ಅದು ರೈಗಳು ಹೋದ ದಿನವೂ ಏಪ್ರಿಲ್ 1


ಆರೇಳು ವರ್ಷಗಳ ಹಿಂದಿನ ಮಾತು... ಅವತ್ತೂ ಏಪ್ರಿಲ್ 1. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎಸ್.ಎನ್.ಭಟ್ರು ಕರೆ ಮಾಡಿ ರೈಗಳು ಹೋಗಿಬಿಟ್ರು ಅಂದಾಗ ನಂಬಲಾಗಲಿಲ್ಲ. ನಂಬುವ ಮಾತೂ ಆಗಿರಲಿಲ್ಲ. ಮತ್ತೆ ಮತ್ತೆ ಕೇಳಿ ಖಚಿತಪಡಿಸಿದಾಗ ಗೊತ್ತಾಯ್ತು. ಮಂಗಳೂರು ಆಕಾಶವಾಣಿಯ ಜನಪ್ರಿಯ ಉದ್ಘೋಷಕ, ಎಲ್ಲರ ಪ್ರೀತಿಯ ಅಜ್ಜ ಕೆ.ಆರ್.ರೈಗಳು (ಶ್ರೀ ಕಲ್ಕಾಡಿ ರಮಾನಂದ ರೈ) ಎಲ್ಲರನ್ನು ಬಿಟ್ಟು ಅಗಲಿದ್ದಾರೆ ಅಂತ.
ಈ ವಿಚಾರವನ್ನು ತಕ್ಷಣ ಮಾಧ್ಯಮ ಮಿತ್ರರಿಗೆ, ಸ್ನೇಹಿತರಿಗೆ ಎಸ್ಎಂಎಸ್ (ಆಗ ವಾಟ್ಸಾಪ್ ಇರ್ಲಿಲ್ಲ) ಮೂಲಕ ತಿಳಿಸಿದಾಗ ಯಾರೂ ನಂಬಲಿಲ್ಲ. ಎಲ್ಲರೂ ಹೇಳ್ತಾ ಇದ್ದಿದ್ದು ಇವತ್ತು ಏಪ್ರಿಲ್ 1, ಫೂಲ್ ಮಾಡ್ತಾ ಇದ್ದೀಯ ಅಂತ. ಹೌದು ಎಲ್ಲರನ್ನೂ ನಗಿಸಿ, ತಾವೂ ನಗ್ತಾ ಇದ್ದ ನಿಗರ್ವಿ, ಸಾತ್ವಿಕ ಸ್ವಭಾವದ ರೈಗಳು ತಾವು ಇಹ ಬಿಟ್ಟು ತೆರಳುವಾಗಲೂ ಅದನ್ನು ಯಾರೂ ನಂಬದ ದಿನವೇ ಅದಾಗಿದ್ದು ವಿಪರ್ಯಾಸ... ಪ್ರತಿ ವರ್ಷ ಏಪ್ರಿಲ್ 1 ಬಂದಾಗಲೆಲ್ಲಾ ಇದೇ ವಿಚಾರ ಕಾಡುತ್ತದೆ, ಶ್ರೀಯುತ ರೈಗಳ ಧ್ವನಿ ಗುಂಯ್ ಗುಡುತ್ತಾ ಇರುತ್ತದೆ..

.....ಇದು ಚಿತ್ರದ ಹೆಸರು!!
ವಿಚಿತ್ರ ಸಿನಿಮಾಗಳ ಹೆಸರನ್ನು ಚಿತ್ರಗೀತೆ ಕಾರ್ಯಕ್ರಮದ ನಡುವೆ ಹೇಳಬೇಕಾದಾಗಲೆಲ್ಲಾ ಕೆ.ಆರ್.ರೈಗಳು ಬಳಸುತ್ತಿದ್ದ ಹಾಸ್ಯಮಿಶ್ರಿತ ವಾಕ್ಯವಿದು, ಕೇಳುಗರಿಗೂ ತುಂಬಾ ಇಷ್ಟವಾಗತ್ತಿತ್ತು. ಟಿ.ವಿ.ಯೂ, ಮೊಬೈಲೂ ಇಷ್ಟೊಂದು ಉಚ್ಛ್ರಾಯ ಸ್ಥಿತಿ ತಲುಪದಿದ್ದ 80-90ರ ದಶಕದಲ್ಲಿ ಮಂಗಳೂರು ಆಕಾಶವಾಣಿಯ ಲಕ್ಷಾಂತರ ಕೇಳುಗರ ಮನ ಗೆದ್ದ ಹಿರಿಯ ಜೀವ ಶ್ರೀಯುತ ರೈಗಳು. ಈಗಿನ ಭಾಷೆಯಲ್ಲಿ ಹೇಳುವುದಾದರೇ ಆ ಕಾಲಕ್ಕೆ ಅಪಾರ ಟಿಆರ್ ಪಿ ಪಡೆದಿದ್ದು ಬಾನುಲಿಯ ಉದ್ಘೋಷಕರು (ಅನೌನ್ಸರ್) ಕೆ.ಆರ್.ರೈಗಳು. ಓರ್ವ ಆರ್.ಜೆ.ಯನ್ನುಜನ ಹೇಗೆ ಇಂದು ನೆನಪಿಟ್ಟು ಆರಾಧಿಸುತ್ತಾರೋ ಅದೇ ಥರ ಕೆ.ಆರ್.ರೈಗಳನ್ನು ಕೇಳುಗರು ಪ್ರೀತಿಸುತ್ತಿದ್ದರು.

ಆ ಕಾಲದಲ್ಲಿ ಮಂಗಳೂರು ಆಕಾಶವಾಣಿ ನಿಲಯ ವೀಕ್ಷಣೆಗೆ ಬರುತ್ತಿದ್ದ ರೇಡಿಯೋ ಕೇಳುಗರು ಮೊದಲು ಕೇಳ್ತಾ ಇದ್ದ ಪ್ರಶ್ನೆ  ಅಜ್ಜ (ಅದು ಮಾತುಕತೆ ಎಂಬ ಕೌಟುಂಬಿಕ ಸಂಭಾಷಣೆಯಲ್ಲಿ ರೈಗಳು ನಿರ್ವಹಿಸ್ತಾ ಇದ್ದ ಪಾತ್ರ) ಎಲ್ಲಿದ್ದಾರೆ, ಶಾಂತಕ್ಕ (ಮಾಲತಿ ಆರ್. ಭಟ್) ಎಲ್ಲಿದ್ದಾರೆ ಎಂದು. ಅಷ್ಟರ ಮಟ್ಟಿಗೆ ರೈಗಳ ನಿರೂಪಣೆ, ಅವರ ಗಡಸು ಧ್ವನಿ, ಮಾತಿನ ಧಾಟಿ ಎಲ್ಲರನ್ನೂ ಸೆಳೆಯುತ್ತಿತ್ತು.
ಬಾನುಲಿಯಲ್ಲಿ ಕೆಲಸ ನಿರ್ವಹಿಸಲು ಸಿಕ್ಕಿದ ಅತ್ಯಲ್ಪ ವರ್ಷಗಳ ಅವಕಾಶದಲ್ಲೇ ಕೆ.ಆರ್.ರೈಗಳ ಪರಿಚಯವಾದಲ್ಲಿ ಅವರ ಸಾತ್ವಿಕತೆ ಕಂಡು ಬೆರಗಾಗಿದ್ದೇನೆ. ಅಷ್ಟೊಂದು ಅಪಾರ ಅಭಿಮಾನಿಗಳಿದ್ದರೂ, ಹಿರಿಯ ಉದ್ಯೋಗಿಯಾಗಿದ್ದರೂ ಅವರೊಳಗಿದ್ದ ನಿಗರ್ವಿ ವ್ಯಕ್ತಿತ್ವ... ಇಂದು ಬಂದು ನಾಳೆ ಹೋಗುವ ನನ್ನಂತಹ ತಾತ್ಕಾಲಿಕ ನಿರೂಪಕರಿಗೂ ಗೌರವ ಕೊಟ್ಟು, ನೆನಪಿಟ್ಟು ಮಾತನಾಡುವ, ಕಿಚಾಯಿಸುವ ಅವರ ಗುಣವನ್ನು ಯಾವತ್ತೂ ಮರೆಯಲಾರೆ. ಸ್ಥೂಲ ಕಾಯ, ವಿಶಿಷ್ಟ ನಿಧಾನ ನಡಿಗೆ, ತಲೆಯಲ್ಲೊಂದು ಕ್ಯಾಪ್, ವಿಶಿಷ್ಟ ಧ್ವನಿ, ಎರಡೂ ಕೈ ಜೋಡಿಸಿ ಮಾತನಾಡುವ ರೀತಿಯ ಎಲ್ಲಕ್ಕಿಂತ ಹೆಚ್ಚು ಗಂಭೀರವಾದ ಆ ಸ್ವರ ಯಾವತ್ತೂ ಕಣ್ಣಿಗೆ ಕಟ್ಟಿದಂತೆ, ಕಿವಿಗೆ ಕೇಳಿದಂತಿದೆ.


ಟ್ರೆಕ್ಸ್ ರೂಂನಲ್ಲೋ, ಕ್ಯಾಂಟೀನಿನಲ್ಲೋ ಎಲ್ಲೇ ಕಂಡರೂ ಅವರು ಮಾತನಾಡಿಸದೆ ಹೋಗುವವರಲ್ಲ. ಯಾವುದಕ್ಕೂ ತಲೆ ಕೆಡಿಸದ ಸ್ಥಿತಪ್ರಜ್ಞರಂತೆ ತಮ್ಮ ಪಾಡಿಗೆ ತಾವು ಎಂಬಂತಿದ್ದ ರೈಗಳನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಅವರನ್ನೇ ನೋಡಲೆಂದೇ ಆಕಾಶವಾಣಿಗೆ ಬರುವವರನ್ನೂ ಕಂಡಿದ್ದೇನೆ. ಬಹುಶಃ ಈಗ ಅವರು ಇದ್ದಿದ್ದರೆ ಸಾಕಷ್ಟು ಸೆಲ್ಫೀಗಳು ಅವರೊಂದಿಗೆ ಕ್ಲಿಕ್ಕಾಗುತ್ತಿದ್ದವೇನೋ....


80-90ರ ದಶಕದಲ್ಲಿ ಬರುತ್ತಿದ್ದ ಅವರ ಕೆಂಚನ ಕುರ್ಲರಿ, ತ್ಯಾಂಪನ ಮಾಹಿತಿ ಕಾರ್ಯಕ್ರಮದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದವರು ಕೆ.ಆರ್.ರೈಗಳು. ಮಂಗಳೂರು ಆಕಾಶವಾಣಿಯ ಮತ್ತೊಂದು ಜನಪ್ರಿಯ ಕಾರ್ಯಕ್ರಮ ಮಾತುಕತೆ (ಕನ್ನಡ ಕೌಟುಂಬಿಕ ಸಂಭಾಷಣೆ)ಯಲ್ಲಿ ಅಪ್ಪಟ ವೃದ್ಧನ ಧ್ವನಿಯಲ್ಲಿ ಮಾತನಾಡುತ್ತಿದ್ದುದು ತುಂಬಾ ಹಿಟ್ ಆಗಿತ್ತು. ಏನಾ ಸುರೇಸಾ... ಎಂತದ್ದೇನಾ ನಿಂದು ಅಂತ ಅಟ್ಟಹಾಸದಿಂದ ನಗುತ್ತಾ ಇದ್ದಿದ್ದನ್ನು ಕೇಳುಗರು ತುಂಬಾ ಮೆಚ್ಚುತ್ತಿದ್ದರು. ಅವರು ಚಿತ್ರಗೀತೆಯನ್ನು, ಕೋರಿಕೆ ಕಾರ್ಯಕ್ರಮವನ್ನು ನಿರೂಪಿಸುತ್ತಾ ಇದ್ದ ರೀತಿ, ಅವರಿಗೆ ಪ್ರಶಸ್ತಿ ತಂದುಕೊಟ್ಟ ರೂಪಕಗಳು, ಬಾನುಲಿ ನಾಟಕಗಳಲ್ಲಿ ಮೂಡಿಬರುತ್ತಿದ್ದ ಅವರ ಧ್ವನಿ, ಅವರು ನಿರೂಪಿಸುತ್ತಿದ್ದ ಅಪಾರ ತುಳು ಕಾರ್ಯಕ್ರಮಗಳು ತುಂಬಾ ಹೆಸರು ತಂದು ಕೊಟ್ಟಿದ್ದವು. 
ಚಿತ್ರಗೀತೆ ನಿರೂಪಣೆಯಲ್ಲಿ ಅವರದೇ ಆದ ಧಾಟಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಅವರ ಆರೋಗ್ಯ ಯಾಕೆ ಕೆಟ್ಟಿತು, ಯಾಕೆ ವೃತ್ತಿ ಬದುಕಿನ ಉತ್ತರಾರ್ಧದಲ್ಲೇ ಅವರು ಎಲ್ಲರನ್ನು ಅಗಲಿದರು ಎಂಬುದು ಪ್ರಶ್ನೆಯಲ್ಲ. ಬಾನುಲಿಯಲ್ಲಿ ಇದ್ದಷ್ಟೂ ದಿನ ಅವರು ತೋರಿಸಿದ ಲವಲವಿಕೆ, ಎಂತಹ ಕಿರಿಯ ಸಹೋದ್ಯೋಗಿಯಲ್ಲೂ ಭೇದ ಕಾಣದೆ ಹತ್ತಿರ ಕರೆದು ಮಾತನಾಡಿಸುತ್ತಿದ್ದ ಸಾತ್ವಿಕತೆ, ಅವರ ಧ್ವನಿಯಲ್ಲಿ ಕೇಳಬಹುದಾದ ಆತ್ಮೀಯತೆಯೇ ಅವರನ್ನು ಪ್ರೀತಿ ಪಾತ್ರರನ್ನಾಗಿಸಿದ್ದು....


ಈಗಿನ ಹಾಗೆ ಫೇಸ್ ಬುಕ್, ವಾಟ್ಸಾಪ್, ಟ್ವೀಟರ್ ಆ ಇರ್ಲಿಲ್ಲ. ಅಸಲಿಗೆ ಅವರ ಹತ್ರ ಮೊಬೈಲ್ ಫೋನ್ ಇತ್ತಾ ಅಂತಲೂ ಗೊತ್ತಿಲ್ಲ. ಆದರೆ ಮಂಗಳೂರು, ಉಡುಪಿ, ಕಾಸರಗೋಡು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಭಾಗದ ಲಕ್ಷಾಂತರ ಮಂದಿ ಕೇಳುಗರು  (ನಾನೂ ಸೇರಿದಂತೆ) ಚಿಕ್ಕಂದಿನಿಂದ ಕೇಳುತ್ತಾ ಬಂದ ಧ್ವನಿ ಕೆ.ಆರ್.ರೈಗಳದ್ದು. ಯಾವತ್ತೋ ಒಂದು ದಿನ ಅವರು ಮೃತಪಟ್ಟ ಸುದ್ದಿಯನ್ನು ಡ್ರಾಫ್ಟ್ ಮಾಡಬೇಕಾಗಬಹುದು ಅಂತ ಎಂದಿಗೂ ಅಂದುಕೊಂಡಿರಲಿಲ್ಲ. ರೇಡಿಯೋವೇ ಪ್ರಧಾನವಾಗಿದ್ದ ದಿನಗಳ ಶ್ರೋತೃಗಳು ಇವತ್ತಿಗೂ ಅವರ ಧ್ವನಿ, ನಿರೂಪಣೆಯನ್ನು ನೆನಪಿಸುತ್ತಾರೆಂದರೆ ಗೊತ್ತಾಗುತ್ತದೆ ಅವರ ಮೂಡಿಸಿದ ಛಾಪು.


ಕೆಲವರು ವಿನಾ ಕಾರಣ ಇಷ್ಟವಾಗುತ್ತಾ, ಕಾಡುತ್ತಾರೆ, ಕಾರಣ ಹೇಳದೆ ಆತ್ಮೀಯತೆ ಹುಟ್ಟಿಕೊಳ್ಳುತ್ತದೆ.... ತುಂಬಾ ಹತ್ತಿರದವರೇನೋ ಎಂಬಷ್ಟು ಮಟ್ಟಿಗೆ. ಇನ್ನು ಕೆಲವರು ವರ್ಷಗಟಲ್ಲೇ ಜೊತೆಗಿದ್ದರೂ, ಪಕ್ಕದಲ್ಲೇ ಕೂತರೂ ಯಾಂತ್ರಿಕತೆ ಚೌಕಟ್ಟಿನೊಳಗೆ ಯಾವುದೇ ಭಾವ-ಬಂಧ ಕೆಲಸ ಮಾಡುವುದಿಲ್ಲ. ಪ್ರೀತಿಯೋ, ನಿರ್ಲಿಪ್ತತೆಯೋ ನಾವು ರೂಪಿಸಿದ ಪ್ರೀತಿಯ ವಲಯ, ಸಾತ್ವಿಕತೆ, ನಿಗರ್ವಿ ವ್ಯಕ್ತಿತ್ವದ ಫಲಿತಾಂಶಗಳು ಅಲ್ವೇ...
ಹಾಗಂತೆ ಇಷ್ಟವಾದವರು, ಹತ್ತಿರವಾದವರೆಲ್ಲಾ ಜೊತೆ ಜೊತೆಗೇ ನಡೆಯುತ್ತಿರಬೇಕು, ಪಕ್ಕದಲ್ಲೇ ಕೂರಬೇಕೆಂದು ಕಟ್ಟಿ ಹಾಕಲಾಗುತ್ತದೆಯೇ.... ಅವರವರ ಕಾಲ ಬಂದಾಗ ದೂರ ತೀರವ ಸೇರಲೇ ಬೇಕು. ತಡೆಯುವ ಶಕ್ತಿ ಯಾರಿಗೂ ಇಲ್ಲ.
ದೈಹಿಕವಾಗಿ ದೂರವಾದರು ಮಾನಸಿಕವಾಗಿ ನೆನಪಾಗ್ತಾ ಕಾಡುತ್ತಾರೆ. ಅವರು ಕೊಟ್ಟ ಲವಲವಿಕೆ, ಅವರ ಉತ್ಸಾಹ, ಅವರಿಂದ ಕಲಿತ ತುಸು ಖುಷಿ ಖುಷಿಯ ವಿಚಾರಗಳೇ ಅವರ ನೆನಪನ್ನು ಜೀವಂತವಾಗಿರಿಸುವುದು. 

