Friday, September 26, 2008

ಕೇಳಲೊಂಥರಾ... ಥರಾ...!

ಮುಂಗಾರುಮಳೆ ಬಾಕ್ಸ್ ಆಫೀಸಲ್ಲಿ ಹಿಟ್ ಆಗಿದ್ದು ಮಾತ್ರ ಅಲ್ಲ. ಕಳೆದು ಹೋಗುತ್ತಿದ್ದ ಕನ್ನಡದ ಸುಮಧುರ ಚಿತ್ರಗೀತೆಗಳ ಪರ್ವವನ್ನು ಮತ್ತೆ ಶುರುವಿಟ್ಟುಕೊಂಡಿತು. ವಿಶೇಷವಾಗಿ ಸಾಹಿತ್ಯದ ಕೋನದಿಂದ ನೋಡಿದ್ರೆ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಂ -ಸಂಗಮ ‘ಮುಂಗಾರು ಮಳೆ’ಯ ನಂತರವೂ ಹಲವು ಚಿತ್ರಗಳಲ್ಲಿ ಕಿವಿಗಿ೦ಪಾದ ಹಾಡುಗಳನ್ನು ಕೊಟ್ಟಿದೆ. ಹೆಚ್ಚು ಕಡಿಮೆ ಉಳಿದೋರು ಅದೇ ಟ್ರೆಂಡ್ ಮುಂದುವರಿಸಿದ್ರು ಅಂತಾನೇ ಹೇಳ್ಬಹುದು
... ನಿನ್ನಿಂದಲೇ..., ಮಳೆ ನಿಂತು ಹೋದ ಮೇಲೆ, ಮಿಂಚಾಗಿ ನೀನು ಬರಲು.., ಈ ಸಂಜೆ ಯಾಕಾಗಿದೆ..., ನಾದಿಂ ಧೀಂತನಾ..., ನೀನು ಬಂದ ಮೇಲೆ ತಾನೆ..., ಹೇಳಲೊಂಥರಾ ಥರಾ..., ಏನಾಗಲೀ ಮುಂದೆ ಸಾಗು ನೀ..., ನನಗು ಒಬ್ಬ ಗೆಳೆಯ ಬೇಕು.. ಹೀಗೆ ಸಾಲು ಸಾಲು ಇಂಪಾದ ಹಾಡುಗಳು ಕನ್ನಡ ಸಿನಿಮಾದಲ್ಲಿ ಬರ್ತಾ ಇವೆ. ಎವರ್‍ ಗ್ರೀನ್ ಹಾಡುಗಳ ಜಮಾನ ಎಲ್ಲಿ ಮುಗಿದು ಹೋಯಿತೋ ಅಂದುಕೊಳ್ಳುವಷ್ಟರಲ್ಲಿ, ಜನ ಒಳ್ಳೆ ಹಾಡು ಕೊಟ್ರೆ ಕೇಳೇ ಕೇಳ್ತಾರೆ ಅಂತ ಪ್ರೂವ್ ಆಗಿದೆ...
ಈ ನಡುವೆ ಸತ್ಯ ಭಾಮಾ ಬಾರಮ್ಮ..., ಕೊಲ್ಲೇ ನನ್ನನ್ನೇ..., ನಿನ್ನಾ ಪೂಜೆಗೆ ಬಂದೆ ಮಾದೇಶ್ವರ..., ಜಿಂಕೆ ಮರೀನಾ... ಸ್ಟ್ಯಲ್ ಹಾಡುಗಳೂ ಹಿಟ್ ಆಗಿವೆ... ದೇಶೀಯ ಸಂಗೀತ ಹಾಳಾಗ್ತಾ ಇದೆ ಅಂತ ಎಷ್ಟು ಬಾಯಿ ಬಾಯಿ ಬಡ್ಕೊಂಡ್ರೂ ‘ಟೇಸ್ಟ್ ಬದಲಾವಣೆ ಅನ್ನೋದು ತನ್ನ ಪಾಡಿಗೆ ವಿಚಿತ್ರವಾಗಿ ಆಗ್ತಾನೇ ಇರ್‍ತದೆ’! ಆದರೆ ಒಂದು ಸಂಶಯ-ಅಭಿರುಚಿಯನ್ನ ಜನಕ್ಕೆ ಬೇಕಾದ ಹಾಗೆ ಇಂಡಸ್ಟ್ರಿ ಕೊಡುತ್ತೋ? ಅಥವಾ ಇಂಡಸ್ಟ್ರಿ ಕೊಟ್ಟದ್ದನ್ನ ಜನ ಸ್ವೀಕರಿಸಲೇ ಬೇಕಾಗುತ್ತೋ ಅಂತ?

Monday, September 8, 2008

ಏನಾಗಲೀ...ಮುಂದೆ ಸಾಗು ನೀ...

ರೀಶ ಹಾಗೆ ಹೋಗ್ಬಹುದು ಅಂತ ನಾವು ಯಾರೂ ಅಂದ್ಕೊಂಡಿರ್‍ಲಿಲ್ಲ. ಅದು ಹಾಗೇ ಅಲ್ವ? ಸಾವು ಮುಹೂರ್ತ ನೋಡಿ ಬರೋದಿಲ್ಲ.
ಅಂದು ಬೆಳಿಗ್ಗೆ ೭.೩೦ಕ್ಕೆ ಅವನ ಪಕ್ಕದ ಮನೆಯೋರು ಯಾರೋ ನಂಗೆ ಫೋನ್ ಮಾಡಿ ಹೇಳಿದಾಗ್ಲೇ ಗೊತ್ತಾಗಿದ್ದು, ಹರೀಶ ಇನ್ನಿಲ್ಲ ಅಂತ. ಸಾವಿಗೆ ಸಿಕ್ಕ ಸುಂದರ ಕಾರಣ ‘ಇಲಿ ಜ್ವರ’ ಅಂತ! ಅದೂ ಅಷ್ಟೆ, ಅವನಿಗೆ ಇಲಿ ಜ್ವರ ಬಂದಿತ್ತು ಅಂತಾನೂ ನಂಗೆ ಗೊತ್ತಾಗಿದ್ದು ಅವನ ‘ಪ್ರಯಾಣ’ ಮುಗಿದ ಮೇಲೇನೆ. ಇದಕ್ಕೆ ಸರಿಯಾಗಿ ಒಂದು ವಾರ ಮೊದಲು ಫಾರೂಕ್ ಮದುವೆಗೆ ನಾವೆಲ್ಲಾ ಸ್ನೇಹಿತರು ಸೇರಿದ್ರೂ ಹರೀಶ ‘ಬಸ್ ತಪ್ಪಿತು’ಅಂತ ತಪ್ಪಿಸಿಕೊಂಡಾಗ ನಾನೇ ಬೈದಿದ್ದೆ (ಮೊಬೈಲ್‌ನಲ್ಲಿ) ಅದೇ ಕೊನೆ ನಾನು ಅವ್ನ ಹತ್ರ ಮಾತಾಡಿದ್ದು. ಸರಿಯಾಗಿ ಒಂದು ವಾರದ ನಂತ್ರ ಸತ್ತ ಸುದ್ದಿ. ಪುಣ್ಯಾತ್ಮ ಹೇಳನೇ ಇಲ್ಲ ತನಗೆ ಜ್ವರ ಬಂದಿತ್ತು ಅಂತ. ಆಫ್ಟರಾಲ್ ಅವನಿಗೇ ಗೊತ್ತಿರ್‍ಲಿಲ್ಲ ತನಗೆ ವಕ್ಕರಿಸಿದ್ದು ಇಲಿ ಜ್ವರ ಅಂತ. ಏನೇನೂ ಆರಾಮ ಇಲ್ಲ ಅಂತ ಭಾನುವಾರ ರಾತ್ರಿ ಮಂಗಳೂರಲ್ಲಿ ಆಸ್ಪತ್ರೆ ಐಸಿಯುನಲ್ಲಿ ಸೇರಿದೋನು ಸೋಮವಾರ ಬೆಳಿಗ್ಗೆ ೬,೩೦ರ ಹೊತ್ತಿಗೆ ಹೆಣವಾಗಿದ್ದ.
ನಾನು, ಫಾರೂಕ್, ಜಗ್ಗ, ನವೀನ ದಾರಿ ಹುಡ್ಕೊಂಡು ಹರೀಶನ ಮನೆಗೆ ಹೋಗೋ ಹೊತ್ತಿಗೆ ಬಾಡಿ ಬರ್ತಾ ಇತ್ತು. ಮದುವೆಗೆ ಬಾರದಿದ್ರೂ ಒಂದು ವಾರದೊಳಗೆ ಎಲ್ಲಾದರೂ ಮೀಟ್ ಆಗುವ ಅಂತ ನಾವು ಆರು ಜನ (೫ ವರ್ಷ ಒಟ್ಟಿಗೆ ಕಲ್ತ ನಮ್ಮದೊಂದು ಗ್ರೂಪ್ ಇದೆ) ಮಾತಾಡ್ಕೊಂಡೂ ಇದ್ದೆವು. ಆದ್ರೆ ಅಂಥಹ ಪರಿಸ್ಥಿತಿಲಿ ಹರೀಶನ ಬಾಯಿಗೆ ತುಳಸಿ ತೀರ್ಥ ಹಾಕೋದಿಕ್ಕೆ ಸೇರ್ತೇವೆ ಅಂತ ಖಂಡಿತಾ ಅಂದ್ಕೊಂಡಿರ್‍ಲಿಲ್ಲ. ‘ಇಲಿ ಜ್ವರಕ್ಕೆ ಉಪನ್ಯಾಸಕ ಬಲಿ’ ಅಂತ ಸಿಂಗಲ್ ಕಾಲಂ ಸು‌ದ್ದಿ ಆದಲ್ಲಿಗೆ ಹರೀಶ ಕಣ್ಮರೆಯಾಗಿ ಬಿಡ್ತಾನಾ? ಹರೀಶನಂತೋರು ಸತ್ತಲ್ಲಿಗೆ ಯಾರಿಗೂ ತುಂಬಲಾರದ ನಷ್ಟ ಆಗೋದಿಲ್ವ? ಈ ಸಾವು ನ್ಯಾಯವ? ಅಂತ ಅನ್ನಿಸ್ತಾನೆ ಇರ್‍ತದೆ. ಬಟ್, ತುಂಬ ಬಳಲೋದು ಅವನ ಫ್ಯಾಮಿಲಿ.
ಪಿಯುಸಿ ಓದ್ತಾ ಇದ್ದಾಗ್ಲೆ ಹರೀಶನ ತಂದೆ ಸತ್ರು. ಅವರಿವರ ತೋಟಕ್ಕೆ ನೀರು ಹಾಕಿ ಕೂಲಿ ಮಾಡಿ ಕಾಲೇಜಿಗೆ ಬರ್ತಾ ಇದ್ದ ಹರೀಶ ಅಕೌಂಟನ್ಸಿಯಲ್ಲಿ ೧೦೦/೧೦೦ ತೆಗೀತಾ ಇದ್ದಿದ್ದು ಈಗ್ಲೂ ನೆನಪಿದೆ. ಡಿಗ್ರಿ ಮುಗಿದ ಮೇಲೆ ವಿಚಿತ್ರ ತಲೆನೋವು ಬಂದು ಒಂದು ವರ್ಷ ಮನೇಲಿ ಕೂತ. ಸ್ನೇಹಿತರ ಒತ್ತಾಯಕ್ಕೆ ಎಂ.ಕಾಂ. ಮಾಡಿದ್ದೇ ಮಾಡಿದ್ದು, ೩ ಕಡೆ ಪಾರ್ಟ್ ಟೈಂ ಕೆಲ್ಸಾ ಸಿಕ್ತು. ಹಾಗೆ ಟೆಂಪರರಿ ಕೆಲ್ಸಾ ಮಾಡ್ತಾ ಇದ್ದೋನಿಗೆ ಸಾಯೊಕಿಂತ ೨ ತಿಂಗಳು ಮೊದಲಷ್ಟೇ ಪರ್ಮನೆಂಟ್ ಕೆಲ್ಸಾ ಆಗೋ ಪ್ರಕ್ರಿಯೆ ಶುರು ಆಗಿತ್ತು ನಂಗೇ ಫೋನ್ ಮಾಡಿದ್ದ ಕೂಡ. ತನ್ನ ಗೆಳತಿಯ ಬಗ್ಗೂ ತುಂಬಾ ಹೇಳ್ತಾ ಇದ್ದ. ಒಬ್ಬ ತಂಗಿ, ಇಬ್ಬರು ತಮ್ಮ, ಅಮ್ಮನನ್ನು ನೋಡ್ಕೋತಾ ಇದ್ದ ಹರೀಶ ಏಕಾಏಕಿ ಹೋಗಿಬಿಟ್ಟಿದ್ದಾನೆ.
ಯಾವತ್ತೂ ತನ್ನ ಆರ್ಥಿಕ ಕಷ್ಗಗಳನ್ನ ಅನಿವಾರ್ಯ ಅನ್ನಿಸದ ಹೊರತೂ ಹೇಳ್ತಾ ಇರ್‍ಲಿಲ್ಲ. ಉಪನ್ಯಾಸಕ ಆದ ಮೇಲು ಭಾನುವಾರಗಳಲ್ಲಿ ಹರೀಶ ತಾನು ಮೊದಲು ಕೆಲ್ಸಕ್ಕೆ ಹೋಗ್ತಾ ಇದ್ದ ಮನೆಗಳಿಗೆ ಗೊಬ್ಬರ ಹೊರೋಕೆ ಹೋಗ್ತಾ ಇದ್ನಂತೆ. ಹಾಗಂತ ಅವನ ಪಕ್ಕದ ಮನೆಯ ಭಟ್ರು ಹೇಳಿದ್ರು. ಒಬ್ಬ ಮೌನಿ, ಸರಳ, ಕಷ್ಟಪಟ್ಟು ಬದುಕಿ ಸ್ವಾಭಿಮಾನದಿಂದ ನಮ್ಮ ಕಣ್ಣೆದುರೇ ಮೇಲೆ ಬಂದ ಗೆಳೆಯ ದಿಢೀರ್‍ ತೊರೆದು ಹೋಗಿದ್ದು ಖಂಡಿತಾ ನ್ಯಾಯವಲ್ಲ. ಕಳೆದ ಮಾರ್ಚ್‌ನಲ್ಲಿ ನಾವೆಲ್ಲಾ ಪಿಲಿಕುಳಕ್ಕೆ ಹೋಗಿ ಒಟ್ಟಿಗೆ ಫೋಟೊ ತೆಗೆಸ್ಕೊಂಡದ್ದೇ ಕೊನೆ.
ಇದು ಒಬ್ಬ ಹರೀಶನ ಕಥೆ. ನನ್ನ ಗೆಳೆಯನಾಗಿದ್ದಕ್ಕೆ ಇಷ್ಟೆಲ್ಲಾ ಗೊತ್ತು. ನಮ್ಮ ಜಿಲ್ಲೆಯಲ್ಲಿ ಕೊನೆಗಾಲಕ್ಕೆ ಜ್ವರ ಬಂದ ನೆಪದಲ್ಲಿ ಚಿಕೂನ್ ಗುನ್ಯಾ ಕಾಡಿ ಹೆಚ್ಚು ಕಡಿಮೆ ೭೫ ಜನ ತೀರಿಹೋಗಿ‌‌ದ್ದಾರೆ. ಪ್ರತಿ ಮನೆಯಲ್ಲೂ ಇಂಥದ್ದೊಂದು ನೋವಿನ ಎಳೆ ಇರಲೇಬೇಕು. ಆದರೆ ಮಾಧ್ಯಮಗಳಿಗೆ ಸಾವು ಸಂಖ್ಯೆ ಮಾತ್ರ! ಸಾವಿನ ಮನೆಯಲ್ಲಿ ಆವರಿಸಿಕೊಳ್ಳೋ ದುಃಖ ಸ್ಮಶಾನ ವೈರಾಗ್ಯ. ಆ ಅನುಕಂಪ, ಹೊಗಳಿಕೆ ಜೊತೆಗೆ ಒಬ್ಬ ಸತ್ತಾಗ ಬದುಕು ಕ್ಷಣಿಕ ಅಂದುಕೊಳ್ಳೋ ಅಷ್ಟೂ ಮಂದಿ ದಿನಕಳೆದಂತೆ ನಾರ್ಮಲ್ ಆಗ್ತಾರೆ. ತುಂಬಲಾರದ ನಷ್ಟ ಅನುಭಸೊದು, ಆ ಪ್ರೀತಿಯನ್ನು ಕಳಕೊಳ್ಳೋರು ಹರೀಶನ ಅಮ್ಮ, ತಂಗಿ, ತಮ್ಮಂದ್ರು. ಸದ್ದಿಲ್ಲದೆ, ಯಾರಿಗೂ ಉಪದ್ರ ಕೊಡದೆ ಬದುಕಿ ಹೋದ ಹರೀಶನಂತೋರ ಬಗ್ಗೆ ಬರೆಯೋಕೆ ಕಾಲಂಗಳೇ ಇರೋದಿಲ್ಲ ಅಲ್ವ? ಅಗಲಿದ ಮೇಲೇನೆ ಬೆಲೆ ಸ್ಹಷ್ಟವಾಗಿ ಗೊತ್ತಾಗೊದು. ಆ ನಷ್ಟ ಲೆಕ್ಕಕ್ಕೆ ಸಿಗೋದಲ್ಲ!

Sunday, September 7, 2008

ನಾಳಿನ ಪ್ರಜೆಗಳ ‘ಸರಿಗಮಪ...’

ಹುಷಃ ಟಿ.ವಿ.ನಲ್ಲಿ‘ಕ್ಯೋಂ ಕೀ ಸಾಸ್ ಭೀ...’ ಶೈಲಿಯ ಅತ್ತೆಗೊಂದು, ಸೊಸೆಗೊಂದು ಕಾಲ ಹೋಯ್ತು. ಈಗ ಏನಿದ್ರೂ ಮಕ್ಕಳದ್ದೇ ಕಾಲ, ಕಾರುಬಾರು. ಈ ಕ್ಷಣಕ್ಕೂ ಯಾವುದೇ ಕನ್ನಡ ಚಾನೆಲ್ ಹಾಕ್ ನೋಡಿ. ಚಿಲ್ಡ್ರನ್ಸ್ ಸ್ಪೆಷಲ್ ಯಾವುದಾದ್ರೂ ರಿಯಾಲಿಟಿ ಶೋ ಇದ್ದೇ ಇರುತ್ತೆ. ನಿಜವಾಗ್ಲೂ, ತಲೆ ಚಿಟ್ಟು ಹಿಡಿಸೋ ಧಾರಾವಾಹಿಗಳು, ತಲೆಗೂದಲು ಬಿಚ್ಚಿ ಹಾಕಿ ಮಾತುಮಾತಿಗೂ ತಲೆಕೆಟ್ಟೋರ ಥರ ವಿನಾ ಕಾರಣ ನಗ್ತಾ ಮಾತಾಡೋ ಸಿನಿಮಾ ಹೀರೋಯಿನ್‌ಗಳ ಸ್ಟೀರಿಯೋಟೈಪ್ ಇಂಟರ್‌ವ್ಯೂ ನೋಡಿ ತಲೆಕೆಡಿಸ್ಕೊಂಡೋರಿಗೆ ಇದೊಂದು ಚೇಂಜ್. ಮಕ್ಕಳ ಮುಗ್ಧ ಮಾತು, ನಗು, ಹೊಳಪು ಕಂಗಳು ಖಂಡಿತಾ ಇಷ್ಟ ಆಗ್ತದೆ. ಆದ್ರೆ ಒಂದು ಚಾನೆಲ್ ಶುರು ಮಾಡ್ತು ಅಂತ ಎಲ್ಲರೂ ಡಿಟ್ಟೋ ಅಂತದ್ದೇ ಕಾರ್‍ಯಕ್ರಮ ಮಾಡ್ತಾ ಇರೊದು ಮಾತ್ರ ಬೇಸರದ ಸಂಗತಿ. ಆರಂಭದಿಂದಲೂ ತನ್ನದೇ ಶೈಲಿಯಿಂದ ಜನಪ್ರಿಯವಾಗಿರೋ ಈಟಿವಿಯ ‘ಎದೆ ತುಂಬಿ ಹಾಡುವೆನು’ ಹೊರತುಪಡಿಸಿ, ಇತರ-ಝೀಟಿವಿಯ ‘ಸರಿಗಮಪ... ಲಿಟ್ಲ್ ಚ್ಯಾಂಪ್ಸ್’, ಉದಯ ಟಿ.ವಿ.ಯ ಹಾಡು ಬಾ ಕೋಗಿಲೆ... ಝೀಟಿವಿಯ ‘ಕುಣಿಯೋಣು ಬಾ...ರ’ ಇತ್ಯಾದಿಗಳನ್ನು ನೋಡಿದಾಗ ಕೆಲವು ಸಮಸ್ಯೆಗಳು ಕಾಡುತ್ವೆ... ನಿಮ್ಮನ್ನೂ ಕಾಡಿರ್‍ಬಹುದು.. ೧) ತೀರ್‍ಪುಗಾರರಾಗಿ ಬರೋ ಕನ್ನಡದ ಜನಪ್ರಿಯ ನಟ ನಟಿಯರು, ಗಾಯಕರು ‘ತುಂಬ ಕಷ್ಟದಿಂದ’ ಕನ್ನಡ ಮಾತಾಡೋದು ಯಾಕೆ? ೨) ತೀರ್‍ಪುಗಾರರ ಕನ್ನಡದೋರೇ ಆಗಿರೋವಾಗ ತಮ್ಮ ಸಂಭಾಷಣೆಯ ಮುಕ್ಕಾಲು ಭಾಗವನ್ನೂ ಇಂಗ್ಲಿಷ್‌ನಲ್ಲಿ ಮಾತಾಡ್ಬೇಕಾದ ಅನಿವಾರ್‍ಯತೆ ಏನಿದೆ? ೩) ಒಂದು ಮಗು ಕಾರ್‍ಯಕ್ರಮದಿಂದ ಹೊರಹೋಗೋ ಸನ್ನಿವೇಷವನ್ನು ದುಃಖದ ಹಿನ್ನೆಲೆ ಸಂಗೀತ ನೀಡಿ ‘ಮಹಾ ದುರಂತ’ನಡೀತು ಅನ್ನೋ ಥರ ಮಾಡಿ, ಪುಟ್ಟ ಮಕ್ಕಳ ಕಣ್ಣಲ್ಲಿ ನೀರು ತರ್‍ಸೋ ಕ್ರೂರತೆ ಯಾಕೆ? ೪) ಎಸ್‌ಎಂಎಸ್ ಮಾಡೋ ಎಲ್ಲಾ ವೀಕ್ಷಕರಿಗೆ ಸಂಗೀತ ಜ್ಞಾನ ಇರ್‍ಬೇಕಾಗಿಲ್ಲ, ಹಾಗಿರುವಾಗ ಅತಿ ಹೆಚ್ಚು ಎಸ್‌ಎಂಎಸ್‌ ಪಡೆದ ಮಗು ವಿನ್ನರ್‍ ಅನ್ನೋದು ಎಷ್ಟರಮಟ್ಟಿಗೆ ಸರಿ? ಮುಂದೆ ಆ ಮಗು ತನ್ನ ತಪ್ಪುಗಳನ್ನು ತಿದ್ದಿಕೊಳ್ಳೋದು ಹೇಗೆ? ೫) ಮಗುವಿಗೆ ಅರ್ಥನೇ ಗೊತ್ತಿಲ್ಲದಿರೋ ವಯಸ್ಕ ಹಾಡುಗಳನ್ನ ಹೇಳಿಸಿ, ಡ್ಯಾನ್ಸ್ ಮಾಡಿಸಿ ‘ಎಕ್ಸ್ ಪ್ರೆಷನ್ ಸಾಲದು’ಅಂತ ಕಮೆಂಟ್ ಕೊಟ್ರೆ ಮಗು ಏನು ಮಾಡ್ಬೇಕು? ಉದಾ- ಕುಣಿಯೋಣು ಬಾರಾದಲ್ಲಿ ಮೊನ್ನೆ ಮೂಡುಬಿದಿರೆಯ ಪಂಚಮಿ ‘ಹುಡುಗಾ ಹುಡುಗಾ..’ಹಾಡಿಗೆ ಮೈ ಕುಲುಕಿಸಿ ಡ್ಯಾನ್ಸ್ ಮಾಡಿದ್ಲು. ೮ರ ಹುಡುಗಿ ಹತ್ರ ಅಂಥ ಡ್ಯಾನ್ಸ್ ಮಾಡ್ಸೊದು ಅನಿವಾರ್‍ಯನಾ? ೬) ೧೦-೧೨ರ ಮಕ್ಕಳು ಹಾಡುವ ಜೊತೆಗೆ ಕಿವಿಗೆ ಮೈಕ್ರೋಫೋನ್ ಇಟ್ಕೊಂಡು ತನ್ನದೇ ವಯಸ್ಸಿನ ಹುಡುಗ ಅಥವಾ ಹುಡುಗಿ ಜೊತೆ ಕುಣ್ಕೊಂಡು ಹಾಡ್ಬೇಕು! (ಹಾಡು ಬಾ ಕೋಗಿಲೆ) ಯಾಕೆ, ನಮ್ಮ ಹಿನ್ನೆಲೆ ಗಾಯಕರೆಲ್ಲ್ಲಾ ಕುಣ್ಕೊಂಡೇ ಸ್ಟುಡಿಯೋದಲ್ಲಿ ಹಾಡ್ತಾರಾ? ಹಿನ್ನೆಲೆ ಗಾಯಕ ಆಗೋನಿ/ಳಿಗೆ ಕುಣಯೋಕೂ ಗೊತ್ತಿರ್‍ಬೇಕು ಅನ್ನೋದು ಎಲ್ಲಿಯ ಕಾನೂನು ಸ್ವಾಮಿ? ೭) ಶಾರ್ಟ್ಸ್ ಹಾಕಿದೋರಿಗೆ ಸಂಸ್ಕೃತಿ ಇಲ್ಲ ಅಂತಲ್ಲ, ಆದ್ರೂ ಆ ಪುಟ್ಟ ಮಕ್ಕಳಿಗೂ ಮೊಣಕಾಲು ವರೆಗಿನ ಸ್ಕರ್ಟ್, ಟೈಟ್ಸ್ ತೊಡ್ಸಿ ಖುಷಿ ಪಡ್ತಾರೆ. ನಮಗೆ ಊರ ಉಡುಪು ಅಸ್ಪೃಷ್ಯ ಅನ್ನೋ ಥರ! ನೀವು ಗಮನಿಸಿ.. ಇಂಥ ಕಾರ್ಯಕ್ರಮದ ಸ್ಪರ್ಧಾಳುಗಳು, ಟಿವಿ ವಾರ್ತೆ ಓದೋರು ಲಂಗ ದಾವಣಿ ತೊಡೋದು, ಸಿರೆ ಉಡೋದು ಉತ್ಸವಗಳ ದಿನ, ರಾಷ್ಟ್ರೀಯ ಹಬ್ಬಗಳ ದಿನ ಮಾತ್ರ, ಅಂಥ ಅಲಿಖಿತ ನಿಯಮ ರೂಪಿಸ್ದೋರು ಯಾರು? ಇನ್ನು ಮಕ್ಕಳೂ ಇದನ್ನೇ ಗಟ್ಟಿ ಮಾಡ್ಕೊಳ್ತಾವೆ. ಭಾರತೀಯ ಉಡುಪು ಇರೋದೇ ಹಬ್ಬಗಳ ದಿನ ಹಾಕೋಕೆ ಅಂತ. ಆದ್ರೆ ಎಸ್.ಪಿ., ರಾಜೇಶ್ ಕೃಷ್ಣ, ಅರ್ಚನಾ ಉಡುಪ, ಎಂ.ಡಿ.ಪಲ್ಲವಿ ಮೊದಲಾದೋರು ಇನ್ನೂ ಅಂಥಹ ಡ್ರೆಸ್ ಕೋಡ್‌ಗಳಿಗೆ ಮೊರೆ ಹೋಗಿಲ್ಲ ಅನ್ನೋದೆ ಸಮಾಧಾನಕರ. ಒಟ್ಟಿನಲ್ಲಿ ಹಾಡುಗಳಿಗಿಂತಲೂ ಡ್ರೆಸ್ಸು, ಹಾರಾಟ, ಗ್ಲಾಮರ್‍ರೇ ಮುಖ್ಯ ಅಂತ ಬಿಂಬಿಸೋದು, ಎಲಿಮಿನೇಟ್ ಸಂದರ್ಭವನ್ನು ವೈಭವೀಕರಿಸದೆ ಸರಳವಾಗಿ ನಡೆಸಿದ್ರೆ ಕಾರ್ಯಕ್ರಮ ನಿಜ ಅರ್ಥದಲ್ಲಿ ಮಕ್ಕಳಿಗೊಂದು ಪ್ರೇರಣೆ ಆಗೋಕೆ ಸಾಧ್ಯ ಇದೆ. ಇಲ್ದೇ ಹೋದ್ರೆ ಇಂಗ್ಲಿಷ್‌ನಲ್ಲೆ ಮಾತನಾಡ್ತ ಮಕ್ಕಳನ್ನು ಬೆಳೆಸಿ ನಾಳೆ ಯಾರ ಹತ್ರ ಕನ್ನಡ ಉಳ್ಸಿ ಅಂತ ಬಾಯಿ ಬಾಯಿ ಬಡ್ಕೋತೀರ? ಕೊನೆಪಕ್ಷ ಆ ರೋಧನ ಕೇಳೊಕಾದ್ರು ಯಾರು ಇರ್ತಾರೆ ಅಂತ ಬೇಕಲ್ಲ! ಈ ಎಲ್ಲ ಕಾರ್ಯಕ್ರಮಗಳೂ ಮಕ್ಕಳ ಪ್ರತಿಭೆಗೆ ಕನ್ನಡಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಆದ್ರೇ, ಸುಂ ಸುಮ್ನೇ ಹಿಂದಿ ಚಾನೆಲ್‌ಗಳ ಅನುಕರಣೆ ಬೇಕಾ? ಮಕ್ಕಳ ಕಣ್ಣ್ಲಲ್ಲಿ ನೀರು ತರಿಸದೆ ಎಲಿಮಿನೇಟ್ ಮಾಡೋಕೆ ಆಗಲ್ವ?
ಕೊನೇಗೆ ಇನ್ನೊಂದು ಸಂಶಯ ಉಳ್ಕೊಂಡಿದೆ.... ಇಷ್ಟೆಲ್ಲಾ ಕಾರ್ಯಕ್ರಮಗಳಲ್ಲೂ ಬರೋ ಮಂದಿಯಲ್ಲಿ ಅಷ್ಟೂ ಮಂದಿ (ನಾನು ಗಮನಿಸಿದ ಹಾಗೆ... ಶೇ.೯೯) ಇಂಗ್ಲಿಷ್ ಮಾಧ್ಯಮದೋರು, ಸುಮಾರು ಶೇ. ೭೫ಕ್ಕೂ ಮಂದಿ ಬೆಂಗಳೂರಿವರು!! ಯಾಕೆ-೧) ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿಭೆಗಳೇ ಇಲ್ವ? ೨) ಅಥವ ಅವರನ್ನು ಗುರುತಿಸೊರು ಇಲ್ಬ? ೩) ಕನ್ನಡ ಮೀಡಿಯಂನೋರು ಇಂಥ ಸ್ಪರ್ಧೆಗೆ ಬರ್ತಾನೇ ಇಲ್ವ? ೪) ಪ್ರತಿಭೆಗಳೆಲ್ಲ ಬೆಂಗಳೂರಲ್ಲೇ ಸೇರ್ಕೊಂಡಿವೆಯಾ? ಅಥವಾ ಬೇರೆ ಊರಿನೋರಿಗೆ ಆಸಕ್ತಿ ಇಲ್ವ? ನಿಮಗೇನಾದ್ರು ಉತ್ತರ ಗೊತ್ತಿದೆಯಾ?