ಇದು ವಿಚಿತ್ರ, ಆದರೂ ಸತ್ಯ (ತರ್ಕಕ್ಕೆ ನಿಲುಕದ್ದು!)

ಈ ಕೆಳಗಿನ ಅಂಶಗಳನ್ನು ಯಾರದ್ದೋ ತಪ್ಪು ಹುಡುಕಲೋ, ದುರಂತದ ಸಂದರ್ಭ ಟೀಕಿಸುವ ತೀಟೆಯಿಂದಲೋ, ಗಂಭೀರವಾದ ಸುತ್ತೋಲೆಯನ್ನು ವ್ಯಂಗ್ಯವಾಡುವ ಉದ್ದೇಶದಿಂದ ಬರೆದಿದ್ದಲ್ಲ. ಪದೇ ಪದೇ ಪರಿಷ್ಕೃತವಾಗುವ ಲಾಕ್ಡೌನ್ ಮಾರ್ಗಸೂಚಿ ಜನರಲ್ಲಿ ಗೊಂದಲಗಳ ಗೂಡನ್ನೇ ಸೃಷ್ಟಿಸುತ್ತಿವೆ. ಮಾತ್ರವಲ್ಲ, ಮಾರ್ಗಸೂಚಿಗಳಲ್ಲಿ ಪದೇ ಪದೇ ಅಸಹಜತೆಗಳು ಎದ್ದು ಕಾಣುತ್ತಿವೆ, ಜನರ ತಾಳ್ಮೆ ಕೆಣಕುವಂತಿದೆ.

1)      ಶುಕ್ರವಾರದ ತನಕ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿತ್ತು, ಸೋಮವಾರದಿಂದ ಕಠಿಣ ಸೆಮಿ ಲಾಕ್ಡೌನ್ ಎಂಬ ನಿಯಮ ಜಾರಿಯಲ್ಲಿರುತ್ತದೆ.

2)      ಸೆಮಿ ಲಾಕ್ಡೌನ್ ಜಾರಿಯಲ್ಲಿದ್ದರೂ ಪ್ರತಿದಿನ ಬೆಳಗ್ಗೆ 6ರಿಂದ 9ರ ತನಕ ಹಾಲು, ತರಕಾರಿ, ಹಣ್ಣು, ಮಾಂಸ ಖರೀದಿಗೆ ಅಂಗಡಿಗೆ ಹೋಗಲು ಅವಕಾಶ ಕಲ್ಪಿಸಿದೆ. ಈ ಅವಕಾಶ ಶುಕ್ರವಾರದ ತನಕವೂ ಇತ್ತು. ಈ ಅವಧಿಯಲ್ಲಿ ಅಂಗಡಿಗೇ ಹೋಗುವುದು ಎಂಬುದಕ್ಕೆ ಆಧಾರ ತೋರಿಸಲು ಅಸಾಧ್ಯವಾದ ಕಾರಣ ಈ ವರೆಗಿನ ಬೆಳವಣಿಗೆಯಂತೆ ಜನ ಯಥಾಶಕ್ತಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗುತ್ತಿದ್ದರು. ಈ ಕಠಿಣ ಸೆಮಿ ಲಾಕ್ಡೌನ್ ಅವಧಿಯಲ್ಲಿ ಗೊತ್ತಿಲ್ಲ.

3)      ಬೆಳಗ್ಗೆ 6ರಿಂದ ಸಂಜೆ 6ರ ತನಕ ಹಾಲು ಮಾರಾಟದ ಬೂತುಗಳು, ಹಾಪ್ ಕಾಮ್ಸ್, ತಳ್ಳು ಗಾಡಿಯಲ್ಲಿ ತರಕಾರಿ ಮಾರಾಟ ಸಕ್ರಿಯವಾಗಿರುತ್ತವೆ. ನೆನಪಿಡಿ-ಅವಶ್ಯಕ ವಸ್ತು ಖರೀದಿಯ ಅವಧಿಯಾದ ಬೆಳಗ್ಗೆ 9ರ ಬಳಿಕ ರಸ್ತೆಗೆ ಇಳಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬಹುದು, ದಂಡ ವಿಧಿಸಬಹುದು, ಲಾಠಿ ರುಚಿ ತೋರಿಸಬಹುದು. ಆದರೆ ಹಾಲಿನ ಬೂತು ಸಂಜೆ 6ರ ತನಕವೂ ತೆರೆದಿರುತ್ತದೆ.

4)      ಹೊಟೇಲು, ಬಾರ್, ರೆಸ್ಟೋರೆಂಟುಗಳು ಬಂದ್. ಆದರೆ ಪಾರ್ಸೆಲ್ಲಿಗೆ ಅವಕಾಶ ಇದೆ, ಆದರೆ ಗ್ರಾಹಕರು ಹೋಗುವಂತಿಲ್ಲ!! ಫುಡ್ ಡೆಲಿವರಿ ಸಂಸ್ಥೆಯವರು ಪಾರ್ಸೆಲ್ ತರಬಹುದು

5)      ಯಥಾಪ್ರಕಾರ ಮದ್ಯಪ್ರಿಯರ ಗಮನಕ್ಕೆ-ಬೆಳಗ್ಗೆ 9ರ ತನಕ ಬಾರುಗಳಲ್ಲಿ ಪಾರ್ಸೆಲ್ ಸೇವೆ ಲಭ್ಯ ಇರುತ್ತದೆ. ಮದ್ಯವು ಫುಡ್ ಡೆಲಿವರಿ ವಿಭಾಗದಲ್ಲಿ ಬಾರದ ಕಾರಣ ಮದ್ಯಪ್ರಿಯ ವರ್ಗಕ್ಕೆ ಸೇರಿದವರು ಸ್ವತಃ ಹೋಗಿ ಪಾರ್ಸೆಲ್ ತರಬಹುದು!!!

6)      ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಮಂಗಳೂರಿನಲ್ಲಿ ಅಧಿಕೃತವಾಗಿ ಪ್ರಕಟಿಸಿದ ಪ್ರಕಾರ ಮೇ 15ರ ಬಳಿಕ ದ.ಕ.ಜಿಲ್ಲೆಯಲ್ಲಿ ಯಾರೂ ಮದುವೆ ಸಮಾರಂಭ ಹಮ್ಮಿಕೊಳ್ಳುವಂತಿಲ್ಲ. ಆದರೆ, ಅದೇ ಸರ್ಕಾರದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಧಿಕೃತವಾಗಿ ಶುಕ್ರವಾರ ಘೋಷಿಸಿದಂತೆ ರಾಜ್ಯಾದ್ಯಂತ ಜನ ಸೋಮವಾರದಿಂದ 50 ಮಂದಿಯ ಗರಿಷ್ಠ ಉಪಸ್ಥಿತಿಯ ಮಿತಿಯಲ್ಲಿ ವಿವಾಹ ಸಮಾರಂಭ ಹಮ್ಮಿಕೊಳ್ಳಬಹುದು!

7)      ಅಂಗಡಿಗಳಿಂದ ಸಾಮಾನು ಖರೀದಿಗೆ ವಾಹನ ಕೊಂಡುಹೋಗಬೇಡಿ, ನಡೆದುಕೊಂಡೇ ಹೋಗಿ. ಇದು ಹೊಸ ನಿಯಮ. ಕಾನೂನು ಗಾಳಿಗೆ ತೂರುವವರಿಂದಾಗಿ, ದುರುಪಯೋಗ ಮಾಡುವವರಿಂದಾಗಿ ವೃದ್ಧರು, ಅಸಹಾಯಕರು ಕೂಡಾ ವಾಹನದಲ್ಲಿ ಅಂಗಡಿಗೆ ಹೋಗದ ಹಾಗೆ ಆಯಿತು!

