ಗ್ಯಾಸ್ಲೈಟು, ಲ್ಯಾಂಡ್ಲೈನು, ಚಿಮಣಿ ದೀಪದ ಹಾಗೆ ಅಚ್ಚರಿ, ನಾಚಿಕೆ, ಕುತೂಹಲಗಳು ಸತ್ತೇ ಹೋಗಿವೆಯಾ?!

 



ನಾವು ಸಣ್ಣವರಿದ್ದಾಗ ಜೋರು ಮಳೆ ಬರುವಾಗ ಕಾಗದದ ದೋಣಿ ಮಾಡಿ, ಅದನ್ನು ನೀರು ಹರಿಯುವ ಕಣಿಯಲ್ಲಿ (ಚರಂಡಿ) ತೇಲಬಿಟ್ಟು, ಅದು ಅಂಕುಡೊಂಕು ಚರಂಡಿಯಲ್ಲಿ ಸಾಗುವುದನ್ನು ನೋಡಲು ತುಂಬ ಖುಷಿ ಆಗ್ತಾ ಇತ್ತು. ಅದೆಲ್ಲಿ ಹೋಗಿ ಸೇರ್ತದೆ ಅಂತ ತಿಳಿಯುವ ಮುಗ್ಧ ಕುತೂಹಲ ಇತ್ತು.

ಬೇಸಿಗೆ ರಜೆಯಲ್ಲಿ ಕಡುಬೇಸಿಗೆಯಲ್ಲಿ ಗುಡ್ಡೆಯ ತುದಿಯಲ್ಲಿ (ದೇರದಲ್ಲಿ) ಇರುವ ಕಾಟು (ಕಾಡು) ಮಾವಿನ ಹಣ್ಣಿನ ಮರದಿಂದ ಉದುರುವ ಮಾವಿನ ಹಣ್ಣುವ ಹೆಕ್ಕುವ ಖಾಯಂ ಡ್ಯೂಟಿ ಇರ್ತಾ ಇತ್ತು. ತರಗೆಲೆಗಳ ನಡುವೆ, ಪೊದೆಗಳ ಎಡೆಯಲ್ಲಿ ರಪಕ್ಕ ಅಂತ ಕಾಣಿಸುವ ಹಣ್ಣುಗಳನ್ನು ಹೆಕ್ಕುವುದು, ಚೆದುರಿ ಚೆಲ್ಲಾಪಿಲ್ಲಿಯಾದ ಮಾವಿನ ಹಣ್ಣುಗಳನ್ನು ಬುಟ್ಟಿಗೆ ಹೆಕ್ಕಿ ಹೆಕ್ಕಿ ತುಂಬುವುದರಲ್ಲಿ ಏನೋ ಖುಷಿ ಇತ್ತು. ಆಗೆಲ್ಲ ನಮಗೆ ಬೇಸಿಗೆ ಶಿಬಿರಗಳ ಅವಶ್ಯಕತೆ ಇರಲಿಲ್ಲ...

ಜೋರು ಗಾಳಿ ಬೀಸುವಾಗ ತೋಟದ ಬೇಲಿ ಪಕ್ಕದ ತೆಂಗಿನ ಮರಗಳು ತೊನೆದಾಡುವುದನ್ನು ಮನೆಯ ಜಗಲಿಯಲ್ಲಿ ಹೆದರಿ ನಿಂತು ನೋಡುವುದು, ಇನ್ನೇನು ಮರ ಮನೆಯ ಮೇಲೆಯೇ ಬೀಳ್ತದೋ ಎಂಬಂಥ ಟೆನ್ಶನ್ ಅನುಭವಿಸಿ, ಮರದ ಓಲಾಟವನ್ನು ದಿಗ್ಭ್ರಮೆಯಿಂದ ವೀಕ್ಷಿಸುತ್ತಿದ್ದುದರ ಹಿಂದೆಯೂ ಒಂದು ಸಹಜ ಚಡಪಡಿಕೆ ಇತ್ತು.

ಎರಡು ದಶಕಗಳಿಂದ ನಾವು ನಮ್ಮ ಸಹಜ ಕುತೂಹಲ, ಅಚ್ಚರಿ, ನಾಚಿಕೆ, ಆಸಕ್ತಿ, ಸಹನೆಗಳನ್ನು ಮೊಬೈಲಿಗೆ ಧಾರೆ ಎರೆದು ಕೊಟ್ಟಿದ್ದೇವೆ. ನಮಗೆ ಅಚ್ಚರಿ ಪಡಲು, ಕುತೂಹಲ ಹೊಂದಲು, ನಾಚಿಕೊಳ್ಳಲು ಪುರುಸೊತ್ತಿಲ್ಲ. ಅದರ ಅಗತ್ಯ ಇಲ್ಲ, ಅನಿವಾರ್ಯತೆ ಮೊದಲೇ ಇಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೇ ನಮಗೆ ಟೈಮಿಲ್ಲ. ಮಕ್ಕಳಿಗೆ ರಜೆ ಶುರುವಾಗಿ ಮುಗಿಯುವ ವರೆಗೂ ಟಿ.ವಿ. ಅಥವಾ ಮೊಬೈಲ್ ಮಾತ್ರ ಇದ್ದರೆ ಸಾಕು. ಇಡೀ ರಜೆಯೇ ಅದರಲ್ಲಿ ಕಳೆದುಹೋಗುತ್ತದೆ. ಎಳೆಯ ಪುಟಾಣಿಗಳೂ ರಚ್ಚೆ ಹಿಡಿದು ಹಠ ಮಾಡುತ್ತಿದ್ದರೆ ಅದರೆದುರು ಮೊಬೈಲ್ ರೀಲ್ಸ್ ಆನ್ ಮಾಡಿಟ್ಟರೆ ಮಗು ಅಳು ನಿಲ್ಲಿಸುತ್ತದೆ ಮಾತ್ರವಲ್ಲ, ತಾನೇ ಕೈಯ್ಯಾರೆ ರೀಲ್ಸ್ ನಿಂದ ರೀಲ್ಸಿಗೆ ಸ್ವೈಪ್ ಮಾಡುತ್ತಾ ಹೋಗುತ್ತದೆ...

ಪುಟ್ಟ ಪುಟ್ಟ ಮಕ್ಕಳಿಗೂ ಅಷ್ಟು ಸುಲಭದಲ್ಲಿ ಯಾವುದೂ ಅಚ್ಚರಿ ಹುಟ್ಟಿಸುವುದಿಲ್ಲ. ಬದುಕು ಬಹಳ ಬೇಗ ಬೋರ್ ಅನ್ನಿಸತೊಡಗುತ್ತದೆ. ಸುಮ್ಮನೆ ನಡೆಯುವುದು, ಸುಮ್ಮನೆ ಮಾತನಾಡುವುದು, ಪ್ರಕೃತಿಯನ್ನು ವೀಕ್ಷಿಸುವುದು, ಗಮನಿಸುವುದು, ಸೂಕ್ಷ್ಮಪ್ರಜ್ಞೆಯಿಂದ ತಿಳಿದುಕೊಳ್ಳುವುದು ವರ್ಥ್ ಅಲ್ಲ ಎಂಬ ಭಾವನೆ ವ್ಯಾಪಕವಾಗಿದೆ.

ಒಪ್ಪಿದರೂ, ಒಪ್ಪದಿದ್ದರೂ ಇಂಥದ್ದೊಂದು ಸನ್ನಿವೇಶಕ್ಕೆ ನಾವು 70-80ರ ದಶಕದ ಜೀವಿಗಳು ಸಾಕ್ಷಿಗಳಾಗಿದ್ದೇವೆ.

ನಾವು ಚಿಕ್ಕವರಿದ್ದಾಗ... ಅಂತ ಶುರು ಮಾಡಿ ಪುಟಗಟ್ಟಲೆ ಬರೆಯಬಹುದು. ಅಂದಿಗೂ, ಇಂದಿಗೂ ಹೋಲಿಸುವುದು, ಜರೆಯುವುದು, ತಲೆ ಚಚ್ಚಿಕೊಳ್ಳುವುದು ಬರಹದ ಉದ್ದೇಶ ಅಲ್ಲ. ಆಗಿದ್ದ ಅಚ್ಚರಿ, ಆಗಿದ್ದ ಸಹನೆ, ಅಗ ಸಿಗ್ತಾ ಇದ್ದ ಪುಟ್ಟ ಪುಟ್ಟ ಸಂತೋಷಗಳೂ ಈಗ ರೆಡಿಮೇಡ್ ಆಗಿ, ಸಾವಧಾನವೇ ಇಲ್ಲದೆ, ಎಲ್ಲೆಂದರಲ್ಲಿ ಸಿಗುವಾಗ ಕೃತಕವಾಗಿ ಅಂತಹ ಭಾವಗಳನ್ನು ಸೃಷ್ಟಿಸುವುದಾದರೂ ಹೇಗೆ? ಅಲ್ವ?.

ಯಕ್ಷಗಾನ ಬಯಲಾಟಕ್ಕೆ ಹೋದರೆ ಚೌಕಿಯಲ್ಲಿ ಇಣುಕಿ ವೇಷಗಳನ್ನು ನೋಡುವುದರಲ್ಲಿ ಖುಷಿ ಇತ್ತು. ಮಹಿಷಾಸುರ ಬರುವಾಗ ಹೆದರಿ ಮಾರು ದೂರ ಓಡುವುದಿತ್ತು. ತಡ್ಪೆ ಕಿರೀಟದ ವೇಷ ಪರದೆ ಹಿಂದೆ ಕುಣಿದು ಆರ್ಭಟಿಸುವಾಗ ರಂಗಸ್ಥಳದ ಸೈಡಿಗೆ ಹೋಗಿ ವೇಷ ಹೇಗೆ ಕಾಣಿಸ್ತದೆ ಅಂತ ಇಣುಕುವಾಗ ಭಯಂಕರ ಸಂತೋಷ ಆಗ್ತಾ ಇತ್ತು. ಈಗಿನ ಮಕ್ಕಳಿಗೆ ಯಕ್ಷಗಾನ ಬೋರ್ ಹೊಡೆಸ್ತದ್, ಥ್ರಿಲ್ಲಿಂಗ್ ಅನ್ನಿಸುವುದು ಬಹಳ ಅಪರೂಪ...

ಶಾಲೆಯಿಂದ ಮನೆಗೆ ನಡೆದು ಹೋಗುವಾಗ ಕಲ್ಲೆಸೆದು ಉದುರಿಸಿದ ಗೇರುಹಣ್ಣು ತಿನ್ನುವುದರಲ್ಲೂ ಸಂಭ್ರಮ ಇತ್ತು. ಕೈಗಂಟಿದ ಮಾವಿನ ಕಾಯಿ ಸೋನೆ, ಹಲಸಿನ ಹಣ್ಣಿನ ಮಯಣ, ಸ್ಲಿಪ್ಪರ್ (ಹವಾಯ್) ಚಪ್ಪಲಿಯಿಂದ ಅಂಗಿಯ ಬೆನ್ನಿಗೆ ರಟ್ಟುವ ಧೂಳು ಎಲ್ಲವೂ ಸಹಜವಾಗಿ, ಸಾಮಾನ್ಯವಾಗಿ ನಿತ್ಯ ಬದುಕಿನ ಭಾಗವಾಗಿ ಆವರಿಸುತ್ತಿತ್ತು.

ಯಾರದ್ದೋ ಮನೆಯ ಟಿ.ವಿ.ಯಲ್ಲಿ ನೋಡುತ್ತಿದ್ದ ವಾರಕ್ಕೊಂದೇ ಚಿತ್ರಹಾರ್, ವಾರಕ್ಕೊಂದೇ ಚಿತ್ರಮಂಜರಿ, ವಾರಕ್ಕೊಂದೇ ಕನ್ನಡ ಸಿನಿಮಾ, ರಾಮಾಯಣ, ಮಹಾಭಾರತ, ಚಾಣಕ್ಯ, ಪರಮವೀರ ಚಕ್ರದಂತಹ ಧಾರಾವಾಹಿಗಳು, ರೇಡಿಯೋದಲ್ಲಿ ವಾರಕ್ಕೊಮ್ಮೆ ಮಾತ್ರ ಕೇಳುತ್ತಿದ್ದ ಕನ್ನಡ ಚಲನಚಿತ್ರ ಧ್ವನಿವಾಹಿನಿಗಳು ಒಂದು ನಿರೀಕ್ಷೆಯನ್ನು, ಕುತೂಹಲವನ್ನು, ಕಾತರವನ್ನು ನಮ್ಮೊಳಗೆ ಕಾಯ್ದಿರಿಸುತ್ತಿತ್ತು. ಈಗ ಹೇಗಿದೆ ಪರಿಸ್ಥಿತಿ ಅಂತ ಎಲ್ರಿಗೂ ಗೊತ್ತು. ಶ್ರಮ ಪಡದೇ ಎಲ್ಲವೂ ಸಿಗ್ತದೆ, ಯಾರೂ ಯಾರಿಂದಲೂ ದೂರವಾಗುವುದಿಲ್ಲ, ಯಾರಿಗೂ ಕಾದು ನೋಡುವ, ಕಾದು ಪಡೆಯುವ ತಾಳ್ಮೆಯಿಲ್ಲ.

ನಮಗೆ ಎಂಥದ್ದನ್ನೂ ಸಾರ್ವಜನಿಕವಾಗಿ ಹೇಳ್ಕೊಳ್ಲಿಕೆ ನಾಚಿಕೆ ಆಗುವುದಿಲ್ಲ. ಪೋಸ್ಟ್ ಆಫೀಸಿನಿಂದ ಕಾಗದ ಬಂದು,ಅದನ್ನು ನಿಧಾನವಾಗಿ ಓದಿ, ಉತ್ತರ ಬರೆದು ಪೋಸ್ಟು ಮಾಡಿ ಆ ಕಾಗದ ತಲುಪಿ ಅವರು ಮತ್ತೆ ಓದಿ.... ಇಷ್ಟೆಲ್ಲ ಮಾಡಬೇಕಾದ, ಕಾಯಬೇಕಾದ ಅನಿವಾರ್ಯತೆಯೂ ಇಲ್ಲ. ಆಗಿಂದಾಗ್ಗೆ ಬಂದು ಠಣ್ ಅಂತ ವಾಟ್ಸಪ್ಪಿನಲ್ಲಿ ಕಾಣುವ ಮೆಸೇಜು ಗಮನಿಸಲು, ತೆರೆಯಲು, ಓದಲು, ಉತ್ತರಿಸಲೂ ನಮಗೆ ಟೈಮಿಲ್ಲ, ಇನ್ನು ಕಾಗದ ಬರೆಯುವುದು, ಕಾಯುವುದು, ಓದುವುದು ಊಹೆಗೇ ನಿಲುಕದ್ದು!

ತಂತ್ರಜ್ಞಾನ ಬದುಕನ್ನು ಸುಲಭಗೊಳಿಸಿದೆ, ಜಾಗತಿಕ ಹಳ್ಳಿಯಾಗಿಸಿದೆ ಎಂಬ ವಾದದ ಹಿಂದೆ ಶೇ.90 ಭಾಗ ನನಗೆ ವಾಣಿಜ್ಯ ದೃಷ್ಟಿಯೇ ಕಾಣಿಸುತ್ತಿದೆ ಅಷ್ಟೆ. ಹಳತನ್ನು ಕಂಡು ಬೆಳೆದ ನನ್ನಂಥವರಿಗೆ ತಂತ್ರಜ್ಞಾನ ಬದುಕನ್ನು ಸಂಕೀರ್ಣಗೊಳಿಸಿದೆ, ಸಂಬಂಧಗಳ ವ್ಯಾಖ್ಯಾನಗಳನ್ನು ಬದಲಿಸಿದೆ, ಬಿಪಿ ಹೆಚ್ಚಿಸಿದೆ, ಒತ್ತಡ ಹಾಕಿದೆ, ನಮ್ಮೊಳಗಿನ ಕುತೂಹಲ, ನಾಚಿಕೆ, ನಿರೀಕ್ಷೆಗಳ ಭಾವಗಳನ್ನೇ ಕಿತ್ತೆಸೆದಿದೆ ಅಂತ ಅನ್ನಿಸ್ತಾ ಇದೆ.

ಸಹಜವಾಗಿರುವುದೇ ಸುಂದರ ಅಂತ ಹೇಳ್ತಾರೆ. ನಮಗೆ ಸಹಜವಾಗಿರಲು ಇಲ್ಲಿ ಅವಕಾಶವೇ ಸಿಗ್ತಾ ಇಲ್ಲ. ಫೇಸ್ಬುಕ್ಕಿನಲ್ಲೂ ನಿಮಗೆ ಜನ್ಮದಿನ ಶುಭಾಶಯ ಬಂದರೆ ಉತ್ತರಿಸಲು ರೆಡಿಮೇಡ್ ಇಮೋಜಿ ಸಿಗ್ತದೆ. ವಾಟ್ಸಪ್ ಸ್ಟೇಟಸ್ ಕಂಡ ಕೂಡಲೇ ಬೇಕಾದ ನಾಲ್ಕೈದು ಇಮೋಜಿಗಳನ್ನು ಬೆರಳು ಸೋಕಿಸಿ ಕಳುಹಿಸಬಹುದು. ಮತ್ತೆ ತಲೆ ಖರ್ಚು ಮಾಡಬೇಕಾದ, ಅಕ್ಷರ ಟೈಪಿಸಬೇಕಾದ ಪ್ರಮೇಯವೇ ಇಲ್ಲ.

ಮೊಬೈಲಿನತ್ತ ಮುಖ ಬಗ್ಗಿಸಿ ರೀಲ್ಸ್ ನೋಡುತ್ತಾ, ನಮ್ಮ ಪೋಸ್ಟುಗಳಿಗೆ ಬಂದ ಲೈಕುಗಳನ್ನು ಹುಡುಕುತ್ತಲೇ ದಿನದೂಡುವಾಗ ಅಥವಾ ವರ್ಕ್ ಫ್ರಂ ಹೋಂ ಎಂಬ ವಿಚಿತ್ರ ಔದ್ಯೋಗಿಕ ಬದುಕಿನಲ್ಲಿ ಲ್ಯಾಪ್ಟಾಪ್, ಮೊಬೈಲುಗಳನ್ನು ಹಿಡಿದು ಗಂಟೆಗಳನ್ನು ಕಳೆಯುವಾಗ ಸೋನೆ ಮಳೆಯನ್ನು, ಗೋಧೂಳಿ ಹೊತ್ತಿನ ಸೂರ್ಯಾಸ್ತವನ್ನು, ಕಣಿಯಲ್ಲಿ ತೇಲುವ ಕಾಗದದ ದೋಣಿಯನ್ನು, ಬಾಳೆ ಗಿಡದ ಎಡೆಯಲ್ಲಿ ಹಕ್ಕಿ ಕಟ್ಟಿದ ಗೂಡನ್ನು ನೋಡಲು ಪುರುಸೊತ್ತಾದರೂ ಎಲ್ಲಿರ್ತದೆ ಹೇಳಿ.

ಒಂದು ಆದಾಯ ತಂದು ಕೊಡದ, ಲೈಕು, ಕಮೆಂಟು, ವ್ಯೂಸ್ ಬಾರದ ಯಾವುದನ್ನೂ ಮಾಡಲಾಗದಷ್ಟು ನಾವು ಕೆಟ್ಟು ಹೋಗಿದ್ದೇವೆ... ನಾವು ಮಾಡಿದ ಸೃಜನಶೀಲ ವಿಚಾರಗಳನ್ನು ನಾವೇ ಪ್ರಮೋಟ್ ಮಾಡಬೇಕು. ಹ್ಯಾಶ್ ಟ್ಯಾಗ್, ಕೀ ವರ್ಡ್ಸ್, ಥಂಬ್ ನೈಲ್ ಇಲ್ಲದೆ ಎಂಥದ್ದೂ ಯಾರನ್ನೂ ತಲುಪುವುದಿಲ್ಲ. ಇದರ ನಡುವಿನಿಂದ ತಪ್ಪಿಸಲಾಗದೆ ಕೃತಕ ಅಚ್ಚರಿಯನ್ನು, ರೆಡಿಮೇಡ್ ನಾಚಿಕೆಯನ್ನು ಮತ್ತು ಆಮದು ಮಾಡಿದ ಕುತೂಹಲವನ್ನು ತೋರಿಸುತ್ತಾ ಸೆಲ್ಫೀಗಳಿಗೆ ಸಬ್ಜೆಕ್ಚುಗಳಾಗುತ್ತಿದ್ದೇವೆ. ಇಷ್ಟೇ... ಏನಂತೀರ?

-ಕೃಷ್ಣಮೋಹನ ತಲೆಂಗಳ (02.04.2024)

No comments: