Tuesday, June 27, 2017

ನಾವೇಕೆ ಮೆಶಿನ್‌ಗಳಂತಾಗಿದ್ದೇವೆ?

--
ನಮ್ಮ ಇರುವಿಗೆ ತಿಳಿಸಲು ಆಧಾರ್ ಬೇಕು.
ಸಂಪರ್ಕಕ್ಕೆ ಮೊಬೈಲು, ಅದಕ್ಕೊಂದು
ಅಂತರ್ಜಾಲ ಸಂಪರ್ಕ. ಮತ್ತೆ ದುಡ್ಡಿನ
ವ್ಯವಹಾರಕ್ಕೆಲ್ಲ ಕಾರ್ಡುಗಳು, ಸಂಖ್ಯೆಗಳು,
ಬೆರಳಚ್ಚು. ಇವೆಲ್ಲದರ ನಡುವೆ ದಿನದಲ್ಲಿ
ಎಚ್ಚರವಾಗಿರೋ ಅಷ್ಟೂ ಹೊತ್ತು ‘ಆನ್
ಲೈನ್’ ಇಲ್ಲದಿದ್ದರೆ ನಾವೇ ಇಲ್ಲದ
ಹಾಗಾಗುತ್ತದೆಯಾ?!
------------------
ಇತ್ತೀಚೆಗೊಂದು ನಗೆಹನಿ ಬಂದಿತ್ತು. ವಾಟ್ಸಪ್‌ನಲ್ಲಿ.
‘ನೀವು ಒಂದೆರಡು ದಿನ ವಾಟ್ಸಪ್‌ನಲ್ಲಿ ಆಫ್
ಲೈನ್ ಇರಿ, ಮೊಬೈಲಿಗೆ ನಾಟ್ ರೀಚೇಬಲ್
ಆಗಿರಿ, ಜನ ನೀವು ಸತ್ತೇ ಹೋಗಿದ್ದೀರಿ
ಅಂದ್ಕೋತಾರೆ!’ ಅಂತ.
ಇದು ಜೋಕಾಗಿ ಉಳಿದಿಲ್ಲ.
ಕಟುವಾಸ್ತವವೂ ಹೌದು. ಒಂದು ಕಾಲದಲ್ಲಿ
ಮೊಬೈಲಿಗೆ ಎಸ್‌ಎಂಎಸ್ ಬಂದರೆ ಅದು ದೊಡ್ಡ
ಸಂಭ್ರಮ. ನಂತರ ನಿಧಾನವಾಗಿ ಬಂದ್ ಆರ್ಕುಟ್,
ಫೇಸ್‌ಬುಕ್‌ಗಳು ಆನ್‌ಲೈನ್ ಜಗತ್ತಿನ ರುಚಿಯನ್ನು
ಸಂವಹನ ಪ್ರಿಯರಿಗೆ ಹತ್ತಿಸಿತು. ೩ಜಿ ಮೊಬೈಲ್ ಬಂದ ಬಳಿಕ
ಸಂವಹನ ಸಾಧ್ಯತೆಗೆ ಅಂಕುಶವೇ ಇಲ್ಲದಾಯ್ತು. ಫೇಸ್‌ಬುಕ್
ಅಬ್ಬರಿಸಿದ್ದು ಮಾತ್ರವಲ್ಲ, ವಾಟ್ಸಪ್‌ನಂತಹ ಮಲ್ಟಿಮೀಡಿಯಾ
ಮೆಸೇಜಿಂಗ್ ಆ್ಯಪ್‌ಗಳೇ ಸಂವಹನ ಸೇತುಗಳಾಗಿಬಿಟ್ಟವು.
ಟ್ವೀಟರ್‌ನಂತಹ ತಾಣಗಳು ರಾಜನಿಂದ ಸೇವಕನವರೆಗೆ
ಯಾವುದೇ ಮಧ್ಯವರ್ತಿಗಳಿಲ್ಲದೆ ತತ್‌ಕ್ಷಣಕ್ಕೆ ಮಾತನಾಡಿಸುವ,
ಪ್ರತ್ಯುತ್ತರ ಕೊಡುವ ಜನಪ್ರಿಯ ತಾಣವಾಗಿಬಿಟ್ಟಿವೆ.
ಅಡೆತಡೆಯಿಲ್ಲದ, ಶುಲ್ಕವಿಲ್ಲದೆ, ಬೇಕೆಂದಾಗ, ಬೇಕೆಂದಲ್ಲಿಂದ
ಸಂವಹನದ ಸಾಧ್ಯತೆಯ ಈ ಯುಗದಲ್ಲಿ ಸ್ಮಾರ್ಟ್‌ಫೋನ್
ಅನಿವಾರ್ಯವಾಗಿಸಿರುವಾಗ ‘ನೆಟ್ ಆಫ್’ ಮಾಡಿ
ಬದುಕುವುದೇ ಅಸಾಧ್ಯವೇನೋ ಎಂಬಂಥ ಭ್ರಮೆ ಆವರಿಸಿದೆ.
ಸಂಬಂಧ, ಸಂವಹನ, ಭಾವನೆಗಳ ವಿನಿಮಯ, ಸುದ್ದಿಯ
ಪ್ರಸಾರ, ಅಪಪ್ರಚಾರಕ್ಕೂ ಸಾಮಾಜಿಕ ಜಾಲತಾಣವೇ
ವೇದಿಕೆಯಾಗಿರುವಾಗ, ಆನ್‌ಲೈನ್ ಇರುವುದೇ
ಅಸ್ತಿತ್ವವಾಗಿಬಿಟ್ಟಿದೆ.

ಕಾಣೆಯಾಗೋದು ಕಷ್ಟ
೨೪ ಗಂಟೆ ಆನ್‌ಲೈನ್ ಇರುವಾತ, ಏಕಾಏಕಿ ಆಫ್‌ಲೈನ್
ಆಗಿಬಿಟ್ಟರೆ, ಆಗಾಗ ಆಫ್‌ಲೈನ್‌ಗೆ ಹೋಗ್ತಾ ಇದ್ದರೆ, ಆತನ
ಸ್ನೇಹಿತರ ವಲಯದಲ್ಲಿ ಸಂದೇಹ ಶುರುವಾಗುತ್ತದೆ.
ಇವನಿಗೇನಾಯ್ತಪ್ಪ ಅಂತ. ಲಕಲಕಿಸುವ ನಗೆಯ ಡಿಪಿ (ಡಿಸ್‌ಪ್ಲೇ
ಪಿಕ್ಚರ್) ಇದ್ದೋನ ಖಾತೆಯಲ್ಲಿ ಏಕಾಏಕಿ ಕಪ್ಪು ಚಂದ್ರಮ
ಆವರಿಸಿದರೆ, ಖಾಲಿ ಖಾಲಿ ಡಿಪಿ ಕಾಣತೊಡಗಿದರೆ ಜನ ಲೆಕ್ಕ
ಹಾಕ್ತಾರ ಅವನ ಮನಸ್ಸು ಘಾಸಿಯಾಗಿದೆ ಅಂತ.
ಚಿತ್ರ ವಿಚಿತ್ರ ಸ್ಟೇಟಸ್ ಬಂದಾಗ ಮತ್ತೆ ಬಾಯ್ಬಿಟ್ಟು
ಹೇಳಬೇಕಿಲ್ಲ. ಅವನಿಗೋ, ಅವಳಿಗೋ ಏನಾಗಿದೆ ಅಂತ.
ಮನಸ್ಥಿತಿಗೆ ವಾಟ್ಸಪ್ಪೋ, ಫೇಸ್‌ಬುಕ್ಕಿನ ಸ್ಟೇಟಸ್ಸೇ ಕನ್ನಡಿಯಾದರೆ,
ಪ್ರತಿಕ್ರಿಯೆ ನೀಡೋರು ಸ್ನೇಹಿತರ ಪಟ್ಟಿಯಲ್ಲಿರೋರೇ ಆದರೆ, ಎಲ್ಲವೂ ಖುಲ್ಲಂ ಖುಲ್ಲಾ ಅಂತಾದರೆ ,ಆನ್‌ಲೈನ್‌ಗಿಂತ ಪ್ರತ್ಯೇಕಅಸ್ತಿತ್ವವೇ ಬೇಕಾಗಿಲ್ಲ ಅಲ್ವ ಜಗತ್ತಿನಲ್ಲಿ? ಹೋಗಿದ್ದು, ಬಂದಿದ್ದು, ನೋಡಿದ್ದು, ಕಾಡಿದ್ದು ಎಲ್ಲವನ್ನೂ ಕ್ಲಿಕ್ಕಿಸಿ ವಾಲ್‌ನಲ್ಲಿ ಸ್ಟೇಟಸ್‌ನಲ್ಲಿ ಹಾಕಿ ಲೈಕುಗಳಿಗೆ ಕಾಯುವ ಬಡ ಜೀವಿಗಳಿಗೆ ನಡೆದುಕೊಂಡು ರಸ್ತೆಯಲ್ಲಿ ಹೋಗುವಾಗ ಚೆಂದದ ಹೂವು ಕಂಡರೂ ಲೈಕ್
ಕೊಡೋಣ ಅನ್ನಿಸುವಷ್ಟರ ಮಟ್ಟಿಗೆ ಗೀಳು ಹಿಡಿದು ಬಿಟ್ಟಿದೆ.
ಬದುಕು ನೀರಸ ಅಂತಾದಾಗ ‘ಖಾಲಿ ಖಾಲಿ’ ಅಂತ ಸ್ಟೇಟಸ್
ಹಾಕಿದರೆ ಸಾಕು ಬರುತ್ತವೆ ಹತ್ತಾರು ಚಿತ್ರ ವಿಚಿತ್ರ ಪ್ರತಿಕ್ರಿಯೆಗಳು
ಅವರವರ ಮೂಗಿನ ನೇರಕ್ಕೆ! 

ಸಂತೋಷವನ್ನು, ನಿರಾಸೆಯನ್ನು
ಜಾಲತಾಣಗಳ ಯಾಂತ್ರಿಕ ಸ್ಮೈಲಿಗಳಿಗೆ, ಲೈಕುಗಳಿಗೆ, ಗಿಫ್
ಚಿತ್ರಗಳಿಗೆ, ವಿಡಿಯೋ ಕ್ಲಿಪ್ಪುಗಳಿಗೆ ಒಗ್ಗಿಸಿ ಬಿಟ್ಟಿದೆ ವ್ಯವಸ್ಥೆ. ಈ
ವರ್ತುಲಕ್ಕೆ ಸಿಲುಕದವರೂ, ಸಿಲುಕದಂತೆ ಕಂಡವರೂ, ಸಿಕ್ಕಿಯೂ
ಸಿಲುಕಲಾರೆನೆಂಬವರೂ ಒಂದಲ್ಲ ಒಂದು ದುರ್ಬಲ
ಘಳಿಗೆಯಲ್ಲಿ ಜಾಲತಾಣಗಳ ಖಾಯಂ ಸದಸ್ಯರಾಗಿ ಲೈಕು ಒತ್ತಿ
ನಿಟ್ಟುಸಿರು ಬಿಟ್ಟು ‘ಸೋ ಕಾಲ್ಡ್’ ಸಮಕಾಲೀನರಾಗುತ್ತಾರೆ!


ವ್ಯಕ್ತಿ ಸತ್ತನೆಂದು ಪತ್ರಕಳುಹಿಸಿ, ಉತ್ತರ ಕ್ರಿಯೆಗಾಗುವಾಗ
ಸಂಬಂಧಿಕರಿಗೆ ವಿಷಯ ಗೊತ್ತಾಗುವ ಕಾಲ ಇದಲ್ಲ. ನಿಮಿಷ
ನಿಮಿಷಕ್ಕೂ ನಾವೆಲ್ಲಿದ್ದೇವೆಂದೂ ಗೂಗಲ್ ಮ್ಯಾಪೇ ಇಡೀ ವಿಶ್ವಕ್ಕೆ
ತೋರಿಸಿಕೊಡುವ ಜಗತ್ತು. ಹೀಗಾಗಿ ಯಾವುದರಿಂದಲೂ ತಪ್ಪಿಸಿ,
ಬೇರೆಯೇ ಆಗಿ ಬದುಕುವುದು ‘ಪ್ರತ್ಯೇಕವಾದ’ವಾದೀತು.
ಆದರೆ, ಆಫ್‌ಲೈನ್ ಕಂಡಾಗ ಆತಂಕಗೊಂಡು, ಡಿಪಿ
ಕಾಣೆಯಾದಾಗ ತತ್ತರಿಸಿ, ಲೈಕು ಬೀಳದಿದ್ದಾಗ ಸಿನಿಕರಾಗಿ
ಯಂತ್ರಗಳಾಗುವುದು ಬೇಡ. ಕ್ರಿಯಾಶೀಲತೆ, ಸ್ಪಂದಿಸುವ
ಸೂಕ್ಷ್ಮ ಮನಸ್ಸು ಆಫ್‌ಲೈನ್ ಆಗದಂತೆ ಎಚ್ಚರವಿರಲಿ!----------------

ರಂಗ ಸ್ಥಳದಲ್ಲಿ ಬಾಹುಬಲಿ 3

ರಾಜಮೌಳಿ ಬಾಹುಬಲಿ ಭಾಗ 3 ನಿರ್ದೇಶನ ಮಾಡುತ್ತಾರೋ ಗೊತ್ತಿಲ್ಲ. ಆದರೆ ಕರಾವಳಿ ಕಲೆ ಯಕ್ಷಗಾನದಲ್ಲಿ ಮಾತ್ರ ಬಾಹುಬಲಿ 2ರ ಮುಂದಿನ ಭಾಗವೂ ರಂಗಸ್ಥಳಕ್ಕೆ ಬರಲು ಸಿದ್ಧವಾಗಿದೆ. ಆ. 5 ಕ್ಕೆ ಪುರಭವನದಲ್ಲಿ ಸಾಲಿಗ್ರಾಮ ಮೇಳದಿಂದ ಪ್ರದರ್ಶನಗೊಳ್ಳಲಿದೆ. ಹೆಸರು ವಜ್ರಮಾನಸಿ 2. ಇದಕ್ಕೆ ಶಿವಗಾಮಿ ಪಾತ್ರಧಾರಿ ಶಶಿಕಾಂತ್‌ ಶೆಟ್ಟಿ ಕಾರ್ಕಳ ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. 2015ರಲ್ಲಿ ಬಾಹುಬಲಿ 1 ಸಿನಿಮಾ ಬಂದಿದ್ದೇ ಯಕ್ಷಗಾನದಲ್ಲೂ ಅದೇ ಕಥೆ ಇರುವ ಪ್ರಸಂಗ ಬಂತು. ಹೆಸರು ವಜ್ರಮಾನಸಿ. ಜನಪ್ರಿಯ ಯಕ್ಷಗಾನ ಪ್ರಸಂಗಕರ್ತ ದೇವದಾಸ ಈಶ್ವರ ಮಂಗಲ ಅವರ ಈ ಪ್ರಯೋಗ ಕೆಲವರ ವಿರೋಧದ ನಡುವೆಯಯೂ ಯಶಸ್ವಿಯಾಯಿತು. 140 ಪ್ರದರ್ಶನ ಕಾಣುವ ಮೂಲಕ ಸೂಪ್‌ ಹಿಟ್‌ ಆಯಿತು. ಇದೇ ಪ್ರಸಂಗ ಕರ್ತರು ಬಾಹುಬಲಿ 2 ಬರುವ ಮೊದಲೇ ವಜ್ರಮಾನಸಿ 1 ಪ್ರಸಂಗ ರಚಿಸಿದರು. ವಿಶೇಷ ಎಂದರೆ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗೂ ವಜ್ರಮಾನಸಿ ಪ್ರಸಂಗದಲ್ಲಿ ಉತ್ತರ ಕಂಡುಕೊಳ್ಳಲಾಗಿತ್ತು. ಪ್ರಸಂಗ ಕರ್ತರ ಕಲ್ಪನೆ ಬಾಹುಬಲಿ 2 ರಲ್ಲಿ ನಿಜವೂ ಆಗಿತ್ತು. ಬಾಹುಬಲಿ ಸಿನಿಮಾದಲ್ಲಿದ್ದ ಶಿವಗಾಮಿ, ಮಹೇಂದ್ರ ಬಾಹುಲಿ, ಕಟ್ಟಪ್ಪ ಮತ್ತಿತರ ಪಾತ್ರಗಳು ಅದೇ ಹೆಸರಿನಿಂದ ಯಕ್ಷಗಾನದಲ್ಲಿ ಕಾಣಿಸಿಕೊಳ್ಳುವುದು ಮತ್ತೊಂದು ವಿಶೇಷ. 


ತೀವ್ರ ವಿರೋಧ ಇತ್ತು 
ವಜ್ರಮಾನಸಿ ಸಿರೀಸನ್ನು ಪ್ರದರ್ಶಿಸಿದ್ದು ಬಡಗುತಿಟ್ಟಿನ ಪ್ರಸಿದ್ಧ ಡೇರೆ ಮೇಳೆ ಶ್ರೀ ಸಾಲಿಗ್ರಾಮ ಮೇಳದವರು. ಈ ಬಯಲಾಟಕ್ಕೆ ಆರಂಭದಲ್ಲಿ ಪ್ರೇಕ್ಷಕರಿಂದ ಯಕ್ಷಗಾನ ಪಂಡಿತರಿಂದ ಆಕ್ಷೇಪಗಳಿದ್ದವು. ಆದರೆ ಕಲಾವಿದರ ಸಂಘಟಿತ ಪ್ರಯತ್ನ, ದೃಶ್ಯ ನಿರೂಪಣೆ, ಹಾಡುಗಳು ಹಾಗೂ ಸಂಭಾಷಣೆಯಿಂದ ಕ್ರಮೇಣ ಜನಪ್ರಿಯವಾಗುತ್ತಾ ಹೋಯಿತು. 


ಬಾಹುಬಲಿ 3 ಕಥೆಯಲ್ಲೀಗ ವಜ್ರಮಾನಸಿ 2

ಅದೇ ಯಶಸ್ಸಿನಿಂದ ಅವರೀಗ ವಜ್ರಮಾನಸಿ ಭಾಗ 1ರ ಕೆಲ ದೃಶ್ಯಗಳನ್ನು ಉಳಿಸಿ, ಬಾಹುಬಲಿ 3ರ ಕಾಲ್ಪನಿಕ ಕತೆಯನ್ನು ವಜ್ರಮಾನಸಿ 2 ಆಗಿಸಿದ್ದಾರೆ. ವಜ್ರಮಾನಸಿ ಹಾಗೂ ವಜ್ರಮಾನಸಿ 1 ಇವೆರಡರ ಕತೆ ಸೇರಿಸಿ ತುಳುವಿನಲ್ಲಿ ಹಾಡುಗಳನ್ನು ಬಳಸಿ ತೆಂಕು ತಿಟ್ಟಿನಲ್ಲಿಯೂ ಆ. 5ರಂದು ಮಂಗಳೂರು ಪುರಭವನದಲ್ಲಿ ‘ಬಾಹುಬಲಿ’ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. 


ಈ ಹಿಂದೆಯೂ ಚಲನಚಿತ್ರ ಕಥೆ ಯಕ್ಷಗಾನವಾಗಿತ್ತು

ಈ ಹಿಂದೆ ಅಣ್ಣಯ್ಯ ಸಿನಿಮಾದ ರಿಮೇಕ್‌ ‘ಈಶ್ವರಿ ಪರಮೇಶ್ವರಿ’ ಬಾಲಿವುಡ್‌ನ ಬಾಝಿಗರ್‌ ಸಿನಿಮಾದ ರಿಮೇಕ್‌ ‘ಧೀಶಕ್ತಿ’, ಅನ್ನುವ ಪ್ರಸಂಗ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳು ಬೆಳ್ಳಿತೆರೆಯಿಂದ ರಂಗಸ್ಥಳಕ್ಕೆ ಬಂದ ಉದಾಹರಣೆಗಳಿವೆ. 


ಶಿವಗಾಮಿ ಪಾತ್ರಧಾರಿಯ ಭಿನ್ನ ಹೇಳಿಕೆ 

‘ಸಿನಿಮಾ ಕತೆಗಳನ್ನು ಯಕ್ಷಗಾನ ಪ್ರಸಂಗವಾಗಿ ಬರೆಯುವವರಿಗೆ ಅದು ಸುಲಭ. ಪ್ರಸಂಗ ಕರ್ತರು ನಿರ್ದೇಶನ, ಕತೆ , ರಚನೆ ತಮ್ಮದೇ ಅಂತ ಹಾಕ್ತಾರೆ. ಆದರೆ ಪ್ರಸಂಗಕರ್ತರು ಕಲಾವಿದರಿಗೆ ನಿರ್ದೇಶನ ನೀಡುವುದಿಲ್ಲ. ವಜ್ರಮಾನಸಿ ಪ್ರಸಂಗ ಹಿಟ್‌ ಆಗಿದ್ದು ನಾವು ಕಲಾವಿದರ ಟೀಮ್‌ ವರ್ಕಿನಿಂದ’ –ಎನ್ನುತ್ತಾರೆ ಸಾಲಿಗ್ರಾಮ ಮೇಳದ ಪ್ರಸಿದ್ಧ ಸ್ತ್ರೀ ವೇಷಧಾರಿ , ಶಿವಗಾಮಿ ಪಾತ್ರ ನಿರ್ವಹಿಸಿದ ಶಶಿಕಾಂತ ಶೆಟ್ಟಿ ಕಾರ್ಕಳ. 

‘ಈ ಪರಸಂಗ ಯಕ್ಷಗಾನ ತಿರುಗಾಟ ಆರಂಭದಲ್ಲಿ ಈ ರೂಪದಲ್ಲಿ ಇರಲಿಲ್ಲ. ಬಳಿಕ ಕಲಾವಿದರೇ ಪರಸ್ಪರ ಚರ್ಚಿಸಿ ಪೂರಕ ಸಂಭಾಷಣೆಗಳನ್ನು ರೂಪಿಸಿದೆವು. ಅದು ಜನರಿಗೆ ಇಷ್ಟವಾಯಿತು. ಯಾವುದೇ ಕಲಾಪ್ರಕಾರ ರಂಜನೆ ಇದ್ದರೆ ಮಾತ್ರ ಯಶಸ್ವಿಯಾಗುವುದು. ಪೂರಕವಾಗಿ ಮಾರ್ಮಿಕ ದೃಶ್ಯಗಳು, ಮನಸ್ಸಿನಲ್ಲಿ ಉಳಿಯುವ ಹಾಡುಗಳು ಪ್ರೇಕ್ಷಕರಿಗೆ ಬೇಕು. ದೇವದಾಸ ಈಶ್ವರ ಮಂಗಲ ಕಥೆಯನ್ನು ಸಂಗ್ರಹ ಮಾಡಿದ್ದೇ ಹೊರತು ನಿರ್ದೇಶಕರಲ್ಲ. ಅವರು ತನ್ನನ್ನು ನಿರ್ದೇಶಕ ಎನ್ನುವುದಕ್ಕೆ ಆಕ್ಷೇಪವಿದೆ’ ಎನ್ನುತ್ತಾರೆ ಶಶಿಕಾಂತ ಶೆಟ್ಟಿ. 

*

ಅಭಿಪ್ರಾಯ: 

*

2015ರಲ್ಲಿ ನಾನು ಬಾಹುಬಲಿ ಸಿನಿಮಾವನ್ನು ಯಕ್ಷಗಾನಕ್ಕೆ ತಂದಾಗ ಏನೂ ಕೆಲಸ ಇಲ್ಲದವರು ಅದಕ್ಕೆ ಟೀಕೆ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿತ್ತೇ ವಿನಃ ನೇರವಾಗಿ ಯಾರೂ ನನ್ನಲ್ಲಿ ವಿರೋಧಿಸಿದವರಿಲ್ಲ. ಜನರ ಬೆಂಬಲ ಇದ್ದರೆ ಮಾತ್ರ  ಇಂತಹ ಪ್ರಯತ್ನಗಳು ಗೆಲ್ಲುತ್ತವೆ. ಯಕ್ಷಗಾನವೇ ಗೊತ್ತಿಲ್ಲದವರು ಈ ಪ್ರಯತ್ನದಿಂದ ಯಕ್ಷಗಾನ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಯಕ್ಷಗಾನ ಗೊತ್ತಿಲ್ಲದ ಬಾಹುಬಲಿ ಪ್ರೇಮಿಗಳೂ ಬಂದು ಯಕ್ಷಗಾನ ನೋಡಿದ್ದಾರೆ. ಇದರಿಂದ ಯಕ್ಷಗಾನಕ್ಕೆ ಲಾಭ ಅಲ್ಲವೇ. 

 – ದೇವದಾಸ ಈಶ್ವರ ಮಂಗಲ , ಯಕ್ಷಗಾನ ಪ್ರಸಂಗ ಕರ್ತ 

*

ಪ್ರಸಂಗ ಕರ್ತರು ಸಿನಿಮಾದ ಕತೆಯನ್ನು ಬದಲಾವಣೆ ಮಾಡಿದ್ದರು. ವಜ್ರಮಾನಸಿ ಕಥೆ ವಿಭಿನ್ನವಾಗಿತ್ತು. ಕಲಾವಿದರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಲ್ಲ ಪಾತ್ರಗಳು ವಿಶಿಷ್ಟವಾಗಿ ಮೂಡಿ ಬಂದಿವೆ. ಸಿನಿಮೀಯತೆ ಬಂದಿಲ್ಲ. ಎಲ್ಲೂ ಬೋರ್‌ ಆಗುವುದಿಲ್ಲ. ಹಾಗಾಗಿ ಜನರಿಗೆ ಇಷ್ಟ ಆಯ್ತು. ಆದರೆ ದೀರ್ಘ ಕಾಲದಲ್ಲಿ ಇಂತಹ ಕತೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ಕಷ್ಟ. 

-ಕರುಣಾಕರ ಬಳ್ಕೂರು , ಯಕ್ಷಗಾನ ಪ್ರೇಮಿ, ಉಪನ್ಯಾಸಕರು. 

*

ಬಾಹುಬಲಿಯಂತಹ ಸಿನಿಮಾನವನ್ನು ಯಕ್ಷಗಾನಕ್ಕೆ ತರುವುದು ಟೆಂಟ್‌ ಮೇಳದ ಆಟಕ್ಕೆ ಮಾತ್ರ ಸೀಮಿತ ಆಗಿರಬೇಕು. ಯಾಕೆಂದರೆ ಯಕ್ಷಗಾನ ಮೇಳಗಳು ಉಳಿಯಬೇಕಾದರೆ ಇಂತಹ ಗಿಮಿಕ್‌ಗಳನ್ನು ಮಾಡಲೇಬೇಕು. ಸಿನಿಮಾದ್ದಾದರೂ ಯಕ್ಷಗಾನಕ್ಕೆ ಒಗ್ಗುವ ಕಲೆಯಾದರೆ ಸ್ವೀಕರಿಸಬೇಕು. 

-ಶಾಂತಾರಾಮ ಕುಡ್ವ, ಯಕ್ಷಗಾನ ಪ್ರೇಮಿ. 

*

ತಿರುಗಾಟದಲ್ಲಿ ಕತೆಯನ್ನು ಬಳಸುವ ಮೊದಲೇ ಮಳೆಗಾಲದಲ್ಲಿಯೇ ಬೆಂಗಳೂರಿನಲ್ಲಿ ಪ್ರಸಂಗಗಳನ್ನು ಬಿಡುಗಡೆ ಮಾಡುವ ಪ್ರವೃತ್ತಿ ಆರಂಭವಾಗಿದೆ. ಇದಕ್ಕೆ ವಿನಾ ಕಾರಣ ಪ್ರಚಾರ ಕೊಡಲಾಗುತ್ತಿದೆ. ಸಿನಿಮಾ ಕತೆಗಳಂತಹ ಸಾಮಾಜಿಕ ಪ್ರಸಂಗಗಳು ಮೇಳದ ತಿರುಗಾಟದಲ್ಲಿ ಹಲವು ಪ್ರದರ್ಶನಗಳನ್ನು ಕಂಡ ಬಳಿಕ ತಿದ್ದಿ ತೀಡಿ ಕಲಾವಿದರ ಪ್ರಯತ್ನದಿಂದ ಒಂದು ರೂಪಕ್ಕೆ ಬರುತ್ತವೆ. 

-ಶಶಿಕಾಂತ ಶೆಟ್ಟ , ಕಾರ್ಕಳ, ಯಕ್ಷಗಾನ ಸ್ತ್ರೀ ವೇಷಧಾರಿ 

*

ವಜ್ರಮಾನಸಿ ಪ್ರಸಂಗ ಹಿಟ್‌ ಆಗಿದೆ. ಪ್ರೇಕ್ಷಕರೆಲ್ಲ ಮೆಚ್ಚಿದ್ದಾರೆ. ಇದರಲ್ಲಿ ಕಲಾವಿದರ ಪ್ರಯತ್ನ ತುಂಬ ಇದೆ. ಆರಂಭದಲ್ಲಿ ಇಂತಹ ಕತೆಯನ್ನು ಯಕ್ಷಗಾನ ಮಾಡುವುದಕ್ಕೆ ಪ್ರೇಕ್ಷಕರ ವಿರೋಧ ಇತ್ತು. ಕೊನೆಗೆ ವಿರೋಧ ಮಾಡಿದವರೂ ಮೆಚ್ಚಿಕೊಂಡರು. 

– ಪ್ರಸನ್ನ ಶೆಟ್ಟಿಗಾರ್‌, ಸಾಲಿಗ್ರಾಮ ಮೇಳದ ಕಲಾವಿದರು. 

*

ವಜ್ರಮಾನಸಿ ಪ್ರಸಂಗ ಪ್ರದರ್ಶನದ ಆರಂಭದಲ್ಲಿ ಪ್ರೇಕ್ಷಕರಿಗೆ ಅಂತಹ ಅಭಿಪ್ರಾಯ ಇರಲಿಲ್ಲ. ಸಾಲಿಗ್ರಾಮ ಮೇಳದ ಕಲಾವಿದರ ಟೀಮ್‌ ವರ್ಕ್‌ನಿಂದ ಪ್ರಸಂಗ ಮೇಲೆ ಬಿತ್ತು. ಕೊನೆಗೆ ಜನಪ್ರಿಯವಾಯಿತು. ಆದರೆ ಪ್ರತಿವರ್ಷವೂ ದೇವದಾಸ್‌ ಈಶ್ವರ ಮಂಗಲ ಸಿನಿಮಾ ಕಥೆಗಳನ್ನೇ ಯಕ್ಷಗಾನ ಮಾಡ್ತಾರಲ್ಲ ಅಂತ ಜನ ಯೋಚಿಸುವಂತಾಯಿತು. ಆದರೆ ಯಾವುದೇ ಕತೆಯನ್ನು ಯಕ್ಷಗಾನೀಯವಾಗಿಸುವ ಕಲೆ ಅವರಲ್ಲಿದೆ. 

-ಎಂ.ಎಚ್‌. ಪ್ರಸಾದ್‌ ಕುಮಾರ್ ಮೊಗೆಬೆಟ್ಟು, ಯಕ್ಷಗಾನ ಭಾಗವತರು, ಪ್ರಸಂಗಕರ್ತ 

*

ಯಕ್ಷಗಾನ, ಸಿನಿಮಾ ಮತ್ತು ದೇವದಾಸ ಈಶ್ವರ ಮಂಗಲ 

1997ರಿಂದ ಯಕ್ಷಗಾನ ಪ್ರಸಂಗಗಳನ್ನು ರಚಿಸುತ್ತಿರುವ ದೇವದಾಸ ಈಶ್ವರ ಮಂಗಲ ಈ ತನಕ 62 ಕತೆಗಳನ್ನು ರಚಿಸಿದ್ದಾರೆ. ಈ ಪೈಕಿ ಸುಮಾರು 18ರಷ್ಟು ಕತೆಗಳು ಸಿನಿಮಾ ಆಧಾರಿತ. ಇವುಗಳಲ್ಲಿ ಬಹಳಷ್ಟು ಯಕ್ಷಗಾನಗಳು ಗಳಿಕೆ ದೃಷ್ಟಿಯಿಂದ ಯಶಸ್ವಿಯೂ ಆಗಿವೆ. ಪಡೆಯಪ್ಪ ಸಿನಿಮಾ ಕತೆಯ ‘ಶಿವರಂಜಿನಿ’, ಆಪ್ತ ಮಿತ್ರದ ಕತೆಯ ‘ನಾಗವಲ್ಲಿ’ ಇವೆರಡು ಸುಮಾರು 500–600ರಷ್ಟು ಪ್ರದರ್ಶನಗಳನ್ನು ಕಂಡಿರುವುದು ಈ ಪ್ರಯತ್ನ ಕೈ ಸೋತಿಲ್ಲ ಎಂಬುದಕ್ಕೆ ಸಾಕ್ಷಿ. ಸಿನಿಮಾ ಕತೆಯನ್ನು ಯಕ್ಷಗಾನೀಯ ಶೈಲಿಗೆ ತರುವಲ್ಲಿ ಪಳಗಿದವರಾದ ದೇವದಾಸ್‌, ಮುಂಗಾರುಮಳೆ, ರಾಣಿ ಮಹಾರಾಣಿ, ಸಗ್ಮ ಸೇರಿದಂತೆ ಹಲವು ಸಿನಿಮಾ ಕತೆಗಳನ್ನು ಯಕ್ಷಗಾನಕ್ಕೆ ತಂದಿದ್ದಾರೆ. 


-   ಕೃಷ್ಣಮೋಹನ ತಲೆಂಗಳ

Sunday, June 18, 2017

ಕಷ್ಟಕ್ಕೂ ನಿಮ್ಮನ್ನು ಕಾಡುವುದು ಕಷ್ಟವಾಗಲಿ!

ದೊಡ್ಡದೊಂದು ಗಾಳಿ, ಮಳೆ ಬಂದು ಪ್ರವಾಹ ಆವರಿಸಿದಾಗ ಅನಿಸುತ್ತದೆ, ಬದುಕು ಇಲ್ಲಿಗೇ ಮುಗಿದು ಹೋಯಿತೇನೋ ಅಂತ. ಆದರೆ, ಮರುದಿನ ಮಳೆ ತಗ್ಗಿ, ನೆರೆ ಇಳಿದು, ಸೂರ್ಯ ಪುನಃ ನಕ್ಕಾಗ, ಒಂದು ನಿರಾಳತೆ ಮೂಡುತ್ತದೆ. ಇದುವೇ ಬದುಕಿನ ವೈಚಾರಿಕ ಸತ್ಯ. ಕಷ್ಟ ಎದುರಿಸುವ ಸ್ಥಿತಿಪ್ರಜ್ಞತೆ ಹಾಗೂ ಕಷ್ಟವನ್ನು ಎದುರಿಸಿ, ದಾಟಿಬರುವಂಥ ಆಶಾವಾದ. ಇವೆರಡರ ಸಂತುಲಿತ ಧ್ಯಾನಸ್ಥ ಸ್ಥಿತಿಪ್ರಜ್ಞತೆಯೇ ನಾವು ಆ ಪ್ರವಾಹದಲ್ಲಿ ಮುಳುಗದಂತೆ ಕಾಪಾಡುವುದು!
----------------------
ಬರಬೇಕಾದ ಕಾಲದಲ್ಲಿ ಮಳೆ ಸುರಿಯದಿದ್ದಾಗ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಅಯ್ಯೋ ಮಳೆ ಬರಲಿಲ್ಲ, ಕುಡಿಯಲು ನೀರಿಲ್ಲ, ಜನ ಸಾಯುತ್ತಿದ್ದಾರೆ, ಕೆರೆ ಕೊಳ್ಳಗಳು ಬತ್ತಿಹೋಗಿವೆ, ಭೂತಾಯಿಯ ಹಸಿರು ಸೆರಗಿಗೆ ಬೆಂಕಿ ಬಿದ್ದ ಹಾಗಿದೆ ಅಂತ... ಒಂದೊಮ್ಮೆ ಮಳೆ ಬಂದಾಗ ಸುದ್ದಿಗಳು ಹೇಗಿರುತ್ತವೇ ನೋಡಿ: ದಿಢೀರ್ ಮಳೆಗೆ ಜನತೆ ಕಂಗಾಲು, ಜನಜೀವನ ಅಸ್ತವ್ಯಸ್ತ, ಜಲಪ್ರವಾಹ, ಜಲಪ್ರಳಯ... ಹೀಗೆಲ್ಲ!
ದೊಡ್ಡದೊಂದು ನಿರೀಕ್ಷೆ, ಅದಕ್ಕೊಂದು ಫಲಿತಾಂಶ, ಏರುಪೇರಾದರೆ ಕಾಡುವ ನಿರಾಸೆ, ಹಿನ್ನಡೆ ಹಾಗೂ ಹಿನ್ನಡೆಯನ್ನು ಎದುರಿಸುವ ಮನಸ್ಥಿತಿ ಇವಿಷ್ಟರ ನಡುವೆ ದೃಢವಾದ ಒಂದು ಸಮಚಿತ್ತತೆ ಕಾಪಾಡದಿದ್ದರೆ ಬದುಕಿನಲ್ಲಿ ಏಕಾಗ್ರತೆಯಾಗಲೀ, ಮನಶಾಂತಿಯಾಗಲಿ ಲಭಿಸದು.


ನಿರೀಕ್ಷೆಗಳೇ ನಿರಾಸೆಗಳಿಗೆ ದೊಡ್ಡದೊಂದು ಕಾರಣ ಹೌದು. ಹಾಗಂತ ನಿರೀಕ್ಷೆಗಳಿಲ್ಲದೆ ಬದುಕಿನಲ್ಲಿ ಆಶಾವಾದ ರೂಢಿಸಲು ಸಾಧ್ಯವಿಲ್ಲ. ಅತಿಯಾದ ನಿರೀಕ್ಷೆಗಳಿಗೆ ಕಡಿವಾಣ ಹಾಕದಿದ್ದರೆ ಸ್ಥಿತಿಪ್ರಜ್ಞತೆ ಹೊಂದಲೂ ಸಾಧ್ಯವಿಲ್ಲ. ಆಶಾವಾದ ಹಾಗೂ ಸ್ಥಿತಪ್ರಜ್ಞತೆ ಎರಡರ ನಡುವಿನ ಎಲ್‌ಒಸಿ (ಲೈನ್ ಆಫ್ ಕಂಟ್ರೋಲ್) ನಮ್ಮ ಹಿಡಿತದಲ್ಲಿರಬೇಕು. ಅದು ಬೋಧಿಸುವಂಥದ್ದೋ, ಓದಿ ತಿಳಿಯುವಂಥದ್ದೋ ಅಲ್ಲ, ಪರಿಸ್ಥಿತಿಗಳೇ ಕಲಿಸುವ ಪಾಠ! ಅದರ ಅರಿವು ಬೇಕು ಅಷ್ಟೇ.
ಅನಾರೋಗ್ಯ ಕಾಡಿದೆ, ವೈದ್ಯರು ನಿಮ್ಮ ಪರೀಕ್ಷೆ ಮಾಡಿದ್ದಾರೆ, ಆದರೆ ಫಲಿತಾಂಶ ಬಾರಲು ಒಂದು ವಾರ ಬೇಕೆಂದು ಹೇಳಿದ್ದಾರೆ ಎಂದಿಟ್ಟುಕೊಳ್ಳಿ. ಆ ಒಂದು ವಾರದಲ್ಲಿ ನಿಮ್ಮನ್ನು ಕಾಡುವ ಸಮಸ್ಯೆ ಬಹಿರಂಗವಾಗುವ ತನಕ ವೈದ್ಯರ ವರದಿ ಬರುವವರೆಗಿನ ತೊಳಲಾಟ, ಏನೇನೋ ಕೆಟ್ಟ ಕಲ್ಪನೆಗಳು, ಅಧೀರತೆಯ ಭಾವ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡೀತು. ಫಲಿತಾಂಶ ಪಾಸಿಟಿವ್ ಇರಬಹುದು, ಋಣಾತ್ಮಕವಾಗಿಯೂ ಇರಬಹುದು. ಆದರೆ ಋಣಾತ್ಮಕವಾಗಿಯೇ ಬಂದರೆ ಎಂಬ ಆತಂಕ... ನಾನು ಸೋಲಿನ ಹೊಂಡಕ್ಕೆ ಬೀಳುತ್ತೇನೆಯೇ? ಮತ್ತೆ ಮೇಲೇಳಲಾರದಷ್ಟು ಕುಸಿಯಬಹುದೇ ಎಂಬ ಖಿನ್ನತೆ ಕಾಡಬಹುದು. ಬದುಕು ಪೂರ್ತಿ ಕಷ್ಟಗಳೇ ಕಾಡುತ್ತಿವೆಯೇ? ಎಂಬ ಭೂವಶೂನ್ಯತೆ ಆವರಿಸಬಹುದು.


ಆಶಾವಾದ ಇರಲಿ: ಇಂದು ಕಾಡಿರುವ ಕಷ್ಟ, ನೋವು, ವೇದನೆಯೂ ಶಾಶ್ವತವಾಗಿರಬೇಕಾಗಿಲ್ಲ. ಅದಕ್ಕೊಂದು ಪರಿಹಾರ ಸಿಕ್ಕಿದ ಬಳಿಕ, ಅದು ಶಮನವಾದ ಬಳಿಕ ಬದುಕು ಮರಳಿ ಹಳಿಗೆ ಬರುತ್ತದೆ ಎಂಬ ಆಶಾವಾದ ಬೇಕು. ಆ ಆಶಾವಾದದ ಬೆಳಕಿನಲ್ಲಿ ಇಂದಿನ ಅಸಹಾಯಕತೆಯನ್ನು ಎದುರಿಸಲು ಸಾಧ್ಯವಾಗುವುದು. ಆಶಾವಾದವೆಂದರೆ ನಾನು ಪರಮ ಸುಖಿ, ಕಷ್ಟವೇ ಬರುವುದಿಲ್ಲ ಎಂಬ ಹುಚ್ಚು ಧೈರ್ಯವಲ್ಲ. ಅದೊಂದು ಜೀವನಮುಖಿ ಪ್ರಜ್ಞೆ ಅಷ್ಟೆ. ಮಳೆ ಬರಲಿ ದೇವರೆ, ಇಂದು ಬರ ಕಾಡುತ್ತಿದೆ ಎಂದು ದೇವರನ್ನು ಪ್ರಾರ್ಥಿಸುವಾಗಲೂ ಅಷ್ಟೆ. ನಾಳೆ ಮಳೆ ಬಂದಾಗ ಅದರೊಂದಿಗೆ ಆಗಬಹುದಾದ ಪರಿಣಾಮಗಳ ಪ್ರಜ್ಞೆ (ನೆರೆ, ಪ್ರವಾಹ, ಗುಡುಗು, ಸಿಡಿಲು) ಕೂಡಾ ಇದ್ದರಷ್ಟೇ ಸಮಚಿತ್ತದ ಆಶಾವಾದ ಸಿಗಲು ಸಾಧ್ಯ.
ನೋವು ಕಾಡಿದಾಗ ಅದುವೇ ಶಾಶ್ವತವೆಂಬ ವೈರಾಗ್ಯ ಕಾಡುತ್ತದೆ. ಆದರೆ, ಮುಂದೊಂದು ದಿನ ಅದರಿಂದ ಹೊರಬಂದ ಮೇಲೆ ನಿಮಜಿ ನಿಮ್ಮ ತೊಳಲಾಟ ಕ್ಷುಲ್ಲಕ ಅಂಥ ಅನಿಸಬಹುದು. 


ಸರಳವಾಗಿ ಹೇಳಬೇಕೆಂದರೆ ಬದುಕಿನಲ್ಲಿ ಯಾವುದೇ ಕ್ಷಣದಲ್ಲೂ ಸೋಲು ಕಾಡಬಹುದು, ಹಿನ್ನಡೆ ಬರಬಹುದು, ಇಂತಿಂತಹ ಸತ್ವಪರೀಕ್ಷೆಗಳು ನನ್ನನ್ನು ಕಾಡಬಹುದು ಎಂಬ ಮಾನಸಿಕ ಸಿದ್ಧತೆ, ಅದಕ್ಕೆ ಬೇಕಾದ ಧೈರ್ಯವನನ್ನು ರೂಢಿಸಿಕೊಂಡಿದ್ದರಷ್ಟೇ ಹೇಳದೆ ಕೇಳದೆ ಬರುವ ಕಷ್ಟಗಳನ್ನೂ ದಾಟಿ ಬರಲು ಸುಲಭ. ಕಷ್ಟ ಬರಬಹುದು ಎಂದುಕೊಳ್ಳವುದು ನೆಗೆಟಿವ್ ಚಿಂತನೆ ಖಂಡಿತಾ ಅಲ್ಲ. ಅದು ವಾಸ್ತವಿಕ ಪ್ರಜ್ಞೆ ಅಷ್ಟೆ.
---------------

-ಕಷ್ಟಗಳು ಬಂದಾಗ ಎದುರಿಸುವುದು ಅನಿವಾರ್ಯ. ಎಷ್ಟೋ ಬಾರಿ ಸಮಸ್ಯೆಯನ್ನು ಏಕಾಏಕಿ ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರುವುದಿಲ್ಲ. ಅದಕ್ಕೆ ಸಮಸ್ಯೆಗಿಂತಲೂ, ‘ಸಮಸ್ಯೆ ನನ್ನನ್ನು ಆವರಿಸಿದೆ’ ಎಂಬ ನೋವು ಹೆಚ್ಚು ಕಾಡುತ್ತದೆ. ಅಗಲುವುದು, ಬೇರ್ಪಡುವುದು, ಬದಲಾಗುವುದು ಬದುಕಿನ ಅನಿವಾರ್ಯ ಸತ್ಯಗಳು. ನಮಗೆ ಒಪ್ಪಿಗೆ ಇದ್ದರೂ, ಇಲ್ಲದಿದ್ದರೂ ಅವು ಸಂಭವಿಸಿಯೇ ಸಂಭವಿಸುತ್ತವೆ. ಅವನ್ನು ಎದುರಿಸುವ ಮನಸ್ಥೈರ್ಯ ರೂಢಿಸಿದರಷ್ಟೇ ಅಂತಹ ಸತ್ವಪರೀಕ್ಷೆಗಳನ್ನು ದಾಟಿಬರಬಹುದು. ಸಮಸ್ಯೆ, ನೋವೊಂದು ಕಾಡಿದಾಗ ಅದನ್ನು ಎದುರಿಸಬೇಕಾದರೆ ಮನಸ್ಸನ್ನು ರೂಢಿಸಿಕೊಳ್ಳಬೇಕು. ಅದರ ಪರಿಣಾಮಗಳಲ್ಲಿರುವ ಸಾಧ್ಯತೆಗಳನ್ನು ಮೊದಲೇ ಊಹಿಸಿ ಮಾನಸಿಕವಾಗಿ ಸಿದ್ಧರಾಗಿರಬೇಕು. ಉದಾಹರಣೆಗೆ: ಪರೀಕ್ಷೆಯಲ್ಲಿ ಫೇಲಾಗುತ್ತೀರಿ ಅಂದುಕೊಳ್ಳಿ. ಹೌದು, ತುಂಬಾ ನೋವು ತರುವ ವಿಚಾರ. ಆದರೆ ಅದರಿಂದ ಹೊರಬರುವುದು ಹೇಗೆ? ಪರಿಣಾಮಗಳ ಸಾಧ್ಯತೆ ಬಗ್ಗೆ ಯೋಚಿಸಿ... ನನ್ನ ಥರ ಪ್ರಪಂಚದಲ್ಲಿ ಎಷ್ಟು ಮಂದಿ ಫೇಲಾಗಿದ್ದಾರೆ? ಅವರೆಲ್ಲಾ ಏನು ಮಾಡುತ್ತಿದ್ದಾರೆ? ಪೂರಕ ಪರೀಕ್ಷೆ ಬರೆಯುವುದು ಹೇಗೆ, ಅಲ್ಲಿಯತನಕ ಹೇಗೆ ಸಮಯದ ಸದ್ಬಳಕೆ ಮಾಡಬಹುದು? ನಾನು ಯಾವ ಕಾರಣಕ್ಕೆ ಫೇಲಾದೆ? ಹೀಗೆ, ಸಮಸ್ಯೆಯನ್ನು ಬಿಡಿಸಿ, ಬಿಡಿಸಿ ವಿಶ್ಲೇಷಿಸಿದರೆ ಅರ್ಧ ಹಗುರವಾದ ಭಾವ ಸಿಗುತ್ತದೆ.
- ವಾಸ್ತವವನ್ನು ಒಪ್ಪಿಕೊಳ್ಳಿ. ಹೌದು ನಾನು ಫೇಲಾದೆ ಎಂಬುದು ವಾಸ್ತವ. ಅದನ್ನು ನಿರ್ವಂಚನೆಯಿಂದ ಒಪ್ಪಿಕೊಳ್ಳಿ. ನಂತರ ಹೊರಬರುವ ದಾರಿ ಯೋಚಿಸಿ.
- ಬದುಕಿನಲ್ಲಿ ಈ ಹಿಂದೆ ಬಂದ ಕಷ್ಟಗಳು, ಅವುಗಳನ್ನು ನೀವು ದಾಟಿ ಬಂದ ವಿಧಾನಗಳು, ಆಗ ನೀವು ತೋರಿಸಿದ ಧೈರ್ಯವನ್ನು ಒಂದೊಂದಾಗಿ ಮೆಲುಕು ಹಾಕಿ. ಎಷ್ಟೋ ಬಾರಿ ಆ ಕಷ್ಟಕ್ಕಿಂತ ಈಗ ಬಂದಿರುವ ಕಷ್ಟವೇನೋ ದೊಡ್ಡದಲ್ಲ ಅನ್ನಿಸಬಹುದು. ನಿಮಗಿಂತ ಕಷ್ಟ ಅನುಭವಿಸುತ್ತಿರುವವರೊಂದಿಗೆ ಹೋಲಿಸಿ ನೋಡಿ, ಆಗ ತಿಳಿಯುತ್ತದೆ ನಾವು ಎಷ್ಟೋ ಬಗೆಹರಿಯಬಲ್ಲ ಕಷ್ಟದ ನಡುವೆ ಇದ್ದೇವೆ ಎಂದು. ಇಷ್ಟೆಲ್ಲಾ ಚಿಂತನ ಮಂಥನ ಮಾಡಿದಾಗ ಮನಸ್ಸಿನಲ್ಲೊಂದು ನಿರಾಳತೆ ಹುಟ್ಟಿಕೊಂಡರೆ ಆ ಧೈರ್ಯವೇ ನಿಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸುತ್ತದೆ.
-ಕೃಷ್ಣಮೋಹನ ತಲೆಂಗಳ.

Saturday, June 17, 2017

ಮಧ್ಯರಾತ್ರಿಯ ಪಯಣ..ಗಾಡಿಯೂ... ನಾನೂ!ರಾತ್ರಿ 11 ಎಂದರೆ ಹಾಗೊಂದು ಮಧ್ಯರಾತ್ರಿಯೇನೂ ಅಲ್ಲ. ಆದರೆ ತುಂಬಾ ಚಟುವಟಿಕೆಯೂ ಇರೋದಿಲ್ಲ. ಕರಂಗಲ್ಪಾಡಿಯಿಂದ ಪಂಪ್ ವೆಲ್ ತನಕವೂ ಬಸ್ ನಿಲ್ದಾಣಗಳಲ್ಲಿ ದಪ್ಪ ಬ್ಯಾಗ್ ನಿಂತು ಬಲಬದಿಗೆ ನೋಡ್ತಾ ಇರೋರೆಲ್ಲಾ ಬೆಂಗಳೂರು ಬಸ್ಸಿಗೆ ಕಾಯುವವರು. ರಾತ್ರಿ 11.30, 12ರ ವರೆಗೂ ಸ್ಲೀಪರ್ ಗಳು, ಲಕ್ಸುರಿ ಬಸ್ಸುಗಳು ಸದ್ದಿಲ್ಲದೆ ನಮ್ಮನ್ನು ಹಿಂದಿಕ್ಕಿ ಯಮವೇಗದಲ್ಲಿ ಬರ್ತಾನೇ ಇರ್ತವೆ. ಇಷ್ಟೊಂದು ಬಸ್ಸುಗಳು ಹಗಲು ಎಲ್ಲಿ ನಿದ್ರೆ ಮಾಡ್ತವೆ ಎಂಬುದೇ ಆಶ್ಚರ್ಯ. ಅದ್ರಲ್ಲೂ ವೋಲ್ವೋ ಬಂದರೆ ಅದಕ್ಕೆ ಮುಂದೆ ಶಬ್ದವೇ ಇಲ್ಲ, ನಮ್ಮನ್ನು ಅರ್ಧದಷ್ಟು ದಾಟುವವರೆಗೆ ಹಾಗೊಂದು ಗಾಡಿ ಹಿಂದೆ ಇದೇ ಅಂತಲೇ ಗೊತ್ತೋಗೋದಿಲ್ಲ. ಸ್ಲೀಪರ್ ಬಸುಗಳಲ್ಲಿ ಮೊಬೈಲ್ ಹಿಡ್ದು ಧ್ಯಾನಸ್ಥರಂತೆ ಚಾಟ್ ಮಾಡುವವರು. ನಾಳೆ ಮುಂದಿನೂರಲ್ಲಿ ಏನಪ್ಪ ಕತೆ ಅಂತ ಚಿಂತಿಸುತ್ತಾ ಮಲಗಿರೋರು ಅರ್ಧರ್ಧ ಹೊರಗಡೆಗೂ ಕಾಣಿಸ್ತಾರೆ. ಹಗಲು ತಲೆ ಚಿಟ್ಟು ಹಿಡಿಸುವ ಟ್ರಾಫಿಕ್ಕಿನಿಂದ ನಲುಗಿ, ಬೆಂಡಾಗಿ ಕಾದ ಕೆಂಡದಂತಿರುವ ಜ್ಯೋತಿ ಸರ್ಕಲ್, ಬೆಂದೂರು ವೆಲ್, ಕಂಕನಾಡಿಗಳಲ್ಲಿ ಅಷ್ಟು ಹೊತ್ತಿಗೆ ಅಡ್ಡಡ್ಡ ಗಾಡಿ ಓಡಿಸಿದರೂ ಕೇಳುವವರಿಲ್ಲವೇನೋ ಎಂಬಂಥ ಶಾಂತತೆ. 

ಆಗಷ್ಟೇ ಮಳೆ ಬಂದು ಬಿಟ್ಟರೆ ಮುಗೀತು. ಮಧ್ಯಾಹ್ನ ಕಾಣದೇ ಇದ್ದ ಹೊಂಡಗಳೆಲ್ಲ ಜನ್ಮ ಪಡೆದು ನೀರು ತುಂಬಿ ಮೌನವಾಗಿ ಮಲಗಿರ್ತವೆ. ಅವಕ್ಕೆ ಕೊನೆ ಘಳಿಗೆಯಲ್ಲಿ ಟಯರ್ ಇಳಿಸದೆ ನಿರ್ವಾಹವಿಲ್ಲ, ಇಳಿಸಿದರೆ ಕೆಸರ ಸ್ನಾನ ಗ್ಯಾರಂಟಿ. ಚಕ್ರದಡಿಗೆ ಸಿಲುಕಿ ಬೆಂಡಾಗಿ, ನಜ್ಜುಗುಜ್ಜಾಗಿ, ಅಂಗವಿಕಲರಾಗಿ ಮಲಗಿದೆ ರಸ್ತೆ ವಿಭಾಜಗ ಕೋನ್ ಗಳೆಲ್ಲ ರಾತ್ರಿ ರಿಫ್ಲೆಕ್ಟಿಂಗ್ ಇಪೆಕ್ಟ್ ನಿಂದಾಗಿ ಸ್ಪಷ್ಟವಾಗಿ ಕಾಣುತ್ತವೆ. ರಾತ್ರಿ ಬಸ್ಸಿನಲ್ಲಿ ಯಾರಾದ್ರೂ ಗಿರಾಕಿಗಳು ಸಿಗ್ತಾರ ಅಂತ ನಿದ್ರೆ ತೂಗಿಕೊಂಡೋ ಹರಟೆ ಹೋಡ್ಕೊಂಡೇ ಜಂಕ್ಷನ್ ಗಳಲ್ಲಿ ಕಾಯುವ ಆಟೋಗಳ ಡ್ರೈವರ್ ಗಳು. ಇನ್ನೇನು ಬಾಗಿಲು ಹಾಕಿ ಹೊರಡಬೇಕೆಂದಿರೋ ಬೇಕರಿಯವರು, ಮೆಡಿಕಲ್ ಶಾಪ್ ಗಳು. ಕೊನೆ ಕ್ಷಣದ ಖರೀದಿಗೆ ಕಾರಿನಲ್ಲಿ ಬಂದು ಇಳಿಯುವ ಗಿರಾಕಿಗಳು. ರಾತ್ರಿಯೂ ಎನೋ ಕಳಕೊಂಡವರಂತೆ ಮುಖ ಮಾಡ್ಕೊಂಡು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ವೇಗವಾಗಿ ಓಡುವ ವಾಕಿಂಗ್ ಪಟುಗಳು. ಒಂದು ಖುಷಿ, ರಾತ್ರಿ ಏಕಾಏಕಿ ನಾಯಿಗಳು ಎಲ್ಲಿಂದಲೋ ಪ್ರತ್ಯಕ್ಷವಾಗಿ ರಸ್ತೆ ದಾಟುವುದಿಲ್ಲ.
ಅಂಗಡಿ ಜಗಲಿಗಳಲ್ಲಿ ಮಲಗಿ ರಾತ್ರಿ ದೂಡುವ ಅನಾಥರು, ರಾತ್ರಿ ಹೊಟೇಲಿನ ತ್ಯಾಜ್ಯವನ್ನು ಫೈಬಲ್ ಡ್ರಮ್ ಗಳಲ್ಲಿ ತುಂಬಿ ಕಸದ ಬುಟ್ಟಿ ಕಡೆಗೆ ಚೆಲ್ಲಲು ಹೋಗುವವರೆಲ್ಲಾ ರಸ್ತೆಯಲ್ಲಿ ಸಿಕ್ತಾರೆ. ಹಗಲು ಸತ್ತಂತಿದ್ದು, ರಾತ್ರಿ ವಜ್ರದಂತೆ ಹೊಳೆಯುವ ರಸ್ತೆ ಡಿವೈಡರಿನಲ್ಲಿರುವ ಬಿಲ್ಲೆಗಳು ಮಾತ್ರ ತುಂಬ ಖುಷಿ ಕೊಡ್ತವೆ. ಅಮಲಿನಲ್ಲಿದ್ದವರಿಗೆ ಬಹುಷ ರಸ್ತೆ ಎರಡೆರಡು ಕಾಣದಂತೆ ನೆನಪಿಸುವ ಮಾರ್ಗದರ್ಶಕಗಳವು ಬಹುಷ. ಆದರೆ ಅವುಗಳ ಮೇಲೆ ಚಕ್ರ ಓಡುವಾಗ ಕಟ ಕಟ ಅಂತ ಕರ್ಕಶ ಸದ್ದು, ಟಯರ್ ಪಂಕ್ಚರ್ ಆಯ್ತ ಅಂತ ಭಯ ಹುಟ್ಟಿಸುತ್ತವೆ.


ಪಂಪು ವೆಲ್ ಕಳೆದ ಮೇಲೆ ರಾಷ್ಟ್ರೀಯ ಹೆದ್ದಾರಿ ಮತ್ತೆ ಸಿಗೋದು ದೊಡ್ಡ ದೊಡ್ಡ ಟ್ಯಾಂಕರುಗಳು, ಮಿಂಚಿನ ವೇಗದಲ್ಲಿ ಹೋಗುವ ಮೀನಿನ ಲಾರಿ, ಪಿಕಪ್ ಗಳು. ಅಲ್ಲಿಯೋ ಇಲ್ಲಿಯೋ ನಿಶ್ಯಬ್ದವಾಗಿ ರಸ್ತೆ 90 ಡಿಗ್ರಿಯಲ್ಲಿ ಪಕ್ಕದಲ್ಲಿ ನಿಂತಿರುವ ಪೊಲೀಸ್ ಗಸ್ತು ವಾಹನಗಳು. ಉಪದ್ರಕ್ಕೆಂದೇ ಹಾಕಿರುವ ಬ್ಯಾರಿಕೇಡುಗಳು. ಎಷ್ಟು ವೇಗವಾಗಿ ಹೋದರೂ ಕೇಳುವವರಿಲ್ಲ. ಎದುರಿನಿಂದ ರಾಂಗ್ ಸೈಡಿನಲ್ಲಿ ಬಂದು ದಾರಿ ತಪ್ಪಿಸುವವರಿಲ್ಲ. ರಾತ್ರಿಯಿಡೀ ತೆರೆದಿರುತ್ತದೋ ಅಂತ ಸಂಶಯ ಹುಟ್ಟಿಸುವ ಒಂದೆರಡು ಹೊಟೇಲುಗಳು ಬಾಗಿಲೆ ತೆರೆದೇ ಇರ್ತವೆ. ಅವುಗಳೆದುರು ಒಂದೆರಡು ದೂರದೂರುಗಳಿಗೆ ಹೋಗುವ ಲಾರಿಗಳು. ಅಲ್ಲಿ ಢಾಬಾದ ಥರ ರೋಟಿ ದಾಲ್ ಸಿಗ್ಬಹುದಾ ಅಂತ ಆಸೆ ಆಗ್ತದೆ!


ಮತ್ತದೇ ಉದ್ದದ ನೇತ್ರಾವತಿ ಸೇತುವೆ. ನಿರ್ಜನ. ಕೆಲವೊಮ್ಮೆ ಬೀದಿದಿಪದ ಹಳದಿ ಪ್ರಕಾಶ ಸೇತುವೆಯುದ್ದಕ್ಕೂ ಮಲಗಿರ್ತದೆ. ಕೆಳಗಿಣುಕಿದರೆ, ಕಪ್ಪು ಕಪ್ಪು ನೀರು. ಅರ್ಧ ಹೊಳೆಯುವ ಚಂದ್ರ ಆಕಾಶದಲ್ಲಿ... ಬಲಗಡೆ ದೂರದಲ್ಲಿ ಸಂಕದುದ್ದಕ್ಕೂ ವ್ಯಾಪಿಸಿ ಕಂಬಳಿಹುಳದಂತೆ ಹೋಗ್ತಾ ಇರುವ ಕೇರಳದಿಂದ ಬರುವ ರೈತು. ಅದರ ಕಿಟಕಿಯಿಂದ ಬರುವ ಬೆಳಕಿನ ಸಾಲುಗಳೇ ಚುಕ್ಕಿ ಚಿತ್ರದಂತೆ ಭಾಸ. ಅಷ್ಟು ನೋಡೋ ಹೊತ್ತಿಗೆ ಒಂದೆರಡು ಮೀನಿನ ಲಾರಿಗಳು ಕೆಎಲ್ 14 ನಂಬರ್ ಪ್ಲೇಟಿನ ದೊಡ್ಡ ದೊಡ್ಡ ಕಾರುಗಳು ನನ್ನ ಗಾಡಿಯನ್ನು ಸವಲುವಂತೆ ಶರವೇಗದಲ್ಲಿ ಸಂಕದ ಆಚೆ ತುದಿ ತಲಪಿರುತ್ತವೆ. ಆಗೀಗ ಮೈಲು ದೂರದಿಂದಲೇ ಕಣ್ಣು ಕುಕ್ಕುವ ಲೈಟ್ ಹಾಕಿ ಸೈರನ್ ಮೊಳಗುತ್ತಾ ಕೇರಳ ಕಡೆಯಿಂದ ಮಂಗಳೂರಿನ ಹೈಟೆಕ್ ಆಸ್ಪತ್ರೆಗಳಿಗೆ ಧಾವಿಸುವ ಆಂಬುಲೆನ್ಸ್ ಗಳು. ಇನ್ಯಾರ ಮರಣ ಕಾದಿದೆಯೋ, ಮರಳಿ ಗುಣವಾಗಿ ಹೋಗುವ ಭಾಗ್ಯವಿರುವ ಭಾಗ್ಯಶಾಲಿಗಳಿದ್ದಾರೋ... ಅವೆಷ್ಟು ದುಖ ಅವರನ್ನು ಕಾಡುತ್ತಿದೆಯೋ ಯೋಚಿಸುತ್ತಾ ಕೂರುವ ಹಾಗಿಲ್ಲ. ನಾವು ಮುಂದೆ ಹೋಗಲೇ ಬೇಕು. ಇಡೀ ಬದುಕನ್ನೇ ಹೊದ್ದುಕೊಂಡಂತಿರುವ ಹೆದ್ದಾರಿಯ ಬಿಟ್ಟು ತೊಕ್ಕೊಟ್ಟಿನಲ್ಲಿ ಎಡಕ್ಕೆ ತಿರುಗಿ ಸಾಗಲೇ ಬೇಕು. 


ಹೆಡ್ ಲೈಟ್ ಬೆಳಕಿಗೆ ಏನೇನೋ ಆಕಾರ ಕಾಣುವ ಲೈಟುಕಂಬ, ಪೊದೆಗಳು, ಬಟ್ಟೆ ತುಂಡು, ಸಡನ್ನಾಗಿ ರಸ್ತೆಗೆ ಹಾರುವ ಕಪ್ಪೆ, ಇಲಿಗಳು... ಎಷ್ಟೊಂದು ಸಂಗಾತಿಗಳು ಸಿಗ್ತಾರೆ ರಾತ್ರಿ ಪಯಣದಲ್ಲಿ. ಪಂಪ್ ವೆಲ್ಲಿನಲ್ಲಿ, ತೊಕ್ಕೊಟ್ಟಿನಲ್ಲಿ ಹೆಡ್ ಲೈಟಿಗೆ ಅಡ್ಡಲಾಗಿ ಕೈಹಿಡಿದು ಲಿಫ್ಟು ಸಿಕ್ಕೀತ ಅಂತ ದೀನವಾಗಿ ನೋಡುವ ಕಣ್ಣುಗಳು. ಇವರು ಕುಡಿದಿರಬಹುದೇ, ಅರ್ಧದಲ್ಲಿ ವಾಲಿ ಗಾಡಿಯಿಂದ ಬಿದ್ದಾರ, ಸ್ಪಲ್ಪ ದೂರ ಹೋದ ಮೇಲೆ ನಂಗೇ ಚೂರಿ ತೋರಿಸಿ ಲೂಟಿಯಾರ ಅಂತೆಲ್ಲ ಕೆಟ್ಟ ಕಲ್ಪನೆಗಳು. ನಾನು ಅದೇ ಜಾಗದಲ್ಲಿದ್ದಿದ್ದರೆ ರಾತ್ರಿ ಬಸ್ ತಪ್ಪಿದರೆ ಮನೆ ಸೇರೋದು ಹೇಗೆ ಎಂಬ ಸಾಮಾಜಿಕ ಕಳಕಳಿಯ ಧ್ವನಿ. ಅದನ್ನು ಸಮ್ಮಿಶ್ರ ಮಾಡುವ ಹೊತ್ತಿಗೆ ಅವರನ್ನು ಹತ್ತಿಸಬೇಕಾ ಬೇಡವಾ ಅಂತ ಸೆಕೆಂಡ್ ಗಳಲ್ಲೇ ನಿರ್ಧರಿಸಿ ಆಗಿರುತ್ತದೆ. ಕೊನೆಗೆ ಸಿಗುವ ಥ್ಯಾಂಕ್ಸಿನ ಧನ್ಯತೆಯ ಭಾರವನ್ನು ಹೊತ್ತುಕೊಂಡು....!


ಮತ್ತದೇ ಹಂಪಿನ ಹತ್ತಿನ ಬ್ಯಾರಿಕೆಡ್ ಓರೆ ಓರೆ ಇಟ್ಟು ಮೊಬೈಲಿನಲ್ಲಿ ಚಾಟ್ ಮಾಡುತ್ತಿರುವ ಪೊಲೀಸಪ್ಪ ದಪ್ಪ ಚಾರ್ಚು ಅಡ್ಡ ಹಿಡಿದು ಗಾಡಿ ನಿಲ್ಲಿಸುತ್ತಾನೆ. ಎಲ್ಲಿಂದ ಬಂದದ್ದು, ಹೆಸರೆಂತ, ಎಲ್ಲಿಗೆ ಹೋಗೋದು, ಹೆಸ್ರೇನು ಅಂತ ಬರೆದುಕೊಂಡು, ಪೋಲೆ ಅಂತ ಅಪ್ಪಣೆ ಕೊಡಿಸಿದ ಮೇಲೆ ಪ್ರಯಾಣ ಮುಂದೆ ಹೋಗುತ್ತದೆ....ತಂಪುಗಾಳಿ, ಕೆಲವೊಮ್ಮೆ ಚಳಿ, ಹನಿ ಹನಿ ಮಳೆ... ಅಲ್ಲೊಂದು ಇಲ್ಲೊಂದು ಸುರಗಿ ಹೂವಿನ ಕಂಪು, ಪಾರಿಜಾತದ ಪರಿಮಳ, ಮೀನಿನ ಲಾರಿಯಿಂದ ಸುರಿದ ನೀರಿನ ಸುಗಂಧ... ಯಾರೋ ರಸ್ತೆಯಲ್ಲೇ ಮಾಟ ಮಾಡಿ ಎಸೆದ ಕುಂಬಳ ಕಾಯಿಯ ತುಂಡು ಕೆಂಪು ನೀರಿನ ದರ್ಶನ....

ಮತ್ತೆ ಮನೆ.
ಮರುದಿನ ಮಧ್ಯಾಹ್ನ ಬರುವಾಗ ಅನ್ನಿಸುವುದಿದೆ ಇದೇ ಜನಜಂಗುಳಿಯ, ಓಡಾಟದ ರಸ್ತೆಯಲ್ಲಾ ನಿನ್ನೆ ರಾತ್ರಿ ಹೋಗಿದ್ದು ಅಂತ.
ಅದಕ್ಕೇ ಅನ್ನೋದಲ್ವ ಹಗಲಿರುಳು ವ್ಯತ್ಯಾಸ ಅಂತ!


Thursday, June 1, 2017

ಫ್ಲವರೇಟ್ ಬಿಡುವಾಗ ಅವರಿರಲೇ ಇಲ್ಲ...!!

14 ವರ್ಷಗಳ ಅಲ್ಲಿಗೆ ಸೇರುವಾಗ ಅವರೇ ಸ್ವತಹ ಸ್ವಾಗತಿಸಿ ರೀತಿ ರಿವಾಜುಗಳನ್ನು ತಿಳಿಸಿ ಬರಮಾಡಿಕೊಂಡಿದ್ದರು. ಆದರೆ ಮೊನ್ನೆ ಮೊನ್ನೆ ಆ ಮನೆ ಖಾಲಿ ಮಾಡುವಾಗ ಅವರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿತ್ತು. ಕಾರಣ, ಕಳೆದ ಜನವರಿಯಲ್ಲೇ ಅವರು ಇಹಲೋಕ ತ್ಯಜಿಸಿದ್ದರು. ಅದಕ್ಕೂ ಒಂದೂವರೆ ವರ್ಷಕ್ಕೂ ಮೊದಲೇ ಅವರು ಸಕ್ರಿಯ ಬದುಕನ್ನು ಕಳೆದುಕೊಂಡು ಹಾಸಿಗೆವಾಸಿಯಾಗಿದ್ದರು...
ಆದರೆ ಆ "ಫ್ಲವರೆಟ್' ಮನೆ, ಹಸಿರ ಆವರಣ, ಪ್ರಶಾಂತತೆ ಹಾಗೂ ಅವರ ಸಹೃದಯತೆಯನ್ನೂ ಎಂದಿಗೂ ಮರೆಯಲಾಗದು. ಬದುಕಿನ ಪ್ರಮುಖ ಘಟ್ಟದಲ್ಲಿ ವಾಸಿಸಲು ಅವಕಾಶ ಸಿಕ್ಕ ಮಂಗಳೂರು ಕದ್ರಿ ಮಲ್ಲಿಕಟ್ಟೆಯಲ್ಲಿರುವ ದಿ ಫ್ಲವರೆಟ್ ಮನೆಯನ್ನು ಮೊನ್ನೆ ಮೊನ್ನೆ ತೊರೆದು ನಿಂತಾಗ ಅನಿಸಿದ್ದು ಇದು...


THE FLOWERETnet picture

net picture

ಜುಡಿತ್ ಮೇಡಂನ ಶಿಸ್ತಿಗೆ ಉದಾಹರಣೆ, ಅವರದೇ ಹಸ್ತಾಕ್ಷರಅವರು ಮಂಗಳೂರಿನ ಮಾಜಿ ಉಪಮೇಯರ್, ಹಿರಿಯ ಸಮಾಜ ಸೇವಕಿ, ಶಿಸ್ತಿನ ಮಹಿಳೆ. ಹೆಸರು ಜುಡಿತ್ ಮಸ್ಕರೇನಸ್, ನಿವೃತ್ತ ಶಿಕ್ಷಕಿಯೂ ಹೌದು. ಅವಿವಾಹಿತರು. ಬದುಕಿನಲ್ಲಿ ಬಹಳಷ್ಟು ಮಂದಿಗೆ ಉಪಕಾರ ಮಾಡಿದವರು. ಹತ್ತಾರು ಸಂಘ ಸಂಸ್ಥೆಗಳಲ್ಲಿ ದುಡಿದವರು. ತಮ್ಮದೇ ಟ್ರಸ್ಟ್ ಗಳನ್ನು ಕಟ್ಟಿಕೊಂಡು ನೊಂದವರಿಗೆ ದನಿಯಾದವರು. ಅವರ ಮನೆಯಲ್ಲಿ ಒಟ್ಟು ಮೂರು ಮಂದಿಗೆ (ಪೇಯಿಂಗ್ ಗೆಸ್ಟ್) ಹಾಗೂ ಅವರ ಔಟ್ ಹೌಸಿನಲ್ಲಿ ಒಂದು ಕುಟುಂಬಕ್ಕೆ ಬಾಡಿಗೆಗೆ ಕೊಠಡಿಗಳನ್ನು ನೀಡಿದ್ದರು.

2002ರಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಸೇರಿದ ನಾನು ಅಪರಾತ್ರಿ ಕೆಲಸ ಮುಗಿಸಿ 25 ಕಿ.ಮೀ.ದೂರದ ಮನೆಗೆ ಹೋಗುವುದು ಸುರಕ್ಷಿತವಲ್ಲ (ಜೊತೆಗೆ ವಾಹನವೂ ಇರಲಿಲ್ಲ) ಎಂಬ ಕಾರಣಕ್ಕೆ ಬಂಧುವೊಬ್ಬರ ಶಿಫಾರಿಸಿನಂತೆ ಅವರ ಮನೆಯ ಕೊಠಡಿಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಸೇರಿದೆ. ನನ್ನಂತೆ ಇತರ ಇಬ್ಬರೂ ಅದೇ ಮನೆಯಲ್ಲಿದ್ದರು. ಜೊತೆಗೆ ಜುಡಿತ್ ಮೇಂನ ಆಪ್ತ ಸಹಾಯಕಿ ಶ್ಯಾಮಲಾ ಮೇಡಂ ಅವರ ಅಡುಗೆಯವರು ಹಾಗೂ ಇನ್ನೊಬ್ಬ ಅಜ್ಜಿ ಬ್ರಿಜಿತ್.
ಅಂದು ಸೇರಿದ ಮನೆಯ ನಂಟು ಇಂದಿನವರೆಗೆ 2017 ಮೇ 31ರ ತನಕ ಸತತವಾಗಿ ಮುಂದುವರಿಯಿತು.
ಮೊದ ಮೊದಲು ಮೂರು ನಾಲ್ಕು ದಿನಕ್ಕೊಮ್ಮೆ ಮನೆಗೆ ಹೋಗುತ್ತಿದ್ದವರು, ಬಳಿಕ ಬೈಕ್ ಖರೀದಿಸಿದ ಬಳಿಕ ಪ್ರತಿದಿನ ರಾತ್ರಿ ರೂಮಿನಲ್ಲಿ ಉಳಿದುಕೊಂಡು ಬೆಳಗ್ಗೆದ್ದು ಮನೆಗೆ ಹೋಗಿ, ಮಧ್ಯಾಹ್ನ ಮತ್ತೆ ಕೆಲಸಕ್ಕೆ ಬರುತ್ತಿದ್ದೆ. ಇದು ಸುಮಾರು 13 ವರ್ಷಗಳಿಂದ ಅದೇ ಥರ ಮುಂದುವರಿದು ಬಂದಿತ್ತು.

2015 ಆಗಸ್ಟಿನಲ್ಲಿ, ಆರೋಗ್ಯವಂತರಾಗಿದ್ದ ಮೇಡಂ ಒಂದು ರಾತ್ರಿ ಇದ್ದಕ್ಕಿದ್ದಂತೆ ಮನೆಯೊಳಗೆ ಓಡಾಡುತ್ತಿದ್ದವರು ಕುಸಿದು ಬಿದ್ದರು. ಅವರ ಸಮಸ್ಯೆಗೆ ಪಕ್ಷವಾತ ಎಂಬ ಹೆಸರು ಬಂತು. ಅಂದು ಹಾಸಿಗೆ ಹಿಡಿದವರು ತುಸು ಚೇತರಿಸಿದರಾದರೂ ಮತ್ತೆ ಸಶಕ್ತರಾಗಿ ಎದ್ದೇಳಲಿಲ್ಲ... ಹಾಗೂ ಹೀಗು ದಿನ ದೂಡುತ್ತಾ ಬಂದು 2017 ಜನವರಿಯಲ್ಲಿ ನಿಧನರಾದರು.
ಅವರಿಚ್ಚೆಯಂತೆ ಅವರ ಕಾಲಾ ನಂತರ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳು ಅದೇ ಕಟ್ಟಡದಲ್ಲಿ ಮುಂದುವರಿಯಲಿರುವುದರಿಂದ ಆ ಮನೆಯನ್ನು ಬಿಡಬೇಕಾಗಿದ್ದು ಅನಿವಾರ್ಯವಾಯಿತು.

ಧರ್ಮಗಳ ಸಂಘರ್ಷ, ಸಂದೇಹದ ನಡುವೆ ಬದುಕುತ್ತಿರುವ ಈ ದಿನಗಳಲ್ಲಿ ಅನ್ಯಧರ್ಮವರೊಂದಿಗೆ ಎಷ್ಟು ಸಹಿಷ್ಣುವಾಗಿ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು ಜುಡಿತ್ ಅವರು. ಎಂದಿಗೂ ತಮ್ಮ ಧರ್ಮದ ಬಗ್ಗೆ ಯಾವತ್ತೂ ಒಂದೇ ಒಂದು ಉದಾಹರಣೆ ಕೊಟ್ಟಿಲ್ಲ, ಕರೆದು ಏನನ್ನೂ ಹೇಳಿಲ್ಲ, ಬೋಧನೆ ಮಾಡಿಲ್ಲ. ಹಾಗೆ ನೋಡಿದರೆ ನಮ್ಮ ಅಷ್ಟಮಿ, ಚೌತಿ ಹಬ್ಬಗಳನ್ನು ಅಡುಗೆಯವರಿಗೆ ಹೇಳಿ ಕಡುಬು, ಪಾಯಸ ಮಾಡಿಸಿ ಬಡಿಸುತ್ತಿದ್ದರು. ಹುಟ್ಟಿನ ದಿನಗಳಂದು ಮರೆಯದೆ ವಿಶ್ ಮಾಡುತ್ತಿದ್ದರು. ಯಾವತ್ತೋ ಯಾವುದೋ ಕಾರಮಕ್ಕೆ ಬಡಿಸಿದ ಊಟದಲ್ಲಿ ಏನನ್ನೋ ಉಣ್ಣದಿದ್ದರೆ ಮರುದಿನ ಕರೆದು ಕೇಳುತ್ತಿದ್ದರು ಮಿಸ್ಟರ್ ಕೃಷ್ಣಮೋಹನ್ ನೀವು ಹೆಸರು ಹಾಕಿದ ಪದಾರ್ಥ ಯಾಕೆ ತಿನ್ನಲಿಲ್ಲ, ಅದು ಜೀವಕ್ಕೆ ಒಳ್ಳೆಯದು ಅಂತ.

ಅವರು ಶಿಸ್ತಿಗೆ ಹೆಸರುವಾಸಿ. ಯಾರನ್ನೂ ಅಪಾಯಿಂಟ್ ಮೆಂಟ್ ಇಲ್ಲದೆ ಭೇಟಿಯಾಗುತ್ತಿರಲಿಲ್ಲ. ಅನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವ. ಸಮಯಕ್ಕೆ ಸರಿಯಾಗಿ ಹೊರಡೋದು ಕಾರ್ಯಕ್ರಮಗಳಿಗೆ, ಸಾಕಷ್ಟು ಪೂರ್ವತಯಾರಿ ಮಾಡಿ ಹೋಗೋ ಸ್ವಭಾವ. ಯಾವತ್ತೂ ತಮ್ಮ ಬಾಡಿಗೆದಾರರನ್ನು ಹಿಯಾಳಿಸಿ, ನಿಂದಿಸಿ ಮಾತನಾಡಿಲ್ಲ, ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದವರಲ್ಲ. ಅಸಲಿಗೆ ಅಡ್ವಾನ್ಸನ್ನೇ ತೆಗೆದುಕೊಂಡಿರಲಿಲ್ಲ. ನಾನು ಸೇರುವಾಗ ಆ ರೂಮಿಗೆ ಕೊಡ್ತಾ ಇದ್ದದ್ದು ಕೇವಲ 350 ರು. ನಾನು 14 ವರ್ಷಗಳ ಬಳಿಕ ಬಿಡುವಾಗ ಇದ್ದ ಬಾಡಿಗೆ 550 ರು. ಮಾತ್ರ. ಅವರ ಪಾಲಿಗೆ ಅದೊಂದು ವ್ಯವಹಾರ ಆಗಿರಲಿಲ್ಲ. ಮಾನವೀಯ ದೃಷ್ಟಿಯೂ ಇತ್ತು.
ಅವರು ಸ್ವತ ತಮ್ಮ ಧರ್ಮದವರೆಂಬ ಪಕ್ಷಪಾತಿಯೂ ಆಗಿರಲಿಲ್ಲ. ಒಂದು ನಿರ್ದಿಷ್ಟ ಪಂಡಗದ ಬಾಡಿಗೆದಾರರಿಗೆ ಮಾತ್ರ ಕೊಠಡಿ ನೀಡುವುದೆಂಬ ಸ್ವಯಂ ಶಿಸ್ತು ಅವರೇ ಹಾಕಿಕೊಂಡಿದ್ದರು, ಕಾರಣ ಗೊತ್ತಿಲ್ಲ. ಇನ್ಯಾರೂ ಬಂದರೂ ಕೊಠಡಿ ಕೊಡುತ್ತಿರಲಿಲ್ಲ. ಅವರ ಧರ್ಮದವರು ಬಂದರೂ ಆಷ್ಟೇ. ಯಾವ ಶಿಫಾರಸಿಗೂ ಬಗ್ಗುತ್ತಿರಲಿಲ್ಲ. ಇದೆಲ್ಲ ಉತ್ಪ್ರೇಕ್ಷೆಯಲ್ಲ... ಕಂಡದ್ದು.

ಪ್ರತಿದಿನ ಬೆಳಗ್ಗೆದ್ದು ಚರ್ಚಿಗೋ ಹೋಗೋರು. ದೇವರ ಬಗ್ಗೆ ಅಪಾರ ನಂಬಿಕೆ. ದಿನಪೂರ್ತಿ ಬ್ಯುಸಿ ಇರ್ತಾ ಇದ್ರು. ಅಚ್ಚುಕಟ್ಟಾಗ ಸೀರೆ ಧರಿಸಿ ಹೊರಡೋರು. ಬಡವರಿಗೆ ಉಚಿತವಾಗಿ ಕೆಲಸ ಕೊಡಿಸುವ ಸೇವೆ ಮಾಡುತ್ತಿದ್ದರು. ಕುಷ್ಠ ರೋಗಿಗಳಿಗೆ ಆಶ್ರಯ ನೀಡುವ ಆಶ್ರಮ ನಡೆಸುತ್ತಿದ್ದರು. ಬಡಬಗ್ಗರಿಗೆ ಬಟ್ಟೆ ನೀಡುವುದು ಮತ್ತಿತರ ಹತ್ತಾರು ಜನಪರ ಕಾರ್ಯಗಳು ಅವರ ಮೂಲಕ ನಡೆಯುತ್ತಿತ್ತು. ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಸದಾ ಮುಂದು. ಜೆಡಿಎಸ್ ಅಭ್ಯರ್ಥಿಯಾಗಿ ಮಂಗಳೂರು ಮಹಾನಗರ ಪಾಲಿಗೆಯ ಉಪ ಮೇಯರ್ ಆಗಿದ್ದರು. ಆದರೆ ಕೊನೆಯ ವರೆಗೂ ಸ್ವಂತ ವಾಹನ ಇರಿಸದೆ ಜನಸಾಮಾನ್ಯರ ಹಾಗೆ ನಗರದೆಲ್ಲೆಡೆ ಆಟೋದಲ್ಲೋ ನಡೆದುಕೊಂಡು ಓಡಾಡುತ್ತಲೋ ಗಮನ ಸೆಳೆಯುತ್ತಿದ್ದರು.

ಸಮಯ ಪಾಲನೆ ತಪ್ಪಿದರೆ ಸಹಿಸುತ್ತಿರಲಿಲ್ಲ. ಅಶಿಸ್ತು ಕಂಡರೆ ಆಗುತ್ತಿರಲಿಲ್ಲ. ಎಲ್ಲವೂ ಸಮಯಕ್ಕೆ ಸರಿಯಾಗಿ ಆಗಬೇಕು. ಅವರೂ ಅಷ್ಟೇ ಹಳಿದ್ದಕ್ಕಿಂತ ಐದು ನಿಮಿಷ ಮುಂಚಿತವಾಗಿ ತಯಾರಾದಾರೇ ವಿನಹ ವಿಳಂಬ ಮಾಡಿದವರಲ್ಲ.

ಆ ಮನೆಯ ಪುಟ್ಟ ಕೊಠಡಿಯಲ್ಲಿ ಕಳೆದ ಈ ಸುದೀರ್ಘ ಅವಧಿ ಬದುಕಿನ ಅಮೂಲ್ಯ ದಿನಗಳೂ ಹೌದು. ವೃತ್ತಿ ಬದುಕಿಗೆ ಕಾಲಿಟ್ಟ ಆರಂಭದ ತಿಂಗುಗಳಿಂದ ಇಂದಿನ ವರೆಗೆ. ಮೊದಲು ಕೊಠಡಿಯಿಂದ ನಡೆದುಕೊಂಡು ಹೋಗುವಷ್ಟು ದೂರವಿದ್ದ ಕಚೇರಿ ನಂತರ ದೂರಕ್ಕೆ ಸ್ಥಳಾಂತರವಾದಾಗ ವಾಹನ ಕೊಳ್ಳುವುದು ಅನಿವಾರ್ಯವಾಯಿತು. ಆ ದಿನಗಳಲ್ಲಿ ರಾತ್ರಿ 8 ಗಂಟೆಯ ವೇಳೆಗೆ ಊಟದ ವಿರಾಮದ ಸಂದರ್ಭ ರೂಮಿಗೆ ಬಂದಾಗ ಊಟ ಮಾಡುತ್ತಾ ಮೆಚ್ಚಿನ ಆಕಾಶವಾಣಿಯಲ್ಲಿ ಯುವವಾಮಿ ಕೇಳುತ್ತಿದ್ದ ನೆನಪು ಮರೆಯಲು ಸಾಧ್ಯವಿಲ್ಲ. ಮೊದಲಿಗೆ ಬೈಕ್ ಕೊಂಡಿದ್ದು, ಮೊಬೈಲ್ ಕೊಂಡಿದ್ದು, ಹುಟ್ಟಿದದಿನಕ್ಕೆ ಶುಭಾಶಯ ಪತ್ರಗಳು ಬರ್ತಾ ಇದ್ದದ್ದು, ವಿದೇಶದಲ್ಲಿದ್ದ ಗೆಳೆಯ ಫಾರೂಕ್ ನಿರಂತರವಾಗಿ ಕಳುಹಿಸ್ತಾ ಇದ್ದ ಸುದೀರ್ಘ ಪತ್ರಗಳನ್ನು ಓದ್ತಾ ಇದ್ದದ್ದು, ಅನೇಕ ಲೇಖನಗಳನ್ನು, ರೇಡಿಯೋಗೆ ಕೊಡುವ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿದ್ದು ಎಲ್ಲ ಅಲ್ಲಿಯೇ...
ಸ್ನೇಹಿತರನ್ನು ಗಳಿಸಿದ್ದು, ಕಳೆದುಕೊಂಡದ್ದು, ಬೆಳೆದದ್ದು, ಬರೆದದ್ದು, ಓದಿದ್ದು, ಆಡಿದ್ದು... ಎಲ್ಲ ಬೆಳೆಯುತ್ತಾ ಬೆಳೆಯುತ್ತಾ ಅಲ್ಲಿಯೇ...


 ಹಾಗಾಗಿ ಅದು ಬದುಕಿನ ಹಲವು ಅನುಭವಗಳಿಗೆ ಸಾಕ್ಷಿಯಾದ ಕೊಠಡಿ. ಪಾರಂಪರಿಕ ಕಟ್ಟಡದ ಹಾಗಿರುವ ಭವ್ಯ ಸೌಧ. ನನ್ನ ಪಾಲಿಗೆ ಸೌಧ ಮಾತ್ರವಲ್ಲ. ಒಂದು ಗಟ್ಟಿಯಾದ ನೆನಪು... ಶುಭ್ರವದನದ ಜುಡಿತ್ ಮೇಡಂನ ಹಾಗೆ... ಇನ್ನೆಂದೂ ಸಿಗಲಾಗದ ಅಪರೂಪದ ಅನುಭವ ಶಾಲೆ.