Friday, February 26, 2016

ವಾಟ್ಸಾಪು ಗುಂಪುಗಾರಿಕೆ!

ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಯಾವುದೋ ದೊಡ್ಡ ಕಾರ್ಯಕ್ರಮ ನಡೆಸಲು ಅವನಿಗೆ ತುಂಬಾ ಹಾಲಿನ ಅಗತ್ಯ ಇತ್ತು. ಅದಕ್ಕೆ ಒಂದು ಕಟ್ಟಪ್ಪಣೆ ಹೊರಡ್ಸಿದ. ಅರಮನೆ ಎದುರು ದೊಡ್ಡದೊಂದು ಪಾತ್ರೆ ಇರಿಸಿ, ಅದರ ಬಾಯಿಯನ್ನು ಬಟ್ಟೆಯಿಂದ ಕಟ್ಟಿದ, ನಂತರ ಎಲ್ಲಾ ಪ್ರಜೆಗಳು ಒಂದೊಂದುಲೋಟ ಹಾಲನ್ನು ಪಾತ್ರೆಗೆ ಹೊಯ್ಯುುವಂತೆ ಸೂಚಿಸಿದ. ಸರಿ ಎಲ್ಲರೂ ಕ್ಯೂನಲ್ಲಿ ಬಂದು ಹಾಲು ಹೊಯ್ಯತೊಡಗಿದರು. 
ಒಬ್ಬ ಆಲಸಿ ಪ್ರಜೆ ಗುಂಡ ಯೋಚಿಸಿದ, ಸಾವಿರಗಟ್ಟಲೆ ಮಂದಿ ಹಾಲು ಹೊಯ್ತಾರೆ. ಸುಮ್ನೆ ಒಂದು ಲೋಟ ಹಾಲು ವೇಸ್ಟ್, ನಾನೊಬ್ಬ ಹಾಲಿನ ಬದಲು ನೀರು ಹೊಯ್ದರೆ ಯಾರಿಗೆ ತಾನೆ ಗೊತ್ತಾಗುತ್ತೆ, ಯಾರೋ ಫ್ಯಾಟ್ ಟೆಸ್ಟ್ ಮಾಡಲ್ವಲ್ಲ ಅಂದ್ಕೊಂಡು ಹಾಲಿನ ಬದಲು ಒಂದು ನೀರು ಹೊಯ್ದು ಏನೂ ಗೊತ್ತಿಲ್ಲದಂತೆ ಮನೆಗೆ ಬಂದ (ಪುಣ್ಯಕ್ಕೆ ಆಗ ಸಿ.ಸಿ.ಕ್ಯಾಮೆರಾ ಇರ್ಲಿಲ್ವೇನೋ). 
ಸಂಜೆ ವೇಳೆಗೆ ಎಲ್ಲರೂ ಹಾಲು ಹೊಯ್ದಾದ ಬಳಿಕ ರಾಜ ಪಾತ್ರೆಗೆ ಕಟ್ಟಿದ ಬಟ್ಟೆ ಓಪನ್ ಮಾಡ್ಸಿದಾಗ ಅವನಿಗೆ ಶಾಕ್. ಯಾಕೆ ಗೊತ್ತಾ, ಅಲ್ಲಿ ಕೇವಲ ನೀರು ತುಂಬಿತ್ತು.... ಪ್ರತಿಯೊಬ್ಬರೂ ಗುಂಡನ ಥರ ಅತಿ ಬುದ್ಧಿವಂತಿಕೆ ಮಾಡಿ ನೀರನ್ನೇ ಹೊಯ್ದಿದ್ರು.... ನಾನೊಬ್ಬ ನೀರು ಹೊಯ್ದ್ರೆ ಯಾರಿಗೆ ತಾನೋ ಗೊತ್ತಾಗುತ್ತೆ ಅಂತ..
ಈ ಕಥೆ ಯಾಕೆ ಹೇಳಿದೆ ಅಂದ್ರೆ ನಮ್ಮ ವಾಟ್ಸಾಪ್ ಗ್ರೂಪುಗಳೂ ಈ ಪಾಲಿನ ಪಾತ್ರೆ ಥರ ಆಗಿದೆ....
ನಾನೊಬ್ಬ ದೊಡ್ಡ ಮೆಸೇಜ್ ಫಾರ್ವರ್ಡ್ ಮಾಡಿದ್ರೆ ಯಾರಿಗೇನು ನಷ್ಟ ಅಂದ್ಕೊಳ್ಳೋದು, ದೊಡ್ಡ ದೊಡ್ಡ ಮೆಸೇಜ್ ಫಾರ್ವರ್ಡ್ ಮಾಡೋದು. ಓದೋರು ಯಾರೂ ಇಲ್ಲ...ಫಾರ್ವಾರ್ಡ್ ಮಾಡೋರೇ ಎಲ್ಲ....ಬೇಕಾದ್ದು, ಬೇಡದ್ದು ಎಲ್ಲಸೇರಿ ರಗ್ದಾ ಸಮೋಸ ಥರ ಆಗಿ ವಾಟ್ಸಾಪ್ ಗ್ರೂಪುಗಳ ಗಾಂಭೀರ್ಯತೆಯೇ ಕಡಿಮೆ ಆಗ್ತಿದೆಯೇನೋ ಅನ್ನಿಸ್ತಿದೆ...


ಹೌದು, 
ತ್ವರಿತ ಹಾಗೂ ಅತಿ ಸುಲಭವಾಗಿ, ಪರಿಣಾಮಕಾರಿಯಾಗಿ ಏಕಕಾಲಕ್ಕೆ ಮಲ್ಟಿಮೀಡಿಯಾ ಸಹಿತ 256 ಮಂದಿಯನ್ನು ತಲುಪಬಹುದಾದ ಅದ್ಭುತ ವಾಹಿನಿ ವಾಟ್ಸಾಪ್. ತುಂಬ ಸದ್ಬಳಕೆಗೆ ಅವಕಾಶವಿದೆ. ಇದೇ ಕಾರಣಕ್ಕೆ ಸಮಾನಾಸಕ್ತರೆಲ್ಲಾ ಸೇರ್ಕೊಂಡು ಸಾವಿರ ಸಾವಿರ ವಿಷಯ ಪ್ರಧಾನ ವಾಟ್ಸಾಪ್ ಗ್ರೂಪು ಮಾಡ್ಕೊಂಡಿದ್ದಾರೆ...
ಮನೆಗೊಂದು, ಕುಟುಂಬಕ್ಕೊಂದು, ಕ್ಲಾಸಿಗೊಂದು, ಅಲ್ಯೂಮ್ನಿ ಗೆಳೆಯರಿಗೊಂದು, ಪತ್ರಿಕೆ ಓದುಗರಿಗೊಂದು, ಯಕ್ಷಗಾನ ನೋಡುವವರಿಗೊಂದು, ವಕೀಲರಿಗೆ, ಡಾಕ್ಟರುಗಳಿಗೆ, ಲೆಕ್ಚರರುಗಳಿಗೆ... ಹೀಗೆ ನೂರೆಂಟು ಗ್ರೂಪುಗಳು. ಮತ್ತೆ ಅದರೆಡೆಯಲ್ಲಿ ಭಿನ್ನಮತ ಎದ್ದರೆ ಮತ್ತೊಂದು ಪ್ರತ್ಯೇಕ ಗ್ರೂಪು...
ಹೀಗೆ ಸಕ್ರಿಯ ವಾಟ್ಸಾಪ್ ಬಳಕೆದಾರನೊಬ್ಬ ಕನಿಷ್ಠ 10-20 ಗ್ರೂಪುಗಳ ಘನ ಸದಸ್ಯರಾಗಿರುತ್ತಾರೆ.

ಮೊದಮೊದಲೇ ಪ್ರತಿ ಗ್ರೂಪುಗಳೂ ವಿಷಯನಿಷ್ಠವಾಗಿ, ಗ್ರೂಪಿನ ಹೆಸರು, ಉದ್ದೇಶಕ್ಕೆ ಅನುಗುಣವಾಗಿ ಕಾರ್ಯ ಮಾಡುತ್ತಿರುತ್ತದೆ. ಬರ ಬರುತ್ತಾ ಅಲ್ಲಿ ಫಾರ್ವರ್ಡ್ ಮೆಸೇಜುಗಳು, ಮೈಲುದ್ದದ ಎಲ್ಲಿಂದಲೋ ಎತ್ಹಾಕಿದ ಗಂಭೀರ ಸಂದೇಶಗಳು, ದೊಡ್ಡ ದೊಡ್ಡ ವಿಡಿಯೋಗಳು ದಾಳಿಯಿಡುತ್ತವೆ.
ಅಲ್ಲಿ ವಿಚಿತ್ರ ಜೀವಿ ಬಂತಂತೆ, ಇಲ್ಲಿ ತಲೆ ಒಡ್ದು ಸತ್ರಂತೆ ಅನ್ನುವ ಪೇಕ್ ಮೆಸೇಜುಗಳು, ಫೋಟೊಗಳು, ಜೊತೆಗೆ ಎಡದವರನ್ನೂ, ಬಲದವರನ್ನೂ ಪ್ರಚೋದಿಸುವ ಕಮೆಂಟ್ಸ್ ಗಳು, ಕೆರಳಿಸುವಂತಹ ಸಂದೇಶಗಳ ರಾಶಿ ರಾಶಿ.... ಗ್ರೂಪಿನ ಉದ್ದೇಶ, ಗುರಿ, ಅಲ್ಲಿನ ಸಾಮರಸ್ಯದ ಪರಿಸ್ಥಿತಿ ಯಾವದನ್ನೋ ನೋಡದೆ ಫಾರ್ವರ್ಡ್ ಮಾಡ್ತನೇ ಇರೋದು. ಯಾವುದಾದರೂ ಗ್ರೂಪ್ ಮೆಂಬರನ್ನು ಕೇಳಿ ನೋಡಿ, ಅಲ್ಲಿ ಬರೋ ಮೆಸೇಜ್ ಗಳನ್ನೆಲ್ಲಾ ಓದ್ತೀರಾ ಅಂತ. ಶೇ.90 ಮಂದಿ ಓದೋದು ಬೀಡಿ, ನೋಡೋದೇ ಇಲ್ಲ. ಯಾಕೆಂದರೆ, ಅವ ಸದಸ್ಯನಾಗಿರುವ ಅಷ್ಟೂ ಗ್ರೂಪುಗಳಲ್ಲಿ ಅದೇ ಮೆಸೇಜ್ ನೋಡಿ ನೋಡಿ ತಲೆ ಚಿಟ್ಟು ಹಿಡಿದಿರುತ್ತದೆ. ಈ ಮೆಸೇಜ್ ಗಳ ಭರಾಟೆಯಲ್ಲಿ ಬಡಪಾಟಿ ಅಡ್ಮಿನ್ನು ಮುಖ್ಯ ಸೂಚನೆ ಪೋಸ್ಟ್ ಮಾಡಿದ್ರೆ ಅದು ಹೇಳ ಹೆಸರಿಲ್ಲದೆ ಕಾಲಡಿಗೆ ಸಿಕ್ಕಿ ಚಿಂದಿ ಚಿತ್ರಾನ್ನವಾಗಿರುತ್ತದೆ.

ಬರ್ತಾ ಬರ್ತಾ ಎಲ್ರೂ ಗ್ರೂಪುಗಳ ಮೆಸೇಜ್ ಗಳನ್ನು ಕ್ಲಿಯರ್ ಚಾಟ್ ಕೊಟ್ಟು ಆರಾಮವಾಗಿ ಮಲಗ್ತಾರೆ. ಕೊನೆಗೆ ರೋಸಿ ಹೋಗಿ ಸದ್ದಿಲ್ಲದೆ ಕ್ವಿಟ್ ಆಗ್ತಾರೆ. ಇದ್ರಿಂದ ಗ್ರೂಪು ಆರಂಭಿಸಿದ ಉದ್ದೇಶ ಈಡೇರುವುದಿಲ್ಲ ಮತ್ರವಲ್ಲ, ವಾಟ್ಸಾಪಿನಲ್ಲಿ ಏನಾದ್ರೂ ಗಂಭೀರವಾಗಿದ್ದು ಪೋಸ್ಟ್ ಮಾಡಿದ್ರೆ ಯಾರೂ ಕ್ಯಾರ್ ಮಾಡದ ಹಾಗೆ ಆಗಿದೆ. ಪರ್ಸನಲ್ ಮೆಸೇಜ್ ಹಾಕಿದ್ರೆ ಮಾತ್ರ ಉತ್ತರ. ಗ್ರೂಪುಗಳು ಗಾಂಭೀರ್ಯ ಕಳಕೊಳ್ತಿವೆ. ಅವನ್ನೆಲ್ಲಾ ಫಾಲೋ ಮಾಡುವ ತಾಳ್ಮೆ ಯಾರಿಗೂ ಉಳಿದಿಲ್ಲ.

ತುಂಬಾ ಮಂದಿಗೆ ಸುಮ್ನೇ ಮೆಸೇಜ್ ಫಾರ್ವರ್ಡ್ ಮಾಡುವ ಚಟ. ಅದರಲ್ಲಿ ಏನಿದೆ ಅಂತ ನೋಡುವ ತಾಳ್ಮೆಯೂ ಇಲ್ಲ. ಅದರ ಪರಿಣಾಮ, ಅದರಿಂದಾಗುವ ಕಿರಿಕಿರಿ ಯಾರಿಗೂ ಬೇಕಾಗಿಲ್ಲ. ಮೊದಲು ನಾವು ಓದುಗರಾಗಬೇಕು, ನಂತರ ಬೇರೆಯವರಿಗೆ ಓದಲು ನೀಡಬೇಕು. ಇದು ಸರಳ ಸಭ್ಯತೆ. ಅದು ಬಿಟ್ಟು, ನಾವೂ ಓದದೆ, ಬೇರೆಯವರಿಗೂ ಓದಲೂ ಬಿಡದೆ ಸಂದೇಶಗಳನ್ನು ರಾಶಿ ಹಾಕುವುದು ಸಭ್ಯತೆಯಲ್ಲ. 

ಗ್ರೂಪುಗಳಿಗೊಂದು ನಿಯಮ ಇರುತ್ತದೆ ಸಾಮಾನ್ಯವಾಗಿ. ಅದನ್ನು ಗೌರವಿಸಬೇಕು. ಅದಕ್ಕೊಂದು ಉದ್ದೇಶವಿರುತ್ತದೆ, ಅದಕ್ಕೆ ಪೂರಕವಾಗಿ ನಡೆಯಬೇಕು. ಹೊರತು ನಮ್ಮ ವೈಯಕ್ತಿಕ ಸಿದ್ಧಾಂತಗಳ ಪ್ರಚಾರಕೆ, ಯಾರನ್ನೋ ಅವಹೇಳನ ಮಾಡುವುದಕ್ಕೆ, ವ್ಯಕ್ತಿಗತ ಜಗಳಗಳಿಗೆ ಗ್ರೂಪನ್ನು ಬಳಸುವುದು ಸೂಕ್ತವಲ್ಲ. ವೈಯಕ್ತಿಕ ಅವಹೇಳನ ಮಾಡಿ, ಗ್ರೂಪಿನಲ್ಲಿ ಎಲ್ಲರ ಪಾಲಿಗೆ ನಕ್ಷತ್ರಿಕರಾಗುವುದು ಸೂಕ್ತವಲ್ಲ. ನಮ್ಮವೈಯಕ್ತಿಕ ಇಷ್ಟಾನಿಷ್ಟ, ಸಿದ್ಧಾಂತ, ಪಾಂಡಿತ್ಯ ಪ್ರದ್ರರ್ಶನಕ್ಕೆ ಯಾರೋ ರೂಪಿಸಿದ ಗ್ರೂಪು ವೇದಿಕೆ ಅಲ್ಲ ಅನ್ನುವುದು ನೆನಪಿರಬೇಕು. ಪ್ರತಿ ಗ್ರೂಪ್ ಕೂಡಾ ಶಿಸ್ತುಬದ್ಧವಾಗಿ ತನ್ನ ಉದ್ದೇಶಗಳಿಗಷ್ಟೇ ಸೀಮಿತ ಸಂದೇಶಗಳಗೆ ವಾಹಕವಾದರೆ ವಾಟ್ಸಾಪ್ ಗ್ರೂಪುಗಳ ಮರ್ಯಾದೆ ಸ್ವಲ್ಪವಾದರೂ ಉಳಿದೀತು... ಏನಂತೀರಿ...
ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ.
-ಕೆಎಂ.

Sunday, February 14, 2016

ಕಾಣದ ಕಡಲಿಗೇ....

ಕಡಲ ತಡಿಯ ಇಷ್ಟಪಡದವರೆಷ್ಟು ಮಂದಿ...
ಅಬ್ಬರಿಸುವ ಕಡಲ ತಡಿಯುದ್ದಕ್ಕೂ, ಕಡಲ ಅಲೆಯ ಹಾಗೆ, ಬೀಸುವ ತಂಗಾಳಿ, ಮುಳುಗುವ ಸೂರ್ಯನ ಹಾಗೆ ಆಹ್ಲಾದಕತೆಯನ್ನು ಹಂಚಿಕೊಳ್ಳಲು ಕಡಲ ತಡಿಗಿಂತ ಗದ್ದಲದ ಆದರೂ ಪ್ರಶಾಂತ ಎನಿಸುವ ಜಾಗ ಇನ್ನೊಂದು ಸಿಗದು. ನೆತ್ತಿ ಸುಡುವ ಬಿಸಿಲಿದ್ದರೂ ತಂಗಾಳಿಯ ಸೋಂಕು ಮಾತ್ರ ಬಿಸಿಯಾದ ತಲೆಯನ್ನು ಒಂದಿಷ್ಟು ಹಗುರಗೊಳಿಸಿ, ತನ್ನ ತೆಕ್ಕೆಗೆ ಬಂದವರನ್ನೆಲ್ಲ ಖುಷಿ ಪಡಿಸಿ ಕಳುಹಿಸಬಲ್ಲ ಮಾಂತ್ರಿಕನಲ್ವೇ ಕಡಲ ತಡಿ.

