ಬಾನುಲಿಯನ್ನೂ ಬಾಧಿಸುತ್ತಿದೆ ಉಚ್ಚಾರ ದೋಷ: ಭಾವದಷ್ಟೇ ಭಾಷೆಯೂ ಮುಖ್ಯ ಅಲ್ವೇ?!
ನಮ್ಮ ಬಾಲ್ಯದಲ್ಲಿ
ಆಕಾಶವಾಣಿ ನಮಗೆ ಭಾಷಾ ಗುರುವೇ ಆಗಿತ್ತು. ರೇಡಿಯೋದಲ್ಲಿ ನಾವು ಕೇಳುವ ಭಾಷಾ ಬಳಕೆ, ವ್ಯಾಕರಣ
ಬಳಕೆ, ಉಚ್ಚಾರ, ಸ್ವರದ ಏರಿಳಿತ, ಶುದ್ಧ ಭಾಷಾ ಪ್ರಯೋಗ ನಮಗೆ ಸ್ವಚ್ಛ ಭಾಷೆ ಕಲಿಯಲು
ಮಾರ್ಗದರ್ಶಿಯೇ ಆಗಿತ್ತು. ವಿರಳಾತಿವಿರಳವಾಗಿ ಮಾನವಸಹಜವಾಗಿ ತಪ್ಪುಗಳು ನುಸುಳುತ್ತಿದ್ದವೇನೋ,
ಅದೂ ಅತ್ಯಂತ ಅಪರೂಪ.
ಆದರೆ ಇತ್ತೀಚಿನ ಕೆಲವು
ವರ್ಷಗಳಲ್ಲಿ “ಹುಡುಕಬೇಕಾಗಿಲ್ಲ”, ತಾನಾಗಿಯೇ ರೇಡಿಯೋದಲ್ಲೂ ಅಪಸವ್ಯ
ಬಳಕೆಗಳು ಕಿವಿಗೆ ತಪ್ಪುಗಳು ಅಪ್ಪಳಿಸುತ್ತಿರುತ್ತವೆ. ಸಭೆ ಸಮಾರಂಭಗಳ ನಿರೂಪಣೆ, ಸುದ್ದಿ
ವಾಹಿನಿಗಳಲ್ಲಿ ಉಚ್ಚಾರ, ವ್ಯಾಕರಣ ಬಳಕೆ ಮತ್ತು ಕಲಬೆರಕೆಗಳ ಸಾಕಷ್ಟು ಟೀಕೆ ಟಿಪ್ಪಣಿಗಳು
ಬರುತ್ತಲೇ ಇವೆ. ಮುದ್ರಣ ಮಾಧ್ಯಮದಲ್ಲೂ ಅಕ್ಷರ ದೋಷ, ವ್ಯಾಕರಣ ತಪ್ಪಾಗ್ತಾ ಇವೆ ಎಂಬ ಬಗ್ಗೆ
ಸಾರ್ವಜನಿಕವಾಗಿಯೇ ಚರ್ಚೆಗಳಾಗುತ್ತಿವೆ, ಟೀಕೆಗಳು ಬರುತ್ತಿವೆ. ಇದರ ಜೊತೆ ಇತ್ತೀಚಿನ ಕೆಲ
ವರ್ಷಗಳಿಂದ ದೇಶದ ಅಸ್ಮಿತೆ, ಸರ್ಕಾರಿ ಸ್ವಾಮ್ಯದ ಹಾಗೂ ದೊಡ್ಡ ಪರಂಪರೆ ಹೊಂದಿರುವ ಆಕಾಶವಾಣಿಯ
ನಿರೂಪಕರು, ಉದ್ಘೋಷಕರು ಕೂಡಾ ಬಳಸುವ ಭಾಷೆಗಳಲ್ಲಿ ಮುಖ್ಯವಾಗಿ ನುಸುಳುವ ಉಚ್ಚಾರ ದೋಷ ಸಹಜವಾಗಿ
ಹಿಂದಿನಿಂದಲೂ ರೇಡಿಯೋ ಕೇಳಿಕೊಂಡು ಬಂದ ನನ್ನಂಥವರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.
ಮಾತ್ರವಲ್ಲ, ನಾವು ಇದೇ ರೀತಿ ತಪ್ಪು ತಪ್ಪಾಗಿಯೇ ಭಾಷೆ ಬಳಸುತ್ತಾ ಹೋದರೆ ಮುಂದಿನ ಪೀಳಿಗೆಗೆ
ಸ್ವಚ್ಛ ಭಾಷೆ ದಾಟಿಸಬೇಕಾದ ಹೊಣೆ ಯಾರದ್ದು ಎಂಬ ಪ್ರಶ್ನೆಯೂ ಕಾಡುತ್ತಿದೆ.
ತಮಾಷೆ ಅಂದರೆ
ರೇಡಿಯೋದಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತಿರುವವರ ಪೈಕಿ ಬಾನುಲಿ ಪಾಲಿಗೆ ಮೂಲ ಭೂತ ಪದವಾದ
ಶ್ರೋತೃ ಅಂತ ಹೇಳಲು ಬಾರದವರಿದ್ದಾರೆ. ಶೋತೃಗಳು (ಶ್ರೋತೃಗಳು) ಅಂತ ಇತ್ತೀಚೆಗೆ ಸಾಕಷ್ಟು ಸಲ
ರೇಡಿಯೋದಲ್ಲಿ ಉಚ್ಚರಿಸುವುದು ಕೇಳಿದ್ದೇನೆ. ಮಾತ್ರವಲ್ಲ, ರದಯ ಹಾಗ, ರದಯ ಗೀತೆ (ಹೃದಯ ರಾಗ,
ಹೃದಯ ಗೀತೆ), ಒಂಬೊತು ಗಂಟೆ ಮುವತು ನಿಮಿಷಕೆ (ಒಂಬತ್ತು ಗಂಟೆ ಮೂವತ್ತು ನಿಮಿಷಕ್ಕೆ)...ಬಾಷೆ,
ಬಾರತ, ಬಾವಗೀತೆ (ಭಾಷೆ, ಭಾರತ, ಭಾವಗೀತೆ) ಹೀಗೆ ಪ್ರತಿ ದಿನವೆಂಬಂತೆ ಎಷ್ಟೋ ತಪ್ಪುಗಳು ಬೇಡ ಬೇಡ
ಎಂದರೂ ಕೇಳಿಸುತ್ತಲೇ ಇರುತ್ತವೆ....
ಇದು ಉಚ್ಚಾರ ದೋಷದ
ಕತೆಯಾದರೆ ಇನ್ನು ತಪ್ಪು ತಪ್ಪು ಬಳಕೆಗಳು ಬೇರೆಯೇ ಇವೆ. ಒಂದು ಗಂಟೆಗಳ ಕಾಲ, ಅರ್ಧ ಗಂಟೆಗಳ
ಕಾಲ, ಒಂದು ವಾರಗಳ ಕಾಲ (ಏಕವಚನಕ್ಕೆ ಬಳಕೆ ಯಾಕೆ) ಎಂಬಿತ್ಯಾದಿ... ವ್ಯಾಕರಣ ತಾಳಮೇಳವೇ ಇಲ್ಲದ
ವಾಕ್ಯಗಳು. ಹೇಳಿ ಮ್ಯಾಮ್, ಹೌದಾ ಮ್ಯಾಮ್... ಮತ್ತಿತರ ಸಮಕಾಲೀನ ಕಲಬೆರಕೆ ಸಂಬೋಧನೆಗಳ ಬಳಕೆ.
ಒಂದು ಕಾಡಿನಲ್ಲಿ 10 ಮರ ಇದೆ.... ಈ ರೀತಿ ಏಕವಚನ, ಬಹುವಚನಗಳ ಗೊಡವೆಯೇ ಇಲ್ಲದ ವಾಕ್ಯ
ರಚನೆ.... ಇವೆಲ್ಲ ಉದಾಹರಣೆಗಳಷ್ಟೇ... ಪ್ರತಿ ದಿನ ಎಂಬಂತೆ ಇಂತಹ ತಪ್ಪುಗಳು ಕೇಳಿಸುತ್ತಲೇ
ಇರುತ್ತವೆ. ಕಡಲೆ ನಡುವೆ ಕಲ್ಲು ಸಿಕ್ಕಿದಂತೆ ಅರಗಿಸಲೂ ಆಗದೆ, ಉಗುಳಲೂ ಆಗದೆ, ಬಾಲ್ಯದಿಂದ
ಪ್ರೀತಿಯಿಂದ ಆಲಿಸುವ ರೇಡಿಯೋದಲ್ಲೇ ತಪ್ಪುಗಳು ಕೇಳಿಸುವಾಗ ಸಿಟ್ಟು ಬರುವುದಲ್ಲ,
ಸಂಕಟವಾಗುತ್ತಿದೆ ಅಷ್ಟೇ...
ಆಕಾಶವಾಣಿಯ ನಿರೂಪಕರು
ಮತ್ತು ಉದ್ಘೋಷಕರಲ್ಲಿ ಮಾತ್ರ ಉಚ್ಚಾರ ದೋಷ ಕಾಡುತ್ತಿರುವುದಲ್ಲ. ರೇಡಿಯೋದ ಇತಿಹಾಸದಲ್ಲೇ
ಪ್ರಸಿದ್ಧವಾದ ಪ್ರದೇಶ ಸಮಾಚಾರ ಹಾಗೂ ರಾಷ್ಟ್ರೀಯ ವಾರ್ತೆಗಳಲ್ಲೂ ಪ್ರತಿ ದಿನ ಎಂಬಂತೆ ಉಚ್ಚಾರ
ದೋಷಗಳು ಕೇಳುತ್ತಲೇ ಇವೆ. ವಾಕ್ಯ ರಚನೆ ದೋಷ, ಉಚ್ಚಾರ ದೋಷ, ತಡವರಿಸಿ ಓದುವುದು, ಅಪೂರ್ಣ
ಮುಖ್ಯಾಂಶಗಳು ಇತ್ಯಾದಿ ಇತ್ಯಾದಿ... ಒಂದೆರಡು ಸಲ ಸಂಬಂಧಿಸಿದವರ ಗಮನಕ್ಕೆ ತಂದರೂ ಹೆಚ್ಚಿನ
ಸುಧಾರಣೆ ಆಗಿಲ್ಲ. ಯಾರ ಬಳಿ ಇದರ ಪ್ರಸ್ತಾಪ ಮಾಡಿದ್ದೇನೋ ಅವರಿಗೆ ಅಸಹನೆ ಆಗಿರುವುದನ್ನು
ಖಂಡಿತಾ ಗಮನಿಸಿದ್ದೇನೆ! ಅಚ್ಚರಿ ಅಂದರೆ ಹೊಸ ಉದ್ಯೋಗಿಗಳಿಂದ
ತಪ್ಪಾಗುವುದು, ಪ್ರಮಾದ ಸಂಭವಿಸಿವುದು ಮಾನವ ಸಹಜ. ಆದರೆ ಅದನ್ನು ಗಮನಿಸುವವರು ಹಾಗೂ ಕೇಳುಗರಿಗೂ ಯಾಕೆ ಅಂದು ತಪ್ಪು, ಅದನ್ನು
ತಿದ್ದಬೇಕು ಅಂತ ಅನ್ನಿಸುವುದಿಲ್ಲ?
ಹಾಗಂತ ರೇಡಿಯೋದಲ್ಲಿ ಕೆಲಸ
ಮಾಡುತ್ತಿರುವ ಎಲ್ಲ ನಿರೂಪಕರು, ಉದ್ಘೋಷಕರು, ವಾರ್ತಾ ವಾಚಕರು ತಪ್ಪಾಗಿಯೇ ಓದುತ್ತಿದ್ದಾರೆ,
ಅಲ್ಲಿ ಸರಿಯಾಗಿ ಉಚ್ಚರಿಸುವವರೇ ಇಲ್ಲ ಎಂಬಿತ್ಯಾದಿ ಸಾಮಾನ್ಯೀಕರಿಸಿದ ಆರೋಪ ಖಂಡಿತಾ ಇಲ್ಲ. ಈಗಲು ತುಂಬ ಮಂದಿ ಚಂದದ ಮಾತುಗಾರರು
ಇರುವುದಕ್ಕೇ ರೇಡಿಯೋಗೆ ಅದೇ ಮೌಲ್ಯ ಇದೆ. ರೇಡಿಯೋದ ಕುರಿತು ಅಥವಾ ಯಾವುದೇ ಮಾಧ್ಯಮದ ಕುರಿತು
ಸಾಮಾನ್ಯೀಕರಿಸಿದ ಟೀಕೆ ಮಾಡಲೂ ಬಾರದು. ಇತ್ತೀಚೆಗೆ, ಈಗೀಗ ತಪ್ಪುಗಳ ನುಸುಳುವಿಕೆ
ಗಂಭೀರವಾಗುತ್ತಿದೆ ಎಂಬ ಗಮನಿಸುವಿಕೆ ನನ್ನದು.
