ಮಧ್ಯರಾತ್ರಿಯ ಪಯಣ..ಗಾಡಿಯೂ... ನಾನೂ!



ರಾತ್ರಿ 11 ಎಂದರೆ ಹಾಗೊಂದು ಮಧ್ಯರಾತ್ರಿಯೇನೂ ಅಲ್ಲ. ಆದರೆ ತುಂಬಾ ಚಟುವಟಿಕೆಯೂ ಇರೋದಿಲ್ಲ. ಕರಂಗಲ್ಪಾಡಿಯಿಂದ ಪಂಪ್ ವೆಲ್ ತನಕವೂ ಬಸ್ ನಿಲ್ದಾಣಗಳಲ್ಲಿ ದಪ್ಪ ಬ್ಯಾಗ್ ನಿಂತು ಬಲಬದಿಗೆ ನೋಡ್ತಾ ಇರೋರೆಲ್ಲಾ ಬೆಂಗಳೂರು ಬಸ್ಸಿಗೆ ಕಾಯುವವರು. ರಾತ್ರಿ 11.30, 12ರ ವರೆಗೂ ಸ್ಲೀಪರ್ ಗಳು, ಲಕ್ಸುರಿ ಬಸ್ಸುಗಳು ಸದ್ದಿಲ್ಲದೆ ನಮ್ಮನ್ನು ಹಿಂದಿಕ್ಕಿ ಯಮವೇಗದಲ್ಲಿ ಬರ್ತಾನೇ ಇರ್ತವೆ. ಇಷ್ಟೊಂದು ಬಸ್ಸುಗಳು ಹಗಲು ಎಲ್ಲಿ ನಿದ್ರೆ ಮಾಡ್ತವೆ ಎಂಬುದೇ ಆಶ್ಚರ್ಯ. ಅದ್ರಲ್ಲೂ ವೋಲ್ವೋ ಬಂದರೆ ಅದಕ್ಕೆ ಮುಂದೆ ಶಬ್ದವೇ ಇಲ್ಲ, ನಮ್ಮನ್ನು ಅರ್ಧದಷ್ಟು ದಾಟುವವರೆಗೆ ಹಾಗೊಂದು ಗಾಡಿ ಹಿಂದೆ ಇದೇ ಅಂತಲೇ ಗೊತ್ತೋಗೋದಿಲ್ಲ. ಸ್ಲೀಪರ್ ಬಸುಗಳಲ್ಲಿ ಮೊಬೈಲ್ ಹಿಡ್ದು ಧ್ಯಾನಸ್ಥರಂತೆ ಚಾಟ್ ಮಾಡುವವರು. ನಾಳೆ ಮುಂದಿನೂರಲ್ಲಿ ಏನಪ್ಪ ಕತೆ ಅಂತ ಚಿಂತಿಸುತ್ತಾ ಮಲಗಿರೋರು ಅರ್ಧರ್ಧ ಹೊರಗಡೆಗೂ ಕಾಣಿಸ್ತಾರೆ. ಹಗಲು ತಲೆ ಚಿಟ್ಟು ಹಿಡಿಸುವ ಟ್ರಾಫಿಕ್ಕಿನಿಂದ ನಲುಗಿ, ಬೆಂಡಾಗಿ ಕಾದ ಕೆಂಡದಂತಿರುವ ಜ್ಯೋತಿ ಸರ್ಕಲ್, ಬೆಂದೂರು ವೆಲ್, ಕಂಕನಾಡಿಗಳಲ್ಲಿ ಅಷ್ಟು ಹೊತ್ತಿಗೆ ಅಡ್ಡಡ್ಡ ಗಾಡಿ ಓಡಿಸಿದರೂ ಕೇಳುವವರಿಲ್ಲವೇನೋ ಎಂಬಂಥ ಶಾಂತತೆ. 

ಆಗಷ್ಟೇ ಮಳೆ ಬಂದು ಬಿಟ್ಟರೆ ಮುಗೀತು. ಮಧ್ಯಾಹ್ನ ಕಾಣದೇ ಇದ್ದ ಹೊಂಡಗಳೆಲ್ಲ ಜನ್ಮ ಪಡೆದು ನೀರು ತುಂಬಿ ಮೌನವಾಗಿ ಮಲಗಿರ್ತವೆ. ಅವಕ್ಕೆ ಕೊನೆ ಘಳಿಗೆಯಲ್ಲಿ ಟಯರ್ ಇಳಿಸದೆ ನಿರ್ವಾಹವಿಲ್ಲ, ಇಳಿಸಿದರೆ ಕೆಸರ ಸ್ನಾನ ಗ್ಯಾರಂಟಿ. ಚಕ್ರದಡಿಗೆ ಸಿಲುಕಿ ಬೆಂಡಾಗಿ, ನಜ್ಜುಗುಜ್ಜಾಗಿ, ಅಂಗವಿಕಲರಾಗಿ ಮಲಗಿದೆ ರಸ್ತೆ ವಿಭಾಜಗ ಕೋನ್ ಗಳೆಲ್ಲ ರಾತ್ರಿ ರಿಫ್ಲೆಕ್ಟಿಂಗ್ ಇಪೆಕ್ಟ್ ನಿಂದಾಗಿ ಸ್ಪಷ್ಟವಾಗಿ ಕಾಣುತ್ತವೆ. ರಾತ್ರಿ ಬಸ್ಸಿನಲ್ಲಿ ಯಾರಾದ್ರೂ ಗಿರಾಕಿಗಳು ಸಿಗ್ತಾರ ಅಂತ ನಿದ್ರೆ ತೂಗಿಕೊಂಡೋ ಹರಟೆ ಹೋಡ್ಕೊಂಡೇ ಜಂಕ್ಷನ್ ಗಳಲ್ಲಿ ಕಾಯುವ ಆಟೋಗಳ ಡ್ರೈವರ್ ಗಳು. ಇನ್ನೇನು ಬಾಗಿಲು ಹಾಕಿ ಹೊರಡಬೇಕೆಂದಿರೋ ಬೇಕರಿಯವರು, ಮೆಡಿಕಲ್ ಶಾಪ್ ಗಳು. ಕೊನೆ ಕ್ಷಣದ ಖರೀದಿಗೆ ಕಾರಿನಲ್ಲಿ ಬಂದು ಇಳಿಯುವ ಗಿರಾಕಿಗಳು. ರಾತ್ರಿಯೂ ಎನೋ ಕಳಕೊಂಡವರಂತೆ ಮುಖ ಮಾಡ್ಕೊಂಡು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ವೇಗವಾಗಿ ಓಡುವ ವಾಕಿಂಗ್ ಪಟುಗಳು. ಒಂದು ಖುಷಿ, ರಾತ್ರಿ ಏಕಾಏಕಿ ನಾಯಿಗಳು ಎಲ್ಲಿಂದಲೋ ಪ್ರತ್ಯಕ್ಷವಾಗಿ ರಸ್ತೆ ದಾಟುವುದಿಲ್ಲ.
ಅಂಗಡಿ ಜಗಲಿಗಳಲ್ಲಿ ಮಲಗಿ ರಾತ್ರಿ ದೂಡುವ ಅನಾಥರು, ರಾತ್ರಿ ಹೊಟೇಲಿನ ತ್ಯಾಜ್ಯವನ್ನು ಫೈಬಲ್ ಡ್ರಮ್ ಗಳಲ್ಲಿ ತುಂಬಿ ಕಸದ ಬುಟ್ಟಿ ಕಡೆಗೆ ಚೆಲ್ಲಲು ಹೋಗುವವರೆಲ್ಲಾ ರಸ್ತೆಯಲ್ಲಿ ಸಿಕ್ತಾರೆ. ಹಗಲು ಸತ್ತಂತಿದ್ದು, ರಾತ್ರಿ ವಜ್ರದಂತೆ ಹೊಳೆಯುವ ರಸ್ತೆ ಡಿವೈಡರಿನಲ್ಲಿರುವ ಬಿಲ್ಲೆಗಳು ಮಾತ್ರ ತುಂಬ ಖುಷಿ ಕೊಡ್ತವೆ. ಅಮಲಿನಲ್ಲಿದ್ದವರಿಗೆ ಬಹುಷ ರಸ್ತೆ ಎರಡೆರಡು ಕಾಣದಂತೆ ನೆನಪಿಸುವ ಮಾರ್ಗದರ್ಶಕಗಳವು ಬಹುಷ. ಆದರೆ ಅವುಗಳ ಮೇಲೆ ಚಕ್ರ ಓಡುವಾಗ ಕಟ ಕಟ ಅಂತ ಕರ್ಕಶ ಸದ್ದು, ಟಯರ್ ಪಂಕ್ಚರ್ ಆಯ್ತ ಅಂತ ಭಯ ಹುಟ್ಟಿಸುತ್ತವೆ.


ಪಂಪು ವೆಲ್ ಕಳೆದ ಮೇಲೆ ರಾಷ್ಟ್ರೀಯ ಹೆದ್ದಾರಿ ಮತ್ತೆ ಸಿಗೋದು ದೊಡ್ಡ ದೊಡ್ಡ ಟ್ಯಾಂಕರುಗಳು, ಮಿಂಚಿನ ವೇಗದಲ್ಲಿ ಹೋಗುವ ಮೀನಿನ ಲಾರಿ, ಪಿಕಪ್ ಗಳು. ಅಲ್ಲಿಯೋ ಇಲ್ಲಿಯೋ ನಿಶ್ಯಬ್ದವಾಗಿ ರಸ್ತೆ 90 ಡಿಗ್ರಿಯಲ್ಲಿ ಪಕ್ಕದಲ್ಲಿ ನಿಂತಿರುವ ಪೊಲೀಸ್ ಗಸ್ತು ವಾಹನಗಳು. ಉಪದ್ರಕ್ಕೆಂದೇ ಹಾಕಿರುವ ಬ್ಯಾರಿಕೇಡುಗಳು. ಎಷ್ಟು ವೇಗವಾಗಿ ಹೋದರೂ ಕೇಳುವವರಿಲ್ಲ. ಎದುರಿನಿಂದ ರಾಂಗ್ ಸೈಡಿನಲ್ಲಿ ಬಂದು ದಾರಿ ತಪ್ಪಿಸುವವರಿಲ್ಲ. ರಾತ್ರಿಯಿಡೀ ತೆರೆದಿರುತ್ತದೋ ಅಂತ ಸಂಶಯ ಹುಟ್ಟಿಸುವ ಒಂದೆರಡು ಹೊಟೇಲುಗಳು ಬಾಗಿಲೆ ತೆರೆದೇ ಇರ್ತವೆ. ಅವುಗಳೆದುರು ಒಂದೆರಡು ದೂರದೂರುಗಳಿಗೆ ಹೋಗುವ ಲಾರಿಗಳು. ಅಲ್ಲಿ ಢಾಬಾದ ಥರ ರೋಟಿ ದಾಲ್ ಸಿಗ್ಬಹುದಾ ಅಂತ ಆಸೆ ಆಗ್ತದೆ!


ಮತ್ತದೇ ಉದ್ದದ ನೇತ್ರಾವತಿ ಸೇತುವೆ. ನಿರ್ಜನ. ಕೆಲವೊಮ್ಮೆ ಬೀದಿದಿಪದ ಹಳದಿ ಪ್ರಕಾಶ ಸೇತುವೆಯುದ್ದಕ್ಕೂ ಮಲಗಿರ್ತದೆ. ಕೆಳಗಿಣುಕಿದರೆ, ಕಪ್ಪು ಕಪ್ಪು ನೀರು. ಅರ್ಧ ಹೊಳೆಯುವ ಚಂದ್ರ ಆಕಾಶದಲ್ಲಿ... ಬಲಗಡೆ ದೂರದಲ್ಲಿ ಸಂಕದುದ್ದಕ್ಕೂ ವ್ಯಾಪಿಸಿ ಕಂಬಳಿಹುಳದಂತೆ ಹೋಗ್ತಾ ಇರುವ ಕೇರಳದಿಂದ ಬರುವ ರೈತು. ಅದರ ಕಿಟಕಿಯಿಂದ ಬರುವ ಬೆಳಕಿನ ಸಾಲುಗಳೇ ಚುಕ್ಕಿ ಚಿತ್ರದಂತೆ ಭಾಸ. ಅಷ್ಟು ನೋಡೋ ಹೊತ್ತಿಗೆ ಒಂದೆರಡು ಮೀನಿನ ಲಾರಿಗಳು ಕೆಎಲ್ 14 ನಂಬರ್ ಪ್ಲೇಟಿನ ದೊಡ್ಡ ದೊಡ್ಡ ಕಾರುಗಳು ನನ್ನ ಗಾಡಿಯನ್ನು ಸವಲುವಂತೆ ಶರವೇಗದಲ್ಲಿ ಸಂಕದ ಆಚೆ ತುದಿ ತಲಪಿರುತ್ತವೆ. ಆಗೀಗ ಮೈಲು ದೂರದಿಂದಲೇ ಕಣ್ಣು ಕುಕ್ಕುವ ಲೈಟ್ ಹಾಕಿ ಸೈರನ್ ಮೊಳಗುತ್ತಾ ಕೇರಳ ಕಡೆಯಿಂದ ಮಂಗಳೂರಿನ ಹೈಟೆಕ್ ಆಸ್ಪತ್ರೆಗಳಿಗೆ ಧಾವಿಸುವ ಆಂಬುಲೆನ್ಸ್ ಗಳು. ಇನ್ಯಾರ ಮರಣ ಕಾದಿದೆಯೋ, ಮರಳಿ ಗುಣವಾಗಿ ಹೋಗುವ ಭಾಗ್ಯವಿರುವ ಭಾಗ್ಯಶಾಲಿಗಳಿದ್ದಾರೋ... ಅವೆಷ್ಟು ದುಖ ಅವರನ್ನು ಕಾಡುತ್ತಿದೆಯೋ ಯೋಚಿಸುತ್ತಾ ಕೂರುವ ಹಾಗಿಲ್ಲ. ನಾವು ಮುಂದೆ ಹೋಗಲೇ ಬೇಕು. ಇಡೀ ಬದುಕನ್ನೇ ಹೊದ್ದುಕೊಂಡಂತಿರುವ ಹೆದ್ದಾರಿಯ ಬಿಟ್ಟು ತೊಕ್ಕೊಟ್ಟಿನಲ್ಲಿ ಎಡಕ್ಕೆ ತಿರುಗಿ ಸಾಗಲೇ ಬೇಕು. 


ಹೆಡ್ ಲೈಟ್ ಬೆಳಕಿಗೆ ಏನೇನೋ ಆಕಾರ ಕಾಣುವ ಲೈಟುಕಂಬ, ಪೊದೆಗಳು, ಬಟ್ಟೆ ತುಂಡು, ಸಡನ್ನಾಗಿ ರಸ್ತೆಗೆ ಹಾರುವ ಕಪ್ಪೆ, ಇಲಿಗಳು... ಎಷ್ಟೊಂದು ಸಂಗಾತಿಗಳು ಸಿಗ್ತಾರೆ ರಾತ್ರಿ ಪಯಣದಲ್ಲಿ. ಪಂಪ್ ವೆಲ್ಲಿನಲ್ಲಿ, ತೊಕ್ಕೊಟ್ಟಿನಲ್ಲಿ ಹೆಡ್ ಲೈಟಿಗೆ ಅಡ್ಡಲಾಗಿ ಕೈಹಿಡಿದು ಲಿಫ್ಟು ಸಿಕ್ಕೀತ ಅಂತ ದೀನವಾಗಿ ನೋಡುವ ಕಣ್ಣುಗಳು. ಇವರು ಕುಡಿದಿರಬಹುದೇ, ಅರ್ಧದಲ್ಲಿ ವಾಲಿ ಗಾಡಿಯಿಂದ ಬಿದ್ದಾರ, ಸ್ಪಲ್ಪ ದೂರ ಹೋದ ಮೇಲೆ ನಂಗೇ ಚೂರಿ ತೋರಿಸಿ ಲೂಟಿಯಾರ ಅಂತೆಲ್ಲ ಕೆಟ್ಟ ಕಲ್ಪನೆಗಳು. ನಾನು ಅದೇ ಜಾಗದಲ್ಲಿದ್ದಿದ್ದರೆ ರಾತ್ರಿ ಬಸ್ ತಪ್ಪಿದರೆ ಮನೆ ಸೇರೋದು ಹೇಗೆ ಎಂಬ ಸಾಮಾಜಿಕ ಕಳಕಳಿಯ ಧ್ವನಿ. ಅದನ್ನು ಸಮ್ಮಿಶ್ರ ಮಾಡುವ ಹೊತ್ತಿಗೆ ಅವರನ್ನು ಹತ್ತಿಸಬೇಕಾ ಬೇಡವಾ ಅಂತ ಸೆಕೆಂಡ್ ಗಳಲ್ಲೇ ನಿರ್ಧರಿಸಿ ಆಗಿರುತ್ತದೆ. ಕೊನೆಗೆ ಸಿಗುವ ಥ್ಯಾಂಕ್ಸಿನ ಧನ್ಯತೆಯ ಭಾರವನ್ನು ಹೊತ್ತುಕೊಂಡು....!


ಮತ್ತದೇ ಹಂಪಿನ ಹತ್ತಿನ ಬ್ಯಾರಿಕೆಡ್ ಓರೆ ಓರೆ ಇಟ್ಟು ಮೊಬೈಲಿನಲ್ಲಿ ಚಾಟ್ ಮಾಡುತ್ತಿರುವ ಪೊಲೀಸಪ್ಪ ದಪ್ಪ ಚಾರ್ಚು ಅಡ್ಡ ಹಿಡಿದು ಗಾಡಿ ನಿಲ್ಲಿಸುತ್ತಾನೆ. ಎಲ್ಲಿಂದ ಬಂದದ್ದು, ಹೆಸರೆಂತ, ಎಲ್ಲಿಗೆ ಹೋಗೋದು, ಹೆಸ್ರೇನು ಅಂತ ಬರೆದುಕೊಂಡು, ಪೋಲೆ ಅಂತ ಅಪ್ಪಣೆ ಕೊಡಿಸಿದ ಮೇಲೆ ಪ್ರಯಾಣ ಮುಂದೆ ಹೋಗುತ್ತದೆ....ತಂಪುಗಾಳಿ, ಕೆಲವೊಮ್ಮೆ ಚಳಿ, ಹನಿ ಹನಿ ಮಳೆ... ಅಲ್ಲೊಂದು ಇಲ್ಲೊಂದು ಸುರಗಿ ಹೂವಿನ ಕಂಪು, ಪಾರಿಜಾತದ ಪರಿಮಳ, ಮೀನಿನ ಲಾರಿಯಿಂದ ಸುರಿದ ನೀರಿನ ಸುಗಂಧ... ಯಾರೋ ರಸ್ತೆಯಲ್ಲೇ ಮಾಟ ಮಾಡಿ ಎಸೆದ ಕುಂಬಳ ಕಾಯಿಯ ತುಂಡು ಕೆಂಪು ನೀರಿನ ದರ್ಶನ....

ಮತ್ತೆ ಮನೆ.
ಮರುದಿನ ಮಧ್ಯಾಹ್ನ ಬರುವಾಗ ಅನ್ನಿಸುವುದಿದೆ ಇದೇ ಜನಜಂಗುಳಿಯ, ಓಡಾಟದ ರಸ್ತೆಯಲ್ಲಾ ನಿನ್ನೆ ರಾತ್ರಿ ಹೋಗಿದ್ದು ಅಂತ.
ಅದಕ್ಕೇ ಅನ್ನೋದಲ್ವ ಹಗಲಿರುಳು ವ್ಯತ್ಯಾಸ ಅಂತ!


2 comments:

ಹರೀಶ ಮಾಂಬಾಡಿ said...

ರೋಚಕ ಅನುಭವ

Motukanablogspot.com said...

ಬೆಳದಿಂಗಳ ರಾತ್ರಿಯಾದರೆ ಇನ್ನೂ ಗಮ್ಮತ್ತು.