---------------------------------------------------
ನೂರಾರು ನದಿಗಳ ರಾಜ, ಸಹಸ್ರಾರು ಜನರ ಮೆಚ್ಚಿನ ಕಣ್ಮಣಿ, ದಿನಪೂರ್ತಿ ಅಲೆಗಳ ಅಬ್ಬರ ಬೋಟುಗಳಿಗೆ ಸೆರಗನೊಡ್ಡುವ ಸಮುದ್ರವೂ ಒಂದೊಂದು ಬಾರಿ ತುಂಬಾ ಒಂಟಿ ಅನಿಸುವುದಿಲ್ವೇ...
ಸೂರ್ಯ ಮುಳುಗಿದ ಮೇಲೆ ಕಡಲರಾಜನನ್ನು ಎಲ್ಲರೂ ಒಂಟಿಯಾಗಿ ಬಿಟ್ಟು ಹೋಗುತ್ತಾರೆ. ಸೂರ್ಯಾಸ್ತದಲ್ಲೋ, ವೀಕೆಂಡುಗಳಲ್ಲೋ ಮಾತ್ರ ಆತ ಇಷ್ಟವಾಗೋದು. ಉಳಿದ ಸಮಯದಲ್ಲಿ ಅಲ್ಲಿಯೇ ಇರಲು ಪುರುಸೊತ್ತು ಯಾರಿಗಿದೆ ಹೇಳಿ...

ಆದರೂ ಯಾರೆ ಇರಲಿ, ಯಾರೇ ಬಿಡಲಿ ದಡಕ್ಕೆ ಅಲೆಗಳು ಅಪ್ಪಳಿಸುತ್ತಲೇ ಇರುತ್ತವೆ. ನೊರೆಗಳು ಉಕ್ಕತ್ತಲೇ ಇರುತ್ತವೆ. ಅವನೊಳಗಿನ ಒಂಟಿತನ, ಇರಬಹುದಾದ ಕಣ್ಣೀರು ಸಮುದ್ರದ ಗ್ಯಾಲನ್ ಗಟ್ಟಲೆ ಉಪ್ಪು ನೀರಿನೊಳಗೆ ಕರಗಿ ಹೋಗಿದ್ದು ಯಾರಿಗೂ ಕಾಣಿಸದು. ಸಮುದ್ರವೆಷ್ಟು ಗಂಭೀರ, ಎಷ್ಟು ಬಲಶಾಲಿ, ಬೀಚಿನಲ್ಲೆಷ್ಟು ರಭಸ, ಅಬ್ಬರ, ರೌದ್ರ ಎಂದೆಲ್ಲಾ ಹೇಳುವ ನಾವು ಕಡಲ ಅಂತರಂಗವನ್ನು ಶೋಧಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ರೌದ್ರಕ್ಕೂ, ಅಬ್ಬರಕ್ಕೂ, ಶೌರ್ಯಕ್ಕೂ ಒಂದು ಸೌಮ್ಯ ಮುಖವೂ ಇರುತ್ತದೆ. ನಗಿಸುವವರಿಗೂ, ಬಲಶಾಲಿಗಳ ಒಳಗೂ ಒಂದು ಅಸಹಾಯಕತೆ, ಬಿಕ್ಕಳಿಕೆ ಇರುತ್ತದೆ. ಅದನ್ನು ಎಷ್ಟೋ ಬಾರಿ ಯಾರ ಜೊತೆಗೂ ಹೇಳಿಕೊಳ್ಳಲಾಗದು. ಸಮುದ್ರದ ಹಾಗೆ. ದೂರದಿಂದ ಕಾಣುವಾಗ, ಸೊಬಗ, ಗಾತ್ರ, ಶೌರ್ಯ ಕಂಡಾಗ ಪರಮ ತೃಪ್ತ, ಧೈರ್ಯಶಾಲಿ, ಸುಖೀ ಜೀವನ, ಯಾರ ಹಂಗೂ ಇಲ್ಲ ಎಂಬಿತ್ಯಾದಿ ನೆಗಳ್ತೆಗೆ ಪಾತ್ರರಾದವರೂ ಒಳಗೊಳಗೆ ಅತ್ತರೆ, ಕೊರಗಿದರೆ ಮರುಗುವವರು ಯಾರು. ಕಣ್ಣಿಗೆ ಕಂಡಿದ್ದು ಮಾತ್ರ ನಮಗೆ ವೇದ್ಯವಾಗುವುದು, ಅರ್ಥವಾಗುವುದು, ಹೇಳಲಾಗದ್ದು, ನಿವೇದಿಸಲಾಗದ್ದು, ವಿವರಿಸಲಾಗದ್ದು ಒಳಗೊಳಗೆ ಬೇಯುತ್ತಿದ್ದರೆ ಅದು ಕಣ್ಣಿಗೆ ಕಾಣುವುದಿಲ್ಲ. ಕಡಲೊಡಿನ ಲಾವಾರಸದ ಹಾಗೆ ಅಲ್ಲೇ ಕುದಿಯುತ್ತಿರುತ್ತದೆ. ಸೂರ್ಯಸ್ತದ ಬಂಗಾರದ ವರ್ಣ ಪ್ರತಿಫಲಿಸುವಾಗ ಸೆಲ್ಫೀ ತೆಗೆದು ಖುಷಿ ಪಟ್ಟು ಮರಳುತ್ತೇವೆ.

ಸಮುದ್ರ ಮಾತ್ರ ಅಲ್ಲೇ, ಅದೇ ಜಾಗದಲ್ಲಿ ತೆರೆಗಳನ್ನು ತಳ್ಳುತ್ತಾ, ನೊರೆ ಸೂಸುತ್ತಾ, ಕಡು ಕತ್ತಲಲ್ಲೂ ಉಬ್ಬರ, ಇಳಿತಕ್ಕೆ ನಿರ್ಲಿಪ್ತವಾಗಿ ತನ್ನನ್ನು ತೆರೆದುಕೊಳ್ಳುತ್ತಲೇ ಇರುತ್ತದೆ. ಅದರ ಕರ್ಮವದು. ಕರ್ಮವನ್ನು  ಪಾಲಿಸಲೇ ಬೇಕು. ಅದರೊಳಗೆ ಸೌಂದರ್ಯವನ್ನೋ, ರೌದ್ರವನ್ನೋ ಹುಡುಕುವವರು ನಾವು.

ಈ ನಡುವೆ ಸಮುದ್ರ ಅತ್ತರೆ ಅದು ಅಷ್ಟು ದೊಡ್ಡ ಅಲೆ ಬಂಡೆಗೆ ಅಪ್ಪಳಿಸುವ ಸದ್ದಿನ ನಡುವೆ ಕೇಳಿಸದೇ ಹೋದೀತು. ಸಮುದ್ರಕ್ಕೂ ಜಿಗುಪ್ಸೆ ಬಂದರೆ ಅಷ್ಟು ವಿಶಾಲ ಒಡಲಿನಲ್ಲಿ ಅದನ್ನು ಕಾಣಲಾಗದು. ದಡದಲ್ಲೇ ಕುಳಿತು ಏಕಾಗ್ರತೆಯಿಂದ ನೋಡುತ್ತಲೇ ಕುಳಿತರೆ ಸಮುದ್ರವನ್ನೂ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳಬಹುದೋ ಏನೋ... ಆದರೂ ಕಷ್ಟವೇ ಬಿಡಿ.

ತನ್ನದೇ ಲೋಕ, ತನ್ನದೇ ಏಕಾಂತ, ತನ್ನದೇ ಒಂದು ವಿಷಣ್ಣ ನಗು, ಮೌನ ರೋಧನ, ಬಿಡಿಸಿದಷ್ಟೂ ಮುಗಿಯದ ಅಲೆಗಳ ಮಡಿಕೆ, ವಿಚಿತ್ರ ಘಮಲು, ಅಂಟಿದಂತಾಗಿ ಮತ್ತೆ ಉದುರಿ ಹೋಗುವ ಮರಳ ರಾಶಿ, ಎಷ್ಟಿದ್ದರೂ ಕುಡಿಯಲಾಗದ ಉಪ್ಪು ನೀರು, ಸಂಜೆ ಮಾತ್ರ ತಂಪು ನೀಡಿ ನಡು ಮಧ್ಯಾಹ್ನ ನೆತ್ತಿ ಸುಡುವು ಸೂರ್ಯ... ಎಷ್ಟೊಂದು ವೈರುಧ್ಯಗಳ ಕಡಲನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ...

