ಸಾವಿನಲ್ಲಿ ತರ್ಕ ಹುಡುಕುವ ನಾವು... ಸ್ಮಶಾನ ವೈರಾಗ್ಯ ತರುವ ನೋವೂ...!
ಮೊಬೈಲಿನಲ್ಲಾಗಲೀ,
ಕಂಪ್ಯೂಟರಿನಲ್ಲಾಗಲೀ, ಕಾರು, ಬೈಕಿನಲ್ಲಾಗಲಿ, ಬ್ಯಾಟರಿ ಲೋ ಆದಾಗ, ಪೆಟ್ರೋಲ್ ಖಾಲಿ ಆಗುತ್ತಾ
ಬಂದಾಗ, ಚಾರ್ಜ್ ಮುಗಿಯುತ್ತಾ ಬಂದಾಗ ಅಥವಾ ಎಂಜಿನಿನಲ್ಲಿ ಏನೋ ಅಪಶೃತಿ ಕಾಣಿಸಿದಾಗ ನಾನಾ
ಇಂಡಿಕೇಟರುಗಳು ಮೂಡುತ್ತವೆ. ಈ ಪೆಟ್ರೋಲಿನಲ್ಲಿ ಇಷ್ಟೇ
ದೂರ ಹೋಗಲು ಸಾಧ್ಯ ಅಂತ ಕಾರಿನ ಡಿಸ್ಪ್ಲೇ ಬೋರ್ಡ್
ಹೇಳುತ್ತದೆ, ಬೀಪಿಂಗ್ ಸೌಂಡ್ ಬರುತ್ತದೆ. ಮೊಬಿಲನಲ್ಲಿ ಬ್ಯಾಟರಿ ಲೋ ಆದಾಗ ಕೆಲವು ಆಪ್ ಗಳನ್ನು
ಅನ್ ಇನ್ ಸ್ಟಾಲ್ ಮಾಡಿ ಅಂತ ಸೂಚಿಸುತ್ತದೆ ಅಲ್ವ?
ಅದೇ ಬದುಕಿನ ವಿಚಾರ ಬಂದಾಗ
ನಿನ್ನ ಆಯುಷ್ಯ ಮುಗಿಯುತ್ತಾ ಬಂದಿದೆ, ನೀನು ಇದೇ ಥರ ಬದುಕಿದರೆ ನಿನ್ನ ಆಯುಷ್ಯ ಇಷ್ಟೇ... ಈ ಥರ
ಬದುಕಿದರೆ ಇಂತಿಷ್ಟು ವರ್ಷ ಬದುಕಬಹುದು ಅಂತ ಯಾವ ಲ್ಯಾಬ್ ರಿಪೋರ್ಟ್ ಸಹ ಹೇಳುವುದಿಲ್ಲ. ಯಾವ
ವೈದ್ಯರಿಗೂ ನಿಖರವಾಗಿ ಹೇಳಲು ಆಗುವುದಿಲ್ಲ. ವೈದ್ಯರೇ ಕೈಬಿಟ್ಟ ಕೇಸುಗಳು ವರ್ಷಾನುಗಟ್ಟಲೆ
ಬದುಕಿದ ಹಾಗೂ ವೈದ್ಯರೇ ಚಿಕಿತ್ಸೆ ನೀಡಿದವರು ಮಾರನೇ ದಿನವೇ ಲೋಕ ತ್ಯಜಸಿದ ಪ್ರಕರಣಗಳನ್ನು
ಸಾಕಷ್ಟು ಕಂಡಿದ್ದೇವೆ.
1) ಅವರಿಗೆ ವಯಸ್ಸಾಯ್ತಂತೆ, ಆದರೆ
ಹುಶಾರಿದ್ರಂತೆ, ಮುನ್ನಾದಿನ ಒಂದು ಸಮಾರಂಭಕ್ಕೆ ಹೋಗಿದ್ರಂತೆ, ಮರುದಿನ ಮನೆಯಲ್ಲಿ ಕುಳಿತಲ್ಲೇ
ಸ್ವಲ್ಪ ಆಯಾಸ ಆಗ್ತಿದೆ ಅಂತ ಹೇಳ್ತಾ ಹೋದ್ರಂತೆ...
2) ಅವನಿಗೆ ಒಂದು ವಾರದಿಂದ ಎಡದ ಭುಜ
ನೋಯ್ತಾ ಇತ್ತಂತೆ, ಎಣ್ಣೆ ಹಚ್ಚಿ ಮಾಲಿಶ್ ಮಾಡಿದ್ನಂತೆ, ಡಾಕ್ಟ್ರ ಹತ್ರ ಹೋಗಲು
ಪುರ್ಸೊತ್ತಿರ್ಲಿಲ್ಲಂತೆ. ನಾಳೆ ಡಾಕ್ಟರ್ ಹತ್ರ ಹೋಗುವ ಪ್ಲಾನ್ ಇತ್ತಂತೆ, ಇವತ್ತು ಸಂಜೆ ಮನೆಯ
ಅಂಗಳದಲ್ಲಿ ಕುಸಿದವನಿಗೆ ಯಾರಿಗೂ ಕಾಲ್ ಮಾಡುವಷ್ಟೂ ಟೈಂ ಸಿಗ್ಲಿಲ್ಲಂತೆ... ಸ್ಪಾಟ್ ಅಂತೆ...
3) ಅವ ಯಾರಿಗೂ ಉಪದ್ರ ಮಾಡಿದವನಲ್ಲ,
ಯಾರಿಗೂ ಬೇಕೂಂತ ಸಾಲ ಹಿಡಿಸಿದವನಲ್ಲ, ಯಾವ ದುಶ್ಚಟಗಳೂ ಇಲ್ಲ. ಒಂದಷ್ಟು ಮಂದಿಗೆ ಉಪಕಾರ
ಮಾಡಿದವನೇ... ಆದರೆ ಏಕಾಏಕಿ ಏನಾಯ್ತೋ ಗೊತ್ತಿಲ್ಲ. ಮನೆ ಸಮೀಪದ ಮರದಲ್ಲಿ ಅವನ ದೇಹ ನೇತಾಡಿದ
ಸ್ಥಿತಿಯಲ್ಲಿ ಪತ್ತೆ ಆಯ್ತಂತೆ, ನಂಬುವುದಕ್ಕೇ ಆಗುವುದಿಲ್ಲ. ಅಂಥ ಕಷ್ಟ ಅವನಿಗೇನಿತ್ತೋ
ಗೊತ್ತಿಲ್ಲ...
.... ಇಂತ ಎಷ್ಟು
ಉದಾಹರಣೆಗಳು ಬೇಕು ಹೇಳಿ. ಇದು ನಾನು ಕೊಡಬೇಕಾಗಿಲ್ಲ. ನಿತ್ಯ ಎಂಬಂತೆ ಅವರವರ ವಲಯಗಳಲ್ಲಿ
ಕೇಳುತ್ತಲೇ ಇರುವ ಸಾವಿನ ಜೀವಂತ ಉದಾಹರಣೆಗಳು. ಸಾವು ತರ್ಕಕ್ಕೆ ನಿಲುಕದ್ದು ನಿಜ. ಹಾಗಂತ ಯಾರು,
ಯಾವಾಗ ಇಲ್ಲವಾಗ್ತಾರೆ ಎಂಬುದು ಅನೂಹ್ಯ ಮಾತ್ರವಲ್ಲ ಅದು ಲೆಕ್ಕಕ್ಕೆ ಸಿಕ್ಕದೆ ಸುಡು
ಬಿಸಿಲಿನಲ್ಲಿ ಆವರಿಸುವ ಸುಳಿ ಗಾಳಿಯ ಹಾಗೆ. ಆ ಸುಳಿಗಾಳಿ ಹೊತ್ತು ತರುವ ಧೂಳಿನ ಪರದೆ ಹಿಂದೆ
ಮತ್ತೆಂತದ್ದೂ ಕಾಣುವುದಿಲ್ಲ. ಸಾವಿನ ಸುದ್ದಿಗಳೂ ಹಾಗೆ... ಅವರೆಲ್ಲ ಇಲ್ಲವಾದ ಮೇಲೆ ಅವರ
ಸಾವಿಗೆ ಕಾರಣ ಹುಡುಕುವುದು, ಅವರ ಮನಃಸ್ಥಿತಿ ಬಗ್ಗೆ ಯೋಚನೆ ಮಾಡುವುದು, ಅವರ ಕೊನೆಯ ಮಾತುಗಳಿಗೆ
ಅರ್ಥ ಕಲ್ಪಿಸುವುದೆಲ್ಲ ಆವರಿಸಿದ ಧೂಳಿನ ಹಿಂದಿನ ಚಿತ್ರಗಳ ಹಾಗೆ ಮಸುಕು ಮಸುಕು ಅಷ್ಟೇ...
ಅದರಲ್ಲಿ ಹೆಚ್ಚಿನ ತರ್ಕಗಳನ್ನು ಹುಡುಕಲು, ಹುಡುಕಿದ ತರ್ಕಗಳಿಗೊಂದು ರೂಪ ಕೊಟ್ಟು ಮತ್ತೊಂದು
ಸಾವನ್ನು ತಡೆಯುವುದು ಅಥವಾ ಸಾವನ್ನು ಕಲ್ಪಿಸುವುದು, ಉಹಿಸುವುದಕ್ಕೆ ಆಗುವುದಿಲ್ಲ ಅಲ್ವ...
ಅವರು ಕೂಡ್ಲೇ
ಡಾಕ್ಟ್ರನ್ನು ಕಂಡ್ರೆ ಬದುಕಿದ್ರೋ ಏನೋ. ಅವರು
ಸ್ಪೆಷಲಿಸ್ಟ್ ಹತ್ರ ಹೋಗಬೇಕಿತ್ತು, ಪಾಪ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾರ
ಹತ್ರವಾದರೂ ಮಾತನಾಡಬೇಕಿತ್ತು, ಅವರ ಮನಸ್ಸಿನ ತುಮುಲಗಳನ್ನು ಹಂಚಿಕೊಳ್ಳಬೇಕಿತ್ತು...
ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡಿ ಬೀಳ್ತಾ ಇದ್ರಂತೆ, ಯಾರೂ ಅವರಿಗೆ ಕುಡೀಬಾರ್ದು ಅಂತ ಹೇಳ್ಲಿಲ್ವ? ಅವರು ಆರೋಗ್ಯದ ಬಗ್ಗೆ
ಜಾಗ್ರತೆ ಮಾಡಬೇಕಿತ್ತು ಎಂದೆಲ್ಲ ಸತ್ತವರ ಬಗ್ಗೆ ಮಮ್ಮಲ ಮರುಗುತ್ತೇವೆ. ನಮಗೆ ತೋಚಿದ
ಪರಿಹಾರಗಳನ್ನು ಸೂಚಿಸುತ್ತೇವೆ. ಅದು ನಮಗರಿವಿಲ್ಲದೇ... ನಾಳೆಯ ನಮ್ಮ ಪರಿಸ್ಥಿತಿಯನ್ನು
ಕಲ್ಪಿಸಿ ನಮಗೆ ನಾವೇ ಹೇಳಿಕೊಳ್ಳುವ ಸಾಂತ್ವನ ಅಥವಾ ಪೂರ್ವತಯಾರಿ ಇದ್ದರೂ ಇರಬಹುದು!
ಇಲ್ಲದಿದ್ದರೆ ಸತ್ತವರ
ಅಥವಾ ಸಾವಿಗೆ ಪೂರ್ವದಲ್ಲಿ ಸಾಯುತ್ತಿರುವವ ಮನಸ್ಸು ಹೇಗಿತ್ತು... ಎಂಬುದು ನಮಗೆ
ತಿಳಿಯುವುದಾದರೂ ಹೇಗೆ...? ಸತ್ತ ಮೇಲಲ್ವ ಅವರಿಲ್ಲ ಅಂತ
ತಿಳಿಯುವುದು. ಹಾಗಿದ್ದ ಮೇಲೆ ಅವರಿನ್ನು ಮತ್ತೆ ಬರುವುದಿಲ್ಲ ಎಂಬುದು ಗೊತ್ತಾದ ಬಳಿಕ ಆ
ನಿರ್ದಿಷ್ಟ ವ್ಯಕ್ತಿಯ ಸಾವಿನ ಪೋಸ್ಟ್ ಮಾರ್ಟಮ್ಮನ್ನು ನಾವೆಷ್ಟೇ ಮನಸ್ಸಿನಲ್ಲಿ ಮಾಡಿದರೂ ಆ
ಸಾವನ್ನು UNDO ಮಾಡಲು ಆಗುವುದೇ ಇಲ್ಲ.
ಬದುಕಿಗೆ ಕಂಟ್ರೋಲ್ Z ಎಂಬ ಬಟನ್ನೇ ಇಲ್ಲ. ಯಾವ
ಎಐ, ಯಾವ 5ಜಿ, ಯಾವ ಪವಾಡಗಳಿಗೆ ಸಾವನ್ನು ಸೂಚಿಸುವ ಅಥವಾ ಸಾವನ್ನು ತಡೆಯುವ ಅಥವಾ ಸಾವಿನ
ಸಮಯವನ್ನು ನಿರ್ದಿಷ್ಟವಾಗಿ ಊಹಿಸುವ ಸಾಮರ್ಥ್ಯ ಬಂದಿಲ್ಲ.
ಸತ್ತ ಬಳಿಕ ಫ್ಲಕ್ಸ್
ಹಾಕಲು, ಪೇಪರಿನಲ್ಲಿ ಜಾಹೀರಾತು ನೀಡಲು, ಗಡದ್ದಾಗಿ ಬೊಜ್ಜ ಮಾಡಲು, ಸತ್ತವರ ಹೆಸರಿನಲ್ಲಿ
ಶ್ರದ್ಧಾಂಜಲಿ ಸಭೆ ನಡೆಸಲು ಮತ್ತು ಅಲ್ಲಿ ಭಾಷಣ ಮಾಡಲು, ಸತ್ತವರ ಸ್ಮಾರಕ ನಿರ್ಮಿಸಲು, ಸತ್ತವರ
ಹೆಸರಿನಲ್ಲಿ ಏನಾದರೂ ಸಮಾಜ ಸೇವೆ ಮಾಡಲು ಅವಕಾಶಗಳಿವೆ. ಆದರೆ, ಸತ್ತವ ಸಾಯದಂತೆ ಖಡಾಖಂಡಿತ
ತಡೆಯುವ ಅಥವಾ ಬದುಕಿದ್ದಾಗ ಸಾಯುವ ಪರಿಸ್ಥಿತಿ ಬಂದಿದೆಯೇ, ಅದನ್ನು ಹೇಗೆ ತಡೆಯಬಹುದು. ಆವ ಯಾಕೆ
ಆ ರೀತಿ ಸತ್ತ, ಇನ್ನುಳಿದವರು ಆ ರೀತಿ ಸಾಯದ ಹಾಗೆ ನಾವೇನು ಮಾಡಬಹುದು. ಅಥವಾ ಸ್ವತಃ ನಮಗೇ ಅಂತಹ
ಪರಿಸ್ಥಿತಿ ಬಂದರೆ ನಾವೇನೂ ಮಾಡಬಹುದು ಎಂಬಿತ್ಯಾದಿ ಜಿಜ್ಞಾಸೆಗಳು ಸಾಮೂಹಿಕವಾಗಿ
ನಡೆಯುವುದಿಲ್ಲ. ಆ ಬಗ್ಗೆ ಚಿಂತಿಸುತ್ತಾ ಕೂರಲು ಬದುಕಿರುವವರಿಗೆ ಪುರುಸೊತ್ತೂ ಇರುವುದಿಲ್ಲ.
ಸ್ಟೇಟಸ್ಸಿನಲ್ಲಿ ಹಾಕುವ ಓಂ ಶಾಂತಿ ಅಥವಾ RIP ಗೆ ಕೂಡಾ ಕೇವಲ 24 ಗಂಟೆ
ಆಯುಷ್ಯ ಇರುವುದು. ದಿನವೊಂದರಲ್ಲಿ ಹಾಕಿದ ಸ್ಟೇಟಸ್ಸೂ ಅಳಿದು ಹೋಗುತ್ತದೆ. ಇನ್ನು ಇಂತಹ ಗಂಭೀರ
ನಿರ್ಧಾರಗಳನ್ನು ಕೈಗೊಳ್ಳುವಷ್ಟು ಗಟ್ಟಿ ಸಂಯಮ ಎಲ್ಲಿಂದ ತಾನೇ ಬರಲು ಸಾಧ್ಯ...
ಸಾವಿಗೆ ವ್ಯಕ್ತಿಯ
ವ್ಯಕ್ತಿತ್ವದ, ಸ್ಥಿತಿಗತಿಯ, ಸ್ಥಾನಮಾನದ ಹಂಗಿಲ್ಲ. ಸಾವು ಜನ ನೋಡಿ ಬರುವುದಲ್ಲ, ಯಾರಿಗೂ
ಭಾವನಾತ್ಮಕ ರಿಯಾಯಿತಿ ಕೊಡುವುದಿಲ್ಲ. ಪರಮ ಪಾಪಿ, ಲೋಕ ಕಂಟಕ, ಅವರಿವರನ್ನು ಹಂಗಿಸುತ್ತಾ,
ದಂಡಿಸುತ್ತಾ, ಶೋಷಿಸುತ್ತಾ ಬದುಕುವವರಿಗೂ ಸಾವಿದೆ. ಯಾರಿಗೂ ತೊಂದರೆ ಕೊಡದೆ, ಯಾರಿಗೂ
ಹೊರೆಯಾಗದೆ, ಯಾರಿಗೂ ತಿಳಿಯದಂತೆ ಪರೋಪಕಾರ ಮಾಡುತ್ತಾ ಬರುವವರಿಗೂ ಸಾವಿದೆ. ಎರಡನೇ ವರ್ಗವದರು
ಶೀಘ್ರ ಸತ್ತರೆ, ಮೊದಲನೆಯವರು ಸಹಜವಾಗಿ ದೀರ್ಘಾಯುಷಿಗಳಾಗಿರುತ್ತಾರೆ... ಯಾಕಂತೆ ಇವತ್ತಿನ
ವರೆಗೆ ನನಗೆ ಉತ್ತರ ಸಿಕ್ಕಿಲ್ಲ...
ಅವ ಪಾಪಿ, ಕೊನೆಗೆ
ನೀರಿಲ್ಲದೆ ಸಾಯುತ್ತಾನೆ.... ಅವನು ನನಗೆ ಅಪಮಾನ ಮಾಡಿದ, ಅವನಿಗೆ ಜೀವನವೇ ಪಾಠ ಖಂಡಿತಾ
ಕಲಿಸುತ್ತದೆ, ಅವನು ನರಳಿ ನರಳಿ ಸಾಯುತ್ತಾನೆ ಎಂದೆಲ್ಲ ನೊಂದವರು ಶಾಪ ಹಾಕುತ್ತಾರೆ. ಹಾಗಂತೆ
ಪಾಪಿ ಸತ್ತಾಗ, ಅವ ಹೇಗೆ ಸತ್ತ? ಸಾಯುವಾಗ ಅತನಿಗೆ ತನ್ನ
ಬದುಕಿನ ನಡೆಗಳ ಬಗ್ಗೆ ಪಶ್ಚಾತ್ತಾಪ ಇತ್ತ? ಅಥವಾ ಅವನ ಸಾವು ಅವನಿಗೆ
ಅಷ್ಟೆಲ್ಲ ಯೋಚಿಸುವಷ್ಟು ಸಮಯ ಕೊಟ್ಟಿತ್ತಾ...? ಸಾವು ಬಂದ ಬಗೆಯಿಂದ
ಆತನಿಗೆ ಏನನ್ನಿಸಿತು? ಅಂತ ಹೇಳಲು, “ಸತ್ತವರು ಮತ್ತೆ ಮಾತಿಗೆ ಸಿಕ್ಕುವುದಿಲ್ಲ”. ಬದುಕುಳಿದವರು ಸತ್ತವರ ಬಗ್ಗೆ ಮಾತನಾಡುತ್ತಾರೆ
ಅಷ್ಟೇ... ಶಾಪದಿಂದ ಸತ್ತರೋ, ವಯೋಸಹಜವಾಗಿ ಸತ್ತರೋ, ವಿಧಿಯೇ ಪಾಠ ಕಲಿಸಿತೋ ಏನೇ ಇರಲಿ
ಅತಾರ್ಕಿಕವಾಗಿ ಬರುವ ಸಾವು ಮನುಷ್ಯನಿಗೆ ಶಿಕ್ಷೆಯೇ, ಬದುಕುಳಿದವರಿಗೆ ಶಿಕ್ಷೆಯೇ... ಅಥವಾ ಸತ್ತ
ರೀತಿ ಇತರರಿಗೆ ಪಾಠವೇ ಎಂಬಿತ್ಯಾದಿ ಸಂಗತಿಗಳು ಅವರವ ಗ್ರಹಿಕೆಗೆ ಬಿಟ್ಟದ್ದು...
ಸತ್ತ ನಂತರದ ಬದುಕಿನ
ಬಗ್ಗೆ ಪುರಾಣಗಳು ಏನೇ ಹೇಳಬಹುದು. ಸತ್ತವರ ಹೆಸರಿನಲ್ಲಿ ಎಷ್ಟೇ ದೊಡ್ಡ ಔತಣ ಮಾಡಬಹುದು, ಸತ್ತವರ
ಬಗ್ಗೆ ಬೀದಿ ಬೀದಿಗಳಲ್ಲಿ ಬ್ಯಾನರ್ ಬರೆಸಿ, ಸತ್ತವರಿಗಿಂತ ದೊಡ್ಡದಾಗಿ ನಮ್ಮ ಹೆಸರು ಹಾಕಿಸಿ
ಸಂತಾಪ “ಸೂಚಿಸಬಹುದು”, ಸಂತಾಪ ವ್ಯಕ್ತಪಡಿಸಲೂ ಬಹುದು. ಸತ್ತ ಮೇಲೆ “ಅವರ ಬದುಕಿನ ಹಾದಿ ನಮಗೆ ಆದರ್ಶವಾಗಿರಲಿ” ಅಂತ ನಮ್ಮದೇ ಧಾಟಿಯಲ್ಲಿ ವೇದಿಕೆಯಲ್ಲಿ ಹೇಳಿ ಮತ್ತದೇ
ನಮ್ಮ ಹುಟ್ಟು ಚಾಳಿಗಳನ್ನು ಮುಂದುವರಿಸಿ ಸಂತಾಪ ಸೂಚಿಸಿದ ಸಂತೃಪ್ತಿಯನ್ನು ಹೊಂದಬಹುದು.
ಆದಾಗ್ಯೂ ಒಬ್ಬ ಸತ್ತಾಗಲೂ ನಮ್ಮ ಹೆಸರು ಕಾಣಿಸಿಕೊಳ್ಳಬೇಕು, ಸತ್ತವನ ಹೆಸರಿನ ಜೊತೆ ಸಂತಾಪ
ಸೂಚಿಸಿದವನು ಸಂತಾಪ “ವ್ಯಕ್ತಪಡಿಸಿದ್ದಾರೆ” ಎಂಬುದು ಹತ್ತಾರು ಮಂದಿಗೆ ಗೊತ್ತಾಗಬೇಕು ಎಂಬಿತ್ಯಾದಿ
ವಿಚಿತ್ರ ನಿರೀಕ್ಷೆಗಳು, ನಾನೆಷ್ಟೇ ಲೋಕಕಂಟಕನಾದರೂ ಸತ್ತ ಮೇಲೆ ನನ್ನ ಹೆಸರು
ಚಿರಶಾಶ್ವತವಾಗಿರಬೇಕು ಎಂಬ ವಿಚಿತ್ರ ಹಂಬಲ, ಅದಕ್ಕೆ ಮಾಡುವ ಖರ್ಚು... ಇವೆಲ್ಲ ಬದುಕು ಮತ್ತು
ಸಾವಿನ ನಡುವಿನ ಅರ್ಥವೇ ಆಗದ ತರ್ಕದ ನಡುವೆ ಹೇಳಲಾಗದ ಭಾವಶೂನ್ಯತೆಯನ್ನು ಸೃಷ್ಟಿಸುತ್ತದೆ....
ಈಗ ಹೇಳಿದ್ದು ಏನೇ ಮಾಡಿದರೂ ಸತ್ತವರಿಗೆ ಅದು
ತಿಳಿಯುತ್ತದೆ, ಸತ್ತವರು ನಮ್ಮ ಸರ್ಕಸ್ಸುಗಳನ್ನು ನೋಡಿ ಖುಷಿ ಪಡ್ತಾರೆ, ಅವರ ಆತ್ಮಕ್ಕೆ ಸಮಾಧಾನ
ಸಿಗ್ತದೆ, ನಮ್ಮ ಭಾಷಣದಿಂದ ಅವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆಲ್ಲ ಯಾವುದೇ
ಪುರಾವೆಗಳಿಲ್ಲ. ಅವೆಲ್ಲ ನಮ್ಮ ನಮ್ಮ ಸಮಾಧಾನ, ನಂಬಿಕೆಗೆ ಬಿಟ್ಟದ್ದು,ವೈಚಾರಿಕತೆ ಹೆಸರಿನಲ್ಲಿ
ಅಲ್ಲಗಳೆಯಬೇಕಾದ ಸಂಗತಿಗಳೂ ಖಂಡಿತಾ ಅಲ್ಲ. ಧಾರ್ಮಿಕ ನಂಬಿಕೆಗಳಿಗೆ ಅದರದ್ದೇ ಆದ ಪರಂಪರೆ ಇದೆ,
ಇರಲಿ..
ಆದರೆ, ಬದುಕಿದಾಗ ಮಾತನಾಡಿದ್ದು, ಸಹಾಯ ಮಾಡಿದ್ದು,
ಸಂಕಟಗಳಿಗೆ ಕಿವಿಯಾಗಿದ್ದು, ಖುಷಿಯಿಂದ ಏನನ್ನೋ ಕೊಟ್ಟದ್ದು... ದೊಡ್ಡ ಸಂಧಿಗ್ಧತೆ ಬಂದಾಗ
ಅದಕ್ಕೊಂದು ಪುಟ್ಟ ಪರಿಹಾರ ಸೂಚಿಸಿದ್ದು. ಇವೆಲ್ಲ ಬದುಕಿದವರನ್ನು ತಲುಪುತ್ತದೆ ಎಂಬುದಕ್ಕೆ
ಖಂಡಿತಾ ಸಂಶಯವಿಲ್ಲ. ಆದರೆ, ಅದರಿಂದ ಅದಕ್ಕೆಲ್ಲ ಪ್ರಚಾರ ಸಿಕ್ಕುವುದಿಲ್ಲ, ಬದುಕಿದನಿಗೆ
ಸದ್ದಿಲ್ಲದೆ ನೆರವಾದರೆ ಅದರಿಂದ ಎಂತದ್ದೂ ಭಾವನಾತ್ಮಕ ಪ್ರಭಾವ ಬೀರುವ ಬೆಳವಣಿಗೆ
ನಡೆಯುವುದಿಲ್ಲ. ಅಥವಾ ಪ್ರತಿಯೊಬ್ಬರ ಗೋಳು ಕೇಳುತ್ತಾ ಕೂರುವ ಸಮಯವೂ ನಮಗೆ ಇರುವುದಿಲ್ಲ...
ಅದಕ್ಕೇ ಇರಬೇಕು. ಆಕಸ್ಮಿಕ ಸಾವುಗಳು
ಸಂಭವಿಸಿದಾಗಲೆಲ್ಲ... “ಅಯ್ಯೋ ಅವನು ಕಳೆದ ವಾರ ಕಾಲ್
ಮಾಡಿದ್ದ.. ನಾನು ಬಿಝೀ ಇದ್ದೆ, ಯಾಕೆ ಮಾಡಿದ್ನೋ ಗೊತ್ತಿಲ್ಲ, ಅವತ್ತೇನಾದರೂ ನಾನು ಕಾಲ್
ತೆಗೆದಿದ್ದರೆ ಅವನು ಎಂತ ಹೇಳ್ತಿದ್ನೋ ತಿಳಿಯುತ್ತಿತ್ತು” ಅಂತ ಹಲುಬುತ್ತೇವೆ. ಅವನು
ಮೊನ್ನೆ ಬೆಳಗ್ಗೆ ಪೇಟೆಯಲ್ಲಿ ಸಿಕ್ಕಿದ್ದ, ಸಣ್ಣದಾಗಿ ನಕ್ಕಿದ್ದ, ನಿನ್ನೆ ಸ್ಟೇಟಸ್ಸಿನಲ್ಲೇ
ಏನೋ ಹಾಕಿದ್ದ, ಮೊನ್ನೆ ಫೇಸ್ಬುಕ್ಕಿನಲ್ಲಿ ನಾನು ಬರೆದದ್ದಕ್ಕೆ ಲೈಕು ಕೊಟ್ಟಿದ್ದ... ಇವತ್ತು
ನೋಡಿದರೆ ಸಡನ್ ಸತ್ತ ಸುದ್ದಿ ಅಂತ ಸಂಕಟ ಪಡುತ್ತೇವಲ್ವ... ಎಷ್ಟೋ ಸಾರಿ ಆ ಸತ್ತವನಿಗೇ ತಾನು
ನಗುವಾಗ, ಸ್ಟೇಟಸ್ಸು ಹಾಕುವಾಗ, ಎಂಥದ್ದೋ ಲೈಕು ಮಾಡುವಾಗ ಗೊತ್ತಿದ್ದಿರ್ಲಿಕಿಲ್ಲ, ತನ್ನ ಬದುಕು
ಈಗಿಂದೀಗಲೇ ಅಂತ್ಯವಾಗುತ್ತದೆ ಅಂತ. ತನ್ನ ಸಾವು ತನಗೇ ಗೊತ್ತಿದ್ದರೆ ಇಡೀ ಜಗತ್ತು ಇರುವ ರೀತಿಯೇ
ಬೇರೆಯೇ ಥರ ಇರ್ತಿತ್ತೇನೋ... ಅದಕ್ಕೇ ಸತ್ತ ಮೇಲೆ ಅವರೊಂದಿಗಿನ ಕೊನೆಯ ಭೇಟಿ, ಅವರೊಂದಿಗೆ
ಕೊನೆಯ ಮಾತು, ಅವರ ಬರೆಹ, ಮಾತಿನಲ್ಲಿ ಸಾವಿನ ಬಗ್ಗೆ ಏನಾದರೂ ಸೂಚನೆ ಎಂಬ ಕೌತುಕ ಭರಿತ
ಹುಡುಕಾಟ, ಅವರ ಓಡಾಟ, ಅವರು ಕೊನೆಯದಾಗಿ ಮಾಡಿದ ಕೆಲಸ ಎಲ್ಲವನ್ನೂ ತುಂಬ ಜಾಗ್ರತೆಯಿಂದ
ನೆನಪಿಟ್ಟು ನೆನಪಿಟ್ಟು ಹುಡುಕುತ್ತೇವೆ. ಸಾವು ಅವನ ಹಿಂದೆ ಕಾದಿತ್ತಾ ಅಂತ ಸುಳಿವಿಗಾಗಿ
ಹಂಬಲಿಸುತ್ತೇವೆ.... ಕೊನೆಗೆ ಎಂಥದ್ದು ಅಂತ ಅರ್ಥವಾಗದೆ ಪ್ರಯತ್ನ ಕೈಚೆಲ್ಲುತ್ತೇವೆ. ಆದಾಗ್ಯೂ
ಬದುಕಿದ್ದಾಗ ಜೀವಂತ ಇದ್ದ ಎಷ್ಟೋ ಸಾಧ್ಯತೆಗಳನ್ನು ಪೂರೈಸದೆ ಸತ್ತ ಮೇಲೆ ಎಷ್ಟೇ ಹಂಬಲಿಸಿದರೂ
ಸತ್ತವರಿಗದು ತಿಳಿಯುವುದಿಲ್ಲ, ಬದುಕಿದವರು ಬದಲಾಗುವುದೂ ಇಲ್ಲ...
ಸಾವಿನ ಮನೆಗಳಲ್ಲೂ
ಅಷ್ಟೇ.. ಅಂತ್ಯ ಸಂಸ್ಕಾರದ ಬಗ್ಗೆ ತಿಳಿದವರು ಮಾರ್ಗದರ್ಶನ ನೀಡುವುದು ಸಾಮಾನ್ಯ. ಅದರೆಡೆಯಲ್ಲೂ
ಮೃತದೇಹ ಮಲಗಿದ್ದ ಸ್ಥಿತಿಯಲ್ಲೂ ಪಕ್ಕದಲ್ಲೇ ಕುಳಿತು ರಾಜಕೀಯ ಮಾತನಾಡುವವರು, “ಬರಬೇಕಲ್ಲ” ಅಂತ ಬಂದು ಬಾಯಿಗೆ ತುಳಸಿ ನೀರು
ಬಿಟ್ಟು, ಅಂಗಳಕ್ಕೆ ಬಂದು ಸತ್ತವನ ಬಗ್ಗೆ ಕೆಟ್ಟ ಜೋಕ್ ಮಾಡಿ ಗಹಗಹಿಸಿ ನಗುವವರು, “ಇವ ಸಾಯದೇ ಇರ್ತಾನ” ಅಂತ ತಾನೊಬ್ಬ ಚಿರಂಜೀವಿಯೋ, ಮಹಾ
ಬ್ರಹ್ಮರ್ಷಿಯೋ ಎಂಬಂತೆ ಹೇಳುವವರೂ ಇರ್ತಾರೆ. ಸಾವು ಸಹ ನಿತ್ಯ ಬದುಕಿನ ಅಪವಸ್ಯಗಳನ್ನು ಸ್ವಲ್ಪ
ಹೊತ್ತಿಗಾದರೂ ದೂರ ಇರಿಸುವಷ್ಟು ವೈರಾಗ್ಯ ತಂದಿರುವುದಿಲ್ಲ ಎಂಬುದು ಆ ಹೊತ್ತಿಗೆ ಆಶ್ಚರ್ಯ
ಮೂಡಿಸುತ್ತದೆ.
ಅಯ್ಯೋ ಸತ್ತ ಮೇಲೆ
ಇನ್ನೇನ್ರಿ, ಬಾಡಿ ಕೊಂಡ್ಹೋಗಿ ಕಾಷ್ಠಕ್ಕೆ ಇಡುವುದು ಮುಖ್ಯ ಅಂತ ವ್ಯಂಗ್ಯವಾಗಿ ಹೇಳುವ ಮಹಾ
ಬುದ್ಧಿವಂತರೂ ಇರ್ತಾರೆ, “ಇಲ್ಲ ಕ್ರಮ ಪ್ರಕಾರ ಆಗಲೇಬೇಕು,
ಸಂಪ್ರದಾಯ ತಪ್ಪಬಾರದು” ಈ ದೇಹಕ್ಕೆ ಅಂತಿಮ
ಸಂಸ್ಕಾರ ಗೌರವಯುತವಾಗಿ ದೊರಕಲೇಬೇಕು ಅಂತ ಕಾಳಜಿಯಿಂದ ನೆರವಾಗುವವರು ಇರ್ತಾರೆ. ಇವೆರಡರಲ್ಲಿ
ಏನೇ ಆದರೂ ಇಲ್ಲವದ ದೇಹ ಅಗ್ನಿಯನ್ನೋ, ಭೂಮಿಯನ್ನೇ ಸೇರಲೇಬೇಕು ಎಂಬುದರಲ್ಲಿ ಯಾರದ್ದೂ ವಾದ
ಇರುವುದಿಲ್ಲ!
ಮೋಕ್ಷ, ಸದ್ಗತಿ, ಸಾಯುಜ್ಯ, ಸ್ವರ್ಗಸ್ಥ ಇವೆಲ್ಲ
ಕಣ್ಣಿಗೆ ಕಾಣಿಸದ ಸಂಗತಿಗಳು. ಆ ದೇಹ ಉಸಿರಾಡುತ್ತಿರುವಾಗ ಕಂಡ ನೆಮ್ಮದಿ, ನಗು, ಹೇಳಿದ್ದು
ಅರ್ಥವಾಗುವಷ್ಟು ಆರೋಗ್ಯ ಮತ್ತು ಪ್ರತಿಸ್ಪಂದನೆ ಇವು ಮಾತ್ರ ಕಾಣುವಂತದ್ದು... ಬಾಕಿ ಎಲ್ಲ ನಾವು
ನಂಬಿಕೊಂಡು ಬಂದದ್ದು ಮತ್ತು ಪರಂಪರೆಯಿಂದ ಕಲಿತದ್ದು... ಈ ವೈರಾಗ್ಯದ ಜೊತೆಗೇ ಅನುಸರಿಸಿಕೊಂಡು
ಹೋಗುವಂಥದ್ದು... ಕಾಣುವುದು, ಕಂಡದ್ದು, ಕಾಣದೇ ಆದದ್ದು ಮತ್ತು ಕಾಣದಾದ ಮೇಲೆ ಅದರ ಬಗ್ಗೆ
ಚಿಂತಿಸುವಂತೆ ಮಾಡುವ “ಇಲ್ಲ”ವಾಗುವುದು ತರ್ಕಕ್ಕೆ ನಿಲುಕದ್ದು...!
-ಕೃಷ್ಣಮೋಹನ ತಲೆಂಗಳ (02.02.2026)

No comments:
Post a Comment