ಅಚ್ಚುಕಟ್ಟು ಮನೆಗಳ ನೆರಳಿನಲ್ಲಿ ಮಾಸಿ ಹೋಗುವ ಹಳೆಯ ಗುಡಿಸಲ ನೆನಪು... I HOME
![]() |
AI IMAGE |
ಹೆಂಚಿನ ಮಾಡು, ಹುಲ್ಲು
ತುಂಬಿದ ಅಂಗಳ, ಅಂಗಳದ ತುದಿಯಲ್ಲೊಂದು ಪಾರಿಜಾತದ ಮರ, ಅಂಗಳದ ಮೂಲೆಯಲ್ಲಿ ಪಾಚಿಗಟ್ಟಿದ ನಳ್ಳಿ,
ಮಾಸಿದ ಗೋಡೆಯ ಪೇಂಟು, ಮುಖಮಂಟಪದ ಅಂಚಿನಲ್ಲಿ ಸವೆದಂತೆ ಕಾಣುವ ಜಗಲಿ, ಮತ್ತೆ ಹೊಗೆ ಹಿಡಿದು
ಕಪ್ಪಾದ ಕಿಟಕಿಯ ಸರಳುಗಳು ಮತ್ತು ಕೀರಲು ಧ್ವನಿಯಲ್ಲಿ ತೆರೆದುಕೊಳ್ಳುವ ಗೇಟು...
ಇಷ್ಟನ್ನು ಓದಿದಾಗ ಒಂದು
ಚಂದದ ಮಲಯಾಳಂ ಸಿನಿಮಾದಲ್ಲಿ ಕಾಣುವ ಹಳ್ಳಿ ಮನೆಯ ಚಿತ್ರಣ ಮನಸ್ಸಿನಲ್ಲಿ ಮೂಡಬಹುದು. ಆದರೆ,
ಹಿಂದೊಂದು ಕಾಲದಲ್ಲಿ ಎಲ್ಲರ ಮನೆಯೂ ಇದ್ದದ್ದೇ ಹೀಗೆ. ಮತ್ತೀಗ, ನಾವು ಆಧುನಿಕರಾಗಿದ್ದೇವೆ,
ಸೌಲಭ್ಯ ಜಾಸ್ತಿಯಾಗಿದ್ದೇವೆ, ಬದಲಾವಣೆಗಳೇ ಇಲ್ಲದ, ವ್ಯತ್ಯಾಸಗಳೇ ಇಲ್ಲದ ಒಂದೇ ಅಲಿಖಿತ
ವಿನ್ಯಾಸಕ್ಕೊಳಪಟ್ಟ ತಾರಸಿ ಮನೆ ಕಟ್ಟಿ, ಎಲ್ಲವನ್ನೂ ಅಚ್ಚುಕಟ್ಟಾಗಿ ರೂಪಿಸಿ, ರೂಢಿಸಿ
ಸ್ಟಾಂಡರ್ಡ್ ಆಫ್ ಲೈಫ್ ಹೆಚ್ಚಿಸಿಕೊಂಡಿದ್ದೇವೆ.
ಬದುಕಿನ ಆದಾಯ, ಸಾಧ್ಯತೆ
ಮತ್ತು ಸೌಕರ್ಯ ಸೀಮಿತವಾಗಿದ್ದಾಗ ನಿರೀಕ್ಷೆಗಳೂ ಸೀಮಿತವಾಗಿರುತ್ತವೆ. ಇರುವುದರಲ್ಲಿ ಖುಷಿ
ಕಂಡುಕೊಳ್ಳುವುದು ರೂಢಿಯಾಗಿರುತ್ತದೆ. ಇಕ್ಕಟ್ಟು ಎಂದು ಆ ಕಾಲಕ್ಕೆ ಅನ್ನಿಸಿದ ಮನೆಗಳಲ್ಲಿ
ಹತ್ತಾರು ಮಂದಿ ಖುಷಿಯಾಗಿ ಬಂದು, ಹೇಳದೇ ಕೇಳದೇ ಬರುವ ನೆಂಟರನ್ನೂ ಉಪಚರಿಸಿ, ಓದಿ, ಬೆಳೆದು
ದೊಡ್ಡವರಾದದ್ದು ಹೇಗೆ ಅಂತ ಈಗ ಆಶ್ಚರ್ಯ ಆಗಬಹುದು. ಆಗ ಹಾಗೆಲ್ಲಾ ಭಾಸವಾಗಲೇ ಇಲ್ವಲ್ಲ...
ದೊಡ್ಡ ದೊಡ್ಡ ಮಾನದಂಡ
ಮತ್ತು ಐಷಾರಾಮಿ ಸವಲತ್ತುಗಳಿಗೆ ಆಯ್ಕೆಗಳೇ ಇಲ್ಲದ ಕಾಲದಲ್ಲಿ ಮನೆಯೆಂದರೆ ಗೂಡಿನಂತಿತ್ತು.
ಸೆಗಣಿ ಸಾರಿಸಿದ ನೆಲ, ಇಂಟರ್ ಲಾಕ್ ಅಂತಂದ್ರೇನೂ ಅಂತವೇ ಗೊತ್ತಿಲ್ಲದ ಅಂಗಳ, ಮಾಮೂಲಿ ಜಗಲಿ
ಅಥವಾ ಚಾವಡಿಯ ಮೂಲೆಯಲ್ಲೊಂದು ಮಣ್ಣಿನಲ್ಲೇ ಮಾಡಿದ ಸೋಫಾ (ನಮ್ಮೂರ ಭಾಷೆಯಲ್ಲಿ ಮಣ್ ಚಿಟ್ಟೆ),
ವಸ್ತುಗಳನ್ನು ಇಡಲು ಗೋಡೆಯಲ್ಲಿ ಜೋಡಿಸಿದ ಹಲಗೆಗಳು ಮತ್ತು ಬಟ್ಟೆ ನೇತಾಡಿಸಲು ಹಗ್ಗ, ಕೂರಲು
ಚಾಪೆ, ಬರೆಯಲು ಚಾವಡಿಯ ವಿಶಾಲ ನೆಲ!
ನೆಲಕ್ಕೆ ಸಾರಣೆ ಇಲ್ಲ,
ಕರೆಂಟಿಲ್ಲ, ಫೋನಿಲ್ಲ, ಟಿವಿ ಇಲ್ಲ, ಕಾಲಿಂಗ್ ಬೆಲ್ ಇಲ್ಲ, ಸಿಸಿ ಕೆಮರಾ ನೋಡಿಯೇ ಗೊತ್ತಿಲ್ಲ.
ಸೆನ್ಸರ್, ಪಿಒಪಿ, ಗ್ರಾನೇಟ್, ಟೈಲ್ಸು, ಕಮೋಡು, ಫ್ಲಶ್ಶು, ಹೊಗೆ ಸಕ್ಕರು, ಮಿಕ್ಸಿ, ಫ್ರಿಜ್ಜು
ಎಂಥದ್ದೂ ಇಲ್ಲದ್ದೂ ಒಂದು ಯುಗ ಇತ್ತು. ಅಲ್ಲಿ ಸವೆದ ಬಾಗಿಲು, ಮಾಸಿದ ಗೋಡೆ, ಪೈಂಟು ಕಾಣದ ಹಳೆ
ಮರದ ಖುರ್ಚಿ, ಸೆಗಣಿ ಸಾರಿಸಿದ ನೆಲ ಮತ್ತು ಅಡಕೆ ಮರದ ಸೀಳುಗಳಿಂದ ಮಾಡಿದ ಅಟ್ಟ ಇಷ್ಟೇ ಸುಖಕರ
ನಿದ್ದೆಗೂ, ಬದುಕಿಗೂ ಆಸರೆಯಾಗಿತ್ತು.
ಕಾಲ ಬದಲಾಗ್ತಾ...
ಮನೆಯೆಂದರೇ ಹೀಗಿರಬೇಕು ಎಂಬ ಕಲ್ಪನೆ ಬಂತು. ಅದಕ್ಕೆ ಪೂರಕವಾದ ಪರಿಕರಗಳು ಊರಿನಲ್ಲೇ
ಸಿಗತೊಡಗಿದವು. ಜನರ ಆದಾಯ ಹೆಚ್ಚಾಯ್ತು. ಖರ್ಚು ಮಾಡಲು ತಾಕತ್ತು ಬಂತು. ಹಳೆ ಮನೆಗಳೆಂದರೆ ಅದು
ಮಾಡರ್ನ್ ಬದುಕಿನ ಸಂಕೇತವಲ್ಲ ಎಂಬ ಭಾವನೆ ಬಂತು. ಎಲ್ಲದಕ್ಕಿಂತ ಹೆಚ್ಚಾಗಿ ಹಳೆ ಮನೆಯನ್ನು
ರಿಪೇರಿ ಮಾಡುವುದು ಕಷ್ಟ, ಜನ ಸಿಗುವುದಿಲ್ಲ. ಅದರ ರಿಪೇರಿ ಬದಲು ಹೊಸ ಮನೆ ಕಟ್ಟೋಣ, ಆದರೆ ಹೊಸ
ಮನೆ ಹೊಸದಾಗಿರಬೇಕು, ಹಳತರಂತಲ್ಲ ಎಂಬ ಅಯಾಚಿತ ಬದಲಾವಣೆಯ ತುಡಿತ ಹಳೆಯ ಅನುಭೂತಿಯ ಮನೆಯಿಂದ
ನಮ್ಮನ್ನು ಆಚೆ ಎಳೆದುಕೊಂಡು ಬಂತು.
ಬಾಲ್ಯ ಕಳೆದ ಮನೆಯ ಮೂಲೆ
ಮೂಲೆಯಲ್ಲೂ ಆಧುನಿಕತೆ ಇರಲಿಲ್ಲ. ಆದರೆ ನೆನಪುಗಳ ಪರಿಮಳ ಬೆಸೆದಿತ್ತು. ಪುಟ್ಟ ಪುಟ್ಟ ಕೋಣೆ,
ದೊಡ್ಡ ಹಜಾರ, ಸೋರಿದರೂ ತೋಯಿಸುವಷ್ಟು ಮೋಸ ಮಾಡದ ಮಾಡು, ಜಾರಿದರೂ ಆಡುವಷ್ಟು ನೆಲ ಕೊಟ್ಟ ಅಂಗಳ,
ಕಪ್ಪಾಗಿದ್ದರೂ ರುಚಿ ರುಚಿ ಊಟಕ್ಕೆ ವೇದಿಕೆಯಾಗಿದ್ದ ಅಡುಗೆ ಮನೆ, ಒಮ್ಮೆ ತಿಕ್ಕಿದರೆ ಸಾಕು
ಶುಚಿಯಾಗುತ್ತಿದ್ದ ಕಲ್ಲಿನ ಬಚ್ಚಲು ಮನೆ... ಎಲ್ಲದಕ್ಕೂ ಅದರದ್ದೇ ಮಹತ್ವ ಇತ್ತು.
ಪಾತ್ರೆ
ತೊಳೆಯುತ್ತಿದ್ದದ್ದು ತೆಂಗಿನ ಮರದಡಿಯಲ್ಲಿ, ಬಟ್ಟೆ ಒಗೆಯುವುದು ಹಿತ್ತಿಲ ಮೂಲೆಯ ಮಾವಿನ ಮರದಡಿ,
ಕೈತೊಳೆಯುವುದು ಬಚ್ಚಲು ಮನೆಯಲ್ಲಿ ಯಾವ ಪೈಪೂ ಬ್ಲಾಕ್ ಆಗಲಿಕ್ಕಿಲ್ಲ, ಪ್ಲಂಬರ್ ಪದೇ ಪದೇ
ಬರ್ಲಿಕ್ಕಿಲ್ಲ, ಕ್ಲೀನ್ ಮಾಡುವುದು ಮಣಭಾರದ ಹೊಣೆಯಾಗಿರಲಿಲ್ಲ... ಆಗಿನ ದಿನಕ್ಕೆ, ಆಗಿನ
ಅನುಕೂಲಕ್ಕೆ, ಆಗಿನ ನಿರೀಕ್ಷೆಗಳಿಗೆ ಅವುಗಳೇ ಸಾಕಷ್ಟಾಗಿತ್ತು...
ಹೊಸದಾಗುವ, ಬದಲಾಗುವ
ಮತ್ತು ಬದಲಾಗಲೇಬೇಕಾದ ದಿನಗಳಲ್ಲಿ ನಾವು ಪರ್ಫೆಕ್ಷನಿಸ್ಟುಗಳಾಗಲು ಹಂಬಲಿಸುತ್ತೇವೆ. ಎಲ್ಲದರಲ್ಲೂ
ಅಚ್ಚುಕಟ್ಟು ಬೇಕು, ಕೊರತೆಯೇ ಇರಬಾರದು, ಅವರಿವರ ಮನೆಯಲ್ಲಿ ಇರುವುದಕ್ಕೆ ಸರಿಸಮಾನವಾಗಿ
ನಾವಿರಲೇಬೇಕು ಎಂಬ ನಿರೀಕ್ಷೆಯಲ್ಲಿ ಬಹುತೇಕ ಅಚ್ಚುಕಟ್ಟಾದ ವ್ಯವಸ್ಥೆಗಳನ್ನೇ
ರೂಢಿಸಿಕೊಳ್ಳುತ್ತೇವೆ. ಸೋರದ ಮಾಡು, ಲೀಕ್ ಆಗದ ನಳ್ಳಿ, ಜಾರದ ನೆಲ, ಮಣ್ಣೇ ಕಾಣಿಸಿದ ಅಂಗಳ,
ಹುಲ್ಲೇ ಇರದ ತೋಟ ಮತ್ತು ರೂಮಿನೊಳಗೇ ಇರುವ ಶೌಚಾಲಯ ಎಲ್ಲ ನಮ್ಮ ಬದುಕನ್ನು ಅಪ್ ಗ್ರೇಡ್
ಮಾಡಿದೆ...
ಆದರೂ... ಹಿಂದೊಂದು
ಕಾಲದಲ್ಲಿ ಅದನ್ನೂ ಕಂಡವರಿಗೆ ಪರ್ಫೆಕ್ಷನ್ ನಲ್ಲೂ ಎಂಥದ್ದೋ ಒಂದು ಕೊರತೆ, ಒಂದು ಮನಃಶಾಂತಿಯ
ಲೋಪ ಮತ್ತು ವಿಪರೀತ ಟೆನ್ಶನ್ನಿನ ಒತ್ತಡ ಕಾಣಿಸಿದರೆ ಅದು ಕಾಲದ ದೋಷವ ಅಥವಾ ಬದಲಾಗಲಾರದ ಮನಸುಗಳ
ದೌರ್ಬಲ್ಯವೋ.... ನೀವೇನು ಹೇಳ್ತೀರಿ?
-ಕೃಷ್ಣಮೋಹನ ತಲೆಂಗಳ (26.08.2025)
No comments:
Post a Comment