ಈಗ ಕಪ್ಪು ಶಾಯಿ ಪೆನ್ನೇ ಬೇಕೆಂದಿಲ್ಲ... ಪೆನ್ನು ಬರೆದರೆ ಸಾಕು ಎಂಬಂಥಾಗಿದೆ! ನಾಟ್ ರೀಚೇಬಲ್ ಆಗಲಾರದ ಆನ್ಲೈನ್ ಬದುಕು...
ಒಂದು ಕಾಲದಲ್ಲಿ ಕಪ್ಪು ಶಾಯಿ ಪೆನ್ನಿನಲ್ಲೇ ಬರೆಯುವುದು
ಎಂಬ ಅಭ್ಯಾಸವೋ, ಹಠವೂ ಇತ್ತು. ಅದು ಸುರುವಾದದ್ದು ಡಿಗ್ರಿಯಲ್ಲಿ ಅಂತ ನೆನಪುಂಟು, ಯಾಕೆಂತ
ಗೊತ್ತಿಲ್ಲ. ವರ್ಷಗಳ ಕಾಲ ತಪಸ್ಸಿನಂತೆ ಕಪ್ಪು ಶಾಯಿ ಪೆನ್ನಿನಲ್ಲೇ ಬರೆದದ್ದೂ ಆಯಿತು. ಈಗ
ಹಾಗೆಂತ ಇಲ್ಲ, ಯಾವಾಗ ಬಿಟ್ಟು ಹೋಯಿತೋ ಗೊತ್ತಿಲ್ಲ...
ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟೇ ಆಗಬೇಕು, ಮದುವೆಯಲ್ಲಿ
ಮೊದಲ ಪಂಕ್ತಿಯಲ್ಲೇ ಉಣ್ಣಬೇಕು, ತಿಂಡಿ ಜೊತೆಗಿನ ಚಾಯ ಲೈಟಾಗಿಯೇ ಇರಬೇಕು. ಪುಲಾವಿಗೆ ಬಟಾಣಿ
ಹಾಕಲೇಬಾರದು, ಬೆಳಗ್ಗಿನ ತಿಂಡಿಗೆ ಉಪ್ಪಿಟ್ಟು ಬೇಡವೇ ಬೇಡ, ಮದುವೆ ದಿನ ಆದರೂ ಸರಿಯೇ ಗಡ್ಡ ತೆಗೆಯುವುದೇ
ಇಲ್ಲ... ಇತ್ಯಾದಿ ಇತ್ಯಾದಿ ಒಂದು ವಯಸ್ಸಿನಲ್ಲಿ ಕಟ್ಟಿಕೊಳ್ಳುವ ಸ್ವಭಾವಗಳು, ಬೆಳೆಸಿಕೊಳ್ಳುವ
ಪ್ರವೃತ್ತಿಗಳಿಗೆ ಕೆಲವೊಮ್ಮೆ ಇತಿಹಾಸವೇ ಇರುವುದಿಲ್ಲ. ಒಂದು ಘಳಿಗೆಯಲ್ಲಿ ಬೀರಿದ ಪ್ರಭಾವ ಅಥವಾ
ನಿರ್ಧಾರ ವರ್ಷಾನುಗಟ್ಟಲೇ ಕಾರಣವೇ ಇಲ್ಲದೆ ಬೆಳೆದು ಬರುತ್ತದೆ. ಮತ್ತೊಂದಿಷ್ಟು ವರ್ಷದ ಬಳಿಕ
(ಕೆಲವೊಮ್ಮೆ ಬದುಕಿರುವ ವರೆಗೂ) ತನ್ನಷ್ಟಕ್ಕೇ ಅಂತಹ ಸ್ವಭಾವಗಳು ತನ್ನಷ್ಟಕ್ಕೇ ಮರೆಯಾಗುತ್ತವೆ.
ಬಾಲ್ಯದಲ್ಲಿ, ಶಾಲಾ ದಿನಗಳಲ್ಲಿ, ಕಾಲೇಜಿನಲ್ಲಿ
ಇದ್ದಾಗಲೆಲ್ಲ ಎಷ್ಟೊಂದು ಹಠಗಳಿದ್ದವಲ್ಲ.... ಬಸ್ಸಿನಲ್ಲಿ ಕಿಟಿಕಿ ಪಕ್ಕ ಸೀಟೇ ಬೇಕು,
ಶಾಲೆಯಲ್ಲಿ ಮುಂದಿನ ಬೆಂಚೇ ಆಗಬೇಕು, ಬೆಂಚಿಯಲ್ಲಿ ಸೈಡ್ ಸೀಟೇ ಬೇಕು, ಸ್ಕೂಲ್ಡೇ
ಡ್ಯಾನ್ಸಿನಲ್ಲಿ ಎದುರಿನ ಸಾಲಿನಲ್ಲೇ ಇರಬೇಕು, ಬಾಲಮಂಗಳ ಅಂಗಡಿಗೆ ಬಂದ ದಿನವೇ ಮನೆಗೆ
ತಲುಪಬೇಕು, ಬಾಲಮಂಗಳದಲ್ಲಿ ಡಿಂಗನ ಕಥೆ ನಾನೇ ಮೊದಲು ಓದಬೇಕು, ಕಾಪಿ ಬರೆಯುವಾಗ ಅಕ್ಷರ
ಬಲಕ್ಕಲ್ಲ, ಎಡಕ್ಕೇ ವಾಲಿರಬೇಕು... ಹೀಗೆ ನಿಮ್ಮ ನೆನಪಿನ ಜೋಳಿಗೆಯಲ್ಲೂ ಇದ್ದೀತು ಇಂತಹ ಕೆಲವು
ಮಸ್ಟ್ ಆಂಡ್ ಶುಡ್ಡುಗಳು...!
ಬದುಕು ಆದ್ಯತೆಗಳ ಮೇಲೆ
ಹಠಗಳನ್ನು, ನಿರ್ಧಾರಗಳನ್ನು, ಬದಲಾವಣೆಗಳನ್ನು ರೂಪಿಸುತ್ತವೆ... ಬದುಕಿನ ಆಯಾ ಕಾಲಘಟ್ಟದ
ಅವಶ್ಯಕತೆಗಳು, ಸಾಮರ್ಥ್ಯ, ಅವಕಾಶ ಹಾಗೂ ಸಾಧ್ಯತೆಗಳು “ನಾನು ಹೀಗೆಯೇ ಮತ್ತು ನಾನಿರುವುದೇ ಹೀಗೆ…” ಎಂಬಿತ್ಯಾದಿ ಪ್ರವೃತ್ತಿಗಳನ್ನು
ಹುಟ್ಟು ಹಾಕುತ್ತದೆ... ದಿನಗಳು ಉರುಳಿದಂತೆ ಪರಿಸ್ಥಿತಿ ಮತ್ತು ಮನಃಸ್ಥಿತಿ ಬದಲಾಗುತ್ತಿದಂತೆ
ಆಯಾ ವಯಸ್ಸಿಗೆ, ಆಯಾ ಹೊತ್ತಿಗೆ ಬೇಕಾದಂತೆ ನಮ್ಮ ಆದ್ಯತೆಗಳು ಬದಲಾಗುತ್ತಲೇ ಹೋಗುತ್ತವೆ. ಕೆಲವು
ಮೂಲಭೂತ ಸ್ವಭಾವ ಬದಲಾಗದೇ ಇರಬಹುದು. ಆದರೆ ಕೆಲವೊಂದು “ಆಗಲೇಬೇಕು” ಎಂಬ ಹಠಗಳಂತೂ ಖಂಡಿತಾ ತೆರೆ ಮರೆಗೆ
ಸರಿದಿರುತ್ತದೆ... ಅಥವಾ ಬದುಕು ನಮ್ಮನ್ನು ಆ ಹಂತಕ್ಕೆ ತಲುಪಿಸುತ್ತದೆ!
ಟೈಂ ಟೇಬಲ್ ಪ್ರಕಾರವೇ
ಚೀಲಕ್ಕೆ ಪುಸ್ತಕ ತುಂಬಿಸುವುದು, ಚಂದದ ಫೋಟೋ ಇರುವ ಕ್ಯಾಲೆಂಡರ್ ನ್ನು ನೋಟ್ಸು ಪುಸ್ತಕಕ್ಕೆ
ಬೈಂಡ್ ಹಾಕಿ ಮತ್ತೆ ನೀಟಾಗಿ ಹೆಸರು ಬರೆಯುವುದು, ಪರೀಕ್ಷೆಗೆ ಎಲ್ಲ ಗಣಿತದ ಸೂತ್ರಗಳನ್ನು
ನಾಲ್ಕು ನಾಲ್ಕು ಸಲ ಬರೆದೇ ಕಲಿಯುವುದು... ಹೇಳಿದ ಸಮಯಕ್ಕಿಂತ ಐದು
ನಿಮಿಷ ಮೊದಲೇ ಸ್ಥಳಕ್ಕೆ ತಲುಪುದು, ಇಸ್ತ್ರಿ ಹಾಕದ ಅಂಗಿಯನ್ನು ಹಾಕುವುದೇ ಇಲ್ಲ... ಹೀಗೆ
ಯಾವುದೋ ಒಂದು ಕಾಲದಲ್ಲಿ ಪರಿಪೂರ್ಣತೆಗಾಗಿ ಹಂಬಲಿಸುತ್ತಿದ್ದ ಮನಸ್ಸುಗಳು... ವಯಸ್ಸು ನೀಡಿದ
ಅಥವಾ ನೀಡುವ ಜವಾಬ್ದಾರಿಗಳಿಗನುಗುಣವಾಗಿ ಹೊಂದಾಣಿಕೆ ಮಾಡಿಕೊಂಡೇ ಸಾಗುತ್ತದೆ. “ಹೀಗೆಯೇ ಆಗಬೇಕು ಅಂತ ಇಲ್ಲಪ್ಪ, ಒಟ್ಟಿನಲ್ಲಿ
ಆದರೆ ಸಾಕು…” ಎಂಬಲ್ಲಿ ವರೆಗೆ ಹಠವೂ,
ಅಚ್ಚುಕಟ್ಟುತನವೂ, ಪರಿಪೂರ್ಣತೆಯ ಹಂಬಲವೂ ಹೊದ್ದು ಮಲಗಿರುತ್ತದೆ.
1990ರ ದಶಕದಲ್ಲಿ “ದೂರದರ್ಶನ ಕೇಂದ್ರ ಬೆಂಗಳೂರು, ಇದೀಗ
ಕನ್ನಡ ಚಲನಚಿತ್ರ…” ಎಂಬ ಉದ್ಘೋಷಕರ ಮಾತಿನಿಂದ
ಹಿಡಿದು ರಾತ್ರಿ 7.15ರ ಚಂದನ ವಾರ್ತೆ ತನಕ ಎಂಥದ್ದೇ ಸಿನಿಮಾ ಇದ್ದರೂ ಕಣ್ಣೆವೆ ಮುಚ್ಚದೆ
ನೋಡುತ್ತಿದ್ದ ಜನ, ಇಂದು ಎಷ್ಟು ಸಿನಿಮಾಗಳನ್ನು ಶುರುವಿನಿಂದ ಕೊನೆ ವರೆಗೆ ಜಂಪ್ ಮಾಡದೇ
ನೋಡುತ್ತಾರೆ?. ಎಷ್ಟು ಸಿನಿಮಾದ ಹಾಡು
ನೆನಪಿಡುತ್ತಾರೆ?, ಎಷ್ಟು ಸಿನಿಮಾವನ್ನು
ಕಾದು ಕುಳಿತು ನೋಡುತ್ತಾರೆ?. ರೆಡಿಮೇಡ್ ಬೈಂಡು,
ಲೇಬಲ್ಲು, ಯೂಸ್ ಆಂಡ್ ಥ್ರೋ ಪೆನ್ನುಗಳು, ಸ್ಕೂಲ್ ಬಸ್ಸು, ಒಂದೇ ಮಾದರಿಯ ಶೂಸ್, ಸಾಕ್ಸ್,
ಕೇಳಿದನ್ನು ತೋರಿಸುವ ಕಲ್ಪವೃಕ್ಷ ಮೊಬೈಲೂ ಬಂದ ಮೇಲೆ ಕುತೂಹಲ ಹಾಗೂ ಅಚ್ಚರಿಗಳು ಸತ್ತು ಹೋಗಿವೆ.
ಮಾತ್ರವಲ್ಲ, ಬಾಲ್ಯದಲ್ಲಿ ನಮಗೆ ನಾವೇ ರೂಢಿಸಿಕೊಂಡಿದ್ದ ಶಿಸ್ತು, ಅಚ್ಚುಕಟ್ಟುತನ ಹಾಗೂ
ಬದ್ಧತೆಗಳು ನಮ್ಮ ಅವಸ್ಥೆ ನೋಡಿ ನಮ್ಮನ್ನು ತೊರೆದು ಹೋಗಿವೆ.!
ಆದ್ಯತೆಗಳೇ ಬದುಕಿನ ಆ
ಹೊತ್ತಿನ ನಿರ್ಣಾಯಕ ಅಂಶಗಳು. ಊಟಕ್ಕೆ ಹೆಸರುಬೇಳೆ ಪಾಯಸ ಇದ್ದರೆ ಮಾತ್ರ ಉಣ್ಣುವುದು ಎಂದು ಹಠ
ಕಟ್ಟಿದ ವ್ಯಕ್ತಿಗೆ 40 ಕಳೆದ ಮೇಲೆ ಡಯಾಬೀಟಿಸ್, ಆಸಿಡಿಟಿ ಕಾಡಲು ತೊಡಗಿದರೆ, ಅವನಿಗೆ “ಪಾಯಸ ಬಿಡಿ, ಹೊಟ್ಟೆ ತುಂಬ ಉಣ್ಣಲು
ಸಾಧ್ಯವಾದರೆ ಸಾಕು” ಎಂಬಲ್ಲಿಗೆ ಪರಿಸ್ಥಿತಿ
ತಲುಪಿರುತ್ತದೆ. ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಪರಿಸರದ ಚೆಂದ ನೋಡುವ ದಿನಗಳು ಕಳೆದು ಸಂಜೆ
ಎಷ್ಟು ಹೊತ್ತಿಗೆ ಮನೆ ತಲುಪುತ್ತೇನೆ ಎಂದು ಹಂಬಲಿಸುವವನಿಗೆ ಅಥವಾ ಅವಳಿಗೆ “ಬಸ್ ಸಿಕ್ಕಿದರೆ ಸಾಕು, ಸಿಕ್ಕಿದ ಬಸ್
ಸುರಕ್ಷಿತವಾಗಿ ನನ್ನ ಸ್ಟಾಪ್ ತಲುಪಿಸಿದರೆ ಸಾಕು” ಎಂದು ಪ್ರಾರ್ಥಿಸುವಂತೆ ಮಾಡುತ್ತದೆ.
ಚಂದಕೆ ಬೀಸುವ ತಂಪು ಗಾಳಿ, ಕಿಟಕಿ ಪಕ್ಕದಿಂದ ಕಾಣುವ ಸೂರ್ಯಾಸ್ತ, ರೇಲ್ವೇ ಗೇಟಿನಾಚೆ
ಸಾಲುಗಟ್ಟಿ ನಿಂತ ಆಟೋಗಳು, ಮೇಯುವ ದನಗಳು, ಮೈತುಂಬ ಹೂ ಹೊತ್ತು ನಿಂತ ಮೇಫ್ಲವರ್ ಮರಗಳ ಚೆಂದ
ಇವನ್ನೆಲ್ಲ ನೋಡುವ ಆಸಕ್ತಿಯನ್ನು ಸ್ಟ್ರೆಸ್ಸಿನಿಂದ ಅರ್ಧ ಸತ್ತಿರುವ ಮನಸ್ಸು
ಕಳೆದುಕೊಂಡಿರುತ್ತದೆ...!
ಆದ್ಯತೆ ಅಂದರೆ ಇದುವೇ..
ಅಂದಿಗೆ ಅದು ಬೇಕೇ ಬೇಕು ಅನ್ನಿಸ್ತಾ ಇತ್ತು. ಇಂದಿಗೆ “ಇಷ್ಟಾದರೂ ಇದ್ದೇನಲ್ಲ” ಎಂಬಂತ ಆತಂಕ ಭರಿತ ಮನಸ್ಸು ಹಾಗೂ ಅಲ್ಪತೃಪ್ತಿ ಕುತೂಹಲ ಹಾಗೂ
ಆಸಕ್ತಿಯನ್ನು ಹೊಸಕಿ ಹಾಕಿರುತ್ತವೆ. ಸಿಹಿಯನ್ನೇ ತಿನ್ನಬಾರದು ಅಂತ ಡಾಕ್ಟ್ರು ಹೇಳಿದ ಮೇಲೆ “ತಿನ್ನುವುದಕ್ಕೆ ಸಿಕ್ಕಿದರಲ್ಲೇ ರುಚಿ
ಹುಡುಕಬೇಕಾದ” ಪರಿಸ್ಥಿತಿ,
ಆಸಿಡಿಟಿಯಿಂದ ಗಂಟಲೊಳಗೆ ಅನ್ನ ಇಳಿಯದಂತೆ ಭಾಸವಾದಾಗ ಹೊಟ್ಟೆ ತುಂಬ ಗಬ ಗಬ ಉಣ್ಣುವವನನ್ನು
ಕಂಡಾಗ ಅದು ಪವಾಡವೆಂದು ಭಾವಿಸುವ
ವಿಚಿತ್ರ ಸನ್ನಿವೇಶ....
ಕಾಲವೂ ಬದಲಾಗುವುದಲ್ಲ,
ನಾವೂ ಬದಲಾಗುವುದಲ್ಲ. ಪರಿಸ್ಥಿತಿ ಬದಲಾಗುವುದು. ಅವಶ್ಯಕತೆಗಳು, ಒತ್ತಡಗಳು, ಸಂದರ್ಭಗಳು, ನಾವೇ
ಸೃಷ್ಟಿಸಿಕೊಂಡ ವಲಯಗಳು, ಹೊಟ್ಟೆಪಾಡಿನ ಅನಿವಾರ್ಯತೆಗಳು ನಮ್ಮ ಆದ್ಯತೆಗಳನ್ನು ಖಂಡಿತಾ
ಬದಲಿಸುತ್ತವೆ. ತಡರಾತ್ರಿ ವರೆಗೆ ದುಡಿದು ಟಾರ್ಗೆಟ್ ರೀಚ್ ಆಗಲಾಗದೆ ಬಾಸಿನಿಂದ ಬೈಗಳು ತಿಂದು
ಗುಂಡು ಹಾಕಿ ಮಲಗಿದವನಿಗೆ ಬೆಳಗ್ಗೆದ್ದು ಹಕ್ಕಿಯ ಚಿಲಿಪಿಲಿ ಕೇಳುತ್ತಾ ಮಂಜು ಹಾಸಿದ ಹುಲ್ಲಿನ
ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಅನ್ನಿಸುವುದಿಲ್ಲ...
ಮೊಬೈಲ್ ಸ್ವಿಚಾಫ್ ಮಾಡಿ ಸಂಜೆ ಸಮುದ್ರದ ದಂಡೆಯ ಮೇಲೆ ಯಾವ ಚಿಂತೆಯೂ ಇಲ್ಲದೆ ಆರಾಮವಾಗಿ
ಸೂರ್ಯ ಮುಳುಗುವುದನ್ನು ನೋಡುತ್ತಾ ಕೂರಲು ಆಗುವುದಿಲ್ಲ. ಅರ್ಧ ಗಂಟೆ ವಾಟ್ಸಪ್ ಸ್ವೀಚಾಫ್
ಆಗಿದ್ದರೆ ಸಾವಿರ ಮೆಸೇಜುಗಳು ಮೊಬೈಲು ಹ್ಯಾಂಗ್ ಆಗುವಷ್ಟರ ಮಟ್ಟಿಗೆ ಪುಟಿದೇಳುತ್ತಾ
ಇರುತ್ತವೆ... ವಾಟ್ಸಪ್ ಸ್ಟೇಟಸ್ಸುಗಳಲ್ಲೇ ಲೋಕದ ಸುದ್ದಿ ತಿಳಿಯುವಾಗ ಕಾದು ಕುಳಿತು ಬೆಳಗ್ಗಿನ ಪೇಪರನ್ನು,
ಬಾಲಮಂಗಳವನ್ನು ಅಂಗಡಿಯಿಂದ ತಂದು ಪುಟ ಮಗುಚಿ ಡಿಂಗನ ಕಥೆ ಓದಬೇಕು ಅನ್ನಿಸಿವಷ್ಟು ಸಹನೆ ಖಂಡಿತಾ
ಉಳಿದಿರುವುದಿಲ್ಲ... ಸೆಲ್ಫೀಗಿಂತ ಆಚೆ ಚಂದದ ಒಂದು ಗ್ರೂಪ್ ಫೋಟೋಗೆ ನಿಲ್ಲಬೇಕು
ಅನ್ನಿಸುವುದಿಲ್ಲ.
ಸರಳವಾಗಿ ಹೇಳಬೇಕೆಂದರೆ
5ಜಿ ಹೊಸ್ತಿಲಲ್ಲಿ ನಮ್ಮಲ್ಲಿ ಬಹುತೇಕರಿಗೆ “ನಾಟ್ ರೀಚೆಬಲ್” ಆಗಿ ಇರಲು ಆಗುವುದಿಲ್ಲ. ಬದುಕಿನ
ಅನಿವಾರ್ಯತೆಗಳು “ಆನ್ ಲೈನಿ”ನಲ್ಲಿ ನಮ್ಮನ್ನು ಆಳುತ್ತಾ ಇರುತ್ತವೆ.
ಹವ್ಯಾಸಗಳು ಅಳುತ್ತಿದ್ದರೂ ಪರವಾಗಿಲ್ಲ. ಟಾರ್ಗೆಟ್ಟುಗಳು ರೀಚ್ ಆಗಲೇಬೇಕು... ಅದರಾಚೆಗಿನ
ಬದುಕು ವೀಕೆಂಡು ಮತ್ತು “ಅನಾರೋಗ್ಯದಲ್ಲಿ ಪಡೆಯುವ” ವಿಶ್ರಾಂತಿಯಲ್ಲಿ ಅವಿತಿರುತ್ತವೆ!
-ಕೃಷ್ಣಮೋಹನ ತಲೆಂಗಳ
(27.12.2023)
1 comment:
Tumba chennagittu lekhana.. nanna jeevanada kelavu amshagalu bimbitavagi.. sanna nagu moodisitu.. satyada matugalu..
Post a Comment