8)      ಕಳೆದ ಸಲದ ಹಾಗೆ ಈ ಬಾರಿ ಕೊರೋನಾ ಪಾಸ್ ಯಾರಿಗೂ ನೀಡಲಾಗುವುದಿಲ್ಲ ಎಂದು ಮಂಗಳೂರಿನಲ್ಲಿ ಹೇಳಲಾಗಿದೆ. ವೈದ್ಯಕೀಯ ಅವಶ್ಯಕತೆಗಳ ಹೊರತಾಗಿ ತೀರಾ ಅತ್ಯಗತ್ಯವಾಗಿ ಹೊರ ಜಿಲ್ಲೆಗೆ, ಹೊರ ರಾಜ್ಯಕ್ಕೆ ಹೋಗಲೇಬೇಕಾದವರು ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾರ್ಗಸೂಚಿಯಲ್ಲಿ ಉತ್ತರ ಇದ್ದ ಹಾಗಿಲ್ಲ (ಇದ್ದದ್ದು ಕಂಡರೆ ತಿಳಿಸಿ)

9)      ಮನೆ ಸಮೀಪದಿಂದ ಅಗತ್ಯ ವಸ್ತು ಖರೀದಿಸಿ ಎಂದರೆ ಎಷ್ಟು ಸಮೀಪ, ಅದರ ವ್ಯಾಪ್ತಿ ಏನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ನಾಳೆ ಅದರಲ್ಲೂ ಗೊಂದಲ ಮೂಡಬಹುದು.

10)   ಕೊರೋನಾ ಲಸಿಕೆ ಹಾಕಿಸುವವರು (ಅದೂ ಸ್ಟಾಕ್ ಇಲ್ಲ) ಇಡೀ ದಿನ ಆರೋಗ್ಯ ಕೇಂದ್ರಕ್ಕೆ ಹೋಗಬಹುದು.  ಅಗತ್ಯ ಸೇವೆಯ ಸಿಬ್ಬಂದಿ ತಮ್ಮ ಕಂಪನಿಯ ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಆದರೆ ಬ್ಯಾರಿಕೇಡ್ ಹಾಕಿ ಕೂರುವ ಪೊಲೀಸರು ಕೆಲವು ಸಂದರ್ಭ ಅಗತ್ಯ ಸೇವೆಯ ಸಿಬ್ಬಂದಿಯ ಐಡಿ ಕಾರ್ಡೂ ಸಾಕಾಗುವುದಿಲ್ಲ ಎಂದು ವಾಹನ ಮುಟ್ಟುಗೋಲು ಹಾಕಿದ ಪ್ರಕರಣಗಳೂ ನಡೆದಿವೆ.

 

ಇಷ್ಟೆಲ್ಲ ಆಗಿ ಈ ನಿಯಮಗಳಿಗೆ ಶರತ್ತುಗಳು ಅನ್ವಯ, ಯಾವುದೇ ಸಂದರ್ಭ ಸಡಿಲಿಕೆ, ರಿಯಾಯಿತಿ ಪ್ರತ್ಯಕ್ಷ ಆಗಬಹುದು.

ಮತ್ತೊಂದು ಸಂಗತಿ: ಶುಕ್ರವಾರದ ತನಕ ಜಾರಿಯಲ್ಲಿದ್ದ ಜನತಾ ಕರ್ಫ್ಯೂ ಹಾಗೂ ಸೋಮವಾರದಿಂದ ಜಾರಿಯಾಗುವ ಸೆಮಿ ಲಾಕ್ಡೌನ್ ನಡುವಿನ 10 ವ್ಯತ್ಯಾಸಗಳನ್ನು ಗುರುತಿಸಿ ಎಂಬ 10 ಮಾರ್ಕಿನ ಪ್ರಶ್ನೆ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರಲಿದೆ ಎಂಬ ಮಾಹಿತಿ ಸುಳ್ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.!

-ಕೃಷ್ಣಮೋಹನ (08.05.2021)

No comments: