ಮಂಜು ಕಾಣುವುದಲ್ಲ, ಕಾಡುವುದು...!

 

ಯಕ್ಷಗಾನ ಬಯಲಾಟಕ್ಕೆ ಹೋಗುವಾಗ ಗಮನಿಸಿದ್ದೀರ... ನೀವು ಮೈದಾನದಾಚೆ ಇಟ್ಟು ಹೋದ ಬೈಕು ಬೆಳಗ್ಗಿನ ಜಾವ ಆಟ ಮುಗಿಸಿ ಬರುವಾಗ ಸಂಪೂರ್ಣ ತೋಯ್ದು ಹೋಗಿರುತ್ತದೆ. ಮಿರರು, ಹೆಡ್ಲೈಟು, ಹ್ಯಾಂಡ್ಲಿನಲ್ಲಿ ಇಬ್ಬನಿ ನೀರು ತೊಟ್ಟಿಕ್ಕುತ್ತಾ ಇರುತ್ತದೆ. ಸೀಟು ಪೂರ್ತಿ ಚಂಡಿ....!




ಹಾಗಾದರೆ ಇಷ್ಟೂ ಹೊತ್ತು ಇಷ್ಟು ಗಾಢವಾದ ಮಂಜಿನಡಿ ಕುಳಿತು ನಾನು ಯಕ್ಷಗಾನ ನೋಡಿದ್ದ ಅಂತ ಅಚ್ಚರಿಪಟ್ಟು ತಲೆ ಮೇಲೆ ಕೈಯಾಡಿಸಿದರೆ ಕೂದಲಿಡೀ ಎಣ್ಣೆ ಹಚ್ಚಿದಂತೆ ಒದ್ದೆಯಾಗಿರುವುದು ನಿಮ್ಮ ಕರ ಕಮಲಕ್ಕೆ ತಿಳಿದುಬರುತ್ತದೆ. ಎಲ್ಲಿಂದ ಆವರಿಸುತ್ತದೋ ಗೊತ್ತಿಲ್ಲ, ತಡರಾತ್ರಿ ಬಳಿಕ ಈ ನವೆಂಬರ್, ಡಿಸೆಂಬರ್ ಗಳಲ್ಲಿ ಸದ್ದಿಲ್ಲದೆ ಬಂದು ಎಲ್ಲರನ್ನು ಒದ್ದೆಯಾಗಿಸುವ ಮಂಜು ಅಥವಾ ಫಾಗ್ ಸುದ್ದಿಯಾಗುವುದು ಬೆಳಗ್ಗಿನ ಸೂರ್ಯ ಇಣುಕಲು ಶುರುವಾದ ಮೇಲೆಯೇ...!

ಈ ಮಂಜು ಅಥವಾ ನಮ್ಮ ತುಳುವಿನಲ್ಲಿ ಹೇಳುವ ಮೈಂದ್... ಬಹುಶಃ ಆತ್ಮದ ಹಾಗೆ. ಅದಕ್ಕೆ ತನ್ನ ಅಸ್ತಿತ್ವ ತೋರಿಸಲು ರೂಪ, ಗಾತ್ರ, ಆಕಾರ ಇಲ್ಲವಾಂತ. ಬೆಳ್ಳಂಬೆಳಗ್ಗೆ ನಿಲ್ಲಿಸಿದ ವಾಹನದ ಮೇಲೆ, ಗಿಡಗಳ ಎಲೆಗಳ ಮೇಲೆ, ತೊನಾದಾಡುವ ಪಾರಿಜಾತ, ದಾಸವಾಳ, ಗುಲಾಬಿಗಳ ಪಕಳೆಗಳ, ಕುಸುಮಗಳ ತುತ್ತತುದ್ದಿಯಲ್ಲಿ ಜಾರುವ ಸ್ಥಿತಿಯಲ್ಲಿ ಪೋಣಿಸಿದ ಹಾಗೆ ನಿಂತಿರುತ್ತದೆ. ನೋಡುತ್ತಿರುವಂತೆಯೇ, ಸೂರ್ಯ ಆಚೆಗೆ ಬಂದು ಸ್ವಲ್ಪವೇ ಹೊತ್ತಿನಲ್ಲಿ ಅಲ್ಲೇನೂ ನಡೆದೇ ಇಲ್ಲ ಎಂಬ ಹಾಗೆ ಕರಗಿ ನೀರಾಗಿ, ತನ್ನ ಕುರುಹನ್ನೇನೂ ಉಳಿಸದೆ ನಾಪತ್ತೆಯಾಗುತ್ತದೆ ಜಾಣ ಕಳ್ಳನ ಹಾಗೆ!

ಈ ಚಳಿಗಾಲದವೆಂಬೋ ಚಂದದ ಕಾಲದಲ್ಲಿ ತಡರಾತ್ರಿ ನೀವು ನಿರ್ಜನ ಬೀದಿಗಳಲ್ಲಿ ಸಂಚರಿಸಿ ನೋಡಬೇಕು. ನಸು ಹಳದಿಯ ಬೀದಿ ದೀಪದಿಂದ ಮಂದವಾಗಿ ಹೊರಸೂಸುವ ಬೆಳಕಿನ ಸುತ್ತ ಮಂಜಿನ ವರ್ತುಲ ಸ್ಪಷ್ಟವಾಗಿ ಆವರಿಸಿದ್ದು ಕಾಣಬಹುದು. ದೀಪದ ಒಂದು ಪಾಯಿಂಟು ಮಾತ್ರ ನೇರವಾಗಿ ನೆಲವನ್ನು ತಲುಪಿತ್ತದೆ, ಅದರ ಕಿರಣಗಳು ನೆಲ ತಲುಪದಷ್ಟು ಗಾಢವಾಗಿ ಮಂಜಿನ ಪದರಗಳು ಒಳ್ಳೆ ಮೋಡದ ಹಾಗೆ ಕಾಡುತ್ತಿರುತ್ತದೆ. ಅಷ್ಟುದ್ದದ ರಸ್ತೆಯಂಚಿನ ವರೆಗೂ ಮಂಜು ಒಳ್ಳೆ ಬೆಣ್ಣೆ ಸವರಿದ ಹಾಗಿ ಅಂಟಿಕೊಂಡಿದ್ದು, ನಾಲ್ಕು ಮೀಟರಿನಾಚೆಗೆ ಎಂಥದ್ದೂ ಕಾಣದ ಹಾಗೆ ಸೀನು ಸೃಷ್ಟಿ ಮಾಡಿರುತ್ತದೆ!

ಗಾಢ ಮಳೆಯ ಹಾಗೆ ಈ ಮಂಜಿನಲ್ಲೂ ಸ್ವಲ್ಪ ಸ್ವಲ್ಪವೇ ಮಾರ್ಗ ನೋಡಿಕೊಂಡು ಬೈಕಿನಲ್ಲಿ ಹೋಗುವುದು ಸಾ ಚಂದ ಅಲಾ....?

ನಿರ್ಜನ ರಸ್ತೆ ಇರಲಿ, ಏರುಮಾರ್ಗದ ಘಾಟ್ ಇರಲಿ, ನೂರಾರು ಜನ ಕುಳಿತಿರುವ ಬಯಲಾಟದ ಮೈದಾನವೇ ಇರಲಿ, ಮನೆ ಎದುರಿನ ಪುಟ್ಟ ಹೂತೋಟವೇ ಇರಲಿ ಚಳಿಗಾಲದ ಮಂಜು ಅಲ್ಲೊಂದು ಪುಟ್ಟ ಏಕಾಂತ, ಸಣ್ಣದೊಂದು ಬೆಳಕು ಬೀರಿದರೆ ವರ್ತುಲಗಳನ್ನೇ ಸೃಷ್ಟಿಸಬಲ್ಲ ಪದರಗಳ ಭ್ರಾಮಕ ಲೋಕ ಉಂಟು ಮಾಡಿರುತ್ತದೆ.

ನಿಮಗೆ ಮಂಜಿನ ಅಪ್ಪಟ ಫೀಲ್ ಸಿಕ್ಕಬೇಕಾದರೆ ಹುಲ್ಲಿನ ಹಾಸು ತುಂಬಿರುವ ಗದ್ದೆ ಬದುಗಳಲ್ಲಿ, ನಿಮ್ಮ ತೋಟದ ಕಣಿಗಳ ನಡುವಿನ ಹಸಿರು ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಚಪ್ಪಲಿ ಹಾಕದೆ ಬರಿಗಾಲಿನಲ್ಲಿ ನಡೆಯಬೇಕು. ನೀರೇ ಇಂಗದಷ್ಟು ಇಂಟರ್ ಲಾಕು, ಸಿಮೆಂಟ್ ಹಾಕಿ ಅಚ್ಚುಕಟ್ಟಾಗಿ ಚಪ್ಪಲಿ ಧರಿಸಿಯೇ ಜಗಲಿಯಿಂದ ಇಳಿಯುವ ನಮಗೆಲ್ಲ ಈಗೀಗ ಮಂಜಿನ ದಾರಿಯಲ್ಲಿ ಬರಿಗಾಲಿನಲ್ಲಿ ನಡೆಯುವ ಖುಷಿಯೇ ತಪ್ಪಿ ಹೋಗಿದೆ ಅಂತ ಅನ್ನಿಸ್ತಾ ಇದೆ. ಏನಂತೀರಿ?

ದೇಹಕ್ಕೂ, ಪ್ರಕೃತಿಗೂ ಡೈರೆಕ್ಟ್ ಕಾಂಟಾಕ್ಟ್ ಕಲ್ಪಿಸಿ ಶರೀರವನ್ನು ನಡುಗಿಸುವ, ತಂಪಾಗಿಸುವ ಮಂಜು, ಮಂಜಿನ ಹಾನಿ, ಬೀಸಿ ಬರುವ ಮೋಡಗಳ ದಂಡು ಮತ್ತು ಗಿಡಗಳ ತುದಿಗಳಲ್ಲಿ ಸಾಲಾಗಿ ಗಪ್ಪನೆ ಕುಳಿತಿರುವ ಬೆಳ್ಳಿಯ ಗುಂಡುಗಳ ನಡುವೆ ಮಾತೇ ಇಲ್ಲದೆ ನಡೆಯುವುದೇ ಸುಖ. ತೆಂಗಿನ ಮಡಲಿನಿಂದ ಕೆಳಗಿನ ಬಾಳೆ ಎಲೆಗೆ, ಅಲ್ಲಿಂದ ಜಾರಿ ಪುಟ್ಟ ನಾಚಿಕೆ ಮುಳ್ಳಿನ ಎಲೆಗಳ ಮೇಲೆ ಕರಗಿದ ಮಂಜು ಟಪ್... ಟಪ್. ಅಂತ ಬೀಳುವ ಸದ್ದು ನಿಶ್ಯಬ್ಧದ ಅನುಭೂತಿಯಲ್ಲಿ ಮಾತ್ರ ಕೇಳಿಸಬಲ್ಲುದು. ಮಂಜು ಮಳೆಯ ಹಾಗಲ್ಲ. ಎಲ್ಲಿಂದ ಬರುತ್ತದೆ, ಮತ್ತೆಲ್ಲಿಗೆ ಹೋಗುತ್ತದೆ, ಯಾವಾಗ ಗಾಢವಾಗಿರುತ್ತದೆ, ಮತ್ಯಾವಾಗ ಇರುವುದೇ ಇಲ್ಲ ಅಂತ ಸೂಚನೆ ಕೊಡುವುದೇ ಇಲ್ಲ.... ಇವತ್ತು ತುಂಬ ಇದ್ದರೂ, ನಾಳೆ ಇಲ್ಲದೆಯೂ ಹೋದೀತು... ಬೆಳಗ್ಗೆದ್ದ ಕೂಡಲೇ ತೋಟದತ್ತ ಕಣ್ಣು ಹಾಯಿಸಿದರೆ, ತಡರಾತ್ರಿ ಯಕ್ಷಗಾನ ಮುಗಿಸಿ ಒಬ್ಬರೇ ಬರುವಾಗ ಮಾರ್ಗದ ಪಕ್ಕದ ಹೈಮಾಸ್ಟ್ ದೀಪದ ಪ್ರಜ್ವಲಿಸುವ ಬೆಳಕಿನಡಿ ಮೋಡ ತೇಲುತ್ತಿದ್ದರೆ ಅಲ್ಲೊಂದು ಮಂಜಿನ ಕಹಾನಿ ಸೃಷ್ಟಿಯಾಗುತ್ತಿದೆ ಅಂತಲೇ ಅರ್ಥ!

-ಕೃಷ್ಣಮೋಹನ ತಲೆಂಗಳ (13.11.2022)

1 comment:

Smitha Ballal said...

ನಿಮ್ಮ ಮಂಜಿನ ಬಗೆಗಿನ ಸುಂದರ ವರ್ಣನೆ ನಾವೂ ಚಿಕ್ಕಂದಿನಲ್ಲಿ ಅಜ್ಜನೊಂದಿಗೆ ಹೋಗಿ ಆಟ ನೋಡಿ ಬೆಳಿಗ್ಗೆ ವಾಪಸಾಗುವಾಗಿನ ದಿನಗಳ ನೆನಪುಗಳನ್ನು ಹಸಿಯಾಗಿಸಿತು.ಬರಹ ಹಾಗೂ ಅದಕ್ಕೆ ಪೂರಕವಾಗಿ ಕ್ಲಿಕ್ಕಿಸಿದ ಚಿತ್ರಗಳೂ ಬಹು ಸುಂದರ.ನಿಮ್ಮ ಬರವಣಿಗೆಯ ಶೈಲಿ ಅಧ್ಭುತ.ಧನ್ಯವಾದಗಳು