ಎಲ್ಲಿಯೂ ಹೇಳಲಾಗದೆ ತನ್ನೆದುರು ಬಂದು ಕೂತು ಪಿಸುಗುಟ್ಟುವ ಜೋಡಿಗಳು, ಬದುಕು ಸಾಕೆಂದು ಬಂದು ಹಾರುವ ವೈರಾಗಿಗಳು, ಹೊಟ್ಟೆ ಪಾಡಿಗೆ ಕಡು ಗಾಳಿಯಲ್ಲೂ ದೋಣಿ ತಂದು ರಾತ್ರಿಯಿಡೀ ಮೀನುಗಾರಿಕೆಗೆ ಹೊರಡುವ ಮಂದಿ, ಗಾಳಿಪಟ ಹಿಡಿದು ಬಂದು ಮರಳಲ್ಲಿ ಗೂಡು ಕಟ್ಟುವ ಸುಖೀ ಕುಟುಂಬಗಳು ಎಲ್ಲದಕ್ಕೂ, ಎಲ್ಲರಿಗೂ ಸಮುದ್ರ ಮೂಕ ಪ್ರೇಕ್ಷಕ. ಯಾರ ಬಗೆಗೂ ಸಮುದ್ರ ಷರಾ ಬರೆಯುವುದಿಲ್ಲ. ಮಾತೂ ಆಡುವುದಿಲ್ಲ. ವಿರಾಟ್ ವಿರಾಗಿ, ವಿಚಿತ್ರ ನಿರ್ಲಿಪ್ತತೆ ಹಾಗೂ ಅಪಾರ ಕರುಣಾಮಯಿ. 

ಎಂತಹದ್ದೇ ಕಲ್ಮಶ ಎಸೆದರೂ ಆ ಕ್ಷಣಕ್ಕೆ ನುಂಗಿಕೊಂಡು ಮತ್ತೆಲ್ಲಿಯೋ ಮತ್ತೆ ದಡಕ್ಕೆ ತಂದು ಹಾಗುವ ನಿಸ್ವಾರ್ಥಿ.... ಒಳಗೊಂದು, ಹೊರಗೊಂದು ಭಾವವಿಲ್ಲ ಸಮುದ್ರಕ್ಕೆ. ಆಚೆ ನೋಡೋಣವೆಂದರೆ ಸಮುದ್ರದ ಆಚೆ ಬದಿ ಕಾಣಿಸುವುದೇ ಇಲ್ಲ. ಅಷ್ಟೊಂದು ಅಗಾಧ, ಆಳ, ದೀರ್ಘ.

ಅದಕ್ಕೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದೃಶ್ಯಕಾವ್ಯ...
ಮಹಾನ್ ಮೌನಿ, ದೀರ್ಘ, ಅಪಾರ ದೇಹಿ, ಶೃಂಗಾರ ಪ್ರಧಾನ, ರೋಮ್ಯಾಂಟಿಕ್ ವಾತಾವರಣ, ಬದುಕು ಕೊನೆಗಾಣಿಸಲು ಸೂಕ್ತ ಜಾಗ, ಧ್ಯಾನಕ್ಕೆ ಪ್ರಶಸ್ತ, ಕವನ ಬರೆಯಲು, ದೀರ್ಘ ಯೋಚನೆಯಲ್ಲಿ ತೊಡಗಲು ಎಲ್ಲದಕ್ಕೂ ಒಳ್ಳೆ ಜಾಗ... ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಒಂದೇ ಕಡಲು. ಆದರೆ ಕಂಡುಬರುವ ಆಂಗಲ್ ಮಾತ್ರ ಬೇರೆ ಬರೆ...

ಆದರೂ ಕಡಲಾಳದಲ್ಲಿ ಮೊರೆಯುವ ಕ್ಷೀಣ ದನಿ, ಪುಟ್ಟದೊಂದು ಅಳು, ಮೌನದಾಲಾಪನೆಗೆ ಕಿವಿಕೊಟ್ಟು ನೋಡಲು ಪ್ರಯತ್ನಿಸಿ.... ನಿಮಗೂ ಕೇಳಿಸೀತು...
ಕಡಲು ಕರೆದು ಹೇಳದು, ಅದು ಮೌನಿ, ಬಾಯಿ ಬರುವುದಿಲ್ಲ. ಎದೆಗೆ ಕಿವಿಗೊಟ್ಟರೆ ಅಷ್ಟಿಷ್ಟು ಅರ್ಥವಾದೀತು. ಮಹಾಮೌನಿಯ ಪಿಸುಮಾತು... ಕೇಳಿಯೂ ಕೇಳಿಸದ ಹಾಗೆ....

Saturday, February 13, 2016

ಹರ್ ದಿಲ್ ಜೋ ಪ್ಯಾರ್ ಕರೇಗಾ....
ಪ್ರೀತಿಯೆಂಬುದು ಒಂದು ಫೀಲಿಂಗ್, ಹೃದಯದಲ್ಲಿನ ಒಂದು ಹುಟ್ಟು ಮಚ್ಚೆ, ಅದನ್ನು ಅನುಭವಿಸಬೇಕೆ ವಿನಃ ಮತ್ತೊಬ್ಬರು ವಿವರಿಸಿದರೆ ಕೇಳಬೇಕೆಂಬುದು ಹಾಸ್ಯಾಸ್ಪದ.
-ಖ್ಯಾತ ಲೇಖಕರೊಬ್ಬರ ಸಾಲುಗಳಿವು.
--------------------
ಈ ಪ್ರಪಂಚದಲ್ಲಿ ಯಾರಿಗಾದರೂ ನಾವು ಜವಾಬ್ದಾರರಾಗಿರಬೇಕಾಗಿ ಬಂದರೆ ಅದು ನಾವು ಪ್ರೀತಿಸಿದವರಿಗೆ ಮಾತ್ರವೇ. ಅದು ಎಷ್ಟೇ ಚಿಕ್ಕ ಕೆಲಸಕ್ಕಾದರೂ ತೆಗೆದುಕೊಳ್ಳಿ, ಎಷ್ಟೇ ಚಿಕ್ಕ ನಿರ್ಣಯಕ್ಕಾದರೂ ಸರಿ...
ಸೋ ಕಾಲ್ಡ್ ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ಅಂದುಕೊಂಡಿದ್ದು...

ಪ್ರೀತಿಯೆಂದರೆ ಮೌನವಲ್ವೇ... ಅದನ್ನು ಬಾಯಿಯಿಂದ, ಪೆನ್ನಿನಿಂದ, ಕೃತಿಯಿಂದ ಹೇಳಹೊರಟರೇ ತುಸು ಹೆಚ್ಚೋ ಕಮ್ಮಿಯೋ ಆಗಿ ಹೆಚ್ಚುಕಮ್ಮಿಯಾದೀತು...
ಅದು ಅನುಭವಕ್ಕೆ, ಚಿಂತನೆಗೆ, ಆದರ ಅನುಭೂತಿಗೆ ವೇದ್ಯವಾಗುವುದು. ಪ್ರೀತಿಸಿದಾತನಿಗೂ, ಪ್ರೀತಿಸಲ್ಪಟ್ಟವನಿಗೂ ಅದು ಗೊತ್ತಾಗೇ ಆಗುತ್ತದೆ... ಇದಕ್ಕಿಂತ ಹೆಚ್ಚಿನ ಡೆಫಿನಿಶನ್, ಗ್ರೀಟಿಂಗ್ ಕಾರ್ಡು, ಕವನದ ಸಾಲುಗಳು ಪ್ರೀತಿಗೆ ಬೇಕಾ...

----------
ಪ್ರೀತಿಯ ಅಭಿವ್ಯಕ್ತಿ ಕುರಿತು ಎಲ್ಲೋ ಓದಿದ ಸುಂದರ ಸಾಲುಗಳಿವು...

ತುಂಬಾ ಪ್ರೀತಿ ಪಾತ್ರರಿಬ್ಬರು ಎಷ್ಟೋ ಕಾಲದ ಬಳಿಕ ಸಂಧಿಸಿದಾಗ ಮರದ ಕೆಳಗಿನ ಕಲ್ಲು ಬೆಂಚಿನಲ್ಲಿ ಅಕ್ಕಪಕ್ಕ ಮೌನವಾಗಿ ಗಂಟೆಗಳ ಕಾಲ ಕುಳಿತು ಎದ್ದು ಹೋದ ಮೇಲೆ ತುಂಬಾ  ಮಾತನಾಡಿದ ಭಾವ ಮೂಡುವುದಿದ್ದರೆ ಅವರ ನಡುವಿನ ಪ್ರೀತಿ, ಅರ್ಥೈಸಿಕೊಳ್ಳುವಿಕೆ  ಆ ಲೆವೆಲ್ಲಿಗೆ ಇದೆ ಅಂತ ಅರ್ಥ. ನಿಜ ಅನ್ನಿಸುತ್ತದೆ.