ಅದೇ ಹೇಳ್ತಾರಲ್ಲ...
ಯಾರ ಜೊತೆ ಎಷ್ಟು ದೂರ ನಡೆದಿದ್ದೀರಿ ಎಂಬ ಕಾರಣ ಅವರು ನಿಮಗೆ ಹತ್ತಿರವಾಗುವುದಲ್ಲ, ಯಾರ ಹೆಜ್ಜೆ ಗುರುತು ನಿಮ್ಮ ಎದೆಯಾಳದಲ್ಲಿ ಇಷ್ಟು ಚೆನ್ನಾಗಿ ಮೂಡಿದೆ ಎಂಬ ಕಾರಣಕ್ಕೆ ಹತ್ತಿರವಾಗ್ತಾರೆ ಅಂತ....
ಪ್ರತಿ ಏಪ್ರಿಲ್ 1ರಂದು ರೈಗಳ ಅಗಲುವಿಕೆ ತೀವ್ರವಾಗಿ ಕಾಡುತ್ತದೆ. ರೈಗಳು ಮತ್ತೆ ಹುಟ್ಟಿ ಬರಲಿ, ಅದೇ ಗಡಸು, ನವಿರು ನಿರೂಪಣೆಯನ್ನು ಮತ್ತೆ ಹೊತ್ತು ತರಲಿ...
-ಕೃಷ್ಣಮೋಹನ, ಕನ್ನಡಪ್ರಭ.

2 comments:

Suni.k said...

ಸರ್ ತುಂಬಾ ಚೆನ್ನಾಗಿ ಅಜ್ಜಯ್ಯನ ಬಗ್ಗೆ ಬರೆದಿರುವಿರಿ.ಅಜ್ಜಯ್ಯ ತೀರಿಕೊಂಡ ದಿನ ನನಗೆ ಎಸ್ ಎಸ್ ಎಲ್ಸಿ ಹಿಂದಿ ಪರೀಕ್ಷೆ ಇತ್ತು.ಮಂಳೂರು ಆಕಾಶ ವಾಣಿಯ ಎಲ್ಲಾ ನಿರೂಪಕರು ನನಗಿಷ್ಟ.ಕೆ.ಆರ್ ರೈ.ಸುರೇಶನ ಪಾತ್ರ ಮಾಡುತ್ತಿದ್ದ ವರು ಮಾಲತಿ ಆರ್ ಭಟ್ ಶಕುಂತಳಾ ಕಿಣಿ.ಹೆಸರು ನೆನಪಿಗೆ ಬರುತ್ತಿಲ್ಲ . ಮೋಹನ್ ಕಲ್ಲೂರಾಯ . ಇವಾಗ ಎಲ್ಲಾ ನೆನಪು.ಸಂಜೆ ವೇಳೆ ನಾವೆಲ್ಲ ರೇಡಿಯೋ ಹಾಕಿ ಹೋಂವರ್ಕ್ ಮಾಡದಿದ್ರೆ ಅಮ್ಮ ಅಕ್ಕ ದೂಡ್ಡಮ್ಮ ದೊಡ್ಡಪ್ಪ ಬೀಡಿ ಕಟ್ಟುತ್ತಾ ರೇಡಿಯೋ ಕೇಳುತ್ತಾ ಇದ್ದೆವು.

Suni.k said...

ಸರ್ ಅಜ್ಜಯ್ಯನ ಪೋಟೋ ಇದ್ದರೆ ಒಂದು ಹಾಕಿ ಸರ್ ಪ್ಲೀಸ್. ಅಜ್ಜಯ್ಯನ ಪೋಟೋ ಒಂದು ಕೂಡ ನಾವು ನೋಡಿಲ್ಲ ಸಾರ್. ಅವರು ತೀರಿಕೊಂಡ ಸಮಯದಲ್ಲಿ ಯಾವುದೋ ಒಂದು ಪೇಪರ್ ನಲ್ಲಿ ವಿಷಯ ಓದಿದ್ದು ನೆನಪು. ಅವರ ಅಪ್ಪದಡ್ಯೆ ಎಂಬ ಕಥೆ ಓದಿರುವೆ.