ಬರಹದಂತೆಯೇ ಬಾಳಿ ತೋರಿಸಿದ ಬಾಳೇಪುಣಿ, ಸಹಜವಾಗಿ ಬರೆಯುವ, ಸಹಜವಾಗಿ ಬೆರೆಯುವ ಪತ್ರಕರ್ತ

 








ಇವರು ಬಾಳೇಪುಣಿ ಅಂತಲೇ ಪ್ರಸಿದ್ಧರು. ಆದರೆ, ಅದು ಅವರ ಬೈಲೈನ್. ಹೆಸರು ಗುರುವಪ್ಪ ಎನ್.ಟಿ.ಬಾಳೇಪುಣಿ. ಹುಟ್ಟಿದ್ದು ಉಳ್ಳಾಲ (ಹಿಂದಿನ ಬಂಟ್ವಾಳ) ತಾಲೂಕಿನ ಬಾಳೇಪುಣಿ ಗ್ರಾಮದಲ್ಲಿ. 1963ರ ಜೂ.1ರಂದು ಜನಿಸಿದ ಬಾಳೇಪುಣಿ ಅವರು ದಿ.ಶ್ರೀ ನಾರ್ಯ ಐತ ಮೊಗೇರ-ದಿ.ಶ್ರೀಮತಿ ದೇಯಿ ದಂಪತಿಯ 9 ಮಂದಿ ಮಕ್ಕಳಲ್ಲಿ ಏಳನೆಯವರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಹುಟ್ಟೂರು ಮುಡಿಪು ಪರಿಸರದಲ್ಲೇ ಪೂರೈಸಿದ ಬಳಿಕ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ (ಅಪೂರ್ಣ) ವ್ಯಾಸಂಗ ಮಾಡಿದರು. ಬಿ.ಎ.ಯ ಎರಡು ಪೇಪರ್ ಗಳನ್ನು ಇಂದಿಗೂ ಕಂಪ್ಲೀಟ್ ಮಾಡಲಿಲ್ಲ ಎನ್ನವ ಬಾಳೇಪುಣಿ ಅವರ ಪತ್ರಿಕೋದ್ಯಮದ ನಂಟಿಗೆ 2023ರಲ್ಲಿ 39 ವರ್ಷ ಪೂರೈಸಿದೆ.

ಹೊಸದಿಗಂತ ಪತ್ರಿಕೆಯೊಂದರಲ್ಲೇ ಅವರ ವರದಿಗಾರರಾಗಿ ವೃತ್ತಿಗೆ 2023 ಮೇ 31ರಂದು ಬರೋಬ್ಬರಿ 25 ವರ್ಷಗಳ ಸೇವೆ ಪೂರ್ಣಗೊಳಿಸುತ್ತಿದ್ದಾರೆ. ಅಂದ ಹಾಗೆ ಈ ವರ್ಷ ಆಯುಷ್ಯದ 60 ವಸಂತಗಳನ್ನೂ ಪೂರೈಸುತ್ತಿರುವ ಬಾಳೇಪುಣಿ ಕುಗ್ರಾಮವೊಂದರಿಂದ ಬಂದು, ಅಭಿವೃದ್ಧಿ ಪತ್ರಿಕೋದ್ಯಮವನ್ನು ವೃತ್ತಿಯಲ್ಲಿ ಸಾಕಾರಗೊಳಿಸಿ, ಅದೇ ಸಾರ್ಥಕತೆಯಲ್ಲಿ ಸುಮಾರು ಮೂರು ದಶಕವನ್ನು ಪತ್ರಿಕೋದ್ಯಮದಲ್ಲಿ ದಾಟಿ ಬಂದವರು. ಇಂದಿನ ಪೀಳಿಗೆಯ ಯುವ ಪತ್ರಕರ್ತರಿಗೆ ಗ್ರಾಮೀಣ ಪತ್ರಿಕೋದ್ಯಮ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಕುರಿತು ಸಮರ್ಥವಾಗಿ ಮಾರ್ಗದರ್ಶನ ನೀಡಬಲ್ಲ ಹಾಗೂ ಇದಮಿತ್ಥಂ ಎಂಬ ಹಾಗೆ ನಮ್ಮ ನಾಡಿನ ಅಭಿವೃದ್ಧಿ ಪರ ವಿಚಾರಗಳ ಕುರಿತ ಮಾಧ್ಯಮ ಹೊಂದಿರಬೇಕಾದ ದೃಷ್ಟಿಕೋನದ ಕುರಿತು ಖಚಿತವಾಗಿ ಮಾತನಾಡಬಲ್ಲವರು.

ಪತ್ರಿಕೋದ್ಯಮದ ಶಿಕ್ಷಣ ಜನಪ್ರಿಯವಾದ ಪರಿಕಲ್ಪನೆಗೂ ಮೊದಲು ಎಳವೆಯಲ್ಲೇ ಪತ್ರಕರ್ತನಾಗುವ ಕನಸು ಕಂಡ ಬಾಳೇಪುಣಿ ಹಠದಿಂದ ಅದನ್ನು ಸಾಧಿಸಿ, ವೃತ್ತಿ ಬದುಕಿನುದ್ದಕ್ಕೂ ಶುದ್ಧಹಸ್ತ ಹಾಗೂ ವಸ್ತುನಿಷ್ಠ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಸಹಜವಾಗಿ ಪಾತ್ರರಾಗಿದ್ದಾರೆ. ಇದು ಉತ್ಪ್ರೇಕ್ಷೆಯ ಅಥವಾ ಹೊಗಳಿಕೆಯ ಸಾಲುಗಳಲ್ಲ, ಅವರ ಆಪ್ತ ಪತ್ರಕರ್ತರೆಲ್ಲರಿಗೂ ತಿಳಿದಿರುವ ವಿಚಾರ.

ವ್ಯಸನಮಮುಕ್ತರು, ಕೃಷಿಕರು, ಜನಪರ ಕೆಲಸ ಮಾಡಿದ ಅಧಿಕಾರಿಗಳು, ಸಮಾಜಮುಖಿ ಸಂತರು, ನಿಸ್ವಾರ್ಥಿ ಜನಸೇವಕರ ಕುರಿತು ಅವರು ಮಾಡಿರುವ ವರದಿಗಳು, ವರದಿಗಳ ಹಿನ್ನೆಲೆ ಹಾಗೂ ಅವುಗಳ ಫಾಲೋಅಪ್ ಬೆಳವಣಿಗೆಗಳು ಪತ್ರಿಕೋದ್ಯಮ ಕಲಿಯಬಯುಸವವರಿಗೆ ಅಧ್ಯಯನಯೋಗ್ಯ ಪಠ್ಯಗಳಂತೆಯೇ ಇವೆ. ಅಪರಾಧ, ರಾಜಕೀಯ, ಮನರಂಜನೆ ಮತ್ತಿತರ ವರದಿಗಾರಿಕೆಯಲ್ಲಿ ಹೆಸರು ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಇವರ ನಡುವೆ ಅಪರೂಪದವರಾಗಿ ತೀರಾ ಓಡಾಟ ಮತ್ತು ಅಧ್ಯಯನ ಬಯಸುವ ಅಭಿವೃದ್ಧಿ ಪತ್ರಿಕೋದ್ಯಮ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರು ಬಾಳೇಪುಣಿ.

ಕಾಲೇಜು ವ್ಯಾಸಂಗದ ಬಳಿಕ ಕೆಲ ದಿನಗಳ ಕಾಲ ಅತಿಥಿ ಶಿಕ್ಷಕರಾಗಿ ವೃತ್ತಿ ಬದುಕು ಶುರು ಮಾಡಿದರು. ಬಳಿಕ ಪ್ರವೇಶಿಸಿದ್ದು ಶಂಕರ ಭಟ್ರ ಸಂಪಾದಕತ್ವದ ಅಮೃತ ಸಾಪ್ತಾಹಿಕಕ್ಕೆ. ತಿಂಗಳಿಗೆ 500 ರು. ಸಂಬಳದಲ್ಲಿ ಶುರುವಾದ ವೃತ್ತಿ ಬದುಕು ನಂತರ ಚೇತನಾ, ದಿ ಗೋಲ್ಡ್, ಸಪ್ತಸಾರ, ಸುದ್ದಿ ಬಿಡುಗಡೆ, ರಸಸಂಜೆ ಮತ್ತಿತರ ನಿಯತಕಾಲಿಕಗಳಲ್ಲಿ ಮುಂದುವರಿಯಿತು. ಪತ್ರಿಕೋದ್ಯಮದ ಅಆಇಈಗಳನ್ನು ಅವರು ರೂಢಿಸಿಕೊಳ್ಳಲು ನೆರವಾಯಿತು.

ನಂತರ ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಕೆನರಾ ಟೈಂಸ್ ಬಳಗದ ಕರಾವಳಿ ಅಲೆ, ಕನ್ನಡ ಜನ ಅಂತರಂಗ, ಕೆನರಾ ಟೈಂಸ್ ಪತ್ರಿಕೆಗಳಲ್ಲಿ ಉಡುಪಿ, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರು ಭಾಗದಿಂದ ಕರ್ತವ್ಯ ನಿರ್ವಹಿಸಿದರು. ನಂತರ ಮಂಗಳೂರು ಮಿತ್ರ ಹೆಸರಿನ ಸಂಜೆ ಪತ್ರಿಕೆಯ ಉಪಸಂಪಾದಕ-ವರದಿಗಾರ ಹುದ್ದೆ ನಿಭಾಯಿಸಿದರು. ಅಲ್ಪ ಅವಧಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಮಂಗಳೂರು ವಿಶೇಷ ವರದಿಗಾರರೂ ಆಗಿದ್ದರು.

ನಂತರ ಶುರುವಾದದ್ದು ಹೊಸದಿಗಂತ ಬಳಗದ ಪಯಣ. 1998ರ ಜೂ.1ರಂದು ಹೊಸದಿಗಂತ ಕನ್ನಡ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ವರದಿಗಾರರಾಗಿ ಸೇರಿದ ಬಾಳೇಪುಣಿ ತಮ್ಮ 2023ರ ತನಕವೂ ನಿರಂತರ 25 ವರ್ಷಗಳಿಂದ ಸಂಸ್ಥೆಗೆ ನಿಷ್ಠರಾಗಿ, ವೃತ್ತಿಗೆ ನಿಷ್ಠರಾಗಿ ಅದೇ ಪತ್ರಿಕೆಯಲ್ಲಿ ಕಾಯಕ ನಿರ್ವಹಿಸುತ್ತಾ ಬಂದಿದ್ದಾರೆ. 2011ರಲ್ಲಿ ಹಿರಿಯ ವರದಿಗಾರರಾಗಿ, 2021ರಲ್ಲಿ ವಿಶೇಷ ವರದಿಗಾರರಾಗಿ ಅವರು ಪದೋನ್ನತಿಯನ್ನೂ ಹೊಂದಿದ್ದಾರೆ.

ಪತ್ರಕರ್ತರ ವೃತ್ತಿ ಬದುಕಿನ ಪದಕಗಳೆಂದರೆ ಅವರಿಗೆ ಸಾರ್ಥಕತೆ ತಂದುಕೊಡುವ ವಿಶೇಷ ವರದಿಗಳು, ಅವು ಮೂಡಿಸಿದ ಪರಿಣಾಮಗಳು ಹಾಗೂ ಜನಮಾನಸಕ್ಕೆ ಅದರ ತಲುಪುವಿಕೆ. ಬಾಳೇಪುಣಿಯವರು ಆರಂಭದ ದಿನಗಳಲ್ಲಿ ಸಿದ್ಧಪಡಿಸಿದ ಉಡುಪಿ ಭೂಹಗರಣ ತನಿಖಾ ವರದಿ, ಕೈದಿ ಭಾಸ್ಕರನ್ ನಾಯರ್ ಜೈಲಿನಿಂದ ಪರಾರಿ ಆಗಬಹುದಾದ ಸಾಧ್ಯತೆ ಕುರಿತು ಪ್ರಕಟಿಸಿದ ಮುನ್ನೆಚ್ಚರಿಕಾ ವರದಿಗಳು ಆ ಕಾಲದಲ್ಲಿ ಇಲಾಖೆ ಹಾಗೂ ಸದನದಲ್ಲಿ ಸದ್ದೆಬ್ಬಿಸಿದ ಭಾರೀ ವರದಿಗಳಾಗಿದ್ದವು. ಅಕ್ಷರ ಸಂತ ಹರೇಕಳ ಹಾಜಬ್ಬ, ಮೈಸೂರು ಪೊಲೀಸ್-ಪಬ್ಲಿಕ್ ಸ್ಕೂಲ್, ಲಾಯಿಲ ನ್ಯಾಪ್ಕಿನ್ ಘಟಕ, ದ.ಕ. ಜಿಲ್ಲಾ ಸಮಗ್ರ ಗಿರಿಜನ ಸಮನ್ವಯ ಯೋಜನೆಯ ಅವ್ಯವಹಾರಗಳ ಕುರಿತ ತನಿಖಾ ವರದಿಗಳು, ಉಡುಪಿ ಮತ್ತು ದ.ಕ. ಜಿಲ್ಲೆಗಳ ಕೆಲವು ಗ್ರಾಮ ಪಂಚಾಯಿತಿಗಳ ಸಾಧನೆಗಳ ಕುರಿತ ಧನಾತ್ಮಕ ವರದಿಗಳು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶೋಗಾಥೆಗಳು, ಸ್ವಚ್ಛತಾ ಆಂದೋಲನದ ವಿಶೇಷ ವರದಿಗಳು, ಎನ್ ಆರ್ ಎಲ್.ಎಂ. ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಯಶೋಗಾಥೆಗಳು, ಕೆಲವು ಮಾದರಿ ಸರ್ಕಾರಿ ಶಾಲೆಗಳ ಪರಿಚಯ ಸೇರಿದಂತೆ ಅಸಂಖ್ಯಾತ ಸರಣಿ ವರದಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ.

ಒಬ್ಬ ಪತ್ರಕರ್ತ ಗ್ರಾಮೀಣ ಭಾಗಕ್ಕೆ ತೆರಳಿ ಮೂಲೆಯಲ್ಲಿದ್ದ ಸಾಧಕರನ್ನು ಹುಡುಕಿ ಮಾತನಾಡಿಸಿ ಪತ್ರಿಕೆಯಲ್ಲಿ ವರದಿ ಬರೆದಾಗ ಅದು ಕೇವಲ ರಾಜ್ಯಕ್ಕೆ, ರಾಷ್ಟ್ರಕ್ಕೆ ಅವರನ್ನು ಪರಿಚಯ ಮಾಡಿ ಕೊಡುವುದು ಮಾತ್ರವಲ್ಲ. ಸಾಕಷ್ಟು ಸಲ ಆ ವರದಿ ಅವರ ಬದುಕಿನ ದಾರಿಯನ್ನೇ ಬದಲಾಯಿಸುತ್ತದೆ. ಸಾಕಷ್ಟು ಸಲ ಅವರ ಸ್ಫೂರ್ತಿಗಾಥೆ ಇನ್ನಷ್ಟು ಮಂದಿಯ ಸಾಧನೆಗೆ ಪ್ರೇರಣೆಯಾಗುತ್ತದೆ. ಅಂತಹ ನೂರಾರು ವರದಿಗಳು ಬಾಳೇಪುಣಿ ಲೇಖನಿಯಿಂದ ಪಡಿಮೂಡಿ ಪತ್ರಿಕೆಗಳಲ್ಲಿ ಅಚ್ಚಾಗಿ ಎಷ್ಟೋ ಸಾಧಕರನ್ನು ನಾಡಿಗೆ ಪರಿಚಯಿಸಿವೆ.

ಸುಮತಿ ಇಳಂತಿಲ, ಮಿಯ್ಯಾರಿನ ಮುಂಗುಲಿ ಕೊರಗ, ಮಳಲಿ ಚೀಂಕ್ರ ಪೂಜಾರಿ, ಕೌಕ್ರಾಡಿಯ ಸ್ವರ್ಣಲತಾ ಮತ್ತು ಸುಜಿ, ಇಳಂತಿಲದ ಕೂಸಪ್ಪ, ಮುಚ್ಚುರಿನ ಸುದರ್ಶನ, ಪುತ್ತೂರಿನ ಬಡಿಲ ಹುಸೈನ್, ಕೊರಗ ಹುಡುಗಿ ಹೂಹಾಕುವಕಲ್ಲಿನ ಸುರೇಖಾ, ಲಾಯಿಲದ ಯಶೋಧಾ, ಅರಳದ ತುಂಗಮ್ಮ, ಮುಂಡರಗಿ ಮುರಡಿ ತಾಂಡಾದ ಶಂಕರ ದಾವಣಗೆರಿ, ಉಬರಡ್ಕ ಮಿತ್ತೂರಿನ ರವಿರಾಜ್, ಮಂಜೇಶ್ವರ ಮಜಿಬೈಲಿನ ಕಿರಣ್, ಇರಾ ತಾಳಿತ್ತಬೆಟ್ಟು ಮಾಯಿಲ, ಕಾಟಿಪಳ್ಳದ ಬರಿಗಾಲ ಸಮಾಜಸೇವಕ ಕೂಸಪ್ಪ ಶೆಟ್ಟಿಗಾರ್, ಮೂಡುಬಿದಿರೆಯ ಯಶಸ್ವಿ ಉದ್ಯಮಿ ಗಣೇಶ್ ಕಾಮತ್, ಕಡೇಶಿವಾಲಯದ ಸ್ವಚ್ಛ ವಾಹಿನಿ ಸಾರಥಿ ಲಕ್ಷ್ಮೀ ಗುತ್ತಿಗಾರಿನ ಕಮ್ಮಾರಿಕೆ ಕೌಶಲಯ ಲೀಲಾವತಿ, ವಿದ್ಯಾರ್ಥಿ ವೇತನ ಮಾಹಿತಿ ದಾಸೋಹದ ಸಿದ್ಧಕಟ್ಟೆ ಕರ್ಪೆಯ ನಾರಾಯಣ ನಾಯಕ್, ಭತ್ತದ ತಳಿ ಸಂರಕ್ಷಕ ಸಾಣೂರಿನ ಅಬೂಬಕರ್, ಆದಿವಾಸಿ ಕೊರಗ ಸಮುದಾಯದ ಮೊದಲ ಡಾಕ್ಟರೇಟ್ ಪದವಿ ಪಡೆದ ಕಲ್ಮಂಜದ ಬಾಬು, ಸಹಾಯಕ ಪ್ರಾಧ್ಯಾಪಿಕೆ ಸಬಿತಾ ಕೊರಗ, ಲಂಚ ವಿರೋಧಿ ಗ್ರಾ.ಪಂ. ಕಾರ್ಯದರ್ಶಿ ನಳಿನಿ ಎ.ಕೆ., ಬೆಟ್ಟಂಪಾಡಿ ಮಧುಪ್ರಪಂಚದ ಮನಮೋಹನ, ಬಾಗಲಕೋಟೆಯ ಪಿಎಸ್ಐ ರವಿ ಪವಾರ್, ಕೃಷಿ ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪಡೆದ ಬೆಂಗಳೂರಿನ ಬಿಎಂಟಿಸಿ ನಿರ್ವಾಹಕ ನರಸಿಂಹ ಗುಂಜಾಲಿ, ಅಕ್ಷರ ಭಗೀರಥ ಹರೇಕಳ ಹಾಜಬ್ಬ, ಸ್ವಚ್ಛ ವಾಹಿನಿ ಸ್ವಯಂಸೇವಕಿ ಸಾರಥಿ ಪೆರುವಾಯಿಯ ನಫೀಸಾ, ಮೀಟರ್ ರಿಪೇರಿಯಿಂದ ಬದುಕು ಕಟ್ಟಿಕೊಂಡ ಪದವೀಧರೆ ಜಯಶೀಲ, ಅಡಿಕೆ ತೋಟದ ಮಾಸ್ಟರ್ ಮೈಂಡ್ ಸಂಜೀವ ನಾಯ್ಕ್, ಅನ್ನದಾತ ಸರ್ಕೀಟ್ ಹೌಸ್ ಕೃಷ್ಣ, ಭತ್ತದ ಕೃಷಿ ತಪಸ್ವಿ ಬಿ.ಕೆ.ದೇವರಾಯ, ಸಾರಾಯಿ ಬಿಟ್ಟು ಮಾದರಿಯಾದ ಸುಬ್ಬ ಪಾಟಾಳಿ, ಹೋಳಿಗೆಯಿಂದ ಏಳಿಕೆಯಾದ ಅಸೈಗೋಳಿಯ ಸುಧಾಕರ ನಾಯಕ್, ಕ್ಯಾನ್ಸ್ ಜಯಿಸಿದ ಕಾಡೂರು ಗ್ರಾ.ಪಂ. ಅಧ್ಯಕ್ಷ ಪಾಡುರಂಗ ಶೆಟ್ಟಿ, ಮಂಗಳೂರು ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕ ಕೋಡಿಕಲ್ ಅಶೋಕ್ ಶೆಟ್ಟಿ, ಪಾನಿಪೂರಿಯಿಂದ ಆರ್ಥಿಕತೆ ಸುಧಾರಿಸಿದ ಧನ್ಯಾ, ಅಪರೂಪದ ವೈದ್ಯ ಡಾ.ಸತೀಶ್ ಕಲ್ಲಿಮಾರ್, ಹಾಲು ಸೊಸೈಟಿ ಸಿಇಒ ಶಶಿಕಲಾ ಮಂಜನಾಡಿ, ಮಲ್ಲಿಗೆ-ಜೇನು ಕೃಷಿ ಸಾಧಕಿ ಕಕ್ಕೆಪದವಿನ ಗುಲಾಬಿ, ಜನಸ್ನೇಹಿ ಗ್ರಾಮೀಣ ಡಾಕ್ ಸೇವಕಿ ಸುರೇಖಾ, ಸುಸ್ಥಿರ ಬದುಕಿನ ಬಾಳೇಪುಣಿ ಕುಕ್ಕೆದಕಟ್ಟೆಯ ಗುರುವ ಕೊರಗ, ರಕ್ತದಾನಿ, ಸಮಾಜಸೇವಕ ಹನುಮಂತ ಕಾಮತ್, ನಿವೃತ್ತ ಸೈನಿಕ, ಸಾಧಕ ಸರ್ಕಾರಿ ಅಧಿಕಾರಿ ಮಂಜುನಾಥ್ ಶಿವಮೊಗ್ಗ ಸಹಿತ ನೂರಾರು ಮಂದಿ ಬೆಳಕಿಗೆ ಬಂದದ್ದು ಬಾಳೇಪುಣಿ ವರದಿಯಿಂದ.

ವರದಿ ಪ್ರಕಟಣೆಗೆ ಸೀಮಿತವಾಗಿ ಉಳಿಯಲಿಲ್ಲ...

 

ಅಕ್ಷರ ಭಗೀರಥ ಹರೇಕಳ ಹಾಜಬ್ಬ ಇಂದು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಸಿಎನ್ ಎನ್ ಐಬಿಎನ್ ರಿಲಯನ್ಸ್ ರಿಯಲ್ ಹೀರೋಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಬ್ಯಾರಿ ಅಕಾಡೆಮಿ ಪ್ರಶಸ್ತಿ, ಕನ್ನಡಪ್ರಭ ವರ್ಷದ ವ್ಯಕ್ತಿ, ಮೈಸೂರಿನ ರಮಾಗೋವಿಂದ ಪ್ರಶಸ್ತಿ, ಗಣರಾಜ್ಯೋತ್ಸವ ಸಂದರ್ಭ ರಾಜ್ಯಪಾಲರ ಚಹಾ ಕೂಟ ಆತಿಥ್ಯ, 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಹಿತ ನೂರಾರು ಗೌರವಗಳು ಅವರನ್ನು ಅರಸಿ ಬಂದಿವೆ. ಹಾಜಬ್ಬರ ಯಶೋಗಾಥೆ ಕರ್ನಾಟಕದ ದಾವಣಗೆರೆ, ಕುವೆಂಪು, ಮಂಗಳೂರು ಹಾಗೂ ತುಮಕೂರು ವಿ.ವಿ.ಗಳಿಗೆ ಹಾಗೂ ಕೇರಳದ ಕನ್ನಡ ಮಾಧ್ಯಮದ 8ನೇ ತರಗತಿಯ ಕನ್ನಡ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪಾಠವಾಗಿ ಸೇರ್ಪಡೆಯಾಗಿತ್ತು. 2017-18ನೇ ಸಾಲಿನಿಂದ ಕರ್ನಾಟಕದಲ್ಲಿ 8ನೇ ತರಗತಿಯ ತುಳು ಐಚ್ಛಿಕ ವಿಷಯಕ್ಕೆ ಹಾಜಬ್ಬರ ಯಶೋಗಾಥೆ ಪಠ್ಯವಾಗಿತ್ತು.

ಹಾಜಬ್ಬರ ಶಾಲೆ ಎಂದು ಗುರುತಿಸಲ್ಪಡುವ ಹರೇಕಳ ನ್ಯೂಪಡ್ಪಿನ ಜಿ.ಪಂ. ಸಂಯುಕ್ತ ಪ್ರೌಢಶಾಲೆಗೆ ಶಿಕ್ಷಣ ಪ್ರೇಮಿಗಳಿಂದ, ಸಂಘ ಸಂಸ್ಥೆಗಳಿಂದ 1.5 ಕೋಟಿ ರು.ಗೂ ಅಧಿಕ ದೇಣಿಗೆ, ಅನುದಾನ ಹರಿದುಬಂದಿದೆ. ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘಟನೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದೆ. ಇವರ ಬಗ್ಗೆ 2012ರಲ್ಲಿ ಬಿಬಿಸಿ ವಿಶೇಷ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ.

 

ಮುಂಗುಲಿ ಕೊರಗ ಅವರಿಗೆ ಚಿತ್ರದುರ್ಗದ ಶ್ರೀ ಮುರುಗಾ ಮಠದಿಂದ ಮುರುಘಾ ಶ್ರೀ ಪ್ರಶಸ್ತಿ ಬಂದಿದೆ. ಹೊಸದಿಗಂತ ಪತ್ರಿಕೆಯಲ್ಲಿ ವರದಿ ಪ್ರಕಟವಾದ ದಿನವೇ ಪ್ರಶಸ್ತಿ ಘೋಷಣೆಯಾಗಿದ್ದು ವಿಶೇಷ.  2013-14ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯಡಿ ಉಡುಪ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಕೈತೋಟಗಳ ಅಭಿವೃದ್ಧಿ ಕೈಗೊಂಡಾಗ ಅದಕ್ಕೆ ಮುಂಗುಲಿ ಮಾದರಿ ತೋಟ ಎಂದು ಹೆಸರಿಡಲಾಯಿತು. ಮಿಯ್ಯಾರಿನ ಮುಂಗುಲಿ ಕೊರಗ ಮನೆಯಂಗಳದಲ್ಲಿ ಅಧಿಕಾರಿಗಳಿಗೆ ಕೈತೋಟ ನಿರ್ಮಾಣ ತರಬೇತಿ ನೀಡಲಾಯಿತು.

ಇಳಂತಿಲದ ಕೂಸಪ್ಪ ಎಂಬ ಜಾನಪದ ಕಲಾವಿದನಲ್ಲಿ ಆದ ಬದಲಾವಣೆ ಗುರುತಿಸಿದ ವಾರ್ತಾ ಇಲಾಖೆ ಗಾಂಧಿಜಯಂತಿಯಂದು ಅವರನ್ನು ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಹಿತ ಹಲವು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ. ಪತ್ರಿಕೆಯಲ್ಲಿ ವರದಿಪ್ರಕಟವಾದ ಬಳಿಕಕೂಸಪ್ಪ ಅವರು ಭೂತ ನರ್ತನ ಸೇವೆ ಮಾಡುವ ಎಲ್ಲಾ ಕಡೆಗಳಲ್ಲೂ ಸಾರಾಯಿ ರಹಿತಆರಾಧನೆ ಪ್ರತಿಪಾದಿಸುತ್ತಾ ಬಂದಿದ್ದಾರೆ. ಇಂದಿಗೂ ಅವರು ಭೂತದ ಕೋಲಕಟ್ಟಲ ಆಹ್ವಾನ ಬಂದರೆ ಆ ದಿನ ಸಾರಾಯಿ ಬೇಡ ದು ವಿನಂತಿಸುತ್ತಾರೆ.

 

ಮಳಲಿಯ ಚೀಂಕ್ರ ಪೂಜಾರಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರ ಬದುಕಿನ ಬದಲಾವಣೆ ಗಮನಿಸಿದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮನೆಗೆ ತೆರಳಿ ಸನ್ಮಾನಿಸಿದೆ. ಸಾಕ್ಷರತಾ ಆಂದೋಲನದಲ್ಲಿ ಸಹಿ ಮಾಡಲು ಕಲಿತ 65ರ ಹರೆಯದ ಚೀಂಕ್ರ ಪೂಜಾರಿ ಸಾರಾಯಿ ಸಹವಾಸ ತೊರೆದು ಸುಮಾರು 20 ವರ್ಷ ರಾಜ್ಯಾದ್ಯಂತ ಅಮಲು ಸೇವನೆ ವಿರುದ್ಧ ಜಾಗೃತಿಹೋರಾಟ ನಡೆಸಿದ್ದರು.

ಇಳಿಂತಿಲದ ಸುಮತಿಯ ಸಮಾಜ ಸೇವೆ, ಸ್ವಸಹಾಯ ಗುಂಪುಗಳ ರಚನೆ, ಗ್ರಾ.ಪಂ.ಸದಸ್ಯೆ, ಉಪಾಧ್ಯಕ್ಷೆಯಾಗಿ ಅವರ ಕಾರ್ಯವೈಖರಿ ಗಮನಿಸಿದಿ ಮಂಗಳೂರು ವಿ.ವಿ. ಅವರ ಬಗ್ಗೆ ಅಧ್ಯಯನ ನಡೆಸಿ ತನ್ನ ಪ್ರಕಾಶನದ ಕೃತಿಯಲ್ಲಿ ಪರಿಚಯ ಲೇಖನ ಪ್ರಕಟಿಸಿದೆ. ಸ್ವಉದ್ಯೋಗ ಕಾರ್ಯಾಗಾರಗಳಿಗೆ ಸಂಪನ್ಮೂ ವ್ಯಕ್ತಿಯಾಗಿದ್ದಾರೆ. ಆಕಾಶವಾಣಿಯಲ್ಲಿ ವಿಶೇಷ ಸಂದರ್ಶನ ಪ್ರಕಟವಾಗಿದೆ.

ಯಶೋದಾ ಲಾಯಿಲ ಉತ್ತಮ ಸ್ವಂಯಸೇವಕಿ. ಇಂದಿಗೂ ಸಮಾಜಸೇವೆ ನಿರತರು. ಸ್ತ್ರೀಯರ ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವಉದ್ಯೋಗ ತರಬೇತಿ ನೀಡುತ್ತಾರೆ. ಮಂಗಳೂರು ಆಕಾಶವಾಣಿ ವಿಶೇಷ ಸಂದರ್ಶನ ಮಾಡಿದೆ. ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರೇರೇಪಿಸಿದ್ದಾರೆ. ಗ್ಪಾ.ಪಂ.ಸದಸ್ಯೆಯಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಕ್ಯಾಂಟೀನ್ ನಡೆಸುವ ಹಂತಕ್ಕೆ ಬೆಳೆದಿದ್ದಾರೆ.

 

ಕರ್ಪೆ ನಾರಾಯಣ ನಾಯಕ್ ಹಾಗೂ ಮೂಡುಬಿದಿರೆ ಗಣೇಶ್ ಕಾಮತ್ ಅವರಿಗೆ ಪ್ರತಿಷ್ಠಿತ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಲಭಿಸಿದೆ. ಗುತ್ತಿಗಾರಿನ ಲೀಲಾವತಿ ಕುರಿತಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜ್ ಸಾಕ್ಷ್ಯಚಿತ್ರ ತಯಾರಿಸಿದೆ. ಗುತ್ತಿಗಾರು ಗ್ರಾ.ಪಂ. ಸಹಿತ ಸಂಘ ಸಂಸ್ಥೆಗಳು ಲೀಲಾವತಿ ಅವರನ್ನು ಸನ್ಮಾನಿಸಿವೆ. 2023ನೇ ಸಾಲಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಂಜೀವೀನಿ ಪ್ರಶಸ್ತಿ ದೊರಕಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಕರ್ನಾಟಕದ ಕುಶಲ ಕರ್ಮಿಗಳು ಕೃತಿಯಲ್ಲಿ ಲೀಲಾವತಿ ಅವರ ಶ್ರಮ ದಾಖಲಾಗಿದೆ.

ಮಾಣಿಲದ ಗಿರಿಜಾ ಅವರು ನರೇಗಾ ಯೋಜನೆಯಲ್ಲಿ ಶೇ.100ರಷ್ಟೂ ದಿನಗಳಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದು, ಅವರ ಕುರಿತು ಬಾಳೇಪುಣಿ ವರದಿ ಮಾಡಿದ್ದರು. ನಂತರ ಗಿರಿಜಾ ಅವರು ದ.ಕ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳೆಯಾಗಿ ದೆಹಲಿಗೆ ತೆರಳಿ ಅಲ್ಲಿ ಪ್ರಶಂಸಾ ಪತ್ರ ಪಡೆದು ಮತ್ತಷ್ಟು ಸುದ್ದಿಯಾದರು.

ಕಡೇಶಿವಾಲಯದ ಲಕ್ಷ್ಮೀ ಕುರಿತಾಗಿ ಆಕಾಶವಾಣಿಯಲ್ಲಿ ವಿಶೇಷ ಸುದ್ದಿ ಪ್ರಸಾರ ಆಗಿದೆ. ವಿದ್ಮುನ್ಮಾನ ಮಾಧ್ಯಮಗಳಲ್ಲಿ ಸಂದರ್ಶನ ಪ್ರಸಾರ ಆಗಿದೆ. ಪೆರುವಾಯಿಯ ನಫೀಸಾ ಅವರು ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲಿ ನಡೆದ ಸರ್ಕಾರದ ಕೌಶಲ್ಯದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಮುನ್ನೆಚ್ಚರಿಕಾ ವರದಿ ಪ್ರಕಟಗೊಂಡು ಒಂದು ವಾರದ ಅಂತರದಲ್ಲಿ ಕಳ್ಳನೋಟು ಆರೋಪಿ ಭಾಸ್ಕರನ್ ನಾಯರ್ ಮಂಗಳೂರು ಜೈಲಿನಿಂದ ಪರಾರಿಯಾಗಿದ್ದ. ವರದಿ ಪ್ರಕಟ ಆಗಿರುವುದು 13.05.1999ರಂದು, ಆತ ಪರಾರಿ ಆಗಿದ್ದು 25.06.1999ರಂದು. ಇಂದಿಗೂ ಆತ ಪತ್ತೆಯಾಗಿಲ್ಲ! ಸದನದಲ್ಲೂ ಈ ಸುದ್ದಿ ಸದ್ದು ಮಾಡಿತ್ತು. ಪರಿಣಾಮ ಜೈಲಿನ ಭದ್ರತೆ ಸಾಕಷ್ಟು ಸುಧಾರಣೆ ಕಾಣುವಂತಾಯಿತು.

ದ.ಕ. ಜಿಲ್ಲೆಯ ಸಮಗ್ರ ಗಿರಿಜನ ಉಪಯೋಜನೆಯ ಕೊರಗರ ಮನೆ ರಿಪೇರಿಯಲ್ಲಿ ನಡೆದ ಅವ್ಯವಹಾರ, ಕ್ಲಸ್ಟರ್ ಯೋಜನೆಯಲ್ಲಿ ನಡೆಸಿದ ಅವ್ಯವಹಾರ ಮತ್ತು ಜಿಲ್ಲಾ ಸಮನ್ವಯ ಅಧಿಕಾರಿಯೊಬ್ಬರು ಕೇವಲ ಮೂರು ತಿಂಗಳಲ್ಲಿ ರು.70 ಲಕ್ಷಕ್ಕೂ ಅಧಿಕ ಮೊತ್ತ ಲಪಟಾಯಿಸಿದ ವರದಿಗಳು ಇಲಾಖೆ ಮಟ್ಟದಲ್ಲಿ ಎಚ್ಚರಿಕೆ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಮೂವರು ಅಧಿಕಾರಿಗಳ ಮೇಲೆ ಕ್ರಮ ಜರುಗಿದೆ.

ಉಡುಪಿ ಭೂಹಗರಣ ಕುರಿತು ಕೆನರಾ ಟೈಮ್ಸ್, ಕನ್ನಡ ಜನ ಅಂತರಂಗ ಮತ್ತುಕರಾವಳಿ ಅಲೆಯಲ್ಲಿ ಪ್ರಕಟವಾದ ವರದಿಗಳ ಪರಿಣಾಮ 11 ಮಂದಿ ವಿರುದ್ಧ ಸಿಒಡಿ ಕೇಸು ದಾಖಲಾಗಿದೆ. ಉಡುಪಿ ಆಸುಪಾಸಿನ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುವುದನ್ನು ತಡೆಯುವಲ್ಲಿ ವರದಿಗಳು ಬಹುಮಟ್ಟಿಗೆ ಯಶಸ್ವಿಯಾಗಿವೆ.

ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತರಿ ವೈಯಕ್ತಿಕ ಬಾವಿಗಳ ಕುರಿತ ಸಕಾರಾತ್ಮಕ ವರದಿ ಜಿಲ್ಲೆಯ ಇತರ ಗ್ರಾ.ಪಂ.ಗಳಲ್ಲೂ ತೆರೆದ ಬಾವಿ ಅಭಿಯಾನಕ್ಕೆ ಪ್ರೇರಣೆ ನೀಡಿವೆ.

ಇರಾ ಮತ್ತು ಹೊಸಂಗಡಿ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಸ್ವಚ್ಛತಾ ಆಂದೋಲನದವ ವಿಶೇಷ ವರದಿಗಳ ಪರಿಣಾಮ ಹಲವು ತಂಡಗಳು ಅಲ್ಲಿಗೆ ಭೇಟಿ ನೀಡಿವೆ. ಇದೇ ಮಾದರಿಯನ್ನು ರಾಜ್ಯದ ಹಲವು ಪಂಚಾಯಿತಿಗಳಲ್ಲಿ ಅಳುವಡಿಸುವ ಪ್ರಯತ್ನ ಮಾಡಿವೆ. ಉಜಿರೆಯ ಮಾದರಿ ರುದ್ರಭೂಮಿ ಕುರಿತಾದ ವರದಿ ಇತರ ಗ್ರಾಮ ಪಂಚಾಯಿತಿಗಳಿಗೆ ಪ್ರೇರಣೆಯಾಗಿವೆ. ಕೆಲವು ಗ್ರಾ.ಪಂ.ಗಳು ಉಜಿರೆ ಮಾದರಿಯ ರುದ್ರಭೂಮಿ ನಿರ್ಮಾಣ ಮಾಡಿವೆ. ವಂಡ್ಸೆ, ನಿಟ್ಟೆ ಗ್ರಾ.ಪಂ.ಗಳ ಸಂಪನ್ಮೂಲ ನಿರ್ವಹಣೆ ಘಟಕಗಳ ವರದಿಯಿಂದ ದ.ಕ.ಜಿಲ್ಲೆಯ ಅನೇಕ ಗ್ರಾ.ಪಂ.ಗಳು ಪ್ರೇರಣೆ ಪಡೆದಿವೆ.

ಸಾರ್ವಜನಿಕ ಆಸ್ತಿ ನಿರ್ಮಾಣ:

ಹುಟ್ಟೂರು ಬಾಳೇಪುಣಿಯಲ್ಲಿ ಸಾರ್ವಜನಿಕ ಆಸ್ತಿ ನಿರ್ಮಾಣಕ್ಕೆ ನೇತೃತ್ವ ವಹಿಸಿದ್ದಾರೆ. ತನ್ನ ಗ್ರಾಮದಲ್ಲಿ 2.35 ಎಕರೆ ಜಮೀನು ಖರೀದಿಸಿ ಅದನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಸ್ತಿಯಾಗಿಸಿ ಬಹುಪಯೋಗಿ ಆಟದ ಮೈದಾನವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ್ದಾರೆ. ಕಳೆದ 40 ವರ್ಷಗಳಿಂದ ಯೋಜನೆಯ ಹಿಂದೆ ದುಡಿಯುತ್ತಿದ್ದು ಜನಪ್ರತಿನಿಧಿಗಳಿಂದ 50 ಲಕ್ಷ ರು.ಗೂ ಅಧಿಕ ಅನುದಾನ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಊರ ಜನತೆ ಕೈಜೋಡಿಸಿದೆ. ಪ್ರಸ್ತುತ ಈ ಆಸ್ತಿಯ ಅಂದಾಜು ಮೌಲ್ಯ 2.5 ಕೋಟಿ ರು. ಪತ್ರಕರ್ತರೊಬ್ಬರು ಸ್ವಆಸಕ್ತಿ ವಹಿಸಿ ಸಾರ್ವಜನಿಕ ಆಸ್ತಿ ರೂಪಿಸಿದ ನಿದರ್ಶನ ನಮ್ಮ ಜಿಲ್ಲೆಯಲ್ಲೇ ಮತ್ತೆಲ್ಲೂ ಕಾಣಸಿಗದು.

ಅಪಾರ ಜೀವನೋತ್ಸಾಹಿ ಬಾಳೇಪುಣಿ ಅವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಸಕ್ತಿಯ ವಿಷಯಗಳು. ಅಭಿವೃದ್ಧಿಪರ ಸುದ್ದಿಗಳನ್ನು ಹುಡುಕಿಕೊಂಡು ಹಳ್ಳಿಗಳಿಗೆ ಹೋಗುತ್ತೆ. ಶಿಕ್ಷಣ ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡುತ್ತಾರೆ. ಪತ್ರಕರ್ತರಿಗೆ ಇರಬೇಕಾದ ಸಾಮಾನ್ಯ ಜ್ಞಾನ, ಅರ್ಹತೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ತಿಳಿವಳಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅನೇಕ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಅವಧಿಯಲ್ಲಿ ಇವರಿಂದ ತರಬೇತಿ ಪಡೆದಿದ್ದಾರೆ.

ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿ:

ರಾಜ್ಯದಲ್ಲಿ ದಶಕಗಳ ಹಿಂದೆ ನಡೆದ ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ಸ್ವಯಂಸೇವಕ,ಸಂಪನ್ಮೂಲ ವ್ಯಕ್ತಿ.

ಪುತ್ತೂರು ಬಾಲವನದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ನವಸಾಕ್ಷರರ ಸಾಹಿತ್ಯ ರಚನಾ ಕಮ್ಮಟ.

ನ್ಯಾಷನಲ್ ಬುಕ್ ಟ್ರಸ್ಟ್ ನವದೆಹಲಿ ಮತ್ತು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಇಲಾಖೆ ಹೆಗ್ಗೋಡಿನಲ್ಲಿ ನಡೆಸಿದ 10 ದಿನಗಳ ರಾಜ್ಯಮಟ್ಟದ ಕಾರ್ಯಾಗಾರ

ರಾಜ್ಯಮದ್ಯಪಾನ ಸಂಯಮ ಮಂಡಳಿ ಮಾಧ್ಯಮ ಪ್ರತಿನಿಧಿಗಳಿಗೆ ಬೆಂಗಳೂರಿನಲ್ಲಿ ನಡೆಸಿದ 2 ದಿನಗಳ ಕಮ್ಮಟ

ಕೃಷಿ ಇಲಾಖೆ ಬೆಂಗಳೂರಿನಲ್ಲಿ ನಡೆಸದ ಎರಡು ದಿನಗಳ ಸಾವಯವ ಕೃಷಿ ಕಮ್ಮಟ

2020 ಮಾರ್ಚ್ ನಲ್ಲಿಚಿತ್ರದುರ್ಗದ ಹಿರಿಯೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮುದ್ರಣ ಮಾಧ್ಯಮ ಬರಹ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ

2021 ಅಕ್ಟೋಬರಿನಲ್ಲಿ ಸಾಹಿತ್ಯ ಅಕಾಡೆಮಿ ಬೆಂಗಳೂರು ಕಲಾ ಗ್ರಾಮದಲ್ಲಿ ಏರ್ಪಡಿಸಿದ ಐದು ದಿನಗಳ ಮಾಧ್ಯಮ ಪ್ರವೇಶಿಕೆ, ಬರಹ ಮತ್ತು ಸಂವಹನ ಕೌಶಲ ಶಿಬಿರದ ನಿರ್ದೇಶಕ.

ಪತ್ರಕರ್ತ ವೃತ್ತಿ ಜೊತೆಗೆ ಇಷ್ಟು ವರ್ಷಗಳಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೋಶಾಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದಾರೆ. 2021-22ನೇ ಸಾಲಿನಿಂದ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಸಲಹಾ ಸಮಿತಿಗೆ ವಿಶೇಷ ಆಹ್ವಾನಿತರಾಗಿದ್ದಾರೆ.

ಮೂರು ವರೆ ದಶಕಗಳ ಪತ್ರಿಕೋದ್ಯಮ ರಂಗದ ಸಾಧನೆಗೆ ಬಾಳೇಪುಣಿ ಅವರನ್ನು ಅರಸಿ ಬಂದಿವೆ. ಅತ್ಯುತ್ತಮ ಗ್ರಾಮೀಣ ವರದಿಗಾಗಿ (ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು) 2004ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 2012ರಲ್ಲಿ ಕಾಂತಾವರ ಕನ್ನಡ ಸಂಘದಿಂದ ಕಾಂತಾವರ ಪುರಸ್ಕಾರ, 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2021ನೇ ಸಾಲಿನ ಕರ್ನಾಟಕ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, 2022ರಲ್ಲಿ ವಿಶ್ವ ಸಂವಾದ ಕೇಂದ್ರದಿಂದ ಬೆಸುನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, 2021ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಮಂಗಳೂರು ವಿ.ವಿ.ಯಿಂದ 2022ನೇ ಸಾಲಿನಲ್ಲಿ 43ನೇ ಸಂಸ್ಥಾಪನಾ ದಿನಾಚರಣೆ ಗೌರವಗಳು ಅವರಿಗೆ ಸಂದಿವೆ.

ವಿಶೇಷವಾಗಿ ಜಾಗತಿಕ ಸಮಾಜ ಕಾರ್ಯ ಸಂಸ್ಥೆ ಹಂಗರ್ ಪ್ರಾಜೆಕ್ಟ್ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುವ ಮಹಿಳೆ ಮತ್ತು ಪಂಚಾಯತ್ರಾಜ್ ವಿಷಯಾಧಾರಿತ ಸಕಾರಾತ್ಮಕ ವರದಿಗಾರಿಕೆ ಸ್ಪರ್ಧೆಯ ಪ್ರಾದೇಶಿಕ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ 2011ರಲ್ಲಿ ಅವರಿ ಸರೋಜಿನಿ ನಾಯ್ಡ್ ಪ್ರಶಸ್ತಿ ಲಭಿಸಿತು. ಈ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ, ಮೊತ್ತಮೊದಲ ಹಾಗೂ ಏಕೈಕ ಕನ್ನಡ ಪತ್ರಕರ್ತ ಬಾಳೇಪುಣಿ ಅವರು. ಇಡ್ಕಿದು ಗ್ರಾಮ ಪಂಚಾಯತ್-ಗ್ರಾಮಾಭಿವೃದ್ಧಿಗೊಂದು ಮಾದರಿ ವರದಿಗೆ ಈ ಪ್ರಶಸ್ತಿ ಲಭಿಸಿದ್ದು, ನವದೆಹಲಿಯ ಲೋಧಿ ಸ್ಟ್ರೀಟ್ ನ ಅಂತಾರಾಷ್ಟ್ರೀಯ ಹೆಬಿಟೇಟ್ ಸೆಂಟರಿನಲ್ಲಿ ಈ ಪಪ್ರಶಸ್ತಿ ಪ್ರದಾನ ನಡೆಯಿತು.

ಪರಿಶಿಷ್ಟ ಜಾತಿಯ ಮೊಗೇರ ಸಮುದಾಯಕ್ಕೆ ಸೇರಿದ ಬಾಳೇಪುಣಿ ಯಾವುದೇ ಜಾತಿ, ಕೋಮು ಭೇದವಿಲ್ಲದೆ ಸಮಾಜದ ಕೆಳಸ್ತರದವರ ಹಾಗೂ ಬಡವರ ಸೇವೆ, ಪ್ರತಿಭೆಗಳನ್ನು ಹುಡುಕಿ ಬರೆಯುತ್ತಾರೆ. ಪತ್ನಿ ಶ್ರೀಮತಿ ಜಯಂತಿ ಬಾಳೇಪುಣಿ ಹಾಗೂ ಪುತ್ರ ಮನೇಶ ಬಾಳೇಪುಣಿ ಜತೆ ಬಾಳೇಪುಣಿಯಲ್ಲಿ ವಾಸವಿದ್ದಾರೆ. ಪ್ರಾಮಾಣಿಕ ದುಡಿಮೆ ಹಾಗೂ ಶ್ರಮಜೀವನದಲ್ಲಿ ನಂಬಿಕೆ ಇರಿಸಿರುವ ಅವರ ಮನೆಯ ಹೆಸರು ದುಡಿಮೆ. ವೃತ್ತಿಯಿಂದ ಅಪಾರ ಆಸ್ತಿ, ಬಂಗಲೆ, ಐಷಾರಾಮಿ ವಾಹನ ಏನನ್ನೂ ಮಾಡಿಕೊಂಡಿಲ್ಲ. ಊರಿನವರಿಗೋಸ್ಕರ ಸಾರ್ವಜನಿಕ ಆಸ್ತಿ ಮಾಡಿದ್ದಾರೆ, ನೂರಾರು ಸಾಧಕರ ಬದಕಿನ ಬೆಳಕನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ, ಮೂರೂವರೆ ದಶಕದ ವೃತ್ತಿ ಬದುಕಿನ ಬಗ್ಗೆ ಅಪಾರ ಸಾರ್ಥಕ ಭಾವ ಹೊಂದಿದ್ದಾರೆ ಹಾಗೂ ನನ್ನ ಸಂಸ್ಥೆ ನನ್ನ ಬದುಕಿಗೆ ಆಸರೆಯಾಗಿದ್ದು, ನನಗೆ ಸಾಕಷ್ಟು ಅವಕಾಶ ನೀಡಿ ಗುರುತಿಸಿದೆ ಎಂದು ಕೃತಜ್ಞರಾಗಿದ್ದಾರೆ.

ತನಗಾಗಿ ಏನೂ ಮಾಡಿಕೊಳ್ಳದ, ಕಾಲ್ನಡಿಗೆಯಲ್ಲೇ ಗ್ರಾಮಗಳನ್ನು ಸುತ್ತುವ ಸಿಟಿಬಸ್ಸಿನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ಒಬ್ಬ ಪತ್ರಕರ್ತನ ಬದುಕಿನಲ್ಲಿ ಪ್ರತಿ ವಿಶೇಷ ವರದಿಯೂ, ಪ್ರತಿ ಪ್ರಶಸ್ತಿಯೂ ಶ್ರೇಷ್ಠವೇ. ತಾನೋಬ್ಬನೇ ಎಕ್ಸ್ ಕ್ಲೂಸಿವ್ ಆಗುವ ಬದಲು, ತನ್ನೊಂದಿಗೆ ಪತ್ರಕರ್ತ ಸ್ನೇಹಿತರ ದಂಡನ್ನೂ ಕಟ್ಟಿಕೊಂಡು ಹಾಜಬ್ಬ ಅವರನ್ನು ಹುಡುಕಿಕೊಂಡು ವಿಶೇಷ ವರದಿ ಮಾಡಿ ಹೊರಜಗತ್ತಿಗೆ ಪರಿಚಯಿಸಿದವರು ಬಾಳೇಪುಣಿ. ಬಾಳೇಪುಣಿಯವರು ಅಂಬೇಡ್ಕರ್ ನಂಬಿದ ಮೌಲ್ಯಗಳನನ್ನು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ, ತಾವು ಬದುಕಿದ ವೃತ್ತಿಯಲ್ಲಿ ಜಾರಿಗೆ ತಂದವರು. ನಿರ್ಲಕ್ಷ್ಯಕ್ಕೆ ಒಳಗಾದ ನೂರಾರು ಮಂದಿಯನ್ನು ಮುನ್ನಲೆಗೆ ತಂದವರು. ಅದಕ್ಕೇ ಅವರಿಗೆ ಅಂಬೇಡ್ಕರ್ ಹೆಸರಿನ ಪ್ರಶಸ್ತಿ ಬಂತು ಎಂದು ಗೊತ್ತಾದಾಗ ನನಗೆ ಖುಷಿಯಾದದ್ದು ಎಂದು ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ ತುಮಕೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.

 

ಈಗ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬರ ಪರಿಶ್ರಮದ ತಪಸನ್ನು ಪತ್ರಿಕಾ ಜಗತ್ತಿಗೆ ಮೊದಲ ಬಾರಿಗೆ ಪರಿಚಯಿಸಿದ್ದೇ ಗುರುವಪ್ಪ ಬಾಳೇಪುಣಿ. ಹಿರಿಯ ಗೆಳೆಯರಾದ ಅವರು ಸಾಮಾಜಿಕ ನ್ಯಾಯವನ್ನು ಹೊಸ ಭಾಷೆಯಲ್ಲಿ ಹೇಳಿದವರಷ್ಟೇ ಅಲ್ಲ, ಬರೆದಂತೆಯೇ ಬದುಕಿದವರು ಎಂದು ಫೇಸ್ಬುಕ್ಕಿನಲ್ಲಿ ಉಲ್ಲೇಖಿಸಿದ್ದಾರೆ ಸಾಮರಸ್ಯ ವಾದಿರಾಜ್ ಅವರು.

ಕುಟುಂಬ ಸಮೇತ ನನ್ನ ಮನೆಮಂದಿ, ಊರು, ಕೆಲಸ ಮಾಡುವ ಸಂಸ್ಥೆ ಯಾರ ಗೌರವಕ್ಕೂ ಚ್ಯುತಿ ಬಾರದಂತೆ ಬದುಕಬೇಕು, ಊರಿನಲ್ಲೇ ಬದುಕಬೇಕು ಎಂಬ ಉದ್ದೇಶ ನನ್ನದಾಗಿತ್ತು. ಅದೇ ರೀತಿ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾರೆ ಅವರು. ಬಾಳೇಪುಣಿ ಅವರ ಹಿರಿಯ ಸಹೋದರ ಕೊಯಿರಾ ಬಾಳೇಪುಣಿ ಅವರ ಮಾರ್ಗದರ್ಶನವನ್ನು ಅವರು ಸ್ಮರಿಸುತ್ತಾರೆ. ಕೊಯಿರಾ ಅವರಿಗೆ ತಮ್ಮ ಸರ್ಕಾರಿ ಉದ್ಯೋಗಸ್ಥನಾಗುವ ಕನಸು ಇತ್ತಂತೆ. ಬಾಳೇಪುಣಿ ಶಿಕ್ಷಣಕ್ಕೂ ಸಾಕಷ್ಟು ನೆರವಾದವರು ಕೊಯಿರಾ, ಬದುಕಿಗೊಂದು ಆದರ್ಶ, ಪ್ರೇರಣೆ ಕೊಟ್ಟವರು ಅವವರು. ಹಾಗಂತ ಯಾವತ್ತೂ ನನ್ನ ನಿರ್ಧಾರಗಳಲ್ಲಿ, ಚಿಂತನೆಗಳಲ್ಲಿ ಅಣ್ಣ ಮಧ್ಯಪ್ರವೇಶಿಸಲಿಲ್ಲ, ನನಗೆ ಪ.ಗೋ.ಪ್ರಶಸ್ತಿ ಬಂದ ದಿನ ಅಣ್ಣ ಬಹಳಷ್ಟು ಖುಷಿ ಪಟ್ಟರು. ನನ್ನ ವೃತ್ತಿ ಬಗ್ಗೆ ಅವರಿಗೆ ತುಂಬ ಸಾರ್ಥಕ ಭಾವನೆ ಮೊಳೆಯಿತು ಎಂದು ಬಾಳೇಪುಣಿ ಸ್ಮರಿಸುತ್ತಾರೆ. ಪ್ರತಿ ದಿನ ಕೆಲಸಕ್ಕೆ ಹೋಗುವ ಮುನ್ನ ದೇವರು, ತಂದೆ, ತಾಯಿ ಚಿತ್ರಗಳಿಗೆ ವಂದಿಸಿದ ಬಳಿಕ ಅಣ್ಣನ ಭಾವಚಿತ್ರಕ್ಕೆ ವಂದಿಸಿಯೇ ತೆರಳುತ್ತೇನೆ ಎನ್ನುತ್ತಾರೆ ಅವರು.

ಸ್ವಲ್ಪ ಆಸಕ್ತಿ ವಹಿಸಿದ್ದರೆ ಬಾಳೇಪುಣಿ ಅವರಿಗೆ ಆ ಕಾಲದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸುವುದು ದೊಡ್ಡ ಸಂಗತಿ ಆಗಿರಲಿಲ್ಲ. ಅವರ ಓರಗೆಯ ಸಹಪಾಠಿಗಳೇ ಸರ್ಕಾರಿ ಉದ್ಯೋಗ ಪಡೆದು ಈಗ ನಿವೃತ್ತಿ ಅಂಚಿನಲ್ಲಿದ್ದಾರೆ, ಆರ್ಥಿಕವಾಗಿಯೂ ಸಶಕ್ತರಾಗಿ ಇರಲು ಸಾಧ್ಯವಾಗಿದೆ. ಬಾಳೇಪುಣಿ ಯಾವತ್ತೂ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲೇ ಇಲ್ಲ. ಪತ್ರಿಕೋದ್ಯೋಗ ಅವರ ಕನಸಾಗಿತ್ತು ಹಾಗೂ ಅವರು ಆ ವೃತ್ತಿಯಲ್ಲಿ ತೊಡಗಿ, ಪಳಗಿ, ಇತರರನ್ನೂ ಸಿದ್ಧಪಡಿಸಿ ಸಾರ್ಥಕ ಭಾವ ಹೊಂದಿದ್ದಾರೆ.

ಸುಗಮ ಸಂಗೀತ ಆಲಿಸುವುದು, ಯಕ್ಷಗಾನ, ನಾಟಕ ವೀಕ್ಷಣೆ ಅವರ ಆಸಕ್ತಿಯ ಕ್ಷೇತ್ರಗಳು. ಮಂಗಳೂರು ಆಕಾಶವಾಣಿಯ ನಿರಂತರ ಕೇಳುಗರು ಹಾಗೂ ಸಾಕಷ್ಟು ಕಾರ್ಯಕ್ರಮಗಳನ್ನು ಬೇರೆ ಬೇರೆ ಹಂತದಲ್ಲಿ ನೀಡಿದ್ದಾರೆ. ಅವರ ಅನೇಕ ಭಾಷಣಗಳು, ಕತೆ ರೇಡಿಯೋದಲ್ಲಿ ಪ್ರಸಾರ ಆಗಿವೆ. ವೃತ್ತಿ ಬದುಕಿಗೋಸ್ಕರ ರೇಮಂಡ್ ಡಿಸೋಜ, ವಿಷ್ಣುವರ್ಧನ್ ಅವರಂತಹ ಸಾಕಷ್ಟು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ, ಮಾತನಾಡಿಸಿದ್ದಾರೆ, ವಿಶೇಷ ವರದಿಗಳು ಪ್ರಕಟವಾಗಿವೆ. ಆದರೆ, ಯಾವುದನ್ನೂ ಅವರು ಗಂಭೀರವಾಗಿ ಸಂಗ್ರಹಿಸಿ ಇರಿಸಿಲ್ಲ, ವರದಿಗಳ ಲೆಕ್ಕಾಚಾರ ಅವರ ಬಳಿ ಇಲ್ಲ. ಸಂಖ್ಯೆಗಾಗಿ, ಹೆಗ್ಗಳಿಕೆಗಾಗಿ ವರದಿಗಳನ್ನು ಮಾಡಿದ್ದಲ್ಲ, ಅದರಿಂದ ಯಾರದ್ದಾದರೂ ಬದುಕಿಗೆ ಬೆಳಕು ಕಂಡರೆ, ನಾಲ್ಕು ಮಂದಿಗೆ ಸ್ಫೂರ್ತಿ ಸಿಕ್ಕರೆ ಅದುವೇ ನನಗೆ ಪ್ರಶಸ್ತಿ ಅನ್ನುತ್ತಾರೆ.

 

ಹಾಜಬ್ಬರ ಬೆಳಕಿಗೆ ತಂದ ಬಾಳೇಪುಣಿ

ವೃತ್ತಿ ಬದುಕಿನ ಅಷ್ಟೂ ಅವಧಿಯಲ್ಲಿ ಪತ್ರಕರ್ತರಾಗಿ ಬಾಳೇಪುಣಿ ಅವರಿಗೆ ಅತ್ಯಂತ ಸಾರ್ಥಕತೆ ಕೊಟ್ಟದ್ದು ಹಾಗೂ ಮಂಗಳೂರಿಗೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದುಕೊಟ್ಟದ್ದು ಅಕ್ಷರ ಸಂತ, ಅಕ್ಷರ ಭಗೀರಥ, ಕಿತ್ತಳೆ ಮಾರಿ ಸರ್ಕಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರ ಕುರಿತು ಮಾಡಿದ ವಿಶೇಷ ವರದಿ. ಆ ಒಂದು ವರದಿಯಿಂದ ಆರಂಭವಾದ ಅಭಿಯಾನ ಇಂದು ಅವರನ್ನು ನವದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿ ಪಡೆಯುವಲ್ಲಿ ವರೆಗೆ, ಸಾವಿರಾರು ಮಂದಿ ಹಾಜಬ್ಬರ ಜೊತೆ ಸೆಲ್ಫೀ ತೆಗೆಸಿಕೊಳ್ಳುವಷ್ಟರ ಮಟ್ಟಿಗೆ ಗಣ್ಯರ ಸಾಲಿಗೆ ಹಾಜಬ್ಬರನ್ನು ಸೇರಿಸುವ ವರೆಗೆ ತಲುಪಿದೆ. ಶಾಲೆ ಕಟ್ಟಲು ಕಚೇರಿಗಳಿಗೆ ಅಲೆದಾಡುವಾಗ ಒಳಗೆ ಪ್ರವೇಶಕ್ಕೆ ಕಷ್ಟಪಡುತ್ತಿದ್ದ ಹಾಜಬ್ಬರು ಇಂದು ಜಿಲ್ಲಾಧಿಕಾರಿ, ಸಚಿವರು, ಉದ್ಯಮಿಗಳು, ಸಾಧಕರ ನಡುವೆ ಸಮಾರಂಭಗಳಲ್ಲಿ ಅತಿಥಿಗಳಾಗಿದ್ದಾರೆ, ಜನ ಗುರುತಿಸುತ್ತಾರೆ. ಅವರ ಶಾಲೆಗೆ ಹಿಂದಿಗಿಂತ ಹೆಚ್ಚು ಸಹಾಯ ಒದಗಿ ಬರುತ್ತಿದೆ. ಸೂಕ್ಷ್ಮಗ್ರಾಹಿ ಪತ್ರಕರ್ತನೊಬ್ಬ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ವ್ಯಕ್ತಿಯೊಳಗಿನ ಸಾಧನೆ ಗುರುತಿಸಿ ಅಕ್ಷರ ರೂಪ ಕೊಟ್ಟಾಗ ಹಾಜಬ್ಬರಂತಹ ಅಕ್ಷರ ಸಂತರಿಗೆ ಯೋಗ್ಯ ಮರ್ಯಾದೆ ಸಿಗುತ್ತದೆ ಎಂಬುದಕ್ಕೆ ಈ ಸಾಧಕನ ಬದುಕೇ ಸಾಕ್ಷಿ. 2004ರ ಆಗಸ್ಟಿನಲ್ಲಿ ಆಗಿನ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಮೂರ್ತಿ ಅವರು ನೀಡಿದ ಮಾಹಿತಿ ಮೂಲಕ ಬಾಳೇಪುಣಿ ಅವರಿಗೆ ಹಾಜಬ್ಬರ ಕುರಿತು ತಿಳಿದುಬಂತು. ಮಂಗಳೂರು ನಗರದಲ್ಲಿ ಹಗಲಿಡೀ ಕಿತ್ತಳೆ ಮಾರಿ ತಮ್ಮೂರು ಹರೇಕಳ ನ್ಯೂಪಡ್ಪುವಿನಲ್ಲಿ ಶಾಲೆ ಕಟ್ಟಲು ಅವರು ಪಡುತ್ತಿದ್ದ ಶ್ರಮದ ಅರಿವು ತಿಳಿದುಬಂತು. ಅದೇ ಸೆ.15ರಂದು ಬಾಳೇಪುಣಿ ಅವರು ಕೆಲವು ಮಂದಿ ಸಹ ಪತ್ರಕರ್ತರೊಂದಿಗೆ ಹಾಜಬ್ಬರ ಮನೆಗೆ ತೆರಳಿ ಸಂದರ್ಶನ ಮಾಡಿದರು. ಅದರ ಮರುದಿನ ಸೆ.16ರಂದು ಹೊಸದಿಗಂತ ಪತ್ರಿಕೆಯ ಕೊನೆಯ ಪುಟದಲ್ಲಿ ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಸರ್ಕಾರಿ ಶಾಲೆ ಕನಸು ಹೆಸರಿನಲ್ಲಿ ವಿಶೇಷ ವರದಿ ಪ್ರಕಟವಾಯಿತು. ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಇತರ ಪತ್ರಕರ್ತರು, ಮಾಧ್ಯಮದವರು ಈ ಕುರಿತು ವರದಿಗಳನ್ನು ಪ್ರಕಟಿಸಿದರು. ನಂತರ ನಡೆದದ್ದು ಇತಿಹಾಸ. ಸಮಾಜದಲ್ಲಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಜಬ್ಬರನ್ನು ಗುರುತಿಸಲು ಶುರುವಾಯಿತು. ದೇಣಿಗೆಗಳು ಸಿಕ್ಕವು, ಅವರ ಕನಸಿನಂತೆ ಹೈಸ್ಕೂಲ್, ಪಿಯು ಕಾಲೇಜ್ ಮಂಜೂರಾದವು, ಪ್ರಶಸ್ತಿಗಳು ಅರಸಿ ಬಂದವು, ಹಾಜಬ್ಬರಿಗೆ ಸಾಕಷ್ಟು ಸನ್ಮಾನಗಳು ನಡೆದವು, ಅವರ ಮಹತ್ವ, ತ್ಯಾಗ ಹಾಗೂ ನಿರ್ಲಿಪ್ತತೆಯ ಮೌಲ್ಯ ಎಲ್ಲರಿಗೂ ಗೊತ್ತಾಯಿತು. ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿ ಬಂತು. ಅವರ ವೈಯಕ್ತಿಕ ಬದುಕಿನ ಸುಧಾರಣೆಗೂ ಸಂಘ ಸಂಸ್ಥೆಗಳು ನೆರವಾದವು. ಕೇವಲ ವರದಿ ಬರೆದಲ್ಲಿಗೆ ಬಾಳೇಪುಣಿ ಸುಮ್ಮನೆ ಕೂರಲಿಲ್ಲ. ಹಾಜಬ್ಬರೂ ಅಷ್ಟೇ ಬದುಕಿನ ಯಾವ ಘಟ್ಟದಲ್ಲೂ ಬಾಳೇಪುಣಿ ಮತ್ತು ಇತರ ಪತ್ರಕರ್ತರನ್ನು ಮರೆತಿಲ್ಲ. ಅವರು ತಮ್ಮ ಕಷ್ಟವನ್ನಾದರೂ ಯಾರಲ್ಲೂ ಹಂಚಿಕೊಳ್ಳಲಿಲ್ಲ. ಆದರೆ, ಪುರಸ್ಕಾರ, ಪ್ರಶಸ್ತಿ, ದೇಣಿಗೆ ಬಂದಾಗಲೆಲ್ಲ ಅದನ್ನು ಮಾಧ್ಯಮದವರಲ್ಲಿ ಹೇಳಿ, ಎಲ್ಲರನ್ನೂ ಸ್ಮರಿಸಿ ಸಾರ್ಥಕ್ಯ ಕಾಣುತ್ತಾರೆ. ಪದ್ಮಶ್ರೀ ಪ್ರಶಸ್ತಿ ಪ್ರಕಟವಾದಗಲೂ ಅದನ್ನು ಹಾಜಬ್ಬರು ಮೊದಲು ತಿಳಿಸಿದ್ದು ಬಾಳೇಪುಣಿ ಅವರಲ್ಲಿ. ಸಾಕಷ್ಟು ಮಂದಿ ಹಾಜಬ್ಬರನ್ನು ಕರೆದು ಸನ್ಮಾನಿಸುವಾಗ, ಅವರನ್ನು ಗುರುತಿಸಿದ ಬಾಳೇಪುಣಿ ಅವರನ್ನು ಕರೆದು ಗೌರವಿಸಿದ್ದಾರೆ, ಹಾಜಬ್ಬರ ಬಗ್ಗೆ ಬಾಳೇಪುಣಿ ಅವವರಿಂದ ಉಪನ್ಯಾಸ ಮಾಡಿಸಿದ್ದಾರೆ. ಹಾಜಬ್ಬರ ಸಂಧಿಗ್ಧ ಪರಿಸ್ಥಿತಿಗಳಲೆಲ್ಲ ಬಾಳೇಪುಣಿ ಓರ್ವ ಸ್ನೇಹಿತನಾಗಿ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ, ತಮ್ಮಿಂದಾದ ನೆರವು ನೀಡಿದ್ದಾರೆ. ನೂರಾರು ಮಂದಿ ನ್ಯೂಪಡ್ಪುವಿನ ಮನೆಗೆ ಬಾಳೇಪುಣಿ ತೆರಳಿದ್ದಾರೆ, ಈಗಲೂ ಅಗತ್ಯ ಬಿದ್ದಾಗ ಹೋಗುತ್ತಾರೆ. ಇಷ್ಟು ವರ್ಷಗಳಲ್ಲಿ ಹಾಜಬ್ಬರಲ್ಲಿ ನೀವೇನು ಬದಲಾವಣೆ ಕಾಣುತ್ತೀರಿ ಎಂದು ಕೇಳಿದರೆ ಬಾಳೇಪುಣಿ ಹೇಳುವ ಮಾತು ಅಂದು ನಾನು ಯಾವ ಹಾಜಬ್ಬರನ್ನು ಕಂಡಿದ್ದೇನೋ, ಇಂದೂ ಅದೇ ಹಾಜಬ್ಬರನ್ನು ಕಾಣುತ್ತಿದ್ದೇನೆ ಅಂತ. ಓರ್ವ ಪತ್ರಕರ್ತನಾಗಿ ಹಾಜಬ್ಬರನ್ನು ಗುರುತಿಸಿದ್ದು ಮಾತ್ರ ಅಲ್ಲ. ಮುಂದೆ ಅವರ ಶ್ರೇಯೋಭಿವೃದ್ಧಿಗೆ ಚಿಂತಿಸಿದ ನಿಸ್ವಾರ್ಥ ಮನಸ್ಸು ಓರ್ವ ಮಾನವೀಯ ಪತ್ರಕರ್ತನನ್ನು ಅವರೊಳಗಿನಿಂದ ತೋರಿಸಿಕೊಡುತ್ತದೆ.

ನಮ್ಮ ನಡುವೆ ನೂರಾರು ಪತ್ರಕರ್ತರಿದ್ದಾರೆ. ಹಾಗಂತ ಒಬ್ಬೊಬ್ಬರ ಗ್ರಹಿಕೆ, ಬರಹದ ಶೈಲಿ ಭಿನ್ನವಾಗಿರುತ್ತದೆ. ನಮ್ಮೆದುರಿಗೇ ಓರ್ವ ಪ್ರಭಾವಿ ಸುದ್ದಿಯಾಗಬಲ್ಲ ವ್ಯಕ್ತಿ ಹಾದು ಹೋದರೂ ಕೆಲವೊಮ್ಮ ಅದು ನಮ್ಮ ಸುದ್ದಿಗಾರನ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಓರ್ವ ಸೂಕ್ಷ್ಮಮತಿ, ಚತುರ ಪತ್ರಕರ್ತ ಮಾತ್ರ ಹೇಗೆ ಒಂದು ಸಾಧನೆಯನ್ನು, ಅರ್ಹತೆಯನ್ನು ಧನಾತ್ಮಕವಾಗಿ ಓದುಗರ ಎದುರಗಿಡಬಹುದು ಅಂತಲೇ ಯೋಚಿಸುತ್ತಾನೆ. ಅದರ ಪರಿಣಾಮವಾಗಿ ಲೇಖನಿ ಮೂಲಕ ಮರುಜನ್ಮ ಪಡೆದ ಹಾಜಬ್ಬರು ಓರ್ವ ಜೀವಂತ ದಂತಕಥೆಯಾಗಿದ್ದಾರೆ. ಇದು ಮಂಗಳೂರಿನ ಪತ್ರಕರ್ತರೆಲ್ಲರಿಗೂ ಹೆಮ್ಮೆಯ ಸಂಗತಿ.

ಬಾಳೇಪುಣಿ 1990ರ ಹೊತ್ತಿಗೆ ಸಂಪೂರ್ಣ ಸಾಕ್ಷರಾತ ಆಂದೋಲನದಲ್ಲಿ ತೊಡಗಿಸಿಕೊಂಡು ಸಾಕಷ್ಟು ಓಡಾಡಿದ್ದಾರೆ, ಬೆಟ್ಟ, ಗುಡ್ಡ ಹಳ್ಳಿಗಳಿಗೆ ತೆರಳಿ ಕ್ಲಾಸ್ ಮಾಡಿದ್ದಾರೆ, ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ಹಗಲು ದುಡಿದು ರಾತ್ರಿ ವಯಸ್ಕರ ಶಿಕ್ಷಣ ತರಗತಿಗಳನ್ನು ನಡೆಸಿದ್ದಾರೆ. ಈ ಸಂದರ್ಭ ಹಲವು ಮಂದಿಯ ಸಂಪರ್ಕ ಬಂತು. ಜನಸಾಮಾನ್ಯರ ಬದುಕಿನ ಕಷ್ಟಗಳ ಸಾಕಷ್ಟು ನಿದರ್ಶನಗಳು ಸಿಕ್ಕವು. ಹಾಗಾಗಿ ನೊಂದವರು, ಸೋತವರು, ಕಷ್ಟದಲ್ಲಿದ್ದವರು ಹಠದಿಂದ ಗೆದ್ದು ಬಂದ ವಿಚಾರಗಳನ್ನು ವರದಿಗಳ ಮೂಲಕ ಬೆಳಕಿಗೆ ತರಲು ಈ ಹಂತ ಪ್ರೇರಣೆಯಾಯಿತು ಎನ್ನುತ್ತಾರೆ ಬಾಳೇಪುಣಿ. ಅಕ್ರಮ, ಅವ್ಯವಹಾರಗಳ ತನಿಖಾ ವರದಿ ಬಿಟ್ಟರೆ ಅವರು ಯಾವತ್ತೂ ಋಣಾತ್ಮಕ ವರದಿಗಳನ್ನು ಮಾಡಿದಿಲ್ಲ. ಸಾಧನೆ, ಪ್ರೇರಣೆಯ ನೂರಾರು ವರದಿಗಳೇ ಮಾಡಿದ್ದು, ಅದುವೇ ಹೆಚ್ಚು ಖುಷಿ ಕೊಟ್ಟದ್ದು, ಧನಾತ್ಮಕ ವರದಿಗಳೇ ಇಷ್ಟ ಎನ್ನುತ್ತಾರೆ ಅವರು.

ಬಾಳೇಪುಣಿ ವಸ್ತುನಿಷ್ಠವಾಗಿ ಮಾತನಾಡುತ್ತಾರೆ. ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಗೊತ್ತು. ಅಸಹಜತೆಗಳನ್ನು, ಅತಿರೇಕಗಳನ್ನು, ತಪ್ಪುಗಳನ್ನು ಅವರು ನೇರವಾಗಿ ಖಂಡಿಸುತ್ತಾರೆ. ಮುಖಸ್ತುತಿ ಮಾಡಿ ಮೆಚ್ಚಿಸುವ ಬದಲು ತಪ್ಪುಗಳನ್ನು ತೋರಿಸಿ ಕೊಟ್ಟು ತಿದ್ದುವಂತೆ ಸಹವರ್ತಿಗಳಿಗೆ, ಕಿರಿಯರಿಗೆ ತಿಳಿ ಹೇಳುತ್ತಾರೆ. ಬಹುಶಃ ಅವರ ಈ ಗುಣ ಎಲ್ಲರಿಗೂ ಇಷ್ಟ ಆಗಲಿಕ್ಕಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳಿದರೆ ಕೆಂಡದಂಥ ಸಿಟ್ಟು ಬರುವುದು ಸ್ವಾಭಾವಿಕ. ಬರಹದಲ್ಲಿ, ಮಾತಿನಲ್ಲಿ, ವರ್ತನೆಯಲ್ಲಿ ಬಾಳೇಪುಣಿ ಅನ್ಯಾಯವನ್ನು ಖಂಡಿಸಿಯೇ ಖಂಡಿಸುತ್ತಾರೆ. ಅಸಹಜತೆಗಳು ಕಂಡಾದ ನೇರವಾಗಿ ಪ್ರಶ್ನೆ ಮಾಡುತ್ತಾರೆ. ಅದಕ್ಕೇ ಅವರು ಮಾತುಗಳು ಹರಿತ. ಆದರೆ ಸ್ನೇಹಪರತೆ, ವಿಶ್ವಾಸಾರ್ಹತೆ, ಸ್ವಾಭಿಮಾನಗಳ ಸ್ವಭಾವದಿಂದಾಗಿಯೇ ಹಿರಿಯ ಪತ್ರಕರ್ತರಾದರೂ ಸಹಿತ ಹಿರಿತನದ ಹಮ್ಮು ಬಿಮ್ಮು ಇಲ್ಲದೆ ಸರಳವಾಗಿ ಯಾರೊಂದಿಗೂ ಬೆರೆಯುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಸಹಜವಾಗಿಯೇ ಇರುವ, ಸಹಜವಾಗಿಯೆ ಬರೆಯುವ ಮತ್ತು ಸಹಜವಾಗಿಯೇ ಬೇರೆಯುವ ವ್ಯಕ್ತಿತ್ವ ಅವರದ್ದು.

ವೃತ್ತಿ ಬದುಕಿನ ಬದಲಾವಣೆಯ ನಡುವಿನ ಅವಧಿಗಳಲ್ಲಿ ಹೊಟ್ಟೆಪಾಡಿಗೆ ಬೇರೆ ಬೇರೆ ಕೆಲಸ ಮಾಡಿದ್ದಾರೆ, ಕೂಲಿ ಕೆಲಸಕ್ಕೂ ಹೋಗಿದ್ದಾರೆ, ಕೆಂಪು ಕಲ್ಲಿನ ಕ್ವಾರಿಯಲ್ಲಿ ಕಲ್ಲು ಕಡಿದ ಅನುಭವವೂ ಇದೆ. ಅವರು ಜನಿಸಿದ್ದು ಪರಿಶಿಷ್ಟ ಜಾತಿಗೆ ಸೇರಿದ ಮೊಗೇರ ಸಮುದಾಯದಲ್ಲಿ. ಎಳವೆಯಲ್ಲಿ ಕಾಡಿದ ಬಡತನ ಹಾಗೂ ಅಸ್ಪೃಶ್ಯತೆಯ ಸಾಕಷ್ಟು ನೆನಪುಗಳು ಮಾಸದೇ ಉಳಿದಿವೆ. ತಾನು ಅನುಭವಿಸಿದ್ದು, ಕಂಡದ್ದು, ಗ್ರಹಿಸಿದ್ದು ಎಲ್ಲವೂ ಸೇರಿ ಅನುಭವದ ಮೂಸೆಯಾಗಿ ಅದನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸಲು, ನೂರಾರು ಮಂದಿಯಲ್ಲಿ ಜೀವನೋತ್ಸಾಹ ತುಂಬಲು, ಅಪಸವ್ಯಗಳಿಂದ ಆಚೆ ಬರುವಂಥ ಧನಾತ್ಮಕ ಚಿಂತನೆಗೆ ಜನರನ್ನು ಹಚ್ಚಲು ಅವರು ಆರಿಸಿದ್ದು ಪತ್ರಿಕೋದ್ಯಮದ ದಾರಿ. ಹಾಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಅವರು ಕೊಟ್ಟಂಥಹ ವರದಿಗಳ ಕಣಜವೇ ಸಾಕ್ಷಿಯಾಗಿ ನಿಂತಿವೆ.

 

ಬದುಕು ಮೊದಲೇ ಬರೆದಿಟ್ಟ ಸಿನಿಮಾ ಚಿತ್ರಕತೆ ಅಲ್ಲ, ಶಾಲೆಯಲ್ಲಿ ಮಾಡಿಡುವ ಟೈಂಟೇಬಲ್ ಸಹ ಅಲ್ಲ. ಎಷ್ಟೋ ಸಾರಿ ಸಿಕ್ಕಿದ ದಾರಿಯಲ್ಲಿ ಹೋಗಬೇಕಾಗುತ್ತದೆ, ಎಷ್ಟೋ ಸಿರಿ ಪರಿಸ್ಥಿತಿಗಳ ಜೊತೆ ರಾಜಿ ಆಗಬೇಕಾಗುತ್ತದೆ, ಯಾರದ್ದೋ ಹಂಗಿನಲ್ಲಿ, ಯಾವುದೋ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದಕ್ಕಿಂತಲೂ ರಿಪೇರಿಗಳ ಮೂಲಕವೇ ಬದುಕು ಕುಂಟುತ್ತಾ ಸಾಗುತ್ತದೆ. ಆದರೆ, ಕೆಲವು ಮಂದಿ ಮಾತ್ರ ಬದುಕಿನ ತುಂಬ ಸವಾಲುಗಳು, ಮಸುಕು ಬೆಳಕಿನ ದಾರಿಯನ್ನೂ ಬಲವಾಗಿ ಹಿಡಿದು, ಛಲ ಬಿಡದೆ ಕನಸು ಕಂಡ ಹಾಗೆಯೇ ಬದುಕಿ ತೋರಿಸುತ್ತಾರೆ. ಆ ದಾರಿಯಲ್ಲಿ ಅವರು ತ್ಯಜಿಸಿದ್ದು, ನಿರ್ಲಿಪ್ತವಾಗಿ ನಡೆದದ್ದು, ಕಷ್ಟಗಳ ಬೆವರು ಒರೆಸಿ ಸಾಗಿದ್ದು ಸಮಾಜಕ್ಕೆ ಕಾಣದಿದ್ದರೂ, ಅಂತಿಮವಾಗಿ ಕನಸು ಕಂಡದ್ದನ್ನು ನನಸಾಗಿಸಿ, ಅಂದುಕೊಂಡ ಬದುಕನ್ನು ಯಾರದ್ದೂ ಹಂಗಿಲ್ಲದೆ ಕಟ್ಟಿಕೊಂಡಾಗ ಸಹಜವಾಗಿ ಜನರಿಗೆ ಅವರು ಅನುಕರಣೀಯರಾಗುತ್ತಾರೆ. ಗೆದ್ದ ಮೇಲೆ ಮಾತನಾಡಿಸ್ತಾರೆ, ಸಲಹೆ ಕೇಳ್ತಾರೆ, ಸನ್ಮಾನ ಮಾಡ್ತಾರೆ. ಅಂಥದ್ದೊಂದು ಸಾಲಿನಲ್ಲಿ ಮಂಗಳೂರಿನ ಪತ್ರಕರ್ತರ ಗಢಣದಲ್ಲಿ ತಳಮಟ್ಟದಿಂದ ಬಂದು ತಳಮಟ್ಟದ ಗೆಲವುಗಳಿಗೆ ಅಕ್ಷರಗಳ ಬೆಳಕು ನೀಡಿದ ಅಪರೂಪದ ವ್ಯಕ್ತಿಯಾಗಿ ಗೋಚರಿಸುತ್ತಾರೆ. ಬರೆದಂತೇ ಬಾಳಿದ ಬಾಳೇಪುಣಿಯಾಗಿ, ವ್ಯಕ್ತಿತ್ವವನ್ನು ಕುಂದಿಸುವ ಯಾವುದೇ ಋಣಾತ್ಮಕ ಅಂಶಗಳಿಗೆ ತಲೆ ಬಾಗದೆ, ಆಮಿಷಗಳ ಹಿಂದೆ ಹೋಗದೆ, ವೃತ್ತಿಯಲ್ಲಿ ಯಾರಿಗೂ ಸ್ಪರ್ಧೆಗಳನ್ನು ನೀಡಿ ತಾಗದೆ, ತನ್ನ ಆದರ್ಶಗಳಂತೆ ಇದ್ದುದಕ್ಕೆ ಬಾಳೇಪುಣಿಯಾಗಿ ಕಾಣುತ್ತಾರೆ, ಕಾಡುತ್ತಾರೆ. ಅವರ ಮುಂದಿನ ಬದುಕು ಅನುಕರಣೀಯವಾಗಿಯೇ ಇರಲಿ ಹಾಗೂ ಸಶಕ್ತ, ಮಾದರಿ ಬದುಕು ಮುಂದುವರಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ.

-ಕೃಷ್ಣಮೋಹನ ತಲೆಂಗಳ.

3 comments:

Poornima kamath A said...

ಬಾಳೆಪುಣಿಯವರು ಒಬ್ಬ ನಿಷ್ಠಾವಂತ,ನಿಷ್ಪಕ್ಷಪಾತಿ,ಜವಾಬ್ದಾರಿಯುತ ಪತ್ರಕರ್ತರಾಗಿ ಮಾಡಿದ ಸಾಧನೆಗಳು,ಎಲೆಮರೆಯಂತಿರುವ ಎಷ್ಟೋ ಪ್ರತಿಭೆಗಳನ್ನು ಅನಾವರಣಗೊಳಿಸಿ,ಅವರ ಏಳಿಗೆಗೆ ಶ್ರಮಿಸಿದ ರೀತಿ ಮತ್ತು ಎಷ್ಟೋ ಸಮಸ್ಯೆಗಳನ್ನು ಸಮಾಜಮುಖಿ ಕಾಳಜಿಯಿಂದ,ಸತ್ಯನಿಷ್ಟ ವರದಿ ಮುಖೇನ ಪರಿಹರಿಸಲು ಮಾಡಿದ ಕಾರ್ಯಗಳು ಹಾಗೂ ಬರಹಗಳಂತೆ ಚಾಚೂ ತಪ್ಪದೆ ಅನುಸರಿಸಿದ ಸ್ಫಟಿಕದಂಥ ಪರಿಶುದ್ಧ ಮನಸ್ಸಿನ ಪರಿಶುದ್ಧ ಸಾರ್ಥಕ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಓದುವಾಗ ಹೆಮ್ಮೆಯೆನಿಸಿದೆ.ನಿಜವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳು & ಪತ್ರಕರ್ತರು ಹೇಗಿರಬೇಕು ಎಂಬುದಕ್ಕೆ ಇವರೇ ಮಾದರಿಯಾಗಿದ್ದು ಅಧ್ಯಯನ ಯೋಗ್ಯವಾಗಿದೆ.ಅವರ ಜೀವನಗಾಥೆಯನ್ನು ಸವಿಸ್ತಾರವಾಗಿ,ಹಂತಹಂತವಾಗಿ,ಅತ್ಯಂತ ಸ್ಪಷ್ಟವಾಗಿ,ಸ್ಪುಟವಾಗಿ, ವಿಮರ್ಶಾತ್ಮಕವಾಗಿ, ಸುಂದರವಾಗಿ ಬರಹರೂಪಕ್ಕಿಳಿಸಿದ ತಮಗೂ ಧನ್ಯವಾದಗಳು.



ಸಂಜೀವ ನಾಯ್ಕ್ said...

ಸರ್ ನಮಸ್ತೇ
ತಮ್ಮ ಪ್ರಾಮಾಣಿಕ ಪರಿಶುದ್ಧ ಬರಹದಿಂದ ನಾಡಿನಾದ್ಯಂತ ನಿಮ್ಮ ಹೆಸರು ಪ್ರತಿಯೊಬ್ಬರಿಗೂ ತಿಳಿದೇ ಇದೆ. ನೈಜ ವಾಸ್ತವ ಮತ್ತು ಯಾವುದೇ ಪ್ರಲೋಭನೆಗೆ ಒಳಗಾಗದೇ ಓರ್ವ ಅತ್ಯತ್ತಮ ಬರಹಗಾರರಾಗಿ ಸೈ ಎನಿಸಿಕೊಂಡವರು ತಾವುಗಳು. ತಮ್ಮ 60ನೇ ಸಂವತ್ಸರದ ಈ ಶುಭ ಸಂದರ್ಭದಲ್ಲಿ ಶುಭ ಹಾರೈಕೆಗಳೊಂದಿಗೆ ಭಗವಂತನು ತಮ್ಮ ಎಲ್ಲಾ ಆಶೆ ಆಕಾಂಕ್ಷೆಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಸಂಜೀವ ಸೌಮ್ಯ
ಅಧ್ಯಾಪಕರು

ಸೀತಾರಾಮ ಕೊಂಚಾಡಿ said...

ಗುರುವಪ್ಪ ಬಾಳೆಪುಣಿ ಸರ್ ನಮಸ್ತೆ, 🙏
. ಸರ್, ನಿಮ್ಮ ಬರಹದ ಲೇಖನಿಯಿಂದ ನೀವು ಮಾಡಿರುವ ಸಾಧನೆಗಳಿಂದ ಸಮಾಜವು ನಿಮ್ಮತ್ತ ನೋಡುವಂತಹ ಕಾರ್ಯವನ್ನು ಮಾಡಿರುತ್ತೀರಿ.
ನಿಮ್ಮ ಈ ಸಾಧನೆಗೆ ಅಭಿನಂದನೆಗಳು ಅಭಿವಂದನೆಗಳು.
🙏💐🌹.
ಸೀತಾರಾಮ ಕೊಂಚಾಡಿ
ನಿವೃತ್ತ ಉಪತಹಸಿಲ್ದಾರರು.
ಕಂದಾಯ ಇಲಾಖೆ ಮಂಗಳೂರು.

Popular Posts