ಮಾತಿಗೆ, ಬರವಣಿಗೆಗೆ, ಅಭಿವ್ಯಕ್ತಿಗೆ ನಿಲುಕದ್ದು ಪ್ರೀತಿ. ಸ್ಕೋಪ್, ಮೆರಿಟ್, ಡಿಮೆರಿಟ್ ಲೆಕ್ಕ ಹಾಕಿ ಮುಂದುವರಿಯಲಾಗದ ಅಸಹಾಯಕತೆ ಪ್ರೀತಿ... ಹೇಳ್ಕೊಂಡೇ, ಕೇಳ್ಕೊಂಡೇ ಬಾರದ್ದು ಪ್ರೀತಿ. ಸಿಗಬೇಕಾದಲ್ಲಿ ಸಿಕ್ಕದೆ, ಸಿಗಬೇಕಾದ ಹೊತ್ತಿಗೆ ನಿಲುಕದೆ, ಸಿಕ್ಕು ಹಾಕಿಕೊಂಡಿರುವುದು ಪ್ರೀತಿ... ಅದು ಪಕ್ಕಾ ಅನುಭೂತಿ. ಭಾವನಾತ್ಮಕ ತಲ್ಲಣ...
ಅದಕ್ಕೊಂದು ಚೌಕಟ್ಟು, ಶಿಸ್ತು, ತುಂಟತನ, ನಿರೀಕ್ಷೆಗಳ ಮಿತಿ ಹಾಕಿದವರು, ಅದನ್ನು ಜಾಗರೂಕತೆಯಂದ ಎಣ್ಣೆ ತುಂಬಿದ ಬಟ್ಟಲಿನ ಹಾಗೆ ಜೋಪಾನವಾಗಿಡುವವರು ನಾವೇ...
ಅದಕ್ಕೆ ಪ್ರೀತಿಯಲ್ಲಿ ಆಹ್ಲಾದಕತೆ ಇದ್ದಷ್ಟೇ ದುಖವೂ, ಕಣ್ಣೀರಿಗೂ ಜಾಗವಿರುತ್ತದೆ...


ಎಷ್ಟೋ ಬಾರಿ ಅಕ್ಷರಗಳಲ್ಲಿ, ಆಡುವ ಮಾತಿನ ಪದಗಳಲ್ಲಿ, ಧಾಟಿಯಲ್ಲಿ, ಒಂದು ಅವಾಯ್ಡ್ ಮಾಡಿದ ನಿಮಿಷಗಳಲ್ಲಿ, ಯಾಕೆ... ಸಂದೇಶಗಳ ನಡುವಿನ ಮೌನದಲ್ಲಿ ಮಿಸ್ಡ್ ಕಾಲಿನಲ್ಲಿ, ಬ್ಲಾಂಕ್ ಮೆಸೇಜ್ ಗಳಲ್ಲೆಲ್ಲಾ ಪ್ರೀತಿಯನ್ನು ಹುಡುಕುತ್ತೇವೆ. ದೂರ ಮಾಡಿದೆ, ದೂರವಿದ್ದೇನೆ, ಎಲ್ಲ ಕಳಚಿಕೊಂಡಿದ್ದೇನೆ ಎಂದುಕೊಳ್ಳುವಾತ, ಆಕೆ ದೂರವಾದ ಅಷ್ಟೂ ಹೊತ್ತೂ ದೂರವಾಗಿಸಿದ್ದನ್ನು ನೆನೆದು ಮತ್ತೆ ಆ ಬಂಧವನ್ನು ಗಟ್ಟಿ ಮಾಡುತ್ತಾರೆ ಹೊರತು ದೂರವಾಗುವುದು ಭ್ರಮ ಅಷ್ಟೆ. ಅಲ್ಲಿ ಬುದ್ಧಿ, ವಿವೇಕ, ವಿವೇಚನೆ, ಸಹನೆ, ನೈತಿಕತೆಯ ಬೇರೆ ಬೇರೆ ಬ್ರೇಕುಗಳ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.


ಹೇಳದೆ ಆವರಿಸುವ ಪ್ರೀತಿ, ಕೇಳದೆ ದಾಳಿಯಿಡುವ ಮೋಹ, ಕಂಡು ಕೇಳರಿಯದ ಸಂದಿಗ್ಧ, ಗೊಂದಲ, ಕಾತರ, ಕುತೂಹಲ, ಉದ್ವಿಗ್ನತೆಯ ಹಂತಗಳು ಪ್ರೀತಿಯ ಮಾಯೆ. ಹೇಳದೆ ಮೂಡುವ ಪ್ರೀತಿ ಹೇಳದೆ ಸದ್ದಿಲ್ಲದೇ ಅಲ್ಲಲ್ಲಿಗೇ ಸತ್ತು ಸಮಾಧಿ ಸೇರುವ ಉದಾಹರಣೆಗಳೆಷ್ಟು ಬೇಡ. ಹುಟ್ಟಿಕೊಂಡ ಪ್ರೀತಿಯನ್ನೆಲ್ಲರೂ ಹೇಳಿಕೊಳ್ಳುವುದಿಲ್ಲ, ಹೇಳಿಕೊಳ್ಳುವ ಅಗತ್ಯವೂ ಇಲ್ಲ, ಹೇಳಲಿಕ್ಕೆ ಆಗುವುದಿಲ್ಲ ಕೂಡಾ, ಆ ಪ್ರೀತಿ ತನಗೆ ತಾನೇ ಸಾಂತ್ವನ ಹೇಳುವ, ತನ್ನಲ್ಲೇ ಭಾವನೆಗಳನ್ನು ಬಚ್ಚಿಟ್ಟಕೊಳ್ಳುವಂತಾದಾಗ ನಿರಾಸೆ, ವಿರಹ, ಮತ್ತೆ ಸಾಂತ್ವನವೆಲ್ಲ ನಿರೀಕ್ಷಿತವೇ. ನಿರ್ಲಿಪ್ತ ಜೀವಿಗಳಿಗೆಲ್ಲ ಗೊತ್ತಿರುತ್ತದೆ ಹೇಳದೆ ಹೋದ ಪ್ರೀತಿ ಎಲ್ಲಿಗೆ ಹೋಗಿ ತಲಪುತ್ತದೆ ಎಂದು. ಕೈಗೂಡದ ಪ್ರೀತಿಯನ್ನು ಹೇಳಿದರೂ ಅಷ್ಟೇ... ಹೇಳದಿದ್ದರೂ ಅಷ್ಟೇ... ಪ್ರೀತಿಸಿದವನಿಗೂ, ಪ್ರೀತಿಪಾತ್ರನಿಗೂ ಅದು ಗೊತ್ತಿರುತ್ತದೆ. ವಿಚಿತ್ರವೆಂದರೆ ಇಬ್ಬರೂ ಬಾಯಿ ಬಿಟ್ಟು ಹೇಳಿರುವುದಿಲ್ಲ. ಸುತ್ತು ಬಳಸು ಮಾತು, ಒಗಟಿನ ಸಂಭಾಷಣೆ, ಅಂತ್ಯವೇ ಇಲ್ಲದ ಹರಟೆ ಎಲ್ಲ ಮುಗಿದ ಮೇಲೂ ಹೇಳ ಬೇಕಾದ ಮಾತುಗಳನ್ನು ಹೇಳಿರುವುದೇ ಇಲ್ಲ. ಹೇಳಲು ಸಾಧ್ಯವಾಗುವುದೇ ಇಲ್ಲ.... ಆದರೂ ಸುಪ್ತವಾಗಿರುವ ಪ್ರೀತಿ ಸುಪ್ತವಾಗಿಯೇ ಸದ್ದಡಗಿಸಿ ಮುಂದೊಂದು ದಿನ ಸತ್ತು ಸಮಾಧಿ ಸೇರಿದ ನೆನಪುಗಳ ಹಾಗೆ. ಸಮಾಧಿಯನ್ನು ಕಂಡಾಗಲೆಲ್ಲಾ ಅದೇ ಜೀವಿತದ ನೆನಪು...

ಪ್ರೀತಿ ಹುಟ್ಟಿಸುವ ಕಾತರ, ಕಳೆದುಕೊಂಡಂತೆ ಮಾಡುವ ಚಡಪಡಿಕೆ, ನೆಪ ಹುಡುಕಿ ಆಡುವ ಮಾತುಗಳು.... ಸಿಟ್ಟು ಮಾಡ್ಕೊಂಡು ಹೋಗು ನಡೆ ಎಂದು ಅಬ್ಬರಿಸಿ ಮುಖ ತಿರುವಿದ ಬಳಿಕ ಸ್ವಲ್ಪ ಹೊತ್ತು ಕಳೆದು ಮಾತನಾಡಿಸಲಿಲ್ಲ ಯಾಕೆ ಎಂದು ಮತ್ತೆ ಜಗಳದ ಧಾಟಿಯಲ್ಲೇ ಮಾತಿಗಿಳಿದು ರಾಜಿ ಮಾಡಿಕೊಳ್ಳುವ ಪರಿ.... ಸಿಟ್ಟಿನಲ್ಲೂ ಕಾಡುವುದು ಮತ್ತೆ ಪ್ರೀತಿಯೇ ಅಲ್ಲವೇ..

ದೂರ ಹೋಗಬಹುದು, ದೂರಬಹುದು, ದೂರದಿಂದಲೇ ನೋಡುತ್ತಿರಬಹುದು, ಎದುರಿಗೆ ಸಿಗದಿರಬಹುದು, ಮಾತನಾಡಿಸದೇ ಹೋಗಬಹುದು, ಕಂಡೂ ಕಾಣದಂತೆ ನಡೆಯಬಹುದು, ಆದರೆ ಎದೆಯ ಬಗೆದರೆ ತುಡಿಯುವ ಪ್ರೀತಿಯ ಮಿಡಿತವನ್ನು ಮುಚ್ಚಿಟ್ಟರೂ ಅದರ ಕಂಪನ ಮಾತ್ರ ಕಾಣುವವರಿಗೆ ಕಾಣಿಸುತ್ತದೆ. ಅದನ್ನು ಡಿಲೀಟ್ ಮಾಡುವಂತಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಇಷ್ಟೊಂದು ಪ್ರೇಮ ಕವನ, ಹಾಡುಗಳು, ಸಿನಿಮಾಗಳಿಗೆ ಪ್ರೇರಣೆಯೇ ಇರುತ್ತಿರಲಿಲ್ಲ....
ನೆನಪುಗಳೇ ಪ್ರೀತಿಯ ಸಮಾಧಿಗೆ ಹಾಕಿದ ಬೀಗದ ಕೈಗಳನ್ನು ಸಡಿಲಗೊಳಿಸುವ ಶತ್ರುಗಳು. ದಿನವಿಡೀ ಕಾಡದಿದ್ದರೂ ಆಗಾಗ್ಗೆ ನೆನಪು ಹುಟ್ಟಿಸಿ ಪುಟ ತಿರುಗಿಸುವ ಕಾಣದ ಕೈಗಳವು.
----------

ಕಾತರ, ಚಡಪಡಿಕೆ, ನಿರಾಸೆ, ಕಣ್ಣೀರು, ಅಸಹಾಯಕತೆ ಕಾಡಿಸುವ, ಪೀಡಿಸುವ ಪ್ರೀತಿಯಲ್ಲೂ ಒಂದು ಸಾಂತ್ವನವೂ ಇದೆ. ದುಷ್ಟರನ್ನೂ ಸಾತ್ವಿಕರನ್ನಾಗಿಸುವ ಮಮತೆಯಿದೆ, ಅವಸರದ ಮನುಷ್ಯನನ್ನು ಕಾಯಿಸುವ, ಕೂಡಿಸುವ, ಪರೀಕ್ಷಿಸುವ ಮಾಯೆಯಿದೆ, ಒಂದು ಪ್ರಾಮಾಣಿಕತೆಯನ್ನು, ಬದ್ಧತೆಯನ್ನು, ಉತ್ತರದಾಯಿತ್ವವನ್ನು ಕಟ್ಟಿಕೊಡುವ ಅಪಾರ ಅಂತರಶಕ್ತಿಯ ಚೇತನ ಪ್ರೀತಿ. ಯಾರ ಜೊತೆಗೇ ಇರಲಿ.... 
ಶುರುವಿಗೇ ಹೇಳಿದ ಹಾಗೆ ಪ್ರೀತಿಸುವವ ಕುರಿತು ನಮಗಿರುವ ಬದ್ಧತೆಯನ್ನು ಪ್ರಶ್ನಿಸಲಾಗದು. ಒಂದು ಕ್ಷಣದ ಸಿಟ್ಟು, ಒಂದು ಎದುರು ಮಾತು, ಒಂದು ಅಗಲುವಿಕೆ, ಒಂದು ನಿರಾಸೆಯ ಕಂಪನ ಮೂಡಿಸಿದರೂ ಆಂತರ್ಯದಲ್ಲಿರುವ ಪ್ರೀತಿಯ ಜೊತೆಗೆ ಅವರ ಕುರಿತ ಅಪಾರ ಗೌರವ, ಯಾವತ್ತಿಗೂ ಸುಖವಾಗಿರಲಿ ಎಂಬ ಆಶಯ ಹಾಗೂ ತೋರಿಸಿಯೂ ತೋರಿಸದಂತಹ ಸಲುಗೆ, ಅಧಿಕಾರ ಮತ್ತು ಅಪಾರ ಕಾಳಜಿ (ಪೊಸೆಸಿವ್ ನೆಸ್ ಕೂಡಾ) ಪ್ರೀತಿ ಜೊತೆಗೆ ಉಚಿತವಾಗಿ ಬರುವ ಬೈ ಪ್ರಾಡಕ್ಟ್ ಗಳೇನೋ...

ಮೌನಕ್ಕಿಂತ ಮಿಗಿಲಾಗಿ ಪ್ರೀತಿಯನ್ನು, ಕಾಳಜಿಯನ್ನು, ವಿದಾಯವನ್ನು ಹೇಳಲಾಗದು. ಮಾತುಗಳು ಸೋಲುವಲ್ಲಿ, ನಮ್ಮನ್ನು ಮಾವು ಸಮರ್ಥಿಸುವಲ್ಲಿ ವಿಫಲರಾಗುವಲ್ಲಿ, ಹೇಳಿಕೊಂಡು ಹಗುರಗಾವು ಸಾಧ್ಯತೆ ಕ್ಷೀಣಿಸದಲ್ಲಿ ಮೌನವೇ ಮಾತಾಗುವುದು. ಅದನ್ನು ಗ್ರಹಿಸುವ ಮನಸ್ಸಿಗೆ ಆ ಮೌನ ಅಷ್ಟೇ ಮೌನವಾಗಿ ಹೇಳಬೇಕಾದ್ದನ್ನು ತಲುಪಿಸುವ ವರೆಗೆ...
-----------

ಪ್ರೀತಿಯ ಬಗ್ಗೆ ಕಂಡು ಬಂದ ಮೆಚ್ಚಿನ ಸಾಲುಗಳು...

--------
ನಾವೆಷ್ಟೇ ಪ್ರೀತಿಸುವವರು, ಒಮ್ಮೆಗೆ ನಮ್ಮನ್ನು ಅವಾಯ್ಡ್ ಮಾಡುತ್ತಿದಾರೆಂದು ತಿಳಿದರೆ, ಅವರನ್ನು ಮತ್ತಷ್ಟು ನೋಡಬೇಕೆಂಬ ಆಸೆ ಮತ್ತಷ್ಟು ತೀವ್ರವಾಗುವುದು ಸಹಜ. ದೂರವಾಗಲು ಕಾರಣಗಳು ತಿಳಿದಾಗಲೂ ಅಷ್ಟೇ..
-ಪ್ರಸಿದ್ಧ ಕಾದಂಬರಿಕಾರರೊಬ್ಬರ ಸಾಲುಗಳಿವು...
---------
ಒಬ್ಬ ಮನುಷ್ಯನ ಬಗ್ಗೆ ನಾವು ಯಾವುದಕ್ಕಾಗಿ ಇಷ್ಟಪಡುತ್ತೇವೇಯೋ, ಗೌರವ ಇಡುತ್ತೇವೆಯೋ, ಅದನ್ನು ಮುಂದಾಗಿಟ್ಟುಕೊಂಡು ನಾವು ಇನ್ನೊಂದು ಸನ್ನಿವೇಶದಲ್ಲಿ ಅದೇ ಮನುಷ್ಯನ ಬಗ್ಗೆ ಅಥವಾ ಬೇರೊಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಬಿತ್ತರಿಸುತ್ತೇವೆ.
-ಶಾಂತಾರಾಮ ಸೋಮಯಾಜಿ.

------
ಅತಿ ಒರಟುತನ ವ್ಯಕ್ತಿತ್ವವನ್ನು ಹಾಳು ಮಾಡುವಂತೆಯೇ ಅತೀ ಸೂಕ್ಷ್ಮತೆಯೂ ವ್ಯಕ್ತಿಯ ಮನಸ್ಸಿನ ಸೂಕ್ಷ್ಮತೆಯೂ ವ್ಯಕ್ತಿಯ ಮನಸ್ಸಿನ ನೆಮ್ಮದಿಯನ್ನು ಕಳೆದು ಬಿಡುತ್ತದೆ.
-----
ಹೃದಯದಲ್ಲಿ ಹುದುಗಿದ ಪ್ರೇಮದ ಪ್ರಮಾಣಕ್ಕೆ ಮಾತಿನ ಅಳತೆ ಅನಾವಶ್ಯಕ
-ಎಂ.ವಿ.ಸೀತಾರಾಮಯ್ಯ
-------
ಒಂಟಿತನ ಬೇರೆ, ಏಕಾಂತ ಬೇರೆ. ಪ್ರೀತಿಸುವ ವ್ಯಕ್ತಿಯಿದ್ದರೆ ಏಕಾಂತದಲ್ಲಿ ಆ ಬಾಗಿಲು ಕೊಡುವ ಸಂತೋಷವನ್ನು ಯಾವುದೂ ಕೊಡುವುದಿಲ್ಲ. ಪ್ರೀತಿಸಲು ಯಾರೂ ಇಲ್ಲದಾಗ ಉಂಟಾಗುವುದು ಒಂಟಿತನ. ಅಷ್ಟು ಭಯಂಕರವಾದುದು ಇನ್ಯಾವುದೂ ಇಲ್ಲ.
-ಓರ್ವ ಕಾದಂಬರಿಕಾರ.

Wednesday, February 10, 2016

ಯಕ್ಷಮಿತ್ರರೊಂದಿಗೆ ಸ್ವಗತ...


ಎಲ್ಲೋ ಒಂದು ಕಡೆ ನೀರವ ರಾತ್ರಿಯಲ್ಲಿ ನಾಲ್ಕೈದು ಮಂದಿ ಯಕ್ಷಗಾನಕ್ಕೆ ಹೋಗೋದು. ಅಲ್ಲಿಂದಲೇ ಫೋಟೊ ತೆಗೆದು, ಹಾಡು ಧ್ವನಿಮುದ್ರಿಸಿ ವಾಟ್ಸಾಪ್ ಗ್ರೂಪಿಗೆ ಅಪ್ ಲೋಡ್ ಮಾಡೋದು. ನಮ್ಮ ಗ್ರೂಪಿನಲ್ಲಿರುವ 220 ಮಂದಿಯ ಮೊಬೈಲಿನಲ್ಲಿ ತಕ್ಷಣ ಅದು ಪ್ರತ್ಯಕ್ಷವಾಗೋದು. ಆಸಕ್ತರು ಡೌನ್ ಲೋಡ್ ಮಾಡಿ ನೋಡೋದು, ನಿರಾಸಕ್ತರು ಕ್ಲಿಯರ್ ಚಾಟ್ ಕೊಟ್ಟು ಮತ್ತೆ ಮಲಗೋದು. ಅತಿ ಆಸಕ್ತರು ಇನ್ನಷ್ಟು ಹಾಡು ಬರಲಿ ಅಂತ ಡಿಮ್ಯಾಂಡ್ ಮಾಡೋದು. ಇವೆಲ್ಲ ಯಕ್ಷಗಾನ ವಾಟ್ಸಾಪ್ ಗ್ರೂಪ್ ಶುರು ಮಾಡಿದ ಮತ್ತೆ ಕಂಡುಕೊಂಡ ಸ್ವಾರಸ್ಯಗಳು....

ಎತ್ತಣದ ಮಾಮರವೋ, ಎತ್ತಣವೋ ಕೋಗಿಲೆಯೋ ಅನ್ನುವ ಹಾಗೆ.
ಕವಳ ಹಾಕೋರು, ಬೀಡಿ ಸೇದೋರು ಸ್ನೇಹಿತರಾಗುವ ಹಾಗೆ. ಯಕ್ಷಗಾನ ನೋಡೋರು ಕೂಡಾ (ದುಶ್ಚಟದ ಸಾಲಿಗೆ ಸೇರಿಸಬೇಡಿ) ಯಕ್ಷಗಾನ ಎಂಬ ಕಾರಣಕ್ಕೆ ಇಲ್ಲಿ ಸ್ನೇಹಿತರಾಗಿದ್ದಾರೆ. ಯಾವುದೋ ಮೂಲೆಯ ಒಂದೂರಲ್ಲಿ ನಡೆಯುವ ಆಟದಲ್ಲಿ ಕೆಲವೊಮ್ಮೆ 50-60 ಮಂದಿ ಪ್ರೇಕ್ಷಕರಿರುತ್ತಾರೋ ಇಲ್ಲವೋ. ಆದರೆ, ಆ ಆಟಕ್ಕೆ ಹೋದ ನಮ್ಮ ಗ್ರೂಪಿನ ಸದಸ್ಯರು ಅದರ ಮಾಹಿತಿಯನ್ನು ಗ್ರೂಪಿಗೆ ಹಾಕಿದರೆ ತಕ್ಷಣ 220 ಮಂದಿಯನ್ನೂ ತಲಪುತ್ತದೆ. ಎಷ್ಟು ಮಂದಿ ನೋಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ (ಅದನ್ನೂ ತಿಳ್ಕೊಳ್ಳಲು ತಂತ್ರಜ್ಞಾನವಿದೆ).
ಆದ್ರೂ ಎಂಥ ರೋಚಕ ವಿಷಯ ಇದಲ್ವ.

ನಮ್ಮ ಗ್ರೂಪಿನಲ್ಲಿ ಅಮೆರಿಕಾ, ಯುಎಇ, ಬೆಂಗಳೂರು, ತುಮಕೂರು, ಕಾಸರಗೋಡು, ಉಡುಪಿ, ಬ್ರಹ್ಮಾವರ, ಕುಂದಾಪುರ, ಮೈಸೂರು... ಹೀಗೆ ಬೇರೆ ಬೇರೆ ಪ್ರಾಂತ್ಯಗಳ ಸದಸ್ಯರಿದ್ದಾರೆ. ಮಂಗಳೂರಿನ ಒಂದು ಆಟದ ಮಾಹಿತಿ ಗ್ರೂಪಿನಲ್ಲಿ ಹಾಕಿದ ತಕ್ಷಣ ಅವೆಲ್ಲ ಅವರನ್ನು ಕ್ಷಣಾರ್ಧದಲ್ಲಿ ತಲಪುತ್ತದೆ. ನಾನಾ ಕಾರಣಗಳಿಂದ ಬಯಲಾಟಗಳಿಗೆ ಹೋಗಲಾಗದವರೂ ಈ ಹಾಡು, ಫೋಟೊ, ವಿಡಿಯೋ ನೋಡಿ ಸಮಾಧಾನ ಪಟ್ಟುಕೊಳ್ಳಬಹುದು. ತಾನೂ ಆಟದ ಭಾಗವಾದ ಹಾಗೆ ಖುಷಿಪಟ್ಟುಕೊಳ್ಳಬಹುದು.

ಕೆಲವು ಸ್ನೇಹಿತರು ಕೇಳುವುದುಂಟು ಇಷ್ಟೆಲ್ಲಾ ಹಾಡು ಹಾಕ್ತೀರಲ್ಲ... ಯಾರಾದ್ರೂ ನೋಡ್ತಾರ ಅಂತೆ. ಎಲ್ಲ ಹಾಡು, ಫೋಟೊವನ್ನು ಗ್ರೂಪಿನ ಎಲ್ಲಾ 220 ಮಂದಿ ನೋಡುವ ನಿರೀಕ್ಷೆ ಇಲ್ಲ. ಹಾಗೆ ನೋಡುವುದಕ್ಕೆ ಸಾಧ್ಯವೂ ಇಲ್ಲ. ಪ್ರತಿಯಬ್ಬರಿಗೂ ಅವರವರ ತಲೆಬಿಸಿ, ಕೆಲಸ ಕಾರ್ಯಗಳು ಇರುತ್ತವೆ. ಆದರೆ, ಆಟಗಳಿಗೇ ಹೋಗಲು ಸಾಧ್ಯವಿಲ್ಲದವರು, ಮುಖ್ಯವಾಗಿ ಕರಾವಳಿ ಬಿಟ್ಟು ಪರವೂರುಗಳಲ್ಲಿ ಇರುವವರು ಇಲ್ಲಿನ ಆಗುಹೋಗುಗಳನ್ನು ಗಮನಿಸುತ್ತಲೇ ಇರುತ್ತಾರೆ ಅಂತ ನಾನು ನಂಬಿದ್ದೇನೆ... ಅಥವಾ ಕನಿಷ್ಠ ಐದಾರು ಮಂದಿ ಕಟ್ಟಾ ಯಕ್ಷಪ್ರೇಮಿಗಳು ನಾವು ಹಾಕಿದ ಹಾಡು ಕೇಳಿದರೆ ನಮ್ಮ ಪ್ರಯತ್ನ ಸಾರ್ಥಕ. ಅಷ್ಟೆ. 
ಅಷ್ಟು ಮಂದಿಗೆ ಒಂದು ಬಯಲಾಟದ ಮಾಹಿತಿ, ನೇರಪ್ರಸಾರ ತಲುಪಿಸಿದ ಖುಷಿ ನಮಗೆ ಸಿಗುತ್ತದೆ.
ಯಕ್ಷಗಾನ ಪ್ರೇಮಿಗಳಿಗೆ ತಾವು ನೋಡಿದ ಆಟದ ಮಾಹಿತಿಯನ್ನು ನಾಲ್ಕಾರು ಮಂದಿ ಜೊತೆ ಹಂಚಿಕೊಂಡಾಗ ಖುಷಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ನಮ್ಮ ಸಕ್ರಿಯ ಸದಸ್ಯರು ಉತ್ಸಾಹದಿಂದ ಹಾಡುಗಳನ್ನು, ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಬೇಕಾದವರು, ಬೇಕಾದ ಹಾಡುಗಳನ್ನು ಡೌನ್ಲೋಡ್ ಮಾಡ್ಕೊಂಡು ಕೇಳ್ತಾರೆ. ಪುರುಸೊತ್ತಿದ್ದವರು ಪ್ರತಿಕ್ರಿಯೆ ನೀಡುತ್ತಾರೆ. ತೀರಾ ಬಿಝಿ ಇದ್ದವರು ಆಗೊಮ್ಮೆ ಈಗೊಮ್ಮೆ ಇಣುಕುತ್ತಾರೆ ಇಲ್ಲೇನು ನಡೀತಾ ಇದೆ ಎಂದು....

ಲೋಕೋ ಭಿನ್ನ ರುಚಿ...
ವಿಭಿನ್ನ ಅಭಿರುಚಿ, ಊರು, ಪ್ರಾಂತ್ಯ, ಪ್ರದೇಶ, ವೃತ್ತಿ ಬದುಕಿನ ಸದಸ್ಯರ ಕೂಡುತಾಣವಿದು. ಎಲ್ಲದರ ಸಮ್ಮಿಲನವೇ ಒಂದು ವಾಟ್ಸಾಪ್ ಗ್ರೂಪ್. ಆಟಗಳ ಮಾಹಿತಿ, ಸೈದ್ಧಾಂತಿಕ ಜಿಲ್ನಾಸೆ ಎಲ್ಲದಕ್ಕೂ ಆರೋಗ್ಯಕರವಾಗಿ ನಮ್ಮ ಗ್ರೂಪ್ ಸ್ಪಂದಿಸುತ್ತಿರುವುದು ಸಮಾಧಾನದ ಸಂಗತಿ. ಮಹಿಷಾಸುರ ಕೊಂಬಿನಿಂದ ಪ್ರೇಕ್ಷಕರನ್ನು ಎಸೆದ ಎಂಬ ಸುದ್ದಿಗೆ ವೀಡಿಯೋ ಸಹಿತ ಸಾಕ್ಷಾತ್ ವರದಿಗಳೂ ಬಂದು ಸೇರಿದವು. ಪುತ್ತೂರು ಎಡನೀರು ಮೇಳದ ಆಟದ ಗೊಂದಲದ ಬಗ್ಗೆ ತಕ್ಷಣದ ಮಾಹಿತಿ ಮಾತ್ರವಲ್ಲ ಸ್ವತಃ ಕಲಾವಿದರ ಪ್ರತಿಕ್ರಿಯೆ ಕೂಡಾ ಬಲ್ಲಿರೇನಯ್ಯ ಬಳಗಕ್ಕೆ ಸಿಕ್ಕಿತು. ಎಲ್ಲವೂ ಇಲ್ಲಿ ಪ್ರಕಟಗೊಂಡಿತು. ವಿಷಯದ ಎಲ್ಲ ಮಗ್ಗುಲುಗುಳೂ ತಿಳಿದುಬಂತು. ಇದನ್ನೇ ಆರೋಗ್ಯಕರ ಚರ್ಚೆ ಎನ್ನುವುದು.

ಇನ್ನೊಂದು ಮಾತು... ಒಂದು ಗುಂಪು ಕಟ್ಟಿ ಅದನ್ನು ಉಳಿಸುವಲ್ಲಿ ಹಲವರು ಸಾಕಷ್ಟು ಶ್ರಮ ವಹಿಸರುತ್ತಾರೆ. ಹಾಗಾಗಿ ಹೊಸ ಸದಸ್ಯರನ್ನು ನೀವು ರೇಫರ್ ಮಾಡುವುದಿದ್ದಲ್ಲಿ ಅವರಿಗೆ ಈ ಗ್ರೂಪಿನ ಸ್ವರೂಪ ವಿವರಿಸಿ ಆಸಕ್ತಿ ಇದ್ದರೆ ಮಾತ್ರ ಸೇರಿಸುವ. 
ಅದೇ ರೀತಿ ಯಾರಾದರೂ ಗ್ರೂಪ್ ತ್ಯಜಿಸುವುದಿದ್ದರೆ ಕಾರಣ ಹೇಳಿ ಹೋಗಿ. ಏಕಾಏಕಿ ಗ್ರೂಪ್ ತ್ಯಜಿಸಿದರೆ ನಮಗೆ ಗೊಂದಲವಾಗುತ್ತದೆ. ಯಾಕೆ ಗ್ರೂಪ್ ಬಿಟ್ಟರು ಅಂತ. ಯಾವುದೋ ಕಾರಣಕ್ಕೆ ನೀವು ಗ್ರೂಪ್ ಬಿಟ್ಟಿರುತ್ತೀರಿ. ಅದರ ಕಾರಣ ತಿಳಿದರೆ, ಒಂದು ವೇಳೆ ನಮ್ಮ ಕಡೆಯಿಂದ ತಪ್ಪಾಗಿದ್ದರೆ ತಿದ್ದಿಕೊಳ್ಳಲು ನಮಗೆ ಅನುಕೂಲವಾಗುತ್ತದೆ. ಅದಕ್ಕಾಗಿ ಈ ಮನವಿ.


ತುಂಬಾ ಮಂದಿ ಬಿಡುವಿಲ್ಲದ ಕೆಲಸಗಳ ನಡುವೆಯೂ ನಿದ್ದೆಗೆಟ್ಟು ಇಡೀ ರಾತ್ರಿ ಆಟಗಳಿಗೆ ಹೋಗಿ ಪಾಪ ಮಾಹಿತಿ ಶೇರ್ ಮಾಡ್ತಾರೆ. ನಿಮಗೆ ಅವರ ಕಾರ್ಯ ಇಷ್ಟವಾಗಿದ್ದರೆ ದಯವಿಟ್ಟು ಅವರಿಗೊಂದು ಲೈಕ್ ಕೊಡಿ. ಅವರ ಕಲಾಸೇವೆಯನ್ನು ಪ್ರೋತ್ಸಾಹಿಸಿ. ಇದೊಂದು ನಿಸ್ವಾರ್ಥ ಕಾರ್ಯ ಅಷ್ಟೆ. ತುಂಬಾ ಮಂದಿ ಆಟಕ್ಕೆಹೋಗಿ ಟೆನ್ಶನ್ ಕಡಿಮೆ ಮಾಡ್ಕೊಳ್ತಾರೆ. ತಾವು ಕಂಡ ಖುಷಿಯನ್ನು ನಿಮ್ಮೊಂದಿಗೂ ಹಂಚಿಕೊಳ್ತಾರೆ. ಅವರ ಕೆಲಸವನ್ನು ಗುರುತಿಸಿ, ಪ್ರೋತ್ಸಾಹಿಸಿ.
PHOTO; Karunkara Balkur


----------
ಒಂದು ನೀರವ ರಾತ್ರಿ.... ಸುರಿಯುವ ಮಂಜಿನ ಮೈದಾನದಲ್ಲಿ ಅಂಗೈಯಗಲದ ಮೊಬೈಲಿನೊಂದಿಗೆ ಕುಳಿತ ವ್ಯಕ್ತಿ ವಾಟ್ಸಾಪ್ ಅಚ್ಚರಿ ಮೂಲಕ 220 ಮಂದಿಯನ್ನು ಏಕಕಾಲಕ್ಕೆ ತಲಪುವ ತಂತ್ರಜ್ಞಾನಕ್ಕೆ ಶರಣು.
ಯಕ್ಷಗಾನಂ ಗೆಲ್ಗೆ.
-ಕೆಎಂ.