ಇಂದಿನ ಪತ್ರಿಕೆಯ ಹಿಂದೆ ಒಂದು ದಿನದ ತಯಾರಿ!


ಬೆಳ್ಳಂಬೆಳಗ್ಗೆ ಕಂಪೌಂಡಿಂಗೋ, ಮನೆಯ ಬಾಗಿಲಿಗೋ ಬಂದು ಬೀಳುವ ಪೇಪರು (ವೃತ್ತ ಪತ್ರಿಕೆ) ಒಂದು ದಿನ ಸ್ವಲ್ಪ ವಿಳಂಬವಾದರೆ ಎಷ್ಟು ಕಿರಿಕಿರಿ ಅನಿಸುತ್ತದೆ ಅಲ್ವ...ನಾಲ್ಕೋ, ಐದೋ ರುಪಾಯಿಗೆ ಮನೆ ಬಾಗಿಲಿಗೇ ಬರುವ ಪತ್ರಿಕೆಯ ಹಿಂದೆ ಎಷ್ಟು ಮಂದಿ ಕೆಲಸ ಮಾಡಿರ್ತಾರೆ ಗೊತ್ತಾ... ಹಾಗೆ ನೋಡುವುದಕ್ಕೆ ಹೋದರೆ ದಿನದ 24 ಗಂಟೆಯೂ ಆ ದಿನದ ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ...

ಇಡೀ ದಿನ ಪತ್ರಿಕೆಯ ತಯಾರಿ ನಡೆಯುವುದು ಹೇಗೆ

ಇಂದು ಪತ್ರಿಕಾ ದಿನಾಚರಣೆ ಆದ ಕಾರಣ ಹೇಳುವ ಅಂತಾಯ್ತು...



ಬೆಳಗ್ಗೆ ನಿಗದಿ ಪಡಿಸಿದ ಅಸೈನ್ ಮೆಂಟ್ (ಪತ್ರಿಕಾಗೋಷ್ಠಿಯೋ, ವಿಶೇಷ ವರದಿಯೋ, ಸಮಾರಂಭವೋ, ಗಣ್ಯರ ಭೇಟಿಯೋ) ನಿರ್ವಹಿಸಲು ವರದಿಗಾರರು ಮನೆಯಿಂದ ಹೊರಡುತ್ತಾರೆ. ಸಂಜೆಯ ತನಕವೂ ವರದಿಗಾರರು ಅಲ್ಲಿಲ್ಲಿ ಸುತ್ತಾಡಿ ವರದಿಗಳಿಗೆ ಬೇಕಾದ ಅಂಶಗಳನ್ನು ಸಂಗ್ರಹಿಸುತ್ತಾರೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಇರುವ ಸುದ್ದಿ ಸಂಗ್ರಾಹಕರು ಕೂಡಾ ಇದೇ ಥರ ಇಡೀ ದಿನ ಸುದ್ದಿಗಳನ್ನು ಸಂಗ್ರಹಿಸಿ ಕಚೇರಿಗೆ ಮಿಂಚಂಚೆ ಮೂಲಕ ರವಾನಿಸುತ್ತಾರೆ. ಪ್ರಕ್ರಿಯೆ ರಾತ್ರಿ ವರೆಗೂ ನಡೆಯುತ್ತದೆ. ಮಧ್ಯಾಹ್ನದ ಬಳಿಕ ಕಚೇರಿಗೆ ಸುದ್ದಿಮನೆಯ ಪತ್ರಕರ್ತರು (ಉಪಸಂಪಾದಕರು, ಪುಟ ವಿನ್ಯಾಸಕಾರರು, ಪ್ರೂಫ್ ರೀಡರ್ ಗಳು) ಆಗಮಿಸುತ್ತಾರೆ. ಮಧ್ಯಾಹ್ನ ಅಥವಾ ಸಂಜೆ ಸುದ್ದಿಮನೆಗೆ ಬರುವ ಉಪಸಂಪಾದಕರು ಮಧ್ಯರಾತ್ರಿ ಅಥವಾ ತಡರಾತ್ರಿ ತನಕ ದುಡಿಯುತ್ತಾರೆ. ವಿವಿಧ ಮೂಲಗಳಿಂದ ಬಂದು ಬೀಳುವ ಸುದ್ದಿಗಳನ್ನು ಎಡಿಟ್ ಮಾಡಿ, ಸೂಕ್ತ ಶೀರ್ಷಿಕೆ ನೀಡಿ ಫೈಲ್ ಗಳ ರೂಪದಲ್ಲಿ ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ. ಬಂದ ಸುದ್ದಿಗಳಿಗೆ ಪೂರಕ ಮಾಹಿತಿ ಬೇಕಿದ್ದಲ್ಲಿ ತರಿಸಿಕೊಳ್ಳುವುದು, ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ಸುದ್ದಿಯನ್ನು ಇನ್ನಷ್ಟು ಒಪ್ಪ ಓರಣವಾಗಿಸಿ ಸುದ್ದಿಯ ಮೌಲ್ಯವರ್ಧನೆ ಮಾಡುವುದೂ ಕೂಡಾ ಸುದ್ದಿಮನೆಯ ಪತ್ರಕರ್ತರೇ...
ದೇಶ, ವಿದೇಶಗಳ ಸುದ್ದಿಗಳನ್ನು ತರ್ಜುಮೆ ಮಾಡುವುದು, ವಿಶೇಷ ಲೇಖನ, ಅಂಕಣಳು, ದಿನ ಭವಿಷ್ಯ, ಸುಡೋಕು, ಮಾರುಕಟ್ಟೆ, ಶೇರು ಧಾರಣೆ ಇತ್ಯಾದಿಗಳನ್ನು ಜೋಡಿಸುವ ಕೆಲಸವೂ ಸುದ್ದಿ ಮನೆಯಲ್ಲೇ ನಡೆಯುತ್ತದೆ.
ಸಂಜೆ ಅಥವಾ ಮುಸ್ಸಂಜೆಯ ಬಳಿಕ ಸಿದ್ಧವಾದ ಸುದ್ದಿಯ ಫೈಲ್ ಗಳನ್ನು ಪುಟಗಳಲ್ಲಿ ಕೂರಿಸಿ ಪುಟ ವಿನ್ಯಾಸ ಕೆಲಸ ಶುರುವಾಗುತ್ತದೆ. ಉಪಸಂಪಾದಕರು ಮತ್ತು ಪುಟ ವಿನ್ಯಾಸಕಾರರು ಕೆಲಸ ನಿರ್ವಹಿಸುತ್ತಾರೆ. ಕೆಲಸಗಳ ಜವಾಬ್ದಾರಿಯ ಉಸ್ತುವಾರಿ ನಿಭಾಯಿಸಲು ಸುದ್ದಿ ಸಂಪಾದಕರು, ಆವೃತ್ತಿ ಮುಖ್ಯಸ್ಥರು ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಮುಖ್ಯಸ್ಥರಿರುತ್ತಾರೆ. ಧ್ಯರಾತ್ರಿ ಅಥವಾ ತಡರಾತ್ರಿ (ಪುರವಣಿಗಳು ಸಂಜೆಯೇ ಮುದ್ರಣಕ್ಕೆ ಹೋಗುತ್ತವೆ) ಪುಟಗಳನ್ನು ಸಿದ್ಧಪಡಿಸಿ ಮುದ್ರಣಾಲಯಕ್ಕೆ ಕಳುಹಿಸುವ ವರೆಗಿನ ಜವಾಬ್ದಾರಿ ಸುದ್ದಿಮನೆಯ ಪತ್ರಕರ್ತರಿಗೆ. ನಂತರ ಶುರುವಾಗುವುದು ಮುದ್ರಣಾಲಯಲ್ಲಿರುವ ಸಿಬ್ಬಂದಿಯ ಕೆಲಸ.

ಪುರವಣಿಗಳನ್ನು ಹೊರತುಪಡಿಸಿ, ತಡರಾತ್ರಿಯಿಂದ ಬೆಳಗ್ಗಿನ ಜಾವದ ನಡುವೆ ಆಯಾ ಪತ್ರಿಕೆಯ ಡೆಡ್ ಲೈನ್ ಗಳಿಗೆ ಅನುಗುಣವಾಗಿ ಪತ್ರಿಕೆ ಅಚ್ಚಾಗಿ ಸಿದ್ಧವಾಗುತ್ತದೆ. ಅಚ್ಚಾಗಿ ಸಿದ್ಧವಾದ ಪತ್ರಿಕೆಯನ್ನು ಕಟ್ಟುಗಳನ್ನಾಗಿ ಮಾಡಲು ಪ್ರತ್ಯೇಕ ಸಿಬ್ಬಂದಿಯಿರುತ್ತಾರೆ. ಆಯಾ ಊರುಗಳಿಗೆ ಹೋಗಬೇಕಾದ ಪತ್ರಿಕೆಗಳನ್ನು ಪ್ರಸಾರ ಸಂಖ್ಯೆಗೆ ಅನುಗುಣವಾಗಿ ಕಟ್ಟಿ ಲೇಬಲ್ ಹಚ್ಚಿ ವಿವಿಧ ಊರುಗಳಿಗೆ ತೆರಳುವ ವಾಹನಗಳಿಗೆ ತುಂಬಿಸಿ ಬಿಟ್ಟರೆ ಅವರ ಜವಾಬ್ದಾರಿ ಮುಗಿಯಿತು.

ನಂತರದ ಪ್ರಸಾರದ ಹೊಣೆ ಆಯಾ ವಾಹನ ಚಾಲಕರದ್ದು, ಮುದ್ರಣಾಲಯದಿಂದ ವಿವಿಧ ಊರುಗಳಿಗೆ ವಾಹನದಲ್ಲಿ ತಡರಾತ್ರಿ ಹೊರಟು ಬೆಳಗ್ಗಿನ ಜಾವದ ತನಕ ಪತ್ರಿಕೆಗಳನ್ನು ಆಯಾ ಊರುಗಳಿಗೆ ತಲುಪಿಸುವ ಕೆಲಸ ನಡೆಯುತ್ತದೆ. ಕೊನೆಯ ಪಾಯಿಂಟ್ ತನಕ ಪತ್ರಿಕೆಯ ಕಟ್ಟುಗಳನ್ನು ತಲುಪಿಸುವ ಜವಾಬ್ದಾರಿ ಚಾಲಕರದ್ದು. ಪತ್ರಿಕೆಯ ವಾಹನದಲ್ಲಿ ಪತ್ರಿಕೆಯ ಕಟ್ಟು ಬಂದಾಕ್ಷಣ ಸ್ವೀಕರಿಸಿ ಹಂಚುವ ಹೊಣೆ ಪತ್ರಿಕಾ ವಿತರಕದ್ದು. ಮಳೆ ಇರಲಿ, ಚಳಿ ಇರಲಿ ಬೆಳಗ್ಗಿನ ಜಾವ 4-5 ಗಂಟೆಗೆಲ್ಲಾ ಅಂಗಡಿಗೆ ಬಂದು ಪತ್ರಿಕೆಯ ಕಟ್ಟುಗಳನ್ನು ಬಿಡಿಸಿ ಓರಣವಾಗಿಡುತ್ತಾರೆ. ಮನೆ ಮನೆಗೆ ಪತ್ರಿಕೆ ಹಾಕುವ ಹುಡುಗರ ಕೈಗೆ ಅದನ್ನು ನೀಡುತ್ತಾರೆ. ಇಷ್ಟು ಹೊತ್ತಿಗೆ ಸೂರ್ಯೋದಯವಾಗಲು ಶುರುವಾಗಿರುತ್ತದೆ. ಪತ್ರಿಕಾ ವಿತರಕ ಹುಡುಗರ ಮೂಲಕ ಪತ್ರಿಕೆ ನಿಮ್ಮ ಮನೆ ಬಾಗಿಲಿಗೆ ಬಂದು ಬಿದ್ದಿರುತ್ತದೆ. ನೀವು ನಿದ್ರೆಯಿಂದ ಎದ್ದು ಕಾಫಿ ಹೀರುತ್ತಾ ಪತ್ರಿಕೆ ಓದುವ ಹೊತ್ತಿಗೆ...ದಿನ ಬದಲಾಗಿರುತ್ತದೆ. ವರದಿಗಾರ ತನ್ನ ಮನೆಯಿಂದ ಹೊರಟಿರುತ್ತಾನೆ... ಅಂದಿನ ವರದಿಗಳನ್ನು ಸಿದ್ಧ ಪಡಿಸಲು. ಹೀಗೆ... ದಿನಪೂರ್ತಿ ಸರದಿಯಂತೆ ನಡೆಯುವ ಪ್ರಕ್ರಿಯೆಗಳ ಮೂಲಕ ಪತ್ರಿಕೆ ನಿಮ್ಮ ಮನೆ ತಲುಪಿರುತ್ತದೆ.


ಇಷ್ಟು ಮಾತ್ರವಲ್ಲ. ಭಾನುವಾರದ ವಿಶೇಷ ಪುರವಣಿ, ಕೃಷಿ, ಮಹಿಳೆ, ಯುವಜನತೆ, ಸಿನಿಮಾ ಇತ್ಯಾದಿ ಇತ್ಯಾದಿ ಪ್ರತಿದಿನದ ವಿಶೇಷ ಪುಟಗಳನ್ನು ಸಿದ್ಧಪಡಿಸಲು ಪ್ರತ್ಯೇಕ ಪುರವಣಿ ವಿಭಾಗ ಹಾಗೂ ಅದಕ್ಕೆ ಮುಖ್ಯಸ್ಥರು ಇರುತ್ತಾರೆ. ಲೇಖನಗಳನ್ನು ತಜ್ಞರಿಂದ ತರಿಸುವುದು, ಸ್ವತಹ ಲೇಖನ, ಸಿನಿಮಾ ವಿಮರ್ಶೆಗಳನ್ನು ಸಿದ್ಧಪಡಿಸುವುದು, ಒಪ್ಪ ಓರಣವಾಗಿ ಪುಟ ಸಿದ್ಧಪಡಿಸುವುದು ಇತ್ಯಾದಿ ಜವಾಬ್ದಾರಿಗಳು ಪುರವಣಿ ವಿಭಾಗದವರಿಗೆ ಇರುತ್ತದೆ. ದಿನದ ಇತರ ಪುಟಗಳನ್ನು ಸಿದ್ಧಪಡಿಸುವವರ ಟೈಮಿಂಗ್ಸ್ ಗೂ ಪುರವಣಿ ಪುಟ ಸಿದ್ಧಪಡಿಸುವವರ ಟೈಮಿಂಗ್ಸ್ ಗೂ ವ್ಯತ್ಯಾಸವಿದೆ.

ಒಬ್ಬ ವರದಿಗಾರ, ಒಬ್ಬ ಉಪ ಸಂಪಾದಕನಿದ್ದಲ್ಲಿಗೆ ಪತ್ರಿಕೆ ಹೊರ ಬರುವುದಿಲ್ಲ. ಇಷ್ಟೆಲ್ಲಾ ಮಂದಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪತ್ರಿಕೆಗಳು ಹುಟ್ಟುವಲ್ಲಿ ಶ್ರಮಿಸುತ್ತಾರೆ. ವರ್ಷದಲ್ಲಿ ಮೂರು ನಾಲ್ಕು ದಿನ ಹೊರತುಪಡಿಸಿದರೆ ಇಡೀ ವರ್ಷ ಪತ್ರಿಕೆಗಳಿಗೆ ರಜೆಯೆಂಬುದೇ ಇಲ್ಲ. ಒಬ್ಬರಲ್ಲದಿದ್ದರೆ ಒಬ್ಬರು ಪತ್ರಿಕೆಯನ್ನು ಹೊರ ತರಲೇ ಬೇಕು. ಇಷ್ಟು ಮಂದಿ ಮಾತ್ರವಲ್ಲ, ಪ್ರಸರಣ ವಿಭಾಗದವರು, ಪತ್ರಿಕೆಗೆ ಜಾಹೀರಾತು ತರುವ ಸ್ಪೇಸ್ ಮಾರ್ಕೆಟಿಂಗ್ ವಿಭಾಗದವರು, ಆಡಳಿತ ವಿಭಾಗದವರು ಕೂಡಾ ಪತ್ರಿಕೆಯ ಹೊರತರುವಲ್ಲಿ ಶ್ರಮಿಸುತ್ತಾರೆ. ಇವರ್ಯಾರೂ ಪತ್ರಿಕೆಯ ಓದುಗರೆದುರು ಕಾಣಿಸಿಕೊಳ್ಳುವುದಿಲ್ಲ.


ಬೇರೆ ವೃತ್ತಿಗಳಲ್ಲಾದರೆ ಪ್ರವಾಹ ಬಂದರೆ, ಗಲಭೆ ನಡೆದರೆ, ಮುಷ್ಕರ ನಡೆದರೆ ರಜೆ ನೀಡಲಾಗುತ್ತದೆ. ಕಚೇರಿಗೆ ಬಂದವರು ಮನೆಗೆ ಹೋಗುತ್ತಾರೆ. ಆದರೆ ಪತ್ರಕರ್ತರಿಗೆ ಹಾಗಲ್ಲ. ಇಂತಹ ದಿನಗಳಲ್ಲಿ ಸುದ್ದಿಗಳು ಜಾಸ್ತಿ. ಹೇಗಾದರೂ ಕಚೇರಿಗೆ ಬರಲೇಬೇಕು. ಇತರರು ಭಾನುವಾರ, ಸರ್ಕಾರಿ ರಜಾ ದಿನಗಳಂದು ರಜೆ ಮೂಡ್ ನಲ್ಲಿ ಇರುತ್ತಾರೆ. ಆದರೆ ಪತ್ರಕರ್ತರಿಗೆ ಭಾನುವಾರ ರಜೆ ಎಂಬುದಿಲ್ಲ. ಯಾಕೆಂದರೆ ಸೋಮವಾರ ಪತ್ರಿಕೆ ಹೊರಬರಲೇ ಬೇಕು. ಕನ್ನಡ ಪತ್ರಿಕೆಗಳಿಗೆ ಸದ್ಯ ವರ್ಷದಲ್ಲಿ ನಾಲ್ಕು ದಿನ ಮಾತ್ರ ಮುಚ್ಚಿದ ರಜೆ ಇರುತ್ತದೆ. ಉಳಿದಂತೆ ಸುದ್ದಿಮನೆಯವರು, ವರದಿಗಾರರು ದಿನಕ್ಕೊಬ್ಬರಂತೆ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರಿಗೂ ಭಾನುವಾರ ರಜೆ ನೀಡಲಾಗುವುದಿಲ್ಲ. ಹಾಗಾಗಿ ಸರ್ಕಾರಿ ರಜೆಗಳಂದು, ಭಾನುವಾರ, ಜಾಸ್ತಿ ಮಳೆ ಇದೆ, ನೆರೆಯಿದೆ ಎಂದೆಲ್ಲ. ಪತ್ರಿಕೆ ಕೆಲಸ ಮಾಡುವುದೇ ಹಾಗೆ. ಉಳಿದವರೆಲ್ಲ ವಿಶ್ರಾಂತಿಯಲ್ಲಿರುವಾಗ, ಮಲಗಿರುವಾಗ ಸುದ್ದಿಮನೆ ಜಾಗೃತವಾಗಿರುತ್ತದೆ....


ಬಹಳಷ್ಟು ಮಂದಿ ಪೇಪರ್ ಓದುವಾಗ, ಮತ್ತೆ ರದ್ದಿಗೆ ಹಾಕುವಾಗ ಇಷ್ಟೆಲ್ಲ ಅಂಶಗಳ ಕುರಿತು ಯೋಚಿಸಿರುವುದಿಲ್ಲ. ಹಾಗಾಗಿ ಹಾಗೇ ಸುಮ್ಮನೆ ನಿಮ್ಮ ಗಮನಕ್ಕೆ... ಪತ್ರಿಕೆ ಅಚ್ಚಾಗಿ ಬರುವುದರ ಹಿಂದೆ ಇಷ್ಟೆಲ್ಲ ಶ್ರಮ ಇದೆ ಎಂಬುದು ಮುಂದೆ ಪತ್ರಿಕೆ ಓದುವಾಗ ನಿಮ್ಮ ಗಮನದಲ್ಲಿರಲಿ...


-ಕೃಷ್ಣಮೋಹನ.

2 comments:

Unknown said...

Very nice and creative write up. Great. Unknown soldier

Poornima kamath A said...

ಎಷ್ಟೊಂದು ಜನರ ಅವಿರತ ಶ್ರಮದ ಫಲಶ್ರುತಿ ನಾವು ದಿನನಿತ್ಯ ಓದುವ ಪತ್ರಿಕೆ?? Really great work. I don't have any words to express it.I salute all the officials,journalists and the people who work hard directly & indirectly daily behind it.Your writeup is too good Sir.