ಕಟ್ಟಿಕೊಂಡ ಮನಃಸ್ಥಿತಿ ಮತ್ತು ಅನಿರೀಕ್ಷಿತ ಪರಿಸ್ಥಿತಿ...!

 (ಕೊರೋನಾ ಯುಗದಲ್ಲೊಂದು ಅವಲೋಕನ)

 



ಯಾವತ್ತೂ ಹೋಗುವ ಬಸ್ಸಿನಲ್ಲಿ ಡ್ರೈವರ್ ನ ಹಿಂದಿನ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಇಯರ್ ಫೋನ್ ಹಾಕಿ ಹಾಡು ಕೇಳುತ್ತಾ ಹೋಗುವುದು ಅಭ್ಯಾಸ. ಇವತ್ತು ಬೆಳಗ್ಗೆ ಬಸ್ ಹತ್ತಿದ್ದಾಗ ಅಲ್ಯಾರೋ ಬೇರೆಯವರು ಕೂತಿದ್ದು ಕಂಡು ಇನ್ನೇಲ್ಲೋ ಜಾಗ ಹುಡುಕುತ್ತಿದ್ದಾಯ್ತು....

ಪ್ರತಿಸಲ ಕ್ಷೌರ ಮಾಡಿಸುತ್ತಿದ್ದ ಅಂಗಡಿಗೆ ಹೋದಾಗ ಆತ ಊರಿಗೆ ಹೋಗಿದ್ದ, ಬದಲಿಗೆ ಇನ್ಯಾರೋ ಹಿಂದಿ ಮಾತನಾಡುವವ ಅರ್ಥವಾದ ಭಾಷೆ ಮಾತನಾಡುತ್ತಾ ಹೇರ್ ಕಟ್ಟಿಂಗ್ ಮಾಡುತ್ತಿದ್ದ, ಕೂದಲು ಬೆಳೆದಿತ್ತು, ಅರೆಮನಸ್ಸಿನಿಂದ ಆತನಿಗೆ ತಲೆಯೊಪ್ಪಿಸಿ ಬರುತ್ತೀರಿ...

ಈ ಎರಡೂ ಪ್ರಕರಣಗಳಲ್ಲಿ ನಿಮಗೆ ಒಂದಿಷ್ಟು ಇರಿಸುಮುರುಸು, ಹೇಳಲಾಗದ ಅತೃಪ್ತಿ ಕಾಡಿಯೇ ಕಾಡಿರುತ್ತದೆ ಅಲ್ವ? ಯಾವತ್ತೂ ಬ್ಲೌಸ್ ಹೊಲಿದು ಕೊಡುವ ಟೈಲರು, ಜ್ವರಕ್ಕೆ ಮದ್ದು ಕೊಡುವ ಫ್ಯಾಮಿಲಿ ಡಾಕ್ಟ್ರು, ಹೊಟೇಲಿನಲ್ಲಿ ಚಹಾ ಕುಡಿಯುವ ಮೂಲೆಯಲ್ಲಿರುವ ಒಂಟಿ ಟೇಬಲ್ಲು.. ಹೀಗೆ ಪ್ರತಿಸಲ, ಪ್ರತಿದಿನ ನಮ್ಮ ಸಾಂಗತ್ಯಕ್ಕೆ ಸಿಕ್ಕುವ ಅದೇ, ಅದೇ ವ್ಯಕ್ತಿಗಳು, ವಿಚಾರಗಳು ಅಚಾನಕ್ ಕೈತಪ್ಪಿದಾಗ ಏನೋ ದಿನಚರಿಯೇ ಅಸ್ತವ್ಯಸ್ತವಾದ ಭಾವ, ಅಸಹಜತೆ, ತುಸು ಅಸಮಾಧಾನ.... ಕಾಡ್ತದೋ, ಇಲ್ವೋ? ಹೇಳಿ...

 

ಇಷ್ಟು ಮಾತ್ರವೇ ಅಲ್ಲ. ಮರೆತು ಹೋಗುವ ಕರ್ಚೀಫು, ಮೊಬೈಲ್ ಚಾರ್ಜರ್ರು, ಕಳೆದು ಹೋಗುವ ಎಟಿಎಂ ಕಾರ್ಡ್, ತುಂಡಾದ ಚಪ್ಪಲಿಯ ಉಂಗುಷ್ಠ, ಅರ್ಧದಲ್ಲಿ ಸ್ಟ್ರಕ್ ಆದ ಪ್ಯಾಂಟಿನ ಜಿಪ್ಪು... ಹೀಗೆ ಸಣ್ಣ ಸಣ್ಣ ವಿಚಾರಗಳು ಸಾಕು ದಿನದ ಮನಃಶಾಂತಿಯನ್ನು ಕದಡಿ ಕೆಸರು ತುಂಬಿದ ಕೊಳದಂತಾಗಲು...

 

ಇಷ್ಟಕ್ಕೂ ಸಣ್ಣ ಸಣ್ಣ ವಿಚಾರಗಳು ನಮ್ಮನ್ನು ಇಷ್ಟೊಂದು ಕಾಡಲು, ಕೆಣಕಲು, ಮನಸ್ಸನ್ನು ಅಸ್ತವ್ಯಸ್ತಗೊಳಿಸಲು ಕಾರಣ... ಮನಸ್ಸು ಟ್ಯೂನ್ ಆಗಿರುವುದು! ನಮ್ಮ ಯೋಚನಾ ಲಹರಿ ಒಂದು ವ್ಯವಸ್ಥೆಗೆ, ಒಂದು ವಿಧಾನಕ್ಕೆ ಒಗ್ಗಿ ಹೋಗಿರುವುದು, ಮಾನಸಿಕವಾಗಿ ಅದಕ್ಕೇ ತನ್ನನ್ನು ಒಡ್ಡಿರುವುದು. ಆ ವ್ಯವಸ್ಥೆ, ವಿಧಾನ, ವ್ಯಕ್ತಿ, ಸೌಲಭ್ಯಕ್ಕೆ ಭಂಗ ಬಂದಾಗ ಮನಸ್ಸೂ ವ್ಯಗ್ರವಾಗುತ್ತದೆ, ಅಥವಾ ಕೆಲವೊಮ್ಮೆ ಅಸಹಾಯಕ ಅನ್ನಿಸಿಬಿಡುತ್ತದೆ....

ದಿಢೀರ್ ಬದಲಾವಣೆಗಳಿಗೆ, ಮರೆವಿನಿಂದಾದ ಪ್ರಮಾದಗಳಿಗೆ, ಪರಿಸ್ಥಿತಿ ತಂದೊಡ್ಡುವ ಸವಾಲುಗಳಿಗೆ, ಅನಿರೀಕ್ಷಿತ ಪರಿಣಾಮಗಳಿಗೆ ಏಕಾಏಕಿ ಮನಸ್ಸು ಒಡಂಬಡದೆ ಮನಸ್ಸು ಖಾಲಿ ಎನಿಸುವುದು, ಯೋಚನೆ ಸ್ತಬ್ಧವಾಗುವುದು, ತಾರ್ಕಿಕ ಪ್ರಜ್ಞೆ ಮರೆತೇ ಹೋಗುವುದು ಸಂಭವಿಸುತ್ತದೆ... ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಬಹುತೇಕ ಜನಸಮಾನ್ಯರು ಬದುಕಿನಲ್ಲಿ ಒಂದಲ್ಲ ಒಂದು ಸಂದರ್ಭ ಅಥವಾ ಬಹುತೇಕ ಸಂದರ್ಭಗಳಲ್ಲಿ ಅನುಭವಿಸಿಯೇ ಇರುತ್ತಾರೆ ಇಂತಹ ಟ್ಯೂನಿಂಗ್ ಸಮಸ್ಯೆಯನ್ನು.

.......

ಎಳವೆಯಿಂದ ಬೆಳೆದು ಬಂದ ಪರಿಸರ, ನಮಗೆ ಸಿಕ್ಕಿದ ಶಿಕ್ಷಣ, ಸಂಸ್ಕಾರ, ಮನೆಯ ವಾತಾವರಣ, ಊರಿನ ಒಡನಾಟ, ಓದಿದ ಪುಸ್ತಕಗಳು, ನೋಡಿದ ಸಿನಿಮಾಗಳು, ತಿರುಗಿದ ಪ್ರದೇಶಗಳು, ಆಸಕ್ತಿಯಿಂದ ಮಾಡಿದ ಅಧ್ಯಯನ, ಯಾರದ್ದೋ ಮಾತು, ಉಪದೇಶ, ಬೆಳವಣಿಗೆ ಹಂತದಲ್ಲಿ ಎದುರಿಸಿದ ಪರಿಸ್ಥಿತಿಗಳು ಎಲ್ಲ ಸೇರಿ ಹಲವಾರು  ಪ್ರಭಾವಗಳಿಂದ ಮನಸ್ಸು ಕೆಲವು ವಿಚಾರಗಳಿಗೆ ಟ್ಯೂನ್ ಆಗಿರುತ್ತದೆ... ಒಗ್ಗಿ ಹೋಗಿರುತ್ತದೆ. ಇದುವೇ ಸತ್ಯ, ಹೀಗಿದ್ದರೇ ನನಗೆ ಆರಾಮ, ಇದು ನನಗೆ ಹೇಳಿ ಮಾಡಿಸಿದ್ದು, ಈ ಥರ ಇದ್ದರೆ ಮಾತ್ರ ನಾನು ಸಮಾಧಾನದಿಂದ ಇರಬಲ್ಲೆ ಅಂತ ಅನ್ನಿಸುವಂಥ ಲೆಕ್ಕಾಚಾರಗಳು ಮನಸ್ಸಿನೊಳಗೆ ಮೊಳೆತಿರುತ್ತವೆ. ಬಹುಶಃ ಇದನ್ನು COMFORT ZONE ಅಂತ ಕರೀತಾರೋ ಏನೋ.

ವೃತ್ತಿ ಬದುಕು, ದೈನಂದಿನ ವ್ಯವಹಾರ, ಭವಿಷ್ಯದ ಬಗೆಗಿನ ಯೋಚನೆಗಳು, ಸವಾಲುಗಳನ್ನು ಎದುರಿಸುವ ಸಂದರ್ಭಗಳಲ್ಲೆಲ್ಲ ನಮ್ಮನ್ನು ಇಂತಹ ಸಿದ್ಧ ಮಾದರಿಯ ಪೂರ್ವಾಗ್ರಹದ ಯೋಚನೆಗಳು ಬಲವಾಗಿ ಕಾಡುತ್ತವೆ. ಅದೇ ಕಾರಣಕ್ಕೆ ನಿತ್ಯ ಸಿಕ್ಕುವ ಬಸ್ಸಿನ ಸೀಟು ಸಿಕ್ಕದಾಗ, ಯಾವತ್ತಿನ ಕ್ಷೌರಿಕ ಕಾಣದಿದ್ದಾಗ, ದಿನಾ ನಾವು ಕೂರುವ ಹೊಟೇಲಿನ ಬೆಂಚಿನಲ್ಲಿ ಇನ್ಯಾರೋ ಕೂತಾಗ ಸಿಡಿಮಿಡಿ ಆವರಿಸುವುದು. ಕರ್ಚೀಫು, ಮೊಬೈಲ್ ಚಾರ್ಜರು, ಅಷ್ಟೇ ಯಾಕೆ ದಿನಾ ಬಳಸುವ ಪೆನ್ನನ್ನು ಮರೆತು ಬಂದಾಗಲೂ ಸಂಜೆಯ ವರೆಗೂ ಏನನ್ನೋ ಕಳೆದುಕೊಂಡ ಹಾಗೆ ಚಡಪಡಿಸುವುದು... ಇರಿಸುಮುರುಸು ಅನುಭವಿಸುವುದು. ಕೆಲವೊಂದು ಬಾರಿ ದಿನಾ ತರುವ ವಸ್ತುವನ್ನು ಮರೆತು ಬಂದಾಗ ಇನ್ನೇನೂ ಬದುಕೇ ಮುಗಿಯಿತೇನೋ ಎಂಬಂತೆ ಅತಿರೇಕದಿಂದ ಚಿಂತಿಸುವಂತಾಗುವುದು.

ಜೀವನ ಅನಿರೀಕ್ಷಿತಗಳ ಆಗರ, ಹೇಳದೇ ಕೇಳದೇ ಬರುವ ಪರಿಸ್ಥಿತಿಗಳನ್ನು ಎದುರಿಸುವ ಸಂದರ್ಭಗಳು ಬಂದಾಗ ಇಂತಹ ಟ್ಯೂನ್ ಆದ ಯೋಚನೆಗಳನ್ನು ಕಟ್ಟಿಕೊಂಡು ನಾವೇನೂ ಮಾಡಲಾಗುವುದಿಲ್ಲ ಎಂಬ ಕಟು ಸತ್ಯ ನಮಗೆ ಅಂತಹ ಹತಾಶೆಯ ಸಂದರ್ಭಗಳಲ್ಲಿ ನೆನಪಿಗೇ ಬರುವುದಿಲ್ಲ ಅಲ್ವ....!

 

ಅಷ್ಟೇ ಯಾಕೆ... ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಂಡು ಕೊರಗುವುದು, ನಾನು ಗೆದ್ದೆ, ಸೋತೆ ಅಂತ ಭ್ರಮಿಸಿಕೊಂಡು ಅಹಂ ತಣಿಸಿಕೊಳ್ಳುವುದು, ಸ್ಟೇಟಸ್ಸಿನಲ್ಲಿ ಯಾರಿಗೋ ಬತ್ತಿ ಇಟ್ಟು ಸಂದೇಶ ಹಂಚಿಕೊಂಡು ಅವರಿಗೆ ಸರಿಯಾದ ಪಾಠ ಕಲಿಸಿದೆ ಅಂತ ಬರಿದೇ ಬೀಗುವುದು... ಇವೆಲ್ಲ ಅಂತಹ ಕಟ್ಟಿಕೊಂಡ ಯೋಚನೆಗಳ ಸೀಮಿತ ಪರಿಧಿಯ ಚಿಂತನೆಯ ಮೂಸೆಯಲ್ಲಿ ಅರಳುವ ಭಾವನೆಗಳ ಪರಿಣಾಮಗಳು ಅಷ್ಟೇ...

 

................

 

ಇದರಿಂದ ನಷ್ಟ ನಮಗೇ...!

 

ಇಂತಹ ಕಟ್ಟಿಕೊಂಡು ಬಂದ ಚಿಂತನೆಗಳ ಪರಿಧಿಯನ್ನು ಹರಿದು ಬದುಕಲು ಸಾಧ್ಯವಾಗದಿದ್ದರೆ ಅದರಿಂದ ಅತಿ ಹೆಚ್ಚು ಕೊರಗುವುದು ನಾವೇ ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ ಮನಸ್ಸು ಅದಕ್ಕೆ ಒಡಂಬಡುವುದಿಲ್ಲ ಅಷ್ಟೇ... ವಾಹನದ ಚಕ್ರ ಯಾವತ್ತಾದರೂ ಪ್ಯಾಚ್ ಆಗುತ್ತದೇ ಅಂತ ಗೊತ್ತಿದ್ದೂ ಚಕ್ರದಿಂದ ಗಾಳಿ ಸೋರಿದಾಗ ಹತಾಶೆ ಕಾಡುತ್ತದೆ. ಮೊಬೈಲ್ ಫೋನ್ ಹಳತಾಗುತ್ತಿದೆ ಅಂತ ಗೊತ್ತಿದ್ದರೂ ದಿಢೀರ್ ಒಂದು ದಿನ ಉಸಿರಾಟ ನಿಲ್ಲಿಸಿದಾಗ ಕೈಚೆಲ್ಲುತ್ತೇವೆ, ಎಟಿಎಂ ಕಾರ್ಡ್ ಕಳೆದು ಹೋದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಇದ್ದರೂ ಹೊಸ ಕಾರ್ಡ್ ಸಿಕ್ಕುವ ತನಕ ಮನಸ್ಸು ಗಲಿಬಿಲಿ ಗೊಂಡಿರುತ್ತದೆ, ಊರಿಡೀ ಕಾಡುವ ಕೊರೋನಾದ ಮೂಲ, ಪರಿಣಾಮ, ಚಿಕಿತ್ಸೆ ಎಲ್ಲದರ ಮಾಹಿತಿ ಗೊತ್ತಿದ್ದರೂ, ತನಗೆ ಜ್ವರದ ಲಕ್ಷಣ ಬಂದಾಗ, ಮೈಕೈ ನೋವು ಶುರುವಾದಾಗ ವಿಪರೀತ ಆತಂಕ, ಹೇಳಲಾಗದ ಅಭದ್ರತೆಯ ಭಾವ ಕಾಡುತ್ತದೆ... ಪ್ರತಿಯೊಂದೂ ಟ್ಯೂನ್ ಆದ ಮನಸ್ಸಿನ ಪರಿಣಾಮ.

ಚುಟುಕಾಗಿ ಹೇಳಬೇಕೆಂದರೆ ಅನಿರೀಕ್ಷಿತಗಳನ್ನು, ಅನಿವಾರ್ಯ ಸಂದರ್ಭಗಳನ್ನು, ಪರಿಸ್ಥಿತಿ ತೋರಿಸಿಕೊಟ್ಟ ದಿಢೀರ್ ವ್ಯವಸ್ಥೆಯನ್ನು ಅನುಸರಿಸಲು, ಎದುರಿಸಲು ಆ ಕ್ಷಣಕ್ಕೆ ತೊಳಲಾಡುವ ಸಂದರ್ಭವದು...

 

...............

 

Fate doesn’t care about your plans...

ಎಂಬ ನುಡಿಗಟ್ಟು ಕೇಳಿರಬಹುದು. ಹಣೆಬರಹಕ್ಕೆ ನಿಮ್ಮ ಯೋಚನೆ ಹಾಗೂ ಯೋಜನೆಗಳ ಹಂಗಿರುವುದಿಲ್ಲ.! ಇಲ್ಲಿ ಹಣೆಬರಹ ಎಂಬುದನ್ನು ಅಧ್ಯಾತ್ಮಿಕವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಪರಿಸ್ಥಿತಿ ಅಂತ ಅಂದುಕೊಂಡರೆ ಸಾಕು. ಅನಿರೀಕ್ಷಿತ ಸಂದರ್ಭಗಳು ನಮ್ಮ ಅನುಕೂಲ, ಮಿತಿಗಳು, ಮನಃಸ್ಥಿತಿ ಯಾವುದನ್ನೂ ಸರ್ವೇ ಮಾಡಿ ಬರುವುದಿಲ್ಲ. ಏಕಾಏಕಿ ಆವರಿಸಿಕೊಂಡು ಬಿಡುತ್ತದೆ. ನಮ್ಮ ಮನಸ್ಸು ಅದನ್ನು ಎದುರಿಸಲು ತಯಾರಿ ಮಾಡಿಕೊಂಡಿದ್ದರೂ, ಮಾಡಿರದಿದ್ದರೂ ನಾವದನ್ನು ಎದುರಿಸಲೇ ಬೇಕು. ಬೇರೆ ದಾರಿಯೇ ಇರುವುದಿಲ್ಲ. ಆ ಹೊತ್ತಿಗೆ ಹಣೆಬರಹವನ್ನು ಹಳಿಯುತ್ತಾ ಕೂರುವುದು ಅವಾಸ್ತವಿಕವಾಗಿಬಿಡುತ್ತದೆ. ಉದಾಹರಣೆಗೆ: ನಡೆಯುತ್ತಾ ಹೋಗುವಾಗ ಏಕಾಏಕಿ ಜಾರಿ ಬಿದ್ದರೆ ಏಳಲೇ ಬೇಕು ತಾನೆ? ಅಥವಾ ಆ ಹೊತ್ತಿಗೆ ಜಾರಿ ಬೀಳಿಸಿದ ವ್ಯವಸ್ಥೆಯನ್ನು, ಜಾತಕವನ್ನು ಬೈಯ್ಯುತ್ತಲೋ, ನಮ್ಮ ಪರಿಸ್ಥಿತಿಗೆ ಅಳುತ್ತಲೂ ಕುಳಿತರೆ ಏನಾದರೂ ಪ್ರಯೋಜನ ಉಂಟೇ?

ಒಂದು ಪರಿಸ್ಥಿತಿ, ಸಂದರ್ಭ ಹಾಗೂ ಅನಿರೀಕ್ಷಿತ ಕಗ್ಗಂಟು ಇಡೀ ನಮ್ಮ ಇಂತಹ ಟ್ಯೂನ್ ಆದ ಮನಸ್ಸನ್ನೇ ಬದಲಿಸುತ್ತದೆ, ಬದಲಿಸಲೇಬೇಕು... ಹೀಗೆಯೇ, ಇಂಥದ್ದೇ, ನಾನು ಇಷ್ಟೇ ಎಂಬ ಎಲ್ಲ ಮಿತಿಗಳನ್ನು ಕಡಿದು ಹಾಕಿ, ನಮ್ಮನ್ನು ಕೇಳದೇ ನಮ್ಮನ್ನು ಎತ್ತಲೋ ಎಳೆದುಕೊಂಡು ಹೋಗುತ್ತದೆ... ದೊಡ್ಡದೊಂದು ಪ್ರವಾಹದ ಹಾಗೆ...

 

ಇದಕ್ಕೆ ಅತ್ಯುತ್ತಮ ಉದಾಹರಣೆ ಕೊರೋನಾ”!

……….

 

ಹೌದು, ಯಾವ ಜ್ಯೋತಿಷಿ, ವಿಜ್ಞಾನಿ, ತತ್ವಜ್ಞಾನಿಗಳ ಊಹೆಗೂ ನಿಲುಕದೆ ಧುತ್ತನೆ ಬಂದ ಕೊರೋನಾ ಜಗತ್ತನ್ನೇ ಆವರಿಸಿ ಅರ್ಧ ವರ್ಷವೇ ಕಳೆಯಿತು. ಕೊರೋನಾ ಜಾಗತಿಕವಾಗಿ ಮಾಡಿದ ಬದಲಾವಣೆ ಊಹೆಗೆ ನಿಲುಕದ್ದು. ಮನುಷ್ಯ ಇಲ್ಲಿಂದ ಓಡಿ, ಇನ್ನೆಲ್ಲಿಯೋ ಸುರಕ್ಷಿತವಾಗಿರುತ್ತೇನೆ ಎಂದು ಕೂಡಾ ಯೋಚಿಸಲಾಗದಷ್ಟು ವಿಶ್ವವ್ಯಾಪಕವಾಗಿದೆ ಕೊರೋನಾ... ಹಾಗಾಗಿ ಬಂದದ್ದನ್ನು ಎದುರಿಸಬೇಕಾದ, ಊಹಿಸಿಯೇ ಇರದ ವ್ಯವಸ್ಥೆಗೆ ಒಗ್ಗಬೇಕಾದ ಪಾಠವನನ್ನೋ, ಅನಿವಾರ್ಯತೆಯನ್ನೋ ಕಲಿಸಿಕೊಟ್ಟಿದೆ ಕೊರೋನಾ.

ಕೊರೋನಾದ ಪರಿಣಾಮ ಸಹಸ್ರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಇನ್ನೆಷ್ಟೋ ಮಂದಿ ವರುಷಗಳಿಂದ ಮಾಡುತ್ತಿದ್ದ ಕೆಲಸ ಬಿಟ್ಟು ಇನ್ಯಾವ್ಯಾವುದೋ ಕೆಲಸಕ್ಕೆ ಇಳಿಯುವಂತಾಗಿದೆ. ಮತ್ತಷ್ಟು ಮಂದಿಯ ಪಾಲಿಗೆ ಭವಿಷ್ಯ ಶೂನ್ಯವಾಗಿ ಕಾಡುತ್ತಿದೆ, ಹೆಲ್ಮೆಟ್ಟು, ಸೀಟು ಬೆಲ್ಟು ಹಾಕಲೂ ಉದಾಸೀನ ಮಾಡುವವರೂ ಮಾಸ್ಕ್ ಧರಿಸಿಯೇ ಓಡಾಡುವಂತಾಗಿದೆ. ಕನಸಿನಲ್ಲೂ ನಿರೀಕ್ಷಿಸಲಾಗದಷ್ಟು ರಜೆಗಳನ್ನು ಪಡೆದ ಉದ್ಯೋಗಸ್ಥರು, ವಿದ್ಯಾರ್ಥಿಗಳು ಒಂದು ರೀತಿ ವಿಚಿತ್ರವಾದ ಭಾವಸ್ಥಿತಿಗೆ ತಲುಪಿದ್ದಾರೆ, ಆಸ್ಪತ್ರೆಗಳಲ್ಲಿ ಹಾಗಂತೆ, ಹೀಗಂತೆ, ಪಾಸಿಟಿವ್-ನೆಗೆಟಿವ್ ಎಂದರೆ ಹೀಗಂತೆ ಎಂಬಿತ್ಯಾದಿ ಕೊರೋನಾ ಅಂತೆ ಕಂತೆಗಳ ದೆಸೆಯಿಂದ ನಾಳೆ ನನಗೂ ಕೊರೋನಾ ಬಂದಾಗ ಏನು ಮಾಡಬೇಕು ಎಂದು ಯೋಚಿಸುವ ಹಾಗೆ ಮಾಡಿದೆ...ಮನೆಯೊಳಗಿನ ಬದುಕು, ಸಾರ್ವಜನಿಕ ಸಂಪರ್ಕದ ನಿಷೇಧ, ಸರಳ ವಿವಾಹ, ಜನರೇ ಇಲ್ಲದ ಅಂತ್ಯಸಂಸ್ಕಾರ, ನಾಲ್ಕು ಗೋಡೆಗಳ ಒಳಗಿನಿಂದ ಹೊರಬರುವ ವೆಬಿನಾರುಗಳು, ಆನ್ ಲೈನ್ ಯಕ್ಷಗಾನಗಳು, ಪರಸ್ಪರ ನಗುವನ್ನೇ ಕಿತ್ತು ಹಾಕಿದ ಮಾಸ್ಕು, ವಿಪರೀತ ಕೈತೊಳೆಯಲೇಬೇಕಾದ ಸಂದರ್ಭ... ಹೀಗೆ ಕೊರೋನಾ ಕಲಿಸಿದ್ದು ಅಪಾರ...

ಕಟ್ಟಿಕೊಂಡ ಮನಸ್ಥಿತಿಯನ್ನು ಕಿತ್ತುಕೊಳ್ಳುವುದಕ್ಕೆ ಕೊರೋನಾದಿಂದ ಉತ್ತಮ ಬೇರೆ ಇಲ್ಲ. ಕೊರೋನಾದ ಯುಗ ಮುಗಿದಿಲ್ಲ. ಪ್ರತಿದಿನವೂ ಕೊರೋನಾದ ಉಚ್ಛ್ರಾಯ ಸ್ಥಿತಿಯೇ ಆಗಿಬಿಡುತ್ತಿದೆ!!! ಇದು ಕೊರೋನಾದ ಪೀಕ್ ದಿವಸ, ಇವತ್ತಿನಿಂದ ಕೊರೋನಾ ಇಳಿಮುಖವಾಗುತ್ತದೆ ಎಂದು ಘೋಷಿಸುವ ಧೈರ್ಯ ಯಾರಿಗೂ ಇಲ್ಲ. ಅನಿಶ್ಚಿತತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕ? ಬೇಡ ಅಲ್ವ?

 

.......

 

ಒಂದು ರಾಜಕೀಯ ಪಕ್ಷದ ಬೆಂಬಲಿಗ ಎಂಬ ಕಾರಣಕ್ಕೆ ಆ ಪಕ್ಷದ ಅವಿವೇಕಿ ಪುಢಾರಿಗಳನ್ನು ವೃಥಾ ಸಮರ್ಥಿಸುವುದು, ಎಲ್ಲರು ಮಾಡುತ್ತಾರೆ ಎಂಬ ಒಂದೇ ಕಾರಣಕ್ಕೆಸಮಕಾಲೀನರಾಗುವ ಭ್ರಮೆಯಲ್ಲಿ ತಾನೂ ಬರ್ತ್ ಡೇ ದಿನ ಸಂಜೆ ತನಗೆ ವಾಟ್ಸಪ್ಪಿನಲ್ಲಿ ವಿಶ್ ಮಾಡಿದವರ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ಸ್ಟೇಟಸ್ಸಿನಲ್ಲಿ ಹಾಕುವುದು, ಅರ್ಥ ಗೊತ್ತುಗಳಿಲ್ಲದ ಸಂದೇಶಗಳನ್ನು ಕುರುಡರಂತೆ ಫಾರ್ವರ್ಡ್ ಮಾಡುವುದೆಲ್ಲವೂ ನಿರ್ಲಿಪ್ತ ಮನಸ್ಥಿತಿ ಅಥವಾ ಕಟ್ಟಿಕೊಂಡ ಧೋರಣೆಗಳಿಗೆ ಉದಾಹರಣೆಗಳು... ಇದನ್ನು ಉದಾಹರಣೆ ಮೂಲಕ ವಿವರಿಸಬೇಕಾದ ಅಗತ್ಯವಿಲ್ಲ. ನಾವೆಲ್ಲರೂ ಬಹುತೇಕರು ಈ ಮನಃಸ್ಥಿತಿಗೆ ಜೀವಂತ ಉದಾಹರಣೆಗಳಾಗಿ ಇದ್ದೇವೆ!

 

…….

 

ಕೊನೆಯದಾಗಿ:

ಎಂದೋ ಓದಿದ ಇಷ್ಟದ ಸಾಲುಗಳು...

ನಿಮ್ಮ ಸಹಪಾಠಿಯೋ, ಸ್ನೇಹಿತನೋ ತನ್ನ ಸಾಧನೆಗೆ ಪುರಸ್ಕಾರ ಪಡೆದು ವೇದಿಕೆಗೆ ಹೋಗಿ ಬಹುಮಾನ ತೆಗೆದುಕೊಳ್ಳುವಾಗ ನೀವು ಖುಷಿಯಿಂದಲೋ, ಯಾಂತ್ರಿಕವಾಗಿಯೋ ಚಪ್ಪಾಳೆ ತಟ್ಟುತ್ತೀರಿ. ನೀವು ಜೀವನ ಪೂರ್ತಿ ಜಪ್ಪಾಳೆಯನ್ನೇ ತಟ್ಟುತ್ತಾ ಕೂರುತ್ತೀರೋ, ಅಥವಾ ನನಗೂ ಒಂದು ದಿನ ಹೀಗೆಯೇ ವೇದಿಕೆಗೆ ಹೋಗಿ ಬಹುಮಾನ ಸ್ವೀಕರಿಸುವಾಗ ಇತರರ ಚಪ್ಪಾಳೆಯ ಕೂಗು ಕೇಳಿಸಬೇಕು ಎಂಬಂಥ ಮಹತ್ವಾಕಾಂಕ್ಷೆಯನ್ನು ಇರಿಸಿಕೊಳ್ಳುತ್ತೀರೋ?!”

 

ಜಗತ್ತಿನ ಪ್ರತಿಯೊಬ್ಬರ ಮನಸ್ಸೂ ಕಟ್ಟಿಕೊಂಡ ಸ್ಥಿತಿಯಲ್ಲೇ ಉಳಿಯುತ್ತಿದ್ದರೆ ಇಷ್ಟೊಂದು ಸಂಶೋಧನೆಗಳು, ಅನ್ವೇಷಣೆಗಳು ಆಗುತ್ತಲೇ ಇರುತ್ತಿರಲಿಲ್ಲ. ವಿಜ್ಞಾನಿಗಳು, ಚಿಂತಕರು, ಭಿನ್ನವಾಗಿ ಯೋಚಿಸಿ ಹೊಸತನ್ನು ಕೊಡುವಂಥವರು ಜನಿಸಿದರೂ ಬೆಳೆಯತ್ತಲೇ ಇರಲಿಲ್ಲ!

-ಕೃಷ್ಣಮೋಹನ ತಲೆಂಗಳ

(19/09/2020)

 

 

1 comment:

Varijakshi.yash. dammadka. said...

ಅರ್ಥಪೂರ್ಣ ,ವಿಭಿನ್ನ ವಸ್ತು ಹೊಂದಿರುವ ಬರಹ