡಿದ್ದು, ಸತ್ತದ್ದು, ಅತ್ತದ್ದು, ಸಾವಿರಾರು ಸಿಬ್ಬಂದಿ ಪ್ರಾಣದ
ಆಸೆ ಬಿಟ್ಟು “ನ್ಯಾಯಯುತ” ಚುನಾವಣೆ ನಡೆಯಲು ದುಡಿದದ್ದು,
ಇವುಗಳಿಗೆಲ್ಲ ಬೆಲೆಯೇ ಇಲ್ಲ.
3)
ನಮ್ಮ ದೇಶದಲ್ಲಿ ಕಡ್ಡಾಯ
ಮಾಡದ ಹೊರತೂ ಯಾರೂ ಕೂಡಾ ನಿಯಮಗಳನ್ನು ಗಂಭೀರವಾಗಿ ಪಾಲಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ
ವಿಚಾರ. ಆದರೂ ನಮ್ಮಲ್ಲಿ ಲಾಕ್ಡೌನ್ ಕಟ್ಟುನಿಟ್ಟು ಜಾರಿಗೆ ಹಿಂದು ಮುಂದು ನೋಡಲಾಗುತ್ತಿದೆ.
ನ್ಯಾಯಾಲಯ, ವಿದೇಶಗಳ ತಜ್ಞರು, ನಮ್ಮದೇ ದೇಶದ, ರಾಜ್ಯದ ತಜ್ಞರು, ವೈದ್ಯರು, ಮಾಧ್ಯಮಗಳು,
ಆಸ್ಪತ್ರೆಯವರು ಎಲ್ಲರೂ ಒಕ್ಕೊರಲಿನಿಂದ ಹೇಳುತ್ತಿದ್ದಾರೆ ಸಂಪೂರ್ಣ ಲಾಕ್ಡೌನ್ ಮಾಡಿ ಅಂತ. ಆದರೆ
ಸರ್ಕಾರ ಯೋಚಿಸುತ್ತಲೇ ಕುಳಿತಿದೆ...!!! ಇನ್ನೇನನ್ನು ಯೋಚಿಸುವುದು? ಜನರ ಮನಃಸ್ಥಿತಿ ಗೊತ್ತು, ಸಡಿಲ
ಬಿಟ್ಟರೆ ಎಷ್ಟು ಉಡಾಫೆಯಿಂದ ಓಡಾಡುತ್ತಾರೆ ಗೊತ್ತು, ಓಡಾಡಿದರೆ ಸೋಂಕು ಎಷ್ಟು ಹರಡುತ್ತದೆ ಅಂತ
ಗೊತ್ತು. ಹರಡಿ ಗಂಭೀರವಾದರೆ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ಲಸಿಕೆಯೂ
ಸ್ಟಾಕ್ ಇಲ್ಲ..., ಸತ್ತರೆ ಸುಡಲು ಸ್ಮಶಾನದಲ್ಲೂ ಪುರುಸೊತ್ತಿಲ್ಲ ಎಲ್ಲವೂ ಗೊತ್ತು... ಕರ್ನಾಟಕದಲ್ಲಿ
ಪ್ರತಿದಿನ ಅರ್ಧ ಲಕ್ಷ ಮಂದಿಗೆ ಸೋಂಕು ತಗಲುತ್ತಿದೆ, 300ರಷ್ಟು ಮಂದಿ ಸಾಯ್ತಾ ಇದ್ದಾರೆ...
ಎರಡನೇ ಅಲೆಯಲ್ಲಿ ಯುವಕರ ಬಲಿ ಹೆಚ್ಚಾಗಿದೆ... ಎಲ್ಲವೂ ಗೊತ್ತು... ಇನ್ನು ಯಾವುದರ ಬಗ್ಗೆ
ಸರ್ಕಾರ ಯೋಚಿಸುವುದು, ಚಿಂತಿಸುವುದು, ಕಾಲಹರಣ ಮಾಡುವುದು ಅರ್ಥ ಆಗ್ತಾ ಇಲ್ಲ!!!
4)
ಕೊರೋನಾ ವಕ್ಕರಿಸಿ ಒಂದೂವರೆ ವರ್ಷ ಆಯ್ತು, ಜನ ಸಾಕಷ್ಟು
ಅನುಭವಿಸಿ ಆಯ್ತು. ಕಾಲ ಕಾಲಕ್ಕೆ ತಜ್ಞರು ಏನೆಲ್ಲ ಎಚ್ಚರಿಸಿದ್ದಾರೋ ಹಾಗೆಯೇ ಅಥವಾ ಅದಕ್ಕಿಂತಲೂ
ಭೀಕರವಾಗಿ ಪರಿಣಾಮಗಳು ಆಗ್ತಾ ಇವೆ. ಆದರೂ ನಮ್ಮನ್ನು ಆಳುವವರು ಜಾರಿಗೆ ತರುತ್ತಿರುವ ನಿಯಮಗಳು,
ಕ್ರಮಗಳು, ನಿರ್ಬಂಧಗಳು ಸಡಿಲ ಸಡಿಲವಾಗಿಯೇ ಕಾಣಿಸುತ್ತಿವೆ. ಇವತ್ತು ಜನತಾಕರ್ಫ್ಯೂ ಹಾಕುವುದು,
ನಾಳೆ ಅವರೇ ಸಡಿಲಿಕೆ ಅವಧಿ ಹೆಚ್ಚಿಸುವುದು, ನಾಡಿದ್ದು ದಿಢೀರನೆ ಮದುವೆ, ಉತ್ಸವ ನಡೆಯುವಂತಿಲ್ಲ
ಎನ್ನುವುದು, ವರ್ಷಾಂತ್ಯಕ್ಕೆ ಪೂರ್ತಿ ಲಾಕ್ಡೌನ್ ಅಂತ ನಿನ್ನೆ ಹೇಳುವುದು, ಇವತ್ತು ಅದು ಹಾಗಲ್ಲ
ಅನ್ನುವುದು, ಜನ ಓಡಾಡಬಾರದು ಅಂತ ಹೇಳುವುದು. ಬೆಳಗ್ಗೆ 6ರಿಂದ 10ರ ವರೆಗೆ ರಸ್ತೆ ಇಡೀ ನಿಮ್ಮದೇ
ಎಂಬ ಹಾಗೆ ವರ್ತಿಸುವುದು. ಜನರಿಗೆ ಅರ್ಥ ಆಗ್ತಿಲ್ಲ, ಯಾವುದು ಸರಿ ಯಾವುದು ತಪ್ಪು? ಕರ್ಫ್ಯೂ ಅಂದರೇನು, ಎಷ್ಟೊತ್ತಿಗೆ
ಓಡಾಡಬಹುದು ಅಂತ. ದಿನಕ್ಕೊಂದು ಥರ ಬದಲಾಗುವ ನಿಯಮಗಳು ಗೊಂದಲಕ್ಕೆ ನೂಕುತ್ತಿವೆ. ಬೆಳಗ್ಗೆ
ಮಾಡಿದ ನಿಯಮ ಸಂಜೆ ಬದಲಾಗ್ತದೆ. ಪತ್ರಿಕೆ ಪ್ರಿಂಟ್ ಆಗಿ ಮರುದಿನ ಮಾರುಕಟ್ಟೆಗೆ ಬರುವ ಹೊತ್ತಿಗೆ
ನಿಯಮವೇ ಸಡಿಲಿಕೆ ಆಗಿ ಆದೇಶ ಬಂದಿರುತ್ತದೆ! ಲಸಿಕೆಗೆ ನೋಂದಣಿ ಮಾಡಿ ಎನ್ನುವುದು, ಆಸ್ಪತ್ರೆಯಲ್ಲಿ
ಲಸಿಕೆ ಲಭ್ಯವಿಲ್ಲ ಅಂತ ಬೋರ್ಡು ಹಾಕುವುದು, ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುವುದು, ಪದೇ ಪದೇ
ಮುಂದೂಡುವುದು, ಶಾಲೆ ಶುರುವಾಗುತ್ತದೆ ಅನ್ನುವುದು, ಮರುದಿನ ಅದನ್ನು ನಿರ್ಧಾರ ಅಲ್ಲ,
ಯೋಚಿಸಲಾಗುತ್ತಿದೆ ಎಂದು ಸ್ಪಷ್ಟೀಕರಣ ಕೊಡುವುದು. ಯಾಕಿಷ್ಟು ಗೊಂದಲ? ನಮ್ಮ ದೇಶದಲ್ಲಿ ನುರಿತ ವಿಜ್ಞಾನಿಗಳಿದ್ದಾರೆ, ಹೆಸರಾಂತ
ವೈದ್ಯರಿದ್ದಾರೆ, ಆಡಳಿತ ಹಾಗೂ ವಿರೋಧ ಪಕ್ಷಗಳಲ್ಲಿ ದಶಕಗಳ ಆಡಳಿತ ಅನುಭವ ಇರುವ
ರಾಜಕಾರಣಿಗಳಿದ್ದಾರೆ. ಯಾಕೆ ಇವರೆಲ್ಲ ರಾಜಕೀಯ, ಲಾಬಿ, ವ್ಯಾವಹಾರಿಕ ದೃಷ್ಟಿಕೋನ, ಅಹಂ ಬಿಟ್ಟು
ಜೊತೆ ಸೇರಿ ಕೆಲಸ ಮಾಡಬಾರದು. ಇಂತಹ ಗೊಂದಲದ ಹೇಳಿಕೆಗಳು, ದಿನಕ್ಕೊಂದು ನೀತಿ, ಇಡೀ ವ್ಯವಸ್ಥೆ
ನಿರ್ವಹಣೆ ಕುರಿತು ಆಗಾಗ ಬದಲಾಗುವ ನಿಲುವುಗಳು, ಜವಾಬ್ದಾರಿಗಳ ಪದೇ ಪದೇ ಹಸ್ತಾಂತರ, ಕೀಳು ಮಟ್ಟದ
ರಾಜಕೀಯ ಹೇಳಿಕೆ, ನಿಂದನೆ, ತಪ್ಪು ನಡೆದಾಗ್ಯೂ ಅದರ ಕೆಟ್ಟ ಸಮರ್ಥನೆ.... ಇವೆಲ್ಲ ಜನರಿಗೆ
ಒಟ್ಟೂ ವ್ಯವಸ್ಥೆ ಮೇಲೆ ಜಿಗುಪ್ಸೆ ಹುಟ್ಟಿಸಿದೆ.. ಇಂತಹ ದುರಂತದ ಸಂದರ್ಭದಲ್ಲೂ ರಾಜಕೀಯ,
ವ್ಯಾವಹಾರಿಕ ದೃಷ್ಟಿಕೋನ, ಲೂಟುವ, ಲಾಭ ಮಾಡುವ ಲೋಭ ಬೇಕಾ?
5)
ಕೊರೋನಾದಿಂದ ಕೆಲಸ
ಹೋಗಿದೆ, ಸಂಬಳ ಕಳೆದುಕೊಂಡಿದ್ದಾರೆ, ಮನೆಯ ಸದಸ್ಯರನ್ನೇ ಕಳೆದುಕೊಂಡಿದ್ದಾರೆ. ಸತ್ತವರಿಗೆ
ಗೌರವಯುತ ಅಂತ್ಯಸಂಸ್ಕಾರ ಮಾಡಲಾಗದೆ ನೊಂದವರಿದ್ದಾರೆ. ಕೊರೋನಾ ತೊಲಗಿದ ಮೇಲೆ ದುಡಿಯಲು ಮನೆಯ
ಯಜಮಾನನನೋ, ಅಮ್ಮನೋ, ಅಪ್ಪನೋ, ಅಣ್ಣನೋ, ತಂಗಿಯೋ ಇನ್ನಿಲ್ಲವಾದ ಪರಿಸ್ಥಿತಿ ಇದೆ. ದಿನಾ ಜನ
ಸಾಯುತ್ತಲೇ ಇದ್ದಾರೆ. ಇದನ್ನೆಲ್ಲ ಸರಿ ಮಾಡುವುದು ಯಾರು? ಈಗ ಆಗಿದ್ದಾಯ್ತು... ಮುಂದೆಯಾದರೂ ರೋಗ
ಹರಡದಂತೆ, ಲೋಪ ಆಗದಂತೆ, ಜನರ ಮನಸ್ಸಿನಲ್ಲಿ ಶಂಕೆಗಳು, ಗೊಂದಲಗಳು ಹುಟ್ಟದಂತ ಒಂದು ಸ್ಪಷ್ಟವಾದ,
ಭರವಸೆ ಮೂಡಿಸುವ ಗಟ್ಟಿ ಧ್ವನಿಯ ನಿರ್ಧಾರಗಳು ಆಳುವವರ ಕಡೆಯಿಂದ ಯಾಕೆ ಹೊರಬೀಳುತ್ತಿಲ್ಲ?
6)
ಅವರಿವರನ್ನು ದೂರುವುದು
ನನ್ನ ಬರಹದ ಉದ್ದೇಶ ಅಲ್ಲ. ಪ್ರತಿಯೊಬ್ಬನಿಂದಲೂ ಕೊರೋನಾ ಹರಡುತ್ತದೆ ಎಂಬ ವಿಚಾರ ಈಗ ಪುಟ್ಟ
ಮಗುವಿಗೂ ಗೊತ್ತಿದೆ. ಆದರೂ ನಮಗೆ ಓಡಾಡುವ ಚಪಲ. ನನಗೆ ಗೊತ್ತು ಲಕ್ಷಾಂತರ ಮಂದಿಗೆ ದಿನದಲ್ಲಿ
ದುಡಿದರೆ ಮಾತ್ರ ಸಂಬಳ, ಸಂಬಳ ಬಂದರೆ ಮಾತ್ರ ಊಟ. ಲಾಕ್ಡೌನ್ ಅವರ ಬದುಕಿಗೆ ಕೊಳ್ಳಿ ಇಡುತ್ತದೆ.
ಆದರೆ ಬೈಕಿನಲ್ಲಿ, ಕಾರುಗಳಲ್ಲಿ ಕರ್ಫೂ ಸಡಿಲಿಕೆ ಎಂಬ ಒಂದೇ ಕಾರಣಕ್ಕೆ ಸುತ್ತುವವರು, ಮಾಸ್ಕ್
ಹಾಕದವರು, ಅಂತರ ಪಾಲಿಸದವರು, ಮದುವೆ, ಮುಂಜಿಗೆ ಹೋಗಿ ಗಡದ್ದಾಗಿ ಉಂಡು, ಇನ್ನು ನಾಲ್ಕೂ ಮಂದಿಗೆ
ಕೊರೋನಾ ಹರಡಿಸುವವರ ಬಗ್ಗೆ ಏನು ಹೇಳಬೇಕು. ನನಗೆ ಕೊರೋನಾ ಬರುವುದಿಲ್ಲ ಎಂಬು ಹುಚ್ಚು ನಂಬಿಕೆ, “ಟಿ.ವಿ.ಯಲ್ಲಿ ಮಾತ್ರ ಕೊರೋನ ಇರುವುದು,
ರಸ್ತೆಯಲ್ಲಿ ಕಾಣ್ತಿಲ್ಲ” ಎಂಬ ಚೀಪ್ ಜೋಕುಗಳು
ಹೇಳುತ್ತಲೇ ನಾವು ನಮಗರಿವಿಲ್ಲದೇ ಕೊರೋನಾವನ್ನು ಹರಡಿಸುತ್ತಲೇ ಇದ್ದೇವೆ. ಇನ್ನಾದರೂ ಈ ಮನಃಸ್ಥಿತಿ
ಬದಲಾಗಬೇಕು. ಇದು ರಾಷ್ಟ್ರೀಯ ಅಲ್ಲ, ಅಂತಾರಾಷ್ಟ್ರೀಯ ದುರಂತ. ಜಗತ್ತಿನ ಯಾವುದೇ ದೇಶಕ್ಕೆ
ಹೋದರೂ ಕೊರೋನಾದಿಂದ ಪಾರಾಗಲು ಅಸಾಧ್ಯ. ಜೀವ ಉಳಿದರೆ ತಾನೆ ನಾಳೆಯ ಬದುಕು. ಜೀವವೇ ಹೊದರೆ? ನಮ್ಮಿಂದ ಬದಲಾವಣೆ ಶುರುವಾಗಬೇಕು.
ಪ್ರತಿಯೊಬ್ಬರೂ ನಾನು ನನ್ನಿಂದ ಇನ್ಯಾರಿಗೂ ಕೊರೋನಾ ಬಾರದ ಹಾಗೆ ಜಾಗ್ರತೆ ಮಾಡುತ್ತೇನೆ ಎಂಬ ಪಣ
ತೊಟ್ಟಿದ್ದರೆ ಈ ಲಾಕ್ಡೌನ್, ಲಾಠಿಯೇಟು, ಬ್ಯಾರಿಕೇಡು, ನಿರ್ಬಂಧ ಯಾವುದೂ ಬೇಕಾಗಿರಲಿಲ್ಲ. ನಮ್ಮ
ಮನಃಸ್ಥಿತಿ ಬದಲಾಗಬೇಕು. ಅಪ್ರಬುದ್ಧ ನಿರ್ಧಾರಗಳು, ಬಾಲಿಶ ನಿಯಮಗಳು ಹಾಗೂ ಲೋಪಗಳ ಕುರಿತು
ಜಾಗ್ರತೆ ವಹಿಸಬೇಕು. ಎಲ್ಲದಕ್ಕಿಂತ ಮಿಗಿಲಾಗಿ ನನ್ನ ಜೀವ, ನನ್ನ ಆರೋಗ್ಯ ನನ್ನ ಕೈಯ್ಯಲ್ಲಿದೆ
ಎಂಬ ಕಹಿ ಸತ್ಯ ಮರೆಯಬಾರದು. ನಮಗೆ ಗೊತ್ತಿಲ್ಲದ್ದರ ಬಗ್ಗೆ ಪುಂಖಾನುಪುಂಖವಾಗಿ ರೈಲು ಬಿಡುವುದು
ಮಹಾ ಅಪರಾಧ. ಸುಳ್ಳು ಸುದ್ದಿಗಳ ಪ್ರಚಾರ ಕೂಡಾ ತಪ್ಪು. ಹಾಗೆಯೇ, ಗೊತ್ತಿರುವ ವಾಸ್ತವಗಳನ್ನು
ಅನುಸರಿಸದೇ ಇರುವುದು ಕೂಡಾ ಅಷ್ಟೇ ದೊಡ್ಡ ಅಪರಾಧ. ನಾವೇ ತಪ್ಪು ಮಾಡಿಕೊಂಡು ಇನ್ನೊಬ್ಬರನ್ನು
ದೂರುವುದರಲ್ಲಿ ಯಾವುದೇ ಅರ್ಥ ಇಲ್ಲ. ದಯವಿಟ್ಟು ಉಡಾಫೆ ಬೇಡ, ಅಜಾಗ್ರತೆ ಬೇಡ. ತಜ್ಞರು,
ಬಲ್ಲವರು ಹೇಳಿದ್ದನ್ನು ಕೇಳೋಣ. ನಮ್ಮಿಂದಾಗಿ ಇತರರ ಬಾಳು ಹಾಳಾಗಬಾರದು, ಉಪಕಾರ ಆಗದಿದ್ದರೂ
ಅಡ್ಡಿಯಿಲ್ಲ, ಉಪದ್ರ ಮಾಡುವವರಾಗುವುದು ಬೇಡ. ಕೊರೋನಾ ಯಾರನ್ನೂ ಬಾಧಿಸಬಾರದು. ನಮ್ಮ ಜಾಗ್ರತೆ
ನಾವು ಮಾಡಿದರೂ ಅದೇ ಈ ಕ್ಷಣಕ್ಕೆ ನಾವು ತೋರಿಸಬಹುದಾದ ರಾಷ್ಟ್ರಭಕ್ತಿ, ಸಮಾಜಸೇವೆ ಅಷ್ಟೆ.
-ಕೃಷ್ಣಮೋಹನ ತಲೆಂಗಳ
(07.05.2021)
No comments:
Post a Comment