ಪದವಿ ದಿನಗಳು ಮತ್ತು ನಂತರ...

ಸ್ನೇಹಿತರೇ,
 
ನಾವು ಡಿಗ್ರಿಯಲ್ಲಿದ್ದ ದಿನಗಳ ನೆನಪೆಂದರೆ 19 ವರ್ಷಗಳ ಹಿಂದಿನ ನೆನಪು. ಕೆಲವು ಮಸುಕು ಮಸುಕಾಗಿದೆ. ಕೆಲವು ಕನ್ನಡಿಯ ಪ್ರತಿಬಿಂಬದ ಹಾಗೆ ನಿಚ್ಚಳವಾಗಿದೆ. ಕೆಲವು ಯಾರಾದರೂ ನೆನಪು ಮಾಡಿಕೊಟ್ಟರೆ ಥಟ್ಟನೆ ನೆನಪಾಗುತ್ತದೆ. ವಾಸ್ತವ ಎಂದರೆ ತುಂಬ ಮಂದಿಯ ಫೋಟೋ ನೋಡಿದ ತಕ್ಷಣ (ಮುಖ್ಯವಾಗಿ ಬಿ ಸೆಕ್ಷನ್ ನವರ ಪರಿಚಯ ಕಮ್ಮಿ ಹಾಗಾಗಿ) ಅವರ ನೆನಪಾಗುತ್ತದೆ. ಹೆಸರು ಕೇಳಿದ ಹಾಗಾಗುತ್ತದೆ. ಅವರ ಪರಿಚಯ ಆದ ತಕ್ಷಣ ನೆನಪಾಗುತ್ತದೆ ಕಾಲೇಜು ದಿನಗಳು...

ಅಂದಿನ ನೆನಪುಗಳು ಚದುರಿ ಹೋಗಿವೆ... ಹೆಕ್ಕಿ ತೆಗೆದರೆ ತುಂಬ ನೆನಪುಗಳಿರುತ್ತವೆ. ಮುಡಿಪು ಎಂಬ ಗ್ರಾಮೀಣ ಭಾಗದಲ್ಲಿ ಪಿಯುಸಿ ಮುಗಿಸಿ ಬಂದ ನಾನು, ಫಾರೂಕು, ನವೀನ, ಜಗ್ಗ, ಹರೀಶ, ಪುಷ್ಪರಾಜ, ಇನ್ನೊಬ್ಬ ನವೀನ, ಸುರೇಂದ್ರ ಮತ್ತಿತರರು ಯುಸಿಎಂನಲ್ಲೂ ಒಟ್ಟಾಗಿಯೇ ಇರುತ್ತಿದ್ದೆವು,. ನಮಗೆ ಸ್ವಲ್ಪ ಇಂಗ್ಲಿಷ್ ಸಮಸ್ಯೆ ಇತ್ತು . ಮತ್ತೆ ಪೇಟೆಯ ವಾತಾವರಣ ಪರಿಚಯ ಕಮ್ಮಿ. ಆದರೆ ಬರ ಬರುತ್ತಾ ಎಲ್ಲ ಅಭ್ಯಾಸ ಆಯ್ತು.

ವೆನ್ಲಾಕ್ ಆಸ್ಪತ್ರೆ ಪಕ್ಕದಲ್ಲೇ ಇದ್ದ ಬಿಕಾಂ ಕ್ಲಾಸ್ ರೂಂ. ಚೆಂದಕೆ ನೋಟ್ಸ್ ಕೊಡುತ್ತಿದ್ದ ಲೆಕ್ಚರರ್ಸ್, ಕನ್ನಡದಲ್ಲೂ ಮಾತನಾಡುತ್ತಿದ್ದದ್ದು ಸಮಾಧಾನ ತರುತ್ತಿತ್ತು. ಸೆಂಟರಿನಲ್ಲೇ ಇದ್ದ ರವೀಂದ್ರ ಕಲಾಭವನ, ಆದರಾಚೆ ಲೈಬ್ರೇರಿ, ರೀಡಿಂಗ್ ರೂಂ, ಸೈನ್ಸ್ ಬ್ಲಾಕ್ ಪಕ್ಕದಲ್ಲಿದ್ದ ಟಾಯ್ಲೆಟ್ ಅಲ್ಲಿನ ವಿಚಿತ್ರ ಬರಹಗಳು, ಮಧ್ಯಾಹ್ನ ಗೀತ ಮಹಲ್ ಹೋಟೆಲಿನಲ್ಲಿ ತಿನ್ನುತ್ತಿದ್ದ ಪರೋಟ (4 ರು. ಅಂತ ನೆನಪು), ನಮ್ಮ ಕ್ಲಾಸಿಗೆ ಹತ್ತುವ ಮೆಟ್ಟಿಲಿನ ಪಕ್ಕ ಇದ್ದ ಸ್ಟೇಷನರಿ ಅಂಗಡಿ, ಪಾಠ ಕೇಳದಷ್ಟು ಕಿವಿಗಡಚಿಕ್ಕುವಂತಿದ್ದ ವಾಹನಗಳ ಓಡಾಟದ ಸದ್ದು... ಇದೆಲ್ಲ ನೆನಪು.
ನಾವು ಬಹುಷಃ ಸೆಕೆಂಡ್ ಇಯರಿನಲ್ಲಿದ್ದಾಗ ಲೆಕ್ಚರರ್ಸ್ ಸುಮಾರು 15 ದಿನ ಮುಷ್ಕರ ಮಾಡಿದ್ದರು. ಮೀನಾ ಮೇಡಂ ಮಾತ್ರ ಪಾಠ ಮಾಡುತ್ತಿದ್ದರು ಅಂತ ನೆನಪು. 

 
ರವೀಂದ್ರ ಕಲಾ ಭವನದಲ್ಲಿ ವರ್ಷದಲ್ಲಿ 3-4 ಬಾರಿ ನಡೆಯುತ್ತಿದ್ದ ಕಾರ್ಯಕ್ರಮಗಳು, ಹಿಂದಿನಿಂದ ಕೇಳಿ ಬರುತ್ತಿದ್ದ ಗಲಾಟೆ, ಫ್ಯಾನಿಗೆ ಕಲ್ಲಿನ ತುಂಡು ಎಸೆಯುವುದು, ಕೆಲವೊಮ್ಮ ಗಲಾಟೆ ಜಾಸ್ತಿಯಾಗಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುತ್ತಿದ್ದುದು. ಸೆಂಟ್ರಲ್ ಟಾಕೀಸ್ ದಾಟಿ ನೆಹರೂ ಮೈದಾನಕ್ಕೆ ಸಂಜೆ ಬಸ್ಸಿಗೆ ನಡೆದುಕೊಂಡು ಹೋಗುತ್ತಿದದ... ಎಲ್ಲ ನೆನಪುಗಳು.

ವೇದಿಕೆಯಲ್ಲಿ ಸುಶೀಲ್, ಸಚಿನ್ ಮಾಡುತ್ತಿದ್ದ ನೃತ್ಯಗಳು ನೆನಪಿದೆ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಚಡ್ಡಿ ಮೇಲೆ ಪಂಚೆ ಉಟ್ಟು ಮಾಡಿದ ನೃತ್ಯ ಈಗಲೂ ನೆನಪಿದೆ. ತ್ರಿವೇಣಿ ಒಳ್ಳೆ ಎಂಸಿ ಮಾಡ್ತಾ ಇದ್ದಳು ಅಂತ ನೆನಪು. ಶಕೀಲ್ ಯೂತ್ ಪಾರ್ಲಿಮೆಂಟಿನಲ್ಲಿ ಸಕ್ರಿಯನಾಗಿದ್ದ. ಪಾಠ ಮುಗಿದ ಲೆಕ್ಚರರ್ಸ್ ಸ್ಟಾಫ್ ರೂಮಿಗೆ ಹೋಗುವಾಗ ಧನವಂತಿ ಅವರ ಹಿಂದೆಯೇ ಹೋಗಿ ಡೌಟ್ ಕೇಳ್ತಾ ಇದ್ದದ್ದು ಈಗಲೂ ನೆನಪಿದೆ.

ಜ್ಯೋತಿಲಕ್ಷ್ಮಿ ಯಾವಾಗಲೂ ಡೆಸ್ಕಿಗೆ ತಲೆಯಿಟ್ಟು ನಿದ್ರೆ ಮಾಡ್ತಾ ಇದ್ದದ್ದು ನೆನಪಿದೆ. ಫ್ರಂಟ್ ಬೆಂಚಿನ ನಾಗರಾಜ ರಾವ್ ತುಂಬ ಆಕ್ಟಿವ್. ಸುಧಾ ಮೇಡಂ ಸಿಟ್ಟು ಬಂದು ಬೈಯುತ್ತಿದ್ದಾಗ ಹಿಂದಿನ ಬೆಂಚಿನ ಕೆಲವು ಸ್ನೇಹಿತರು ... ಮಣಿಪೊಡ್ಚಿಯ, ಆರೆಗ್ ಕೋಪ ಬೈದ್ಂಡ್ ಅಂತ ಅವರಿಗೆ ಕೇಳುವ ಹಾಗೆಯೇ ಹೇಳುತ್ತಿದ್ದಾಗ ಅವರಿಗೆ ನಗು ಬಂದು ಬೈಗಳು ಅಲ್ಲಿಗೇ ನಿಲ್ಲುತ್ತಿತ್ತು..

ಮತ್ತೆ ಸೀತಾರಾಂ ಪೂಜಾರಿ ಅವರು ಪಾಠ ಮಾಡುತ್ತಿದ್ದಾಗ ಬಾಗಿಲ ಹಿಂದೆ ಊದುಬತ್ತಿಯ ಗರ್ನಲ್ ಟೈಂ ಬಾಂಬ್ ಸ್ಫೋಟ ಆದದ್ದು ನೆನಪಿದೆ. ಪ್ರಶಾಂತ್ ಶಟ್ಟಿ ಕಾಲೇಜ್ ಡೇ ದಿನ ಹಾಡಿದ್ದು ನೆನಪಿದೆ. ಕಹೋನಾ ಪ್ಯಾರ್ ಹೇ ಮತ್ತು ಟೈಟಾನಿಕ್ ಮೂವಿ ತುಂಬ ಹಿಟ್ ಆಗಿದ್ದು, ತುಂಬ ಜನ ಕ್ಲಾಸ್ ಬಂಕ್ ಮಾಡಿ ಹೋಗ್ತಾ ಇದ್ದದ್ದು ನೆನಪಿದೆ. ಎನ್ ಸಿಸಿ ಸೇರಿದವರು ಕೆಲವೊಮ್ಮೆ ಎನ್ ಸಿಸಿ ಸೆಶನ್ ಗಳಿಗೆ ಹೋಗಲು ಉದಾಸೀನದಿಂದ ಕ್ಲಾಸಿನಲ್ಲಿ ತಲೆ ಮರೆಸುತ್ತಾ ಇದ್ದಿದ್ದು, ಅವರನ್ನ ಹುಡುಕಿಕೊಂಡು ಸೀನಿಯರ್ ಗಳು ಬರುತ್ತಿದ್ದುದು, ನಾನು, ಫಾರೂಕ್ ವಾಲ್ ಮ್ಯಾಗಝೀನ್ ಗೆ ಫೈನಲ್ ಇಯರಿ ಓಡಾಡಿದ್ದು ಇನ್ನಷ್ಟು ನೆನಪುಗಳು.

ರವೀಂದ್ರ ಕಲಾ ಭವನದ ಎದುರಿನ ಸೋಮಾರಿ ಕಟ್ಟೆಯಲ್ಲಿ ವಿದ್ಯಾರ್ಥಿಗಳು ಪಟ್ಟಾಂಗ ಹೊಡೆಯುತ್ತಾ ಇದ್ದದ್ದು ಮರೆಯುವ ಹಾಗೆಯೇ ಇಲ್ಲ.


------------

(ನೆನಪಿನ ಪಯಣ ಭಾಗ 2)

ಮೂರು ವರ್ಷಗಳೆಂದರೆ ಬದುಕಿನಲ್ಲಿ ದೊಡ್ಡದೊಂದು ಸಮಯದ ಕಣಜ. ನಾವದನ್ನು ಹೇಗೆ ಕಳೆದಿದ್ದೇವೆ ಎಂಬುದರ ಮೇಲೆ ಅದು ಗೋಲ್ಡನ್ ಪಿರಿಯಡ್ ಆಗುತ್ತದೆಯೋ ವಿಷಾದದ ಸಮಯವಾಗುತ್ತದೋ ಎಂಬುದು ನಿರ್ಧಾರವಾಗುತ್ತದೆ. ಹದಿ ಹರೆಯದ ಆ ಮೂರು ವರ್ಷಗಳ ಕಾಲ ಕಾಲೇಜಿನಲ್ಲಿ ಕಲಿತ ಆ ದಿನಗಳು ಪ್ರತಿಯೊಬ್ಬರಿಗೂ ನೆನಪಿನಲ್ಲಿ ಇರುವಂಥದ್ದೇ. ಕೆಲವರು ಓಪನ್ ಆಗಿ ಹೇಳುತ್ತಾರೆ. ಕೆಲವರು ಮನಸ್ಸಿನೊಳಗೇ ಬಚ್ಚಿಡುತ್ತಾರೆ ಅಷ್ಟೇ..


ಕಾಲೇಜೆಂದರೆ ಎಲ್ಲೆಲ್ಲಿಂದ ಬಸ್ಸಿನಲ್ಲೋ, ರೈಲಿನಲ್ಲೋ ಬರುತ್ತಿದ್ದದ್ದು, ರೈಲಿನಲ್ಲಿ ಬರುವವರು ಲೇಟಾಗಿ ಫಸ್ಟ್ ಪಿರಿಯಡ್ ಗೆ ತಲಪುತ್ತಿದ್ದದ್ದು. ಮಧ್ಯಾಹ್ನದ ಊಟಕ್ಕೆ ಕೆಎಂಸಿ ಕ್ಯಾಂಟೀನಿಗೋ, ಶಾಂತಿ ಸಾಗರಿಗೋ, ಗೀತ ಭವನಕ್ಕೋ ಹೋಗುತ್ತಿದ್ದದ್ದು, ಮಧ್ಯಾಹ್ನ ಬುತ್ತಿ ತಂದವರು ಸಾಮೂಹಿಕವಾಗಿ ಲೈಬ್ರೆರಿ ಎದುರಿನ ಕುಡಿಯುವ ನೀರಿನ ಎದುರು ರಾಶಿ ಸೇರುತ್ತಿದ್ದದ್ದು ಹೀಗೆ...

ಕ್ಲಾಸಿನಲ್ಲಿ ಕಲಿತದ್ದು, ರವೀಂದ್ರ ಕಲಾ ಭವನದಲ್ಲಿ ಹಾರಾಡಿದ್ದು, ಎನ್ ಸಿಸಿ, ಎನ್ ಎಸ್ಸೆಸ್ಸೆನಲ್ಲಿ ಓಡಾಡಿದ್ದು, ಪರೀಕ್ಷೆ ಬರೆದದ್ದು, ನಕ್ಕು ನಲಿದದ್ದು ಎಲ್ಲ ಈಗ ಇತಿಹಾಸ. ಎಲ್ಲಿಂದಲೋ ಬಂದು ಮೂರು ವರ್ಷ ಒಟ್ಟಾಗಿದ್ದು ಮತ್ತೆ ಮತ್ತೆ ದೂರ ದೂರವಾದವರು ನಾವು.


ನಂಗೆ ಅನ್ನಿಸುವುದು ಆ ಕೆಂಪು ಕಟ್ಟಡದ ಸುತ್ತ ಎಷ್ಟೊಂದು ಸ್ನೇಹ, ಎಷ್ಟೊಂದು ಪ್ರೀತಿಗಳು ಮೊಳೆತರಿಲಕ್ಕಿಲ್ಲ. ಕೆಲವರು ಹೇಳಿಕೊಂಡಿದ್ದಾರೆ, ಕೆಲವರು ಒಟ್ಟಿಗೆ ಓಡಾಡಿದ್ದಾರೆ. ಕೆಲವರು ಇಂದಿನ ತನಕ ಆ ಮೆಚ್ಚುಗೆಯನ್ನು ಹೇಳಿಕೊಂಡೇ ಇಲ್ಲ. ಬದುಕೇ ಹಾಗೆ ಐದು ಬೆರಳುಗಳ ಹಾಗೆ ಎಲ್ಲರ ಅಭಿವ್ಯಕ್ತಿ ಒಂದೇ ಥರ ಇರುವುದಿಲ್ಲ. ಎಷ್ಟೊ ಸಂದರ್ಭ ಹೇಳದೇ ಕೇಳದೇ ಪ್ರೀತಿ ಆವರಿಸಿರುತ್ತದೆ. ಕಾಲೇಜಿನಲ್ಲಂತೂ ಕೇಳುವುದೇ ಬೇಡ, ತುಂಬ ಜನಕ್ಕೆ ಅದನ್ನು ವ್ಯಕ್ತಪಡಿಸುವ ಧೈರ್ಯ ಇರುವುದಿಲ್ಲ. ಒಂದು ವೇಳೆ ವ್ಯಕ್ತಪಡಿಸಿದರೂ ಅದು ಕೈಗೂಡುತ್ತದೆ ಎಂಬ ವಿಶ್ವಾಸ ಇರುವುದಿಲ್ಲ. ಕೆಲವರು ಕಣ್ಣಿನಲ್ಲೇ ಮಾತನಾಡಿಕೊಂಡರೇ, ಕೆಲವರಿಗೆ ಹತ್ತಿರ ಕುಳಿತು ನೇರವಾಗಿ ಮಾತನಾಡುವ ಧೈರ್ಯ ಇರುತ್ತದೆ. ಇನ್ನೂ ಕೆಲವರು ಮೂರು ವರ್ಷ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ, ಕೊನೆಗೆ ವಿದಾಯ ಕೋರುವ ಹೊತ್ತಿಗೂ ಏನನ್ನೂ ಹೇಳಲಾಗದೆ ಕಣ್ನೀರಿನಲ್ಲೇ ಮೂಕ ವಿದಾಯ ಕೋರಿದ್ದೂ ಇರಬಹುದು.
ಈ ಕಾಲೇಜಿನ ಆವರಣಗಳು ಎಷ್ಟೊಂದು ಪ್ರೀತಿಗೆ, ಎಷ್ಟೊಂದು ಜೋಡಿಗಳ ಮಿಲನಕ್ಕೆ, ಎಷ್ಟೊಂದು ನಿಟ್ಟುಸಿರುಗಳಿಗೆ, ಎಷ್ಟೊಂದು ಕಳ್ಳ ನೋಟಗಳಿಗೆ ಸಾಕ್ಷಿಗಳಾಗಿರಬಹುದು. ಕಾಲೇಜಿನ ಗೋಡೆಗಳಿಗೆ ಬಾಯಿ ಇರುತ್ತಿದ್ದರೆ ಸಾವಿರಾರು ಕತೆಗಳನ್ನು ಬರೆಯಬಹುದಿತ್ತು....

ಕಾಲ ಬದಲಾಗುತ್ತಲೇ ಇರುತ್ತದೆ. ಆಕರ್ಷಣೆ ಅಥವಾ ಸ್ನೇಹದ ತೀವ್ರತೆ ಬದುಕಿನ ಜಂಜಾಟದಲ್ಲಿ ಹೆಚ್ಚು ಕಮ್ಮಿ ಆಗಲೂ ಬಹುದು. ಅವರವರ ಒತ್ತಡ, ತಾಪತ್ರಯ, ಓಡಾಟ, ಕೆಲಸ, ಸಂಸಾರಗಳು ಹಿಂದಿನ ನೆನಪುಗಳ ತೀವ್ರತೆಯನ್ನು ಕಳೆದುಕೊಂಡಿರಲೂ ಬಹುದು. ಕಾಲಕ್ಕೆ ಎಲ್ಲದರ ತೀವ್ರತೆ ಕಡಿಮೆ ಮಾಡುವ ತಾಕತ್ತು ಇದೆ. ಕಾಲೇಜೆಂದರೆ ಡಿಗ್ರಿಯೊಂದನ್ನು ಪಡೆದ ಜಾಗ ಮಾತ್ರವಲ್ಲದೆ ಸಾವಿರಾರು ನೆನಪುಗಳಿಗೆ, ವೇದಿಕೆ ಹತ್ತಿ ಮಾತನಾಡಿದ್ದಕ್ಕೆ, ಪದ್ಯ ಹೇಳಿದ್ದಕ್ಕೆ, ಕುಣಿದದ್ದಕ್ಕೆ, ಎನ್ ಸಿಸಿಯಲ್ಲಿ ಬಂದೂಕು ಬಿಟ್ಟದ್ದಕ್ಕೆ, ಕಾಲೇಜಿನ ಅಂಗಳದಲ್ಲಿ ಹೊಡೆದಾಡಿದ್ದಕ್ಕೂ ಇತಿಹಾಸವಾಗಿರುವುದು ಸಹಜ...

ಹಳೆ ಹಾಡು, ಹಳೆ ಫೋಟೋ, ಹಳೆ ಸಿನಿಮಾ, ಹಳೆ ಪದ್ಯದ ಸಾಲುಗಳು ಎಷ್ಟೊಂದು ಹಳೆ ನೆನಪುಗಳನ್ನು ಮೊಗೆ ಮೊಗೆದು ಕೊಡುತ್ತದೆ. ಕಲಿತ ಕಾಲೇಜು ಕೂಡಾ ಹಾಗೆಯೇ. ನೆನಪುಗಳ ಆಗರ.. ಮೊಗೆದಷ್ಟೂ ಹಸಿರು.. ಹಸಿರು..
 

--------------


(ನೆನಪಿನ ಪಯಣ ಭಾಗ 3)
 
19 ವರ್ಷಗಳ ಹಿಂದೆ ನಾವು ಡಿಗ್ರೀ ಮುಗಿಸಿ ಹೊರಡುವ ವೇಳೆಗೆ ಮೊಬೈಲು, ಈ ಲೆವೆಲಿನ ಇಂಟರ್ ನೆಟ್ಟು ಎರಡೂ ಪೂರ್ಣ ಪ್ರಮಾಣದಲ್ಲಿ ಬಂದಿರಲಿಲ್ಲ. ಇಂಟರ್ ನೆಟ್ ಸರಿಯಾಗಿ ಎಲ್ಲರಿಗೂ ತಲುಪಲು ಸಾಧ್ಯವಾದದ್ದೆ 2000ನೇ ಇಸವಿ ನಂತರ. ಮೊಬೈಲ್ ಜನಪ್ರಿಯವಾಗಿದ್ದು 2002ರ ನಂತಕ. ಹಾಗಾಗಿ ಆಗ ನಾವು ಆಟೋಗ್ರಾಫಿನಲ್ಲಿ ಬರೆದಿಡುತ್ತಿದ್ದುದು ನಮ್ಮ ಪೋಸ್ಟಲ್ ವಿಳಾಸ ಮಾತ್ರ. ಆಗ ನನ್ನ ಮನೆಯಲ್ಲಿ ಲ್ಯಾಡ್ ಲೈನ್ ಫೋನ್ ಕೂಡಾ ಇರಲಿಲ್ಲ. ಕೆಲವರ ಮನೆಯಲ್ಲಿ ಅದಾದರೂ ಇತ್ತು. ಹಾಗಾಗಿ ಆಗ ನಮಗೆ ದೂರವಾಗುವ ಭಯ ತುಂಬಾ ಇತ್ತು. ಒಮ್ಮೆ ಕಾಲೇಜು ಬಿಟ್ಟವರು ಮತ್ತೆ ಸಿಗುತ್ತಾರೆಯೇ ಎಂಬ ಸಂಶಯ ಇತ್ತು.


ಇಂಟರ್ ನೆಟ್ ಎಂದರೆ ಏನೆಂದೇ ಗೊತ್ತಿರದ ಆ ದಿನಗಳಲ್ಲಿ ಮುಂದೊಂದು ದಿನ ಫೇಸ್ ಬುಕ್ಕು, ಆರ್ಕೂಟು, ವಾಟ್ಸಪ್ಪು ಬರಬಹುದೆಂಬ ಕಲ್ಪನೆ ಇರಲಿಲ್ಲ. ಆ ದಿನಗಳಲ್ಲಿ ಮೊಬೈಲ್ ಫೋನ್ ಇದ್ದರೆ ಕತೆಯೇ ಬೇರೆ ಆಗುತ್ತಿತ್ತೇನೋ... ಸಂವಹನ ಈಗ ಆ ಲೆವೆಲಿಗೆ ಬೆಳೆದಿದೆ...

ಈಗ ಯಾರಿಗೂ ಆಟೋಗ್ರಾಫ್ ಅಗತ್ಯ ಇಲ್ಲ. ಯಾಕೆಂದರೆ ಯಾರೂ ಮಾನಸಿಕವಾಗಿ ದೂರ ಹೋಗುವುದೇ ಇಲ್ಲ. ವಾಟ್ಸಪ್ಪು, ಫೇಸುಬುಕ್ಕು ಇರುವಾಗ ನೀವು ಭಾರದಲ್ಲಿದ್ದರೂ, ವಿದೇಶದಲ್ಲಿದ್ದರೂ ದೂರವಿದ್ದೀರೆಂದು ಅನಿಸುವುದೇ ಇಲ್ಲ. ಹಾಗಾಗಿ ಆಟೋಗ್ರಾಫಿನ ಅಗತ್ಯವೇ ಇಲ್ಲ.

ಆಗಿನ ಪರಿಸ್ಥಿತಿ ನೆನಪಿಸಿ ತುಂಬಾ ಧೈರ್ಯ ಇರುವವರು ಬಿಂದಾಸ್ ಆಗಿ ಮಾತನಾಡುತ್ತಿದ್ದರು. ಕೆಲವು ಸಂಕೋಚ ಸ್ವಭಾವದವರು ಮಾತನಾಡಲೂ ಹೆದರುತ್ತಿದ್ದರು (ಈಗಲೂ ಅದೇ ಸ್ವಭಾವದವರು ಇದ್ದಾರೆ). ಹಾಗಾಗಿ ಯಾರಾದರೂ ಯಾರಿಗಾದರೂ ಇಷ್ಟವಾದರೆ ಕವನದಲ್ಲಿ ಬರೆಯುವುದೋ, ವಾರ್ಷಿಕ ಮ್ಯಾಗಝೀನ್ ಗೆ ಕೊಡುವುದೋ, ಪತ್ರ ಕೊಡುವುದೋ ಇತ್ಯಾದಿ ಇತ್ಯಾದಿ ಮಾಡಬೇಕಾಗಿತ್ತು. ಈಗ ಆಗಿದ್ದರೆ ತುಂಬ ಸುಲಭ ಮೊಬೈಲ್ ನಲ್ಲಿ ಸಂದೇಶ ಕಳುಹಿಸಬಹುದು. ಜಗತ್ತು ಇಷ್ಟರ ಮಟ್ಟಿಗೆ ಬದಲಾಗಿದೆ. ಇದರಿಂದ ಪ್ರಯೋಜನವೂ ಇದೆ, ಅನನುಕೂಲವೂ ಇದೆ. ಸಂವಹನ ಒಂದು ಹಂತಕ್ಕಿಂತ ಜಾಸ್ತಿಯಾದರೆ ಅದು ಮನುಷ್ಯನ ಏಕಾಂತವನ್ನೇ ಕಳೆದುಕೊಳ್ಳುತ್ತದೆ...


ಮತ್ತೊಂದು ವಿಷಯ ನಾನು ಗ್ರೂಪಿನಲ್ಲಿ ಗಮನಿಸಿದ್ದು... 19 ವರ್ಷಗಳ ಹಿಂದೆ ತುಂಬಾ ಸೈಲೆಂಟ್ ಇದ್ದವರೆಲ್ಲ ಈಗ ತುಂಬ ಮಾತನಾಡಲು ಕಲಿತಿದ್ದಾರೆ. ಆಗ ಮೌನಿಗಳಾಗಿದ್ದವರು ಈಗ ಹರಟೆ ಹೊಡೆಯುತ್ತಿದ್ದಾರೆ. ಆಗ ಏನೂ ಅರ್ಥವಾಗದ ಹಾಗೆ ಇದ್ದವರೂ ಎಲ್ಲವನ್ನೂ ಗಮನಿಸುತ್ತಿದ್ದರು, ಈಗ ಸಂಕೋಚ ಕಳೆದು ಅದನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟ.... ಹಾಗಾಗಿ ಇಂತಹ ಒಂದು ಗ್ರೂಪಿನ ವೇದಿಕೆ ಹಲವರಿಗೆ ಮಾತನಾಡಲು ಅನುಕೂಲ ಮಾಡಿಕೊಟ್ಟಿದೆ. ಮತ್ತೊಮ್ಮೆ ಮುಕ್ತವಾಗಿ ಮಾತನಾಡುವ ಸಂದರ್ಭ ದೊರಕಿದೆ ಎಂಬುದೇ ಸಂತೋಷ...
 

---------------


(ನೆನಪಿನ ಪಯಣ ಭಾಗ 4)

ಯೂನಿವರ್ಸಿಟಿ ಕಾಲೇಜ್ ಎಂದಾಗ ನೆನಪಾಗೋದು ನಾನಲ್ಲಿ ಇನ್ ಕಂ ಸರ್ಟಿಫಿಕೇಟ್ ಪ್ರಸ್ತುತಪಡಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲ್ತದ್ದು, ನನ್ನ ಜೊತೆಗಿದ್ದ ತುಂಬ ಮಂದಿ ಸ್ನೇಹಿತರೂ ಇದೇ ಥರ ಆದಾಯ ದೃಢೀಕರಣ ಪತ್ರ ಸಲ್ಲಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲಿತಿದ್ದೇವೆ. ಬಹುಷಹ ಆ ಹೊತ್ತಿಗೆ ನನಗೆ ಹಾಗೂ ನನ್ನ ಸ್ನೇಹಿತರಿಗೆ ಮಂಗಳೂರಿನ ದೊಡ್ಡ ದೊಡ್ಡ ಖಾಸಗಿ ಕಾಲೇಜಿನ ಫೀಸು ಕಟ್ಟಿ ಕಲಿಯುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ನನ್ನಂತಹ ಎಷ್ಟೋ ಸಾವಿರ ಮಂದಿಗೆ ಈ ಕಾಲೇಜು ಕಲಿಯಲು ಅವಕಾಶ ಕೊಟ್ಟಿದೆಯೇನೋ ಎಂದು ನೆನಸಿದಾಗ ಧನ್ಯತೆ ಮೂಡುತ್ತದೆ. ಈ ಸಂಸ್ಥೆ ಯಾರಿಗೂ ಅವಕಾಶ ನಿರಾಕರಣೆ ಮಾಡುವುದಿಲ್ಲ. ಬೇರೆ ಬೆರೆ ಮೀಸಲುಗಳು, ಆರ್ಥಿಕ ರಿಯಾಯಿತಿ ಮೂಲಕ ನಮ್ಮಂಥ ಅದೆಷ್ಟೋ ಮಂದಿಗೆ ಡಿಗ್ರಿ ಪಡೆಯುವ ಕನಸು ನನಸು ಮಾಡಿದೆ.
ಭಾಷೆಯ ವಿಷಯದಲ್ಲೂ ಅಷ್ಟೇ ಪಿಯುಸಿ ತನಕ ಕನ್ಡಡ, ತುಳು ಮಾತನಾಡಿಕೊಂಡು ಬೆಳೆದ ನಮಗೆ ಪೇಟೆಯ ಕಾಲೇಜಿಗೆ ಬಂದಾಗ ಎಷ್ಟು ಕಷ್ಟವಾಗಬಹುದೋ ಎಂಬ ಆತಂಕ ಇತ್ತು. ಆದರೆ, ಅಲ್ಲಿನ ಸ್ಟಾಫ್ ನಮ್ಮೊಂದಿಗೆ ಇರುತ್ತಿದ್ದ ರೀತಿ ಯಾವತ್ತೂ ನಮಗೆ ಪರಕೀಯ ಭಾವನೆ ಮೂಡಿಸಲಿಲ್ಲ. ತುಂಬ ಬೇಗೆ ನಾವಲ್ಲಿಗೆ ಹೊಂದಿಕೊಂಡು ಬಿಟ್ಟೆವು. ಅವರಾಗಿ ಕೊಡುತ್ತಿದ್ದ ನೋಟ್ಸ್, ಸಿಂಪಲ್ ಇಂಗ್ಲಿಷ್ ಬಳಕೆ ಇದ್ಯಾದಿ ಇತ್ಯಾದಿ... ಅಲ್ಲೊಂದು ಚಂದದ ಲೈಬ್ರೆರಿ ಇತ್ತು, ರೀಡಿಂಗ್ ರೂಂ ಇತ್ತು, ಲ್ಯಾಬ್ ಇತ್ತು, ವಾಲ್ ಮ್ಯಾಗಝೀನ್ ಇತ್ತು. ನಾವೆಲ್ಲ ಅದನ್ನು ಎಷ್ಟು ಬಳಸಿಕೊಂಡಿದ್ದೇವೆ ಎಂಬುದು ಅವರವರ ಆಸಕ್ತಿಗೆ ಬಿಟ್ಟದ್ದು ಅಷ್ಟೆ...

ಇಷ್ಟು ವರ್ಷಗಳ ಬಳಿಕ ಸ್ವಂತ ಕಾಲಿನಲ್ಲಿ ನಿಂತು ದುಡಿಯುವ ಹೊತ್ತಿಗೆ ಆಗಿನ ಪರಿಸ್ಥಿತಿಯ ತೀವ್ರತೆ ಈಗ ಬಾಧಿಸುವುದಿಲ್ಲ. ಆದರೆ, ನಾವು ದಾಟಿ ಬಂದ ಆ ದಿನಗಳು ಬಹುಷಹ ಇಂದು ಕಲಿಯುವ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿರಬಹುದು. ಈಗಂತೂ ಪ್ರಪಂಚ ದುಬಾರಿಯಾಗಿದೆ. ಆಗ ನಮಗೆ ಕೆಎಂಸಿ ಕ್ಯಾಂಟೀನಿನಲ್ಲಿ 5 ರುಪಾಯಿಗೆ ಊಟ ಸಿಗುತ್ತಿತ್ತು (ನನಗೆ ಸರಿ ನೆನಪಿದೆ). ಗೀತ ಮಹಲ್ ಹೋಟೇಲಿನಲ್ಲಿ 4 ರುಪಾಯಿಗೆ ಪರೋಟಾ ಸಿಗುತ್ತಿತ್ತು. 25 ಕಿ.ಮೀ. ದೂರದ ನನ್ನೂರಿಗೆ ಸಿ ಟಿಕೆಟಿಗೆ ಕೇವಲ 3 ರುಪಾಯಿ ಇತ್ತು. ಈಗ ಪ್ರಪಂಚ ಎಷ್ಟು ದುಬಾರಿಯಾಗಿದೆ ಎಂಬುದು ನಿಮಗೆ ಗೊತ್ತೇ ಇದೆ.

ಈಗಿನ ಪ್ರಾಂಶುಪಾಲರಾದ ಉದಯಕುಮಾರ್ ಇರ್ವತ್ತೂರು ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಕಿಕೊಂಡಿದ್ದಾರೆ. ಅದೀದಾಗಲೇ ಜಾರಿಯಲ್ಲಿದೆ. ಹಸಿದ ಬಡ ವಿದ್ಯಾರ್ಥಿಗಳಿಗೆ ಊಟ ಒದಗಿಸುವುದು ಪುಣ್ಯದ ಕಾರ್ಯ. ನಮ್ಮಲ್ಲಿ ಬಹುತೇಕ ಮಂದಿ ಈಗ ದುಡಿಯುತ್ತಿದ್ದೇವೆ. ಹಾಗಾಗಿ ನಮ್ಮ ಗ್ರೂಪ್ ಇನ್ನಷ್ಟು ಪ್ರಬುದ್ಧವಾದ ಬಳಿಕ ದಯವಿಟ್ಟು ನಾವೆಲ್ಲ ಸೇರಿ ಕೈಲಾದಷ್ಟು ದುಡ್ಡು ಸೇರಿಸಿ ನಮ್ಮ ಗ್ರೂಪಿನ ವತಿಯಿಂದ ಕಾಲೇಜಿನ ಬಿಸಿಯೂಟ ಯೋಜನೆಯಲ್ಲಿ ಕೈಜೋಡಿಸುವ. ಏನಂತೀರಿ...


-----------------

(ನೆನಪಿನ ಪಯಣ ಭಾಗ 5)

ಅಸಲಿಗೆ ಕಾಲ ನೆನಪುಗಳನ್ನು ಮರೆಸುತ್ತದೆ ಎಂಬುದು ಪೂರ್ತಿ ನಿಜವಲ್ಲ. ನೆನಪುಗಳನ್ನು ಮಸುಕಾಗಿಸುತ್ತದೆ ಅಷ್ಟೆ. ಎಷ್ಟೋ ಬಾರಿ ನೆನಪುಗಳು ಮೂಟೆ ಕಟ್ಟಲ್ಪಟ್ಟು ಯಾವುದೋ ಪೆಟ್ಟಿಗೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ ಸ್ಥಿತಿಯಲ್ಲಿರುತ್ತದೆ. ಸಣ್ಣ ಸಣ್ಣ ವಿಚಾರಗಳೂ ಆ ಬೀಗವನ್ನು ತೆಗೆಯಬಲ್ಲುದು. ಆ ಬೀಗ ಕೈಗಳು ಯಾವುವು ಗೊತ್ತಾ?


ಯಾವತ್ತೋ ಕೇಳಿದ ಹಾಡಿನ ಸಾಲುಗಳು, ಯಾರ ಜೊತೆಗೋ ನೋಡಿದ ಸಿನಿಮಾದ ದೃಶ್ಯಗಳು, ಯಾರೋ ಸ್ನೇಹಿತ ಹೇಳುತ್ತಿದ್ದ ಡೈಲಾಗುಗಳು, ಯಾವುದೋ ಹೋಟೆಲಲ್ಲಿ ದಿನಾ ತಿನ್ನುತ್ತಿದ್ದ ಕೂರ್ಮಾದ ಘಾಟು ಪರಿಮಳ, ಯಾರೋ ಮುಡಿದು ಬರುತ್ತಿದ್ದ ಮಲ್ಲಿಗೆಯದ್ದೋ, ಸಂಪಿಗೆಯದ್ದೋ ಪರಿಮಳ, ಯಾವುದೋ ಪುಸ್ತಕದಲ್ಲಿ ನಿಮಗಿಷ್ಟವಾದ ಯಾವುದೋ ಕ್ವೋಟ್ ಗಳು....

ಇವುಗಳಲ್ಲಿ ಯಾವುದಕ್ಕೂ ನಿಮ್ಮ ಹಳೆಯ ನೆನಪುಗಳನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಇದಕ್ಕೆ ನಮ್ಮ ಗ್ರೂಪೇ ಸಾಕ್ಷಿ. ಯಾವುದೋ ಡೈಲಾಗು ಕೇಳಿದಾಗ, ಯಾರದ್ದೋ ಫೋಟೋ ನೋಡಿದಾಗ.. ನಿಮಗೆ ಹಳೆಯದೆಲ್ಲಾ ನೆನಪಾಗುತ್ತಾ ಹೋಗುತ್ತದೆ. ನೆನಪನ್ನು ಬಿಡಿಸಿಡಲು ಒಂದು ವಾಹಕ ಅಥವಾ ಕೀಲಿ ಕೈ ಬೇಕು ಅಷ್ಟೆ.

ವಾಸ್ತವವಾಗಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಹಿಟ್ ಆದ ಕಹೋ ನಾ ಪ್ಯಾರ್ ಹೇ, ದಿಲ್ ತೋ ಪಾಗಲ್ ಹೈ, ಕುಚ್ ಕುಚ್ ಹೋತಾ ಹೈ, ಇಷ್ಕ್, ಎ, ಚಂದ್ರಮುಖಿ, ಪ್ರಾಣಸಖಿ, ಟೈಟಾನಿಕ್, ಪ್ಯಾರ್ ತೋ ಹೋನಾ ಹೀ ಥಾ, ಬಾರ್ಡರ್... ಹೀಗೆ ಸಾಲು ಸಾಲು ಸಿನಿಮಾಗಳು ಕಾಲೇಜು ದಿನಗಳನ್ನೇ ನೆನಪಿಸುತ್ತದೆ. ನಾನಂತೂ ಇವುಗಳಲ್ಲಿ ಬಹಳಷ್ಟು ಸಿನಿಮಾಗಳನ್ನು ಆಗ ಟಾಕೀಸಿಗೆ ಹೋಗಿ ನೋಡಿದ್ದಲ್ಲ. ನಂತರದ ದಿನಗಳಲ್ಲಿ ಸಿಡಿಯಲ್ಲಿ ನೋಡಿದ್ದು. ಆದರೆ ಈ ಸಿನಿಮಾಗಳ ಹವಾ ಕಾಲೇಜು ಪರಿಸರದಲ್ಲಿ ತುಂಬಾ ಇತ್ತು. ಅದರಲ್ಲೂ ಕಹೋ ನಾ ಪ್ಯಾರ್ ಹೇ ಹಾಗೂ ಬಾರ್ಡರ್ ಸಿನಿಮಾ ವಾರಗಟ್ಟಲೆ ಸೆಂಟ್ರಲಿನಲ್ಲಿ ಇದ್ದ ನೆನಪು.

ಫೈನಲ್ ಇಯರಿನಲ್ಲಿ ಕಿಂಗ್ ಸೈಝ್ ನೋಟ್ ಪುಸ್ತಕದ ರ್ಯಾಪರಿನಲ್ಲಿ ಹೃತಿಕ್ ರೋಷನಿನದ್ದೇ ಫೋಟೋಗಳು, ಅವನ ಮಸಲ್ಸ್ ಫೋಟೋಗಳು ತುಂಬಾ ವೈರಲ್ ಆಗಿದ್ದವು ಆ ಕಾಲದಲ್ಲಿ ಫೋಟೋಗಳ ಮೂಲಕ.

ಸಂದೇಸೇ ಆತೇ ಹೇ...., ಇಕ್ ಪಲ್ ಕಾ ಜೀನಾ, ದಿಲ್ ಮೇರಾ ಹರ್ ಬಾರ್ ಹೈ, ದಿಲ್ ಚುರಾಯಿ ಮೇರಾ ಕಿಸ್ನೇ ಓ ಸನಂ, ಹೇ ಜಾತೇ ಹುವೆ ಲಮ್ಹೇ...ಝರ ಟೆಹರೋ... ಮನಸೇ ಓ ಮನಸೇ..., ಸುಮ್ ಸುಮ್ನೇ ನಗ್ತಾಳೆ.., ಅಜ್ ನಬೀ ಮುಜ್ಕೋ ಇತ್ನಾ... ಹೀಗೆ ಹೀಗೆ ಸಾಲು ಸಾಲು ಹಾಡುಗಳು ಆ ಕಾಲದ್ದೇ...

ರವೀಂದ್ರ ಕಲಾ ಭವನದಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಅಲ್ಲಿಗೆ ಬರ್ತಾ ಇದ್ದ ಆರ್ಕೇಸ್ಟ್ರಾ ತಂಡ ರಾಜೇಶ್ ವಾಯ್ಸ್ ಆಫ್ ಮ್ಯೂಸಿಕ್ ಅಥವಾ ರವೀಂದ್ರ ಪ್ರಭು ತಂಡದವರ ಹಾಡು. ಅವರ ಜೊತೆ ನಮ್ಮ ಕಾಲೇಜಿನವರೂ ಧ್ವನಿ ಗೂಡಿಸುತ್ತಿದ್ದರು. ಆಗ ಸಭಾಂಗಣದಲ್ಲಿ ಕೇಳಿ ಬರುತ್ತಿದ್ದ ಕಿರುಚಾಟ, ಅವರ ಮೇಲೆ ರಾಕೆಟ್ ದಾಳಿ ಆಗುತ್ತಿದ್ದದ್ದು, ಕೊನೆ ಕೊನೆಗೇ ಗೋಡೆಯ ಪ್ಲಾಸ್ಟರಿಂಗ್ ಕಿತ್ತು ಫ್ಯಾನಿಗೆ ಎಸೆದು ಅದು ಕ್ಷಿಪಣಿ ದಾಳಿ ಥರ ಚೂರು ಚೂರಾಗಿ ಸಭಾಂಗಣದಲ್ಲಿ ಚೆಲ್ಲಾಪಿಲ್ಲಿಯಾಗುತ್ತಿದ್ದುದು.... ಸಭಾಂಗಣದಲ್ಲಿ ಮೂಲಯಲ್ಲಿ ಕುಳಿತ ಗುಂಪೊಂದು ಒಂದೇ ಸ್ವರದಲ್ಲಿ .... ಎಂಚಿ ಸಾವ್ ಯಾ.... ಅಂತ ಹೇಳ್ತಾ ಇದ್ದದ್ದೆಲ್ಲ ಹಚ್ಚಹಸಿರಾಗಿ ನೆನಪಿದೆ.


ಅದೇ ವೇದಿಕೆಯಲ್ಲಿ ಸುಶೀಲ್ ಮತ್ತಿತರರು ಮಾಡಿದ್ದ ಮಾರ್ ಕಣ್ಣು ಹೋರಿ ಮ್ಯಾಲೇ, ಕಲರ್ ಕಲರ್ ಕಲರ್, ಮೇರಿ ಕ್ವಾಬೋ ಮೇಜೋ ಆಯೇ.... ಹೀಗೆ ಹಲವು ನೃತ್ಯಗಳು ಯಾವತ್ತೂ ನೆನಪಿರುತ್ತದೆ. ಆ ಹಾಡನ್ನು ಎಲ್ಲಿಯಾದರೂ ಕೇಳಿದ ತಕ್ಷಣ ಸಿನಿಮಾ ರೀಲಿನಂತೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತದೆ....

ಚೆಂದದ ನೆನಪಿರಬಹುದು, ವಿಷಾದದ ನೆನಪಿರಬಹುದು ಹಾಡು, ಬಣ್ಣ, ಧ್ವನಿ, ಫೋಟೋ, ರಾಗ, ಪರಿಮಳ ಎಲ್ಲವೂ ಒಂದೊಂದು ದ್ಯೋತಕಗಳು.... ಹಳತನ್ನೆಲ್ಲ ಮತ್ತೆ ಮತ್ತೆ ಕಾಡುವಂತೆ ಮಾಡುವ ಶಕ್ತಿಗಳು. ವ್ಯಕ್ತವಾದ, ವ್ಯಕ್ತವಾಗದ ಭಾವಗಳಿಗೆ, ಹಂಚಿಕೊಂಡ, ಹಂಚಿಕೊಳ್ಳದ ಮಾತುಗಳಿಗೆ, ಮರೆತ ಅಥವಾ ಮರೆಯಲು ಯತ್ನಿಸಿದ ಘಟನೆಗಳಿಗೆ ಮತ್ತೆ ಜೀವ ತುಂಬಿ ಧುತ್ತನೆ ಎದುರು ತಂದು ನಿಲ್ಲಿಸಬಲ್ಲವು...


-------------


ಸ್ನೇಹಿತರೇ...

(ನೆನಪಿನ ಪಯಣ-6)


ಆಸಕ್ತಿ ಮತ್ತು ಹೊಟ್ಟೆಪಾಡು ಜೊತೆಜೊತೆಯಾಗಿಯೇ ಸಾಗಬೇಕೆಂದಿಲ್ಲ. ಜೀವನ ಸಾಗಿಸಲು ದುಡ್ಡು ಬೇಕು. ದುಡ್ಡು ಸಂಪಾದಿಸಲು ಕೆಲಸ ಬೇಕು. ನಾವು ಹುಡುಕಿದ ಅಥವಾ ಪಡೆದ ಕೆಲಸ ನಮ್ಮ ಆಸಕ್ತಿ ಅಥವಾ ಕಲಿತ ಕ್ವಾಲಿಫಿಕೇಶನಿಗೆ ಸೂಕ್ತವೇ ಇರಬೇಕೆಂದಿಲ್ಲ. ಎಷ್ಟೋ ಸಲ, ಎಷ್ಟೋ ಮಂದಿ ಸಿಕ್ಕಿದ ಕೆಲಸಕ್ಕೆ ತೃಪ್ತಿ ಪಡಬೇಕಾಗುತ್ತದೆ. ಅಥವಾ ದೊರಕಿದ ಕೆಲಸದ ಜೊತೆ ಹೊಂದಿಕೊಂಡು ಬದುಕಬೇಕಾಗುತ್ತದೆ. ನಾನು ಕಲಿತ ಕ್ವಾಲಿಫಿಕೇಶನಿಗೆ ಈ ಕೆಲಸವಲ್ಲ ಎಂದೋ ಅಥವಾ ನಾನು ಕಂಡ ಕನಸಿನ ಕೆಲಸ ಇದಲ್ಲ ಎಂದೋ ಪರಿತಪಿಸುತ್ತಾ ಕುಳಿತರೆ ಮಾಡುತ್ತಿರುವ ಕೆಲಸಕ್ಕೆ ನ್ಯಾಯ ಸಲ್ಲಿಸಲೂ ಸಾಧ್ಯವಾಗುದುದಿಲ್ಲ, ಮಾತ್ರವಲ್ಲ ಮನಶ್ಶಾಂತಿಯೂ ಇರುವುದಿಲ್ಲ.


ಕಾಲೇಜು ಕಲಿಯುತ್ತಿರುವಾಗ ಪ್ರತಿಯೊಬ್ಬರಿಗೂ ಒಂದೊಂದು ಕನಸು ಇದ್ದಿರಬಹುದು. ಆ ಕೆಲಸ ಮಾಡಬೇಕು, ಈ ಕೆಲಸ ಮಾಡಬೇಕು ಎಂದೆಲ್ಲ. ಬೇರೆ ಬೇರೆ ಪ್ರತಿಭೆ ಹೊಂದಿದವರು ಕಾಲೇಜಿನಲ್ಲಿ ಕಾಣ ಸಿಗುತ್ತಾರೆ. ಡ್ಯಾನ್ಸು, ಹಾಡುವವರು, ಸ್ಪೋರ್ಟ್ಸಿನಲ್ಲಿ ಸಕ್ರಿಯ ಇರುವವರು, ತುಂಬ ಚೆನ್ನಾಗಿ ಬರೆಯುವವರು, ತುಂಬ ಚೆಂದದ ಸ್ವರ ಇರುವವರು, ಮಾತನಾಡುವವರು, ಚೆನ್ನಾಗಿ ಚಿತ್ರ ಬಿಡಿಸುವವರು.... ಹೀಗೆ ಬೇರೆ ಬೇರೆ ಪ್ರತಿಭೆ ಇರುವವರು ಇರುತ್ತಾರೆ. ಆದರೆ, ಒಂದು ಹತ್ತು ವರ್ಷ ಕಳೆದ ಬಳಿಕ ಅವರನ್ನು ಮಾತನಾಡಿಸಿ ನೋಡಿಯಂತೆ ಅವರೆಲ್ಲ ಅವರೊಳಗಿನ ಪ್ರತಿಭೆಗೆ ಪೂರಕವಾದ ಕೆಲಸ ಮಾಡುತ್ತಾ ಇರುವುದಿಲ್ಲ, ಅಥವಾ ಇರಬೇಕಾಗಿಲ್ಲ. ಈ ಗ್ರೂಪನ್ನೇ ಉದಾಹರಣೆ ತೆಗೆದುಕೊಳ್ಳಿ, ಬಿಕಾಂ ಕ್ವಾಲಿಫಿಕೇಶನಿಗೆ ಪೂರಕವಾಗಿ ಎಷ್ಟು ಜನಕ್ಕೆ ಕೆಲಸ ಸಿಕ್ಕಿದೆ, ಆಲೋಚನೆ ಮಾಡಿ. 10 ಮಂದಿಯಲ್ಲಿ ಒಬ್ಬರಿಗೋ, ಇಬ್ಬರಿಗೋ ಅವರವರವ ಪ್ರತಿಭೆಗೆ ಪೂರಕವಾಗಿ ಹುದ್ದೆ ದೊರಕಬಹುದು. ಅಥವಾ ಕೈಯ್ಯಲ್ಲಿ ಬಂಡವಾಳ ಹಾಕಲು ಧಾರಾಳ ದುಡ್ಡಿದ್ದರೆ ಅವರವರೇ ತಮಗೆ ಬೇಕಾದ ಬಿಝಿನೆಸ್ ಶುರು ಮಾಡಬಹುದು.

ಇದು ಹೇಗೆಂದರೆ ಇಷ್ಟ ಪಟ್ಟ ಹುಡುಗನೋ, ಹುಡುಗಿಯೋ ಸಿಕ್ಕದಿದ್ದರೂ ಅಪ್ಪ ಅಮ್ಮ ನೋಡಿದ ಹುಡುಗನನ್ನೋ, ಹುಡುಗಿಯನ್ನೋ ಮದುವೆಯಾಗಿ ನಂತರ ಆತ ಅಥವಾ ಆಕೆಯನ್ನು ಇಷ್ಟ ಪಡುವ ಹಾಗೆ. ದಾರಿ ಯಾವುದೇ ಆದರೂ ಆ ದಾರಿ ನಮ್ಮನ್ನು ನಡೆಸಿಕೊಂಡು ಹೋಗುತ್ತಲೇ ಇರುತ್ತದೆ. ತೀರಾ ಸಂತೃಪ್ತಿ ಅಥವಾ ತೀರಾ ನಿರಾಸೆ ಅನ್ನುವುದು ನಾವು ಆ ವಿಷಯ ಅಥವಾ ವ್ಯಕ್ತಿಯನ್ನು ಗ್ರಹಿಸುವುದರಲ್ಲಿ ಇರುವುದು. ಪ್ರೀತಿಸಿ ಮದುವೆಯಾದ ಜೋಡಿ ಬದುಕಿನುದ್ದಕ್ಕೂ ಸಾಮರಸ್ಯದಿಂದ ಅದೇ ಆರಂಭದ ಪ್ರೀತಿಯಿಂದ ಬದುಕಬೇಕೆಂದೇನೂ ನಿಯಮವೋ, ಪರಂಪರೆಯೋ ಇಲ್ಲ. ಆರೇಂಜ್ಡ್ ಮದುವೆಯಾದವರು ಬದುಕಿನುದ್ದಕ್ಕೂ ಹೊಂದಾಣಿಕೆ ಇಲ್ಲದೇ ಬದುಕುತ್ತಾರೆ ಎಂದೂ ಇಲ್ಲ. ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ ಹಾಗೂ ಅತಿಯಾದ ನಿರೀಕ್ಷೆ ಇರಿಸದೇ ಇರುವ ಗುಣಗಳಿದ್ದರೆ ಎಲ್ಲಿಯೂ ಬದುಕಬಹುದು. ಅದು ಈ ಹೊತ್ತಿನ ಅನಿವಾರ್ಯತೆಯೂ ಹೌದು.

ನಮಗೆ ಸಿಕ್ಕುವ ಕೆಲಸವೂ ಅಷ್ಟೇ. ಒಂದು ಪ್ರಾಯದಲ್ಲಿ ನಮ್ಮಲ್ಲಿರುವ ಪ್ರತಿಭೆಗೆ ಪೂರಕವಾದ ಕೆಲಸ ಸಿಕ್ಕರೆ ಉತ್ತಮ ಎಂಬ ಭಾವನೆ ಇರುತ್ತದೆ. ಆದರೆ ನಮ್ಮಲ್ಲಿರುವ ಹವ್ಯಾಸ ಎಷ್ಟರಮಟ್ಟಿಗೆ ನಮ್ಮ ಹೊಟ್ಟೆ ತುಂಬಿಸುತ್ತದೆ ಎಂದೂ ಯೋಚಿಸಬೇಕಾಗುತ್ತದೆ. ಒಬ್ಬನಲ್ಲಿ ಚಂದ ಹಾಡುವ ಅಭ್ಯಾಸ ಇದೆ ಎಂದುಕೊಳ್ಳಿ. ಹಾಡುವುದರಿಂದಲೇ ಆತ ವರ್ಷಪೂರ್ತಿ ಬದುಕುವಷ್ಟು ದುಡ್ಡು ಸಂಪಾದಿಸಲು ಸಾಧ್ಯವ ಎಂದು ಯೋಚಿಸಬೇಕು. ಇನ್ನೊಬ್ಬ ಕ್ರೀಡೆಯಲ್ಲಿ ಚುರುಕಿರಬಹುದು. ಆದರೆ ಕ್ರೀಡೆಯನ್ನೇ ವೃತ್ತಿಯಾಗಿಸಿ ಬದುಕಲು ಸಾಧ್ಯವಾ ಅಂತ ಯೋಚಿಸಬೇಕಾಗುತ್ತದೆ. ಅವರವರ ಅದೃಷ್ಟ, ಅವಕಾಶ, ಸಮಯ, ಸಂದರ್ಭ, ಹಣೆಬರಹ ಎಲ್ಲ ಸೇರಿ ಒಂದು ಕೆಲಸ ಅಂತ ಸಿಗುತ್ತದೆ. ತುಂಬ ಮಂದಿ ತಾವು ಮಾಡುತ್ತಿರುವ ವೃತ್ತಿಯ ಜೊತೆಗೇ ಹವ್ಯಾಸಗಳನ್ನು ಪೋಷಿಸುತ್ತಾ ಬರುತ್ತಾರೆ. ಅದು ಅವರಿಗೆ ಜಾಬ್ ಸ್ಯಾಟಿಸ್ ಫ್ಯಾಕ್ಷನ್ ಕೂಡಾ ಕೊಡುತ್ತದೆ, ಜೊತೆಗೆ ಪ್ರೀತಿಯ ಹವ್ಯಾಸದ ಸಂಪರ್ಕ ಕಡಿಯದಂತೆ ನೋಡಿಕೊಳ್ಳುತ್ತದೆ. ಇದು ಅತ್ಯಂತ ಸೂಕ್ತವಾದ ವಿಧಾನ.

ಇನ್ನು ಹುಡುಗಿಯರ ಬಗ್ಗೆ ಹೇಳಬೇಕೆಂದರೆ ಕಾಲೇಜು ದಿನಗಳಲ್ಲಿ ತುಂಬ ಚುರುಕಾಗಿ ಕಲಿತವರು, ತುಂಬ ಕನಸುಗಳನ್ನು ಕಟ್ಟಿಕೊಂಡವರೂ ಮದುವೆಯ ಬಳಿಕ ಹೌಸ್ ವೈಫ್ ಪಟ್ಟ ಕಟ್ಟಿಕೊಂಡು ಮನೆಯಲ್ಲಿರುತ್ತಾರೆ. ಈ ಪೈಕಿ ತುಂಬ ಜನಕ್ಕೆ ಅಸಮಾಧಾನವೂ ಇರುತ್ತದೆ, ಕಲಿತೂ ಮನೆಯಲ್ಲಿ ಇದ್ದೇನಲ್ಲ ಅಂತ. ನನ್ನ ಅನಿಸಿಕೆ, ನೀವು ಹೌಸ್ ವೈಫ್ ಆಗಿ ಮನೆಯಲ್ಲಿರುವ ಸಂದರ್ಭ ಸೃಷ್ಟಿಯಾಗಿರಬಹುದು. ಆದರೆ ಆ ಬಗ್ಗೆ ಕೀಳರಿಮೆಯೋ ನೀವೊಬ್ಬ ಕೆಲಸಕ್ಕೆ ಬಾರದವರೆಂಬ ಬೇಸರವೋ ಖಂಡಿತಾ ಬೇಡ. ಮನೆವಾರ್ತೆ ನೋಡಿಕೊಂಡು ಮಕ್ಕಳಿಗೆ ಆ ಪ್ರೀತಿ ಕೊಟ್ಟು ಬೆಳೆಸುವ ಜವಾಬ್ದಾರಿ ಥ್ಯಾಂಕ್ ಲೆಸ್ ಜಾಬ್ ಖಂಡಿತಾ ಅಲ್ಲ. ಪುರುಷರ ಕೈಯ್ಯಿಂದ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗದ ಜವಾಬ್ದಾರಿ ಅದು. ಅವಕಾಶ ಸಿಕ್ಕಾಗ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬಹುದು. ಇದು ಆನ್ ಲೈನ್ ಯುಗ. ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳೂ ಇರುತ್ತವೆ. ಅಥವಾ ಮಕ್ಕಳು ಸ್ವಲ್ಪ ದೊಡ್ಡವರಾಗಿ ಶಾಲೆಗೆ ಹೋಗಲು ಶುರು ಮಾಡಿದ ಬಳಿಕವಾದರೂ ಕೆಲಸಕ್ಕೆ ಹೋಗಲು ಪ್ರಯತ್ನಿಸಬಹುದು. ಬರೆಯುವ ಹವ್ಯಾಸ ಇರುವವರು ಬರೆಯಬಹುದು. ಓದಬಹುದು. ತಮ್ಮನ್ನು ಚುರುಕಾಗಿ ಇರಿಸಬಹುದು. ನಾನೊಬ್ಬಳು ಕೆಲಸಕ್ಕೆ ಬಾರದವಳಾದೆ ಎಂದೇ ಕೊರಗಿಕೊಂಡು ಕೂರಬಾರದು. ಸಿಕ್ಕ ಅವಕಾಶವನ್ನು ಹೇಗೆ ಬಳಸಬಹುದೆಂದು ಯೋಚಿಸಿ ಕ್ರಿಯಾಶೀಲರಾಗಿರಲು ಪ್ರಯತ್ನಿಸಬೇಕು. ಯಾಕೆಂದರೆ ಯಾರೂ ಕೂಡಾ ಅವರವರ ಭವಿಷ್ಯವನ್ನು ತಾವಾಗಿ ಬರೆದು ಅದರಂತೆ ಬದುಕಲು ಆಗುವುದಿಲ್ಲ. ಒಂದು ವಿಧಿ, ಅದೃಷ್ಟ, ಪರಿಸ್ಥಿತಿ ಅಂತ ಇರುತ್ತದೆ. ನಾವೆಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮ ಅದನ್ನು ಬದಲಿಸಲು ಆಗುವುದಿಲ್ಲ. ಆಗ ನಾವೇ ಪರಿಸ್ಥಿತಿಗೆ ಹೊಂದಿಕೊಂಡು ಮುಂದೆ ಹೋಗಬೇಕಾಗುತ್ತದೆ.

ಇನ್ನೊಂದು ವರ್ಗ ಕೆಲಸಕ್ಕೋಸ್ಕರ ಮನೆ, ಊರು ಬಿಟ್ಟು ಪರವೂರಿಗೆ ಹೋಗಿರುವವರು, ವಿದೇಶಗಳಲ್ಲಿ ನೆಲೆಸಿರುವವರು. ಅವರು ಸಂಪಾದನೆಗೋಸ್ಕರ ಅವರು ದೂರದೂರಿನಲ್ಲಿ ಒಬ್ಬಂಟಿಗಳಾಗಿ ದುಡಿಯುತ್ತಾ ಇರುತ್ತಾರೆ. ವರ್ಷದಲ್ಲಿ ಒಂದು ಸಲವೋ, ಎರಡು ಸಲವೋ ಕುಟುಂಬದವರ ದರ್ಶನ. ಮತ್ತು ಒಡನಾಟ. ಈಗ ಪರವಾಗಿಲ್ಲ ಕೊನೆ ಪಕ್ಷ ಚಾಟಿಂಗ್, ವಿಡಿಯೋ ಕಾಲ್ ಆದರೂ ಮಾಡಬಹುದು. ಮೊದಲೆಲ್ಲ ಪತ್ರಗಳು ಮಾತ್ರವೇ ಸಂಪರ್ಕ ಸೇತುಗಳು. ಬದುಕಿನ ಬಹುಪಾಲು ವಿದೇಶಗಳಲ್ಲೋ, ದೂರದ ಊರುಗಳಲ್ಲೋ ದುಡಿದು ಕುಟುಂಬವನ್ನು ಸಾಕುತ್ತಾರೆ. ಈ ನಡುವೆ ಕುಟುಂಬದವರ ಜೊತೆಗಿನ ಆಪ್ತ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಇಲ್ಲೂ ಅಷ್ಟೇ... ಈ ಬಗ್ಗೆಯೇ ಕೊರಗುತ್ತಾ ಕುಳಿತರೆ ಬದುಕಿನ ಇದ್ದ ಸಂತೋಷವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದೆಲ್ಲ ಬದುಕಿನ ಪಯಣದ ಒಂದು ಭಾಗ ಎಂದಷ್ಟೇ ಅಂಗೀಕರಿಸಬೇಕಷ್ಟೆ....

ಕೊನೆಯದಾಗಿ... ನನ್ನ ಕ್ವಾಲಿಫಿಕೇಶನಿಗೆ ಹೇಳಿ ಮಾಡಿಸಿದ ಕೆಲಸ ಇದಲ್ಲ ಎಂದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಸರಿಯಲ್ಲ. ಕೆಲವೊಮ್ಮೆ ಸಿಕ್ಕಿದ ಕೆಲಸವನ್ನೂ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕಿಂತ ಹೆಚ್ಚು ಸಂಪಾದನೆಯ ಕೆಲಸಕ್ಕೆ ಶಿಫ್ಟ್ ಆಗಬಹುದಲ್ಲ. ಪ್ರಪಂಚದಲ್ಲಿ ಕಡಿಮೆ ಮರ್ಯಾದೆಯ ಅಥವಾ ಹೆಚ್ಚು ಗೌರವ ಇಲ್ಲದ ಕೆಲಸ ಎಂಬುದೂ ಯಾವುದೂ ಇಲ್ಲ. ಶ್ರದ್ಧೆಯಿಂದ ದುಡಿದರೆ, ಪೂರ್ತಿ ತೊಡಗಿಸಿಕೊಂಡು ಕೆಲಸ ಮಾಡಿದರೆ ಯಾವ ಕೆಲಸವೂ ಹೊರೆಯಾಗುವುದಿಲ್ಲ, ನಮ್ಮಲ್ಲಿ ಕೀಳರಿಮೆಯನ್ನೂ ಹುಟ್ಟಿಸುವುದಿಲ್ಲ. ಒಂದು ನೆನಪಿಡಿ ನಮ್ಮ ಕೆಲಸದ ಬಗ್ಗೆ, ಭವಿಷ್ಯದ ಬಗ್ಗೆ ದೂರದಲ್ಲಿ ನಿಂತು ಕಲ್ಲೆಸೆಯುವವರು, ತಮಾಷೆ ಮಾಡುವವರು, ಉಚಿತ ಸಲಹೆಗಳನ್ನು ಕೊಡುವವರು ನಮ್ಮ ಬದುಕಿನ ದಾರಿಗೆ ನೆರವಾಗುವುದಿಲ್ಲ. ಅವರದ್ದು ದೂರದಿಂದ ಟೀಕಿಸುವ ಪ್ರವೃತ್ತಿ ಅಷ್ಟೇ. ಅಂತಹ ಟೀಕೆಗಳಿಗೆ ತಲೆ ಕೆಡಿಸಬಾರದು. ಸಿಕ್ಕಿದ ಅವಕಾಶ ಬಳಸಿ ಮುಂದೆ ಹೋಗುವುದೇ ಜಾಣತನ... ಏನಂತೀರಿ?

-ಕೆಎಂ.


-----------------------------------

ನೆನಪಿನ ಪಯಣ ಭಾಗ -7
(15-07-2019)


ಸ್ನೇಹವೆಂದರೇ ಹಾಗೆ... ಯಾವುದೇ ಶಂಕೆ, ಆತಂಕ ಇಲ್ಲದೆ ಎಲ್ಲ ಹಂಚಿಕೊಳ್ಳುವಂಥದ್ದು. ಎಷ್ಟೋ ಬಾರಿ ಮನೆಮಂದಿ, ರಕ್ತಸಂಬಧಿಗಳಲ್ಲಿ ಹೇಳಲಾಗದಂತಹ ಸಂಧಿಗ್ಧಗಳನ್ನೂ ಸ್ನೇಹಿತರ ಜೊತೆ ನಿರಾಳವಾಗಿ ಹೇಳಿ ಹಗುರಾಗಲು ಸಾಧ್ಯವಿದೆ. ಯಾಕೆಂದರೆ ಸ್ನೇಹ ಕಟ್ಟಿಕೊಳ್ಳುವುದು ಯಾವುದೇ ಕಾರಣ, ಶಿಷ್ಟಾಚಾರ ಅಥವಾ ಕಮಿಟ್ ಮೆಂಟುಗಳಿಂದಲ್ಲ. ಅದು ಹೃದಯವೇ ಆರಿಸಿಕೊಳ್ಳುವ ಸಂಬಂಧ. ಹಾಗಾಗಿ ಅಲ್ಲಿ ಯಾವುದೇ ನಿರೀಕ್ಷೆ ಅಥವಾ ಲಾಭ ನಷ್ಟಗಳ ಲೆಕ್ಕಾಚಾರ ಇರುವುದಿಲ್ಲ. ಸ್ನೇಹದ ಓಘದಲ್ಲಿ ಜಾತಿ, ಧರ್ಮ, ಲಿಂಗದ ಹಂಗೂ ಇರುವುದಿಲ್ಲ, ಇರಬೇಕಾಗಿಲ್ಲ. ಮನಸ್ಸು ಸ್ವಚ್ಛವಾಗಿರಬೇಕಷ್ಟೇ... ಅದೇ ಕಾರಣಕ್ಕೆ ಕಾಲೇಜು ದಿನಗಳು ಕಟ್ಟಿಕೊಡುವ ಸ್ನೇಹಿತರ ಜೊತೆಗಿನ ಗಾಢ ಸಂಬಂಧ ಮತ್ತು ಅವರ ಜೊತೆಗಿನ ಒಡನಾಟ ನೀಡುವ ನಿರಾಳತೆಗೆ ಬೆಲೆ ಕಟ್ಟಲಾಗುವುದಿಲ್ಲ. ಇದೇ ಕಾರಣಕ್ಕೆ ಬಹುಷಹ ನಾವು ಗ್ರೂಪಿನಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕಾಗ ಏನೋ ಕಳೆದುಕೊಂಡದ್ದನ್ನು ಪಡೆದ ಭಾವವನ್ನು ಅನುಭವಿಸುತ್ತಿದ್ದೇವೆ...

ಕಷ್ಟಕ್ಕೆ ಸಿಕ್ಕುವವರು ಸ್ನೇಹಿತರು, ಸಂಧಿಗ್ಧತೆ ಬಂದಾಗ ಬಗೆಹರಿಸುವವರು ಸ್ನೇಹಿತರು, ಎಷ್ಟೋ ಬಾರಿ ಏನೂ ಹೇಳದೆಯೇ ನಿಮ್ಮ ಗೊಂದಲಗಳನ್ನು ಅರಿತುಕೊಂಡು ಅದರಿಂದ ಹೊರ ಬರಲು ನೆರವಾಗುವವರು ಕೂಡಾ ಸ್ನೇಹಿತರೇ... ಹೇಳದೆಯೇ ನಿಮ್ಮ ದುಗುಡಗಳನ್ನು ಅರಿತುಕೊಳ್ಳಬಲ್ಲ ಸ್ನೇಹಿತರು ನಿಮ್ಮ ಜೊತೆಗಿದ್ದಾರೆಂದರೆ ನೀವು ಅದೃಷ್ಟವಂತರೆಂದೇ ಅರ್ಥ. ಅದೇ ಸಲುಗೆಯಿಂದ ಮಂಗ್ಳೂರಲ್ಲಿ ಸ್ನೇಹಿತರನ್ನೂ ದಾನೆಂಬೆ ಬೇವರ್ಸಿ... ಅಂತಾನೇ ಪ್ರೀತಿಯಿಂದ ಕರೀತಾರೆ.. ಅಲ್ಲಿ ಶಿಷ್ಟಾಚಾರ, ದಾಕ್ಷಿಣ್ಯ, ಏನಂದುಕೊಳ್ತಾನೋ ಎಂಬ ಕಸಿವಿಸಿ ಯಾವುದೂ ಇರುವುದಿಲ್ಲ.

ಎಲ್ಲೋ ಓದಿದ ನೆನಪು ತುಂಬ ಹೊತ್ತು ನಿಮ್ಮ ಆತ್ಮೀಯ ವ್ಯಕ್ತಿಯೊಬ್ಬರ ಜೊತೆ ಅಕ್ಕಪಕ್ಕ ಕುಳಿತು ಒಂದೇ ಒಂದು ಶಬ್ದವನ್ನೂ ಮಾತನಾಡದೇ ಹೊರಟು ಹೋದರೂ ಆ ಘಳಿಗೆ ನೀಡುವ ಸಾಂತ್ವನವೋ ಅಥವಾ ಆ ಅನುಭೂತಿಯೇ ತೋರಿಸಿಕೊಡುತ್ತದೆ ನಿಮ್ಮ ನಡುವಿನ ಸ್ನೇಹದ ಆಳವನ್ನು....


ಯಾರು ಎಷ್ಟು ಹೊತ್ತು ನಮ್ಮ ಜೊತೆ ನಡೆದಾಡಿದ್ದಾರೆ, ಎಷ್ಟು ವರ್ಷಗಳಿಂದ ನಮ್ಮ ಜೊತೆ ಓಡಾಡಿದ್ದಾರೆ ಎಂಬುದರಿಂದ ಸ್ನೇಹತ ತೀವ್ರತೆ ನಿರ್ಧಾರ ಆಗುವುದಲ್ಲ. ಯಾರ ಹೆಜ್ಜೆ ಗುರುತು ನಮ್ಮ ಎದೆಯಾಳದಲ್ಲಿ ಬಲವಾಗಿ ಮೂಡಿದೆ ಎಂಬ ಕಾರಣಕ್ಕೆ ಸ್ನೇಹ ಹುಟ್ಟುತ್ತದೆ. ಕೇವಲ 10 ನಿಮಿಷಗಳಲ್ಲಿ ಒಂದೊಳ್ಳೆ ಸ್ನೇಹಿತ, ಸ್ನೇಹಿತೆ ನಿಮಗೆ ಸಿಕ್ಕಬಹುದು. 10 ವರ್ಷಗಳಿಂದ ನಿಮ್ಮ ಪಕ್ಕವೇ ಕುಳಿತು ಕೆಲಸ ಮಾಡುವ ಸಹೋದ್ಯೋಗಿಯೊಬ್ಬ ನಿಮ್ಮ ಸ್ನೇಹಿತನಲ್ಲದೇ ಹೋಗಬಹುದು. ನೀವು ಕಳೆದ ಸಮಯದ ಅವಧಿ ಲೆಕ್ಕವಲ್ಲ. ನಿಮ್ಮ ನಡುವಿನ ಕೆಮಿಸ್ಟ್ರಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ನಿಮ್ಮನ್ನು ಕಟ್ಟಿ ಹಾಕುತ್ತದೆ.

ಕೆಲವು ಸಂಬಂಧಗಳಿಗೆ ಹೆಸರು ಕೊಡಲು ಆಗುವುದಿಲ್ಲ. ಕೆಲವು ಸಂಬಂಧಗಳನ್ನು ಪದಗಳಲ್ಲಿ ಕಟ್ಟಿ ಹಾಕಲು ಬರುವುದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ಶಿಷ್ಟಾಚಾರದ ಹಂಗಿಲ್ಲದೆ, ಯಾವುದೇ ದಾಕ್ಷಿಣ್ಯಗಳ ರಗಳೆಗಳಿಲ್ಲದೆ ಮಾಡುವ ಉಪಕಾರ, ಅವರಿಗೋಸ್ಕರ ನೀಡುವ ಸಮಯ, ಅವರನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗುವ ಸ್ವಭಾವಗಳೆಲ್ಲ ಸ್ನೇಹದ ಸುತ್ತಮುತ್ತಲ ಗಟ್ಟಿ ಬೇರುಗಳು. ಇದರಾಚೆಗೆ ಪದಗಳಲ್ಲಿ ಸ್ನೇಹವನ್ನು ಕಟ್ಟಿಕೊಡಲು ಹೊರಡುವುದು ಮೂರ್ಖತನವಾದೀತು...

ಸೈಕಲ್ ಸವಾರಿ ಕಲಿತ ಬಳಿಕ ನೀವು ಎಷ್ಟೇ ವರ್ಷ ಸೈಕಲ್ ತುಳಿಯದೆ ಅಭ್ಯಾಸ ಕಳೆದುಕೊಂಡಿದ್ದರೂ ಒಂದೊಮ್ಮೆ ಸೈಕಲ್ ಏರಿದ ಬಳಿಕ ಪೆಡಲ್ ತುಳಿದರೆ ನಿಧಾನವಾಗಿಯಾದರೂ ಆ ಬ್ಯಾಲೆನ್ಸ್ ಮತ್ತೆ ಸಿದ್ಧಿಸುತ್ತದೆ. ಸ್ನೇಹ ಕೂಡಾ ಹಾಗೆಯೇ... ಕಾರಣಾಂತರಗಳಿಂದ ಸ್ವಲ್ಪ ಕಾಲ ದೂರವಾಗಿದ್ದ ಆಪ್ತ ಸ್ನೇಹಿತ ಮತ್ತೆ ಸಿಕ್ಕಾಗ ಪೆಟ್ಟಿಗೆಯ ಬೀಗ ತೆಗೆದ ಹಾಗೆ ಅದೇ ಹಳೆ ಪರಿಮಳ ತಾಜಾ ತಾಜಾ ಮತ್ತೆ ಹೊರ ಬರಬಹುದು.... ಅದಕ್ಕೆ ವಯಸ್ಸಿನ, ಹುದ್ದೆಯ, ಧರ್ಮದ, ಸ್ಥಾನಮಾನದ ಹಂಗು ಇರಬೇಕಾಗಿಲ್ಲ, ಇರುವುದೂ ಇಲ್ಲ. ಅವನ ದೃಷ್ಟಿಯಲ್ಲಿ ಇವ ಅವನ ಸ್ನೇಹಿತ ಮಾತ್ರ... ಅವ ಬೇರಿನ್ನೇನು ಎಂಬುದು ಗೌಣವಾಗಿರುತ್ತದೆ... ನಮ್ಮ ಗ್ರೂಪಿನಲ್ಲಿ ಮತ್ತೆ ನಳನಳಿಸುತ್ತಿರುವ ಸಂಭಾಷಣೆಗಳನ್ನು ಕಂಡಾಗ ಅನಿಸಿದ್ದು ಇದು... ನಿಮಗೂ ಈ ಬಗ್ಗೆ ಹೇಳಲಿದ್ದರೆ ಹಂಚಿಕೊಳ್ಳಿ....

ಇಲ್ಲಿ ತನಕ ಓದಿದವರಿಗೆ ಧನ್ಯವಾದಗಳು...

(ಮುಂದುವರಿಯಲಿದೆ)
-ಕೆಎಂ


2 comments:

Sushil Kumar S. ULLAL MANGALORE said...

ಈಎಲ್ಲವನ್ನು ಸರಿಯಾಗಿ ನೆನಪಿಸಿ ಬರೆದಿದ್ದೀರ. 20 ವರ್ಷ ಹಿಂದೆ ಹೋದ ಅನುಭವವಾಯಿತು. ನಾಳೆ ಪುನಃ ಕಾಲೇಜಿಗೆ ಹೋಗೋಣ ಅನ್ನಿಸ್ತು.

ಸುಶೀಲ್

Unknown said...

ಈಗ ತಾನೇ ಕಾಲೇಜು ಮುಗಿಸಿ ಹೊರಬಂದ ಅನುಭವವಾಯ್ತು....ಮಂಗಳೂರಿನ ಕೆಂಪುಕೋಟೆಯ ಹಳೆವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ...ನಮಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಟ್ಟಂತಹ ವಿಶ್ವವಿದ್ಯಾನಿಲಯ ಕಾಲೇಜಿಗೆ, ಕಾಲೇಜಿನ ಹೆಮ್ಮೆಯ ಉಪನ್ಯಾಸಕ ವೃಂದದವರಿಗೆ, ಎಳೆ ಎಳೆಯಾಗಿ ಹಳೆ ನೆನಪಿನ ಬುತ್ತಿಯನ್ನು ತೆರೆದು ಸಿಂಹಾವಲೋಕನದ ಸಿಹಿಯನ್ನು ಸವಿಯಲು ಕಾರಣಕರ್ತರಾದ ನಿಮಗೂ ಸಹ ತುಂಬು ಹೃದಯದ ಧನ್ಯವಾದಗಳು...🙏🙏🙏