ಇಷ್ಟು ಮಾತ್ರವಲ್ಲ, ದೃಶ್ಯ
ಮಾಧ್ಯಮದಲ್ಲಿ ತುಂಬ ಹಾಸು ಹೊಕ್ಕಿರುವ “ವಾಕ್ಯಗಳನ್ನು ಓದುವ ಕೊನೆಗೆ ಬೇಕೆಂದೇ
ಸೇರಿಸುವ” ರ್ಯೇ... ಓ... ಮತ್ತಿತರ
ಅನಾವಶ್ಯಕ ರಾಗದ ಓದಿನ ಶೈಲಿ ರೇಡಿಯೋ
ಸ್ಟುಡಿಯೋವನ್ನೂ ಪ್ರವೇಶಿಸಿದೆ. ಹೇಳಿದ್ದಾರೆ ಎಂಬುದನ್ನು ಹೇಳಿದ್ದಾರ್ಯೇ... ಅಂತ, ಹೋದರು
ಎಂಬುದನ್ನು ಹೋದರೋ... ಅಂತ, ಬರುತ್ತಾರ್ಯೇ... ಮಾತನಾಡುತ್ತಾರೇ... ಎಂಬಿತ್ಯಾದಿ ಚಿತ್ರ
ವಿಚಿತ್ರವಾಗಿ ಓದುವ ಪ್ರವೃತ್ತಿ ನವ ಪೀಳಿಗೆಯ ವಾಚಕರು, ಉದ್ಘೋಷಕರಲ್ಲಿ ಕೇಳ ಸಿಗುತ್ತಿರುವುದು,
ಕಾಣ ಸಿಗುತ್ತಿರುವುದು ತುಂಬ ವ್ಯಾಕುಲದ ಸಂಗತಿ... ಭಾಷೆಯನ್ನು ಅದು ಇದ್ದ ಹಾಗೆ ಬಳಸದೇ ಯಾರೋ
ಸೃಷ್ಟಿಸಿದ ಸಮಕಾಲೀನ ವಿಚಿತ್ರ ರಾಗ, ವಿಚಿತ್ರ ಉಚ್ಚಾರವನ್ನೇ ಸಮಕಾಲೀನ ಅಗತ್ಯ ಎಂಬಂತೆ
ಬಿಂಬಿಸುವುದು ಯಾವ ಸೀಮೆಯ ಭಾಷಾ ಪ್ರೇಮ ಅಂತ ನನಗಂತೂ ಅರ್ಥ ಆಗುತ್ತಿಲ್ಲ.
ರೇಡಿಯೋ ಮೇಲಿನ ಅತ್ಯಂತ
ಪ್ರೀತಿಯಿಂದ ನಾನು ಈ ಕೆಳಗಿನ ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ. ಯಾರಿಗಾದರೂ ಆಸಕ್ತಿ
ಇದ್ದರೆ, ಇದು ಸರಿ ಅನ್ನಿಸಿದರೆ ಮಾತ್ರ ಉತ್ತರಿಸಿ:
1 ) ಸಂವಹನದಲ್ಲಿ ಭಾವ ಮುಖ್ಯ ಅಂತ ಹೇಳುತ್ತೇವೆ. ಭಾಷೆಯಷ್ಟೇ ಭಾವ ಮುಖ್ಯ
ಅಂತ ಇಂತಹ ಅಪಸವ್ಯಗಳನ್ನು ಸಮರ್ಥಿಸುವವರು ಇದ್ದಾರೆ (ಸ್ವತಃ ನನ್ನಲ್ಲಿ ವಾದಕ್ಕಿಳಿದವರೂ
ಇದ್ದಾರೆ). ಹಾಗಾದರೆ ಭಾವದ ಹಿಂದಿರುವ ಭಾಷೆಯನ್ನು ಮೂಲ ರೂಪದಲ್ಲಿ ರಕ್ಷಿಸಬೇಕಾದವರು ಯಾರು?
