ಅಚ್ಚರಿಗೂ, ಕುತೂಹಲಕ್ಕೂ ಇದು ಸಮಯವಲ್ಲ... ನೀವೇನಂತೀರಿ?!

 



ತಂತ್ರಜ್ಞಾನ ನಮ್ಮನ್ನು, ನಮ್ಮ ನಂಬಿಕೆ, ಬದುಕುವ ರೀತಿ, ಭಾವನೆಗಳನ್ನೂ ಅಗಾಧವಾಗಿ ಬದಲಿಸಿದೆ. ಅಂದಾಜು 2 ದಶಕಗಳಿಂದ ಸಂವಹನ ತಂತ್ರಜ್ಞಾನದ ಬೆಳವಣಿಗೆಯ ವಿಪರೀತ ಸಾಧ್ಯತೆಗಳು ನಮ್ಮೊಳಗಿನ ಕುತೂಹಲ, ಅಚ್ಚರಿ ಮತ್ತು ನಿರೀಕ್ಷೆಗಳನ್ನು ಅಕ್ಷರಶಃ ಹೊಸಕಿ ಹಾಕಿವೆ. ಹಿಂದಿರುಗಿ ನೋಡಿದರೆ ನಾವೆಷ್ಟು ನಿರ್ಲಿಪ್ತವಾಗಿ ಕುತೂಹಲವೆಂಬ ಭಾವವನ್ನೇ ತೊರೆದು ಬದುಕುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.

1)      ಬಾಲ್ಯದಲ್ಲಿ ರೇಡಿಯೋ ನಮಗೆ ಸಂವಹನ ಸೇತುವೆ ಆಗಿತ್ತು. ಮಾಹಿತಿ, ಮನರಂಜನೆ ಎರಡಕ್ಕೂ ಏಕಮೇವ ದ್ವಿತೀಯ ಮಿತ್ರ ರೇಡಿಯೋ ಮಾತ್ರ. ಮನೆಗೆ ಕರೆಂಟೇ ಇಲ್ಲದ ದಿನಗಳಲ್ಲಿ, ಪೇಪರೂ ಮನೆಗೆ ಬಾರದಂಥಹ ಪ್ರದೇಶದಲ್ಲಿ ರೇಡಿಯೋದಿಂದಲೇ ಸುದ್ದಿ ಮತ್ತು ಖುಷಿ ಸಿಗ್ತಾ ಇದ್ದದ್ದು. ಆಗೆಲ್ಲ ನಮಗೆ ಕುತೂಹಲ, ರೇಡಿಯೋದೊಳಗೆ ಕುಳಿತು ಹೇಗೆ ಮಾತನಾಡ್ತಾರೆ ಅಂತ. ಸ್ವಲ್ಪ ದೊಡ್ಡವರಾದ ಮೇಲೆ ಅವರೆಲ್ಲ ಆಕಾಶವಾಣಿ ಕೇಂದ್ರದಿಂದ ಮಾತನಾಡ್ತಾರೆ ಅಂತ ಗೊತ್ತಾಯ್ತು. ಹಾಗಾದರೆ, ಈ ಆಕಾಶವಾಣಿ ಕೇಂದ್ರ ಹೇಗಿರಬಹುದು. ಸ್ವರ್ಗಸದೃಶವಾಗಿರಬಹುದೇ. ಅಲ್ಲಿ ಕೆಲಸ ಮಾಡುವವರೆಲ್ಲ ಎಷ್ಟು ಶ್ರೇಷ್ಠರಾಗಿರಬಹುದು, ಎಷ್ಟು ಚಂದ ಇರಬಹುದು, ಎಷ್ಟು ಸ್ನೇಹಮಯಿಗಳಾಗಿರಬಹುದು ಎಂಬಿತ್ಯಾದಿ ಬಾಲಿಶ ಕಲ್ಪನೆಗಳು. ಪ್ರತಿ ಧ್ವನಿಯನ್ನೂ ಆಲಿಸುವಾಗ ಈ ಉದ್ಘೋಷಕರು ನೋಡಲು ಹೇಗಿರಬಹುದು, ಅವರಿಗೆಷ್ಟು ವಯಸ್ಸಾಗಿರಬಹುದು. ಎದುರು ಸಿಕ್ಕರೆ ಅವರು ನಮ್ಮಲ್ಲಿ ಮಾತನಾಡಬಹುದೇ, ಅವರೂ ನಮ್ಮ ಹಾಗೆ ಸಾಮಾನ್ಯ ಮನುಷ್ಯರೇ ಇರಬಹುದ? ಎಂಬಿತ್ಯಾದಿ ಕುತೂಹಲ ಖಂಡಿತಾ ಇತ್ತು. ಮಂಗಳೂರು ಆಕಾಶವಾಣಿ ಕೇಂದ್ರದ ಉದ್ಘೋಷಕರ ಧ್ವನಿಗಳನ್ನು ದಶಕಗಳ ಕಾಲ ಆಲಿಸಿದರೂ ಅವರ ಫೋಟೋ ಸಮೇತ ಎಲ್ಲಿಯೂ ನೋಡಲು ಸಿಗ್ತಾ ಇರಲಿಲ್ಲ. ಇಂಟರೆನೆಟ್, ಮೊಬೈಲ್ ಎರಡೂ ಇಲ್ಲದ ಕಾಲದಲ್ಲಿ ರೇಡಿಯೋ ಶಾರೀರಗಳ ಶರೀರಗಳನ್ನು ನೋಡುವ ಸಾಧ್ಯತೆಯೇ ಇರಲಿಲ್ಲ. ನೋಡಬೇಕಾದರೆ ಆಕಾಶವಾಣಿ ಕೇಂದ್ರಕ್ಕೆ ಹೋಗಬೇಕು. ಅದು ಸಾಧ್ಯವಾ ಅಂತ ಗೊತ್ತೇ ಇರಲಿಲ್ಲ. ಇವತ್ತು ಆರ್ ಜೆ ಅಂತ ನೇಮಕವಾದರೆ ಸಾಕು, ಫೇಸ್ಬುಕ್ಕು, ಇನ್ ಸ್ಟಾ, ವೆಬ್ ಸೈಟುಗಳಲ್ಲಿ ಅವರ ಫೋಟೋ ಸಹಿತ ಇಡೀ ಜಾತಕವೇ ಸಿಗ್ತದೆ. ಮತ್ತೆ ಅವರಿನ್ನು ಹೇಗಿರಬಹುದು ಅಂತ ಕುತೂಹಲ ಪಡುವ ಅನಿವಾರ್ಯತೆ, ಅವಶ್ಯಕತೆ ಎರಡೂ ಇಲ್ಲ ಅಂತ ಪ್ರತ್ಯೇಕ ಹೇಳಬೇಕಾಗಿಲ್ಲ.

2)      ಬಾಲ್ಯದಲ್ಲಿ ಹಾಡುಗಳನ್ನು ಕೇಳಲು ಅವಕಾಶ ಇದ್ದ ಎರಡೇ ಎರಡು ಆಯ್ಕೆಗಳು ರೇಡಿಯೋ ಮತ್ತು ಟೇಪ್ ರೆಕಾರ್ಡರ್. ರೇಡಿಯೋದಲ್ಲಿ ಬರುವ ಚಿತ್ರಗೀತೆ, ಕೋರಿಕೆಗಳಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ, ಎಸ್. ಜಾನತಿ, ಡಾ.ರಾಜ್ ಕುಮಾರ್, ಪಿಬಿ ಶ್ರೀನಿವಾಸ್, ಏಸುದಾಸ್, ಮಹಮ್ಮದ್ ರಫಿ... ಮತ್ತಿತರ ಹೆಸರುಗಳು ಇಲ್ಲೇ ಅಕ್ಕಪಕ್ಕದವರೇನೋ ಎಂಬಂಥ ಭಾವ ಕೊಡುತ್ತಿತ್ತು. ಸ್ಪಲ್ಪ ದೊಡ್ಡವರಾದ ಮೇಲೆ ಕ್ಯಾಸೆಟ್ಟುಗಳನ್ನು ಹಾಕಿ ಇವರ ಹಾಡುಗಳನ್ನೆಲ್ಲ ಕೇಳಲು ಸಾಧ್ಯವಾಯಿತು. ಆದರೂ ಈ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಎಷ್ಟು ಪ್ರಾಯ, ನೋಡಲು ಹೇಗಿದ್ದಾರೆ, ಅವರು ಯಾವ ಊರಿನವರು, ಪಿಬಿ ಶ್ರೀನಿವಾಸ್ ಅಂದರೆ ಕನ್ನಡಿಗರ, ಅವರು ವಯಸ್ಕರ, ವಯಸ್ಸಾದವರ? ಎಂಬಿತ್ಯಾದಿ ಕುತೂಹಲಗಳಿದ್ದವು. ಪತ್ರಿಕೆ ಮತ್ತು ನಿಯತಕಾಲಿಕಗಳೂ ಅಪರೂಪವಾಗಿ ಸಿಕ್ಕಾಗ ಎಲ್ಲೋ ಕಂಡ ಅವರ ಕಪ್ಪು ಬಿಳುಪಿನ ಫೋಟೋ ನೋಡಿರಬಹುದೇ ವಿನಃ ಈಗಿನ ಹಾಗೆ ಇನ್ ಸ್ಟಾ ರೀಲ್ಸು, ಫೇಸ್ಬುಕ್ ವಾಲ್, ದಿನಪೂರ್ತಿ ಟಿವಿ ಚಾನೆಲ್ಲುಗಳಲ್ಲಿ ಬರುವ ರಿಯಾಲಿಟಿ ಶೋ ಮತ್ತಿತರ ಯಾವುದೇ ಜಾಗದಲ್ಲಿ ಈ ಮಹನೀಯರ ಫೋಟೋ, ವಿಡಿಯೋ, ವೈಯಕ್ತಿಕ ವಿವರಗಳನ್ನು ನೋಡಲು ಸಾಧ್ಯವೇ ಇರಿಲಿಲ್ಲ. ಹಾಗಾಗಿ ಯೌವ್ವನಕ್ಕೆ ಕಾಲಿಡುವ ವರೆಗೂ ಈ ಮೇಲೆ ಹೇಳಿದ ಬಹುತೇಕರು ಹೇಗಿದ್ದಾರೆ, ಎಲ್ಲಿದ್ದಾರೆ ಎಂಬಿತ್ಯಾದಿ ಕುತೂಹಲಗಳು ಜತನವಾಗಿ ಹಾಗೆಯೇ ಉಳಿದಿದ್ದವು. ಈಗ ಬೇಕಾದರೆ ಫೇಸ್ಬುಕ್ಕು, ಎಕ್ಸ್, ಇನ್ ಸ್ಟಾ, ಲೈವ್ ಶೋಗಳಲ್ಲಿ ನೇರವಾಗಿ ಅವರನ್ನು ಸಂಪರ್ಕಿಸಬಹುದು. ಯಾವುದೇ ಕುತೂಹಲ ಉಳಿಸುವ ಅವಕಾಶ ಇಲ್ಲ.

3)      ಬಾಲ್ಯದಲ್ಲಿ ರೇಡಿಯೋದಲ್ಲಿ ಕೇಳಿದ ಹಾಡುಗಳು ಸಾವಿರಾರು. ಈ ಪೈಕಿ ಎಷ್ಟೋ ಹಾಡುಗಳು ಇಂದಿಗೂ ಬಾಯಿಪಾಠ ಬರುತ್ತವೆ ಅಂತಾದರೆ ಅದಕ್ಕೆ ಕಾರಣ ರೇಡಿಯೋ. ಆದರೆ ಆ ಹಾಡು ಸಿನಿಮಾದಲ್ಲಿ ಹೇಗೆ ಚಿತ್ರೀಕರಣಗೊಂಡಿದೆ, ಯಾರು ನಾಯಕ, ನಾಯಕಿ, ಸನ್ನಿವೇಶ ಯಾವುದು, ಅದು ಕೌಟುಂಬಿಕ ಸನ್ನಿವೇಶವ, ಅಡಲ್ಟ್ ದೃಶ್ಯವ ಎಂಥದ್ದೂ ನಮಗೆ ಗೊತ್ತಿರಲಿಲ್ಲ. ಕಾರಣ ಟಿವಿ ನೋಡುವುದಕ್ಕೆ ಅವಕಾಶ ಇರಲಿಲ್ಲ. ಸಿಡಿ ಪ್ಲೇಯರ್, ಟಾಕೀಸು ಎಲ್ಲ ತುಂಬ ಸ್ಥಿತಿವಂತರಿಗೆ ಮಾತ್ರ ಸಿಕ್ಕುವಂಥದ್ದು. ತೀರಾ ಸಾಮಾನ್ಯರು ಕೇವಲ ಹಾಡುಗಳನ್ನೇ ಕೇಳಿ ಅದರ ದೃಶ್ಯಗಳನ್ನು ತಾವೇ ಕಲ್ಪಿಸಿ, ಖುಷಿ ಪಟ್ಟು ದೊಡ್ಡವರಾದವರು ನಮ್ಮಂಥ 80, 90ರ ದಶಕದ ಹುಡುಗರು... ಇವತ್ತಿಗೂ ಎಷ್ಟೋ ಹಾಡುಗಳ ಸೀನುಗಳನ್ನು ಟಿವಿಯಲ್ಲಿ ನೋಡೂವಾಗ ಮೂಲ ಹಾಡಿನ ಸ್ವಾದವೇ ಮಾಸಿದ ಹಾಗೆ ಭಾಸವಾಗುತ್ತದೆ. ಕೇವಲ ಹಾಡು ಕೇಳುತ್ತಿದ್ದಾಗ ಸಿಕ್ಕ ಅನುಭೂತಿ ದೃಶ್ಯ ಸಹಿತ ನೋಡಿದಾಗ ಕೆಲವೊಮ್ಮೆ ಗಿಟ್ಟುವುದೇ ಇಲ್ಲ...

4)      40 ವರ್ಷಗಳ ಹಿಂದೆ ಸಂಪರ್ಕಕ್ಕೆ ಸಿಗ್ತಾ ಇದ್ದದ್ದು ಪೋಸ್ಟಾಫೀಸು. ಕಾಗದ ಬರೆದು, ಪೋಸ್ಟು ಮಾಡಿ, ಅದು ಅವರಿಗೆ ತಲುಪಿ, ಮತ್ತೆ ಉತ್ತರ ಬಂದು ಆ ಪತ್ರ ತೆರೆದು ಓದುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಾಗದು. ಕಾಗದ ಸಿಕ್ಕಿದ ಅಂತ ಕೇಳಲು ಆಗ ಫೋನೂ ಇರಲಿಲ್ಲ ಬಿಡಿ! ಸಾವಧಾನವಾಗಿ ಬರೆಯುವ ಪತ್ರ, ಆ ಅಕ್ಷರಗಳ ಹಿಂದಿರುವ ಕಾಳಜಿ, ಮತ್ತೆ ಉತ್ತರ ಬಂದಾಗ ಹತ್ತಾರು ಸಲ ಓದುವ, ಮಡಿಚಿಡುವ ಸುಖ, ಕಾಗದ ಬರುವ ವರೆಗಿನ ಕಾತರ, ನಿರೀಕ್ಷೆ ಇವುಗಳ ಸಂತಸವನ್ನು ನಾವು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ. ಜಗತ್ತು ಇಂದು ಲೈವ್ ಆಗಿದೆ. ಸುದ್ದಿಗೋಷ್ಠಿಯನ್ನೇ ಜನ ಲೈವ್ ನೋಡುವ ಸಂದರ್ಭ ಅದನ್ನು ವರದಿಗಾರ ಸುದ್ದಿ ಮಾಡಿ ಮರುದಿನ ಪ್ರಿಂಟ್ ಆಗಿ ಪತ್ರಿಕೆಯಲ್ಲಿ ಬರುವ ಹೊತ್ತಿಗೆ ಹಳತಾಗಿರುತ್ತದೆ. ಲೈವ್ ಲೊಕೇಶನ್ ಕಳಿಸಿ ಅಂತ ನೆಂಟರು ಮೆಸೇಜು ಮಾಡಿ, ನಾವು ಮೆಸೇಜ್ ಕಳಿಸಿ ಕೆಲವೇ ನಿಮಿಷಗಳಲ್ಲಿ ಅವರು ಮನೆಗೆ ಅತಿಥಿಗಳಂತೆ ಬಂದರೂ ಎಲ್ಲ ಮಾಹಿತಿ ಮೊದಲೇ ಗೊತ್ತಿದ್ದು, ಅವರು ನಿರೀಕ್ಷಿತ ಸಮಯಕ್ಕೇ ಬಂದು ತಲುಪುವಾಗ ಯಾವ ಅಚ್ಚರಿಯೂ ಆಗಲು ಸಾಧ್ಯವೇ ಇಲ್ಲ. ನಲುವತ್ತು ವರ್ಷಗಳ ಹಿಂದೆ ಯಾವುದೇ ಸೂಚನೆ ಇಲ್ಲದೆ ಮನೆಗೆ ಬರುವ ನೆಂಟರು ಮನೆಯಲ್ಲಿ ಹೆಚ್ಚಿನ ಮೂಲ ಸೌಕರ್ಯ ಇಲ್ಲದೇ ಇದ್ದರೂ ಎರಡು ದಿನ ನಿಂತು ಆತಿಥ್ಯ ಸ್ವೀಕರಿಸಿ ಹೊರಟಾಗ ಇನ್ನೂ ಒಂದು ದಿನ ಇರಬಹುದಿತ್ತು ಎಂಬ ಮಾತು ಹೃದಯದಿಂದಲೇ ಬರ್ತಾ ಇತ್ತು. ಈಗಿನ ಹಾಗೆ ಅಸಹನೆಗಳು ಇರಲಿಲ್ಲ. ಇಂತಹ ಸಾವಕಾಶ, ಕಾತರಗಳನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಅಚ್ಚರಿ ಎಂಬುದು ಇಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಒಂದು ದೃಶ್ಯವಾಗಿ ಬಿಟ್ಟಿದೆ.

5)      ತರಂಗ, ಸುಧಾ, ಕರ್ಮವೀರ, ಮಂಗಳಗಳಲ್ಲಿ ಸಾಪ್ತಾಹಿಕ ಧಾರಾವಾಹಿಗಳು ಬರ್ತಾ ಇದ್ದವು. ಜನ ಕಾದು ಕುಳಿತು ಓದುತ್ತಿದ್ದರು. ಕಳೆದ ವಾರದ ಕತೆಯಿಂದ ತೊಡಗಿ ಈ ವಾರದ ಕತೆಯನ್ನು ಓದುವುದಕ್ಕೆ ತುಂಬ ಕಾತರ ಇತ್ತು. ಕೆಲವರು ಧಾರಾವಾಹಿಯ ಪುಟಗಳನ್ನು ಕತ್ತರಿಸಿ ಇಟ್ಟು, ಕೊನೆಗೆ ಬೈಂಡ್ ಮಾಡಿ ಕಾದಂಬರಿ ಥರ ಮಾಡಿ ಓದುತ್ತಿದ್ದರು. ಫೋಟೋ ಕಾಮಿಕ್ಸ್ ಗಳು ಸಹ ಹೀಗೆಯೇ. ಕಾದು ಕುಳಿತು ಓದುತ್ತಿದ್ದ ಚಂದಮಾಮಾ, ಬಾಲಮಂಗಳ, ಕಸ್ತೂರಿ, ತುಷಾರ, ಮಲ್ಲಿಗೆ, ರೂಪತಾರ ಎಲ್ಲವೂ ಅಷ್ಟೇ... ಇಂದು ಸಿಕ್ಕಾಪಟ್ಟೆ ಆನ್ ಲೈನ್ ಬಿಸಿಯಲ್ಲಿ ಎಲ್ಲಿಯೋ ಕರಗಿ ನಾಮಾವಶೇಷ ಇಲ್ಲದಷ್ಟು ಮಾಯವಾಗಿದೆ... ಹುಡುಕಿದರೂ ಅಂತಹ ಖುಷಿಗಳು ಮತ್ತೊಮ್ಮೆ ಸಿಗಲಿಕ್ಕಿಲ್ಲ.

6)      ಸುಧಾ, ತರಂಗ, ತುಷಾರ, ಮಂಗಳಗಳಲ್ಲಿ ತುಂಬ ಮಂದಿ ಲೇಖಕರ ಬರಹಗಳು ಬರ್ತಾ ಇದ್ದವು. ಸಾಯಿಸುತೆ, ಯಂಡಮೂರಿ, ಉಷಾನವರತ್ನರಾಮ್, ಮಲ್ಲಾದಿ ವೆಂಕಟಕೃಣ್ಣ ಮೂರ್ತಿ, ಕೌಂಡಿನ್ಯ, ಬಿವಿ ಅನಂತ ರಾಂ, ಹೀಗೆ... ಎಷ್ಟೊಂದು ಮಂದಿ ಲೇಖಕರು. ಅವರ ಸಣ್ಣಕತೆ, ಧಾರಾವಾಹಿ ಓದುವ ಖುಷಿ. ಆದರೆ ಅವರು ಯಾರು, ಎಲ್ಲಿಯವರು, ನೋಡಲು ಹೇಗಿದ್ದಾರೆ, ಪಾಪವ, ಜೋರಾ... ಹೀಗೆ ಯಾವುದೇ ಮಾಹಿತಿ ಸಿಗ್ತಾ ಇರಲಿಲ್ಲ. ಬಹುತೇಕ ಅಜ್ಞಾತ ಲೇಖಕರಾಗಿದ್ದರು. ಕೌಂಡಿನ್ಯ ಎಂಬುದು ಓರ್ವ ಬರಹಗಾರರ ಕಾವ್ಯನಾಮ ಅಂತ ಕೂಡಾ ಗೊತ್ತಿರಲಿಲ್ಲ. ಆದರೂ ಅಜ್ಞಾತವಾಗಿಯೇ ಇದ್ದ ಲೇಖಕರ ಬರಹಗಳು ನೀಡುತ್ತಿದ್ದ ಖುಷಿ, ಅವರ ಕುರಿತು ಹೆಚ್ಚು ಗೊತ್ತಿರದೇ ಇದ್ದರು ಅವರ ಬರಹದ ಅಭಿಮಾನಿಗಳಾಗಿ ಆ ಚಿಂತನೆಗಳನ್ನು, ಕಲ್ಪನೆಗಳನ್ನು ಓದುತ್ತಿದ್ದುದರಲ್ಲಿ ಸಾಕಷ್ಟು ಸಂತೋಷವಿತ್ತು. ಇಂದು ಲೇಖಕರು ಅಜ್ಞಾತವಾಗಿರುವುದಲ್ಲ. ಜನರಿಗೆ ಲಭ್ಯ ಇರುತ್ತಾರೆ. ಅವರು ಹೇಗಿದ್ದಾರೆ ಎಂಬಿತ್ಯಾದಿ ಕುತೂಹಲಗಳು ಇರುವುದಿಲ್ಲ. ಬರಹಗಾರರು, ನಟರು, ಗಾಯಕರ ಸಹಿತ ಸೆಲೆಬ್ರಿಟಿಗಳು ಜಾಲತಾಗಣಗಳಲ್ಲಿ, ಟಿವಿ ಜಗತ್ತಿನಲ್ಲಿ ಸದಾ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ಅಚ್ಚರಿ ಮತ್ತು ಕುತೂಹಲ ಎರಡೂ ಇಲ್ಲದೆ ನಾವು ಅವರನ್ನು ಸ್ವೀಕರಿಸುತ್ತೇವೆ.

7)      ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಮುಗಿದ ಮೇಲೆ ಆಟೋಗ್ರಾಫ್ ಪುಸ್ತಕ ರೆಡಿ ಮಾಡುವುದು ತುಂಬ ರೋಚಕ ಸಂಗತಿ ಆಗಿತ್ತು. ಒಂದು ಡೈರಿಯನ್ನು ಎಲ್ಲಿಂದಾದರೂ ಸಂಪಾದಿಸುವುದು, ಅದರ ಮೊದಲ ಪುಟದಲ್ಲಿ ಯಾರಾದರೂ ಆರ್ಟಿಸ್ಟ್ ಹತ್ರ ಹೆಸರು ಬರೆಸುವುದು, ಮೊದ....ಲು ಶಿಕ್ಷಕರ ಹತ್ತಿರ, ನಂತರ ಕ್ಲಾಸ್ ಮೇಟ್ ಗಳ ಹತ್ತಿರ, ಕೊನೆಗೆ ಪ್ರಾಣಸ್ನೇಹಿತರು, ಪ್ರಾಣಸ್ನೇಹಿತೆಯರ ಹತ್ರ ಬರೆಸುವುದು, ಅವರು ಪುಟಗಟ್ಟಲೆ ಬರೆಯುವುದು, ಕೆಲವು ಕೋಡ್ ವರ್ಡುಗಳ ಬರಹ... ಅವರ ಫೋಟೋ ಅಂಟಿಸುವುದು, ಮೈ ಫಸ್ಟ್ ಕ್ರೈ ಅಂತ ಬರ್ತ್ ಡೇ ದಿನ ನಮೂದಿಸುವುದು, ಮದುವೆ ಕಾಗದ ಕಳಿಸು ಅಂತ ಇಂಗ್ಲಿಷಿನಲ್ಲಿ ಬರೆಯುವುದು ಇವೆಲ್ಲ ಈಗ ಇತಿಹಾಸ... ಈಗ ಕಾಲೇಜು ತೊರೆದರೂ ಯಾರೂ ಯಾರನ್ನೂ ಅಗಲುವುದಿಲ್ಲ. ಲೆಕ್ಕಕ್ಕಿಂತ ಜಾಸ್ತಿಯೇ ಸಂಪರ್ಕದಲ್ಲಿ ಇರ್ತಾರೆ. ಮತ್ತೆ ಆಟೋಗ್ರಾಫ್ ಎಂಬ ಅನಗತ್ಯ ಪುಸ್ತಕದ ಅಗತ್ಯವಾದರೂ ಏನಿದೆ ಅಲ್ವ?

8)      ದೂರದರ್ಶನ ಎಂಬ ಏಕೈಕ ಚಾನೆಲ್ಲು ಇದ್ದಾಗ ಕಾದು ಕುಳಿತು ನೋಡುತ್ತಿದ್ದ ಚಿತ್ರಹಾರ್, ರಂಗೋಲಿ, ಚಿತ್ರಮಂಜರಿ, ಆದಿತ್ಯವಾರ ಸಂಜೆಯ ಸಿನಿಮಾ, ಕಾಣೆಯಾದವರ ವಿವರ... ಯಾರ್ಯಾರದ್ದೋ ಮನೆಯ ಟಿವಿಯನ್ನು ಕಿಟಕಿಯಲ್ಲಿ ಇಣುಕಿ ನೋಡಿದ ರಾಮಾಯಣ, ಮಹಾಭಾರತ, ಚಾಣಕ್ಯ, ಪರಮವೀರಚಕ್ರ ಮತ್ತಿತರ ಧಾರಾವಾಹಿಗಳು.. ಕ್ರಿಕೆಟ್ಟು ಮ್ಯಾಚುಗಳು, ರೇಡಿಯೋದಲ್ಲಿ ಕಾದು ಕುಳಿತು ಕೇಳುತ್ತಿದ್ದ ಚುನಾವಣಾ ಫಲಿತಾಂಶಗಳು, ಯಕ್ಷಗಾನ ತಾಳಮದ್ದಳೆ, ಕನ್ನಡ ಚಲನಚಿತ್ರ ದ್ವನಿವಾಹಿನಿಗಳು, ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಕೋರಿಕೆ... ಹೀಗೆ ಎಷ್ಟು ನಿರೀಕ್ಷೆ ಇತ್ತಲ್ವ ಆಗ ಒಂದೊಂದು ಕಾರ್ಯಕ್ರಮಗಳನ್ನು ಆಸ್ವಾದಿಸುವುದಕ್ಕೆ.... ಇವತ್ತು ಎಲ್ಲ ವ್ಯವಸ್ಥೆ ಇದೆ. ನೋಡುವ, ಕೇಳುವ ಆಸಕ್ತಿ, ವ್ಯವಧಾನವೇ ಯಾರಿಗೂ ಇಲ್ಲ.

9)      ಸಭೆ ಸಮಾರಂಭಗಳಿಗೆ ಹೋದಾಗಲೂ ಬರುವುದಕ್ಕೆ, ಉಣ್ಣುವುದಕ್ಕೆ, ಹೊರಡುವುದಕ್ಕೆ ಶಿಷ್ಟಾಚಾರ, ಸಾವಕಾಶಗಳು ಇದ್ದವು. ಇವತ್ತು ಹಾಗಲ್ಲ ಮದುವೆ ಧಾರೆ ಕಳೆದ ತಕ್ಷಣ ಊಟದ ಟೇಬಲ್ ಎದುರು ಕೂರುತ್ತೇವೆ. ಯಾಕಂದರೆ ಮತ್ತೆ ಸೀಟು ಸಿಕ್ಕುವುದಿಲ್ಲ ಅಂತ. ಒಂದು ಕಾಲದಲ್ಲಿ ಮನೆಯ ಯಜಮಾನ ಬಂದು ಊಟಕ್ಕೆ ಕೂರುವ ಅಂತ ಕರೆಯುವ ವರೆಗೆ ಯಾರೂ ಊಟಕ್ಕಾಗಿ ಹಾತೊರೆಯುತ್ತಿರಲಿಲ್ಲ. ಇವತ್ತು ಟೈಮಿಲ್ಲ, ಗಡಿಬಿಡಿ, ಅವರಿವರನ್ನು ದೂಡಿಯಾದರೂ ಸರಿ ಊಟಕ್ಕೆ ಜಾಗ ಗಿಟ್ಟಿಸಿ, ಕೈತೊಳೆದು ಅಲ್ಲಿಂದಲೇ ಯಾರಿಗೂ ಮಾಹಿತಿ ನೀಡದೆ ನಿರ್ಗಮಿಸುತ್ತೇವೆ. ಬಂದಿರಾ, ಉಂಡಿರಾ, ಹೊರಟಿರಾ ಅಂತ ಕೇಳುವ ತಾಳ್ಮೆಯೂ ಹೆಚ್ಚಿನ ಯಾರಿಗೂ ಇರುವುದಿಲ್ಲ.

10)   ಇಡೀ ರಾತ್ರಿ ಕುಳಿತು ಯಕ್ಷಗಾನ ನೋಡುತ್ತಿದ್ದೆವು, ತಾಳಮದ್ದಳೆ ಕೇಳುತ್ತಿದ್ದೆವು, ನಡೆದುಕೊಂಡೇ ಹೋಗಿ ಜಾತ್ರೆ ನೋಡುತ್ತಿದ್ದೆವು, ಗುಡ್ಡಕ್ಕೆ ಗೇರು ಬೀಜ ಕೊಯ್ಯಲು ಹೋಗುತ್ತಿದ್ದೆವು, ಎಷ್ಟೇ ಹೊತ್ತಾದರೂ ನಡೆದುಕೊಂಡೇ ಶಾಲೆಗೆ ತೆರಳುತ್ತಿದ್ದೆವು, ಪೇಪರನ್ನು ಮೊದಲ ಪುಟದಿಂದ ಕೊನೆಯ ಪುಟದ ವರೆಗೂ ಒಂದಕ್ಷರ ಬಿಡದೆ ಓದುತ್ತಿದ್ದೆವು, ರೇಡಿಯೋ ಕಾರ್ಯಕ್ರಮ ಕೇಳಿ ಇನ್ ಲ್ಯಾಂಡ್ ಲೆಟರಿನಲ್ಲಿ ಪತ್ರೋತ್ತರ ಕಾರ್ಯಕ್ರಮಕ್ಕೆ ಕಾಗದ ಬರೆಯುವಷ್ಟು ಪುರುಸೊತ್ತು ಇತ್ತು... ಇವತ್ತು ಅವರಿವರ ವಿಷಯ ಬಿಡಿ, ನಮ್ಮ ನಿಮ್ಮೊಳಗೇ ಇಷ್ಟೊಂದು ಪುರುಸೊತ್ತು, ಆಸಕ್ತಿ ನಮಗಿದೆಯಾ ಅಂತ ಪ್ರಶ್ನೆ ಮಾಡಿಕೊಳ್ಳಿ....

 

ಈಗ ಹೇಳಿ ಕುತೂಹಲಕ್ಕೂ ಅಚ್ಚರಿಗೂ ಇದು ಸಮಯವಲ್ಲ... ಏನಂತೀರ... ನಿಮ್ಮ ಅನಿಸಿಕೆ ತಿಳಿಸಿ.

-ಕೃಷ್ಣಮೋಹನ ತಲೆಂಗಳ (13.03.2025)

No comments: