ಕ್ಯಾಲೆಂಡರ್ ಜೊತೆಗೆ ಮನಸು, ಕನಸೂ, ನನಸೂ ಹೊಸತಾಗಿರಲಿ...
ಹೊಸತು ಅನ್ನುವ ಕಲ್ಪನೆ ಮೊದಲು ಮೂಡುವುದು ಮನಸಿನಲ್ಲಿ. ನಮ್ಮ ಸಂಕಲ್ಪ, ನಿರೀಕ್ಷೆ, ಪೂರಕ ಪರಿಸರ ಆ ಹೊಸತರ ಅನುಭೂತಿಯನ್ನು ಕಟ್ಟಿಕೊಟ್ಟು, ‘ಹೌದು, ಇದು ಹೊಸತು. ಹೊಸ ನಿರೀಕ್ಷೆ, ಹೊಸ ದಿನ, ಹೊಸದೊಂದು ಅವಕಾಶ, ಮತ್ತೊಂದು ಹೊಸ ಪರ್ವ ನನಗೋಸ್ಕರ ಕಾದಿದೆ’ ಎಂಬ ಭಾವವನ್ನು ಮೂಡಿಸುತ್ತದೆ. ಆ ಹೊಸತರ ಗುಂಗಿನಲ್ಲಿ ನಾವು ಮಾನಸಿಕವಾಗಿ, ದೈಹಿಕವಾಗಿ ಹೊಸ ಪರ್ವಕ್ಕೆ ಸಿದ್ಧರಾಗುವ ಮೂಲಕ ಹೊಸತನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧರಾಗುತ್ತೇವೆ. ಈ ಭಾವ ಸಿದ್ಧತೆಯೇ ನಮ್ಮಲ್ಲೊಂದು ಹೊಸತರ ಪುಳಕ ಸೃಷ್ಟಿಸಿ, ಮತ್ತೊಮ್ಮೆ ಬದಲಾಗಲು, ಹೊಸತರ ಖುಷಿ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ.
ಹೊಸ ಕ್ಯಾಲೆಂಡರ್ ವರ್ಷವೂ ಹಾಗೆಯೇ. ಪ್ರತಿ ದಿನದ ಸೂರ್ಯಾಸ್ತವೂ ನಮಗೊಂದು ದಿನದ ಹಿನ್ನೋಟಕ್ಕೆ ಅವಕಾಶ ಕಲ್ಪಿಸಿ, ನಮ್ಮನ್ನು ನಾವು ತಿದ್ದಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಪ್ರತಿ ಸೂರ್ಯೋದಯವೂ ಮತ್ತೊಂದು ಹೊಸ ದಿನದ ಅವಕಾಶವನ್ನು ತೆರೆದಿಡುತ್ತದೆ.
ಆದರೆ, ಪ್ರತಿ ಜನವರಿ 1ರ ಸೂರ್ಯೋದಯ ಹಾಗಲ್ಲ. ಹೊಸದಾಗಿ 365 ದಿನಗಳ ದೊಡ್ಡ ಗುಚ್ಛವನ್ನು ಕೈಗಿತ್ತು, ‘ಮತ್ತೊಂದು ವರ್ಷ ಬರುತ್ತಿದೆ, ಬಂದಾಗಿದೆ, ಬದಲಾಗಲು ನೆಪಗಳನ್ನು ಹುಡುಕುವ ನೀನು ಈಗಲಾದರೂ ಬದಲಾಗು’ ಎಂಬಂತೆ ಒಂದು ಮಾಧುರ್ಯದ ಪುಳಕವನ್ನು ಪ್ರಚೋದಿಸುತ್ತದೆ.
ಹೌದು.... 12 ಪುಟಗಳ ಹೊಸ ಕ್ಯಾಲೆಂಡರ್ ಸಹಿತ ಡಿ.31 ಕಳೆದು ಜನವರಿ 1 ಬಂದರೆ ಸಾಕು ಹೊಸತನದ ಕಿರಣ ಸುತ್ತಮುತ್ತಲೂ ಆವರಿಸಿದಂತೆ ಭಾಸವಾಗುತ್ತದೆ. ಮಾಧ್ಯಮ, ಪರಿಸರ, ಬಂಧು ಮಿತ್ರರ ಶುಭಾಶಯಗಳು, ಮುಗಿದು ಹೋದ ಸಿಎಲ್ ಎಂಬ ರಜೆಗಳು, ಹೊಸ ಹೊಸ ಹಬ್ಬಗಳ ದಿನಾಂಕಗಳ ನಿಗದಿ, ಹೆಚ್ಚಾಗುವ ವಯಸ್ಸು, ಬದಲಾಗಲು ಹಾತೊರೆಯುವ ಮನಸ್ಸು ಎಲ್ಲ ಸೇರಿ ಹೊಸತರ ಅನುಭೂತಿ ಕಟ್ಟಿಕೊಡುತ್ತದೆ. ಅಯ್ಯೋ, ಬದಲಾಗುವುದು ಕ್ಯಾಲೆಂಡರ್ ಮಾತ್ರ ಅಂತಲೂ ಮೂಗು ಮುರಿದು ನಿರಾಶವಾದಿಗಳಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ‘ಹಿಂದೆ ಏನೇ ಆಗಲಿ, ಮತ್ತೊಂದು ಹೊಸ ವರ್ಷ ಬಂದಿದೆ, ಬದಲಾಗುವುದಿದ್ದರೆ, ಬದಲಾಗುವ ಸಂಕಲ್ಪ ತೊಡುವುದಿದ್ದರೆ ಇದು ಸಕಾಲ.
ಪ್ರತಿ ದಿನವೂ ಹೊಸತೇ, ಆದರೆ, 365 ದಿನಗಳು ತಾಜಾ ನಮ್ಮ ಎದುರಿಗಿದೆ, ಇದು ಬದಲಾಗಲು ಮತ್ತೊಂದು ಅವಕಾಶ’ಅಂತ ಕಂಡಾಗ ಹೊಸ ಕ್ಯಾಲೆಂಡರ್ ವರ್ಷ ಸಹ ಪರಿವರ್ತನೆಗೆ ಸಿಕ್ಕಿದ ಸಂದರ್ಭ ಅಂತ ಅಶಾವಾದಿಗಳಲು ಸಾಧ್ಯ... ಈ ಎರಡೂ ಭಾವ ನಮ್ಮೊಳಗೇ ಇರುತ್ತವೆ. ಹೇಗೆ ಸ್ವೀಕರಿಸುತ್ತೇವೆಯೋ ಹಾಗೆ.
ಮನುಷ್ಯ ಇತರ ಜೀವಿಗಳಿಂದ ಬುದ್ಧಿವಂತ ಇರಬಹುದು. ಆದರೆ ಬಹುಶಃ ನಾವು ಇತರ ಜೀವಿಗಳಿಗಿಂತ ಆಲಸಿಗಳು. ನಮಗೆ ಗಡುವು ಇಲ್ಲದೆ, ಎಚ್ಚರಿಸುವವರಿಲ್ಲದೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ. ಗಡಿಯಾರ ಮತ್ತು ಕ್ಯಾಲೆಂಡರ್ ಇಲ್ಲದೆ ನಮ್ಮ ಗುರಿಗಳು ಹೊತ್ತಿಗೆ ಸರಿಯಾಗಿ ಮುಗಿಯುವುದಿಲ್ಲ. ಎಲ್ಲವನ್ನೂ ಕೊನೆಯ ಕ್ಷಣಕ್ಕೆ ಇಟ್ಟುಕೊಳ್ಳುವುದು, ಸಂಪೂರ್ಣ ತೊಡಗಿಸಿಕೊಳ್ಳದಿರುವುದು, ಏಕಾಗ್ರತೆ ಕೊರತೆ ಇತ್ಯಾದಿಗಳ ಕಾರಣಕ್ಕೆ ನಿಗದಿತ ಸಮಯಕ್ಕೆ ಮಾಡಬೇಕಾದ್ದನ್ನು ಮಾಡಲು ಹೆಣಗಾಡುತ್ತೇವೆ. ಗಡಿಯಾರ ಮತ್ತು ಕ್ಯಾಲೆಂಡರು ನಮ್ಮ ಗಡುವುಗಳನ್ನು ತೋರಿಸುತ್ತಲೇ ಇರುತ್ತದೆ. ಹಾಗಾಗಿ ನಿನ್ನ ಸಮಯ ಬಂತು ಎಂದು ಎಚ್ಚರಿಸುವುದಕ್ಕೋಸ್ಕರವೇ ಎದ್ದು ಕಾಣುವ ಜಾಗದಲ್ಲಿ ಕ್ಯಾಲೆಂಡರ್ ಇರಿಸುತ್ತೇವೆ.
ಫೈವ್ ಜಿ ಮೊಬೈಲ್ ಕೈಯ್ಯಲ್ಲಿ ಇದ್ದಾಗ್ಯೂ ಸಹ ಇಂದಿಗೂ ನಮಗೆ ಮುದ್ರಿತ ರೂಪದಲ್ಲಿರುವ ಕ್ಯಾಲೆಂಡರ್ ನೋಡದೆ ಸಮಾಧಾನ ಆಗುವುದಿಲ್ಲ ಅಲ್ವ.
ಹಾಗೆಂದು, ಗಡಿಯಾರ ಮತ್ತು ಕ್ಯಾಲೆಂಡರ್ ಇಲ್ಲದೆ ಬದುಕುವುದಕ್ಕೇ ಆಗುವುದಿಲ್ಲ ಅಂತ ಅರ್ಥ ಅಲ್ಲ. ಬೆಳಗ್ಗೆ ಮೇಯಲು ಬಿಟ್ಟ ಹಸುಗಳು ಯಾರೋ ಕಳುಹಿಸಿಕೊಟ್ಟಂತೆ ಸಂಜೆ ತಾವಾಗಿ ಹಟ್ಟಿಗೆ ಮರಳುವುದು ಕಂಡಿದ್ದೇವೆ. ಕಟ್ಟಿ ಹಾಕಿದ ನಾಯಿ ತನ್ನ ಊಟದ ಹೊತ್ತಾದಾಗ ಕೂಗಿ ಹಸಿವಾಯಿತು ಅಂತ ಸೂಚಿಸುತ್ತದೆ, ಸಂಜೆಯಾಗುತ್ತಲೇ ಹಕ್ಕಿಗಳು ಗಡಿಯಾರವನ್ನೇ ನೋಡದೆ ಸಾಲು ಸಾಲಾಗಿ ಗೂಡು ಸೇರಲು ಹಾರಿ ಹೋಗುವುದನ್ನು ಕಾಣುತ್ತೇವೆ. ಇವೆಲ್ಲ ಪ್ರಾಕೃತಿಕ ವಿಶೇಷಗಳು. ಆದರೆ ನಾವು ಹಾಗಲ್ಲ. ಈಗಿನ ತಲೆಮಾರಿನವರ ಕೆಲಸ ಸುಸೂತ್ರವಾಗಿ ಆಗಲು ಗಡಿಯಾರ ಮತ್ತು ಕ್ಯಾಲೆಂಡರ್ ಖಂಡಿತಾ ಬೇಕು.
ಹಿಂದೆ ಕೃಷಿ ಕಾರ್ಯ, ವಾಣಿಜ್ಯ ವ್ಯವಹಾರ, ಹಬ್ಬಗಳ ಆಚರಣೆಗೆ, ಮುಹೂರ್ತಗಳ ನಿಗದಿಗೆ, ಋತುಗಳ ಆಗಮನದ ಸಿದ್ಧತೆಗೆ ಕ್ಯಾಲೆಂಡರ್ ಗಳ ಅವಶ್ಯಕತೆ ಇತ್ತು. ಈಗಲೂ ಇದೆ.
ಈ ಅವಶ್ಯಕತೆಗಳನ್ನು ಈಡೇರಿಸಲು ಕ್ಯಾಲೆಂಡರ್‌ಗಳ ಅಭಿವೃದ್ಧಿಯಾಯಿತು. ಇಂದಿಗೂ ಕ್ಯಾಲೆಂಡರ್ ನಮ್ಮ ಈ ಅವಶ್ಯಕತೆಗಳನ್ನು ಈಡೇರಿಸುತ್ತಲೇ ಇದೆ.
ವರ್ಷವನ್ನು ಅಳೆಯಲು ಮಾಪಕ ಕ್ಯಾಲೆಂಡರ್. ಕ್ಯಾಲೆಂಡರಿಗೂ ಇತಿಹಾಸವಿದೆ. ಆರಂಭಿಕ ಕ್ಯಾಲೆಂಡರ್‌ಗಳು ಹೆಚ್ಚಾಗಿ ಚಂದ್ರನ ಚಕ್ರಗಳನ್ನು ಆಧರಿಸಿದ್ದವು. ಈಜಿಪ್ಟಿಯನ್ನರು 365 ದಿನಗಳ ಸೌರ ಕ್ಯಾಲೆಂಡರನ್ನು ಅಭಿವೃದ್ಧಿಪಡಿಸಿದರು. ಈ ಕ್ಯಾಲೆಂಡರಿನಲ್ಲಿ 30 ದಿನಗಳು, 12 ತಿಂಗಳುಗಳು ಮತ್ತು 5 ಹೆಚ್ಚುವರಿ ದಿನಗಳಿದ್ದವು. ಅಸಿರಿಯನ್ ಮತ್ತು ಬಾಬಿಲೋನಿಯನ್ ಕ್ಯಾಲೆಂಡರ್‌ಗಳು ಕಬ್ಬಿಣದ ಯುಗದಲ್ಲಿ ಪ್ರಮುಖವಾಗಿದ್ದವು, ಇವುಗಳು ಚಂದ್ರ-ಸೌರ ವ್ಯವಸ್ಥೆಯನ್ನು ದಿನಗಣನೆಗೆ ಬಳಸುತ್ತಿದ್ದವು. ಕ್ರಿಸ್ತ ಪೂರ್ವ 45ರಲ್ಲಿ ಜೂಲಿಯಸ್ ಸೀಸರ್ ಜೂಲಿಯನ್ ಕ್ಯಾಲೆಂಡರನ್ನು ಪರಿಚಯಿಸಿದರು. ಜೂಲಿಯನ್ ಕ್ಯಾಲೆಂಡರ್ ಸುಮಾರು 1,600 ವರ್ಷಗಳ ಕಾಲ ಬಳಕೆಯಲ್ಲಿತ್ತು. ಆದರೆ, ವರ್ಷದ ಗಾತ್ರ ಗಣನೆಯಲ್ಲಿ ಸಣ್ಣ ದೋಷವಿತ್ತು. ಅಂತಿಮವಾಗಿ 8ನೇ ಪೋಪ್ ಗ್ರೆಗೋರಿ ಅವರು 1582ರಲ್ಲಿ ಪ್ರಸ್ತುತ ಬಳಕೆ ಆಗುತ್ತಿರುವ ಹೆಚ್ಚು ಸ್ಪಷ್ಟವಾಗಿರುವ ಗ್ರೆಗೋರಿಯನ್ ಕ್ಯಾಲೆಂಡರ್ ಅಭಿವೃದ್ಧಿಪಡಿಸಿದರು. ಇದು ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಿದೆ.
ಗ್ರೆಗೊರಿಯನ್ ಕ್ಯಾಲೆಂಡರ್ ಮಾತ್ರವಲ್ಲ, ಆಯಾ ಪ್ರಾಂತ್ಯ, ದೇಶ, ಧರ್ಮ, ಸಂಸ್ಕೃತಿಗಳಿಗೆ ಅನುಗುಣವಾಗಿ ಸಾಕಷ್ಟು ಕ್ಯಾಲೆಂಡರುಗಳಿಗೆ ಪ್ರಾದೇಶಿಕ ಹಾಗೂ ಭಾವನಾತ್ಮಕ ಮಾನ್ಯತೆಗಳಿವೆ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಚಂದ್ರ, ಸೌರ ಚಲನೆ ಆಧರಿಸಿದ ಹಿಂದೂ ಪಂಚಾಂಗ ಆಧರಿತ ಹಿಂದೂ ಕ್ಯಾಲೆಂಡರ್‌ಗಳು, ಚಂದ್ರನ ಚಕ್ರಗಳನ್ನು ಆಧರಿಸಿದ ಮುಸ್ಲಿಂ ಕ್ಯಾಲೆಂಡರ್‌ಗಳ ಸಹಿತ ಅನೇಕ ರೀತಿಯ ಕ್ಯಾಲೆಂಡರ್‌ಗಳು ನಮ್ಮಲ್ಲಿ ಬಳಕೆಯಲ್ಲಿವೆ.
ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಗಳ ಪ್ರಕಾರ ಕ್ರಿಸ್ತ ಶಕವನ್ನು ಎಡಿ ಅಥಂದರೆ ‘ಅನ್ನೋ ಡೋಮಿನಿ’ ಎಂದು ಕ್ರಿಸ್ತಪೂರ್ವವನ್ನು ಬಿಸಿ ಅಂದರೆ ‘ಬಿಫೋರ್ ಕ್ರೈಸ್ತ್’ ಎಂದೂ ಕರೆಯುತ್ತೇವೆ
ಇಂದು ಕ್ರಿಸ್ತಶಕ ಪ್ರಪಂಚದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಂವಹನ, ಸಾಗಣೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಗ್ರೆಗೋರಿಯನ್ ಕ್ಯಾಲೆಂಡರ್ ತಾರೀಕುಗಳೇ ಬಳಕೆ ಆಗುತ್ತಿವೆ. ಆದ್ದರಿಂದ ಈ ಕ್ಯಾಲೆಂಡರ್ ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದೆ. ಹೀಗಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಜಾಗತಿಕ ಮಾನ್ಯತೆ ಇದೆ.
ಪ್ರತಿದಿನ ಗಡುವಿನಲ್ಲಿ ದುಡಿಯುವವರು, ವಿವಿಧ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿಭಾಯಿಸುವವರು, ಜನಪ್ರತಿನಿಧಿಗಳು, ಕಲಾವಿದರ ಸಹಿತ ತೀರಾ ಸಕ್ರಿಯರಾಗಿ ದಿನಪೂರ್ತಿ ತಮ್ಮನ್ನು ತೊಡಗಿಸಿಕೊಳ್ಳುವವರ ಪಾಲಿಗೆ ಕ್ಯಾಲೆಂಡರೇ ಆ ವರ್ಷದ ಸಂವಿಧಾನ ಇದ್ದ ಹಾಗೆ. ನಿಮಗೆಲ್ಲ ನೆನಪಿರಬಹುದು ಸುಮಾರು 30, 40 ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಕ್ಯಾಲೆಂಡರೇ ಡೈರಿಯಾಗಿರುತ್ತಿತ್ತು. ತೋಟದ ಅಡಕೆ ಕೊಯ್ದದ್ದು, ದನ ಕರು ಹಾಕಿದ್ದು, ಹಾಲು ಮಾರಾಟ ಶುರು ಮಾಡಿದ್ದು, ಕೂಲಿಯವರಿಗೆ ಸಂಬಳ ಕೊಟ್ಟದ್ದು ಮತ್ತಿತರ ಮಾಹಿತಿಗಳನ್ನೂ ಚಾವಡಿಯಲ್ಲಿ ನೇತು ಹಾಕಿದ ಕ್ಯಾಲೆಂಡರಿನಲ್ಲೇ ನಮೂದಿಸಿಡ್ತಾ ಇದ್ರು. ಊರಿನ ಜಾತ್ರೆ, ಹಬ್ಬದ ಮುಹೂರ್ತ, ಸರ್ಕಾರಿ ರಜೆಗಳು, ಜನ್ಮದಿನದ ದಿನಾಂಕ, ಸಾಲು ಸಾಲು ರಜೆಗಳ ಸರಣಿ ಮತ್ತಿತರ ವಿಚಾರಗಳನ್ನು ಹೊಸ ಕ್ಯಾಲೆಂಡರ್ ಖರೀದಿಸಿ ತಂದ ಕೂಡಲೇ ಅದರ ವಿಶೇಷ ಪರಿಮಳ ಆಸ್ವಾದಿಸುತ್ತಾ ಮನೆಮಂದಿ ಒಟ್ಟಿಗೆ ಕುಳಿತು ಹುಡುಕುವುದು ಬಾಲ್ಯದ ಖುಷಿದ ಕ್ಷಣಗಳಾಗಿದ್ದವು. ಹಾಗಾಗಿ ಹೊಸ ವರ್ಷದ ಆಗಮನದ ಹುರುಪು ತುಂಬುವುದೇ ಕ್ಯಾಲೆಂಡರ್ ಎಂದರೆ ಉತ್ಪ್ರೇಕ್ಷೆ ಆಗಲಾರದು, ಅಂದಿಗೂ, ಇಂದಿಗೂ ಸಹಿತ.
ಅಷ್ಟಕ್ಕೂ ಹೊಸ ವರ್ಷ ಬಂದಾಕ್ಷಣ, ಕ್ಯಾಲೆಂಡರ್ ಬದಲಾದ ಕೂಡಲೇ ನಾವು ಯಾಕೆ ಬದಲಾಗಬೇಕು? ಬದಲಾಗಿ ಏನು ಆಗಬೇಕಿದೆ? ನಾನು ಬದಲಾದರೆ ಜಗತ್ತು ಬದಲಾಗುತ್ತದೆಯೇ? ಬದಲಾವಣೆ ಸಂಭವಿಸಲು ಡಿಸೆಂಬರ್ 31 ತೊಲಗಿ ಜನವರಿಯೇ ಬಂದಾಗಬೇಕೇ? ಎಂಬಿತ್ಯಾದಿ ಸಾಮಾನ್ಯ ಜಿಜ್ಞಾಸೆ ಕಾಡಿಯೇ ಕಾಡುತ್ತದೆ. ಬದಲಾವಣೆಗೆ ಪರ್ವ, ಮುಹೂರ್ತ, ಗಡುವು ಬೇಕಾಗಿಲ್ಲ ನಿಜ.
ಆದರೆ...
ಒಂದು ಪರ್ವ ನಮ್ಮ ಬದಲಾವಣೆಗೆ ಸೇತುವಾಗುತ್ತದೆ ಅಂತಾದರೆ, ಕ್ಯಾಲೆಂಡರ್ ಬದಲಾದ ನೆಪದಲ್ಲಾದರೂ ಎಷ್ಟೋ ದಿನಗಳಿಂದ ಬದಲಿಸಲು ಆಗದ್ದನ್ನು ಬದಲಿಸುವ ಹುರುಪು ಹುಟ್ಟಿಕೊಳ್ಳುತ್ತದೆ ಅಂತಾದರೆ, ಅಥವಾ ಇತಿಹಾಸ ಏನೇ ಇರಲಿ, ಈ ವರ್ಷವಾದರೂ ಬದಲಾಗುತ್ತೇನೆ ಎಂಬ ಹೊಸದೊಂದು ಆತ್ಮವಿಶ್ವಾಸ ಮೂಡಿಸುವುದಾದರೆ ಬದಲಾವಣೆಗೆ ಜನವರಿ ಯಾಕೆ ನೆಪವಾಗಬಾರದು.
ಬದಲಾವಣೆಯ ಸಂಕಲ್ಪ ಮೊದಲು ಮನಸ್ಸಿನಲ್ಲಿ ಮೂಡಬೇಕು. ಅದೊಂದು ಕನಸಾಗಬೇಕು. ಅದನ್ನು ಸಾಕಾರಗೊಳಿಸುವತ್ತ ದೃಢ ನಿಶ್ಚಯ ಮಾಡಬೇಕು.
ಈ ನಿಶ್ಚಯ ಹೊಸ ವರ್ಷ ಬಂದ ವಾರದೊಳಗೆ ಸೋರಿ ಹೋಗದ ಹಾಗೆ ಅಥವಾ ಮತ್ತದೇ ರೀತಿಯ ಜಾಢ್ಯದಲ್ಲಿ ನಾವು ಕಳೆದುಹೋಗದ ಹಾಗೆ ನೋಡಿಕೊಳ್ಳಬೇಕು. ಮತ್ತು ಬದಲಾವಣೆ ಕಾರ್ಯರೂಪಕ್ಕೆ ಬರಲು ಶುರುವಾದ ಬಳಿಕ ಹಿಂದಡಿ ಇಡಕೂಡದು. ನಾವೇ ಕೈಗಂಡ ಬದಲಾಗುತ್ತೇನೆ ಎಂಬ ನಿರ್ಧಾರವೇ ಕ್ಷೀಣವಾಗಿ ‘ಬದಲಾಗುವ ನಿರ್ಧಾರವೇ ಬದಲಾಗುತ್ತದೆ’ ಅಂತಾದರೆ ‘ನಮ್ಮ ಬದಲಾಯಿಸಲು ನಮಗೇ ಸಾಧ್ಯವಿಲ್ಲ’ ಅಂತ ನಾವು ಸೋಲೊಪ್ಪಿಕೊಳ್ಳಬೇಕಾಗುತ್ತದೆ.
ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರ ಬಂದ ಹೊತ್ತಿಗೆ ಅಥವಾ ಜನವರಿ ಶುರುವಾದ ಮೊದಲಿಗೇ ಬದಲಾಗುವ ಬಗ್ಗೆ ಮಾತುಡುತ್ತೇವೆ. ಹೌದು ತಾನೆ. ಆದರೆ ಆ ಬದಲಾವಣೆ ಬಗ್ಗೆ ನಮ್ಮಲ್ಲಿ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಬದಲಾಗಬೇಕು ಎಂಬ ಭಾವ ಇರುತ್ತದೆ ವಿನಃ ಹೇಗೆ ಬದಲಾಗಬೇಕು, ಯಾಕೆ ಬದಲಾಗಬೇಕು ಎಂಬುದೇ ಗೊತ್ತಾಗಿರುವುದಿಲ್ಲ. ನಿಜವಾಗಿಯೂ ಬದಲಾಗಬೇಕು ಅಥವಾ ನಮ್ಮನ್ನು ನಾವು ಸುಧಾರಿಸಬೇಕು ಎಂಬ ತುಡಿದ ಇದ್ದರೆ, ಅದಕ್ಕೊಂದು ರೂಪುರೇಷೆ ಬೇಕು. ಮತ್ತದು ನಮ್ಮ ಹಂತದಲ್ಲೇ ಜಾರಿಯಾಗುವಷ್ಟು ಸರಳವಾಗಿರಬೇಕು. ನಮಗೆ ಅರ್ಥವಾಗದ ಅಥವಾ ನಮಗೇ ಪಾಲಿಸಲಾಗದ ಬದಲಾವಣೆಯ ಕಾರ್ಯಸೂಚಿಗಳನ್ನು ರೂಪಿಸಿ ಏನು ಪ್ರಯೋಜನ. ಯಾರೋ ಬದಲಾಗಲಿ ಎಂಬ ಮಹದಾಸೆಯಿಂದ ಬೆಳ್ಳೆಂಬೆಳಗ್ಗೆದ್ದು ಜಾಲತಾಣದ ಸ್ಟೇಟಸ್ಸಿನಲ್ಲಿ ಮಹಾಮಹಿಮರ ಸೂಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ಜಗತ್ತು ಇದನ್ನು ಓದಿ ಬದಲಾಗಲಿ ಅಂತ ಆಶಿಸುತ್ತೇವೆ, ಸ್ವತಃ ನಾವೇ ಅವುಗಳನ್ನು ಪಾಲಿಸುವುದಿಲ್ಲ. ಇದೇ ರೀತಿ, ಬದಲಾಗುವ ನಿಶ್ಚಯ ಕೈಗೊಂಡರೆ ಸಾಲದು. ಅದು ಜಾರಿಯಾಗಬೇಕು.
ನಾವು ನಾವು ವೈಯಕ್ತಿಕವಾಗಿ ಬದಲಾದರೆ ಒಟ್ಟರ್ಥದಲ್ಲಿ ಇಡೀ ಸಮಾಜವೇ ಬದಲಾದ ಹಾಗೆ. ಸಂಶಯವೇ ಇಲ್ಲ. ಓರ್ವ ಜನಸಾಮಾನ್ಯನಾಗಿ ಬದಲಾಗುವುದು ಎಂದರೇನು? ದೇಶ ಕಟ್ಟುವುದು, ಸಮಾಜ ಸುಧಾರಣೆ, ದೇಶದ ಆರ್ಥಿಕ ಪರಿಸ್ಥಿತಿ ಉನ್ನತೀಕರಣ, ಜಾಗತಿಕ ಶಾಂತಿ ಸ್ಥಾಪನೆ ಎಂಬಿತ್ಯಾದಿ ವಿಶಾಲ ಅರ್ಥದ ಸಂಗತಿಗಳಲ್ಲ. ನಮ್ಮೊಳಗೆ ನಮಗೇ ಕಾಣಿಸುವ ಲೋಪಗಳನ್ನು ಸರಿಪಡಿಸುವುದು, ಇತರರು ಬದಲಾಗಿ, ನಾವು ಬದಲಾಗಲು ಸಾಧ್ಯವಾಗದೇ ಇರುವುದನ್ನು ನಾವೇ ಸುಧಾರಿಸುವುದು ಇತ್ಯಾದಿಗಳನ್ನು ಮಾಡಿದರೆ ಸಾಕು.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಸಂಕಲ್ಪಗಳು ಹೇಗಿರಬೇಕೆಂದರೆ.... 1) ನಾನು ಪ್ರತಿ ದಿನ ಸಿಕ್ಕಾಪಟ್ಟೆ ಮೊಬೈಲ್ ನಲ್ಲಿ ಕಳೆದುಹೋಗುತ್ತಿದ್ದೇನೆ. ಈ ವರ್ಷ ಅದರ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತೇನೆ ಅಂತ ನಿಶ್ಚಯ ಮಾಡಿ,
2) ನನಗೆ ಸಮಯ ಹೊಂದಾಣಿಕ ಮಾಡಲು ಆಗುತ್ತಲೇ ಇಲ್ಲ, ಉಣ್ಣಲು, ತಿನ್ನಲು, ಮಲಗಲು, ಅಷ್ಟೇ ಯಾಕೆ ನನ್ನ ಕುರಿತಾಗಿ ನನಗೇ ಯೋಚಿಸಲು ಸಾಧ್ಯವಾಗುತಿಲ್ಲ ಎಂಬಿತ್ಯಾದಿ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಚಂದದ ಒಂದು ದಿನಚರಿ ರೂಪಿಸಿ, ಅದರಂತೆ ಸಮಯದ ಹೊಂದಾಣಿಕೆ ಸಾಧ್ಯವಾಗಿಸಿ, 3) ನಾನು ಯಾರ ಬಳಿಯೋ ಸಾವಿರಾರು ರುಪಾಯಿ ಸಾಲ ಪಡೆದಿದ್ದೇನೆ, ಇಷ್ಟು ವರ್ಷ ಕಳೆದರೂ ಒಂದು ಪೈಸೆ ವಾಪಸ್ ಕೊಡಲು ಸಾಧ್ಯವಾಗಿಲ್ಲ. ಈ ವರ್ಷವಾದರೂ ದಿನಕ್ಕೆ ಕನಿಷ್ಠ ಒಂದು ರುಪಾಯಿಯಷ್ಚಾದರೂ ಕೂಡಿಟ್ಟು, ವರ್ಷದ ಕೊನೆಗೆ ಕನಿಷ್ಠ 365 ರುಪಾಯಿ ಸಾಲವನ್ನಾದರೂ ವಾಪಸ್ ಕೊಡುತ್ತೇನೆ 4) ಸಿಗರೇಟ್ ಸೇದುವುದು ಕಮ್ಮಿ ಮಾಡುತ್ತೇನೆ 5) ವಿಪರೀತ ಸಿಟ್ಟು ಮಾಡಿಕೊಳ್ಳುತ್ತಿದ್ದೇನೆ, ಅದರ ಪ್ರಮಾಣ ಕಡಿಮೆ ಮಾಡುತ್ತೇನೆ ಎಂಬಿತ್ಯಾದಿ ಸಣ್ಣ ಸಣ್ಣ ಸಂಗಿತಗಳನ್ನೇ ಸಂಕಲ್ಪ ಅಥವಾ ರೆಸೊಲ್ಯೂಶನ್ ಅಂತ ಬರೆದಿಟ್ಟುಕೊಳ್ಳಿ...
ಈ ಪೈಕಿ ವಾರಕ್ಕೊಂದೊಂದೇ ಸಂಗತಿಯಂತಾದರೂ ಜಾರಿಗೆ ತರಲು ಪ್ರಯತ್ನಿಸಿ.
ಹೊಸ ವರ್ಷ ಬಂದರೆ ಬದಲಾಗಲು ಸಾಕಷ್ಟು ಸಣ್ಣ ಸಣ್ಣ ಸಂಕಲ್ಪಗಳು ಸಾಕಾಗುತ್ತವೆ. ಸಾಧ್ಯವಾದರೆ ನೀವೂ ಪ್ರಯತ್ನಿಸಿ. 1) ಎಲ್ಲರಿಗೂ ಗೊತ್ತಿದ್ದ ಹಾಗೆ ನಾವು ಓದಿಗೆ ನೀಡುತ್ತಿರುವ ಸಮಯ ಕಡಿಮೆಯಾಗುತ್ತಿದೆ. ದಯವಿಟ್ಟು ಪ್ರತಿದಿನ ಪುಸ್ತಕ, ಪತ್ರಿಕೆ, ಬರೆಗಳನ್ನು ಓದಲು ನೀಡುವ ಸಮಯ ಜಾಸ್ತಿ ಮಾಡಿ, 2) ಊಟ ಮಾಡುವಾಗ, ಓದುವಾಗ, ನಿದ್ರೆ ಮಾಡುವಾಗ, ಧಾರ್ಮಿಕ ಸ್ಥಳಗಳಿಗೆ ಭೇಟಿ ಮಾಡುವಾಗ, ನೆಂಟರನ್ನು ಭೇಟಿಯಾದಾಗ ಮೊಬೈಲಿನಿಂದ ದಯವಿಟ್ಟು ದೂರವಿರಿ. ನಮಗೋಸ್ಕರ ಮೊಬೈಲ್ ಇದೆ ಹೊರತು ಮೊಬೈಲಿಗೋಸ್ಕರ ನಾವಿಲ್ಲ ಅಂತ ಅರ್ಥ ಮಾಡಿಕೊಳ್ಳಿ, 3) ಬಂಧುಮಿತ್ರರ ಜೊತೆ ಪರಸ್ಪರ ಮಾತುಕತೆ ನಡೆಸುವ ಸಹನೆ ನಮ್ಮಲ್ಲಿ ಕುಂದಿದೆ. ಅಗತ್ಯಕ್ಕೆ ಮಾತ್ರ ಅಲ್ಲದೆ, ಸುಮ್ಮನೇ ಸ್ನೇಹಿತರಿಗೆ ಆತ್ಮೀಯ ಕರೆ ಮಾಡಿ ಕಷ್ಟ ಸುಖ ವಿಚಾರಿಸುವುದಕ್ಕೆ ಸಮಯ ಮೀಸಲಿರಿಸಿ, 4) ಸಮಯ ಇದ್ದರೆ ನಿಮ್ಮ ಆಪ್ತರಿಗೆ ಚಂದದ ಪತ್ರ ಬರೆದು, ಅವರ ಹುಟ್ಟಿದ ದಿನಕ್ಕೆ ಶುಭಾಶಯ ಕೋರಿ ಒಂದು ಅಚ್ಚರಿ ನೀಡಿ, 5) ಬದುಕಿನಲ್ಲಿ ಎಲ್ಲರೂ ಅವರವರ ಕೆಲಸ, ಜವಾಬ್ದಾರಿ, ಒತ್ತಡಗಳಲ್ಲಿ ವ್ಯಸ್ತರೇ ಆಗಿರ್ತಾರೆ. ಆದರೆ ಎಲ್ಲದಕ್ಕೂ ಬಿಝಿ ಅಂತ ನೆಪ ಹೇಳುವುದನ್ನು ಕಡಿಮೆ ಮಾಡಿ, ದಿನದಲ್ಲೊಮ್ಮೆಯಾದರೂ ಪುರುಸೊತ್ತು ಮಾಡಿ, ನಿಮಗೆ ಪುಟ್ಟ ಪುಟ್ಟ ಸಹಾಯ ಮಾಡಿದವರು, ಕಷ್ಟದಲ್ಲಿ ನೆರವಾದವರು, ಪುಟ್ಟ ಪುಟ್ಟ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ, ನೆನಪಿಸಿ, ಅವರಿಗೊಂದು ಶಹಬ್ಬಾಶ್, ತ್ಯಾಂಕ್ಸ್ ಹೇಳುವುದನ್ನು ರೂಢಿಸಿಕೊಳ್ಳಿ,6) ಇತರರ ಮಾತಿಗೆ ಕಿವಿಕೊಡಲು ಸಮಯ ಮೀಸಲಿರಿಸಿ, 7) ಸಾರ್ವಜನಿಕ ಸ್ಥಳಗಳಲ್ಲಿ ಕಸೆ ಎಸೆಯಬೇಡಿ, ದೊಡ್ಡದಾಗಿ ಮೊಬೈಲ್‌ನಲ್ಲಿ ಹಾಡು ಇರಿಸಿ ಇತರರಿಗೆ ಕಿರಿಕಿರಿ ಮಾಡಬೇಡಿ, ಎಲ್ಲಿಯೂ ಸರತಿ ಸಾಲು ತಪ್ಪಿಸಿ ಅಶಿಸ್ತು ತೋರಿಸಬೇಡಿ,
8) ಒಳ್ಳೆಯ ಶ್ರೋತೃಗಳಾಗಿ 9) ಜಾಲತಾಣದಲ್ಲಿ ಬರುವ ಲೈಕು, ಶೇರು, ಕಮೆಂಟುಗಳ ಹಂಗಿಲ್ಲದೆ ಒಂದಿಷ್ಟು ನಿಮಗೆ ಖುಷಿ ಕೊಡುವ ಹವ್ಯಾಸಗಳನ್ನು ನಿಮ್ಮ ಖುಷಿಗೋಸ್ಕರ ರೂಢಿಸಿಕೊಳ್ಳಿ ಮತ್ತು ಅದಕ್ಕೆ ಯಾರೋ ಮೆಚ್ಚುಗೆ ಸೂಚಿಸಬೇಕು, ಕಮೆಂಟ್ ಹಾಕಬೇಕು ಎಂಬ ನಿರೀಕ್ಷೆಗಳೇ ಇಲ್ಲದೆ ನಿಮ್ಮನ್ನು ನೀವು ಖುಷಿಯಾಗಿರಿಸುವುದನ್ನು ಕಲಿಯಿರಿ. ಮತ್ತೆ, 10) ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ಅಂತ ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಮೀಸಲಿಡಿ...
ಇವೆಲ್ಲ ಸಂಕಲ್ಪ ಜಾರಿ ಮಾಡಲು ಯಾವುದೇ ಖರ್ಚಿಲ್ಲ ಅಲ್ವ? ಇವನ್ನು ಜಾರಿಗೆ ತಂದರೆ ಜನವರಿ ಮೊದಲ ವಾರ ಮಾತ್ರವಲ್ಲ, ಇಡೀ ವರ್ಷ ನಿಮ್ಮ ಪಾಲಿಗೆ ಉಲ್ಲಾಸದಾಯಕವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಬೇಕಿದ್ದರೆ ಇಂದಿನಿಂದಲೇ ಇವನ್ನೆಲ್ಲ ಆಚರಿಸಿ, ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ, 2026 ಡಿಸೆಂಬರ್ 31ರಂದು ಅಷ್ಟೂ ಅನುಭವಗಳನ್ನು ಗಮನಿಸಿ ನೀವೆಷ್ಟು ಬದಲಾಗಿದ್ದೀರಿ ಅಂತ.
ಆಗಲೇ ಹೇಳಿದ ಹಾಗೆ, ಬದಲಾಗಬೇಕಾದ್ದು ಕ್ಯಾಲೆಂಡರ್, ತಾರೀಕು, ಪುಟಗಳು ಮಾತ್ರವಲ್ಲ. ಬದಲಾಗಬೇಕಾದ್ದು ನಮ್ಮ ಮನಸ್ಸು, ಬದಲಾವಣೆ ಮನಸ್ಸಿನಲ್ಲಿ ಮೂಡಿ, ಆಚರಣೆಯಲ್ಲಿ ಬಂದು, ಫಲಿತಾಂಶದ ರೂಪದಲ್ಲಿ ಕಾಣಿಸಬೇಕು. ಆಗಲೇ ಹೊಸತು, ಹೊಸ ವರ್ಷ, ಹೊಸ ಇಸವಿ ಎಂಬಿತ್ಯಾದಿ ರೂಪಕಗಳಿಗೆ ಅರ್ಥ ಬರಲು ಸಾಧ್ಯ. 2026 ಎಂಬ ಇಸವಿ ಕ್ಯಾಲೆಂಡರಿನ ಜೊತೆಗೆ ನಿಮ್ಮ ಮನಸು, ಕನಸು, ನನಸುಗಳಲ್ಲಿಯೂ ಹೊಸತನವನ್ನು ತುಂಬಿ ಕೊಡಲಿ.
-ಕೃಷ್ಣಮೋಹನ ತಲೆಂಗಳ.

No comments:
Post a Comment