2) ಸ್ವಚ್ಛವಾಗಿ ಕನ್ನಡವನ್ನು ಮಾತನಾಡುವ
ಉದ್ಘೋಷಕರು, ನಿರೂಪಕರು ಸಿಗುವುದೇ ಇಲ್ಲ ಎಂಬಷ್ಟು ಮಟ್ಟಿಗೆ ಪರಿಸ್ಥಿತಿ ತಲುಪಿದೆಯೇ? ಯಾಕೆ ಸಿಗ್ತಾ ಇಲ್ಲ? ಒಂದು ವೇಳೆ ಉಚ್ಚಾರ ದೋಷ
ಇರುವವರು ರೇಡಿಯೋಗೆ ಆಯ್ಕೆಯಾದರೂ ಅವರನ್ನು ಮತ್ತೆ ತಿದ್ದುವ ಅಥವಾ ಅವರಿಗೆ ಸರಿಯಾದ ಭಾಷಾ
ತಿಳಿವಳಿಕೆ ನೀಡಲು ವ್ಯವಸ್ಥೆಯೇ ಇಲ್ಲವೇ?
3) ಅವನಿಗೆ ಅಥವಾ ಆಕೆಗೆ ಒಂದು ನಾಲೇಜು
ಇದೆ, ಹುಶಾರಿದ್ದಾನೆ, ಉಚ್ಚಾರ ಮಾತ್ರ ಸ್ವಲೂ......ಪ ತಪ್ತದೆ ಅಷ್ಟೇ ಅಂತ ಕೆಲವರು ಸ್ಪಷ್ಟೀಕರಣ
ಕೊಡ್ತಾರೆ. ಹಾಗಾದರೆ ನನ್ನ ಪ್ರಶ್ನೆ: ತುಂಬ ಧೈರ್ಯ ಇದೆ, ಶೂಟ್ ಮಾಡಲು ಬರುತ್ತದೆ, ವೇಗವಾಗಿ
ಓಡುತ್ತಾನೆ, ಆದರೆ ಅಗತ್ಯದಷ್ಟು ಎತ್ತರ ಇಲ್ಲದಿದ್ದರೆ ಅವರಿಗೆ ಪೊಲೀಸ್ ಕೆಲ್ಸ ಕೊಡ್ತಾರ? ವೇಗವಾಗಿ ವಾಹನ ಚಲಾಯಿಸಲು
ಬರುತ್ತದೆ. ಆದರೆ, ಸರಿಯಾಗಿ ಬ್ರೇಕ್ ಒತ್ತಲು ಬಾರದಿದ್ದರೆ ಚಾಲಕನ ಕೆಲ್ಸ ಕೊಡ್ತಾರ? ಚಂದ ಮಾತನಾಡುತ್ತಾನೆ, ಚಂದ
ವೇಷ ಧರಿಸುತ್ತಾನೆ, ಆದರೆ ನಾಟ್ಯವೇ ಬರುವುದಿಲ್ಲ ಅಂತಾದರೆ ಅಂಥವರಿಗೆ ಯಕ್ಷಗಾನದಲ್ಲಿ ಪುಂಡು
ವೇಷ ಪಾತ್ರ ನೀಡುತ್ತಾರ? ಇಲ್ವಲ್ಲ. ಹಾಗಾದರೆ, ಯಾವ ಕೆಲಸಕ್ಕೆ
ಯಾವ ಮೂಲಭೂತ ಅಗತ್ಯ ಬೇಕೋ ಅದೇ ಇಲ್ಲದವರು ಹೇಗೆ ಆಯ್ಕೆ ಆಗುತ್ತಾರೆ, ಒಂದು ವೇಳೆ ಆಯ್ಕೆಯಾದರೂ
ತಪ್ಪು ತಪ್ಪು ಓದಿಕೊಂಡು ಅಂತಹ ಕೆಲಸದಲ್ಲಿ ಹೇಗೆ ಮುಂದುವರಿಯುತ್ತಾರೆ. ಒಂದು ವೇಳೆ ಮುಂದುವರಿದರೂ
ಅವರನ್ನು ತಿದ್ದುವ, ಸರಿ ತಪ್ಪುಗಳನ್ನು ತಿಳಿಹೇಳುವ ಕೆಲಸ ಯಾಕೆ ಆಗುತ್ತಿಲ್ಲ?
4) ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ, ನಿರೂಪಣಾ ಕ್ಷೇತ್ರ (ಎಂಸಿ ಮಾಡುವವರು)
ಇದೀಗ ರೇಡಿಯೋದಲ್ಲೂ ಭಾಷೆಯನ್ನು ತಪ್ಪು ತಪ್ಪಾಗಿಯೇ ಓದುತ್ತಾ ಹೋದರೆ ಜೆನ್ ಜೀ ಪೀಳಿಗೆಯ ಮಂದಿಗೆ
ಸರಿ ಯಾವುದು, ತಪ್ಪು ಯಾವುದು ಅಂತ ಕಲಿಸುವವರು ಯಾರು, ಮಾಧ್ಯಮಗಳು, ಶಿಕ್ಷಕರು, ಸಾಹಿತಿಗಳು ಈ ಮೂರು
ವರ್ಗದವರೇ ಭಾಷಾ ತಪ್ಪುಗಳನ್ನು ಮಾಡಿದರೆ, ಮುಂದುವರಿಸಿದರೆ ಸಮಾಜಕ್ಕೆ ತಪ್ಪು ಸಂದೇಶ
ಹೋಗುವುದಿಲ್ಲವೇ?
5) ಕೊನೆಯ ಪ್ರಶ್ನೆ.... ತಂತ್ರಜ್ಞಾನ
ಇಷ್ಟು ಮುಂದುವರಿದಿದೆ. ಕೃತಕ ಬುದ್ಧಿಮತ್ತೆ (ಎಐ) ಮೂಲಕ ಓದಿಸಲು, ಹಾಡಿಸಲು, ನಟಿಸಲು
ಸಾಧ್ಯವಾಗಿರುವ ದಿನಗಳಿವು. ಹಾಗಿರುವಾಗ ಅಪ್ಪಿ ತಪ್ಪಿ ಓದುವುದರಲ್ಲಿ ಉಚ್ಚಾರ ದೋಷವಿದ್ದರೆ
ಅದನ್ನೊಂದು ಸರಿಪಡಿಸಲು, ತಿದ್ದಿ ಮುನ್ನಡೆಸಲು, ಆ ಮೂಲಕ ಭಾಷೆಯನ್ನು ಮೂಲ ಸ್ವರೂಪದಲ್ಲಿ ಅದು
ಇರುವ ಹಾಗೆಯೇ ಉಳಿಸಿ ಬೆಳೆಸಲು ಸಾಧ್ಯವೇ ಇಲ್ಲವೇ...? ತಪ್ಪುಗಳನ್ನು
ಸಮರ್ಥಿಸುವುದು, ತಪ್ಪುಗಳ ಬಗ್ಗೆ ಮಾತನಾಡಿದಾಗ ಮೌನ ವಹಿಸುವುದು ಅಥವಾ ವಿತಂಡ ವಾದ ಮಾಡುವುದು
ಅಥವಾ ಯಾವುದೇ ಕ್ರಮ ಕೈಗೊಳ್ಳದಿರುವುದು ಎಷ್ಟರ ಮಟ್ಟಿಗೆ ಸರಿ?
ಇದು ರೇಡಿಯೋದ ಮೇಲೆ
ಹೊರಿಸುತ್ತರುವ ಏಕಮುಖ ಆರೋಪ ಖಂಡಿತಾ ಅಲ್ಲ. ಇತರ ಎಲ್ಲ ಸಮೂಹ ಮಾಧ್ಯಮಗಳಲ್ಲೂ ತಪ್ಪುಗಳು ಖಂಡಿತಾ
ಅಗುತ್ತವೆ. ಅದರೊಂದಿಗೆ ಲಕ್ಷಾಂತರ ಮಂದಿ ಏಕಕಾಲದಲ್ಲಿ ಕೇಳುವ ರೇಡಿಯೋದಲ್ಲೂ ಭಾಷೆ ತಪ್ಪಾಗಿ
ಬಳಕೆಯಾದರೆ ಹೇಗೆ ಎಂಬ ಆತಂಕ ನನ್ನದು. ಯಾವ ತಪ್ಪೂ ಸಮರ್ಥನೀಯವಲ್ಲ, ಯಾವ ಮಾಧ್ಯಮದ ತಪ್ಪೂ
ಸಮರ್ಥನೀಯವಲ್ಲ. ಆದರೆ, ತಿದ್ದುವ ಪ್ರಯತ್ನ ಬೇಡವೇ?
ಖಂಡಿತಾ ಹೌದು. ಈ ಪೀಳಿಗೆಯವರು
ಓದುವುದು, ಬರೆಯುವುದು ಕಡಿಮೆಯಾಗಿದೆ. ಅಧ್ಯಯನ ಕೊರತೆ ಪ್ರತಿ ರಂಗದಲ್ಲೂ ಇದೆ. ಅದೇ ಕಾರಣಕ್ಕೆ
ಎಲ್ಲ ರಂಗಕ್ಕೂ ಹೊಸದಾಗಿ ಕೆಲಸಕ್ಕೆ ಸೇರುವವರಲ್ಲಿ ಭಾಷಾ ಸಮಸ್ಯೆ, ಉಚ್ಚಾರ ದೋಷ, ತಿಳಿವಳಿಕೆ
ಕೊರತೆ ಇದ್ದೇ ಇರುತ್ತದೆ. ಮೂವತ್ತು ವರ್ಷಗಳ ಹಿಂದೆ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದ
ಉದ್ಘೋಷಕರ ನಿರ್ವಹಣಾ ಮಟ್ಟವನ್ನು ಇಂದು, ನಿನ್ನೆ ಕೆಲಸಕ್ಕೆ ಸೇರಿದವರಲ್ಲಿ ಕಾಣಲೂ ಸಾಧ್ಯವೇ
ಇಲ್ಲ. ಆ ನಿರೀಕ್ಷೆಯೂ ಇಲ್ಲ. ಆದರೆ... ಈಗಾಗಲೇ ಹೇಳಿದಂತೆ ಮಾಧ್ಯಮ, ಶಿಕ್ಷಕರು, ಸಾಹಿತಿಗಳೇ
ಭಾಷೆಯನ್ನು ತಪ್ಪು ತಪ್ಪಾಗಿ ಬಳಸಳು ಶುರು ಮಾಡಿದರೆ ಭಾಷೆ ಉಳಿಯುವುದು, ಬೆಳೆಯುವುದು ಬಿಡಿ, ಅದು
ಉಸಿರುಕಟ್ಟಿ ಸತ್ತೇ ಹೋಗುತ್ತದೆ! ಹಾಗಾಗಿ... ತಪ್ಪು
ಮಾಡುವುದು ಸಹಜ. ನವಪೀಳಿಗೆಯವರು ಹಳತನ್ನು ಗಮನಿಸದೆ, ಹೆಚ್ಚಿನ ಜವಾಬ್ದಾರಿ ಹೊರದೆ, ಅಧ್ಯಯನ
ಶೀಲರಾಗಿರದೆ ಇಂತಹ ಪ್ರಮಾದಗಳನ್ನು ಎಸಗುವುದೂ ಸಹಜ ಇರಬಹುದು. ಆದರೆ, ಒಂದು ಪೀಳಿಗೆ ಈಗಲೂ
ಸಕ್ರಿಯವಾಗಿದೆ. ಸರಿಯಾಗಿ ಭಾಷೆ ಬಳಸಿ ಬೆಳೆಸಿದವರು. ಅಂಥವರು ಇದನ್ನು ಸರಿಪಡಿಸಬೇಕು.
ಜವಾಬ್ದಾರಿಯುತರು ಇದನ್ನು ವಿಮರ್ಶಿಸಿ ಎಲ್ಲಿ ತಪ್ಪಾಗುತ್ತಿದೆಯೋ ಅಲ್ಲೇ ಅದನ್ನು ಸರಿಪಡಿಸಬೇಕು.
ರೇಡಿಯೋದ ಓರ್ವ ಕಟ್ಟಾ ಅಭಿಮಾನಿಯಾಗಿ ಇದು ನನ್ನ ಕಳಕಳಿ. ನಿಮಗೂ ಏನಾದರೂ ಹೇಳುವುದಿಲ್ಲರೆ
ಕಮೆಂಟ್ ಸೆಕ್ಷನಿನಲ್ಲಿ ತಿಳಿಸಿ ದಯವಿಟ್ಟು...
-ಕೃಷ್ಣಮೋಹನ ತಲೆಂಗಳ
(20.12.2025)

No comments:
Post a Comment