Saturday, March 28, 2015

ನಿನ್ನ ನೀನು ಮರೆತರೇನು ಸುಖವಿದೇ...ವ್ಯಕ್ತಿತ್ವಗಳನ್ನು ಗುರುತಿಸುವುದು, ನೆನಪಿಟ್ಟುಕೊಳ್ಳುವುದು, ಮೆಚ್ಚಿಕೊಳ್ಳುವುದು, ಗೌರವಿಸುವುದು ಯಾವುದರ ಆಧಾರದ ಮೇಲೆ... ರೂಪ, ಉಡುಪು, ಮಾತು, ದುಡ್ಡು... ಹೀಗೆ ಬೇರೆ ಬೇರೆ ಕಾರಣಗಳಿಂದ ವ್ಯಕ್ತಿತ್ವಗಳನ್ನು ಗುರುತಿಸಬಹುದು. ಆದರೆ, ನಿತ್ಯ ಬದುಕಿನಲ್ಲಿ ನಮ್ಮ ಒಡನಾಟಕ್ಕೆ ಸಿಗುವವರು ಮನಸ್ಸಿಗೆ ಹತ್ತಿರದವರಾಗುವುದು, ಆಪ್ತರೆನಿಸುವುದು ಸಂಬಂಧಗಳೇರ್ಪಡುವುದು ಅವರ ಚಿಂತನೆಗಳ ಮೇಲೆ ಅಲ್ವೇ... ಮಾತು, ನಡಿಗೆ, ಕೃತ್ಯ, ಪ್ರತಿಕ್ರಿಯೆ ಎಲ್ಲದಕ್ಕೂ ಮೂಲ ಮನಸ್ಸಿನಲ್ಲಿ ಹುಟ್ಟವ ಯೋಚನೆ..
ಭಿನ್ನ ಭಿನ್ನ ಚಿಂತನೆಗಳಿಂದಲೇ ಭಿನ್ನ ಭಿನ್ನ ವ್ಯಕ್ತಿಗಳು ರೂಪುಗೊಂಡಿರುವುದು ಮತ್ತು ಅವರನ್ನು ನಾವು ಹಾಗೆ ಗುರುತಿಸಲು ಸಾಧ್ಯವಾಗುವುದು. ವ್ಯಕ್ತಿಯೊಬ್ಬರ ಇಡೀ ಚಿತ್ರಣವನ್ನೇ ಕಟ್ಟಿಕೊಡಬಲ್ಲ ಚಿಂತನೆ ಅಥವಾ ಧೋರಣೆಯೇ ಬದಲಾದರೆ ಮತ್ತೆ ಆ ವ್ಯಕ್ತಿಯ ಐಡೆಂಟಿಟಿ ಕೂಡಾ ಹೊರಟು ಹೋದ ಹಾಗೆ ಅಲ್ಲವೆ....


-------------

ಯಾರೋ ಗಾಯಕ, ಯಾರೋ ಕಲಾವಿದ, ರಾಜಕಾರಣಿ, ಧರ್ಮಗುರು, ನಟ-ನಟಿಯರು ತಮ್ಮ ಕ್ಷೇತ್ರದಲ್ಲಿ ಹೆಸರುವಾಸಿಗಳೆಂದಾದರೆ ಆ ಹಂತಕ್ಕೆ ತಲುಪುವಲ್ಲಿ ಅವರದ್ದೇ ಆದ ಪ್ರತ್ಯೇಕ ಸಾಧನೆ, ಪ್ರತ್ಯೇಕ ಚಿಂತನೆಯೂ ಇತ್ತೆಂದೇ ಅರ್ಥ. ಅವರು ಒಂದು ಯಶಸ್ಸಿನ ಶಿಖರ ತಲುಪಬೇಕಾದ ವರೆಗಿನ ದಾರಿಯಲ್ಲಿ ಎಷ್ಟು ಎಡರು ತೊಡರುಗಳನ್ನು ದಾಟಿ ಬಂದಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು. ಅವೆಲ್ಲಾ ಲೋಕಮುಖಕ್ಕೆ ಗೊತ್ತಾಗುವುದಿಲ್ಲ. ಅಂತಿಮವಾಗಿ ಕಾಣುವುದು ಯಶಸ್ವಿ ವ್ಯಕ್ತಿ ಅಂತ ಮಾತ್ರ. 
ಏನೇ ಇರಲಿ..ಓರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಚಿನ್ ತೆಂಡೂಲ್ಕರ್, ಅಬ್ದುಲ್‌ ಕಲಾಂ, ಅಮಿತಾಭ್ ಬಚ್ಚನ್‌... ಆಯಾ ಕ್ಶೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು, ಯಾಕೆ ಹೇಳಿ.. ಅಲ್ಲಿ ಸ್ವಂತಿಕೆ ಇತ್ತು. ಅವರದ್ದೇ ಸಾಧನೆ ಇದೆ. ಮಾತ್ರವಲ್ಲ, ಭಿನ್ನವಾಗಿ ನಿಲ್ಲುವ ಅವರನ್ನು ಯಾರೊಂದಿಗೂ ಹೋಲಿಸುವ ಅಗತ್ಯವಿಲ. ಎಸ್ಪಿ ಎಂದರೆ ಎಸ್ಪಿ, ಸಚಿನ್ ಎಂದರೆ ಸಚಿನ್, ಕಲಾಂ ಎಂದರೆ ಕಲಾಂ.... ಯಾರೂ ಕೂಡಾ ಇಂತಿಂತವರ ಥರ ಇರುವ ಕಲಾಂ ಎಂದೋ, ಅಂತಹವರ ಹಾಗಿರುವ ಎಸ್ಪಿ ಬಾಲು ಎಂದೋ ಹೇಳುವುದಿಲ್ಲ. ಅವರಗೆ ಅವರೇ ಸಾಟಿ ಎಂಬ ಹಂತಕ್ಕೆ ತಲುಪಿದ ಕಾರಣ ಅವರದ್ದು ಆ ಮಟ್ಟಿನ ಶ್ರೇಷ್ಠತೆ.
------------------
ನಾನು ಹೇಳಲು ಹೊರಟಿರುವುದು, ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಗುರುತಿಸುವಿಕೆಯಿದೆ. ನಮ್ಮದೇ ಆದ ವೈಶಿಷ್ಟ್ಯ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದೆ. ಆದರೆ, ಯಾರನ್ನೋ ಅನುಕರಣೆ ಮಾಡುತ್ತಾ, ಯಾರನ್ನೋ ಮೆಚ್ಚಿಸಲು ಇನ್ಯಾವುದೋ ಹುಚ್ಚಾಟ ಆಡುತ್ತಾ, ನನ್ನ ಬದುಕಿನ ದಾರಿ ಇದಲ್ಲ ಎಂಬ ಹಾಗೆ ಜೀವನ ಸಾಗಿಸುವ ಉದ್ದೇಶದಿಂದ ನಮಗಿಷ್ಟ ಇಲ್ಲದಿದ್ದರೂ ದುಡಿಯುವ ಇನ್ಯಾವುದೋ ರಂಗದಲ್ಲಿ ದುಡಿಯುತ್ತಾ ನಮ್ಮದೇ ಆದ ವ್ಯಕ್ತಿತ್ವವನ್ನು ಎಕ್ಸ್‌ಪೋಸ್‌ ಮಾಡುವಲ್ಲಿ ಎಡವುತ್ತಿದ್ದೇವೆ. 
ಹಾಕಬೇಕಾದ ರಂಗದಲ್ಲಿ ಪ್ರಯತ್ನ ಹಾಕದೆ, ಇನ್ನೇಲ್ಲೋ ನಮಗೆ ಸಲ್ಲದ ‍ರಂಗದಲ್ಲಿ ಗೊಬ್ಬರ ಹೊತ್ತು ಹುಲುಸಾಗಿ ಫಸಲನ್ನೂ ತೆಗೆಯಲಾಗದೆ ಬಳಲುತ್ತಿದ್ದೇವೆ. ಚೆನ್ನಾಗಿ ಕವನ ಬರೆಯಬೇಕಾದವ ಎಲ್ಲೋ ಎಂಜಿನಿಯರ್ ಆಗಿ ಪ್ರೋಗ್ರಾಮಿಂಗ್ ಮಾಡುತ್ತಿರಬಹುದು. ಒಳ್ಳೆ ಪಾಠ ಮಾಡಿ ಮೇಷ್ಟ್ರು ಆಗಬೇಕಾದವ ಇನ್ನೇಲ್ಲೋ ಸಿ.ಎ. ಆಗಿಯೋ, ಬ್ಯಾಂಕ್ ಮ್ಯಾನೇಜರ್ ಆಗಿಯೋ ಇಷ್ಟ ಇಲ್ಲದಿದ್ದರೂ ಲೆಕ್ಕ ಪರಿಶೋಧನೆ ಮಾಡುತ್ತಿರಬಹುದು. ಚೆನ್ನಾಗಿ ಧ್ವನಿ ಇದ್ದು ಹಾಡಬಲ್ಲ ವ್ಯಕ್ತಿ ಮತ್ತೆಲ್ಲೋ ಪೊಲೀಸನೋ, ಮೇಷ್ಟ್ರೋ ಆಗಿ ಕಂಠ ಶೋಷಣೆ ಮಾಡುತ್ತಿರಬಹುದು. 
ಹೌದು ಅವಕಾಶ, ಅದೃಷ್ಟ, ಸೂಕ್ತ ನಿರ್ಧಾರಗಳು ಕೂಡಾ ವ್ಯಕ್ತಿಗಳನ್ನು ದೊಡ್ಡ ವ್ಯಕ್ತಿಗಳಾಗಿಸುವುದು ಸತ್ಯ. ಇದೇ ಕಾರಣಕ್ಕೆ ಪ್ರತಿಯೊಬ್ಬ ಗಾಯಕನೂ ಎಸ್ಪಿ ಆಗುವುದಿಲ್ಲ, ನಟರಾಗಬೇಕೆಂದುಕೊಂಡವರೆಲ್ಲ ಅಮಿತಾಭ್‌ ಮಟ್ಟಕ್ಕೆ ಏರುವುದಿಲ್ಲ. ಬ್ಯಾಟ್ ಹಿಡಿದವರೆಲ್ಲಾ ಮತ್ತೊಬ್ಬ ಸಚಿನ್ ತೆಂಡೂಲ್ಕರ್ ಆಗುವುದಿಲ್ಲ. 
ಅಪರೂಪಕ್ಕೊಮ್ಮೆ ಚೆನ್ನಾಗಿ ಹಾಡುವ ಆಟೋ ಚಾಲಕನೋ, ಉತ್ತಮ ಯಕ್ಷಗಾನ ವೇಷ ಹಾಕಬಲ್ಲ ಟೆಕ್ಕಿಯೋ, ಅದ್ಭುತ ಚಿತ್ರ ಬಿಡಿಸುವ ಇಂಗ್ಲಿಷ್ ಮೇಷ್ಟ್ರೋ ಕಾಣಸಿಗುತ್ತಾರೆ. ಅಂದರೆ ಆಸಕ್ತಿಯೇ ಬೇರೆ.... ಇರುವ ಕ್ಷೇತ್ರವೇ ಬೇರೆ ಎಂಬ ಹಾಗೆ...

----------------

ಸುಮ್ನೇ ಚಿಂತಿಸಿ ನೋಡಿ. ಜೀವನದಲ್ಲಿ ಸಾವಿರಾರು ಮಂದಿ ಭೇಟಿಯಾಗಿ, ಒಡನಾಡಿ, ಸಹೋದ್ಯೋಗಿಗಳಾಗಿ ಬರುತ್ತಾರೆ, ಇರುತ್ತಾರೆ, ಹೋಗುತ್ತಾರೆ.... ಅಲ್ವ... ಅವರೆಲ್ಲ ನಿಮ್ಮ ಮನಸ್ಸಿನಲ್ಲಿ ಉಳಿದಿರ್ತಾರ.... ಎಲ್ಲರನ್ನೂ ಸದಾ ನೆನಪಿನಲ್ಲಿರಿಸಿರ್ತೀರಾ... 
ಇಲ್ವಲ್ಲ... ಕೆಲವೇ ಕೆಲವರು ಮಾತ್ರ ಮನಸ್ಸಿಗೆ ಆಪ್ತರಾಗ್ತಾರೆ, ಯಾವತ್ತೂ ನೆನಪಾಗಿ ಕಾಡ್ತಾರೆ. ಅವರ ಸಾಮಿಪ್ಯ ಆಪ್ಯಾಯತೆ ಒದಗಿಸುತ್ತದೆ ಎಂದಾದರೆ ಅವರೆಷ್ಟು ಮೌಲ್ಯದ ಶರ್ಟು ಹಾಕಿದ್ದಾರೆ, ಯಾವ ಕಾರಿನಲ್ಲಿ ಬಂದಿದ್ದಾರೆ ಎಂಬುದೇ ಕಾರಣವಾಗುವುದಲ್ಲ. ಅವರ ಚಿಂತನೆಯೇ ವ್ಯಕ್ತಿತ್ವವಾಗಿ, ಅವರ ಗುಣಗಳು ನಮಗೆ ಹಿತವಾಗಿ, ಹಿಡಿಸಿ, ಆತ್ಮೀಯರಾಗಿ ಮತ್ತೆ ಅದು ಬೆಳೆದು ಇಷ್ಟುವಾಗುವುದು ತಾನೆ....
ಹಾಗೆ ಒಬ್ಬರನ್ನು ನಾವು ಆತ್ಮೀಯರೆಂದು ಸ್ವೀಕರಿಸಿದಾಗ ಅವರಲ್ಲಿ ನಮಗೆ ಇಷ್ಟವಾಗುವ ಗುಣ ಇರಬಹುದು, ಕೆಲವೊಂದು ನಡವಳಿಕೆ ಇಷ್ಟವಾಗದೆಯೂ ಇರಬಹುದು. ಸ್ನೇಹಿತರನ್ನು ಯಾವಾಗಲೂ ಅವರು ಇದ್ದ ಹಾಗೆಯೇ ಸ್ವೀಕರಿಸಬೇಕಂತೆ. ಹಾಗಾಗಿ ಆತ್ಮೀಯರೆಂದ ಮಾತ್ರಕ್ಕೆ ಒಳ್ಳೆಯದು ಮಾತ್ರ ನಮ್ಮ ಗಮನಕ್ಕೆ ಬರುವುದಲ್ಲ. ನಾವು ಇಷ್ಟಪಡದ ಕೆಲ ಸ್ವಭಾವ ಅವರಲ್ಲಿ ಇರಬಹುದು. ಆದರೆ, ನಾವೂ ಮೆಚ್ಚುವ ಗುಣ ಯಾರಲ್ಲಿ ಇರುತ್ತದೋ, ನಮ್ಮದೇ ಯೋಚನಾ ಧಾಟಿ ಯಾರಲ್ಲಿ ಇರುತ್ತದೋ ಅವರು ನಮಗೇ ಬೇಗ ಹತ್ತಿರದವರಾಗ್ತಾರೆ.
----------------
ಇನ್ನೂ ಸರಳವಾಗಿ ಹೇಳಬೇಕಾದರೆ ನಿಮ್ಮ ತುಂಬ ಆತ್ಮೀಯ ಸ್ನೇಹಿತರಲ್ಲಿ ಕೆಲವರು ಮುಂಗೋಪಿಗಳಾಗಿರಬಹುದು, ಕೆಲವರು ಬೇಜವಾಬ್ದಾರಿಗಳಿರಬಹುದು, ಹೇಳಿದ ಹೊತ್ತಿಗೆ ಬಾರದವರು, ಕರೆದಾಗ ಫೋನ್ ರಿಸೀವ್ ಮಾಡದವರು, ಎಲ್ಲವನ್ನೂ ಆಗಾಗ ಮರೆಯುವವರು, ಸಣ್ಣ ಪುಟ್ಟ ಮಾತುಗಳಿಗೆ ರೇಗುವವರು.... ಹೀಗೆ ಭಿನ್ನ ಭಿನ್ನ ವ್ಯಕ್ತಿತ್ವದವರು ನಿಮ್ಮ ಒಡನಾಡಿಗಳಿರಬಹುದು.ಹಾಗಂತ ಅವರಲ್ಲಿರುವ ಒಂದೊಂದು ಗುಣ ಇಷ್ಟವಾಗಿಲ್ಲ ಎಂಬ ಮಾತ್ರಕ್ಕೆ ಅವರು ಹಿತರಲ್ಲ ಅನ್ತೀರ... ಇಲ್ಲ ತಾನೆ... 
ನೀವು ಅವರಿಗೆ ಅಡ್ಜಸ್ಟ್ ಆಗಿರ್ತೀರಿ.... ನಿಮ್ಮ ಸ್ನೇಹದ ಮುಂದೆ ಒಬ್ಬನ ಸಿಟ್ಟು, ಇನ್ನೊಬ್ಬನ ಬೇಜವಾಬ್ದಾರಿ, ಮತ್ತೊಬ್ಬನ ದುಡುಕು ಎಲ್ಲ ಅಭ್ಯಾಸ ಆಗಿರ್ತದೆ. ಅವರು ಹಾಗಿದ್ದಾರೆ ಎಂಬ ಕಾರಣಕ್ಕೇ ಕೆಲವೊಮ್ಮೆ ಅವರು ನಿಮಗೆ ಇಷ್ಟವಾಗಿರಲೂ ಬಹುದು.
ಯಾಕೆ ಗೊತ್ತಾ.... ತುಂಬಾ ಸಿಟ್ಟಿನ ಮನುಷ್ಯ ಏಕಾಏಕಿ ತುಂಬಾ ಕೂಲ್ ಆಗಿಬಿಟ್ಟರೆ ಅಸಹಜ ಅನ್ಸಲ್ವ... ಎಲ್ಲದಕ್ಕೂ ಎಗರಾಡಿ, ನ್ಯಾಯಕ್ಕಾಗಿ ಓ...ರಾಟ ಮಾಡುವ ಮನುಷ್ಯ ಏಕಾಏಕಿ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ತಣ್ಣಗೆ ಕುಳಿತರೆ ಹೇಗಾಗಬಹುದು ನಿಮಗೆ...
ರಾಕ್ಷಸ ವೇಷ ಹಾಕಿದವ ಸ್ತ್ರೀ ವೇಷ ಹಾಕಿದ ಹಾಗೆ, ದೊಡ್ಡ ಬ್ಯಾಟ್ಸ್ ಮೇನ್ ಒಬ್ಬ ವಿಕೆಟ್ ಕೀಪಿಂಗ್ ಮಾಡಿದ ಹಾಗೆ.... ಹಾಡಬೇಕಾದವ ಕುಣಿದ ಹಾಗೆ.....
ಯಾವತ್ತೂ ಇರುವ ಸ್ವಭಾವ ಬಿಟ್ಟು ಇನ್ನೊಂದು ಸ್ವಭಾವಕ್ಕೆ ಶಿಫ್ಟ್ ಆಗಿಬಿಟ್ಟರೆ ಅದು ನಮ್ಮ ಪಾಲಿಗೆ ಅಸಹಜವಾಗಿ ಕಾಣುತ್ತದೆ. ಅವರು ಪರಿಪೂರ್ಣರಲ್ಲ ಎಂಬಂತೆ ಭಾಸವಾಗಬಹುದು. ಯಾಕೆ ಗೊತ್ತಾ... ನಾವು ಅವರನ್ನು ವ್ಯಕ್ತಿಯಾಗಿ ಕಂಡಿರುವುದೇ ಅವರಲ್ಲಿರುವ ವಿಶಿಷ್ಟ (ಅದು ವಿಕ್ಷಿಪ್ತವೂ ಆಗಿರಬಹುದು) ಗುಣಗಳಿಗೋಸ್ಕರ. ಅದುವೇ ಇಲ್ಲ ಎಂದಾದ ಮೇಲೆ ನಮಗೆ ಅವರು ಅವರಾಗಿ ಕಾಣುವುದಿಲ್ಲ. 
ದೊಡ್ಡ ನಟನೊಬ್ಬ ಸಿಕ್ಕಾಪಟ್ಟೆ ಕುಡಿಯುತ್ತಾನೆ, ಕುಡುಕ ಅಂತ ನಮಗೆ ಆಫ್ ದಿ ರೆಕಾರ್ಡ್ ಗೊತ್ತಿರುತ್ತದೆ. ಆದರೆ, ನಮಗೆ ಆತ ಇಷ್ಟವಾಗಿರುವುದು ಆತನ ನಟನೆಯಿಂದ, ಆತ ಕುಡುಕನೆಂಬ ಕಾರಣಕ್ಕೆ ಅಲ್ಲ. ನಾಳೆ ಆತ ಕುಡಿತ ಬಿಟ್ಟರೆ ನಮಗೇನು ಅನ್ನಿಸದು. ಆದರೆ ನಟನೆಯನ್ನೇ ಬಿಟ್ಟರೆ ನಾವು ಆತನನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವರು ಗುರುತಿಸಿಕೊಂಡಿರುವುದು ನಟನಾಗಿ. ಕುಡಿತ ಅವರ ಬದುಕಿನ ಇನ್ನೊಂದು ಮಗ್ಗುಲು ಅಷ್ಟೆ. ವಿಶಿಷ್ಟ ನಟನೆ ಅವರ ಬದುಕಿಗೆ ಐಡೆಂಟಟಿ ಕೊಟ್ಟಿರುವುದು. ಅದಕ್ಕೇ ಅವರು ಜನಪ್ರಿಯರಾಗುವುದು. ಅವರ ಕುಡಿಯುವ ಹವ್ಯಾಸವನ್ನು ಜನ ಸಹಜವಾಗಿ ಸ್ವೀಕರಿಸಿರುತ್ತಾರೆ. ಅಷ್ಟೇ....ಅಥವಾ ಅದು ನನಗೆ ಸಂಬಂಧಿಸಿದ್ದಲ್ಲ ಅಂತ ನಿರ್ಲಿಪ್ತರಾಗಿರ್ತಾರೆ ಅಷ್ಟೆ.


------------


ನಮ್ಮ ನಿಮ್ಮ ಪ್ರತಿಯೊಬ್ಬರಲ್ಲೂ ಇಂತಹ ಪಾಸಿಟಿವ್, ನೆಗೆಟಿವ್ ಎನರ್ಜಿ, ಚಿಂತನೆಗಳು ಖಂಡಿತಾ ಇರುತ್ತದೆ. ಸರಿ ದಾರಿಯಲ್ಲಿ ಹೋದಾಗಲೂ, ತಪ್ಪು ದಾರಿಯಲ್ಲಿ ಹೋಗುತ್ತೇವೆಂದು ಭಾಸವಾದಾಗಲೂ ಎಚ್ಚರಿಸುವ ಒಂದು ಅಂತರಾತ್ಮ ಇರುತ್ತದೆ. ಏಕಾಂತದಲ್ಲಿ ಪ್ರತಿಯೊಬ್ಬರೂ ಸ್ವವಿಮರ್ಶಕರಾಗಿರುತ್ತಾರೆ ಅಲ್ವ....
ನನ್ನ ಇಂದಿನ ನಡೆ ನುಡಿಯಲ್ಲಿ ನಾನು ಮಾಡಿದ್ದು ಎಷ್ಟು ಸರಿ.. ಇನ್ನು ಹೇಗೆ ಸರಿಯಾಗಿ ನಡೆಯಬಹುದಿತ್ತು, ಇಂಪ್ರೂವ್ ಮಾಡ್ಕೋಬಹುದಿತ್ತು ಅಂತ ಚಿಂತಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಆದರೆ ಪರಿಸ್ಥಿತಿಗೋಸ್ಕರವೋ, ಜನಪ್ರಿಯತಿಗೋಸ್ಕರವೋ ಅಥವಾ ಇನ್ಯಾವುದೋ ಸ್ವಾರ್ಥಕ್ಕೋಸ್ಕರವೋ ನಾವು ನಮ್ಮಿಂದಾದ ತಪ್ಪುಗಳನ್ನು ತಪ್ಪೆಂದು ಒಪ್ಪದೆ ವ್ಯರ್ಥ ವಾದವೋ, ಮೊಂಡು ವಾದವೋ, ಜಗಳವೋ ಮಾಡುತ್ತಲೇ ಇರುತ್ತೇವೆ. 
ಅಂತಿಮವಾದ ಸತ್ಯ, ಅಂತಿಮವಾದ ನಿಜ ಜಗತ್ತಿನಲ್ಲಿ ಇಲ್ಲದಿರಬಹುದು. ಆದರೆ ನಾಲ್ಕು ಜನ ಹೌದೆಂದು ಹೇಳುವ ಒಂದು ವರ್ತನೆ, ಸ್ವಭಾವ, ನಡವಳಿಕೆ ಅಂತ ಖಂಡಿತಾ ಇದೆ. ಅದನ್ನು ನಾವು ದಾಟಿ ಹೋದರೆ ಅದು ನಮ್ಮದೇ ಅಂತರಾತ್ಮಕ್ಕೆ ತಿಳಿಯುತ್ತದೆ. ಆತ್ಮವಿಮರ್ಶೆಯ ಬಳಿಕವೂ ನಾವು ನಮ್ಮ ಸ್ವಭಾವ ಜನ್ಯ ನಡವಳಿಕೆಯಿಂದ ಹೊರಗೆ ಹೋದರೆ ಅದು ಖಂಡಿತಾ ವ್ಯಕ್ತಿತ್ವವನ್ನು ಬಾಧಿಸುತ್ತದೆ.


-----------------------------


ನೀನು ಹೇಗೆಯೇ ಇರು... ಈ ವಿಶಾಲ ಪ್ರಪಂಚದ ಮೂಲೆಯಲ್ಲಿ ನಿನ್ನನ್ನು ಮೆಚ್ಚುವ ಒಂದು ಜೀವ ಇದ್ದೇ ಇದೆ... ನಿನ್ನಿಂದಾಗಿ ಖುಷಿ ಪಡುವ ಯಾರೋ ಎಲ್ಲೋ ಖಂಡಿತಾ ಇದ್ದಾರೆ, ಅವರಿಗೋಸ್ಕರ ಬದುಕು....
ಎಂಬ ಮಾತಿದೆ. ಹೌದಲ್ವೇ... ನಿಮ್ಮ ಉಡುಪು, ನಿಮ್ಮ ಹೇರ್ ಸ್ಟೈಲ್, ನಿಮ್ಮ ನಡಿಗೆ, ನಿಮ್ಮ ಭಾಷೆ, ಮಾತು, ಕಾರ್ಯವೈಖರಿ, ಸಿಟ್ಟು, ಸೆಡವು, ಹಠ, ಗರ್ವ....ಎಲ್ಲದರಲ್ಲೂ ಒಂದು ಪ್ರತ್ಯೇಕತೆ ಇರಬಹುದು. ಹಾಗೆಂದು ಅವುಗಳನ್ನೂ ಇಷ್ಟಪಡುವವರು, ಅವುಗಳಿಂದಾಗಿಯೇ ನಿಮ್ಮ ಆತ್ಮೀಯರಾಗಿರುವವರು ಇದ್ದೇ ಇರುತ್ತಾರೆ. ನಿಮ್ಮ ಹಾಗೊಂದು ವಿಶಿಷ್ಟ (ಯೂನಿಕ್) ಗುಣದಿಂದಲೇ ನೀವು ಎಲ್ಲರ ಮನಸ್ಸಿನಲ್ಲಿ ಛಾಪಾಗಿರ್ತೀರಿ. 
ಕಲಾಂ ಎಂದಾಕ್ಷಣ ದೊಡ್ಡ ವಿಜ್ಞಾನಿ ಎಂದು ನೆನಪಾಗುವ ಜೊತೆಗೆ ಅವರ ಬೆಳ್ಳಿ ವರ್ಣದ ಉದ್ದ ಕೂದಲು ನೆನಪಾಗಲ್ವ.... ಮೋದಿ ಎಂದಾಕ್ಷಣ ಅವರ ಕುರುಚಲು ಗಡ್ಡದ ಜೊತೆಗೆ ವಿಶಿಷ್ಟ ಉಡುಪು ಕೂಡಾ ಕಣ್ಣೆದುರು ಬರಲ್ವ.... ಅಮಿತಾಭ್ ಬಚ್ಚನ್ ಎನ್ನುವಾಗ ಅವರ ಗಡಸು ಧ್ವನಿ ಜೊತೆಗೆ, ಉಡುಪಿನ ಮೇಲೆ ಹೊದೆಯುವ ದಪ್ಪ ಶಾಲು ಕಣ್ಣ ಮುಂದೆ ಬರಲ್ವ....
ನಾವು ಅಮಿತಾಭ್, ಕಲಾಂ, ಸಚಿನ್ ಅಲ್ಲದಿರಬಹುದು. ಆದರೆ ನಮಗೂ ಒಂದು ಐಡೆಂಟಿಟಿ ಇದೆ. ಅದನ್ನು ಕಟ್ಟಿ ಬೆಳೆಸಿದವರು ನಾವೇ... ಅದರಿಂದ ನಾವು ದೂರವಾದರೆ ನಮ್ಮ ಗುರುತಿಸುವಿಕೆಗೆ ಅರ್ಥ ಬರುವುದಿಲ್ಲ. ಅದೇ ಕಾರಣಕ್ಕೆ ಬ್ಯಾಟಿಂಗ್ ವೈಫಲ್ಯ ಕಂಡರೆ ಧೋಣಿಯನ್ನು ಜನ ಬೈತಾರೆ.... ಯಾಕೆಂದರೆ ಅವನ ಗುರುತಿಸುವಿಕೆ ಇರುವುದೇ ಬ್ಯಾಟಿಂಗ್, ವಿಕೆಟ್ ಕೀಪಿಂಗ್ನಲ್ಲಿ ಅಲ್ವ....
ಅದಕ್ಕೆ ನಾವು ಬದುಕಿನಲ್ಲಿ ನಿಟ್ಟುಸಿರುವ ಬಿಡುವಂತಾಗಲೆಲ್ಲಾ ಇಷ್ಟರ ವರೆಗೆ ಕಟ್ಟಿಕೊಂಡ ಯಶಸ್ಸಿನ ಕ್ಷಣಗಳನ್ನು ನೆನಪಿಸಿಕೊಳ್ಳಬೇಕು, ಸೋಲಿನ ದಡವೆ ದಾಟಿ ಬಂದ ಕಾಲವನ್ನು ಮೆಲುಕು ಹಾಕಬೇಕು ಎನ್ನುವುದು. ಅಂತಹ ಸಂದರ್ಭಗಳಲ್ಲಿ ನನ್ನ ಐಡೆಂಟಿಟಿ ಬಿಟ್ಟು ಕೊಟ್ಟಿಲ್ಲ ಎಂಬ ಧೈರ್ಯ ಬಂದಾಗಲಷ್ಟೇ ಮತ್ತೆ ಮುಂದುವರಿಯಲು ಸಾಧ್ಯವಾಗುವುದು.


----------------------

ನಮಗೇ ಇಷ್ಟವಾಗದಿದ್ದ ಮೇಲೆ, ಯಾರನ್ನೋ ಇಷ್ಟ ಪಡಿಸಲು ಏನೇನೋ ಡೊಂಬರಾಟ ಹಾಕಿದರೆ ಅದು ಅಸಹಜವಾಗುತ್ತದೆ. ಯಾರೋ ಇಷ್ಟುಪಡುತ್ತಾರೆಂದು ಬಾರದ ತಪ್ಪು ಇಂಗ್ಲಿಷ್ ನಲ್ಲಿ ಮಾತನಾಡುವುದು (ಇಬ್ಬರಿಗೂ ಚೆನ್ನಾಗಿ ಕನ್ನಡ ಬರುತ್ತಿದ್ದರೂ ಕೂಡ), ತನಗೇ ಕಂಫರ್ಟ್ ಅನಿಸದಿದ್ದರೂ ಓರಗೆಯವರು ಹಾಕ್ತಾರೆ ಅಂತ ಇಷ್ಟವಾಗದ ಸೈಝಿನ ಪ್ಯಾಂಟೋ, ಶರ್ಟೋ ಹಾಕುವುದು, ನಾಲ್ಕೈಂದು ಮಂದಿ ಸೇರಿದಲ್ಲಿ ತುಂಬಾ ಬಿಝಿ ಇದ್ದ ಹಾಗೆ, ಮಾತನಾಡಲು ಪುರುಸೊತ್ತಿಲ್ಲದ ಹಾಗೆ ನಟಿಸುವುದು.... ಹೀಗೆ ನಮ್ಮ ವ್ಯಕ್ತಿತ್ವಕ್ಕೆ ಒಗ್ಗದ ಡೊಂಬರಾಟಗಳೆಲ್ಲಾ ನಮ್ಮೊಳಗಿಂದ ನಮ್ಮನ್ನೇ ಕಳೆದುಕೊಳ್ಳುವ ಹಾಗೆ ಮಾಡುವುದು ಸುಳ್ಳಲ್ಲ.
ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿ. ನೀವು ಮಾಡುತ್ತಿರುವುದು ಸರಿ ಅಂತ ನಿಮಗೇ ಖಚಿತವಾದರೆ, ಅದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂಬ ಖಚಿತತೆ ನಿಮಗೆ ಇದ್ದರೆ. ನೀವು ಹಾಗೆಯೇ ಇರಿ. ನೀವು ಇದ್ದ ಹಾಗೆಯೇ ಜನ ನಿಮ್ಮನ್ನು ಸ್ವೀಕರಿಸ್ತಾರೆ. ತಪ್ಪು ದಾರಿಲಿ ಹೋದರೆ ತಿದ್ದುವವರುು ಬೇಕಾದಷ್ಟು ಮಂದಿ ಇರ್ತಾರೆ. ಆದರೆ, ನೀನು ಹೀಗಿಯೇ ಇರಬೇಕು. ಹೀಗೆ ಇರುವುದೇ ಅಂತಿಮ ಅನ್ನುವುದು ಇಲ್ವಲ್ಲ. ಸಾಧಕರೆಲ್ಲರೂ ವಿಶಿಷ್ಟರೇ ಆಗಿದ್ದಾರೆ. ದೊಡ್ಡ ಸೂಟು ತೊಟ್ಟವ, ಚಿನ್ನದ ಚಮಚ ಬಾಯಲ್ಲಿಟ್ಟು ಹುಟ್ಟಿದವರು ಮಾತ್ರ ಸಾಧಕರಾಗಿದ್ದಲ್ಲ. ಅವರೆಲ್ಲಾ ನಮ್ಮ ನಿಮ್ಮಂತೆ ಸಾಮಾನ್ಯರಾಗಿದ್ದವರು. ಆದರೆ, ತಮ್ಮ ವಿಶಿಷ್ಟ ಗುಣಗಳನ್ನು ಬಿಟ್ಟು ಕೊಡದೆ, ತಮ್ಮ ಸಾಮರ್ಥ್ಯ ಎಷ್ಟು, ತಮ್ಮ ದಾರಿ ಯಾವುದು ಎಂದು ಕಂಡುಕೊಂಡು ಅದರಲ್ಲೇ ಛಲ ಬಿಡದೆ ನಡೆದು ಸಾಧಿಸಿ ತೋರಿಸಿದವರು. ಅದು ನಮಗೆ ಸ್ಫೂರ್ತಿಯಾಗಬೇಕು.
ಬಹುಮಾನ ವಿಜೇತನೊಬ್ಬ ವೇದಿಕೆ ಏರಿ ಬಹುಮಾನ ಪಡೆಯುತ್ತಿರುವಾಗ ನೀನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಅಚ್ಚರಿಯಿಂದ ಅವನನ್ನೇ ನೋಡುವಲ್ಲಿಗೆ ಸೀಮಿತನಾಗಿರಬೇಡ. ನೀನೂ ಒಂದು ಬಹುಮಾನ ಗೆಲ್ಲುವ ಗುರಿ ಇರಿಸು.... ಕೇವಲ ಅಮಿತಾಭ್ ಧ್ವನಿ ಮಿಮಿಕ್ ಮಾಡಿದಲ್ಲಿಗೆ ತೃಪ್ತಿ ಪಟ್ಟುಕೊಳ್ಳಬೇಡ. ಇನ್ನೆಲ್ಲಿ ಗಮನ ಸೆಳೆಯಬಹುದು ಎಂಬ ಭಿನ್ನ ದೃಷ್ಟಿಕೋನ ಇರಿಸು ಅಷ್ಟೆ.
----------

ಪ್ರಪಂಚದಲ್ಲಿ ಎಲ್ಲರನ್ನೂ ಮೆಚ್ಚಿಸಿ, ಎಲ್ಲರ ಪಾಲಿಗೂ ಒಳ್ಳೆಯವನಾಗಿ ಬದುಕುವುದು ಅಸಾಧ್ಯ. ಯಾಕೆಂದರೆ ನಮ್ಮಲ್ಲಿರುವ ಎಷ್ಟೋ ಗುಣಗಳು ಎಲ್ಲರಿಗೂ ಇಷ್ಟವಾಗಬೇಕಿಲ್ಲ. ಹಾಗೆಂದು ನನ್ನ ಗುಣದಿಂದ ಬೇರೆಯವರಿಗೆ ತೊಂದರೆ ಆಗದಿರಲಿ ಎಂಬ ಕನಿಷ್ಠ ಪ್ರಜ್ಞೆಯಾದರೂ ಬೇಕು. ನಾವು ಇದ್ದಂತೆಯೇ ಪ್ರೀತಿಸುವವರು, ಪ್ರೋತ್ಸಾಹಿಸುವವರು, ಖಂಡಿತಾ ಇರುತ್ತಾರೆ. 
ಯಾರನ್ನೋ ಮೆಚ್ಚಿಸಲು ತಿಪ್ಪರಲಾಗ ಹಾಕಿ ಪಡೆಯುವ ಇಮೇಜ್ ಗಿಂತ ನಮ್ಮ ಅಂತರಾತ್ಮಕ್ಕೆ ಇಷ್ಟವಾಗುವ, ನಮ್ಮನ್ನು ಅರ್ಥ ಮಾಡಿಕೊಂಡವರು ಹೌದೌದು ಎಂದು ಹೇಳಬಲ್ಲ ಗುಣ ನಡತೆ, ಜೊತೆಗಿದ್ದರೆ ಸಾಕು... ನೀವೂ ನೀವಾಗಿರುತ್ತೀರಿ...
ನೂರು ಮಂದಿಯಿಂದ ಇಂದ್ರ ಚಂದ್ರ ಅಂತ ಬರಿದೇ ಮುಖಸ್ತುತಿ ಮಾಡಿಸಿಕೊಳ್ಳುವ ಬದಲಿಗೆ... ನೀವು ಗೌರವಿಸುವ ನಾಲ್ಕು ಮಂದಿ... ನೀನು ಮಾಡಿದ್ದು ಸರಿ, ಇದೇ ದಾರಿಯಲ್ಲಿ ಸಾಗು ಎಂಬ ಹಾಗಿದ್ದರೆ ಸಾಕು... ಆ ದಾರಿ ಸ್ವತಃ ನಿಮಗೆ ಇಷ್ಟವಾಗಿರಬೇಕು ಮತ್ತು ಮತ್ತೊಬ್ಬರಿಗೆ ನಿಮ್ಮ ದಾರಿ ಕಂಟಕವಾಗಬಾರದು ಅಷ್ಟೆ.


Saturday, March 7, 2015

ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ...ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗಿ ಕಾಡಿದಾಗಲೇ ....ಹೃದಯ ಸಮುದ್ರ ಕಲಕಿ... ಅನ್ಸೋದು ಅಲ್ವೇ....
ಪುಟ್ಟದಾಗಿ ಪ್ರತ್ಯಕ್ಷವಾಗುವ ಸಣ್ಣ ಅಂಶವೊಂದು ಬೃಹತ್ತಾಗಿ ಕಾಡುವುದು ಮಾತ್ರವಲ್ಲ, ಮೂಡ್ ಕೆಡಿಸತೊಡಗಿದಾಗಲೇ ...ಹೇಳುವುದು ಒಂದು, ಮಾಡುವುದು ಇನ್ನೊಂದು... ಅಂತ ಆಗೋದು...
ಯಾವುದನ್ನೂ ಆಸ್ವಾದಿಸುದಕ್ಕಾಗದೇ ಸಂಶಯವೋ, ಆತಂಕವೋ, ಅತೃಪ್ತಿ ಅನ್ನುವ ಭಾವ ಸಂಘರ್ಷದಿಂದ ಇರುವ ಮನಶ್ಶಾಂತಿಯನ್ನೂ ಕೆಡಿಸಿಕೊಳ್ಳುವುದು....
ಜಸ್ಟ್ ಬಸ್ ಮಿಸ್ ಆದಾಗ, ಯಾರೋ ಆತ್ಮೀಯರು ಕರೆ ಸ್ವೀಕರಿಸದಾಗ, ಮೆಸೇಜಿಗೆ ರಿಪ್ಲೈ ಮಾಡದಾಗ, ಎಂದಿನಂತೆ ಮಾತನಾಡದೆ ಮಾತಿನ ಧಾಟಿ ತುಸು ತಪ್ಪಿದಾಗ, ಹೆಚ್ಚೇಕೆ ಹತ್ತು ನಿಮಿಷ ವಾಟ್ಸಾಪ್ ಹ್ಯಾಂಗ್ ಆದಾಗಲೂ ಏನೋ ಕಳೆದುಕೊಂಡಂತೆ ಪರಿತಪಿಸುವಂತಾಗುತ್ತದೆಯೇ...
ಆಗೆಲ್ಲ ಪರಿಸ್ಥಿತಿಗೆ ಹೊಂದಿಕೊಂಡು ನಾರ್ಮಲ್ ಆಗಿರಲು ಪ್ರಯತ್ನಿಸದೇ ಹೋದರೆ ಬದುಕಿನಲ್ಲಿ ತುಂಬಾ ನಷ್ಟ ಎದುರಾಗಬಹುದು...

-----------

ನಮ್ಮಿಂದಾಗಿ ಮೂಡ್ ಹಾಳಾದರೂ, ಬೇರೆಯವರಿಂದ ನಮ್ಮ ಮೂಡ್ ಹಾಳಾದರೂ ಅಂತಿಮವಾಗಿ ತೊಳಡುವವರು ನಾವೇ... ದಿನದ ಎಲ್ಲಾ ಕೆಲಸದಲ್ಲೂ ಸಹಜವಾಗಿ ತೊಡಗಿಸಿಕೊಳ್ಳಲಾಗದೆ, ಒಂದೇ ಚಿಂತೆಯನ್ನು ತಲೆಗೆ ಹಚ್ಚಿಕೊಂಡು ಪರದಾಡುತ್ತೇವೆ ಹೌದ... ಬದುಕನ್ನು ಸೀರಿಯಸ್ ಆಗಿ ತೆಗೆದುಕೊಂಡವರು, ತುಸು ಹೆಚ್ಚೇ ಸ್ವಾಭಿಮಾನಿಗಳಾಗಿರುವವರು ಖಂಡಿತ ಶಾಂತಿ ಕಳೆದುಕೊಳ್ಳುತ್ತಾರೆ.
ನಿಮ್ಮ ಮೂಡ್ ಕೆಡಿಸಿದ ವಿಚಾರ ಸಣ್ಣದೇ ಇರಬಹುದು. ಅದರ ಸುತ್ತಮುತ್ತ ಇನ್ನಷ್ಟು ಚಿಂತೆ (ತನೆ) ಸೇರಿ, ಮತ್ತೆ ಇಗೋ ಪ್ಲಾಬ್ಲಂ ಆಗಿ... ಇಷ್ಟುದ್ದ ಇದ್ದ ಸಮಸ್ಯೆ ಅಷ್ಟೆತ್ತರಕ್ಕೆ ಬೆಳೆದು ಹೆಮ್ಮರವಾಗಬಹುದು...

--------------------

ದಿನಾ ಮಾತನಾಡುತ್ತಿದ್ದ ಸ್ನೇಹಿತನ, ಆತ್ಮೀಯರ ಮಾತಿನ ಧಾಟಿ ಬದಲಾಗಿದೆಯಾ.... ನೀವು ತುಂಬ ಗೌರವಿಸುತ್ತಿದ್ದ ವ್ಯಕ್ತಿಗೊಂದು ಮೆಸೇಜ್ ಕಳುಹಸಿದರೂ ರಿಪ್ಲೈ ಮಾಡದೆ ನಿಮ್ಮನ್ನು ಅವಾಯ್ಡ್ ಮಾಡ್ತಾ ಇದ್ದಾರೆ ಅನ್ಸುತ್ತ.... ಕಚೇರಿಯಲ್ಲೋ, ಕ್ಲಾಸಿನಲ್ಲೋ ಯಾರೋ ನಿಮ್ಮನ್ನೇ ನೋಡಿ ಅಪಹಾಸ್ಯ ಮಾಡಿದ ಹಾಗೆ, ನಕ್ಕ ಹಾಗೆ ಭಾಸವಾಗುತ್ತದೆಯಾ... ಅಥವಾ ಸಮಯ ಸಂದರ್ಭ ನೋಡದೆ ನಾವು ಆಡಿದ ಮಾತು ಇನ್ಯಾರಿಗೋ ಹರ್ಟ್ ಆಗಿದೆ ಅನ್ಸಿ ಮತ್ತೆ ತೊಳಲಾಡುತ್ತಿದ್ದೀರ...ನಿಮ್ಮ ಪಕ್ಕದವರ ಬಗ್ಗೆ ಅಧಿಕ ಪ್ರಸಂಗಿಯೊಬ್ಬ ಹುಳಬಿಟ್ಟುು ತಲೆ ಕೆಡಿಸಿ ಹಾಕಿದ್ದಾರ....
ಈ ಎಲ್ಲಾ ಉದಾಹರಣೆಗಳಲ್ಲಿ ಮೂಡ್ ಕೆಡಲು ಸಾಧ್ಯ...

--------

ದಿನದ 24 ಗಂಟೆ ಮೊಬೈಲ್ ನೆಟ್ ಆನ್ ಇರಿಸುವ ವ್ಯಕ್ತಿಗೆ ವಾಟ್ಸಾಪ್, ಫೇಸ್ ಬುಕ್ ಪುಟ ತೆರೆದುಕೊಳ್ಳದೆ ಹ್ಯಾಂಗ್ ಆದಾಗ, ಯಾರಗೋ ಕರೆ ಮಾಡಲು ಯತ್ನಿಸಿ ಎಷ್ಟು ಹೊತ್ತಾದರೂ ಕಾಲ್ ಕನೆಕ್ಟ್ ಆಗದಿದ್ದಾಗ, ಸೆಕೆಂಡ್ಗಳ ಅಂತರದಲ್ಲಿ ಬಸ್ ತಪ್ಪಿದಾಗ, ಅಷ್ಟೇ ಯಾಕೆ, ಆಸಕ್ತಿಯಿಂದ ಟಿ.ವಿ.ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾಗ ಕರೆಂಟ್ ಕೈಕೊಟ್ಟರೂ ಸಿಟ್ಟು ಒದ್ದುಕೊಂಡು ಬರಬಹುದು, ಅಕ್ಕಪಕ್ಕದವರ ಮೇಲೆ ಚೀರಾಡಬಹುದು, ಯಾರಲ್ಲೂ ಮಾತನಾಡದೆ ಮೌನಿಗಳಾಗಬಹುದು... ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ ಕಳೆದುಕೊಳ್ಳಬಹುದು. ಕಾರಣವಿಲ್ಲದೆ ಜಗಳವಾಡಬಹುದು...ಹೀಗೆ ಎಲ್ಲಾ ಉಲ್ಟಾ ಪಲ್ಟಾ ಆಗುತ್ತದೆ....


------------

ವಾಸ್ತವದಲ್ಲಿ ಸಮಸ್ಯೆಯ ಮೂಲ ಹುಡುಕಿ ಪರಿಹರಿಸುವ ಬದಲು, ವಾಸ್ತವ ಅರ್ಥ ಮಾಡಿಕೊಳ್ಳುವ ಬದಲು ಸುಖಾ ಸುಮ್ಮನೆ ಟೆನ್ಶನ್ ಮಾಡಿಕೊಳ್ತೇವೆ. ಟೆನ್ಶನ್ ಮಾಡ್ಕೊಳ್ಳೋದ್ರಿಂದ ಸಮಸ್ಯೆ ಪರಿಹಾರ ಆಗೋದಿಲ್ಲ ಅಂತ ಗೊತ್ತು. ಆದರೆ, ಪರಿಸ್ಥಿತಿ ಹಾಗೆ ಮಾಡಬಹುದು...
ಉದಾಹರಣೆಗೆ ದುರ್ಗಮ ಮಾರ್ಗದಲ್ಲಿ ಬೈಕಿನಲ್ಲಿ ಹೋಗುತ್ತಿರುವಾಗ ಏಕಾಏಕಿ ಟೈರ್ ಪಂಕ್ಚರ್ ಆದರೆ ಅಳುತ್ತಾ ಕೂದರೆ ಆಗುತ್ತಾ, ಅಥವಾ ಸಿಟ್ಟಿನಲ್ಲಿ ಬೈಕಿಗೆ ತುಳಿದರೆ ಆಗುತ್ತಾ, ಕೆಟ್ಟ ರಸ್ತೆ ಮಾಡಿದ ಕಂಟ್ರಾಕ್ಚರ್ ದಾರನಿಗೆ ಶಾಪ ಹಾಕಿದರೆ ಆಗುತ್ತಾ, ಏನೂ ಪ್ರಯೋಜನ ಇಲ್ಲ. ಪಂಕ್ಚರ್ ಅಂಗಡಿ ಹುಡುಕಿ ರಿಪೇರಿ ಮಾಡುವುದು ಒಂದೇ ಪರಿಹಾರ. ಅಥವಾ ಲಾರಿಗೆ ಬೈಕ್ ಹೇರಿಕೊಂಡು ಪೇಟೆಗೆ ಕೊಂಡು ಹೋಗಬಹುದು..
ನೀವು ಇನ್ನೂ ಕೂಲ್ ಮೈಂಡೆಡ್ ಆಗಿದ್ದರೆ, ಬೇರೆ ವಾಹನ ಬರುವ ವರೆಗೆ ಅಲ್ಲೇ ಕುಳಿತು ಸುತ್ತಲ ಪರಿಸರ ವೀಕ್ಷಣೆ ಮಾಡಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬಹುದು... ಮೊಬೈಲಿನಲ್ಲಿ ಹತ್ತಾರು ಫೋಟೊ ಕ್ಲಿಕ್ಕಿಸಬಹುದು... ಈ ವರೆಗೆ ನೋಡದ ಊರು ನೋಡಿದೆ ಅಂತ ಸಮಾಧಾನ ಪಟ್ಟುಕೊಳ್ಳಬಹುದು... ಅದು ಪರಿಸ್ಥಿತಿಯನ್ನು ಧನಾತ್ಮಕವಾಗಿ, ಕೂಲಾಗಿ ತೆಗೆದುಕೊಳ್ಳುವವರು ಅನುಸರಿಸಬಹುದಾದ ಕ್ರಮ....
ಹೇಳೋದು ಸುಲಭ, ಆದರೆ ಟೆನ್ಶನ್ ಹುಟ್ಟಿಕೊಂಡಾಗ ಕೂಲ್ ಆಗಿರೋದು ಎಷ್ಟು ಕಷ್ಟ ಅಂತ ಅನುಭವಿಸಿದವರಿಗೇ ಗೊತ್ತು ಅಲ್ವ....
ಆದರೂ...
ಟೆನ್ಶನ್ ಅಂತ ಟೆನ್ಶನ್ ಮಾಡ್ಕೊಂಡು, ಇನ್ನಷ್ಟು ಟೆನ್ಶನ್ ಹೆಚ್ಚಿಸಿಕೊಂಡು, ಟೆನ್ಶನ್ ಗೆ ಕಾರಣ ಹುಡುಕದೆ, ಟೆನ್ಶನ್ ನ್ನೇ ದೊಡ್ಡ ಟೆನ್ಶನ್ ಅಂದ್ಕೊಂಡು, ತಾನೂ ಟೆನ್ಶನ್ ಮಾಡಿ, ಬೇರೆಯೋರಿಗೂ ಟೆನ್ಶನ್ ಕೊಟ್ಟ ಹಾರಾಡುವ ಹೊತ್ತಿಗೆ ಟೆನ್ಶನ್ ಕಡಿಮೆಯಾಗಿರೋದಿಲ್ಲ, ಮತ್ತೊಂದು ಟೆನ್ಶನ್ ಶುರುವಾಗಿರುತ್ತದೆ, ಅಷ್ಟೇ....

-------------


ಪ್ರತಿ ಸಂದಿಗ್ಧತೆಗೆ ಒಂದು ಕಾರಣ, ಒಂದು ಮೂಲ ಇರುತ್ತದೆ. ಶಾಂತರಾಗಿ ಯೋಚಿಸಿದರೆ ಅಲ್ಲಿಗೆ ತಲುಪಿ ಸ್ವಲ್ಪ ತಡಕಾಡಿದರೆ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯ. ಅದರ ಬದಲು ಗೊಂದಲವನ್ನು ಇಗೋ ಕೈಗೆ ಕೊಟ್ಟರೆ ಕಳೆದುಕೊಳ್ಳುವವರು ನಾವೇ... ನಮಗೆ ಸಿಟ್ಟು ಬರಿಸಿದವರು, ಮೂಡ್ ಕೆಡಿಸಿದವರು ತಮ್ಮ ಪಾಡಿಗೆ ಹಾಯಾಗಿರುತ್ತಾರೆ. ನಾವು ಮಾತ್ರ ಏನೋ ಕಳಕೊಂಡವರಂತೆ ತೊಳಲಾಡುವವರು ಅನ್ನುವುದು ನೆನಪಿರಲಿ...

-------------------

ಹಾಗಾದರೆ.....ಮೂಡ್ ಕಾಯ್ದುಕೊಳ್ಳಲು ಏನು ಮಾಡಬಹುದು....
-ಮೊದಲು ಸಮಸ್ಯೆ ಎಲ್ಲಿ ಹುಟ್ಟಿಕೊಂಡಿತು ಅಂತ ಚಿಂತಿಸಿ, ಪರಿಹಾರದ ದಾರಿ ಹುಡುಕುವುದು ಅತ್ಯಂತ ಪ್ರಾಕ್ಟಿಕಲ್....
-ಮಾತಿನಲ್ಲೋ, ವರ್ತನೆಯಲ್ಲೋ ನಮ್ಮಿಂದ ಬೇರೆಯೋರಿಗೆ, ಅಥವಾ ಬೇರೆಯೋರಿಂದ ನಮಗೆ ಹರ್ಟ್ ಆಗಿದ್ದರೆ, ಯಾಕೆ ಹಾಗಾಯ್ತು ಅಂತ ಚಿಂತಿಸಿ, ನಮ್ಮಿಂದ ತಪ್ಪಾಗಿದ್ದರೆ ಬೇಷರತ್ ಕ್ಷಮೆ ಯಾಚಿಸಿ, ಬೇರೆಯೋರಿಂದ ತಪ್ಪಾಗಿದ್ದರೆ ಅವರು ಅದನ್ನು ಅರಿತು ಕ್ಷಮೆ ಯಾಚಿಸಿದರೆ ಉದಾರವಾಗಿ ಕ್ಷಮಿಸಿಬಿಡಿ. ಯಾಕೆಂದರೆ ಹಲವು ಬಾರಿ ಬೇಕೆಂದು ತಪ್ಪು ಆಗಿರುವುದಿಲ್ಲ. ಪ್ರಮಾದ ಆಗಿರಬಹುದು. ಆದರೆ ಕೆಲವೊಮ್ಮೆ ಬೇಜವಾಬ್ದಾರಿಯಿಂದಲೋ, ತಪ್ಪು ಕಲ್ಪನೆಯಿಂದಲೋ ತಪ್ಪುಗಳು ನಡೆದಹೋಗಬಹುದು. ಆಗೆಲ್ಲಾ ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು (ಇಗೋ ಪ್ರಾಬ್ಲಂ) ಮತ್ತಷ್ಟು ಸಮಸ್ಯೆಗಳನ್ನು ಮೂರ್ಖತನ. ಹಾಗೆಯೇ ಸಣ್ಣ ಸಣ್ಣ ಕಾರಗಳಿಗೆ ಸಂಬಂಧಗಳನ್ನು ಕಡಿದುಕೊಳ್ಳುವದು ಕೂಡಾ...
ಬೇರೆಯೋರೂ ಅಷ್ಟೆ, ಉದ್ದೇಶಪೂರ್ವಕವಾಗಿ ತಪ್ಪು ಮಾಡದೇ ಇದ್ದು, ಅದಕ್ಕಾಗಿ ವಿಷಾದಿಸಿದರೆ ಅಲ್ಲಿಗೇ ವಿಷಯ ಮುಗಿಸಿಬಿಡಿ... ಆದರೆ, ಪದೇ ಪದೇ ಅಂತಹದ್ದೇ ತಪ್ಪುಗಳುಮರುಕಳಿಸುತ್ತಿದ್ದರೆ ಆ ಬಗ್ಗೆ ಗಂಭೀರವಾಗಿ ಯೋಚಿಸಿ. ಇಲ್ಲವಾದರೆ, ಇಬ್ಬರಿಗೂ ಮನಶ್ಶಾಂತಿ ಇರ್ಲಿಕಿಲ್ಲ. 
-ಸಂವಹನ ಕೊರತೆಯಂದಲೋ ತಪ್ಪು ಕಲ್ಪನೆಯಿಂದಲೋ ಇಬ್ಬರೊಳಗೆ ವೈಮನಸ್ಯ ಹುಟ್ಟಿಕೊಂಡರೆ, ಅವರು ನಿಮ್ಮ ಆತ್ಮೀಯರಾಗಿದ್ದರೆ ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದು. ಅದರ ಬದಲು ಹಿಂದೆ ಮುಂದೆ ನೋಡದೆ ಬೈದು, ಕೂಗಾಡುವ ಬದಲು ಮೌನವಾಗಿಯಾದರೂ ಪರಿಸ್ಥಿತಿ ಕಾಯ್ದುಕೊಳ್ಳುವದು ಬೆಟರ್.
-ನಿಮ್ಮ ಮೂಡ್ ಯಾವ ಕಾರಣಕ್ಕೆ ಕಂಟ್ರೋಲ್ ಆಗುತ್ತಿಲ್ಲವೆಂದಾದರೆ, ಅಥವಾ ಏಕಾಗ್ರತೆ ಸಿಗುತ್ತಿಲ್ಲವೆಂದಾದರೆ ಸ್ವಲ್ಪ ಹೊತ್ತಾದರೂ ಗಮನ ಬೇರೆಡೆ ಹರಿಸಿ... ಇಷ್ಟದ ಹಾಡು ಕೇಳಿ. ಎಷ್ಟೋ ದಿನ ಮಾತನಾಡದೆ ಇದ್ದ ಒಬ್ಬ ಕ್ಲಾಸ್ ಮೇಟ್ ಗೋ, ಫ್ರೆಂಡ್ ಗೋ ಅಚ್ಚರಿಯ ಕರೆ ಮಾಡಿ ಮಾತನಾಡಿ, ಆತ್ಮೀಯರೊಡನೆ ಒಂದು ಆತ್ಮೀಯ ಚಾಟ್ ನಡೆಸಿ, ಹಳೆ ಆಟೋಗ್ರಾಫ್ ಪುಸ್ತಕ ತೆಗೆದು ಓದಿ. ಅಥವಾ ನಿಮ್ಮ ಬಗ್ಗೆ ಭರವಸೆ ಮೂಡಿಸುವ ವಿಚಾರಗಳನ್ನು ನೆನಪುಮಾಡಿಕೊಳ್ಳಿ....
-ಕಾಲಕ್ಕೆ ಎಲ್ಲದರ ತೀವ್ರತೆ ಕಡಿಮೆ ಮಾಡುವ ಶಕ್ತಿಯಿದೆ. ಹಾಗೆಯೇ ಕೆಟ್ಟು ಹೋದ ಮೂಡ್ ಕೂಡಾ.... ತನ್ನಿಂತಾನೆ ಸುಧಾರಿಸಬಹುದು, ಆದರೆ, ಅದಕ್ಕೂ ಮೊದಲು ಪರಿಸ್ಥಿತಿ ಇನ್ನಷ್ಟು ಕೆಟ್ಟು ಹೋಗದಿರಲಿ ಅಷ್ಟೆ....
----ಮಾತೆಲ್ಲ ಮುಗಿದ ಮೇಲೆ ಕಾಡುವ ದನಿ ವಿಷಾದ ಮೂಡಿಸದಿರಲಿ... ಹೇಳುವುದು ಏನೋ ಉಳಿದುಹೋಗಿದೆ ಅನ್ನುವ ನಿರಾಸೆ ಕಾಡದಿರಲಿ....
(ತಪ್ಪಿ ಬ್ಲಾಗ್ ಓದಿದ್ದರೆ ಯಾರಾದರೂ ಮೂಡಬಹುದಾದ ಪ್ರಾಕ್ಟಿಕಲ್ ಪ್ರಶ್ನೆ... ಈ ಥರ ಹೇಳೋದು ತುಂಬ ಸುಲಭ, ಆಚರಿಸೋರು ಯಾರು!!! :)

Tuesday, March 3, 2015

ಕಾಲವನ್ನು ತಡೆಯೋರು ಯಾರೂ ಇಲ್ಲ....ಹೌದಲ್ವೇ...ಕಳೆದ ಬದುಕು, ಓಡುವ ಕಾಲಕ್ಕೆ ಬ್ರೇಕ್ ಇಲ್ಲ, ರಿವೈಂಡ್ ಮಾಡಿ ಮತ್ತೆ ಪ್ಲೇಬ್ಯಾಕ್ ಕೊಡೋ ಹಾಗಿಲ್ಲ... ಫ್ಲಾಶ್ ಬ್ಲಾಕ್ ಮತ್ತೆ ಎದುರಿಗೆ ಬರೋದಿಲ್ಲ.. ಅಷ್ಟೇ ಯಾಕೆ... ಬದುಕು ಸ್ಟ್ರಕ್ ಆಯ್ತು ಅನಿಸಿದರೆ 
ಕಂಟ್ರೋಲ್-ಆಲ್ಟ್-ಡಿಲೀಟ್ ಕೊಟ್ಟು ರೀಸ್ಟಾರ್ಟ್ ಮಾಡೋ ಹಾಗೂ ಇಲ್ಲ... ಕಾಲದ ಜೊತೆಗೆ ನಾವು... ನಮಗಾಗಿ ಕಾಲ ಅಲ್ಲ...
ಎಷ್ಟೋ ಬಾರಿ ಅನ್ನಿಸುವುದಿದೆ... ಒಂದು ಪ್ರಕರಣ, ವ್ಯವಸ್ಥೆ, ಸಂಬಂಧದ ಶುರುವಿಗೆ ಹೋಗಿ ಆಗಿರುವ ಗೊಂದಲ, ತಪ್ಪುಗಳನ್ನು ಡಿಲೀಟ್ ಮಾಡಿ ಸರಿಪಡಿಸುವ ಅಂತ. ಆದರೆ, ಕಾಲದ ಮುಂದೆ ಅಸಹಾಯಕರು, ಪ್ರೇಕ್ಷಕರು ಅಷ್ಟೇ.... ಟ್ರ್ಯಾಕ್ನಲ್ಲಿ ಮನುಷ್ಯ ಅಡ್ಡ ನಿಂತಿದ್ದು ಕಂಡರೂ ತಕ್ಷಣ ಬ್ರೇಕ್ ಹಾಕಲಾಗದ ರೈಲು ಚಾಲಕನ ಹಾಗೆ....

-------


ಪಿಯುಸಿಗೆ ಸೈಕಲ್ನಲ್ಲಿ ಹೋಗುತ್ತಿದ್ದಾಗ ಆಗುತ್ತಿದ್ದ ಖುಷಿಯನ್ನು ಕಾರು, ಬೈಕ್ ಕೊಡುವುದಿಲ್ಲ... 10 ಪೈಸೆಗೆ ಸಿಗುತ್ತಿದ್ದ ಶುಂಠಿ ಕಾರದ ಮಿಠಾಯಿ ರುಚಿ 70 ರುಪಾಯಯ ಗಡ್ ಬಡ್ ನಲ್ಲಿ ಕಾಣಸಿಗುವುದಿಲ್ಲ.... ಬಸ್ಸಿನ ಸೈಡ್ ಕಿಟಿಕಿ ಪಕ್ಕ ಕುಳಿತು ತಂಗಾಳಿಗೆ ಮುಖವೊಡ್ಡಿ ಹೋಗುವ ಸುಖ ಎಸಿ ಐರಾವತದಲ್ಲಿ ಕುಳಿತಾಗ ಆಗುವುದಿಲ್ಲ.... ಗುಡ್ಡಕ್ಕೆ ಹೋಗಿ ಬೆವರು ಸುರಿಸಿ, ಮುಳ್ಳಿನಿಂದ ಗೀರಿಸಿಕೊಂಡು ಸುಡು ಬಿಸಿಲಿನಲ್ಲಿ ಕೊಯ್ದು ತಂದು ತಿನ್ನುತ್ತಿದ್ದ ಗೇರು ಹಣ್ಣಿನ ರುಚಿ ಹಲಸಿನ ಹಣ್ಣಿನ ಫ್ಲೇವರ್ ಹಾಕಿದ ಐಸ್ ಕ್ರೀಂನಲ್ಲಿ ಸಿಗಲಾರದು...
ಡಿಡಿ1 ಚಾನೆಲ್ನನಲ್ಲಿ ವಾರಕ್ಕೊಂದೇ ಕನ್ನಡ ಸಿನಿಮಾ, ಚಿತ್ರಹಾರ್, ಚಿತ್ರಮಂಜರಿಗಳನ್ನು ಪಕ್ಕದ ಮನೆಗೆ ಹೋಗಿ ನೋಡುತ್ತಿದ್ದಾಗ ಆಗುತ್ತಿದ್ದ ಥ್ರಿಲ್... ಇಂದು ಸಾವಿರಗಟ್ಟಲೇ ಸಿನಿಮಾ ದಿನಪೂರ್ತಿ ಬಿತ್ತರವಾಗುತ್ತಿದ್ದರೂ ನೋಡಬೇಕೆಂದು ಅನ್ನಿಸುವಂತೆ ಮಾಡುವುದಿಲ್ಲ...
ದಿನಾ ಮಲಗುವ ಮೊದಲು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಿದ್ದ ಖುಷಿಯನ್ನು ಮೊಬೈಲ್ನಿನಿಂದ ಹೊರಟು ಕಿವಿಸೇರುವ ಇಯರ್ ಫೋನ್ ನೀಡುವುದಿಲ್ಲ....
ನಾನು ಬರೆದ ಪತ್ರಗಳಿಗೆ ನಾಲ್ಕೈದು ಪುಟದ ರಿಪ್ಲೈಯನ್ನು ಹೊತ್ತ ಕವರ್ ಮನೆಗೆ ಬಂದಾಗ ಕೊಡುತ್ತಿದ್ದ ಆಪ್ಯಾಯತೆಯನ್ನು ವಾಟ್ಸಾಪ್ ನ ಫಾರ್ ವಾರ್ಡೆಡ್ ಸಂದೇಶ ಕೊಡ್ತಾ ಇಲ್ಲ...
ವಯಸ್ಸೂ ಹಾಗಿತ್ತು... ವ್ಯವಸ್ಥೆಯೂ ಹಾಗಿತ್ತು... ಕಾಲವೂ ಹಾಗಿತ್ತು...
ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು...ಎಂಬ ಉಮರ್ ಖಯಾಮನ ಸಾಲುಗಳ ಹಾಗೆ...

----------


ಬಾಗಿಲಿಗೆ ದಿನಾ ಹಾಕುವ ಬೀಗವನ್ನು ಗಮನಿಸುವುದಿಲ್ಲ, ದಿನಾ ಎಷ್ಟೋ ತುಕ್ಕುು ಹಿಡಿಯುತ್ತಿದೆ ಅಂತ. ಬೈಕಿನ ಟಯರ್ ಗೆ ದಿನಾ ಪಟ್ಟಿ ಹಿಡಿದು ಅಳೆಯುವುದಿಲ್ಲ, ಎಷ್ಟು ಸವೆದಿದೆ ಅಂತ. ಒಂದು ದಿನ ಬೆಳಗ್ಗೆ ಸಡನ್ ಗೊತ್ತಾಗುತ್ತೆ...
ಬೀಗದ ಕೈ ತುಕ್ಕು ಹಿಡಿದಿದೆ, ಬೈಕಿನ ಟಯರ್ ಫ್ಲಾಟ್ ಆಗಿದೆ. ಅಂತ. ವಯಸ್ಸು ಕೂಡಾ ಹಾಗೇ ಅಲ್ವ... ಅಬ್ಬಾ ಪ್ರಾಯ ಆಯ್ತಾ ಅನ್ನಿಸುತ್ತದೆ. ಆಗಲೆ ಫ್ಲಾಶ್ ಬ್ಯಾಕ್ ನಲ್ಲಿ ಹೇಳಿದಂತಹ ಸೊಗಸು, ಮಿಸ್ ಮಾಡ್ಕೊಳ್ತಿದ್ದೇನೆ ಅನ್ನಿಸೋದು. ಅಷ್ಟು ದಿನ ಕಾಡದ ಭಾವ ಅಂದು ಮಾತ್ರ ಯಾಕೆ ಆವರಿಸಿಕೊಳ್ಳುತ್ತದೆ, ಸವೆದ ಟಯರ್ ನ ಹಾಗೆ. ಇನ್ನಷ್ಟು ಜವಾಬ್ದಾರಿಯಿಂದ ಇರಬೇಕು ಎಂಬುದಕ್ಕೆ ಅದು ಸೂಚನೆಯೋ ಏನೋ...

---------------------

ಬದುಕಿನಲ್ಲಿ ರಿವೈಂಡ್ ಆಪ್ಶನ್ ಇದ್ದಿದ್ದರೆ ಅಷ್ಟೂ ಬದುಕಿನಲ್ಲಿ ಹಿಂದೆ ಹೋಗಿ ಜವಾಬ್ದಾರಿಯಿಂದ ಇರಬಹುದಿತ್ತು ಅಂದುಕೊಳ್ಳುವುದು ಭ್ರಮೆ ಅಷ್ಟೆ... ಮತ್ತೊಂದು ಆಪ್ಶನ್ ಸಿಕ್ಕಾಗಲೂ ತಪ್ಪು ಮಾಡುವವರು ತಪ್ಪು ಮಾಡುತ್ತಲೇ ಇರುತ್ತಾರೆ (ಮಾಡ್ತೇವೆ, ಎಡವುತ್ತೇವೆ), ಮಾಡದವರು ಮಹಾತ್ಮರಾಗಬಹುದೋ ಏನೋ...

--------------

ಈ ಗೊಂದಲಗಳು ಯಾರನ್ನೂ ಬಿಟ್ಟಿಲ್ಲ.... ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವುದನ್ನು...
 ಬದುಕಿನಲ್ಲಿ ಸ್ವಲ್ಪ ಹಿಂದೆ ತಿರುಗಿ ನೋಡಿ, ಎಷ್ಟು ಜನರನ್ನು ನಂಬದ್ದೀರಿ...ಎಷ್ಟು ಜನ ಪಾಠ ಕಲಿಸಿದರು...ಎಷ್ಟು ಜನ ಈಗಲೂ ಒಟ್ಟಿಗೆ ಇದ್ದೀರಿ, ಜೊತೆಗೆ ಬಾರದವರನ್ನು ಬಿಟ್ಟು ಮುಂದೆ ಬಂದಾಗಿನಿಂದ ನೀವು ಕಳೆದುಕೊಂಡಿದ್ದೀರಿ... ಸ್ವಲ್ಪ ಲೆಕ್ಕ ಹಾಕಿದರೆ ನಂಬಿಕೆಯ ಕೂಡು ಕಳೆಯುವಿಕೆಗೆ ನಮಗೆ ನಾವೇ ವ್ಯಾಲ್ಯೂವೇಶನ್ ಮಾಡ್ಕೋಬಹುುದು...
ಯಾರೋ ಪರಿಚಿತರಾಗ್ತಾರೆ... ತುಂಬ ಹಿತೈಷಿ, ಅಕ್ಕರೆ, ಸಲುಗೆ, ನಂಬಿಕಸ್ಠರು, ಅಭಿಮಾನಕ್ಕೆ ಪಾತ್ರರು ಅಂದುಕೊಳ್ತೇವೆ... ಮತ್ತಿನ್ನೇನೋ ನಡೆದಾಗ ಅಂದುಕೊಳ್ಳುತ್ತೇವೆ.... ಅಂದುಕೊಂಡಷ್ಟು ಇಲ್ಲವೆಂದೋ, ಜನ ಹೀಗೆ ಅಂತ ಗೊತ್ತಾಗಲಿಲ್ಲ ಅಂತಾನೋ... ಆಗಲೇ ಕನ್ ಫ್ಯೂಶನ್ ಶುರು ಆಗೋದು ಯಾರ ಜೊತೆ ಏನು ಹೇಳ್ಕೋಬಹುದು, ಎಷ್ಟು ಹೇಳ್ಕೋಬಹುದು, ನಾವು ಅಭಿಮಾನಿಸುವಷ್ಟುು ಮಟ್ಟಿಗೆ ಅವರು ಯೋಗ್ಯರೇ... ಆಂತರ್ಯದಲ್ಲೂ ನಮ್ಮ ಬಗ್ಗೆ ನಂಬಿಕೆ ಇದೆಯೇ.. ಅಥವಾ ಪುರುಸೊತ್ತಿನಲ್ಲಿ ಮಾತ್ರ ಹುಟ್ಟಿಕೊಳ್ಳುವ ಅಭಿಮಾನವೇ ಅಂತ...
ಹೀಗೆಲ್ಲ ನಂಬಿಕೆಯ ಪ್ರಶ್ನೇ ಬಂದಾಗಲೆಲ್ಲಾ ಅನ್ಸಲ್ವ ಬದಕು ರಿವೈಂಡ್ ಆಗಬೇಕಿತ್ತು... ಮತ್ತೆ ಶುರುವಿಂದ ಎಲ್ಲ ಶುರುವಾಗಬೇಕಿತ್ತು ಅಂತ...

--------------

ನಾವು ಯಾರದ್ದೋ ಅಭಿಮಾನಿಗಳಾಗಿರ್ತೀವಿ.. ಪ್ರೀತಿಪಾತ್ರರ ಅಂದುಕೊಂಡಿರ್ತೀವಿ (ನೆನಪಿಡಿ, ನಾವು ಅಂದುಕೊಂಡಿರ್ತೀವಿ, ಅವರಲ್ಲ). ಯಾವುದೋ ಮನಸ್ತಾಪ ಬಂದಾಗ, ಅಥವಾ ಪರಸ್ಪರ ವೇವ್ ಲೆಂಗ್ತ್ ಮ್ಯಾಚ್ ಆಗುವುದಿಲ್ಲ ಅಂತ ಅನ್ನಿಸಿದಾಗ ನಮ್ಮ ನಂಬಿಕೆಯ ಮೇಲೆ ಸಂಶಯ ಬರೋದು, ರೀ ಲಾಗಿನ್ ಆಗ್ಬೇಕು ಅನ್ಸೋುದು...


-------------


ಬದುಕು ಯಂತ್ರವಲ್ಲ, ಭಾವನೆ, ನಂಬಿಕೆ, ಪ್ರಯತ್ನ, ಅದೃಷ್ಟಗಳ ಕೂಡಾಟ. ಅಲ್ಲಿ ಬಟನ್ ಒತ್ತಿ ಪರಿಸ್ಥಿತಿಯ ನಿಯಂತ್ರಣ ಅಥವಾ ಭೂತಕಾಲಕ್ಕೆ ಹೋಗಿ ಎಲ್ಲ ಬಿಚ್ಚಿ ಮತ್ತೆ ಕಟ್ಟುವ ಆಪ್ಶನ್ ಇಲ್ಲ....
ಭೂತವನ್ನು ನೋಡಿ ಕಲಿಯುವ ಅವಕಾಶ ಜೊತೆಗಿದೆ ಅಷ್ಟೇ....
---------

ಯಾರನ್ನೋ ಮೊದಲ ಬಾರಿಗೆ ನೋಡಿದಗಲೇ ತುಂಬಾ ಹತ್ತಿರದವರು ಅನ್ಸೋದು..... ವರ್ಷಗಳಿಂದ ಪಕ್ಕದಲ್ಲೇ ಕುಳಿತಿದ್ದರೂ ಮಾತನಾಡಲೂ ಬೇಕೆಂದಿಲ್ಲ ಅನ್ನಿಸುವುದಕ್ಕೂ ಇದೇ ಕಾರಣ... ಅಪ್ರೋಚ್.... 
ಮಾತು ಆಂತರ್ಯದಿಂದ ಬರುತ್ತದೋ, ಸಾಂದರ್ಭಿಕವಾಗಿ ಬರುತ್ತದೋ ಅಂತ. ನೈಜ ಕಾಳಜಿ, ಪ್ರೀತಿ, ಸ್ನೇಹ, ಅಭಿಮಾನದಲ್ಲಿ ಸ್ವಾರ್ಥ, ಏನೋ ವಾಪಸ್ ಸಿಗುತ್ತದೆ ಅನ್ನೋ ನಿರೀಕ್ಷೆ ಇರಲಾರದು, ಜಸ್ಟ್ ಸ್ನೇಹ ದ್ಯಾಟ್ಸ್ ಇಟ್... 
ಅದು ಪುರುಸೋತ್ತಿದ್ದಾಗ ಮಾತ್ರ ಮಾಡುವ ಮೆಸೇಜ್ ಥರ, ಪುರುಸೊತ್ತಾದಾಗ ಮಾತ್ರ ಕೊಡುವ ರಿಪ್ಲೈ ಹಾಗಲ್ಲ.... ಅರ್ಥ ಮಾಡ್ಕೊಂಡು ಮಾಡುವ ವ್ಯವಹಾರ....

----------------


ನಾನು ಸಣ್ಣವನಿದ್ದಾಗ ಲೋಕ ಚೆನ್ನಾಗಿತ್ತು, ಈಗ ಕೆಟ್ಟು ಹೋಗಿದೆ ಅನ್ನುವ ವಾದ ಮೂರ್ಖತನದ್ದು ಮತ್ತು ಬಾಲಿಶ. ಆಗಿನ ಕಾಲದ  ಬದುಕು ಅಂದಿಗೆ, ಈಗಿನದ್ದು ಇಂದಿಗೆ, ಅಂದೂ ಇಂದೂ ಜೊತೆಗಿರುವ ಮನಸ್ಸು ಅದೇ ಆಗಿರೋದ್ರಿಂದ ವಯಸ್ಸು ಹೆಚ್ಚಾಗ್ತಾ ಹೋಗಂತೆ ಭೂತ ಮತ್ತು ವರ್ತಮಾನವನ್ನು ಹೋಲಿಕೆ ಮಾಡಲು ತೊಡಗುತ್ತದೆ. ಆಗಲೆ, ಕಳಕೊಂಡೆ.... ಅಂತ ಅನ್ನಿಸಲು ಶುರುವಾಗುವುದು....
ಮತ್ತದೇ ಸಾಲು ನೆನಪಾಗುವುದು... ಕಾಲವನ್ನು ತಡೆಯೋರು ಯಾರೂ ಇಲ್ಲ.......

-----------------


ಬೆಳಗ್ಗಿನಿಂದ ಬರ್ಥ್ ಡೇ ವಿಶ್ ಮಾಡಿ ಫೇಸ್ ಬುಕ್, ವಾಟ್ಸಾಪ್, ಎಸ್ಎಂಎಸ್ ಗಳಲ್ಲಿ ಅಬ್ಬಾ...ಎಷ್ಟು ಮಂದಿ ಸಂದೇಶ ಕಳುಹಿಸಿದರು... ಬಹುಶಃ ಹುಟ್ಟಿದ ದಿನವನ್ನು (ಹಬ್ಬ ಖಂಡಿತಾ ಅಲ್ಲ) ನೆನಪಿಸಿ ವಿಶೇಷ ಅನ್ನಿಸುವುದೇ ಸ್ನೇಹಿತರು... ಇಂದು ವಿಶೇಷ ದಿನ ಅಂತ ನೆನಪಿಸುತ್ತಲೇ ಇರುತ್ತಾರೆ, ಭಾವುಕರಾಗಿಸುತ್ತಾರೆ...ಮೊಬೈಲ್ ಅಕ್ಷರಶಃ ಹ್ಯಾಂಗ್ ಆಗಿತ್ತು....ಥ್ಯಾಂಕ್ಸ್ (ತುಂಬಾ ನೀರಸ ಪದ ಅಲ್ವ)...ನನಗೆ 35 ಕಳೆದಿದ್ದನ್ನು ನೆನಪು ಮಾಡಿ ಕೊಟ್ಟಿದ್ದಕ್ಕೆ.....Sunday, March 1, 2015

ರಿಪ್ಲೈಗೂ ಪುರ್ಸೊತ್ತಿಲ್ವ.....!!!!ಒಂದು ಕಾಲ ಇತ್ತು... ಆತ್ಮೀಯರೊಬ್ಬರನ್ನು ಸಂಪರ್ಕಿಸಲು ಪತ್ರ ಬರೆದು, ಆ ಪತ್ರ ಅವರಿಗೆ ಸಿಕ್ಕಿ, ಉತ್ತರಿಸಿ ಪೋಸ್ಟ್ ಮಾಡಿ ಮತ್ತೆ ಅಂಚೆಯಲ್ಲಿ ಕೈ ಸೇರಲು 10-15 ದಿನ ಬೇಕಾಗುತ್ತಿತ್ತು. ಒಬ್ಬರು ಮೃತಪಟ್ಟರೆ, ಅವರ ಉತ್ತರಕ್ರಿಯೆ ವೇಳೆಗೆ ಅದರ ಆಮಂತ್ರಣ ಸಿಕ್ಕಿಯೇ ಸಾವಿನ ಸುದ್ದಿ ಗೊತ್ತಾಗುತ್ತಿತ್ತು. ಇನ್ನು ಲ್ಯಾಂಡ್ ಲೈನ್ ಫೋನ್, ಎಸ್ಎಂಎಸ್ ಇತ್ಯಾದಿಗಳೆಲ್ಲಾ...ಕನಸಿನ ಮಾತು....
ಅದನ್ನೆಲ್ಲಾ ದಾಟಿ ಇಂದು ಅದ್ಭುತ ಸಂವಹನ ಜಗತ್ತಿನಲ್ಲಿ ನಾವಿದ್ದೇವೆ. ಇಂದು ಯಾರು ಯಾರಿಂದಲೂ ಭಾವನಾತ್ಮಕವಾಗಿ ದೂರವಾಗುವ ಪ್ರಶ್ನೇಯೇ ಇಲ್ಲ. ದೈಹಿಕವಾಗಿ ದೂರ ಹೋಗಬಹುದಷ್ಟೇ ಆದರೂ ಈಗೀಗ ವಾಟ್ಸಾಪ್ನಲ್ಲೋ...ಹ್ಯಾಂಗೌಟ್ ನಲ್ಲೋ ಎಸ್ಎಂಎಸ್ನಲ್ಲೋ ಕಳುಹಿಸಿದ ಸಂದೇಶಗಳಿಗೆ ಜಸ್ಟ್ ಓಕೆ ಅನ್ನಲು ನಮಗೆ ಪುರುಸೊತ್ತಿಲ್ಲ....----------------
ಹೌದಲ್ವೇ... ವಾಟ್ಸಾಪ್ನಲ್ಲೋ, ಎಸ್ಎಂಎಸ್ ನಲ್ಲಿ ಯಾರಾದರೂ ಸಂದೇಶ ಕಳುಹಿಸಿರುತ್ತೇವೆ. ಅದನ್ನು ಅವರು ಓದಿಯೂ ಇರುತ್ತಾರೆ (ಅದನ್ನು ತಿಳಿಯಲು ವಾಟ್ಸಾಪ್ನಲ್ಲಿ ವ್ಯವಸ್ಥೆ ಇದೆ). ಆದರೆ, ಸಂದೇಶ ಓದಿ ಗಂಟೆಗಳು ಕಳೆದರೂ, ದಿನಗಳು ಉರುಳಿದರೂ ಕೆಲವರಿಗೆ ಪುರುಸೊತ್ತೇ ಇರುವುದಿಲ್ಲ....
ನಿಜ, ಪ್ರತಿಯೊಬ್ಬರಿಗೂ ಅವರದೇ ಆದ ತಾಪತ್ರಯ, ಸಮಸ್ಯೆ, ಬ್ಯುಸಿ ಜೀವನ ಎಲ್ಲಾ ಇರುತ್ತದೆ. ಆದರೂ ಕೆಲವು ವಿಚಾರಗಳಿಗೆ ಪುರುಸೊತ್ತಿಲ್ಲ ಎಂದು ಕೈಚೆಲ್ಲುತ್ತೇವೆ. ಕೂಲಂಕಷವಾಗಿ ನೋಡಿದರೆ, ಒಂದು ಸಂದೇಶಕ್ಕೆ ಪ್ರತಿ ಸಂದೇಶ ನೀಡಲೂ ಪುರುಸೊತ್ತಿಲ್ಲದ ಘನ ಕಾರ್ಯ ಜನಸಾಮಾನ್ಯರೆನಿಸಿದ ಯಾರಿಗೂ ಇರದು....
ಒಪ್ಪಿಕೊಳ್ಳುತ್ತೇನೆ.... ಪುರುಸೊತ್ತಿಲ್ಲದೆ ದುಡಿಯುವವರು ನಮ್ಮ ನಡುವೆ ಇದ್ದಾರೆ. ಆದರೆ, ಉತ್ತರಿಸದೇ ಇರುವ ಎಲ್ಲರೂ ಬ್ಯುಸಿ ಅಂತಲೇ ಅಂದುಕೊಂಡರೆ ಅದು ಖಂಡಿತಾ ನಿಜವಗಾದು.
ಹೌದು, ಮತ್ತೆ ಕೆಲವರು ಹೇಳುತ್ತಾರೆ ವಾಟ್ಸಾಪ್ನಲ್ಲಿ ಹತ್ತಾರು ಗುಂಪುಗಳು, ಜೊತೆಗೆ ಫೇಸ್ ಬುಕ್ ಟ್ಯಾಗ್ ಗಳು, ಹ್ಯಾಂಗೌಟ್, ಮೆಸೆಂಜರ್, ಹೈಕ್.... ಹೀಗೆ... ಹೈರಾಣಾಗಿ ಹೋಗಿದ್ದೇನೆ. ಯಾವುದನ್ನು ನೋಡುವುದು ಬಿಡುವುದು ಅಂತ ಗೊತ್ತಾಗುವುದಿಲ್ಲ ಅಂತ. ನಿಜವಿರಬಹುದು. ಆದರೆ ನಿಮ್ಮ ಆತ್ಮೀಯರೆನಿಸಿಕೊಂಡವರೊಬ್ಬರ ಸಂದೇಶಕ್ಕೆ ಉತ್ತರಿಸಲೂ ಆಗದಿದ್ದರೆ ಅಂತಹ ತಂತ್ರಜ್ಞಾನವಾದರೂ ಯಾಕೆ ಬೇಕು....
ವಾಟ್ಸಾಪ್, ಹೈಕ್...ನಂತಹದ್ದು ಬಂದ ಮೇಲೆ ಸಂದೇಶ ಸಾಗಾಟ ಕ್ಷಿಪ್ರವಾಗಿ ಆಗಲು ಅನುಕೂಲ ಕಲ್ಪಿಸಿದೆ. ಆದರೆ ಸಂದೇಶ ವಾಹಕಗಳೇ ಟ್ರಾಫಿಕ್ ಜಾಂ ಸೃಷ್ಟಿಸಿ ಸಂಬಂಧಗಳನ್ನು ಮತ್ತಷ್ಟು ಕ್ಲಿಷ್ಟವಾಗಿಸಿದೆಯೋ, ಮನುಷ್ಯತ್ವವನ್ನು ಜಾಲಾಡಿ ಬಿಡುತ್ತದೋ ಗೊಂದಲವಾಗುತ್ತಿದೆ....
ಇಂದು ಶಾಲೆ ಕಾಲೇಜ್ ಬಿಡುವಾಗ ಆಟೋಗ್ರಾಫ್ ಬರೆಯಬೇಕೆಂದಿಲ್ಲ. ಯಾಕೆಂದರೆ, ಕೈಯಲ್ಲಿ ಮೊಬೈಲ್ ಇರುವಾಗ ಯಾರು ಯಾರಿಂದಲೂ ದೂರವಾಗುವ ಪ್ರಶ್ನೆಯಿಲ್ಲ... ಅಂಚೆ ವಿಳಾಸ, ಮನೆ ನಂಬರ್ ಬರೆದಿಟ್ಟು ಸಂಪರ್ಕಿಸಬೇಕೆಂದಿಲ್ಲ. ಕ್ಷಣ ಕ್ಷಣಕ್ಕೂ ಸಂದೇಶಗಳನ್ನು ಕಳುಹಿಸಿಕೊಂಡು ಸಂಪರ್ಕದಲ್ಲಿರಬಹುದು. ಜಗತ್ತು ನಮ್ಮನ್ನು ಅಷ್ಟು ಹತ್ತಿರವಾಗಿಸಿದೆ. ಆದರೆ, ನೆನಪಿಟ್ಟುಕೊಳ್ಳಿ ಸಂಪರ್ಕ ವಾಹಕ ಜಾಸ್ತಿಯಾಗಿದೆ ಹೊರತು ಅದನ್ನು ಬೆಸೆಯುವ ಮನಸ್ಸುಗಳಲ್ಲ...
ಯಾಕೆಂದರೆ ಸಂದೇಶಗಳು, ವಿಡಿಯೋ ಕ್ಲಿಪ್ಗಗಳ ಭರಾಟೆಯಲ್ಲಿ ನಮ್ಮ ಸೂಕ್ಷ್ಮ ಸಂವೇದನೆ, ಸ್ಪಂದಿಸುವ ಗುಣ, ಮಿಡಿಯುವ ಅಂತಃಕರಣವೇ ಮಾಯಾಗುತ್ತದೆಯೆಂದರೇ ಅಂತಹ ಸಂಪರ್ಕ ಮಾಧ್ಯಮದ ಪ್ರಯೋಜನವಾದರೂ ಏನು...
----------
ಒಂದು ವಿಷಯ ನೆನಪಿಟ್ಟುಕೊಳ್ಳಿ ಯಾರೋ ನಿಮಗೆ ಸಂದೇಶ ಕಳುಹಿಸುತ್ತಾರೆ, ವಿಶ್ ಮಾಡುತ್ತಾರೆ ಎಂದರೆ, ನಿಮಗೋಸ್ಕರ ಅಷ್ಟು ಸಮಯ ಅವರು ಮೀಸಲಿಟ್ಟಿದ್ದಾರೆ ಎಂದರ್ಥ. ಅದಕ್ಕೆ ಕನಿಷ್ಠ ಓಕೆ, ಹಾಯ್, ಹೌದು, ಇಲ್ಲ.... ಎಂದೂ ಉತ್ತರಿಸಲು ನಾವು ಉದಾಸೀನ ಮಾಡಿದರೆ, ಅಥವಾ ಸಂದೇಶ ಬಂದು ಗಂಟೆಗಳು ಕಳೆದರೂ ನಾವದಕ್ಕೆ ಸ್ಪಂದನೆಯೇ ನೀಡದಿದ್ದರೆ... ಸಂದೇಶ ಕಳುಹಿಸಿದವರು ಏನೆಂದುಕೊಳ್ಳಬೇಕು.
--------
 ಸಾಮಾಜಿಕ ತಾಣದಲ್ಲಿ ದಟ್ಟಣೆಯಲ್ಲಿ ನಾವು ಕಳದುಹೋಗಬಾರದು. ಅವುಗಳು ನಮ್ಮನ್ನು ನಿಯಂತ್ರಿಸದಿರಲಿ... ನಾವೇ ಬೇಕಾದಷ್ಟು ಬಳಸಿಕೊಂಡರೆ ಸಾಕು... ಸಾಮಾಜಿಕ ತಾಣಗಳು ಸ್ಪಂದಿಸುವ ಮನಸ್ಸುಗಳನ್ನು ಯಂತ್ರವಾಗಿಸದಿರಲಿ.... ಸಂಬಂಧಗಳನ್ನು ಯಾಂತ್ರಿಕವಾಗಿ ನೋಡದಿರಲಿ....
ಎಲ್ಲಾ ಸಂದೇಶಗಳು ಒಂದೇ, ಉತ್ತರಿಸದರೆಷ್ಟು, ಬಿಟ್ಟರೆಷ್ಟು.... ಯಾರು ನೋಡ್ತಾರೆ ಎಂಬ ಉಡಾಫೆ ಬೇಡ. ಸಂದೇಶ ಕಳುಹಿಸಿ ಉತ್ತರಕ್ಕೆ ಕಾಯುವ ಎಷ್ಟೋ ಮನಸ್ಸುಗಳೂ ಇರುತ್ತವೆ. ಎಲ್ಲರನ್ನೂ 10ರಲ್ಲಿ 11ರನೆಯವರಾಗಿ ನೋಡುವ ಜಡ್ಡುಗಟ್ಟಿದ ಮನೋಭಾವ ಬೇಡ....
ಮತ್ಯಾಕೆ ತಡ... ಮೊಬೈಲ್ ತೆರೆದು, ಎಷ್ಟೋ ದಿನದಿಂದ ಉತ್ತರಿಸದೇ ಬಿಟ್ಟ ಸಂದೇಶಗಳಿಗೆ ಒಂದು ಉತ್ತರ ಕೊಟ್ಟು ಗತಿ ಕಾಣಿಸುವ ಪ್ರಯತ್ನ ಮಾಡಿ ಅಲ್ಲ....