ಕಷ್ಟಕ್ಕೂ ನಿಮ್ಮನ್ನು ಕಾಡುವುದು ಕಷ್ಟವಾಗಲಿ!

ದೊಡ್ಡದೊಂದು ಗಾಳಿ, ಮಳೆ ಬಂದು ಪ್ರವಾಹ ಆವರಿಸಿದಾಗ ಅನಿಸುತ್ತದೆ, ಬದುಕು ಇಲ್ಲಿಗೇ ಮುಗಿದು ಹೋಯಿತೇನೋ ಅಂತ. ಆದರೆ, ಮರುದಿನ ಮಳೆ ತಗ್ಗಿ, ನೆರೆ ಇಳಿದು, ಸೂರ್ಯ ಪುನಃ ನಕ್ಕಾಗ, ಒಂದು ನಿರಾಳತೆ ಮೂಡುತ್ತದೆ. ಇದುವೇ ಬದುಕಿನ ವೈಚಾರಿಕ ಸತ್ಯ. ಕಷ್ಟ ಎದುರಿಸುವ ಸ್ಥಿತಿಪ್ರಜ್ಞತೆ ಹಾಗೂ ಕಷ್ಟವನ್ನು ಎದುರಿಸಿ, ದಾಟಿಬರುವಂಥ ಆಶಾವಾದ. ಇವೆರಡರ ಸಂತುಲಿತ ಧ್ಯಾನಸ್ಥ ಸ್ಥಿತಿಪ್ರಜ್ಞತೆಯೇ ನಾವು ಆ ಪ್ರವಾಹದಲ್ಲಿ ಮುಳುಗದಂತೆ ಕಾಪಾಡುವುದು!
----------------------
ಬರಬೇಕಾದ ಕಾಲದಲ್ಲಿ ಮಳೆ ಸುರಿಯದಿದ್ದಾಗ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಅಯ್ಯೋ ಮಳೆ ಬರಲಿಲ್ಲ, ಕುಡಿಯಲು ನೀರಿಲ್ಲ, ಜನ ಸಾಯುತ್ತಿದ್ದಾರೆ, ಕೆರೆ ಕೊಳ್ಳಗಳು ಬತ್ತಿಹೋಗಿವೆ, ಭೂತಾಯಿಯ ಹಸಿರು ಸೆರಗಿಗೆ ಬೆಂಕಿ ಬಿದ್ದ ಹಾಗಿದೆ ಅಂತ... ಒಂದೊಮ್ಮೆ ಮಳೆ ಬಂದಾಗ ಸುದ್ದಿಗಳು ಹೇಗಿರುತ್ತವೇ ನೋಡಿ: ದಿಢೀರ್ ಮಳೆಗೆ ಜನತೆ ಕಂಗಾಲು, ಜನಜೀವನ ಅಸ್ತವ್ಯಸ್ತ, ಜಲಪ್ರವಾಹ, ಜಲಪ್ರಳಯ... ಹೀಗೆಲ್ಲ!
ದೊಡ್ಡದೊಂದು ನಿರೀಕ್ಷೆ, ಅದಕ್ಕೊಂದು ಫಲಿತಾಂಶ, ಏರುಪೇರಾದರೆ ಕಾಡುವ ನಿರಾಸೆ, ಹಿನ್ನಡೆ ಹಾಗೂ ಹಿನ್ನಡೆಯನ್ನು ಎದುರಿಸುವ ಮನಸ್ಥಿತಿ ಇವಿಷ್ಟರ ನಡುವೆ ದೃಢವಾದ ಒಂದು ಸಮಚಿತ್ತತೆ ಕಾಪಾಡದಿದ್ದರೆ ಬದುಕಿನಲ್ಲಿ ಏಕಾಗ್ರತೆಯಾಗಲೀ, ಮನಶಾಂತಿಯಾಗಲಿ ಲಭಿಸದು.


ನಿರೀಕ್ಷೆಗಳೇ ನಿರಾಸೆಗಳಿಗೆ ದೊಡ್ಡದೊಂದು ಕಾರಣ ಹೌದು. ಹಾಗಂತ ನಿರೀಕ್ಷೆಗಳಿಲ್ಲದೆ ಬದುಕಿನಲ್ಲಿ ಆಶಾವಾದ ರೂಢಿಸಲು ಸಾಧ್ಯವಿಲ್ಲ. ಅತಿಯಾದ ನಿರೀಕ್ಷೆಗಳಿಗೆ ಕಡಿವಾಣ ಹಾಕದಿದ್ದರೆ ಸ್ಥಿತಿಪ್ರಜ್ಞತೆ ಹೊಂದಲೂ ಸಾಧ್ಯವಿಲ್ಲ. ಆಶಾವಾದ ಹಾಗೂ ಸ್ಥಿತಪ್ರಜ್ಞತೆ ಎರಡರ ನಡುವಿನ ಎಲ್‌ಒಸಿ (ಲೈನ್ ಆಫ್ ಕಂಟ್ರೋಲ್) ನಮ್ಮ ಹಿಡಿತದಲ್ಲಿರಬೇಕು. ಅದು ಬೋಧಿಸುವಂಥದ್ದೋ, ಓದಿ ತಿಳಿಯುವಂಥದ್ದೋ ಅಲ್ಲ, ಪರಿಸ್ಥಿತಿಗಳೇ ಕಲಿಸುವ ಪಾಠ! ಅದರ ಅರಿವು ಬೇಕು ಅಷ್ಟೇ.
ಅನಾರೋಗ್ಯ ಕಾಡಿದೆ, ವೈದ್ಯರು ನಿಮ್ಮ ಪರೀಕ್ಷೆ ಮಾಡಿದ್ದಾರೆ, ಆದರೆ ಫಲಿತಾಂಶ ಬಾರಲು ಒಂದು ವಾರ ಬೇಕೆಂದು ಹೇಳಿದ್ದಾರೆ ಎಂದಿಟ್ಟುಕೊಳ್ಳಿ. ಆ ಒಂದು ವಾರದಲ್ಲಿ ನಿಮ್ಮನ್ನು ಕಾಡುವ ಸಮಸ್ಯೆ ಬಹಿರಂಗವಾಗುವ ತನಕ ವೈದ್ಯರ ವರದಿ ಬರುವವರೆಗಿನ ತೊಳಲಾಟ, ಏನೇನೋ ಕೆಟ್ಟ ಕಲ್ಪನೆಗಳು, ಅಧೀರತೆಯ ಭಾವ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡೀತು. ಫಲಿತಾಂಶ ಪಾಸಿಟಿವ್ ಇರಬಹುದು, ಋಣಾತ್ಮಕವಾಗಿಯೂ ಇರಬಹುದು. ಆದರೆ ಋಣಾತ್ಮಕವಾಗಿಯೇ ಬಂದರೆ ಎಂಬ ಆತಂಕ... ನಾನು ಸೋಲಿನ ಹೊಂಡಕ್ಕೆ ಬೀಳುತ್ತೇನೆಯೇ? ಮತ್ತೆ ಮೇಲೇಳಲಾರದಷ್ಟು ಕುಸಿಯಬಹುದೇ ಎಂಬ ಖಿನ್ನತೆ ಕಾಡಬಹುದು. ಬದುಕು ಪೂರ್ತಿ ಕಷ್ಟಗಳೇ ಕಾಡುತ್ತಿವೆಯೇ? ಎಂಬ ಭೂವಶೂನ್ಯತೆ ಆವರಿಸಬಹುದು.


ಆಶಾವಾದ ಇರಲಿ: ಇಂದು ಕಾಡಿರುವ ಕಷ್ಟ, ನೋವು, ವೇದನೆಯೂ ಶಾಶ್ವತವಾಗಿರಬೇಕಾಗಿಲ್ಲ. ಅದಕ್ಕೊಂದು ಪರಿಹಾರ ಸಿಕ್ಕಿದ ಬಳಿಕ, ಅದು ಶಮನವಾದ ಬಳಿಕ ಬದುಕು ಮರಳಿ ಹಳಿಗೆ ಬರುತ್ತದೆ ಎಂಬ ಆಶಾವಾದ ಬೇಕು. ಆ ಆಶಾವಾದದ ಬೆಳಕಿನಲ್ಲಿ ಇಂದಿನ ಅಸಹಾಯಕತೆಯನ್ನು ಎದುರಿಸಲು ಸಾಧ್ಯವಾಗುವುದು. ಆಶಾವಾದವೆಂದರೆ ನಾನು ಪರಮ ಸುಖಿ, ಕಷ್ಟವೇ ಬರುವುದಿಲ್ಲ ಎಂಬ ಹುಚ್ಚು ಧೈರ್ಯವಲ್ಲ. ಅದೊಂದು ಜೀವನಮುಖಿ ಪ್ರಜ್ಞೆ ಅಷ್ಟೆ. ಮಳೆ ಬರಲಿ ದೇವರೆ, ಇಂದು ಬರ ಕಾಡುತ್ತಿದೆ ಎಂದು ದೇವರನ್ನು ಪ್ರಾರ್ಥಿಸುವಾಗಲೂ ಅಷ್ಟೆ. ನಾಳೆ ಮಳೆ ಬಂದಾಗ ಅದರೊಂದಿಗೆ ಆಗಬಹುದಾದ ಪರಿಣಾಮಗಳ ಪ್ರಜ್ಞೆ (ನೆರೆ, ಪ್ರವಾಹ, ಗುಡುಗು, ಸಿಡಿಲು) ಕೂಡಾ ಇದ್ದರಷ್ಟೇ ಸಮಚಿತ್ತದ ಆಶಾವಾದ ಸಿಗಲು ಸಾಧ್ಯ.
ನೋವು ಕಾಡಿದಾಗ ಅದುವೇ ಶಾಶ್ವತವೆಂಬ ವೈರಾಗ್ಯ ಕಾಡುತ್ತದೆ. ಆದರೆ, ಮುಂದೊಂದು ದಿನ ಅದರಿಂದ ಹೊರಬಂದ ಮೇಲೆ ನಿಮಜಿ ನಿಮ್ಮ ತೊಳಲಾಟ ಕ್ಷುಲ್ಲಕ ಅಂಥ ಅನಿಸಬಹುದು. 


ಸರಳವಾಗಿ ಹೇಳಬೇಕೆಂದರೆ ಬದುಕಿನಲ್ಲಿ ಯಾವುದೇ ಕ್ಷಣದಲ್ಲೂ ಸೋಲು ಕಾಡಬಹುದು, ಹಿನ್ನಡೆ ಬರಬಹುದು, ಇಂತಿಂತಹ ಸತ್ವಪರೀಕ್ಷೆಗಳು ನನ್ನನ್ನು ಕಾಡಬಹುದು ಎಂಬ ಮಾನಸಿಕ ಸಿದ್ಧತೆ, ಅದಕ್ಕೆ ಬೇಕಾದ ಧೈರ್ಯವನನ್ನು ರೂಢಿಸಿಕೊಂಡಿದ್ದರಷ್ಟೇ ಹೇಳದೆ ಕೇಳದೆ ಬರುವ ಕಷ್ಟಗಳನ್ನೂ ದಾಟಿ ಬರಲು ಸುಲಭ. ಕಷ್ಟ ಬರಬಹುದು ಎಂದುಕೊಳ್ಳವುದು ನೆಗೆಟಿವ್ ಚಿಂತನೆ ಖಂಡಿತಾ ಅಲ್ಲ. ಅದು ವಾಸ್ತವಿಕ ಪ್ರಜ್ಞೆ ಅಷ್ಟೆ.
---------------

-ಕಷ್ಟಗಳು ಬಂದಾಗ ಎದುರಿಸುವುದು ಅನಿವಾರ್ಯ. ಎಷ್ಟೋ ಬಾರಿ ಸಮಸ್ಯೆಯನ್ನು ಏಕಾಏಕಿ ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರುವುದಿಲ್ಲ. ಅದಕ್ಕೆ ಸಮಸ್ಯೆಗಿಂತಲೂ, ‘ಸಮಸ್ಯೆ ನನ್ನನ್ನು ಆವರಿಸಿದೆ’ ಎಂಬ ನೋವು ಹೆಚ್ಚು ಕಾಡುತ್ತದೆ. ಅಗಲುವುದು, ಬೇರ್ಪಡುವುದು, ಬದಲಾಗುವುದು ಬದುಕಿನ ಅನಿವಾರ್ಯ ಸತ್ಯಗಳು. ನಮಗೆ ಒಪ್ಪಿಗೆ ಇದ್ದರೂ, ಇಲ್ಲದಿದ್ದರೂ ಅವು ಸಂಭವಿಸಿಯೇ ಸಂಭವಿಸುತ್ತವೆ. ಅವನ್ನು ಎದುರಿಸುವ ಮನಸ್ಥೈರ್ಯ ರೂಢಿಸಿದರಷ್ಟೇ ಅಂತಹ ಸತ್ವಪರೀಕ್ಷೆಗಳನ್ನು ದಾಟಿಬರಬಹುದು. ಸಮಸ್ಯೆ, ನೋವೊಂದು ಕಾಡಿದಾಗ ಅದನ್ನು ಎದುರಿಸಬೇಕಾದರೆ ಮನಸ್ಸನ್ನು ರೂಢಿಸಿಕೊಳ್ಳಬೇಕು. ಅದರ ಪರಿಣಾಮಗಳಲ್ಲಿರುವ ಸಾಧ್ಯತೆಗಳನ್ನು ಮೊದಲೇ ಊಹಿಸಿ ಮಾನಸಿಕವಾಗಿ ಸಿದ್ಧರಾಗಿರಬೇಕು. ಉದಾಹರಣೆಗೆ: ಪರೀಕ್ಷೆಯಲ್ಲಿ ಫೇಲಾಗುತ್ತೀರಿ ಅಂದುಕೊಳ್ಳಿ. ಹೌದು, ತುಂಬಾ ನೋವು ತರುವ ವಿಚಾರ. ಆದರೆ ಅದರಿಂದ ಹೊರಬರುವುದು ಹೇಗೆ? ಪರಿಣಾಮಗಳ ಸಾಧ್ಯತೆ ಬಗ್ಗೆ ಯೋಚಿಸಿ... ನನ್ನ ಥರ ಪ್ರಪಂಚದಲ್ಲಿ ಎಷ್ಟು ಮಂದಿ ಫೇಲಾಗಿದ್ದಾರೆ? ಅವರೆಲ್ಲಾ ಏನು ಮಾಡುತ್ತಿದ್ದಾರೆ? ಪೂರಕ ಪರೀಕ್ಷೆ ಬರೆಯುವುದು ಹೇಗೆ, ಅಲ್ಲಿಯತನಕ ಹೇಗೆ ಸಮಯದ ಸದ್ಬಳಕೆ ಮಾಡಬಹುದು? ನಾನು ಯಾವ ಕಾರಣಕ್ಕೆ ಫೇಲಾದೆ? ಹೀಗೆ, ಸಮಸ್ಯೆಯನ್ನು ಬಿಡಿಸಿ, ಬಿಡಿಸಿ ವಿಶ್ಲೇಷಿಸಿದರೆ ಅರ್ಧ ಹಗುರವಾದ ಭಾವ ಸಿಗುತ್ತದೆ.
- ವಾಸ್ತವವನ್ನು ಒಪ್ಪಿಕೊಳ್ಳಿ. ಹೌದು ನಾನು ಫೇಲಾದೆ ಎಂಬುದು ವಾಸ್ತವ. ಅದನ್ನು ನಿರ್ವಂಚನೆಯಿಂದ ಒಪ್ಪಿಕೊಳ್ಳಿ. ನಂತರ ಹೊರಬರುವ ದಾರಿ ಯೋಚಿಸಿ.
- ಬದುಕಿನಲ್ಲಿ ಈ ಹಿಂದೆ ಬಂದ ಕಷ್ಟಗಳು, ಅವುಗಳನ್ನು ನೀವು ದಾಟಿ ಬಂದ ವಿಧಾನಗಳು, ಆಗ ನೀವು ತೋರಿಸಿದ ಧೈರ್ಯವನ್ನು ಒಂದೊಂದಾಗಿ ಮೆಲುಕು ಹಾಕಿ. ಎಷ್ಟೋ ಬಾರಿ ಆ ಕಷ್ಟಕ್ಕಿಂತ ಈಗ ಬಂದಿರುವ ಕಷ್ಟವೇನೋ ದೊಡ್ಡದಲ್ಲ ಅನ್ನಿಸಬಹುದು. ನಿಮಗಿಂತ ಕಷ್ಟ ಅನುಭವಿಸುತ್ತಿರುವವರೊಂದಿಗೆ ಹೋಲಿಸಿ ನೋಡಿ, ಆಗ ತಿಳಿಯುತ್ತದೆ ನಾವು ಎಷ್ಟೋ ಬಗೆಹರಿಯಬಲ್ಲ ಕಷ್ಟದ ನಡುವೆ ಇದ್ದೇವೆ ಎಂದು. ಇಷ್ಟೆಲ್ಲಾ ಚಿಂತನ ಮಂಥನ ಮಾಡಿದಾಗ ಮನಸ್ಸಿನಲ್ಲೊಂದು ನಿರಾಳತೆ ಹುಟ್ಟಿಕೊಂಡರೆ ಆ ಧೈರ್ಯವೇ ನಿಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸುತ್ತದೆ.
-ಕೃಷ್ಣಮೋಹನ ತಲೆಂಗಳ.

1 comment:

Unknown said...

ಕಷ್ಟಕ್ಕೂ ನಿಮ್ಮನ್ನು ಕಾಡುವುದು ಕಷ್ಟವಾಗಲಿ ಎಂಬ ನುಡಿ ತುಂಬ ಆಪ್ತವಾಗಿದೆ..ಚಂದದ ಲೇಖನ