ಅಭಿವೃದ್ಧಿಗೆ "ತಲೆದಂಡ"ಗಳು ಅನಿವಾರ್ಯ... ಈಗ ಪ್ರೀತಂ ಟಾಕೀಸು ಸರದಿ!

 



ಪ್ರತಿ ಅಭಿವೃದ್ಧಿ ಬೆಳವಣಿಗೆಯ ಹಿಂದೆಯೂ ನಾವು ಏನನ್ನಾದರೂ ಕಳೆದುಕೊಳ್ಳಲೇ ಬೇಕಾಗುತ್ತದೆ. ಅದು ಒಳ್ಳೆಯದೋ, ಕೆಟ್ಟದೋ ಅಂತ ಚರ್ಚಿಸುವುದರಿಂದ ಹೆಚ್ಚಿನ ಪ್ರಯೋಜನ ಆಗದು.

ಆದರೆ, ಪ್ರತಿ ಊರಿನ ಅಸ್ಮಿತೆಯೊಂದಿಗೆ ಇಂತಹ ನೆನಪುಗಳು ಗೂಡು ಕಟ್ಟಿರುತ್ತವೆ. ಯಾವುದೋ ವಿಸ್ತರಣೆಗೆ, ಯಾವುದೋ ಅಭಿವೃದ್ಧಿಗೆ, ಯಾವುದೋ ಬೆಳವಣಿಗೆಗೆ ಇಂತಹ ಗೂಡುಗಳನ್ನು ಕೆಡವುತ್ತಾ ಹೋಗುತ್ತೇವೆ, ಹೋಗಲೇಬೇಕಾಗುತ್ತದೆ. ಪರಿಸ್ಥಿತಿ, ಅನಿವಾರ್ಯತೆ ಮತ್ತು ಅಗತ್ಯಗಳು ಹಾಗೆ ಮಾಡಿಸುತ್ತವೆ.

ಎಷ್ಟೊಂದು ಊರುಗಳಲ್ಲಿ ಟಾಕೀಸುಗಳು ಎಂಬ ಬೆಚ್ಚಗಿನ ಗೂಡು ಆ ಊರ ಮಂದಿಯ ಬಾಲ್ಯ, ಯೌವ್ವನಗಳ ದಿನಗಳ ಖುಷಿಗಳಿಗೆ ಸಾಕ್ಷಿಗಳಾಗಿರುತ್ತಿದ್ದವು.  ಮಂಗಳೂರಿನಲ್ಲಾದರೇ ಜ್ಯೋತಿ, ಸೆಂಟ್ರಲ್, ಪ್ಲಾಟಿನಂ, ಸುಚಿತ್ರಾ, ಪ್ರಭಾತ್, ನ್ಯೂಚಿತ್ರ... ಹೀಗೆ... ಹೀಗೆ... ತುಂಬ ಟಾಕೀಸುಗಳು, ಪುತ್ತೂರಿನ ಅರುಣಾ, ಹಿಲ್ ಸೈಡ್ ಮಂಜೇಶ್ವರ, ಗೋಪಾಲಕೃಷ್ಣ ಕುಂಬಳೆ, ರಂಜಿತ್ ಉಪ್ಪಳ, ಡಯಾನ ಉಡುಪಿ..., ವಿನಾಯಕ ಸುರತ್ಕಲ್ ಹೀಗೆ ಸಣ್ಣ ಸಣ್ಣ ಊರುಗಳಲ್ಲೂ ಇರುವ ಚಿತ್ರಮಂದಿಗಳಿಗೂ ಈ ವಾರ ಯಾವ ಸಿನಿಮಾ ಬಂದಿದೆ ಅಂತ ಉದಯವಾಣಿಯಲ್ಲಿ ನೋಡುವುದು ಬಾಲ್ಯದ ನಮ್ಮ ಖುಷಿಯಾಗಿತ್ತು.

ಮನರಂಜನೆ ಎಂಬುದು ಮೊಬೈಲಿನ ಆಚೆ ಸಿಗುತ್ತಿದ್ದ ದಿನಗಳಲ್ಲಿ ಇಂತಹ ಟಾಕೀಸುಗಳೇ ಜನರಿಗೆ ಹೊರ ಪ್ರಪಂಚ ದರ್ಶನ ಮಾಡಿಸುತ್ತಿದ್ದುದು ಸುಳ್ಳಲ್ಲ. ಈ ಪೈಕಿ ಜ್ಯೋತಿ, ಸೆಂಟ್ರಲ್, ಪ್ಲಾಟಿನಂ, ನ್ಯೂಚಿತ್ರ ಸಹಿತ ಅನೇಕ ಟಾಕೀಸಿನ ಕಟ್ಟಡಗಳೂ ಧರಾಶಾಹಿಗಳಾಗಿ ಇತಿಹಾಸ ಪುಟ ಸೇರಿವೆ. ಜ್ಯೋತಿ ಅಂತ ಮಂಗಳೂರಿನಲ್ಲಿ ಒಂದು ಜಂಕ್ಷನ್ ಇದೆ. ಆದರೆ ಅಲ್ಲಿ ಜ್ಯೋತಿ ಟಾಕೀಸೇ ಈಗ ಇಲ್ಲ.!

ಈಗ ಉಪ್ಪಿನಂಗಡಿಯ ಐತಿಹಾಸಿಕ ಪ್ರೀತಂ ಟಾಕೀಸಿನ ಕಟ್ಟಡ ಕೂಡಾ ಮರೆಯಾಗುತ್ತಿದೆ. ಈ ಚಿತ್ರಮಂದಿರಗಳ ಬದಲಿಗೆ ಈಗ ಆಧುನಿಕ ಮಲ್ಟಿಪ್ಲೆಕ್ಸುಗಳೇನೋ ಬಂದಿರಬಹುದು. ಒಂದಕ್ಕೆ ನಾಲ್ಕು ಪಟ್ಟು ದುಡ್ಡು ಕೊಟ್ಟು ನಾವು ಎಸಿ ರೂಂನಲ್ಲಿ ತಂಪಾಗಿ ಸಿನಿಮಾ ನೋಡಬಹುದು.

ಆದರೆ, ಒಂದು ಕಾಲದಲ್ಲಿ ಮುಳಿ ಹುಲ್ಲಿನ ಮಾಡು, ಹೆಂಚಿನ ಮಾಡು, ಸಿಮೆಂಟ್ ಶೀಟಿನ ಮಾಡಿನ ಟಾಕೀಸುಗಳೂ ಇದ್ದವು. ಅಲ್ಲಿ 20-30 ರುಪಾಯಿಗೂ ಸಿನಿಮಾ ನೋಡಲು ಸಾಧ್ಯವಾಗುತ್ತಿತ್ತು, ಕಲಾವಿದರೂ ಕೈಯ್ಯಲ್ಲಿ ಬಿಡಿಸಿದ ಪೋಸ್ಟರುಗಳೇ ಸಿನಿಮಾದ ಪ್ರಚಾರದ ಪ್ರಧಾನ ಅಂಶಗಳಾಗಿದ್ದವು, ಅಲ್ಲಿ ಕಬ್ಬಿಣ ಕುರ್ಚಿ, ಬೆಂಚಿನಲ್ಲೂ ಕುಳಿತು ಸಿನಿಮಾ ನೋಡಲು ಸಾಧ್ಯವಾಗುತ್ತಿತ್ತು... ಮಾತ್ರವಲ್ಲ, ಮನೆಯಿಂದಲೇ ಕೊಂಡು ಹೋದ ಕಡ್ಲೆ, ಗೋಳಿಬಜೆ ತಿನ್ನಲು, ನಮ್ಮದೇ ಬಾಟಲಿಯ ನೀರನ್ನೂ ಕುಡಿಯುವ ಸ್ವಾತಂತ್ರ್ಯ ಅದರೊಳಗೆ ಇರ್ತಾ ಇತ್ತು, ಒಳಗೇ ಕುಳಿತು ಬೀಡಿ ಎಳೆದರೂ ಅಂತಹ ಅಡ್ಡಿ ಇರಲಿಲ್ಲ... ಅಂತ ಈಗಿನ ಮತ್ತು ಮುಂದಿನ ಮಕ್ಕಳಿಗೆ ತೋರಿಸಲು ಪಳೆಯುಳಿಕೆಗಳೂ ಇಲ್ಲದೇ ಆಗುತ್ತವಲ್ಲ ಎಂಬುದೇ ಬೇಸರ...

 

ಅವಶ್ಯಕತೆ ಮತ್ತು ಭವಿಷ್ಯದ ನಿರೀಕ್ಷೆಗಳು ಬದಲಾಗುತ್ತಿರುವಾಗ, ಅನಿವಾರ್ಯತೆಗಳೇ ಹೆಚ್ಚಿದಾಗ ಕೆಲವೆಲ್ಲ ತೆರೆ ಮರೆಗೆ ಸರಿಯುವಾಗ ನಾವೂ ಸಹ ಪಕ್ಕಕ್ಕೆ ಸರಿದು ಅದು ಕುಸಿಯುವುದನ್ನು, ಬದಲಾಗುವುದನ್ನು, ಅದೇ ಜಾಗದಲ್ಲಿ ಇನ್ನೇನೋ ಬರುವುದನ್ನು ಸುಮ್ಮನೆ ನೋಡುತ್ತಾ ಇರಬೇಕಾಗಿ ಬರುತ್ತದೋ. ನಾವದನ್ನು ಸಮರ್ಥಿಸುತ್ತೇವೆಯೋ, ವಿರೋಧಿಸುತ್ತೇವೆಯೋ ಎಂಬುದಕ್ಕಿಂತಲೂ ಇಂಥದ್ದೆಲ್ಲ ಮರೆಯಾಗುವುದನ್ನು ತಡೆಯಲು, ಅಥವಾ ಉಳಿಸಲು ಆಗುವುದಿಲ್ಲ ಎಂಬ  ಕಟು ವಾಸ್ತವ ಅರ್ಥ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ... ಸವಿ ಸವಿ ನೆನಪು ಸಾವಿರ ನೆನಪು, ಸಾವಿರ ಕಾಲಕು ಮರೆಯದ ನೆನಪುಗಳಿಗೆ ಗೂಡಾಗಿರುವ ಇಂತಹ ಟಾಕೀಸುಗಳ ಜೊತೆ ನಿಮ್ಮ ಬಾಲ್ಯದ ಚೆಂದದ ನೆನಪುಗಳಿದದ್ದರೆ ಕಮೆಂಟಿನಲ್ಲಿ ಹಂಚಿಕೊಳ್ಳಿ....

-ಕೃಷ್ಣಮೋಹನ ತಲೆಂಗಳ (16.09.2025)

No comments: