ಟಿ.ವಿ. ರಿಪೇರಿಗೆ ಬಂದವನಿಂದ ಮೋಸಕ್ಕೊಳಗಾಗಿದ್ದೇನೆ, ನೀವು ಇಂಥವರ ಬಗ್ಗೆ ಜಾಗ್ರತೆ ವಹಿಸಿ...

 


ಈ ಪೋಸ್ಟ್ ಓದುತ್ತಿರುವ ಎಲ್ಲರಿಗೂ ನಮಸ್ಕಾರ. ನಾನು ಟಿವಿ ರಿಪೇರಿ ಮಾಡುವ ವ್ಯಕ್ತಿಯೊಬ್ಬನನ್ನು ನನ್ನ ನಿರ್ಲಕ್ಷ್ಯದಿಂದ ನಂಬಿ ಮೋಸ ಹೋದ ವಿಚಾರ ಇದು. ನನ್ನ ಹಾಗೆ ನೀವು ಮೋಸ ಹೋಗಬಾರದು ಎಂಬ ಕಳಕಳಿಯಿಂದ ಈ ಬರಹ.

ವಂಚಕನ ಹೆಸರು-ಪದ್ಮನಾಭ (ನಿಜ ಹೆಸರು ಗೊತ್ತಿಲ್ಲ), ಊರು-ಬಂಟ್ವಾಳ ತಾಲೂಕಿನ ಕೂರಿಯಾಳ.

ನನಗೆ ಆತನ ಪೂರ್ವಾಪರ ಗೊತ್ತಿಲ್ಲ ಎಂಬ ವಿಶ್ವಾಸದಿಂದ ಟಿವಿ ರಿಪೇರಿಗೆ ಪಾರ್ಟ್ ತೆಗೆಯುವ ನೆಪದಲ್ಲಿ ವಿಶ್ವಾಸ ಮೂಡಿಸಿ 7000 ರು. ವಂಚಿಸಿ ಈಗ ಕಾಣೆಯಾಗಿದ್ದಾನೆ.

.............................

ಸಹನೆ ಇರುವವರು ವಂಚನೆಯ ಸ್ವರೂಪದ ಬಗ್ಗೆ ಈ ಕೆಳಗಿನ ಬರಹ ಓದಬಹುದು... (ಕೊನೆಗೆ ಆತನ ಫೋನ್ ನಂಬರ್ ನೀಡಿದ್ದೇನೆ)

2022 ಅಕ್ಟೋಬರ್ ನಲ್ಲಿ ನಾವು ಶಿಯೋಮಿ ಎಂಐ ಸ್ಮಾರ್ಟ್ ಟಿವಿ ಅಮೆಝಾನ್ ಮೂಲಕ ಖರೀದಿಸಿದ್ದೆವು. ಅದಕ್ಕೆ ಫ್ರೀ ಇನ್ಟಾಲೇಶನ್ ಸೇವೆ ಇತ್ತು. ಶಿಯೋಮಿಯವರು ಟಿವಿ ಫಿಟ್ ಮಾಡಲು ಬಂಟ್ವಾಳ ತಾಲೂಕಿನ ವ್ಯಕ್ತಿಯೊಬ್ಬನನ್ನು ನಿಯೋಜಿಸಿದ್ದರು. ಆನ್ಲೈನ್ ಮೂಲಕ ಸಿಕ್ಕಿದ ಮಾಹಿತಿ ಪ್ರಕಾರ ಆ ವ್ಯಕ್ತಿ 2022 ಅಕ್ಟೋಬರಿನಲ್ಲಿ ನಮ್ಮ ಮನೆಗೆ ಬಂದು ಟಿ.ವಿ. ಇನ್ ಸ್ಟಾಲ್ ಮಾಡಿ ತೆರಳಿದ್ದ. ಆಗ ಆತನ ನಂಬರ್ ನನ್ನ ಮೊಬೈಲಿನಲ್ಲಿ ಸೇವ್ ಆಗಿತ್ತು. ನಂತರ ಆತ ಉಭಯಕುಶಲೋಪರಿ ರೀತಿ ಕೆಲವೊಮ್ಮೆ ನನ್ನ ಸ್ಟೇಟಸ್ಸುಗಳಿಗೆ ರಿಪ್ಲೈ ಮಾಡುವ ಮೂಲಕ ನನಗೆ ಆತ ಪರಿಚಿತ ಎಂಬ ಭಾವ ಇತ್ತು. ಅದಕ್ಕಿಂತ ಹೆಚ್ಚು ಆತನ ಪೂರ್ವಾಪರ ಗೊತ್ತಿರಲಲ್ಲ.

 

ಸುಮಾರು ಮೂರು ವಾರಗಳ ಹಿಂದೆ ನಮ್ಮ ಟಿವಿ ಹಾಳಾಯಿತು. ಈ ಟೀವಿಗೆ ಒಂದು ವರ್ಷ ಮಾತ್ರ ವಾರಂಟಿ ಇದ್ದದ್ದು, ಅದು 2023ರ ಅಕ್ಟೋಬರಿಗೆ ಮುಗಿದಿತ್ತು. ನಾನು ಮತ್ತೊಂದು ವರ್ಷಕ್ಕೆ ಎಕ್ಸಟೆಂಡೆಂಡ್ ವಾರಂಟಿ ಮಾಡಿಸಿದ್ದು ಅದು ಚಾಲೂ ಇದ್ದರೂ ಟಿವಿ ಹಾಳಾದ ಹೊತ್ತಿಗೆ ಗಡಿಬಿಡಿಯಲ್ಲಿ ಮರೆತು ಹೋಗಿತ್ತು. ಇನ್ನು ಎಂಐ ಸಂಸ್ಥೆಯವರಿಗೆ ಅಧಿಕೃತವಾಗಿ ಕರೆ ಮಾಡಿ, ಅವರು ಜನ ನಿಯೋಜಿಸಿ, (ಹೇಗಿದ್ದೂ ವಾರಂಟಿ ಮುಗಿದ ಕಾರಣ) ರಿಪೇರಿ ಆಗುವಾಗ ತಡವಾಗ್ತದೆ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ನಮ್ಮ ಟಿ.ವಿ.ಫಿಟ್ ಮಾಡಿ ಹೋಗಿದ್ದ ವ್ಯಕ್ತಿಯನ್ನೇ ಕರೆ ಮಾಡಿ ರಿಪೇರಿಗೆ ಕರೆದೆ. ಆತ ಮಧ್ಯಾಹ್ನ ಬಂದು ಟಿ.ವಿ. ಪರೀಕ್ಷೆ ಮಾಡಿ ಅದರ ಬೋರ್ಡ್ ಹೋಗಿದೆ ಎಂದು ಹೇಳಿದ. ಹೊಸ ಬೋರ್ಡ್ ಹಾಕುವುದಾಗಿ ತಿಳಿಸಿ 2000 ರು. ಹಣ ತಕ್ಕೊಂಡು ಹೋದ. ಅದಾಗಿ ಎರಡು ದಿನಗಳ ಬಳಿಕ ಎರಡು ಸಲ ಕರೆ ಮಾಡಿ ಬೋರ್ಡ್ ಬಂದಿದೆ, ಅದಕ್ಕೆ 8000 ಖರ್ಚಾಗುತ್ತದೆ, ಇನ್ನೂ ಸ್ವಲ್ಪ ದುಡ್ಡು ಬೇಕು ಅಂತ ಹೇಳಿ ಪುನಃ 7000 ಗೂಗಲ್ ಪೇ ಮಾಡಿಸಿಕೊಂಡ. ನಂತರ ಆತ ನಾಪತ್ತೆ. ಫೋನ್ ಕರೆ ಸ್ವೀಕರಿಸುವುದಿಲ್ಲ!!! ಮೆಸೇಜಿಗೆ ಉತ್ತರ ಇಲ್ಲ. ಕೊನೆಯದಾಗಿ ಕಾಲ್ ಮಾಡಿದ ವೇಳೆ ಇನ್ನು ಒಂದು ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇನೆ ಅಂತ ಹೇಳಿದವ ನಂತರ ಪತ್ತೆಯೇ ಇಲ್ಲ. ಹಾಗಂತ ಆತನ ಫೋನ್ ಸ್ವಿಚಾಫ್ ಆಗ್ಲಿಲ್ಲ. ರಿಂಗ್ ಆಗ್ತದೆ. ವಾಟ್ಸಪ್ ಮೆಸೇಜ್ ಡೆಲಿವರಿ ಆಗ್ತದೆ, ಡಬಲ್ ಬ್ಲೂಟಿಕ್ ಬೀಳುವುದಿಲ್ಲ. ಒಟ್ಟಿನಲ್ಲಿ ಆತ ನನಗೆ ಮೋಸ ಮಾಡಿದ್ದು ಖಚಿತವಾಯ್ತು.

ಇದಾದ ಮೇಲೆ ನಾನು ಪರಿಶೀಲನೆ ಮಾಡಿದಾಗ ನಾನು ಎಕ್ಸಟೆಂಡೆಂಡ್ ವಾರಂಟಿ ಮಾಡಿಸಿದ ದಾಖಲೆ ಸಿಕ್ಕಿತು!! ನಂತರ ಅಧಿಕೃತವಾಗಿ ಶಿಯೋಮಿ ಎಂಐ ಸಂಸ್ಥೆಗೆ ದೂರು ನೀಡಿ ಅಧಿಕೃತ ಟೆಕ್ನಿಶಿಯನ್ ಬಂದು ವಾರಂಟಿ ಸಹಿತ ರಿಪೇರಿ ಮಾಡುವ ಭರವಸೆ ನೀಡಿದರು. ಅವರ ಬಳಿ ಈ ವಂಚಕನ ಬಗ್ಗೆ ಹೇಳಿದಾಗ ಅವರಿಗೆ ದೇವರ ದಯದಿಂದ ಆತನ ಪರಿಚಯ ಇತ್ತು. ಆತ, ಇದೇ ರೀತಿ ಹಲವು ಹೆಸರುಗಳಿಂದ ಹಲವರಿಗೆ ಮೋಸ ಮಾಡಿದ್ದಾನೆ, ತುಂಬ ದುಡ್ಡು ಹಿಡಿಸಿದ್ದಾನೆ, ಆತನನ್ನು ಬಹಳಷ್ಟು ಸಮಯದ ಹಿಂದೆಯೇ ಶಿಯೋಮಿ ಸಂಸ್ಥೆ ತನ್ನ ಟೆಕ್ನಿಶಿಯನ್ ಗಳ ಬಳಗದಿಂದ ಕೈಬಿಟ್ಟಿದೆ ಎಂದು ತಿಳಿದುಬಂತು.

ಇದಿಷ್ಟು ಕತೆ. ಗಮನಿಸಬೇಕಾದ ವಿಚಾರಗಳು

1)      ನಾನು ಟಿವಿ ಕಂಪನಿಗೆ ಅಧಿಕೃತವಾಗಿ ಕಂಪ್ಲೆಂಟ್ ಮಾಡಿಸದೆ ಆತನಿಗೆ ನೇರವಾಗಿ ಕರೆ ಮಾಡಿ ಬರಿಸಿದ ಕಾರಣ, ಈ ವಂಚನೆಗೆ ಟಿವಿ ಕಂಪನಿ ಕಾರಣ ಆಗುವುದಿಲ್ಲ.

2)      ನಾವು ಬಹಳಷ್ಟು ವ್ಯವಹಾರ ನಂಬಿಕೆ ಆಧಾರದಲ್ಲೇ ಮಾಡುತ್ತೇವೆ, ಮನೆಗೆ ಬರುವ ಪ್ರತಿಯೊಬ್ಬರ ಫೋಟೋ ತೆಗೆದು, ಆಧಾರ್ ಸಂಖ್ಯೆ ನೋಡಿ ವ್ಯವಹರಿಸುವುದಿಲ್ಲ. ಈ ನಂಬಿಕೆಯೇ ನನಗೆ ಮುಳುವಾಯಿತು.

3)      ನಾನು ಕಳೆದುಕೊಂಡ ದುಡ್ಡು 7000 ರುಪಾಯಿ. ಈ 7000 ರುಪಾಯಿಗೆ ಕೋರ್ಟ್ ಕಚೇರಿ ಅಲೆಯಬೇಕೇ ಎಂಬುದು ಪ್ರಶ್ನೆ.

4)      ನಿಮ್ಮಲ್ಲೊಂದು ವಿಜ್ಞಾಪನೆ, ಇಂತಹ ಸಂದರ್ಭಗಳಲ್ಲಿ ಅಧಿಕೃತವಾಗಿ ಕಂಪ್ಲೇಂಟ್ ಮಾಡಿಯೇ ಟೆಕ್ನಿಶಿಯನ್ ಗಳನ್ನು ಮನೆಗೆ ಬರಿಸಿಕೊಳ್ಳಿ. ಪೂರ್ವಾಪರ ಗೊತ್ತಿಲ್ಲದ ಯಾವುದೇ ವ್ಯಕ್ತಿಗಳ ಜೊತೆ ಸರಿಯಾದ ದಾಖಲೆಗಳಿಲ್ಲದೆ ವ್ಯವಹಾರ ಖಂಡಿತಾ ಮಾಡಬೇಡಿ. ಮಾಡಿದರೂ ಸರಿಯಾದ ದಾಖಲೆ ಇರಿಸಿಕೊಳ್ಳಿ.

 

......

ಇನ್ನಷ್ಟು ವಿಚಾರ ಗಮನಿಸಿ...

1)      ಆತ ಟಿವಿ ಪರೀಕ್ಷಿಸಲು ಬರುವಾಗ ಮಾಸ್ಕ್ ಧರಿಸಿದ್ದ

2)      ಆತನ ಊರು, ವಿಳಾಸ ಗೊತ್ತಿಲ್ಲ ಎಂಬ ವಿಶ್ವಾಸ ಆತನಿಗಿತ್ತು.

3)      ಫೋನ್ ಸ್ವಿಚಾಪ್ ಮಾಡದ ಕಾರಣ ತಕ್ಷಣಕ್ಕೆ ಆತ ಮೋಸಗಾರ ಎಂದು ನಾನು ಭಾವಿಸಲಿಕ್ಕಿಲ್ಲ ಎಂಬ ಧೈರ್ಯ ಆತನಿಗಿತ್ತು.

4)      ತುಳು ಮಾತನಾಡುವವನೇ ಆಗಿರುವುದಲ್ಲದೆ ವಾಟ್ಸಪ್ ಮೆಸೇಜ್ ಮಾಡುವ ಮೂಲಕ ಪರಿಚಿತನಂತೆ ನಟಿಸಿದ್ದ

5)      ಟಿವಿ ಪರೀಕ್ಷೆ ಮಾಡುವ ಸಂದರ್ಭ ಪದೇ ಪದೇ ಈರ್ ಎಕ್ಸಟೆಂಡೆಡೆ ವಾರಂಟಿ ಮಲ್ಪೋಡಿತ್ತ್ಡಂಡ್, ಯಾನ್ ಆನಿಯೇ ಪಣ್ತೆ, ಈರ್ ಮಲ್ತಿಜ್ಜರ್, ಮಲ್ತಿಜ್ಜರ್ ಆರೇಳು ಸಲ ನನ್ನಲ್ಲಿ ಹೇಳುವ ಮೂಲಕ ನಾನು ಎಕ್ಸಟೆಂಡೆಡ್ ವಾರಂಟಿ ಮಾಡಿಸಿಲ್ಲ ಎಂಬ ಭಾವವನ್ನು ನನ್ನಲ್ಲಿ ಮೂಡಿಸಿದ್ದ (ವಾಸ್ತವದಲ್ಲಿ ವಾರಂಟಿ ಇತ್ತು, ಆತನ ಮಾತಿನ ಚಾಕಚಕ್ಯತೆಯಲ್ಲಿ ಅದು ನನ್ನ ಅರಿವಿಗೇ ಬರಲಿಲ್ಲ)

 

ನನಗೆ ತಿಳಿದ ಮಾಹಿತಿ ಪ್ರಕಾರ ಈತ ನನ್ನಲ್ಲಿ ಹೇಳಿದೆ ಹೆಸರು ಪದ್ಮನಾಭ ಅಂತ. (ಈತ ಹಲವರಲ್ಲಿ ಹಲವು ಹೆಸರು ಹೇಳಿ ವಂಚಿಸಿದ್ದಾನೆ ಅಂತ ತಡವಾಗಿ ನನಗೆ ತಿಳಿಯುತು) ಈತನ ಊರು ಬಂಟ್ವಾಳ ತಾಲೂಕಿನ ಸೋರ್ನಾಡು, ಕೂರಿಯಾಳ ಅಂತೆ. ಸಪೂರ ವ್ಯಕ್ತಿ, ಗಡ್ಡಧಾರಿಯಾಗಿದ್ದ. ಅತೀ ಬುದ್ಧಿವಂತ. ಮನೆಗೆ ಬರುವಾಗ ಮಾಸ್ಕ್ ಹಾಕಿದವ (ಜ್ವರ ಅಂತ ನೆಪ ಹೇಳಿದ್ದ) ಹೋಗುವ ವರೆಗೂ ತೆಗೆಯಲಿಲ್ಲ. ಈತನ ಸಂಪರ್ಕ ಸಂಖ್ಯೆ 9663499813.

ಈತನಿಗೆ ಎಷ್ಟು ಸೊಕ್ಕಿದೆ ಅಂದರೆ ವಂಚಿಸಿದ ಬಳಿಕ ಮೊಬೈಲ್ ನಂಬರ್ ಜಾಗೃತ ಸ್ಥಿತಿಯಲ್ಲಿರಿಸಿ ತನ್ನನ್ನು ಯಾರೂ ಏನೂ ಮಾಡಲಾರರು ಅಂತ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಅಪರಿಚಿತ ನಂಬರಿನ ಕರೆ ಸ್ವೀಕರಿಸುವುದಿಲ್ಲ. ಈತನಿಗೆ ಮಾನ, ಮರ್ಯಾದೆ, ದಾಕ್ಷಿಣ್ಯ, ಪಶ್ಚತ್ತಾಪ ಏನೂ ಇಲ್ಲ. ನೀವೆಲ್ಲಾದರೂ ಈತನಿಂದ ವಂಚನೆಗೊಳಗಾಗಿದ್ದರೆ ದಯವಿಟ್ಟು ತಿಳಿಸಿ, ಇಂತಹ ಅನುಭವ ನಿಮಗೆ ಆಗಿದ್ದರೂ ಮಾಹಿತಿ ನೀಡಿ. ಅಥವಾ ಈತ ನಿಮಗೆ ಪರಿಚಿತನಾಗಿದ್ದರೆ ದಯವಿಟ್ಟು ನನಗೆ ಈತನ ಪೂರ್ಣ ವಿವರ ನೀಡಿ. ನನಗೆ ಆದ ಹಾಗೆ ವಂಚನೆ ಇನ್ಯಾರಿಗೂ ಆಗುವುದು ಬೇಡ.

ನನ್ನಲ್ಲಿ ಆತನ ಫೋಟೋ ಇದೆ, ಕಾಲ್ ರೆಕಾರ್ಡ್ ಇದೆ, ನೆಫ್ಟ್ ಮಾಡಿದ್ದಕ್ಕೆ ದಾಖಲೆ ಇದೆ... ಖಂಡಿತಾ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ....

....

ಕೊನೆಯ ಸಾಲುಈತ ನನಗೆ ಅಪರಿಚಿತ. ವಂಚನೆಯೇ ಈತನ ಅಧಿಕೃತ ವೃತ್ತಿ ಅಂತ ತಡವಾಗಿ ಗೊತ್ತಾಯಿತು. ನನಗೆ ಹಲವು ವರ್ಷಗಳಿಂದ ಪರಿಚಯ ಇದ್ದ ಮೂವರು ಅತೀ ಬುದ್ಧಿವಂತರು ನನಗೆ ಒಟ್ಟು 40 ಸಾವಿರ ರುಪಾಯಿ ಸಾಲ ಪಡೆದು, ಅದರಲ್ಲಿ ಒಂದು ಪೈಸೆಯನ್ನೂ ವಾಪಸ್ ನೀಡದೆ, ಸೂಕ್ತ ಸಮಜಾಯಿಷಿಯನ್ನೂ ಕೊಡದೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ, ಈತನಿಗೂ, ಅವರಿಗೂ ಯಾವ ವ್ಯತ್ಯಾಸವೂ ನನಗೆ ಕಾಣುತ್ತಿಲ್ಲ... ವೃತ್ತಿಪರ ವಂಚಕರು ಸುಭಗರಂತೆ ಹೊರಗಿನಿಂದ ಕಂಡುಬಂದರೂ ವಾಸ್ತವವಾಗಿ ಸ್ವಾಭಿಮಾನ, ಕರುಣೆ, ದಾಕ್ಷಿಣ್ಯ, ನಾಚಿಕೆ ಯಾವುದೂ ಇರುವುದಿಲ್ಲ!!!!!!!

-ಕೃಷ್ಣಮೋಹನ ತಲೆಂಗಳ (30.06.2024)

 

No comments: