ಸಾವಿಗೆ ಕಾರಣ ಸಾವಿರಾರು... ಸಾವಿನ ಹಿಂದಿನ ಒತ್ತಡಗಳೂ ಸಾವಿನೊಂದಿಗೇ ಸಾಯುತ್ತವೆಯೇ?! I DEATH

 




ಅವನೊಬ್ಬ ಶ್ರಮಜೀವಿ. ಬಡತನದಲ್ಲೇ ಹುಟ್ಟಿದರೂ ಕಷ್ಟಪಟ್ಟು ಬದುಕು ಕಟ್ಟಿಕೊಂಡಾತ. ಸ್ವಂತ ಉದ್ಯಮದಲ್ಲಿ ನೆಲೆ ಕಂಡು ಗಟ್ಟಿಯಾಗುತ್ತಾ ಬರುವ ಹಂತದಲ್ಲಿದ್ದ, ಹಲವು ಮಂದಿಗೆ ಉದ್ಯೋಗದಾತನೂ ಆಗಿದ್ದ. ಹಗಲಿರುಳು ದುಡಿಯುವಷ್ಟು ಕೆಲಸ ಇತ್ತು. ಗೌರವದ ಬದುಕು ಸಹ. ಆದರೂ ಕೆಲ ಸಮಯದಿಂದ ಆಸಿಡಿಟಿ ಥರ ಸಣ್ಣ ಪುಟ್ಟ ಸಮಸ್ಯೆ, ಎದೆ ಉರಿ ಇತ್ಯಾದಿಗಳಿದ್ದವು. ನಿದ್ರೆ, ಆಹಾರದ ವ್ಯತ್ಯಯ ಮತ್ತು ಒತ್ತಡಗಳಿಂದ ಸಹಜವಾಗಿ ಇಂಥದ್ದೆಲ್ಲ ಕಾಣಿಸಿಕೊಳ್ಳುವುದಲ್ಲದೆ, ಈ ಬಗ್ಗೆ ಅರಿವಿದ್ದ ಆತ ಹಲವು ಬಾರಿ ತಜ್ಞ ವೈದ್ಯರ ಬಳಿಗೇ ಹೋಗಿ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದ. ಆತಂಕವೇನೂ ಇಲ್ಲವೆಂದು ಸಮಾಧಾನದಿಂದ ಇದ್ದ.

ಎರಡು ದಿನಗಳಿಂದ ಆತನಿಗೆ ಕೆಲಸದ ಒತ್ತಡ ಜಾಸ್ತಿ ಇತ್ತು, ನಿಗದಿತ ಅವಧಿಯಲ್ಲಿ ಹಲವು ಕೆಲಸ ಪೂರ್ತಿಗೊಳಿಸಬೇಕಾದ ಒತ್ತಡವಿತ್ತು. ಈ ನಡುವೆ ಎರಡು ದಿನಗಳಿಂದ ಎಡದ ಭುಜ, ಕೈ ನೋವಿತ್ತು, ಆದರೂ ಕೆಲಸ ಕಡಿಮೆ ಇರಲಿಲ್ಲ. ಸಹಾಯಕರಲ್ಲಿ, ಸ್ನೇಹಿತರಲ್ಲಿ ಭುಜ ನೋವಿನ ಬಗ್ಗೆ ಹೇಳಿದ್ದ. ಹಿಂದಿನ ದಿನ ರಾತ್ರಿ ಸರಿಯಾಗಿ ನಿದ್ರೆಯೂ ಬಂದಿರಲಿಲ್ಲ. ಮರುದಿನ ಕೆಲಸದ ನಡುವೆಯೂ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸ್ಥಳೀಯ ಪಾಲಿ ಕ್ಲಿನಿಕ್ಕಿಗೆ ತೆರಳಿ ಇಸಿಜಿ ಮಾಡಿಸಿದ್ದ (ಪರಿಚಿತರದ್ದೇ ಕ್ಲಿನಿಕ್). ಅಲ್ಲಿನ ವಿಸಿಟಿಂಗ್ ಡಾಕ್ಟರ್ ಸಂಜೆ ಬರುವುದಾದರೂ ತಕ್ಷಣ ಇಸಿಜಿ ವರದಿಯನ್ನು ವೈದ್ಯರಿಗೆ ಸಿಬ್ಬಂದಿ ಕಳುಹಿಸಿದ್ದರು. ವೈದ್ಯರು ವರದಿ ಗಮನಿಸಿ ಈ ವರದಿಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಒಂದು ಸಲ ಇಕೋ ಮಾಡಿಸಿ ಅಥವಾ ಹೆಚ್ಚಿನ ತಪಾಸಣೆ ಮಾಡಿಸಿ ಅಂತ ಸಲಹೆ ನೀಡಿದ್ದರು. ಆಗ ಈತ ಇಲ್ಲ, ನಿನ್ನೆ ಸ್ವಲ್ಪ ಭಾರಕ್ಕೆ ಹೆಗಲು ಕೊಟ್ಟಿದ್ದೆ, ಹಾಗೆ ಭುಜನೋವಿದೆ ಅಷ್ಟೇ, ಬೇರೇನೂ ಇಲ್ಲ, ನನಗೆ ಸಂಜೆಯ ಮೊದಲು ಮುಗಿಸಲೇಬೇಕಾದ ಅನಿವಾರ್ಯ ಕೆಲಸಗಳಿವೆ, ಸಂಜೆ ಕೆಲಸ ಮುಗಿದ ಮೇಲೆ ವೈದ್ಯರನ್ನು ಕಾಣತ್ತೇನೆಅಂತ ಹೇಳಿ ಮನೆಗೆ ತೆರಳಿದ್ದ,

ಬಳಿಕ, ಅದೇ ಸ್ಥಿತಿಯಲ್ಲಿ ಸಂಜೆ 6 ಗಂಟೆ ವರೆಗೂ ಕೆಲಸ ಮಾಡಿದ್ದ. ನಡುವೆ ಮೆಡಿಕಲ್ಲಿಗೆ ಜನ ಕಳುಹಿಸಿ ನೋವಿನ ಮಾತ್ರೆ ತಂದು ತಿಂದಿದ್ದ. ಸಂಜೆ 6 ಗಂಟೆ ವೇಳೆಗೆ ಆತನ ಮನೆ ಪಕ್ಕದಲ್ಲೇ ಇರುವ ಪಾಲಿ ಕ್ಲಿನಿಕ್ಕಿಗೆ ತಜ್ಞ ವೈದ್ಯರು ಬರುವ ಹೊತ್ತು. ಬಹುಶಃ ಆ ಹೊತ್ತಿಗೆ ಆತನ ಕೆಲಸಗಳೂ ಮುಗಿದಿವೆ ಅಂತ ಕಾಣಿಸುತ್ತದೆ. ಪಾಲಿ ಕ್ಲಿನಿಕ್ಕಿನ ಸಿಬ್ಬಂದಿಗೆ ಕರೆ ಮಾಡಿ ವೈದ್ಯರು ತಲುಪಿದರ?” ಅಂತ ಸಂಜೆ 6 ಗಂಟೆ ಹೊತ್ತಿಗೆ ಕರೆ ಮಾಡಿ ಕೇಳಿದ್ದಾನೆ, ಇನ್ನೇನು ತಲುಪಲು ಆಯ್ತು ಅಂತ ಅವರು ತಿಳಿಸಿದ್ದಾರೆ. ಅದಾಗಿ ನಾಲ್ಕು ನಿಮಿಷಗಳ ಬಳಿಕ ಮತ್ತೆ ವೈದ್ಯರು ಬಂದ್ರಾ?” ಅಂತ ಕೇಳಿದ್ದಾನೆ... ಬರುವ ಹೊತ್ತಾಯ್ತು ಆಂತ ಸಿಬ್ಬಂದಿ ಉತ್ತರಿಸಿದ್ದಾರೆ. ಅಷ್ಟೇ... ಆ ಕರೆಯೇ ಕೊನೆ.

ಬಹುಶಃ ನಂತರ ವೈದ್ಯರನ್ನು ಕಾಣಲು ಹೊರಟಿದ್ದ ಅಂತ ಕಾಣಿಸ್ತದೆ. ತಕ್ಷಣ ಕುಸಿದಿದ್ದಾನೆ. ಅಲ್ಲೇ ಇದ್ದ ಸಹಾಯಕರು ತಕ್ಷಣ ಪಾಲಿ ಕ್ಲಿನಿಕ್ಕಿಗೆ ಕರೆದೊಯ್ದು, ಅದಾಗಲೇ ತಲುಪಿದ್ದ ವೈದ್ಯರಿಗೆ ತೋರಿಸಿದ್ದಾರೆ, ವಿಷಯ ಗಂಭೀರವಾಗಿರುವುದ ಅರಿತ ವೈದ್ಯರು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದು ಸುಮಾರು 10 ನಿಮಿಷಗಳ ಹೊತ್ತಿಗೆ ಉಸಿರು ನಿಂತಾಗಿದ್ದು, ಬಹುಶಃ ಕುಸಿದು ಅರ್ಧ ಗಂಟೆಯೊಳಗೆ ಸಾವು ದೃಢಪಟ್ಟಿತ್ತು...!

ಈ ವಿಚಾರವನ್ನು ಹೇಗೆ ವಿಶ್ಲೇಷಣೆ ಮಾಡಬೇಕೋ ಗೊತ್ತಿಲ್ಲ. ಮಧ್ಯಾಹ್ನ 1 ಗಂಟೆಗೇ ತನ್ನ ಆರೋಗ್ಯದಲ್ಲಿ ವ್ಯತ್ಯಾಸ ಇರುವುದು ಆತನಿಗೆ ತಿಳಿದಿತ್ತು. ಸ್ವತಃ ವೈದ್ಯರೇ ಹೆಚ್ಚಿನ ತಪಾಸಣೆಯ ಅಗತ್ಯವನ್ನೂ ಹೇಳಿದ್ದರು. ಆತ ಕುಸಿದದ್ದು ಸಂಜೆ 6ರ ಬಳಿಕ. ದೇವರು ಆತನಿಗೆ ವೈದ್ಯರ ಭೇಟಿಯಾಗಲು ಸುಮಾರು ಐದು ಗಂಟೆ ಅವಧಿ ನೀಡಿದ್ದರು. ಈ ನಡುವೆ ಆತ ಒಪ್ಪಿಕೊಂಡಿದ್ದ ಕೆಲಸವನ್ನೂ ಮಾಡಿಕೊಡಬೇಕಾಗಿದ್ದ ಹೊಣೆ ಆತನಿಗಿತ್ತು. 6 ಗಂಟೆಗೆ ವೈದ್ಯರು ಕ್ಲಿನಿಕ್ಕಿಗೆ ಬಂದದ್ದೂ, ಆತ ಮನೆಯಲ್ಲಿ ಕುಸಿದದ್ದೂ ಬಹುಶಃ ಏಕಕಾಲಕ್ಕೇ ಸಂಭವಿಸಿದೆ. ಆತನಿಗೆ ವೈದ್ಯರ ವರೆಗೆ ಹೋಗುವ ಯೋಗವೇ ಇರಲಿಲ್ಲವೋ, ಆಯುಷ್ಯ ಇದದ್ದೇ ಅಷ್ಟೆಯೋ, ಗೊತ್ತಿಲ್ಲ...

 

ತನ್ನನ್ನು ಎರಡು ದಿನಗಳಿಂದ ಕಾಡುತ್ತಿರುವುದು ಹೃದಯಾಘಾತದ ಮುನ್ಸೂಚನೆ ಎಂದು ಆತನಿಗೆ ಗೊತ್ತಿರಲಿಕ್ಕಿಲ್ಲ, ಗೊತ್ತಿದ್ದರೆ ಯಾರೂ ವೈದ್ಯರನ್ನು ಭೇಟಿ ಮಾಡದೆ ಮತ್ತಷ್ಟು ಒತ್ತಡಕ್ಕೆ ಸಿಲುಕಿ ಕೆಲಸ ಮಾಡುತ್ತಿರಲಿಲ್ಲ. ಆತನಿಗೆ ಬದುಕುವ ಯೋಗ (ಆಯುಷ್ಯ) ಇದ್ದಿದ್ದರೆ ಇಸಿಜಿ ವರದಿ ಬಂದ ತಕ್ಷಣ ದೊಡ್ಡಾಸ್ಪತ್ರೆಗೆ ಹೋಗುತ್ತಿದ್ದ, ಅಥವಾ ಕೆಲಸ ಬೇಗ ಮುಗಿಸಿಯಾದರೂ ವೈದ್ಯರನ್ನು ಕಾಣುತ್ತಿದ್ದ. ಸಾಯುವುದಕ್ಕಿಂತ ನಿಮಿಷಗಳ ಮೊದಲು ವೈದ್ಯರು ಬಂದರಾ?” ಅಂತ ಕೇಳುವಾಗಲೂ ಆತನಿಗೆ ಸಾವಿನ ಮುನ್ಸೂಚನೆಯೇ ಇರಲಿಲ್ಲ ಎನ್ನುತ್ತಾರೆ ಆಪ್ತರು...

 

ಇದು ಒಂದು ಸಾವಿಗೂ ಮೊದಲು ಐದು ಗಂಟೆಗಳ ಹಿಂದೆ ನಡೆದ ಬೆಳವಣಿಗೆಯ ಸ್ಥೂಲ ಚಿತ್ರಣ.

 

ಪ್ರತಿನಿತ್ಯ ಎಷ್ಟೊಂದು ದಿಢೀರ್ ಸಾವುಗಳನ್ನು ನೋಡುತ್ತೇವೆ. ಅಕಾಲಿಕವಾಗಿ, ಸಣ್ಣ ಪ್ರಾಯದಲ್ಲಿ, ಮುನ್ಸೂಚನೆ ಇಲ್ಲದ ಸರಣಿ ಸಾವುಗಳು. ಒಂದೊಂದಕ್ಕೆ ಒಂದೊಂದು ಕಾರಣ. ಕುಸಿದರು, ಅಡ್ಮಿಟ್ ಆದರು, ಐಸಿಯು ಸೇರಿದರು, ಆಪರೇಷನ್ ಮಾಡಿದರು, ಮನೆಯಿಂದ ಹೊರಟರೂ ಆಸ್ಪತ್ರೆ ಸೇರಲಿಲ್ಲ... ಹೀಗೆ.... ನಾನಾ ಕಾರಣ...

ಸ್ಟ್ರೋಕ್ ಆಯ್ತಂತೆ, ಹಾರ್ಟ್ ಫೇಲ್ ಆಯ್ತಂತೆ, ಹಾರ್ಟ್ ಅಟಾಕ್ ಆಯ್ತಂತೆ, ಇನ್ನೇನೋ ಗುಣವಾಗದ ಕಾಯಿಲೆ ಕಾಡಿತಂತೆ. ಕೆಲವು ಸಾವುಗಳಿಗೆ ಸಾಕಷ್ಟು ಹಿಂದೆಯೇ ಮುನ್ನುಡಿ ಸಿಕ್ಕಿರ್ತದೆ, ಇನ್ನು ಕೆಲವಕ್ಕೆ ಅಲ್ಪ ಅವಧಿಯ ಲಕ್ಷಣ, ಇನ್ನು ಕೆಲವು ಸತ್ತ ಬಳಿಕವೇ ಅಕ್ಕಪಕ್ಕದವರಿಗೆ ತಿಳಿಯುವಷ್ಟು ತ್ವರಿತ ಮತ್ತು ಊಹೆಗೇ ನಿಲುಕದಂಥ ಬೆಳವಣಿಗೆಗಳು.

 

ಸಾವು ಯಾರನ್ನೂ ಬಿಡುವುದಿಲ್ಲ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ. ಆದರೆ, ಇಂದು, ನಿನ್ನೆಯ ವರೆಗೂ, ಕಳೆದ ಕ್ಷಣದ ವರೆಗೂ ನಮ್ಮ ಹಾಗೆಯೇ ಜೊತೆಗೆ ಓಡಾಡುತ್ತಿದ್ದ ವ್ಯಕ್ತಿ ಇನ್ನಿಲ್ಲವಂತೆ ಅಂತ ನಿರ್ಭಾವುಕವಾಗಿ ಹೇಳಬೇಕಾದ ಸಂದರ್ಭ ಬಂದಾಗ ಅದು ಅರಗಿಸಲು ಸಾಧ್ಯವಾಗಂತಹ, ಪ್ರತಿಕ್ರಿಯೆಗೆ ನಿಲುಕದ ಭಾವದ ತಾಕಲಾಟ ಸೃಷ್ಟಿಸುವ ಸನ್ನಿವೇಶ. ಇಂದು ಅವನು, ನಾಳೆ ನಾವು ಅನ್ನುವ ಕಠೋರ ಸತ್ಯ ಸಾರಿ ಹೋಗುತ್ತದೆ.

ಸತ್ತವರಿಗೆ ಆಯುಷ್ಯ ಅಷ್ಟೇ ಇದ್ದದ್ದ? ಸ್ವಲ್ಪ ಮೊದಲು ಚಿಕಿತ್ಸೆ ಸಿಕ್ಕದ್ದರೆ ಬದುಕುತ್ತಿದ್ದರ? ಅವರಿಗೆ ಯಾಕೆ ತಕ್ಷಣ ಆಸ್ಪತ್ರೆಗೆ ಹೋಗುವ ಅಂತ ಅನ್ನಿಸಲಿಲ್ಲ? ಸಾಯುವ ಮೊದಲೂ ತುಂಬ ನೋವು ಕಾಡುತ್ತಿತ್ತ? ಅದನ್ನವರು ಮುಚ್ಚಿಟ್ಟು ಕೆಲಸ.. ಕೆಲಸ ಅಂತಲೇ ಒದ್ದಾಡಿ ಟಾರ್ಗೆಟ್ ಮುಗಿಸುವ ಭರಾಟೆಯಲ್ಲಿ ಕೊನೆಗೆ ಕಾಲ ಮೀರಿ ಸತ್ತೇ ಹೋದರಾ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ... ಕೊನೆಗೆ ಏನಾಯ್ತು ಅಂತ ಹೇಳಲು ಅವರೇ ಇರುವುದಿಲ್ಲವಲ್ಲ...!

ಸಂಸ್ಥೆಯ ಯಜಮಾನರಿಂದ ಹಿಡಿದು ಕಸ ಗುಡಿಸುವ ವರೆಗೂ ಪ್ರತಿ ವೃತ್ತಿಗೂ ಅದರದ್ದೇ ಆದ ಒತ್ತಡಗಳಿರ್ತವೆ. ಹೊಂದಾಣಿಕೆ, ತ್ಯಾಗ, ಅಸಹಜತೆ, ಹಿನ್ನಡೆ, ಗುರಿ ಸಾಧನೆಯ ಒತ್ತಡ, ಸಮಯದ ವ್ಯತ್ಯಯ, ರಜೆಗಳ ಅಭಾವ, ವೈಯಕ್ತಿಕ ಅನಾರೋಗ್ಯದ ಭಾರ, ಸಾಲದ ಹೊರೆ, ಕ್ಷುಲ್ಲಕ ರಾಜಕೀಯಗಳು, ಮೇಲಾಟಗಳು, ಕೆಲಸದ ಜಾಗದ ತಾರತಮ್ಯ, ಅನ್ಯಾಯ... ಹೀಗೆ ಪ್ರತಿ ಮನುಷ್ಯನಿಗೂ ಒತ್ತಡಗಳಿರ್ತವೆ. ಕೆಲವೊಂದು ಕೆಲಸಗಳು ಯಾಂತ್ರಿಕ, ಇನ್ನು ಕೆಲವು ಸೃಜನಶೀಲ, ಮತ್ತಷ್ಟು ಸಮಯದ ಹೊತ್ತು ಗೊತ್ತಿಲ್ಲದೆ ದುಡಿಯುವಂಥಹ ಕೆಲಸಗಳು... ಪ್ರತಿ ಕೆಲಸಕ್ಕೂ ಅದರದ್ದೇ ಆದ ಒತ್ತಡಗಳಿರ್ತವೆ.

ಇತ್ತೀಚೆಗೆ ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸ್ತಾ ಇದ್ದೆ. ಆ ಬಸ್ ಕುಂದಾಪುರ ಸಮೀಪ ಗಂಗೊಳ್ಳಿಯಿಂದ ರಾತ್ರಿ 8 ಗಂಟೆಗೆ ಹೊರಡುತ್ತದೆ. ಅದರ ಗಮ್ಯ ಬೆಂಗಳೂರು. ಶಿರಾಡಿ ಘಾಟಿಯಲ್ಲಿ ಅನಿರೀಕ್ಷಿತ ಸಂಚಾರ ದಟ್ಟಣೆಯಿಂದಾಗಿ ನಿಗದಿತ 7 ಗಂಟೆಯ ಬದಲು ಬಸ್ಸು ನೆಲಮಂಗಲ ದಾಟುವಾಗಲೇ 8.30. ಇನ್ನು ಬೆಂಗಳೂರಿನ ಸಂಚಾರ ದಟ್ಟಣೆ ದಾಟಿ ಮೆಜೆಸ್ಟಿಕು ತಲುಪುವಾಗ ಖಂಡಿತಾ 10 ಗಂಟೆ ಆಗುತ್ತದೆ. ನಾವಾದರೋ ನಮ್ಮ ಸ್ಟಾಪು ಬಂದಾಗ ಇಳಿದು ಹೋಗಬಹುದು. ಆದರೆ, ಅದರ ಚಾಲಕ ಹಾಗಲ್ಲ. ಗಮ್ಯ ತಲುಪಿ, ರಿಪೋರ್ಟ್ ಮಾಡಿ ಮತ್ತೆ ಮನೆಗೆ ಹೋಗಬೇಕು. ಲೆಕ್ಕ ಹಾಕಿ ನೀವು…….. ರಾತ್ರಿ 8ರಿಂದ ಮರುದಿನ ಬೆಳಗ್ಗೆ 10 ಗಂಟೆ ವರೆಗೆ ನಿದ್ರೆಗೆಟ್ಟು ಬಸ್ ಚಾಲನೆ. ಆತನಿಗೂ ಹಸಿವಿರ್ತದೆ, ಬಿಪಿ ಇರಬಹುದು ಆಸಿಡಿಟಿ ಇರಬಹುದು, ಕಾಲ ಕಾಲಕ್ಕೆ ಮಾತ್ರೆ ತಿನ್ನಬೇಕಾದ ಅಗತ್ಯ ಇರಬಹುದು. ತಲೆನೋವಿರಬಹುದು, ಯಾವುದೋ ಸಾಂಸಾರಿಕ ತಾಪತ್ರಯ ಇರಬಹುದ. ಆತನ ಹೆಂಡತಿ ಮಕ್ಕಳು ಫೋನ್ ಮಾಡುತ್ತಲೇ ಇರಬಹುದು... ಎಷ್ಟೊಂದು ಒತ್ತಡಗಳಿರ್ತವೆ ಅಲ್ವ...? ಯಾವತ್ತಾದರೂ ನಾವು ಆ ಬಗ್ಗೆ ಯೋಚಿಸ್ತಾ ಇರ್ತೇವ...? ಇಲ್ವಲ್ಲ. ನನಗೆ ಬೆಂಗಳೂರು ತಲುಪಲು ತಡವಾಯ್ತು ಅಂತ ಅವರಿವರಿಗೆ ಬೈತಲೇ ಇರುತ್ತೇವೆ. ನಮ್ಮ ಸ್ಟಾಪು ಬಂದಾಗ ನಿರ್ಭಾವುಕರಾಗಿ ಇಳಿದು ನಡೆಯುತ್ತೇವೆ. ಆ ಡ್ರೈವರ್ ಎಷ್ಟೊತ್ತಿಗೆ ಲಾಸ್ಟ್ ಸ್ಟಾಪು ತಲುಪಿದ? ಎಷ್ಟೊತ್ತಿಗೆ ವಾಶ್ ರೂಮಿಗೆ ಹೋದ? ಎಷ್ಟೊತ್ತಿಗೆ ತಿಂಡಿ ತಿಂದ? ಅವನಿಗೆ ಇನ್ನು ಎಷ್ಟೊತ್ತು ವಿಶ್ರಾಂತಿ ದೊರಕಬಹುದು? ಅಂತೆಲ್ಲ ನಮಗೆ ಅಂದಾಜೇ ಆಗುವುದಿಲ್ಲ.

ಡ್ರೈವರುಗಳು, ಪೊಲೀಸರು, ವೈದ್ಯರು, ನರ್ಸುಗಳು, ಹಣ್ಣು ತರಕಾರಿ ವ್ಯಾಪಾರಿಗಳು, ಯಕ್ಷಗಾನ ವೇಷಧಾರಿಗಳ ಸಹಿತ ಕಲಾವಿದರು, ನೇಪಥ್ಯ ಕಲಾವಿದರು, ಲೈಟಿಂಗ್, ರಂಗಸಜ್ಜಿಕೆ ಸಂಸ್ಥೆಯವರು, ಬಾಣಸಿಗರು, ಪುರೋಹಿತರು, ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರು, ರೈಲ್ವೇ ಪೈಲಟುಗಳು, ಪೇಪರು ಹಂಚುವವರು, ಟ್ಯಾಕ್ಸಿ ಚಾಲಕರು, ದೇಶದುದ್ದಕ್ಕೂ ಓಡಾಡುವ ಟ್ಯಾಂಕರುಗಳು, ಲಾರಿಗಳ ಚಾಲಕರು.... ಹೀಗೆ ನೂರಾರು ಮಂದಿ ಹೊತ್ತಿನ ಪರಿವೆ ಇಲ್ಲದೆ ಕೆಲಸ ಮಾಡ್ತಾರೆ. ಅವರಿಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ಅಂತ ದಿನಚರಿ ಇಟ್ಟು ಕೆಲಸ ಮಾಡುವ ಅವಕಾಶ ಇರುವುದಿಲ್ಲ. ಶುರುವಾದ ಕೆಲಸವನ್ನು ತಾರ್ಕಿಕ ಅಂತ್ಯ ಕಾಣಿಸದೆ ಮನೆಗೆ ಹೋಗಲು ಆಗುವುದಿಲ್ಲ. ಹೋದರೆ ಮರುದಿನದಿಂದ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ.

 

ರಾತ್ರಿ ಎಷ್ಟೊತ್ತಿಗೋ ಮನೆ ತಲುಪತ್ತಾರೆ, ಯಾವತ್ತೋ ಊಟ ಮಾಡ್ತಾರೆ, 2-3 ದಿನಗಳಿಗೊಮ್ಮೆ ಮನೆ ಮಂದಿ ಮುಖ ನೋಡ್ತಾರೆ... ಸರಿಯಾದ ರಜೆ ಇರುವುದಿಲ್ಲ. ಅಡ್ಜಸ್ಟ್ ಮಾಡಿಕೊಂಡು ರಜೆ ಪಡೆಯಬೇಕು. ಹೊತ್ತಲ್ಲದ ಹೊತ್ತಿಗೆ ಊಟ, ನಿದ್ರಾಹೀನತೆ, ಡಬಲ್ ಶಿಫ್ಟ್ ನಂತಹ ಒತ್ತಡದಿಂದ ಆವರಿಸುವ ಆಸಿಡಿಟಿ, ಪೈಲ್ಸ್ ಸಮಸ್ಯೆ, ನಿದ್ರಾಹೀನತೆ, ರಕ್ತದೊತ್ತಡ... ಇತ್ಯಾದಿ ಇತ್ಯಾದಿಗಳು ಅವರ ಕೆಲಸದ ಒತ್ತಡ ಕೊಡುವ ಬಳುವಳಿಗಳು... ಕೆಲವು ರಸಗೊಬ್ಬರ ಕಾರ್ಖಾನೆಗಳಂತಹ ಜಾಗಗಳಲ್ಲಿ ಕೆಲಸ ಮಾಡುವವರಿಗೆ ಕಿವುಡುತನ, ಚರ್ಮದ ಸಮಸ್ಯೆಗಳೂ ಬರುವುದಿದೆ. ಹಿಂದೆಲ್ಲ ಯಕ್ಷಗಾನ ಕಲಾವಿದರು ತಿಂಗಳುಗಟ್ಟಲೆ ಮನೆಗಳಿಗೆ ಬರಲು ಅವಕಾಶವೇ ಇರಲಿಲ್ಲ. ತಮ್ಮೆಲ್ಲ ಮೂಡ್, ಅನಾರೋಗ್ಯ, ನೋವು, ತಳಮಳಗಳನ್ನು ಬಚ್ಚಿಟ್ಟು ಅವರು ನಗು ನಗುತ್ತಾ ದುಡಿಯಬೇಕು, ಮಾಲೀಕರನ್ನು, ಪ್ರೇಕ್ಷಕರನ್ನು, ಪ್ರಯಾಣಿಕರನ್ನು ಖುಷಿ ಪಡಿಸಬೇಕು. ಆಗೆಲ್ಲ ನಮಗೆ ಅವರ ವೈಯಕ್ತಿಕ ಒತ್ತಡಗಳು ಕಾಣಿಸುವುದೇ ಇಲ್ಲ...

 

ನನ್ನ ಬಂಧುವೊಬ್ಬರು ಮೋಟಾರು ಪಂಪ್, ವಿದ್ಯುತ್ ಉಪಕರಣಗಳನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು. ನಮ್ಮ ಕಡೆ ಅವಲರನ್ನು ಫಿಟ್ಟರ್ ಅಂತ ಕರೀತಾರೆ. ಅವರಿಗೆ 24 ಗಂಟೆ ದುಡಿದರೂ ಮುಗಿಯದಷ್ಟು ರಿಪೇರಿ ಕೆಲಸಗಳು ಬರುತ್ತಿದ್ದವು. ಮನೆ ತುಂಬ ಬಿಚ್ಚಿಟ್ಟ ಪಂಪುಗಳು, ಬಿಡಿ ಭಾಗಗಳು, ಗ್ರೀಸ್, ಆಯಿಲ್, ಪೈಪುಗಳ ರಾಶಿ... ಅವರು ತಡರಾತ್ರಿ ವರೆಗೆ ನಿದ್ರೆ ಕೆಟ್ಟು ಕೆಲಸ ಮಾಡಿ ಬೆಳಗ್ಗೆ ಏಳುವ ಮೊದಲೇ ಅವರ ಹಾಸಿಗೆ ಪಕ್ಕವೇ ಬಂದು ಅವರನ್ನು ಎಬ್ಬಿಸಿ ಮನೆಗೆ ಕರೆದೊಯ್ದು ಪಂಪು ರಿಪೇರಿ ಮಾಡಿಸುವವರಿದ್ದರು. ಮಹಾ ದಾಕ್ಷಿಣ್ಯದ ಸ್ವಭಾವದವರಾಗಿದ್ದ ಅವರು ಯಾವುದನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಲೇ ಬರುತ್ತಿದ್ದರು. ಈ ಪೈಕಿ ಎಷ್ಟೋ  ಮಂದಿ ಅವರ ದುಡಿಮೆಗೆ ಸರಿಯಾದ ಸಂಭಾವನೆ ನೀಡದೆ ಮೋಸ ಮಾಡಿದ್ದೂ ಇದೆ. ಅಲ್ಲೇನು ಆದಾಯ ಬರುತ್ತದೆ, ತನಗೆಷ್ಟು  ಬದುಕಿಗೆ ಆಸರೆ ಆಗುತ್ತದೆ ಎಂಬುದಕ್ಕಿಂತಲೂ ಕೆಲವು ವೃತ್ತಿಗೆ ಇಳಿದ ಮೇಲೆ ಅದರ ಒತ್ತಡ ತಡೆಯಲಾಗೆ ಆಚೆ ಬರಬೇಕು ಅಂತ ಅಂದುಕೊಂಡರೂ ಆ ವೃತ್ತಿ ನಮ್ಮನ್ನು ಬಿಡುವುದಿಲ್ಲ. 1) ತನಗೆ ಬೇರೆ ಕೆಲಸ ಗೊತ್ತಿಲ್ಲ, 2) ಇಂತಹ ಕೆಲಸ ಮಾಡಿಕೊಡುವವರು ಆ ಊರಿನಲ್ಲಿ ಬೇರೆ ಇಲ್ಲ, 3) ಹೇಗೂ ಇಷ್ಟು ಕಾಲ ಇದೇ ಕೆಲಸ ಮಾಡಿದ್ದೇನೆ, ಇದರಿಂದ ಆಚೆ ಹೋದರೆ ಈಗ ಸಿಗುವಷ್ಟೂ ಆದಾಯ ಬಾರದೇ ಹೋದರೆ... ಎಂಬಿತ್ಯಾದಿ ಕಾರಣಗಳಿಂದ ಸ್ವಂತ ವೃತ್ತಿ ಮಾಡುವ ಇಂತಹ ಕೆಲಸ ನಿರತರಿಗೆ ಆದರಿಂದ ಆಚೆ ಬರಲು ಆಗುವುದಿಲ್ಲ.

ವಾಹನ ರಿಪೇರಿ, ಪ್ಲಂಬಿಂಗ್, ವೈದ್ಯಕೀಯ ಕ್ಷೇತ್ರ ಸಹಿತ ಅನೇಕ ಕಡೆ ಇಂತಹ ಪರಿಸ್ಥಿತಿ ಬರುತ್ತದೆ. ವಾಹನ ರಿಪೇರಿ ಮಾಡುವವರು ಮಧ್ಯರಾತ್ರಿ ತನಕ ಶಾಪಿನಲ್ಲಿ ಕುಳಿತರೂ ಕೆಲವೊಮ್ಮೆ ಕೆಲಸ ಮುಗಿಯುವದೇ ಇಲ್ಲ. ಹೊತ್ತಿಗೆ ಸರಿಯಾಗಿ ವಾಹನ ಒಪ್ಪಿಸಬೇಕಾದ ಒತ್ತಡ, ತಾಳ್ಮೆ ಬಯಸುವ ರಿಪೇರಿ ಕಾರ್ಯ, ಕೆಲವು ಗ್ರಾಹಕರ ಅನಾಗರಿಕ ವರ್ತನೆ, ಜೊತೆಗೆ ಕುಟುಂಬಿಕರ ಬೇಡಿಕೆ, ಸಮಸ್ಯೆ.. ಸಾಮಾಜಿಕ ಜವಾಬ್ದಾರಿಗಳ ಎಲ್ಲ ಸೇರಿ ಇಂತಹ ವೃತ್ತಿ ನಿರತರ ಒತ್ತಡಗಳನ್ನು ಭಯಂಕರ ಹೆಚ್ಚಿಸುತ್ತವೆ. ಒತ್ತಡಗಳನ್ನು ಹಂಚಿಕೊಳ್ಳಲಾಗದೆ ಅದು ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತವೆ. ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಅನಾರೋಗ್ಯ ಕಾಡಿದರೂ ಕೆಲಸ ಬಿಟ್ಟು ವಿಶ್ರಾಂತಿ ಮಾಡಲಾಗುವುದಿಲ್ಲ. ಕೆಲವು ಕೆಲಸಗಳಲ್ಲಿ ಆರ್ಡರುಗಳು ವರ್ಷಪೂರ್ತಿ ಬರುವುದಿಲ್ಲ. ಕೆಲಸ ಬಂದಾಗ ಕ್ಲಪ್ತ ಸಮಯಕ್ಕೆ ಮುಗಿಸಿ ಕೊಡಲೇಬೇಕು. ಇಲ್ಲದಿದ್ದರೆ ಅದು ಮತ್ತೊಬ್ಬರ ಪಾಲಾಗುತ್ತದೆ. ಒಪ್ಪಿಕೊಂಡ ಕೆಲಸವನ್ನು ಒಪ್ಪಿದ ಹೊತ್ತಿಗೆ ಮಾಡಿ ಕೊಡಲೇ ಹೋದರೆ ಆತನ ಇಮೇಜ್ ಹಾಳಾಗುತ್ತದೆ.

ಕಲಾವಿದರಿಗೂ ಇದೇ ಸಂಕಷ್ಟ ಇರುತ್ತದೆ. ಬೇಡಿಕೆ ಬಂದಾಗ, ಬಂದಲ್ಲಿಗೆ ಹೋಗದಿದ್ದರೆ, ಮುಂದಿನ ಸಲ ಅವರನ್ನು ಕರೆಯುವುದಿಲ್ಲ. ಆ ಅವಕಾಶ ಇನ್ನೊಬ್ಬರ ಪಾಲಾಗುತ್ತದೆ. ಸ್ವೀಕರಿಸಿದ ಅವಕಾಶವನ್ನೂ ಅಚ್ಚುಕಟ್ಟಾಗಿ ಮುಗಿಸಿ ಕೊಡಬೇಕಾದ ಜವಾಬ್ದಾರಿ ಕಲಾವಿದರಿಗೂ ಇರುತ್ತದೆ. ಇದೇ ಕಾರಣಕ್ಕೆ ಹೊತ್ತುಗೊತ್ತಿನ ಪರಿವೆ ಇಲ್ಲದೆ ಕಲಾವಿದರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಲೇ ಇರುತ್ತಾರೆ.

ತುಂಬ ಸಲ ನಾವು ದೂರದಿಂದ ನಿಂತು ಇಂತಹ ವೃತ್ತಿನಿರತರ ಬಗ್ಗೆ ಭಯಂಕರ ವಿಮರ್ಶೆ ಮಾಡುವುದಿದೆ. ಅವ ಭಯಂಕರ ಕುರೆ ಮಾರಾಯ. ಅವ ಜಿಪುಣ, ಜೀವ ಬಿಟ್ಟು ಕೆಲಸ ಮಾಡ್ತಾನೆ, ಒಂದು ರಜೆ ಸಹ ಹಾಕುವುದಿಲ್ಲ, ಅವನಿಗೆ ದುಡ್ಡು ಮಾಡುವುದು ಬಿಟ್ಟು ಬೇರೇನೂ ಬೇಡ ಅಂತೆಲ್ಲ ಬಾಯಿಗೆ ಬಂದ ಹಾಗೆ ಮಾತನಾಡುತ್ತೇವೆ... ದಯವಿಟ್ಟು ಗಮನಿಸಿ:

1)      ದೂರದಿಂದ ನಿಂತು ವಿಮರ್ಶೆ ಮಾಡುವ ನಿಮಗೆ ಆತನ ವೈಯಕ್ತಿಕ ಕಷ್ಟ, ನಷ್ಟಗಳು, ಹಣಕಾಸಿನ ಅಗತ್ಯಗಳ ಬಗ್ಗೆ ಗೊತ್ತುಂಟ. ಆತನಿಗೆ ಸಾಲಗಳುಂಟ, ಬೇರೇನಾದರೂ ಜವಾಬ್ದಾರಿ ಉಂಟ, ಅನಾರೋಗ್ಯ ಉಂಟ... ಏನೂ ಗೊತ್ತಿಲ್ಲ.. ಸುಮ್ಮನೇ ವಿಮರ್ಶೆ ಮಾಡುವುದು

2)      ಜಗತ್ತಿನಲ್ಲಿ ಎಲ್ಲರೂ ಹಣ ಮಾಡುವುದಕ್ಕೇ ದುಡಿಯವುದಲ್ಲ. ಕೆಲವರಿಗೆ ಅವರಿಷ್ಟದ ಕೆಲಸ ಅವರ ಉಸಿರಾಗಿರ್ತದೆ. ಎಷ್ಟೇ ಕಷ್ಟವಾದರೂ ಅದನ್ನವರು ಮಾಡುವ ಮೂಲಕ ಖುಷಿ ಕಾಣ್ತಾರೆ. ಎಷ್ಟೇ ಒತ್ತಡ ಇದ್ದರೂ ಅಚ್ಚುಕಟ್ಟಾಗಿ ಮುಗಿಸಿದ ಬಳಿಕ ಅವರಿಗೊಂದು ಸಮಾಧಾನ ಸಿಗ್ತದೆ. ಕೆಲವೊಂದು ಕೆಲಸಗಳನ್ನು ಅವರಷ್ಟು ಚೆನ್ನಾಗಿ ಇನ್ಯಾರೂ ಮಾಡುವುದಿಲ್ಲ ಎಂಬ ಕಾರಣಕ್ಕೆ ಅವರ ಖಾಯಂ ಗ್ರಾಹಕರು ಅವರ ಮೇಲೆ ಭರವಸೆ ಇಟ್ಟು ಬರುವಾಗ ಅವರು ಆ ಭರವಸೆ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಅದೇ ಕಾರಣಕ್ಕೆ ವೈಯಕ್ತಿಕ ಸಮಯ ಹಾಳಾಗುವುದನ್ನೂ ಲೆಕ್ಕಿಸದೆ ದುಡಿಯುತ್ತಾರೆ. ಫ್ಯಾಮಿಲಿ ಡಾಕ್ಟ್ರು, ಟೈಲರು, ಕ್ಷೌರಿಕ, ಬೈಕು ರಿಪೇರಿಯವರು, ಪಂಕ್ಚರ್ ಕೆಲಸ ಮಾಡುವವರು.... ಹೀಗೆ ನಾವು ಅವರೇ ಬೇಕು ಅಂತ ಹಂಬಲಿಸಿ ಹೋಗುವ ಹತ್ತಾರು ಕ್ಷೇತ್ರಗಳನ್ನು ಪಟ್ಟಿ ಮಾಡಬಹುದು. ನಮ್ಮ ಅಗತ್ಯಗಳಿಗೆ ಅವರು ಸಿಕ್ಕದೇ ಹೋದಾಗ ನಾವು ನಿರಾಸೆ ಅನುಭವಿಸುತ್ತೇವಲ್ಲ. ಆ ನಿರಾಸೆ ಆಗಬಾರದು ಅಂತಲೇ ಅವರು ದುಡಿಯುತ್ತಾರೆ ಹೊರತು ಕೇವಲ ದುಡ್ಡು ಮಾಡಲೆಂದೇ ಅಲ್ಲ.

3)      ಕುರೆ ಅಥವಾ ಜಿಪುಣ ಅನ್ನುವುದು ಎಲ್ಲ ಸಂದರ್ಭಗಳಲ್ಲಿ ಸೂಕ್ತ ಆಗಿರುವುದಿಲ್ಲ. ಅವರವರ ಜವಾಬ್ದಾರಿ, ಅರವರ ಅಗತ್ಯ, ಅನಿವಾರ್ಯತೆಗಳು ಅವರವರಿಗಷ್ಟೇ ತಿಳಿದಿರಲು ಸಾಧ್ಯ. ಪ್ರತಿ ಬದುಕು ಮುಚ್ಚಿಟ್ಟ ಪುಸ್ತಕದ ಹಾಗೆ, ಕೇವಲ ರಕ್ಷಾಪುಟ ನೋಡಿ ನಾವದನ್ನು ವಿಮರ್ಶೆ ಮಾಡಲು ಸಾಧ್ಯವಾಗುವುದಿಲ್ಲ. ಪುಟ ಬಿಡಿಸಿ ಓದಿದಾಗ ಮಾತ್ರ ಅರ್ಥ ಆಗಲು ಸಾಧ್ಯ. ಹಾಗಂತ ಕಂಡ ಕಂಡ ಪುಸ್ತಕಗಳನ್ನೆಲ್ಲ ಬಿಡಿಸಿ ಓದುತ್ತೇವೇಯಾ? ಇಲ್ವಲ್ಲ. ಮತ್ಹೇಗೆ ನಮಗೆ ಅವರ ಅನಿವಾರ್ಯತೆಗಳು ಅರ್ಥವಾಗಲು ಸಾಧ್ಯ...? ಯಾರ್ಯಾರ  ಬಳಿ ಸಾಲ ಪಡೆದ ಕುಡಿದು, ಜೂಜಿಗೆ ಕಟ್ಟಿ, ಅವರಿವರಿಗೆ ಸಾಲ ಹಿಡಿಸಿ, ಅನ್ಯಾಯ ಮಾಡಿ, ಕದ್ದು, ವಂಚಿಸಿ ಐಷಾರಾಮದ ಬದುಕು ನಡೆಸುವ ಬದಲು ಪ್ರಾಮಾಣಿಕವಾಗಿ ದುಡಿದು, ಯಾರಿಗೂ ವಂಚಿಸದೆ ಗಳಿಸಿದ ಹಣವನ್ನು ತನಗೆ ಬೇಕಾದಂತೆ ಖರ್ಚು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಅವರ ಹಕ್ಕು. ಹೊರಗಡೆ ಕಾಣಿಸದ ಬಾಧ್ಯತೆಗಳನ್ನು ಪೂರೈಸಲು ಅವರು ಹಿತಮಿತ ಖರ್ಚು ಮಾಡುತ್ತಿರಬಹುದು. ಅದರ ಬಗ್ಗೆ ಕೇವಲವಾಗಿ ಮಾತನಾಡಿದರೆ ಅದು ನಮ್ಮ ಮೂರ್ಖತನವಾದೀತು ಅಷ್ಟೇ...

ಪ್ರತಿ ಕೆಲಸದಲ್ಲೂ ಒತ್ತಡ ಇರುತ್ತದೆ. ಸ್ವಂತ ಉದ್ದಿಮೆಯಾದರೆ ಜವಾಬ್ದಾರಿ ಜಾಸ್ತಿ. ಆದರೂ ನಾವು ಅಲ್ಲಿಲ್ಲಿ, ಅಷ್ಟಿಷ್ಟು ಕಂಡದ್ದನ್ನೇ ಮಹಾ ಮಾಹಿತಿ ಅಂದುಕೊಂಡು
ಲೂಸ್ ಟಾಕ್ ಮಾಡುತ್ತೇವೆ. ಅವರ ಬದುಕಿನ ಬಗ್ಗೆ, ಅವರ ನಡವಳಿಕೆ ಬಗ್ಗೆ, ಓಡಾಟದ ಬಗ್ಗೆ ನಾಲ್ಕು ಜನ ಸೇರಿದಲ್ಲಿ ಹಗುರವಾಗಿ ಮಾತನಾಡುತ್ತೇವೆ. ಈ ಲೇಖನದ ಆರಂಭದಲ್ಲಿ ಹೇಳಿದಂತಹ ವ್ಯಕ್ತಿತ್ವಗಳು ಸಣ್ಣ ಪುಟ್ಟ ಅನಾರೋಗ್ಯಕ್ಕೂ ಸ್ಪೆಷ್ಟಲಿಸ್ಟ್ ಹತ್ರ ಹೋಗಿ ಇಸಿಜಿ ಮಾಡಿಸಿದರೆ ಆಯೆ ಪೋಡಿಯೆ ಮಾರಾಯಅಂತ ತಮಾಷೆ ಮಾಡುತ್ತೇವೆ. ಡಾಕ್ಟರ್ ಹತ್ರ ಹೋಗದೇ ಸತ್ರೆ... ಅವನಿಗೆ ಹಾಂಕಾರ, ಅಷ್ಟು ಅನಾರೋಗ್ಯ ಇದ್ರೂ ಕ್ಯಾರ್ಲೆಸ್ಅಂತ ವಿಮರ್ಶೆ ಮಾಡುತ್ತೇವೆ. ಸತ್ತ ನಂತರ ಅವನ ಫೋಟೋದ ಕೆಳಗೆ ನಮ್ಮ ಹೆಸರು ದೊಡ್ಡದಾಗಿ ಸೇರಿಸಿ ಓಂ ಶಾಂತಿ..., RIP” ಅಂತ ಹಾಕಿ ಆತನಿಗೆ ಮೋಕ್ಷ ಕರುಣಿಸುವ ಪ್ರಯತ್ನ ಮಾಡುತ್ತೇವೆ. ಆತನ ವೈಯಕ್ತಿಕ ಒತ್ತಡ, ಆತನ ಅಸಹಾಯಕತೆ, ಆತನಿಗಿದ್ದಿರಬಹುದಾದ ಅನಿವಾರ್ಯತೆಗಳು ಯಾವುದೂ ನಮಗೆ ಕಾಣಿಸುವುದಿಲ್ಲ, ನಮಗದನ್ನು ತಿಳಿದುಕೊಳ್ಳುವ ಉತ್ಸಾಹವೂ ಇರುವುದಿಲ್ಲ. ಪುಕ್ಕಟೆ ಸಲಹೆ, ಅನಗತ್ಯ ಅನುಕಂಪ, ಹಗುರ ಮಾತುಗಳನ್ನು ಎಸೆಯುವುದರಲ್ಲೇ ನಾವು ಕಾಲ ಕಳೆಯುತ್ತಲೇ ಇರುತ್ತೇವೆ.


ಯಾವ ಸಾವೂ ಸಹ ನಮ್ಮ ಅಹಂನ್ನು ಇಳಿಸು
ವುದಿಲ್ಲ, ನಮ್ಮ ಅತಿರೇಕದ ಮಾತುಗಳಿಗೆ ಕಡಿವಾಣ ಹಾಕುವುದಿಲ್ಲ. ಎಲ್ಲ ಸ್ಮಶಾನ ವೈರಾಗ್ಯ ಅಷ್ಟೇ... ಸತ್ತವರ ಬಗ್ಗೆ ತೋರಿಸುವ ಕುತೂಹಲ ಬದುಕಿರುವವರನ್ನು ವಿಚಾರಿಸುವಲ್ಲಿ ಇರುವುದಿಲ್ಲ... ಸತ್ತ ಮೇಲೂ ಸತ್ತವರ ಜೊತೆ ನನಗೆಷ್ಟು ಪ್ರಚಾರ ಸಿಗ್ತದೆ ಎಂಬಂಥ ವಿಚಿತ್ರ ನಿರೀಕ್ಷೆ... ಇವೆಲ್ಲ ಕೇಳಲು ಕಠೋರ ಅನ್ನಿಸಬಹುದು, ಆದರೆ ನಡೆಯುತ್ತಿರುವುದ ಇದೇ...

 

ಸಂಕಷ್ಟದಲ್ಲಿ, ಒತ್ತಡದಲ್ಲಿರುವವನ್ನು ಸರಿಯಾಗಿ ಮಾತನಾಡಿಸಿ, ಸಮಾಧಾನ ಹೇಳಿ, ಸರಿಯಾದ ವೈಜ್ಞಾನಿಕ ಸಲಹೆ ಕೊಟ್ಟು ಮುನ್ನಡೆಸಲು, ಆತನ ಕಷ್ಟಗಳಿಗೆ ಕಿವಿಯಾಗಲು ಎಷ್ಟು ಮಂದಿಗೆ ಪುರುಸೊತ್ತು ಇರುತ್ತದೆ ಹೇಳಿ.... ವಾಟ್ಸಪ್ಪಿನಲ್ಲಿ ಆನ್ಲೈನ್ ಇರುವವರೆಲ್ಲ ಪರಮ ನಿರಾಳರೆಂದೂ, ಸ್ಟೇಟಸ್ ಫೋಟೋ ಹಾಕುವವರೆಲ್ಲ ಭಯಂಕರ ಫ್ರೀ ಎಂದೂ, ಡಿಪಿ ನಗು ನಗುವಂತಿದ್ದರೆ ಆತ ಪರಮ ಸುಖಿಯೆಂದೂ, ಡಿಪಿ ಕಪ್ಪಾದರೆ ಬೇಜಾರಿನಲ್ಲಿದ್ದಾನೆ ಎಂದೂ, ಡೀಪಿಯೇ ಕಾಣದೆ, ಸ್ಟೇಟಸ್ಸೂ ಹಾಕದಿದ್ದರೆ ಆತ ಸತ್ತೇ ಹೋಗಿದ್ದಾನೆ ಎಂದು ಕುಳಿತಲ್ಲೇ ಲೆಕ್ಕ ಹಾಕಿ ವಿಮರ್ಶೆ ಮಾಡುವಷ್ಟು ಬುದ್ಧಿವಂತರು ನಾವಿದ್ದೇವೆ!!! ಲಾಸ್ಟ್ ಸೀನು ಯಾವುದು, ಯಾರಿಗೆಲ್ಲ ಲೈಕು ಮಾಡಲಾಗಿದೆ, ಯಾವಾಗ ಏನು ಜಾಲತಾಣದಲ್ಲಿ ಪೋಸ್ಟು ಮಾಡಲಾಗಿದೆ.. ಎಂಬಿತ್ಯಾದಿ ಅಸಂಬದ್ಧ ಸಂಗತಿಗಳಲ್ಲೇ ನಮ್ಮ ಅಸ್ತಿತ್ವ ತೀರ್ಮಾನಗಳಿಗೆ ಒಳಗಾಗುವುದು ಅತ್ಯಂತ ಬೇಸರದ ಸಂಗತಿ....

ಬದುಕು ಎಷ್ಟೇ ಒತ್ತಡದಲ್ಲಿರಲಿ, ಎಷ್ಟೇ ಹಣಕಾಸಿನ ಅನಿವಾರ್ಯತೆಗಳಿರಲಿ, ಎಷ್ಟೇ ಟಾರ್ಗೆಟ್ಟುಗಳು ನಿಮ್ಮೆದುರು ಬಾಯಿ ಬಿಟ್ಟು ನಿಂತಿರಲಿ. ಆರೋಗ್ಯದ ಕಡೆ ದಯವಿಟ್ಟು ಗಮನ ಕೊಡಿ. ಆಯುಷ್ಯ ಇದ್ದಷ್ಟು ಕಾಲವಾದರೂ ಅವರವ ಕಾಲ ಮೇಲೆ ನಿಂತು ಬದುಕಬೇಕಲ್ವ...
? ಬದುಕಬೇಕಾದರೆ ನಮ್ಮ ಆರೋಗ್ಯ ಸರಿ ಇರಬೇಕಲ್ವ...? ಆರೋಗ್ಯ ಸರಿ ಇದ್ದರೆ ಮಾತ್ರ ಬದುಕಿವವರೆಗೆ ದುಡಿಯಲು ಸಾಧ್ಯವಲ್ವ...? ದುಡಿದರೆ ಮಾತ್ರ ಕುಟುಂಬ ಸಾಕಲು ಅವಕಾಶ ಸಿಗುವದಲ್ವ...? ಎಲ್ಲದಕ್ಕೂ ಮೂಲವಾದ ಆರೋಗ್ಯವನ್ನೇ ಕೆಡಿಸಿಕೊಂಡರೆ... ಯಾವ ವಿಧಿಗೂ ಏನೂ ಮಾಡಲಾಗದು ಅಲ್ವ...? ಬಿಡುವಿಲ್ಲದ ಒತ್ತಡ ಸಹಿತ ಕೆಲಸದ ನಡುವೆ ಸಮಸ್ಯೆಗಳನ್ನು ಬಂಧುಮಿತ್ರರ ಜೊತೆ ಹಂಚಿಕೊಳ್ಳಿ. ಅನಾರೋಗ್ಯದ ಲಕ್ಷಣ ಕಂಡಾಗಲೇ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆ ಪಡೆಯಿರಿ. ಗೂಗಲ್ಲಿನಲ್ಲಿ ಸರ್ಚ್ ಮಾಡಿ, ಮೆಡಿಕಲ್ಲಿನಿಂದ ನೀವೇ ಮಾತ್ರೆ ತಂದು ಕುಡಿದು ದಯವಿಟ್ಟ ಸ್ವಯಂ ವೈದ್ಯರಾಗಬೇಡಿ. ಪ್ರತಿ ಅನಾರೋಗ್ಯಕ್ಕೂ ಇಂಥದ್ದೇ ಚಿಕಿತ್ಸೆ ಅಂತ ಇರ್ತದೆ. ಒಮ್ಮೆ ಅಲೋಪತಿ, ಒಮ್ಮೆ ಅಯುರ್ವೇ, ಮರುದಿನ ಹೋಮಿಯೋಪಥಿ ಅಂತ ಅವರಿವರು ಹೇಳ್ತಾರೆ ಅಂತ ಚಿಕಿತ್ಸೆ ಹಾಗೂ ವೈದ್ಯರನ್ನು ಬದಲಿಸುತ್ತಲೇ ಹೋಗುವುದೂ ಸರಿಯಲ್ಲ. ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ಯಾರು ಎಷ್ಟೇ ತಮಾಷೆ ಮಾಡಿದರೂ ಚಿಂತಿಸಬೇಡಿ. ಆರೋಗ್ಯ ಪರೀಕ್ಷೆ ಮಾಡಿಸಲು ಯಾವುದೇ ಸಂಕೋಚ, ನಾಚಿಕೆ ಬೇಡ. ನಮ್ಮ ಅನಾರೋಗ್ಯ ಮತ್ತು ಸಾವಿನ ಬಳಿಕ ಕಷ್ಟು ಪಡುವವರು ನಮ್ಮ ಮನೆಯವರೇ ವಿನಃ ಪುಕ್ಕಟೆ ಸಲಹೆ ನೀಡಿ ದಾರಿ ತಪ್ಪಿಸುವವರಲ್ಲ ಎಂಬುದು ನೆನಪಿರಲಿ.

ನಿಜ.. ಕೆಲವೊಂದು ಸಾವುಗಳಿಗೆ ಸರಿಯಾದ ಉತ್ತರಗಳೇ ಸಿಗುವುದಿಲ್ಲ. ಎಷ್ಟೇ ತಾರ್ಕಿಕವಾಗಿ ಯೋಚಿಸಿದರೂ ಸಹ. ಯಾರೋ ಬರೆದಿಟ್ಟ ಚಿತ್ರಕತೆಯಂತೆ ಇರ್ತವೆ... ಸಿನಿಮೀಯವಾಗಿ ಸಂಭವಿಸ್ತಾ ಹೋಗ್ತವೆ. ನಾವದಕ್ಕೆ ಪ್ರೇಕ್ಷಕರಾಗಿ ಇರ್ತೇವೆ ಅಷ್ಟೇ... ಆದರೂ ಒಂದಿಷ್ಟು ವಿವೇಚನೆ, ಒಂದಿಷ್ಟು ಗಟ್ಟಿ ನಿರ್ಧಾರಗಳು, ಸಾಕಷ್ಟು ನಿದ್ರೆ, ಆಹಾರ ಸೇವನೆ ಮತ್ತು ಮನಃಶಾಂತಿ ಪಾಲನೆಗೊಂದಿಷ್ಟು ಸಮಯ ಮೀಸಲಿಡುವಷ್ಟು ವ್ಯವಧಾನಗಳನ್ನು ರೂಢಿಸಿಕೊಳ್ಳದೇ ಹೋದರೆ ನಾಳೆ ನಮ್ಮ ನಮ್ಮ ದುರಾದೃಷ್ಟಗಳು ನಮ್ಮದೇ ಸ್ವಯಂಕೃತ ಅಪರಾಧಳಾಗಿಬಿಡಬಹುದು. ನಮ್ಮನ್ನು ತಮ್ಮ ಅಗತ್ಯಗಳಿಗೆ, ತಮ್ಮ ತಮ್ಮ ಪ್ರಚಾರಕ್ಕೆ, ತಮ್ಮ ತಮ್ಮೆ ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿದವರ ಪೈಕಿ ಯಾರೂ ಕೂಡಾ ನಾವು ಅನಾರೋಗ್ಯ ಪೀಡಿತರಾಗಿ ಕುಸಿದಾಗ ನಮ್ಮ ಆಯುಷ್ಯ ಹಂಚಿಕೊಳ್ಳಲು ಬರುವುದಿಲ್ಲ ನೆನಪಿಡಿ. ಕೆಲವೇ ಕೆಲವೇ ಮಂದಿಯನ್ನು ಹೊರತುಪಡಿಸಿ, ಇತರ ಎಲ್ಲ ಸಮಯ ಸಾಧಕರು ನಮ್ಮ ಸಾವಿನ ಕತೆಯನ್ನು ಕೇಳಿಸಿ ಒಂದು ಸಂತಾಪ ಸೂಚಿಸಿ, ಎರವಲು ಪಡೆದ ಫೋಟೋವನ್ನು ಸ್ಟೇಟಸ್ಸಿನಲ್ಲಿ ಹಾಕಿ ಗೌರವ ಸಲ್ಲಿಸ್ತಾರೆ. ಆ ಸ್ಟೇಟಸ್ ಫೋಟೋ ಸಹ 24 ಗಂಟೆಗಳಲ್ಲಿ ತನ್ನಷ್ಟಕ್ಕೇ ಇಲ್ಲವಾಗುತ್ತದೆ... ಮತ್ತೆ ಆ ಜಾಗಕ್ಕೆ ಮತ್ತೊಂದು ಸ್ಟೇಟಸ್ ಬರುತ್ತದೆ.

ಹಾಗಾಗಿ ದಿಢೀರ್ ಅನ್ನಿಸುವಂತೆ ಕಾಡುವ ಸಾವುಗಳ ಹಿಂದೆಯೂ ಕತೆಗಳಿರ್ತವೆ, ಸಾಕಷ್ಟು ಒತ್ತಡಗಳಿರ್ತವೆ. ಪ್ರತಿ ಸಾವಿಗೂ ಒಂದು ಕಾರಣ ಇರ್ತದೆ, ಕೆಲವು ಕಾಣಿಸುತ್ತದೆ, ಕೆಲವು ಕಾಣಿಸುವುದಿಲ್ಲ...  ಯಾವುದನ್ನೂ ಸರಿಯಾಗಿ ಅರಿತುಕೊಳ್ಳದೆ ಒಬ್ಬನ ಆತಂಕವನ್ನು ತಮಾಷೆ ಮಾಡುವುದು, ಆತನ ಒತ್ತಡದ ಬಗ್ಗೆ ಹಗುರವಾಗಿ ಮಾತನಾಡುವುದು, ಹೀಯಾಳಿಸುವುದು, ಪ್ರಾಮಾಣಿಕತೆಯನ್ನೇ ಪ್ರಶ್ನಿಸುವುದು ಇವೆಲ್ಲ ಅತ್ಯಂತ ಅಸಮಂಜಸ ನಡವಳಿಕೆಗಳು ಅಷ್ಟೇ... ಏನು ತಲುಪುವುದಿದ್ದರೂ ಅದು ದೇಹ ಉಸಿರಾಡುವ ತನಕ ಮಾತ್ರ. ಸತ್ತ ಮೇಲೆ ಉಳಿಯುವುದು ಪ್ರಶ್ನೆಗಳು ಮತ್ತು ಗಾಢ ವಿಷಾದ ಮಾತ್ರ... ಸಾವಿಗೆ UNDO ಆಯ್ಕೆಯೇ ಇಲ್ಲ!

-ಕೃಷ್ಣಮೋಹನ ತಲೆಂಗಳ (25.02.2025)

No comments:

Popular Posts