ಸುವರ್ಣ ವರ್ಷಕ್ಕೆ ಕಾಲಿಟ್ಟ ಕುಡ್ಲ ಬಾನುಲಿ... ಆಕಾಶವಾಣಿ ಮಂಗಳೂರಿಗೆ ಈಗ 49ರ ಹರೆಯ! AKASHAVANI RADIO



ಆಕಾಶವಾಣಿ ಮಂಗಳೂರು... ಈಗ ಸಮಯ...



ಬಾಲ್ಯದಿಂದ ಇದೇ ಧ್ವನಿ ಆಲಿಸಿ ಬೆಳೆದಿರುವ ನಮಗೆ ಮಂಗಳೂರು ಆಕಾಶವಾಣಿ 49 ವರ್ಷಗಳನ್ನು ಪೂರೈಸಿದೆ ಎಂದರೆ ನಂಬಲಾಗುತ್ತಿಲ್ಲ. ಹೌದು. ಮಂಗಳೂರು ಆಕಾಶವಾಣಿ ಇಂದು 50 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2025 ಡಿ.11ಕ್ಕೆ ಮಂಗಳೂರು ಆಕಾಶವಾಣಿ ಅರ್ಧ ಶತಕ ಪೂರೈಸಲಿದೆ. ಇಂದು 49ನೇ ಹುಟ್ಟಿದ ದಿನ.

 





1976ರ ಡಿ.11ರಂದು ರಾಷ್ಟ್ರದ 78ನೇ ಹಾಗೂ ಕರ್ನಾಟಕದ 6ನೇ ಸ್ವತಂತ್ರ ಪ್ರಸಾರ ಕೇಂದ್ರವಾಗಿ ಮಂಗಳೂರು ಆಕಾಶವಾಣಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನ ವರೆಗೆ ನೂರಾರು ನಿರೂಪಕರು, ನೂರಾರು ಕಾರ್ಯಕ್ರಮ ನಿರ್ಮಾಪಕರು, ತಾಂತ್ರಿಕ ಸಿಬ್ಬಂದಿ, ತಾತ್ಕಾಲಿಕ ನೌಕರರು ಹಾಗೂ ಲಕ್ಷಾಂತರ ಕೇಳುಗರು ಬದಲಾಗಿರಬಹುದು, ಹೊಸದಾಗಿ ಹುಟ್ಟಿಕೊಂಡಿರಬಹುದು. ಕೇವಲ ಧ್ವನಿಯ ಮೋಡಿಯಿಂದ ಜನರ ಹಿಡಿದಿಡುವ ಈ ಮಾಧ್ಯಮ ಅದರಲ್ಲೂ ವಿಶಿಷ್ಟ ಭಾಷೆಗಳ ಸಂಗಮ ಕುಡ್ಲದಲ್ಲಿ ಹುಟ್ಟಿ ಬೆಳೆದ ಬಾನುಲಿ ಅದೇ ಮೂಲ ಭೂತ ಕಲ್ಪನೆ, ನಂಬಿಕೆ ಮತ್ತು ಶೈಲಿಯ ಜೊತೆಗೇ ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿರುವುದು ಹುಟ್ಟಿನಿಂದ ರೇಡಿಯೋ ಆರಾಧಕರಾದ ನನ್ನಂಥವರಿಗೆ ಬೆರಗು ಮತ್ತು ಖುಷಿಯೇ ಸರಿ.

 





ಸರಿಸುಮಾರು ಪದವಿ ತರಗತಿಗೆ ಬರುವ ತನಕವೂ ಮನೆಯಲ್ಲಿ ಕರೆಂಟೇ ಇಲ್ಲದ ನನ್ನಂಥ ಲಕ್ಷಾಂತರ ಮಂದಿಗೆ ಬಾಲ್ಯದ ಗೆಳೆಯನಾಗಿದ್ದದ್ದು ಇದೇ ರೇಡಿಯೋ, ಕರೆಂಟೇ ಇಲ್ಲದ ಮೇಲೆ ಟಿವಿ ಎಲ್ಲಿಂದ ಬರಬೇಕು. ಪತ್ರಿಕೆಯೂ ಅಪರೂಪದ ವಸ್ತು, ದೇವರ ದಯೆಯಿಂದ ಆಗ ಮೊಬೈಲ್ ಅಂತ ಒಂದು ಬರಲಿದೆ ಅಂತ ಸಹ ಗೊತ್ತಿರಲಿಲ್ಲ. ಹಾಗಾಗಿ.... ಮೊದಲಿಗೆ ಚಿತ್ರಗೀತೆ ಕೇಳಿದ್ದು, ವಾರ್ತೆ ಕೇಳಿ ಸುದ್ದಿ ತಿಳ್ಕೊಂಡಿದ್ದು, ಭಾಷಣ ಕೇಳಿದ್ದು, ರಸಪ್ರಶ್ನೆ ಕೇಳಿದ್ದು, ನಾಟಕ ಕೇಳಿದ್ದು, ಯಕ್ಷಗಾನದ ಹಾಡು ಆಲಿಸಿದ್ದು, ನಗೆಹನಿ ಕೇಳಿದ್ದು, ಕಾವ್ಯವಾಚನ, ಭಾವಗೀತೆ, ಪಾಡ್ದನ, ಸ್ವರಚಿತ ಕವನ, ರೂಪಕ, ಪ್ರಧಾನಿಯ ಭಾಷಣ, ಕ್ರಿಕೆಟ್ ಕಮೆಂಟ್ರಿ, ಚುನಾವಣಾ ಫಲಿತಾಂಶದ ನೇರ ಪ್ರಸಾರ, ಹವಾಮಾನ ವರದಿ, ಚಲನಚಿತ್ರ ಧ್ವನಿವಾಹಿನಿ... ಹೀಗೆ ಮಾಹಿತಿ, ಮನರಂಜನೆ, ಶಿಕ್ಷಣದ ಯಾವ್ಯಾವ ಪ್ರಾಕಾರಗಳಿವೆಯೋ ಅವೆಲ್ಲವನ್ನೂ ಅಚ್ಚುಕಟ್ಟಾಗಿ ಕೇಳಿಸಿ ಆ ಮೂಲಕ ಕಲ್ಪನೆಯಲ್ಲೇ ತೋರಿಸಿಕೊಟ್ಟದ್ದು ರೇಡಿಯೋ ಮಾತ್ರ. ಹಾಗಾಗಿ ಜಗತ್ತು 5ಜಿ ಯುಗಕ್ಕೆ ಕಾಲಿಟ್ಟು ವರ್ಷಗಳೇ ಕಳೆದರೂ ರೇಡಿಯೋಗೆ ನೀಡಿದ ಸ್ಥಾನವನ್ನು ಇನ್ಯಾವ ಸೋ ಕಾಲ್ಡ್ ಧಗಧಗಿಸುವ ನವಮಾಧ್ಯಮದಿಂದ ಕಸಿದುಕೊಳ್ಳಲು ನನ್ನ ತಲೆಮಾರಿನವರಿಗೆ ಸಾಧ್ಯವಾಗಲಿಲ್ಲ, ಆಗುತ್ತಲೂ ಇಲ್ಲ.

 





ಆಗ ನಾವು ಕಾದು ಕುಳಿತು ರೇಡಿಯೋ ಕಾರ್ಯಕ್ರಮ ಕೇಳುತ್ತಿದ್ದೆವು ಅಂದರೆ ಈಗಿನವರು ನಕ್ಕಾರು. ಆದರೆ ಅದು ಉತ್ಪ್ರೇಕ್ಷೆಯಲ್ಲ. ರೇಡಿಯೋ ಎದ್ದ ಕೂಡಲೇ ಚಾಲೂ ಆದರೆ ರಾತ್ರಿ ವರೆಗೂ ಮಾತನಾಡುತ್ತಲೇ ಇತ್ತು. ತನ್ನಷ್ಟಕೇ ಮಾತನಾಡುತ್ತಿದ್ದದ್ದಲ್ಲ. ಕೆಲಸ ಮಾಡುತ್ತಲೇ ನಮ್ಮನ್ನು ಅದು ತಲುಪುತ್ತಿತ್ತು... ಎಲ್ಲಿ ವರೆಗೆ ಅಂದರೆ ಮನೆಯ ಗಡಿಯಾರ ಕೂಡಾ ಆದೇ ಆಗಿರುತ್ತಿತ್ತ. ಈಗ ಸಮಯ 6 ಗಂಟೆ 15 ನಿಮಿಷ, ಈಗ ವಂದನಾ, ಸಮಯ 6.45 ರೈತರಿಗೆ ಸಲಹೆ, ಸಮಯ 7 ಗಂಟೆ 15 ನಿಮಿಷ ಈಗ ಪ್ರದೇಶ ಸಮಾಚಾರ, ಸಮಯ 7 ಗಂಟೆ 35 ನಿಮಿಷ, ದೆಹಲಿ ಕೇಂದ್ರದ ಸಹಪ್ರಸಾರದಲ್ಲಿ ವಾರ್ತೆಗಳು, ಸಮಯ 7.45 ಈಗ ಕನ್ನಡ ಚಿತ್ರಗೀತೆಗಳು, ಸಮಯ 8 ಗಂಟೆ ಆಗಲಿದೆ ಈಗ ದೆಹಲಿ ಕೇಂದ್ರ ಸಹಪ್ರಸಾರದಲ್ಲಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ವಾರ್ತಾ ಪ್ರಸಾರ... ಹೀಗೆ ಬೆಳಗ್ಗಿನ ನಿಮಿಷ ನಿಮಿಷಗಳನ್ನೂ ರೇಡಿಯೋವೇ ತೋರಿಸಿಕೊಡುತ್ತಿತ್ತು. ಈ ಕಾರ್ಯಕ್ರಮಗಳಿಗೆ ಜೋಡಿಸಿದಂತೆ ಶಾಲೆಗೆ ಹೊರಡುವ ಮೊದಲಿನ ನಮ್ಮ ದಿನಚರಿ ಬೆಸೆದುಕೊಂಡಿತ್ತು. ರೈತರಿಗೆ ಸಲಹೆ ಆಗುವಾಗ ಓದಲು ಕುಳಿತರೆ ವಾರ್ತೆ ವರೆಗೆ ಓದುವುದು, ಚಿತ್ರಗೀತೆ ಆಗುತ್ತಿರುವ ಮತ್ತೆಲ್ಲ ಕೆಲಸ ಮುಗಿಸಿ ಇಂಗ್ಲಿಷ್ ವಾರ್ತೆ ಬರುವ ಹೊತ್ತಿಗೆ ಸ್ನಾನ ಮಾಡಿ ತಿಂಡಿ ತಿಂದು, ಗೀತ ಲಹರಿ ಶುರುವಾಗುವಾಗ ಶಾಲೆಗೆ ಹೊರಡುವುದು... ಹೀಗೆ... ಜೋಡಿಸಿಟ್ಟಂತೆ ವರ್ಷಾನುಗಟ್ಟಲೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಕೇಳುತ್ತಲೇ ನಮ್ಮ ಬೆಳಗು ಹಗಲಾಗುತ್ತಿತ್ತು.

ಸಂಜೆ ಬಂದ ಮೇಲೆಯೂ ಹಾಗೆಯೇ... 6 ಗಂಟೆ 5 ನಿಮಿಷಕ್ಕೆ ನಮ್ಮ ನಿಲಯದಿಂದ ಇಂದು ಮತ್ತು ನಾಳೆ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳ ವಿವರ, 6.40 ನಿಮಿಷಕ್ಕ ಪ್ರದೇಶ ಸಮಾಚಾರ, 6.50 ನಿಮಿಷಕ್ಕೆ ಕೃಷಿ ರಂಗ, 7.30 ನಿಮಿಷಕ್ಕೆ ಮಂಗಳೂರು ಕೃಷಿ ಮಾರುಕಟ್ಟೆಯ ಧಾರಣೆ (ಎಂಪಿಎಂಸಿ ರೇಟು, ಅಡಕೆಯ ರೇಟು), 7.35ಕ್ಕೆ ದೆಹಲಿ ಕೇಂದ್ರದ ಸಹಪ್ರಸಾರದಲ್ಲಿ ರಾಷ್ಟ್ರೀಯ ವಾರ್ತೆ, 7.45ಕ್ಕೆ ಕನ್ನಡ ಚಿತ್ರಗೀತೆಗಳು, 8 ಗಂಟೆಗೆ ಅತೀ ಮೆಚ್ಚಿನ ಕನ್ನಡ ಯುವವಾಣಿ, ರಾತ್ರಿ 8.45ಕ್ಕೆ ಹಿಂದಿ ಚಿತ್ರಗೀತೆಗಳು... ಮತ್ತೆ ಹಿಂದಿ, ಇಂಗ್ಲಿಷ್ ಅಷ್ಟಕ್ಕಷ್ಟೇ ಬರುತ್ತಿದ್ದ ಕಾರಣ (ಈಗಲೂ ಅಷ್ಟೇ ಬರುತ್ತಿರುವ ಕಾರಣ) ನಂತರ ನಿಧಾನಕ್ಕೆ ನಿದ್ರೆ... ಹೀಗಿತ್ತು ದಿನಚರಿ...

 

ಇದರಾಚೆಗೆ ನಮಗೆ ಮನರಂಜನೆಯ ಜಗತ್ತೇ ಅಪರೂಪ. ಇಷ್ಟರಲ್ಲೇ ತುಂಬ ಖುಷಿ. ಅಲ್ಪತೃಪ್ತಿ ಮತ್ತು ಕಲ್ಪನಾ ಜಗತ್ತಿನ ಸಾಧ್ಯತೆಗಳನ್ನು ಕಟ್ಟಿಕೊಟ್ಟದ್ದೇ ರೇಡಿಯೋ ಇರಬಹುದು. ಶನಿವಾರ ಬರುವ ಚಿಲಿಪಿಲಿ, ಆದಿತ್ಯವಾರ ಬರುವ ಬಾಲವೃಂದ, ವಾರದ ಕಾರ್ಯಕ್ರಮಗಳ ಮುನ್ನೋಟ, ವನಿತಾವಾಣಿ, ಭಾನುವರ ಸಂಜೆ ಯಕ್ಷಗಾನದ ಹಾಡುಗಳು (ಈಗಲು ತಪ್ಪದೇ ಪ್ರಸಾರ ಆಗುತ್ತಿದೆ), ಬುಧವಾರ ರಾತ್ರಿ 9.30ರಿಂದ 1 ಗಂಟೆ ಅವಧಿಯ ಯಕ್ಷಗಾನ ತಾಳಮದ್ದಳೆ, ಕಾವ್ಯ ವಾಚನ, ಮಾತುಕತೆ ಕನ್ನಡ ಕೌಟುಂಬಿಕ ಸಂಭಾಷಣೆ, ಮತ್ತೆ ಗುರುವಾರವೋ, ಶುಕ್ರವಾರವೋ ಏನೋ ಪ್ರಸಾರ ಆಗುತ್ತಿದ್ದ ರಾಷ್ಟ್ರೀಯ ನಾಟಕ (ರಾತ್ರಿ 9.30ಕ್ಕೆ), ನವೆಂಬರಿನಲ್ಲಿ ರಾಷ್ಟ್ರೀಯ ಸಂಗೀತ ಸಮ್ಮೇಳನ, ಜನವರಿಯಲ್ಲಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವವಾಣಿಯಲ್ಲಿ ರಸಪ್ರಶ್ನೆ, ಗುರುವಾರ ಯುವ ಪತ್ರೋತ್ತರ, ಬುಧವಾರ ರಾತ್ರಿ 9.16ರಿಂದ ವಾರದ ಪತ್ರೋತ್ತರ... ಯಬ್ಬ... ಪಟ್ಟಿ ಮಾಡುತ್ತಾ ಹೋದರೆ ಕಾದು ಕುಳಿತು ಕೇಳುತ್ತಿದ್ದ ಅಷ್ಟೂ ಕಾರ್ಯಕ್ರಮಗಳು ಒಂದೊಂದಾಗಿ ನೆನಪಿಗೆ ಬರ್ತಾ ಇವೆ... ಈಗ ಯಾವುದನ್ನೂ ನಾವು ಕಾದು ಕುಳಿತು ಕೇಳುವ, ನೋಡುವ ಅಗತ್ಯ ಇಲ್ಲ. ಕಾರ್ಯಕ್ರಮವೇ ನಮಗೆ ಕಾದಿರುತ್ತದೆ. ಮೊಬೈಲು, ಯೂಟ್ಯೂಬು, ಟಿವಿಯಲ್ಲೂ ಬೇಕಾದ ಕಾರ್ಯಕ್ರಮವನ್ನು ಹುಡುಕಿ, ರಿಪ್ಲೇ ಮಾಡಿ, ಬೇಕು ಬೇಕಾದಾಗ ಕೇಳುವ ವ್ಯವಸ್ಥೆ ಇರುವಾಗ, ಕೇವಲ ಶ್ರವ್ಯ ರೂಪದಲ್ಲಿರುವ ರೇಡಿಯೋ ಕಾರ್ಯಕ್ರಮವನ್ನು ಕಾದು ಕುಳಿತು ಆಲಿಸುತ್ತಿದ್ದ ದಿನಗಳು ಮತ್ತು ಅದರ ಕಾತರ, ನಿರೀಕ್ಷೆ ಮತ್ತು ಅದು ನೀಡುತ್ತಿದ್ದ ನಿರ್ಮಲ ಖುಷಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.... ಇಂಥದ್ದೊಂದು ಜಗತ್ತನ್ನು ಕಂಡ ನನ್ನ ಕಾಲಮಾನದವರಿಗೆ ಈ ರೂಪದಲ್ಲಿ ಮಾಧ್ಯಮದ ಜೊತೆಗೆ ಬೆರೆತಿರಲು ಸಾಧ್ಯವಾದದ್ದಕ್ಕೇ ಇಂದಿನ ಅತಿರೇಕದ ಸಂವಹನ ಸುರುಳಿಯ ಅಪಸವ್ಯಗಳು ಸಿಕ್ಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತದೆ ಅಂತ ಅನಿಸುತ್ತಿದೆ.

 

 

ನಾರಾಯಣಿ ದಾಮೋದರ್, ಶಂಕರ್ ಎಸ್. ಭಟ್, ಮುದ್ದು ಮೂಡುಬೆಳ್ಳೆ, ಶಕುಂತಳಾ ಆರ್. ಕಿಣಿ, ಕೆ.ಆರ್.ರೈ, ಅಬ್ದುಲ್ ರಷೀದ್, ಕನ್ಸೆಪ್ಟಾ ಫರ್ನಾಂಡಿಸ್, ಮಾಲತಿ ಆರ್. ಭಟ್, ಕೆ. ಶ್ಯಾಮ್ ಭಟ್, ಸೂರ್ಯನಾರಾಯಣ ಭಟ್, ಫ್ಲೋರಿನ್ ರೋಚ್, ಡಾ.ಶರಭೇಂದ್ರ ಸ್ವಾಮಿ, ಶ್ರೀನಿವಾಸ ಪ್ರಸಾದ್, ನಿರ್ಮಾಲ ಅನಾಡ್... ಇವೆಲ್ಲ ಬಾಲ್ಯದಿಂದಲೇ ರೇಡಿಯೋದಲ್ಲಿ ಕೇಳಿದ ಹೆಸರುಗಳು. ಅವರನ್ನು ಮುಖತಾ ಭೇಟಿಯಾಗಲು ಸಾಧ್ಯವಾದದ್ದು ಎಷ್ಟೋ ವರ್ಷಗಳ ಬಳಿಕ ದೊಡ್ಡವನಾದ ಮೇಲೆ.

 

ರೇಡಿಯೋ ಅಂದರೆ ಹಾಗೆ... ಸುಮ್ಮನೆ ಕಣ್ಣುಚ್ಚಿ ಕೇಳ್ತಾ ಇದ್ರೆ ಅಷ್ಟೂ ದೃಶ್ಯಗಳು, ಮುಖಗಳು ಕಣ್ಮುಂದೆ ಬರ್ತವೆ. ಕಲ್ಪನೆಗಳನ್ನು, ಚಿಂತನೆಗಳನ್ನು ರೂಪಿಸುವ ಶಕ್ತಿ ಶ್ರವ್ಯ ಮಾಧ್ಯಮಕ್ಕಿದೆ. ನಾವು ಓದುವುದಕ್ಕಿಂತಲೂ ಕೇಳಿದ್ದು ತಲೆಯಲ್ಲಿ ಹೆಚ್ಚು ಗಟ್ಟಿಯಾಗಿ ಉಳಿಯುತ್ತವೆ ಎಂದು ಹಿರಿಯ ಕಾದಂಬರಿಕಾರ ಕೆ.ಟಿ.ಗಟ್ಟಿ ಅವರು ಒಂದು ಕಡೆ ಹೇಳಿದ್ದು ಕೇಳಿದ್ದೇನೆ. ನಮ್ಮ ಕೆಲಸಗಳಿಗೆ ಅಡ್ಡಿಯಾಗದ ಹಾಗೆ, ಮನಸ್ಸನ್ನು ಕೆರಳಿಸದೆ ಅರಳಿಸುವ ಹಾಗೆ ಮಾಡುವ ತಾಕತ್ತು ರೇಡಿಯೋಗಿದೆ. ಈಗಿನಷ್ಟು ಮಾಧ್ಯಮ ವೈವಿಧ್ಯಗಳೂ ಇಲ್ಲದ ಕಾರಣ, ತೀರಾ ಖರ್ಚನ್ನೂ ಬಯಸದ, ಎರಡು ತಿಂಗಳಿಗೊಮ್ಮೆ ಬೆಟ್ರಿ ಬದಲಿಸಿದರೆ ಸಾಕು ಅನ್ನುವ ರೇಡಿಯೋ ಇಷ್ಟವಾಗದೆ ಇರ್ತದ ಹೇಳಿ...?!

 

2002ರಲ್ಲಿ FM ಪ್ರಸಾರಕ್ಕೆ ತೆರೆದುಕೊಳ್ಳುವುದಕ್ಕೂ ಮೊದಲು ಮಂಗಳೂರು ಆಕಾಶವಾಣಿ ಮೀಡಿಯಂ ವೇವ್ ರೂಪದಲ್ಲಿ ಸಿಕ್ತಾ ಇದ್ದದ್ದು, ರೇಡಿಯೋವನ್ನು ಮಂಗಳೂರು ಇರುವ ದಿಕ್ಕಿಗೆ ತಿರುಗಿಸಿದರೆ ಸಿಗ್ನಲ್ ಸಿಕ್ತಾ ಇದ್ದದ್ದು, ಫಿಲಿಪ್ಸ್ ರೇಡಿಯೋಗೆ ಹಾಕುವ ಬೆಟ್ರಿಯಲ್ಲಿ ತಾರೀಕು ಬರೆದಿಟ್ಟು ಎರಡು ತಿಂಗಳ ಬಳಿಕ ಬೆಟ್ರಿ ವೀಕ್ ಆದಾಗ ಅದನ್ನು ಬದಲಿಸುವುದು, ಅದರ ಆಂಟೆನಾಗೆ ಪ್ರತ್ಯೇಕ ವಯರ್, ತಂತಿ ಕಟ್ಟಿ ಛಾವಣಿಗೆ ಸಿಕ್ಕಿಸಿ ಶಾರ್ಟ್ ವೇವ್ ಸ್ಟೇಷನ್ ಗಳನ್ನು ಹುಡುಕ್ತಾ ಇದ್ದದ್ದೆಲ್ಲ ಈಗ ನೆನಪು.

 

ಮಾತುಕತೆ ಎಂಬ ಕೌಟುಂಬಿಕ ಸಂಭಾಷಣೆ ಅತ್ಯಂತ ಜನಪ್ರಿಯ. ಬುಧವಾರದ ಯಕ್ಷಗಾನ ತಾಳಮದ್ದಳೆ ಸಹ. ಮತ್ತೆ ಕೋರಿಕೆ ಕಾರ್ಯಕ್ರಮ. ಅದರಲ್ಲಿ ಹೊಸ ಹೊಸ ಚಿತ್ರಗೀತೆಗಳು ಬರ್ತಾ ಇದ್ದದ್ದು. (ರೇಡಿಯೋ ಬಿಟ್ರೆ ಹಾಡು ಕೇಳ್ಲಿಕೆ ಮತ್ಯಾವ ಮಾಧ್ಯಮವೂ ಇರಲಿಲ್ಲ. ಲಾಟರಿ ಮಾರುವ ಕಾರಿನ ಮೈಕ ಹಾಗೂ ಮದುವೆಗಳಲ್ಲಿ ಕಟ್ಟುವ ಮೈಕ್ಕ ಬಿಟ್ರೆ ಮತ್ತೆಲ್ಲೂ ಚಿತ್ರಗೀತೆ ಕೇಳ್ಲಿಕೆ ಅವಕಾಶ ಇರಲಿಲ್ಲ...), ಪತ್ರೋತ್ತರ ಕೇಳುವುದೂ ತುಂಬ ಇಷ್ಟ. ಆಗ ಫೋನಿನ್ ಕಾರ್ಯಕ್ರಮ ಶುರು ಆಗಿರಲಿಲ್ಲ. ಹಾಗಾಗಿ, ಪತ್ರ ಬರೆದು ಅದನ್ನು ಓದಿ ನಮ್ಮ ಹೆಸರು ಬರ್ತದ ಅಂತ ಕಾಯುವುದೇ ಒಂದು ಥ್ರಿಲ್. ಕೋರಿಕೆಯಲ್ಲೂ ಸಹ ಹಾಗೆಯೇ ಪತ್ರದಲ್ಲಿ ನಮ್ಮ ಹೆಸರು ಓದಿದ್ರೆ ಭಯಂಕರ ಖುಷಿ. ಪತ್ರೋತ್ತರದಲ್ಲಿ ಬರುವ ಹೆಸರುಗಳೂ ಬಾಯಿ ಪಾಠ. ಶಾಂತೂ ತಾರಾ ಮಲ್ಪೆ, ವೇದಾವತಿ ಶೆಟ್ಟಿ ಕಾಳಾವರ, ನಾಗರಾಜ ಶೆಟ್ಟಿ ಸಬ್ಲಾಡಿ, ಪ್ರಸಾದ್ ಕುಮಾರ್ ಶೆಟ್ಟಿ ಮೊಗೆಬೆಟ್ಟು ಸಹಿತ ಎಷ್ಟೋ ಮಂದಿ ನಿರಂತರ ಕೇಳುಗರ ಪತ್ರಗಳು ಬರ್ತಾ ಇದ್ದವು, ನಮಗೆ ಅವರೆಲ್ಲ ನಮ್ಮ ಪರಿಚಿತರೇನೋ ಎಂಬಷ್ಟು ಹೆಸರುಗಳು ನೆನಪಿರ್ತಾ ಇದ್ದವು. ಭಾನುವಾರದ ಯುವವಾಣಿಯಲ್ಲಿ ವಿಶೇಷವಾಗಿ ಬರುವ ಕಲಾಸಂಜೆ ಕೂಡಾ ಇಷ್ಟ. ಆದಿತ್ಯವಾರದ ಕೃಷಿರಂಗದಲ್ಲಿ ಬರ್ತಾ ಇದ್ದ ಯಕ್ಷಗಾನದ ಹಾಡುಗಳಿಗೆ ನಾವು ವೇಷ ಧರಿಸಿ ಕುಣಿಯುತ್ತಿದ್ದದ್ದು ಮರಿಲಿಕೇ ಸಾಧ್ಯ ಇಲ್ಲ....

 

ಡುಂಡಿರಾಜ್ ಮತ್ತು ಕೆಟಿ ಗಟ್ಟಿಯವರ ನಾಟಕಗಳು ತುಂಬ ಪರಿಣಾಮಕಾರಿ. ಸಾಕಷ್ಟು ನಾಟಕಗಳನ್ನು ಮಂಗಳೂರು ಆಕಾಶವಾಣಿಗೆ ಬರೆದಿದ್ದಾರೆ. ಕೆಟಿ ಗಟ್ಟಿ ನಾಲ್ಕು ಬಾನುಲಿ ಧಾರಾವಾಹಿಗಳು ಮಂಗಳೂರು ಆಕಾಶವಾಣಿಯಲ್ಲಿ ಸರಣಿಯಾಗಿ ಪ್ರಸಾರವಾಗಿವೆ. ಕತೆ ಇನ್ನೂ ಇದೆ, ಅನುಭವದಡುಗೆಯ ಮಾಡಿ, ತಾಳಮದ್ದಳೆ ಹಾಗೂ ಕೆಂಪುಕಳವೆ. ಡಾ. ಬಿಎಂ ಶರಭೇಂದ್ರ ಸ್ವಾಮಿ ಅವರ ನಿರ್ದೇಶನ. ಇದರಲ್ಲಿ ಅನುಭವದಡುಗೆಯ ಮಾಡಿ ಧಾರಾವಾಹಿಯಂತೂ ನನಗೆ ಅತ್ಯಂತ ಇಷ್ಟ... ಆ ಧಾರಾವಾಹಿ ಕೇಳ್ತಾ ಇದ್ರೆ... ಕಣ್ಣ ಮುಂದೆ ಆ ಹೊಟೇಲ್, ಮಸಾಲೆದೋಸೆಯ ಚಿತ್ರಣವೇ ಕಾಣ್ತಾ ಇತ್ತು. ರಾಮದಾಸ್, ಲಕ್ಷ್ಮಣ ಕುಮಾರ್ ಮಲ್ಲೂರು, ಕಾಸರಗೋಡು ಚಿನ್ನಾ, ಸರೋಜಿನಿ ಶೆಟ್ಟಿ ಸಹಿತ ದಿಗ್ಗಜರ ಧ್ವನಿಗಳಲ್ಲಿ ಮೂಡಿ ಬರ್ತಾ ಇದ್ದ ರಾಷ್ಟ್ರೀಯ ನಾಟಕಗಳನ್ನು ರಾತ್ರಿ ಮಲಗಿಕೊಂಡು ಕೇಳ್ತಾ ಇದ್ದದ್ದು ನೆನಪಿದೆ..

 

ತುಂಬ ಸಲ ಆಕಾಶವಾಣಿಗೆ ಹೋಗಬೇಕು, ನಮ್ಮಿಷ್ಟದ ನಿರೂಪಕರನ್ನು ನೋಡಬೇಕು ಅಂತ ಆಸೆ ಇತ್ತು. ಹೈಸ್ಕೂಲಿನಲ್ಲಿದ್ದಾಗ ಒಮ್ಮೆ ಬಾಲವೃಂದಕ್ಕೆ ಆಡಿಶನ್ ಕೊಡಲು ಹೋಗಿದ್ದು (ಫೇಲ್ ಆಗಿದ್ದೆ) ಬಿಟ್ಟರೆ ಆಕಾಶವಾಣಿಗೆ ಮತ್ತೆ ಹೋಗಲು ಸಾಧ್ಯವಾದದ್ದು ಮಂಗಳಗಂಗೋತ್ರಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ. ಆಗ ಕನ್ನಡ ಯುವವಾಣಿ ನಿರ್ವಹಿಸುತ್ತಿದ್ದ ಅಬ್ದುಲ್ ರಷೀದ್ ಅವರು ನನ್ನ ಯಾವುದೋ ಬರೆಹ ಕಂಡು ಒಂದು ಭಾಷಣ ಧ್ವನಿಮುದ್ರಣಕ್ಕೆ ಕರೆದಿದ್ದರು. ನನ್ನ ಸ್ಫೂರ್ತಿಯ ಸೆಲೆ ಅನ್ನುವ ವಿಷಯಕ್ಕೆ ತೊದಲಿಕೊಂಡು ಭಾಷಣ ಮಾಡಿದ್ದು, ಬಹುಶಃ ಬದುಕಿನ ಮೊದಲ ರೇಡಿಯೋ ಕಾರ್ಯಕ್ರಮ. ಆ ರೆಕಾರ್ಡಿಂಗ್ ಗೆ ಈಗ ಬಹುತೇಕ 25 ವರ್ಷ ಆಯ್ತು! ವಾಯ್ಸ್ ಲೆವೆಲ್ ನೋಡುವುದಂದರೇನು, ಮೈಕ್ ಡಿಸ್ಟನ್ಸ್ ಇತ್ಯಾದಿ ಎಂಥದ್ದೂ ಗೊತ್ತಿರದ ದಿನಗಳು. ಅವರನ್ನೆಲ್ಲ ನೋಡಿದ್ದು, ಮಾತನಾಡಿದ್ದೇ ಒಂದು ಥ್ರಿಲ್... ನಮ್ಮ ಹೆಸರು ರೇಡಿಯೋದಲ್ಲಿ ಬರುವುದನ್ನು ಕಾದು ಕುಳಿತು ಕೇಳಿದ ದಿನಗಳೂ ಅಷ್ಟೇ ತುಂಬ ಸುಮಧುರ... ನಂತರ ಸಾಕಷ್ಟು ಸಲ ಕಾರ್ಯಕ್ರಮ ನೀಡಲು ಅವಕಾಶ ಸಿಕ್ಕಿದರೂ ಮೊದಲ ಬಾರಿ ಹೋದ ಥ್ರಿಲ್ ಮಾತ್ರ ಪ್ರತ್ಯೇಕ.

ಕಮ್ಯೂನಿಕೇಶನ್ ಪಾಠದಲ್ಲಿತ್ತು ರೇಡಿಯೋ ನೆವರ್ ಫೈಲಿಂಗ್ ಫ್ರೆಂಡ್ ಅಂತ. ಅದು ಖಂಡಿತಾ ಸತ್ಯ. ಯಾವತ್ತೂ ನಮಗೆ ಕಿರಿಕಿರಿ ಮಾಡದ, ನಮ್ಮ ಸಮಯ ತಿನ್ನದ, ಭಾಷೆ ಸುಧಾರಿಸುವ, ಸಾಂತ್ವನದ, ಧೈರ್ಯದ, ಪ್ರೋತ್ಸಾಹದ ನುಡಿಗಳನ್ನಾಡುವ, ಸಂಗೀತ ಲೋಕದಲ್ಲಿ ತೇಲಾಡಿಸುವ, ಹಿತಮಿತ ನಿರೂಪಣೆ, ಸಮತೋಲಿತ ಕಾರ್ಯಕ್ರಮ ವೈವಿಧ್ಯಗಳನ್ನು ನೀಡುವ ರೇಡಿಯೋ ಅಂದಿಗೂ ಇಂದಿಗೂ ಅದೇ ಖುಷಿ ನೀಡಬಲ್ಲುದು. ನಮಗೆ ಅದನ್ನು ಗುರುತಿಸುವ, ಗಮನಿಸುವ ಸಮಯ ಮತ್ತು ಸಹನೆ ಬೇಕು ಅಷ್ಟೇ...

 

ಹೌದು ಮಂಗಳೂರು ಆಕಾಶವಾಣಿಯಲ್ಲಿ ಈಗ ಪೂರ್ಣಕಾಲಿಕ ಉದ್ಘೋಷಕರೇ ಇಲ್ಲದೆ ಕೆಲವು ವರ್ಷಗಳಾದವು. ಎಷ್ಟೋ ವರ್ಷಗಳಿಂದ ದುಡಿಯುತ್ತಿರುವ ಅರೆಕಾಲಿಕ ಉದ್ಘೋಷಕರು ಹಾಗೂ ಯುವ ಉದ್ಘೋಷಕರೇ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಪ್ರಸಾರ ನಿರ್ವಾಹಕರೆಂಬ ಹುದ್ದೆಯೇ ಚಾಲ್ತಿಯಲ್ಲಿಲ್ಲ. ಕಾರ್ಯಕ್ರಮ ನಿರ್ವಾಹಕರ ಪೈಕಿ ಪೂರ್ಣಕಾಲಿಕರಾಗಿರುವುದು ಕೇವಲ ಇಬ್ಬರೇ... ಬಳಸುವ ಭಾಷೆಯಲ್ಲಿ ವ್ಯತ್ಯಾಸಗಳಾಗಿವೆ. ಆದರೂ ಮಂಗಳೂರು ಆಕಾಶವಾಣಿಯ ಪ್ರಸಾರವಂತೂ ಅದೇ ಶೈಲಿಯಲ್ಲಿ ಮುಂದುವರಿದೇ ಇದೆ. ಕಿಸಾನ್ ವಾಣಿ, ವನಿತಾವಾಣಿ, ಯುವವಾಣಿ ಇತ್ಯಾದಿಗಳ ಸಿಗ್ನೇಚರ್ ಟ್ಯೂನ್ ಅದೇ ಹಳೆ ನೆನಪುಗಳನ್ನು ಹೊತ್ತು ತರುತ್ತವೆ. ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದು ಸಹಜ. ತಲೆಮಾರಿನಿಂದ ತಲೆ ಮಾರಿಗೆ ಒಂದೇ ವಿಧಾನ, ಫಲಿತಾಂಶ ನಿರೀಕ್ಷಿಸಲು ಅಸಾಧ್ಯ....

 

50 ವರ್ಷಗಳೆಂದರೆ ಅದೊಂದು ತಲೆಮಾರಿನ ದ್ಯೋತಕ. ಒಂದು ದೊಡ್ಡ ಸಂಸ್ಕೃತಿ ಸೃಷ್ಟಿಸಿದ ಪರ್ವ ಮತ್ತು ಲಕ್ಷಾಂತರ ಮಂದಿಯ ಮನಸ್ಸನಲ್ಲಿ ನೆಲೆನಿಂತ ಯುಗ... ಈ ಖುಷಿ, ಈ ಸ್ನೇಹಪರ ಪ್ರಸಾರ ಮತ್ತು ಸುದೀರ್ಘ ಅಸ್ತಿತ್ವದ ಭರವಸೆ ಮಂಗಳೂರು ಆಕಾಶವಾಣಿಯ ಜೊತೆಗಿರಲಿ... ನನ್ನಂಥ ಲಕ್ಷಾಂತರ ಕೇಳುಗರ ಭಾವನೆಗಳಿಂದ ಸ್ಪಂದಿಸುವ ಸಹೃದಯತೆ ಮುಂದೆಯೂ ಮುಂದುವರಿಯಲಿ. ಜನ್ಮದಿನದ ಶುಭಾಶಯಗಳು ಪ್ರೌಢ ಮಂಗಳೂರು ಆಕಾಶವಾಣಿಗೆ.

















-ಕೃಷ್ಣಮೋಹನ ತಲೆಂಗಳ (11.12.2025)

No comments: