Tuesday, January 17, 2017

ಅಚ್ಚರಿಗೂ, ಕುತೂಹಲಕ್ಕೂ ಇದು ಕಾಲವಲ್ಲ!


ಕಾಲ ಬದಲಾದಂತೆ ತಾಂತ್ರಿಕ ಔನ್ನತ್ಯ ನಿರೀಕ್ಷಿತ ಹಾಗೂ ಸಹಜ ಕೂಡಾ. ಅದರಿಂದ ‘ಜಗತ್ತು ಹಾಳಾಯಿತು’ ಎಂಬ ವಾದವಲ್ಲ. ಆದರೆ ಜಗತ್ತಿನಲ್ಲಿ ಸಹಜ ಬೆಳವಣಿಗೆ, ಸಹಜ ನಡವಳಿಕೆ, ಸಹಜ ಏರಿಳಿತಗಳ ಮೇಲೆ ಹತೋಟಿ ಸಾಧಿಸುವ ಯಂತ್ರಗಳು ಬದುಕಿನ ಭಾವನೆಗಳ ಮೇಲೂ ಸವಾರಿ ಮಾಡುತ್ತದೆ. ದಿನದ ೨೪ ಗಂಟೆಗಳ ನಡುವೆಯೊಂದು ಮಾಯಾ ಜಾಲ ನಿರ್ಮಿಸಿ, ಯಾವುದಕ್ಕೂ ಪುರುಸೊತ್ತಿಲ್ಲವೆಂಬಂಥಹ ಭ್ರಮೆ ಸೃಷ್ಟಿಸುತ್ತವೆ. ಮೊಬೈಲು, ವಾಟ್ಸಾಪ್ಪು, ನಗದು ರಹಿತ ವ್ಯವಹಾರಗಳು, ವರ್ಚುವಲ್ ರಿಯಾಲಿಟಿ ಸಾಧನಗಳೆಲ್ಲ ಬರ ಬರುತ್ತಾ ಮನುಷ್ಯ ಸಂಬಂಧದ ಭಾವನೆಗಳನ್ನು ಕಿರಿದುಗೊಳಿಸುತ್ತಿವೆ ಎಂಬುದು ಹಳೆಯ ರಾಗ. ಆದರೆ ಬದುಕಿನ ಸೂಕ್ಷ್ಮತೆಯನ್ನೂ ಕಸಿದುಕೊಂಡು ಅಚ್ಚರಿ ಪಡುವ, ಕುತೂಹಲ ಆಸ್ವಾದಿಸುವ ರಸ ಘಳಿಗೆಗಳನ್ನೇ ಕಸಿಯುತ್ತಿವೆ!
---------------
ಒಂದು ಕಾಲವಿತ್ತು... ಟೆಲಿವಿಷನ್‌ನಲ್ಲಿ ಒಂದೇ ಚಾನೆಲ್ ಇದ್ದಿದ್ದು, ವಾರಕ್ಕೆ ಒಂದೇ ಹಿಂದಿ ಸಿನಿಮಾ, ಒಂದೇ ಪ್ರಾದೇಶಿಕ ಭಾಷೆಯ ಸಿನಿಮಾ, ಒಂದು ಚಿತ್ರಹಾರ್, ಒಂದೇ ಒಂದು ಚಿತ್ರಮಂಜರಿ, ರಾಮಾಯಣ, ಮಹಾಭಾರತ್‌ನಂತಹ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಯಾರ‌್ಯಾರ ಮನೆಗೆ ಹೋಗಿ ಕಿಟಕಿಯಲ್ಲಿ ಇಣುಕಿ ಟಿ.ವಿ. ನೋಡ್ತಾ ಇದ್ದಿದ್ದು, ರಾಮಾಯಣ ಪ್ರಸಾರವಾಗ್ತಾ ಇದ್ದಾಗ ಟಿ.ವಿ.ಗೇ ಊದುಬತ್ತಿ ಹಚ್ಚಿ ಪೂಜೆ ಮಾಡ್ತಾ ಇದ್ದ ಜನಗಳು, ಅದನ್ನೂ ನೋಡೋದು ಬ್ಲಾಕ್ ಆಂಡ್ ವೈಟ್ ಚಾನೆಲ್‌ನಲ್ಲಿ!


ಇಂದು ಟಿ.ವಿ. ಬಿಡಿ, ಅದರಲ್ಲಿ ಸಾವಿರಾರು ಚಾನೆಲ್‌ಗಳು ಬರ್ತಾ ಇರೋದು ಬಿಡಿ, ಕೈಯಲ್ಲಿರೋ ಸ್ಮಾರ್ಟ್‌ಫೋನ್‌ನಲ್ಲೇ ಸಿನಿಮಾ, ಧಾರಾವಾಹಿ, ಚಿತ್ರಗೀತೆ ಯಾವುದನ್ನು ಬೇಕಾದರೂ ದಿನಪೂರ್ತಿ ಆನ್‌ಲೈನ್/ಆಫ್‌ಲೈನ್‌ನಲ್ಲಿ ನೋಡಬಹುದು, ಒಂದು ಚಿತ್ರಗೀತೆ ಕೇಳಬೇಕಾದರೆ ರೇಡಿಯೋಗೆ ಪತ್ರ ಬರೆದು ಕೋರಿಕೆ ಕಾರ್ಯಕ್ರಮ ಬರುವ ತನಕ ಕಿವಿ ನೆಟ್ಟಗೆ ಮಾಡಿ ಕಾಯಬೇಕಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಅಜ್ಜನ ಕಾಲದಿಂದ ಹಿಡಿದು ಇನ್ನೂ ಬಿಡುಗಡೆಯಾಗದ ಚಿತ್ರದ ಹಾಡನ್ನೂ ಹುಡುಕಿ ಹುಡುಕಿ ಕೇಳಬಹುದು, ಯಾರಿಗೋ ಪ್ರಪೋಸ್ ಮಾಡಲು ಕದ್ದುಮುಚ್ಚಿ ಪತ್ರ ಬರೆದು, ಪೋಸ್ಟ್ ಮಾಡಿ ಅದರ ಉತ್ತರ ಬರುವ ತನಕ ಕಾಯಬೇಕಾಗಿಲ್ಲ. ‘ಡು ಯೂ ಲವ್ ಮೀ’ ಅನ್ನುವ ಪುಟ್ಟ ಮೆಸೇಜ್  ವಾಟ್ಸಪ್‌ನಲ್ಲೋ, ಎಸ್‌ಎಂಎಸ್‌ನಲ್ಲೋ ಕಳ್ಸಿದ್ರೆ ಪಾಸಾ/ಫೇಲಾ ಅನ್ನೋದು ಆಗಿಂದಾಗ್ಗೆ ಗೊತ್ತಾಗಿ ಬಿಡುತ್ತದೆ!


ಸುದ್ದಿ ಆದ ಕೂಡಲೇ ಪ್ರಸಿದ್ಧಿ!: ಇಂದು ಪೇಪರ್ನೋರು, ಟಿ.ವಿ.ಯೋರಿಗಿಂತ ಮೊದಲೇ ಜನಸಾಮಾನ್ಯರಿಗೇ ಸುದ್ದಿಗಳು, ಅಪಘಾತದ ವರದಿಗಳು, ಹಗರಣಗಳು, ಪ್ರಧಾನಿ ಭಾಷಣಗಳು ಎಲ್ಲಾ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಸಿಕ್ಕಿರುತ್ತದೆ. ಟಿ.ವಿ.ಯವರು ಲೈವ್ ಕೊಡುವ ಮೊದಲೇ, ಪೇಪರ್‌ನೋರು ಮುಖಪುಟದಲ್ಲಿ ಸುದ್ದಿ ಲೀಡ್ ಮಾಡುವ ಗಂಟೆಗಳ ಮೊದಲೇ ಸಾಮಾನ್ಯ ಓದುಗನ ಮೊಬೈಲ್‌ನಲ್ಲಿ ಆ ಸುದ್ದಿ ವಿಡಿಯೋ ಸಹಿತ ಬಂದು ಬೆಚ್ಚಗೆ ಕುಳಿತಿರುತ್ತದೆ! ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುವ ಹೊತ್ತಿಗೆ ಹಳತಾಗಿರುತ್ತದೆ, ಜನರಲ್ಲಿ ಕುತೂಹಲವೇ ಉಳಿದಿರುವುದಿಲ್ಲ!


ಕಳೆದ ಎರಡು ದಶಕಗಳಲ್ಲಿ ಬದಲಾವಣೆ ತಂದಿರುವ ತಂತ್ರಜ್ಞಾನ ರಂಗ ನಮ್ಮ ನಿಮ್ಮ ಬದುಕಿನಲ್ಲಿ ಅಚ್ಚರಿ, ಕುತೂಹಗಳನ್ನೇ ಕಸಿದುಕೊಳ್ತಾ ಇದೆ. ಇನ್‌ಲ್ಯಾಂಡ್ ಲೆಟರ್, ಬ್ಲಾಕ್ ಆಂಟ್ ವೈಟ್ ಟಿ.ವಿ., ಟೈಪ್‌ರೈಟರ್, ಬ್ಯಾಟರಿ ಹಾಕುವ ರೇಡಿಯೋ, ಸೀಮೆಎಣ್ಣೆಯ ಲಾಟೀನು, ಊರಿಗೊಂದೇ ಪತ್ರಿಕೆ, ಟಿ.ವಿ.ಗೊಂದೇ ಚಾನೆಲ್ಲು, ಊರಲ್ಲಿ ಒಬ್ಬರದದ್ದೇ ಮನೆಯಲ್ಲಿ ಇರುವ ಲ್ಯಾಂಡ್‌ಲೈನ್ ಫೋನ್, ಪರವೂರಿನಲ್ಲಿರುವವ ಸಂಪರ್ಕಿಸಲು ಇದ್ದ ಟೆಲಿಗ್ರಾಂ, ವಿದೇಶದಲ್ಲಿದ್ದರೆ ಉದ್ದದ, ದಪ್ಪ ಸ್ಟಾಂಪ್ ಹಚ್ಚುವ ಕವರ್‌ನೊಳಗೆ ಬರೆಯುವ ಲೆಟರ್... ಎಲ್ಲ ಈಗ ಅಪರೂಪದ ವಸ್ತುಗಳಾಗಿವೆ. ಸಂಪರ್ಕ, ಸಂವಹನ, ತಲಪುವಿಕೆ ಈಗ ಗಾಳಿ/ಬೆಳಕಿನಷ್ಟೇ ವೇಗ.
ಮಾತ್ರವಲ್ಲ ತಂತ್ರಜ್ಞಾನಕ್ಕಿಂತ ವೇಗವಾಗಿ ಜನರ ನಿರೀಕ್ಷೆ ನಂಬಿಕೆಗಳೂ ಬದಲಾಗಿವೆ. ಈಗ ಕೈಗೆ ಸಿಕ್ಕ ಸೌಕರ್ಯ ಸಾಲದು, ಇನ್ನಷ್ಟು ಬೇಕೆಂಬ ತುಡಿತ, ಆತುರ, ಕಾತರ. ೩ಜಿ ಫೋನ್ ಸಿಕ್ಕವನಿಗೆ ೪ಜಿಗೆ ಅಪ್‌ಡೇಟ್ ಆಗುವ ಆಸೆ, ೪ಜಿ ಸಿಕ್ಕವನಿಗೆ ಅದಕ್ಕಿಂತ ಲೇಟೆಸ್ಟ್ ತಂತ್ರಜ್ಞಾನ ಏನಿದೆ ಎಂದು ಹುಡುಕುವ ಓಡಾಟ....


ಯಾವುದೂ ಹೊಸತಲ್ಲ, ಎಲ್ಲ ನಿರೀಕ್ಷಿತ!:
ಹೀಗೆ, ತಾಂತ್ರಿಕವಾಗಿ ಎಷ್ಟೇ ದೊಡ್ಡ ಅನ್ವೇಷಣೆಯಾದರೂ ‘ಇನ್ನೇನು ಬರುತ್ತದೆ’ ಎಂಬ ವಿಚಿತ್ರ ನಿರೀಕ್ಷೆಯಲ್ಲಿರುವ ಜನರಿಗೆ ಯಾವುದು ಹೊಸದಾಗಿ ಬಂದರೂ, ಏನೇ ಹೊಸ ಸುದ್ದಿ ಸಿಕ್ಕರೂ ಅದು ಅಚ್ಚರಿ ತರುವುದಿಲ್ಲ. ಎಂತಹ ದುರಂತ, ಎಂತಹ ಹಗರಣ, ಎಂತಹ ವೈಫಲ್ಯದ ಸುದ್ದಿ ಬಂದಾಗಲೂ ‘ಏನಂತೆ, ಎಷ್ಟಂತೆ?’ ಎಂಬ ಉದಾಸೀನ ಭಾವವೇ ಹೊರತು ಅದಕ್ಕೆ ಪ್ರತಿಕ್ರಿಯಿಸಬೇಕಾದ ಆತಂಕ, ಅಚ್ಚರಿ, ಉದ್ವೇಗವನ್ನು ವ್ಯಕ್ತಪಡಿಸುವ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ ಅನಿಸುತ್ತಿದೆ. ನಮಗೋಸ್ಕರ ಯಂತ್ರಗಳೋ, ಯಂತ್ರಗಳ ಕೈಯ್ಯಲ್ಲಿ ನಾವೋ ಎಂಬಂತಹ ಯಾಂತ್ರಿಕ ಜಗತ್ತಿಗೆ ಹಳ್ಳಿಗರೂ ಸಿಲುಕಿ ಒದ್ದಾಡುತ್ತಿರುವುದು ಇದೇ ಅಭಿಪ್ರಾಯವನ್ನು ಸಾರಿ ಸಾರಿ ಹೇಳುತ್ತಿವೆ.


೨೦-೩೦ ವರ್ಷಗಳ ಹಿಂದೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸದೊಂದು ಗಿಡ, ಹೊಸದೊಂದು ಹೂವು, ರಸ್ತೆ ಬದಿಯ ಹಳ್ಳದಲ್ಲಿ ಕಾಲು ಮುಳುಗಿಸಿ ನೀರು ಚಿಮುಕಿಸುವ ಪುಳಕ, ಗೂಡಂಗಡಿ ಪಕ್ಕದಲ್ಲಿರುವ ನಾಯಿ ಮರಿ ಇಂದೆಷ್ಟು ದೊಡ್ಡದಾಗಿದೆ ಎಂದು ನೋಡುವ ಆಸಕ್ತಿ ಎಲ್ಲ ಇತ್ತು.
ಇಂದು, ಮನೆ ಬಾಗಿಲಿನಿಂದ ಕರೆದೊಯ್ಯುವ ಸ್ಕೂಲ್ ಬಸ್ಸುಗಳಲ್ಲಿ, ಮಣಭಾರದ ಬ್ಯಾಗ್‌ಗಳನ್ನು ಹೊತ್ತು ಹೋಗುವ ಮಕ್ಕಳಿಗೆ ಅಸೈನ್‌ಮೆಂಟ್, ಪ್ರಾಜೆಕ್ಟ್‌ಗಳಿಗಿಂತ ಪ್ರಕೃತಿಯ ವಿಸ್ಮಯಗಳೆಲ್ಲ ಅಚ್ಚರಿ ತರುವುದಿಲ್ಲ. ಮೊಬೈಲ್ ರಿಂಗ್‌ಟೋನ್‌ಗೆ ಅಳುವನ್ನ್ನೇ ನಿಲ್ಲಿಸುವ ಹಸುಳೆ ಬರ ಬರುತ್ತಾ ನಾಲ್ಕೈದು ವರ್ಷದ ಹೊತ್ತಿಗೆ ಮೊಬೈಲ್ ಅನ್‌ಲಾಕ್ ಮಾಡಿ ತಾನೇ ಸೆಲ್ಫೀ ಹೊಡೆದು ಅಮ್ಮನಿಗೆ ತೋರಿಸುವಷ್ಟು ಕಲಿತಿರುತ್ತದೆ. ಮನೆಯೊಳಗಿನ ಟಿ.ವಿ., ಕಂಪ್ಯೂಟರ್‌ನಲ್ಲಿರುವ ಗೂಗಲ್ ಎಂಬ ಹುಡುಕಾಟದ ದೈತ್ಯ, ವೀಕೆಂಡ್‌ನಲ್ಲಿ ಹೋಗುವ ಎಕ್ಸಿಬಿಷನ್, ಅಲ್ಲಿನ ಕೃತಕ ಕಾಡು, ಮೃಗಾಲಯದಲ್ಲಿ ನೋಡುವ ಪ್ರಾಣಿಗಳು ಎಲ್ಲವನ್ನೂ ಕಲಿಸುತ್ತವೆ! ಪ್ರಶ್ನೆಗಳಿಗೆಲ್ಲಾ ಗೂಗಲ್ಲೇ ಉತ್ತರ ಕೊಡುವಾಗ ಇನ್ನು ಅಚ್ಚರಿ ಪಡಲು ಪುರುಸೊತ್ತಾದರೂ ಎಲ್ಲಿದೆ? ಅಲ್ವ.


ಒಂದು ಶಾಲೆಗೆ ಹೋಗುವ ಅನುಭವ ಇರಲಿ, ಮೊದಲ ಬಾರಿ ಟಾಕೀಸ್‌ಗೆ ಹೋಗಿ ಸಿನಿಮಾ ನೋಡುವುದಿರಲಿ, ಪಾರ್ಲರ್‌ನಲ್ಲಿ ಐಸ್‌ಕ್ರೀಂ ತಿನ್ನುವುದಿರಲಿ, ಹುಡುಗ ಹುಡುಗಿ ಮೊದಲ ಬಾರಿಗೆ ತೆರೆ ಸರಿಸಿದಾಗ ಪರಸ್ಪರ ನೋಡಿಕೊಂಡು ವಿವಾಹ ಬಂಧನಕ್ಕೊಳಗಾಗುವುದಿರಲಿ... ಯಾವುದರಲ್ಲೂ ಯಾರಿಗೂ ಕುತೂಹಲಗಳು ಉಳಿದಿಲ್ಲ. ಎಲ್ಲವೂ ಪೂರ್ವನಿಗದಿಯಂತೆಯೋ, ಈ ಮೊದಲೇ ಗೊತ್ತಿರುವಂತೆಯೋ ನಡೆದಿರುತ್ತವೆ. ಯಾವುದನ್ನೂ ಮುಚ್ಚಿಡಲು, ರಹಸ್ಯವೆಂಬಂತೆ ಬಚ್ಚಿಡಲು, ದಿಢೀರ್ ಅಚ್ಚರಿ ನೀಡಲು ಏನೂ ಉಳಿದಿಲ್ಲವೆಂಬಂತಹ ತಂತ್ರಜ್ಞಾನ, ಜೀವನ ಶೈಲಿ ಜೊತೆಯಾಗುತ್ತಿದೆ.
ತಿಂಗಳುಗಟ್ಟಲೆ ಬರುವ ಧಾರಾವಾಹಿಯ ಮುಂದಿನ ಸಂಚಿಕೆ ಏನೆಂಬುದು ತಿಳಿದಂತೆ, ಚರ್ವಿತಚರ್ವಣವಾಗಿ ಬರುವ ಕಮರ್ಷಿಯಲ್ ಸಿನಿಮಾದ ಕ್ಲೈಮಾಕ್ಸ್ ಏನೆಂದು ಮೊದಲೇ ಕಂಡು ಹಿಡಿಯಲು ಸಾಧ್ಯವಾಗುವಂತೆ ಬದುಕಿನ ಮುಂದಿನ ಮಗ್ಗುಲ ಬಗ್ಗೆ, ತಿರುವಿನ ಬಗ್ಗೆ, ಹೊಸತೆಂದು ಅಂದುಕೊಳ್ಳುವದರ ಬಗ್ಗೆ ಮೊದಲೇ ಊಹಿಸಬಲ್ಲ, ಚಿಂತಿಸಬಲ್ಲ, ಅದನ್ನು ಸಾಮಾನ್ಯವೆಂಬಂತೆ ಅನುಭವಿಸವಲ್ಲ, ಅನುಭವಿಸಬೇಕಾದ ಅನಿವಾರ್ಯತೆಯನ್ನೂ, ತಾಂತ್ರಿಕ ಹೆಗ್ಗಳಿಕೆಯನ್ನು ಹೊಗಳಬೇಕೋ, ಯಾಂತ್ರಿಕತೆಗೆ ಒಗ್ಗಬೇಕೋ ಎಂಬ ವ್ಯಾಪಕ ಗೊಂದಲ ದಾಸರಲ್ಲಿ ನಾವೂ ಒಬ್ಬರು ಅಷ್ಟೇ... ಏನೇ ಹೇಳಿ. ಅಚ್ಚರಿಗೂ, ಕುತೂಹಲಕ್ಕೂ ಇದು ಕಾಲವಲ್ಲವಯ್ಯ! ಅಲ್ವ?

Monday, January 16, 2017

ಕೋಪ "ತಾಪ'ಮಾನವೆಂಬ ಅಪಮಾನದ ಸುತ್ತ....!

ಸಿಟ್ಟು ಮಾನವ ಸಹಜ ಗುಣ, ಸ್ವಾಭಿಮಾನಿಗಳಿಗೆ ಸಿಟ್ಟು ಬಂದೇ ಬರುತ್ತದೆ, ಹಾಗಂತ ಸಿಟ್ಟೇ ದೌರ್ಬಲ್ಯವಾಗಬಾರದು, ಸಿಟ್ಟೇ ನಮ್ಮನ್ನು ಆಳಬಾರದು. ನಿಜ. ಆದರೆ, ಇನ್ನೊಂದು ವರ್ಗವಿದೆ. ಬೇರೆಯವರಿಗೆ ಸಿಟ್ಟು ಬರಿಸಿ ತಣ್ಣಗೆ ಕೂರುವವರು. ಸ್ನೇಹಿತರನ್ನೋ, ಬಂಧುಗಳನ್ನೋ ಕೆಣಕಿ, ಕಡೆಗಣಿಸಿ ಅಥವಾ ಅಹಿತವಾಗಿದ್ದನ್ನೇನೋ ಮಾಡುವ ಮೂಲಕ ಸಿಟ್ಟು ಬರಿಸುವುದು, ಅಸಹನೆ ಮೂಡಿಸುವುದು. ಸಿಟ್ಟು ಹುಟ್ಟಿಕೊಂಡ ಬಳಿಕ ಸಿಟ್ಟು ಬರಿಸಿದವನು ಅಲ್ಲಿರೋದಿಲ್ಲ, ಅವನ ಕೆಲಸ ಸಿಟ್ಟು ಹುಟ್ಟಿಸುವುದಷ್ಟೇ... ನಂತರ ಹೇಳಿಕೊಳ್ಳುವುದು, ನಾನು ಕ್ಷಮಯಾಧರಿತ್ರಿ, ನಾನು ಯಾರಲ್ಲೂ ದ್ವೇಷ ಕಟ್ಟಿಕೊಳ್ಳೋದಿಲ್ಲ, ಮಾತು ಬಿಡೋದಿಲ್ಲ, ತಪ್ಪು ಮಾಡಿದವರನ್ನೂ ಕ್ಷಮಿಸುತ್ತಲೇ ಇರುತ್ತೇನೆ, ಸಿಟ್ಟು ಮಾಡಿಕೊಳ್ಳುವುದರಿಂದ ಏನು ಸಾಧಿಸುವುದಕ್ಕಿದೆ ಎಂಬ ವೇದಾಂತ...!

 ಅಸಲಿಗೆ (ಎಲ್ಲರೂ ಖಂಡಿತಾ ಹಾಗಲ್ಲ), ಈ ಥರ ಅತಿಯಾದ ತಣ್ಣಗಿರುವ, ಸೋ ಕಾಲ್ಡ್ ಕ್ಷಮಾ ಗುಣಗಳಿರುವ ವ್ಯಕ್ತಿಗಳು ಎಷ್ಟು ಮಂದಿಯಲ್ಲಿ ಸಿಟ್ಟು ಹುಟ್ಟಿಸಿರುತ್ತಾರೆ ಎಂಬುದು ಸ್ವತಹ ಅವರಿಗೇ ಗೊತ್ತಿರುವುದಿಲ್ಲ. ಕೊನೆಗೆ ತಾವು ಮಾಡಿದ್ದಕ್ಕೆ ಪಶ್ಚಾತ್ತಾಪದ ಲವಲೇಶವೂ ಅವರಲ್ಲಿ ಕಂಡುಬರುವುದೂ ಇಲ್ಲ. ಒಟ್ಟೂ ಪ್ರಕರಣದಲ್ಲಿ ಧರ್ಮಕ್ಕೆ ಸಿಟ್ಟು ಮಾಡಿಕೊಂಡಾದ ಲೋಕದ ದೃಷ್ಟಿಯಲ್ಲಿ ಒರಟನಾಗುತ್ತಾನೆ, ಸಿಟ್ಟು ಬರಿಸಿದಾಗ ಕ್ಷಮಾಗುಣಸಂಪನ್ನ, ಅಜಾತಶತ್ರು, ಯಾರನ್ನೂ ನೋಯಿಸದಾದ ಎಂಬ ಬಿರುದು ಗಳಿಸಿ ಭಟ್ಟಂಗಿಗಳ ನಡುವೆ ಕುಣಿದು ಕುಪ್ಪಳಿಸುತ್ತಿರುತ್ತಾನೆ. ಆದ್ದರಿಂದ ದಯವಿಟ್ಟು ನೆನಪಿಟ್ಟುಕೊಳ್ಳಿ... ಸಿಟ್ಟು ಬೇಗ ಬರೋದು ನಿಮ್ಮ ಸ್ವಭಾವವಾದರೆ ಸಿಟ್ಟು ಬರಿಸುವ (ಬೇಕೆಂದೇ) ವರ್ಗದಿಂದ ದೂರವಿರಿ. ವೃಥಾ ಕೆಣಕುವವರ ಜೊತೆ ಮೊಂಡು ವಾದ, ವಿತಂಡ ತರ್ಕದಿಂದ ಸಮಯ ಹಾಳಲ್ಲದೆ ಸಾಧಿಸುವುದೇನೂ ಇಲ್ಲ, ಜೊತೆಗೆ ನೀವು ಒರಟರೆಂಬ ಬಿರುದು ಬೇರೆ!


ಎಲ್ಲ ಗುಣಗಳ ಹಾಗೆ ಸಿಟ್ಟು ಕೂಡಾ ಜನ್ಮದೊಂದಿಗೇ ಬರೋದು. ಕೆಲವರಿಗೆ ಅದು ನಿಯಂತ್ರಣದಲ್ಲಿದ್ದರೆ ಕೆಲವರಿಗೆ ಇರುವುದಿಲ್ಲ. ಅಸಹನೆಯಿಂದ, ಪರಿಸ್ಥಿತಿಯಿಂದ, ಅಪಾರ್ಥದಿಂದ, ಅವಮಾನದಿಂದ, ಸೋಲಿನಿಂದ, ಟೀಕೆಯಿಂದ, ನೋವಿನಿಂದಲೂ ಸಿಟ್ಟು ಬರಬಹುದು. ಎಷ್ಟರ ಮಟ್ಟಿಗೆ ಅದು ಪ್ರಕಟವಾಗುತ್ತದೆ, ಯಾವ ರೀತಿ ಪ್ರಕಟವಾಗುತ್ತದೆ ಎಂಬುದರ ಮೇಲೆ ಸಿಟ್ಟಿನ ಪ್ರದರ್ಶನ ಇತರರ ಮುಂದಾಗುತ್ತದೆ ಅಷ್ಟೆ.


ಕೆಲವರು ಸಿಟ್ಟು ಬಂದಾಗ ಹಾರಾಡುವುದು, ಇನ್ನು ಕೆಲವರು ಮೌನವಾಗುವುದು, ಕೆಲವರು ನಕ್ಕು ಬಿಟ್ಟು ಬಿಡುವುದೂ ಇದೆ. ಅದು ಅವರವರ ಪ್ರವೃತ್ತಿಗೆ ಬಿಟ್ಟದ್ದು. ಸಿಟ್ಟು ಬಂದಾಗ ನಕ್ಕು ಬಿಡುವುದು ಬಹಳ ಮೆಚ್ಯೂರ್ಡ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಅನಿಸುತ್ತದೆ. ಮೌನಕ್ಕೆ ಶರಣಾಗುವುದು ಸುರಕ್ಷಿತ ವಿಧಾನ. ಹಾರಾಡುವುದು ಮಾತ್ರ ಅಪಾಯಕಾರಿ.

ಸಿಟ್ಟು ಬರುವುದು ಬೇರೆ. ಬರಿಸುವುದು ಬೇರೆ. ಹೀಗೆ ಹೇಳಿದರೆ ಆತನಿಗೆ ಸಿಟ್ಟು ಬರುತ್ತದೆ, ಈ ಥರ ವಾದ ಮಂಡಿಸಿದರೆ ಆತ ಕನಲಿ ಕೆಂಡವಾಗುತ್ತಾನೆ, ಈ ಮಾತುಗಳು ಆತನಿಗೆ ಇಷ್ಟವಿಲ್ಲ, ಇಂತಹ ಉದಾಸೀನದ ಸಂಭಾಷಣೆ ಕೇಳಿದರೆ ಆತನ ಬಿಪಿ ಹೆಚ್ಚಾಗುತ್ತದೆ ಎಂದು ಗೊತ್ತಿದ್ದೂ ಗೊತ್ತಿದ್ದೂ ಮಾತನಾಡುವುದಿದೆಯಲ್ಲ.... ಅದು ಸಿಟ್ಟು ಬರಿಸುವುದು. ಇಂತಹ ಅನುಭವ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಆಗಿರುತ್ತದೆ. ಬಹುಷಹ ನೀವೂ ಇಂತಹ ಸಂದರ್ಭಗಳನ್ನು ನೀವು ಅನುಭವಿಸಿರುತ್ತೀರಿ.
ಒಂದು ವೇಳೆ ಯಾರಿಂದಲೋ ಸಿಟ್ಟುಗೊಂಡು ಅತರ ತಾಪ ಕೋಪ ಕಮ್ಮಿಯಾದ ಮೇಲೆ ತಣ್ಣನೆ ಕೂತು ಯೋಚಿಸಿ. ನೀವೇ ಆಶ್ಚರ್ಯ ಪಡುತ್ತೀರಿ.


ಬೇಕಂತಲೇ ಸಿಟ್ಟು ಬರಿಸಿ, ಶಾಂತಮೂರ್ತಿಗಳ ಪೋಸ್ ಕೊಡುವವರ ಸ್ವಭಾವವೇ ಅಂತಹದ್ದು. ಅವರು ಬೇರೆಯವರಿಗೆ ಎಂದೂ ಹೊಂದಿಕೊಳ್ಳುವುದಿಲ್ಲ. ಸಿಟ್ಟು ನಿಮ್ಮ ದೌರ್ಬಲ್ಯವೆಂಬುದು ಅವರಿಗೆ ಗೊತ್ತಿರುತ್ತದೆ. ಅದಕ್ಕಾಗಿ ಅದೇ ಮಾದರಿಯ ಮಾತುಗಳು ಅವರ ಕಡೆಯಿಂದ ಬರುತ್ತಿರುತ್ತದೆ. ನೀವು ಅದಕ್ಕೆ ಒರಟಾಗಿ ಪ್ರತಿಕ್ರಿಯೆ ಕೊಡುತ್ತಲೇ ಇರುತ್ತೀರಿ. ಒಬ್ಬನ ಮೇಲಿನ ಸಿಟ್ಟು ಇತರರ ಮೇಲೆಲ್ಲಾ ಚೆಲ್ಲಾಡಿದರೆ ಕೋನೆಗ ಕೋಪಿಷ್ಠರಾಗುವುಗು ನೀವು. ಕೋಪ ಬರಿಸಿದಿವನ ತಪ್ಪು ಎಲ್ಲೂ ಸಾಬೀತಾಗುವುದಿಲ್ಲ. ಆತ ತನ್ನ ಹೊಗಳುಭಟರೊಂದಿಗೆ ಹೇಳಿಕೊಳ್ಳುತ್ತಿರುತ್ತಾನೆ, ಆ ಮನುಷ್ಯನಿಗೆ ಮೂಗಿನ ಮೇಲೆ ಸಿಟ್ಟು, ಸ್ವಲ್ಪ ಜಾಗ್ರತೆ, ಜನ ಸ್ವಲ್ಪ ಒರಟು... ಮಾತು ಬಿಡುವುದು, ಕೋಪ ಮಾಡುವುದು ಆತನಿಗೆ ಚಾಳಿ.... ನನ್ನಷ್ಟು ತಾಳ್ಮೆ ಆತನಿಗೆಲ್ಲಿ ಬರಬೇಕು ಅಂತ.

ಸಾಮಾಜಿಕ ಜಾಲತಾಣಗಳಲ್ಲೂ ಬರುವ ಬಿಸಿ ಬಿಸಿ ಚರ್ಚೆಗಳು, ಸೂಕ್ಷ್ಮ ವಿಚಾರಗಳ ವಿಮರ್ಶೆಯ ಸಂದರ್ಭಗಳಲ್ಲೂ ಗಮನಿಸಿದ್ದೇನೆ. ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿ, ಒಂದಷ್ಟು ಮಂದಿಯನ್ನು ಪ್ರಚೋದಿಸುವ ಜನ ಚರ್ಚೆ ಕಾವೇರಿದ ಹಾಗೆ ಇಲ್ಲಿ ಇರೋದೇ ಇಲ್ಲ. ಇನ್ಯಾರೋ, ಮತ್ಯಾರೋ ಪರಸ್ಪರ ಏಕವಚನದಲ್ಲಿ ಬೈದಾಡಿಕೊಳ್ತಾ ಇರುತ್ತಾರೆ. ಚರ್ಚೆ ಹುಟ್ಟು ಹಾಕಿದ ವ್ಯಕ್ತಿ ದೂರದಲ್ಲಿ ಕುಳಿತು  ಶಾಂತಿಯ ದೂತನ ಪೋಸ್ ಕೊಡುತ್ತಿರುತ್ತಾನೆ. ಚರ್ಚೆ ನಡೆಯಬೇಕು, ವಾದ ವಿವಾದ ಇರಬೇಕು, ಸರಿ ತಪ್ಪುಗಳ ಜಿಜ್ಞಾಸೆ ಆಗಬೇಕು. ಆದರೆ ಕೆರಳಿಸುವುದೇ, ಪ್ರಚೋದಿಸುವುದೇ, ಯಾರ್ಯಾರನ್ನೋ ಕಾಲು ಕೆರೆಯುವುದೇ ಉದ್ದೇಶವಾಗಿದ್ದರೆ, ಅದು ಆರೋಗ್ಯಕರ ಚರ್ಚೆಯಾಗಲಾರದು. ಉಪಸಂಹಾರದ ತನಕ ಸಾಗುವ ಚರ್ಚೆಯಿಂದ ಒಂದು ಪ್ರಯೋಜನ, ಫಲಶೃತಿಯಾದರೂ ಸಿಕ್ಕೀತು.


ತುಂಬ ಮಂದಿಗೆ ತಮ್ಮ ನಡವಳಿಕೆ ಇತರರಲ್ಲಿ ಸಿಟ್ಟು ತರಿಸುತ್ತದೆ ಎಂಬುದು ಗೊತ್ತಿರುವುದಿಲ್ಲ (ಪ್ರಾಮಾಣಿಕವಾಗಿ). ಆದರೆ, ಇತರರು ಅದನ್ನು ಹೇಳಿ ತೋರಿಸದ ಮೇಲೂ ಅದೇ ಅಭ್ಯಾಸ ಮುಂದುವರಿಸಿದರೆ ಅದನ್ನು ಉಡಾಫೆಯೆಲ್ಲದೆ ವಿಧಿಯಿಲ್ಲ.
ಉದಾಹರಣೆಗೆ...ನಾಲ್ಕಾರು ಮಂದಿ ಊಟ ಮಾಡುತ್ತಿರುವಾಗ ವಿಕಾರ ಸ್ವರದಲ್ಲಿ ಸದ್ದು ಮಾಡಿ ತೇಗುವುದು ಸಭ್ಯತೆಯಲ್ಲ, ಆ ಅಭ್ಯಾಸ ಎಲ್ಲರಲ್ಲಿ ಸಿಟ್ಟು ತರಿಸುತ್ತದೆ, ಅಂತ ನಿಮ್ಮ ಸ್ನೇಹಿತನಿಗೆ ಕಿವಿ ಮಾತು ಹೇಳಿದಿರೆಂದಿಟ್ಟುಕೊಳ್ಳೋಣ. ಆತ ಒಪ್ಪುತ್ತಾನೆ, ಮತ್ತೆ ನಾಲ್ಕು ದಿನ ಕಳೆದು ಹಾಗೆಯೇ ಸದ್ದು ಮಾಡಿ ತೇಗಿದರೆ, ಈ ನಡವಳಿಕೆಗೆ ಏನನ್ನಬೇಕು. ಕೆಲವೊಂದು ನಡವಳಿಕ, ಸ್ವಭಾವವನ್ನು ನಮ್ಮಲ್ಲಿ ನಮಗೇ ತಿದ್ದಿಕೊಳ್ಳಲು ಆಗುವುದಿಲ್ಲ. ನಿಜ.
ಆದರೆ, ತಿಳಿದವರು, ಆಪ್ತರು, ಹಿತೈಷಿಗಳು ಒಳ್ಳೆಯದಕ್ಕೆ ಕಿವಿಮಾತು ಹೇಳಿದರೆ, ಹೀಗಲ್ಲ, ಹಾಗಿರುವುದು ಸೂಕ್ತವೆಂದು ಅರ್ಥ ಮಾಡಿಸಿಕೊಟ್ಟರೆ ಬದಲಾಗಲು ಪ್ರಯತ್ನಿಸಬಹುದು, ಬದಲಾಗಲೂ ಬಹುದು. ಆ ಮೂಲಕ ನಮ್ಮ ನಡವಳಿಕೆ ಇನ್ಯಾರಿಗೋ ಸಿಟ್ಟು ಹುಟ್ಟಿಸುವ ಸಂದರ್ಭಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಏನಂತೀರಿ...?ನಂಗೆ ಸಿಟ್ಟು ಬರೋದೇ ಇಲ್ಲ, ತಪ್ಪು ಮಾಡಿದವರನ್ನು ಕ್ಷಮಿಸುವುದು ದೊಡ್ಡ ಗುಣ. ಹುಟ್ಟಿದ ಮೇಲೆ ತಪ್ಪುಗಳಾಗೋದು ಸಹಜ, ಅದನ್ನು ಮನ್ನಿಸಬೇಕು ಎನ್ನುವವರೆಲ್ಲಾ ಪದೇ ಪದೇ ಅಂತಹ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರಾ.... ಕ್ಷಮೆಯೆನ್ನುವುದು ಸವಕಲಾದ ಅಸ್ತ್ರವಾಗಿ ಬಿಟ್ಟಿದೆಯಾ... ಕ್ಷಮೆಯನ್ನೇ ದೊಡ್ಡ ಗುಣಗಳಾಗಿ ಹೊಂದಿರುವವರಲ್ಲಿ ತಮ್ಮಿಂದಾದ ತಪ್ಪುಗಳ ಬಗ್ಗೆ ಪಶ್ಚಾತ್ತಾಪ, ಮತ್ತೊಮ್ಮೆ ಅಂತಹ ತಪ್ಪುಗಳನ್ನು ಮಾಡೋದಿಲ್ಲ ಎಂಬ ಬದಲಾವಣೆ ಇದೆಯೇ ಎಂಬುದನ್ನು ಗಮನಿಸಿ (ಅವರು ನಿಮ್ಮ ಅಕ್ಕಪಕ್ಕದವರು, ಸ್ನೇಹಿತರೂ, ಬಂಧುಗಳೂ ಯಾರೂ ಆಗಿರಬಹುದು). ಅದು ಬಿಟ್ಟು, ಸಿಟ್ಟು ಮಾಡುವವರೆಲ್ಲ ಕೆಟ್ಟವರು, ಶಾಂತಮೂರ್ತಿಗಳಾಗಿರುವವರೆಲ್ಲ ಮೇಧಾವಿಗಳೆಂಬ ಭ್ರಮೆ ಬೇಡ.
ಸಿಟ್ಟು ಒಂದು ಗೀಳು ಅಥವಾ ದೌರ್ಬಲ್ಯವಾಗದಿರಲಿ, ಪದೇ ಪದೇ ಸಿಟ್ಟು ಬರಿಸಿ ತಣ್ಣಗಿರುವ ವಿಕ್ಷಿಪ್ತ ನಡವಳಿಕೆಯೂ ನಮ್ಮದಾಗದಿರಲಿ, ಕ್ಷಮೆ ಪಡೆಯುವ ಗುರಾಣಿ ಜೊತೆಗಿಟ್ಟು ಗೊತ್ತಿದ್ದೇ ಮಾಡುವ ತಪ್ಪುಗಳೆಂಬ ಅಸ್ತ್ರಗಳ ಬಳಕೆ ಕಡಿಮೆಯಾಗಲಿ.
ಶಾಂತಿ...ಶಾಂತಿ... ಶಾಂತಿಹಿ.

Wednesday, January 11, 2017

ನಂಬಿಕೆಯೆಂದರೆ ದೇವರ ಹಾಗೆ!....ನಂಬಿ ಕೆಟ್ಟವರಿಲ್ಲವೋ...

ಜಗತ್ತು ನಿಂತಿರುವುದು ಕೇವಲ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಸಿ.ಸಿ. ಕ್ಯಾಮೆರಾ, ಬಾಂಬ್ ಡಿಟೆಕ್ಟರು, ಮಂಪರು ಪರೀಕ್ಷೆಯಂತಹ ವೈಜ್ಞಾನಿಕ ಲೆಕ್ಕಾಚಾರಗಳ ಮೇಲೆ ಮಾತ್ರವಲ್ಲ. ಅಲ್ಲಿ ಇನ್ನೂ ನಂಬಿಕೆ, ವಿಶ್ವಾಸ, ಆರಾಧನೆಗಳಿಗೆ ಬೆಲೆ ಇದೆ. ಮಾನವೀಯತೆ, ಸೌಜನ್ಯ, ಭಕ್ತಿ ಅಂತ ಕರೆಯೋದು ಇದನ್ನೇ. ನಂಬಿಕೆಯೆಂಬುದು ವ್ಯವಹಾರದ ಪರಿಧಿಯನ್ನು ಮೀರಿ ನಿಂತ ಅನುಭೂತಿ!
--------------


ನೀವೊಂದು ಬಸ್ ನಿಲ್ದಾಣದಲ್ಲಿದ್ದೀರಿ, ಸಹಪ್ರಯಾಣಿಕರೊಬ್ಬರಲ್ಲಿ ಬಸ್ಸೆಷ್ಟು ಗಂಟೆಗೆ ಬರುತ್ತದೆ? ಎಂದು ಪ್ರಶ್ನಿಸುತ್ತೀರಿ. ಅವರು ೧೦ ಗಂಟೆಗೆ ಎನ್ನುತ್ತಾರೆ. ತಕ್ಷಣ ಇನ್ನೊಬ್ಬರಲ್ಲಿ ‘ಬಸ್ಸೆಷ್ಟು ಗಂಟೆಗೆ ಬರುತ್ತದೆ?’ ಎಂದು ಮತ್ತೊಮ್ಮೆ ಕೇಳುತ್ತೀರಿ. ಅದೂ ಮೊದಲನೆಯವರ ಎದುರೇ! ಎರಡನೆಯವರೂ ನಿಮಗೆ ‘೧೦ ಗಂಟೆಗೆ ’ ಎಂದು ಉತ್ತರಿಸುತ್ತಾರೆ.


ಹಾಗಿದ್ದರೆ, ಒಟ್ಟೂ ಪ್ರಕ್ರಿಯೆ ಅರ್ಥವೇನು? ಮೊದಲು ಉತ್ತರ ನೀಡಿದವರ ಮೇಲೆ ನಂಬಿಕೆ ಇಲ್ಲವೆಂದಲ್ಲವೇ? ಅಥವಾ ನೀವು ಸಿಕ್ಕಾಪಟ್ಟೆ ದೂರಾಲೋಚನೆಯವರಾಗಿದ್ದು ಎಲ್ಲಾ ಮಾಹಿತಿಯನ್ನು ದೃಢಪಡಿಸುತ್ತೀರೆಂದೇ? ಏನೇ ಆಗಲಿ, ಮೊದಲು ಉತ್ತರ ನೀಡಿದವರ ಎದುರಿಗೇ ಇನ್ನೊಬ್ಬರೊಡನೆ ಅದೇ ಪ್ರಶ್ನೆ ಕೇಳಿದರೆ ಮೊದಲು ಉತ್ತರ ನೀಡಿದವರ ಮನಸ್ಥಿತಿ ಹೇಗಿದ್ದೀತು ಯೋಚಿಸಿದ್ದೀರ?
ಹಲವು ಸಂದರ್ಭಗಳಲ್ಲಿ ಹೀಗಾಗುತ್ತದೆ. ಕಾರಣ, ಪರಿಣಾಮಗಳ ಬಗ್ಗೆ ಯೋಚಿಸದೆ ನಾವು ವರ್ತಿಸುತ್ತೇವೆ. ಹಾಗಾಗಿ ನಾವು ಬೇರೆಯವರ ದೃಷ್ಟಿಯಲ್ಲಿ ನಂಬಿಕೆ ಕಳೆದುಕೊಳ್ಳುವುದು ಮಾತ್ರವಲ್ಲ, ಸ್ವತಃ ನಮಗೆ ನಮ್ಮ ಕುರಿತು ಪದೇ ಪದೇ ಆತಂಕ, ಸಂಶಯಗಳು ಹುಟ್ಟಿ ನಂಬಿಕೆ ಕಳೆದುಕೊಳ್ಳುವ ಹಾಗಾಗುತ್ತದೆ.


ಯಾಕೆ ಹೀಗಾಗುತ್ತದೆ?: ಎಷ್ಟೋ ಬಾರಿ ಸಂಬಂಧಗಳನ್ನು ಹಗುರವಾಗಿ ತೆಗೆದುಕೊಳ್ಳುವುದೋ, ಅತಿಯಾದ ಆತ್ಮವಿಶ್ವಾಸವೋ, ಪರಿಣಾಮಗಳ ವಿವೇಚನೆ ಇಲ್ಲದಿರುವುದೋ, ನನ್ನ ಮೂಗಿನ ನೇರಕ್ಕೆ ಇತರರು ಹೊಂದಿಕೊಂಡು ಹೋಗಲಿ ಎಂಬ ಉಡಾಫೆಯೋ? ಅಂತೂ ಇಂತಹ ವಿಶ್ವಾಸ ಕಳೆದುಕೊಳ್ಳುವ ಪ್ರಸಂಗಗಳು ನಿತ್ಯ ಬದುಕಿನಲ್ಲಿ ಎದುರಾಗುತ್ತಲೇ ಇರುತ್ತದೆ. ವಿಶ್ವಾಸಾರ್ಹವಲ್ಲದ ಹೇಳಿಕೆಗಳನ್ನು ರಾಜಕಾರಣಿಗಳು, ಗಣ್ಯರು ಮಾಧ್ಯಮಗಳಲ್ಲಿ ನೀಡಿ, ಅದು ವಿವಾದವಾದ ಬಳಿಕ ಅಲ್ಲಗಳೆಯುವುದು, ತಾನು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸುವುದಕ್ಕೂ ನಾವು ಸಾಕ್ಷಿಗಳಾಗುತ್ತೇವೆ. ವಿಶ್ವಾಸಕ್ಕೆ ದ್ರೋಹವಾಗಬಲ್ಲ, ಅಥವಾ ವಿಶ್ವಾಸಾರ್ಹವಲ್ಲದ ಹೇಳಿಕೆ, ಕೆಲಸ, ನಡವಳಿಕೆಗಳನ್ನು ಬಳಿಕ ಅಲ್ಲಗಳೆಯಬಹುದು, ತಿರುಚಬಹುದು ಅಥವಾ ತೇಪೆ ಹಚ್ಚಬಹುದು, ಹಾಗಂತ ಆತ್ಮಸಾಕ್ಷಿಗೆ ವಂಚಿಸಲು ಸಾಧ್ಯವಿಲ್ಲ.
ಆತ್ಮಸಾಕ್ಷಿಯೇ ಸತ್ಯ:  ಎಲ್ಲವನ್ನೂ ಸರಿ ತಪ್ಪುಗಳ ತಕ್ಕಡಿಯಲ್ಲಿ ಇಟ್ಟು ತೂಗುವುದು, ವಾದ-ವಿವಾದದಲ್ಲಿ ಗೆದ್ದ ಪಕ್ಷವೇ ಸರಿಯೆಂದು ಅಂದುಕೊಳ್ಳುವುದು, ವೈಜ್ಞಾನಿಕ ಲೆಕ್ಕಾಚಾರ, ತಂತ್ರಜ್ಞಾನಗಳು ತೋರಿಸುವುದೇ ಅಂತಿಮವೆಂದು ಭ್ರಮಿಸುವುದು ಇವೆಲ್ಲ ಆತ್ಮಸಾಕ್ಷಿಯ ಸತ್ಯಕ್ಕೆ ಸರಿಸಮವಲ್ಲ. ತಪ್ಪು ಮಾಡಿದವನಿಗೆ, ಸುಳ್ಳು ಹೇಳಿದವನಿಗೆ ಖಂಡಿತಾ ಗೊತ್ತಿರುತ್ತದೆ, ತನ್ನಿಂದ ತಪ್ಪಾಗಿದೆ ಎಂದು. ಎಷ್ಟೋ ಬಾರಿ ಅಹಂ ಅಡ್ಡ ಬರುತ್ತದೆ ಅದನ್ನು ಒಪ್ಪಿಕೊಳ್ಳುವುದಕ್ಕೆ. ಹಾಗಾಗಿ ಒಂದು ತಪ್ಪಿನ ಸಮರ್ಥನೆಗೆ ಇನ್ನೊಂದು ಸುಳ್ಳು, ಬಳಿಕ ವೃಥಾ ವಾದ ವಿವಾದ... ಹೀಗೆ ಅನಾವಶ್ಯಕ ಎಳೆದಾಟ, ವಿವಾದಗಳ ಬಳಿಕ ಅಂತಿಮ ಸತ್ಯ ಎಲ್ಲೋ ಮೂಲೆಗುಂಪಾಗಿರುತ್ತದೆ. ಅಥವಾ ಮೂಲ ವಿವಾದಕ್ಕಿಂತ ಬಳಿಕ ಹುಟ್ಟಿಕೊಂಡ ರೆಕ್ಕೆಪುಕ್ಕಗಳೇ ಮಹತ್ವ ಪಡೆದುಕೊಂಡಿರುತ್ತವೆ. 


ವಿಶ್ವಾಸವಿದ್ದಲ್ಲಿ, ನಂಬಿಕೆ ಹುಟ್ಟಿಕೊಂಡಲ್ಲಿ ಗೊಂದಲ, ದ್ವೇಷ, ಸಂಶಯಗಳಿಗೆ ಜಾಗವಿರುವುದಿಲ್ಲ. ಮನಸ್ಸು ಪ್ರಶಾಂತವಾಗಿರುತ್ತದೆ, ಧ್ಯಾನಸ್ಥ ಸನ್ಯಾಸಿಯ ಹಾಗೆ. ಗಲಿಬಿಲಿ, ಮುಂಗೋಪ, ಆತಂಕಗಳು ಕಡಿಮೆಯಾಗುತ್ತವೆ. ಪ್ರಶಾಂತ ಮನಸ್ಸು ಹಲವಷ್ಟು ಧನಾತ್ಮಕ ಕಾರ್ಯಗಳಿಗೆ ಪ್ರೇರಣೆಯಾಗುವೂ ಸತ್ಯ. ಹೇಗೆ ಗೊತ್ತಾ? ನೀವು ಪ್ರಯಾಣಿಸುತ್ತಿರುವ ವಿಮಾನ ಸುರಕ್ಷಿತವಾಗಿ ಮುಂದಿನ ನಿಲ್ದಾಣ ತಲಪುತ್ತದೆ, ನನ್ನ ಪೈಲಟ್ ಆ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಾನೆ ಎಂಬ ನಂಬಿಕೆಯಿದ್ದರೆ ಆರಾಮವಾಗಿ ಸೀಟಿಗೊರಗಿ ವಿಮಾನದಲ್ಲೇ ನಿದ್ರೆ ಮಾಡಬಹುದು, ಕಿಟಕಿ ಹೊರಗೆ ಚೆಲ್ಲಾಟವಾಗುವ ಮೋಡಗಳ ಸೌಂದರ್ಯವನ್ನು ಆಸ್ವಾದಿಸಬಹುದು, ಪುಟ್ಟದೊಂದು ಇಷ್ಟದ ಹಾಡಿನ ಸಾಲನ್ನು ಗುನುಗುನಿಸಬಹುದು. ಅದರ ಬದಲು, ಈ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಕಾಣಬಹುದೇ, ಪೈಲಟ್‌ಗೆ ಆ ಸಾಮರ್ಥ್ಯ ಇರಬಹುದೇ, ವಿಮಾನವೇನಾದರೂ ಸ್ಫೋಟವಾಗಬಹುದೇ? ಎಂಬಿತ್ಯಾದಿ ಸಂಶಯದ ಹುಳ ಮನಸ್ಸನ್ನು ಹೊಕ್ಕರೆ ಮುಗಿಯಿತು. ನಿಲ್ದಾಣ ತಲಪುವ ತನಕ ನೀವು ನೀವಾಗಿರುವುದಿಲ್ಲ. ಆತಂಕವೇ ನಿಮ್ಮನ್ನು ಅರ್ಧದಷ್ಟು ಕೊಂದಿರುತ್ತದೆ!


ವಿಶ್ವಾಸ ದೇವರ ಹಾಗೆ:
 ವಿಶ್ವಾಸವೆಂದರೆ ದೇವರ ಹಾಗೆ. ಸರ್ವಶಕ್ತನ ಮೇಲೆ ನಂಬಿಕೆ ಇರಿಸುತ್ತೇವಲ್ಲ ಹಾಗೆ. ಅಲ್ಲಿ ಕಪಟವಾಗಲಿ, ಸ್ವಾರ್ಥವಾಗಲಿ, ಏನನ್ನಾದರೂ ಪಡೆಯುತ್ತೇನೆಂಬ ಲೋಭವಾಗಲಿ, ನಾನು ನಂಬುವ ದೇವರು ನಂಬಿಕೆಗೆ ಅರ್ಹನೇ? ಎಂಬ ಕಿಂಚಿತ್ ಸಂಶಯವಾಗಲೀ ಯಾವುದೂ ಇರುವುದಿಲ್ಲ. ಪೂರ್ಣ ಶರಣಾಗತಿಯ ಭಾವ ಹಾಗೂ ನಮ್ಮನ್ನು ನಾವು ತೆರೆದುಕೊಳ್ಳುವ ಸಾತ್ವಿಕತೆಯ ಪರಮಾವಧಿಯ ಪ್ರಾರ್ಥನೆಯದು. ದೇವನೆದುರು ಪಾಪ ನಿವೇದಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಇದೇ ಕಾರಣಕ್ಕೆ. ಆತ ಸರ್ವವಂದ್ಯ, ಪ್ರಶ್ನಾತೀತ ಶಕ್ತಿ ಎಂಬ ಅಚಲ ನಂಬಿಕೆಗೋಸ್ಕರ. ಅಂತಹ ಸರ್ವಶಕ್ತಿಯ ಕಲ್ಪನೆ, ಪೂರ್ಣ ಶರಣಾಗತಿಯೊಂದಿಗಿನ ವಿಧೇಯ ಭಾವವೇ ನಮ್ಮಲ್ಲಿರಬಹುದಾದ ಅಹಂನ್ನು ಕೊಲ್ಲಲು, ಪಾಪಪ್ರಜ್ಞೆಯನ್ನು ಕಳೆಯಲು ನಮ್ಮನ್ನು ಸಜ್ಜುಗೊಳಿಸುತ್ತದೆ. ಹಾಗಾಗಿ ದೇವನೊಂದಿಗಿನ ಅದೇ ನಂಬಿಕೆಯನ್ನುಯಾರ ಜೊತೆಗಿರಿಸುತ್ತೇವೆಯೋ ಅವರನ್ನು ವಿಶ್ವಾಸಾರ್ಹರು ಎಂದುಕೊಳ್ಳುತ್ತೇವೆ. ಈ ವಿಶ್ವಾಸಕ್ಕೆ ಧಕ್ಕೆ ತರುವುದು ಹಾಗೂ ನಮ್ಮನ್ನು ನಾವು ವಂಚಿಸುವುದು ಎರಡೂ ಒಂದೇ. ನಂಬಿಕೆ ಬೆಲೆ ಕಟ್ಟಲಾಗದ ವಸ್ತು, ವ್ಯಕ್ತಿತ್ವಕ್ಕೊಂದು ಹೊಳಪು ನೀಡುವ ವಿಷಯವದು. ಹಾಗಾಗಿ ವಿಶ್ವಾಸವೊಂದು ಉತ್ತಮ ಸಂಬಂಧದ ತಳಹದಿ, ಆತ್ಮೀಯತೆಯ ಬೆಸುಗೆ, ಖಾಸಗಿ ಬಾಂಧವ್ಯದ ಕೊಂಡಿ ಎಂಬುದು ಸದಾ ನೆನಪಿರಲಿ.
ಸಾಗುವ ಬದುಕಿನಲ್ಲಿ ಎಡವುದು, ತಪ್ಪುಗಳು, ಪ್ರಮಾದ ಸಹಜ. ಗೊತ್ತಿದ್ದೋ, ಇಲ್ಲದೆಯೋ ವಿಶ್ವಾಸ ಕಳೆದುಕೊಳ್ಳುವ ಪ್ರಸಂಗಗಳೂ ಸಂಭವಿಸಬಹುದು. ಆದರೆ, ಅದು ಗೊತ್ತಾದ ಬಳಿಕ ಸರಿಪಡಿಸುವ ಅಥವಾ ನಮ್ಮ ಕಡೆಯಿಂದ ತಪ್ಪಾದಲ್ಲಿ ಪ್ರಮಾಣಿಕವಾಗಿ ವಿಷಾದ/ಕ್ಷಮೆ ಯಾಚಿಸುವ ಹೃದಯ ವೈಶಾಲ್ಯತೆ ಇದ್ದಲ್ಲಿ ಜಾರಿ ಹೋಗಬಹುದಾದ ನಂಬಿಕೆಯ ಕೊಂಡಿ ಮತ್ತೊಮ್ಮೆ ಜೋಡಿ ಬರಬಹುದು. ಕ್ಷಮೆ ಹಾಗೂ ನಂಬಿಕೆ ಮನಸ್ಸನ್ನು ವಿಶಾಲಗೊಳಿಸುತ್ತದೆ, ಮತ್ತಷ್ಟು ಪ್ರೀತಿ, ವಿಶ್ವಾಸದ ಧಾರೆಯನ್ನು ಹುಟ್ಟುಹಾಕುತ್ತದೆ.


----------
ನಂಬಿಕೆಯ ಮೇಲೊಂದು ವಿಶ್ವಾಸ....
೧) ವಿಶ್ವಾಸವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಕುಂದುಂಟಾದರೆ ತಕ್ಷಣ ಒಪ್ಪುವ, ಸರಿಪಡಿಸಿಕೊಳ್ಳುವ ನೇರ ನಡೆ ಬೇಕು.
೨) ನಂಬಿಕೆ ವಿಫಲವಾದರೆ ಅದು ನಂಬಿದವನ ತಪ್ಪೂ ಇರಬಹುದು, ಆದರೆ ನಂಬಿಕೆ ಕಳೆದುಕೊಳ್ಳುವಂತೆ ನಡೆದುಕೊಂಡವನೂ ನೈತಿಕವಾಗಿ ಕೆಳಗಿಳಿಯುತ್ತಾನೆ.
೩) ಅಚಲ ನಂಬಿಕೆ ಮನಸ್ಸಲ್ಲೊಂದು ನಿರಾಳತೆಗೆ ಜಾಗ ಕಲ್ಪಿಸುತ್ತದೆ. ಅದು ಬಾಳಿಗೊಂದು ಏಕಾಗ್ರತೆ ತರುತ್ತದೆ.
೪) ದೇವರು ಸರ್ವಶಕ್ತನೆಂಬ ನಂಬಿಕೆಯೇ ಆಸ್ತಿಕರೊಳಗೊಂದು ಸಾತ್ವಿಕತೆಯನ್ನು ಹುಟ್ಟಿಸುತ್ತದೆ.
೫) ಎನ್ನಂಥ ಭಕ್ತರು ಅನಂತ ನಿನಗಿಹರು, ನಿನ್ನಂಥ ಸ್ವಾಮಿ ಎನಗಿಲ್ಲ... ಎಂಬ ಶರಣಾಗತಿಯ ಭಾವ ದೃಢನಂಬಿಕೆಯ ಮನಸ್ಥಿತಿಗೊಂದು ಸಾಕ್ಷಿ.

Sunday, January 1, 2017

ಕನ್ನಡಪ್ರಭದ ಪುಟಗಳಲ್ಲಿ....2016ರ ಹಿನ್ನೋಟ.ಹೊಸ ವರ್ಷವೆಂಬ ಬದಲಾವಣೆಯ ಪರ್ವ!

ಮರಕುಟಿಕ ಪಕ್ಷಿಗೆ ಮರವನ್ನು ಕುಕ್ಕಿ ಕುಕ್ಕಿ ತೂತು ಕೊರೆದು ಆಹಾರ ಹುಡುಕಿ ತಿನ್ನೋದೇ ಕಾಯಕ. ಆದರೆ, ದಿನವಿಡೀ ಮರವನ್ನು ಕುಟುಕಿ ಕೊಕ್ಕುಗಳು ನೋವಾದಾಗ ರಾತ್ರಿ ಮಲಗುವ ಮುನ್ನ ಮರಕುಟಿಕ ಅಂದುಕೊಳ್ಳುತ್ತದಂತೆ, ನಾಳೆಯಿಂದ ಈ ಕಸುಬು ಸಾಕು, ಮತ್ತೆ ಬೇರೆ ಕೆಲಸ ನೋಡಬೇಕು, ಕಷ್ಟವಾಗುತ್ತದೆ ಅಂತ.... ಆದರೆ ರಾತ್ರಿ ಮಲಗಿ ಬೆಳಗಾಗಿ ಏಳಲು ಪುರುಸೊತ್ತಿಲ್ಲ, ಮರ ಕುಟಿಕ ಮತ್ಯಾವುದೇ ಮರದ ತುದಿಯಲ್ಲಿ ಪ್ರತ್ಯಕ್ಷವಾಗಿರುತ್ತದೆ ಟಕಾ ಟಕಾ ಸದ್ದು ಮಾಡುತ್ತಾ ಕುಟುಕುತ್ತಾ ಇರುತ್ತದೆ...

ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ಕೆಲವೊಮ್ಮೆ ನಾವೂ ಹೀಗೆಯೇ ಮರಕುಟಿಕ ಪಕ್ಷಿಯಂತಾಗುತ್ತೇವೆಯಾ...ಸ್ವಲ್ಪ ಯೋಚಿಸಿ...
ಪ್ರತಿ 365 ದಿನಗಳ ಬಳಿಕ ಕ್ಯಾಲೆಂಡರ್ ಬದಲಾಗುತ್ತದೆ, ಮತ್ತೆ ಹೊಸ ವರ್ಷ ಬರುತ್ತದೆ...ಕಾಗದದಲ್ಲಿ, ಮೊಬೈಲಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹೊಸ ವರ್ಷದ ಶುಭಾಶಯಗಳ ರಾಶಿ, ರಾಶಿ, ಬದಲಾಗುವ ಮಾತುಗಳು, ಬದಲಾಗಬೇಕೆಂಬ ತುಡಿತಗಳು, ಹೊಸದೇನಾದರೂ ಸಾಧನೆಯಾಗಬೇಕೆಂಬ ಹಂಬಲ... ನಾನೂ ಬದಲಾಗುತ್ತೇನೆಂಬ ದೃಢ ನಿರ್ಧಾರ. ಹೊಸ ವರ್ಷದಲ್ಲಾದರೂ ಹೊಸತನ್ನು ಮಾಡಿ ತೋರಿಸುತ್ತೇನೆಂಬ ಛಲಭರಿತ ಆವೇಶ. ಹೌದು ಜನವರಿ ಬಂದು ಫೆಬ್ರವರಿ ಮಾಗುವ ಹೊತ್ತಿಗೆ ನಿರ್ಧಾರದ ಬಲ ಕುಂದುವುದು ಮಾತ್ರವಲ್ಲ, ಅಂದುಕೊಂಡದ್ದು ಜಾರಿಯಾಗುವುದು ಅಷ್ಟು ಸುಲಭವಲ್ಲ ಎಂಬ ಸತ್ಯವೂ ಛಲವಾದಿಗಳಿಗೆ ತಿಳಿದಿರುತ್ತದೆ. ಮತ್ತದೇ ಮಾಸಗಳು, ಬದುಕು, ಮತ್ತೊಂದು ಡಿಸೆಂಬರ್ ತನಕ. 


ಹೌದಲ್ವ ಸ್ನೇಹಿತರೇ, ಮತ್ತೆ ಹೊಸ ವರ್ಷ ಬಂದಾಗಿದೆ, 2017ರ ಸಾಲಿಗೆ ಕಾಲಿರಿಸಿ ಆಗಿದೆ. ಹೊಸ ಉತ್ಸಾಹ, ಹೊಸ ಕ್ಯಾಲೆಂಡರ್, ಹೊಸ ಚಿಂತನೆ, ಶುಭಾಶಯ ಒಂಥರಾ ತಾಜಾ ಗಾಳಿ ಸೇವಿಸಿದ ಅನುಭವ. 


ಹಬ್ಬ, ಪರ್ವ, ಕಾಲ ನಿರ್ಣಯ, ಹೊಸ ದಿನ, ಕಾಲಘಟ್ಟದ ಮೈಲುಗಲ್ಲುಗಳನ್ನು ಊರಿ ರೂಪಿಸಿದವರು ನಾವು ಮನುಷ್ಯರೇ. ಹಾಗೊಂದು ಪರ್ವಗಳನ್ನು ಆರೋಪಿಸಿಕೊಂಡು ಖುಷಿ ಪಟ್ಟು ಮತ್ತಷ್ಟು ಜೀವನೋತ್ಸಾಹ ತುಂಬುವ ಸಂದರ್ಭಗಳನ್ನು ಸೃಷ್ಟಿಸಿಕೊಂಡವರೂ ನಾವೇ ಹೌದು. ಈ ಪೈಕಿ ಹೊಸ ವರ್ಷಾಚರಣೆಯೂ ಒಂದು.
ಕ್ರಿಸ್ತಶತಕ ಎನಿಸಿಕೊಳ್ಳುವ ಕಾಲಗಣನೆಗೆ ಚಾಲನೆ ದೊರೆತದ್ದು ಕ್ರಿಸ್ತ ಸತ್ತು ಬದುಕಿದ ಐದಾರು ಶತಮಾನಗಳ ನಂತರವೇ. ಕ್ರಿಸ್ತಶಕ ೫೨೫ರಲ್ಲಿ ಆಳ್ವಿಕೆ ನಡೆಸಿದ್ದ ಡಯೊನೀಷಿಯಸ್ ಎಂಬ ಚಕ್ರವರ್ತಿಯು ಆ ವರ್ಷವನ್ನು ಒಂದು ಅಂದಾಜಿನಲ್ಲಿ ಕ್ರಿಸ್ತಾವತಾರದ ೫೨೫ನೇ ವರ್ಷ ಎಂಬುದಾಗಿ ಘೋಷಿಸಿದ. ಅಂದಿನಿಂದ ಕ್ರಿಸ್ತಶಕೆ ಎನ್ನುವ ಪರಿಪಾಠ ಮೊದಲಾಯಿತು.

ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಗ್ರೆಗರಿಯನ್ ಕ್ಯಾಲೆಂಡರ್ ಪ್ರಕಾರ ಇಸವಿಗಳನ್ನು ಸೂಚಿಸುವಾಗ ಡಿಸೆಂಬರ್ ಕಳೆದು ಜನವರಿ ಬಂದಾಗ ನಾವೊಂದು ವರ್ಷ ದಾಟಿ ಹೊಸ ವರ್ಷದಲ್ಲಿ ಕಾಲಿರಿಸಿರುತ್ತೇವೆ.
ಬದುಕಿನಲ್ಲಿ, ಇತಿಹಾಸದಲ್ಲಿ ಸಾಧನೆ, ವಯಸ್ಸು, ದಿನಸೂಚಿಯ ಸ್ಪಷ್ಟ ಗಣನೆಗೆ ಕಾಲ ನಿರ್ಣಯಬೇಕೇ ಬೇಕು. ತಿಂದುಂಡು ಮಲಗುವಲ್ಲಿಗೆ ಮನುಷ್ಯ ಜೀವನ ಸೀಮಿತವಲ್ಲ. ಹಾಗಾಗಿ ನಾವೆಷ್ಟು ಬೆಳೆದಿದ್ದೇವೆ, ಎಷ್ಟು ದಿನಗಳನ್ನು ಕಳೆದಿದ್ದೇವೆ, ನಮ್ಮ ಮುಂದೆ ಇನ್ನೆಷ್ಟು ದಿನಗಳು ಬಾಕಿ ಇವೆ ಇತ್ಯಾದಿ ಎಲ್ಲವನ್ನೂ ಅರಿಯಲೆಂದೇ ಶತಮಾನಗಳ ಹಿಂದೆಯೇ ಹಿರಿಯರು ರೂಪಿಸಿದ ಕಾಲ ನಿರ್ಣಯದ ಅಂಗವಾದ ವರ್ಷಗಳ ಪರಿಗಣನೆ ಬೇಕೇ ಬೇಕು. ದಿನ, ವಾರ, ತಿಂಗಳು, ವರ್ಷಗಳ ಗಣನೆ, ಗಡುವು ಇದ್ದಾಗಲೇ ಮಾಡುವ ಕೆಲಸಕ್ಕೊಂದು ಗುರಿ, ಮಿತಿ, ಸ್ಪಷ್ಟವಾದ ನೀಲ ನಕಾಶೆ ಇರುತ್ತದೆ, ವಾಹನದಲ್ಲಿ ಇಂಧನ ಮುಗಿಯವ ಹೊತ್ತಿಗೆ ಕೆಂಪು ಸೂಚಕ ಕಂಡಾಗ ನಾವು ಮತ್ತೆ ಇಂಧನ ಬದಲಾಯಿಸುತ್ತೇವಲ್ಲ, ಹಾಗೆ ಕ್ಯಾಲೆಂಡರ್ ಬದಲಾವಣೆಯೂ ನಮ್ಮ ವಯಸ್ಸು ಹೆಚ್ಚಾಗಿದ್ದನ್ನು, ಇನ್ನು ನಡೆಯಬೇಕಾಗಿದ್ದನ್ನು ಸೂಚಿಸುವ ಮಾರ್ಗದರ್ಶಕನೂ ಹೌದು. ಏನಂತೀರ...

ಆಗಲೇ ಹೇಳಿದ ಹಾಗೆ,
ಹೊಸ ವರ್ಷವೆಂಬುದು ಕಾಲನಿರ್ಣಯದ ಒಂದು ಭಾಗ. 365 ತಾಜಾ ದಿನಗಳನ್ನು ಕಣ್ಣೆದುರು ಇರಿಸುವ ಸುದಿನ. ಬದಲಾಗುವುದಿದ್ದರೆ ಬದಲಾಗು ಎಂದು ಹೊಸದೊಂದು ಅವಕಾಶ ಎಂದೂ ತಿಳಿಯಬಹುದು. ಜನವರಿ 1 ಬಂದರೇನಂತೆ ಅದೇ ಸೂರ್ಯೋದಯ, ಅದೇ ಬದುಕು, ಅದೇ ಮನೆ, ಪರಿಸರ ಎಂಬಿತ್ಯಾದಿ ವಾದಗಳೂ ಇಲ್ಲದಿಲ್ಲ. ಆದರೆ, ಹೊಸ ವರ್ಷವನ್ನು ಹೊಸದೊಂದು ಅವಕಾಶ ಎಂದುಕೊಂಡು ಮುಂದೆ ಹೋದರೆ ಮತ್ತಷ್ಟು ಧನಾತ್ಮಕ ಬದುಕಿಗದು ಪ್ರೇರಣೆಯಾದೀತು ಎಂಬುದರಲ್ಲಿ ಸಂಶಯವಿಲ್ಲ ಅಲ್ವ...


ಜನವರಿ ಆರಂಭದ ಮುಂಜಾನೆಯ ಕುಳಿರ್ಗಾಳಿ, ತೆಳು ಮಂಜು, ಹೊಸದೊಂದು ಸೂರ್ಯೋದಯ ಕಾಣುತ್ತಿದ್ದೇವೆಂಬ ರೋಮಾಂಚನ ಮಾತ್ರವಲ್ಲ, ಹಳತನ್ನು ಬಿಟ್ಟು ಹೊಸದಾಗುತ್ತಿದ್ದೇವೆಂಬ ಕನವರಿಕೆಯೂ ಜೊತೆಗಿರುತ್ತದೆ.

ಕಾಲ ತನ್ನ ಪಾಡಿಗೆ ತಾನಿರುತ್ತದೆ, ಅಥವಾ ನಿರಂತರವಾಗಿರುವ ಕಾಲವನ್ನು ಹಗಲಿರುಳುಗಳಾಗುವ ಮೂಲಕ ದಿನ, ವಾರ, ತಿಂಗಳುಗಳಾಗಿ ವರ್ಷದ ರೂಪ ಕೊಟ್ಟು ವಿಭಿಸಜಿಸಿದ್ದು ನಾವು. ಅದನ್ನು 12 ತಿಂಗಳುಗಳಾಗಿ ಪಾಲು ಮಾಡಿ, ಗಡಿ ಹಾಕಿ ಇದರೊಳಗೆ ಬದಲಾಗಿದ್ದೇವೆ, ಬದಲಾಗುತ್ತೇವೆ, ಇಷ್ಟು ಬದಲಾಗಬಹುದೆಂಬ ಮಿತಿಗಳನ್ನು ಹಾಕಿರುವವರು ನಾವೇ.


ಅಷ್ಟಕ್ಕೂ, ಹೋದ ವರ್ಷ ಬದಲಾಗಿದ್ದೇನು, ಬದಲಾಗಿದ್ದೆಷ್ಟು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪುಟ್ಟದಾಗಿದ್ದ ಮೊಬೈಲ್ ಜಾಗಕ್ಕೆ 4ಜಿ ಇರೋ ದೊಡ್ಡ ಹ್ಯಾಂಡ್‌ಸೆಟ್ ಬಂದಿದೆಯಾ? ಮನೆಯ ಟಿ.ವಿ.ಯಲ್ಲಿ ಕನ್ನಡ ಸುದ್ದಿ ವಾಹಿನಿಗಳ ಸಂಖ್ಯೆ ಜಾಸ್ತಿ ಆಗಿದೆಯಾ...ಹೆದ್ದಾರಿಯಲ್ಲಿ ಹೊಂಡಗಳ ಸಂಖ್ಯೆ ಜಾಸ್ತಿ ಆಗಿದೆಯಾ...? ಬಿಹಾರ, ದೆಹಲಿ, ಕಾಶ್ಮೀರದಲ್ಲಿ ಸರ್ಕಾರಗಳು ಬದಲಾದ್ವ...ಹೀಗೆ ಬದಲಾವಣೆಗೆ ಬಾಹ್ಯ ಸ್ವರೂಪದಲ್ಲೇ ಮಾಪನ ಸಿಗುತ್ತದೆ ಹೊರತು ಆಂತರಿಕ ಪರಿಧಿಯಲ್ಲಲ್ಲ.

ಹೋದ ವರ್ಷ ಜ.1ರಂದು ನಮ್ಮಲ್ಲಿ ಆಗಬೇಕೆಂದುಕೊಂಡಿದ್ದ ಬದಲಾವಣೆಗೆ ನಮ್ಮ ದೇಹ, ಮನಸ್ಸು ಒಗ್ಗಿಕೊಂಡಿದೆಯೇ ಎಂದು ನೋಡುವ, ಸ್ವಮೌಲ್ಯಮಾಪನ ಮಾಡುವ ಅಪಾಯಕ್ಕೇ ನಾವು ಕೈಹಾಕುವುದಿಲ್ಲ. ಯಾಕಂದರೆ ನಮ್ಮ ಕಣ್ಣೆದುರೇ ನಮ್ಮ ‘ವೈಫಲ್ಯಗಳ ಮೌಲ್ಯಮಾಪನ’ ರುಚಿಸದ ಸಂಗತಿ ಅಲ್ವ..

ಈ ವರ್ಷ ಖರ್ಚು ಕಡಿಮೆ ಮಾಡ್ಕೊಳ್ತೇನೆ, ಇನ್ನೆರಡು ವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಇಲ್ಲ, ಟಿ.ವಿ.ನೋಡುವುದು ಕಡಿಮೆ ಮಾಡುತ್ತೇನೆ, ದಿನಕ್ಕೆ ಎರಡೇ ಸಿಗರೇಟ್ ಸೇದೋದು... ಕನಿಷ್ಠ ಐದು ಕೆ.ಜಿ.ತೂಕ ಇಳಿಸಿಕೊಳ್ಳುತ್ತೇನೆ... ಅಂತೆಲ್ಲಾ ತಮಗೆ ತಾವೇ ವಿಧಿಸಿಕೊಂಡ ಬದಲಾವಣೆಯ ಕಟ್ಟುಪಾಡುಗಳು ಫೆಬ್ರವರಿ, ಮಾರ್ಚ್ ವೇಳೆಗೇ ಹಳ್ಳ ಹಿಡಿದು ಡಿಸೆಂಬರ್ ಹೊತ್ತಿಗೆ ‘ನಾನೆಲ್ಲಿ ಬದಲಾಗಬೇಕೆಂದುಕೊಂಡಿದ್ದೇ’ ಎಂಬುದೇ ಮರೆತು ಹೋಗುವರೆಗೆ  ಔದಾಸೀನ್ಯ ಕಾಡಿರುತ್ತದೆ. ಅಷ್ಟಾದರೂ ಡಿ.31 ಬಂದ ಹಾಗೆಲ್ಲಾ ಮತ್ತೆ ಬದಲಾಗುತ್ತೇವೆಂದು ಮೈಕೊಡವಿ ಎದ್ದು ನಿಲ್ಲುವು ಹುರುಪು.

ಎಲ್ಲಕ್ಕಿಂತ ಹೆಚ್ಚಾಗಿ ತುಂಬ ಮಂದಿ ಜ.1ರಿಂದ ಹೊಸವರ್ಷ ತಾಜಾ ತಾಜಾ ಸಿಗುವ ಡೈರಿಗಳಲ್ಲಿ ‘ನೀಟಾಗಿ ದಿನಚರಿ ಬರೆದಿಡುತ್ತೇನೆ’ ಅಂದುಕೊಂಡು ಪ್ರತಿಜ್ಞೆ ಮಾಡಿರುತ್ತಾರೆ. ನಾಲ್ಕೈದು ದಿನ ಹೊಸ ಘಾಟಿನ ಪುಟಗಳನ್ನು ತೆರೆದು ಅಂದವಾಗಿ ಡೈರಿ ಬರೆಯುತ್ತಿರುವವರು ಏನೇನೋ ನೆಪವೊಡ್ಡಿ ತಮಗೆ ತಾವೇ ಪುರುಸೊತ್ತಿಲ್ಲವೆಂದು ಸಮಾಧಾನ ಮಾಡಿಕೊಂಡು ಹಾಕಿದ ಪ್ರತಿಜ್ಞೆ ಮರೆವ ಮಹನೀಯರಾಗುತ್ತೇವೆ...

ಆದರೂ ಡಿ.31 ಬಂದಾಗ ಬದಲಾಗುವ ತುಡಿತ.
ಯಾಕೆ ಗೊತ್ತ...?

ಕ್ಯಾಲೆಂಡರ್, ವಾಚು, ಅಲಾರಂ ಎಲ್ಲ ಕಾಲವನ್ನು ಭಾಗ ಮಾಡಿ ಆಗಾಗ ಘಳಿಗೆಗಳು ಕಳೆದುಹೋದಂತೆ ನಮ್ಮನ್ನು ಎಚ್ಚರಿಸುವ ಮಾನದಂಡಗಳು. ಇಂತಹ ಕಾಲಘಟ್ಟಗಳ ಪರಿಧಿ ಇಲ್ಲದೆ ಹೋದರೆ ಗುರಿಯಿಲ್ಲದ ಸರದಾರರಾಗುವ ಅಪಾಯವಿದೆ. ಕನಿಷ್ಠ ಪಕ್ಷ ಜನವರಿ ಬಂದಾಗಲಾದರೂ ಬದಲಾಗಬೇಕೆಂದುಕೊಳ್ಳುವವರಿಗೆ ಒಂದು ಚುಚ್ಚುಮದ್ದು ಈ ಹೊಸ ವರ್ಷ. ಬದಲಾಗುವುದು ಕ್ಯಾಲೆಂಡರ್ ಮಾತ್ರ ಎಂಬ ವಾದ ಇದೆ. ಆದರೆ, ಅದೇ ಕ್ಯಾಲೆಂಡರ್ ಇತರ ಬದಲಾವಣೆಗೊಂದು ಆರಂಭಿಕ ಸೈರನ್ ಆದರೆ ನಾವದನ್ನು ಯಾಕೆ ಧನಾತ್ಮಕವಾಗಿ ತೆಗೆದುಕೊಳ್ಳಬಾರದು?

ಬದಲಾಗುತ್ತೇವೆಂದುಕೊಂಡವರ ಪೈಕಿ ಶೇ.10 ಮಂದಿ ಶೇ.10ರಷ್ಟಾದರೂ ಬದಲಾದರೆ, ಇನ್ನಷ್ಟು ಮಂದಿಗೆ ಅದು ಶೇ.10ರಷ್ಟು ಸ್ಫೂರ್ತಿ ನೀಡಿದರೂ ಸಮಗ್ರವಾಗಿ ಒಂದಷ್ಟು ಬದಲಾವಣೆ ಆಗಿಯೇ ಆಗುತ್ತದೆ. ಅದುವೇ ಕಾಲದ ಮಹಿಮೆ.

ಎಂತಹ ಚಂಡಮಾರುತ, ಗಾಳಿ ಮಳೆ, ಭೂಕಂಪ ಸಂಭವಿಸಿದರೂ ಸೂರ್ಯದೇವ ಮಾರನೇ ದಿನ ನಸು ಕೆಂಪಾಗಿ ಮೂಡಣದಲ್ಲಿ ಉದಯಿಸಿಯೇ ಉದಯಿಸುತ್ತಾನೆ. ಭೂಮಿ ಹೊತ್ತಿ ಉರಿದರೂ, ಕೊಲೆ, ಸುಲಿಗೆ, ಯುದ್ಧ ಪಾತಕ ಸಂಭವಿಸಿದರೂ ಬಾನಲ್ಲಿ ಚಂದಿರ ತಣ್ಣಗೆ ನಗುತ್ತಿರುತ್ತಾನೆ. ಈ ಮೂಲಕ ಪ್ರಕತಿ ಕಲಿಸುವ ಗಟ್ಟಿತನದ, ಎಲ್ಲವನ್ನೂ ಸಮಭಾವದಿಂದ ತೆಗೆದುಕೊಳ್ಳುವ ಪಾಠಕ್ಕೆ ನಾವು ಕಣ್ಣುಗಳಾಗಬೇಕು. ಹೋದ ವರ್ಘ ಘಟಿಸಿದ ಋಣಾತ್ಮಕ ಅಂಶಗಳನ್ನೆಲ್ಲ ನಮಗೊಂದು ಉತ್ತಮ ಪಾಠವೆಂದುಕೊಂಡರೆ, ನಾಳಿನ ಹೊಸ ಸೂರ್ಯೋದವಯನ್ನು ಹೊಸ ದಾರಿಗೆ ಬೆಳಕಾಗುವ ಅಂಶವೆಂದುಕೊಂಡರೆ ಸಮಚಿತ್ತದಿಂದ ಬಾಳು ಮುಂದುವರಿಸಲು ಸಾಧ್ಯವಾಗುತ್ತದೆ. ಅದುವೇ ಹೊಸ ಕ್ಯಾಲೆಂಡರ್ ವರ್ಷ ಸಾರುವ ಸಂದೇಶ.

ಕಳೆದ ವರ್ಷದ ಏನೇ ನಡೆದಿರಬಹುದು, ಆ ಭಾಗಕ್ಕೆ ರಿವೈಂಡ್ ಆಗಿ ಹೋಗಲು ಸಾಧ್ಯವಿಲ್ಲ. ಆದರೆ ಮುಂದೊಂದು 12 ತಿಂಗಳ ತಾಜಾ ಗೊಂಚಲು ನಮ್ಮ ಮುಂದಿದೆ. ಅಲ್ಲಿ ನಾವು ಮತ್ತೆ ಬದಲಾಗಬೇಕಂದುಕೊಂಡಷ್ಟೂ ಬದಲಾಗಬಹುದು. ಈ ಡಿ.31ಕ್ಕೆ ಕಾಡಿದ ನಿರಾಸೆ ಕಾಡದಿರಬೇಕಾದರೆ ಪ್ರತಿದಿನದ ಕೊನೆಗೂ ಇಂದು ಡಿ.31 ಎಂಬಷ್ಟು ಜತನದಿಂದ ಸ್ಮರಿಸಿಕೊಂಡು ನಾಳೆ ಮಾಡುವುದನ್ನು ಇಂದೇ ಮಾಡು ಎಂಬಷ್ಟು ಕಾಳಜಿಯಿಂದ ನಿರ್ಧಾರಗಳನ್ನು ಕಾರ್ಯಗತಗೊಳಿಸಿದರೆ ಮತ್ತೆ ಡಿ.31ರಂದು ಹಿಂದಿರುಗಿ ನೋಡಿ ಅಳುವ ಪ್ರಮೇಯ ಬರುವುದಿಲ್ಲ.

ವರ್ಷದ ಪ್ರತಿ ಕಾಲಘಟ್ಟದಲ್ಲೂ ಅಷ್ಟೇ, ‘ಅಯ್ಯೋ 8 ತಿಂಗಳು ಕಳೆಯಿತು ಇನ್ನು ನಾಲ್ಕೇ ತಿಂಗಳು ಉಳಿದಿದೆ’ ಅನ್ನು ಋಣಾತ್ಮಕ ಚಿಂತನೆ ಬೇಡ. ‘ಎಂಟು ತಿಂಗಳು ಕಳೆದರೇನಾಯಿತು ಇನ್ನೂ ನಾಲ್ಕು ತಿಂಗಳು ಇದೆಯಲ್ಲ?’ ಎಂಬ ಆತ್ಮವಿಶ್ವಾಸ ಜೊತೆಗದ್ದರೆ ನಿಮಗೆ ಯಾವ ಎನರ್ಜಿ ಬೂಸ್ಟರ್ ಕೂಡಾ ಬೇಕಾಗಿಲ್ಲ. ಪ್ರತಿದಿನವೂ ಹೊಸ ವರ್ಷವಾಗಿ ಕಾಣಬಹುದು.

ಕೊನೆಯ ಮಾತು: ಶ್ರೇಷ್ಠ ಕವಿಯೊಬ್ಬರ ಸ್ಫೂರ್ತಿ ಕೊಡುವ ಈ ಕಾವ್ಯದ ಸಾಲುಗಳನ್ನು ಗುನುಗುನಿಸುತ್ತಿರಿ ‘ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು, ಇಂದು ಸೊಗವಿರಲು ಮರೆತು ಅಳುವುದು ಏಕೆ?’.


ಮಂಗಳೂರು ಆಕಾಶವಾಣಿಯಲ್ಲಿ (03.01.2017) ಪ್ರಸಾರದ ಭಾಷಣದ ಪ್ರತಿ...