“ಆತಂಕವಾದಿ”ಗಳಿಗೆ ವಿಧಿ ವಿಶೇಷ ವಿನಾಯಿತಿ ವಿಧಿಸುವುದಿಲ್ಲ...!

 

AI GENERATED IMAGE


ಒಂದು ರಾತ್ರಿ ಪ್ರಯಾಣಕ್ಕೆ ಸಜ್ಜಾಗಿದ್ದೀರಿ. ಟಿಕೆಟ್ಟು ಬುಕ್ಕಾಗಿದೆ. ಮಹಾನಗರದ ನಿಗದಿತ ಜಾಗದಲ್ಲಿ ಬಸ್ಸಿಗೆ ಕಾಯುತ್ತಿದ್ದೀರಿ. ಮೊದಲೇ ಜಾಗ ಕಾಯ್ದಿರಿಸಿದರೂ, ನಿಮಗೆ ನೋಟಿಫಿಕೇಶನ್ ಬಂದಿದ್ದರೂ ಆ ಬಸ್ ಬಂದು ಅದರಲ್ಲಿ ಕಾಯ್ದಿರಿಸಿದ ಸೀಟು ಹೊಂದುವ ವರೆಗೂ ಸಣ್ಣದಾದ ಒಂದು ಟೆನ್ಶನ್ನು ಇದ್ದೇ ಇರ್ತದಲ್ವ?

 

ಶೇಷಾದ್ರಿಪುರ, ಮಲ್ಲೇಶ್ವರ, ಯಶ್ವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ಕೊಟ್ಟಾರ, ಪಿವಿಎಸ್, ಬಲ್ಮಠ, ಕುಂದಾಪುರ, ಪಡುಬಿದ್ರಿ, ಉಪ್ಪಿನಂಗಡಿ.... ಎಲ್ಲ ಜಂಕ್ಷನ್ನುಗಳನ್ನೂ ಸ್ವಲ್ಪ ಕಣ್ಣೆದುರು ತಂದುಕೊಳ್ಳಿ. ರಾತ್ರಿ 8ರಿಂದ 11 ಗಂಟೆ ವರೆಗೆ ಅವೆಷ್ಟು ಬಸ್ಸುಗಳು ಬರ್ತಾ ಇರ್ತವೆ ಅಬ್ಬಬ್ಬ. ರಾತ್ರಿಯ ಲೋಕವೇ ಬೇರೆ. ನೂರಾರು ಬಸ್ಸುಗಳು ಈ ನಮೂನೆ ಮಳೆಗಾಲದ ಪತಂಗಗಳ ಹಾಗೆ ಎಲ್ಲಿಂದ ಎದ್ದ ಬರ್ತಾವೋ ಎಂಬಷ್ಟು ಒಂದಾದ ಮೇಲೆ ಬರುತ್ತಲೇ ಇರುತ್ತವೆ, ಸಮುದ್ರದ ಅಲೆಗಳ ಹಾಗೆ... ಅಷ್ಟೇ ಸಂಖ್ಯೆಯ ಜನ ಕೈಯಲ್ಲಿ, ಬೆನ್ನಲ್ಲಿ ಬ್ಯಾಗ್ ನೇತಾಡಿಸಿಕೊಂಡು ತಮ್ಮ ಬಸ್ಸಿಗೆ ಕಾಯುತ್ತಲೇ ಇರ್ತಾರೆ. 11.30 ಕಳೆದ ಬಳಿಕ ಬಸ್ಸುಗಳೂ, ಜನರೂ ನಿಧಾನವಾಗಿ ಖಾಲಿಯಾಗಿ ಪ್ರತಿ ಜಂಕ್ಷನ್ನೂ  ನಿರ್ಮಾನುಷವಾಗುತ್ತಾ ಬರ್ತವೆ... ಇದು ದಿನದ ಪಾಲಿಗೆ ದಿನಚರಿ. ಯಾವತ್ತೋ ಒಮ್ಮೆ ರಾತ್ರಿ ಪ್ರಯಾಣ ಮಾಡುವವರಿಗೆ ವಿಶೇಷ ಅಷ್ಟೇ...

 

ಈಗ ಸಾಕಷ್ಟು ಮೊದಲೇ ಮೊಬೈಲಿನಲ್ಲೇ ಬಸ್, ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದು, ಪ್ರಯಾಣ ಶುರುವಾದ ಬಳಿಕ ಕಂಡಕ್ಟರ್ ಅಥವಾ ಡ್ರೈವರ್ ನಂಬರ್ ಮೊಬೈಲಿಗೆ ಬರ್ತದೆ. ರಿಮೈಂಡರ್ ಮೆಸೇಜು ಬರ್ತದೆ. ಕಂಡಕ್ಟರ್ ಸ್ವತಃ ಕರೆ ಮಾಡಿ ನಿಮ್ಮನ್ನು ವಿಚಾರಿಸಿಕೊಳ್ತಾನೆ, ಅಷ್ಟೇ ಯಾಕೆ... ಮೊಬೈಲ್ ನಲ್ಲೇ ಬಸ್ಸು ಎಲ್ಲಿ ಬರ್ತಾ ಇದೆ ಅಂತ ರಿಯಲ್ ಟೈಂ ಟ್ರ್ಯಾಕಿಂಗ್ ಮಾಡಬಹುದು... ಇಳಿಯುವ ಸ್ಟಾಪ್ ಬರುವ ಮೊದಲೇ ಮೊಬೈಲಿಗೆ ವೇಕಪ್ ಕಾಲ್ ಬಂದು ನೀವು ಮಲಗಿದ್ದರೂ ನಿಮ್ಮನ್ನು ಎಚ್ಚರಿಸುತ್ತದೆ... ಆದರೂ... ಕೆಲವರು ಎಲ್ಲಿ ಬಸ್ ನನ್ನನ್ನು ಬಿಟ್ಟು ಹೋದೀತೋ ಅಂತ ಚಡಪಡಿಸುತ್ತಲೇ ಇರ್ತಾರೆ....

 

1)      ನಿಮ್ಮ ಬಸ್ಸಿರುವುದು 10 ಗಂಟೆಗೆ ಆದರೂ, ನೀವು ಛಾನ್ಸ್ ತಗೊಳ್ಲಿಕೆ ರೆಡಿ ಇಲ್ಲ. ಎಲ್ಲಾದರೂ ಟ್ರಾಫಿಕ್ ಜಾಂ ಆದರೆ? ಮಳೆ ಬಂದರೆ?, ಕಂಡಕ್ಟರಿಗೆ ನನಗೆ ಕಾಲ್ ಮಾಡ್ಲಿಕೆ ಮರ್ತೋದರೆ?, ನೆಟ್ವರ್ಕ್ ಸಮಸ್ಯೆ ಆಗಿ, ಬ್ಯಾಟ್ರಿ ಖಾಲಿ ಆಗಿ ಕಂಡಕ್ಟರ್ ಸಂಪರ್ಕಕ್ಕೆ ನಾನು ಸಿಕ್ಕದೇ ಇದ್ದರೆ? ಇವತ್ತು ಬಸ್ಸು ಯಾವಗಿನಿಂದ ಬೇಗ ಬಂದರೆ..?. ನಂಗೆ ಅಕಸ್ಮಾತ್ ಬಸ್ ಮಿಸ್ಸಾದರೆ...? ಅಂತೆಲ್ಲ ಟೆನ್ಶನ್ ಮಾಡ್ಕೊಂಡು 9 ಗಂಟೆಗೇ ಗಡಿಬಿಡಿ ಮಾಡಿ ಸರಿಯಾಗಿ ಊಟವನ್ನೂ ಮಾಡದೆ ನಿಗದಿತ ಪಿಕಪ್ ಪಾಯಿಂಟಿಗೆ ಬಂದು ಆ ಬಸ್ ಸ್ಟ್ಯಾಂಡಿನಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಕೂರುವವರೂ ಇದ್ದಾರೆ. ಮೊಬೈಲಿನಲ್ಲಿ ವಾಹನ ಟ್ರ್ಯಾಕಿಂಗ್ ಸಾಧ್ಯವಿದ್ದರೂ ಅದು ಸರಿಯಾಗಿರಬಹುದಾ? ಇಲ್ವ?, ಇವತ್ತೇನಾದರೂ ಲೇಟಾಗಬಹುದ?, ಬಸ್ ಸ್ವಲ್ಪ ಮುಂದೆ ಹೋಗಿ ನಿಂತರೆ ಈ ಬ್ಯಾಗನ್ನು ಹೊತ್ಕೊಂಡು ಹೇಗೆ ಓಡುವುದು?, ನನ್ನ ಸೀಟಿನಲ್ಲಿ ಇನ್ಯಾರಾದರೂ ತಪ್ಪಿ ಕೂತಿರಬಹುದ...? ಡಬಲ್ ಸ್ಲೀಪರ್ ಆದರೆ ಪಕ್ಕದಲ್ಲಿ ಎಂಥವರು ಬಂದು ಬಿದ್ಕೊಳ್ತಾರೋ? ಎಂಬಿತ್ಯಾದಿ ತಳಮಳ..

2)      ಇನ್ನೊಂದು ವರ್ಗದವರಿದ್ದಾರೆ... ಟಿಕೆಟ್ ಬುಕ್ಕಾದ ಮೇಲೆ ಅದನ್ನು ಮರೆತೇ ಬಿಟ್ಟಿರ್ತಾರೆ. ಆ ದಿನ ಬಸ್ಸಿನ ಕಡೆಯಿಂದ ಅಥವಾ ರೆಡ್ ಬಸ್ ನವರಿಂದ ರಿಮೈಂಡರ್ ಮೆಸೇಜು ಬಂದ ಮೇಲೆ ಪ್ಯಾಕಿಂಗ್ ಶುರು ಮಾಡ್ತಾರೆ. ಕಂಡಕ್ಟರ್ ಕಾಲ್ ಮಾಡಿದ ಮೇಲೆ ಮನೆಯಿಂದ ಹೊರಡ್ತಾರೆ... ಬಸ್ ಬರ್ಲಿಕೆ ಇನ್ನೇನು 2 ನಿಮಿಷ ಇದೆ ಅನ್ನುವಷ್ಟರಲ್ಲಿ ಯಾರದ್ದೋ ಬೈಕಿನಲ್ಲಿ ಬಂದು ಆರಾಮವಾಗಿ ಬಸ್ ಹತ್ಕೊಂಡು ಹೋಗ್ತಾರೆ... ಕೈಯಲ್ಲಿ ದೊಡ್ಡ ಲಗೇಜೂ ಇರುವುದಿಲ್ಲ., ಮೊಬೈಲಿನಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ಯಾವುದೋ ಹಾಡು ಕೇಳುತ್ತಾ ಆರಾಮವಾಗಿರ್ತಾರೆ....

 

 

ಎರಡೂ ಟೈಪಿನ ಮಂದಿ ಹೋಗುವುದು ಒಂದೇ ಬಸ್ಸಿನಲ್ಲಿ, ಒಂದೇ ಜಾಗಕ್ಕೆ. ಆದರೆ ಪ್ರಯಾಣವನ್ನು ಸ್ವೀಕರಿಸುವ ಹಾಗೂ ನಿಭಾಯಿಸುವ ರೀತಿ ಮಾತ್ರ ಬೇರೆ ಬೇರೆ...!!!

 

 

ಒಮ್ಮೆ ಯೋಚಿಸಿ ನಾವೊಂದು ಪಿಕಪ್ ಪಾಯಿಂಟಿನಲ್ಲಿ ನಮ್ಮ ಬಸ್ಸಿಗೋಸ್ಕರ ಕಾಯುತ್ತಿರುತ್ತೇವೆ. ಹತ್ತಾರು ಊರುಗಳಿಗೆ ಹೋಗುವ ನೂರಾರು ಬಸ್ಸುಗಳು ಬರುತ್ತಲೇ ಇರ್ತವೆ. ಬೆಂಗಳೂರಿನಿಂತಹ ಊರಿನಲ್ಲಿ ಸಿಗ್ನಲ್ ದಾಟಿ ಪ್ರವಾಹದಂತೆ ಬೇರೇ ಬೇರೆ ಹೆಸರುಗಳ ಬಸ್ಸುಗಳು ಧಾವಿಸಿ ಬರುವಾಗ ಅಕ್ಷರಶಃ ದುರ್ಬೀನು ಹಾಕಿ ನಮ್ಮ ಬಸ್ ಹುಡುಕಲು ಧಾವಂತ ಪಡಬೇಕಾಗುತ್ತದೆ. ಮಳೆ ಬರುತ್ತಿದ್ದರೆ ಕೇಳುವುದೇ ಬೇಡ. ಕಂಡಕ್ಟರ್ ಫೋನ್ ಮಾಡುತ್ತಾರೆ ಸರಿ. ಆದರೆ, ಆ ಬಸ್ಸಿಗೆ ಅಲ್ಲಿ ನಿಲ್ಲಲು ಜಾಗ ಬೇಕಲ್ಲ, ಮಳೆಯೋ, ಮಂಜೋ ಇದ್ದರೆ ಅದರೆಡೆಯಲ್ಲಿ ನಾವು ನಂಬರ್ ಹುಡುಕಿ ಬಸ್ ಹತ್ತಬೇಕಲ್ಲ.... ಎಂಬ ತಳಮಳ... ನಮಿಗಿಂತ ನಂತರ ಬಂದವರು ನಮ್ಮ ಕಣ್ಣೆದುರೇ ಅವರವ ಬಸ್ ಹತ್ತಿ ಹೋಗುತ್ತಾ ಇರಬಹುದು. ತಡವಾಗಿ ಬಂದವನೂ ನಿರಾಯಾಸವಾಗಿ ಸುಲಭವಾಗಿ ಬಸ್ ಹುಡುಕಿ ತೆರಳಬಹುದು. ಕಾಕತಾಳೀಯವೋ ಎಂಬಂತೆ ನಾವು ಹೋಗಬೇಕಾದ ಬಸ್ಸು ಅದೆಲ್ಲೋ ಮೆಜೆಸ್ಟಿಕ್ಕಿನಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಹಾಕೊಂಡು ತಡವಾಗಿ ಬಂದು ನಮ್ಮ ಕಾಯುವಿಕೆಯ ಬಿಸಿ ಹೆಚ್ಚಿಸಬಹುದು. ಅಂತಿಮವಾಗಿ, ಈ ಬಸ್ ತಡವಾಗಿ ಬಂದು ನಾನು ತಲುಪಬೇಕಾದ ಟೈಮಿಗೆ ತಲುಪುತ್ತೇನೋ ಇಲ್ಲವೋ?” ಎಂಬ ಟೆನ್ಶನ್..

 

ಈ ನಡುವೆ ಕೆಲವರ ಸಲಹೆ... ನೀನ್ಯಾಕೆ ಪ್ರೈವೇಟ್ ಬಸ್ ಬುಕ್ ಮಾಡಿದ್ದಿ ಮಾರಾಯ, ನಿಂಗೆ ಆರಾಮವಾಗಿ ಕೆಎಸ್ಸಾರ್ಟೀಸಿಯಲ್ಲಿ ಹೋಗಬಹುದಲ್ವ?” ಅಂತ, ನೀನ್ಯಾಕೆ ವಿಆರ್ ಎಲ್ ನಲ್ಲಿ ಹೋಗುವುದಿಲ್ಲ?” ಅಂತ, ಅಥವಾ ನಿಂಗೆ ತತ್ಕಾಲಿನಲ್ಲಿ ರೈಲಿನಲ್ಲಿ ಸೀಟು ಸಿಕ್ತದಲ್ವ, ಯಾಕೆ ಬಸ್ಸಿನಲ್ಲಿ ಹೋಗ್ತಿ?” ಅಂತ.

 

ವೇಟಿಂಗ್ ಲಿಸ್ಟಿನಲ್ಲಿದ್ರೂ ಟಿಕೆಟ್ ಕನ್ಫರ್ಮ್ ಆಗ್ತದೆ... ರೈಲಿನಲ್ಲಿ ಹೋಗಬಹುದಿತ್ತು ಅಂತ ಪ್ರಯಾಣದ ಅಷ್ಟೂ ಟೆನ್ಶನ್ನಿನ ಬೆಂಕಿಗೆ ತುಪ್ಪ ಸುರಿಯುವವರೂ ಇರ್ತಾರೆ... ಅವರವರ ಪರಿಸ್ಥಿತಿ, ಮನಃಸ್ಥಿತಿಗೆ ಅನುಗುಣವಾಗಿ ಬಸ್ಸೋ, ರೈಲೋ, ಖಾಸಗಿಯೋ, ಸರ್ಕಾರಿಯೋ ಬಸ್ಸಿನಲ್ಲಿ ಹೋಗಬೇಕಾಗ್ತದೆ... ಯಾವುದನ್ನೂ ಎಲ್ಲರಿಗೂ ಅಪ್ಲೈ ಮಾಡಿ ಸಾಮನ್ಯೀಕರಿಲ್ಸಿಕೆ ಕಷ್ಟ... ಎಲ್ರಿಗೂ ರಿಪ್ಲೈ ಕೊಡ್ಲಿಕೂ ಕಷ್ಟ....

 

ಇದೇ ತಳಮಳವನ್ನು ಕೆಲವರು ಭಯಂಕರ ಸೀರಿಯಸ್ಸಾಗಿ ತಕ್ಕೊಂಡು ಬಸ್ಸಿಗೆ ಕಾಯುವ ವರೆಗಿನ ಖುಷಿಯನ್ನೂ ಹಾಳು ಮಾಡಿಕೊಳ್ತಾರೆ. ಮತ್ತು ಆಗಾಗ ಕಾಲ್ ಮಾಡಿ ಅವರಿವರ ತಲೆ ತಿಂದು ಸಲಹೆ ಕೇಳಿ ಸ್ನೇಹಿತರ, ಕಂಡಕ್ಟರಿನ, ಹೋಗಬೇಕಾದ ಊರಿನ ಮನೆ ಮಂದಿಯ ತಲೆಯನ್ನೂ ಕೆಡಿಸಿರುತ್ತಾರೆ. ಎರಡನೇ ವರ್ಗದವರು ಬಸ್ ಇಲ್ಲಿಗೆ ಬರ್ಲೇ ಬೇಕಲ್ಲ, ಕಂಡಕ್ಟರ್ ನನ್ನನ್ನು ಕರ್ಕೊಂಡೇ ಹೋಗಬೇಕಲ್ಲ, ಅದಕ್ಕೆ ಟೆನ್ಶನ್ ಮಾಡ್ಲಿಕೆಂತ ಉಂಟು?” ಅಂತ ಆರಾಮವಾಗಿ ಬಂದು, ಪ್ರಯಾಣವನ್ನು ಹಗುರವಾಗಿಸ್ತಾರೆ... ಇದು ಮನಃಸ್ಥಿತಿಗೆ ಸಂಬಂಧಪಟ್ಟ ಸಂಗತಿ.

 

 

ಬದುಕು ಹಾಗೆ. ಬದುಕಿನಲ್ಲಿ, ವೃತ್ತಿಯಲ್ಲಿ ಸವಾಲುಗಳು, ಸಂಧಿಗ್ಧತೆಗಳು, ಸಂಕಷ್ಟಗಳು ನೈಟ್ ಬಸ್ಸಿನ ಹಾಗೆ ಬರುತ್ತಲೇ ಇರ್ತವೆ. ಈ ನಡುವೆ ನಮಗೊಂದು ಬಸ್ಸನ್ನು ದೇವರು ಸಿದ್ಧಪಡಿಸಿ ಕಳಿಸಿಯೂ ಇರ್ತಾನೆ. ಆ ರಾಶಿಯಲ್ಲಿ, ಆ ಸಾಲಿನಲ್ಲಿ ನಾವದನ್ನು ಹುಡುಕಿ ಕ್ಲಪ್ತ ಸಮಯದಲ್ಲಿ ಕ್ಲಪ್ತ ಬಸ್ ಏರುವುದು ಮುಖ್ಯ... ಆ ಸಮಯಪ್ರಜ್ಞೆ, ಸಹನೆ ಮತ್ತು ಸೂಕ್ತ ನಿರ್ಧಾರ ತಕ್ಕೊಳ್ಳುವ ತಾಕತ್ತೇ ನಮ್ಮ ಪ್ರಯಾಣದ ಅವಧಿಯನ್ನು ಸುಖವೋ, ದುಃಖವೋ ಮಾಡುವುದು ಎಂಬುದು ನೆನಪಿರಬೇಕು... ತುಂಬ ಸಲ ಆಯ್ಕೆಯ ಗೊಂದಲ, ಬಸ್ ಸರಿಯಾಗಿ ಬರ್ತದೋ,ತಲುಪ್ತದೋ, ದಾರಿ ನಡುವೆ ಚಹಾ ಕುಡಿಯಲು, ವಾಶ್ ರೂಮಿಗೆ ಹೋಗಲು ನಿಲ್ಲಿಸದೇ ಇದ್ದರೆ, ನಿಲ್ಲಿಸಿದರೂ ಅಲ್ಲಿ ರಶ್ ಇದ್ದರೆ, ಅಥವಾ ನಿಲ್ಲಿಸುವಾಗ ನನಗೆ ಎಚ್ಚರವೇ ಆಗದಿದ್ರೆ ಎಂಬ ಸಂಶಯ, ನಾನು ಬುಕ್ ಮಾಡಿದ ಬಸ್ಸಿನ ಆಯ್ಕೆ ಸರಿಯಾ, ತಪ್ಪಾ, ರೈಲಿನಲ್ಲಿ ಹೋಗಬೇಕಿತ್ತ, ಬೇಗ ಹೊರಡುವ ಬಸ್ ಆರಿಸಬೇಕಿತ್ತ, ಸ್ಲೀಪರ್ ಬದಲು ಐರಾವತ ಸೂಕ್ತವಿತ್ತ? ಅಂತೆಲ್ಲ ಉತ್ತರ ಸಿಗದ ಪ್ರಶ್ನೆಗಳೂ ಇರ್ತವೆ...

 

ಬಹುತೇಕ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೇ ಸರಿಯಾದ ಬಸ್ಸಿನಲ್ಲೇ ಹೋಗಿ, ಸರಿಯಾದ ಸಮಯಕ್ಕೇ ಗಮ್ಯ ತಲುಪ್ತೇವೆ. ಆದರೂ ಈ ನಡುವಿನ ಮನಸ್ಸಿನ ತಾಕಲಾಟಗಳು ಮತ್ತು ನಾವೇ ಸೃಷ್ಟಿಸಿಕೊಳ್ಳುವ ಆತಂಕಗಳು ನಮ್ಮ ಪ್ರಯಾಣವನ್ನು ಸಂಕೀರ್ಣಗೊಳಿಸುವುದು ಸುಳ್ಳಲ್ಲ... ಅದು ನಮ್ಮ ಮನೋಭಾವಕ್ಕೆ ಬಿಟ್ಟ ಸಂಗತಿ. ತೀರಾ ವೈಯಕ್ತಿಕ, ಸಾರ್ವತ್ರಿಕ ಅಲ್ಲ...

 

ನಾವು ಯೋಚಿಸಬಹುದಾದ ಸಂಗತಿಗಳು...

1)      ನಾವು ಬಸ್ಸಿನಲ್ಲಿ ಸೀಟು ಬುಕ್ ಮಾಡಿದ್ದೇವೆ, ಸೀಟು ಖಚಿತವಾಗಿದೆ, ಸಂಪರ್ಕಕ್ಕೆ ಕಂಡಕ್ಟರ್ ನಂಬರ್ ಇದೆ, ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ಮತ್ತೆಂತಕೆ ಟೆನ್ಶನ್ನು? ಬೆಳಗ್ಗೆ ನಿಮ್ಮ ಸ್ಟಾಪ್ ಬಂದಾಗ ಎಬ್ಬಿಸಲು ವೇಕಪ್ ಕಾಲ್ ವ್ಯವಸ್ಥೆ ಕೂಡಾ ಇದೆ. ಹಾಗಿರುವಾಗ ಆತಂಕ ಎಂತದ್ದಕ್ಕೆ?

2)      ಬಸ್ಸಿಗೊಂದು ಟೈಮಿಂಗ್ ಇರ್ತದೆ, ತಲುಪಲು ಗುರಿ ಇರ್ತದೆ, ಎಲ್ಲರನ್ನೂ ಕರೆದೊಯ್ಯುವ ಜವಾಬ್ದಾರಿ ಇರ್ತದೆ, ಕರೆದೊಯ್ಯದಿದ್ದರೆ ಪ್ರಶ್ನಿಸಲು ಕಂಪ್ಲೇಂಟ್ ವ್ಯವಸ್ಥೆ ಇದೆ. ಆದಾಗ್ಯೂ ನನ್ನನ್ನು ಬಿಟ್ಟು ಹೋದರೆ ಎಂಬ ಟೆನ್ಶನ್ ಯಾಕೆ?

3)      ಬಸ್ಸಿಗೊಂದು ಮಾರ್ಗ, ಅಲ್ಲಲ್ಲಿ ಸ್ಟಾಪುಗಳು ಇರುವಾಗ ಅದು ಯಾವಾಗಕ್ಕಿಂತ ತುಂಬ ಬೇಗ ಅಥವಾ ತುಂಬ ಲೇಟಾಗಲು ಅಸಾಧ್ಯ. ಅಷ್ಟೋ ಇಷ್ಟೋ ಆಚೀಚೆ ಆದೀತು. ಆದರೂ ಬೇಗ ಪಾಸಾದರೆ ಎಂಬಿತ್ಯಾದಿ ತಳಮಳ ಯಾಕೆ?

4)      ಈ ಹಿಂದೆ ತುಂಬ ಸಲ ಬಸ್ಸಿನಲ್ಲಿ ಹೋದ ಅನುಭವ ಇದೆ, ಆವಾಗಲೂ ನಿಮಗೆ ಈ ಥರ ಟೆನ್ಶನ್ ಆಗಿತ್ತು. ಆದರೆ ಅಂತಿಮವಾಗಿ ನೈಜ ಪ್ರಯಾಣ ನಿಮಗೇನೂ ತ್ರಾಸದಾಯಕವಾಗಿರಲಿಲ್ಲ, ಅಲ್ವ?  ಈಗ ಯಾಕೆ ಟೆನ್ಶನ್ನು?

 

5)      ಅಂತಿಮವಾಗಿ ನೀವು ಟೆನ್ಶನ್ ಮಾಡ್ತೀರಿ ಅಂತ ಬಸ್ ಬೇಗ ಬರ್ತದ? ಅಥವಾ ಲೇಟಾಗ್ತದ?, ನೀವು ಟೆನ್ಶನ್ ಮಾಡ್ತೀರಿ ಅಂತ ಬಸ್ಸನ್ನು ನಿಮ್ಮ ಮನೆ ಅಂಗಳಕ್ಕೆ ತರಲು ಸಾಧ್ಯವ?. ನೀವು ಆತಂಕ ಪಡ್ತೀರಿ ಅಂತ ನಿಮ್ಮನ್ನು ಬೆಳಗ್ಗೆ ಎಬ್ಬಿಸಲು ಪ್ರತ್ಯೇಕ ಜನ ಇಡ್ಲಿಕೆ ಆಗ್ತದ?. ಬಸ್ಸಿನಲ್ಲಿ ಹೋಗುವ ಅಷ್ಟೂ 30-40 ಮಂದಿಗೆ ಒಂದೇ ರೂಲ್ಸು, ಒಂದೇ ಟೈಮಿಂಗು... ಹಾಗಿರುವಾಗ ನೀವೊಬ್ಬ ಟೆನ್ಶನ್ ಮಾಡಿದಾಕ್ಷಣ ವ್ಯವಸ್ಥೆ, ಪರಿಸ್ಥಿತಿ ಬದಲಾಗದು. ಆದರೆ ಅದೂ ಅಷ್ಟೂ ಮಂದಿ ಪ್ರಯಾಣಿಕರಿಗೆ ಅನ್ವಯ ಎಂಬುದು ನೆನಪಿರಬೇಕು...

ಇಷ್ಟು ಪಾಯಿಂಟುಗಳನ್ನು ಬೋಧಿಸಲು ಸುಲಭ. ಆದರೆ ಅನ್ವಯಿಸಲು
ಟೆನ್ಶನ್ ಪಾರ್ಟಿಗಳಿಗೆ ಕಷ್ಟ ಅಲ್ವ... ?

 

ಆನ್ಶಿಯಸ್ ನೇಚರ್ ಇರುವ ಮಂದಿ ಬದಲಾಗುವುದೇ ಇಲ್ಲ... ವರ್ತಮಾನದಲ್ಲಿ ಸ್ವಲ್ಪ ಅಲ್ಲೋಲಕಲ್ಲೋಲವಾದರೆ ಸಾಕು, ಭವಿಷ್ಯ ಮುಗಿದೇ ಹೋಯಿತು ಎಂಬಂತೆ ಚಡಪಡಿಸುವುದು, ಕಾಣದ ಭವಿಷ್ಯದ ಚಿಂತೆ, ಆತಂಕದಲ್ಲಿ ಕಾಣುತ್ತಿರುವ ವರ್ತಮಾನದ ಖುಷಿಗಳನ್ನು ಕಳೆದುಕೊಂಡು ತೊಳಲಾಡುವುದು ಆಂತಕವಾದಿಗಳ ಸಮಸ್ಯೆಒಂದೇ ರೀತಿಯ ಪರಿಸ್ಥಿತಿಯನ್ನು, ಬದಲಾವಣೆಗಳನ್ನು, ಸಾಧ್ಯತೆ, ಸವಾಲುಗಳು, ಕಿರಿಕಿರಿಗಳನ್ನು ಒಂದೇ ಕಚೇರಿಯಲ್ಲಿ, ಮನೆಯಲ್ಲಿ, ಪರಿಸರದಲ್ಲಿ ಎದುರಿಸುವ ಹಲವು ಮಂದಿ ಬೇರೆ ಬೇರೆ ರೀತಿ ಸ್ವೀಕರಿಸಲು ಸಾಧ್ಯವಾಗುವುದು ಅವರವರ ಮನೋಭಾವದ ಕಾರಣದಿಂದ. ಎಲ್ರಿಗೂ ಪರಿಸ್ಥಿತಿ ಅದೇ ಆಗಿರುತ್ತದೆ.

1)      ಕೆಲವರು ಯಾವುದನ್ನೂ ತಲೆಗೆ ಹಚ್ಚಕೊಳ್ಳದೆ, ಕೂಲಾಗಿ ಪರಿಸ್ಥಿತಿ ನಿಭಾಯಿಸ್ತಾರೆ ಪರಿಸ್ಥಿತಿ ಗಂಭೀರವಾದಾಗ ಎಚ್ಚೆತ್ತುಕೊಂಡು ಅಪಾಯದಿಂದ ಪಾರಾಗ್ತಾರೆ. 2) ಇನ್ನು ಕೆಲವರು ಬದಲಾವಣೆ ಕಂಡಾಕ್ಷಣ ಎಚ್ಚರಗೊಂಡು ಯೋಚಿಸುವ, ವರ್ತಿಸುವ ವಿಧಾನ ಬದಲಾಯಿಸಿಕೊಂಡು ಹೊಂದಿಕೊಂಡು ಹೋಗ್ತಾರೆ.... 3) ಮೂರನೇ ವರ್ಗದವರು ಬದಲಾವಣೆಗೆ ಹೊಂದಿಕೊಳ್ಳಲೂ ಆಗದೆ, ಬದಲಾದವರ ಮನೋಭಾವಕ್ಕೆ ಪೂರಕವಾಗಿ ಇರಲೂ ಆಗದೆ, ಮನಃಶಾಂತಿ ಕದಡಿಕೊಂಡು, ಹೀಗೆಯೇ ಆದರೆ ಮುಂದೇನು? ಅಂತ ವಿಪರೀತ ಟೆನ್ಶನ್ ಮಾಡಿಕೊಂಡು ವರ್ತಮಾನ ಹಾಗೂ ಭವಿಷ್ಯ ಎರಡರ ಸಂತಸದ ಸಾಧ್ಯತೆಯನ್ನೂ ಕೈಯ್ಯಾರೆ ಕೊಲ್ಲುತ್ತಾರೆ!

 

ಒಂದು ನೆನಪಿಡಿ... ಇದನ್ನು ವಿಜ್ಞಾನವೆನ್ನಿ, ಆಧ್ಯಾತ್ಮಿಕವೆನ್ನಿ... ನಾವೆಷ್ಟೇ ಟೆನ್ಶನ್, ಪ್ರಯತ್ನ, ಸಾಧನೆ, ಧನಾತ್ಮಕ ಚಿಂತನೆ ಎಂಥದ್ದೇ ಮಾಡಿದರೂ ಯಾರಿಗೆ, ಯಾವಾಗ, ಏನು, ಎಷ್ಟು ಸಿಗಬೇಕು, ಸಿಗಬಾರದು ಮತ್ತು ಹೇಗೆ ಸಿಗಬೇಕು, ಹೋಗಬೇಕು ಎಂಬುದನ್ನು ಮೇಲೊಬ್ಬ ನಿರ್ಧಾರ ಮಾಡಿಟ್ಟೇ ಇರುತ್ತಾನೆ. ನಾವ್ಯಾರೂ ಇಚ್ಛಾ ಮರಣಿಗಳಲ್ಲ, ಮತ್ತು ಇಚ್ಚೆಯಂತೇ ಭವಿಷ್ಯವನ್ನು ರೂಪಿಸುವವರೂ ಅಲ್ಲ, ನಾವೆಲ್ಲ ವ್ಯವಸ್ಥೆಗಳ ಭಾಗಗಳು. ನಮಗೊಂದು ದಾರಿ, ನಮಗೊಂದು ಬೊಗಸೆಯಲ್ಲಿ ಸಿಗುವಷ್ಟು ಅವಕಾಶ ಮತ್ತು ಹೀಗೆಯೇ ಆಗಬೇಕು ಎಂದು ಸ್ಕ್ರಿಪ್ಟ್ ಬರೆದಿಟ್ಟಂತೆ ಸಿಕ್ಕುವ ಅವಕಾಶಗಳೆಲ್ಲ... ಮೇಲೊಬ್ಬ ಅವನಿಹನು ಬರೆಯುವವನು ಎಂಬುದನ್ನು  ಸಾರಿ ಸಾರಿ ಹೇಳುತ್ತದೆ... ಸಮುದ್ರದಲ್ಲಿ ಎಷ್ಟೇ ನೀರಿದ್ದರೂ ಬೊಗಸೆಯಲ್ಲಿ ಹಿಡಿಯ ಹೊರಟಾಗ ಉಳಿಯುವುದು ಬೆರಳೆಡೆ ಸೋರಿ ಹೋದ ನಂತರದ ಎರಡು ಚಮಚದಷ್ಟು ಜಲ ಮಾತ್ರ ಅಲ್ವ... ಹಾಗಾಗಿ ಟೆನ್ಶನ್ ಮಾಡುವುದೋ, ಆಗುವುದೋ ಮತ್ತು ಪರಿಸ್ಥಿತಿ ನಿಭಾಯಿಸುವುದಕ್ಕೆ ತಾಳ ಮೇಳಗಳಿರುವುದಿಲ್ಲ. ನೈಟ್ ಬಸ್ಸಿಗೆ ಗಡಿಬಿಡಿ ಮಾಡಿದ ಕಾದು ಕೂರುವ ಹಾಗೆ... ಭವಿಷ್ಯ ತನ್ನದೇ ಹೊತ್ತಿಗೆ ಬರುತ್ತದೆ, ಬೇಕಿದ್ದರೆ ನಮ್ಮನ್ನು ಹತ್ತಿಸುತ್ತದೆ, ಪರಿಸ್ಥಿತಿ ನೆಟ್ಟಗಿಲ್ಲದಿದ್ರೆ ಬಿಟ್ಟು ಹೋಗುತ್ತದೆ... ಮತ್ತು ನೀವು ಟೆನ್ಶನ್ ಪಾರ್ಟಿ ಅಂತ ನಿಮಗೆ ವಿಧಿ ವಿಶೇಷ ರಿಯಾಯಿತಿ ಕೊಡುವುದಿಲ್ಲ ಎಂಬುದಕ್ಕೆ ಡೌಟೇ ಇಲ್ಲ!  ಏನಂತೀರಿ?

(ಕೊನೆ ತನಕ ಈ ಬಡಬಡಿಕೆ ಓದಿದವರಿದ್ದರೆ ಪ್ರತಿಕ್ರಿಯೆ ನೀಡಿ)

-ಕೃಷ್ಣಮೋಹನ ತಲೆಂಗಳ (08.09.2025)

No comments:

Popular Posts