Saturday, June 16, 2018

ಈ ಕ್ಷಣಕ್ಕೆ ಮಾತ್ರ....

ಕುಳಿತರೂ ಅಂಟದೆ
ಸ್ಪರ್ಶಕ್ಕೆ ದೊರಕದೆ
ಹಿಡಿಯಹೊದರೆ ಜಾರಿ
ಒತ್ತಿದರೆ ಒಡೆದು
ಮುಟ್ಟಿದರೆ ಕದಲಿ
ಇಳಿದು ಹೋಗುವ ಮುನ್ನ
ಮತ್ತೊಂದಿಷ್ಟು
ಜಲಬಿಂದುಗಳಿಗೆ
ರಹದಾರಿ...

ಅಂಟು ಹಾಕಿದರೂ
ನಿಲ್ಲದೆ
ಗಂಟುಕಟ್ಟಿ ಕೂರಿಸಲಾಗದೆ
ಬಿಂದಿವಿನ ಮೇಲೆ
ಸಹಿ ಹಾಕಲಾರದೆ
ಹಕ್ಕು ಸ್ಥಾಪನೆಗೂ
ವಶಪಡಿಸುವುದಕ್ಕೂ
ಜಾರದಂತೆ ಕಾಯುವುದಕ್ಕೂ
ಪರವಾನಗಿಯೇ ಇಲ್ಲ


ಸಮಯಕ್ಕೇ ವಾರ್ತೆ
ಬಿತ್ತಿರಿಸುವ ರೇಡಿಯೋದ ಹಾಗೆ...
ಕೂರುವುದಕ್ಕೂ
ಜಾರುವುದಕ್ಕೂ
ಕಾಲಮಿತಿಯುಂಟು
ಯಾರೋ ಬರೆದಿಟ್ಟ
ಆದೇಶದ ಪಾಲನೆಯ ಹಾಗೆ
ನಿರೀಕ್ಷೆ, ನಿರಾಸೆಗಳ
ಹಂಗೂ, ಬಂಧವೂ ಇಲ್ಲಿಲ್ಲ

ಎಲೆಯ ಮೇಲಿದ್ದಷ್ಟೇ ಹೊತ್ತು
ಬೆಳ್ಳಿಯ ಸೊಬಗು,
ಜಾರಿದ ಬಳಿಕ ಇಂಗಿ
ಕೈಗೂ,ಕಣ್ಣಿಗೂ ಸಿಕ್ಕದೆ
ಈ ಹೊತ್ತು ಮಾತ್ರ
ತನದೆಂದು ತೋರಿಸುವ
ಕೆಸುವಿನ ಕಸುವು
ತೋರಿಸುವ ಬದುಕು,
ಮತ್ತು ಸತ್ಯ

ಪದಗಳು ತುಂಬಿದ ಕವನವಿದಲ್ಲ....

ಕಂಡದ್ದು, ಕಾಣಿಸಿಕೊಂಡದ್ದು, ನೋಡಿದ್ದು, ತಿಳಿದದ್ದು, ತಿಳಿದುಕೊಂಡದ್ದು, ತೋರಿಸಿಕೊಂಡದ್ದು, ಬಚ್ಚಿಟ್ಟದ್ದು... ಸಣ್ಣ ಪುಟ್ಟ ವ್ಯತ್ಯಾಸಗಳ ಹಾಗೆ.
ಆದರೆ ಅರ್ಥಕ್ಕೂ ಭಾವಕ್ಕೂ ಅಂತರವಿದೆಯಲ್ವೇ... ಕಂಡಬರುವುದದಕ್ಕೂ, ತಿಳಿದುಕೊಳ್ಳುವುದಕ್ಕೂ... ಗ್ರಹಿಕೆ ಮತ್ತು ವಿಶ್ಲೇಷಣೆಯ ಸಾಮರ್ಥ್ಯಕ್ಕೆ ಬಿಟ್ಟದ್ದು.


ಕೆಲವೊಂದು ತಡವಾಗಿ ಅರ್ಥವಾಗುವುದು. ಕೆಲವು ಸುಲಭವಾಗಿ ಕಾಣಿಸಿಕೊಂಡು, ಬಳಿಕ ಜಟಿಲವಾಗಿ ಮತ್ತೊಮ್ಮೆ ಒಗಟಾಗಿ ಮತ್ತೊಮ್ಮೆ ಕಠಿಣವಾಗಿ ಅರ್ಥಕ್ಕೆ ಸಿಲುಕದ್ದೆಂಬ ಭಾವ ಕಾಠಿಣ್ಯವನ್ನು ಮೂಡಿಸುವುದು. ಸಂದರ್ಭಗಳು ಹಾಗೂ ಪರಿಸ್ಥಿತಿಗಳಿಗೆ ಪೂರಕವಾಗಿ ಅರಿತುಕೊಳ್ಳುವುದು ಅಥವಾ ಕಂಡುಕೊಳ್ಳುವುದು ಕೆಲವೊಮ್ಮೆ ಸಿಕ್ಕು ಹಾಕಿಕೊಂಡ ನೂಲಿನ ಉಂಡೆಯ ಹಾಗೆ. ಬಿಡಿಸಲು ಬರುವುದಿಲ್ಲ. ಅಸಲಿಗೆ ಸಿಕ್ಕಿ ಹಾಕಿಕೊಂಡ ನೂಲಿನ ಒಂದು ತುದಿಯೂ ಕೈಗೆ ಸಿಕ್ಕುವುದಿಲ್ಲ. ತುದಿ ಸಿಕ್ಕದೆ, ಗಂಟನ್ನು ಬಿಚ್ಚಲೂ ಆಗುವುದಿಲ್ಲ. ಅಸಹನೆ ಜಾಸ್ತಿಯಾದರೆ ನೂಲಿನ ಉಂಡೆಯೇ ತುಂಡು ತುಂಡಾದೀತು.


ನಂಬಿಕೆ, ನಿರೀಕ್ಷೆ, ಕಲ್ಪನೆ, ಹೋಲಿಕೆ ಕೊನೆಗೆ ಗ್ರಹಿಕೆ ಇಷ್ಟರ ನಡುವೆಯೂ ಅರ್ಥ ಅಪಾರ್ಥಗಳು ಘಟಿಸಬಹುದು. ಕಾಣದ್ದನ್ನು ನಂಬುವುದು, ನಿಖರವಲ್ಲದನ್ನು ನಿರೀಕ್ಷಿಸುವುದು, ಅಸಂಬದ್ಧವಾದುದರೊಡನೆ ಹೋಲಿಸುವುದು ಕೊನೆಗೆ ಏನು ಗ್ರಹಿಕೆಗೆ ಸಿಗುತ್ತದೋ ಅದು ವೇದ್ಯವಾಗುವುದು... ಇದು ಬದುಕು.
ವಾಸ್ತವ ಎನ್ನುವುದು ಸತ್ಯದ ಪ್ರತೀಕ ತಾನೆ. ಹಾಗಿರುವಾಗ ಸತ್ಯವೆಂಬುದು ಅಸ್ತಿತ್ವದಲ್ಲಿರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಸಂದರ್ಭ, ಪರಿಸ್ಥಿತಿ, ಮನಸ್ಥಿತಿ, ಸಮಯಾವಕಾಶ, ತಾಳ್ಮೆಗಳೆಲ್ಲವೂ ಇವುಗಳ ಮೇಲೆ ಪರಿಣಾಮ ಬೀರುತ್ತದೆ. ವಿಶ್ಲೇಷಿಸುವ ತಾಳ್ಮೆ ಇದ್ದಾಗ ಒಂದೊಂದನ್ನು ಬೇರೆ ಬೇರೆಯಾಗಿ ಇರಿಸಿ ಸೂಕ್ಷ್ಮವಾಗಿ ಪರಿಶೀಲಿಸಲೂ ಸಾಧ್ಯವಾಗುತ್ತದೆ.


ಪಡೆಯುವುದು, ಪಡೆದುಕೊಂಡೆ ಅಂದುಕೊಳ್ಳುವುದು, ಬಿಡಲಾಗದು ಎಂದುಕೊಳ್ಳುವುದು, ಕಳೆದುಕೊಂಡೆ ಎಂದು ಕಂಡುಕೊಳ್ಳುವುದು. ಹೊಂದಿದ್ದೆ ಎಂದು ಭಾವಿಸುರುವುದು ಕೂಡಾ ಇಂತಹದ್ದೇ ಸಾಲಿಗೆ ಬರುವಂಥಹವು ಅಲ್ಲವೇ. ಭಾವದಲ್ಲಿ ಪಡೆದು, ಭಾವದಲ್ಲೇ ಕಳೆದು, ಭಾವದಲ್ಲೇ ಹೊಂದಿ, ಭಾವದಲ್ಲೇ ತಳಮಳಿಸಿದ ಹಾಗೆ. ಸಾಮರ್ಥ್ಯ, ಅದೃಷ್ಟ, ಪ್ರತಿಕೂಲ ಪರಿಸ್ಥಿತಿ, ಯೋಗ್ಯತೆ ಮತ್ತು ಸಂದರ್ಭಗಳೇ ಬಹುಷಹ ಇವನ್ನೆಲ್ಲ ನಿರ್ಧರಿಸುತ್ತವೆಯೇನೋ. ಕೆಸುವಿನೆಲೆಯ ಮೇಲಿನ ನೀರ ಬಿಂದುವಿನ ಹಾಗೆ ಬದುಕು ಎಂದು ಕಂಡುಕೊಂಡರೆ ಇವಿಷ್ಟೂ ನಿರ್ಲಿಪ್ತದಾಚೆಗೆ ಸರಿದುಹೋಗಬಹುದೇನೋ. ಅದರಿಂದಾಚೆ ಹಚ್ಚಿಕೊಂಡಾಗಲೇ ಕಳೆದುಕೊಳ್ಳುವ ಭೀತಿ ಕಾಡುವುದು....

ಕಡಲಿಗೂ ಮಿತಿಯಿದೆ. ಬದುಕಿಗೂ ಪರಿಧಿಯಿದೆ. ಗೆಲವು, ಅಧಿಕಾರ, ಐಶ್ವರ್ಯ ಎಲ್ಲದಕ್ಕೂ ಇದೆ... ಹಾಗಾಗಿ ಅದನ್ನು ದಾಟಲು ಹೊರಡುವ ಮುನ್ನ ಚಿಂತಿಸಿದರೆ ಒಳಿತು... ಕಾಲೆಷ್ಟು ಚಾಚಬಲ್ಲೆ.. ಎಟುಕೀತಾ ಆಚೆಯ ದಡ ಅಂತ!

-KM

Saturday, June 2, 2018

ಈ ಹೊತ್ತಿನ ಚಿತ್ತಾರ

ಈ ಹೊತ್ತು, ಈ ಕ್ಷಣ
ಮಾತ್ರ ನಮ್ಮದು
ನಿನ್ನೆ ಮೊನ್ನೆಯ ಇತಿಹಾಸ,
ಕಾಣದ ನಾಳೆಯ ವರ್ತಮಾನದ
ಇಣುಕು... ಎರಡೂ ಕೈಯ್ಯೊಳಗಿಲ್ಲ!
ಈಗ ಕಾಣುವುದು
ಬೊಗಸೆಗೆ ಸಿಕ್ಕಿದ್ದು
ಕಣ್ಣ ಪರಿಧಿಗೆ ಕಂಡದ್ದು
ಮಾತ್ರ ತಕ್ಷಣದ ಸತ್ಯ

....

ದಿಢೀರ್ ಸುರಿದ ಮಳೆ
ಥಟ್ಟನೆ ಆವರಿಸಿದ ಬಿಸಿಲು
ಕಾಡಿದ ಅಪಮಾನ
ಗೆಲವಿನ ಅಹಂಕಾರ,
ಅಧಿಕಾರದ ಮದ,
ಅಪಾರ್ಥಗಳ ಶಂಕೆ
ಬಾನಂಗಳದ ಚಿತ್ತಾರ
ಕೂಡಿಟ್ಟ ದುಡ್ಡು
ಕೊನೆಗೆ ದೇಹವೂ ಶಾಶ್ವತವಲ್ಲ!

.......


ಹಿಂದೆಲ್ಲೋ ಸಾಧಿಸಿದ್ದರ ಬಗ್ಗೆ
ವಿಪರೀತ ಪ್ರತಾಪ ಪ್ರದರ್ಶನ,
ನಾಳೆ ಮಾಡುವುದರ ಕುರಿತು
ಅತಿರೇಕದ ಭಾಷಣ
ಎರಡಕ್ಕೂ ಆಯುಷ್ಯ ಕಡಿಮೆ
ತಾರೀಕು ದಾಟಿದ್ದಕ್ಕೂ
ವ್ಯವಹಾರ ನಡೆಯದ್ದಕ್ಕೂ
ಪುರಾವೆ ಸಿಕ್ಕುವುದಿಲ್ಲ
ಈಗ, ಇವತ್ತಿನದ್ದಕ್ಕೆ ಮಾತ್ರ ರಶೀದಿ!

......

ಮೋಡಗಳ ಜೋಡಣೆಯೂ
ಚಂಚಲ, ಬದುಕಿನ ಆಯ್ಕೆಗಳ ಹಾಗೆ
ಹಣೆಬರಹ, ಅದೃಷ್ಟ, ಅವಕಾಶಗಳ
ಲಭ್ಯತೆಯ ಹಾಗೆ
ಸ್ಕೇಲು, ಪೆನ್ಸಿಲು ಹಿಡಿದು
ಚಿತ್ರ ಮಾಡಿಡಲು ಬರುವುದಿಲ್ಲ
ಪ್ರಕೃತಿ ಈ ಹೊತ್ತು
ಕೊಟ್ಟದ್ದಕ್ಕೆ ಪ್ರೇಕ್ಷಕರಾಗುವುದೇ ಆಯ್ಕೆ
ಕಣ್ಣೇ ಕ್ಯಾಮೆರಾ, ಮನಸ್ಸೇ ಮೆಮೊರಿ ಕಾರ್ಡು!
-KM

 

Monday, May 7, 2018

ಹೊತ್ತು ಗೊತ್ತಿರಬೇಕು!

ಹೊತ್ತು ಗೊತ್ತಿರಬೇಕು!

.....

ಇಷ್ಟಪಡುವ ಕಡಲ ತಡಿಯಲ್ಲೂ
ಯಾರೂ ದಿನವಿಡೀ ಕೂರುವುದಿಲ್ಲ...
ಮರಳಲ್ಲಿ ಬರೆದ ಅಕ್ಷರಗಳಿಗೆ ಹೆಚ್ಚು ಆಯುಸ್ಸಿಲ್ಲ...
ಸಂಜೆ ಕೆಂಪಗೆ ಮುಳುಗುವ ಸೂರ್ಯನೂ ಜಾಸ್ತಿ ಕಾಯಿಸುವುದಿಲ್ಲ....

ಅಲೆ ಬಂದರೂ
ಬಳಿಗೆ ಐತಂದರೂ ಗೂಟ ಹಾಕಿ ಕೂರುವುದಿಲ್ಲ....
ಮರಳ ಬಾಚಿ ಮರಳಿ
ಗಡಿ ಆಚೆ ಭೋರ್ಗರೆದು
ಸೀಮೆ ಕಳೆಯದೆ
ನೊರೆದೋರಿ ಕರಗುವುದಲ್ಲ...

ತಂಪುಗಾಳಿ
ಕೆಂಪು ಬಾನು
ನೀರಿನಬ್ಬರದ ಸದ್ದು ಅನುಭವಿಸಲೂ ಕಾಲಮಿತಿಯುಂಟು
ಕತ್ತಲಾದ ಬಳಿಕ ಉಳಿಯುವುದು
ಗೂಟಕ್ಕೆ ಕಟ್ಟಿದ ದೋಣಿ ಮತ್ತೆ ನಿರ್ಲಿಪ್ತ ಹೆಬ್ಬಂಡೆ ಮಾತ್ರ!

Friday, May 4, 2018

ಬಯಲಾಟವೆಂಬೋ ಅನುಭೂತಿ...

ಆಟ ರೈಸಿದರೆ ಭರ್ಜರಿ ಹೊಗಳಿಕೆ, ಪೇಲವ ಎನಿಸಿದರೆ ಗೊಣಗಾಟ, ಎಡಿಟ್ ಮಾಡಿ ಬೇಗ ಮುಗಿಸಿದರೆ ಬೈಗುಳ...ರಾತ್ರಿಯಿಡೀ ಆಟ ಮುಗಿಸಿ ಮುಂಜಾನೆ ಮನೆಗೆ ಮರಳುವಾಗ ತುಸು ಮಂಪರು, ಮುಂಜಾನೆಯ ಸೂರ್ಯೋದಯದ ಪ್ರಶಾಂತ ಸ್ಥಿತಿಯಲ್ಲಿ ಇಡೀ ರಾತ್ರಿಯ ಆಟವೊಂದು ಸುಂದರ ಸ್ವಪ್ನದ ಹಾಗೆ... ಚಿತ್ತಬಿತ್ತಿಯಲ್ಲಿ ಅಚ್ಚಾಗುವ ಕನಸು. ಒಟ್ಟಿನಲ್ಲಿ ಪ್ರೇಕ್ಷಕನನ್ನು ನಿಜಾರ್ಥದಲ್ಲಿ ಬಡಿದೆಬ್ಬಿಸುವ ಕಲೆಯೆಂಬ ಯಕ್ಷಗಾನ ವೀಕ್ಷಣೆ ಒಂದು ಅನುಭೂತಿ...
.....

ದೂರದಲ್ಲಿ ರಂಗಸ್ಥಳ ಕಂಡರೆ ಸಿನಿಮಾ ಪರದೆಯ ಹಾಗೆ, ಔಟ್ ಲೈನ್ ಮಾತ್ರ ಕಾಣುವುದು ಸಂಭಾಷಣೆ ಮಾತ್ರ ಕೇಳುವುದು, ರಂಗಸ್ಥಳಕ್ಕೆ ಹತ್ತಿರ ಕುಳಿದರೆ ವೇಷಧಾರಿಗಳಿಗೆ ಎದುರಾಗಿ ನಾವೇ ಕಾಣಿಸುವುದು, ಧೀಗಿಣದ ವೇಳೆ ರಾಚುವ ಬೆವರು ಮುಖಕ್ಕೂ ಸಿಂಚನವಾದೀತು. ತುಸು ನಿದ್ರೆಗೆ ಜಾರಿದರೂ ಅದು ಮುಜುಗರದ ಸನ್ನಿವೇಶ, ಅರ್ಧದಲ್ಲಿ ಎದ್ದು ಬರುವ ಹಾಗೂ ಇಲ್ಲ... ಆಗಾಗ ಚೌಕಿಗೆ ಹೋಗಿ ನೋಡಿದರೆ ಮತ್ತೊಂದಷ್ಟು ಹೊಸ ವೇಷಗಳು ಮೌನವಾಗಿ ಬಣ್ಣ ಹಚ್ಚುವುದು ಕಾಣುವುದು. ಈ ಕಲಾವಿದರೇನು ಪರಸ್ಪರ ಮಾತನಾಡಿಕೊಳ್ಳುವುದೇ ಇಲ್ಲವೇನೋ ಎಂಬಂಥ ಮೌನ ಚೌಕಿಯಲ್ಲಿ...ಆಟದಲ್ಲೂ ಕೂತು ವಾಟ್ಸಪ್ ಚಾಟಿಂಗ್ ಮುಂದುವರಿಸುವ ಚತುರಮತಿಗಳು, ಅಲ್ಲಿಂದಲೇ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಉದಾರಿಗಳು, ಆಟದ ಓಘ ಇಳಿಯುತ್ತಿದೆ ಅಂದುಕೊಂಡ ಹೊತ್ತಿಗೆ ದೂರ ಹೋಗಿ ತುಸು ನಿದ್ರೆ ಮಾಡಿ ಸಮಯದ ಸದುಪಯೋಗ ಪಡಿಸಿಕೊಳ್ಳುವವರು, ಮರುದಿನ ಡ್ಯೂಟಿ ಇದೆ, ಇಡೀ ರಾತ್ರಿ ನಿದ್ರೆ ಕೆಟ್ಟರೆ ಕಥೆ ಕೈಲಾಸವೆಂದು ಆತಂಕಗೊಂಡು ಬೆಳಗ್ಗಿನ ಜಾವಕ್ಕೂ ಮೊದಲೇ ಆಟ ವಾರ್ಮಪ್ ಆಗುವ ಹೊತ್ತಿನಲ್ಲೇ ಮನಸ್ಸಿಲ್ಲದ ಮನಸ್ಸಿನಿಂದ ಕಂಬಿ ಕೀಳುವವರು...
ಎಷ್ಟೊಂದು ಚಿತ್ರಗಳು ಬಯಲಾಟದ ಎದುರಿನ ಸಭಾಮಂಟಪದಲ್ಲಿ...


.....

ಎಂಥಹದ್ದೇ ದಯನೀಯ ಸ್ಥಿತಿಯಲ್ಲಿರುವ ಮೈದಾನವೂ ಆಟದ ದಿನದ ಮಟ್ಟಿಗೆ ವಿದ್ಯುದ್ದೀಪಾಲಂಕಾರಗೊಂಡು ಕುರ್ಚಿಗಳ ಸಾಲು ಸಾಲುಗಳ ಮೇಳದಿಂದ ಕಂಗೊಳಿಸುತ್ತಿದೆ. ಚೌಕಿ ಎಬ್ಬಿಸಿ, ಕಂಬ ಹುಗಿದು ರಂಗಸ್ಥಳ ಕಟ್ಟಿದ ಬಳಿಕ ಒಂದು ರಾತ್ರಿಯ ಮಟ್ಟಿಗೆ ಅಲ್ಲಿಯೇ ಕದಂಬ ವನ, ಶೋಣಿತಾಪುರ, ಅಮರಾವತಿ ಎಲ್ಲ ಸೃಷ್ಟಿಯಾಗುತ್ತದೆ. ಆಟದಲ್ಲಿ ತಲ್ಲೀನನಾಗುವ ಪ್ರೇಕ್ಷಕನಿಗೆ ತಾನು ದಿನಾ ನೋಡುವ ಮೈದಾನದ ಮಧ್ಯದಲ್ಲೇ ನಡುರಾತ್ರಿ ಕುಳಿತು ಕಾಳಗಗಳಿಗೆ ಸಾಕ್ಷಿಯಾಗುವುದು ಕೆಲ ಕಾಲ ಮರೆತೆಹೋಗಿರುತ್ತದೆ.


ಚಹಾ ಚಟ್ಟಂಬಡೆ ಇಲ್ಲದೆ ರಾತ್ರಿ ಕಳೆದುಯುವುದೇ ಕಷ್ಟವೆಂದು ಕೊಂಡವರು ಮತ್ತೊಂದು ಚಟ್ಟಂಬಡೆ ಪಡೆಯಲು, ಇನ್ನೊಂದು ಗ್ಲಾಸ್ ಚಹಾ ಸುರಿಯಲು ಗೋಗರೆಯುವವರು, ಆಚೆ ಹೋಗಿ ಗ್ಲಾಸಿನ ತುಂಬಾ ಚರ್ಮುರಿ ತಂದು ತಿಂದು, ಗ್ಲಾಸನ್ನು ಅಲ್ಲೇ ಕುರ್ಚಿಯಡಿಗೆ ಎಸೆಯುವವರು, ಮಹಾನ್ ಸಾಧನೆ ಎಂಬಂತೆ ಬೀಡಿಗೆ ಬೆಂಕಿ ಹಚ್ಚಿ ಸುತ್ತಮುತ್ತ ಧೂಮ್ರಾಕ್ಷನನ್ನು ಅಟ್ಟಾಡಿಸಿ ಧ್ಯಾನಸ್ಥ ಸ್ಥಿತಿಯಲ್ಲಿರುವವರಂತೆ ಸ್ಥಿತಪ್ರಜ್ಞರಾಗಿರುವವರು, ಆಟ ಶುರುವಾಗಿ ಸ್ವಲ್ಪ ಹೊತ್ತಿನಲ್ಲೇ ಎದುರಿನ ಕುರ್ಚಿಯೆಳೆದು ಕಾಲು ಚಾಚಿ ಕೊನೆ ತನಕ ನಿದ್ರೆಯನ್ನೇ ಮಾಡುತ್ತಿರುವ ಮಹಾನುಭಾವರು, ಬರುವಾಗಲೇ ತೀರ್ಥ ಸೇವನೆ ಮಾಡಿ ರಂಗಸ್ಥಳದ ಹತ್ತಿರದಲ್ಲೇ ಕುಳಿತು ವಿಚಿತ್ರ ಹಾವಭಾವದಿಂದ ವೇಷಧಾರಿಗಳನ್ನು ಪ್ರೋತ್ಸಾಹಿಸಿ, ಆಗಾಗ ಪುಟ್ಟಕೆ ನೃತ್ಯವನ್ನೂ ಮಾಡಿ ಮನ ರಂಜಿಸುವವರು, ವೇಷಧಾರಿಗಳ ಅಲ್ಪಸ್ವಲ್ಪ ಗುರ್ತವಿದ್ದು, ರಂಗಸ್ಥಳದ ಹಿಂದೆ ಮುಂದಿನ ದೃಶ್ಯದ ಪ್ರವೇಶಕ್ಕೆಂದು ಕುಳಿತಿರುವ ಹೊತ್ತಿನಲ್ಲಿ ಆವರ ಸೆಲ್ಫೀ ತೆಗೆದು ಅದೂ ಇದೂ ಪಟ್ಟಾಂಗ ಮಾಡಿ ತಲೆ ತಿನ್ನುವವರು...ಈಗಷ್ಟೇ ಮುಗಿದ ಪದವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡು ಹತ್ತೂರು ಕೇಳುವಷ್ಟು ವಾಲ್ಯೂಮ್ ಇಟ್ಟು ಆಗಿಂದಾಗ್ಗೆ ಪ್ಲೇ ಮಾಡಿ ಹತ್ತಿರ ಕುಳಿತವರ ತಾಳ್ಮೆ ಪರೀಕ್ಷಿಸುವ ಮಹಾನುಭಾವರು... ಹೀಗೆ ಎಷ್ಟೊಂದು ಮಂದಿ ಆಟ ನೋಡಲು ಬರುತ್ತಾರೆ.

.....


ಕೆಲವೊಮ್ಮೆ ನೀರಸ ಸಂಭಾಷಣೆ, ಎಳೆತದಿಂದ ಆಟ ಬೋರೆನಿಸಿದರೆ ಮೈನವಿರೇಳಿಸುವ ಸಂವಾದ, ರಂಗಸ್ಥಳ ಪುಡಿಗಟ್ಟುವ ವೇಗದ ನರ್ತನದಿಂದ ಇಹವನ್ನೇ ಮರೆಸುವ ದೃಶ್ಯಗಳು. ನಡುವೆ ನಿದ್ರೆ ದೂಗಿ ನಿಮಿಷಗಳಷ್ಟು ಆಟ ಮಿಸ್ ಆದರೂ ನಿರಂತರ 7ರಿಂದ 8 ಗಂಟೆ ಕಾಲ ಕತೆ ಮುಂದುವರಿಯುವ ಪರಿ. ರಾಕ್ಷಸ, ದೇವೇಂದ್ರ ವೇಷ ಹಾಕಿದರೂ ಚೌಕಿ ಹೊರಗೆ ನಿಂದು ಬೀಡಿ ಎಳೆಯುವ ವಿಚಿತ್ರ ಸನ್ನಿವೇಶ, ಇನ್ನೊಂದು ಕಡೆಯ ಆಟ ಮುಗಿಸಿ ಮೇಕಪ್ಪಿನಲ್ಲೇ ಬೈಕಿನಲ್ಲಿ ಬಂದಿಳಿಯುವ ಕಲಾವಿದರು. ಆರಂಭದ ಹೊತ್ತಿಗೆ ಇರುವ ಭಾಗವತರು, ಚೆಂಡೆಯವರು ಮಧ್ಯರಾತ್ರಿಯೇ ಡ್ಯೂಟಿ ಮುಗಿಸಿ ಬೈಕಿನಲ್ಲಿ ತೆರಳಿದರೆ ಆಟ ಮುಗಿಯುವ ಹೊತ್ತಿಗೆ ಇರುವ ಹಿಮ್ಮೇಳದವರೇ ಬೇರೆ. ಕೆಲವೊಮ್ಮೆ ಪ್ರೇಕ್ಷಕರೂ ಅಷ್ಟೆ, ಮುಂಜಾನೆ ವೇಳೆಗೆ ಇರುವ ಪ್ರೇಕ್ಷಕರೇ ಬೇರೆ ಇರುತ್ತಾರೆ....

.........

ಟಿ.ವಿ.ಯಲ್ಲೋ, ಪುಸ್ತಕದಲ್ಲೋ ನೋಡೋವು ಯಕ್ಷಗಾನ ಬಯಲಾಟಕ್ಕೂ, ಬಟಾ ಬಯಲಿನಲ್ಲಿ ಇಡೀ ರಾತ್ರಿ ನಿದ್ರೆ ಗೆಟ್ಟು ಕುಳಿದು ಅನುಭವಿಸುವ ಆಟದ ಸುಖಕ್ಕೂ ಎಷ್ಟೊಂದು ವ್ಯತ್ಯಾಸ... ಆಟದ ಅನುಭೂತಿ ಅನುಭವಕ್ಕೇ ಸೀಮಿತ. ವರ್ಣನೆಗಲ್ಲ.

-ಕೆಎಂ, ಬಲ್ಲಿರೇನಯ್ಯ ಯಕ್ಷಕೂಟ, ಯಕ್ಷಗಾನ ಅಭಿಮಾನಿಗಳ ವಾಟ್ಸಪ್ ಬಳಗ.


Tuesday, May 1, 2018

ಪತ್ತನಾಜೆಗೆ ದಿನಗಣನೆ ಶುರು....

ಮೇ ತಿಂಗಳು ಬಂದಾಯ್ತು. ಬೇಸಿಗೆಯ ಯಕ್ಷಋತು ಮುಗಿಯಲು ಬೆರಳೆಣಿಕೆಯ ದಿನ ಬಾಕಿ. ಸುಡು ಸೆಕೆ ಯಕ್ಷಗಾನ ಪ್ರೇಕ್ಷಕರನಿಗೇನೂ ಕೊರತೆ ಮಾಡಿಲ್ಲ. ಯಕ್ಷರಸಿಕರಿಗೆ ತಿರುಗಾಟ ಮುಗಿಯುತ್ತಾ ಬಂತಲ್ಲ ಎಂಬುದೇ ಚಿಂತೆ. ಪರ್ವಾಗಿಲ್ಲ, ಈ ಯಕ್ಷಗಾನ ಪ್ರದರ್ಶನಕ್ಕೆ ಮಳೆ, ಬೇಸಿಗೆ ಕಾಲಗಳ ಹಂಗಿಲ್ಲ, ನಿರಂತರ ನಡೆಯುತ್ತಾ ಇರುತ್ತದೆ ಎಂಬ ಸಮಾಧಾನವೂ ಜೊತೆಗಿದೆ. 

ಮುಂದಿನ ವರ್ಷ ತಿರುಗಾಟದಲ್ಲಿ ಕಲಾವಿದರ ಬದಲಾವಣೆ ಹೇಗೇಗೆ ಇರಬಹುದು, ಯಾವ ಭಾಗವತರು ಯಾವ ಮೇಳಕ್ಕೆ ಹೋಗುತ್ತಾರೆ, ಹೊಸದಾಗಿ ಯಾರು ಬರುತ್ತಾರೆ, ಹೊಸ ಮೇಳಗಳೇನಾದರೂ ಹುಟ್ಟಿಕೊಳ್ತಾವಾ, ವಿವಾದಗಳು ತಣ್ಣಗಾಗ್ತಾವ ಎಂಬ ಪ್ರಶ್ನೆಗಳನ್ನು 2017 18ನೇ ಸಾಲಿನ ಯಕ್ಷಋತು ಬಿಟ್ಟು ಹೋಗ್ತಾ ಇವೆ.


ಕಲಾವಿದರ ಬದಲಾವಣೆಯ ವಿವಾದೊಂದಿಗೆ ತಿರುಗಾಟ ಶುರುವಾಯ್ತು. ಮೇಳಗಳ ತಿರುಗಾಟ ನಿರ್ವಿಘ್ನವಾಗಿ ಆರಂಭವಾಯಿತು. ಒಂದಷ್ಟು ಹೊಸ ಪ್ರಸಂಗಗಳೂ ರಂಗವನ್ನೇರಿದವು. ಆದರೆ, ಹಿಂದಿನ ಹಾಗೆಲ್ಲಾ ಶತದಿನೋತ್ಸವದಂತಹ ಅಬ್ಬರದ ಆಚರಣೆಗಳ ಸಂದರ್ಭ ಕಂಡು ಬಂದ ಹಾಗಿಲ್ಲ. ಯಾವ ಆಟಕ್ಕೂ ಪ್ರೇಕ್ಷಕರ ಕೊರತೆಯಾಗಿದ್ದು ತಿಳಿದುಬಂದಿಲ್ಲ. ರಾತ್ರಿ 12, 1 ಗಂಟೆ ಹೊತ್ತಿಗೆ ಮುಗಿಯುವ ಕಾಲ ಮಿತಿಯ ಆಟದ ಮಂಗಳ ಪದದ ವರೆಗೂ ಪ್ರೇಕ್ಷಕರು ಸಮಾಧಾನಕರ ಸಂಖ್ಯೆಯಲ್ಲಿರುತ್ತಾರೆ ಎಂಬುದು ಈಗ ಸಾಬೀತಾಗಿರುವ ವಿಚಾರ. ಮತ್ತೆ ಕಲಾವಿದರೂ ಅಷ್ಟೇ ಮೇಳಗಳಿಗೆ ತಮ್ಮನ್ನು ಸೀಮಿತಗೊಳಿಸಿಲ್ಲ. ಕಾಲಮಿತಿಯ ಆಟ ಮುಗಿಸಿ ಮತ್ತೊಂದು ಮೇಳಗಳ ಆಟಗಳಿಗೆ ಹೋಗಿ ತಮ್ಮ ಅಭಿಮಾನಿಗಳನ್ನು ರಂಜಿಸುವುದೂ ಕಂಡುಬಂದಿದೆ. ಈಗ ವಿಶೇಷ ಪ್ರದರ್ಶನಗಳಿಗೆ ಮಳೆಗಾಲವೆಂಬ ಮಿತಿಯಿಲ್ಲ. ಇಡೀ ಬೇಸಿಗೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಗಾನವೈಭವ, ತಾಳಮದ್ದಳೆ ಮಾತ್ರವಲ್ಲ ಯಕ್ಷಗಾನ ಬಯಲಾಟಗಳೂ ಹಗಲು ಹೊತ್ತಿನಲ್ಲಿ ಸಾಕಷ್ಟು ನಡೆದಿವೆ.


ಜನಪ್ರಿಯ ಕಲಾವಿದರಿಗಂತೂ ದಿನಪೂರ್ತಿ ಎಂಬಂತೆ ಹಗಲು ಹೊತ್ತಿನ ಪ್ರದರ್ಶನಗಳಿದ್ದವು. ರಾತ್ರಿಯಿಡೀ ಪ್ರದರ್ಶನ ನೀಡುವ ಬೆರಳೆಣಿಕೆಯ ಮೇಳಗಳಲ್ಲಿ ಪೈಕಿ ಕಟೀಲು ಮೇಳದವರು ಈ ವರ್ಷ ಶ್ರೀದೇವಿ ಮಹಾತ್ಮೆಯ ಜೊತೆಗೆ ಬೇರೆ ಕೆಲವು ಅಪರೂಪದ ಪ್ರಸಂಗಗಳನ್ನೂ ಆಡಿ ಜನಮನ ಸೂಲೆಗೊಂಡಿದ್ದಾರೆ.
ಕಟೀಲು ಮೇಳದ ಕಲಾವಿದರ ಬದಲಾವಣೆ, ಲಿಪ್ ಲಾಕ್ ಪ್ರಕರಣ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ, ಕಲಾವಿದರೇ ಚೌಕಿಯಲ್ಲಿ ಕಲಾವಿದರಿಗೆ ಹೊಡೆದರೆಂಬ ಆರೋಪ...ಹೀಗೆ ವಿವಾದಗಳಿದ್ದರೂ ಪ್ರದರ್ಶನಗಳು ಸರಾಗವಾಗಿ ಸಾಗಿದವು ಎಂಬುದು ಸಮಾಧಾನಕರ ಅಂಶ.


ಸಾಕಷ್ಟು ಪ್ಲಾನ್ ಮಾಡ್ಕೊಂಡು ದಿನಗಟ್ಟಲೆ ಆಟಗಳನ್ನು ನೋಡಿ ಖುಷಿಪಟ್ಟವರು, ಸುತ್ತಮುತ್ತ ಆಟಗಳಿದ್ದರೂ ಕಾರ್ಯದೊತ್ತಡ, ಮನೆಯವರ ನಿರ್ಬಂಧದಿಂದ ಆಟ ನೋಡದೆ ಸಂಕಟಪಟ್ಟವರು, ಅರ್ದಂಬರ್ಧ ಆಟ ನೋಡಿ ಸಮಾಧಾನ ಮಾಡಿಕೊಂಡವರು, ಹೋದ ಆಟಗಳ ವಿಡಿಯೋ ಮಾಡ್ಕೊಂಡು ಆಗಾಗ ಮೆಲುಕು ಹಾಕಿ ಖುಷಿ ಅನುಭವಿಸುವವರು ಎಲ್ಲರೂ ಆಟವನ್ನು ಮತ್ತಷ್ಟು ಮುಂದೆ ಕೊಂಡು ಹೋಗಿದ್ದಾರೆ ಹೊರತು ಕಲೆಗೆ ಕೊರತೆ ಮಾಡಿಲ್ಲ.
ಈಗ ಮತ್ತೊಂದು ಟ್ರೆಂಡು ಶುರುವಾಗಿದೆ. ಮನೆಯ ಪಕ್ಕ ಆಟವಿದ್ದರೆ ಮಾತ್ರ ಹೋಗುವುದಲ್ಲ. ಇಷ್ಟದ ಮೇಳದ, ಇಷ್ಟದ ಪ್ರಸಂಗವಿದ್ದರೆ ಬೈಕೋ, ಕಾರೋ ತಗೊಂಡು ಎಷ್ಟು ದೂರವಾದರೂ ಹೋಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರೇಕ್ಷಕನಿಗೆ ಆಯ್ಕೆಯ ಸ್ವಾತಂತ್ರ್ಯ ಈಗ ಹಿಂದಿಗಿಂತ ಜಾಸ್ತಿ ಇದೆ. ಕಲಾವಿದರ ಎಡವಟ್ಟುಗಳು (ಉದ್ದೇಶಪೂರ್ವಕ ಅಲ್ಲದಿದ್ದರೂ) ಎಲ್ಲೋ ಪ್ರೇಕ್ಷಕರ ನಡುವೆ ಕುಳಿತವರ ಮೊಬೈಲುಗಳಲ್ಲಿ ಸೆರೆಯಾಗಿ ಅವಾಂತರಗಳಾಗುತ್ತಿವೆ.
ರಂಗಸ್ಥಳದ ಎದುರು ಕೆಲವೇ ಸಂಖ್ಯೆಯ ಪ್ರೇಕ್ಷಕರಿದ್ದರೂ ನಡೆಯುತ್ತಿರುವ ಆಟದ ಮಾಹಿತಿಗಳು ನೂರಾರು ಯಕ್ಷಗಾನ ಗುಂಪುಗಳ ಸಹಸ್ರಾರು ಪ್ರೇಕ್ಷಕರ ಅಂಗೈಗಯನ್ನು ಕ್ಷಣಮಾತ್ರದಲ್ಲಿ ತಲುಪುತ್ತಾ ಇರುತ್ತವೆ. ಎಲ್ಲಿ, ಯಾವ ಆಟ ನಡೆಯುತ್ತಿದೆ ಎಂಬ ವಿವರ ಮೊಬೈಲಿನಿಂದ ಮೊಬೈಲಿಗೆ ಹರಿದಾಡಿ ಆಟಕ್ಕೆ ಪ್ರಚಾರ ಪುಕ್ಕಟೆಯಾಗಿ ಸಿಗುತ್ತಿದೆ. ಆಟಕ್ಕೆ ಹ್ಯಾಂಡ್ ಬಿಲ್ ಎಂಬ ಪ್ರಚಾರ ಈಗ ಅನಾವಶ್ಯಕ ಎನಿಸುವ ಮಟ್ಟಕ್ಕೆ...
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗ್ರಾಮೀಣ ಭಾಗಗಳಲ್ಲಿ, ಇಕ್ಕಟ್ಟಿನ ಅಪರಿಚಿತ ಜಾಗಗಳಲ್ಲಿ ನಡೆಯುವ ಆಟಕ್ಕೆ ಹೋಗುವ ದಾರಿಯನ್ನು ಗೂಗಲ್ ಮ್ಯಾಪ್ ಲೊಕೇಶನ್ ಕಳುಹಿಸುವ ಮೂಲಕ ಕ್ಲಪ್ತ ಸಮಯದಲ್ಲಿ ನಿಖರವಾಗಿ ತಲಪುವ ಪದ್ಧತಿಯೂ ಈಗೀಗ ಶುರುವಾಗಿದೆ.
ಅಂತೂ ಇಂತೂ ಆಟ ಆಟವೇ ಆಗಿ ಉಳಿಯಬೇಕು. ಆಟ ನೋಡುವ ಪ್ರೇಕ್ಷಕ ಮತ್ತಷ್ಟು ತಾಂತ್ರಿಕನಾಗಿ ಮುಂದುವರಿದು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು, ತಲಪುತ್ತಿದೆ. ಇದು ಈ ವರ್ಷದ ತಿರುಗಾಟದದ ಸಾರಾಂಶ ಎಂದು ನನ್ನ ಅನಿಸಿಕೆ...
ಯಕ್ಷಗಾನಂ ಗೆಲ್ಗೆ..

-ಕೆಎಂ, ಬಲ್ಲಿರೇನಯ್ಯ ಯಕ್ಷಕೂಟ, ಯಕ್ಷಗಾನ ಪ್ರೇಕ್ಷಕರ ವಾಟ್ಸಪ್ ಬಳಗ.


Monday, April 23, 2018

ಮೌನ ಬಂಗಾರ...

ಮಾತು ಕಲಿಯುವ ಮುನ್ನ
ಭಾಷೆ ಮೌನ
ಭಾವವೇ ಪ್ರಧಾನ
ಅಧಿಕ ಆಡುವ ಮೊದಲು
ನೋಡಿದ್ದು, ಕಂಡಿದ್ದು,
ಕಂಡುಕೊಂಡದ್ದೇ ಚೆಂದ...


ಬಡಬಡಿಸಿದ ಸದ್ದು,
ವ್ಯರ್ಥ ತರ್ಕ,
ಮನದ ಬಿಸಿಯ
ಬಸಿದು ಕಟು
ನುಡಿಯಾಡಿದ ಬಳಿಕವೂ
ಮತ್ತೆ ಮೌನವೇ ಮಾತು

ಹೀಗೆ ಬಂದು, ಹಾಗೆ
ಹೋಗುವ ಸಂದೇಶ
ಕಾಲಹರಣ ಕಾಣದ ಸಂವಹನಕ್ಕೂ ಮುನ್ನ
ಬರೆದುದರ ಓದಿದ್ದು
ದೂರದಿಂದ ಕಂಡಿದ್ದು
ಬಳಿಕ ಪ್ರಶಾಂತ ನೆನಪು...


ಕೈಗೆಟಕುವ ಮುನ್ನ
ಅರಿತುಕೊಳ್ಳುವ ಹಿಂದೆ
ಅಂತರದಾಚಿನ ಚಿತ್ರಕ್ಕೆ
ಮಾತಿನ ಗಾಢ ಬಣ್ಣದ
ಲೇಪ ರಾಚಿ
ರೇಖೆಗಳೇ ಮಸುಕು ಮಸುಕು....
-KM

Saturday, April 21, 2018

ನಿಂತ ನೀರುಉಕ್ಕುಕ್ಕಿ ಚಿಮ್ಮುವ ಅಂದ
ನೊರೆ ಸಹಿತ ಹಾರುವ ತಂಪಿನ ಸಿಂಚನ
ಒಮ್ಮೆ ಮೇಲೆ ಹಾರಿ
ಮಗದೊಮ್ಮೆ ಕೆಳಗಿಳಿದು
ಅತ್ತಿತ್ತ ಓಲಾಡಿ
ಮತ್ತೆ ಉಸಿರ ಬಿಗಿ ಹಿಡಿದು
ನೆಗೆಯುವ ಸೊಬಗು...

ಆದರೆ...
ನೆಗೆಯುವುದಕ್ಕೂ ಮಿತಿಯುಂಟು
ವಿಸ್ತಾರಕ್ಕೂ ಪರಿಧಿಯುಂಟು
ಎತ್ತರ, ಅಗಲ, ಚಿಮ್ಮುವ ಅವಧಿ
ಬಳಸುವ ನೀರು
ಮೂಡುವ ಆಕೃತಿಗೆ ರೂಪುರೇಷೆ
ಮಾಡಿಟ್ಟವರಿದ್ದಾರೆ ಅಜ್ಞಾತರಾಗಿ...


ಶಕ್ತಿ ಮೀರಿ ಹಾರಲಾಗದು
ಲಾಗ ಹೊಡೆದು ಮೆರೆಯಲಾಗದು
ಗಾಳಿಗೂ ಮೀರಿ
ಲೆಕ್ಕವನ್ನೂ ಹಾರಿ
ಏರಲೂ ಇಳಿಯಲೂ
ಶಕ್ತಿ ಸಾಲದು
ಅನುಮತಿ ಸಿಕ್ಕದು

ನಿಂತ ನೀರು
ಮತ್ತೆ ಮತ್ತೆ ಕಾರಂಜಿಯಾಗಿ
ಹಾರುವ ಚೆಂದಕ್ಕೆ
ಪಂಪು, ಕರೆಂಟಿನ
ಸಾಥ್ ಕಾಣುವುದಿಲ್ಲ
ಪವರು ಕಟ್ಟಾದರೆ
ಬುಗ್ಗೆ ಮೇಲೆರುವುದಿಲ್ಲ


ಹರಿಯದ ನೀರು
ಲೋಕ ಕಾಣದೆ
ನಿಂತಲ್ಲೇ ನಿಂತು
ಹಾರಿದರೂ, ಕುಣಿದರೂ
ಪರಿಧಿ ಸೀಮಿತ
ನಡೆದ ದಾರಿ ಶೂನ್ಯ
ಕಾಣುವುದಕ್ಕೂ ಕಂಡುಕೊಳ್ಳುವುದಕ್ಕೂ
ವ್ಯತ್ಯಾಸವಿದೆ!
-KM