ತೀವ್ರ ನಿಗಾ... ಒಳಗಡೆ ದೇಹಕ್ಕೆ ಹಾಗೂ ಕಾಯುತ್ತಿರುವ ಮನಸ್ಸುಗಳಿಗೆ...!

 



ಅವರು ಪಾಪ ಹುಶಾರಿದ್ದಾಗ... ಹತ್ತಾರು ಜನಕ್ಕೆ ಆಹಾರ ದಾನ ಮಾಡಿದವರು. ಕಳೆದ ಮೂರು ವಾರದಿಂದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಮಲಗಿದ್ದಾರೆ. ತಿನ್ನಲು ಏನೇನೋ ಬೇಕು ಅಂತ ಕೇಳುತ್ತಿದ್ದಾರೆ. ಆದರೆ, ಮೂಗಿಗೆ ಪೈಪ್ ಹಾಕಿದೆ, ಡಾಕ್ಟ್ರು ಹಾಗೆಲ್ಲ ಬೇಕಾಬಿಟ್ಟಿ ಕೊಡಬಾರದು ಎಂತ ಸ್ಟ್ರಿಕ್ಟಾಗಿ ಹೇಳಿದ್ದಾರೆ... ನೋಡುವಾಗಲೇ ಬೇಸರ ಆಗ್ತದೆ...” ಹೀಗಂತ ಕಳೆದ ವಾರ ಒಬ್ಬರು ವಿವರಿಸಿದ್ದು... ಐಸಿಯುನಲ್ಲಿರುವ ರೋಗಿ ಹಾಗೂ ಹೊರಗಡೆ ಕುಳಿತು ಕಾಯುವ ರೋಗಿಯ ಬಂಧು... ಕೆಲದಿನಗಳಿಂದ ಕೇಳಿದ ಅನುಭವಗಳು ಒಂದೆರಡಲ್ಲ.... ಎಷ್ಟೊಂದು ಅಸೌಖ್ಯಗಳ ಸುದ್ದಿ... ಎಷ್ಟೊಂದು ಅನುಭವಗಳು...

ಅವರಿಗೆ ಆ ಕಾಯಿಲೆ ಅಂತೆ, ಇದನ್ನು ಅರಗಿಸಲು ಆಗ್ತಾ ಇಲ್ಲ, ಕೆಲ ದಿನಗಳಲ್ಲಿ ಕೇಳಿಸಿಕೊಂಡ ಹೃದಯ ಕಲಕುವ ವರ್ತಮಾನಗಳು. ಆಸ್ಪತ್ರೆಯ ವೆರಾಂಡವೇ ಧ್ಯಾನಕೇಂದ್ರ... ಐಸಿಯು ಹೊರಗೆ ಕುಳಿತವನೂ ತೀವ್ರ ನಿಗಾ ಸ್ಥಿತಿಯಲ್ಲಿ ಇರ್ತಾನೆ ಅನ್ನುವುದು ಬಹುತೇಕ ಸಂದರ್ಭ ಹೊರಲೋಕಕ್ಕೆ ಕಾಣುವುದೇ ಇಲ್ಲ. ಆರೋಗ್ಯ ಇರುವವರು ಲೌಕಿಕ ಸಂಗತಿಗಳಲ್ಲಿ ಬಿಝಿ ಇರ್ತಾರೆ... ಐಸಿಯು ಒಳಗೆ ಗಂಭೀರವಾಗಿರುವವರು ಒಮ್ಮೆ ಹೊರಗೇ ಹೋದರೆ ಸಾಕೆಂಬಂತೆ ಪ್ರಾರ್ಥಿಸುತ್ತಿರುತ್ತಾರೆ. ಡಾಕ್ಟ್ರು, ನರ್ಸುಗಳು ಕರ್ತವ್ಯ ಮಾಡ್ತಾರೆ... ಹೊರಗೆ ಕಾಯುವ ಮನೆ ಮಂದಿ, ಬಂಧು, ಮಿತ್ರರ ಮನಃಸ್ಥಿತಿ, ಕಾತರ, ನಿರೀಕ್ಷೆ, ಗಟ್ಟಿಕಟ್ಟುವ ಮನಸ್ಸು ಗೋಡೆಗಳಾಚೆಗೆ ಕಾಣುವುದು ಅಪರೂಪ...

ಯಾರ್ಯಾರಿಗೋ, ಗಟ್ಟಿಮುಟ್ಟಾಗಿದ್ದೇವೆ ಅಂದುಕೊಂಡವರಿಗೆ .... ರ್ ಅಂತೆ ಅಂತ ದಿಢೀರ್ ಗೊತ್ತಾಗುವಾಗಲೆಲ್ಲ ಮನಸ್ಸು ಒದ್ದಾಡುತ್ತದೆ. ಕೇಳಿಸಲು ಕಷ್ಟವಾಗುತ್ತದೆ. ಇನ್ನು ಹೇಳುವುದಾದರೂ ಹೇಗೆ... ರೋಗ ಕಾಡಿದಾಗ ಅಧೀರರಾಗಬೇಕು, ರೋಗಿಯ ಕಡೆಯವರನ್ನು ಕಂಗಾಲಾಗಿಸಬೇಕು ಅನ್ನುವ ಉದ್ದೇಶದ ಬರಹ ಇದಲ್ಲ. ಶಾಸನ ವಿಧಿಸಿದ ಎಚ್ಚರಿಕೆ: ಸಿಗರೇಟು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ... ಎಂಬ ಸಾಲನ್ನು ಚಿಕ್ಕಂದಿನಿಂದಲೇ ಓದಿಕೊಂಡು ಬಂದವರು ನಾವು. ಆದರೆ, ಜೀವಮಾನದಲ್ಲಿ ಸಿಗರೇಟ್ ಮುಟ್ಟಿಯೂ ನೋಡದವರಿಗೆ, ಸಾತ್ವಿಕ ಆಹಾರವನ್ನು ತಿಂದುಕೊಂಡು ಬಂದವರಿಗೆ, ಯಾರಿಗೂ ಏನೂ ಉಪದ್ರ ಮಾಡದೆ ತಮ್ಮ ಪಾಡಿಗೆ ಬದುಕಿದವರಿಗೂ ಬದುಕಿನ ಯಾವ್ಯಾವುದೋ ಘಟ್ಟದಲ್ಲಿ ಕ್ಯಾನ್ಸರ್ ಅಂತೆ ಅಂತ ಗುಸುಗುಸು ಸುರುವಾಗುವಾಗ ಕಾರಣ ಮತ್ತು ಪರಿಣಾಮದ ತಲೆಗೇ ಹೋಗುವುದಿಲ್ಲ.

ಯಾವ ಸೂತ್ರ, ಯಾವ ತರ್ಕ ಹಾಗೂ ಯಾವ ವೈಜ್ಞಾನಿಕ ಸಮರ್ಥನೆಗಳೂ ಅರ್ಥ ಆಗುವುದಿಲ್ಲ. ಐಸಿಯು ಹೊರಗೆ, ಸ್ಕ್ಯಾನಿಂಗ್ ಕೊಠಡಿ ಹೊರಗೆ, ಲ್ಯಾಬೊರೇಟರಿ ಹೊರಗೆ ಕಾದು ಬಸವಳಿದ ಬಂಧುಗಳ ಮುಖ ನೆನಪಾಗುತ್ತದೆ...

ಒಂದು ಅಸ್ಪಷ್ಟತೆ, ಕಾಯುವಿಕೆ, ಸರಿಯದ ಗಡಿಯಾರದ ಮುಳ್ಳುಗಳು, ಉತ್ತರ ಸರಿಯಾಗಿ ಸಿಕ್ಕದ ಹತ್ತಾರು ಪ್ರಶ್ನೆಗಳು, ಅನುಕಂಪಗಳು, ನೂರಾರು ಸಲಹೆಗಳು, ಸುತ್ತಮುತ್ತಲೆಲ್ಲ ನಿರೀಕ್ಷೆಯಿಂದಲೇ ಕುಳಿತ ಆತಂಕಭರಿತ ಮುಖಗಳು... ಇಷ್ಟರ ನಡುವೆ ಐಸಿಯು ಹೊರಗೆ ಕುಳಿತವನ ಬಗ್ಗೆ ಬೇರೆಂತದ್ದೂ ಹೇಳಬೇಕಾದ ಅಗತ್ಯ ಇಲ್ಲ.

ಐಸಿಯು ಒಳಗೆ ರೋಗಿ ಇದ್ದರೆ, ಹೊರಗೆ ಕಾಯುವವರಿಗೆ ಪ್ರತ್ಯೇಕ ರೂಂ ನೀಡುವುದಿಲ್ಲ, ದಿನಪೂರ್ತಿ ನಿಗಾದಲ್ಲಿರುವ ರೋಗಿಗೆ ಬೇಕಾದ್ದನ್ನು ತಂದುಕೊಡುವ ಬಂಧು ಅಲ್ಲಿಯೇ ಕಾಯುತ್ತಿರಬೇಕಾಗುತ್ತದೆ. ದಿನದ ಆಯ್ದ ಸಂದರ್ಭ ಮಾತ್ರ ರೋಗಿಯ ಮುಖದರ್ಶನ ಸಿಗುತ್ತದೆ. ಪ್ರಜ್ಞೆಯಲ್ಲಿದ್ದರೆ, ಬಂಧಿಯಂತೆ ಮಲಗಿದ ರೋಗಿಯ ಪ್ರಶ್ನೆಗೆ ಬಂಧುವೇ ಉತ್ತರ ನೀಡಬೇಕಾಗುತ್ತದೆ. ಹೊರಗೆ ಬಂದ ಮೇಲೆ ತನ್ನ ಬಂಧುಗಳಿಗೆ, ರೋಗಿಯ ಬಂಧು ದಿನಪೂರ್ತಿ ಅಪ್ಡೇಟ್ ನೀಡುತ್ತಲೇ ಇರಬೇಕಾಗುತ್ತದೆ. ಯಾವಾಗ ಬಿಡುಗಡೆ, ಯಾವಾಗ ಸಹಜವಾಗುವುದು, ಮರಳುವುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಪವಾಡದಂಥ ಉತ್ತರ ಸಿಕ್ಕೀತು ಎಂದೇ ಅಲ್ಲಿ ಕುಳಿತ ಬಹುತೇಕರೂ ಪ್ರಾರ್ಥಿಸುತ್ತಲೇ ಇರುತ್ತಾರೆ. ಅದೊಂದು ಬರಹಕ್ಕೂ, ಮಾತಿಗೂ ನಿಲುಕದ ಅನುಭವ, ಮತ್ತೊಮ್ಮೆ ಬಾರದಿರಲಿ ಎಂದೇ ಪ್ರಾರ್ಥಿಸುವ ಅನುಭೂತಿ...

ತೀವ್ರ ನಿಗಾ ಇರುವುದು ಒಳಗಡೆ ರೋಗಿಯ ದೇಹಕ್ಕೆ, ಹೊರಗಡೆ ಕಾಯುವ ಬಂಧುವಿನ ಮನಸ್ಸಿಗೆ ಮತ್ತು ದಿನದ ಅಲ್ಲಲ್ಲಿ ಬೇಡವೆಂದರೂ ಕೇಳುವ ಅಸಹಜ ಅಸೌಖ್ಯಗಳ ಸುದ್ದಿಗಳಿಗೆ... ಏನೇ ವಿಮರ್ಶಿಸಿದರೂ FATE DOESN’T CARE ABOUT YOUR PLANS ಅಲ್ವ?!

-ಕೃಷ್ಣಮೋಹನ ತಲೆಂಗಳ (30.11.2023)

No comments:

Popular Posts