ಟರ್ಪಲ್ ಪರದೆಯ ಬಸ್ಸುಗಳು ಮತ್ತು ಗಾಢ ಮಳೆ ನೆನಪು... PRIVATE BUS

 

photo courtesy; internet


ನಮ್ಮ ಬಾಲ್ಯದಲ್ಲಿ ನಾವು ಬಹುತೇಕ ಓಡಾಡ್ತಾ ಇದ್ದದ್ದು ಪ್ರೈವೇಟ್ ಬಸ್ಸುಗಳಲ್ಲಿ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕೆಎಸ್ಸಾರ್ಟೀಸಿ ಬಸ್ಸುಗಳಿದ್ದದ್ದು (ಸ್ಥಳೀಯವಾಗಿ ಹೇಳುವುದಾದರೆ ಸ್ಟೇಟ್ ಬಸ್ಸುಗಳು) ಬೆರಳೆಣಿಕಯಷ್ಟು ಮಾತ್ರ. ಈ ಪ್ರೈವೇಟ್ ಬಸ್ ಗಳು ಆಗಾ ಸಾದಾಸೀದಾ ಆಗಿದ್ದವು. ಸರಳ ಬಸ್ಸುಗಳು. ಬಸ್ಸಿನ ಕಿಟಕಿಗಳಿಗೆ ಗಾಜಿನ ಸ್ಲೈಡುಗಳಿರಲಿಲ್ಲ. ಉದ್ದದ ಟಾರ್ಪಲನ್ನು ಕಿಟಕಿಯ ಮೇಲೆ ಫಿಕ್ಸ್ ಮಾಡಿ ಅದನ್ನು ಮಡಚಿ ಅಲ್ಲಲ್ಲಿ ತಂಗೀಸಿನ ಹಗ್ಗದಿಂದ ಮೇಲಿನ (ಕಿಟಕಿ ದಾರಂದದ) ಮೊಳೆಗೆ ಸಿಕ್ಕಿಸುತ್ತಿದ್ದರು (ಸಾಂದರ್ಭಿಕ ಫೋಟೋದಲ್ಲಿ ನೋಡಿ). ಧಾರಾಕಾರ ಮಳೆ ಬರುವಾಗ ಈ ಎಲ್ಲ ಹಗ್ಗಗಳನ್ನು ಬಿಚ್ಚಿದಾಗ ಟಾರ್ಪಲ್ ಪರದೆ ಇಳಿಯಲ್ಪಟ್ಟು ಕಿಟಕಿಗಳನ್ನು ಮುಚ್ಚಿ ಮಳೆಯಿಂದ ರಕ್ಷಣೆ ಕೊಡುತ್ತಿತ್ತು. ಈಗಲೂ ಇಂತಹ ಬಸ್ಸುಗಳಿವೆ, ಆದರೆ ಬೆರಳೆಣಿಕೆಯಷ್ಟು ಮಾತ್ರ.

ಆಗ ನಾವು ನೋಡ್ತಾ ಇದ್ದ ಬಸ್ಸಿನ ಕಿಟಕಿಗಳಲ್ಲಿ ಮೂರು ವಿಧ. ಒಂದು ಕೆಎಸ್ಸಾರ್ಟೀಸಿಯವರ ಕೆಂಪು ಬಸ್ಸು, ಅದರ ಕಿಟಕಿಗೆ ಗಾಜಿನ ಸ್ಲೈಡುಗಳಿದ್ದವು. ಇನ್ನೊಂದು ಈಗಿನ ಕೇರಳದ ಮಲಬಾರ್ ಬಸ್ಸುಗಳಲ್ಲಿ ಕಾಣುವ ಶಟರ್ ಮಾದರಿ ಕಿಟಕಿ ಪರದೆ. ಒಂದೊಂದು ಸೀಟಿಗೆ ಒಂದೊಂದು ಶಟರ್. ಮತ್ತೊಂದು ನಾನು ಆರಂಭದಲ್ಲಿ ಉಲ್ಲೇಖಿಸಿದ ಟಾರ್ಪಲಿನ್ ತಡೆ. ನಮ್ಮೂರಿನ ಭಾಷೆಯಲ್ಲಿ ಟರ್ಪಲ್ ಬಸ್ಸು...

ಈ ಟರ್ಪಲ್ಲು ಬಸ್ಸಿನ ಸಮಸ್ಯೆ ಅಂದರೆ, ಧಾರಾಕಾರ ಚಳಿ ಹಿಡಿಸುವ ಮಳೆ ಬಂದಾಗ, ಇಡೀ ಬಸ್ಸಿನಲ್ಲಿ ರಶ್ಶಿರುವಾಗ ಎರಡೂ ಪಕ್ಕದ ಟಾರ್ಪಲ್ ಪರದೆ ಇಳಿಸಿದರೆ, ಒಳಗಿರುವ ಪ್ರಯಾಣಿಕನಿಗೆ ತಾನು ಯಾವ ಸ್ಟಾಪಿಗೆ ತಲುಪಿದೆ ಎಂದೇ ಗೊತ್ತಾಗುತ್ತಿರಲಿಲ್ಲ. ಒಳಗೆ ಕವಿದ ಕತ್ತಲು ಬೇರೆ. ಭಯಂಕರ ಮಳೆ ಇರುವಾಗ ರಾತ್ರಿಯಂತೆ ಒಳಗಿನ ಲೈಟು ಹಾಕಿ ಹೋಗಬೇಕಾದ ಸಂದರ್ಭವೂ ಇತ್ತು. ಒಳಗೆಲ್ಲ ಉಸಿರು ಕಟ್ಟಿದ ವಾತಾವರಣ. ಜೊತೆಗೆ ಮಳೆ ಜೊತೆಗೆ ಬಿರುಗಾಳಿ ಬರುವಾಗ ಟಾರ್ಪಲ್ ಪರದೆ ನಿಯಂತ್ರಣಕ್ಕೆ ಸಿಕ್ಕದೆ ರೆಕ್ಕೆಯಂತೆ ಹಾರಿ ಒಳಗೆ ಮಳೆ ನೀರಿನ ಸಿಂಚನವಾಗುತ್ತಿತ್ತು. ಮೈ ಒದ್ದೆಯಾಗುತ್ತಿತ್ತಲೂ ಇತ್ತು. ತುಂಬ ಸಲ ಕಂಡಕ್ಟರ್ ಅಥವಾ ಕ್ಲೀನರ್ ಬಂದು ಒದ್ದೆಯಾದ ಸೀಟುಗಳನ್ನು ಒರೆಸಬೇಕಾಗುತ್ತಿತ್ತು.

ಇನ್ನೊಂದು ಸಮಸ್ಯೆ ಏನೆಂದರೆ, ಮಳೆ ನಿಂತಾಗ ಅಥವಾ ಪಿರಿಪಿರಿ ಮಳೆ ಬರುವಾಗ ಒಂದು ಸೀಟಿನವನಿಗೆ ಗಾಳಿ ಬೇಕು ಅನ್ನಿಸುತ್ತದೆ. ಮತ್ತೊಂದು ಸೀಟಿನವನಿಗೆ ಒಂದು ಬಿಂದು ನೀರೂ ಒಳಗೆ ಸೇಚನವಾಗಬಾರದು ಅಂತ ಇರುತ್ತದೆ. ಆಗ ಭಾರಿ ಕಷ್ಟ. ಯಾಕೆಂದರೆ ಒಂದು ಕಿಟಕಿ ಪಕ್ಕ ಕೂತವ ಟಾರ್ಪಲ್ ಎತ್ತಿ ಕಟ್ಟಿದರೆ ಅದು ಮತ್ತೆ ಮೂರು ಕಿಟಕಿಯಷ್ಟು ವ್ಯಾಪ್ತಿಯನ್ನು ಹೊರ ಜಗತ್ತಿಗೆ ತೋರಿಸುತ್ತಿತ್ತು! ಇದೇ ವಿಚಾರದಲ್ಲಿ ತುಂಬ ಸಲ ಚೊರೆ ಆದದ್ದು, ಜಗಳ ಆದದ್ದೂ ಇದೆ. ಮತ್ತೆ ಮಹಿಳೆಯರು, ವೃದ್ಧರು, ಮಕ್ಕಳಿಗೆ ಈ ಟಾರ್ಪಲಿನ ಪರದೆಯನ್ನು ನಯವಾಗಿ ಮಡಚಿ, ಅಷ್ಟೆತ್ತರದ ಮೊಳೆಗೆ ಅದರ ಹಗ್ಗ ಸಿಕ್ಕಿಸಲು ಬಲ ಸಾಕಾಗುತ್ತಿರಿಲಿಲ್ಲ. ಆಗ ಕ್ಲೀನರ್ ಎಂಬ ಹೀರೋ ಬಂದು ಚಕಚಕನೆ ಆ ಟಾರ್ಪಲ್ ಸುರುಳಿ ಸುತ್ತಿ ಕಟ್ಟುವ ಸಾಹಸ ನೋಡುವುದು ಒಂದು ಕುತೂಹಲವಾಗಿರುತ್ತಿತ್ತು.

ಕೆಲವರಿಗೆ ಹೊರಗಿನ ಗಾಳಿಯ ಭಯಂಕರ ಆಕಾಂಕ್ಷೆ ಇರುತ್ತದೆ. ಅಂತವರು ಪಿರಿಪಿರಿ ಮಳೆ ಶುರುವಾದಗಲೂ ತನ್ನ ಕಿಟಕಿ ಪಕ್ಕದ ಹಗ್ಗ ಕಳಚಿ ಟಾರ್ಪಲ್ ಪರದೆ ಇಳಿಸುವುದೇ ಇಲ್ಲ. ಆಗ ಹಿಂದೆ, ಮುಂದೆ ಕೂತವರಿಗೂ ಮಳೆ ನೀರಿನ ಪ್ರೋಕ್ಷಣೆ ಆಗುತ್ತದೆ. ಮತ್ತೆ ಅಲ್ಲಿ ಚಿರಿಪಿರಿ ಶುರು. ಇಷ್ಟು ಮಾತ್ರವಲ್ಲ. ಮಳೆ  ನಿಂತು ಟಾರ್ಪಲ್ ಪರದೆ ಎತ್ತಿ ಕಟ್ಟಿದ ಬಳಿಕವೂ ಅದರಿಂದ ಮಳೆ ಕುರುಹಿನ ನೀರಿನ ಬಿಂದುಗಳು ಕೆಲ ಗಂಟೆಗಳ ಕಾಲ ತೊಟ್ಟಿಕ್ಕುತ್ತಲೇ ಇರುವುದು ಸಾಮಾನ್ಯ. ಮತ್ತೆ ಒಣಗುವ ಮೊದಲೇ ಈ ಟಾರ್ಪಲ್ ಪರದೆ ಎತ್ತಿ ಕಟ್ಟಿದರೆ ಅದರಿಂದ ವಿಚಿತ್ರ ವಾಸನೆ ಕೂಡ ಹೊರಬರುತ್ತಿತ್ತು. ಮಳೆ ಇಲ್ಲದಿದ್ದರೂ ಲಾಸ್ಟ್ ಟ್ರಿಪ್ ಮುಗಿಸಿ ವಿಶ್ರಾಂತಿಯಲ್ಲಿರುವ ಬಸ್ಸಿನ ಟಾರ್ಪಲ್ ಇಳಿ ಬಿಡುವುದು ಸಾಮಾನ್ಯ ಸಂಗತಿಯಾಗಿರ್ತಾ ಇತ್ತು. ಟಾರ್ಪಲ್ ಪರದೆ ಹರಿದು ಮಳೆ ನೀರು ಒಳಗೆ ನುಗ್ಗುವುದು ಮತ್ತೊಂದು ಸಮಸ್ಯೆ. ಜೋರು ಗಾಳಿಗೆ ಅದು ಪಟಪಟ ಹೊಡೆದುಕೊಳ್ಳುತ್ತಾ ಸದ್ದಾಗುವುದು ಮತ್ತೊಂದು ಬೆಳವಣಿಗೆ.

ಬೆಳಗ್ಗೆ ಫಸ್ಟ್ ಟ್ರಿಪ್ ಶುರುವಾಗುವ ಮೊದಲು ದೇವರ ಫೋಟೋಗೆ ಮಾಲೆ ಹಾಕಿ, ಊದುಬತ್ತಿ ಹೊತ್ತಿಸುವ ಜೊತೆಗೆ ಈ ಟಾರ್ಪಲ್ ಪರದೆ ಎತ್ತಿ ಕಟ್ಟುವುದು ಸಹ ಕಂಡಕ್ಟರ್ ಅಥವಾ ಕ್ಲೀನರ್ ಜವಾಬ್ದಾರಿಯೂ ಹೌದು.

ನಂತರ ನಾವು ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಟಾರ್ಪಲ್ ಬಸ್ಸುಗಳ ಜಾಗಕ್ಕೆ ಗ್ಲಾಸಿನ ಸ್ಲೈಡುಗಳಿರುವ ಬಸ್ಸುಗಳು ಬರಲು ಶುರುವಾದವು. ಆದರೆ, ಈಗಲೂ ಅಂತಹ ಬಸ್ಸುಗಳು ಅಲ್ಲೊಂದು, ಇಲ್ಲೊಂದು ಕಾಣುತ್ತವೆ.

ಎಡೆಬಿಡದೆ ಗಾಳಿ ಜೊತೆ ಧಾರಾಕಾರ ಮಳೆ ಶುರುವಾಗುವಾಗ ಎಲ್ಲಿ ನಾವು ಇಳಿಯಬೇಕಾದ ಸ್ಟಾಪು ತಪ್ಪಿ ಹೋಗುತ್ತದೋ ಎಂಬ ಆತಂಕದಲ್ಲಿ ಇಂತಹ ಬಸ್ಸುಗಳಲ್ಲಿ ಹೋಗ್ತಾ ಇದ್ದದ್ದು, ಆಗಾಗ ಟಾರ್ಪಲ್ ಎತ್ತಿ ಮಳೆ ನಿಂತಿತ?” ಅಂತ ನೋಡ್ತಾ ಇದ್ದದ್ದು, ಹಳೆಯ ಮನೆಯ ಉಪ್ಪರಿಗೆಯಲ್ಲಿ ಜೋರು ಮಳೆ ಬಂದಾಗ ಕೂರುತ್ತಿದ್ದಂತಹ ಫೀಲ್ ನ್ನು ಇಂತಹ ಬಸ್ಸುಗಳು ಕಟ್ಟಿ ಕೊಡ್ತಾ ಇದ್ದದ್ದು ಎಲ್ಲ ನೆನಪಾಗ್ತವೆ. ಯಾವುದೋ ಕೇಸಿನಲ್ಲಿ ಸಿಕ್ಕಿ ಪೊಲೀಸ್ ಸ್ಟೇಷನಿನಲ್ಲಿ ನಿಂತ, ತುಂಬ ಹಾಳಾಗಿ ಗುಜರಿಗೆ ಸೇರುವ ಹಂತದಲ್ಲಿ ಯಾವುದೋ ಹಳೆ ಸೈಟಿನಲ್ಲ ನಿರ್ಲಿಪ್ತವಾಗಿ ನಿಂತಿರುವ ಇಂತu ಬಸ್ಸುಗಳು ಶಾಶ್ವತ ಮೌನವೋ ಎಂಬಂತೆ ಕಿಟಕಿಗೆ ಟಾರ್ಪಲ್ ಬರದೆ ಇಳಿಬಿಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಾಗ ದೊಡ್ಡದೊಂದು ವಿಷಾದದ ಭಾವ ಹಾದು ಹೋಗುವುದು ಸುಳ್ಳಲ್ಲ...


ಮಳೆಗಾಲದ ಕತೆ ಏನೇ ಇರಲಿ... ಸೆಕೆಯಿಂದ ಬಳಲುವ ಬೇಸಿಗೆ ಕಾಲಕ್ಕೆ ತೆರೆದ ವಿಶಾಲ ಕಿಟಕಿಗಳಿರುವ, ಸಾಕಷ್ಟು ಗಾಳಿ ಸಂಚಾರ ಇರುವ ಇಂತಹ ಬಸ್ಸುಗಳು ಆರಾಮದಾಯಕವೇ ಸರಿ.

 ನಿಮ್ಮ ಬಾಲ್ಯದಲ್ಲೂ ಇಂತಹ ನೆನಪುಗಳು ಇದ್ದವ? ಕೊನೆ ತನಕ ಯಾರಾದರೂ ಬರೆಹ ಓದಿದ್ದರೆ ಕಮೆಂಟ್ ಬಾಕ್ಸಿನಲ್ಲಿ ನಿಮ್ಮ ನೆನಪು ಹಂಚಿಕೊಳ್ಳಿ...

-ಕೃಷ್ಣಮೋಹನ ತಲೆಂಗಳ (29.07.2025)

No comments: