ಹೊಟ್ಟೆಯೊಳಗಿನ ಕರುಳಿನ ಹಾಗೆ ಕ್ಯಾಸೆಟ್ಟಿನ ರೀಲು ಎಷ್ಟುದ್ದ ಉಂಟು ಗೊತ್ತುಂಟ?!




 


ಅಲ್ಲಿ ನಿಮಗೆ ಬೇಕಾದ ಪದ್ಯವನ್ನು ಒಂದೇ ಕ್ಲಿಕ್ಕಿಗೆ ಕೇಳುವ ಆಯ್ಕೆ ಇರಲಿಲ್ಲ. ಬೇಕಿದ್ದರೆ ಫಾರ್ವರ್ಡ್, ರಿವೈಂಡ್ ಮಾಡಿ ಸಮಯ ನೋಡಿ ಹಾಡು ಹೇಳಬೇಕಿತ್ತು.. ಎ ಸೈಡು ಮುಗಿದರೆ ಬಿ ಸೈಡಿಗೆ ತಿರುಗಿ ಹೋಗಬೇಕಿತ್ತು...

ನಾನು ಮಾತನಾಡುತ್ತಿರುವುದು ಆಡಿಯೋ ಕ್ಯಾಸೆಟ್ಟಿನ ಬಗ್ಗೆ. ಈಗ ಕ್ಯಾಸೆಟ್ಟುಗಳೆಂದರೆ ಇತಿಹಾಸ. ಆದರೆ 70, 80ನೇ ದಶಕದ ಜನಾಂಗದವರಿಗೆ (ಈಗಿನ ಭಾಷೆಯಲ್ಲಿ ಈಗಿನ ತಂತ್ರಜ್ಞಾನಕ್ಕೆ ನಿಧಾನವಾಗಿ ಒಗ್ಗುತ್ತಿರುವ ಎಡಬಿಡಂಗಿಗಳಿಗೆ) ತುಂಬ ಹಚ್ಚಿರದ ಹಾಗೂ ರೇಡಿಯೋದ ನಂತರದ ಸ್ಥಾನದಲ್ಲಿ ಮನರಂಜನೆ ನೀಡಿದ ಪಳೆಯುಳಿಕೆಯ ವಸ್ತುಗಳಲ್ಲಿ ಇದೂ ಒಂದು...

...

 


2000ನೇ ಇಸವಿಯ ನಂತರ ಹುಟ್ಟಿದವರ ಪೈಕಿ ಎಷ್ಟು ಮಂದಿ ಆಡಿಯೋ ಕ್ಯಾಸೆಟು ಕಂಡಿದ್ದೀರೋ, ಅದನ್ನು ಆಲಿಸಿದ್ದೀರೋ ಗೊತ್ತಿಲ್ಲ. ಒಂದು ಕಾಲದಲ್ಲಿ ಶ್ರವ್ಯ ಮಾಧ್ಯಮದ ರಾಜನಾಗಿದ್ದ ಕ್ಯಾಸೆಟ್ಟುಗಳು ಒಂದು ತಲೆಮಾರಿನ ದೈತ್ಯ ಸ್ನೇಹಿತನಾಗಿದ್ದದ್ದು ಸುಳ್ಳಲ್ಲ. ಅಂಗೈ ಅಗಲದ ಆಯತಾಕಾರದ ಸಾಧನ (ಬಹುತೇಕ ಪ್ಲಾಸ್ಟಿಕ್ಕು), ಅದರೊಳಗೆ ಮ್ಯಾಗ್ನೇಟಿಕ್ ಟೇಪು, ಮತ್ತೆ ಹಲ್ಲುಗಳಿರುವ ಎರಡು ಚಕ್ರ... ಟೇಪನ್ನು ಸವರುವಂತಿರುವ ಪುಟ್ಟ ಸ್ಪಾಂಜಿನ ತುಂಡು. ಕ್ಯಾಸೆಟ್ಟಿನ ನಾಲ್ಕೂ ಮೂಲೆಯಲ್ಲಿ ಸ್ಟಾರ್ ಸ್ಕ್ರೂಗಳು... ಇವಿಷ್ಟು ಕ್ಯಾಸೆಟ್ಟಿನ ಕಿರು ಪರಿಚಯ. ಇಂತಿಪ್ಪ ಕ್ಯಾಸೆಟ್ಟನ್ನು ಟೇಪ್ ರೆಕಾರ್ಡಿನಲ್ಲಿ (ಪ್ಲೇಯರ್) ಅಥವಾ ವಾಕ್ ಮ್ಯಾನಿನ ಬಾಯೊಳಗಿ ಇರಿಸಿ ಪ್ಲೇ ಮಾಡಿ ಆಲಿಸಬೇಕಿತ್ತು. ನಿಮಗೆಲ್ಲ ಗೊತ್ತಿರುವ ಹಾಗೆ ಟೇಪ್ ರೆಕಾರ್ಡರಿಗೆ ಕರೆಂಟೇ ಬೇಕೆಂದು ಇರಲಿಲ್ಲ. ಬ್ಯಾಟರಿ ಸಹಾಯದಿಂದಲೂ ಕೇಳಬಹುದಿತ್ತು.

 

ಸಾಧಾರಣವಾಗಿ ಬರುತ್ತಿದ್ದದ್ದು ಒಂದು ಗಂಟೆ ಅವಧಿಯ ಕ್ಯಾಸೆಟ್ಟುಗಳು. ಅರ್ಧ ಗಂಟೆ ಎ ಸೈಡು, ಅರ್ಧ ಗಂಟೆ ಬಿ ಸೈಡು... ಎ ಸೈಡಿನ ಟೇಪು ಪೂರ್ತಿ ಕೇಳಿದ ಬಳಿಕ ಅದೇ ಕ್ಯಾಸೆಟ್ಟನ್ನು ತಿರುಗಿಸಿ ಪ್ಲೇಯರಿಗೆ ಹಾಕಿದರೆ ಮತ್ತೊಂದು ಸೈಡ್ ಪ್ಲೇ ಆಗುತ್ತಿತ್ತು. ತಲಾ ಒಂದೂವರೆ ಗಂಟೆಯ ಮೂರು ಗಂಟೆ ಅವಧಿ ಮೆಗಾ ಕ್ಯಾಸೆಟ್ಟುಗಳೂ ಬರುತ್ತಿದ್ದವು. ಸಣ್ಣವರಿದ್ದಾಗ ಯಕ್ಷಗಾನ, ಭಾವಗೀತೆ, ಚಿತ್ರಗೀತೆ, ಜಾನಪದ ಗೀತೆ, ಶಿಶುಗೀತೆ ಎಲ್ಲ ಕೇಳ್ತಾ ಇದ್ದದ್ದು ಇದೇ ಕ್ಯಾಸೆಟ್ಟುಗಳಲ್ಲಿಯೇ.... ಶೇಣಿ, ಜೋಷಿ, ಕೋಳ್ಯೂರು, ಬಲಿಪರು, ಗೋವಿಂದ ಭಟ್ರು, ತೆಕ್ಕಟ್ಟೆ, ಸಾಮಗರು... ಕಡತೋಕ, ಅಮ್ಮಣ್ಣಾಯ ಇವರೆಲ್ಲರ ಸ್ವರ ಪರಿಚಿತವಾಗಿದ್ದು ಕ್ಯಾಸೆಟ್ಟುಗಳನ್ನು ಕೇಳಿಯೇ... ಮಾಗಧವಧೆ, ಕೃಷ್ಣಸಂಧಾನ, ಭೀಷ್ಮವಿಜಯ ಹೀಗೆ ಸಾಲು ಸಾಲು ತಾಳಮದ್ದಳೆಗಳನ್ನು ಕೇಳಿ ಪಾತ್ರಗಳ ಪರಿಚಯವಾಗಿದ್ದು ಇದೇ ಟೇಪ್ ರೆಕಾರ್ಡರ್ ಮಹಿಮೆಯಿಂದ ಹಾಗೂ ಕ್ಯಾಸೆಟ್ಟುಗಳ ಕೃಪೆಯಿಂದ.

ಆನೆ ಬಂತೊಂದಾನೆ...., ಚುಕುಬುಕು ರೈಲು, ರೊಟ್ಟಿಯ ಅಂಗಡಿ ಕಿಟ್ಟಪ್ಪ ಮತ್ತಿತರ ಹಾಡುಗಳನ್ನು ಕೇಳಿದ್ದು ಇದೇ ಕ್ಯಾಸೆಟ್ಟುಗಳಲ್ಲಿ. ಬಿ.ಆರ್.ಛಾಯಾ, ಬಿ.ಕೆ.ಸುಮಿತ್ರಾ, ಮೈಸೂರು ಅನಂತ ಸ್ವಾಮಿ ಮತ್ತಿತರ ಶ್ರೇಷ್ಠ ಗಾಯಕರ ಹೆಸರು ಕೇಳಿದ್ದು, ಫೋಟೋ ನೋಡಿದ್ದು ಇದೇ ಕ್ಯಾಸೆಟ್ಟುಗಳಿಂದಾಗಿ ಸಾಧ್ಯವಾಯಿತು.
ಗೋವಿಂದ ಭಟ್ರ ಕಂಚಿನ ಕಂಠ, ಶೇಣಿಯವರ ಅಸ್ಖಲಿತ ವಾಗ್ಝರಿಗಳು ಕಿವಿಗಳಲ್ಲಿ ರಿಂಗಣಿಸುತ್ತಿರುವುದಕ್ಕೆ ಕಾರಣ ಅಜ್ಜನಮನೆಯಲ್ಲಿದ್ದ ಟೇಪ್ ರೆಕಾರ್ಡಿರಿನಲ್ಲಿ ಅದೇ ತಾಳಮದ್ದಳೆಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಕೇಳ್ತಾ ಇದ್ದದ್ದು... ಎಲ್ಲದಕ್ಕಿಂತ ಹೆಚ್ಚಾಗಿ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ಆ ಕಾಲದಲ್ಲಿ ಜನಪ್ರಿಯವಾಗಿದ್ದೇ ಕ್ಯಾಸೆಟ್ಟುಗಳ ಮೂಲಕ. ಭಾಗ್ಯದ ಲಕ್ಷ್ಮೀ ಬಾರಮ್ಮಾ, ಪಿಳ್ಳಂಗೋವಿಯ, ಅಂಬಿಗಾ ನಾ ನಿನ್ನ ನಂಬಿದೆ ಮತ್ತಿತರ ಹಾಡುಗಳು 80ರ ದಶಕದಲ್ಲೇ ಮನೆ ಮನೆ ತಲುಪಿದ್ದು ಕ್ಯಾಸೆಟ್ಟುಗಳ ಮೂಲಕ. ಹಿಮ್ಮೇಳದವರ ಪರಿಚಯ ಇಲ್ಲ, ರಾಗ ಜ್ಞಾನವಿಲ್ಲ, ಅದರ ಹೆಚ್ಚಿನ ಸ್ವಾರಸ್ಯ ಗೊತ್ತಿಲ್ಲ. ಆದರೆ ಅಂತಹ ವಾದ್ಯದ ಪರಿಚಯವಾಗಿದ್ದು, ದೊಡ್ಡ ಕಲಾವಿದರ ಬಗ್ಗೆ ತಿಳಿದದ್ದು ಕ್ಯಾಸೆಟ್ಟುಗಳಿಂದಾಗಿ...

 

ಆಗ ಪ್ರೈವೇಟ್  ಬಸ್ಸುಗಳಲ್ಲಿ ಹಾಡು ಹಾಕ್ತಾ ಇದ್ರು. ಕ್ಯಾಸೆಟ್ಟುಗಳೇ ಅದರ ಹಿಂದಿನ ಪ್ರೇರಕ ಶಕ್ತಿ. ಹಂಸಲೇಖ, ಎಸ್ಪಿಬಿ, ಕುಮಾರ ಶಾನೂ, ಉದಿತ್ ನಾರಾಯಣ್, ಕಿಶೋರ್ ಕುಮಾರ್ ಮತ್ತಿತರರ ಸಮಕಾಲೀನ ಹಾಡುಗಳನ್ನು ಬಸ್ಸುಗಳಲ್ಲಿ ಹಾಕುವುದು ಮಕ್ಕಳು, ಯುವಕರಿಗೆ ಪ್ರಧಾನ ಆಕರ್ಷಣೆಯಾಗಿತ್ತು. ಆಗ ಎಫ್ ಎಂ ರೇಡಿಯೋಗಳು ಇರಲಿಲ್ಲ, ಇಂಟರ್ ನೆಟ್ಟು ಏನಂತಲೇ ಗೊತ್ತಿರಲಿಲ್ಲ. ಯಾವುದೂ ಡಿಜಿಟಲ್ ಆಗಿರಲಿಲ್ಲ. ಆದ್ದರಿಂದ ಏನನ್ನೂ ಡೌನ್ ಲೋಡ್ ಮಾಡುವ ಪ್ರಶ್ನೆಯೇ ಇರಲಿಲ್ಲ. ಡೌನ್ ಲೋಡ್, ಕಾಪಿ, ಪೇಸ್ಟ್, ಸೇವ್, ಟ್ರಾನ್ಸಫರ್ ಇತ್ಯಾದಿ ಪದಗಳೇ ಆಗ ನಮಗೆ ಗೊತ್ತಿರಲಿಲ್ಲ. ಹಾಡು ಕೇಳಬೇಕಾದರೆ ರೇಡಿಯೋ ಇರಬೇಕು, ಅಥವಾ ಕ್ಯಾಸೆಟ್ ಹಾಕುವ ಟೇಪ್ ರೆಕಾರ್ಡರ್ ಬಂದಿರಬೇಕು ಎರಡೇ ಆಯ್ಕೆ ಇದ್ದದ್ದು. ಹಾಗಾಗಿ ಬಸ್ಸುಗಳಲ್ಲಿ ಹಾಡು ಹಾಕುವುದು ಒಂಥರಾ ಗಮ್ಮತ್ತಿನ ವಿಚಾರವಾಗಿತ್ತು. ಡ್ರೈವರ್ ಮಾಮ ಬಸ್ ಚಲಾಯಿಸುತ್ತಲೇ ಎ ಸೈಡಿನಲ್ಲಿರುವ ಕ್ಯಾಸೆಟ್ಟನ್ನು ತಿರುಗಿಸಿ ಬಿ ಸೈಡಿಗೆ ಹಾಕುವುದು (ತಲೆ ಮೇಲಿನ ಪುಟ್ಟ ಕ್ಯಾಬಿನಿನ್ನೊಳಗೆ) ಮಹತ್ಸಾಧನೆಯಂತೆ ತೋರುತ್ತಿತ್ತು.... ಮತ್ತೂ ಕಾಲ ಬದಲಾದಾಗ ವಾಕ್ ಮ್ಯಾನ್ ಬಂತೂ ಅದಕ್ಕೂ ಕ್ಯಾಸೆಟ್ಟು ತುರುಕಿಸಿ ಇಯರ್ ಫೋನ್ ಹಾಕಿ ಹಾಡು ಕೇಳಬಹುದಿತ್ತು. ಆದರೆ ಬ್ಯಾಟರಿ ಬೇಗ ಮುಗಿಯುತ್ತದೇ ಎಂಬುದೇ ಸಮಸ್ಯೆಯಾಗಿತ್ತು. ಇದನ್ನು ಕರೆಂಟಿನಲ್ಲಿ ಚಾರ್ಜ್ ಮಾಡುವ ಹಾಗಿರಲಿಲ್ಲ.

 

ಆಗ ಊರಿನ ಜಾತ್ರೆಗಳಲ್ಲಿ, ಮದುವೆ ಮನೆಗಳಲ್ಲಿ, ಶಾಲೆಯ ಸ್ಕೂಲ್ ಡೇಗಳಲ್ಲಿ ಹಾಡು ಹಾಕಬೇಕಾದರೆ ಕ್ಯಾಸೆಟ್ಟಿನಲ್ಲೇ ಬಳಸ್ತಾ ಇದ್ರು. ಮದುವೆ, ಜಾತ್ರೆಗಳಿಂದ ಕೇಳಿಸುತ್ತಿದ್ದ ಮೈಕ್ಕಿನಲ್ಲಿ ಬರುವ ಹಾಡುಗಳ ಕ್ಯಾಸೆಟ್ಟಿನ ಪರಿಚಯವೂ ನಮಗೆ ಇರ್ತಾ ಇತ್ತು. ಬೆಳಗ್ಗೆ ಆರಂಭದಲ್ಲಿ... ಶರಣು ಶರಣಯ್ಯಾ, ಶರಣು ಬೆನಕಾ ಹಾಡು (ಪಿಬಿಎಸ್ ಧ್ವನಿಯಲ್ಲಿ), ನಂತರ ಗಜಮುಖನೇ ಗಣಪತಿಯೇ (ಎಸ್. ಜಾನಕಿ), ಇದಾದ ಮೇಲೆ ರಾಮಚಾರಿ ಹಾಡುವ... ಮತ್ತಿತರ ಚಿತ್ರಗೀತೆಗಳು, ಮಧ್ಯಾಹ್ನ ಊಟದ ಬಳಿಕ ದೊಡ್ಡ ಸ್ವರದಲ್ಲಿ ತುಳು ಯಕ್ಷಗಾನದ ಅರ್ಥಗಾರಿಕೆ, ಭದ್ರಗಿರಿ ಅಚ್ಯುತದಾಸರ ಹರಿಕಥೆ, ಸಂಜೆ ಹಿಂದಿ ಚಿತ್ರಗೀತೆ... ಹೀಗೇ ಇಡೀ ಊರಿಗೇ ಕೇಳುವ ಹಾಗೆ ಅಲಿಖಿತ ಸ್ವರೂಪದ ಕ್ಯಾಸೆಟ್ ಪ್ಲೇ ಮಾಡುವ ಪದ್ಧತಿ ಇತ್ತು... ಶಾಲೆಯ ವಾರ್ಷಿಕೋತ್ಸವಕ್ಕೆ ಡ್ಯಾನ್ಸ್ ಮಾಡುವಾಗ ಮೈಕ್ ಆಪರೇಟರ್ ಹತ್ತಿರ ಇಂತಹ ಹಾಡು ಅಂತ ಹೇಳಿ ಕ್ಯಾಸೆಟ್ ಕೊಟ್ಟರೆ ಆತ ಫಾರ್ವರ್ಡ್, ರಿವೈಂಡ್ ಮಾಡಿ ಹಾಡು ಸಿದ್ಧ ಮಾಡಿ ಇಡಬೇಕು. ಒಂದು ವೇಳೆ ಎ ಸೈಡ್ ಬದಲು ಬಿ ಸೈಡ್ ಹಾಕಿ ಪ್ಲೇ ಮಾಡಿದರೆ ಯಾವುದೋ ಹಾಡು ಪ್ಲೇ ಆಗುತ್ತಿತ್ತು... ವೇದಿಕೆಯಲ್ಲಿ ಹಾಡಿಗೆ ಕೈ ಎತ್ತಿ ನಿಂತವರು ಕಕ್ಕಾಬಿಕ್ಕಿಯಾಗುತ್ತಿದ್ದರು...

 

90ರ ದಶಕದ ಬಳಿಕ ಕ್ಯಾಸೆಟ್ ಅಂಗಡಿಗಳಿಗೆ ಹೋಗಿ ನಮಗೆ ಬೇಕಾದ ಹಾಡುಗಳನ್ನು ಒಂದು ಖಾಲಿ ಕ್ಯಾಸೆಟ್ಟಿಗೆ ರೆಕಾರ್ಡ್ ಮಾಡಿಸುವ (ಹಾಡು ವರ್ಗಾಯಿಸುವ) ವ್ಯವಸ್ಥೆ ಬಂತು. ನಮಗಿಷ್ಟದ ಹಾಡುಗಳನ್ನು ಆರಿಸಿ, ಜೋಡಿಸಿ ಹೇಳಿದರೆ ಅಂಗಡಿಯವರು ನಿರ್ದಿಷ್ಟ ದುಡ್ಡಿಗೆ (ಪೈರೇಟೆಡ್ ನಿಜವಾಗಿ, ಆ ಕಲ್ಪನೆ ಇರಲಿಲ್ಲ ಆಗ) ಅದನ್ನು ಮಾಡಿ ಕೊಡುತ್ತಿದ್ದರು. ಇಂತಹ ನಾವೇ ರೆಡಿ ಮಾಡಿದ ಕ್ಯಾಸೆಟ್ಟುಗಳಿಗೆ ಕವರ್ ಪೇಜ್ ಇರುತ್ತಿರಲಿಲ್ಲ. ಆದ್ದರಿಂದ ನಾವೇ ನಮ್ಮ ಬ್ರಹ್ಮಲಿಪಿಯ ಅಕ್ಷರಗಳಲ್ಲಿ ಹಾಡುಗಳನ್ನು ಬರೆದು ಕ್ಯಾಸೆಟ್ಟಿನ ಪೆಟ್ಟಿಗೆಗೆ ಅಂಟಿಸುತ್ತಿದ್ದೆವು...

ಅಷ್ಟು ಮಾತ್ರವಲ್ಲ. ಖಾಲಿ ಕ್ಯಾಸೆಟ್ (ಬ್ಲಾಂಕ್ ಕ್ಯಾಸೆಟ್) ತಂದು ಅದರಲ್ಲಿ ನಮಗಿಷ್ಟದ ಹಾಡು, ತಾಳಮದ್ದಳೆ, ಕೊಡಪಾನಕ್ಕೆ ಬಾರಿಸುವ ಚೆಂಡೆಯ ಪೆಟ್ಟು ಇತ್ಯಾದಿಗಳನ್ನು ರೆಕಾರ್ಡ್ ಮಾಡಿ ಖುಷಿ ಪಟ್ಟ ನೆನಪುಗಳು ಸಾಕಷ್ಟಿವೆ. ರೇಡಿಯೋದಲ್ಲಿ ಬರುವ ಇಷ್ಟದ ಕಾರ್ಯಕ್ರಮಗಳನ್ನು ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿ ಕೇಳುವ ಕ್ರಮವೂ ಇತ್ತು. ಆದರೆ ಇಂತಹ ಬ್ಲಾಂಕ್ ಕ್ಯಾಸೆಟ್ಟುಗಳಲ್ಲಿ ನಾಲ್ಕೈದು ಸಲಕ್ಕಿಂತ ಹೆಚ್ಚಿನ ಬಾರಿ ರೆಕಾರ್ಡ್ ಮಾಡಿದರೆ ಅದರ ಧ್ವನಿಮುದ್ರಣ ಗುಣಮಟ್ಟ ಕುಗ್ಗುತ್ತಿತ್ತು. ಗಾಯಕರು ಒಂದು ಹಾಡಿನ ಸಾಹಿತ್ಯ (ಲಿರಿಕ್ಸ್) ಬರೆಯಬೇಕಾದರೆ ಎಷ್ಟು ಕಷ್ಟ ಪಡುತ್ತಿದ್ದರು ಎಂದರೆ ಒಂದು ಹಾಡು ಪ್ಲೇ ಮಾಡಿ ಒಂದು ಸಾಲು ಬರೆಯುವುದು ಮತ್ತೆ ಪುನಃ ಕೇಳಬೇಕಾದರೆ ರಿವೈಂಡ್ ಮಾಡುವುದು... ಹೀಗೆ ಕಷ್ಟಬಡಬೇಕಾಗಿತ್ತು ಹಾಡಿನ ಸಾಹಿತ್ಯ ಬರೆಯಲು.

 

ಕ್ಯಾಸೆಟ್ಟಿನ ವಿಚಾರ ಬಂದಾಗ ನೆನಪಾಗುವ ಎರಡು ದೊಡ್ಡ ಸಂಗತಿಗಳು: ಹೆಡ್ ಕ್ಲೀನ್ ಮಾಡುವುದು ಮತ್ತು ಸುತ್ತಿಕೊಳ್ಳುವ ಟೇಪನ್ನು ಬಿಡಿಸುವುದು. ಕ್ಯಾಸೆಟ್ಟುಗಳಲ್ಲಿ ಧೂಳು ಕೂರುವುದು ಸಹಜವಾಗಿರುವುದರಿಂದ ಹಲವು ಬಾರಿ ಕ್ಯಾಸೆಟ್ ಪ್ಲೇ ಮಾಡಿದ ಬಳಿಕ ಟೇಪ್ ರೆಕಾರ್ಡರಿನ ಹೆಡ್ (ಆಡಿಯೋ ಗ್ರಹಿಸುವ ಭಾಗ) ಗೆ ಧೂಳು ಮೆತ್ತಿ ಆಡಿಯೋ ಗುಣಮಟ್ಟ ಅಸ್ಪಷ್ಟವಾಗುತ್ತಿತ್ತು. ಆಗ ಒಂದು ಹತ್ತಿಯ ತುಂಡಿಗೆ ಹೆಡ್ ಕ್ಲೀನರ್ ಸೊಲ್ಯೂಶನ್ (ಸ್ಪಿರಿಟ್ ಥರ) ಸೋಕಿಸಿ ಹೆಡ್ ಕ್ಲೀನ್ ಮಾಡಬೇಕಿತ್ತು. ಸಣ್ಣ ಮಕ್ಕಳಿಗೆ ಇದು ಸಾಧ್ಯವಾಗುತ್ತಿರಲಿಲ್ಲ... ಕಿವಿಯನ್ನು ಸ್ವಚ್ಛಗೊಳಿಸಿದ ಹಾಗೆ! ಇನ್ನೊಂದು ಕೆಲವು ತಾಂತ್ರಿಕ ಕಾರಣಗಳಿಂದ ಕ್ಯಾಸೆಟ್ಟಿನ ಟೇಪು ಟೇಪ್ ರೆಕಾರ್ಡರಿನ ಹೆಡ್ಡಿಗೆ ಸಿಕ್ಕಿಕೊಂಡು ಅದರ ಟೇಪು ತಿರುಚಿಕೊಂಡು ಸ್ವರ ಏನೆಲ್ಲ ಕೇಳಿ ಕೊನೆಗೊಮ್ಮೆ ಟೇಪ್ ರೆಕಾರ್ಡರ್ ಆಫ್ ಆಗಿ ಅವಾಂತರ ಆಗುತ್ತಿತ್ತು. ಆಗ ನಟರಾಜ ಪೆನ್ಸಿಲ್ ಅಥವಾ ಬಾಲ್ ಪೆನ್ ತೆಗೆದುಕೊಂಡು ಜಾಗರೂಕತೆಯಿಂದ ಟೇಪನ್ನು ಬಿಡಿಸಿ ಅದರ ಚಕ್ರಕ್ಕೆ ಪೆನ್ಸಿಲ್ ತೂರಿಸಿ ಪುನಃ ಟೇಪನ್ನು ಮರು ಸ್ಥಾಪನೆ ಮಾಡಬೇಕಿತ್ತು. ಆದಾಗ್ಯೂ ಜಜ್ಜಿದಂತೆ ಭಾಸವಾಗುವ ಟೇಪಿನ ಭಾಗಗಳ ಆಡಿಯೋ ಶಾಶ್ವತವಾಗಿ ಗಜಿಬಿಜಿಯಾಗುತ್ತಿತ್ತು.

ಟೇಪು ಸಿಕ್ಕಾಕಿಕೊಂಡ ಬಳಿಕ ಸಣ್ಣ ಸ್ಟಾರ್ ಸ್ಕ್ರೂ ಡ್ರೈವರ್ ನಲ್ಲಿ ಅದನ್ನು ಬಿಚ್ಚಿ ಬಿಡಿಸಿದಾಗಲೇ ಗೊತ್ತಾಗುತ್ತಿದ್ದು, ಹೊಟ್ಟೆಯೊಳಗಿನ ಕರುಳಿನ ಹಾಗೆ ಕ್ಯಾಸೆಟ್ಟಿನೊಳಗಿನ ಟೇಪು ಮೈಲುದ್ದ ಇರುತ್ತದೆ ಅಂತ...!! ಈ ಥರ ಹಲವಾರು ಬಾರಿ ಸಿಕ್ಕಾಕೊಂಡು ಶಸ್ತ್ರಕ್ರಿಯೆಗೆ ಒಳಗಾಗಿ ಮೌಲ್ಯ ಕಳೆದುಕೊಂಡ ಟೇಪನ್ನು ಬಿಡಿಸಿ ಗದ್ದೆಯಲ್ಲಿ ಬೆಳೆಸಿದ ತರಕಾರಿಗೆ ಹಕ್ಕಿ ಬಾರದ ಹಾಗೆ ಕಟ್ಟುತ್ತಿದ್ದರು. ನುಣುಪಾದ ಟೇಪಿನ ಹೊರಮೈ ಹೊಳಪಿಗೆ ಬೆಚ್ಚಿದ ಪ್ರಾಣಿ ಪಕ್ಷಿಗಳು ತರಕಾರಿ ಗಿಡಗಳ ತಂಟೆಗೆ ಬಾರದಿರಲಿ ಅಂತ...

 

ಕ್ಯಾಸೆಟ್ಟಿನ ಕಂಪನಿಗಳೂ ಹಾಗೆಯೇ ಸೋನಿ, ಟಿ.ಸೀರೀಸ್, ಸಂಗೀತಾ ಲೈವ್... ಹೀಗೆ ಥರಹೇವಾರಿ ಕ್ಯಾಸೆಟ್ಟುಗಳಿದ್ದವು. ಯಕ್ಷಗಾನ ತಾಳಮದ್ದಳೆ, ಚಿತ್ರಗೀತೆಗಳೆಲ್ಲ ಸಾಮಾನ್ಯವಾಗಿ ಒಂದು ಗಂಟೆ ಅವಧಿಯದ್ದು. ಆದರೆ, ಕೆಲವು ಸುದೀರ್ಘ ಯಕ್ಷಗಾನದ ಕ್ಯಾಸೆಟ್ಟುಗಳು ಮೂರು ಕ್ಯಾಸೆಟ್ಟುಗಳಾಗಿ ಬರ್ತಾ ಇದ್ದವು. ಅವನ್ನು ಪ್ರತ್ಯೇಕ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಿದ್ದರು. ಕ್ಯಾಸೆಟ್ಟಿನ ರಕ್ಷಾಪುಟ (ಕವರ್ ಪೇಜ್) ದಲ್ಲಿನ ಬರಹಗಳನ್ನು, ಚಿತ್ರಗಳನ್ನು ನೋಡಲು, ಓದಲೂ ತುಂಬ ಆಸಕ್ತಿ ಇತ್ತು...

ಕಾಲೇಜಿಗೆ ಹೋಗುವ ದಿನಗಳಲ್ಲಿ ಇಷ್ಟದ ಚಿತ್ರಗೀತೆಗಳ ಕ್ಯಾಸೆಟ್ಟುಗಳನ್ನು ಸ್ನೇಹಿತರಿಂದ ಎರವಲು ತಂದು ಕೇಳುತ್ತಿದ್ದದ್ದೂ ಇದೆ. ನಮ್ಮ ಮಂಗಳೂರಿನ ಪ್ರಖ್ಯಾತ ಚಾ ಪರ್ಕ ತುಳು ನಾಟಕ ತಂಡದ ಪುದರ್ ದೀತಿಜಿ, ದೇವೆರ್ ದೀಲೆಕಾಪುಂಡು, ಪಾರ್ವತಿ, ಬೊಳ್ಳಿ ಮತ್ತಿತರ ನಾಟಕಗಳ ಆಡಿಯೋ ಕ್ಯಾಸೆಟ್ಟುಗಳು ಆ ಕಾಲದಲ್ಲೇ ಎಷ್ಟು ವೈರಲ್ ಆಗಿದ್ದವು ಎಂದರೆ ಜನರಿಗೆ ಅವುಗಳ ಡೈಲಾಗ್ ಬಾಯಿ ಪಾಠ ಬರುತ್ತಿತ್ತು... ಮೊಬೈಲೇ ಇಲ್ಲದ, ಅಂತರ್ಜಾಲ ಪ್ರವರ್ಧಮಾನಕ್ಕೆ ಬಾರದೇ ಇದ್ದ, ಸೀಮಿತ ಚಾನೆಲ್ಲುಗಳ ಟಿ.ವಿ. ಮಾಧ್ಯಮ ಪ್ರವರ್ಧಮಾನಕ್ಕೆ ಬಂದಂಥಹ ಸುವರ್ಣ ಯುಗ ಅದು. ಹಾಗಾಗಿ ಜನರಿಗೆ ಮಾಹಿತಿ, ಮನರಂಜನೆಗೆ ಇದ್ದ ಕೆಲವೇ ಮಾಧ್ಯಮಗಳ ಪೈಕಿ ಕ್ಯಾಸೆಟ್ಟು ಕೂಡಾ ಒಂದು....

ಈಗ ಪುಸ್ತಕದ ಲೈಬ್ರೆರಿ ಇದ್ದ ಹಾಗೆ ಆಗ ಮನೆಗಳಲ್ಲಿ ಕ್ಯಾಸೆಟ್ ಲೈಬ್ರೇರಿ ಇರ್ತಾ ಇತ್ತು. ಕೆಲರದ್ದು ಯಕ್ಷಗಾನ ಹಾಡುಗಳ ಸಂಗ್ರಹ, ಕೆಲವರದ್ದು ಚಿತ್ರಗೀತೆ, ಕೆಲರದ್ದು ಕ್ಲಾಸಿಕಲ್ ಸಂಗೀತ ಕಛೇರಿ ಕ್ಯಾಸೆಟ್ಟುಗಳು, ಕುನ್ನಕ್ಕುಡಿ, ಸುಬ್ಬುಲಕ್ಷ್ಮೀ, ಕದ್ರಿ ಗೋಪಾಲನಾಥ್, ಬಾಲಮುರಳಿಕೃಷ್ಣ ಹೀಗೆ ಅವರವರ ಅಭಿರುಚಿಗೆ ತಕ್ಕ ಹಾಗೆ ಸಂಗ್ರಹಿಸಿ ಇರಿಸುತ್ತಿದ್ದದ್ದು ಒಂದು ಹೆಮ್ಮೆಯ ಸಂಗತಿಯೂ ಆಗಿತ್ತು...

ನನ್ನ ಭಾವ ಒಬ್ಬರಿದ್ದರು. ಅವರು ಯಕ್ಷಗಾನದ ಅಪರಿಮಿತ ಅಭಿಮಾನಿ. ಇಷ್ಟದ ಬಯಲಾಟ ಹತ್ತಿರ ಇದ್ದರೆ ನಾಲ್ಕಾರು ಖಾಲಿ ಕ್ಯಾಸೆಟ್ ಹಾಗೂ ಟೇಪ್ ರೆಕಾರ್ಡರ್ ಸಹಿತ ಆಟದಲ್ಲಿಗೆ ಹಾಜರು. ಮೈಕ್ ಆಪರೇಟರ್ ಹತ್ತಿರವೇ ಕುಳಿತು. ಇಡೀ ರಾತ್ರಿಯ ಆಟದ ಪದಗಳನ್ನು (ಭಾಗವತಿಕೆ) ಸಹನೆಯಿಂದ ಕುಳಿತು ರೆಕಾರ್ಡ್ ಮಾಡುತ್ತಿದ್ದರು. ಬಳಿಕ ಅವುಗಳ ವಿವರಗಳನ್ನು ಬರೆದು ಕ್ರಮಬದ್ಧವಾಗಿ ಜೋಡಿಸಿ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಕುಳಿತು ಕೇಳುತ್ತಿದ್ದರು. ಅಂತಹ ನೂರಾರು ಕ್ಯಾಸೆಟ್ಟುಗಳು ಅವರ ಸಂಗ್ರಹದಲ್ಲಿತ್ತು. ಕ್ಯಾಸೆಟ್ ಸಂಗ್ರಹದ ಹವ್ಯಾಸ ಬೆಳೆಸಿದವರು ಆಗ ಇದ್ದರು, ಈಗಲೂ ಇದ್ದಾರೆ, ಆದರೆ ಅವುಗಳ ಬಳಕೆ ಇಲ್ಲದೆ ಅವು ಫಂಗಸ್ ಹಿಡಿದು ಹೊದ್ದು ಮಲಗಿವೆ ಅಷ್ಟೇ...

ಟೇಪ್ ರೆಕಾರ್ಡರಿಗೆ ಆಂಪ್ಲಿಫಯರ್ ಜೋಡಿಸಿ ದೊಡ್ಡ ಸ್ಪೀಕರ್ ನ ಹಿಂದೆ ಮಣ್ಣಿನ ಪಾತ್ರೆ ಫಿಕ್ಸ್ ಮಾಡಿ (ಹೆಚ್ಚಿನ ಬಾಸ್ ಮತ್ತಿತರ ಇಫೆಕ್ಟ್ ಪ್ರತಿಧ್ವನಿಸಲು) ಮುಕ್ಕಾಲ ಮುಕ್ಕಾಬುಲಾ.... ಮತ್ತಿತರ ಹಾಡು ಕೇಳಿದ್ದು, ಎ.ಆರ್.ರೆಹಮಾನ್ ಹಾಡುಗಳ ಕ್ಯಾಸೆಟ್ಟನ್ನು ಎಕ್ಸ್ಟ್ರಾ ಸ್ಪೀಕರ್ ಗೆ ಜೋಡಿಸಿ ಕೇಳಿ ರೋಮಾಂಚನ ಅನುಭವಿಸಿದ್ದು ಅವೆಲ್ಲ ಬಾಲ್ಯದ ಚೆಂದದ ನೆನಪುಗಳು...

ಬೇಕಾದಾಗ, ಬೇಕಾದ ಹಾಡನ್ನು ಬೇಕಾದಲ್ಲಿಂದ ಡೌನ್ ಲೋಡ್ ಮಾಡಲು ಅಸಾಧ್ಯವಾದ ಕಾಲದಲ್ಲಿ ಪಾಲಿಗೆ ಬಂದ ಕ್ಯಾಸೆಟ್ಟುಗಳೇ ಪಂಚಾಮೃತ ಅನ್ನುವ ಹಾಗಾಗುತ್ತಿತ್ತು. ಭಾಷೆಯೇ ಗೊತ್ತಿಲ್ಲದಿದ್ದರೂ ಕೇಳಿದ ಶಂಕರಾಭರಣ, ಶಂಕರಾ ನಾದಶರೀರಾ... ಸಾಗರ ಸಂಗಮ ಮತ್ತಿತರ ಚಿತ್ರಗಳ ಹಾಡುಗಳು ಕ್ಯಾಸೆಟ್ಟಿನದ್ದೇ ಕೊಡುಗೆ.

 

 

ನಿಮ್ಮ ಮನೆಯಲ್ಲೂ ನೀವು ಚಿಕ್ಕವರಿದ್ದಾಗ ರೆಕಾರ್ಡ್ ಮಾಡಿದ ನಿಮ್ಮದೇ ಧ್ವನಿಗಳ ಕ್ಯಾಸೆಟ್ಟುಗಳು ಎಲ್ಲೋ ಪೆಟ್ಟಿಗೆಯಲ್ಲಿ ಅವಿತಿರಬಹುದು. ಹುಡುಕಿ ನೋಡಿ. ಈಗಿನ ತಂತ್ರಜ್ಞಾನ ಬಳಸಿ ಕ್ಯಾಸೆಟ್ಟುಗಳ ಧ್ವನಿಯನ್ನು ಕಂಪ್ಯೂಟರಿಗೆ ವರ್ಗಾಯಿಸಲು ಸಾಧ್ಯವಿದೆ. ಆದರೆ ಅಪಾರ ತಾಳ್ಮೆ ಬೇಕು. ಎಲ್ಲವೂ ಡಿಜಿಟಲ್ ಆಗಿರುವ ಈ ಹಿನಗಳಲ್ಲಿ ಅನಲಾಗ್ ಅಥವಾ ಆ ಹಿಂದಿನ ವ್ಯವಸ್ಥೆ ಕಣ್ಣೆದುರಿಗೇ ಅಪ್ರಸ್ತುತ ಆಗಿರುವಾಗ ಅವು ಪಳೆಯುಳಿಕೆ ಆಗುವ ಮೊದಲು ಅವುಗಳಲ್ಲಿನ ಸಾರವನ್ನು ಡಿಜಿಟಲ್ ಆಗಿಸುವ ಪ್ರಯತ್ನ ಮಾಡಿದರೆ ಧ್ವನಿಗಳನ್ನಾದರೂ ಕಾಪಾಡಬಹುದು....

 

ನಮ್ಮ ಕಲ್ಪನೆಯನ್ನೂ ಮೀರಿ ತಂತ್ರಜ್ಞಾನ ಬದಲಾಗುತ್ತಿದೆ. ಕ್ಯಾಸೆಟ್ಟಿನ ನಂತರ ಸಿಡಿ ಬಂತು, ನಂತರ ಡಿಸ್ಕು ಬಂತು, ಪೆನ್ ಡ್ರೈವ್ ಬಂತು, ಅಷ್ಟೇ ಯಾಕೆ ಮೊಬೈಲಿಗೆ ಇಂಟರ್ನಲ್ ಮೆಮೊರಿ ಕಾರ್ಡ್ ಬಂತು... ಈಗ ಮೊಬೈಲುಗಳಲ್ಲೂ ಇಂಟರ್ನಲ್ ಮೆಮೊರಿ ಕಾರ್ಡ್ ಇಲ್ಲದಂಥಹ ವ್ಯವಸ್ಥೆಗೆ ಒಗ್ಗಿ ಆಗಿದೆ. ಎಲ್ಲವೂ ಆನ್ ಲೈನ್, ಅಥವಾ ಗೂಗಲ್ ಡ್ರೈವ್ ನಂತಹ ಆನ್ ಲೈನ್ ಸಂರಕ್ಷಣಾ ತಾಣಗಳಲ್ಲಿ ಸೇವ್ ಆಗಿರುತ್ತವೆ. ಹಾಡುಗಳು ಆನ್ ಲೈನಿನಲ್ಲೇ ಸಿಗುತ್ತವೆ. ಯಾವುದನ್ನೂ ಕಟ್ಟಿ ಕೂಡಿಡಬೇಕಾಗಿಲ್ಲ. ಅಲ್ವ..?. ಈಗ ನಾನು ಹೇಳಿದ ಎಲ್ಲ ವ್ಯವಸ್ಥೆಗಳು ಬಂದು, ಹೋಗಿ ಆಗಿವೆ. ಮುಂದೆ ಏನು ಬರಲಿದೆಯೋ ಗೊತ್ತಿಲ್ಲ. ಒಂದಷ್ಟು ದಶಕಗಳ ಜಗತ್ತನ್ನು ರಂಜಿಸಿದ ಪಳೆಯುಳಿಕೆ ಕ್ಯಾಸೆಟ್ಟುಗಳು. ಲಹರಿ ವೇಣುವಿನಂತಹ ದಿಗ್ಗಜರು ಕಣ್ಣೆದುರು ಇದ್ದಾರೆ ಕ್ಯಾಸೆಟ್ಟುಗಳ ಮೂಲಕವೇ ಬದುಕು ಕಟ್ಟಿಕೊಂಡವರು.

ಈಗ ಟೇಪ್ ರೆಕಾರ್ಡರ್ ರಿಪೇರಿ ಮಾಡುವವರಿಲ್ಲ, ಕ್ಯಾಸೆಟ್ ಮಾರುವವರೂ ಇಲ್ಲ, ಕ್ಯಾಸೆಟ್ ಮಾಡುವವರೂ ಇಲ್ಲ... ಬಹುಶಃ ಈಗಿರುವ ಮನೆಗಳು ಬದಲಾಗುವ ವರೆಗೆ ಎಲ್ಲೋ ಕಟ್ಟಿಟ್ಟ ಕ್ಯಾಸೆಟ್ಟುಗಳು ಮಾತು ಮರೆತ ಭಾವಗಳ ಹಾಗೆ ಕಣ್ಣಿಗೆ ಬಿದ್ದೀತು... ಮನೆ ಬದಲಾಗ ಹಾಗೆ, ಕ್ಯಾಸೆಟ್ಟನ್ನೇ ಕಂಡು ಕೇಳರಿಯವದವರ ಮನ ಬದಲಾದ ಹಾಗೆ ಕ್ಯಾಸೆಟ್ಟುಗಳೂ ಮತ್ತೆ ಗುಜರಿಗೇ ಹೋಗಿ ಬಿದ್ದೀತು.... ಅಲ್ವ?

-ಕೃಷ್ಣಮೋಹನ ತಲೆಂಗಳ

29.01.2021.

No comments: