ಐಸಿಯೂನಲ್ಲಿ I SEE ME ಎಂಬ ಜ್ಞಾನೋದಯ!




ಐಸಿಯು ಅಂದರೆ ಇಂಟೆನ್ಸಿವ್‌ ಕೇರ್ ಯೂನಿಟ್. ಎಲ್ರಿಗೂ ಗೊತ್ತು. ಆದರೆ ಅಲ್ಲಿ ಯಾರೂ ‘I SEE YOU’ ಮನಃಸ್ಥಿತಿಯಲ್ಲಿರುವುದಿಲ್ಲ ‘I SEE ME’ ಸ್ಥಿತಿಯಲ್ಲಿರುತ್ತಾರೆ. ರೋಗಿಯಾಗಲಿ, ರೋಗಿಯ ಬಂಧುಗಳಾಗಲಿ ತಮ್ಮನ್ನು ತಾವು ಕಂಡುಕೊಳ್ಳುವಂಥ ಜಾಗ. ಅಥವಾ ತಮ್ಮನ್ನು, ತಮ್ಮ ಪರಿಸ್ಥಿತಿಯನ್ನು, ತಮ್ಮ ಬೆಲೆಯನ್ನು, ತಮಗಿರುವ ಯೋಗ್ಯತೆಯನ್ನು ಮತ್ತು ತಮ್ಮ ಯೋಗ್ಯತೆಗೆ ಸಿಗಬಹುದಾದ ಮಾನ್ಯತೆ ಮತ್ತು ಸಾಧ್ಯತೆ ಎಲ್ಲವೂ ಆಸ್ಪತ್ರೆಯ ವೆರಾಂಡದಲ್ಲಿ ತೀವ್ರ ನಿಗಾ ಘಟಕದಲ್ಲಿ, ಒಪಿಡಿಗಳ ಹಜಾರಗಳಲ್ಲಿ ಕಾಣಲು ಸಿಗುತ್ತವೆ. ಅಥವಾ ಈಗಾಗಲೇ ಹೋಗಿ ಬಂದವರಿಗೆ ಅದರ ಅನುಭವ ಆಗಿರುತ್ತದೆ.

ನಾನಿಲ್ಲದಿದ್ದರೆ ಏನೂ ನಡೆಯುವುದಿಲ್ಲ, ಕಚೇರಿಯಲ್ಲಿ ಕೆಲಸಗಳಾಗುವುದಿಲ್ಲ, ನಾನಿಲ್ಲದಿದ್ದರೆ ಜನರಿಗೆ ಕೈಕಾಲು ಆಡುವುದೂ ಇಲ್ಲ, ಮಾರ್ಗದರ್ಶನ ನೀಡುವವರಿಲ್ಲ, ಹೆಚ್ಚೇಕೆ ಜಗತ್ತೇ ಸ್ತಬ್ಧವಾದೀತು ಎಂಬಲ್ಲಿಯ ವರೆಗೆ ನಾವು ಕಟ್ಟಿಕೊಂಡು ಓಡಾಡುವ ಭ್ರಮೆಗಳೆಲ್ಲ ಆಸ್ಪತ್ರೆಯ ಹಜಾರಗಳಲ್ಲಿ, ಮೊಗಸಾಲೆಗಳಲ್ಲಿ ಕಳಚಲ್ಪಡುತ್ತವೆ. ಯಾವ ಬಿಝೀ, ಯಾವ ಒತ್ತಡ, ಯಾವ ಸ್ಟ್ರೆಸ್ಸು, ಸ್ಟೇಟಸ್ಸು, ಮೇಕಪ್ಪು ಎಂತದ್ದೂ ಇಲ್ಲದೆ ‘ಬದುಕುಳಿದರೆ ಸಾಕು, ಜೀವಂತವಾಗಿ ಆಚೆ ಹೋದರೆ ಸಾಕೆಂಬ’ ಮಟ್ಟಿಗೆ ಪರಿಸ್ಥಿತಿ ಕಾಡಿದಾಗ ‘ಅಯ್ಯೋ ಎಂಥದ್ದೂ ಇಲ್ಲದೆ ಆರೋಗ್ಯ ಸರಿ ಆದರೆ ಸಾಕು ಅಂತ ಬೇಡಿಕೊಳ್ಳುವ ಹಂತದಲ್ಲಿರುವ ನಾನು ಈ ಜನತ ಬಿಝೀ ಅಂತ ಯೋಚಿಸುವುದಕ್ಕೂ ಪುರುಸೊತ್ತಿಲ್ಲದೆ ಓಡಾಡಿದ್ದೆಲ್ಲ ಭ್ರಮೆಯ, ನನಗಿಷ್ಟು ಹೊತ್ತು ಬೆಡ್ಡಿನಲ್ಲಿ ಮಲಗುವಷ್ಟು, ನನ್ನ ಬಗ್ಗೆಯೇ ಯೋಚಿಸುವಷ್ಟು ಟೈಮಿತ್ತ’ ಅಂತ ವಿಚಿತ್ರ ಯೋಚನೆಗಳು ಕಾಡುತ್ತವೆ.

ನಾವಿಲ್ಲಿ ಅಸಹಾಯಕರಾಗಿ ಮಲಗಿದ್ದರೂ, ಹೊರಗೆ ರಸ್ತೆಯಲ್ಲಿ ಬಸ್ಸು, ಕಾರುಗಳು ಎಂದಿನಂತೆ ಓಡಾಡುತ್ತಿರುತ್ತವೆ, ಟಿವಿಯಲ್ಲಿ ಸುದ್ದಿಗಳು ಎಂದಿನಂತೆ ಬರುತ್ತವೆ, ಯಾರ್ಯಾರದ್ದೋ ಸ್ಟೇಟಸ್ಸುಗಳಲ್ಲಿ ಬರ್ತ್ ಡೇ, ಮದುವೆ ಆನಿವರ್ಸರಿ, ದಿನಕ್ಕೊಬ್ಬ ದೇವರ ಸ್ತುತಿ, ವಾರ್ಷಿಕೋತ್ಸವ, ವಿಜಯೋತ್ಸವ, ಪ್ರಶಸ್ತಿ ಎಲ್ಲ ಯಥಾಪ್ರಕಾರ ಮೂಡಿ ಬರುತ್ತಲೇ ಇರುತ್ತದೆ, ಫೇಸ್ಬುಕ್ಕಿನಲ್ಲಿ ದೇಶಕ್ಕೋಸ್ಕರ ಜಗಳ, ತನ್ನನ್ನೇ ತಾನು ಹೊಗಳಿಕೊಳ್ಳುವ ಸಂಗತಿಗಳು ಎಲ್ಲ ಯಾವಾಗಿನ ಹಾಗೆಯೇ ಉಂಟಲ್ಲ. ಹಾಗಿದ್ದರೆ ನಾನೊಂದಿಷ್ಟು ದಿನ ಶಸ್ತ್ರತ್ಯಾಗ ಮಾಡಿ ಶಯ್ಯೆಯಲ್ಲಿದ್ದರೂ ಜಗತ್ತಿಗೇನೂ ಬಾಧಿಸುವುದಿಲ್ಲ ಎಂಬ ವಿಚಿತ್ರ ಸತ್ಯ ಆ ಹೊತ್ತಿಗೆ ಮಾತ್ರ ತುಂಬ ಗಾಢವಾಗಿ ಅರ್ಥವಾಗಲು ಸಾಧ್ಯ...

ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವವರು ಯಾರು, ಕರೆ ಮಾಡಿ ಕೇಳುವವರು ಯಾರು, ನೋಡಲು ಬರುವವರು ಯಾರು, ಅಯ್ಯೋ ಬರಬೇಕಲ್ವ ಅಂತ ಬರುವವರು, ಏನಾದರೂ ಹೆಲ್ಪ್ ಬೇಕ ಅಂತ ಕಾಳಜಿಯಿಂದ ಕೇಳುವವರು, ಗುಣವಾಗುವ ವರೆಗೂ ಜೊತೆಗೇ ಇರುವವರೆಲ್ಲ ಯಾರ್ಯಾರು ಎಂಬುದೆಲ್ಲ ಮನಸ್ಸು ಸಕ್ರಿಯವಾಗಿರುವ ಯಾರಿಗೇ ಆದರೂ ತಿಳಿಯುತ್ತದೆ.

ಆಸ್ಪತ್ರೆಯ ಆ ಜನಜಂಗುಳಿ, ಲ್ಯಾಬಿನ ಎದುರು, ಓಪಿಡಿಯ ಎದುರು, ಸ್ಕ್ಯಾನಿಂಗ್‌ ಕೊಠಡಿ ಎದುರು, ಮೆಡಿಕಲ್ ಶಾಪ್ ಎದುರು ನಿಂತ ಸಾಲುಗಳು, ಆತಂಕದಿಂದ ತುಂಬಿದ ಮುಖಗಳು, ಒಟಿ ಎದುರು ಕಪ್ಪು ಕುರ್ಚಿ ಸಾಲಿನಲ್ಲಿ ನಿದ್ದೆಗೆಟ್ಟ ಕಣ್ಣುಗಳು, ನಿರೀಕ್ಷೆಯಿಂದ ಕೂಡದ ಮನಸ್ಸುಗಳು, ಸ್ಟ್ಚೇಚರಿನಲ್ಲಿ ಲಿಫ್ಟಿನಲ್ಲಿ ಫ್ಲೋರಿನಿಂದ ಫ್ಲೋರಿಗೆ ಸಾಗಿಸಲ್ಪಡುವ ಮಲಗಿದ ಸ್ಥಿತಿಯಲ್ಲಿರುವ ದೇಹಗಳು... ಬದುಕಿನಲ್ಲಿ ಯಾವುದಕ್ಕೂ ಪುರೊಸೊತ್ತಿಲ್ಲ ಎಂಬ ಭ್ರಮೆಯನ್ನು ಕಳಚಿ ಅನಿವಾರ್ಯ ಅಸಹಾಯಕ ಪುರುಸೊತ್ತಿನಲ್ಲಿ ಇಷ್ಟನ್ನೆಲ್ಲ ಗಮನಿಸಿ, ಯೋಚಿಸುತ್ತಿರುವ ದೇಹ ರಿಪೇರಿಗೆ ಬಂದ ಮನಸ್ಸು.... ಎಲ್ಲ ಒಂದು ವಿಚಿತ್ರ ತಾಕಲಾಟಕ್ಕೆ ಅನೂಹ್ಯ ವೇದಿಕೆ ಕಟ್ಟಿಕೊಡುತ್ತದೆ...

ಅಲ್ಲಿನ ಯಂತ್ರಗಳು ನಿಶ್ಯಬ್ಧದಲ್ಲಿ ಹೊರಡಿಸುವ ವಿಚಿತ್ರ ಸದ್ದು, ಡೆಟ್ಟಾಲ್, ಫಿನಾಯಿಲ್ ವಾಸನೆ, ಯಾವುದಕ್ಕೂ ಸಮರ್ಪಕ ಉತ್ತರ ಕೊಡದೆ ತೆರಳುವ ಸಿಸ್ಟರು, ಜ್ಯೂನಿಯರ್ ಡಾಕ್ಟರುಗಳು, ಯಾವಾಗ ಡಿಸ್ಚಾರ್ಜ್ ಅಂತ ಹೇಳುವುದನ್ನು ಮುಂದೂಡುವ ವ್ಯವಸ್ಥೆ, ಯಾರ್ಯಾರೋ ನೋಡಲು ಬಂದು ಹೋಗುವಾಗ ನೀಡುವ ಅದೇ ಸಿದ್ಧ ಉತ್ತರಗಳು, ಮತ್ತದೇ ನಿರೀಕ್ಷೆಗಳು... ಇವುಗಳ ನಡುವೆ ಮನಸ್ಸು ತನ್ನನ್ನು ತಾನು ಉಳಿಸುವ ಬಗ್ಗೆಯೇ ಅಲ್ವ ಯೋಚಿಸುವುದು...

ಬಹುಶಃ ಆ ವೆರಾಂಡಗಳು, ಸ್ಟ್ರೆಚರುಗಳು, ಕಾತರದ ಕಣ್ಣುಗಳಿಂದ ಕೂಡಿ ಹಜಾರದುದ್ದಕ್ಕೂ ಕಾದು ಕುಳಿತ ದೇಹಗಳು, ಮತತ್ತು ನಿರ್ಲಿಪ್ತವಾಗಿ ಓಡಾಡುವ ಆಸ್ಪತ್ರೆ ಸಿಬ್ಬಂದಿಸ ನಿರ್ದಾಕ್ಷಿಣ್ಯವಾಗಿ ವಾಸ್ತವಗಳನ್ನು ಬಿಚ್ಚಿಡುವ ರಿಪೋರ್ಟುಗಳು ಇವೆಲ್ಲದರ ನಡುವೆ ಕಟ್ಟಿಕೊಂಡ ಸ್ಟೇಟಸ್ಸು, ಭ್ರಮೆ ನಿರೀಕ್ಷೆಗಲು ಕಳಚಲ್ಪಡುತ್ತವೆ... ಎಲ್ಲಿ ತನ್ನನ್ನು ತಾನು ಕಂಡುಕೊಂಡ ಮನಸ್ಸು ಮತ್ತೊಂದು ಕಡೆ ಕಾಣಲು ಸಾಧ್ಯವಾದೀತು ಅಂತ ಹೇಳಲು ಕಷ್ಟ... ಅಲ್ವ?

-ಕೃಷ್ಣಮೋಹನ ತಲೆಂಗಳ (06.02.2026)


No comments: