Sunday, May 31, 2015

ಢಣ ಢಣ ಢಣ ಗಂಟೆ ಬಾರಿಸಿತು... ಶಾಲೆ ನೆನಪು ಆವರಿಸಿತು...


ಮತ್ತೆ ಶೈಕ್ಷಣಿಕ ವರ್ಷ ಶುರು, ಶಾಲೆಗಳು ಬಾಗಿಲು ತೆರೆದಿವೆ. ಅಂದು ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಇಲ್ಲದ ಸೌಲಭ್ಯಗಳು ಇಂದು ಶಾಲೆಗೆ ಹೋಗುವವರಿಗೆ ಸಿಕ್ಕಿವೆ, ಮಧ್ಯಾಹ್ನ ಊಟವಿದೆ, ಹತ್ತು ಹಲವು ಯೋಜನೆಗಳಿವೆ. ಫೀಸು ಮಾತ್ರ ಜಾಸ್ತಿ. ಆದರೆ, ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯನ್ನು ಭರ್ತಿ ಮಾಡಲು ಪರದಾಡುತ್ತಾರೆ. ಯಾಕೆ ಈ ವೈರುಧ್ಯವೋ... ಅಂದಿನ ಕಾಲ ಚೆನ್ನಾಗಿತ್ತು, ಇಂದು ಹಾಳಾಗಿದೆ ಎಂಬ ಸವಕಲು ಆರೋಪವಲ್ಲ. ದಶಕಗಳಲ್ಲಿ ಶಾಲೆಗೆ ಹೋಗುವುದೆಂದರೆ ಎಷ್ಟೊಂದು ಬದಲಾವಣೆ ಅಲ್ವ ಎಂಬ ಬೆರಗು ಅಷ್ಟೆ...


ಸಾಧಾ
ಣ ಮಧ್ಯಮ ವರ್ಗದ ಮಕ್ಕಳಲ್ಲಿ ಹೆಚ್ಚಿನವರು ಅಂದು (ಸುಮಾರು ಮೂರು ದಶಕಗಳ ಹಿಂದೆ) ಶಾಲೆಗೆ ಹೋಗುವಾಗ ಚಪ್ಪಲಿಯನ್ನೇ ಹಾಕುತ್ತಿರಲಿಲ್ಲ ಎಂದರೆ ಇಂದಿನವರು ಕಟ್ಟು ಕತೆ ಅಂದಕೊಂಡಾರು. ಪ್ರತಿದಿನ ಯೂನಿಫಾರಂ ಹಾಕಬೇಕೆಂಬ ಕಟ್ಟಳೆಯೇ ಇರಲಿಲ್ಲ. ಬಹುಷಃ ಸೋಮವಾರ, ಗುರುವಾರ ಮಾತ್ರ ನೀಲಿ-ಬಿಳಿ ಹಾಕುವ ಅನಿವಾರ್ಯತೆ ಇತ್ತೆಂಬ ನೆನಪು. ಹಲವು ಮಂದಿ ಚೀಲವನ್ನೇ ತರುತ್ತಿರಲಿಲ್ಲ. ಪುಸ್ತಕಗಳ ಕಟ್ಟಿಗೆ ದಪ್ಪದ ರಬ್ಬರ್ ಬ್ಯಾಂಡ್ ಹಾಕುವ ಕ್ರಮ ಇತ್ತು. ನಾವು ಕೆಲವರು ಮಧ್ಯಾಹ್ನಕ್ಕೆ ಬುತ್ತಿ ತಂದು (ಭಾರತಿ ಶಾಲೆಯಲ್ಲಿ) ಮಳೆಯಿರಲಿ, ಬಿಸಿಲರಲಿ ಗೇರು ಮರದ ಅಡಿಯಲ್ಲಿ ಕುಳಿತು ಊಟ ಮಾಡುತ್ತಿದ್ದೆವು (ಮಿಲಿಟ್ರಿ ಮನೋಜ, ಅಜೀಜ್, ಮೂಳೂರಿನ ಗಣೇಶ ಮೊದಲಾದವರು ಸಾಥಿಗಳು). ನಂತರ ಬೋರ್ ವೆಲ್ ನಿಂದ ನೀರು ಎತ್ತಿ ರಶ್ ನಡುವೆಯೇ ಬುತ್ತಿ ತೊಳೆಯುವುದು. ಸುಮಾರು ಎರಡೂವರೆ ಕಿ.ಮೀ. ನಡೆದೇ ಶಾಲೆಗೆ ಹೋಗುತ್ತಿದ್ದುದು. ಬಸ್ಸಿನಲ್ಲಿ ಹೋಗುವ ತಾಕತ್ತಾಗಲೀ, ಹೋಗಬೇಕೆಂಬ ವಾಂಛೆಯಾಗಲೀ ಇರಲಿಲ್ಲ. ನಮ್ಮ ಶಾಲೆಯಲ್ಲಿ ಸ್ಕೂಲ್ ಬಸ್ ಮೊದಲೇ ಇರಲಿಲ್ಲ...

ನಾನಾಗಲೀ, ನನ್ನ ಸಹಪಾಠಿಗಳಲ್ಲಿ ಹೆಚ್ಚಿನವರು ಯುಕೆಜಿ, ಎಲ್‌ಕೆಜಿ ಬಿಡಿ ಅಂಗನವಾಡಿಗೂ ಹೋದವರಲ್ಲ. ಡೈರೆಕ್ಟ್ ಒಂದನೇ ಕ್ಲಾಸಿಗೆ ಸೇರಿದವರು. ಬರ್ಥ್ ಸರ್ಟಿಫಿಕೇಟ್ ಯಾರೂ ಕೇಳುತ್ತಿರಲಿಲ್ಲ. ಇಂಗ್ಲಿಷ್ ಮೀಡಿಯಂ ಶಿಕ್ಷಣ ಕಲಿಯುವುದು ತುಂಬಾ ಅನಿವಾರ್ಯ ಎಂಬ ಗುಲ್ಲು ಆಗ ಇರಲೂ ಇಲ್ಲ, ಅದರ ಫೀಸ್ ಗಗನ ಕುಸುಮವೂ ಆಗಿತ್ತು ಅನ್ನಿ. (ಈಗ ಕೆಲವೊಮ್ಮೆ ಇಂಗ್ಲಿಷ್ ಜಾಸ್ತಿ ಗೊತ್ತಿದ್ರೆ ಚೆನ್ನಾಗಿತ್ತು ಅನ್ನಿಸುವುದು ಸುಳ್ಳಲ್ಲ).... 


ಕನ್ನಡ ಮಾಧ್ಯಮದ ಶಾಲೆಗೆ ಹೋಗಿದ್ದು ಎಂಬಲ್ಲಿಗೆ ಅರ್ಧದಷ್ಟು ಈಗಿರುವ ಕಟ್ಟು ಕಟ್ಟಳೆಗಳು ಇರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಹಾಗಾಯ್ತು. ಕ್ಲಾಸ್ ಟೀಚರ್ ಅಂತ ಇರುತ್ತಿದ್ದರಾದರೂ ಯಾವ ಟೀಚರ್ ಯಾವ ಪಾಠ ಮಾಡಿದರೂ ನಡೆಯುತ್ತಿತ್ತು. ಸ್ಪೆಷಲೈಸ್ಡ್ ಪಾಠಗಳನ್ನು, ಟ್ಯೂಷನನ್ನು, ಕೋಚಿಂಗ್ ಕ್ಲಾಸುಗಳನ್ನು ನೋಡೂ ಇಲ್ಲ, ಕೇಳಲೂ ಇಲ್ಲ... ಆದರೂ ಪಾಸಾಗಿ ಮುಂದಿನ ತರಗತಿಗಳಿಗೆ ಹೋಗ್ತಾ ಇದ್ದೆವು (ಈಗಿನ ಹಾಗೆ ಎಲ್ಲರನ್ನೂ ಪಾಸು ಮಾಡಬೇಕೆಂಬ ಉದಾರತೆ ಇರಲಿಲ್ಲ, ಕಷ್ಟ ಪಟ್ಟು ಓದಿ ಪಾಸಾಗಬೇಕಿತ್ತು)...
ಶಾಲೆಗೆ ನಡೆದುಕೊಂಡು ಹೋಗುವುದೆಂದರೆ ಅದೊಂದು ಅನುಭವದ ಮೂಟೆಯೇ ಸರಿ. ತುಂಬ ಮಂದಿ ಕೈಯ್ಯಲ್ಲಿ ಮನೆಯಲ್ಲಿ ಕರೆದು ಕೊಡುವ ಹಾಲಿನ ಡಬ್ಬವನ್ನು ಹೊಟೇಲಿಗೆ ತರುತ್ತಿದ್ದರು. ಮತ್ತೊಂದು ಕೈಯ್ಯಲ್ಲಿ ಕಮಂಡಲದ ಹಾಗಿರುವ ಟಿಫಿನ್ ಬಾಕ್ಸ್...


ತುಂಬಾ ಮಂದಿಗೆ ಕ್ಲಾಸಿನಲ್ಲಿ ಬುತ್ತಿ ತರುವಷ್ಟೂ ಅನುಕೂಲ ಇರಲಿಲ್ಲ... (ವಾಸ್ತವ) ಅಂತವರು ಮಧ್ಯಾಹ್ನ ನಾಲ್ಕಾಣೆಗೆ ಸಿಗುತ್ತಿದ್ದ ಐಸ್ ಕ್ಯಾಂಡಿ ಅಥವಾ ಎಂಟಾಣೆಗೆ ಸಿಗುತ್ತಿದ್ದ ಬೆಲ್ಲ ಕ್ಯಾಂಡಿಗೆ ಶರಣಾಗುತ್ತಿದ್ದರು. ಅದರಲ್ಲೇ ಹೊಟ್ಟೆ ತುಂಬುತ್ತಿತ್ತು. ಕೃಷಿ ಕೂಲಿ ಕಾರ್ಮಿಕರ ಮನೆಯಿಂದ ಬರುವವರು ತರುತ್ತಿದ್ದುದು ಉಪ್ಪುಣ್ಚಿ (ಗಂಜಿಗೆ ಹುಣಸೆ, ಉಪ್ಪು, ಮೆಣಸು ಹಾಕಿ ತರುತ್ತಿದ್ದುದು). ಅದೇ ಮೃಷ್ಟಾನ್ನ. ನಮ್ಮೂರಲ್ಲೇ ಆಗ ಎಲ್ಲೂ ಫಾಸ್ಟ್ ಫುಡ್ ಸೆಂಟರ್ ಗಳು, ಪಪ್ಸ್ ಸಿಗೋ ಬೇಕರಿಗಳು ಇರಲಿಲ್ಲ. ಹೊಟೇಲಿಗೆ ಹೋಗಿ ವಿದ್ಯಾರ್ಥಿಗಳು ಊಟ ಮಾಡುವ ಕಲ್ಪನೆಯೇ ಇರಲಿಲ್ಲ...
ನಡೆದುಕೊಂಡು ಶಾಲೆಗೆ ಹೋಗುವಾಗ ಸಿಗುವ ಬಸ್ಸುಗಳ ಡ್ರೈವರ್ ಗಳಿಗೆ ಟಾಟಾ ಮಾಡುವುದು, ಮುಳ್ಳುಹಣ್ಣು, ಕುಂಟಾಲದ ಹಣ್ಣು ತಿನ್ನುವುದು, ಕರೆಂಟ್ ತಂತಿಯಿಂದ ಮಾಡಿದ ಗಾಡಿಯನ್ನು (ಸ್ಟೇರಿಂಗ್ ಎಲ್ಲ ಇರುತ್ತಿತ್ತು) ಡ್ರೈವ್ ಮಾಡ್ಕೊಂಡು ಹೋಗುವುದು. ಮತ್ತೆ ಕೆಲವರು ಕಬ್ಬಿಣದ ಪುಟ್ಟ ರಿಂಗ್‌ನ್ನು ಕೋಲಿನಲ್ಲಿ ಬ್ಯಾಲೆನ್ಸಿಂಗ್ ಮಾಡಿ ಓಡುತ್ತಾ ಬರುತ್ತಿದ್ದರು. ಈ ರಿಂಗನ್ನು ಶಾಲೆ ಪಕ್ಕ ಪೊದೆಯಲ್ಲಿ ಅಡಗಿಸಿಡುತ್ತಿದ್ದರು. ಸಂಜೆ ಮತ್ತೆ ಅದೇ ರಿಂಗನ್ನು ತಳ್ಳಿಕೊಂಡು ಸ್ವಿಫ್ಟ್ ಕಾರಿನಲ್ಲಿ ಹೋಗ್ತಾ ಇರುವಷ್ಟು ಸಂಭ್ರಮಿಸುತ್ತಿದ್ದರು. ಸೈಕಲಿನಲ್ಲಿ ಬರುವವರೇ ವಿರಳ. ಸೈಕಲಿನಲ್ಲಿ ಯಾರಾದರೂ ಬಂದರೆ ದೊಡ್ಡ ಶ್ರೀಮಂತನೆಂಬ ಭ್ರಮೆಯಿತ್ತು.
ಜೋರು ಮಳೆ ಬಂದರೆ ಕೊಡೆ ಇದ್ದರೂ ಮೈಯೆಲ್ಲಾ ಒದ್ದೆ... ಆದರೂ ಯಾವತ್ತೂೂ ನಡೆದುಕೊಂಡು ಶಾಲೆಗೆ ಹೋಗುವುದು ಕಷ್ಟ ಅನಿಸಲಿಲ್ಲ. ದೊಡ್ಡ ಮಳೆ ಬಂದಾಗ ಬಿ.ಸಿ.ರೋಡ್ ಸಮೀಪ ಬ್ರಹ್ಮರಕೂಟ್ಲಿನಲ್ಲಿ ನೆರೆ ಬಂದು ಹೆದ್ದಾರಿ ಬಂದ್ ಆಗಿ ನಮ್ಮೂರಲ್ಲಿ ದೂರದೂರುಗಳಿಗೆ ಹೋಗುವ ಕೆಎಸ್ಆರ್ಟಿಸಿ ಬಸ್ ಗಳು, 10 ಚಕ್ರದ ಲಾರಿಗಳು ಹೋಗುತ್ತಿದ್ದೆವು. ಅದನ್ನು ನೋಡಲು ಮಾರ್ಗದ ಬದಿ ಹೋಗಿ ಕೂರುತ್ತಿದ್ದುದೂ ಉಂಟು.


ಶಾಲೆಯಲ್ಲಿ ಪ್ರತ್ಯೇಕ ಪಿ.ಟಿ.ಮಾಷ್ಟ್ರು ಇರದಿದ್ದರೂ ನಮ್ಮ ಕ್ಲಾಸಿನಲ್ಲಿ ಆಟವಾಡುವುದರಲ್ಲಿ ಹಿಂದೆ ಬಿದ್ದವರು ಯಾರೂ ಇರಲಿಲ್ಲ. ಒಮ್ಮೆ ಸಣ್ಣ ಮೊತ್ತದ ಫೀಸು ಕಟ್ಟಿದರೆ ಆಯ್ತು (ಆದಾಯ ಪ್ರಮಾಣ ಪತ್ರ ಕೊಟ್ಟರೆ, ಅದರಲ್ಲಿ ರಿಯಾಯ್ತಿ ಸಿಗುತ್ತದೆ) ಮತ್ತೆ ಪರೀಕ್ಷೆಗೊಂದು, ಸೆಮಿಸ್ಟರಿಗೊಂದು, ಹೋಗಿದ್ದಕ್ಕೊಂದು, ಬಂದಿದ್ದಕ್ಕೊಂದು ಫೀಸು ಕೇಳುತ್ತಿರಲಿಲ್ಲ... ಅಂತ ನೆನಪು.


ಮನೆಯಲ್ಲಿ ಓದು ಓದು ಅಂತ ಹೆದರಿಸುವವರು, ಪರೀಕ್ಷೆ ಬಂತು ಅಂತ ಆಕಾಶ ತಲೆ ಮೇಲೆ ಬಿದ್ದ ಹಾಗೆ ಬೆಚ್ಚಿ ಬೀಳುವುದು, ಮಾರ್ಕು ಕಮ್ಮಿ ಬಂತು ಅಂತ ಹಗ್ಗ ತೆಗೆದುಕೊಳ್ಳುವಂತಹ ಗಡಿಬಿಡಿ ಆಗ ಕಡಿಮೆ. ಪರೀಕ್ಷೆ, ಓದುವುದು, ಫಲಿತಾಂಶ ಎಲ್ಲ ತನ್ನಷ್ಟಕ್ಕೆ ಆಗುತ್ತಿತ್ತು. ಚಲ್ತಾ ಹೈ ಅನ್ನುವ ಹಾಗೆ.... ತೀರಾ ಕಾನಸಂಟ್ರೇಟ್ ಮಾಡಿ.... ಮುಂದೆ ಇಂತಹದ್ದೇ ಸಬ್ಜೆಕ್ಟ್ ನಲ್ಲಿ ಡಾಕ್ಟರ್ ಆಗಿ ಎಂಡಿ ಮಾಡಿ.... ಇಂತಹದ್ದೇ ಊರಲ್ಲಿ ಡಾಕ್ಟ್ರಾಗುತ್ತೇನೆ ಎಂಬ ಕನಸು ದೇವರಾಣೆಗೂ ಇರಲಿಲ್ಲ. (ಅಸಲಿಗೆ ಡಿಗ್ರೀ ಮುಗಿಯುವ ವರೆಗೆ ಮುಂದೆ ಏನು ಓದುತ್ತೇನೆಂಬ ಕಲ್ಪನೆಯೂ ಇರಲಿಲ್ಲ, ಆಗಿಂದಾಗ್ಗೆ ತೆಗೆದುಕೊಂಡ ನಿರ್ಧಾರಗಳು, ನನ್ನ ತುಂಬ ಸಹಪಾಠಿಗಳೂ ಇಂತಹವೇ ಅನ್ನಲು ಹೆಮ್ಮೆಯಿದೆ)

ಹಾಗಾಗಿ ಈಗಿನಷ್ಟು ಶಿಸ್ತು, ಅಬ್ಬರ, ಕಾನ್ ಸಂಟ್ರೇಷನ್, ಶಾಲೆಗೆ ಹೋಗಲು ವಾಹನ, ತೊಡಲು ಯೂನಿಫಾರಂ, ಸೆಮಿಸ್ಟರು, ಸಣ್ಣ ಕ್ಲಾಸನವರಿಗೂ ಕಾನ್ವಕೇಶನ್ನು.... ಯಾವುದೂ ಇಲ್ಲದೆ ಶಾಲೆಗೆ ಹೋದ ಹಳ್ಳಿ ಹೈದರು ನಾವು....
ಪುಸ್ತಕಕ್ಕೆ ಬೈಂಡ್ ಹಾಕಲು ದುಡ್ಡು ಕೊಟ್ಟು ಬೈಂಡ್ ಪೇಪರು, ಲೇಬಲ್ ತೆಗೆದುಕೊಳ್ಳುತ್ತಿರಲಿಲ್ಲ. ಪ್ರತಿ ಭಾನುವಾರದ ಪತ್ರಿಕೆಗಳಲ್ಲಿ ನುಣುಪಾದ ಪುಟಗಳ ಮ್ಯಾಗಝೀನ್ ಬರ್ತಾ ಇತ್ತು. ಅದನ್ನೇ ಜೋಪಾನವಾಗಿ ಎತ್ತಿಟ್ಟು ಬೈಂಡ್ ಹಾಕುತ್ತಿದ್ದೆವು. ಚೀಲ ಹರಿದರೆ ಎಸೆದು ಹೊಸತು ತೆಗೆಯುವುದಲ್ಲ. ತೇಪೆ ಹಾಕಿ ಬಳಸುವ ಪ್ರಜ್ನೆ ಇತ್ತು. ಯೂಸ್ ಆಂಡ್ ಥ್ರೋ ಅನ್ನುವ ವಸ್ತುಗಳನ್ನು ಅಸಲಿಗೆ ಖರೀದಿಸುತ್ತಲೇ ಇರಲಿಲ್ಲ. ರಿಪೇರಿ ಆಗುವ ವಸ್ತುಗಳನ್ನೇ ಖರೀದಿಸುತ್ತಿದ್ದುದು. ಅಷ್ಟು ಸೂಕ್ಷ್ಮವಾದ ಬದುಕು ಜೀವನದುದ್ದಕ್ಕೂ ಅದೇ ಮನೋಭಾವವನ್ನು ನೆನಪಿಸುತ್ತಲೇ ಇರುತ್ತದೆ ಅಲ್ವ....
ಟ್ಯಾಬ್, ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟಿ.ವಿ. ಬಿಡಿ ಮನೆಯಲ್ಲಿ ಲ್ಯಾಂಡ್ ಲೈನ್ ಫೋನು, ಕರೆಂಟು ಕೂಡಾ ಇಲ್ಲದ ದಿನಗಳವು. ಚಿಮಿಣಿ ದೀಪವೇ ಬೆಳಕು, ಚಾಪೆಯೇ ಡೆಸ್ಕು ಎಂದರೆ ಅತಿಶಯೋಕ್ತಿಯಾಗಬಹುದೇನೋ... ಈಗಿನ ಹಾಗೆ, ಪವರ್ ಕಟ್ ಆಗಿದೆ, ರಾಜ್ಯ ಕತ್ತಲಲ್ಲಿ ಮುಳುಗಿದೆ... ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಓದಲು ಆಗುತ್ತಿಲ್ಲ ಎಂಬರ್ಥದ ಹೆಡ್ಡಿಂಗ್ ಗಳು ಪತ್ರಿಕೆಗಳಲ್ಲಿ ಬರ್ತಾ ಇರ್ಲಿಲ್ವೇನೋ... ಪವರೇ ಇಲ್ಲದ ಮನೆಗಳಲ್ಲಿ ಇನ್ನು ಕಟ್ ಆಗುವುದು ಏನು.... ಅಲ್ವ... ಆದರೂ ಆಗಿನ ಕಾಲಕ್ಕೆ ಮಧ್ಯಮ ವರ್ಗದವರ ಮನೆ ಮಕ್ಕಳಿಗೆ ಕರೆಂಟು ಇಲ್ಲದಿರುವುದು ಓದದೇ ಇರಲು ಒಂದು ನೆಪವೇ ಆಗಿರಲಿಲ್ಲ....
ಮಾತ್ರವಲ್ಲ, ತುಂಬಾ ಮಕ್ಕಳು ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ದುಡ್ಡು ಮಾಡುತ್ತಿದ್ದರು. ಬೆಳಗ್ಗೆಯೂ ತೋಟದಲ್ಲಿ ಕೆಲಸ ಮಾಡಿ, ದನದ ಕೆಲಸ ಮಾಡಿ, ಗುಡ್ಡದಲ್ಲಿ ಗೇರು ಹಣ್ಣು ಕೊಯ್ದು... ಕೆಲಸ ಮಾಡಿ ಶಾಲೆಗೆ ಬರುತ್ತಿದ್ದರು. ವರ್ಕ್ ಕಲ್ಚರ್ ಹಾಗಿತ್ತು.... ದಾರಿಯಲ್ಲಿ ನಡ್ಕೊಂಡು ಶಾಲೆಗೆ ಹೋಗುವಾಗ ಗೇರು ಮರಕ್ಕೆ ಕಲ್ಲೆಸೆಯುವುದು, ಸಿಕ್ಕಿದ ಗೇರು ಬೀಜದಲ್ಲಿ ಗೋಲಿಯಾಟ ಮಾದರಿ ಆಟವಾಡಿ ಗುರಿಯಿಟ್ಟು ಗೇರು ಬೀಜಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು... ದಾರಿಯಲ್ಲಿ ನಡ್ಕೊಂಡು ಬರುವ ಪಕ್ಕದ ಮನೆಯಾತನಿಗೆ ಒಟ್ಟಿಗೇ ಹೋಗಲು ಕಾಯುವುದು (ಹೊರಟ್ಯಾ ಅಂತ ಮೆಸೇಜ್ ಮಾಡಲು ಮೊಬೈಲ್ ಬಿಡಿ... ಯಾರ ಮನೆಯಲ್ಲೂ ಲ್ಯಾಂಡ್ ಲೈನ್ ಫೋನ್ ಕೂಡಾ ಇರಲಿಲ್ಲ), ನಾವು ಮೊದಲೇ ಶಾಲೆಗೆ ಹೋದರೆ ಗುರುತಿಗೆ ಗಿಡದ ಗೆಲ್ಲೊಂದನ್ನು ದಾರಿ ಮಧ್ಯೆ ಹಾಕಿ ಹೋಗುವುದು.... ಹೀಗೆ ನೆನಪುಗಳು ತುಂಬಾ ಕಾಡುತ್ತವೆ...


ಈಗ ಬಡತನ ಯಾರನ್ನೂ ಕಾಡುವುದಿಲ್ಲ ಅಂತಲ್ಲ. ಕಷ್ಟದಲ್ಲಿ ಬದುಕುವವರು ತುಂಬಾ ಮಂದಿ ಇದ್ದಾರೆ. ಆದರೆ, ಅಂದು ಕಷ್ಟದಲ್ಲಿ ಶಾಲೆಗೆ ಹೋದವರ ಬದುಕು ತುಂಬಾ ಸುಧಾರಿಸಿರಬಹುದು. ಆರ್ಥಿಕವಾಗಿಯೂ ಸಶಕ್ತರಾಗಿರಬಹುದು. ಇಂದು ಶಾಲೆಗೆ ಹೋಗಲು ವಾಹನ, ಏನು ಬೇಕಾದರೂ ಹುಡುಕಲು ಗೂಗಲ್ ಸರ್ಚ್ ನಿಂದ ತೊಡಗಿ ಎಲ್ಲವೂ ಇದೆ... ಆದರೂ ಹಂತ ಹಂತದಲ್ಲೂ ಭಾರಿ ಸಂಕಷ್ಟ ಪಡುತ್ತೇವೆ ಮಕ್ಕಳನ್ನು ಶಾಲೆಗೆ ಸೇರಿಸಲು, ಓದಿಸಲು, ಕೋರ್ಸ್ ಹುಡುಕಲು, ದುಡ್ಡು ಹೊಂದಿಸಲು... ಮತ್ತೆ ಉನ್ನತ ವ್ಯಾಸಂಗಕ್ಕೆ ಕಳುಹಿಸಲು...
ಸರ್ಕಾರಿ ಶಾಲೆಗಳಲ್ಲಿ ಹಾಲು, ಊಟ, ಕಡಿಮೆ ಫೀಸು, ನುರಿತ ಶಿಕ್ಷಕರು, ಸಮವಸ್ತ್ರ, ಉಚಿತ ಸೈಕಲ್ಲು... ಎಲ್ಲ ಕೊಡುತ್ತಾರೆ... ಹೆಣ್ಣು ಮಕ್ಕಳಿಗೆ ತುಂಬಾ ರಿಯಾಯಿತಿ ಆದರೂ, ಒಂದನೇ ಕ್ಲಾಸಿಗೆ ಮಕ್ಕಳನ್ನು ಸೇರಿಸಲು ಸರ್ಕಾರಿ ಶಾಲೆ ಶಿಕ್ಷಕರು ಎಷ್ಟು ಸರ್ಕಸ್ ಮಾಡಬೇಕಾಗುತ್ತದೆ ಎಂಬುದು ವಿಪರ್ಯಾಸವೇ ಸರಿ....
ಇಂಗ್ಲಿಷ್ ಶಿಕ್ಷಣದ ಅನಿವಾರ್ಯತೆ ಸೃಷ್ಟಿಸಿದ ಬಳಿಕ ಈ ಸ್ವಯಂಕೃತಾಪರಾಧವನ್ನು ಅನುಭವಿಸಲೇಬೇಕು... ವೈರುಧ್ಯ, ವಿಪರ್ಯಾಸಕ್ಕೆ ಉತ್ತಮ ಉದಾಹರಣೆಯಿದು....


ಬಹುಷಃ ಈಗ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗಿಂತ ಅಂದಿನವರು ಹೆಚ್ಚು ಮುಗ್ಧರಾಗಿದ್ದರು. ಕ್ಷಣ, ಕ್ಷಣಕ್ಕೆ ಸ್ನೇಹಿತರನ್ನು ಸಂಪರ್ಕಿಸಲು ವಾಟ್ಸಾಪ್, ಅಸೈನ್ ಮೆಂಟಿಗೆ ವಿಷಯ ಹುಡುಕಲು ತಕ್ಷಣಕ್ಕೆ ಗೂಗಲ್ ಸರ್ಚ್, ಊರಲ್ಲೊಂದು ಸೈಬರ್ ಸೆಂಟರ್.... ಯಾವುದೂ ಇರಲಿಲ್ಲ.... ಊಹಿಸಿ ಹೇಗೆ ಕಲಿಯುತ್ತಿದ್ದೆವು ಅಂತ...
ಮನೆಯಲ್ಲಿದ್ದ ಏಕಮಾತ್ರ ಮನರಂಜನೆಯ ಸಾಧನ ಎಂದರೆ ರೇಡಿಯೊ.... ಆ ರೇಡಿಯೊಗೆ ಬ್ಯಾಟರಿ ಹಾಕಿ ಮಂಗಳೂರು ದಿಕ್ಕಿಗೆ ತಿರುಗಿಸಿದರೆ ಬರುವ ಕಾರ್ಯಕ್ರಮಗಳನ್ನು ಕೇಳುವುದು ಪರಮಾನಂದ. ಅದಕ್ಕೆ ಈಗಲೂ ರೇಡಿಯೋ ಕಂಡ್ರೆ ಪರಮಸಖ (ನೆವರ್ ಫೈಲಿಂಗ್ ಫ್ರೆಂಡ್) ಅನ್ನುವ ಆಪ್ತತೆ. ಮೊಬೈಲ್ನಲ್ಲೇ ರೇಡಿಯೋ ಇದ್ದರೂ ಕೇಳದಂತಹ ಉದಾಸೀನ ಈಗ ಆವರಿಸಿರಬಹುದು. ಅಂದು ಮಾತ್ರ. ಎಸ್ಪಿ ಬಾಲಸುಬ್ರಹ್ಮಣ್ಯಂ, ಪಿಬಿಶ್ರೀನಿವಾಸ್, ಕುಮಾರ್ ಶಾನು, ಕಿಶೋರ್ ಕುಮಾರ್... ಇವರೆಲ್ಲ ನಮ್ಮ ಮನೆಯಲ್ಲಿದ್ದ ಅಣ್ಣಂದಿರೇನೋ...ರೇಡಿಯೋ ಉದ್ಘೋಷಕರೆಲ್ಲಾ ಪರಿಚಯದವರೇನೋ ಅನ್ನುವಷ್ಟು ಮಟ್ಟಿಗೆ ಆವರಿಸುವಂತೆ ಮಾಡಿದ್ದು, ಏಕತಾನತೆ ಹೋಗಲಾಡಿಸುತ್ತಿದ್ದುದು ರೇಡಿಯೊ.
ರೇಡಿಯೋದಲ್ಲಿ ಕೆಲಸ ಮಾಡುವವರೆಲ್ಲ ಅವರ ಧ್ವನಿಯಷ್ಟೇ ಚಂದ ಇರಬಹುದು... ಮೃದು ಹೃದಯಿಗಳು, ಸಕಲ ಗುಣ ಸಂಪನ್ನಿಗಳಿರಬಹುದು, ಬದುಕಿನಲ್ಲಿ ಒಮ್ಮೆಯಾದರೂ ಅವರಲ್ಲಿ ಮಾತನಾಡಬೇಕೆಂಬ ತುಡಿತ, ಅವರ ಧ್ವನಿ ಅನುಕರಿಸುವುದು, ಧ್ವನಿಯಿಂದ ಹೆಸರು ಗುರುತಿಸುವುದು ಇತ್ಯಾದಿ ಖುಷಿಗಳು... ಶಾಲೆಯಲ್ಲಿ ಕಲಿಸುವ ಶಿಕ್ಷಕರು ಸರ್ವಜ್ನರು, ಅವರಿಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂಬಂತಹ ಮುಗ್ಧ ನಂಬಿಕೆ. ಹುಟ್ಟುವಾಗಲೇ ಮೊಬೈಲ್ ಹಿಡ್ಕೊಳ್ಳುವ ಇಂದಿನ ಮಕ್ಕಳ ಹಾಗೆ ಸಾಮಾನ್ಯ ಜ್ನಾನವಾಗಲೀ, ಎಲ್ಲದರಲ್ಲೂ ಕೆಟ್ಟು ಕುತೂಹಲ, ಸಂಶಯ ನಮಗಿರಲಿಲ್ಲ ಅನ್ಸುತ್ತದೆ.
ಹೆಚ್ಚಾಗಿ ಮಧ್ಯಮ ವರ್ಗದ ಯಾರ ಮನೆಯಲ್ಲೂ ಟಿ.ವಿ. ಇರ್ಲಿಲ್ಲ. ರಾಮಾಯಣ, ಮಹಾಭಾರತ, ಚಾಣಕ್ಯ, ಭಾನುವಾರದ ಸಿನಿಮಾ, ವಾರಕ್ಕೊಮ್ಮೆ ದೂರದರ್ಶದನದಲ್ಲಿ (ಏಕೈಕ ಟಿ.ವಿ.ವಾಹಿನಿ) ಬರುವ ಚಿತ್ರಹಾರ್, ಚಿತ್ರ ಮಂಜರಿ ನೋಡಲು ಪಕ್ಕದ ಮನೆಗೆ ಹೋಗುವುದು ಮಾಮೂಲಿ. ಕ್ರಿಕೆಟ್ ಇದ್ದರಂತೂ ಪಾಪ, ಟಿ.ವಿ. ಇರುವ ಮನೆಯವರಿಗೆ ಶಿಕ್ಷೆಯೇ ಸರಿ.


ಮಹಾಭಾರತ ಧಾರಾವಾಹಿ ನೋಡಲು ಮಳೆಯಲ್ಲೇ ಸುಮಾರು 2 ಕಿ.ಮೀ. ದೂರ ಆಗಿನ ಕಾಲದಲ್ಲಿ ಕಲರ್ ಟಿ.ವಿ. ಇದ್ದವರೊಬ್ಬರ ಮನೆಯ ಕಿಟಕಿಯಲ್ಲಿ ಇಣುಕಿ ಧಾರವಾಹಿ ನೋಡಿ ಬರುತ್ತಿದ್ದ ನೆನಪು ಇನ್ನೂ ಹಸುರಾಗಿದೆ...


ಐದು ಪೈಸೆಗೆ ಶುಂಠಿಖಾರ ಮಿಠಾಯಿ ಸಿಗುತ್ತಿದ್ದುದು, ಇಷ್ಟವಾದ ಲ್ಯಾಕ್ಟೊ ಕಿಂಗ್ ಚಾಕಲೇಟ್, ನಾಲ್ಕಾಣೆಯ ಐಸ್ ಕ್ಯಾಂಡಿ, ಪ್ರತಿ ಬುಧವಾರ ರೇಡಿಯೊದಲ್ಲಿ ಕೇಳುತ್ತಿದ್ದ ಯಕ್ಷಗಾನ, ಹಿಂದಿ ಚಿತ್ರಗೀತೆ ಕೇಳಲೆಂದು ಶಾರ್ಟ್ ವೇವ್ ಬ್ಯಾಂಡ್ಗೆ ಬದಲಾಯಿಸಿ ವಿವಿಧ ಭಾರತಿ ಸ್ಟೇಷನ್ ಹುಡುಕಿ ಕೇಳುತ್ತಿದ್ದುದು... ಸ್ಕೂಲ್ ಡೇ ದಿನ ಮುಂಜಾನೆ ಪ್ರದರ್ಶನಗೊಳ್ಳುವ ನಾಟಕದಲ್ಲಿ ವಾಲ್ಮೀಕಿಯ ಪಾತ್ರಕ್ಕೆ ರಾತ್ರಿ 7 ಗಂಟೆಗೇ ಮೇಕಪ್ ಮಡಿ ಕೂತುಕೊಂಡು ನಿದ್ದೆ ತೂಗಿದ್ದು... ಹೀಗೆ ನೆನಪುಗಳು ಹಲವಾರು...


ಈಗಿನ ಮಕ್ಕಳು ಎಲ್ಕೆಜಿ, ಯುಕೆಜಿ ಪ್ರವೇಶಕ್ಕೆ ಇಷ್ಟೊಂದು ಪರಿತಾಪ ಪಡುತ್ತಿರುವಾಗ, ಹೆತ್ತವರು ತಲೆ ಕೆಡಿಸಿಕೊಳ್ಳುತ್ತಿರುವಾಗ, ಮನೆ ಗೇಟ್ ಬುಡದಿಂದಲೇ ವಾಹನದಲ್ಲಿ ಜುಮ್ಮನೆ ಶಾಲೆಗೆ ಹೋಗುವಾಗ, ಮಳೆಯಲ್ಲಿ ನೆನೆದು, ಕೆಸರು ನೀರಲ್ಲಿ ಆಟವಾಡಿ ಶಾಲೆಗೆ ಹೋಗುವ ಸಂಭ್ರಮ ಕಳೆದುಕೊಳ್ಳುತ್ತಿರುವಾಗ ಇಷ್ಟೆಲ್ಲಾ ನೆನಪು ಬಂತು...


ಅಂದಿನ ಕಾಲ ಚೆನ್ನಾಗಿತ್ತು, ಇಂದು ಕಾಲ ಕೆಟ್ಟು ಹೋಗಿದೆ ಅಂತ ಖಂಡಿತಾ ಹೇಳುತ್ತಿಲ್ಲ. ಬದಲಾವಣೆ ಜಗನ ನಿಯಮ... ಆದರೆ ವರುಷಗಳ ನಡುವೆ ಹುಟ್ಟಿಕೊಂಡ ವೈರುಧ್ಯಗಳನ್ನು ಕಂಡಾಗ ಸೋಜಿಗವಾಗುತ್ತದೆ... ಏನನ್ತೀರಿ?