ಕೋಪ "ತಾಪ'ಮಾನವೆಂಬ ಅಪಮಾನದ ಸುತ್ತ....!

ಸಿಟ್ಟು ಮಾನವ ಸಹಜ ಗುಣ, ಸ್ವಾಭಿಮಾನಿಗಳಿಗೆ ಸಿಟ್ಟು ಬಂದೇ ಬರುತ್ತದೆ, ಹಾಗಂತ ಸಿಟ್ಟೇ ದೌರ್ಬಲ್ಯವಾಗಬಾರದು, ಸಿಟ್ಟೇ ನಮ್ಮನ್ನು ಆಳಬಾರದು. ನಿಜ. ಆದರೆ, ಇನ್ನೊಂದು ವರ್ಗವಿದೆ. ಬೇರೆಯವರಿಗೆ ಸಿಟ್ಟು ಬರಿಸಿ ತಣ್ಣಗೆ ಕೂರುವವರು. ಸ್ನೇಹಿತರನ್ನೋ, ಬಂಧುಗಳನ್ನೋ ಕೆಣಕಿ, ಕಡೆಗಣಿಸಿ ಅಥವಾ ಅಹಿತವಾಗಿದ್ದನ್ನೇನೋ ಮಾಡುವ ಮೂಲಕ ಸಿಟ್ಟು ಬರಿಸುವುದು, ಅಸಹನೆ ಮೂಡಿಸುವುದು. ಸಿಟ್ಟು ಹುಟ್ಟಿಕೊಂಡ ಬಳಿಕ ಸಿಟ್ಟು ಬರಿಸಿದವನು ಅಲ್ಲಿರೋದಿಲ್ಲ, ಅವನ ಕೆಲಸ ಸಿಟ್ಟು ಹುಟ್ಟಿಸುವುದಷ್ಟೇ... ನಂತರ ಹೇಳಿಕೊಳ್ಳುವುದು, ನಾನು ಕ್ಷಮಯಾಧರಿತ್ರಿ, ನಾನು ಯಾರಲ್ಲೂ ದ್ವೇಷ ಕಟ್ಟಿಕೊಳ್ಳೋದಿಲ್ಲ, ಮಾತು ಬಿಡೋದಿಲ್ಲ, ತಪ್ಪು ಮಾಡಿದವರನ್ನೂ ಕ್ಷಮಿಸುತ್ತಲೇ ಇರುತ್ತೇನೆ, ಸಿಟ್ಟು ಮಾಡಿಕೊಳ್ಳುವುದರಿಂದ ಏನು ಸಾಧಿಸುವುದಕ್ಕಿದೆ ಎಂಬ ವೇದಾಂತ...!

 ಅಸಲಿಗೆ (ಎಲ್ಲರೂ ಖಂಡಿತಾ ಹಾಗಲ್ಲ), ಈ ಥರ ಅತಿಯಾದ ತಣ್ಣಗಿರುವ, ಸೋ ಕಾಲ್ಡ್ ಕ್ಷಮಾ ಗುಣಗಳಿರುವ ವ್ಯಕ್ತಿಗಳು ಎಷ್ಟು ಮಂದಿಯಲ್ಲಿ ಸಿಟ್ಟು ಹುಟ್ಟಿಸಿರುತ್ತಾರೆ ಎಂಬುದು ಸ್ವತಹ ಅವರಿಗೇ ಗೊತ್ತಿರುವುದಿಲ್ಲ. ಕೊನೆಗೆ ತಾವು ಮಾಡಿದ್ದಕ್ಕೆ ಪಶ್ಚಾತ್ತಾಪದ ಲವಲೇಶವೂ ಅವರಲ್ಲಿ ಕಂಡುಬರುವುದೂ ಇಲ್ಲ. ಒಟ್ಟೂ ಪ್ರಕರಣದಲ್ಲಿ ಧರ್ಮಕ್ಕೆ ಸಿಟ್ಟು ಮಾಡಿಕೊಂಡಾದ ಲೋಕದ ದೃಷ್ಟಿಯಲ್ಲಿ ಒರಟನಾಗುತ್ತಾನೆ, ಸಿಟ್ಟು ಬರಿಸಿದಾಗ ಕ್ಷಮಾಗುಣಸಂಪನ್ನ, ಅಜಾತಶತ್ರು, ಯಾರನ್ನೂ ನೋಯಿಸದಾದ ಎಂಬ ಬಿರುದು ಗಳಿಸಿ ಭಟ್ಟಂಗಿಗಳ ನಡುವೆ ಕುಣಿದು ಕುಪ್ಪಳಿಸುತ್ತಿರುತ್ತಾನೆ. ಆದ್ದರಿಂದ ದಯವಿಟ್ಟು ನೆನಪಿಟ್ಟುಕೊಳ್ಳಿ... ಸಿಟ್ಟು ಬೇಗ ಬರೋದು ನಿಮ್ಮ ಸ್ವಭಾವವಾದರೆ ಸಿಟ್ಟು ಬರಿಸುವ (ಬೇಕೆಂದೇ) ವರ್ಗದಿಂದ ದೂರವಿರಿ. ವೃಥಾ ಕೆಣಕುವವರ ಜೊತೆ ಮೊಂಡು ವಾದ, ವಿತಂಡ ತರ್ಕದಿಂದ ಸಮಯ ಹಾಳಲ್ಲದೆ ಸಾಧಿಸುವುದೇನೂ ಇಲ್ಲ, ಜೊತೆಗೆ ನೀವು ಒರಟರೆಂಬ ಬಿರುದು ಬೇರೆ!


ಎಲ್ಲ ಗುಣಗಳ ಹಾಗೆ ಸಿಟ್ಟು ಕೂಡಾ ಜನ್ಮದೊಂದಿಗೇ ಬರೋದು. ಕೆಲವರಿಗೆ ಅದು ನಿಯಂತ್ರಣದಲ್ಲಿದ್ದರೆ ಕೆಲವರಿಗೆ ಇರುವುದಿಲ್ಲ. ಅಸಹನೆಯಿಂದ, ಪರಿಸ್ಥಿತಿಯಿಂದ, ಅಪಾರ್ಥದಿಂದ, ಅವಮಾನದಿಂದ, ಸೋಲಿನಿಂದ, ಟೀಕೆಯಿಂದ, ನೋವಿನಿಂದಲೂ ಸಿಟ್ಟು ಬರಬಹುದು. ಎಷ್ಟರ ಮಟ್ಟಿಗೆ ಅದು ಪ್ರಕಟವಾಗುತ್ತದೆ, ಯಾವ ರೀತಿ ಪ್ರಕಟವಾಗುತ್ತದೆ ಎಂಬುದರ ಮೇಲೆ ಸಿಟ್ಟಿನ ಪ್ರದರ್ಶನ ಇತರರ ಮುಂದಾಗುತ್ತದೆ ಅಷ್ಟೆ.


ಕೆಲವರು ಸಿಟ್ಟು ಬಂದಾಗ ಹಾರಾಡುವುದು, ಇನ್ನು ಕೆಲವರು ಮೌನವಾಗುವುದು, ಕೆಲವರು ನಕ್ಕು ಬಿಟ್ಟು ಬಿಡುವುದೂ ಇದೆ. ಅದು ಅವರವರ ಪ್ರವೃತ್ತಿಗೆ ಬಿಟ್ಟದ್ದು. ಸಿಟ್ಟು ಬಂದಾಗ ನಕ್ಕು ಬಿಡುವುದು ಬಹಳ ಮೆಚ್ಯೂರ್ಡ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಅನಿಸುತ್ತದೆ. ಮೌನಕ್ಕೆ ಶರಣಾಗುವುದು ಸುರಕ್ಷಿತ ವಿಧಾನ. ಹಾರಾಡುವುದು ಮಾತ್ರ ಅಪಾಯಕಾರಿ.

ಸಿಟ್ಟು ಬರುವುದು ಬೇರೆ. ಬರಿಸುವುದು ಬೇರೆ. ಹೀಗೆ ಹೇಳಿದರೆ ಆತನಿಗೆ ಸಿಟ್ಟು ಬರುತ್ತದೆ, ಈ ಥರ ವಾದ ಮಂಡಿಸಿದರೆ ಆತ ಕನಲಿ ಕೆಂಡವಾಗುತ್ತಾನೆ, ಈ ಮಾತುಗಳು ಆತನಿಗೆ ಇಷ್ಟವಿಲ್ಲ, ಇಂತಹ ಉದಾಸೀನದ ಸಂಭಾಷಣೆ ಕೇಳಿದರೆ ಆತನ ಬಿಪಿ ಹೆಚ್ಚಾಗುತ್ತದೆ ಎಂದು ಗೊತ್ತಿದ್ದೂ ಗೊತ್ತಿದ್ದೂ ಮಾತನಾಡುವುದಿದೆಯಲ್ಲ.... ಅದು ಸಿಟ್ಟು ಬರಿಸುವುದು. ಇಂತಹ ಅನುಭವ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಆಗಿರುತ್ತದೆ. ಬಹುಷಹ ನೀವೂ ಇಂತಹ ಸಂದರ್ಭಗಳನ್ನು ನೀವು ಅನುಭವಿಸಿರುತ್ತೀರಿ.
ಒಂದು ವೇಳೆ ಯಾರಿಂದಲೋ ಸಿಟ್ಟುಗೊಂಡು ಅತರ ತಾಪ ಕೋಪ ಕಮ್ಮಿಯಾದ ಮೇಲೆ ತಣ್ಣನೆ ಕೂತು ಯೋಚಿಸಿ. ನೀವೇ ಆಶ್ಚರ್ಯ ಪಡುತ್ತೀರಿ.


ಬೇಕಂತಲೇ ಸಿಟ್ಟು ಬರಿಸಿ, ಶಾಂತಮೂರ್ತಿಗಳ ಪೋಸ್ ಕೊಡುವವರ ಸ್ವಭಾವವೇ ಅಂತಹದ್ದು. ಅವರು ಬೇರೆಯವರಿಗೆ ಎಂದೂ ಹೊಂದಿಕೊಳ್ಳುವುದಿಲ್ಲ. ಸಿಟ್ಟು ನಿಮ್ಮ ದೌರ್ಬಲ್ಯವೆಂಬುದು ಅವರಿಗೆ ಗೊತ್ತಿರುತ್ತದೆ. ಅದಕ್ಕಾಗಿ ಅದೇ ಮಾದರಿಯ ಮಾತುಗಳು ಅವರ ಕಡೆಯಿಂದ ಬರುತ್ತಿರುತ್ತದೆ. ನೀವು ಅದಕ್ಕೆ ಒರಟಾಗಿ ಪ್ರತಿಕ್ರಿಯೆ ಕೊಡುತ್ತಲೇ ಇರುತ್ತೀರಿ. ಒಬ್ಬನ ಮೇಲಿನ ಸಿಟ್ಟು ಇತರರ ಮೇಲೆಲ್ಲಾ ಚೆಲ್ಲಾಡಿದರೆ ಕೋನೆಗ ಕೋಪಿಷ್ಠರಾಗುವುಗು ನೀವು. ಕೋಪ ಬರಿಸಿದಿವನ ತಪ್ಪು ಎಲ್ಲೂ ಸಾಬೀತಾಗುವುದಿಲ್ಲ. ಆತ ತನ್ನ ಹೊಗಳುಭಟರೊಂದಿಗೆ ಹೇಳಿಕೊಳ್ಳುತ್ತಿರುತ್ತಾನೆ, ಆ ಮನುಷ್ಯನಿಗೆ ಮೂಗಿನ ಮೇಲೆ ಸಿಟ್ಟು, ಸ್ವಲ್ಪ ಜಾಗ್ರತೆ, ಜನ ಸ್ವಲ್ಪ ಒರಟು... ಮಾತು ಬಿಡುವುದು, ಕೋಪ ಮಾಡುವುದು ಆತನಿಗೆ ಚಾಳಿ.... ನನ್ನಷ್ಟು ತಾಳ್ಮೆ ಆತನಿಗೆಲ್ಲಿ ಬರಬೇಕು ಅಂತ.

ಸಾಮಾಜಿಕ ಜಾಲತಾಣಗಳಲ್ಲೂ ಬರುವ ಬಿಸಿ ಬಿಸಿ ಚರ್ಚೆಗಳು, ಸೂಕ್ಷ್ಮ ವಿಚಾರಗಳ ವಿಮರ್ಶೆಯ ಸಂದರ್ಭಗಳಲ್ಲೂ ಗಮನಿಸಿದ್ದೇನೆ. ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿ, ಒಂದಷ್ಟು ಮಂದಿಯನ್ನು ಪ್ರಚೋದಿಸುವ ಜನ ಚರ್ಚೆ ಕಾವೇರಿದ ಹಾಗೆ ಇಲ್ಲಿ ಇರೋದೇ ಇಲ್ಲ. ಇನ್ಯಾರೋ, ಮತ್ಯಾರೋ ಪರಸ್ಪರ ಏಕವಚನದಲ್ಲಿ ಬೈದಾಡಿಕೊಳ್ತಾ ಇರುತ್ತಾರೆ. ಚರ್ಚೆ ಹುಟ್ಟು ಹಾಕಿದ ವ್ಯಕ್ತಿ ದೂರದಲ್ಲಿ ಕುಳಿತು  ಶಾಂತಿಯ ದೂತನ ಪೋಸ್ ಕೊಡುತ್ತಿರುತ್ತಾನೆ. ಚರ್ಚೆ ನಡೆಯಬೇಕು, ವಾದ ವಿವಾದ ಇರಬೇಕು, ಸರಿ ತಪ್ಪುಗಳ ಜಿಜ್ಞಾಸೆ ಆಗಬೇಕು. ಆದರೆ ಕೆರಳಿಸುವುದೇ, ಪ್ರಚೋದಿಸುವುದೇ, ಯಾರ್ಯಾರನ್ನೋ ಕಾಲು ಕೆರೆಯುವುದೇ ಉದ್ದೇಶವಾಗಿದ್ದರೆ, ಅದು ಆರೋಗ್ಯಕರ ಚರ್ಚೆಯಾಗಲಾರದು. ಉಪಸಂಹಾರದ ತನಕ ಸಾಗುವ ಚರ್ಚೆಯಿಂದ ಒಂದು ಪ್ರಯೋಜನ, ಫಲಶೃತಿಯಾದರೂ ಸಿಕ್ಕೀತು.


ತುಂಬ ಮಂದಿಗೆ ತಮ್ಮ ನಡವಳಿಕೆ ಇತರರಲ್ಲಿ ಸಿಟ್ಟು ತರಿಸುತ್ತದೆ ಎಂಬುದು ಗೊತ್ತಿರುವುದಿಲ್ಲ (ಪ್ರಾಮಾಣಿಕವಾಗಿ). ಆದರೆ, ಇತರರು ಅದನ್ನು ಹೇಳಿ ತೋರಿಸದ ಮೇಲೂ ಅದೇ ಅಭ್ಯಾಸ ಮುಂದುವರಿಸಿದರೆ ಅದನ್ನು ಉಡಾಫೆಯೆಲ್ಲದೆ ವಿಧಿಯಿಲ್ಲ.
ಉದಾಹರಣೆಗೆ...ನಾಲ್ಕಾರು ಮಂದಿ ಊಟ ಮಾಡುತ್ತಿರುವಾಗ ವಿಕಾರ ಸ್ವರದಲ್ಲಿ ಸದ್ದು ಮಾಡಿ ತೇಗುವುದು ಸಭ್ಯತೆಯಲ್ಲ, ಆ ಅಭ್ಯಾಸ ಎಲ್ಲರಲ್ಲಿ ಸಿಟ್ಟು ತರಿಸುತ್ತದೆ, ಅಂತ ನಿಮ್ಮ ಸ್ನೇಹಿತನಿಗೆ ಕಿವಿ ಮಾತು ಹೇಳಿದಿರೆಂದಿಟ್ಟುಕೊಳ್ಳೋಣ. ಆತ ಒಪ್ಪುತ್ತಾನೆ, ಮತ್ತೆ ನಾಲ್ಕು ದಿನ ಕಳೆದು ಹಾಗೆಯೇ ಸದ್ದು ಮಾಡಿ ತೇಗಿದರೆ, ಈ ನಡವಳಿಕೆಗೆ ಏನನ್ನಬೇಕು. ಕೆಲವೊಂದು ನಡವಳಿಕ, ಸ್ವಭಾವವನ್ನು ನಮ್ಮಲ್ಲಿ ನಮಗೇ ತಿದ್ದಿಕೊಳ್ಳಲು ಆಗುವುದಿಲ್ಲ. ನಿಜ.
ಆದರೆ, ತಿಳಿದವರು, ಆಪ್ತರು, ಹಿತೈಷಿಗಳು ಒಳ್ಳೆಯದಕ್ಕೆ ಕಿವಿಮಾತು ಹೇಳಿದರೆ, ಹೀಗಲ್ಲ, ಹಾಗಿರುವುದು ಸೂಕ್ತವೆಂದು ಅರ್ಥ ಮಾಡಿಸಿಕೊಟ್ಟರೆ ಬದಲಾಗಲು ಪ್ರಯತ್ನಿಸಬಹುದು, ಬದಲಾಗಲೂ ಬಹುದು. ಆ ಮೂಲಕ ನಮ್ಮ ನಡವಳಿಕೆ ಇನ್ಯಾರಿಗೋ ಸಿಟ್ಟು ಹುಟ್ಟಿಸುವ ಸಂದರ್ಭಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಏನಂತೀರಿ...?



ನಂಗೆ ಸಿಟ್ಟು ಬರೋದೇ ಇಲ್ಲ, ತಪ್ಪು ಮಾಡಿದವರನ್ನು ಕ್ಷಮಿಸುವುದು ದೊಡ್ಡ ಗುಣ. ಹುಟ್ಟಿದ ಮೇಲೆ ತಪ್ಪುಗಳಾಗೋದು ಸಹಜ, ಅದನ್ನು ಮನ್ನಿಸಬೇಕು ಎನ್ನುವವರೆಲ್ಲಾ ಪದೇ ಪದೇ ಅಂತಹ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರಾ.... ಕ್ಷಮೆಯೆನ್ನುವುದು ಸವಕಲಾದ ಅಸ್ತ್ರವಾಗಿ ಬಿಟ್ಟಿದೆಯಾ... ಕ್ಷಮೆಯನ್ನೇ ದೊಡ್ಡ ಗುಣಗಳಾಗಿ ಹೊಂದಿರುವವರಲ್ಲಿ ತಮ್ಮಿಂದಾದ ತಪ್ಪುಗಳ ಬಗ್ಗೆ ಪಶ್ಚಾತ್ತಾಪ, ಮತ್ತೊಮ್ಮೆ ಅಂತಹ ತಪ್ಪುಗಳನ್ನು ಮಾಡೋದಿಲ್ಲ ಎಂಬ ಬದಲಾವಣೆ ಇದೆಯೇ ಎಂಬುದನ್ನು ಗಮನಿಸಿ (ಅವರು ನಿಮ್ಮ ಅಕ್ಕಪಕ್ಕದವರು, ಸ್ನೇಹಿತರೂ, ಬಂಧುಗಳೂ ಯಾರೂ ಆಗಿರಬಹುದು). ಅದು ಬಿಟ್ಟು, ಸಿಟ್ಟು ಮಾಡುವವರೆಲ್ಲ ಕೆಟ್ಟವರು, ಶಾಂತಮೂರ್ತಿಗಳಾಗಿರುವವರೆಲ್ಲ ಮೇಧಾವಿಗಳೆಂಬ ಭ್ರಮೆ ಬೇಡ.
ಸಿಟ್ಟು ಒಂದು ಗೀಳು ಅಥವಾ ದೌರ್ಬಲ್ಯವಾಗದಿರಲಿ, ಪದೇ ಪದೇ ಸಿಟ್ಟು ಬರಿಸಿ ತಣ್ಣಗಿರುವ ವಿಕ್ಷಿಪ್ತ ನಡವಳಿಕೆಯೂ ನಮ್ಮದಾಗದಿರಲಿ, ಕ್ಷಮೆ ಪಡೆಯುವ ಗುರಾಣಿ ಜೊತೆಗಿಟ್ಟು ಗೊತ್ತಿದ್ದೇ ಮಾಡುವ ತಪ್ಪುಗಳೆಂಬ ಅಸ್ತ್ರಗಳ ಬಳಕೆ ಕಡಿಮೆಯಾಗಲಿ.
ಶಾಂತಿ...ಶಾಂತಿ... ಶಾಂತಿಹಿ.

No comments: