ಮೌನ ಕಳಚುವ ಭ್ರಮೆಗಳಿಗೆ ವಾಸ್ತವವೇ ಕನ್ನಡಿ... ಜೀವಂತ ಕಾಣುವ ಸಾವಿನ ಹಾಗೆ!
1) ಒಂದು ಕಾಲದಲ್ಲಿ ಮೊಬೈಲ್ ಕೈಗೆ ಬರುವ ಮೊದಲು ಲ್ಯಾಂಡ್ ಫೋನ್ ಬಳಸುತ್ತಿದ್ದೆವು. ಇಂದು ಮೊಬೈಲ್ ಯುಗ. ಲ್ಯಾಂಡ್ ಫೋನ್ ಬೇಕಾಗಿಲ್ಲ. ಮನೆಯ ಮೂಲೆಯಲ್ಲೆಲ್ಲೋ ಲ್ಯಾಂಡ್ ಫೋನ್ ಸೆಟ್ ಬಿದ್ದಿರಬಹುದು. ಆ ಫೋನಿನಲ್ಲಿ ಗಂಟೆಗಟ್ಟಲೆ ಮಾತನಾಡಿದ ಭಾವುಕ ನೆನಪಗಳು ಜೊತೆಗಿರಬಹುದು. ಹಾಗಂತ ದಿನಾ ಆ ಫೋನನ್ನು ಯಾರಾದರೂ ಹೋಗಿ ಸ್ವಚ್ಛಗೊಳಿಸಿ ಕಷ್ಟ ಸುಖ ವಿಚಾರಿಸ್ತಾರ? ವರ್ಕಿಂಗ್ ಕಂಡೀಶನಿನಲ್ಲುಂಟ ಅಂತ ನೋಡುತ್ತಾರ? ಅಸಲಿಗೆ ಹಾಗೆ ನೋಡಿ ಏನಾದರೂ ಪ್ರಯೋಜನ ಉಂಟ, ಯಾರಿಗೂದರು ಅಷ್ಟು ಪುರುಸೊತ್ತಾದರೂ ಇರ್ತದ?
2)
ಪ್ರಯಾಣದ ವೇಳೆ ದಿಢೀರ್ ವಾಹನದ ಟಯರ್ ಪಂಕ್ಚರ್
ಆಗಬಹುದು, ಬ್ರೇಕ್ ಫೇಲೋ, ಗೇರ್ ಸಮಸ್ಯೆಯೋ, ಪೆಟ್ರೋಲ್ ಸಮಸ್ಯೆಯೋ ಆಗಿ ವಾಹನ ಅರ್ಧ ದಾರಿಯಲ್ಲಿ
ಬಾಕಿಯಾಗಬಹುದು. ನಾವು ಹತಾಶರಾಗಬಹುದು. ಮುಂದೇನು ಅಂತ ತೋಚದೆ ಕಂಗೆಡಬಹುದು. ನಮ್ಮನ್ನು ಸವರಿ
ಸವರಿಯೇ ಅದೇ ರಸ್ತೆಯಲ್ಲಿ ಹತ್ತಾರು, ಕೆಲವೊಮ್ಮೆ ನೂರಾರು ವಾಹನಗಳು, ಪಾದಚಾರಿಗಳು
ಪ್ರವಾಹದೋಪಾದಿಯಲ್ಲಿ ಹೋಗುತ್ತಲೇ ಇರುತ್ತಾರೆ. ಅವರಲ್ಲಿ ಎಷ್ಟು ಮಂದಿ ತಾವಾಗಿ ತಮ್ಮ ವಾಹನ
ನಿಲ್ಲಿಸಿ ಏನಾಯ್ತು? ಅಂತ ಕೇಳ್ತಾರೆ ಹೇಳಿ... ತುಂಬ ಮಂದಿ ಏನೋ ವೈಯಕ್ತಿಕ ಕಾರಣಕ್ಕೆ
ವಾಹನ ಪಕ್ಕಕ್ಕೆ ಹಾಕಿದ್ದಾರೆ ಅಂದುಕೊಂಡಾರು, ಇನ್ನಷ್ಟು ಮಂದಿ ನಮಗ್ಯಾಕೆ ಅಧಿಕಪ್ರಸಂಗ ಸಹಾಯ
ಬೇಕಾದರೆ ಅವರೇ ಕೇಳಿಯಾರು ಅಂದುಕೊಂಡು ಮುಂದೆ ಹೋದಾರ, ಮತ್ತಷ್ಟು ಮಂದಿ, “ನಾನೀಗ ಬಿಝಿ ಇದ್ದೇನೆ. ಇಲ್ಲಿ ವಾಹನ ನಿಲ್ಲಿಸಿ
ಇವನನ್ನು ವಿಚಾರಿಸಿದರೆ ನಾನು ತಲುಪಬೇಕಾದಲ್ಲಿಗೆ ಕ್ಲಪ್ತ ಸಮಯ ತಲುಪಲು ಕಷ್ಟ, ಯಾರೋ ಅವರಿಗೆ
ಸಹಾಯ ಮಾಡ್ತಾರೆ ಬಿಡಿ” ಅಂತ ಮುಂದೆ ಹೋಗ್ತಾರೆ... ಅದೆಲ್ಲ ಬಿಡಿ... ನೀವೆ ಆ ದಾರಿಯಲ್ಲಿ
ಹೋಗುವವರಾಗಿದ್ದರೆ, ಬೇರೆಯವರ ಗಾಡಿ ರಸ್ತೆ ಬದಿ ಅಸಹಾಯಕವಾಗಿ ನಿಂತಿದ್ದರೆ ಎಷ್ಟು ಸಲ ನಿಲ್ಲಿಸಿ
ವಿಚಾರಿಸಿದ್ದೀರಿ?, ಸಹಾಯ ಮಾಡಿದ್ದೀರಿ? ಯೋಚಿಸಿ ನೋಡಿ, ಸುಮ್ನೆ ಒಮ್ಮೆ ನೆನಪು ಮಾಡಿಕೊಳ್ಳಿ...!
3)
ಒಬ್ಬ ವ್ಯಕ್ತಿ ತಾನು ಗಟ್ಟಿಮುಟ್ಟಾಗಿ ಇರುವಾಗ
ವ್ಯವಸ್ಥೆಯನ್ನು ಟೀಕಿಸುತ್ತಾ, ವಿಮರ್ಶಿಸುತ್ತಾ ಎಲ್ಲರ ಪಾಲಿಗೆ ನಿಷ್ಠುರ ವ್ಯಕ್ತಿಯಾರ್ತಾನೆ. ತನಗೆ
ಕಂಡದ್ದನ್ನು ಕಂಡ ಹಾಗೆ ಮಾತನಾಡಿ ಹಲವರ ಕೆಂಗಣ್ಣಿಗೆ ತುತ್ತಾಗಿರುತ್ತಾನೆ. ತನಗೆ ಅಗತ್ಯವೇ
ಇಲ್ಲದಿದ್ದರೂ ವ್ಯಕ್ತಿಗಳನ್ನು, ವ್ಯವಸ್ಥೆಯನ್ನು, ಆಗುಹೋಗುಗಳನ್ನು ವಿಮರ್ಶೆ ಮಾಡಿ ಎಲ್ಲರ
ದೃಷ್ಟಿಯಲ್ಲಿ “ನೋಟೆಡ್” ಆಗಿರುತ್ತಾನೆ. ದುರಾದೃಷ್ಟವಶಾತ್ ಆತ ಅಸಹಾಯಕನಾದರೆ,
ಅನಾರೋಗ್ಯಪೀಡಿತನಾದರೆ, ಮುಖ್ಯ ವಾಹಿನಿಯಿಂದ ವಿಮುಖನಾಗಿ ಬದುಕುವ ಸಂದರ್ಭ ಬಂದರೆ,
ಮರಣಶಯ್ಯೆಯಲ್ಲಿ ದಿನದೂಡುವ ಪರಿಸ್ಥಿತಿ ಬಂದರೆ ತನ್ನ ಅಷ್ಟೂ ಸಿದ್ಧಾಂತಗಳ ಬಗ್ಗೆ
ಯೋಚಿಸುವಂತಾಗುತ್ತದೆ. ಜನ ಆತನನ್ನು ದೂರವಿಟ್ಟಿರುತ್ತಾರೆ, ಬಹಳಷ್ಟು ಮಂದಿಗೆ ಆತನ ಪರಿಸ್ಥಿತಿ
ಗೊತ್ತಾಗುವುದಿಲ್ಲ, ಗೊತ್ತಾದರೂ ಸಹಾಯ ಮಾಡಲು ಇಚ್ಛಿಸುವುದಿಲ್ಲ, ಕೆಲವಷ್ಟು ಮಂದಿ ಆತನ
ಅಸಹಾಯಕತೆ ಕಂಡು ಖುಷಿ ಪಟ್ಟಾರು, ಹತ್ತಿರದಿಂದ ಆತನನ್ನು ಕಂಡ ಒಂದಷ್ಟು ಮಂದಿ ಆಧರಿಸಿಯಾರು
ಬಿಟ್ಟರೆ ಜನಪ್ರಿಯನಲ್ಲದ, ವಸ್ತುನಿಷ್ಠವಾಗಿ ಮಾತನಾಡುವ ಮಂದಿ ಕಷ್ಟಕಾಲದಲ್ಲಿ ಬಹುತೇಕ ಒಂಟಿಗಳೇ
ಆಗಿ ಬಿಡುತ್ತಾರೆ.
4) ಕೆಲವಷ್ಟು ಮಂದಿ ಇರುತ್ತಾರೆ, ನೀವು ಚಂದ
ಬರೆಯುತ್ತೀರಿ, ನೀವು ಚಂದ ಮಾತನಾಡುತ್ತೀರಿ, ನೀವು ಚಂದ ಹಾಡುತ್ತೀರಿ, ಚಂದ ಕುಣಿಯುತ್ತೀರಿ, ಚಂದ
ವಾದ್ಯ ನುಡಿಸುತ್ತೀರಿ. ನೀವು ಸ್ಟೇಟಸ್ಸಿನಲ್ಲಿ ತುಂಬ ಮಾಹಿತಿಯುಕ್ತ ವಿಚಾರ ಹಂಚಿಕೊಳ್ತೀರಿ,
ನಿಮ್ಮ ಸ್ಟೇಟಸ್ಸು ನೋಡಿಯೇ ನಮಗೆ ಬೆಳಗಾಗುವುದು ಅಂತೆಲ್ಲ ಪ್ರಶಂಸಿಸುತ್ತಾರೆ. ಈ ಪ್ರಶಂಸೆಯಲ್ಲಿ
ಪ್ರಾಮಾಣಿಕರೂ ಇರ್ತಾರೆ, ಮುಖಸ್ತುತಿ ಮಾಡುವವರೂ ಇರ್ತಾರೆ. ವಿಪರ್ಯಾಸ ಅಂದರೆ ಕಾರಣಾಂತರಗಳಿಂದ ಈ
ರೀತಿ ಹೊಗಳಲ್ಪಟ್ಟ ವ್ಯಕ್ತಿ ಏಕಾಏಕಿ ಮುಖ್ಯವಾಹಿನಿಯಿಂದ ವಿಮುಖನಾದರೆ, ಮೌನಿಯಾದರೆ, ಜನರಿಂದ
ದೂರ ಉಳಿದರೆ ಆತ ಸರಿ ಇದ್ದಾಗ ಹೊಗಳಿದ 10 ಮಂದಿಯಲ್ಲಿ ಕನಿಷ್ಠ 8 ಮಂದಿಯೂ ಆತನಲ್ಲಿ “ನೀನ್ಯಾಕೆ ಈಗ ಮೌನಿಯಾದೆ?” ಅಂತ ಕೇಳುವುದಿಲ್ಲ. ಅದಕ್ಕೂ ವಿಶೇಷ
ಅಂದರೆ ಈ 8 ಮಂದಿ ಪೈಕಿ ಸುಮಾರು ಐದಾರು ಮಂದಿಗೆ ಆತ ಮೌನಿಯಾಗಿದ್ದಾನೆ ಅಂತ ತಿಳಿಯುವಷ್ಟು
ವ್ಯವಧಾನವೂ, ಸಹನೆಯೂ, ಆಸಕ್ತಿಯೂ ಇರುವುದೇ ಇಲ್ಲ... ನಿನ್ನಿಂದಲೇ ನನ್ನ ಬೆಳಗಾಗುವುದು ಅಂತ ಹೇಳಿದವರ ಬದುಕೂ ಸಹ ಆತನಿಲ್ಲದೆ ಸರಾಗವಾಗಿ
ಹೋಗುತ್ತಲೇ ಇರುತ್ತದೆ...!
4)
ಒಂದು ದೊಡ್ಡ ಸಮಾರಂಭ ನಡೆಯುವಾಗ, ಕಟ್ಟಡಗಳ ನವೀಕರಣ
ಆಗುವಾಗ, ಒಂದು ಸಂಘಟನೆ ಕಟ್ಟುವಾಗ, ಬ್ರಹ್ಮಕಲಶೋತ್ಸವ ಆಗುವಾಗಲೆಲ್ಲ “ತನು-ಮನ-ಧನಗಳಿಂದ ಸಹಕರಿಸಿ” ಎಂಬ ಮನವಿ ಇರುತ್ತದೆ. ನಿಸ್ಸಂಶಯವಾಗಿ ಯಾವುದೇ
ಕೆಲಸಕ್ಕೆ ಧನವೇ ಪ್ರಧಾನ. ಮನ ಇದ್ದರೂ ಧನ ಇಲ್ಲದಿದ್ದರೆ ಅದರಿಂದ ಏನೂ ಮಾಡುವುದಕ್ಕಾಗುವುದಿಲ್ಲ.
ತುಂಬ ಮಂದಿ ಧನ ನೀಡುತ್ತಾರೆ. ಅದಕ್ಕೂ ಮೊದಲು ಆ ಕಾರ್ಯಕ್ಕೆ ಮನ ಮಾಡಿದವರು, ಜನ ಸೇರಿಸಿದವರು,
ಯೋಜನೆ ರೂಪಿಸಿದವರು, ತಮ್ಮ ದಿನಗಟ್ಟಲೆಯ ಸಮಯ ನೀಡಿದ ಮಂದಿಯೂ ಇರುತ್ತಾರೆ. ಆದರೆ ಕೊನೆಗೆ ಮೊದಲೇ
ಕರಪತ್ರದಲ್ಲಿ ಉಲ್ಲೇಖಿಸಿದ ಹಾಗೆ “ಇಂತಿಷ್ಟು ಮೊತ್ತಕ್ಕಿಂತ ಹೆಚ್ಚು” ಧನ ಸಹಾಯ ಮಾಡಿದವರ ಹೆಸರು ಮಾತ್ರ ಹೊಸ ಕಟ್ಟಡದ
ಅಮೃತಶಿಲೆಯಲ್ಲಿ ರಾರಾಜಿಸುತ್ತಿರುತ್ತದೆ. ಇದು ಖಂಡಿತಾ ತಪ್ಪಲ್ಲ. ನೆರವಾದವರನ್ನು
ಸ್ಮರಿಸಬೇಕಾದ್ದು ಧರ್ಮ. ಆದರೆ.... ಇದರಾಚೆಗೆ ನೀವು ನೀಡುವ ಸಮಯ, ಕೊಡುವ ಸಲಹೆ, ತೊಡಗಿಸಿಕೊಳ್ಳುವ
ಸಹೃದಯತೆ, ಮಾಡುವ ತ್ಯಾಗ, ನಿಸ್ವಾರ್ಥವಾಗಿ ಮಾಡುವ ಯಾವ ಕರ್ಮಕ್ಕೆ ದೊಡ್ಡ ಗುರುತಿಸುವಿಕೆ ಮತ್ತು
ನೆನಪು ಎರಡೂ ಇರುವುದಿಲ್ಲ... ಇತಿಹಾಸದ ಪುಟದಲ್ಲಿ ತನು ಮತ್ತು ಮನ ನೀಡಿದವರು ದಾಖಲಾಗುವುದೇ
ಇಲ್ಲ. ದೊಡ್ಡದೊಂದು ಸಂಘಟನೆ ಅಥವಾ ಸಮಾರಂಭದ ಅಬ್ಬರದ ನೇಪಥ್ಯದಲ್ಲಿ ಅವರು ಕಳೆದುಹೋಗುತ್ತಾರೆ.
ಮತ್ತೊಂದು ಸಮಾರಂಭಕ್ಕೆ ತನು ಮತ್ತು ಮನ ನೀಡಿದವರು ಅಲ್ಲಿಗೆ ಹೋಗದಿದ್ದರೂ ನಡೆಯುತ್ತದೆ. ಹಾಗಂತ
ಧನ ನೀಡದವರು ಬಾರದೇ ಇದ್ದರೆ ಕಾರ್ಯಕ್ರಮ ನಡೆಯಲಾರದು. ಇದು ಸ್ವಲ್ಪ ಕಹಿ ಅನಿಸಿದರೂ ಕಟು
ವಾಸ್ತವವಂತೂ ಹೌದು.
5)
ನಮ್ಮಿಂದ ಏನಾದರೂ ಮಾಹಿತಿ
ಬೇಕಾದಾಗ ಮಾತ್ರ ನೆನಪಿಸುವವರು, ನಮ್ಮಿಂದ ಏನಾದರೂ ಕೆಲಸ ಆಗಬೇಕಾದರೆ ಅದಕ್ಕಿಂತ ಸ್ವಲ್ಪ ಮೊದಲು
ನಮ್ಮ ಆರೋಗ್ಯ, ಕಷ್ಟ ಸುಖ ವಿಚಾರಿಸುವವರು, ಕೆಲಸ ಆದ ಬಳಿಕ ದಿನಗಟ್ಟಲೆ, ತಿಂಗಳುಗಟ್ಟಲೆ ಮಾತೇ
ಆಡದಿರುವವರು, ಮರೆಯುವವರು, ಅಗತ್ಯ ಸಂದರ್ಭದಲ್ಲೂ ಸಂಪರ್ಕಕ್ಕೆ ಸಿಗದವರು... ಸಾಲ ಕೇಳುವಾಗ
ದಯನೀವಾಗಿ ಮಾತನಾಡಿ, ಸಾಲ ಸಿಕ್ಕಿದ ಮೇಲೆ ನಂಬರ್ ಬ್ಲಾಕ್ ಮಾಡುವವರು, ಮಾತನ್ನೇ ಆಡದೆ ವೈರಿಗಳ
ಹಾಗೆ ದೂರ ಇರಿಸುವವರು... ಇವರಿಗೆಲ್ಲ ನಮ್ಮಿಂದ ಆಗುವ ಪ್ರಯೋಜನದ ಹೊರತು ನಮ್ಮ ಕುರಿತು ಮತ್ಯಾವ
ಭಾವನಾತ್ಮಕ ಅಭಿಪ್ರಾಯಗಳಿರುವುದಿಲ್ಲ. ಉಪಕಾರ ಪಡೆಯುವ ಸಂದರ್ಭ ಮಾತ್ರ ಹಳೆ ಪರಿಚಯ, ಔದ್ಯೋಗಿಕ
ಸಂಪರ್ಕ, ಭೌಗೋಳಿಕ ಸಾಮಿಪ್ಯ, ಬಂಧುತ್ವ ಇಂತಹ ಯಾವುದೋ ಒಂದು ಭಾವುಕ ಸನ್ನಿವೇಶದ ಪುಟ ತೆರೆದು
ಅದಕ್ಕೊಂದಿಷ್ಟು ವಿಚಾರಿಸುವ ದೃಶ್ಯವನ್ನು ಸೃಷ್ಟಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಇವರೆಲ್ಲ
ನಿಪುಣರಿರುತ್ತಾರೆ. ಅದರಲ್ಲಿ ಅವರ ತಪ್ಪೇನು ಇಲ್ಲ. ಯಾವುದು ಕಾಳಜಿ, ಯಾವುದು ನಾಟಕ ಎಂದು
ವ್ಯತ್ಯಾಸ ಗುರುತಿಸಲಾಗದಷ್ಟು ಹುಂಬತನ ನಮ್ಮಲ್ಲಿದ್ದಾರೆ ಅಗತ್ಯಕ್ಕೆ ಬಳಸಲ್ಪಡುವುದಕ್ಕೆ ನಾವೇ
ಕಾರಣರಾಗುತ್ತೇವೆ. ನಾವು ಏಕಾಏಕಿ ಮೌನವಾಗಿ ಕಾರಣಾಂತರದಿಂದ ಮುಖ್ಯ ವಾಹಿನಿಯಿಂದ ದೂರ ಉಳಿದರೆ,
ಇಂತಹ ಸಮಯ ಸಾಧಕರು ನಾವು “ಸತ್ತೇ ಹೋಗಿದ್ದೇವೆ” ಅಂದುಕೊಂಡು ಬೇರೆಯವರ ಬಳಿ ಹೋಗಿ
ಅಂಥದ್ದೇ ಕೆಲಸ ಮಾಡಿಸಿಕೊಂಡು ದಿನ ದೂಡುತ್ತಾರೆ. ಅಷ್ಟು ದಿನ ನೀವು ಅವರಿಗೆ ಮಾಡಿರಬಹುದಾದ
ಕಿಂಚಿತ್ ಉಪಕಾರವೂ ಅವರ ಬದುಕಿನ ಡೈರಿಯ ಪುಟಗಳಲ್ಲಿ ದಾಖಲಾಗಿಯೇ ಇರುವುದಿಲ್ಲ! ಕ್ರಮೇಣ ಅದು ಡಿಲೀಟ್ ಆಗುತ್ತದೆ.
6) ಬದುಕಿನಲ್ಲಿ ನಿಮಗೆ ಕೆಲವು
ನಂಬಿಕೆಗಳಿರ್ತವೆ. ಅದನ್ನೇ ಭಗವದ್ಗೀತೆ ಅಂತ ನಂಬಿ ಕೆಲಸ ಮಾಡುತ್ತಾ ಬರುತ್ತೀರಿ. ಕೊಟ್ಟ ಕೆಲಸ
ಶ್ರದ್ಧೆಯಿಂದ ಮಾಡುವುದು, ಪ್ರಾಮಾಣಿಕವಾಗಿ ಮಾಡುವುದು, ಹೇಳಿದ ಸಮಯಕ್ಕೇ ಮುಗಿಸುವುದೇ ನಿಷ್ಠೆಯ
ಕಾಯಕ ಅಂತ ಅಂದುಕೊಂಡಿರುತ್ತೀರಿ. ವರ್ಷಗಳ ಬಳಿಕ ಯಾರೋ ನಿಮ್ಮತ್ರ “ಕೆಲಸ ಅಂದರೆ ಹಾಗಲ್ಲ,
ಕೆಲಸ ಅಂದರೆ ನಿನ್ನದಲ್ಲ, ಸಾಧನೆ ಅಂದರೆ ಅದಲ್ಲ,
ಇದು, ನೀನಂದುಕೊಂಡದ್ದು ಮಾತ್ರ ಸತ್ಯ ಅಲ್ಲ, ಜಗತ್ತು ಹೀಗೆಯೂ ಇರುತ್ತದೆ” ಅಂತ ಹೇಳುತ್ತಾರೆ. ನಿಮಗೇನೋ ಜ್ಞಾನೋದಯ
ಆಗುತ್ತದೆ. ಅಷ್ಟೂ ವರ್ಷ ನೀವು ಸಾಧನೆ ಅಂದುಕೊಂಡದ್ದೆಲ್ಲ ಎಂಥದ್ದೂ ಅಲ್ಲ ಎಂಬುದು ತುಂ.....ಬ
ತಡವಾಗಿ ಅರಿವಾಗುತ್ತದೆ. ನಿಮಗೆ ಸತ್ಯ ದರ್ಶನ ಮಾಡಿಸಿದವರ ಕುರಿತು ಕೋಪ ಬಂದರೂ ವಾಸ್ತವವನ್ನು
ಅಲ್ಲಗಳೆಯಲು ಆಗುವುದಿಲ್ಲ. ವ್ಯಕ್ತಿಗೆ ತಾನು ಸೋತಿದ್ದೇನೆ, ಸೋಲುತ್ತಿದ್ದೇನೆ, ಅಸಹಾಯಕನಾಗುತ್ತಿದ್ದೇನೆ
ಎಂಬಷ್ಟೇ ತಾನು “ಸತ್ಯ ಅಂದುಕೊಂಡದ್ದೆಲ್ಲ
ಸತ್ಯ ಅಲ್ಲ” ಎಂದು ಅರಿವಾದಾಗ ಕಾಡುವ
ವಿಷಾದ ಉಂಟಲ್ಲ. ಅದು ಕೂಡಾ ಭಯಂಕರ ನಿರಾಶಾವಾದದೆಡೆಗೆ ತಳ್ಳುವ ಸಾಮರ್ಥ್ಯ ಹೊಂದಿದೆ.
ಕಲಾವಿದರು, ರಾಜಕಾರಣಿಗಳು,
ಮಾಧ್ಯಮದಲ್ಲಿ ಕೆಲಸ ಮಾಡಿದವರು, ಶಿಕ್ಷಕರು ಇವರಿಗೆಲ್ಲ ದೊಡ್ಡ ಸಮಸ್ಯೆ ಎಂದರೆ ಮುಖ್ಯ
ವಾಹಿನಿಯಿಂದ ವಿಮುಖರಾಗುವುದು. ಕಾರಣಾಂತರದಿಂದ ಅಥವಾ ವಯೋಸಹಜವಾಗಿ ತಮ್ಮ ತಮ್ಮ ಕ್ಷೇತ್ರಗಳಿಂದ
ಹಿಂದೆ ಸರಿಯುವಂತಾದಾಗ ಇಷ್ಟೂ ಮಂದಿಯಲ್ಲಿ ಬಹುತೇಕರು ಖಿನ್ನರಾಗುತ್ತಾರೆ. ಜನರ ನಡುವೆ ಇದ್ದು,
ಜನರ ಗುರುತಿಸುವಿಕೆಯ ಖುಷಿ ಅನುಭವಿಸುತ್ತಿದ್ದವರು ದಿಢೀರ್ ಕೆಲಸ ಕಳೆದುಕೊಂಡಾಗ, ನಿವೃತ್ತರಾದಾಗ
ಅಥವಾ ಅನಾರೋಗ್ಯ ಕಾಡಿ ಜನಸಂಪರ್ಕದಿಂದ ಆಚೆ ಹೋಗಬೇಕಾಗಿ ಬಂದಾಗ ಅದು ಅವರ ಪಾಲಿಗೆ ನುಂಗಲಾರದ
ತುತ್ತಾಗಿ ಕಾಡುತ್ತದೆ, ಎಷ್ಟೋ ಮಂದಿ ಮತ್ತದೇ ಗುರುತಿಸುವಿಕೆ, ಜನ ಸಾಮಿಪ್ಯದ ಅನುಭವಕ್ಕೆ
ಕಾತರಿಸುತ್ತಾರೆ. ಆ ವೃತ್ತಿ ಮತ್ತು ಜನಪ್ರಿಯತೆಯ ಹಂಗಿಲ್ಲದೆ ಬದುಕು ಸಾಗಿಸಲು ಕಷ್ಟವಾಗುತ್ತದೆ.
ವಯಸ್ಸಾದರೂ ಮತ್ತದೇ ರಂಗದಲ್ಲಿ, ಮತ್ತದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಕಾಂಕ್ಷೆ
ತೀವ್ರವಾಗಿ ಕಾಡುತ್ತದೆ... ವೃತ್ತಿಯನ್ನು ಅವರು ಬಿಡಬೇಕಾಗಿ ಬಂದರೂ ವೃತ್ತಿಯ ಮತ್ತು ಮತ್ತಷ್ಟು
ಕಾಡತೊಡಗುತ್ತದೆ...
ಇವೆಲ್ಲದಕ್ಕಿಂತ ಆಚೆಗೆ
ಅನಿವಾರ್ಯವಾಗಿಯೋ, ಪರಿಸ್ಥಿತಿಯಿಂದಾಗಿಯೋ, ಮನಃಸ್ಥಿತಿಯಿಂದಾಗಿಯೋ ಮೌನದ ಚಿಪ್ಪಿನೊಳಗೆ
ಬಚ್ಚಿಟ್ಟುಕೊಂಡಾಗಲೇ ವಾಸ್ತವ ಅರ್ಥವಾಗುತ್ತದೆ. ನಮ್ಮ ಬಗ್ಗೆ ನಾವು ನಮ್ಮ ಅಹಮ್ಮಿನ ಕೋಟೆಯೊಳಗೆ
ಕಟ್ಟಿಕೊಂಡ ಭ್ರಮೆಗಳು ಒಂದೊಂದಾಗಿ ಕಳಚಲ್ಪಡುತ್ತವೆ. ಯಾವಾಗ ನಾವು ಮುಖ್ಯವಾಹಿನಿಂದ
ವಿಮುಖರಾಗುತ್ತೇವೆಯೋ, ಮೌನವಾಗುತ್ತೇವೆಯೋ, ಅಧಿಕಾರ ಕಳೆದುಕೊಳ್ಳುತ್ತೇವೆಯೋ, ಸೋಲುತ್ತೇವೆಯೋ,
ಹಿನ್ನೆಡೆಯನ್ನು ಅರ್ಥ ಮಾಡಿಕೊಂಡ ಅಸಹಾಯಕರಾಗುತ್ತೇವೆಯೋ ನಮ್ಮಿಂದ ಎಂಥದ್ದೂ ಆಗುವುದಿಲ್ಲ ಎಂದು
ಗೊತ್ತಾಗುತ್ತದೆಯೋ ಆಗಲೇ ನಮ್ಮ ಕುರಿತಾದ ಭ್ರಮೆಗಳು ಕಳಚುವುದು. ಎಷ್ಟು ಮಂದಿ ವಿಚಾರಿಸುತ್ತಾರೆ,
ಎಷ್ಟು ಮಂದಿ ಹತ್ತಿರ ಇರುತ್ತಾರೆ, ಬರುತ್ತಾರೆ, ಆದರಿಸುತ್ತಾರೆ, ಆಧರಿಸುತ್ತಾರೆ ಎಂಬುದು
ತಿಳಿಯುವುದು. ಒಂದು ವೇಳೆ ಸತ್ತರೂ ಅಷ್ಟೇ...
ಮೌನವಾಗುವುದು ಮತ್ತು
ಸಾಯುವುದು ಎರಡಕ್ಕೂ ಸಾಮ್ಯತೆ ಇದೆ. ಸತ್ತ ಮೇಲೆ ಜಗತ್ತು ಅವನಿಲ್ಲದ ದಿನಗಳನ್ನು ಅನಿವಾರ್ಯವಾಗಿ
ಎದುರಿಸುತ್ತಾ ಹೋಗುತ್ತದೆ. ಕ್ರಮೇಣ ಅವನಿಲ್ಲದ ಜಗತ್ತು ಸಹಜವಾಗಿ ಆವರಿಸಿಕೊಳ್ಳುತ್ತದೆ.
ಮುಖ್ಯವಾಹಿನಿಯಿಂದ ವಿಮುಖರಾಗಿರುವವರೂ ಅಷ್ಟೇ... ಅವರು ಸಕ್ರಿಯರಿಲ್ಲ ಎಂಬುದನ್ನೇ ಅರ್ಥ
ಮಾಡಿಕೊಳ್ಳದ ಜಗತ್ತು ಸಹಜವಾಗಿಯೇ ಪಂಕ್ಚರ್ ಆಗಿ ರಸ್ತೆ ಪಕ್ಕ ನಿಂತ ಗಾಡಿಯನ್ನು ನೋಡಿಯೂ ನೋಡದೆ
ಮುಂದುವರಿದ ಹಾಗೆ, ಆತನನ್ನು ಬದಿಗಿರಿಸಿ ಮುಂದೆ ಹೋಗುತ್ತಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ, ಸಾಧನೆ,
ಗೆಲವು ಹೋರಾಟ ಎಲ್ಲವೂ ತನ್ನ ಪಾಡಿಗೆ ಆಗುತ್ತಲೇ ಇರುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ನೀವೊಬ್ಬ
ವ್ಯಕ್ತಿ ಮೌನಿಯಾಗಿದ್ದೀರಿ ಎಂಬುದನ್ನು ತುಂಬ ಮಂದಿ ಗಮನಿಸಿರುವುದೇ ಎಲ್ಲ ಎಂಬುದು ಬದುಕಿನಲ್ಲಿ
ನಿಮ್ಮ ಗಳಿಕೆ ಏನು ಎಂಬ ಕಟು ಸತ್ಯವನ್ನು ತೋರಿಸಿಕೊಡುತ್ತದೆ...
ತುಂಬ ಸಲ ನಮ್ಮ
ಮಾತುಗಳನ್ನು ಆಸಕ್ತಿಯಿಂದ ಕೇಳಿದಂತಿರುವವರು, ನಾವು ಯಾರ್ಯೋರನ್ನೋ ದೂರಿದರೆ, ಟೀಕಿಸಿದರೆ,
ಬೈದರೆ ಅದಕ್ಕೆ (ಅನಿವಾರ್ಯವಾಗಿ) ಕಿವಿಯಾಗುವವರೆಲ್ಲ ಮನಸ್ಸಿಟ್ಟು ಅವನ್ನು ಕೇಳಿರುವುದಿಲ್ಲ.
ನಮ್ಮ ಮೇಲಿನ ಗೌರವ, ದಾಕ್ಷಿಣ್ಯ ಹಾಗೂ ಕೆಲವೊಮ್ಮೆ ಭಯದಿಂದ ಕೇಳಿರಬಹುದು. ಅಥವಾ ಒಳಗೊಳಗೆ
ಹಿಡಿಶಾಪ ಹಾಕಿ ಕೇಳಿರಲೂ ಬಹುದು. ನಾನು ಹೇಳಿದ್ದೇ ಸರಿ ಎಂಬ ಭ್ರಮೆಯಿಂದ ಟೀಕಿಸುವಾಗ, ಗಂಟೆಗಟ್ಟಲೆ
ವಿಮರ್ಶೆಗಳನ್ನು ಮಾಡುವಾಗ ಕಿವಿಯಾದವರು, ಕಣ್ಣಾದವರು ಮತ್ತು ಹೊಗಳಿದವರು, ಪ್ರೋತ್ಸಾಹಿಸಿದವರ
ಮನಃಸ್ಥಿತಿ ಏನು, ಅವರಿಗೆ ಅವನ್ನೆಲ್ಲ ಆಲಿಸುವಷ್ಟು ತಾಳ್ಮೆ, ಸಮಯ ಇತ್ತ ಅಂತೆಲ್ಲ
ಅರ್ಥವಾಗಬೇಕಾದರೆ ಆ ವಾಚಾಳಿತನದಿಂದ, ದಾರ್ಷ್ಟ್ರ್ಯ ಮನೋಭಾವದಿಂದ ಆಚೆ ಬರುವ ಸನ್ನಿವೇಶ ಬೇಕು,
ಒಂದು ಬ್ರೇಕ್ ಬೇಕು. ಇಲ್ಲವಾದಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಆ ಭರಾಟೆಯಲ್ಲಿ ನಾವು “ಕೇಳುವುದನ್ನೇ” ಮರೆತಿರುತ್ತೇವೆ. ಆಲಿಸುವ ಸಹನೆ ನಮ್ಮಲ್ಲಿ ಇರುವುದೇ
ಇಲ್ಲ. ಇತರರ ಮಾತು ತಡೆದು ಮಾತನಾಡುತ್ತಲೇ ಹೋಗುತ್ತೇವೆ. ಜನ ಎಷ್ಟು ಪ್ರೀತಿಯಿಂದ ನಮ್ಮ ಮಾತಿಗೆ
ಕಾತರಿಸುತ್ತಿದ್ದರು, ಕಾತರಿಸುತ್ತಾರೆ, ಓದುತ್ತಾರೆ, ಕೇಳುತ್ತಾರೆ ಅಂತೆಲ್ಲ ಅರ್ಥವಾಗಬೇಕಾದರೆ
ಅಥವಾ ಆ ಭ್ರಮೆ ಕಳಚಬೇಕಾದರೆ ಒಂದು ಮೌನದ ವಿರಾಮ ಬೇಕು. ಇಲ್ಲವಾದರೆ ಏಕಮುಖ ಬೊಬ್ಬೆಯ ನಡುವೆ
ನಾವು ಕಳೆದುಹೋಗುತ್ತೇವೆ ಮತ್ತು “ನಾನು ಹೇಳಿದ್ದನ್ನೆಲ್ಲ ಜಗತ್ತು ಕಾತರದಿಂದ ಕೇಳುತ್ತದೆ” ಎಂಬ ಭ್ರಮೆ ನಮ್ಮನ್ನೇ ಕೊಲ್ಲುತ್ತಾ ಹೋಗುತ್ತದೆ...
ಪ್ರತಿಯೊಬ್ಬರಿಗೂ ಅವರವರ ಬದುಕು ಇರುತ್ತದೆ. ಅವರವರ
ಒತ್ತಡ, ಸಮಸ್ಯೆ, ಜವಾಬ್ದಾರಿ, ವೃತ್ತಿಗಳ ಬಾಧ್ಯತೆಗಳಿರುತ್ತವೆ. ಇತರರಿಗೇ ಕಿವಿಯಾಗುವ,
ಕಣ್ಣಾಗುವ, ಮತ್ತು ಹೇಳಿದ್ದನ್ನೆಲ್ಲ ಕೇಳುತ್ತಾ ಕೂರುವ ವ್ಯವಧಾನ ಬಹುತೇಕ ಯಾರಿಗೂ ಇರುವುದಿಲ್ಲ.
ನಾವು ಅದನ್ನು ನಾವಾಗಿ ಅರ್ಥ ಮಾಡಿಕೊಂಡಷ್ಟೂ ಉತ್ತಮ. ಇಲ್ಲವಾದಲ್ಲಿ ನಾವೊಬ್ಬ ವಾಚಾಳಿಯಾಗಿ,
ತಲೆತಿನ್ನುವವರಾಗಿ ಬಿಡುತ್ತೇವೆ. ಎಲ್ರೂ “ಬಿಝಿ ಇರುವಾಗ” ಒಂದಷ್ಟು ಮಂದಿ “ಬಿಝಿ ಇಲ್ಲದವರ” ಮಾತುಗಳನ್ನೇ ಕೇಳುತ್ತಾ ಕೂತರೆ ಅವರ ಕೆಲಸ ಮಾಡುವವರು ಯಾರು ಎಂಬ
ಪ್ರಜ್ಞೆ ನಮಗಿದ್ದರೆ ಲೇಸು.
ನಾವು ವೃತ್ತಿಯನ್ನೇ ತುಂಬ
ಸಲ ಸಾಧನೆ ಅಂತ ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತೇವೆ. ಹೊಟ್ಟೆಪಾಡಿಗೆ ವರ್ಷಾನುಗಟ್ಟಲೆ ದುಡಿಯುವುದು
ಸಾಧನೆ ಅಲ್ಲ. ಅದು ದುಡಿಮೆ. ಅಲ್ಲಿ ಯಾರೂ ಮಾಡಲಾಗದ್ದನ್ನು ಮಾಡಿದರೆ, ಸಂಶೋಧಿಸಿದರೆ ಅದು
ಸಾಧನೆ. ಆದರೆ, ಬದುಕಿನಲ್ಲಿ ಸಾಧನೆ ಏನೂ ಇಲ್ಲದಿದ್ದಾಗ ನಮ್ಮನ್ನು ನಾವು ವಿನಾಕಾರಣ ಪ್ರಮೋಟ್
ಮಾಡಿ ಸಮಾಜದ ಗಮನ ಸೆಳೆಯಹೊರಟರೆ ಅದು ಪರೋಕ್ಷವಾಗಿ ನಮ್ಮ ಕುರಿತು ನಕಾರಾತ್ಮಕ ಬೆಳಕು
ಚೆಲ್ಲುತ್ತದೆ ಎಂಬುದು ನಮಗೆ ತುಂಬ ಸಲ ಅರ್ಥವೇ ಆಗುವುದಿಲ್ಲ.
ಸುಮ್ಮನೆ ಒಂದು ಪರೀಕ್ಷೆ ಮಾಡಿಕೊಳ್ಳಿ... ನೀವು ತುಂಬ
ಹತಾಶರಾದಾಗ, ತುಂಬ ಸಂಧಿಗ್ಧತೆಗೆ ಸಿಲುಕಿದಾಗ, ಕಗ್ಗಂಟುಗಳು ಕಾಡಿದಾಗ ತಕ್ಷಣಕ್ಕೆ ನಿಮಗೆ
ಲಭ್ಯರಾಗಿ, ಗಂಭೀರವಾಗಿ, ಹಿತವಾಗಿ ನಿಮ್ಮ ಮಾತುಗಳಿಗೆ ಕಿವಿಯಾಗುವ ಕಿವಿಗಳು ಎಷ್ಟು ಸಿಕ್ಕಾವು...? ಸುಮ್ಮನೆ ಯೋಚಿಸುತ್ತಾ ಹೋಗಿ... ಯಾವುದೇ ಸಂದರ್ಭದಲ್ಲಿ
ತಾಳ್ಮೆಯಿಂದ ನೀವು ಹೇಳಿದ್ದನ್ನು ಅಸಹನೆ ಇಲ್ಲದೆ ಕೇಳಿ ಸೂಕ್ತ ಪರಿಹಾರ ಕೊಡಬಲ್ಲ ಕಿವಿಗಳು,
ಹೃದಯ ನಿಮ್ಮ ಪಟ್ಟಿಯಲ್ಲಿ ತುಂಬ ಉಂಟು ಅಂತಾದರೆ ನೀವು ಗಳಿಸಿದ್ದು ತುಂಬ ಇದ ಅಂತ ಅರ್ಥ. ನಿಮ್ಮ
ಪಟ್ಟಿಯಲ್ಲಿ ಒಬ್ಬೊಬ್ಬರದ್ದೇ ಹೆಸರು ಡಿಲೀಟ್ ಆಗುತ್ತಾ ಹೋದರೆ ನೀವೊಬ್ಬ ಬಾಯಿಬಡುಕ, ಗಳಿಸಿದ್ದು
ಏನೂ ಇಲ್ಲ ಅಂತಲೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ....
ನಾನು ನಂಬಿದ್ದೇ ಸತ್ಯ,
ನಾನು ಹೇಳಿದ್ದೇ ಸತ್ಯ, ನಾನು ಹೇಳಿದ ಕಾರಣ, ನಾನು ಪ್ರೋತ್ಸಾಹಿಸಿದ ಕಾರಣ, ನಾನು ಬರೆದ ಕಾರಣ,
ನಾನು ಆಡಿದ ಕಾರಣ ಅವರಿವರೆಲ್ಲ ಸರಿಯಾದ ಬದುಕು ಸಾಗಿಸುತ್ತಿರುತ್ತಾರೆ, ನಾನು ಇರುವ ಕಾರಣಕ್ಕೆ
ಇಲ್ಲೆಲ್ಲ ವ್ಯವಸ್ಥಿತವಾಗಿ ಹೋಗುತ್ತಿರುತ್ತದೆ, ನಾನಿಲ್ಲದೆ ಅವರು ಅದನ್ನೆಲ್ಲ ಹೇಗೆ
ಮಾಡುತ್ತಾರೆ ನೋಡೋಣ, ನಾಳೆ ನಾನು ದಿಢೀರ್ ಶಸ್ತ್ರ ಸನ್ಯಾಸ ಸ್ವೀಕರಿಸಿದರೆ ಇಡೀ ಜಗತ್ತಿಗೆ
ಗ್ರಹಣ ಬಡಿದೀತು ಎಂಬು ಭ್ರಮೆಗಳಿಗೆಲ್ಲ ಮೌನದ ದಿನಗಳು ಉತ್ತರ ಕೊಡುತ್ತಲೇ ಹೋಗುತ್ತವೆ...
ಸತ್ತರೂ ಅಷ್ಟೇ... ಜಗತ್ತು ಅದನ್ನು ಸ್ವೀಕರಿಸಿಯೇ ಸ್ವೀಕರಿಸುತ್ತದೆ, ವರ್ಷಗಟ್ಟಲೆ ಯಾರೂ
ಅಳುತ್ತಾ ಕೂರುವುದಿಲ್ಲ ಮತ್ತು “ಅವನೊಬ್ಬ ಹೋದ” ಅಂತ ಸೂರ್ಯ ತನ್ನ
ಚಲನೆಯನ್ನೂ ನಿಲ್ಲಿಸುವುದಿಲ್ಲ....
ಜಗತ್ತಿಗೆ ನಾವು
ಅನಿವಾರ್ಯವಲ್ಲ. ಬದುಕಲು ಜಗತ್ತು ನಮಗೆ ಅನಿವಾರ್ಯ. ನಾವೇ ಜಗತ್ತು ಎಂಬಂತೆ ವರ್ತಿಸುತ್ತಾ
ಇರುತ್ತೇವಲ್ಲ. ಆ ಭ್ರಮೆಯನ್ನು ಪ್ರಕೃತಿ ಹಾಗೂ ಪರಿಸ್ಥಿತಿಗಳು ಕಳಚಿಬಿಡುತ್ತವೆ... ಆಗ ಆವರಿಸುವ
ಮೌನ ತುಂಬ ಪಾಠಗಳನ್ನು ಕಲಿಸುತ್ತವೆ... ನಾನಿಲ್ಲದ ಜಗತ್ತು ಎಷ್ಟು ಸಹಜವಾಗಿ, ಆರಾಮವಾಗಿ
ಮುಂದುವರಿಯುತ್ತಿರುತ್ತದೆ ಎಂಬುದು ಸಮೀಪದಿಂದ ಕಾಣಿಸುತ್ತದೆ. ಆ ಅರಿವು ಮೂಡಿದ ಬಳಿಕ “ನಮ್ಮೊಳಗಿನ ನಾವು” ಎಂಬುದರ ಮುಖಬೆಲೆ ಸಿಕ್ಕಾಪಟ್ಟೆ ನಿಯಂತ್ರಣಕ್ಕೆ
ಬರುತ್ತದೆ ಹಾಗೂ ವಾಸ್ತವ ಗಂಭೀರವಾಗಿ ಇಂಟರ್ನಲ್ ಮೆಮೊರಿಯಲ್ಲಿ ಸೇವ್ ಆಗುತ್ತದೆ....
ಆದರೂ ಅರ್ಥವಾಗದ ಸಂಗತಿ
ಅವನೊಬ್ಬ ಬದುಕಿದ್ದಾಗ ಮಾತನಾಡದವರು, ಅಯ್ಯೋ ಎಷ್ಟೊಂದು ತಲೆ ತಿನ್ನುತ್ತಾನೆ ಅಂತ ಕಾಲ್ ರಿಸೀವ್
ಮಾಡದವರು, ಅಯ್ಯೋ ಅನಾಸಿನ್ ಅಂತ ಹಿಂದಿನಿಂದ ಬೈದವರು, ಅಯ್ಯೋ ಎಷ್ಟು ಅಹಂಕಾರ ತಾನು ಮಾತ್ರ ಸರಿ
ಎಂಬ ಅಹಂಕಾರ ಇತ್ತು ಅವನಿಗೆ ಅನ್ನುವವರು, ಹಾಸಿಗೆ ಹಿಡಿದು ಮಲಗಿದಾಗ ಅವನಿಗೆ ಹಾಗೆಯೇ ಆಗಬೇಕು,
ಮಾಡಿದ್ದನ್ನು ಅನುಭವಿಸುತ್ತಿದ್ದಾನೆ ಅಂದ ಹಿಡಿ ಶಾಪ ಹಾಕುವವರೂ ಸಹ ಸತ್ತ ಸುತ್ತಿ ತಿಳಿದಾಕ್ಷಣ
ಎಲ್ಲ “ಬಿಝಿ ಶೆಡ್ಯೂಲ್” ಮರೆತು, ಪುರುಸೊತ್ತು ಮಾಡಿ “RIP” ಮತ್ತು “ಓಂ ಶಾಂತಿ” ಹಾಕುತ್ತಾರೆ ಯಾಕೆ?!!!
-ಕೃಷ್ಣಮೋಹನ (14.07.2025)
#death
No comments:
Post a Comment