ಚಿಮಿಣಿ ದೀಪದಲ್ಲಿ ಓದಿ ದೊಡ್ಡವರಾದದ್ದು ಅದ್ಭುತವ? ಜರನ್ ಝೀಗಳ ಜೀವನಾನುಭವದ ಗ್ರಹಿಕೆ ನಿಲುಕದ ಸಂಗತಿಗಳು...!

 

AI PHOTO

ಇತ್ತೀಚೆಗೆ ಒಂದು ಪಾಡ್ ಕಾಸ್ಟ್ ನೋಡುತ್ತಿದ್ದೆ. ಕನ್ನಡದ ಜನಪ್ರಿಯ ನಟ, ನಿರ್ದೇಶಕರೊಬ್ಬರು ಬಾಲ್ಯದಲ್ಲಿ ವಿದ್ಯುತ್ ಇಲ್ಲದ ಮನೆ, ಚಿಮಿಣಿ ದೀಪದ ಬೆಳಕಿನ ಬದುಕಿನ ಬಗ್ಗೆ ವಿವರಿಸ್ತಾ ಇದ್ರು. ಸಂದರ್ಶಕರಿಗೆ (ಜೆನ್ ಜೀ ಕಾಲಮಾನದವರು) ತುಂಬ ಥ್ರಿಲ್ ಅನಿಸ್ತು. ಹೌದಾ... ದೀಪದ ಬೆಳಕಿನಲ್ಲೇ ಓದ್ತಾ ಇದ್ರ, ಕರೆಂಟಿಲ್ಲದೆ ಹೇಗೆ ಬದುಕಿದ್ರಿ? ಅಂತೆಲ್ಲ ಆಶ್ಚರ್ಯ ಪಟ್ರು. ಅದು ನಾಟಕ ಅಲ್ಲ, ಅವರ ವಯೋಸಹಜವಾದ ಅಚ್ಚರಿ...

1990ರ ದಶಕ್ಕಿಂತ ಮೊದಲು ಹುಟ್ಟಿದ ಹೆಚ್ಚಿನವರ ಬದುಕಿನಲ್ಲಿ ಸಾರಣೆ ಕಾಣದ ಮನೆ, ಕರೆಂಟಿಲ್ಲದ ರಾತ್ರಿಗಳು, ಫೋನು, ಟಿವಿ ಏನಂತವೇ ಗೊತ್ತಿಲ್ಲದ ದಿನಗಳು ದೊಡ್ಡ ಸಂಗತಿಯೇ ಅಲ್ಲ... ಆದರೆ, ಆ ನಂತರ ಹುಟ್ಟಿದ  ಅನೇಕರಿಗೆ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಹುಟ್ಟುವಾಗಲೇ ಮೊಬೈಲ್ ನೋಡುತ್ತಾ ಬೆಳೆದವರಿಗೆ ಅದರಾಚೆಗಿನ ಜಗತ್ತಿನ ಕತೆಗಳೆಲ್ಲ ಫ್ಯಾಂಟಸಿ ಅನ್ಸಿದ್ರೆ ಅದು ಅವರ ತಪ್ಪಲ್ಲ...

ಇವತ್ತು ನಾವು ಜೆನ್ ಜೀ, ಜೆನ್ ಅಲ್ಫಾ ಮತ್ತಿತರ ಹೊಸ ಜನಾಂಗದ ಬಗ್ಗೆ ಮಾತುಡುತ್ತಿದ್ದೇವೆ. ತಂತ್ರಜ್ಞಾನ ವಿಶಾಲವಾಗುತ್ತಿದೆ, ಆದರೆ ಬದುಕು ಸಂಕುಚಿತವಾಗುತ್ತಿದೆ. ಜಗತ್ತಿನೆದುರು ಪ್ರಾಯೋಗಿಕವಾಗಿ ನಾವು ತೆರೆದುಕೊಳ್ಳುವುದು ಕಡಿಮೆಯಾಗಿದೆ. ಮುಖ್ಯವಾಗಿ ಹದಿಹರೆಯದವರು ಮತ್ತು ಮಕ್ಕಳು... ತಂತ್ರಜ್ಞಾನ ಹೊರತುಪಡಿಸಿ ಸಹಜವಾಗಿ, ಪ್ರಾಕೃತಿಕವಾಗಿ ಕಂಡುಕೊಳ್ಳಲು, ಅರ್ಥ ಮಾಡಿಕೊಳ್ಳಲು ಹೆಣಗಾಡ್ತಾರೆ. ಅಥವಾ ನನ್ನಂಥವರಿಗೆ ಹಾಗನಿಸ್ತದೆ.

ಒಂದು ತಲೆಮಾರಿನವರ ಬಹುತೇಕ ಜೀವನಾನುಭವ ಮತ್ತೊಂದು ತಲೆಮಾರಿನವರಿಗೆ ಇತಿಹಾಸ ಅಥವಾ ಕಲ್ಪನೆ ಅಷ್ಟೇ... ಮೊಬೈಲ್ ಮಾತ್ರ ನೋಡಿದವನಿಗೆ ಲ್ಯಾಂಡ್ ಲ್ಯಾನ್ ಫೋನ್ ಅಂತ ಇತ್ತು ಎಂಬುದನ್ನು ನಂಬಲು ಕಷ್ಟ ಆದ ಹಾಗೆ. ಕರೆಂಟು ಹೋದಾಗ ತಕ್ಷಣ ಇನ್ವರ್ಟರ್ ಕೆಲಸ ಮಾಡ್ತದೆ ಅಂತಷ್ಟೇ ಗೊತ್ತಿರುವವರಿಗೆ ಕರೆಂಟೇ ಕಾಣದ ಮನೆಗಳಲ್ಲಿ ರಾತ್ರಿ ಬೆಳಕಾಗ್ತಾ ಇದ್ದದ್ದು ಹೇಗೆ ಎಂಬ ಪ್ರಾಯೋಗಿಕ ಅರಿವು ಇರ್ಲಿಕೆ ಸಾಧ್ಯವೇ ಇಲ್ಲ. ಊರಿಂದ ಊರಿಗೆ ನಡೆದುಕೊಂಡೇ ಹೋಗುತ್ತಿದ್ದರು, ದೊಂದಿ ಬೆಳಕಿನಲ್ಲಿ ಯಕ್ಷಗಾನ ಆಡುತ್ತಿದ್ದರು, ಗಾಣದಲ್ಲಿ ಎಣ್ಣೆ ತೆಗೆಯುತ್ತಿದ್ದರು, ಚಪ್ಪಲಿ ಹಾಕದೆಯೇ ನಡೆಯುತ್ತಿದ್ದರು ಎಂಬಿತ್ಯಾದಿ ಸಂಗತಿಗಳು ನನ್ನ ತಲೆಮಾರಿನವರಿಗೆ ಉತ್ಪ್ರೇಕ್ಷೆ ಅಂತ ಅನ್ನಿಸುವ ಹಾಗೆ. ಝೆನ್ ಝೀ ಗಳು ಮತ್ತು ಝೆನ್ ಅಲ್ಫಾಗಳು ಅಚ್ಚರಿ ಅಂದುಕೊಂಡಿರಬಹುದಾದ ಒಂದಿಷ್ಟು ಸಾಮಾನ್ಯ ಸಂಗತಿಗಳನ್ನು ನಾನಿಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. ನಿಮಗೂ ನೆನಪಾದರೆ ಕಮೆಂಟ್ ಸೆಕ್ಷನ್ನಿನಲ್ಲಿ ಸೇರಿಸಿ...

1)      ಒಂದು ಕಾಲದಲ್ಲಿ ಲ್ಯಾಂಡ್ ಲೈನ್ ನಲ್ಲಿ ಫೋನ್ ಮಾಡುತ್ತಿದ್ದೆವು. ಅದು ಗಾಳಿ ಮಳೆ ಬಂದಾಗ ಡೆಡ್ ಆಗುತ್ತಿತ್ತು, ಆಗ ಬಿಎಸ್ಸೆನ್ನೆಲ್ (ಆಗ ಅದರ ಹೆಸರು ಬಿಎಸ್ಸೆನ್ನೆಲ್ ಆಗಿರಲಿಲ್ಲ) ಸಿಬ್ಬಂದಿ ಬಂದು ಸರಿಗೆ ಜೋಡಿಸಿ ರಿಪೇರಿ ಮಾಡುತ್ತಿದ್ದರು.

2)      ಹಿಂದೆ ಕರೆಂಟು ಹೋದಾಗ ಚಿಮಿಣಿ, ಲಾಟೀನು, ಕ್ಯಾಂಡಲ್ ಉರಿಸುತ್ತಿದ್ದೆವು. ಚಿಮಿಣಿ ದೀಪಕ್ಕೆಂದೇ ಸೀಮೆಎಣ್ಣೆ ಎಂಬ ಎಣ್ಣೆ ಸ್ಟಾಕ್ ಮಾಡಿ ಇಡುತ್ತಿದ್ದೆವು. ಈ ಸೀಮೆ ಎಣ್ಣೆ ರೇಷನ್ ರೂಪದಲ್ಲಿ ಸ್ಟೋರಿನಲ್ಲಿ ಸಿಗ್ತಾ ಇತ್ತು. ಅದರ ಬಣ್ಣ ನೀಲಿ ಆಗಿರಲಿಲ್ಲ...!

3)      ನಾವು ಸಣ್ಣವರಿದ್ದಾಗ ಹಳೆ ನೋಟ್ಸ್ ಪುಸ್ತಕದ ಬಾಕಿ ಖಾಲಿ ಹಾಳೆಗಳನ್ನು ಹರಿದು ಜೋಡಿಸಿ, ಅದನ್ನು ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಬೈಂಡ್ ಮಾಡಿಸಿ ಅಥವಾ ನೂಲಿನಲ್ಲಿ ನಾವೇ ಹೊಲಿದು ರಫ್ ವರ್ಕ್ ಬುಕ್ ಮಾಡುತ್ತಿದ್ದೆವು.

4)      ನಾವು ಸಣ್ಣವರಿದ್ದಾಗ ದೊಡ್ಡ ಮಕ್ಕಳ ಡ್ರೆಸ್ಸುಗಳನ್ನೇ ಸಣ್ಣವರಾದ ನಾವೂ ಧರಿಸಿ ಶಾಲೆಗೆ ಹೋಗುತ್ತಿದ್ದೆವು. ನಾವು ಉದ್ದ ಬೆಳೆದ ಹಾಗೆ ಪ್ಯಾಂಟಿನ ಅಳತೆ ಸರಿದೂಗಿಸಲು ಅದರ ಕಾಲಿನ ಬುಡದ ಪಟ್ಟಿ ಹೊಲಿಗೆ ಬಿಡಿಸುತ್ತಿದ್ದೆವು. ಈ ಮೂಲಕ ಮತ್ತೊಂದು ಇಂಚು ಪ್ಯಾಂಟ್ ಉದ್ದ ಆಗ್ತಾ ಇತ್ತು!.

5)      ಹಿಂದೆ ಮನೆಗೆ ನೆಂಟರು ಬರುವಾಗ ಸೂಚನೆ ಕೊಡುವ ವ್ಯವಸ್ಥೆ ಇರಲಿಲ್ಲ. ಹೆಚ್ಚೆಂದರೆ ಕಾಗದ ಬರೆಯುತ್ತಿದ್ದರು. ತುಂಬ ಸಲ ಆ ಕಾಗದ ತಲುಪುವ ಮೊದಲೇ ಅವರು ಮನೆಗೆ ಬರುವುದೂ ಇತ್ತು. ಎಷ್ಟೇ ನೆಂಟರು ಹೇಳದೇ ಬಂದರೂ ಮನೆ ಮಂದಿಗೆ ಆಗ ಟೆನ್ಶನ್ ಆಗ್ತಾ ಇರಲಿಲ್ಲ.

6)      ನಮ್ಮ ಬಾಲ್ಯದಲ್ಲಿ ಯಾರಾದರೂ ಪೇಟೆಗೆ, ಪ್ರವಾಸಕ್ಕೆ, ನೆಂಟರ ಮನೆಗೆ ಹೋದರೆ ಅವರು ವಾಪಸ್ ಮನೆ ತಲುಪುವ ವರೆಗೆ ಅವರು ತಲುಪಿದ್ರ, ಹೊರಟ್ರ? ಇತ್ಯಾದಿ ಹೇಳುವ ಅವಕಾಶವೇ ಇರಲಿಲ್ಲ. ಯಾಕೆಂದರೆ ಅವರತ್ರ ಮೊಬೈಲ್ ಇರಲಿಲ್ಲ, ಮನೆಗಳಲ್ಲಿ ಲ್ಯಾಂಡ್ ಲೈನ್ ಕೂಡಾ ಇರುತ್ತಿರಲಿಲ್ಲ. ಹೋದವ ಮನೆಗೆ ತಲುಪಿದ ಮೇಲೆಯೇ ವಾಪಸ್ ಬರುವ ಟೈಂ ಗೊತ್ತಾಗುತ್ತಿದ್ದದ್ದು.

7)      ದೊಡ್ಡ ಖರೀದಿ ಮಾಡಬೇಕಾದರೆ ಪೇಟೆಗೇ ಹೋಗಬೇಕಿತ್ತು. ಬೆಳಗ್ಗೆ ಪೇಟೆಗೆ ಹೋದರೆ ಮನೆಗೆ ಮರಳುವಾಗ ರಾತ್ರಿ ಆಗ್ತಾ ಇತ್ತು. ಲೆಕ್ಕದ್ದೇ ಹೋಟೇಲು ಇದ್ದದ್ದು. ಊರಿನ ಜಾತ್ರೆ, ಸಂತೆಗಳು ಇಷ್ಟ ಆಗ್ತಾ ಇದ್ದದ್ದು ಇದೇ ಕಾರಣಕ್ಕೆ, ಸ್ವರ್ಗವೇ ಊರಿಗೆ ಬಂದ ಹಾಗೆ ಭಾಸವಾಗ್ತಾ ಇತ್ತು.

8)      ನಾವು ಸಣ್ಣವರಾಗಿದ್ದಾಗ ಬಾಡಿಗೆಗೆ ಸೈಕಲ್ ಕೊಡುವ ಅಂಗಡಿಗಳಿದ್ದವು. ಗಂಟೆಗೆ ಇಂತಿಷ್ಟು ಅಂತ ಬಾಡಿಗೆ ಕೊಟ್ಟು ಸೈಕಲ್ ರೈಡ್ ಮಾಡಬಹುದಿತ್ತು. ಆ ಅಂಗಡಿಗಳಲ್ಲಿ ಸೈಕಲ್ ರಿಪೇರಿ ಕೂಡಾ ಆಗುತ್ತಿತ್ತು.

9)      ಆಗ ಸಂವಹನ ಜಗತ್ತು ಅಂದ್ರೆ ರೇಡಿಯೋ ಮಾತ್ರ. ರೇಡಿಯೋ ವಾರ್ತೆ, ಚಿತ್ರಗೀತೆ, ಪ್ರದೇಶ ಸಮಾಚಾರ ಕೇಳಿಯೇ ಸುದ್ದಿ ಗೊತ್ತಾಗ್ತಾ ಇದ್ದದ್ದು. ಪೇಪರ್ ಬರ್ತಾ ಇದ್ದದ್ದು ಕೆಲವು ಮನೆಗಳಿಗೆ ಮಾತ್ರ. ಟಿವಿ ಇರ್ತಾ ಇದ್ದದ್ದು ಊರ ಶ್ರೀಮಂತರ ಮನೆಗಳಲ್ಲ ಮಾತ್ರ. ನಾವು ಭಾನುವಾರ ಸಂಜೆ 4 ಗಂಟೆಯ ಸಿನಿಮಾ ನೋಡಲು ಯಾರ್ಯಾರ ಮನೆಗಳಿಗೆ ಹೋಗ್ತಾ ಇದ್ದೆವು. ಟಿವಿ ಇರುವವ ಮನೆಯ ಚಾವಡಿಯಲ್ಲಿ ಕುಳಿತು ಇಡೀ ಸಿನಿಮಾ ನೋಡಿ ಮನೆ ಬರ್ತಾ ಇದ್ದೆವು. ಟಿವಿ ಇರುವವರ ಮನೆ ಮಂದಿಗೆ ನಮ್ಮಿಂದ ಉಪದ್ರ ಆಗ್ತದ ಎಂಬ ಕಲ್ಪನೆ ಆಗ ಇರಲಿಲ್ಲ. ಕ್ರಿಕೆಟ್ ಕಮೆಂಟ್ರಿಯನ್ನು ರೇಡಿಯೋದಲ್ಲೇ ಕೇಳಿ ಸ್ವತಃ ಕ್ರಿಕೆಟ್ ನೋಡಿದ ಖುಷಿ ಅನುಭವಿಸ್ತಾ ಇದ್ದೆವು. ಇಡೀ ಸ್ಟೇಡಿಯಂ ಕಣ್ಣೆದುರು ಬರ್ತಾ ಇತ್ತು!

10)   ಹಿಂದೆ ಯಕ್ಷಗಾನ ಬಯಲಾಟಕ್ಕೆ ಹೋದರೆ ಅರ್ಧದಲ್ಲಿ ಹೊರಟು ಬರುವುದು ಅಂದ್ರೆ ಏನು ಅಂತಲೇ ಗೊತ್ತಿರಲಿಲ್ಲ. ಸ್ವಂತ ವಾಹನ ಇರ್ಲಿಲ್ಲ. ಈಗಿನಂತೆ ಗಡಿಬಿಡಿಯ ಬದುಕೂ ಆದಾಗಿರಲಿಲ್ಲ. ರಾತ್ರಿ ಶುರುವಾದ ಆಟ ಸೂರ್ಯೋದಯದಲ್ಲಿ ಮುಗಿದ ಮೇಲೆ ನಡೆದುಕೊಂಡೆ ಮನೆಗೆ ಮರಳುತ್ತಿದ್ದೆವು. ಆಟಕ್ಕೆ ಜನ ಕೊರತೆ ಆಗುತ್ತಿದ್ದದ್ದು ಅಪರೂಪ. ಆಟದಲ್ಲಿ ಕುರ್ಚಿ ಇರುತ್ತಿರಲಿಲ್ಲ. ನೆಲದಲ್ಲೇ ಕೂತು ಇಡಿ ರಾತ್ರಿ ಆಟ ನೋಡುತ್ತಿದ್ದೆವು. ಆಗ ಊಟ ಕೂಡಾ ಇರುತ್ತಿರಲಿಲ್ಲ.

ಇಂತಹ ನೂರಾರು ಸಂಗತಿ ಪಟ್ಟಿ ಮಾಡುತ್ತಾ ಹೋಗಬಹುದು. ನನ್ನ ಸಮಕಾಲೀನರಿಗೇ ಇದು ಓದುವಾಗ ಹೌದಲ್ವ ಅನ್ನಿಸಲೂ ಬಹುದು. ಯಾಕೆಂದರೆ ನನ್ನ ಸಮಕಾಲೀನರೂ ಆಧುನಿಕ, ಸಮಕಾಲೀನ ಬದುಕಿಗೆ ಒಗ್ಗಿ ಹೋಗಿದ್ದೇವೆ. ಇಷ್ಟು ಮಾತ್ರವಲ್ಲ.... ಇನ್ನಷ್ಟು ಜಿಜ್ಞಾಸೆಗಳಿವೆ:

1)      ಈಗಿನ ಮಕ್ಕಳಿಗೆ ಮರಕ್ಕೆ ಕಲ್ಲೆಸೆದು ಮಾವಿನ ಕಾಯಿ ಕೊಯ್ಯಲು ಗೊತ್ತಿರಬಹುದ?

2)       ಚಪ್ಪಲಿ ಧರಿಸದೆ ನಡೆಯಲು ಸಾಧ್ಯ ಅಂತ ಕಲ್ಪನೆ ಇರಬಹುದ?

3)       ಹಳ್ದೀ, ಬೇಬಿ ಶವರ್, ಪ್ರೀವೆಡ್ಡಿಂಗ್, ಎಂಗೇಜ್ಮೆಂಟ್, ಪೋಸ್ಟ್ ವೆಡ್ಡಿಂಗ್ ಶೂಟಿಂಗ್ ಇತ್ಯಾದಿ ಆಗದೇ ಮದುವೆ ಆಗಲು ಸಾಧ್ಯ ಎಂಬುದು ಗೊತ್ತಿರಬಹುದ?

4)      ಹೋಗುತ್ತಿರುವ ಬಸ್ ಹಾಳಾಗಿ, ಬೇರೆ ವಾಹನ ಸಿಗದೇ ಇದ್ದಾಗ ಒಂದೆರಡು ಕಿ.ಮೀ. ದೂರದ ಮನೆ ತಲುಪುವುದು ಹೇಗೆ ಅಂತ ಈಗಿನ ಮಕ್ಕಳಿಗೆ ಕಲ್ಪನೆ ಇರಬಹುದ

5)      ಪ್ರತಿ ವರ್ಷ ಹೊಸ ಬ್ಯಾಗ್ ತೆಗೆಯದೇ, ಟ್ಯೂಷನ್ ಪಡೆಯದೆ, ಸ್ಕೂಲ್ ಬಸ್ಸೇ ಇಲ್ಲದೆ, ಸಿಇಟಿ ಬರೆಯದೆ, ಅಸೈನ್ಮೆಂಟ್ ಮಾಡದೇ ಹಿಂದಿನವರು ಶಾಲಾ ದಿನಗಳನ್ನು ಕಳೆದಿದ್ದಾರೆ ಅಂದರೆ ನಂಬಬಹುದಾ?

6)      ಮದರ್ಸ್ ಡೇ, ಫಾದರ್ಸ್ ಡೇ, ಗರ್ಲ್ ಚೈಲ್ಡ್ ಡೇ, ಮೆನ್ಸ್ ಡೇ, ವೆಲಂಟೈನ್ಸ್ ಡೇ, ಫ್ರೆಂಡ್ಶಿಪ್ ಡೇ ಪುರಾಣ ಕಾಲದಲ್ಲಿ ಇರಲಿಲ್ಲ. ಅವುಗಳ ಔಚಿತ್ಯವೂ ನಮಗೆ ಗೊತ್ತರಲಿಲ್ಲ ಅಂದರೆ ನಂಬಬಹುದ?

ಇಂತಹ ಸುಮಾರು ಜಿಜ್ಞಾಸೆಗಳಿವೆ... ಚಿಮಿಣಿ ದೀಪದ ಬದುಕು ಅದ್ಭುತ ಅಂತ ಅನ್ನಿಸುವುದಾದರೇ ಇಷ್ಟೆಲ್ಲ ಸಂಗತಿಗಳು ಕಾಡಲೇ ಬೇಕು ಅಲ್ವ. ನೀವೇನಂತೀರಿ?

-ಕೃಷ್ಣಮೋಹನ ತಲೆಂಗಳ (25.11.2025)

No comments:

Popular Posts