I Saw "Su from So…" what about you?! ಕುಡ್ಲದವರೇ ಮಾಡಿದ ಮತ್ತೊಂದು ಚಂದದ ಸಿನಿಮಾ...

 



ಕಾಂತಾರ ಸಿನಿಮಾ ಬಿಡುಗಡೆಗೆ ಮೊದಲು ಅದೆಂತ ದೊಡ್ಡ ಸದ್ದು ಮಾಡಿರಲಿಲ್ಲ. ಬಿಡುಗಡೆಯಾದ ತಕ್ಷಣ ಫೇಸ್ಬುಕ್ಕಿನಲ್ಲಿ ಬರೆದದ್ದು ನೋಡಿ, ನೋಡಿಯೇ ಪ್ರಚಾರ ಆಯ್ತು... ಜನ ತುಂಬ ಇಷ್ಟ ಪಟ್ರು. ಬಹುಶಃ ಅದೇ ಸಾಲಿಗೆ ಸೇರಬಹುದಾದ ಬಾಯಿ ಮಾತಲ್ಲೇ ಪ್ರಚಾರ ಪಡೆಯುತ್ತಿರುವ ಮತ್ತೊಂದು ಸಿನಿಮಾ ಸು ಫ್ರಂ ಸೋ (ಸುಲೋಚನಾ ಫ್ರಂ ಸೋಮೇಶ್ವರ). ಸಿನಿಮಾ ಬಿಡುಗಡೆ ಆಗಿದ್ದು ನಿನ್ನೆ. ಇವತ್ತು ಬೆಳಗ್ಗಿನಿಂದಲೇ ಫೇಸ್ಬುಕ್ಕು ಗೋಡೆಯಲ್ಲಿ ವಾಟ್ಸಪ್ಪು ಸ್ಟೇಟಸ್ಸಿನಲ್ಲಿ ಇದೇ ಸಿನಿಮಾದ್ದೇ ಸುದ್ದಿ... ಅದು ನನ್ನನ್ನೂ ಸಿನಿಮಾಗೆ ಕರೆದುಕೊಂಡು ಹೋಯಿತು... ಈಗ ನಾನೂ ಅದೇ ಸಾಲಿಗೆ ಸೇರಿದೆ. ನನಿಗೂ ಅದರ ಬಗ್ಗೆ ಬರೆಯಬೇಕು ಅಂತ ಆಸೆ ಆಯಿತು.

ನಾನು ಮಂಗಳೂರಿನವ. ಸಹಜವಾಗಿ ನನಗೆ ಮಂಗಳೂರು ಭಾಷೆ, ಮಂಗಳೂರಿನ ನಟರು, ಮಂಗಳೂರಿವರ ಆಟಿಟ್ಯೂಡ್, ಮಂಗಳೂರಿನವರ ಜೋಕುಗಳು... ಮ್ಯಾನರಿಂಸ ಇಷ್ಟ... ರಾಜ್ ಶೆಟ್ಟಿ ಮತ್ತು ತಂಡದವರ ನಿರ್ಮಾಣದ ಈ ಚಿತ್ರ ನಿರ್ದೇಶಕರು ಪ್ರಸಿದ್ಧ ತುಳು ರಂಗ ನಟ ಜೆ.ಪಿ.ತೂಮಿನಾಡು. ಇದೊಂದು ತುಳು ಸಿನಿಮಾ ಆಗಬಹುದಿತ್ತು. ತುಳು ನಟರನ್ನೇ ಹಾಕಿ, ತುಳು ಸಿನಿಮಾ ಫಾರ್ಮುಲಾದಲ್ಲೇ ಮಾಡಬಹುದಿತ್ತು. ಆದರೆ, ಅದನ್ನೂ ಮೀರಿ ಮಂಗಳೂರಿನ ನೇಟಿವಿಟಿ ಇಟ್ಕೊಂಡೇ ಕನ್ನಡ ಸಿನಿಮಾ ಮಾಡಿದ್ದು, ಭಯಂಕರ ಸ್ಟಾರ್ ನಟರು ಯಾರೂ ಇಲ್ಲದಿದ್ದರೂ ಅಷ್ಟೂ ಮಂದಿ ರಂಗ ನಟರೇ ನಟಿಸಿರುವ ಚಂದದ ಕುಡ್ಲದ ಶೈಲಿ ಸಿನಿಮಾ ಸು ಫ್ರಂ ಸೋ...

ಜೆಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ಶನಿಲ್ ಗುರು, ಪೂರ್ಣಿಮಾ ಸುರೇಶ್, ದೀಪಕ್ ರೈ ಪಾಣಾಜೆ ಸಹಿತ ಸಾಲು ಸಾಲು ಮಂದಿ ತುಳು ರಂಗಭೂಮಿಯಿಂದಲೇ ಬಂದವರು. ಈ ಪೈಕಿ ಜೆಪಿ ತೂಮಿನಾಡು ಇಷ್ಟು ಚಂದ ನಿರ್ದೇಶನ ಮಾಡಿದ್ದು ಹೆಮ್ಮಯ ಸಂಗತಿ. ಪ್ರಧಾನ ಪಾತ್ರದಲ್ಲಿ ಕೊನೆ ವರೆಗೂ ಅವರು ನಿಜವಾಗಿ  ಮೈಮೇಲೆ ದೆವ್ವ ಬಂದವರ ಹಾಗೆ ವಿಜೃಂಭಿಸಿದ್ದಾರೆ.

ಕುಡ್ಲದ ಕಡೆಯ ಚಂದದ ಒಂದು ಓಣಿ, ಸಾಲು ಸಾಲು ಮನೆಗಳ ನಡುವಿನ ಅಂಕುಡೊಂಕು ದಾರಿ, ಟಿಪಿಕಲ್ ಗೂಡಂಗಡಿ, ಹಳ್ಳಿಯ ಹಳೇ ಮನೆಗೆ ಇಳಿಯುವ ಚಡಾವು ರಸ್ತೆಯಲ್ಲಿ ಜಾರುವಂಥ ಕೆಸರು, ಮತ್ತೆ ದಳಿಗಳ ಕಿಟಕಿ, ಹೆಂಚಿನ ಮಾಡು, ಚೊಂಬಿನಲ್ಲಿ ನೀರು, ಹಳೇ ಶೈಲಿಯ ಸ್ವಿಚ್ ಬೋರ್ಡ್... ಪ್ರತಿ ಫ್ರೇಮಿನಲ್ಲೂ ಇಲ್ಲಿನ ಸೊಬಗು ಕಾಣುತ್ತದೆ. ಇಡೀ ಸಿನಿಮಾದಲ್ಲಿ ಎಲ್ಲಿಯೂ ಪೇಟೆ ಕಾಣಿಸುವುದೇ ಇಲ್ಲ...!! ಕತೆಯ ಬಗ್ಗೆ ನಾನು ಇಲ್ಲಿ ಎಂತ ಸಾ ಹೇಳುವುದಿಲ್ಲ, ಆಯ್ತ? ನೋಡಿ ತಿಳಿಯಬೇಕು. ಒಟ್ಟೂ ಸಿನಿಮಾಗೆ ಕಾಮಿಡಿಯೇ ಜೀವಾಳ. ಸಿನಿಮಾ ಶುರುವಿನಿಂದಲೂ ಕೊನೆ ತನಕ ಇಡೀ ಟಾಕೀಸ್ ನಗುತ್ತಲೇ ಇತ್ತು. ಸಹಜವಾಗಿ ಮಂಗಳೂರಿನವರಿಗೆ ಇದು ಇಷ್ಟವಾಗಿಯೇ ಆಗುತ್ತದೆ. ನಡು ನಡುವೆ ತುಳು ಶಬ್ದಗಳು, ಹಾಡಿನಲ್ಲೂ ತುಳು ಸಾಲುಗಳಿರುವುದು ಬೆಂಗಳೂರು ಭಾಗದವರಿಗೆ ಸುಲಭದಲ್ಲಿ ಅರ್ಥ ಆಗಲಿಕಿಲ್ಲ... ಕೊನೆಯ ಸುಮಾರು ಅರ್ಧ ಗಂಟೆ ವರೆಗೂ ಹಾರರ್ ಮತ್ತು ಕಾಮಿಡಿ ಧಾಟಿಯಲ್ಲೇ ಹೋಗುವ ಸಿನಿಮಾ ಅಂತಿಮ ಅರ್ಧ ಗಂಟೆಯಲ್ಲಿ ಚಂದದ ಒಂದು ಸಂದೇಶ ಮತ್ತು ಭಾವುಕ ಸನ್ನಿವೇಶ ಕಟ್ಟಿಕೊಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ..

ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕತೆಯ ಬೇರು. ಬೀದಿಯಲ್ಲಿ, ಅಂಗಡಿಯಲ್ಲಿ, ವಠಾರದಲ್ಲಿ ಕಾಣುವವರೇ ಪಾತ್ರಗಳು... ಸಂದರ್ಭ ಸಿಕ್ಕಿದರೆ ಸಾಕು ವೇದಿಕೆ ಹತ್ತಿ ಸಮಿತಿ ಕಟ್ಟಿ ಒಣ ಭಾಷಣ ಮಾಡುವ ವೀರರು, ಲೋಕಲ್ ಪುಢಾರಿಗಳು, ಸಮಾರಂಭಗಳಲ್ಲಿ ಸುಧಾರಿಕೆ ಮಾಡಿದಂತೆ ಬರಿದೇ ಓಡಾಡುವ ಬಾಯಿ ಬಡುಕರು, ಭೂತ ಬಿಡಿಸುವ ನೆಪದಲ್ಲಿ ಮೂಢನಂಬಿಕೆಗೆ ಒಗ್ಗರಣೆ ಹಾಕುವ ಕಪಟಿಗಳು, ವದಂತಿಯೊಂದನ್ನು ನಿಜವಾಗಿಸುವ ಬಾಯಿ ಪಟಾಕಿಗಳು... ಪ್ರತಿಯೊಂದು ಸಂಗತಿ ಸಹ ಚಂದಕ್ಕೆ ಮೂಡಿಬಂದಿದೆ. ಟ್ರೈಲರಿನಲ್ಲೂ ಕಾಣಸಿಗದ ರಾಜ್ ಬಿ. ಶೆಟ್ಟಿ ಸಿನಿಮಾದ ನಡುವಿನಲ್ಲೊಂದು ಅಚ್ಚರಿ!

ಭಯ ಇರುವುದು ಮನಸ್ಸಿನಲ್ಲಿ, ಪರಿಸ್ಥಿತಿ ಹದಗೆಡುವುದು ಅದನ್ನು ನೋಡುವ ದೃಷ್ಟಿಯಲ್ಲಿ ಮತ್ತು ಪರಿಸ್ಥಿತಿಗಳ ಬದಲಾಗುತ್ತಾ ಹೋಗುವುದು ಆಯಾ ಸಂದರ್ಭದ ಮನಃಸ್ಥಿತಿಯಲ್ಲಿ ಅನ್ನುವುದನ್ನು ಈ ಸಿನಿಮಾ ಚಂದಕೆ ಕಟ್ಟಿ ಕೊಟ್ಟಿದೆ.. ಹಾಡುಗಳಿವೆ, ಫೈಟಿಂಗೂ ಇದೆ. ರೋಮಾನ್ಸ್, ಮರ ಸುತ್ತುವ ಹಾಡುಗಳು ಖಂಡಿತಾ ಇಲ್ಲ. ಆದರೆ ಲವ್ ಇದೆ... ಅದರಿಂದಲೇ ಕತೆ ಶುರುವಾಗುವುದು ಮತ್ತು ಮುಗಿಯುವುದು. ಮತ್ತೆ ಒಂದೆರಡು ಕಡೆ ಅಪ್ಪಟ ತುಳುವಿನ ಬೇವರ್ಸಿಗಳೂ ಬಂದು ಹೋಗುತ್ತಾರೆ!

ಹಿಂದೆಲ್ಲ ಸಿನಿಮಾಗಳಲ್ಲಿ ಮಂಗಳೂರು ಕನ್ನಡ ಅಂತ ಅಪಹಾಸ್ಯ ಮಾಡುವಾಗ ಬೇಸರ ಆಗ್ತಾ ಇತ್ತು. ಇವತ್ತು ರಾಜ್ಯವೇ ತಿರುಗಿ ನೋಡುವಂತೆ ಮಂಗಳೂರಿನವರೂ ನಿಜವಾದ ಮಂಗಳೂರು ಕನ್ನಡದಲ್ಲಿ ಸಿನಿಮಾ ಮಾಡುವುದು ಮತ್ತು ಅದು ಜನರಿಗೆ ಇಷ್ಟವಾಗುವುದು ಮತ್ತಷ್ಟು ಖುಷಿ ಕೊಡುತ್ತದೆ.

ಸೋ... I saw SU from SO… what about you?

-ಕೃಷ್ಣಮೋಹನ ತಲೆಂಗಳ (26.07.2025)

No comments:

Popular Posts