ಆನ್ ಲೈನ್ ಕಂಡ್ರೆ ಕೆಲಸ ಇಲ್ಲದವ ಅಂದ್ಕೊಳ್ತಾರೆ, ಆಫ್ ಲೈನ್ ಹೋದ್ರೆ ಸತ್ತೋದ ಅಂತ ಭಾವಿಸ್ತಾರೆ... ಜಾಲತಾಣದ ಕೋರ್ಟಿನಲ್ಲಿ ಸಿಗುವ ಅಸಹಜ ತೀರ್ಪುಗಳು!

ಕಳೆದ ವರ್ಷದಿಂದಲೂ ಜಾಲತಾಣದಲ್ಲಿ ಒಂದು ಜೋಕ್ ಹರಿದಾಡುತ್ತಿದೆ. ತುಂಬ ಹೊತ್ತು ನಿಮ್ಮ ವಾಟ್ಸಪ್ ಡಿಪಿ ತೆಗೆದು, ಆಫ್ ಲೈನ್ ಹೋಗಬೇಡಿ, ಜನ ನೀವು ಕೊರೋನಾ ಬಂದು ಸತ್ತೇ ಹೋಗಿದ್ದೀರಿ ಅಂದ್ಕೊಳ್ತಾರೆ ಅಂತ. ಇದು ತಮಾಷೆಯೇ ಇರಬಹುದು. ಆದರೆ ನಮ್ಮ ನಿಮ್ಮಲ್ಲಿರುವ ಇಂತಹ ಗ್ರಹಿಕೆ, ಊಹೆ (assumption) ಮತ್ತು ಊಹೆಯ ಆಧಾರದಲ್ಲಿ ತೀರ್ಪು ನೀಡುವ (judgmental) ಮನಃಸ್ಥಿತಿಗೆ ಹಿಡಿದ ಕೈಕನ್ನಡಿ ಈ ಜೋಕು.

ಜೀವನಕ್ಕೆ ಜಾಲತಾಣ ಒಂದು ಕನ್ನಡಿ ಎಂದ ಭ್ರಮಿಸುವವರು, ಜಾಲತಾಣವೆಂದರೆ ಮನುಷ್ಯನ ನಡವಳಿಕೆ ಅಳೆಯಬಹುದಾದ ಜಾತಕ ಎಂದು ಭಾವಿಸುವವರು ಹಾಗೂ ಜಾಲತಾಣದಲ್ಲಿ ಕಾಣುವ ಅರೆಬರೆ ಬದುಕೇ ಒಬ್ಬನ ಸಾಧನೆಯ, ಸೋಲಿನ ಅಥವಾ ಇಡೀ ವ್ಯಕ್ತಿತ್ವದ ದ್ಯೋತಕ ಎಂಬ ಊಹಿಸುವವರು, ಕಲ್ಪಿಸುವವರಿದ್ದಾರಲ್ಲ? ಅಂಥವರು ಹಾಗೆಯೇ ಅಂದ್ಕೊಳ್ತಾರೆ ಆಫ್ ಲೈನ್ ಇರುವಾತ ಸತ್ತೇ ಹೋದ ಎಂಬ ಹಾಗೆ.

 

ಮೊಬೈಲ್ ಇಂಟರ್ನಲ್ ಮೆಮೊರಿ ಫುಲ್ ಆದರೆ ಹೇಗೆ ಖಾಲಿ ಮಾಡಬೇಕೆಂದೇ ಗೊತ್ತಿಲ್ಲದವರು, ಜಂಕ್ ಕ್ಲೀನ್ ಮಾಡುವ ಬಗ್ಗೆ ಅರಿವಿಲ್ಲದವರೂ ಇತರರ online ಬದುಕಿನ ಬಗ್ಗೆ ವಿಮರ್ಶೆ ಮಾಡುವುದಕ್ಕೆ, ನಾಲಗೆ ಹರಿಯಬಿಡುವುದಕ್ಕೆ ಬರುತ್ತಾರೆ!! ನಾವು ಕಲಿತ ಶಿಕ್ಷಣ, ಜೀವನ ಹಾಗೂ ತಂತ್ರಜ್ಞಾನದ ಕುರಿತು ನಮ್ಮಲ್ಲಿರುವ ವಿವೇಚನೆ ಹಾಗೂ ಬದುಕು ಕಲಿಸಿದ ಪಾಠಗಳು ಯಾವುವೂ ಕೆಲಸಕ್ಕೆ ಬಾರದೆ ಜಾಲತಾಣವೆಂಬ ಮೋಹಕ ಲೋಕದ ತಾಂತ್ರಿಕ ತೋರಿಕೆಗಳು ಮಾತ್ರ ವ್ಯಕ್ತಿಯ ಹಾಗೂ ವ್ಯಕ್ತಿತ್ವದ ನಿರ್ಣಾಯಕ ಅಂಶಗಳೆಂದು ಭಾವಿಸುವುದು ನಮ್ಮ ತಿಳಿವಳಿಕೆ ಮಟ್ಟ ಸೀಮಿತವಾಗಿರುವುದರ ಹಾಗೂ ನಮ್ಮ ಮೂಗಿನ ನೇರಕ್ಕೆ ಮೂಡಿನ ನೇರಕ್ಕೆ ಅವರಿವರನ್ನು ವಿಮರ್ಶಿಸುವ ಸಂಕುಚಿತ ಮನೋಭಾವಕ್ಕೆ ಸಾಕ್ಷಿ ಅಷ್ಟೆ

.....

ಇದನ್ನು ಸರಳವಾಗಿ ಹೀಗೆ ವಿವರಿಸಬಹುದು:

 

ಒಂದು ತಂಡ ಕಠಿಣವಾದ ಬೆಟ್ಟಕ್ಕೆ ಚಾರಣ ಹೋಗುತ್ತದೆ ಎಂದಿಟ್ಟುಕೊಳ್ಳೋಣ. ತುದಿ ತಲುಪಿದ ಮೇಲಿನ ಚಂದದ ಸೀನರಿ ಜೊತೆಗಿನ ಫೋಟೋವನ್ನು ಫೇಸ್ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಶೇರ್ ಮಾಡುತ್ತಾರೆ ಸಹಜವಾಗಿ. ನಾವೆಲ್ಲ ಅದನ್ನು ಕಂಡು ಆಹಾ ಎಷ್ಟು ಚಂದದ ಜಾಗ, ಆಹಾ ಎಷ್ಟು ಸುಂದರ ದೃಶ್ಯಗಳು ಕಾಣಿಸುತ್ತಿವೆ, ಆಹಾ ಅಲ್ಲಿಗೆ ಹೋದಾಗ ಅವರೆಲ್ಲರ ಮುಖದಲ್ಲಿ ಎಷ್ಟು ಖುಷಿ ಎದ್ದು ಕಾಣುತ್ತಿದೆ ಎಂದೆಲ್ಲ ಅಂದುಕೊಳ್ಳುತ್ತೇವೆ, ಮಾತನಾಡುತ್ತೇವೆ. ಆದರೆ ಅವರು ಆ ಬೆಟ್ಟಕ್ಕೆ ಗಂಟೆಗಟ್ಟಲೆ ಹತ್ತಿದ್ದು, ಜಾರಿ ಬಿದ್ದಿದ್ದು, ಕಾಲು ಉಳುಕಿದ್ದು, ನೀರು ಸಿಕ್ಕದೆ ಬಳಲಿದ್ದು, ಪೊದೆಯ ಪಕ್ಕದ ಮುಳ್ಳು ಚುಚ್ಚಿದ್ದು, ಮೀನಖಂಡ ತಿರುಚಿ ನೋವುಂಡದ್ದು, ಚಪ್ಪಲಿ ತುಂಡಾಗಿದ್ದು, ಇವು ಯಾವುವೂ ಆ ಫೋಟೋದಲ್ಲಿ ಕಾಣಿಸುವುದಿಲ್ಲ. ಅಲ್ಲಿ ಕಾಣುವುದು ಫಲಿತಾಂಶ ಮಾತ್ರ, ಪ್ರಯತ್ನಗಳು ಫೋಟೋದಲ್ಲಿ ಕಾಣುವುದಿಲ್ಲ. ನಾವು ಕಂಡದ್ದನ್ನೇ ವಿಮರ್ಶೆ ಮಾಡುತ್ತೇವೆ ಹೊರತು ಕಾಣದ್ದರ ಬಗ್ಗೆ ಹೇಳುವುದಕ್ಕೆ ನಮಗೆ ಆಗುವುದಿಲ್ಲ, ಕಾಣದ್ದನ್ನು ಕಲ್ಪಿಸಿ ವಿಮರ್ಶೆ ಮಾಡುವುದು ಸಭ್ಯತೆಯೂ ಆಲ್ಲ ಸರಿಯೂ ಅಲ್ಲ.

Online/offline ಬದುಕುಗಳೂ ಅಷ್ಟೇ. ಒಬ್ಬ ವ್ಯಕ್ತಿ ಬೆಳೆದು 30,40,50 ವರ್ಷದ ಪ್ರೌಢನಾಗಿರುತ್ತಾನೆ. ಯಾವುದೋ ಹಂತದಲ್ಲಿ ನಾವು ಅವನನ್ನು ಸ್ನೇಹಿತನಾಗಿಯೋ, ಸಹೋದ್ಯೋಗಿಯಾಗಿಯೋ, ಬಂಧುವಾಗಿಯೋ ಸಂಧಿಸುತ್ತೇವೆ. ಸೀಮಿತ ಅವಧಿಯಲ್ಲಿ ಅವನ ಜೊತೆಗೆ ಒಡನಾಟ ಇರುತ್ತದೆ. ಆತ ಬೆಳೆದ ರೀತಿ, ಬಾಳಿದ ಬಗೆ, ನಡೆದು ಬಂದ ದಾರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ, ಅಥವಾ ಪೂರ್ತಿ ತಿಳಿದಿರುವದಿಲ್ಲ. ಎಷ್ಟೋ ಮಂದಿಯ ಪೂರ್ತಿ ಪರಿಚಯವೇ ನಮಗಿರುವುದಿಲ್ಲ. ಆತ ಬೆಳೆದು ಬಂತ ಪರಿಸರ, ಆತನ ವೃತ್ತಿ, ವೃತ್ತಿ ಬದುಕಿನ ಒತ್ತಡ, ವೈಯಕ್ತಿಕ ಸಮಸ್ಯೆ, ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆಗಳು ಇವೆಲ್ಲ ನಮಗೆ ಚದುರಿಹೋದ ಚಿತ್ರಗಳ ಹಾಗೆ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಕಾಣಿಸುತ್ತದೆಯೇ ವಿನಃ, ನಾವು ಆತನ ಜೊತೆ ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆದಿರುವುದಿಲ್ಲ. ಆದರೂ ಬಹಳಷ್ಟು ಸಾರಿ ನಾವು ಕಂಡದ್ದು, ಕಾಣದ್ದು, ಅಂದುಕೊಂಡದ್ದು ಎಲ್ಲವನ್ನು ಚೆನ್ನಾಗಿ ಹೆಣೆದು ವ್ಯಕ್ತಿಗಳ ಬಗ್ಗೆ, ಅವರು ಮಾಡುವ ಕೆಲಸಗಳ ಬಗ್ಗೆ, ಅವರ ಜಾತಿಯ ಬಗ್ಗೆ, ಅವರ ಯೋಜನೆಗಳ ಬಗ್ಗೆ, ಅವರ ನಿರ್ಧಾರಗಳ ಬಗ್ಗೆ, ಅವರ ನಡವಳಿಕೆ ಗುಣನಡತೆ, ಸಂಬಂಧಗಳ ಬಗ್ಗೆ ವೈಯಕ್ತಿಕವಾಗಿ, ಸಾಮೂಹಿಕವಾಗಿ ಅಥವಾ ಜಾಲತಾಣಗಳಲ್ಲಿ ಹಗುರವಾಗಿ, ಕೇವಲವಾಗಿ ವಿಮರ್ಶೆ ಮಾಡುತ್ತೇವೆ, ಹಂಗಿಸುತ್ತೇವೆ, ಕಾಲೆಳೆಯುತ್ತೇವೆ, ಇದುವೇ ಅಂತಿಮವೇನೋ ಎಂಬ ಹಾಗೂ ತೀರ್ಪುಗಾರರಾಗಿ ಬಿಡುತ್ತೇವೆ.

ಕಂಡದ್ದೆಲ್ಲವೂ ಸತ್ಯಗಳಾಗಿರಬೇಕಾಗಿಲ್ಲ, ಕಾಣದ್ದೆಲ್ಲವೂ ಸುಳ್ಳೂ ಆಗಿರಬೇಕಾಗಿಲ್ಲ, ಉರುಟು ಭೂಮಿಗೂ ಇನ್ನೊಂದು ಮಗ್ಗುಲು ಇರುತ್ತದೆ, ಸಾಗರಕ್ಕೆ ಆಚೆಯ ತೀರವಿರುತ್ತದೆ, ಚಂದ್ರನ ಮೇಲೂ ಕಲೆಗಳಿರುತ್ತವೆ, ಉದುರಿದ ಸವಿಯಾದ ಹಣ್ಣನ್ನೂ ತಿರುವಿ ನೋಡಿದಾಗ ಅದು ಕೊಳೆತಿರುವ ಸಾಧ್ಯತೆಯೂ ಇರುತ್ತದೆ. ಕಂಡಷ್ಟೇ, ಕಾಣದ ಅಂಶಗಳೂ ಕೂಡಾ ಒಂದು ವಿಚಾರವನ್ನು, ವ್ಯಕ್ತಿತ್ವವನ್ನು ವಿಮರ್ಶೆ ಮಾಡುವಲ್ಲಿ ನಿರ್ಣಾಯವಾಗಿರುತ್ತದೆ. ಆದರೆ ಆವೇಶಕ್ಕೆ, ಮುಂಗೋಪಕ್ಕೆ, ಪೂರ್ವಾಗ್ರಹಕ್ಕೆ, ತನ್ನಲ್ಲಿನ ದೌರ್ಬಲ್ಯಗಳಿಂದ ಹುಟ್ಟಿಕೊಂಡ ಕೆಟ್ಟ ಮನಃಸ್ಥಿತಿಗೆ ಸಿಲುಕಿದ ಸ್ವಘೋಷಿತ ವಿಮರ್ಶಕರಿಗೆ ಇನ್ನೊಬ್ಬರ ಬದುಕು, ವೃತ್ತಿ, ನಡವಳಿಕೆಗಳನ್ನು ವಿಮರ್ಶಿಸುವಾಗ ಕಾಣದ್ದನ್ನು ವಿಮರ್ಶಿಸುವ ಸಹನೆಯಾಗಲಿ, ವಿವೇಚನೆಯಾಗಲಿ ಇರುವುದಿಲ್ಲ. ಅದರಿಂದ ಅವರಿಗೆ ಆಗಬಹುದಾದ ವೇದನೆಯ ಅರಿವೂ ಮೊದಲೇ ಇರುವುದಿಲ್ಲ. ಆವೇಶದಲ್ಲಿ ವಿಜೃಂಭಿಸುವ ಅಹಂ ಹಾಗೂ ತಪ್ಪಾದರೂ ಸರಿ ಅನ್ನಿಸಿದ್ದನ್ನು ಈ ಕ್ಷಣ ಹೇಳಿ ನನ್ನ ಮನಸ್ಸು ಹಗುರಾಗಬೇಕು ಎಂಬ ಕೆಟ್ಟ ಹಠ ವ್ಯಕ್ತಿಯ ವಿವೇಚನೆಯನ್ನು ಕೊಲ್ಲುತ್ತದೆ ಮಾತ್ರವಲ್ಲ, ಇತರರ ಭಾವನೆಗಳನ್ನು ಅರಿವಿಲ್ಲದೇ ಘಾಸಿಗೊಳಿಸುತ್ತದೆ, ತುಂಬ ಮಂದಿ ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ, ಇನ್ನಷ್ಟು ಸೂಕ್ಷ್ಮಮತಿಗಳು ಇಂತಹ ವಿಮರ್ಶಕರ ದಾಳಿಗೆ ಸಿಲುಕಿ ನೊಂದು ಮೌನವಾಗಿ ರೋದಿಸುತ್ತಾರೆ ಅಷ್ಟೆ!

……

ಇತ್ತೀಚೆಗೆ ಮಹಿಳೆಯೊಬ್ಬರು ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು. ಅವರ ಬಂಧುಗಳು ಅಮೆರಿಕಾದಲ್ಲಿರುವವರು ಸಂಪರ್ಕಕ್ಕೆ ಸಿಕ್ಕುವುದು ಮಧ್ಯರಾತ್ರಿಯ ಹೊತ್ತಿಗೆ ಅಂತೆ. ಅವರ ಜೊತೆ ಮಾತನಾಡುವುದಕ್ಕೆ ಇವರು ತಡರಾತ್ರಿ ಮೊಬೈಲಿನಲ್ಲಿ online ಸ್ಥಿತಿಯಲ್ಲಿದಾಗ ತುಂಬ ಮಂದಿ ಮೆಸೆಂಜರಿನಲ್ಲಿ, ವಾಟ್ಸಪ್ಪಿನಲ್ಲಿ ಏನೇನೋ ಮೆಸೇಜು ಮಾಡಿ ಕಿರಿಕಿರಿ ಮಾಡುವುದು, ತಪ್ಪಾಗಿ ಭಾವಿಸುವುದು, ತಮ್ಮದೇ ಅರ್ಥಗಳನ್ನುಕಲ್ಪಿಸುವುದು, ಹಗುರವಾಗಿ ನಾಲಗೆ ಹರಿಯಬಿಡುವುದು ಮಾಡುತ್ತಿರುತ್ತಾರಂತೆ. ಹಾಗೆ ಮಾಡಬೇಡಿ ದಯವಿಟ್ಟು, ಇನ್ನೊಬ್ಬರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಅಂತ ಅವರು ತಮ್ಮ ಫೇಸ್ಬುಕ್ಕ್ ಗೋಡೆಯಲ್ಲಿ ನೇರವಾಗಿ, ನಿಷ್ಠುರವಾಗಿ ಬರೆದುಕೊಂಡಿದ್ದರು! ಇದು ನಮ್ಮ online ವಿಮರ್ಶಕರ ಪ್ರವೃತ್ತಿಯ ಮುಖಕ್ಕೆ ಹಿಡಿದ ಕನ್ನಡಿ.

 

Online ಬದುಕಿನ ಕುರಿತ ಕೆಲವು ನಿಷ್ಠುರ ಸತ್ಯಗಳು ಹಾಗೂ ಅದರ ಕುರಿತಾಗಿರುವ ಭ್ರಮೆಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಿದ್ದೇನೆ, ಪುರುಸೊತ್ತಿದ್ದರೆ ಓದಿ, ಹೌದು ಅನಿಸಿದರೆ ಕಮೆಂಟು ಮಾಡಿ, ಬೇಸರವಾದೀತು ಎಂದು ಲೈಕು ಮಾಡುವ ಅಗತ್ಯವೇ ಇಲ್ಲ!

1)      ಒಬ್ಬನ ಮೊಬೈಲು online ಎಂದು ಸ್ಟೇಟಸ್ ನಲ್ಲಿ ತೋರಿಸಿದರೆ ಆ ವ್ಯಕ್ತಿಯ ಮೊಬೈಲಿಗೆ ಇಂಟರ್ ನೆಟ್ ಸಂಪರ್ಕ ಆಗಿದೆ ಅಂತ ಮಾತ್ರ ಅರ್ಥ. ಆ ಮೊಬೈಲ್ ಬಳಕೆದಾರ ಫ್ರೀ ಇದ್ದಾನೆ, ಮಾಡುವುದಕ್ಕೆ ಕೆಲಸ ಇಲ್ಲದೆ ಕುಳಿತಿದ್ದಾನೆ, ಇನ್ಯಾರದ್ದೋ ಜೊತೆ ಮಾತನಾಡುತ್ತಿದ್ದಾನೆ, ಚಾಟ್ ಮಾಡುತ್ತದ್ದಾನೆ ಅಂತ ಅರ್ಥ ಅಲ್ಲ. ಇದು ಸುಶಿಕ್ಷಿತರು ಹಾಗೂ ವಿವೇಚನೆ ಉಳ್ಳ ಎಲ್ಲರಿಗೂ ಅರ್ಥವಾಗಬೇಕಾದ ವಿಚಾರ.

2)      ಒಬ್ಬನ ಮೊಬೈಲು ಆನ್ ಲೈನ್ ಎಂದು ತೋರಿಸುತ್ತಿದ್ದರೆ ಮೊಬೈಲ್ ಆತನದ್ದೇ ಕೈಯ್ಯಲ್ಲಿ ಇದೆ ಎಂದೋ ಅಥವಾ ಆತ ಜೀವಂತ ಇದ್ದಾನೆ ಎಂದು ಕೂಡಾ ಅರ್ಥ ಅಲ್ಲ. ಆತ ಮೊಬೈಲ್ ಆನ್ ಲೈನ್ ಇಟ್ಟು ಎಲ್ಲೋ ಹೋಗಿರಬಹುದು, ಮೊಬೈಲನ್ನು ಆತನ ಮಕ್ಕಳು ಬಳಸಬಹುದು, ಅಥವಾ ಮೊಬೈಲ್ ಡೇಟಾ ಆನ್ ಮಾಡಿದ ಬಳಿಕ ಆತ ಸತ್ತೋಗಿರಬಹುದು! ಅಥವಾ ಡೇಟಾ ಸಂಪರ್ಕ ಆದ ಮೇಲೆ ತನಗೆ ಅರಿವಿಲ್ಲದೇ ನಿದ್ರೆಗೆ ಜಾರಿರಬಹುದು. ಏನೂ ಆಗಿರಬಹುದು. ನಾವು ಮಾಡುವ ದೊಡ್ಡ ತಪ್ಪು ಅಂದರೆ ಆನ್ ಲೈನ್ ಇದ್ದಾಕ್ಷಣ ಅವರು ಫ್ರೀ ಇದ್ದಾರೆ, ಮೊಬೈಲ್ ಆರಾಮವಾಗಿ ಅವರ ಅಂಗೈಯಲ್ಲಿ ಪವಡಿಸಿದೆ ಅಂತ ತಿಳ್ಕೊಳ್ಳುವುದು.

3)      ಇತ್ತೀಚಿನ ಏಳೆಂಟು ವರ್ಷಗಳಿಂದ ಜಾಲತಾಣ ಎಂಬುದು ವೃತ್ತಿ ಬದುಕಿನ ಭಾಗವಾಗಿದೆ. ಮಾಹಿತಿ, ಸೂಚನೆ, ಸುತ್ತೋಲೆ, ಆದೇಶ ಇವೆಲ್ಲ ವಾಟ್ಸಪ್ಪಿನಲ್ಲಿ, MAILನಲ್ಲಿ, APPಗಳಲ್ಲಿ ಬರುತ್ತಾ ಇರುತ್ತವೆ. ಕೆಲವು ವೃತ್ತಿಯಲ್ಲಂತೂ ಆನ್ ಲೈನ್ ನಲ್ಲಿದ್ದರೆ ಮಾತ್ರ ಸಮರ್ಪಕವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಮೊಬೈಲ್ ಗಳ ಮೂಲಕವೇ ಕೆಲಸ ಮಾಡಬಹುದಾದಷ್ಟೂ ಸಂಪರ್ಕ ವೃದ್ಧಿಸಿದೆ. ಹಾಗಿರುವಾಗ ಇಂಥವರೆಲ್ಲ ತಮ್ಮ ಕೆಲಸಕ್ಕೋಸ್ಕರ, ಕರ್ತವ್ಯ ನಿರ್ವಹಣೆಗೋಸ್ಕರವೂ ಆನ್ ಲೈನ್ ಇರುತ್ತಾರೆ.  ಆದರೆ ಸಂಕುಚಿತವಾಗಿ, ಸೀಮಿತವಾಗಿ ಮನೆಯಲ್ಲಿ ಕುಳಿತು ಯೋಚಿಸುವವರಿಗೆ ಆನ್ ಲೈನ್ ಮೂಲಕವೇ ದುಡಿಯುವವರ ಕಷ್ಟ ಅರ್ಥ ಆಗುವುದಿಲ್ಲ. ಕೆಲಸದ ವೇಳೆಯಲ್ಲೇ ಆನ್ಲೈನ್ ಇರುವವರ ಜೊತೆ ಸಂಭಾಷಣೆಗೆ, ವಿಮರ್ಶೆಗೆ, ಸಂವಾದಕ್ಕೆ, ಕಾಲೆಳೆಯುವದಕ್ಕೆ ಶುರು ಮಾಡಿ ತಮ್ಮ ಪಾಂಡಿತ್ಯ, ವಿವೇಚನೆ ಪ್ರದರ್ಶನಕ್ಕೆ ಹೊರಡುತ್ತಾರೆ, ಅವರಿಗಾಗಬಹುದಾದ ಕಿರಿಕಿರಿಯ ಬಗ್ಗೆ ಯೋಚಿಸುವುದೇ ಇಲ್ಲ!

4)      ಈ ವಾಟ್ಸಪ್ಪು ಎಂಬುದು ಜನಪ್ರಿಯವಾಗಿ ಇನ್ನೂ ಒಂದು ದಶಕವೂ ಸಂದಿಲ್ಲ. ಅದಕ್ಕಿಂತ ಮೊದಲೂ ಜಗತ್ತಿನಲ್ಲಿ ನಾಗರಿಕತೆ ಇತ್ತು!!! ಜಮರ ನಡುವೆ ಆಗಲು ಚಂದದ ಸಂವಹನ ಜಾಲಗಳಿದ್ದವು. ಹಾಗಾಗಿ ಜಾಲತಾಣದಲ್ಲಿ ಕಾಣುವ ವ್ಯಕ್ತಿಯ ನಡವಳಿಕೆ ಆಧಾರದಲ್ಲಿ ಆತನಿಗೆ ಲೇಬಲ್ ಹಚ್ಚುವುದು, ಆತನ ವ್ಯಕ್ತಿತ್ವದ ವಿಮರ್ಶೆ ಮಾಡುವುದು ಹಾಸ್ಯಾಸ್ಪದ. ಸ್ಟೇಟಸ್ಸುಗಳಲ್ಲಿ ಹಂಚಿಕೊಳ್ಳುವ ಚಿತ್ರ ವಿಚಿತ್ರ ಸಂದೇಶಗಳು, ಚುಚ್ಚು ಮಾತುಗಳು, ಸೂಕ್ತಿಗಳು, ಹತಾಶೆ, ಸಿಟ್ಟಿನ ಮಾತುಗಳು, ಗ್ರೂಪುಗಳಲ್ಲಿ ಮಾತನಾಡುವ ರೀತಿ, ವಾಟ್ಸಪ್ ಲಾಸ್ಟ್ ಸೀನ್ ಸಮಯ, ಆಫ್ ಲೈನ್ ಹೋದ ಅವಧಿ ಇವನ್ನೆಲ್ಲ ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ ಇಂತಿಂಥ ಜನ ಇಂತಿಂಥವರೇ ಅಂತ ನಿರ್ಧಾರ ಮಾಡುವುದು, ಹಾಗೆಯೇ ನೇರ ಹೇಳುವುದು ಅಥವಾ ಹಳೆ ಪತ್ತೆದಾರಿ ಕಥೆಗಳ ಪತ್ತೇದಾರರ ಥರ ಈ ಮೇಲಿನ ಅಂಶಗಳನ್ನೆಲ್ಲ ಒಂದು ಚೌಕಟ್ಟಿನಲ್ಲಿ ತಮಗೆ ಬೇಕಾದ ಹಾಗೆ ಜೋಡಿಸಿ ಟೀಕಾ ಪ್ರಹಾರ ಮಾಡುವುದು ಇವೆಲ್ಲ ಸೀಮಿತ ಚಿಂತನೆಗಳಿಗೆ ಸಿಕ್ಕ ಲೇಬಲ್ಲುಗಳ ಪ್ರತಿಬಿಂಬ! ಇದು ಸಾಮುದಾಯಿಕ ಚಟುವಟಿಕೆಗಳಿಗೂ, ಆಗುಹೋಗುಗಳ ಟೀಕೆಗಳಿಗೂ ಅನ್ವಯವಾಗುತ್ತದೆ.

5)      ಇನ್ನೂ ಸರಳವಾಗಿ ಹೇಳಬೇಕೆಂದರ online ಎಂಬ ಸ್ಟೇಟಸ್ಸು ತಾಂತ್ರಿಕವಾಗಿ ಅಂತರ್ಜಾಲ ಸಂಪರ್ಕ ದ್ಯೋತಕ ಸೂಚನೆಯೇ ಹೊರತು ಅದು ಬಳಕೆದಾರನ ಮನಃಸ್ಥಿತಿ, ಪರಿಸ್ಥಿತಿ, ಕೆಲಸದ ಒತ್ತಡ, ಓಡಾಟದ ವಿಧಾನ, ಗೊಂದಲ, ಸಮಸ್ಯೆ ಇತ್ಯಾದಿಗಳನ್ನು ಸೂಚಿಸುವ ಪದವಲ್ಲ. ಯಂತ್ರ ಎಷ್ಟಿದ್ದರೂ ಯಂತ್ರವೇ, ಯಾಂತ್ರಿಕ ಪದಗಳೂ ಎಷ್ಟಿದ್ದರೂ ಯಾಂತ್ರಿಕವೇ ಯಾರೋ ಮಾಡಿಟ್ಟ ಇಮೋಜಿಗಳ ಹಾಗೆ, ನಾವು ಭಾವನೆಗಳನ್ನು ಅವುಗಳಿಗೆ ಆರೋಪಿಸುತ್ತೇವೆ ಅಷ್ಟೇ...

6)      ವ್ಯಕ್ತಿ ವಾಟ್ಸಪ್ಪ್ ಡಿಪಿಯಲ್ಲಿ ಇರುವಷ್ಟೇ ಆ ವ್ಯಕ್ತಿಯ ಮುಖವೂ ಚಂದ ಇರುತ್ತಿದ್ದರೆ, ಸ್ಟೇಟಸ್ಸಿನಲ್ಲಿ ದಿನಾ ಹಾಕುವ ಸೂಕ್ತಿಗಳನ್ನು ಅನುಸರಿಸಿ ಬದುಕುತ್ತಿದ್ದರೆ, ಸ್ಟೇಟಸ್ಸಿನಲ್ಲಿ ತೋರಿಸುವ ದೇಶ, ಸಮಾಜ, ಧಾರ್ಮಿಕ, ಸಾಂಸಾರಿಕ ಪ್ರೀತಿ, ಭಕ್ತಿ, ಗೌರವಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿದ್ದರೆ ನಮ್ಮ ದೇಶ, ಸಮಾಜ, ಜಗತ್ತು ಬೇರೆಯೇ ರೀತಿ ಇರ್ತಾ ಇತ್ತು! ಇವೆಲ್ಲ ಯತಾರ್ಥವಲ್ಲ, ಇವುಗಳೆಲ್ಲ 100 ಶೇಕಡಾದಷ್ಟು ವಿಶ್ವಾಸಾರ್ಹವಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ಯಾರ ಮೆಸೇಜು ಮೊದಲು ನೋಡಿದ್ದು, ಯಾರಿಗೆ ಮೊದಲು ಕಮೆಂಟು ಹಾಕಿದ್ದು, ಯಾರ ಜನ್ಮದಿನದ ದಿನ ಯಾರ್ಯಾರು ಅವರ ಸ್ಟೇಟಸ್ಸಿನಲ್ಲಿ ಯಾರ್ಯಾರ ಫೋಟೋ ಹಾಕಿದರು, ಯಾರು ತನ್ನ ಮೆಸೇಜು ಇಗ್ನೋರ್ ಮಾಡಿದರು, ಯಾರು ಗ್ರೂಪಿನಲ್ಲಿ ತನ್ನನ್ನ ಕಡೆಗಣಿಸಿದರು, ಯಾರು ನನ್ನ ಸ್ಟೇಟಸ್ಸೇ ನೋಡದೆ ಅಹಂಕಾರ ತೋರಿದರು, ಯಾರು ಪರ್ಸನಲ್ ಮೆಸೇಜಿಗೆ ಉತ್ತರ ಕೊಡದಿದ್ದರೂ ತನ್ನ ಸ್ಟೇಟಸ್ ಅಪ್ಡೇಟ್ ಮಾಡ್ತಾನೆ, ಹತ್ತಾರು ಗ್ರೂಪುಗಳಲ್ಲಿ ಆಕ್ಟಿವ್ ಇರ್ತಾನೆ, ನನ್ನ ಸ್ಟೇಟಸ್ಸು ನೋಡಿಯೂ ರಿಪ್ಲೈ ಮಾಡುವುದಿಲ್ಲ,,,, ಇಂತಹ ಬಾಲಿಶ ಯೋಚನೆಗಳ ಸುತ್ತ ಗ್ರೂಪುಗಳಲ್ಲಿ, ವೈಯಕ್ತಿಕವಾಗಿ ಚರ್ಚೆಗಳು, ಆರೋಪಗಳು, ಹತಾಶೆಗಳು ಓಡಾಡುತ್ತಲೇ ಇರುತ್ತವೆ. ವಿವೇಚನೆ ಕಲಿಸದ ಶಿಕ್ಷಣ, ಜೀವನಾನುಭವ ಕಲಿಸದ ಆಯುಷ್ಯ, ಸಂವಹನದ ಔನ್ನತ್ಯವನ್ನು ಬೋಧಿಸದ ತಂತ್ರಜ್ಞಾನ ಇದ್ದೇನು ಪ್ರಯೋಜನ? ಇವೆಲ್ಲ ಬದುಕನ್ನು ಇನ್ನಷ್ಟು ಕ್ಲಿಷ್ಟಗೊಳಿಸುತ್ತದೆ ವಿನಃ ಸರಳಗೊಳಿಸುವುದಿಲ್ಲ. ಅಂಗೈಯಲ್ಲೇ ಜಗತ್ತು ಎಂಬ ಭ್ರಮೆ ಸಂವಹನವನ್ನು ಮತ್ತಷ್ಟು ಸಂಕುಚಿತಗೊಳಿಸಿದೆ, ಸೀಮಿತಗೊಳಿಸಿದೆ ಹಾಗೂ ಅನಗತ್ಯ ಅಪಾರ್ಥಗಳಿಗೆ ಎಡೆ ಮಾಡಿಕೊಡುತ್ತಿದೆ, ಇದಕ್ಕೆ ವಾಟ್ಸಪ್ಪೇ ಸಾಕ್ಷಿ (ಸರಿಯಾಗಿ ಬಳಸಿದರೆ ಯಾವ ತಂತ್ರಜ್ಞಾನವೂ ಹೊರೆಯಲ್ಲ ಎಂಬುದು ನಿರ್ವಿವಾದ)

7)      ಸ್ಟೇಟಸನ್ನು ಸ್ಟಡಿ ಮಾಡಿ, ಎಷ್ಟೊತ್ತು ಆನ್ ಲೈನ್ ಇರುತ್ತಾರೆ ಎಂದು ಗಂಭೀರವಾಗಿ ಅಧ್ಯಯನ ಮಾಡಿ, ಡಿಪಿಯಲ್ಲಿ ಕಾಣುವ ನಗು, ಅಳುವನ್ನೆಲ್ಲ ಗಮನಿಸಿ ನಾವು ಇವ ಇಂಥವ, ಅವ ಅಂಥವ ಎಂದೆಲ್ಲ ಹೇಳುತ್ತೇವೆ. ನಮಗೆ ಸಿಟ್ಟು ಬಂದಾಗ, ಬೇಸವಾದಾಗ ಸ್ಟೇಟಸ್ಸಿನಲ್ಲಿ ಧರ್ಮಕ್ಕೆ ಅಬ್ದುಲ್ ಕಲಾಂ, ವಿವೇಕಾನಂದ ಅವರಿವರೆನ್ನೆಲ್ಲ ಎಳೆದು ತಂದು (ವಾಸ್ತವವಾಗಿ ಅವರು ಹೇಳಿದ್ದಾ ಅಂತ ನಂಬುವುದಕ್ಕೂ ಕಷ್ಟ ಇದೆ ಈ ಜಾಲತಾಣ ಯುಗದಲ್ಲಿ) ಅವರ ಮಾತುಗಳನ್ನು ಹಂಚಿಕೊಂಡು ಕೃತಾರ್ಥರಾಗುತ್ತೇವೆ. ಆ ಸ್ಟೇಟಸ್ಸಿನಲ್ಲಿ ಹಾಕಿದ ಮಾತುಗಳ ಒಂದು ಸಾಲನ್ನೂ ಬಹುತೇಕರು ಅನುಸರಿಸುವ ಪ್ರಯತ್ನ ಮಾಡುವುದಿಲ್ಲ. ಅಲ್ಲಿಗೆ ಏನು ಸಾಧನೆಯಾಯಿತು? ನಮ್ಮ ಹತಾಶೆಯನ್ನು, ಬೇಸರವನ್ನು, ಕೋಪವನ್ನು, ವೈಯಕ್ತಿಕ ಆಕ್ರೋಶಗಳನ್ನೆಲ್ಲ ಅಕ್ಷರ ರೂಪದಲ್ಲಿ ಸ್ಟೇಟಸ್ಸಿಗೆ ತಂದು ರಾಶಿ ಹಾಕಿದಲ್ಲಿಗೆ ಬದಲಾದೆವು, ಯಾರಿಗೋ ಪಾಠ ಕಲಿಸಿದೆವು, ನನ್ನ ಸಿಟ್ಟು ತಣಿಯಿತು ಎಂದೆಲ್ಲ ಬರಿದೇ ಭಾವಿಸಿಕೊಳ್ಳುತ್ತೇವೆ. ಮರುದಿನದಿಂದ ನಮ್ಮದು ಅದೇ ಹಠ, ಅದೇ ಸಂಶಯ, ಅದೇ ಮುಂಗೋಪ ಇತ್ಯಾದಿ ಇತ್ಯಾದಿ ಮುಂದುವರಿಯುತ್ತದೆ. ಹಾಗಾದರೆ ಇಲ್ಲಿ ಬದಲಾಗಿದ್ದೇನು? ನಮ್ಮ ಸ್ಟೇಟಸ್ಸು ಮಾತ್ರ!!! ಆ ಸ್ಟೇಟಸ್ಸೂ ಅಷ್ಟೇ 24 ಗಂಟೆಗಳಲ್ಲಿ ತನ್ನಿಂತಾನೇ ಮಾಯವಾಗುತ್ತದೆ, ನಮ್ಮ ಬದಲಾಗದ ಮನಸ್ಸುಗಳ ಹಾಗೆ!!!! ಹಾಗಾದರೆ ಬ್ಯೂಟಿ ಮೋಡಿನಲ್ಲಿ ತೆಗೆದು ಶೇರ್ ಮಾಡುವ ಡಿಪಿ, ಯಾರ್ಯಾರೋ ಬರೆದ ಮಾತುಗಳನ್ನು ಹಾಕಿದ ಸ್ಟೇಟಸ್ಸು, ಸತ್ಯವೋ, ಸುಳ್ಳೋ ಗೊತ್ತಿಲ್ಲದೆ ಬರುವ ಫಾರ್ವರ್ಡೆಡ್ ಮೆಸೇಜುಗಳು ಇವುಗಳ ಬದಲಾವಣೆ ಆಧಾರದಲ್ಲಿ ವ್ಯಕ್ತಿಗಳನ್ನು ಅಳದರೆ, ತೀರ್ಪು ನೀಡಿದರೆ ಅದು ಎಷ್ಟರ ಮಟ್ಟಿಗೆ ಸರಿಯಾದೀತು ಹೇಳಿ, ಯೋಚಿಸಿ.

8)      ಅಷ್ಟು ಮಾತ್ರವಲ್ಲ, ನಮ್ಮ ಘನತೆಯನ್ನು ಮೌಲ್ಯವನ್ನು ನಾವು ನಮಗೆ ಬರುವ ಲೈಕುಗಳು, ಕಮೆಂಟುಗಳು, ಸ್ಟೇಟಸ್ಸನ್ನು ನೋಡಿದವರ ಸಂಖ್ಯೆ, ಗ್ರೂಪಿನಲ್ಲಿ ನಮ್ಮ ಸಂದೇಶಗಳಿಗೆ ಬರುವ ಇಮೋಜಿಗಳ ತೂಕದಲ್ಲಿ ಲೆಕ್ಕ ಹಾಕುತ್ತೇವೆ!!!! ಪರಸ್ಪರ ಒಳಗಿಂದೊಳಗೆ ಕಂಡರಾಗದಿದ್ದರೂ ಹೃದಯದ ಚಿತ್ರವಿರುವ ಇಮೋಜಿಯನ್ನೇ ಬಳಸಿ ಗ್ರೂಪುಗಳಲ್ಲಿ ಹಾಕುವ ಕಮೆಂಟುಗಳು, ಓದದೇ ನೀಡುವ ಲೈಕುಗಳು, ಯಾಂತ್ರಿಕವಾಗಿ ಸಬ್ ಸ್ಕ್ರೈಬ್ ಮಾಡುವ ಯೂಟ್ಯೂಬ್ ಚಾನೆಲ್ಲುಗಳು ಇವುಗಳ ನಮ್ಮ ಮೌಲ್ಯವನ್ನು, ತಾಕತ್ತನ್ನು ನಿರ್ಧಾರ ಮಾಡುವ ಅಂಶಗಳ?!!! ನಮಗೆ ಯಾಕೆ ಅರ್ಥವಾಗುವುದಿಲ್ಲ ಈ ಸೂಕ್ಷ್ಮಗಳು?

9)      ONLINE ಇರುವುದೇ ಮನುಷ್ಯನ ಅಸ್ತಿತ್ವದ ಸಂಕೇತ ಎಂದು ಭಾವಿಸುವಷ್ಟು ನಾವು ಮಾನಸಿಕವಾಗಿ ದುರ್ಬಲರು ಅಂತಾದರೆ ಮನುಷ್ಯಾವಸ್ಥೆಯಲ್ಲಿ ಒಬ್ಬನ ಮೊಬೈಲ್ ಸಿಂ ಸಮೇತ ಕಳೆದುಹೋಯಿತು, ನೀರಿಗೆ ಬಿತ್ತು, ಬೆಂಕಿಗೆ ಬಿತ್ತು ಅಂತ ಇಟ್ಟುಕೊಳ್ಳೋಣ. ಆ ಕ್ಷಣದಿಂದ ಆತ ಆಫ್ ಲೈನ್ ಆಗ್ತಾನೆ, ಕಾಲ್ ಮಾಡಿದರೂ ಸಿಗುವುದಿಲ್ಲ, ಹೊಸ ಮೊಬೈಲ್ ಬರುವ ತನಕ ವಾಟ್ಸಪ್ಪಿನಲ್ಲೂ ಇರುವುದಿಲ್ಲ. ಹಾಗಾದರೆ ಅವ ಸತ್ತೇ ಹೋದ, ಇನ್ನಿಲ್ಲ ಅಂತ ಭಾವಿಸಿ RIP, RIP ಅಂತ ಹಾಕ್ತೀರ?! ಎರಡು ದಶಕಗಳ ಹಿಂದಿನ ಲ್ಯಾಂಡ್ ಲೈನ್ ಫೋನಿನ ಜಮಾನಾ, ಪತ್ರವ್ಯವಹಾರದ ಸುಖ ಅನುಭವಿಸಿದವರೂ ಇಂದು ಬದುಕೆಂದರೆ ಆನ್ ಲೈನ್ ಎಂದೇ ತೀರ್ಮಾನಕ್ಕೆ ಬರುತ್ತಿರುವುದು ಸಮಕಾಲೀನ ಅಂತ ನನಗೆ ಅನ್ನಿಸುವುದಿಲ್ಲ, ಪ್ರಜ್ಞಾವಂತ ಮನಸ್ಸುಗಳೂ ಯಾಂತ್ರಿಕ ಹಾಗೂ ಜಾಲತಾಣದ ಕಂಬಂಧ ಬಾಹುಗಳಲ್ಲಿ ಕಳೆದು ಹೋಗುತ್ತಿರುವ ದ್ಯೋತಕ ಅಷ್ಟೇ.

10)   ನಮ್ಮ ಸಂವಹನಕ್ಕೋಸ್ಕರ ಮೊಬೈಲ್ ಇರುವುದೇ ಹೊರತು, ಮೊಬೈಲಿಗೋಸ್ಕರ ನಾವಲ್ಲ. ಈ ಆನ್ ಲೈನ್ ಎನ್ನುವುದು ಒಂದು ಸಂವಹನ ಸಾದ್ಯತೆಯ ಪ್ರತೀಕ, ಅದು ನಮ್ಮ ಬದುಕಿಗೆ ಪೂರಕವೇ ಹೊರತು ಅದೇ ಬದುಕಲ್ಲ, ಅದು ನಮ್ಮ ಆಧಾರ್ ಕಾರ್ಡೂ ಅಲ್ಲ, ಅದು ನಮ್ಮ ಇರುವಿಕೆಯ ಸಂಕೇತವಂತೂ ಅಲ್ಲೇ ಅಲ್ಲ, ಆಗಲೂ ಬಾರದು. ನಮಗೆ ಕೆಲ ಹೊತ್ತಾದರೂ ಆನ್ ಲೈನ್ ಥರವೇ ಆಫ್ ಲೈನಲ್ಲೂ ಬದುಕು ಕಟ್ಟಿಕೊಳ್ಳಲು, ಆಫ್ ಲೈನ್ ಖುಷಿಯನ್ನು ಅನುಭವಿಸಲು ಸಾಧ್ಯವಾಗಬೇಕು. ONLINE ವಿಮರ್ಶಕರು ನಾವು ಸತ್ತೆವೆಂದು ತೀರ್ಪು ಕೊಟ್ಟರೂ ಪರವಾಗಿಲ್ಲ (ಅದು ಅವರ ಸೀಮಿತ ತಿಳಿವಳಿಕೆಯನ್ನು ತೋರಿಸುತ್ತದೆ ಅಷ್ಟೆ) ಒಮ್ಮೊಮ್ಮೇ ಆಫ್ ಲೈನ್ ಹೋಗಿಯೂ ಜೀವಿಸಬೇಕು. ಚೌಕಟ್ಟಿನೊಳಗೇ ಸುತ್ತಾಡಿ ಭ್ರಮೆಗಳಿಗೆ ಸಿಲುಕಿ, ONLINE ತೀರ್ಪುಗಾರರ ಮೆಚ್ಚುಗೆ ಗಳಿಸುವ ಸ್ಪರ್ಧಿಗಳಾಗಿ ಸಾಧಿಸುವುದಕ್ಕೇನೂ ಇಲ್ಲ. ಆನ್ ಲೈನಿಗೈ ಸೀಮೀತರಾಗದೆ ಬದುಕಲು, ಅದರಿಂದಾಚೆಗೆ ಯೋಚಿಸಲು, ಚಿಂತಿಸಲು ಸಾಧ್ಯವಾಗುವಂಥಹ ಮನಸ್ಸನ್ನು ಕಟ್ಟಿಕೊಳ್ಳಬೇಕು... ನಮ್ಮ ಯೋಚನೆ, ಚಿಂತನೆ, ನಂಬಿಕೆಗಳೇ ನಾವು ಹೊರತು ದುಡ್ಡು ಕೊಟ್ಟು ಖರೀದಿಸಿದ ಮೊಬೈಲ್ ತೋರಿಸುವ online ನಾವಾಗಬಾರದು!!!

ಆನ್ ಲೈನ್ ಜಗತ್ತನ್ನೇ ಮಾನದಂಡವಾಗಿ ವಿಮರ್ಶಿಸುವಾಗಲೂ ಅಷ್ಟೇ.... ನಾನು ಫ್ರೀ ಇದ್ದರೆ ಜಗತ್ತೇ ಫ್ರೀ, ನಾನು ಬಿಝಿ ಇದ್ದರೆ ಜಗತ್ತೇ ಬಿಝಿ ಎಂಬ ಕೂಪಮಂಡೂಕದ ಯೋಚನೆ, ನನ್ನ ಊಹೆ, ಕಲ್ಪನೆ, ನಾನು ಲೆಕ್ಕ ಹಾಕಿದ್ದೆ ನಿಜ ಎಂಬ ಭ್ರಮೆಯಲ್ಲಿ ಬಡಬಡಿಸುವಾಗ ಇತರರಿಗೂ ನಮ್ಮ ಹಾಗೆ ಮನಸ್ಸು, ವೈಯಕ್ತಿಕ ಬದುಕು, ನೋವು, ಬೇಸರ, ಆಘಾತ, ಒತ್ತಡ, ಅಸಹಾಯಕತೆಗಳೆಲ್ಲ ನಮಗಿರುವ ಹಾಗೆಯೇ ಇರುತ್ತದೆ ಎಂಬ ವಿವೇಚನೆ ಇದ್ದರೆ ಸಾಕು. ಈ ಯಾವ ಅಸಹಜ ನಡವಳಿಕೆಗಳೂ ಯಾರನ್ನೂ ಕಾಡಲಿಕ್ಕಿಲ್ಲ. ಏನಂತೀರಿ?

-
ಕೃಷ್ಣಮೋಹನ ತಲೆಂಗಳ (16.05.2021)

 

 

 

 

 

 

 

 

 

 

 

 

No comments: