Monday, July 24, 2017

ತೋಚಿದ್ದು, ಗೀಚಿದ್ದು 3

ಪ್ರೀಪೇಯ್ಡ್ ಬದುಕು...


ತುಂಬಿಟ್ಟ ಆಹಾರ ಬಡಿಸಿ ಉಣ್ಣುವ ಬಫೆಯಲ್ಲ...
ಪಂಕ್ತಿಯಲ್ಲಿ ಕುಳಿತವನ ಪಾಲಿಗೆ
ಬಂದದ್ದೇ ಪಂಚಾಮೃತ...
ಉಪ್ಪು, ಹುಳಿ, ಖಾರ ಹೆಚ್ಚು ಕಮ್ಮಿಯಾದರೆ
ತುಸು ಅಡ್ಜಸ್ಟ್ ಮಾಡ್ಕೊಳ್ಳಿ
ಅಡುಗೆ ಮೊದಲೇ ಆಗಿದೆ
ರುಚಿ ಅಂದ್ಕೊಂಡು ಉಣ್ಣುವುದಷ್ಟೇ ಬಾಕಿ!

ಪ್ರತಿಯೊಬ್ಬರೂ ಪ್ರೀಪೇಯ್ಡ್ ಸಿಮ್ಮುಗಳು
ಪ್ಲಾನ್ ನಿಗದಿಯಾಗಿದೆ
ವ್ಯಾಲಿಡಿಟಿ ನಿಶ್ಚಯವಿಲ್ಲ,
ಟಾಪ್ ಅಪ್ ಹಾಕಿಸ್ತಾ ಇರಿ, ಇನ್ ಕಮಿಂಗ್ ನಿಗದಿತ...
ಔಟ್ ಗೋಯಿಂಗ್ ಗೆ ವ್ಯಾಲಿಡಿಟಿಯಿಲ್ಲ
ಆಫರ್ ಗಳು ಬದಲಾಗ್ತಾ ಇರ್ತವೆ
ಎಷ್ಟು ದಿನ ಅಂತ ಹೇಳೋ ಹಂಗಿಲ್ಲ!


ಮೊದಲೇ ಸ್ಕೆಚ್ ಮಾಡಿ, ಬ್ಲೂಪ್ರಿಂಟ್ ಹಾಕ್ಸಿ
ಭವಿಷ್ಯವನ್ನು ವರ್ತಮಾನದಲ್ಲೇ ಕಂಡು
ಸುಖ, ಸಂತಸಕ್ಕೆ ಲಾಕ್ ಹಾಕಿಟ್ಟು ತಣ್ಣಗಿರಬಹುದೇ?
ವರ್ತಮಾನಕ್ಕೆ ಆಂಟಿ ವೈರಸ್ ಕಂಡುಹುಡುಕಿಲ್ಲ
ಖುಷಿ, ಆರೋಗ್ಯ, ಆಯುಷ್ಯಕ್ಕೆ ಫಿಕ್ಸೆಡ್ ಡೆಪಾಸಿಟ್ಟಿಲ್ಲ
ದುಡ್ಡು ಕೊಟ್ಟು ಹಣೆಬರಹ ಖರೀದಿ ಆಗಲ್ಲ
ಅವರವರ ಬದುಕಿನ ಚಿತ್ರಕತೆಗೆ ಸ್ವಯಂ ಸಾಕ್ಷಿಗಳು

ಕಸಿದು ತಂದದ್ದು, ಅತಿಯಾಸೆಯಿಂದ ಪಡೆದದ್ದು
ಹುಸಿಯಾಡಿ ದಾರಿ ಬದಲಿಸಿದ್ದು, ಎಷ್ಟು ದಿನ ಬಂದೀತು?
ಸೆಟ್ ಬದಲಿಸಿದರೂ ಸಿಮ್ಮು ಅದೇ ತಾನೆ
ಪೋರ್ಟ್ ಮಾಡಿದರೂ ನಂಬರ್ ಬದಲಾಗುದಿಲ್ವಲ್ಲ?
ರೋಮಿಂಗು, ಟಾಕಿಂಗು, ಡೇಟಾ ಮುಗಿಯೋದೆಲ್ಲ
ಪ್ಲಾನ್ ಪ್ರಕಾರ ನಡೆಯೋದು
ಸಿಂ ಮೇಲೆ ಗೀಚೋ ಹಾಗುಂಟೇ...!


ಪುಸ್ತಕದ ಬದನೆಕಾಯಿ, ಕವಿ ಕಲ್ಪನೆ
ಜೀವನಮುಖಿ ಪ್ರವಚನ, ನಾಣ್ನುಡಿ, ಹಿತೋಕ್ತಿ
ಬದುಕಲು ಕಲಿಯುವ ಕೋರ್ಸುಗಳ ಬಳಿಕವೂ
ವಾಸ್ತವದ ಕನ್ನಡಿಯಲ್ಲಿ, ಕಂಡ ಕಟು ನಡೆಯಲ್ಲಿ
ಒಂದೊಂದು ಜೀವವೂ ಒಂದೊಂದು ಮೊಬೈಲು
ಸರ್ವಿಸ್ ಪ್ರೊವೈಡರು ಬೇರೆ ಬೇರೆ, ಪ್ಲಾನುಗಳು ಕೂಡಾ...
ನೆಟ್ವರ್ಕ್ ಹೆಚ್ಚು ಕಮ್ಮಿ, ಪ್ಲಾನ್ ಗಳೂ ಡಿಫರೆಂಟು


-KM.
 -------------------------

ಕಾಣೆಯಾಗಿದೆ...


ಕ್ಯಾನ್ವಾಸಿನ ಮೇಲೆ ಹರಡಿದ
ಬಣ್ಣಕ್ಕೆ ಅರ್ಥ ಸಿಗ್ತಾ ಇಲ್ಲ
ಚಿತ್ರಕ್ಕೆ ಸ್ಪಷ್ಟತೆಯಿಲ್ಲ, ಅಸಲಿಗೆ ಚಿತ್ರವೇ ಕಾಣ್ತಿಲ್ಲ
ಚದುರಿ ಹೋಗಿದೆ
ಬೊಗಸೆಗೆ, ಕುಂಚದ ಅರಿವಿಗೆ ಸಿಕ್ಕದಷ್ಟು ಚೆಲ್ಲಾಪಿಲ್ಲಿ


ಕಲ್ಪನೆ ಸೊರಗಿದೆ, ಭಾವ ಮೌನಕ್ಕೆ ಜಾರಿದೆ
ಚಿತ್ರಪಟ ಹರವೇ ತಿಳಿಯುತ್ತಿಲ್ಲ,
ಏರುತಗ್ಗಾಗಿದೆ ಚಿತ್ರಪಟ, ಬ್ರಶ್ಶು ಓಡ್ತಿಲ್ಲ
ಸೃಜನಶೀಲತೆಗೆ ಮಂಕುಬಡಿದಿದೆ
ವಕ್ರ ಗೆರೆಗಳು ಕಲೆಯಾಗುವಲ್ಲಿ ಬಡವಾಗುತ್ತಿದೆ...


ಕ್ಷಣಮಾತ್ರದಲ್ಲಿ ಗೀಚಿದ್ದೂ ಕಲಾಕೃತಿ
ಎನಿಸುತ್ತಿದ್ದ ದಿನಗಳು ಮಸುಕಾಗಿವೆ
ಚಿತ್ರಗಾರನ ಬೆರಳುಗಳು ಕೃಶವಾಗಿವೆ
ಉದಾಸೀನವಾಗಿವೆ, ಬೆಳಕು ಕಡಿಮೆಯಾಗಿದೆ
ಗೀಚಲೂ ತೋಚದಷ್ಟು ಮಂದ ಪ್ರಕಾಶ...


ಹಳೆ ಯಶಸ್ಸಿನ ಅಮಲಿನ ಟಾನಿಕ್ಕೇ
ಕುಡಿದು ಬದುಕುವ ಜೀವಕ್ಕೆ ಹೊಸತುಗಳು
ಬಾರದೆ, ಇಂದುಗಳು ಭಾರವಾಗಿ
ನಾಳೆಗಳು ದೂರವಾಗಿ...ಓರೆಕೋರೆಗಳ
ಅಮೂರ್ತ ಭಾವವೇ ಬಣ್ಣಗಳಾಗಿ ಕದಡಿದೆ

ಕ್ಷೀಣವಾಗಿದೆ ಇಂದು, ಕಾಣದಾಗಿದೆ ನಾಳೆ,
ಅಣಕಿಸುತ್ತಿದೆ ಖಾಲಿಹಾಳೆ...
ಗೀಚಿದಷ್ಟೂ ಗೀಚಲಾಗದೆ,
ಬೋಳುಬೋಳಾಗಿ ಉಳಿಸಲಾಗದೆ
ತೊಳಲಾಡಿದೆ ಭಾವ, ಕಳೆದು ಹೋಗಿದೆ ಜೀವ...

 --------------

ಒಗಟುಗಳೇ ಕಗ್ಗಂಟು!

---------


ಕನಸುಗಳು ಮೂಡುವುದೋ, ಕಾಡುವುದೋ
ಚಿಗುರುವುದೋ, ಅರಳುವುದೋ
ಮತ್ತೊಮ್ಮೆ... ಕಮರುವುದೋ, ಬಾಡುವುದೋ
ಮನಸಲ್ಲೇ ನರಳುವುದೋ?

ನಿರಾಸೆಯ ಜನಕ ನಿರೀಕ್ಷೆ
ಹುಟ್ಟುವುದೋ, ತಿಳಿಯದೇ ಕಟ್ಟುವುದೋ
ಬಳಿಯಲ್ಲೇ ಇದ್ದು ಕನಸಿಗೆ ನೀರೆರದು
ಪರೀಕ್ಷಿಸಿ ಮತ್ತೆ ಹೇಳದೆ ಕೇಳದೆ ತೆರಳುವುದೋ...?


ಭ್ರಮೆ ಆವರಿಸುವುದೋ, ನೇವರಿಸುವುದೋ
ಸಾವರಿಸುವ ಮುನ್ನ ಕಾತರಿಸಿ ನಿರೀಕ್ಷೆಗಳ
ಶೇಖರಿಸಿ, ಕಸನಸ್ಸೂ ಕಟ್ಟಿಸಿ, ಮಂಜಿನ
ತೆರೆ ಸರಿಸಿ ವಿಶ್ವರೂಪ ದರ್ಶನ ತೋರುವುದೋ...?

ಖುಷಿ ದೊರಕುವುದೋ, ಅಲ್ಲಿ ಇಲ್ಲಿ ಹುಡುಕುವುದೋ
ತನ್ನೊಳಗೇ ಅರಸುವುದೋ, ಸಿಕ್ಕಿತೆಂಬ
ನಿರೀಕ್ಷೆಯನ್ನೇ ಅಪ್ಪಿಕೊಂಡು ಸಂತಸದ
ಭ್ರಮೆಯಲ್ಲೇ ಕಟ್ಟುವ ಕನಸಿಗೇ ಕಾವು ಕೊಡುವುದೋ?


ಅಸಹಾಯಕತೆ ಹುಡುಕಿ ಬರುವುದೋ,
ಮನಸ ಮಥಿಸಿದಾಗ ಜನಿಸುವುದೋ
ಕನಸು, ಭ್ರಮೆ, ನಿರಾಸೆ, ಖುಷಿಗಳ ಒಗಟು
ಬಿಡಿಸಾಗದೆ, ದೊರಕುವ ಉತ್ತರವೋ..?
-KM


ಅಪ್ರಕಟಿತ ಕತೆಗಳು
....


ಪ್ರತಿ‌ ಮನಸ್ಸೂ
ಓದದ ಪುಸ್ತಕ....
ಪರದೆ ಹಾಕಿದ ಮಸ್ತಕದೊಳಗಿನ
ನಿಗೂಢ ಬರಹಗಳ ಗೂಢಲಿಪಿಗೆ
ಅವರವರೇ ಭಾಷಾಂತರಕಾರರು!


ರಕ್ಷಾಪುಟದ ಚೆಂದದ ಚಿತ್ರಕ್ಕೂ
ಒಳಗಡೆ ಓದದೇ ಬಾಕಿಯಾದ ಕತೆಗಳಿಗೂ
ಸಂಬಂಧವೇ ಇಲ್ಲ...
ಯಾಕೋ ಮುನ್ನುಡಿಗೂ ಶೀರ್ಷಿಕೆಗೂ
ಮ್ಯಾಚೇ ಆಗ್ತಿಲ್ಲ
ಅಸಲಿಗೆ ಪುಟ ತರೆಯೋದೇ ಕಷ್ಟ,
ತೆರೆದರೂ ಎಲ್ಲ ಅಸ್ಪಷ್ಟ!


ಒಂದೊಂದು ಮನಸ್ಸಿನ ಹಿಂದೆಯೂ
ಒಂದೊಂದು ಕತೆ, ನಿಟ್ಟುಸಿರು...
ಧಾರಾವಾಹಿಗೂ ಮಿಗಿಲಾದ
ತಿರುವುಗಳು, ಪೆನ್ನಿನ ಶಾಯಿಗೂ
ಕಂಪ್ಯೂಟರಿನ ಇಂಟರ್ನಲ್ ಮೆಮೊರಿಗೂ ದಕ್ಕದ್ದು
ಬಹಿರಂಗ ಬರೆಯಲಾಗದ್ದು...

ಪುಟ ತೆರೆದರೆ ತಾನೇ ಕತೆ ಕಾಣೋದು? 

ಗಟ್ಟಿಯಾಗಿ ಕಂತೆ ಕಟ್ಟಿ ಮನಸಿನ
ಮೂಲೆಯಲ್ಲಿ ಬಚ್ಚಿಟ್ಟ ಪುಸ್ತಕಗಳ
ಧೂಳು ಹೊಡೆದು ಮಾತಾಡಿಸಿದರೆ
ಹೊರಬರುವ ಕತೆಗಳೆಲ್ಲ ಅನಿರೀಕ್ಷಿತ, ಕಲ್ಪನೆಗೇ ಮೀರಿದ್ದು

ಎಲ್ಲರೂ ಬರೆಯಲಾರರು... 

ಹೇಳಲಾಗದೆ, ಜೀರ್ಣಿಸಲಾಗದೆ
ತಿರುವುಗಳ ದಾಟಲಾಗದೆ, ಸೋತದ್ದು,
ಮೋಸ ಹೋಗಿದ್ದು
ಎಲ್ಲ ನಿರೀಕ್ಷೆ ಕಳೆದೊಮ್ಮೆ
ಅಕ್ಷರಶಃ ಸತ್ತು ಬದುಕಿದ ಕತೆ...
ಅಚ್ಚಾಗಿಲ್ಲ, ಯಾರಿಗೂ ಸಿಕ್ಕಿಲ್ಲ!


ನಗುವ ಡಿಪಿ, ಸಾಂತ್ವನದ ಸ್ಟೇಟಸ್ಸು,
ಎಫ್ ಬಿ ವಾಲಿನಲ್ಲಿ ಜೀವನೋತ್ಸಾಹದ
ಸಾಲುಗಳ ಹಿಂದಿನ ಒಂದೊಂದು ನೊಂದ
ಮನಸಿನ, ಕಣ್ಣೀರ ಕಲೆಗಳ ಕತೆ
ಜಾಲಾಡುವ ತಾಣಕ್ಕೆ ಅಪ್ಲೋಡ್
ಆಗ್ತಿಲ್ಲ, ಗೂಗಲ್ಲಿಗೂ ಸಿಗ್ತಿಲ್ಲ!


ಏನು ಮಾಡ್ತೀರ? ಅಪ್ರಕಟಿತ ಕತೆಗಳನ್ನೋದಿ?
ತಿರುವು ಬದಲಿಸ್ತೀರ?
ಸುಖಾಂತ್ಯ ಮಾಡ್ತೀರ?
ನಿಗದಿಯಾಗಿ ಮುಗಿದ ಕತೆಗಳು
ಪ್ರಕಟವಾದರೂ ಲೈಕು,ಕಮೆಂಟು ಗಿಟ್ಟೋದಿಲ್ಲ!


ಸಾಂತ್ವನಕ್ಕೂ, ಸಲಹೆಗಳಿಗೂ
ಮೀರಿದ, ಭಾಷೆಗೆ ಇಳಿಯದ
ಭಾವದ ಸುಪ್ತ ಲೋಕದೊಳಗಿನ ಅಜ್ನಾತ ಕತೆ ಅಪ್ರಕಟಿತವಾಗೇ ಇರಲಿ
ಮತ್ತೆ ಕೆದಕಿ, ವರ್ತಮಾನದ
ಕಾವ್ಯ ಸೊಬಗು ಅಳಿಯದಿರಲಿ!

-KM

...........................

ಬಾಡಲಿ ಬಿಡಿ ತನ್ನಷ್ಟಕ್ಕೇ...
--


ಮುಂಜಾನೆ
ಸುರಿದು ಕೆಸರಿಗೇ ಬಿದ್ದರೂ
ಮಸುಕಾಗದ ಅಚ್ಚ ಬಿಳಿಯ ಎಸಳು
ಕೈಯೆಲ್ಲಾ ಕೆಂಪಾಗಿಸುವ ದಟ್ಟ ತೊಟ್ಟು...
ನಾವು ಮುಟ್ಟಿ ಮಾಲೆ ಮಾಡಿದ
ಮೇಲಲ್ಲವೇ ಬಾಡಿ ಬೆಂಡಾಗಿ
ಬಳಲಿ, ಕೊನೆಗೊಮ್ಮ ಮುದ್ದೆಯಾಗುವುದು.
ಇರಲಿ ಬಿಡಲಿ ಅದರಷ್ಟಕ್ಕೇ
ನಗುನಗುತ್ತಾ ಗಿಡದಲ್ಲಿ
ನಳನಳಿಸಿ ಬುಡದಲ್ಲಿ
ಬಾಡಲಿ ಬಿಡಿ ತನ್ನಷ್ಟಕ್ಕೇ....

-KM

...................

ಹೆಜ್ಜೆ ಗುರುತು...
 
...

ಓರೆಕೋರೆ
ಅಂಕುಡೊಂಕು
ಏರು ತಗ್ಗು
ಹತ್ತಿದ್ದೆಷ್ಟೋ
ಇಳಿದದ್ದೆಷ್ಟೋ
ಸವೆದದ್ದೆಷ್ಟೋ
ಹಂಪುಗಳು
ಗುಂಡಿಗಳು
ಗಂಡಾಂತರಗಳು
ಅರ್ಧದಲ್ಲೇ ಬಿಟ್ಟು ನಡೆದವರು
ಪಕ್ಕದ ಕ್ರಾಸಿನಲ್ಲಿ
ಬಂದು ಸೇರಿದವರು...
ಜೊತೆಗೆ ನಡೆದವರು
ಹೊತ್ತಿನ ಪರಿವಿಯಿಲ್ಲದೆ
ಹತ್ತಿರವಾದವರು
ಇಷ್ಟವಾಗದೆ ಥಟ್ಟನೆ ದಾರಿ ಬದಲಿಸಿದವರು...
ಸುಸ್ತಾಗಿ ಕುಳಿತವರು
ಕೆಸರು ಎರಚಿದವರು
ಪಂಕ್ಚರ್ ಆಗಿ ಪೆಚ್ಚಾದವರು,
ಹಿಂದಿಕ್ಕಿದವರು
ನೋಡನೋಡುತ್ತಾ ಮೈಲುದ್ದ ದಾಟಿ ಕಣ್ಮರೆಯಾದವರು...

ಹಿಂದೆ ಹೊರಟ ಜಾಗ ಕಾಣ್ತಿಲ್ಲ
ಮುಂದೆ ಅಂತ್ಯ ಅಸ್ಪಷ್ಟ
ನ್ಯೂಟ್ರಲ್ ಮುಗ್ದ ಮೇಲೆ
ಗೇರು ಬದಲಾಗ್ತದೆ ಅಂತ ಕಲಿಸಿದ
ಗುರು!
ಹಿಂತಿರುಗಿ ನೋಡಿದಾಗ
ಕಂಡ ಮಾರ್ಗ(ದ)ದರ್ಶನ.

-KM.

Friday, July 21, 2017

ಸ್ವಗತ

ಸ್ವಗತ!
....

ತನಗೂ ಖುಷಿಯಿಲ್ಲ
ಪರರ ನೆಮ್ಮದಿಗೂ
ಕಲ್ಲು ಹಾಕಬಲ್ಲ....
ಹುಡುಕಿ, ಕೆದಕಿ
ತಪ್ಪುಗಳ ಪಟ್ಟಿ ಮಾಡಿ
ಜರೆ ಜರೆದು
ಒರೆದು ಶ್ರೇಷ್ಠನೆನಿಸುವ ಚಪಲ

ಮಾತನಾಡಿಸಿ
ಸಾಂತ್ವನವಿತ್ತು, ಅಕ್ಕರೆ ತೋರಿ
ಬಳಿಕ ಮುದ ನೀಡಿ
ಹರಟಿ ಬಳಲಿದ ಮೇಲೆ
ಮುನಿಸು...
ಆಡಿದ್ದು, ಕೇಳಿದ್ದು, ಕಂಡಿದ್ದಕ್ಕೆಲ್ಲ
ಮುನಿಸು ಅಸಹನೆ!

ಕರೆಕರೆದು ಕಿತ್ತಾಡಿ
ಜನ್ಮಜಾಲಾಡಿ, ರಂಪದ ಬಳಿಕ
ಗಾಢ ಮೌನದ ಪರ್ವ...
ಕಾರಣವೇ ಕೊಡದೆ
ಪ್ರಕ್ಷುಬ್ಧ ಕಡಲಿನ ಹಾಗೆ ಅಬ್ಬರಿಸಿ, ಮೂದಲಿಸಿ,
ಪೆಚ್ಚಾಗಿಸಿ ಖುಷಿಯ ಕಗ್ಗೊಲೆ!

ಹೀಗೆ ಬಂದು ಮಾಯವಾದ ಮಳೆಯ ಹಾಗೆ
ಈ 'ಮೂಡಿಗರು'
ಇರಬಹುದು ಇಲ್ಲೂ, ಅಲ್ಲೂ, ಎಲ್ಲೆಲ್ಲೂ...ಕಾಡಿಸಿ, ಪೀಡಿಸಿ
ವ್ಯಕ್ತಿತ್ವಗಳ ಜನ್ಮಜಾಲಾಡಿ
ಮತ್ತೆ ನಾಪತ್ತೆ!

ಕಾರಣವಿಲ್ಲದೆ ಹುಟ್ಟಿದ
ಅಕ್ಕರೆಯ ಕಡಿದು
ಸತ್ತ ಸಂಬಂಧಕ್ಕೆ
ಮೌನದ ಹೊದಿಕೆ ಹೊದಿಸಿ
ನಿಷ್ಠುರವಾಗಿ ತೆರಳುವ
ನಿಗೂಢ ಭೈರಾಗಿಗಳು,ಅರ್ಥಾತ್
ಗುಂಪಿಗೆ ಸೇರದ ಪದಗಳು!

-KM

Saturday, July 15, 2017

ಅಂತರಂಗದ ಅರ್ಥಶಾಸ್ತ್ರ!

ಅಪಾರ್ಥ ಮಾಡಿಕೊಳ್ಳುವ ಮೊದಲು ಅರ್ಥ ಮಾಡಿಕೊಳ್ಳುವುದು ಅತ್ಯುತ್ತಮ ಅರ್ಥೈಸಿಕೊಳ್ಳುವಿಕೆಯಂತೆ. ಹೌದಲ್ವೇ... ಅರ್ಥವಾಗದಿದ್ದರೆ ತಲೆ ಬಿಸಿ ಬೇಡ. ಅರ್ಥವಾಗದ್ದು ಜಗತ್ತಿನಲ್ಲಿ ಸಾಕಷ್ಟಿವೆ. ನಮಗೇ ಕೆಲವೊಮ್ಮೆ ನಾವು ಅರ್ಥವಾಗದ ಹಾಗೆ, ವಿವೇಚನೆಗೆ ಮೊದಲು ನಾಲಿಗೆ ಮಾತನಾಡಿದ ಹಾಗೆ. ಮಾತಿಗೆ ಮೊದಲು ಬೆರಳು ಮೆಸೇಜ್ ಟೈಪಿಸಿದ ಹಾಗೆ. ಅಲ್ವ

ನಿರೀಕ್ಷೆ, ಕಲ್ಪನೆ, ಗ್ರಹಿಕೆ ಮತ್ತು ಅರ್ಥವಾಗುವಿಕೆಗೆ ಪರಸ್ಪರ ಸಂಬಂಧವಿಲ್ವ. ಯಾರೋ ಹೀಗೆಯೇ ಅಂತ ನಮ್ಮದೇ ಒಂದು ಲೆಕ್ಕಾಚಾರ, ಅವರು ಹೀಗಿರಬಹುದ ಎಂಬ ಕಲ್ಪನೆ, ಅವರು ಬಹುಷಹ ಹೀಗೆಯೇ ಎಂಬ ಗ್ರಹಿಕೆ (ಸರಿಯೋ, ತಪ್ಪೋ) ಗಳೆಲ್ಲ ಸೇರಿ ಅರ್ಥವಾಗುವುದನ್ನು ನಿರ್ಧರಿಸುವುದಲ್ವ.
ವ್ಯಕ್ತಿಗಳು, ಪರಿಸ್ಥಿತಿಗಳು, ಸಂಬಂಧಗಳು ಟಿ.ವಿ.ಯ ಧಾರಾವಾಹಿ ಥರ ಅಥವಾ ಸಿನಿಮಾ ಪರದೆ ಥರ ಅಲ್ಲ. ಕತೆ, ಉಪಕತೆಗಳೊಂದಿಗೆ ವಿವರಣೆ ನೀಡಲು. ಬದುಕು ಅನಿರೀಕ್ಷೀತ, ಊಹೆಗಿಂತಲೂ ವೇಗವಾಗಿ ಬದಲಾಗಬಹುದಾದ್ದು ಹಾಗೂ ಅದು ಸಂಭವಗಳ ಸರಣಿ. ಅಲ್ಲಿ ವ್ಯಕ್ತಿಗಳು, ಪರಿಸ್ಥಿತಿಗಳು, ಖುಷಿ, ದುಖ, ಸವಾಲುಗಳೆಲ್ಲ ಅವರವ ಮೂಗಿನ ನೇರಕ್ಕೆ, ಗ್ರಹಿಕೆಯ ಮಟ್ಟಕ್ಕೆ ಅರ್ಥವಾಗುವಂಥದ್ದು. ಶೇ. ಇಂತಿಷ್ಟು ಅರ್ಥವಾಗಿದೆ, ಅರ್ಥ ಮಾಡಿಕೊಂಡಿದ್ದೇನೆ ಅಂತಲೂ ಧೈರ್ಯದಿಂದ ಕೆಲವೊಮ್ಮೆ ಹೇಳುವ ಹಾಗಿಲ್ಲ. 


ಡಿಕ್ಷ್ನರಿ ಹಿಡಿದು ಪದಗಳಿಗೆ ಅರ್ಥ ಹುಡುಕುವುದಕ್ಕೂ ಮನಸುಗಳನ್ನು ಹಿಂಬಾಲಿಸಿ ಅರ್ಥ ಮಾಡುವುದಕ್ಕೂ ಅಥವಾ ಆಗುವುದಕ್ಕೂ ವ್ಯತ್ಯಾಸವಿದೆ. ಎಷ್ಟೋ ಮಂದಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಅನ್ನುವ ಭ್ರಮೆ ನಮ್ಮೊಳಗಿರುತ್ತದೆ. ಆದರೆ, ಏನೋ ಅನುಭವದ ಬಳಿಕ, ಅಥವಾ ಇನ್ನೇನೋ ಸಂಭವಿಸಿದ ಮೇಲೆ ಗೊತ್ತಾಗುವುದು ಅವನನ್ನು ಅರ್ಥ ಮಾಡಿಕೊಂಡದ್ದಕ್ಕಿಂತ ಹೆಚ್ಚಿನದ್ದು ಇನ್ನೂ ಅರ್ಥ ಮಾಡುವುದಕ್ಕಿದೆ ಅಂತ. ಅಲ್ಲಿಯ ವರೆಗೆ ಅರ್ಥವಾಗಿದೆ, ಅರ್ಥವಾದವರು ಎಂಬ ಭ್ರಮೆ ನಮ್ಮನ್ನು ಆವರಿಸಿರುತ್ತದೆ. ಅದು ಸ್ವತಹ ನಮಗೆ ತಿಳಿಯುತ್ತದೆ. ಅಂದರೆ, ಅದರ ಅರ್ಥವೇನು....


ನಮ್ಮ ಗ್ರಹಿಕೆಯ ಶಕ್ತಿಯೇ ನಮಗೆ ಅರ್ಥವಾಗಿಲ್ಲ ಎಂದಲ್ಲವೇ... ಅರ್ಥವಾಗಿದ್ದು, ಅಥವಾ ಅರ್ಥ ಮಾಡಿಕೊಂಡದ್ದು ಎಂಬ ನಂಬಿಕೆಯಷ್ಟೇ ನಮಗೆ ಅರ್ಥವಾಗಿದ್ದು ಬಿಟ್ಟರೆ, ಅರ್ಥ ಮಾಡಿಕೊಂಡಿರುವುದು ಬೇರೆಯೇ ಆಗಿರುತ್ತದೆ. ಅಂತಹ ತಪ್ಪು ಅರ್ಥೈಸುವಿಕೆ ಅಥವಾ ಭಾಗಶಹ ಅರ್ಥೈಸಿಕೊಳ್ಳುವಿಕೆಗಳಿಂದಲೇ ನಾವು ವ್ಯಕ್ತಿಗಳ ಜೊತೆಗಿನ ಒಡನಾಟದಲ್ಲಿ ನಿರಾಸೆ ಅನುಭವಿಸುವುದು, ಅವಮಾನಿತರಾಗುವುದು, ನಿರ್ಲಕ್ಷಿಸಲ್ಪಡುವುದು, ಏಕಾಂಗಿ ಅನಿಸುವುದು ಅಥವಾ ಪ್ರತ್ಯೇಕವಾಗಿರುವಂಥಾಗುವುದು. ಹಾಗಂತ ಅನಿಸೋದಿಲ್ವ ನಿಮಗೆ.

ನಾವು ಬೆಳೆದು ಬಂದ ವಾತಾವರಣ, ಸಮುದಾಯ, ಪರಿಸರ, ಪಡೆದ ಶಿಕ್ಷಣ, ಮನೆಯ ಪರಿಸ್ಥಿತಿ, ನೆರೆಹೊರೆ ಎಲ್ಲದರ ಆಧಾರದಲ್ಲಿ ನಮ್ಮ ಗ್ರಹಿಕೆಯ ಶಕ್ತಿ, ಅರ್ಥೈಸುವಿಕೆಯ ಶಕ್ತಿಯೂ ರೂಪುಗೊಂಡಿರುತ್ತದೆ ಅನ್ಸಲ್ವ. ಅವರವರ ಹಿನ್ನೆಲೆ, ಅವರವರ ಜೀವನ ಶೈಲಿಯೂ ಅರ್ಥ ಮಾಡಿಕೊಳ್ಳುವ ಭಾಗದ ಮೇಲೆ ಪರಿಣಾಮ ಬೀರುತ್ತದೆ. 


ಕೆಲವೊಮ್ಮೆ ನಮ್ಮ ಮೂಗಿನ ನೇರಕ್ಕೆ ಆಗುವ ಆಲೋಚನೆಗಳು, ಸದ್ಯ ನಾವಿರುವ ಪರಿಸ್ಥಿತಿ, ನಮ್ಮ ಮೂಡ್ ಎಲ್ಲವೂ ಇನ್ನೊಬ್ಬರ ಜೊತೆಗಿನ ಒಡನಾಟ, ಸಂವಹನ, ಆ ಕ್ಷಣದ ಅರ್ಥ, ಅಪಾರ್ಥಗಳನ್ನು ನಿರ್ಧಿರಿಸುತ್ತವೆ. ಇದೇ ಕಾರಣಕ್ಕೆ ತಕ್ಷಣಕ್ಕೆ ಸಿಡುಕೋದು, ಹಂಗ್ಸೋದು, ನೋಯೋದು, ಅಪಮಾನಿತರಾಗುವುದು ಎಲ್ಲ ಆಗುವುದು... ಅಲ್ವ.


ಕೊಡೆ ಹಿಡಿದವನಿಗೆ ಸೂರ್ಯ ಕಿರಣ ಅಪ್ಯಾಯಮಾನವಾದರೆ, ಬರಿಗಾಲಲ್ಲಿ ನಡೆದವನಿಗೆ ಕಾಲು ಸುಡುವ ಬೆಂಕಿ ಅನ್ನಿಸಬಹುದೇ. ಇಬ್ಬರಿಗೂ ಸೂರ್ಯನೊಬ್ಬನೇ ಆದರೂ ಇಬ್ಬರ ಹಿನ್ನೆಲೆಯಲ್ಲಿ ಸೂರ್ಯನ ಪ್ರಾಮುಖ್ಯತೆ ನಿರ್ಧಾರವಾಗುತ್ತದೆ. ಅವರವ ಗ್ರಹಿಕೆಯೇ ಬೇರೇ ಬೇರೆ ಇರುತ್ತದೆ. ಒಬ್ಬನಿಗೆ ಮಳೆ ಖುಷಿಯಾದರೆ, ಕೊಡೆ ತಾರದವನು ಮಳೆಗೆ ಶಾಪ ಹಾಕುತ್ತಿರುತ್ತಾನೆ.
ಅರ್ಥೈಸಿಕೊಳ್ಳುವುದೂ ಹಾಗೆ. ನಾವು ಯಾರನ್ನಾದರೂ ಸಂಶಯದ ದೃಷ್ಟಿಯಿಂದ ನೋಡುತ್ತಾ ಹೋದರೆ ಎಲ್ಲವೂ ಅನುಮಾನಾಸ್ಪದವಾಗಿ ಕಾಣಬಹುದು. ಅದೇ ಅತಿಯಾಗಿ, ಅಂಧರಾಗಿ ನಂಬುತ್ತಾ ಹೋದರೆ ಅದು ಮಿತಿಮೀರಿದ ಮುಗ್ಧತೆಯಾಗಿ ವ್ಯತಿರಿಕ್ತಿ ಪರಿಣಾಮವನ್ನೂ ಬೀರಬಹುದು. 


ನಾವು ಖುಷಿಯಾಗಿದ್ದಾಗ ಜಗತ್ತೂ ಸುಂದರವಾದಂತೆ, ನಮ್ಮ ಮೂಡ್ ಕೆಟ್ಟು ಹೋದಾಗ ಜಗತ್ತೇ ನಮ್ಮ ಮೇಲೆ ಹರಿಹಾಯ್ದಂತೆ, ದೂರ ಮಾಡಿದಂತೆ ಭಾಸವಾಗುವುದು ಆ ಕಾಲಘಟ್ಟಕ್ಕೆ ಮಾತ್ರ. ತಿರುಗುವ ಭೂಮಿಯ ಹಾಗೆ ಚಿಂತಿಸುವ ಮನಸ್ಸಿನಲ್ಲೂ ತೆರೆಗಳು, ಯುದ್ಧಗಳು, ಓಟಗಳು, ಮುಳುಗುವುದು ಎಲ್ಲ ನಡೆಯುತ್ತಿರುತ್ತದೆ. ಹೊರೆಗ ಶಾಂತಚಿತ್ತವಾಗಿ ಕಾಣಿಸುವುದರ ಒಳಗೂ ಜ್ವಾಲಾಮುಖ ಸಿಡಿಯುತ್ತಿರುವುದರ ದರ್ಶನವಾಗಬೇಕಾದರೆ ಮೂಡನ್ನು ಹಾಗ್ಹಾಗೇ ಹರಿಯಬಿಡಬೇಕು. ಆಗ ವ್ಯಕ್ತಿಯ ವಿಶ್ವರೂಪದರ್ಶನವಾಗುವುದು.


ಇನ್ನೊಬ್ಬರು (ಸ್ನೇಹಿತರು, ಸಂಬಂಧಿಗಳು, ಸಹೋದ್ಯೋಗಿಗಳು) ನನ್ನ ಯೋಚನೆಯೇ ನೇರಕ್ಕೇ ಇರಬೇಕು ಎಂದು ನಿರೀಕ್ಷಿಸುವುದು ಯಾವ ಕಾರಣಕ್ಕೂ ಸೂಕ್ತವಲ್ಲ. ಏನಂತೀರಿ. ಅವರವ ಬದುಕಿನ ಪರಿಸ್ಥಿತಿ, ಅವಕಾಶ, ದೃಢತೆಯ ಆಧಾರದಲ್ಲಿ ಅವರ ವ್ಯಕ್ತಿತ್ವ, ಚಿಂತನೆ, ನಡವಳಿಕೆ ರೂಪುಗೊಂಡಿರುತ್ತದೆ. ಅವರು ನಮ್ಮ ಸ್ನೇಹಿತರಾದರು ಎಂಬ ಕಾರಣಕ್ಕೆ ನಮ್ಮ ಮೂಗಿನ ನೇರಕ್ಕೆ ಅವರೂ ಯೋಚಿಸಬೇಕು, ಸ್ಪಂದಿಸಬೇಕು ಎಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ. ಅಲ್ವ.


ಯಾವ ಥರ ನಮಗೂ ವೈಯಕ್ತಿಕ ಸಮಸ್ಯೆಗಳು, ಕಷ್ಟಗಳು, ಇಬ್ಬಂದಿಗಳು ಇರುತ್ತದೋ, ಪ್ರಪಂಚದ ಪ್ರತಿಯೊಬ್ಬನಿಗೂ ಅದಿರುತ್ತದೆ. ಅದರ ಸಮಯಗಳಲ್ಲಿ, ತೀವ್ರತೆಯಲ್ಲಿ ವ್ಯತ್ಯಾಸವಿರಬಹುದು. ಆದರೆ ನಾವು ಕ್ಷೋಭೆಯಲ್ಲಿದ್ದಾಗ, ಹತಾಶೆಯಲ್ಲಿದ್ದಾಗ, ದುಖದಲ್ಲಿದ್ದಾಗಲೆಲ್ಲಾ ಮನಸು ವಿವೇಚನೆಯನ್ನು ಕಳೆದುಕೊಂಡು ಬಿಟ್ಟಿರುತ್ತದೆ. ಅರ್ಥಕ್ಕಿಂತ ಅಪಾರಥಗಳೇ ಜಾಸ್ತಿಯಾಗುತ್ತವೆ. ಆಗ ಮಾತನಾಡಹೊರಟರೆ ಅದರಲ್ಲಿ ಅಪಾರ್ಥಗಳು ಜಾಸ್ತಿ ತುಂಬಿರುತ್ತವೆ. ಹಾಗನ್ಸಲ್ವ.
ಅಪಾರ್ಥ ಮಾಡಿಕೊಳ್ಳುವ ಮೊದಲು ಒಂದು ಕ್ಷಣ ಅವರ ಜಾಗದಲ್ಲಿ ನಿಂತು ಯೋಚಿಸಿದರೆ, ವೈಚಾರಿಕವಾಗಿ, ತಾರ್ಕಿಕವಾಗಿ ಚಿಂತಿಸಿದರೆ ಅಪಾರ್ಥವಾಗಿದ್ದು ಎಂತಹ ದುರ್ಬಲ ಘಳಿಗೆಯಲ್ಲಿ ಎಂಬುದು ನಮಗೇ ಅರಿವಾಗುತ್ತದೆ.
ದುಡುಕುವ ಮೊದಲು, ಅಪಾರ್ಥವಾಗುವ ಮೊದಲು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. 


ಅರ್ಥವಾಗದ್ದನ್ನು ಅರ್ಥವಾಗಿದೆಯೆಂದುಕೊಂಡು, ಅರ್ಥವಾಗಿದ್ದನ್ನೂ ಅರ್ಥೈಸಿಕೊಳ್ಳದೆ, ಅರ್ಥಕ್ಕಾಗಿ ಹುಡುಕಾಡಿ, ನಮಗೆ ನಾವೇ ಅಪಾರ್ಥವಾಗದೆ, ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೊದಲು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುವುದೇ ಲೇಸು.


Friday, July 14, 2017

ತೋಚಿದ್ದು...ಗೀಚಿದ್ದು 2ಮಾತಿಗೆ ಮೀರಿದ್ದು...
......

ಹೇಳಿದ್ದು, ಹೇಳದ್ದು
ಹೇಳೋದಕ್ಕಾಗದ್ದು
ಹೇಳಿಯೂ ಅರ್ಥಾವಾಗದಂಥದ್ದು...
ಕೇಳಿಯೂ ಕೇಳದಂತಿದ್ದು
ಕೇಳಿದ ಮೇಲೆ ಮರೆತದ್ದು
ಕೇಳಿಸಿಕೊಳ್ಳುವ ಸಹನೆ ಕಳೆದದ್ದು

ಹೇಳಿದ ಮೇಲೂ ಉಳಿದದ್ದು
ಕಾಣಿಸಿದ್ದು, ಅನುಭವಿಸಿದ್ದು
ಅಳಿಸಿ ಹೋಗದೆ ಕಾಡಿದ್ದು
ನಾಳೆಗೆ, ನಾಡಿದ್ದಿಗೆ ಸಾಗ ಹಾಕಿ
ಗೋಳಿಗೆ, ಖುಷಿಗೆ ಭಾಷೆ ಬರೆದು
ವೇಳೆಯನ್ನೇ ಕ್ಷಯಿಸಿದ್ದು...

ಹೇಳಿಕೆಗೆ ಬದ್ಧವಾಗಿ
ಕೇಳಿದ್ದಕ್ಕೆ ಶುದ್ಧವಾಗಿ
ಗಾಳಿಗೆ ತೂರಿಬಿಡದೆ
ಕಳಿಸದೆ ಮಾತುಗಳ
ಉಳಿಸದೆ ಭಾವಗಳ
ಕಷ್ಟಕ್ಕೆ, ಇಷ್ಟಕ್ಕೆ
ಅಷ್ಟಿಷ್ಟು ಒರೆದದ್ದಷ್ಟೇ ದಕ್ಕಿದ್ದು.

ಭಾವಕ್ಕೆ ಭಾಷೆಯ ಹಂಗು
ನೋವಿಗೆ ಕಣ್ಣೀರು
ನಗುವಿಗೆ ಮಂದಹಾಸ
ಸಿಟ್ಟಿಗೆ ಕೆಂಪುಮೂತಿ
ಇವಕ್ಕೆಲ್ಲ ಮೀರಿದ ಯೋಚನೆಗೆ
ಪದಗಳಿಗೆ ಸಿಲುಕಿಸಲಾಗದ ವೇದನೆಗೆ
ಪ್ರಸವದ ದಿನ ಬರಲಾರದೋ ಏನೋ

ಆಲಿಸಿದ ಕಿವಿಗಳಿಗೆ
ಲಾಲಿಸಿದ ಮನಗಳಿಗೆ
ಪಾಲಿಸಿ, ಚಿಂತಿಸಿ, ಸಲಹಿದವರಿಗೂ
ಕೆಲವೊಮ್ಮೆ ಹೇಳಲಾಗದೆ
ಕೇಳಲಾಗದೆ, ಊಹಿಸಲಾಗದೆ
ಕಾಡುವ ಮಾತುಗಳಿಗೆ ರೂಪವೇ ಇಲ್ಲ!


-KM
---------------ಮೌನಕ್ಕೂ ಟಿಪ್ಪಣಿ!
.......

ಮೌನಕ್ಕೂ ವಿಮರ್ಶೆ ಬೇಕಾ?
ಮೌನವೆಂದರೆ ಸಾಲದೆ
ಮೌನಿಯನ್ನು ಮೌನಿಯಾಗಿಸಿದ
ಮಹಾ ಮೌನ ಕಾರಣದ
ಮೌಲ್ಯವದೇನೋ ಹಿರಿದೆಂದು
ಅರ್ಥವಾಗದೇ?

ಭಾಷೆ ಸೊರಗಿದಾಗ
ಮಾತು ಬಳಲಿದಾಗ
ಭಾವ ಕಳವಳಿಸಿದಾಗ
ಸೋತು, ಬೆವೆತು, ಸದ್ದು
ಕರ್ಕಶವೆನಿಸಿದಾಗ ತಾನಾಗಿ
ಮಾತಾಗುವುದು ಮೌನ

ಮಾತಿನೊಡನೆ ಸೋತು
ಕುಸಿದ ಭಾವವ ಹಸಿಹಸಿಯಾಗಿ
ಹೇಳಲಾಗದೆ ಚಡಪಡಿಸಿ
ಪದಪುಂಜಗಳ ಜೋಡಿಸಲಾಗದೆ
ವಿವರಣೆಗೆ ಸತ್ವ ಕಳೆದಾಗ
ಮೂಡಿದ್ದು ಮೌನ

ಮೌನಕ್ಕೂ ನೂರು ಪ್ರಶ್ನೆ
ವಿಶ್ಲೇಷಣೆ, ಟಿಪ್ಪಣಿಗಳ ಹಂಗೇಕೆ?
ಮಾತಿಗೂ ಆಚೆಗಿನ ಶಾಂತ
ಮಹಾಸಾಗರದ ಏಕಾಂತ ತೆಪ್ಪದಲಿ
ಸದ್ದಿನಾಚೆಗಿನ ಪ್ರಶ್ನೆಗೂ ಮೀರಿದ
ಆ ಕ್ಷಣದ ಪ್ರಶಾಂತತೆಯ ಸೌಧ

ಮೌನವೆಂದರೇ ಅಲ್ಪವಿರಾಮ
ಉಪಪ್ರಶ್ನೆಗಳಿಗೂ ಮೀರಿದ್ದು
ಶೃತಿ, ಲಯ, ತಾಳವ ಹುಡುಕುವ
ಪ್ರಯತ್ನ ವ್ಯರ್ಥ
ಕಂಡುಕೊಳ್ಳಬಾರದೇ
ಮಾತು ಸೋತಿದೆ ಎಂದು

ಆರ್ಭಟ, ಮೂದಲಿಕೆ
ಚುಚ್ಚುಮಾತುಗಳಿಲ್ಲ
ಬೆಚ್ಚನೆಯ ಸಲಹೆಗಳಿಲ್ಲ
ಪೆಚ್ಚುಪೆಚ್ಚಾದ ಭಾವವಿಲ್ಲ, ಜಗಳವಿಲ್ಲ
ಮತ್ತೊಂದು ಪ್ರಶ್ನೆಗೆ ಆಸ್ಪದವೇ ಇಲ್ಲ
ಲಾಕರಿನೊಳಗಿಟ್ಟ ದುರಸ್ತಿಗೊಳಗಾದ ಭಾವ!


-KM


-------------

ಖಾಲಿ ಹಾಳೆಯ ಸ್ವಗತ!
....

ಖಾಲಿಹಾಳೆಯ
ಮೇಲೆ ಶಾಯಿ ಚೆಲ್ಲಿದ ಕಲೆ
ನೀರು ಬಿದ್ದರೆ ಕದಡೀತು,
ಹಾಳೆ ಬಲು ಸೂಕ್ಷ್ಮ
ರಟ್ಟಿನಂತೆ ಒರಟಲ್ಲ
ಜೋರಾಗಿ ಎಳೆದರೆ
ಚಿಂದಿ ಖಚಿತ

ಖಾಲಿಹಾಳೆಲಿ ಅಕ್ಷರ
ಮೂಡುತ್ತಿಲ್ಲ
ಬರೆದರೂ ಸ್ಪಷ್ಟವಿಲ್ಲ
ಬರೆದದ್ದೆಲ್ಲ ಮಾಸುವುದೇನು?
ಲೇಖನಿಯ ಶಾಯಿ
ತೆಳುವಾದ ಭಾಸ
ಮೂಡಿದ ಪದಗಳೇ ಮೋಸ

ಬರಹ ಮುಗಿಯುತ್ತಿಲ್ಲ
ಅಸಲಿಗೆ ಶುರುವೇ
ಆಗುವುದಿಲ್ಲ
ಮನನ ಮಾಡಿದ್ದು
ಮರೆತ ಹಾಗೆ
ಶೀರ್ಷಿಕೆ ಸಿಕ್ಕದೆ, ಕವನವೇ
ಆಗುತ್ತಿಲ್ಲ, ಅರೆಬರೆ ಬರಹ

ಕೈಗೆ ಸಿಕ್ಕಿದ ಕವನ
ಹಾಳೆಗೆ ಜಾರುವುದಿಲ್ಲ
ಪೆನ್ನಿಗೆ ಅಕ್ಷರಗಳೆ
ಒಲಿಯುವುದಿಲ್ಲ
ಬರೆದದ್ದೂ ಉಳಿಯುವುದಿಲ್ಲ
ಉಳಿದದ್ದು ಮನನವಾಗ್ತಿಲ್ಲ
ಸೋರಿ ಹೋಗ್ತಿದೆ ಕವಿತೆ

ಕಾಗದ ಹರಿಯುವ ಮೊದಲು
ಖಾಲಿ ಉಳಿಸುವ ಬದಲು
ಯಾರೋ ಕಸಿದು,
ತಿವಿದು, ಕಿಸಿಯುವ
ಅದೃಷ್ಟದ ರೇಖೆಯ
ಗೀಚುವ ಮೊನೆ ಕಾಣದೆ
ಖಾಲಿಯೇ ಉಳಿದಿದೆ ಹಾಳೆ!


-KM
 -----------------

ಅರ್ಥಶಾಸ್ತ್ರ!
------

ಕಂಡದ್ದು, ಕೇಳಿದ್ದು
ನೋಡಿದ್ದು, ಓದಿದ್ದು
ದಿಟವೋ, ಅನರ್ಥವೋ
ಭ್ರಮಯೋ ಕನವರಿಕೆಯೋ
ಅರ್ಥವಾಗಿದೆ ಅಂದುಕೊಂಡದ್ದು

ಕಂಡಿದ್ದಕ್ಕಿಂತ ಕಾಣದ್ದು
ಆಡಿದ್ದಕ್ಕಿಂತ ಆಡದ್ದು
ಹೇಳದ್ದು, ತೋರದ್ದು
ಊಹೆಗೆ ನಿಲುಕದ್ದು...ಅದನ್ನೇ
ಅರ್ಥವಾಗಿದೆ ಅಂದುಕೊಂಡದ್ದು

ಹತ್ತಿರವೆನಿಸಿದ್ದು
ಮನಸಿಗೆ ಎಟಕಿದ್ದು
ಮೋರೆಗೆ, ಮೂಡಿಗೆ
ಮಾತಿಗೆ, ಮೌನಕ್ಕೆ ಮಾರ್ಕು ಕೊಟ್ಟು
ಅರ್ಥವಾಗಿದೆ ಅಂದುಕೊಂಡದ್ದು

ಅಪಾರ್ಥ ಮಾಡುವ ಮೊದಲು
ಅರ್ಥ ಮಾಡಿಕೊಳ್ಳುವುದು
ಉತ್ತಮ ಅರ್ಥೈಸುವಿಕೆ
ಎಂಬ ಪ್ರಾಜ್ಞನ ಸಾಲಿನ ವೇದಾಂತವನ್ನೇ
ಅರ್ಥವಾಗಿದೆ ಅಂದುಕೊಂಡದ್ದು

ಅಸ್ಪಷ್ಟ, ಅಗೋಚರ
ದಾರಿ ತಪ್ಪಿಸುವ ದೃಷ್ಟಿ
ಸ್ಪಷ್ಟವಾಗಿದೆ ಎಂಬ ಕನವರಿಕೆ
ಮೂಗಿನ ನೇರದ ಚಿಂತನೆಗಷ್ಟೇ
ಅರ್ಥವಾಗಿದೆ ಅಂದುಕೊಂಡದ್ದು.-KM -----------

ಸೀಮಿತ ವ್ಯಾಲಿಡಿಟಿ....!


ಇಂದಿನ ಖುಷಿಗೆ
ಇಂದೇ ವ್ಯಾಲಿಡಿಟಿ
ಟಾಪ್ ಅಪ್ ಮಾಡ್ಕೊಂಡ್ರೂ ಅಷ್ಟೇ
ರಿಚಾರ್ಜ್ ಪ್ಲಾನುಗಳಿಲ್ಲ
ತಾರಿಫ್ ಪ್ಲಾನುಗಳೆಲ್ಲ ದುಬಾರಿ

ಆಹ್ಲಾದಕತೆಯ ಗಡುವು
ಈ ಹೊತ್ತು, ಈ ಕ್ಷಣ
ಇಂದಿನ ಸೂರ್ಯಾಸ್ತದ ವರೆಗೆ
ನಾಳೆಗೆ ಬ್ಯಾಲೆನ್ಸ್ ಖಾಲಿ
ಹೊಸ ಪ್ಲಾನಿನ ಅನ್ವೇಷಣೆ

ಲವಲವಿಕೆಗೆ ತೂತು ಕೊರೆಯಲು
ಹತ್ತಾರು ಆಫರ್ ಗಳು
ಜಗ್ಗಿ ನಿಲ್ಲಿಸಿ ತೋರಿಸುವ
ಲೈಫ್ ಟೈಂ ಬ್ಯಾಲೆನ್ಸು
ಎಕ್ಸ ಪಯರಿ ಡೇಟು ಕಾಣ್ತಾನೆ ಇಲ್ಲ

ಆಫರ್ ಬಂದಾಗ ಹಾಕಿಸ್ಕೊಳ್ಳಿ
ಬಳಸಿ, ಹಿತಾನುಭವವಾಗ್ಲಿ
ಹೊತ್ತು ಜಾಸ್ತಿಯಿರೋದಿಲ್ಲ
ರಿಚಾರ್ಜು ಮೆಸೇಜು ಬರಬಹುದು
ಕೊನೆಗೆ ಬ್ಯಾಟರಿಯೇ ಖಾಲಿ ಆದ್ರೆ!


---------

ಕಣ್ಣಿಗೆಟಕಿದ ರೈಲು, ಕಾಲಿಗೆ...

ಅಗೋ ಬಂದಿದೆ ರೈಲು
ಕಿಟಕಿ ಪಕ್ಕದ ಖಾಲಿ ಸೀಟು
ಜನಜಂಗುಳಿಯಿಲ್ಲ, ರೂಟೂ ಚೆಂದ
ಅಷ್ಟೊಂದು ವೇಗವಿಲ್ಲ, ಸೀದಾ ಸಾದಾ
ಬೇಕಾದಲ್ಲಿ ಸ್ಟಾಪು, ಗಡಿಬಿಡಿಯೇನಿಲ್ಲ
ರಿಸರ್ವೇಶನ್ನೂ ಬೇಕಿಲ್ಲ.

ಅದೇ ಟೈಮಿಗೆ ಹೊರಟರೆ
ಬೇಕಾದ ಹೊತ್ತಿಗೇ ತಲಪೋದು ಗ್ಯಾರಂಟಿ
ಆರಾಮಾಗಿ ಸೀನರಿ ನೋಡ್ಕೊಂಡು
ಮಾತಾಡ್ಕೊಂಡು, ತಿಂದ್ಕಂಡು
ಅಷ್ಟಿಷ್ಟೋ ನಿದ್ರೆ ಮಾಡ್ಕೊಂಡು
ಸುಖ ಪಯಣಕ್ಕೆ ಹೇಳಿ ಮಾಡ್ಸಿದ ರೈಲದು

ತುಂಬ ಹೊತ್ತು ನಿಲ್ಲುತ್ತಂತೆ
ಪ್ಲಾಟ್ ಫಾರಂ ಪಕ್ಕದಲ್ಲೇ ಇದೆಯಂತೆ
ಹಳಿ ದಾಟೋದು ಬೇಕಿಲ್ವಂತೆ
ನೋಡೋಕು ಎಷ್ಟು ವೈನಾಗಿದೆ ಗಾಡಿ
ಇಷ್ಟದ ನೀಲಿ ಬಣ್ಣ, ಗಾಜಿನ ಕಿಟಕಿ
ಅದ್ರಲ್ಲಿ ಕೂತ್ರೇ ನಾನಿನ್ನು ಸಮಕಾಲೀನ

ಗಂಟೆ ಹೊಡ್ದ್ರು, ಸಿಗ್ನಲ್ಲು ಬಂದಾಯ್ತು
ಶಿಳ್ಳೆ ಹೊಡೀತು, ರೈಲು ಹೊರಡ್ತು
ಅಯ್ಯೋ...ಯಾರದು, ನನ್ನ ಕಾಲು ಕಟ್ಟಿದ್ದು
ನಡಿಯೋಕಾಗ್ತಿಲ್ವಲ್ಲ,
ಜೇಬಲ್ಲೂ ಕಾಸಿಲ್ಲ, ಮುಂದೆ ಹೋಗ್ತಾನೇ ಇಲ್ಲ
ನೋಡ್ತಾನೆ ಇದ್ದೆ, ರೈಲು ಹೊರಟೋಯ್ತು

ಕಂಡದ್ದು ಕನಸ, ಅಲ್ವಲ್ಲ
ನಿಲ್ದಾಣದ ಪಕ್ಕದಲ್ಲೇ ಇದ್ದೇನೆ
ಮತ್ತೊಂದು ರೈಲು ಬಂದೀತು,
ಕಾಲು ಮುಂದೆ ಹೋದೀತು,
ಮತ್ತೆ ಕಟ್ಟಿದ್ರೆ, ಹೆಜ್ಜೆ ಜಾರಿದ್ರೆ
ನಡಿಗೆ ಇದ್ದೇ ಇದೆ, ಅಸ್ಪಷ್ಟದ ಕಡೆಗೆ....

Sunday, July 2, 2017

ತಡರಾತ್ರಿ ಚಾವಣಿಯಿಂದ ತೊಟ್ಟಿಕ್ಕಿದ ಹನಿಯ ಆಧ್ಯಾತ್ಮ

ಬಿಟ್ಟೂ ಬಿಡದೇ ಕಾಡುವ ಮಳೆಯಲ್ಲೊಂದು ಮೌನ ಧ್ಯಾ
-------
ಮಳೆಗಾಲದ
ಚೆಂಡೆಮದ್ದಳೆ ಸದ್ದು
ಶುರುವಾಗಿದೆ.
ಪ್ರಕೃತಿಯ ಈ
ಬಯಲಾಟದಲ್ಲಿ
ಎಷ್ಟೊಂದು ಪಾತ್ರ
ಗಳು, ಚಿತ್ರಗಳು!
ಒಮ್ಮೆ ಧ್ಯಾನಸ್ಥರಾ
ಗೋಣ, ಪ್ರಕೃತಿಯ
ರಂಗಮಂಚಕ್ಕೆ ಕಣ್ಣು

ನೆಟ್ಟು ಕೂರೋಣ .
------------

ಪ್ರಕೃತಿಯೆದುರು ಅತಿ ಹೆಚ್ಚು ಸದ್ದು ಮಾಡುವ ಜೀವಿ ಬಹುಷಃ ಮನುಷ್ಯ. ತಾವೇ ಸೃಷ್ಟಿಸಿದ ಸದ್ದು, ಕಲರವಕ್ಕೆ ಬೇಸತ್ತು ಮನಃಶಾಂತಿಗೋಸ್ಕರ ಮತ್ತೆ ಪ್ರಕೃತಿ ಮಡಿಲನ್ನು ಪ್ರೀತಿಸುವವರೆಷ್ಟು ಮಂದಿ ಇಲ್ಲ ಹೇಳಿ. ಮಾನವ ನಿರ್ಮಿತ ಸದ್ದಿನಷ್ಟು ಕರ್ಕಶವಲ್ಲದ, ಪ್ರಕೃತಿ ಸಹಜ ಸದ್ದುಗಳಲ್ಲೊಂದು ಸಾಂತ್ವನವಿದೆ, ಶೃತಿಯಿದೆ, ಲಾಲಿ ಜೋಗುಳ ಹಾಡಿ ಮಲಗಿಸುವಂತಹ ಮಮತೆ ಇದೆ. ಸಮುದ್ರದ ಅಲೆಯೊಂದು ದಡಕ್ಕೆ ಅಪ್ಪಳಿಸಿದಾಗ ಕೊಡುವ ಖುಷಿಯ ಹಾಗೆ.

ವರ್ಷದ ನಾಲ್ಕು ತಿಂಗಳ ಕಾಲ ಬಿಟ್ಟೂ ಬಿಡದೆ ಕಾಡುವ ಮಳೆಯಲ್ಲೊಂದು ಅಂತಹ ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯಬಲ್ಲ ಝೇಂಕಾರ ಕೇಳಿಸುವುದಿಲ್ಲವೇ? ಭೋರ್ಗರೆಯುವ ಗಾಳಿ ಮಳೆಯಲ್ಲೊಂದು ತೀವ್ರ ಸೆಳೆತ ಇರುತ್ತದೆ, ಗಾಳಿಯೇ ಮುಸಲಧಾರೆಯನ್ನು ಅಕ್ಕಪಕ್ಕ ಜೋಗುಳ ತೂಗಿದಂತೆ ಕಾಣಿಸುವ ದೃಶ್ಯಕಾವ್ಯ, ತೊನೆದಾಡುವ ಉದ್ದುದ್ದದ ಮರಗಳ ತಿಕ್ಕಾಟ, ಗುಡುಗಿನ ಆರ್ಭಟ, ಸಂಗೀತ ಕುರ್ಚಿಯ ಆಟದಂತೆ ಯಾವಾಗ ಗುಡುಗುತ್ತದೋ ಎಂಬ ಸೂಚನೆಯೇ ಸಿಗದಂತೆ ಎದೆ ನಡುಗಿಸುವ ಅಬ್ಬರದ ತಾಳವದು. ಆ ಮಳೆಯಲ್ಲಿ ಏನು ಹೇಳಿದರೂ ಕೇಳಿಸದು, ಬೊಬ್ಬಿರಿದರೂ ಅದು ಕರಗಿ ಹೋಗುತ್ತದೆ. ಅಸಲಿಗೆ ನಮ್ಮ ಧ್ವನಿಯೇ ನಮಗೆ ಕೇಳಿಸದಷ್ಟು ತೀವ್ರಥರ ಮೊರೆತ.

ಒಂದೆಡೆ ಗಾಳಿ, ಮತ್ತೊಂದೆಡೆ ಚಳಿಯ ಅನುಭೂತಿ, ಮನೆಯೊಳಗೂ ತೂರಿ ಬರುವ ಹನಿಗಳ ಸಿಂಚನ, ಒಂದಷ್ಟು ದೂರ ಮಂಜಿನಂಥೆ ಕಾಣುವ ಮುಸ್ಸಂಜೆ ಶೈಲಿಯ ಬೆಳಕು ಮತ್ತೆ ಅದರಿಂದಾಚೆಗೆ ಶೂನ್ಯ, ಏನೂ ಕಾಣಲ್ಲೊಲ್ಲದು. ಅಂಥದ್ದೊಂದು ಏಕಾಂತ ಕಟ್ಟಿಕೊಡಲು ಮಳೆಗೆ ಮಾತ್ರ ಸಾಧ್ಯ! ನಡು ಪೇಟೆಯಲ್ಲೂ ಇಂತಹ ಮಳೆ ಬಂದರೆ ಅಲ್ಲೊಂದು ಏಕಾಂತದ ವಲಯ ಸೃಷ್ಟಿಯಾಗುತ್ತದೆ. ದೊಡ್ಡ ದೊಡ್ಡ ಸದ್ದುಗಳನ್ನೂ ಮೆಟ್ಟಿ ನಿಂತು ಕೆಲ ಕಾಲ ಐಂದ್ರಜಾಲಿಕವಾಗಿ ಸುತ್ತುವರಿಯುವ ಗಾಢ ಮಳೆ.

ಅದೇ ಮಳೆ ನಿಂತು ಹೋದ ಮೇಲೆ ತಡರಾತ್ರಿ ಮಾಡಿನಿಂದ ತೊಟ್ಟಿಕ್ಕುವ ಹನಿ, ತೆಂಗಿನಮರದಿಂದ ಅಂಗಳದ ತರಗೆಲೆ ಮೇಲೆ ಬೊಟ್ಟು ಬೊಟ್ಟಾಗಿ ಬೀಳುವ ಹನಿಯ ಟಪ್ ಟಪ್ ಸದ್ದು ಕೂಡಾ ಸರಿದು ಹೋದ ಮಳೆಯ ನೆನಪು ಕಟ್ಟಿಕೊಡುತ್ತದೆ. ಆ ತೊಟ್ಟಿಕ್ಕುವ ಕ್ರಿಯೆಯಲ್ಲೂ ಒಂದು ತಾಳವಿಲ್ಲವೇ? ಮಳೆ ಮುಗಿದರೂ ಬಿಡದೆ ಸುಳಿಯುವ ತಂಗಾಳಿ, ಹಾಯೆನಿಸುವ ಮಸುಕು ಬೆಳಕು ಕೂಡಾ ಮಳೆಯ ಪುಳಕವನ್ನು ಉಳಿಸುವುದು ಮಾತ್ರವಲ್ಲ, ಮತ್ತೊಂದು ಮಳೆಯ ಬರುವ ನಡುವಿನ ಸಂಪರ್ಕ ಸೇತುವೂ ಆಗಬಹುದು.

ಹಳ್ಳಿ ಮನೆಗಳ ಚಾವಡಿಯಲ್ಲಿ ಕುಳಿತು ನೋಡಿ... ದೊಡ್ಡದೊಂದು ಮಳೆ ತೋಟದಾಚೆಯಂದ ಬರುವ ಮೊದಲು ಸುಮಾರು ಒಂದು ಕಿ.ಮೀ. ದೂರದಿಂದಲೇ ತೋಟದ ಅಡಕೆ ಮರಗಳ ಮೇಲೆ ಸಾಮೂಹಿಕ ಹನಿ ಮಳೆಯಾಗಿ ಬೀಳುವ ವಿಶಿಷ್ಟ ಸದ್ದೊಂದಿದೆ. ಆ ಸದ್ದು ಕೇಳಿಯೇ... ಇಂತಿಷ್ಟು ನಿಮಿಷದೊಳಗೆ ಅಂಗಳಕ್ಕೆ ಮಳೆ ತಲಪುತ್ತದೆ ಎಂಬ ಸೂಚನೆ ಸಿಗುತ್ತದೆ. ಹೀಗೆ ಬಂದು ಹಾಗೋ ಹೋಗುವ ಮಳೆ ಮುಂದಿನ ತೋಟದಿಂದಾಚೆ ಸರಿಯುತ್ತಾ ಹೋಗಿ ಕೊನೆ ಕೊನೆಗೆ ಕ್ಷೀಣವಾಗುವ ಸದ್ದು ಕೂಡಾ ಹಿಂಬಾಲಿಸುತ್ತಾ ಹೋಗಲು ಚೆಂದವಲ್ಲವೇ?

ಮಳೆಗಾಲದ ರಾತ್ರಿಯಲ್ಲೂ ವಟಗುಟ್ಟುವ ಕಪ್ಪೆಗಳು, ಜೀರುಂಡೆ ಸದ್ದು ಕೂಡಾ ಎಂತಹ ಕುರುಡನಿಗೂ ರಾತ್ರಿಯ ಕತೆಯನ್ನು ಸಾರಿ ಹೇಳುತ್ತದೆ. ಗಾಳಿಗೂ, ಸುರಿಯುವ ಮಳೆಗೂ, ಆಲಂಗಿಸುವ ಚಳಿಗೂ ನಡುವಿನ ಸದ್ದು, ನಿಶ್ಯಬ್ದದ ಅನುಭೂತಿಯನ್ನು ಪಾವತಿಸಿ ಅನುಭವಿಸಲು, ಅದನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಅದು ಮಳೆಯೆಂಬೋ ಮಳೆಗೆ ಮಾತ್ರ ಕೊಡಲು ಸಾಧ್ಯ!

-ಕೃಷ್ಣಮೋಹನ ತಲೆಂಗಳ.

Saturday, July 1, 2017

ಪ್ರೊಫೈಲ್ ಮೋಡ್ ಮತ್ತು ಮೂಡ್!

ಮುಂಜಾನೆ ಮೂಡಿದಾಗಿನಿಂದ ಹಿಡಿದು, ಸಂಜೆ ಮುಳುಗೋ ತನಕ ಕಣ್ಣೆದುರಿಗಿರೋದು ಅದೇ ಸೂರ್ಯ. ಆದರೆ ಬೆಳಗ್ಗೆ ಮತ್ತು ಸಂಜೆ ಕಂಡಾಗ ಅವನನ್ನು ಕಂಡಾಗ ಆಗುವ ಖಷಿ ನಡು ನೆತ್ತಿ ಮೇಲಿದ್ದು ತಲೆ ಸುಡುವಾಗ ಆಗುವುದಿಲ್ಲ ಅಲ್ವ. ಅಥವಾ ಬೆಳಗ್ಗೆ 10, 11 ಗಂಟೆಗೆ ಕಣ್ಣು ಕುಕ್ಕುವಾಗ, ಮಳೆಗಾಲದಲ್ಲಿ ಏಕಾಏಕಿ ಮಾಯವಾಗಿ ಮಬ್ಬು ಕವಿದಾಗಲೂ ಒಮ್ಮೊಮ್ಮೆ ಸೂರ್ಯನ ಮೇಲೆ ಅಸಮಾಧಾನ ಆಗುತ್ತದಲ್ವ. ಪಾಪ ಇದಕ್ಕೆ ಸೂರ್ಯನೇನು ಮಾಡಿಯಾನು. ಅವನ ಕೆಪಾಟಿಸಿ, ಹೊಳಪು ಅಷ್ಟೇ ಇರುತ್ತದೆ. ತಿರುಗುತ್ತಿರುವುದು ಭೂಮಿ, ಅಡ್ಡ ಬರುವುದು ಮೋಡಗಳು. ಹಾಗಾಗಿ ಆಯಾ ಸಮಯಕ್ಕೆ, ಆಯಾ ಪರಿಸ್ಥಿತಿಗೊಂದು ರೀತಿ ಸೂರ್ಯ ನಮಗೆ ಕಾಣಿಸ್ತಾನೆ. ಅಂದರೆ, ಯಾವ ಹೊತ್ತಿಗೆ ಹೇಗೆ ನೋಡುತ್ತೇವೆಯೋ ಹಾಗೆ ಆತ ಕಾಣಿಸ್ತಾನೆ. ನಿಜ ಅಲ್ವ. ಕೆಲವೊಮ್ಮೆ ನಮ್ಮ ಮೂಡ್ ಕೂಡಾ ಹೀಗೆಯೇ ಅಲ್ವ ಮೊಬೈಲ್ ನ ಪ್ರೊಫೈಲ್ ಮೋಡ್ ಥರಹ....


ಪ್ರತಿ ವ್ಯಕ್ತಿತ್ವಕ್ಕೊಂದು ಸಾಮಾನ್ಯ ಸ್ವಭಾವ ಇರುತ್ತದಲ್ವ. ನಾವವರನ್ನು ಅರ್ಥ ಮಾಡಿಕೊಂಡ ಹಾಗೆ ಅವರು ಪಾಪ, ಜೋರು, ಸಿಡುಕ, ಜಿಪುಣ, ರಸಿಕ, ಸೋ ಕಾಲ್ಡ್ ಒಳ್ಳೆಯೋನು ಅಂಥೆಲ್ಲ ನಾವೇ ಬ್ರಾಂಡ್ ಮಾಡಿರುತ್ತೇವೆ. ಎಷ್ಟೋ ಬಾರಿ ಅವರು ಹಾಗೆ ಹೇಳಿಕೊಂಡಿರುವುದಿಲ್ಲ. ನಮ್ಮ ಗ್ರಹಿಕೆಗೆ, ನಮಗೆ ನಿಲುಕಿದ್ದರ ಆಧಾರದಲ್ಲಿ ನಾವೇ ಒಂದು ಪ್ರೊಫೈಲ್ ಚಿತ್ರ ಕಲ್ಪಿಸಿಕೊಂಡು ಆ ಸ್ಥಾನದಲ್ಲಿರಿಸಿ ವ್ಯವಹರಿಸುತ್ತೇವೆ. ಈ ಸ್ವಭಾವ ಆಯಾ ಪರಿಸ್ಥಿತಿ, ಸಂದರ್ಭ, ಕಾಲಮಾನ,ವಯೋಮಾನಕ್ಕನುಗುಣವಾಗಿ ತಾತ್ಕಾಲಿಕವಾಗಿಯೋ, ಸಾಂದರ್ಭಿಕವಾಗಿಯೋ ಬದಲಾಗಬಹುದು. ಅದೇ ವ್ಯಕ್ತಿ ಇನ್ನೊಮ್ಮೆ ನಿಷ್ಠುರನಾಗಿ, ನಿರ್ದಯಿಯಾಗಿ, ಸಿಡುಕನಾಗಿ, ಅಳುಮುಂಜಿಯಾಗಿ, ಹೇಡಿಯಾಗಿ, ಸಮಯಸಾಧಕನಾಗಿಯೂ ಕಾಣಿಸಬಹುದೇನೋ. ಮೊಬೈಲನ್ನಾದರೇ ಮೊಬೈಲಿನ ಮಾಲೀಕನ ಆಯ್ಕೆಗನುಗುಣವಾಗಿ ಬೇರೆ ಬೇರೆ ಪ್ರೊಫೈಲ್ ಮೋಡ್ ನಲ್ಲಿಟ್ಟು ಅದರ ಸ್ವಭಾವ ಬದಲಿಸಬಹುದು. ಆದರೆ ವ್ಯಕ್ತಿಯದ್ದಾದರೆ ಅದು ತನ್ನಿಂತಾನೆ ಬದಲಾಗಬಹುದಾದ ಮೂಡುಗಳು ಅಲ್ವ... ಎಷ್ಟೋ ಬಾರಿ ಈ ಬದಲಾವಣೆ ಬೇಕೆಂದು ಆಗುವುದಲ್ಲ, ಪರಿಸ್ಥಿತಿ ವ್ಯಕ್ತಿ ಮೇಲೆ ಸವಾರಿ ಮಾಡಿದಾಗ, ಇಕ್ಕಟ್ಟು, ಅಸಹಾಯಕತೆ ಕಾಡಿದಾಗ, ಅತಿಯಾದ ಖುಷಿಯಾದಾಗ, ದೊಡ್ಡದೊಂದು ಬದಲಾವಣೆ ಸಂಭವಿಸಿದಾಗ ಆ ಕ್ಷಣಕ್ಕೆ, ಆ ದಿನಕ್ಕೆ, ಆ ಕಾಲಮಾನಕ್ಕೆ ವ್ಯಕ್ತಿತ್ವದ ಪ್ರೊಫೈಲ್ ಕೂಡಾ ಒಂದು ಘಳಿಗೆ ಬದಲಾಗೋದಿಲ್ವೇ... ಆದು ಕಾಲ ಸಹಜವಲ್ವೇ.... 


ಬಹುಷ ಇಂತಹ ಸಾಂದರ್ಭಿಕ ಸಂದರ್ಭಗಳಲ್ಲೇ ಅದೇ ವ್ಯಕ್ತಿ ನಮಗೆ ಸಿಡುಕನಾಗಿ, ಕಿವುಡನಾಗಿ, ಮೂಗನಾಗಿ, ನಮ್ಮನ್ನುಕಡೆಗಣಿಸುವವನಾಗಿ, ಮರೆತವನಾಗಿ ಕಾಣಿಸೋದು. ನಮ್ಮಲ್ಲೊಂದು ಸಹೃದಯತೆ ಇದ್ದರೆ, ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ, ತುಸು ವಿವೇಚನೆಯ ವ್ಯವಧಾನ ಇದ್ದರೆ, ಶಾಂತವಾಗಿ ಕುಳಿತು ಯೋಚಿಸಿದರೆ ನಮಗೂ ಅದು ಅರ್ಥವಾದೀತು. ಯಾರನ್ನು ನಾವು ಹೇಗೆಂದು ಅರ್ಥ ಮಾಡಿಕೊಂಡಿದ್ದೇವೆಯೋ, ಅದು ಸರಿ ಎಂದು ನಮಗೆ ಅರ್ಥವಾಗಿದೆಯೋ... ಹಾಗಿದ್ದರೆ, ನಮ್ಮ ಜಡ್ಜ್ ಮೆಂಟ್ ಸರಿ ಅಂತಾದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ತಾತ್ಕಾಲಿಕವಾಗಿ ಬದಲಾದ ಮಾತ್ರಕ್ಕೆ ಆ ವ್ಯಕ್ತಿಯೇ ಬದಲಾದ, ಎಕ್ಕುಟ್ಟೋದ ಅಂದುಕೊಳ್ಳುವುದು ಸರಿಯಲ್ಲ ಅಲ್ವ.

ಬಹಳಷ್ಟು ಬಾರಿ ನಾವು ಕಾಣೋದಕ್ಕೂ ವಾಸ್ತವಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ನಾವು ಕಂಡಿದ್ದು ಮಾತ್ರ ಸತ್ಯಗಳಲ್ಲ. ಕಂಡುಕೊಂಡಿದ್ದು ಸತ್ಯ ಎಂಬದು ಅರಿವಿರಬೇಕು. ಪ್ರತಿದಿನ ಸೇತುವೆ ಮೇಲೆ ಪ್ರಯಾಣ ಮಾಡುತ್ತೇವೆ. ಗಟ್ಟಿಮುಟ್ಟಾಗಿದೆ, ಸಪಾಟಾಗಿದೆ. ನಿಜ. ಇದು ನಾವು ಕಂಡುಕೊಂಡಿದ್ದು. ಆ ಸೇತುವೆಯ ಒಂದು ಭಾಗ ಕುಸಿದು, ಅದು ಬೀಳದ ಹಾಗೆ ಅದಕ್ಕೊಂದು ಆಧಾರ ಕಂಭ ಕೊಟ್ಟಿರಬಹುದು ಕೆಳಗೆ, ಅದನ್ನು ನಾವು ಕೆಳಗಿಳಿದು ನೋಡುತ್ತೇವೆಯೇ, ಇಲ್ಲ. ಯಾಕೆಂದರೆ ಅದು ನಮ್ಮ ಕಣ್ಣಂದಜಾಗಿಂತ ಆಚೆ (ಕೆಳಗೆ) ಇರುವಂಥದ್ದು. ಅಲ್ವ... ಇದರಲ್ಲಿ ಸೇತುವೆಯ ತಪ್ಪೇನಿದೆ. ನಮ್ಮ ಕಣ್ಣೇ ನಮಗೆ ಪ್ರಥಮ ವರ್ತಮಾನ ಮಾಹಿತಿ ನೀಡುವಂಥದ್ದು. ಕಣ್ಣಿನಾಚಿಗಿನ ವಿವೇಚನೆ, ಚಿಂತನೆ, ಜಿಜ್ನಾಸೆ, ಸಂಶೋಧನೆಯ ಬಳಿಕ ಕಂಡುಕೊಳ್ಳುವಂಥದ್ದು ಇನ್ನಷ್ಟು ಇರುತ್ತವೆ. ಎಷ್ಟೋ ಬಾರಿ ಮೇಲ್ನೋಟಕ್ಕೆ ಕಂಡಿದ್ದರ ಆಧಾರದಲ್ಲಿ ನಾವೊಂದು ಜಡ್ಜ್ ಮೆಂಟಲ್ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತೇವೆ. ಅದು ಹೀಗೆ, ಅವನು, ಅವಳು ಹೀಗೆ ಅಂಥ. ಅದೇ ಜಡ್ಜ್ ಮೆಂಟಲ್ ನಿರ್ಧಾರವನ್ನೇ ಆಧಾರವಾಗಿಟ್ಟು ಅವರಿಂದ ಒಂದಷ್ಟು ನಿರೀಕ್ಷೆ, ಒಂದು ವ್ಯಾವಹಾರಿಕ ಸಂಬಂಧ ಎಲ್ಲ ಇರುತ್ತದೆ. ಎಂದೋ ಒಂದು ದಿನ ಅವರ ಇನ್ನಷ್ಟು ಫೀಚರ್ ಗಳು ಕಂಡಾಗ ಅಥವಾ ಕಂಡುಕೊಂಡಾಗ ಜನವೇ ಬೇರೆಯೇನೋ ಅನಿಸುತ್ತದೆ. ನಿಮಗೆ ಎಷ್ಟೋ ಬಾರಿ ಹಾಗೆ ಅನ್ಸಿಲ್ವ....
ಡಿಪಿ ಯಲ್ಲಿ ಕಾಣುವ ಪ್ರಸನ್ನ ನಗು, ಎಫ್ ಬಿನಲ್ಲಿ ಹಾಕುವ ಬಿಂದಾಸ್ ಸ್ಟೇಟಸ್ ಗಳು, ಸಕತ್ ಸೆಲ್ಫೀಗಳನ್ನೂ ಮೀರಿದ ಒಂದು ಬದುಕು, ಕಾಣದ ಜಗತ್ತು, ಮನಸ್ಸಿನ ಇನ್ನೊಂದು ಮಗ್ಗುಲು ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲರಲ್ಲಿ ಮಸುಕಾಗಿ ಕಾಣಿಸುತ್ತದೆ. ಕೆಲವರದ್ದು ತಡವಾಗಿ, ಇನ್ನು ಕೆಲರದ್ದು ಅಪರೂಪವಾಗಿ ಅಷ್ಟೇ.... ಹಾಗೆ ಕಂಡಾಗಲೇ ಜನ ಬೇರೆ ಅಂತ ನಮಗನಿಸೋದು.
ವೊಮ್ಮೆ ಗ್ರಹಿಕೆಗೆ ಆಚೆಗೊಂದು ಬದುಕಿರುತ್ತದೆ. ಪ್ರತಿ ದಿನ ನಿಮ್ಮ ಹತ್ತಿರವೇ ಕುಳಿತು ಮಾತನಾಡಿ ಹೋಗುವವರು, ಅಕ್ಕಪಕ್ಕದಲ್ಲಿ ನಡೆದಾಡುವವರ ಹಿಂದೆಯೂ ಬೇರೆಯೇ ಒಂದು ಕಥೆ ಇರುತ್ತದೆ. ಅವರದನ್ನು ಹೇಳ್ಕೊಂಡಿರುವುದಿಲ್ಲ, ನೀವದನ್ನು ಕೇಳಿರುವುದಿಲ್ಲ. ಒಂದು ಸುಪ್ತ ಸಾಧನೆ, ಏನೋ ಒಂದು ಅನಾರೋಗ್ಯ, ಏನೋ ಸಂದಿಗ್ಧ, ಅಸಹಾಯಕತೆ, ಅವರಿಗಿರಬಹುದು. ಎಲ್ಲವನ್ನೂ ಎಲ್ಲರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಅಸಲಿಗೆ ಎಷ್ಟನ್ನು ಹೇಳಿಕೊಳ್ಳಲಾಗುತ್ತದೆ ಹೇಳಿ. ಹೇಳಿಕೊಳ್ಳುತ್ತಾ ಕೂರುವುದೋ ಅಥವಾ ಪರಿಸ್ಥಿತಿಯನ್ನು ನಿಭಾಯಿಸುವುದೋ ಎಂಬ ಸಂದಿಗ್ಧ ಹಲವರಿಗೆ....ಅದು ಮನಸ್ಸಿನ ಶಕ್ತಿಯೂ ಹೌದು ಮಿತಿಯೂ ಹೌದು. ಮನಸ್ಸಿಗೊಂದು ಸೆನ್ಸರ್ ಇಲ್ಲ ತಾನೆ. ಪಂಚೇಂದ್ರಿಯಗಳು ತಲುಪಿಸಿದ್ದನ್ನಷ್ಟೇ ಪ್ರೊಸೆಸಿಂಗ್ ಮಾಡುವುದು ಮನಸ್ಸು. ಎಕ್ಸರೇ ಥರ, ಸ್ಕ್ಯಾನಿಂಗ್ ಯಂತ್ರದ ಥರ ಇನ್ನೊಂದು ಮನಸ್ಸನ್ನು ಸ್ಕ್ಯಾನ್ ಮಾಡಿ, ಕ್ಷಕಿರಣಗಳನ್ನು ಇಳಿಸಿ ಇಡೀ ರಿಪೋರ್ಟ್ ಕೊಟ್ಟು ಈ ಜನ ಹೀಗೆ ಅಂಥ ಸರ್ಟಿಫಿಕೇಟ್ ಕೊಡುವ ವ್ಯವಸ್ಥೆ ಪುಣ್ಯಕ್ಕೆ ಇನ್ನೂ ಬಂದಿಲ್ಲ.

ಹಾಗಾಗಿ ನಾವು ಅರ್ಥಮಾಡಿದ್ದಕ್ಕಿಂತ ಹೆಚ್ಚು ಅರ್ಥ ಆಗುವುದಕ್ಕಿದೆ ಎಂಬ ಸತ್ಯ ಅರಿವಿದ್ದರೆ ಚೆನ್ನ. ಯಾರನ್ನೋ ತಪ್ಪಾಗಿ ಅರ್ಥ ಮಾಡುವ ಮೊದಲು, ನೀನು ಬದಲಾಗಿದ್ದಿ ಅಂತ ಹಿಯಾಳಿಸುವ ಮೊದಲು, ನಾಲ್ಕು ಜನರೆದುರು ಅಪಹಾಸ್ಯ ಮಾಡುವ ಮೊದಲು, ಮಾತು ಬಿಡುವ ಮೊದಲು, ಎಷ್ಟೋ ದಿನ ಕಟ್ಟಿಕೊಂಡು ಬಂದ ಆಪ್ಯಾಯತೆಯ ಸಂಕೋಲೆಯನ್ನು ಕಡಿಯುವ ಮೊದಲು ತುಸು ಯೋಚಿಸಿ...
ಅವರ ಜಾಗದಲ್ಲಿ ನಾವು ನಿಂತು, ನಮ್ಮ ಜಾಗದಲ್ಲಿ ಅವರನ್ನು ನಿಲ್ಲಿಸಿ ಚಿಂತಿಸಿ...
ಸಾವಧಾನದ ವಿವೇಚನೆಗೆ ಕಣ್ಣಿಗೆ ಕಾಣದ್ದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ. ಯಂತ್ರಗಳಾಗದೆ, ವಿವೇಚನೆಗೆ ಕೆಲಸ ಕೊಟ್ಟಾಗ, ದುಡುಕುವ ಮೊದಲು ಯೋಚಿಸಲು ಸಾಧ್ಯವಾದಾಗ ಇದೆಲ್ಲಾ ಸುಲಭವಾಗುತ್ತದೆ. ಯಾರದೋ ಕಾಣದ ಕಣ್ಣೀರು, ಹೇಳಲಾಗದ ಸಂಧಿಗ್ಧ, ಬರೆಯಲಾಗದ ಸಂಕಷ್ಟ, ವಿವರಿಸಲಾಗದ ಖುಷಿ, ಅನುಭಿಸಲಾಗದ ವಿಷಾದಗಳು ಕಾಣದಿದ್ದರೂ ಒಳಗಣ್ಣಿಗೆ ಕಾಣಲು ಸಾಧ್ಯವಾದಾಗ ಮೂಡಬಹುದಾದ ಸಾಲುಗಳು.

ಕೇಳದೆ ನಿಮಗೀಗ ದೂರದಲ್ಲಿ ಯಾರೋ....


-KM