ಮಳೆ ಕನವರಿಕೆ...!








ಮಳೆ ಸುರಿಯಬೇಕು
ಭೂಮಿ ತೋಯ್ದು
ಎಲ್ಲ ತೊಳೆದು, ನೆಲವೇ ಕಾಣದಂತೆ
ನೆನೆದು ಮೃದುವಾಗಿಸಿ
ಒಳಗಿಳಿದು ಮತ್ತೆ ಉಕ್ಕಿ ಹರಿಯುವಷ್ಟು ಹೊತ್ತು

ಹತ್ತಿರದ ಮರ ಮಟ್ಟುಗಳೇ
ಕಾಣದಷ್ಟು ದಟ್ಟ ಮಂಜು ಕವಿದು
ಸುತ್ತಲಷ್ಟು ದೂರ ತೆಳು ಹೊಗೆ ಆವರಿಸಿ
ಗಾಳಿಯ ರಭಸಕ್ಕೆ ಕಿವಿ ಕಿವುಡಾಗಿ
ಒಂದಷ್ಟು ಹೊತ್ತು ಏಕಾಂತ ಸುತ್ತುವರಿಯಬೇಕು


ಆಚೆ, ಅದರಾಚೆಗೂ
ಕಪ್ಪು ಮೋಡಗಳೇ ತುಂಬಿ
ಬೆಟ್ಟದ ತುತ್ತತುದಿಲಿ ಮಳೆ ನರ್ತನ
ಮೈಲಿಗಟ್ಟಲೆ ದೂರಕ್ಕೆ
ಮಳೆ ಹರಡುವ ಸದ್ದು ಪ್ರತಿಧ್ವನಿಸಬೇಕು....

ದಿನಾ ನೋಡುವ ಅಂಗಳದಲ್ಲೇ
ಸರೋವರ ಸೃಷ್ಟಿಯಾಗಿ
ಕಾಲುವೆಗಳೆಲ್ಲ ಹುಟ್ಟಿಕೊಂಡು
ಕಾಗದದ ದೋಣಿ ಬಿಡುವಷ್ಟು
ಪ್ರವಾಹಕ್ಕೆ ಬೆಚ್ಚಗಿನ ಚಳಿ ಸಾಥ್ ನೀಡಬೇಕು...


ಬೆಳಗು ಸಂಜೆಯಾಗಿದ್ದು
ಗೊತ್ತಾಗದೆ, ಹೊತ್ತು ತಾನು
ಬೆಚ್ಚಗೆ ಹೊದ್ದು ಮಲಗಿ,
ಮಳೆಗೆ ಶರಣಾಗಿ...
ಕಾಲಾತೀತವಾಗಿ ಮಳೆ ಬರುತ್ತಲೇ ಇರಬೇಕು...

ಬೈಕಿನ ಚಕ್ರಕ್ಕೆ ಸಿಲುಕಿದ
ಕೆಂಪು ನೀರಿನ ಬುಗ್ಗೆ ಅಷ್ಟೆತ್ತರಕ್ಕೆ ಹಾರಿ
ಬೀಸು ಗಾಳಿಯೊಂದಿಗೆ ಹೆಲ್ಮೆಟ್ಟನ್ನೂ ತೂರಿ
ಬರುವ ರಭಸದ ಹನಿ
ಜಲಮಾರ್ಗದ ಸವಾರಿಯ. ಖುಷಿಯ ಹೊತ್ತು ತರಬೇಕು....



ವಾಟ್ಸಪ್ಪಿನ ಸ್ಟೇಟಸುಗಳಲ್ಲಿ
ಹವಾಮಾನ ಇಲಾಖೆಯ ಭವಿಷ್ಯದಲ್ಲಿ
ಬಂದೂ ಬಾರದ ಮಳೆ,
ನೆನಪಾಗಿ ಕಾಡುವ ಬದಲು
ಒನಪಾಗಿ ಸುರಿದು ಮತ್ತೊಂದು ಕವನವಾಗಬಾರದೇಕೆ


-ಕೃಷ್ಣಮೋಹನ ತಲೆಂಗಳ.



No comments: