ನಿನ್ನ ನೀನು ಮರೆತರೇನು ಸುಖವಿದೆ? ಅವರಿವರ ಮೊದಲು ನಾವೆಷ್ಟು ಬದಲಾಗಿದ್ದೇವೆ ತಿಳಿದುಕೊಳ್ಳಬೇಕಲ್ವ?!
ಕಾಲ ಬದಲಾಗಿದೆ, ಜಗತ್ತು
ಬದಲಾಗಿದೆ, ಜೀವನ ಶೈಲಿ ಬದಲಾಗಿದೆ, ಹವ್ಯಾಸಗಳು ಬದಲಾಗಿವೆ ಅಂತೆಲ್ಲ ದೊಡ್ಡದಾಗಿ ಹೇಳ್ತೇವಲ್ವ.
ಮೂರು ನಾಲ್ಕು ದಶಕಗಳಲ್ಲಿ ನಮ್ಮ, ನಿಮ್ಮ ನಡೆ ಎಷ್ಟು ಬದಲಾಗಿದೆ ಅಂತ ಏನಾದ್ರು ಪಟ್ಟಿ
ಮಾಡಿದ್ದೀರ? ಇತ್ತೀಚೆಗೆ ನೀವು
ಅಂಗಳದಲ್ಲೊ, ಗದ್ದೆಯ ಬದುವಿನಲ್ಲೋ ಬರಿಗಾಲಿನಲ್ಲಿ ನಡೆದಿದ್ದೀರ? ಮಾವಿನ ಮರಕ್ಕೆ
ಗುರಿಯಿಟ್ಟು ಕಲ್ಲು ಬಿಸಾಡಿ ಹಣ್ಣು ಕೊಯ್ದಿದ್ದೀರ? ಕೊಕ್ಕೆ (ದೋಂಟಿ)
ತಕ್ಕೊಂಡು ಗುಡ್ಡೆಗೆ ಹೋಗಿ ಗೇರು ಬೀಜ ಕೊಯ್ದಿದ್ದೀರ? ಯಾವತ್ತಾದರೂ ತೋಟದ ಕೆರೆಯಲ್ಲಿ ಈಜಿ
ಸ್ನಾನ ಮಾಡಿ ಸುಸ್ತು ಮರೆತಿದ್ದೀರ?
ಬಾಲ್ಯ ಬೇರೆ, ಪ್ರೌಢ
ಬದುಕು ಬೇರೆ, ಕಾಲ ಬದಲಾಗಿದೆ ಎಂಬಿತ್ಯಾದಿಗಳು ನೆಪ ಅಷ್ಟೇ... ವಾಸ್ತವವಾಗಿ ಬದಲಾದ
ಕಾಲಘಟ್ಟದಲ್ಲಿ ನಮಗೆ ಮೊದಲಿನ ಹಾಗೆ ಇರಲು ಆಗುತ್ತಿಲ್ಲ. ಒಂದನೆಯದಾಗಿ “ಬಿಝೀ... ಯಾವ್ದಕ್ಕೂ ಟೈಮಿಲ್ಲ” ಎಂಬ ಕಾರಣ. ಎರಡನೆಯದಾಗಿ ಜಗತ್ತೇ
ಹೀಗಿರುವಾಗ ನಾನೊಬ್ಬ ಚಪ್ಪಲಿ ಹಾಕದೆ ನಡೆದರೆ, ನಡ್ಕೊಂಡೇ ಪೇಟೆಗೆ ಹೋದರೆ, ಹವಾಯಿ ಚಪ್ಪಲಿ
ಧರಿಸಿ ಪಂಚೆ ಉಟ್ಟು ಓಡಾಡಿದರೆ ಸಮಕಾಲೀನತೆಗೆ ಧಕ್ಕೆ ಆದೀತ ಎಂಬ ವಿಚಿತ್ರ ತಳಮಳ. ಮತ್ತೆ
ಎಲ್ಲದಕ್ಕಿಂತ ಹೆಚ್ಚಾಗಿ “ಹೇಗಿದ್ದರೂ ಬದುಕು ಹೋಗ್ತಾ
ಇರ್ತದೆ” ಎಂಬ ಸಮಾಧಾನ.
ಇದಂತೂ ಹೌದು. ನಾವು
ಅತ್ತರೂ, ನಕ್ಕರೂ, ಇದ್ದರೂ, ಸತ್ತರೂ ಜಗತ್ತಿನ ಕಾಲ ಮುಂದೆ ಹೋಗುತ್ತಲೇ ಇರುತ್ತದೆ. ಬದುಕು ಹಳೆ
ಶೈಲಿ ಇರಲಿ, ಸಮಕಾಲೀನ ಇರಲಿ, ಹಳ್ಳಿಯ ಸರಳ ಬದುಕಿರಲಿ, ಕೊಳ್ಳುಬಾಕತನ ಮತ್ತಿತರ ದೊಡ್ಡ ದೊಡ್ಡ ಪದಗಳಿಂದ ಪ್ರೇರಿತ ಆನ್ ಲೈನ್
ಶಾಪಿಂಗೇ ಇರಲಿ... ಅಲೋಪತಿ, ಹೋಮಿಯೋಪತಿ, ಆಯುರ್ವೇದ ಎಂಥದ್ದೇ ಮದ್ದು ಇರಲಿ. ಯಾವುದನ್ನು
ಅನುಸರಿಸಿದರೂ ಬದುಕಿನ ಗಾಲಿಗಳು ಉರುಳುತ್ತಲೇ ಇರ್ತದೆ ಅಲ್ವ? ಮತ್ತೆಂತಕೆ ಸುಮ್ಮನೆ ಹಳೆತರ ಮೆಲುಕು,
ಕಳೆದು ಹೋದ್ದರ ಬಗ್ಗೆ ಜೀವನಪೂರ್ತಿ ಹಂಬಲಿಕೆ ಮತ್ತು ನಿರಾಸೆ, ಈಗಿನ ಕಾಲಕ್ಕೆ ಒಗ್ಗದ
ಸಂಗತಿಗಳನ್ನು ಮತ್ತೆ ಮಾಡಿ ಎಂತಾಗ್ಲಿಕುಂಟು ಎಂಬ ಜಾಢ್ಯ ಸಹ.
ಆದರೂ ನನ್ನ ಸಮಕಾಲೀನರ
ಜೊತೆ. ಪ್ರಶ್ನೆ... ನಿಮ್ಮ ಬಾಲ್ಯದಲ್ಲಿ ನೀವು ಬಹುಶಃ ಕಂಡಿದ್ದ, ನಡೆದಿದ್ದ, ನೋಡಿದ್ದ ಅಥವಾ
ಅದರ ಭಾಗವಾಗಿದ್ದ ಈ ಕೆಳಗಿನ ವಿಚಾರಗಳನ್ನು ನೀವು ಗಮನಿಸದೆ, ಅದರ ಒಳ ಹೊಕ್ಕು ಅನುಭವಿಸದೆ
ದಿನಗಳು ಎಷ್ಟಾದವು?
1)
ಇತ್ತೀಚೆಗೆ ಚಪ್ಪಲಿ ಹಾಕದೆ ವಾಕಿಂಗ್ ಮಾಡಿದ್ದೀರ?
2)
ಬಸ್ ಕೈಕೊಟ್ಟಾಗ ಆಟೋಗೆ
ಕಾಯದೆ ನಡ್ಕೊಂಡೇ 2-3 ಕಿ.ಮೀ. ನಡ್ದದ್ದು ನೆನಪುಂಟ?
3)
ನಿಜವಾದ ರೇಡಿಯೋವನ್ನೇ ಆನ್
ಮಾಡಿ (ಮೊಬೈಲಿನಲ್ಲಿ ಅಲ್ಲ) ಪ್ರದೇಶ ಸಮಾಚಾರ, ರಾಷ್ಟ್ರೀಯ ವಾರ್ತೆ ಕೇಳಿದ್ದೀರ?
4)
ಕಲ್ಲು ಬಿಸಾಡಿ ಗುಡ್ಡದ
ಮಾವು, ಗೇರು ಮರದಿಂದ ಹಣ್ಣು ಕೊಯ್ದಿದ್ದೀರ?
5)
ಪತ್ರಿಕೆಯ ಮ್ಯಾಗಝೀನಿನ
ನುಣುಪು ಪುಟಗಳನ್ನು ಬಳಸಿ ಮಕ್ಕಳ ನೋಟ್ಸ್ ಪುಸ್ತಕಕ್ಕೆ ಬೈಂಡ್ ಹಾಕಿದ್ದುಂಟ?
6)
ದೂರದರ್ಶನದಲ್ಲಿ ಭಾನುವಾರ
ಸಂಜೆ 4 ಗಂಟೆಯ ಕನ್ನಡ ಸಿನಿಮಾ ನೋಡಿ ಎಷ್ಟು ವರ್ಷಗಳಾದವು?
7)
ಮೊಬೈಲ್ ಮತ್ತು ಟಿವಿ ಆಫ್
ಮಾಡಿ ಮುಸ್ಸಂಜೆ ಮನೆಯಲ್ಲಿ ಭಜನೆ ಮಾಡಿದ್ದು ನೆನಪುಂಟ, ಸದ್ಯ?
8)
ಕರೆಂಟು ಹೋದಾಗ ಚಿಮಿಣಿ
ದೀಪ ಅಥವಾ ಲಾಟೀನು ಉರಿಸಿ ಕತೆ ಪುಸ್ತಕ ಓದಿದ್ದು ಯಾವಾಗ?
9)
ಮನೆ ಅಂಗಳಕ್ಕೆ ಇತ್ತೀಚೆಗೆ
ಯಾವಾಗಲಾದರೂ ನೀವೇ ಸೆಗಣಿ ಸಾರಿಸಿದ್ದೀರ?
10)
ಅಡಕೆ ಮರದ ಸಂಕದಲ್ಲಿ ತೋಡು
ದಾಟಿದ್ದು, ನೀರಿಗಿಳಿದೇ ಹೊಳೆ ದಾಟಿದ್ದು ಕಡೆಯದಾಗಿ ಯಾವಾಗ?
11)
ಅಡಕೆ ಹಾಳೆಯಿಂದ ಮಾಡಿದ ಚಿಳ್ಳಿಯಿಂದ ತೋಟದ ದಂಡೆಯಲ್ಲಿ
ಹರಿದು ಬರುವ ನೀರನ್ನು ಅಡಕೆ ಮರದ ಬುಡಕ್ಕೆ ಎರಚಿ ಎಷ್ಟು ವರ್ಷಗಳಾದವು?
12)
ಚೌಕಿ ಪೂಜೆಯಿಂದ ಮಂಗಳ ಪದದ
ವರೆಗೆ ಯಕ್ಷಗಾನ ನೋಡಿದ್ದು ಕೊನೆಯದಾಗಿ ಯಾವಾಗ?
13)
ನೀವೆ ಮಾಲೆ ಪೋಣಿಸಿ
(ಅಂಗಡಿಯಲ್ಲಿ ಖರೀದಿ ಮಾಡಿ ಅಲ್ಲ) ದೇವಸ್ಥಾನಕ್ಕೋ, ಪೂಜೆಗೋ ಕೊಡ್ಡದ್ದು ಇತ್ತೀಚೆಗೆ ಯಾವಾಗ?
14)
ನಿಮ್ಮ ಪ್ರೀತಿ ಪಾತ್ರರಿಗೆ
ಇನ್ ಲ್ಯಾಂಡ್ ಲೆಟರ್ ಅಥವಾ ಪೋಸ್ಟ್ ಕಾರ್ಡಿನಲ್ಲಿ ಕೊನೆಯದಾಗಿ ಪತ್ರ ಬರೆದದ್ದು ಯಾವಾಗ? ಸರೀ ನೆನಪು ಮಾಡಿ?
15)
ಸತ್ಯ ಹೇಳಿ... ಈಗ ಇನ್
ಲ್ಯಾಂಡ್ ಲೆಟರು, ಪೋಸ್ಟ್ ಕವರು, ಪೋಸ್ಟ್ ಕಾರ್ಡಿಗೆ ಪೋಸ್ಟಾಫೀಸಿನಲ್ಲಿ ಎಷ್ಟು ರೇಟು ಅಂತ
ನಿಮಗೆ ಗೊತ್ತುಂಟ?
16)
ನಿಮ್ಮಲ್ಲಿ ಎಷ್ಟು ಮಂದಿ
ಈಗಲೂ ದಿನಾ ಬರೆಯುತ್ತೀರಿ? (ಸೈನ್ ಹಾಕುವುದು ಬಿಟ್ಟು). ನಿಮಗೆ
ವೇಗವಾಗಿ ಬರೆಯಲು ಸಾಧ್ಯವಾಗುತ್ತಿದೆಯೇ?
17)
ಈಗಲೂ ನಿಮ್ಮಲ್ಲಿ ಎಷ್ಟು
ಮಂದಿ ರೆನಾಲ್ಡ್ಸ್ ಪೆನ್ನು ಬಳಸುತ್ತೀರಿ? ಈಗಲು ಮಾರ್ಕೆಟ್ಟಿನಲ್ಲಿ
ರೆನಾಲ್ಡ್ಸ್ ಪೆನ್ನು ಸಿಗುತ್ತದೆಯೇ?
18)
ಎಷ್ಟು ಮಂದಿಯ ಬಳಿ 30-40
ವರ್ಷಗಳ ಹಿಂದಿನ ನಿಮ್ಮ ಶಾಲೆಯ ಪಾಠ ಪುಸ್ತಕ, ನೋಟ್ಸ್ ಪುಸ್ತಕ, ಯೂನಿಫಾರಂ ಪಳೆಯುಳಿಕೆ,
ಬಾಲ್ಯದಲ್ಲಿ ತೆಗೆದ ಫೋಟೋದ ಹಾರ್ಡ್ ಕಾಪಿಗಳು ಜೋಪಾನವಾಗಿ ಇವೆ?
19)
ಎಷ್ಟು ಮಂದಿಯ ಮನೆಯಲ್ಲಿ
ಗ್ಯಾಸ್ ಲೈಟು, ತಗಡಿನ ಟ್ರಂಕು, ಚಿಮಿಣಿ ದೀಪ, ಶ್ಯಾವಿಗೆಯ ಮರದ ಮಣೆ ಇವೆಲ್ಲ ಈಗಲೂ ಇವೆ?
20)
ನೀವು ಕೊನೆಯದಾಗಿ ತೋಡು
ಅಥವಾ ಹೊಳೆಯಲ್ಲಿ ಬಟ್ಟೆ ಒಗೆದದ್ದು ಯಾವಗ? ಅಥವಾ ಈಗಲೂ ಕಲ್ಲಿನಲ್ಲಿ ಬಟ್ಟೆ
ಒಗೆಯುವವರು ಎಷ್ಟು ಮಂದಿ ಇದ್ದೀರಿ?
21)
ಎಷ್ಟು ಮಂದಿ ಇಡೀ ದಿನ ಆಫ್
ಲೈನ್ ಇರ್ತೀರಿ ಅಥವಾ ಮೊಬೈಲೇ ಮುಟ್ಟದೆ ರಜೆ ದಿವಸ ಇರ್ತೀರಿ. ಇಂಥದ್ದನ್ನೆಲ್ಲ ಈಗಲೂ ಪಾಲಿಸ್ತೀರ? ಆಗ್ತದ ಹಾಗಿರ್ಲಿಕೆ?
22)
ಹೊಸದಾಗಿ ಬರುವ ಸಿನಿಮಾಗಳ
ಹಾಡುಗಳ ಸಂಗ್ರಹ (ಸಿಡಿ, ಕ್ಯಾಸೆಟ್ಟು ಬಿಡಿ, ಈಗ ಬರುವುದಿಲ್ಲ) ನಿಮ್ಮ ಬಳಿ ಇಟ್ಕೊಂಡಿರ್ತೀರ...? ಹಳೆ ಹಾಡುಗಳ ಥರ ಈಗಿನ
ಹಾಡುಗಳನ್ನು ಸಂಗ್ರಹಿಸಿಡುವ ಅಭ್ಯಾಸ ಉಂಟ
ನಿಮ್ಮತ್ರ? ಈಗಿನ ಚಿತ್ರಗೀತೆಗಳ ಇಡೀ ಸಾಲುಗಳು ಬಾಯಿ
ಪಾಠ ಬರ್ದದೆಯಾ?
23)
ಎಷ್ಟು ಮಂದಿ ಹೊಸದಾಗಿ
ಸಿಗುವ ಫೋನ್ ನಂಬರುಗಳನ್ನು ಈಗಲು ನೋಟ್ ಪುಸ್ತಕ ಅಥವಾ ಡೈರಿಯಲ್ಲಿ ಬರೆದಿಡುತ್ತೀರಿ? ಬಾಯಿಪಾಠ ಮಡ್ಕೊಂಡಿರ್ತೀರಿ?
24)
ಇತ್ತೀಚೆಗೆ ನಿಮ್ಮ ಅಂಗಳದ
ಬದಿ, ತೋಟ ಅಥವಾ ಹಿತ್ತಿಲಿನಲ್ಲ ನೀವಾಗಿಯೇ ಹುಲ್ಲು ಕತ್ತರಿಸಿದ್ದು, ತಲೆಯಲ್ಲಿ ಹೊತ್ತು ಮಣ್ಣು,
ಗೊಬ್ಬರ ಹಾಕಿದ್ದು, ಮರಹತ್ತಿ ತೆಂಗಿನ ಕಾಯಿ ಕೊಯ್ದದ್ದು ನೆನಪುಂಟ? (ಕನಿಷ್ಠ ತೋಟಕ್ಕೆ
ಹೋದಾಗಲಾದರೂ?)
25)
ಯಾವುದೇ ಕಾರಣ ಇಲ್ಲದೆ,
ಸಾಲ ಕೇಳುವುದಕ್ಕೆ ಹೊರತುಪಡಿಸಿ, ವೈಯಕ್ತಿಕ ಕೆಲಸ ಮಾಡುವುದನ್ನು ಮರೆತು, ನಿಮ್ಮ ಗೋಳನ್ನು ಹೇಳಿ ಹಗುರಾಗುವುದನ್ನು
ಹೊರತುಪಡಿಸಿ.... “ಈಗ ನೀವು ಹೇಗಿದ್ದೀರಿ? ಬದುಕು ಹೇಗಿದೆ? ಒಮ್ಮೆ ನಮ್ಮ ಮನೆಗೆ ಬನ್ನಿ” ಅಂತ ಯಾರಿಗಾದರೂ ಇತ್ತೀಚೆಗೆ ಕರೆ ಮಾಡಿ
ಪುರುಸೊತ್ತಿನಲ್ಲಿ ಗಂಟೆಗಟ್ಟಲೆ ಮಾತನಾಡಿದ್ದು ಉಂಟ? ಮೊದಲು ಫ್ರೀ ಕಾಲ್ ಇದೆ ಅಂತ ರಾತ್ರಿ ಕರೆ ಮಾಡಿ ತಲೆ
ತಿನ್ತಾ ಇದ್ದವರ ಪೈಕಿ ಇನ್ನೊಬ್ಬರ ಕಷ್ಟು ಸುಖ ಕೇಳಿ ಉತ್ತಮ ಶ್ರೋತೃವಾಗಲು, ಭೇಟಿಯಾಗಲು,
ಆತಿಥ್ಯ ನೀಡಿ ಕಳುಹಿಸಲು ಮಾನಸಿಕವಾಗಿ ಸಿದ್ಧರಿದ್ದೀರಿ?
ಈ 25 ಪಾಯಿಂಟುಗಳು
ಸಾಂಕೇತಿಕ ಅಥವಾ ರೂಪಕ ಅಷ್ಟೇ... ಇಂಥ 125 ಪಾಯಿಂಟುಗಳು ಬೇಕಾದರೂ ಸಿಗ್ತವೆ. ಈ ಪೈಕಿ ಹಲವನ್ನು
ನೀವು ಈಗಲೂ ಮಾಡುತ್ತಿರಬಹುದು. ಆಚರಿಸುವವರೇ ಇಲ್ಲ ಎಂಬ
ನಿರಾಶಾವಾದವಲ್ಲ. ಆದರೆ ಬಹುತೇಕರಿಗೆ ಈ ವಿಚಾರಗಳು ಗೊತ್ತಿದ್ದರೂ ಪಾಲಿಸುತ್ತಿಲ್ಲ ಅಥವಾ
ಪಾಲಿಸಲು ಆಗುತ್ತಿಲ್ಲ. ಹಾಗಾಗಿ ಜಗತ್ತು ಬದಲಾಗಿದೆ, ಕಾಲ ಕೆಟ್ಟಿದೆ ಅಂತ ಆರೋಪಿಸುವ ಮೊದಲು,
ನಾವೆಷ್ಟು ಬದಲಾಗಿದ್ದೇವೆ ಅಂತ ಚಿಂತಿಸೋಣ... ಕಾಲಕ್ಕೆ ತಕ್ಕ ಕೋಲದಲ್ಲಿ ನಮಗೂ ಪಾತ್ರವಿದೆ
ಎಂಬುದು ನೆನಪಿರಲಿ... ಈ ಥರ ಪಟ್ಟಿ ಮಾಡ್ತಾ ಹೋದರೆ ನಮ್ಮಲ್ಲೇ ನಾವು ಮರೆತುಹೋಗಿರುವ ಸಾವಿರ
ಸಂಗತಿಗಳನ್ನು ಗುರುತಿಸಬಹುದು. ಅವುಗಳಿಲ್ಲದೆಯೂ ಬದುಕು ಹೋಗುತ್ತಲೇ ಇರ್ತದೆ...
ಕೊನೆಯ ವರೆಗೆ ಬರೆಹ
ಓದಿದವರು ಇದ್ದರೆ ವಿನಂತಿ... ನನಗೆ ಬಿಟ್ಟು ಹೋದ ಪಾಯಿಂಟುಗಳಿದ್ದರೆ ನೀವು ಕಮೆಂಟ್
ಸೆಕ್ಷನ್ನಿನಲ್ಲಿ ಬರೆದು ನೆನಪು ಮಾಡಿ, ನಾನೆಷ್ಟು ಮರೆತಿದ್ದೇನೆ ಎಂಬುದನ್ನು ನೆನಪಿಸಿ ಪ್ಲೀಸ್....
-ಕೃಷ್ಣಮೋಹನ ತಲೆಂಗಳ
(06.01.2025)

No comments:
Post a Comment