Tuesday, August 22, 2017

ವರ್ತಮಾನದ ಕವನ...

ಕವನ ಬರೆಯುವುದೋ
ಹುಟ್ಟುವುದೋ, ರಚಿಸುವುದೋ,
ಹೇಳುವುದೋ?

ಆವರಿಸಿದ ಭಾವಗಳ
ಕಾಡಿದ ಸಾಲುಗಳಿಗೆ
ಪದಗಳ ಜೋಳಿಗೆ ಹಿಡಿವ ಪ್ರಕ್ರಿಯೆ


ಕವಿಯು ಕಾಯುವುದಿಲ್ಲ
ಕವನಗಳು ಸಾಯುವುದಿಲ್ಲ
ಭಾವದಲ್ಲಷ್ಟೇ ಬದಲಾವಣೆ

ಕವಿ ಬರೆದಿದ್ದನ್ನು
ಓದುಗ ಕಾಣುತ್ತಾನೆ
ಪದಗಳೊಳಗೆ ತನ್ನನ್ನು ಹುಡುಕುತ್ತಾನೆ


ಓದಿದಾತನ ಭಾವಕ್ಕೆ ಕವಿ
ಕಿವಿಯಾಗಿ ದನಿಯಾಗಿ
ಅಕ್ಷರವಾಗಿ ಪ್ರಕಟವಾಗುತ್ತಾನೆ

ಕವನದ ಜನ್ಮರಹಸ್ಯಕ್ಕೆ
ಸ್ಪಷ್ಟೀಕರಣ ಅನಗತ್ಯ
ವಿವರಣೆ, ಷರಾಗಳು ಸಹಿತ


ಸಾಲುಗಳು, ನಿಖರ
ಭಾವಗಳು ಹಲವು
ಅವರವ ಭಾವಕ್ಕೆ ಭುಕುತಿಗೆ ಬಿಟ್ಟದ್ದು

ಇಂದಿನ ಸಾಲುಗಳು
ಇನ್ನೆಂದಿಗೋ ಪ್ರಸ್ತುತವಾದರೆ
ಮರುಕಳಿಸಿದ ಇತಿಹಾಸಕ್ಕೆ ಕವನವೇ ಸಾಕ್ಷಿ


ಮೂರ್ತ, ಅಮೂರ್ತದ ನಡುವೆ
ಪ್ರಾಸಕ್ಕೂ ತ್ರಾಸಕ್ಕೂ ಮದುವೆ
ಕಾಲಮಿತಿಯ ಸಾಹಿತ್ಯ ಗೀಳು

ಮಾತಿಗೂ, ಭಾವಕ್ಕೂ ಆಚೆಯ
ಪದಗಳ, ಸಾಲುಗಳ ಲೋಕದ
ಗೀಚಿದ ದಾಖಲೆಯ ವರ್ತಮಾನ.
-KM

ಅರ್ಥ ಕೋಶ
ಅರ್ಥವಾಗಿಯೂ ಆಗದ್ದು
ಗೊತ್ತಾಗಿಯೂ ಮನಸು ಸ್ವೀಕರಿಸದ್ದು
ಕ್ಷಣ ಕಾಲ ವರ್ತಮಾನದ ಆಚೆಗೆ ಕರೆದೊಯ್ದು
ಅರ್ಥ ತಿಳಿಸಿದ ವಾಸ್ತವದ ಕಡೆ ಬೆರಗಾಗಿ ನೋಡಿದ್ದು!

ಅರ್ಥದ ವಿಮರ್ಶೆಗೆ ಬೆದರಿ
ವಿಶ್ಲೇಷಣೆಯ ಬದಿಗೆ ಸರಿಸಿ, ಬೇಕೆಂದೇ ಕಿವುಡಾಗಿ
ಕಟುಸತ್ಯವನು ಅರಗಿಸುವ ದಾರಿಯಲ್ಲಿ
ಮಾತು ಮೂಕ, ಭಾವ ಕಠಿಣ

ತಿಳಿದೂ ತಿಳಿದೂ ಅರ್ಥವಾಗದ ಕಟು ಮನಸುಗಳು
ಅರ್ಥದ ಮೌಲ್ಯಕ್ಕೂ ಮಿಗಿಲಾದ
ವಾತ್ಸಲ್ಯ, ಸಾಂತ್ವನ, ನಿಸ್ವಾರ್ಥ ಭಾವದ ಸಂಪತ್ತು
ಋಣ ಉಳಿಸಿ, ಮಾತು ಮರೆಸುವ ಜೀವಗಳು

ಕೆಲವನ್ನು ಹೇಳಬಹುದು, ಕೆಲವನ್ನು ಕೇಳಬಹುದು
ತಿಳಿದೂ ಹೇಳಲಾಗದ, ಕೇಳಲಾಗದ...
ಮಾತಿಗೂ ಮೀರಿದ, ಪ್ರಶ್ನೆಗೂ ನಿಲುಕದ,
ಅರ್ಥವಾದರೂ ವಿವರಿಸಲಾಗದ  ಸಾಲುಗಳು

ಅಪಾರ್ಥ, ಪ್ರಶ್ನಾರ್ಥಕ, ನಿರರ್ಥಕಗಳ
ಗೊಂದಲದಲ್ಲಿ, ಶಬ್ದಾರ್ಥಕ್ಕೂ ವಾಸ್ತವಕ್ಕೂ
ತಾಳೆ ಹಾಕುವ ಪ್ರಯತ್ನದಲ್ಲಿ, ಈಗಕ್ಕೊಂದು
ನಾಳೆಗೊಂದು ಅರ್ಥ ವ್ಯತ್ಯಾಸಗಳಿವೆ ಯಾಕೆ?

ಮನಸು ಒಪ್ಪದ ಮಾತ್ರಕ್ಕೆ ಸತ್ಯ ಸುಳ್ಳಾಗುವುದೇ?
ವಾಸ್ತವ ಬದಲಾಗುವುದೆ, ಕದಲುವುದೇ?
ಮಾತಿಗೂ ಮೌನಕ್ಕೂ ನಡುವಿನ ಕೋಶಕ್ಕೆ
ಸ್ವೀಕರಿಸಲಾಗದ ಅರ್ಥಗಳ ತಾಕಲಾಟ
-KM

Sunday, August 20, 2017

ಜಿಜ್ನಾಸೆ1 ಖುಷಿ ಎಲ್ಲಿದೆ?

ಖುಷಿಗೊಂದು ವ್ಯಾಖ್ಯಾನ ಹೇಗೆ ಕೊಡ್ತೀರಿ?
ಬೇಸರ ಇಲ್ಲದ ಸ್ಥಿತಿಯೇ? ಕಡಿಮೆ ಬೇಸರ ಇರುವ ಸ್ಥಿತಿಯೇ? ಕ್ಷಣಕಾಲ ಆವರಿಸುವ ನಿರಾಳತೆಯ ಗುಂಗಿನ ನಶೆಯೇ? ಅಥವಾ ಸಂಭವಿಸಬೇಕಾಗಿದ್ದ ದುರಂತವೊಂದು ಸ್ವಲ್ಪದರಲ್ಲೇ ತೀವ್ರತೆ ಕಳೆದುಕೊಂಡು ಸತ್ತುದರ ವಿಜಯೋತ್ಸವವೇ? ಇದಮಿತ್ಥಂ ನಿರೂಪಣೆಗೆ ಇದೇನು ಗಣಿತ ಸೂತ್ರವಲ್ಲ ತಾನೆ. 

ಒಂದು ಕಾಲಘಟ್ಟಕ್ಕೆ ಹೊಂದುವಂತೆ ಅಥವಾ ಒಂದು ಪರಿಸ್ಥಿತಿಗೆ ಹೊಂದುವಂತೆ ಅಥವಾ ಒಂದು ವಯೋಮಾನಕ್ಕೆ ಅನ್ವಯವಾಗುವಂತೆ ಖುಷಿಯ ಕಲ್ಪನೆ, ಖುಷಿಯ ಅನುಭವಿಸುವಿಕೆಯ ತೀವ್ರತೆ ಬದಲಾಗ್ತಾ ಇರುತ್ತದೆ ಅನಿಸೋದಿಲ್ವ? ಖುಷಿಯನ್ನು ಅನುಭವಿಸುವ ಕಾಲಮಿತಿ, ಅದರ ಸಂಭ್ರಮ ಬೀರುವ ಪರಿಣಾಮ ಕೂಡಾ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ತಾನೆ? ತಿನ್ನುವುದಕ್ಕೆ ಬಹಳ ಹೊತ್ತಿನಿಂದ ಏನೂ ಸಿಗದೆ ಹಸಿದು ಬಳಲಿದವನಿಗೆ ರಸ್ತೆ ಬದಿಯ ಮರದಲ್ಲಿ ಸಿಕ್ಕ ಗೇರು ಹಣ್ಣನ್ನೇ ಹೊಟ್ಟೆ ತುಂಬಾ ತಿಂದಾಗ ಆ ಕ್ಷಣಕ್ಕೆ ಖುಷಿಯಾಗಬಹುದು. ಸ್ವಲ್ಪ ಮುಂದೆ ಹೋದಗ ಸಾರ್ವಜನಿಕ ಅನ್ನಸಂತರ್ಪಣೆ ಕಾಣಲು ಸಿಕ್ಕರೆ, ಅಯ್ಯೋ ಇಷ್ಟೊಳ್ಳೆ ಊಟವನ್ನು ಕಳೆದುಕೊಂಡೆನಲ್ಲ? ಅನ್ನುವ ಪರಿತಾಪದ ಜೊತೆಗೆ ಹೊಟ್ಟೆ ತುಂಬಾ ಗೇರುಹಣ್ಣು ತಿಂದು, ಮುಂದೆ ಮೃಷ್ಟಾನ್ನ ಭೋಜನ ಸವಿಯುವ ಸದಾವಕಾಶ ತಪ್ಪಿತಲ್ಲಾ ಅನ್ನುವ ಬೇಸರವೂ ಕಾಡಬಹುದು. 
---------
ಪುಟ್ಟ ಪುಟ್ಟ ಕ್ಷಣಗಳೂ ಖುಷಿಯನ್ನು ಕಾಣಿಸಿಕೊಡಬಹುದು. ಆದರೆ, ಅದಕ್ಕೊಂದೂ ಆಯುಷ್ಯ ಅಂತ ಇರ್ತದಲ್ಲ? ಖುಷಿಯನ್ನು ಉಳಿಸಿಕೊಳ್ಳುವುದು, ಮೆಲುಕು ಹಾಕುವುದು, ಅದರ ಆಹ್ಲಾದಕತೆಯಲ್ಲಿ ಕ್ಷಣಕಾಲ ಜಂಜಡಗಳನ್ನು ಮರೆತು ನಿರಾಳರಾಗುವುದಕ್ಕೂ ಸಾಧ್ಯ. ಆದರೆ ಎಷ್ಟು ಹೊತ್ತು, ಎಷ್ಟು ಗಂಟೆ, ಎಷ್ಟು ದಿನ ಅಂತಿರೋದು? ಖುಷಿಯನ್ನು ಕಟ್ಟಿ ಹಾಕಿ ಜೇಬಿನಲ್ಲಿಟ್ಟು ತಿರುಗಾಡಲಾಗದು. ಬೊಗಸೆಗೆ ಸಿಕ್ಕಿದ ಖುಷಿಯನ್ನು ಬಾಚಿ ಕುಡಿದು ಅದೇ ಗುಂಗಿನಲ್ಲಿ ತುಂಬ ದಿನ ಮೈಮರೆಯಲಾಗದು. ಹಾಗೆ ನೋಡುವುದಕ್ಕೆ ಹೋದರೆ ಕಥೆಗಳಲ್ಲಿ, ಸಿನಿಮಾಗಳಲ್ಲಿ ಬರುವ ಹಾಗೆ ಮತ್ತೆ ಅವರು ಸುಖವಾಗಿ ಬಾಳಿ ಬದುಕಿದರು ಅನ್ನುವ ಥರ ಬದುಕಿನ ಉಳಿದ ಭಾಗವೆಲ್ಲಾ ಖುಷಿಯೋ ಖುಷಿ ಅನ್ನುವ ಇತ್ಯರ್ಥಕ್ಕೆ ಬರಲು ಸಾಧ್ಯವೇ ಇಲ್ಲ.

ಕುಡುಕನಿಗೆ ಕುಡಿಯೋದು ಖುಷಿ ಕೊಟ್ರೆ, ಧೂಮಪಾನಿಗೆ ಸಿಗರೆಟ್ ಹೊಗೆಯೇ ನಿರಾಳತೆ ತರುತ್ತದಂತೆ. ಚಾರಣನಿಗನಿಗೆ ಬೆವರು ಸುರಿಸಿ ಗುಡ್ಡ ಹತ್ತಿದಾಗಲೇ ಸಂಭ್ರಮ, ಸಡಗರ. ಪ್ರಕೃತಿ ದೇವರ ಮುಂದೆ ಇನ್ಯಾವ ಸಂತೋಷವೂ ಕ್ಷಣಿಕ ಅನ್ನುವ ಥರ. ಯಕ್ಷಗಾನ ನೋಡುವವನಿಗೆ ನಿದ್ದೆಗೆಟ್ಟು ಪ್ರಸಂಗಗಳನ್ನು ನೋಡುತ್ತಾ ಕೂರುವುದೇ ಒಂದು ಸಂಭ್ರಮ. ಅದರಲ್ಲೇನೋ ಹೊಸ ಉತ್ಸಾಹ ದಕ್ಕಿಸುವ ಪ್ರಯತ್ನ. ಅದರ ಮೆಲುಕಿನಲ್ಲಿ ಮತ್ತಷ್ಟು ಜೀವನೋತ್ಸಾಹ ಪಡೆಯುವ ತವಕ. ಖುಷಿಯನ್ನು ಕಂಡುಕೊಳ್ಳುವುದು, ಅದನ್ನು ಅನುಭವಿಸುವುದು, ಮತ್ತೆ ಖುಷಿಯನ್ನು ಹೇಳಿಕೊಳ್ಳುವುದೋ, ತೋರಿಸಿಕೊಳ್ಳುವುದೋ ಅದು ಮುಖದಲ್ಲಿ, ಬರಹದಲ್ಲಿ ತೋರ್ಪಡಿಕೆಯಾಗುವುದೋ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಖುಷಿಯನ್ನು ಬೇಸರವನ್ನು ಶಬ್ದಗಳ ಹಾಗೆ, ಮಳೆ ಸುರಿದ ಹಾಗೆ, ಚಳಿಯ ಹಾಗೆ ಡೆಸಿಬಲ್, ಸೆಂಟಿಗ್ರೇಡ್‌ಗಳ ಹಾಗೆ ಅಳೆಯುವುದಕ್ಕೆ ಆಗುತ್ತದೆಯೇ ಅಥವಾ ಇದುವೇ ಖುಷಿ, ಇದುವೇ ಬೇಸರ ಅಂತ ಬೇರ್ಪಡಿಸುವುದಕ್ಕಾಗುತ್ತದೆಯೇ?

ಚಿಕ್ಕವರಿದ್ದಾಗ ಬೇಗ ದೋಡ್ಡೋರಾಗೋದಿಲ್ಲ ಎಂಬ ಕೊರಗು, ದೊಡ್ಡೋರಾದ ಮೇಲೆ ಯಾಕೆ ಬಾಲ್ಯ ಕಳೆದುಹೋಯ್ದು ಅಂತ ನೋಯುವ ಬೇಸರವಿದೆಯಲ್ಲ? ಇದು ಬದುಕಿನ ವೈರುಧ್ಯ. ಅಂದರೇನು? ಕಳೆದುಕೊಂಡ ಬಳಿಕ ಕಂಡುಕೊಳ್ಳುವ ಖುಷಿಯ ನೆನಪುಗಳವು. ನಾವು ಖುಷಿ ಪಟ್ಟಿದ್ವಿ ಅನ್ನೋದು ಅಥವಾ ಇದುವೇ ಬದುಕಿನ ಖುಷಿಯ ಕಾಲಘಟ್ಟ ಅಂತ ಆ ಕ್ಷಣಕ್ಕೆ ತೋರದೆ ಹೋಗಬಹುದು. ಕಂಡುಕೊಳ್ಳಲಾಗದಿರಬಹುದು. ಆದರೆ, ಮತ್ತೊಮ್ಮೆ ಆ ಖುಷಿಗಿಂತ ಕಠಿಣವಾಗ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಾಗಲೆಲ್ಲಾ ಗೊತ್ತಾಗುತ್ತದೆ... ಹೌದು ಖುಷಿಯನ್ನು ಕಳಕೊಂಡಿದ್ದೇನೆ ಅಂತ. 

ಜೊತೆಗಿರುವಾಗ ಎಷ್ಟೋ ವಿಚಾರಗಳ ಬೆಲೆ ಗೊತ್ತಾಗೊದೇ ಇಲ್ಲ. ಅಥವಾ ನಾನೀಗ ಬದುಕಿನ ಅತ್ಯಂತ ಖುಷಿಯ ಕ್ಷಣದಲ್ಲಿದ್ದೇನೆ ಅಥವಾ ಇದು ನನ್ನ ಬದುಕಿನ ಘೋರ ನೋವು ಅಂತ ಯಾರೂ ಹೇಳುವ ಹಾಗಿಲ್ಲ. ಈ ವರೆಗಿನ ಬದುಕಿನಲ್ಲಿ ಕಂಡ ಅತ್ಯಂತ ಖುಷಿ ಅಂತ ಹೇಳ್ಬಹುದೇನೋ...ಭವಿಷ್ಯ ಕಂಡವರಿಲ್ಲ. ಈಗಿರೋದಕ್ಕಿಂತ ಹೆಚ್ಚಿನ ಆನಂದವೋ, ದುಃಖವೋ ಮುಂದೆ ಕಾದಿರಲಿಕ್ಕೂ ಸಾಕು. ಯಾರಿಗೊತ್ತು. ನೋಡಿದವರಿಲ್ಲ, ನಿಖರವಾಗಿ ಊಹಿಸಬಲ್ಲವರಿಲ್ಲ.
ಕೆಲವೊಮ್ಮೆ ಖುಷಿ ಅಂದುಕೊಂಡಿದ್ದು ಸಂತಸವಾಗಿರೋದಿಲ್ಲ. ಅಥವಾ ಬೇಸರ ಅಂತ ಭ್ರಮಿಸಿದ್ದು ವಾಸ್ತವದಲ್ಲಿ 
ದುಃಖಕಾರಕವಾಗಿರೋದೂ ಇಲ್ಲ. ಆ ಕ್ಷಣಕ್ಕೆ, ಆ ಸಂದರ್ಭಕ್ಕೆ ಹಾಗನಿಸಿರುತ್ತದೆ ಅಷ್ಟೇ. ಹುಸಿ ನೋವು ಹುಟ್ಟಿದ ಹಾಗೆ. ಅದು ಕಂಡುಕೊಳ್ಳಲಾಗುವುದು ತಡವಾಗಿ ತಾನೆ. ನೋವನ್ನು ಅರಗಿಸಲು, ಅರ್ಥಮಾಡಿಕೊಳ್ಳಲು, ಮಾನಸಿಕವಾಗಿ ಸಿದ್ಧರಾಗಲು ಒಂದಷ್ಟು ಹೊತ್ತು ಬೇಕು. ಖುಷಿಯನ್ನೂ ಅಷ್ಟೇ. ಅರಗಿಸಿಕೊಳ್ಳಲು, ಅದರೊಳಗೆ ತಲ್ಲೀನರಾಗಲು, ಅನುಭವಿಸಲು, ಸಾವರಿಸಿಕೊಳ್ಳಲು ವ್ಯವಧಾನ ಬೇಕಲ್ವ. ಹಾಗಾಗಿ ಯಾರಿಗೊತ್ತು... ಈಗಿರುವ ಪರಿಸ್ಥಿತಿ,ಈಗಿರುವ ಅವಕಾಶ ಅಥವಾ ಈಗ ಕಾಡುತ್ತಿರುವ ಸನ್ನಿವೇಶ ಬದುಕಿನ ಅತ್ಯಂತ ಖುಷಿಯದ್ದೋ, ದುಃಖದ್ದೋ ಘಳಿಗೆ ಆಗಿರಬಹುದು. ಅದನ್ನು ನಿರ್ಧರಿಸೋದು ಬರಲಿರುವ ನಾಳೆಗಳಲ್ವ?
(ಮುಂದುವರಿಯಲಿದೆ)

Monday, August 14, 2017

ಫೋಟೋವೆಂಬೋ ಇತಿಹಾಸ...

 
 
ಛಾಯಾಚಿತ್ರವದು ಇತಿಹಾಸದ ದಾಖಲೆಯಲ್ವೇ?
ನಮ್ಮೊಂದಿಗೆ ದಿನಪೂರ್ತಿ ಇರುವ ನಮಗೇ ಕಾಣದ
ಹಳೆ ಮುಖ, ತೋರ ಸಪೂರ, ಕೃಶ ದಢೂತಿಗಳ ನೆನಪಿಸುವ ಸಾಕ್ಷಿ
ಮರೆತು ಹೋದ ನಿನ್ನೆಗಳ ಹೆಕ್ಕಿ ತಂದು ಹರಡಿ
ಹಳೆ ನಿರಖು ಠೇವಣಿಯೊಂದನ್ನು ಬಿಡಿಸಿಟ್ಟ ಹಾಗೆ!

ನೆನಪಿನಾಳಕ್ಕೆ ಇಳಿದಿದ್ದ ಪ್ರವಾಸ, ಕಳೆದುಕೊಂಡ ಕಾಲೇಜು
ಹುಚ್ಚುಚ್ಚಾಗಿ ಕಂಡ ನಗು, ಬೆರಗಿನ, ಬೇಸರದ ನೋಟ
ಯಾರದ್ದೋ ಮದುವೆ, ಇನ್ಯಾರದ್ದೋ ಹುಟ್ಟಿದದಿನ
ಮತ್ತೆ ಗುಡ್ಡದ ತುದಿ, ಕಡಲಿನ ಅಲೆ ನಡುವೆ...
ಸವಾರಿ ಬಾರಿದಿದ್ದರೂ ಬೈಕು ಹತ್ತಿ ಒಂದು ಪೋಸು!


ಸೆಲ್ಫೀಯೇ ಇಲ್ಲದ ಕಾಲದಲ್ಲಿ ಯಾರೋ ಕ್ಲಿಕ್ಕಿಸಿದ ಚಿತ್ರಗಳು
ಕಂಪ್ಯೂಟರೇ ಇಲ್ಲದ ಮನೆಗಳಲ್ಲಿ ಆಲ್ಬಂ ಸೇರಿದ್ದ ಬಿಂಬಗಳು
ಸಾವಿರ ಪದಗಳ ಕಥೆಗಳಿಗೆ, ಘಳಿಗೆಗಳಿಗೆ ನೀರೆರೆದು
ಮತ್ತೊಂದು ಕಿರುಚಿತ್ರವ ಪ್ರಸ್ತುತಪಡಿಸಿ
ನಗಿಸಿ, ಅಳಿಸುವ ತಾಕತ್ತುಳ್ಳ ಫೋಟೊಗಳು

ಕ್ಷಣಾರ್ಧದ ಕಾಲಘಟ್ಟದಲ್ಲಿ ಚಿಮ್ಮಿದ ನಗು,
ಅದರಾಚೆಗಿನ ಚಿಂತೆಯ ರೇಖೆ, ಕಡುಕೋಪ
ಕ್ಯಾಮೆರಾ ಫ್ರೇಮಿಗೆ ಸಿಲುಕದ ವಿಷಾದ, ಇಣುಕದ ಭಾವಗಳು
ಕಂಡದ್ದಕ್ಕೂ, ಕಾಣದ್ದಕ್ಕೂ ಪ್ರತಿಬಿಂಬದ ಹಾಗೆ
ಎಂದೋ ತೆಗೆದು ಇಂದು ನೋಡುವ ಚಿತ್ರಗಳು...


ಹೀಗೊಂದು ಕಾಲವಿದ್ದದ್ದಕ್ಕೆ ಸಾಬೀತು
ಅಷ್ಟೊಂದು ಖುಷಿಗಳಿಗೆ ಒಂದು ಚೌಕಟ್ಟು ಕಟ್ಟಿಟ್ಟು
ಮತ್ತೆ ಮತ್ತೆ ನಮ್ಮನ್ನೇ ನಮಗೆ ತೋರಿಸಿ, ಅಚ್ಚರಿಪಡಿಸುವ
ಚೆಂದದ ಕ್ಷಣವನ್ನೇ ಫೋಟೋದಲ್ಲಿ ತೋರಿಸುವ
ಜೀವನ್ಮುಖಿ ಅಲಖಿತ ನಿಯಮಕ್ಕೊಂದು ನಮಸ್ಕಾರ!

ಪ್ರೊಫೈಲ್ ಚಿತ್ರವೇ ವ್ಯಕ್ತಿಯಲ್ಲ, ಅದೊಂದು ಕ್ಷಣದ ಸೆರೆಯಷ್ಟೇ
ಜನಪ್ರಿಯತೆ, ಉತ್ತಮಗಳ ಆಯ್ಕೆಗೊಂದು ನಿದರ್ಶನ
ಕುಸಿತ, ಹಿನ್ನಡೆಯನ್ನೂ ಮೀರಿ ಮುಖ ತುಂಬ ನಗುವರಳಿಸಿ
ಚೌಕಟ್ಟಿನಲ್ಲಿ ಪ್ರತಿಬಿಂಬ ಪಡೆದು ಮತ್ತೆ ಮತ್ತೆ
ಬದುಕ ಕಡೆಗೆ ದೂಡುವುದು ಸುಳ್ಳಲ್ಲ


ಖುಷಿಗಳನ್ನೇ ಫ್ರೇಮಿನಲ್ಲಿ ಹಿಡಿಯುವುಂತಾದರೆ?
ರುಚಿಗೆ ತಕ್ಕಷ್ಟೇ ಬೇಕಾದಾಗ ಪಡೆಯುವಂತಾದರೆ?
ಕೈಗೆ ಸಿಕ್ಕ ನಗುವನ್ನೆಲ್ಲಾ ಬಾಚಿ ಸೆರೆಹಿಡಿದು
ಅಗತ್ಯ ಬಿದ್ದಾಗ ಬಳಸಬಹುದಲ್ವೇ...
ಭೂತದ ಚಿತ್ರಕ್ಕೆ ವರ್ತಮಾನದಲ್ಲಿ ಜೀವ ತುಂಬಬಹುದಲ್ವೇ...?
-KM

Friday, August 11, 2017

ಶರತ್ತುಗಳು ಅನ್ವಯ!

ಮುಂಜಾನೆ ಮಬ್ಬು ಬೆಳಕಿನಲ್ಲಿ
ಅಂಗಳದ ತುದಿಯಲ್ಲಿ ಬೆಳೆದ ಹುಲ್ಲಿನ ತುದಿಯಲ್ಲಿ
ಮಂಜಿನ ಮುತ್ತುಗಳ ಸಾಲು
ನಡು ನಡುವೆ ಉದುರಿದ ಪಾರಿಜಾತದ ಓರೆಕೋರೆ ರಂಗೋಲಿ
ನಸು ಚಳಿ, ತುಸು ಕಂಪು
ಬರಿಗಾಲ ನಡಿಗೆಗೆ ತಂಪಿನ ಕಚಗುಳಿ

ಸಂಜೆಯ ಭೋರ್ಗೆರೆಯುವ ಮಳೆಗೆ
ಗದ್ದೆಯ ಬದುವಿನ ತೆಂಗಿನ ಮರಗಳ ಸಾಲಿನ ಕೆಳಗೆ
ಕೊಡೆ ಹಿಡಿದು ಸರ್ಕಸ್ಸಿನ ನಡಿಗೆ
ಕಿವಿಗಡಚಿಕ್ಕುವ ವರ್ಷಧಾರೆ, ಮೈಯೆಲ್ಲ ಒದ್ದೆ
ವಾಲಿ ಬಿದ್ದರೆ ಕೆಸರು, ಓಲಾಡುವ ಮರಗಳ
ನರ್ತನ, ಜೀರುಂಡೆ ಗಾಯನ, ಬೀಸುವ ಗಾಳಿಗೆ ಯೋಚನೆಗಳೇ ಸ್ತಬ್ಧ

ಗುಡ್ಡದ ತುದಿಯದ ಗೇರು ಮರದ ರೆಂಬೆ
ಮೇಲೆ ಮಲಗೋವಷ್ಟು ಜಾಗ, ಪಕ್ಕದಲ್ಲೇ ಬಂಡೆ
ಪರೀಕ್ಷೆಗೆ ಓದಲು ಸೊಗಸು, ಸುತ್ತ ಕೇಪುಳದ ಹೂಗಳು
ನೆಲ್ಲಿಕಾಯಿ ಬೋನಸ್ಸು, ದೂರದಲ್ಲಿ ಅಸ್ತಮಿಸುವ ಸೂರ್ಯ
ಊಟಿ, ಮುನ್ನಾರಿಗೂ ಮುಗಿಲು
ಸಂಜೆ ಆಗಸದಲ್ಲಿ ಕೊಕ್ಕರೆಗಳ ಪಥಸಂಚಲನ

ಮಾರ್ಗದ ನಡುವೆಯೊಂದು ತೋಡು
ಮೊಣಕಾಲುದ್ದದ ನೀರು, ಚಪ್ಪಟೆ ಕಲ್ಲಿನ ಮೇಲೆ ನಡಿಗೆ
ಪಾದಕ್ಕೆ ಮುತ್ತಿಕ್ಕುವ ಮೀನು, ತೇಲಿ ಬರುವ ತೆಂಗಿನಕಾಯಿ
ಮತ್ತೆ ಮರಳು ಕಾಣುವಷ್ಟು ಶುಭ್ರ ತಳ,
ಕಾಗದದ ದೋಣಿ ಬಿಡಲು ಪ್ರಶಸ್ತ
ಮುಖಕ್ಕೆ ನೀರೆರಚಿದರೆ ಆಯಾಸವೇ ಮಾಯ

ಚಾಪೆಯ ಮೇಲೆ ಲಾಟೀನು, ಪಕ್ಕದಲ್ಲಿ ವಿವಿಧಭಾರತಿಯ ಹಾಡು
ಕೈಯ್ಯಲ್ಲೊಂದು ಪುಸ್ತಕ, ಬಾಯೊಳಗೆ ಸ್ವಲ್ಪ ಕಡಲೆ
ಒಂದಷ್ಟು ಹಳೆ ಕಾದಂಬರಿ, ಮತ್ತೆ ಸ್ವಲ್ಪ ಪತ್ತೇದಾರಿ ಕತೆ
ಉತ್ಸಾಹ ಬಂದರೆ ಬರೆಯಲು ಹಳೇ ರಫ್ಪು ಬುಕ್ಕು!
ಹಸಿವಾದಾಗ ಕೂಗುವ ಹಸುವಿನ ರಾಗ
ಮುಂಜಾನೆ ಏಳಿಸುವ ಕೋಳಿ, ಜೊತೆಗೆ ಚಿಲಿಪಿಲಿ

ಮೊಬೈಲು, ವಾಟ್ಸಪ್ಪು, ಚಾನೆಲ್ಲುಗಳ ಹಂಗಿಲ್ಲದ
ಸಾವಕಾಶದ ಬದುಕು, ಕಾಲಮಿತಿಯ ನೋಡದ
ಹೊಸ ಹೊಸ ರೋಗಗಳ ಹೆಸರನ್ನೇ ಕೇಳದ
ಸಾವಧಾನದ, ಸಹಜ, ಸಡಗರದ ಜೀವನ...
ಶರತ್ತುಗಳು ಅನ್ವಯ...
ಪುರುಸೊತ್ತಿದ್ದವರಿಗೂ, ಅದೃಷ್ಟವಂತರಿಗೂ ಮಾತ್ರ!!

Thursday, August 10, 2017

ನೋಟಿಸ್ ಬೋರ್ಡ್ (ಕಾಲೇಜು ದಿನದ ಕವನಗಳು)

Gadayikallu Trip

Delhi Trip

Silent Friends UCM

Delhi Trip

@ UCM with Farooque and SP

BCOM sendoff

Youth Parliament competion @ ravindra kalabhavana UCM

Youth Parliament competion @ ravindra kalabhavana UCM

Tuesday, August 8, 2017

ಅಡವಿಟ್ಟ ಕನಸುಗಳು...(ಕವನ)

ಅಡವಿಟ್ಟ ಕನಸುಗಳು...

...

ಅಡವಿಟ್ಟ ಕನಸುಗಳಿಗೆ ಧೂಳು ಹಿಡಿದಿದೆ..
ಕೊಡವಿದರೆ ಅಲರ್ಜಿ
ವರ್ಷಗಳಿಂದ ಬಳಸದೆ ಫಂಗಸ್ ತಗಲಿದೆ...
ಬಿಡಿಸಲು ಕಾಲ ಬಂದಿಲ್ಲ
ಮೌಲ್ಯದ ಮೊತ್ತ ಧನರಾಶಿ ಕೂಡಿಲ್ಲ, ನೋಡಿಲ್ಲ

ಸುಲಭದಲ್ಲಿ ಕಾಣಿಸದ ಕನಸು
ತನ್ನಷ್ಟಕ್ಕೆ ಬಿಡಿಸಿದ ಮನಸು
ಕೈಗೆಟುಕದೆ ದುಬಾರಿಯಾಗಿ
ಪರಭಾರೆಯಾಗದೆ
ತುಕ್ಕು ಹಿಡಿದು
ತುರ್ತು ಪರಿಸ್ಥಿತಿಯ ಸಾಲಕ್ಕೆ ಅಡವಿಡಬೇಕಾಯ್ತು!

ಬಿಡಿಸ ಹೊರಟರೆ ತಗಲುವ ಜೇಡನ ಬಲೆಗಳು!
ಹೇಗೋ ನಡೀತದೆ ಎಂಬಂಥೆ ಕಟ್ಟಿದ ಭವಿಷ್ಯದ ನನಸಿನ ಸಾಕಾರದ ಪ್ರತಿರೂಪ...
ಕೈಗೆಟಕುತ್ತಿಲ್ಲ, ಲೋನು ತೀರುತ್ತಿಲ್ಲ...
ಮರಳಿ ಸಿಕ್ಕರೂ ಈಗ ಪ್ರಯೋಜನಕ್ಕೆ ಬಾರದಲ್ಲ!

ಭೂತ ಕಾಲದಲ್ಲೇ ಜ್ನಾನೋದಯವಾಗಿಲ್ಲ ಯಾಕೆ?
ಕನಸು ಕಟ್ಟುವ ಕಾಲಕ್ಕೆ ಬುದ್ಧಿ ಓಡಲಿಲ್ಲ ಏಕೆ?
ವರ್ತಮಾನದಲ್ಲಿ ಗತದ ಶವಪರೀಕ್ಷೆ
ಮೂರ್ಖ ನಿರ್ಧಾರಗಳಿಗೆ ಕಾಲಕ್ಕೆ ಸುಮ್ಮನೆ ಬೈಗಳು!
ಕಳೆದುಕೊಂಡ ಮೇಲೆ ಸ್ವಅನುಕಂಪಕ್ಕೊಂದು ನೆಪವಷ್ಟೇ...

ಆಗಿದ್ದಾಗಲಿ ಮಾರಾಯ, ತಾಜಾ ಕನಸ ಕಟ್ಟಿನೋಡು...
ಆಗೋದಿಲ್ಲ,
ಹಳೆ ಸಾಲ ತೀರದೆ ಕಾಸು ಪಡೆಯೋದ್ಹೆಂಗೆ?
ನಿರಾಕ್ಷೇಪಣೆಯಿಲ್ಲದೆ ಕನಸ ಹೊಸೆಯೋದೆಂತು?
ಇತಿಹಾಸ ಮರುಕಳಿಸದಿರಲಿ, ಮತ್ತೊಂದು ನಿರೀಕ್ಷೆ
ಗೋರಿ ಸೇರದಿರಲಿ...
ಸಾಲ ಕಾಡದಿರಲಿ

ಉತ್ತರ ಇದ್ದರೂ ಹೇಳಲಾಗದ ಸಂದಿಗ್ಧ
ಸಲಹೆಗಳ ಕೇಳಿದರೂ ಪಾಲಿಸಲಾಗದ ಮುಗ್ಧ
ಪರಿಸ್ಥಿತಿಗೇನು ಗೊತ್ತು ಕನಸಿನ ಭಾರದ ಹೊರೆ?
ಕಳಚಿಡಲಾಗದೆ, ಬಿಡಿಸಿ ನೋಡಲಾಗದೆ
ಲಾಕರಿನಲ್ಲೇ ಕೊಳತು ಕ್ಷಯಿಸುವ ನನಸು...
-KM.

Sunday, August 6, 2017

ತಂಗ್ಯಮ್ಮ....(ರಕ್ಷಾಬಂಧನ ವಿಶೇಷ)

 ತಂಗ್ಯಮ್ಮ...
.......
ಪುಟ್ಟ ಪುಟ್ಟ ಹೆಜ್ಜೆಗಳು
ಕಿರು ಬೆರಳಿಡಿದು ಅಳುಕು ನಡಿಗೆಯ
ಎರಡು ಜಡೆ, ತೀಡಿದ ಕಾಡಿಗೆ
ಜುಟ್ಟಿಗೆ ಮಲ್ಲಿಗೆ ತೊಟ್ಟು
ಹತ್ತಾರು ಪ್ರಶ್ನೆಗಳ ಕೇಳಿ ತಲೆತಿಂದು ಜೊತೆಗೆ
ನಡೆದು ಶಾಲೆಗೆ ಹೋದ ನೆನಪು...

ಬಿರು ಮಳೆಗೆ ತೋಯ್ದು
ಅವಳ ಬ್ಯಾಗು, ವಾಟರ್ ಕ್ಯಾನು ಹೆಗಲ
ಮೇಲೆ ಹೊತ್ತು, ತೊರೆಯ ಸಂಕದಲ್ಲಿ ಹಿಡಿದೆತ್ತಿ
ಅತ್ತಾಗ ಚಾಕಲೇಟು ಕೊಡಿಸಿದಾಗ ಕಣ್ಣರಳಿಸಿ ನಕ್ಕಾಕೆ
ಡಿಗ್ರೀಗೆ ಬಂದಾಗ ಅವಳು ಡಿಸ್ಟಿಂಕ್ಷನ್ನು, ನಾನು ಜಸ್ಟು ಪಾಸು
ಹೆಚ್ಚು ಕಲಿಯಗೊಡದೆ ಮದುವೆ ಮಾಡಿ ಕೊಟ್ಟಾಗ ನನಗೇ ಕಣ್ಣೀರು

ಬೆಳೆದ ಮನೆಮಗಳೀಗ ಪರರ ಸೊತ್ತು
ಅಲ್ಲಿಂದಲೇ ಪುಟಗಟ್ಟಲೆ ಪತ್ರಗಳ ಸರಣಿ
ತವರ ಬಗೆಗೇ ಪ್ರಶ್ನೆಗಳು, ನನ್ನ ಕೆಲಸದ ಚಿಂತೆ
ಹೆತ್ತವರ ಆರೋಗ್ಯ, ಮತ್ತೆ ಗಂಡ ಮಕ್ಕಳ ಬಗೆಗೂ...
ಕುಸಿದಾಗ ತುಟಿಗೇರಿದ ಸಿಗರೇಟು ಕಿತ್ತೆಸೆದು
ಬೆಳೆದ ಗಡ್ಡಕ್ಕೆ ತಕರಾರು ತಂದಿಟ್ಟು, ಕೈಹಿಡಿದು ಎಬ್ಬಿಸಿದವಳು...

ಬರೆದದ್ದಕ್ಕೆ ಮೊದಲ ಓದುಗಳು, ಆದ್ಯತೆಯ ಶ್ರೋತೃ
ಕೊರೆದದ್ದಕ್ಕೆ ಕಿವಿಯಾಗಿ, ಹೇಳಿದಷ್ಟೇ ಅರ್ಥ ಮಾಡಿ
ಕಿವಿ ಹಿಂಡಿ, ತಕರಾರು ತೆಗೆಯಬಲ್ಲ ದಿಟ್ಟೆ
ಹೇಳದೆಯೇ ಮನಸು ಕಾಣಿಸ್ತದಲ್ಲ ಆಕೆಗೆ
ಮನೆ ಬಿಟ್ಟು ತುಸು ತಡವಾದರೂ
ಕರೆ ಬಾರದಿದ್ದರೆ ಆತಂಕ, ಮತ್ತೆ ಕುರುಕ್ಷೇತ್ರ

ಅಪ್ಪನಿಗೂ ಮಿಕ್ಕ ಅಧಿಕಾರ,
ಗೆಳೆಯನಷ್ಟೇ ಮಮಕಾರ, ತರ್ಲೆ, ಅಧಿಕಪ್ರಸಂಗಿ
ಕಲ್ಪಿಸದಾಗಷ್ಟು ದಿಢೀರ್ ಅಚ್ಚರಿಗಳ ಮೂಟೆ
ರಾಖಿಯ ಪರಿಧಿಗೆ ಸಿಕ್ಕದಷ್ಟು ದೊಡ್ಡವಳಾಕೆ
ನೆನೆಸಿದಾಗಲೇ ಮಂದಸ್ಮಿತ ಮೂಡಿಸಬಲ್ಲ
ಅಮ್ಮನ ಹಾಗಿರುವ ತಂಗಿ...!
-KM
.......

ಪುಟ್ಟ ಪುಟ್ಟ ಹೆಜ್ಜೆಗಳು
ಕಿರು ಬೆರಳಿಡಿದು ಅಳುಕು ನಡಿಗೆಯ
ಎರಡು ಜಡೆ, ತೀಡಿದ ಕಾಡಿಗೆ
ಜುಟ್ಟಿಗೆ ಮಲ್ಲಿಗೆ ತೊಟ್ಟು
ಹತ್ತಾರು ಪ್ರಶ್ನೆಗಳ ಕೇಳಿ ತಲೆತಿಂದು ಜೊತೆಗೆ
ನಡೆದು ಶಾಲೆಗೆ ಹೋದ ನೆನಪು...

ಬಿರು ಮಳೆಗೆ ತೋಯ್ದು
ಅವಳ ಬ್ಯಾಗು, ವಾಟರ್ ಕ್ಯಾನು ಹೆಗಲ
ಮೇಲೆ ಹೊತ್ತು, ತೊರೆಯ ಸಂಕದಲ್ಲಿ ಹಿಡಿದೆತ್ತಿ
ಅತ್ತಾಗ ಚಾಕಲೇಟು ಕೊಡಿಸಿದಾಗ ಕಣ್ಣರಳಿಸಿ ನಕ್ಕಾಕೆ
ಡಿಗ್ರೀಗೆ ಬಂದಾಗ ಅವಳು ಡಿಸ್ಟಿಂಕ್ಷನ್ನು, ನಾನು ಜಸ್ಟು ಪಾಸು
ಹೆಚ್ಚು ಕಲಿಯಗೊಡದೆ ಮದುವೆ ಮಾಡಿ ಕೊಟ್ಟಾಗ ನನಗೇ ಕಣ್ಣೀರು

ಬೆಳೆದ ಮನೆಮಗಳೀಗ ಪರರ ಸೊತ್ತು
ಅಲ್ಲಿಂದಲೇ ಪುಟಗಟ್ಟಲೆ ಪತ್ರಗಳ ಸರಣಿ
ತವರ ಬಗೆಗೇ ಪ್ರಶ್ನೆಗಳು, ನನ್ನ ಕೆಲಸದ ಚಿಂತೆ
ಹೆತ್ತವರ ಆರೋಗ್ಯ, ಮತ್ತೆ ಗಂಡ ಮಕ್ಕಳ ಬಗೆಗೂ...
ಕುಸಿದಾಗ ತುಟಿಗೇರಿದ ಸಿಗರೇಟು ಕಿತ್ತೆಸೆದು
ಬೆಳೆದ ಗಡ್ಡಕ್ಕೆ ತಕರಾರು ತಂದಿಟ್ಟು, ಕೈಹಿಡಿದು ಎಬ್ಬಿಸಿದವಳು...

ಬರೆದದ್ದಕ್ಕೆ ಮೊದಲ ಓದುಗಳು, ಆದ್ಯತೆಯ ಶ್ರೋತೃ
ಕೊರೆದದ್ದಕ್ಕೆ ಕಿವಿಯಾಗಿ, ಹೇಳಿದಷ್ಟೇ ಅರ್ಥ ಮಾಡಿ
ಕಿವಿ ಹಿಂಡಿ, ತಕರಾರು ತೆಗೆಯಬಲ್ಲ ದಿಟ್ಟೆ
ಹೇಳದೆಯೇ ಮನಸು ಕಾಣಿಸ್ತದಲ್ಲ ಆಕೆಗೆ
ಮನೆ ಬಿಟ್ಟು ತುಸು ತಡವಾದರೂ
ಕರೆ ಬಾರದಿದ್ದರೆ ಆತಂಕ, ಮತ್ತೆ ಕುರುಕ್ಷೇತ್ರ

ಅಪ್ಪನಿಗೂ ಮಿಕ್ಕ ಅಧಿಕಾರ,
ಗೆಳೆಯನಷ್ಟೇ ಮಮಕಾರ, ತರ್ಲೆ, ಅಧಿಕಪ್ರಸಂಗಿ
ಕಲ್ಪಿಸದಾಗಷ್ಟು ದಿಢೀರ್ ಅಚ್ಚರಿಗಳ ಮೂಟೆ
ರಾಖಿಯ ಪರಿಧಿಗೆ ಸಿಕ್ಕದಷ್ಟು ದೊಡ್ಡವಳಾಕೆ
ನೆನೆಸಿದಾಗಲೇ ಮಂದಸ್ಮಿತ ಮೂಡಿಸಬಲ್ಲ
ಅಮ್ಮನ ಹಾಗಿರುವ ತಂಗಿ...!
-KM

Friday, August 4, 2017

ತೋಚಿದ್ದು... ಗೀಚಿದ್ದು 3

ಯಕ್ಷಪ್ರಶ್ನೆಗಳು...
-----

ಆಸೆಯೇ ದುಖಕ್ಕೆ ಮೂಲವಂತೆ,
ನಿರೀಕ್ಷೆಗಳೇ ನಿರಾಸೆಗಳಿಗೆ ಕಾರಣವಂತೆ
ದುಖಗಳಿಗೆಲ್ಲ ಆಸೆಯೇ ಕಾರಣವೇ?
ನಿರಾಸೆಯಾಗಬಾರದೆಂಬ ನಿರೀಕ್ಷೆಗೇನೆಂದು ಹೆಸರು?

ಕೈಕೆಸರಾದರೆ ಬಾಯಿ ಮೊಸರೆನ್ನುವರು
ತೊಳೆದ ಬಳಿಕವೂ ಕೊಳೆ ಕಳೆಯದ ಕೈಗಳು
ಮೊಸರು ತಿನ್ನುವುದು ಹೇಗೆ?
ಕೊಸರಿದರೂ ಕೆಸರು ಆರದಿದ್ದರೆ!

ತಾಳಿದವನು ಬಾಳಿಯಾನು ಎನ್ನುವರು...
ತಾಳುವಿಕೆಯಲ್ಲೇ ಬಾಳು ಕಳೆದರೆ
ಅದರಾಚಿಗಿನ ಲೋಕವನ್ನು
ಕಾಣುವುದೆಂದು ಎಂದು ಕೇಳಬಾರದೆ?


ತಪ್ಪುಗಳು, ಹಿನ್ನಡೆಗಳು ಬದುಕ ಶಿಕ್ಷಣ ನೀಡುವುದಂತೆ...
ಪುಸ್ತಕದೊಳಗೆ ತಪ್ಪುಗಳೇ ತುಂಬಿ
ಸರಿಯ ಕಾಣಲಾಗದಿದ್ದರೆ ಮಾಡುವುದೇನು?
ಸರಿಯ ಬೆಲೆ ಅರಿವುಯುದೆಂತು?

ಅನುಭವಗಳೇ ಜೀವನದ ಪಾಠಶಾಲೆ...
ಎಡವಿದ್ದು, ಸೋತದ್ದು ಅಧ್ಯಾಯಗಳು...
ದುಡುಕಿದ್ದು, ಕುಸಿದದ್ದು ಟ್ಯೂಷನ್ನುಗಳು
ಆದರೆ...ತೆರುವ ಬೆಲೆ ದುಬಾರಿಯಲ್ಲವೇ?

ಮಾತು ಬಲ್ಲರೆ ಮಗ ಬದುಕಿಯಾನು
ನಿಜ... ಸೂಕ್ತಿ, ನಾಣ್ನುಡಿ, ಬದುಕಲು ಕಲಿಸುವ ಪುಸ್ತಕಗಳು
ಮೋಡಿ ಮಾಡಬಲ್ಲ ವಾಕ್ಚಾತುರ್ಯದಾಚಿನ
ಅನುಭವವ ಬರೆಯಲಾಗುವುದೇ?

ಕಾಸಿಲ್ಲದೇ ಕಾಣುವ ಕನಸು, ಗುರಿಯಿಲ್ಲದ ಮನಸು
ಮಿತಿಗಳು, ಗತಿಗಳ ಬೇಲಿಗೆ ಸಿಲುಕಿದ ಮೇಲೆ
ಗಾದೆಗೂ ಬೋಧೆಗೂ ತಣಿಯುವುದೇ?
ಹೊಸದೊಂದು ಹಿತನುಡಿಯ ಬರೆಯುವುದೇ?

-KM